Wednesday, August 12, 2020

ಹೆಣ್ಣುಲೋಕದ ಅನಂತ ಮುಖಗಳುನನ್ನ ಹೊಸ ಪುಸ್ತಕ – ಮೌನ ವಸಂತ       
ಈ ಕೃತಿಗೆ ಡಾ.ಎಚ್.ಎಸ್.ಅನುಪಮಾರವರ ಮುನ್ನುಡಿ - ಹೆಣ್ಣುಲೋಕದ ಅನಂತ ಮುಖಗಳು
     
       ಹೆಣ್ಣು ಎಂದರೆ ದೇಹ ಮಾತ್ರ ಎಂಬ ಅಭಿಪ್ರಾಯವನ್ನು ಸಮಾಜ ಎಲ್ಲರ ಮೇಲೆ ಹೇರಿದೆ. ಎಂದೇ ಅವಳ ನಿಜದ ಭಾಷೆ-ಭಾವನೆಗಳನ್ನು ಸಮಾಜ ತಿಳಿಯದಿರುವ ಸಾಧ್ಯತೆಯೇ ಹೆಚ್ಚಿದೆ. ಬೇರೆಯವರ ಆಸೆಆಕಾಂಕ್ಷೆ, ಅವಶ್ಯಕತೆಗಳಿಗನುಗುಣವಾಗಿ ತನ್ನ ಆಸೆಆಕಾಂಕ್ಷೆ-ಗುಣಚಹರೆಗಳನ್ನೂ ಬದಲಿಸಿಕೊಳ್ಳಬೇಕಾಗಿರುವ ಅನಿವಾರ್ಯತೆ ಹೆಣ್ಣಿನ ಅಧೀನ ಮನಸ್ಥಿತಿಯನ್ನು ರೂಪಿಸಿರುವಂತೆ; ಎಲ್ಲ ಸಂಬಂಧಗಳನ್ನು ತನ್ನ ವಲಯದೊಳಗೆ ತೆಗೆದುಕೊಂಡು, ಜವಾಬ್ದಾರಿಗಳನ್ನು ಹೇರಿಕೊಳ್ಳುವ ಹೆಣ್ಣುಸ್ವಭಾವಕ್ಕೂ ಕಾರಣವಾಗಿದೆ. ಇದು ಅವಳನ್ನು ಖಾಸಗಿ ಸ್ಥಳಗಳಿಗೆ ಸೀಮಿತಗೊಳಿಸಿ ಸಾರ್ವಜನಿಕವಾಗಿ ಅದೃಶ್ಯರಾಗಿರುವಂತೆ ಮಾಡಿದೆ. ಇದನ್ನೆಲ್ಲ ಮೀರಿ ಅವಳು ತನ್ನ ಬಿಡುಗಡೆಯ ಮಾರ್ಗ ತಾನು ಶೋಧಿಸಿಕೊಳ್ಳಬೇಕೆಂದರೆ ತನ್ನವರ ಸಮಗ್ರ ಅನುಭವಗಳ ಮೂಲದಿಂದಲೇ ಹೊರಡಬೇಕಿದೆ. ತಮ್ಮ ಆಸಕ್ತಿಯಂತೆ ಬದುಕನ್ನು ರೂಪಿಸಿಕೊಂಡು, ಅಡೆತಡೆಗಳ ದಾಟುತ್ತ ಸ್ವಾಯತ್ತತೆ ಸಾಧಿಸಿಕೊಳ್ಳಬೇಕಿದೆ. ಅದೇನೂ ಸುಲಭವಲ್ಲ. ಇವಳು ಯಾರವಳು? ಯಾರಿಗೆ ಸೇರಿದವಳು? ಎಷ್ಟು ಸೇರಿದವಳು? ಎಂಬ ಜಿಜ್ಞಾಸೆ ಹೆಣ್ಣುಜೀವಗಳ ಬಗೆಗೆ ಅಂದಿನಿಂದ ನಡೆದಿದ್ದು ಇಂದಿಗೂ ನಡೆಯುತ್ತಲೇ ಇದ್ದು ಆ ಚೌಕಟ್ಟುಗಳೊಳಗೆ ಬಂಧಿತವಾದ ತನ್ನ ಅಸ್ಮಿತೆಯಿಂದ ಮುಕ್ತಳಾಗಲು ಹೆಣ್ಣು ಹೋರಾಟವನ್ನೇ ನಡೆಸಬೇಕಿದೆ.
ಅಂಥ ಸವಾಲುಗಳ ದಾಟಿದ `ಹತ್ತು ಸಮಸ್ತ’ರು ಈ ಹೊತ್ತಗೆಯಲ್ಲಿ ನಿರೂಪಿಸಲ್ಪಟ್ಟಿದ್ದಾರೆ. 

     ಶೇಕ್ಸ್‍ಪಿಯರ್ ಒಂದೆಡೆ ಹೇಳುತ್ತಾನೆ: `ಗುಲಾಬಿಯನ್ನು ನೀವು ಯಾವ ಹೆಸರಿನಿಂದಾದರೂ ಕರೆಯಿರಿ, ಅದು ಗುಲಾಬಿಯೇ. ಪರಿಮಳ ಸೂಸುವುದನ್ನು ನಿಲಿಸಲಾರದು. ತನ್ನ ಗುಲಾಬಿತನ ಬಿಡಲಾರದು.’ ಹಾಗೆಯೇ ಹೆಣ್ಣೂ ಸಹ. ಭಾರತೀಯಳೋ, ಜರ್ಮನಳೋ, ಅಮೆರಿಕನ್ನಳೋ; ಗೂಢಚಾರಳೋ, ವಿಜ್ಞಾನಿಯೋ ಬರಹಗಾರ್ತಿಯೋ; ಅನುಭಾವಿಯೋ, ಮರಣಮುಖಿ ರೋಗಿಯೋ, ನರ್ತಕಿಯೋ; ಕ್ರಿಸ್ತಪೂರ್ವ ಕಾಲದವಳೋ, 20ನೇ ಶತಮಾನದವಳೋ - ಅಂತೂ ಅವರ ಬದುಕುಗಳಲ್ಲಿ ಎದ್ದು ಕಾಣುವುದು ಫೀನಿಕ್ಸ್‍ನಂತೆ ಬೂದಿಯೊಳಗಿನಿಂದೆದ್ದು ಬರುವ ಒಂದು ಹೆಣ್ಣುತನ. ಅಂತಹ ಹತ್ತು ಹೆಣ್ಣು ಚೇತನಗಳ ಬದುಕು, ಬವಣೆ, ಸಾಧನೆಗಳು ಇಲ್ಲಿ ಜೀವನ ಕಥನಗಳಾಗಿ ನಿರೂಪಿಸಲ್ಪಟ್ಟಿವೆ.

     ಚರಿತ್ರೆಯಲ್ಲಿ ಅದೃಶ್ಯ ಕಥನಗಳಿದ್ದರೆ ಅವು ಹೆಣ್ಣುಗಳದ್ದು. ಯಾರದಾದರೂ ದುಡಿಮೆ-ಹೋರಾಟಗಳ ಮರೆಮಾಚಲಾಗಿದ್ದರೆ ಅದು ಹೆಣ್ಣುಮಕ್ಕಳದ್ದು. ಅದಕ್ಕೆ ಕಾರಣ ಮನುಷ್ಯ ಸಮಾಜ ಹೆಣ್ಣನ್ನು ಪರಿಗಣಿಸಿದ್ದು ಒಂದು ವಸ್ತು ಎಂದು ಮಾತ್ರ. ಆ ವಸ್ತುವಿಗೆ `ಅವರು’ ಕೊಟ್ಟ ಅರ್ಥ ಮಾತ್ರವೇ ಬರುತ್ತದೆ. `ಅವರು’ ಕಟ್ಟಿದ ಬೆಲೆ ಮಾತ್ರವೇ ಇರುತ್ತದೆ. ಹೀಗಿರುತ್ತ ನಿಜವಾದ ಮಹಿಳೆಯನ್ನು, ಮಹಿಳಾ ಶಕ್ತಿ-ಸಾಮಥ್ರ್ಯಗಳನ್ನು ಅರಿಯಲು ಇಂತಹ ವಿಭಿನ್ನ ಮಾದರಿಗಳ ಪರಿಶೀಲನೆ ಬಹುಮುಖ್ಯವಾಗಿದೆ. ಇಲ್ಲಿರುವ ಒಬ್ಬೊಬ್ಬ ಹೆಣ್ಣಿನ ಅನುಭವವು ಇಡೀ ಹೆಣ್ಣುಲೋಕದ ಅನುಭವವಾಗಿ ಸಮಾಜವನ್ನು ತಿಳಿದುಕೊಳ್ಳುವ ಮುಖ್ಯ ಆಕರವೇ ಆಗಿವೆ. ಗರುಕೆಯಂತೆ ಮೆಟ್ಟಿದವರ ಎದುರೇ ತಲೆಯೆತ್ತಿ ನಿಂತ ಈ ಅವಿನಾಶಿ ಚೇತನಗಳು ನಮ್ಮಲ್ಲಿ ಒಂದು ಎಳೆ ಹೆಮ್ಮೆಯನ್ನೂ, ವಿಷಾದದ ನಿಟ್ಟುಸಿರನ್ನೂ, ತೊಡಗಿಸಿಕೊಳ್ಳಬೇಕಾದ ತುರ್ತನ್ನೂ, ಅಂದು-ಇಂದು ಎಂಬ ತುಲನೆಯನ್ನೂ ಹುಟ್ಟುಹಾಕುವಂತಿವೆ. 

     ವಿಭಿನ್ನ ಕಾಲದೇಶ ಸ್ಥಳಗಳಲ್ಲಿ ಅನನ್ಯವಾಗಿ ಬದುಕಿದ ಆ ಹತ್ತು ಮಹಿಳೆಯರ ಬದುಕು ಈ ಪುಸ್ತಕದಲ್ಲಿ ಸ್ಫೂರ್ತಿದಾಯಕವಾಗಿ ಪರಿಚಯಿಸಲ್ಪಟ್ಟಿದೆ: 

1.    ಇಲ್ಲಿರುವವರಲ್ಲಿ ಎದ್ದುಕಾಣುವ ಬದುಕು ಆನೆ ಫ್ರಾಂಕ್ ಎಂಬ ಹುಡುಗಿಯದು. ಅಜಮಾಸು 40 ಲಕ್ಷ ಜನರ (ಅವರಲ್ಲಿ 15 ಲಕ್ಷ ಮಕ್ಕಳ) ಹತ್ಯಾಕಾಂಡ ನಡೆಸಿದ ಹಿಟ್ಲರನ ಜನಾಂಗೀಯ ದ್ವೇಷದ ಕಥೆಗಳನ್ನು ನಾನಾಮೂಲಗಳಿಂದ ತಿಳಿದಿದ್ದೇವೆ. ಅವನ ಕುಲಮದಾಂಧತನಕ್ಕೆ ಬಲಿಯಾದ ಎಳೆಯರಲ್ಲಿ ಜರ್ಮನಿಯ ಆನ್ ಫ್ರಾಂಕ್ ಕಥನ ಕಣ್ಣೀರುಕ್ಕಿಸುತ್ತದೆ. ಆಟೋಟಗಳೆಂದು ಜಿಗಿದು ಶಾಲೆಗೆ ಹೋಗಬೇಕಿದ್ದ 15ರ ಹರೆಯದ ಹುಡುಗಿ ನೆಲಮಾಳಿಗೆಯಲ್ಲವಿತು ತಾಜಾ ಗಾಳಿಗಾಗಿ, ಬೆಳಕಿಗಾಗಿ, ಸ್ವತಂತ್ರಕ್ಕಾಗಿ ಹಂಬಲಿಸುತ್ತ, ಕಿಟಕಿಯ ಕಿಂಡಿಯಿಂದ ಹೊರಗಿನದನ್ನು ನೋಡುತ್ತ ವರುಷಗಟ್ಟಲೆ ಕಳೆದಳು. ಏಕಾಕಿತನ ಮರೆಯಲು ದಿನಚರಿಯ ಪುಸ್ತಕವನ್ನೇ `ಕಿಟ್ಟಿ’ ಎಂದು ಕರೆದು ಆಪ್ತಗೆಳತಿಯನ್ನಾಗಿಸಿಕೊಂಡಳು. ತಮ್ಮ ಜೊತೆಗಿರಲು ಬಂದ ಇನ್ನೊಂದು ಕುಟುಂಬದ ಹುಡುಗ ಪೀಟರನ ಪ್ರೀತಿಸುತ್ತ, ಖಿನ್ನಳಾಗುತ್ತ, ನಿದ್ರೆ ಬರಿಸುವ ವ್ಯಾಲೆರಿಯನ್ ಮಾತ್ರೆ ನುಂಗುತ್ತ ಬಿಡುಗಡೆಯ ದಿನಗಳಿಗಾಗಿ ಕಾದೇ ಕಾದಳು. ಲೇಖಕಿ-ಪತ್ರಕರ್ತೆ ಆಗಬೇಕು ಎಂಬ ತೀವ್ರ ಹಂಬಲದ ಆನ್ ಕೊನೆಗೆ ಹಿಟ್ಲರನ ಕ್ಯಾಂಪಿಗೆ ಎಳೆದೊಯ್ಯಲ್ಪಟ್ಟು ಚಿತ್ರಹಿಂಸೆ ಅನುಭವಿಸಿ ಮರಣ ಹೊಂದಿದಳು. `ಸಾವಿನ ನಂತರವೂ ಬದುಕುವ ಹಂಬಲ ನನ್ನದು’ ಎಂದು ದಿನಚರಿ ಪುಸ್ತಕದಲ್ಲಿ ಬರೆದಿಟ್ಟ ಆ ಎಳೆ ಹುಡುಗಿಯ ದುರಂತ ಬದುಕು ಓದುಗರನ್ನು ಗದ್ಗದಗೊಳಿಸುತ್ತದೆ. 

2.    ಅಪರಾಧ ನಿರ್ವಚನೆ ಸಾರ್ವಜನಿಕ ಕ್ಷೇಮದ ಕಾಳಜಿಯಿಂದ ಹುಟ್ಟಿರುತ್ತದೆ, ಅಲ್ಲಿ ಅಪರಾಧಿಯೆನಿಸಿಕೊಂಡವರ ಬದುಕಿನ ಕಾಳಜಿ ಕಡಿಮೆ ಇರುತ್ತದೆ. ಅದರಲ್ಲೂ ಅಪರಾಧವನ್ನು ವ್ಯಾಖ್ಯಾನಿಸುವುದು ರಾಷ್ಟ್ರೀಯತೆ ಎಂದಾದರೆ ಖಾಸಗಿ ನೋವುಗಳಿಗೆ ಜಾಗವೇ ಇಲ್ಲ. ಅದರ ದುಷ್ಪರಿಣಾಮವೆಲ್ಲ ಹೆಣ್ಣುಮಕ್ಕಳ ಮೇಲೇ. ಇದಕ್ಕೆ ಗೂಢಚಾರಿಣಿಯೆಂಬ ಆರೋಪದ ಮೇಲೆ ಮರಣದಂಡನೆಗೊಳಗಾದ ಮಾತಾ ಹರಿ ಎಂಬ ಹೆಣ್ಣುಬದುಕು ಉತ್ತಮ ಉದಾಹರಣೆ. ಬಿಡುಗಡೆ, ದುಡಿಮೆ, ಪ್ರತಿಭಟನೆ, ಸಮಯಸಾಧನೆ ಎಲ್ಲಕ್ಕು ತನ್ನ ಅಸೀಮ ದೇಹಸೌಂದರ್ಯವನ್ನು ಬಳಸಿದ ಮಾತಾಹರಿ ನರ್ತಕಿಯೋ, ಗೂಢಚಾರಿಣಿಯೋ, ಅತಿಕಾಮಿಯೋ, ಜೀವನಪ್ರೀತಿಯ ಹೆಣ್ಣೋ ಒಂದೂ ಸ್ಪಷ್ಟವಾಗದಂತಹ ವರ್ಣರಂಜಿತ ಬದುಕು ಬದುಕಿದವಳು. ಎಳತರಲ್ಲೇ ತಾಯ್ತಂದೆಯರ ಕಳೆದುಕೊಂಡು ಪರಾಶ್ರಯದಲ್ಲಿ ಬೆಳೆದ ಮಾರ್ಗರಿತಾ ಜೊಲ್ಲೆ ಎಂಬ ಅಮಾಯಕ ಹುಡುಗಿಯು ಮುಂದೆ ಯೂರೋಪಿನ ಅತ್ಯುನ್ನತ ಅಧಿಕಾರಿ ವರ್ಗ, ಸೇನಾಧಿಕಾರಿಗಳು-ರಾಜಕಾರಣಿಗಳ ಮನದನ್ನೆಯಾಗಿ ಬೆಳೆದ ರೋಮಾಂಚನಕಾರಿ ಕಥೆ ಈ ಪುಸ್ತಕದಲ್ಲಿದೆ. 

ಅವಳಿದ್ದ ಯುದ್ಧಕಾಲದ ಯೂರೋಪು, ಅದರಲ್ಲೂ ಪ್ಯಾರಿಸ್, ಮಾತಾಹರಿಯ ವರ್ಣಮಯ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಮಹತ್ತರ ಪಾತ್ರ ವಹಿಸಿತು. ಸಮವಸ್ತ್ರದ ಗಂಡಸರು ಬದುಕಿಗೆ ಸುರಕ್ಷೆ ನೀಡಿಯಾರೆಂಬ ಭಾವನೆ ಅಭದ್ರ ಬದುಕು ಬದುಕಿದವಳಲ್ಲಿ ಗಟ್ಟಿಯಾಗಿತ್ತು. ಎಂದೇ ತನಗಿಂತ 20 ವರ್ಷ ಹಿರಿಯ ಸೇನಾಧಿಕಾರಿಯನ್ನು ಮದುವೆಯಾಗಿ ವಿದೇಶಕ್ಕೆ ಹೋದಳು. ಹಿಂಸೆ, ದರ್ಪ, ಅಸಹಾಯಕತೆ, ಅಧಿಕಾರ ಎಲ್ಲ ಅನುಭವಿಸಿದಳು. ತನ್ನ ಬಾಹ್ಯಸೌಂದರ್ಯವೆಂಬ ಬಂಡವಾಳದಿಂದ ಗಂಡು ಸಮಾಜವನ್ನು ಹೇಗೆ ಬೇಕಾದರೂ ಮಣಿಸಬಹುದು ಎಂಬ ಸತ್ಯ ಗೋಚರವಾಗಿತ್ತು. ನಗ್ನ ನರ್ತಕಿ, ನಗ್ನ ರೂಪದರ್ಶಿಯಾಗಿ ಲೆಕ್ಕವಿಲ್ಲದಷ್ಟು ಗೆಳೆಯರನ್ನು ಪಡೆದಳು. ತನ್ನ ಅರ್ಧದಷ್ಟು ವಯಸ್ಸಿನ ಎಳೆಯನನ್ನು ಎರಡನೆಯ ವಿವಾಹವಾದಳು. ಆದರೂ ಬೇರೆ ಗಂಡಸರೊಡನೆ ಸಂಪರ್ಕ ಮುಂದುವರಿಸಿದ್ದಳು. ಸ್ವಾಯತ್ತತೆಯೋ, ಸ್ವೇಚ್ಛೆಯೋ ಗೆರೆ ಎಳೆಯಲು ಅಸಾಧ್ಯವಾದ ಐಹಿಕ ಭೋಗಗಳಲ್ಲಿ ಮುಳುಗಿದ್ದರೂ ಮಾತಾಹರಿ ತನ್ನ ವಿಚ್ಛೇದಿತ ಗಂಡನೊಡನಿದ್ದ ಏಕೈಕ ಮಗಳ ಬಗೆಗೆ ಸದಾ ಚಿಂತಿಸುತ್ತಿದ್ದ ತಾಯಿಯೂ ಆಗಿದ್ದಳು. ಗೂಢಚಾರಿಕೆಯ ಆರೋಪ ಹೊತ್ತು 41 ವರ್ಷಕ್ಕೆ ಮರಣದಂಡನೆಗೊಳಗಾದಾಗ ಕೊಲ್ಲಲು ಸಾಲಾಗಿ ನಿಂತ ಬಂದೂಕುಧಾರಿಗಳಿಗೆ ಗಾಳಿಯಲ್ಲಿ ಮುತ್ತು ಕೊಟ್ಟಳು! ದುರಂತವೆಂದರೆ ಅಸಂಖ್ಯ ಗಂಡಸರ ಗೆಳತಿಯಾಗಿದ್ದ ಅವಳ ಮೃತದೇಹ ಒಯ್ಯಲು ಯಾರೂ ಬರಲಿಲ್ಲ! ದೇಹ ಸರಕುಗೊಳಿಸಲ್ಪಟ್ಟ ಅವಳ ಬದುಕಿನ ಕಥನವನ್ನು ಇಲ್ಲಿ ಎದೆಝಲ್ಲೆಸುವಂತೆ ಕಟ್ಟಿಕೊಡಲಾಗಿದೆ.

3.    ಹಿಮಾವೃತ ಬೆಟ್ಟಗಳ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಹುಟ್ಟಿದ ಒಂದು ಮಗು ತಾಯಿಯ ಎದೆ ಹಾಲು ಕುಡಿಯಲು ನಿರಾಕರಿಸುತ್ತಿತ್ತು. ಹಸಿದು ಬಸವಳಿದು ಕೂಗುತ್ತಿದ್ದ ಮಗುವಿನ ಬಳಿ ಯಾರೋ ಒಬ್ಬ ಹೆಣ್ಣುಮಗಳು ಬಂದಳು. `ಹುಟ್ಟಿದ್ದಕ್ಕೆ ನಾಚಿಕೆಯಿಲ್ಲ, ನಿನಗೆ ಅಮ್ಮನ ಮೊಲೆಹಾಲು ಕುಡಿಯಲು ಎಂಥಾ ನಾಚಿಕೆ? ಆಧ್ಯಾತ್ಮಜ್ಞಾನದ ಹಾಲು ಕುಡಿಯದಿದ್ದರೆ ಆನಂದವೆಲ್ಲಿದೆ?’ ಎಂದು ಅದರ ಕಿವಿಯಲ್ಲಿ ಪಿಸುಗುಟ್ಟಿದಳು. ಕೂಡಲೇ ಮಗು ಆಕೆಯ ಮೊಲೆ ಜಗಿಯಿತು. ನಂತರ ತನ್ನಮ್ಮನ ಹಾಲು ಕುಡಿಯಿತು. ಹಾಗೆ ಹಾಲು ಕುಡಿಸಿದವಳು ಲಲ್ಲೇಶ್ವರಿ. ಕುಡಿದವ ಮುಂದೆ ನಂದ ಋಷಿ ಎನಿಸಿಕೊಂಡ ಶೇಕ್ ನೂರುದ್ದೀನ್. ದೇಹದ ವಾಂಛೆಗಳಿಂದ ಮುಕ್ತಳಾಗಿ ನಗ್ನಳಾಗಿ ಓಡಾಡುತ್ತಿದ್ದ ಲಲ್ಲೇಶ್ವರಿ ಅಥವಾ ಲಲ್ಲಾ ಧೇಡ್ 14ನೇ ಶತಮಾನದ ಕಾಶ್ಮೀರದ ಭಕ್ತಕವಿ. ಲಲ್ಲಾ ದೇಹಾಂತವಾದಾಗ ಆಕೆ ಶೈವಸಂತಳೆಂದು ಹಿಂದೂಗಳೂ, ಸೂಫಿ ಸಂತಳೆಂದು ಮುಸ್ಲಿಮರೂ ಜಗಳವಾಡಿ ಅಂತ್ಯಸಂಸ್ಕಾರವನ್ನು ಹೇಗೆ, ಯಾರು ಮಾಡುವುದೆಂಬ ಬಗೆಗೆ ವಿವಾದ ತಾರಕಕ್ಕೇರಿತು. ತಿಕ್ಕಾಡುತ್ತ ಎರಡೂ ಗುಂಪುಗಳು ಮೃತದೇಹದ ಮೇಲಿನ ಹೊದಿಕೆ ಎಳೆದರೆ ಅಲ್ಲಿ ದೇಹದ ಬದಲಾಗಿ ಹೂವಿನ ರಾಶಿಯಿತ್ತು! ಅದನ್ನೇ ಇಬ್ಬರೂ ಹಂಚಿಕೊಂಡು ತಂತಮ್ಮ ಸಂಪ್ರದಾಯದ ಹಾಗೆ ಅಂತ್ಯಸಂಸ್ಕಾರ ಮಾಡಿದರು. ಇದು ಅಂತೆಕಂತೆಯ ಪುರಾಣ ಇರಬಹುದು, ಆದರೆ ಕೋಮುವೈಷಮ್ಯದ ಈ ದಿನಗಳಲ್ಲಿ ಅದು ಹೇಳುವ ಪಾಠ ಅಮೂಲ್ಯವಾದುದು. 

4.    ಇಸ್ಮತ್ ಚುಗ್ತಾಯ್ ದಿಟ್ಟವಾಗಿ ಬದುಕಿ, ಬರೆದ 20ನೇ ಶತಮಾನದ ಭಾರತೀಯ ಉರ್ದು ಲೇಖಕಿ. 1942ರಲ್ಲಿ ತಮ್ಮ ಮದುವೆಗೆ ಎರಡು ತಿಂಗಳಿರುವಾಗ ಹೆಣ್ಣುಗಳ ಸಲಿಂಗಸ್ನೇಹದ ಕಥಾವಸ್ತುವಿರುವ `ಲಿಹಾಫ್’ (ಕೌದಿ) ಕತೆ ಬರೆದು ಪ್ರಕಟಿಸಿದರು. ಅದು ಅಶ್ಲೀಲ ಎಂದು ಸಂಪ್ರದಾಯವಾದಿಗಳು ಕೋರ್ಟಿಗೆ ಹೋದರು. ಹೊಲಸು ವಸ್ತುಗಳ ಕುರಿತು ಕತೆ ಬರೆಯುವುದೇಕೆ ಎಂದು ನ್ಯಾಯಾಧೀಶರು ಕೇಳಿದಾಗ, `ಜಗತ್ತು ಹೊಲಸಿನಿಂದ ತುಂಬಿದೆ. ಅವನ್ನು ಕೆದಕಿ ಮೇಲೆ ತೆಗೆಯಬೇಕು. ಹಾಗಾದರಷ್ಟೆ ಎಲ್ಲರ ಕಣ್ಣಿಗೆ ಬೀಳುತ್ತದೆ, ಶುಚಿ ಮಾಡಬೇಕಾದ ಅವಶ್ಯಕತೆ ಅರಿವಾಗುತ್ತದೆ’ ಎಂದಿದ್ದರು. ತುಂಬ ನಿಜ. ಹೆಣ್ಣುಬರವಣಿಗೆಯ ಮುಖ್ಯ ಉದ್ದೇಶವೇ ಅದು - ಗಾಯವನ್ನು, ನೋವನ್ನು ಹೊರಗೆಡವುವುದು; ಮತ್ತೆ ಗಾಯವಾಗದಂತೆ ತಡೆಯುತ್ತಲೇ, ಇರುವ ಗಾಯಕ್ಕೆ ಮುಲಾಮು ಹುಡುಕುವುದು. ಅವರ ಲಿಹಾಫ್ ಕತೆಯ ಅನುವಾದವನ್ನೂ ಈ ಹೊತ್ತಗೆಯಲ್ಲಿ ಸೇರಿಸಲಾಗಿದೆ. ಆ ಕತೆ ಬರೆದು ಮುಕ್ಕಾಲು ಶತಮಾನ ಕಳೆದಮೇಲೆ ಭಾರತವು ಸಲಿಂಗಸ್ನೇಹವನ್ನು ಕಾನೂನುಬದ್ಧಗೊಳಿಸಿರುವುದನ್ನು ನೋಡಿದರೆ ಅಂದಿಗೆ ಆ ವಿಷಯ ಆಯ್ದುಕೊಂಡ ಅವರ ದಿಟ್ಟತನವನ್ನು ಊಹಿಸಬಹುದು.

5.    ಹೆಣ್ಣಿನ ದುಡಿಮೆ ಸದಾ ವೇತನ ರಹಿತ, ಅದೃಶ್ಯ. ವಿವಿಧ ವೃತ್ತಿಗಳಲ್ಲಿ, ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದ್ದರೂ ಪಾಲನೆ, ಪೋಷಣೆಗಳ ವಿಸ್ತರಣೆಯಂತಹ ಉದ್ಯೋಗಗಳೇ ಹೆಣ್ಣುಮಕ್ಕಳಿಗೆ ಸಿಗುವುದು. ಅವರ ವೃತ್ತಿ ಹಿನ್ನಡೆ, ಏರುಪೇರುಗಳಿಗೆ ಮುಖ್ಯ ಕಾರಣ ಮಹಿಳೆಯಾಗಿರುವುದೇ ಆಗಿರುತ್ತದೆ. ಮಹಿಳಾ ಸ್ವಾಯತ್ತತೆ, ಘನತೆಯ ಬಗೆಗೆ ಬರಬರುತ್ತ ಅಸೂಕ್ಷ್ಮವಾಗುತ್ತಿರುವ ವಿಜ್ಞಾನ ಕ್ಷೇತ್ರಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಅದರಲ್ಲೂ ಪುರುಷ ಅಧಿಕಾರದ ಕೇಂದ್ರವಾಗಿರುವ ಸಂಶೋಧನಾ ವಿಜ್ಞಾನ ಲೋಕದಲ್ಲಿ ಏಗುವುದು ಮಹಿಳಾ ವಿಜ್ಞಾನಿಗಳಿಗೆ ಸುಲಭವಲ್ಲ. ಅದಕ್ಕೆ ಈ ಪುಸ್ತಕದಲ್ಲಿ ಕಾಣುವ ರೊಸಾಲಿಂಡ್ ಫ್ರಾಂಕ್ಲಿನ್ ಉತ್ತಮ ಉದಾಹರಣೆ. 

ಎಲ್ಲ ಜೀವಿಗಳ ಅನುವಂಶೀಯತೆಗೆ ಕಾರಣವಾದ ವಂಶವಾಹಿಗಳ ಹೊತ್ತಿರುವ ಡಿಎನ್‍ಎ ಸುರುಳಿಯಾಕಾರದ ರಚನೆ ಎಂದು ತಮ್ಮ ಕಿರು ವೈಜ್ಞಾನಿಕ ಪ್ರಬಂಧದಲ್ಲಿ ಬರೆದ ವಾಟ್ಸನ್ ಮತ್ತು ಕ್ರಿಕ್ ಎಂಬ ವಿಜ್ಞಾನಿಗಳು ಮತ್ತೊಬ್ಬ ಸಂಶೋಧಕ ಮೌರಿಸ್ ವಿಲ್ಕಿನ್ಸ್ ಅವರೊಡನೆ ನೊಬೆಲ್ ಬಹುಮಾನ ಪಡೆದರು. ಆದರೆ ವಾಟ್ಸನ್-ಕ್ರಿಕ್ ಅವರ ಪ್ರಬಂಧಕ್ಕೆ ಮೂಲಾಧಾರವಾಗಿದ್ದು ರೋಸಾಲಿಂಡ್ ಫ್ರಾಂಕ್ಲಿನ್ ಸಂಶೋಧನೆ. ಜೈವಿಕ, ಕೌಟುಂಬಿಕ ಜವಾಬ್ದಾರಿಗಳ ನಿಭಾಯಿಸುತ್ತ, ಡಿಎನ್‍ಎ ಕುರಿತು ವರ್ಷಗಟ್ಟಲೆ ಮಹತ್ತರ ಸಂಶೋಧನೆ ನಡೆಸಿದ ರೋಸಾಲಿಂಡ್ ಡಿಎನ್‍ಎಯ ಕ್ಷಕಿರಣ ಚಿತ್ರವೊಂದನ್ನು ತೆಗೆದಿದ್ದಳು. ಆದರೆ ಸಂಶೋಧನೆ ಮುಗಿಯುವ ಮೊದಲೇ ಅಂಡಾಶಯ ಕ್ಯಾನ್ಸರಿನಿಂದ 37ರ ಎಳೆ ಹರೆಯದಲ್ಲೆ ಮೃತಳಾದಳು. ಅವರ ತಿಳಿವನ್ನು ಬಳಸಿಕೊಂಡು ಕಗ್ಗಂಟಾಗಿದ್ದ ಡಿಎನ್‍ಎ ರಚನೆಯ ಒಗಟನ್ನು ವಾಟ್ಸನ್ ಮತ್ತು ಕ್ರಿಕ್ ಬಿಡಿಸಿದಾಗ ವಿಜ್ಞಾನ ಜಗತ್ತು ಅತ್ಯಾಶ್ಚರ್ಯಗೊಂಡಿತು. ಆದರೆ ತಮಗೆ ಮೂಲಾಧಾರವಾದ ಸಂಶೋಧನೆ ಮಾಡಿದ ರೋಸಾಲಿಂಡ್ ಹೆಸರನ್ನು ಅವರಿಬ್ಬರು ಎಲ್ಲೂ ಉಲ್ಲೇಖಿಸಲಿಲ್ಲ. ಅವಳದೇ ಸಂಶೋಧನಾಲಯದಲ್ಲಿದ್ದರೂ ಆಕೆಯೊಂದಿಗೆ ಮಾತುಬಿಟ್ಟಿದ್ದ ವಿಲ್ಕಿನ್ಸ್ ನೊಬೆಲ್ ಪಡೆಯುವಂತಾಯಿತು. ಆಕೆ ಸುರುಳಿ ರಚನೆ ಥಿಯರಿಯ ವಿರುದ್ಧವಾಗಿದ್ದಳು ಎಂದು ಸುಳ್ಳು ಬರೆಯಲಾಯಿತು. ಎಷ್ಟೋ ವರ್ಷ ಬಳಿಕ ಆನ್ ಸಾಯ್ರೆ ಎಂಬಾಕೆ ರೋಸಾಲಿಂಡ್ ಫ್ರಾಂಕ್ಲಿನ್ ಬಗೆಗೆ ಮಾಹಿತಿ ಸಂಗ್ರಹಿಸುವಾಗ ನಿಜ ವಿಷಯ ಜಗತ್ತಿಗೆ ತಿಳಿಯಿತು. ಅವಳ ಮೌಲಿಕ ಸಂಶೋಧನೆಯನ್ನು ಬಳಸಿಕೊಂಡರೂ ಸಮಕಾಲೀನ ಪುರುಷ ವಿಜ್ಞಾನಿಗಳು ರೋಸಾಲಿಂಡ್‍ಳ ಬೌದ್ಧಿಕತೆಗೆ ವಂಚನೆಗೈಯಲು ಕಾರಣವಾಗಿದ್ದು ಹೆಣ್ಣು ಅಧೀನಳು ಎಂಬ ಧೋರಣೆಯ ಕಾರಣವಾಗಿಯೇ ಎನ್ನಬಹುದು.
6.    ರೋಮನ್ ಆಳ್ವಿಕೆಯ ಅಲೆಕ್ಸಾಂಡ್ರಿಯಾದಲ್ಲಿ ತನ್ನನ್ನು ಸ್ಥಾಪಿಸಿಕೊಳ್ಳಲು ಕ್ರೈಸ್ತ ಧರ್ಮ ಹಿಂಸಾರೂಪಿಯಾಗಿದ್ದ ಕಾಲದಲ್ಲಿ ಮಹಾನ್ ಗಣಿತಜ್ಞೆ ಹೈಪೇಶಿಯಾ ಹುಟ್ಟಿದಳು. ಗುಲಾಮರ ದುಡಿತದಿಂದಲೇ ಸಮಾಜ ರೂಪುಗೊಳ್ಳುತ್ತಿದ್ದ ನಾಗರಿಕತೆಯ ಕಾಲಘಟ್ಟದಲ್ಲಿ ಕ್ರಿ. ಶ. 370(?)ರಲ್ಲಿ ಗಣಿತಶಾಸ್ತ್ರಜ್ಞನ ಮಗಳಾಗಿ ಬೆಳೆದಳು. ಮದುವೆಯಾಗಲೊಪ್ಪದೆ ಅಧ್ಯಯನಶೀಲಳಾದ ಅವಳು ಅಲೆಕ್ಸಾಂಡ್ರಿಯಾ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತ ಗಣಿತಶಾಸ್ತ್ರದ ಜೊತೆಗೆ ತತ್ವಶಾಸ್ತ್ರವನ್ನೂ ಬೋಧಿಸುತ್ತಿದ್ದಳು. ಆದರೆ ಹೆಣ್ಣೊಬ್ಬಳ ಬೌದ್ಧಿಕ ಹಿರಿಮೆಯನ್ನು, ಸ್ವಾಯತ್ತ ಚಿಂತನೆ-ಬದುಕುಗಳನ್ನು ಒಪ್ಪದ ಕ್ರೈಸ್ತಧರ್ಮದ ನೈತಿಕ ಪೊಲೀಸ್‍ಗಿರಿಗೆ ದುರಂತ ಸಾವು ಕಂಡಳು. ಅವಳದು ಬ್ಲ್ಯಾಕ್ ಮ್ಯಾಜಿಕ್, ಧರ್ಮವಿರೋಧಿ ಜ್ಞಾನ ಎಂದು ಕರೆದ ಆರ್ಚ್ ಬಿಷಪ್ ಸಿರಿಲ್, ಕ್ರಿ.ಶ. 415ರಲ್ಲಿ ಸಾರೋಟಿನಲ್ಲಿ ಹೋಗುತ್ತಿದ್ದವಳನ್ನು ಎಳೆದು ನಗ್ನಗೊಳಿಸಿ, ಚಿತ್ರಹಿಂಸೆ ಕೊಟ್ಟು, ಕಪ್ಪೆಚಿಪ್ಪುಗಳಿಂದ ಮೂಳೆ ಕಾಣುವವರೆಗೆ ಮಾಂಸ ಕೆರೆದು ಬೀದಿಯಲ್ಲಿ ಕೊಲ್ಲಲು ಆದೇಶಿಸಿದ. ನಂತರ ಅವಳ ಬರವಣಿಗೆ, ಪುಸ್ತಕಗಳನ್ನೆಲ್ಲ ಸುಡಲಾಯಿತು. ಜ್ಞಾನದ ಮೇಲಿನ ಪುರುಷಾಧಿಪತ್ಯ ಅವಳ ಹತ್ಯೆಯಲ್ಲಿ ಕೊನೆಯಾಯಿತು.

7.    ಹೆಣ್ಣನ್ನು ಪ್ರಕೃತಿಯೊಂದಿಗೆ ಸಮೀಕರಿಸುವುದು ಎಲ್ಲ ಪುರುಷ ಸಮಾಜಗಳಲ್ಲಿ ಕಂಡುಬರುವಂತೆ ಸುತ್ತಮುತ್ತಲ ಪರಿಸರವನ್ನು ತನ್ನದನ್ನಾಗಿ ಮಾಡಿಕೊಂಡು ಆಪ್ತವಾಗಿಸಿಕೊಳುವ ಗುಣ ಹೆಣ್ಣುಮಕ್ಕಳದು. ಪರಿಸರವನ್ನು ಹಾಳುಗೆಡವುವುದರ ವಿರುದ್ಧ ಎಂದಿನಿಂದ ದನಿಯೆತ್ತಿರುವುದು ಮಹಿಳೆಯರೇ. ಇಂದು ಕ್ರಿಮಿ, ಕೀಟನಾಶಕವೆಂದು ನಾವು ಬಳಸುವ ಡಿಡಿಟಿ ಎಂಬ ರಾಸಾಯನಿಕ ಮುಂದೊಂದು ದಿನ ಕ್ರಿಮಿಕೀಟಗಳಿಲ್ಲದೆ, ಪಕ್ಷಿಗಳೇ ಇಲ್ಲದೆ, ಚಿಲಿಪಿಲಿಯೇ ಇಲ್ಲದೆ `ಮೌನವಸಂತ’ವನ್ನು ನೋಡುವಂತೆ ಮಾಡಬಹುದು ಎಂದು ಪರಿಸರ ಕಾಳಜಿಯ ವಿಜ್ಞಾನಿ ಮಹಿಳೆ 1962ರಲ್ಲಿ ಬರೆದು ಎಚ್ಚರಿಸಿದ್ದರು. ಅವಳೇ ರೇಚೆಲ್ ಕಾರ್ಸನ್. ಆಧುನಿಕ ಭಾಷೆಯಲ್ಲಿ `ಕಳೆ’, `ಪೀಡೆ’ ಎಂದು ಕರೆಯಲ್ಪಡುವ ಕೀಟ-ಗಿಡ-ಪ್ರಾಣಿಗಳ ಮೇಲೆ ಪ್ರಯೋಗಿಸುವ ನಾಶಕಗಳು ಒಳ್ಳೆಯ-ಕೆಟ್ಟ ಭೇದವಿಲ್ಲದೆ ಎಲ್ಲ ಜೀವಸಂಕುಲವನ್ನೂ ನಾಶಗೊಳಿಸಿಯಾವು; ಗಿಡದ ಎಲೆಗಳ ಮೇಲೆ, ನೆಲದೊಳಗೆ ಉಳಿದು ನೀರಿಗೆ ಸೇರಿಯಾವು; ಕೊನೆಗೆ ಕೀಟನಾಶಕವನ್ನೇ ತಿಂದು ಬದುಕುವ ಭಯಾನಕ ಕೀಟಗಳು ಸೃಷ್ಟಿಯಾದಾವು ಎಂದವಳು ಎಚ್ಚರಿಸಿದ್ದಳು. `ಪ್ರಕೃತಿಯ ವಿರುದ್ಧ ಹೂಡುವ ಯುದ್ಧ ಮನುಷ್ಯರು ತಮ್ಮ ವಿರುದ್ಧ ತಾವೇ ಹೂಡಿಕೊಳ್ಳುವ ಯುದ್ಧ’ ಎಂದು ಸ್ತನ ಕ್ಯಾನ್ಸರಿಗೊಳಗಾಗಿ ಸಾಯುವ ಮೊದಲು ರೇಚೆಲ್ ಹೇಳಿದ್ದಳು. ಆದರೆ ಆಕೆಯನ್ನು `ಹುಚ್ಚಿ’ ಎಂದು ಕರೆಯಲಾಯಿತು. ಬರವಣಿಗೆಯ ಉದ್ದೇಶಗಳನ್ನು ಅನುಮಾನಿಸಲಾಯಿತು. ಅವರು ಬರೆದ `ಮೌನವಸಂತ’ ಕೃತಿಗೆ ವಿರುದ್ಧವಾಗಿ ಮತ್ತೊಂದು ಕೃತಿ ಬರೆಸಿ ಸಾವಿರಗಟ್ಟಲೆ ಪ್ರತಿ ಹಂಚಲಾಯಿತು. ಬೀಜ ಮತ್ತು ಕೀಟನಾಶಕ ಕಂಪನಿಗಳು ಆಡಿಸಿದ ವಿಕಟ ನಾಟಕದ ಹೊರತಾಗಿಯೂ ಪರಿಸರವಾದ ಶುರುವಾಗಲು ಕಾರಣರಾದ ಆದ್ಯ ವ್ಯಕ್ತಿ ರೇಚೆಲ್ ಕಾರ್ಸನ್. ಅವರ `ಮೌನವಸಂತ’ದ ಒಂದು ಭಾಗ ಈ ಹೊತ್ತಗೆಯಲ್ಲಿದೆ.

8.    ಈ ಪುಸ್ತಕದಲ್ಲಿ ಹೆನ್ರಿಟಾ ಲ್ಯಾಕ್ಸ್ ಎಂಬ ಅಮರ ಚೇತನವೊಂದರ ಬಗೆಗೆ ಕುತೂಹಲಕರ ಬರಹವಿದೆ. ಗರ್ಭಕೊರಳ ಕ್ಯಾನ್ಸರಿನಿಂದ 1951ರಲ್ಲಿ ಹೆನ್ರಿಟಾ ಲ್ಯಾಕ್ಸ್ ಮೃತಳಾದರೂ ಪ್ರಯೋಗಶಾಲೆಯಲ್ಲಿ ಬೆಳೆಯುತ್ತಲೇ ಇದ್ದಾಳೆ. ಗುಲಾಮರಾಗಿದ್ದ ಕಪ್ಪು ಜನರ ಮನೆಯ ಅಮೆರಿಕನ್ ಮಹಿಳೆ ಹೆನ್ರಿಟಾ, ನೀಗ್ರೋ ಎಂಬ ಕಾರಣಕ್ಕೆ ಚಿಕಿತ್ಸೆ, ಕಾಳಜಿ, ಹಣಬೆಂಬಲ ಸಿಗದೇ ಜೀವ ತೆರುವಂತಾಗಿತ್ತು. ಆದರೆ ಪ್ರಯೋಗಾಲಯದಲ್ಲಿ ಅತಿಸುಲಭವಾಗಿ ಸರಸರ ಬೆಳೆದ ಅವಳ ಕ್ಯಾನ್ಸರ್ ಜೀವಕೋಶಗಳು (ಹೀಲಾ ಕೋಶಗಳು) ಲಸಿಕೆ ಪ್ರಯೋಗ, ಔಷಧ ಅಡ್ಡಪರಿಣಾಮ ಪ್ರಯೋಗ, ಜೀವಕೋಶ ಬೆಳೆಸುವ ಪ್ರಯೋಗ, ಅಂತರಿಕ್ಷ ನೌಕೆಯಲ್ಲಿ ಪ್ರಯೋಗ, ಕ್ಯಾನ್ಸರ್ ಅಧ್ಯಯನ, ಅನೇಕಾನೇಕ ಬ್ಯಾಕ್ಟೀರಿಯಾ-ವೈರಸ್ ಅಧ್ಯಯನಕ್ಕೆ ಬಳಕೆಯಾದವು. ಇವತ್ತಿಗೂ ಕೋಟ್ಯಂತರ ಡಾಲರ್ ವಹಿವಾಟಿಗೆ ಅವು ಕಾರಣವಾಗಿವೆ. ವಿಶ್ವಾದ್ಯಂತ 60 ಸಾವಿರಕ್ಕೂ ಮಿಕ್ಕಿ ಪ್ರಯೋಗಗಳನ್ನು ಅವಳ ಕ್ಯಾನ್ಸರ್ ಜೀವಕೋಶಗಳ ಮೇಲೆ ನಡೆಸಲಾಗಿದೆ. ದುರಂತವೆಂದರೆ ತಮ್ಮಮ್ಮನ ಸಾವಿಗೆ ಕಾರಣವಾದ ಕಾಯಿಲೆಯ ಜೀವಕೋಶಗಳು ಅಷ್ಟೆಲ್ಲ ಪ್ರಸಿದ್ಧವಾಗಿ, ಹಣಗಳಿಸುತ್ತ ಜೀವಂತ ಇದ್ದುದು ಬಡವರಾಗಿ, ಆರೋಗ್ಯವಿಮೆಯಿಲ್ಲದೆ ಕಷ್ಟದ ಬದುಕು ಸವೆಸಿದ ಅವಳ ಮಕ್ಕಳಿಗೆ ಗೊತ್ತೇ ಇರಲಿಲ್ಲ. ಕಳೆದ 100 ವರ್ಷಗಳಲ್ಲಿ ವೈದ್ಯಕೀಯ ಲೋಕ ಕಂಡ ಅದ್ಭುತ ಎಂದು ವಿಜ್ಞಾನಿಯೊಬ್ಬರು ಬಣ್ಣಿಸಿದ, ಕೋಟಿಗಟ್ಟಲೆ ಡಾಲರು ವಹಿವಾಟು ನಡೆಸಿದ ಹೀಲಾ ಕೋಶಗಳ ಮೇಲೆ ಹೆನ್ರಿಟಾ ಲ್ಯಾಕ್ಸ್‍ಗಾಗಲೀ, ಅವಳ ಮಕ್ಕಳದಾಗಲೀ ಯಾವುದೇ ಹಕ್ಕು ಇರಲಿಲ್ಲ! 

9.    ತಾನೇ ಸೃಷ್ಟಿಕರ್ತನಾಗಹೊರಟು ಅಸಾಧ್ಯ ಕುರೂಪ, ಕ್ರೌರ್ಯದ ಮಾನವನನ್ನು ಸೃಷ್ಟಿಸಿ, ಕೊನೆಗೆ ತನ್ನ ಸೃಷ್ಟಿಗೆ ತಾನೇ ಬಲಿಯಾದ ವಿಕ್ಟರ್ ಫ್ರಾಂಕೆನ್‍ಸ್ಟೀನ್ ಎಂಬ ವ್ಯಕ್ತಿಯ ಕುರಿತ ಕಾಲ್ಪನಿಕ ವೈಜ್ಞಾನಿಕ ಕಾದಂಬರಿ `ಫ್ರಾಂಕೆನ್‍ಸ್ಟೀನ್’ ಬರೆದ ಮೇರಿ ವುಲ್‍ಸ್ಟನ್‍ಕ್ರಾಫ್ಟ್ ಶೆಲ್ಲಿಯ ಬಗೆಗೊಂದು ಬರಹ ಇಲ್ಲಿದೆ. 200 ವರ್ಷ ಕೆಳಗೆ ವೈಜ್ಞಾನಿಕ ಕಾದಂಬರಿ ಬರೆಯುವಾಗ ಅವಳ ವಯಸ್ಸು ಬರಿಯ 19 ! `ಫ್ರಾಂಕೆನ್‍ಸ್ಟೀನ್’ನ ಅನುವಾದಿತ ಭಾಗವೂ ಇಲ್ಲಿದೆ. ಜೊತೆಗೆ ಮೇರಿ ಸೊಂತಾಗ್ ಎಂಬ ಅಪರೂಪದ ಚಿಂತಕಿಯ ಕುರಿತ ಬರಹವೂ ಇದೆ. ಅವಳ ಒಂದು ಬರಹದ ಅನುವಾದವೂ ಇಲ್ಲಿದೆ.

ಹೀಗೆ ಈ ಹೆಣ್ಣುಗಳು ಅಗ್ನಿದಿವ್ಯಗಳನ್ನು ಹಾದುಬಂದವರು. ಕುಟುಂಬ, ಉದ್ಯೋಗ, ಆರೋಗ್ಯ, ಸಮಾಜವೆಂಬ ನಾನಾ ಸವಾಲುಗಳನ್ನೆದುರಿಸುತ್ತ ಯಶಸ್ವಿಯಾಗಿ ದಾಟಿದವರು. ಒಬ್ಬೊಬ್ಬರದೂ ಒಂದೊಂದು ಸಾಹಸ. ಆದರೆ ಈ ಎಲ್ಲ ಹೆಣ್ಣುಮಕ್ಕಳ ಹೆಸರುಗಳು ಜನಸಾಮಾನ್ಯರಿರಲಿ, ಸಾಹಿತಿ-ಹೋರಾಟಗಾರರ ಮಾತುಕತೆಗಳ ಒಳಗೂ ಸಾಮಾನ್ಯವಾಗಿ ಸುಳಿಯದಂಥವು. ಕೆಲವು ಸಾಹಿತ್ಯಾಭ್ಯಾಸಿಗಳಿಗೆ ಇಸ್ಮತ್ ಚುಗ್ತಾಯ್, ಲಲ್ಲೇಶ್ವರಿ, ಮೇರಿ ಸೊಂತಾಗ್ ಗೊತ್ತಿರಬಹುದು. ಅಷ್ಟು ಬಿಟ್ಟರೆ ಹೆಣ್ಣುಪಾತ್ರದ ಸಿದ್ಧ, ಸ್ಥಿರ ಮಾದರಿಗಳನ್ನು ಮನದಲ್ಲಿಟ್ಟುಕೊಂಡವರಿಗೆ ಇಲ್ಲಿನ ವೈವಿಧ್ಯಮಯ ಹೆಣ್ಣುಬದುಕುಗಳ ಚಿತ್ರಣ ಆಶ್ಚರ್ಯಾಘಾತ ಉಂಟುಮಾಡಬಹುದು. ಪಾಶ್ಚಾತ್ಯ ವಿದ್ಯಾವಂತ ಸಮಾಜವೂ ಎಷ್ಟು ಲಿಂಗಅಸೂಕ್ಷ್ಮವಾಗಿದೆ ಎನಿಸಬಹುದು. ಹೀಗಿರುತ್ತ ವಿವಿಧ ದೇಶ-ಕಾಲ-ಕ್ಷೇತ್ರಗಳ ಹೆಣ್ಣು ಬದುಕುಗಳ ಒತ್ತಟ್ಟಿಗಿರಿಸಿ ನಿರೂಪಿಸಿದ ಡಾ. ಜೆ. ಬಾಲಕೃಷ್ಣ ಅವರ ಪಯತ್ನಕ್ಕೆ ನನ್ನ ಮೊದಲ ಸಲಾಮು.

   ಈ ಅನನ್ಯ ಮಹಿಳಾ ಮಾದರಿಗಳ ಓದುತ್ತ ಒಂದೇಒಂದು ಕೊರತೆ ಎದ್ದು ಕಾಣಿಸಿತು. ವೈಯಕ್ತಿಕ ಸಾಧನೆಯಿಂದ ಶ್ರೇಷ್ಠ ವ್ಯಕ್ತಿಗಳಾದವರ ಮಾದರಿ ಹೇಗೆ ಮುಖ್ಯವೋ ಹಾಗೆಯೇ ಸಾಮೂಹಿಕತೆಯಲ್ಲಿ ನಂಬಿಕೆಯಿಟ್ಟು ಜೀವ ಸವೆಸಿದ ಮಾದರಿಗಳೂ ಮುಖ್ಯ. ತನ್ನತನದ ವಿಸ್ತರಣೆಯಾಗಿ ವೈಯಕ್ತಿಕ ಸಾಧನೆಗಳು ಇದ್ದರೆ, `ಸ್ವ’ ಕಲ್ಪನೆಯಿಂದ ತಮ್ಮ ವ್ಯಕ್ತಿತ್ವವನ್ನು ಹೊರತಂದು ವಿಶ್ವಾತ್ಮಕ ಉದ್ದೇಶ ಹೊತ್ತು ಸಾಮೂಹಿಕಗೊಳ್ಳುವುದು ಅತಿವಿಶಿಷ್ಟ ಸಾಧನೆ. ವಿಶಿಷ್ಟ ಯಾಕೆಂದರೆ ಒಂಟಿತನದಿಂದ ಪಾರಾಗಿ ಸಮುದಾಯದ ಭಾಗವಾಗದೇ ಅಥವಾ ಹಾಗೆಂದು ತನ್ನನ್ನು ಗುರುತಿಸಿಕೊಳ್ಳದೇ ಹೆಣ್ಣಿಗೆ ನಿಜವಾದ ಬಿಡುಗಡೆಯ ಮಾರ್ಗಗಳಿಲ್ಲ. ಆ ದೃಷ್ಟಿಯಿಂದ ಇಲ್ಲಿ ಸಂಘಟನಾತ್ಮಕ, ರಾಜಕಾರಣದಂತಹ ಕ್ರಿಯೆಗಳಲ್ಲಿ ತೊಡಗಿಕೊಂಡ ಮಹಿಳಾ ಮಾದರಿಯ ಕೊರತೆಯಿದೆ. ಒಬ್ಬ ಲಲ್ಲಾ ಆಧ್ಯಾತ್ಮಿಕವಾಗಿ ಆ ಮಟ್ಟ ತಲುಪಿದ್ದಾಳೆ. ಅವಳ ಬದುಕು ಉಳಿದೆಲ್ಲರಿಗಿಂತ ಕೊಂಚ ಭಿನ್ನವಾಗಿ ನಿಲ್ಲುತ್ತದೆ. ಆದರೆ ಸಾಮೂಹಿಕ ಚಿಂತನೆ, ನಾಯಕತ್ವ ರೂಢಿಸಿಕೊಂಡ ಒಂದು ಮಹಿಳಾ ಮಾದರಿ ಇಲ್ಲಿದ್ದರೂ ಪುಸ್ತಕದ ಗರಿಮೆ ಇಮ್ಮಡಿಯಾಗುತ್ತಿತ್ತು ಅನಿಸುತ್ತಿದೆ. 

   ಅದೇನೇ ಇರಲಿ, ಇಂಥ ಬದುಕುಗಳ ನಿರೂಪಣೆ ಸುಲಭವಲ್ಲ. ಯಾವುದೋ ಹೆಣ್ಮಕ್ಕಳ ಕಾಲ-ದೇಶ-ಬದುಕುಗಳೊಳಗೆ ಸಂಪೂರ್ಣವಾಗಿ ಒಳಹೊಕ್ಕ ಹೊರತು ಇಂಥ ಕಥನಗಳ ನಿರೂಪಿಸಲು ಸಾಧ್ಯವಿಲ್ಲ. ಡಾ. ಜೆ. ಬಾಲಕೃಷ್ಣ ಕ್ರಿಸ್ತಪೂರ್ವ ಕಾಲದ ಹೈಪೇಶಿಯಾಳಿಂದ ಹಿಡಿದು 20ನೇ ಶತಮಾನದ ಲೇಖಕಿ ಇಸ್ಮತ್ ಚುಗ್ತಾಯ್‍ವರೆಗೆ ಈ ಹೆಣ್ಣುಜೀವಗಳ ಬದುಕಿನ ವಿವಿಧ ಮಗ್ಗುಲುಗಳ ಬಗೆಗೆ ಆಳವಾಗಿ ಅಭ್ಯಸಿಸಿ ಬರೆದಿದ್ದಾರೆ. ಅವರ ಬದುಕುಗಳ ಕಟ್ಟಿಕೊಡುತ್ತಲೇ ಆ ಕಾಲವನ್ನೂ ಕಟ್ಟಿಕೊಟ್ಟಿರುವುದರಿಂದ ಈ ಬರಹಗಳನ್ನೋದುವಾಗ ಚರಿತ್ರೆಯ ಪುಟಗಳ ನಡುವೆ ಸುಳಿದಾಡಿ ಬಂದಂತೆನಿಸುತ್ತದೆ. ಉತ್ಪ್ರೇಕ್ಷೆ ಮತ್ತು ವೈಭವೀಕರಣದಿಂದ ದೂರನಿಂತು ಬದುಕನ್ನು ಜೀವನಪ್ರೀತಿಯಿಂದ ನೋಡುತ್ತ ಹೇಳಿರುವ ಕಥೆಗಳು ಇಲ್ಲಿವೆ. ಸರಾಗ ಓದಿಸಿಕೊಳ್ಳಬಲ್ಲ ಭಾಷೆ ಮತ್ತು ಲವಲವಿಕೆಯ ಶೈಲಿ ಇಲ್ಲಿನ ವಸ್ತು ಮತ್ತು ನಿರೂಪಣಾಕ್ರಮಕ್ಕೆ ಸೂಕ್ತವಾಗಿ ಹೊಂದಿಕೊಂಡಿವೆ. ಭಾವತೀವ್ರತೆಯನ್ನು ಓದುಗರಲ್ಲಿ ಹುಟ್ಟಿಸುವ ಇಂತಹ ಮಹಿಳಾ ಕಥನಗಳಿಗಾಗಿ ಕನ್ನಡ ಜಾಣಜಾಣೆಯರ ಪರವಾಗಿ ಬಾಲಕೃಷ್ಣ ಅವರಿಗೆ ಧನ್ಯವಾದಗಳು. 

   ಅದೇವೇಳೆಗೆ ಅನಾಮಿಕರಾಗಿಯೇ ಉಳಿದ ಇನ್ನೆಷ್ಟೋ ಅಸಂಖ್ಯ ಹೆಣ್ಣುಬದುಕುಗಳು ಚರಿತ್ರೆಯಲ್ಲಿ ಹುಗಿದು ಹೋಗಿವೆ. ಚರಿತ್ರೆಯ ಗತಿಯಲ್ಲಿ ಎಂದೋ ಆಗಿಹೋದವರ ಕಥೆ ನಮಗಿಂದು ಮುಖ್ಯವಾಗಿದೆ ಯಾಕೆಂದರೆ ಅವರ ಬದುಕುಗಳಲ್ಲಿ ಇವತ್ತಿನ ಸಂಕಟಕಾಲದ ಕಾರಣಗಳು, ಉತ್ತರಗಳು ಸಿಗಬಹುದಾಗಿದೆ. ಅಂಥವರನ್ನು ಹುಡುಕಿ ತೆಗೆದು ಅನಾವರಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

25-01-19                                                                                     ಡಾ. ಎಚ್. ಎಸ್. ಅನುಪಮಾ
j.balakrishna@gmail.com

No comments: