ಭಾನುವಾರ, ಆಗಸ್ಟ್ 02, 2020

ಬ್ಲೇಸ್‍ ಪ್ಯಾಸ್ಕಲ್ - ವಿಲ್ ಡ್ಯುರೆಂಟ್ ರವರ `ದ ಸ್ಟೋರಿ ಆಫ್ ಸಿವಿಲೈಜೇಷನ್’ ನಿಂದ



ಸುಮಾರು ಮೂರು ವರ್ಷಗಳ ಹಿಂದೆ ಕೆ.ವಿ.ಎನ್. ಸರ್ ರವರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ವಿಲ್ ಡ್ಯುರೆಂಟ್ ರವರ `ದ ಸ್ಟೋರಿ ಆಫ್ ಸಿವಿಲೈಜೇಷನ್’ ಸಂಪುಟಗಳನ್ನು ಅನುವಾದಿಸಿ ಪ್ರಕಟಿಸುವ ಪ್ರಾಯೋಜನೆಯಲ್ಲಿ ನನಗೆ The Crucible of Faith: 1643–1715 ಅನುವಾದಿಸುವ ಜವಾಬ್ದಾರಿ ವಹಿಸಿದರು. ನಾನು ಅನುವಾದ ಪ್ರಾರಂಭಿಸಿದ. ಫ್ರೆಂಚ್ ಹೆಸರುಗಳು, ಉಚ್ಛಾರಣೆ ಎಲ್ಲವಕ್ಕೂ ಅಂತರ್ಜಾಲದ ಮೊರೆ ಹೋಗಬೇಕಾಗಿತ್ತು. ನನ್ನ ಕಚೇರಿಯ ಕೆಲಸಗಳ ನಡುವೆ ಅನುವಾದ ನಿರೀಕ್ಷಿತ ವೇಗದಲ್ಲಿ ನಡೆಯಲಿಲ್ಲ. ಇನ್ನು ತಡವಾಗುವುದು ಬೇಡವೆಂದು ನಾನೇ ಇತರ ಯಾರಿಗಾದರೂ  ಅನುವಾದ ಕಾರ್ಯ ವಹಿಸಿಕೊಡಲು ಕೋರಿಕೊಂಡು ನಾನು ಅನುವಾದಿಸಿದ್ದ ಪ್ರಭು ಮತ್ತು ಪುರೋಹಿತ ವರ್ಗ, ಪೋರ್ಟ್-ರಾಯಲ್: 1204-1626, ಜಾನ್ಸೆನಿಸ್ಟರು ಮತ್ತು ಜೀಸ್ಯೂಟ್‍ಗಳು ಹಾಗೂ ಪಾಸ್ಕಲ್: 1623-62 ಅಧ್ಯಾಯಗಳನ್ನು ಕಳುಹಿಸಿದೆ. ಅದರಲ್ಲಿ ಗಣಿತಶಾಸ್ತ್ರಜ್ಞ, ಭೌತಶಾಸ್ತ್ರಜ್ಞ, ಸಂಶೋಧಕ, ಸಾಹಿತಿ ಮತ್ತು ಕ್ಯಾಥೊಲಿಕ್ ಧರ್ಮಶಾಸ್ತ್ರಜ್ಞ ಬ್ಲೇಸ್ ಪ್ಯಾಸ್ಕಲ್ನ ಕುರಿತ ಅಧ್ಯಾಯ ಕುತೂಹಲಕರವಾದುದು:

5.       ಪ್ಯಾಸ್ಕಲ್: 1623-62
1. ತಾನು
            ಆತನ ತಂದೆ ಎಟಿಯೆನ್ ಪ್ಯಾಸ್ಕಲ್ ದಕ್ಷಿಣ-ಕೇಂದ್ರ ಫ್ರಾನ್ಸಿನ ಕ್ಲೆರ್‍ಮಾಂಟ್-ಫೆರ್ರಾಂಡ್‍ನಲ್ಲಿನ ಏಡ್ಸ್‍ನ ಆಸ್ಥಾನದ ಅಧ್ಯಕ್ಷನಾಗಿದ್ದ. ಆತನ ತಾಯಿ ಅವನಿಗೆ ಜನ್ಮ ನೀಡಿದ ಮೂರು ವರ್ಷಗಳ ನಂತರ ತೀರಿಕೊಂಡಳು ಹಾಗೂ ಅವನಿಗೆ ಗಿಲ್ಬೆರ್ಟೆ ಎಂಬ ಅಕ್ಕ ಹಾಗೂ ಜಾಕ್ವೆಲಿನ್ ಎಂಬ ತಂಗಿಯಿದ್ದಳು. ಬ್ಲೇಸ್‍ನಿಗೆ ಎಂಟು ವರ್ಷಗಳಾಗಿದ್ದಾಗ ಕುಟುಂಬ ಪ್ಯಾರಿಸ್‍ಗೆ ಚಲಿಸಿತು. ಎಟಿಯೆನ್ ಜ್ಯಾಮಿತಿ ಮತ್ತು ಭೌತಶಾಸ್ತ್ರದ ವಿದ್ಯಾರ್ಥಿಯಾಗಿದ್ದಹಾಗೂ ಅದರಿಂದ ಆತ ಗ್ಯಾಸೆಂಡಿ, ಮೆರ್ಸೆನ್ ಮತ್ತು ಡೆಕಾರ್ಟೆಯ ಗೆಳೆತನ ಸಾಧಿಸಲು ಸಾಧ್ಯವಾಯಿತು. ಬ್ಲೇಸ್ ಅವರ ಕೆಲವು ಸಭೆಗಳ ಚರ್ಚೆಗಳನ್ನು ಕದ್ದಾಲಿಸಿ ತನ್ನ ಬದುಕಿನ ಮೊದಲ ಭಾಗದಲ್ಲಿ ವಿಜ್ಞಾನದ ಅನುಯಾಯಿಯಾದ. ತನ್ನ ಹನ್ನೊಂದನೇ ವಯಸ್ಸಿನಲ್ಲಿ ಕಂಪಿಸುವ ಕಾಯಗಳ ಶಬ್ದದ ಮೇಲೆ ಪ್ರಬಂಧವೊಂದನ್ನು ಬರೆದ. ಮಗನ ಜ್ಯಾಮಿತಿಯ ವ್ಯಾಮೋಹ ಅವನ ಇತರ ಓದಿನ ಬಗೆಗೆ ತೊಡಕುಂಟುಮಾಡಬಹುದೆಂದು ಭಾವಿಸಿದ ತಂದೆ ಒಂದಷ್ಟು ಸಮಯ ಮಗ ಗಣಿತದಿಂದ ದೂರವಿರುವಂತೆ ಮಾಡಿದ. ಆದರೆ ಒಂದು ದಿನ (ಕತೆಗಳು ಹೇಳುವಂತೆ), ಆತ ಗೋಡೆಯ ಮೇಲೆ ಕಲ್ಲಿದ್ದಲಿನಿಂದ ತ್ರಿಕೋನವೊಂದರ ಮೂರು ಕೋನಗಳು ಎರಡು ಲಂಬಕೋನಗಳಿಗೆ ಸರಿಸಮವೆಂದು ಬರಿಯುತ್ತಿರುವುದನ್ನು ಎಟಿಯೆನ್ ನೋಡಿದ; ಹಾಗೂ ಅಂದಿನಿಂದ ಬಾಲಕನಿಗೆ ಯೂಕ್ಲಿಡ್ ಅಧ್ಯಯನಕ್ಕೆ ಅನುಮತಿ ನೀಡಿದ. ಆತನಿಗೆ ಹದಿನಾರು ತುಂಬುವ ಮೊದಲೇ ಆತ ಶಂಕು ಆಕಾರಗಳ ವಿಭಾಗಗಳ ಮೇಲೆ ಪ್ರಬಂಧವೊಂದನ್ನು ರಚಿಸಿದ. ಅದರಲ್ಲಿ ಬಹಳ ಭಾಗ ಕಳೆದುಹೋಗಿದ್ದರೂ ಒಂದು ಪ್ರಮೇಯ ವಿಜ್ಞಾನಕ್ಕೆ ನೀಡಿದ ಅದ್ಭುತ ಕೊಡುಗೆಯಾಗಿದ್ದು ಇಂದಿಗೂ ಆ ಪ್ರಮೇಯಕ್ಕೆ ಆತನ ಹೆಸರೇ ಇದೆ. ಅದರ ಹಸ್ತಪ್ರತಿಯನ್ನು ಡೆಕಾರ್ಟೆಗೆ ತೋರಿಸಿದಾಗ ಅದು ತಂದೆಯದಲ್ಲ ಮಗನದು ಎಂದಾಗ ಆತ ನಂಬಲೇ ಇಲ್ಲವಂತೆ.                                                                                                                                                                                                                                                                                                                                                                                                                                                                                                                              
            ಆ ವರ್ಷ 1639ರಲ್ಲಿ ಆತನ ಹದಿಮೂರು ವರ್ಷದ ಸುಂದರ ಸಹೋದರಿ ಜಾಕ್ವೆಲಿನ್ ಆ ಕುಟುಂಬದ ಬದುಕಿನಲ್ಲಿ ಒಂದು ನಾಟಕೀಯ ಪಾತ್ರ ವಹಿಸಿದಳು. ತಂದೆ ಮುನಿಸಿಪಲ್ ಬಾಂಡ್‍ಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದ; ರಿಚೆಲ್ಯೂ ಈ ಬಾಂಡ್‍ಗಳಿಗೆ ಪಾವತಿಸುವ ಬಡ್ಡಿಯ ದರವನ್ನು ಕಡಿಮೆ ಮಾಡಿದ ಹಾಗೂ ಎಟಿಯೆನ್ ಆತನನ್ನು ಟೀಕಿಸಿದ ಹಾಗೂ ಆಗ ಕಾರ್ಡಿನಲ್ ಆತನನ್ನು ಬಂಧಿಸುವುದಾಗಿ ಹೆದರಿಸಿದ. ಹೆದರಿಕೊಂಡ ಎಟಿಯೆನ್ ಆವರ್ನೆಯಲ್ಲಿ ಅವಿತುಕೊಂಡ. ಕಾರ್ಡಿನಲ್ ನಾಟಕಗಳನ್ನು ಹಾಗೂ ಹುಡುಗಿಯರನ್ನು ಇಷ್ಟಪಡುವಂಥವನು; ಆ ದಿನ ಸ್ಕಡೆರಿಯ ಲ’ಅಮೋರ್ ಟಿರ್ಯಾನಿಕ್ ಆತನ ಮುಂದೆ ಪ್ರದರ್ಶಿಸಲಾಯಿತು ಹಾಗೂ ಅದರಲ್ಲಿ ಜಾಕ್ವೆಲಿನ್ ಸಹ ಪಾತ್ರಧಾರಿಯಾಗಿದ್ದಳು. ಆಕೆಯ ನಟನೆಯಿಂದ ಕಾರ್ಡಿನಲ್ ವಿಶೇಷವಾಗಿ ಸಂತುಷ್ಟನಾದ. ಅದೇ ಅವಕಾಶವನ್ನು ಬಳಸಿಕೊಂಡ ಆಕೆ ತನ್ನ ತಂದೆಯನ್ನು ಕ್ಷಮಿಸುವಂತೆ ಆತನನ್ನು ಕೇಳಿಕೊಂಡಳು. ಆತ ಕ್ಷಮಿಸಿದ್ದಷ್ಟೇ ಅಲ್ಲ ಆತನನ್ನು ನಾರ್ಮಾಂಡಿಯ ರಾಜಧಾನಿಯಾದ ರೌವೆನ್‍ನ ಮೇಲ್ವಿಚಾರಕನನ್ನಾಗಿ ಸಹ ಮಾಡಿದ ಹಾಗೂ ಅಲ್ಲಿ 1641ರಲ್ಲಿ ಕುಟುಂಬ ನೆಲೆಸಿತು.
            ಅಲ್ಲಿ ಆಗ ಹತ್ತೊಂಭತ್ತು ವರ್ಷಗಳಾಗಿದ್ದ ಬ್ಲೇಸ್ ತನ್ನ ಗಣಕ ಯಂತ್ರಗಳಲ್ಲಿನ ಮೊದಲ ಕೆಲವನ್ನು ನಿರ್ಮಿಸಿದ ಹಾಗೂ ಅವುಗಳಲ್ಲಿ ಕೆಲವೂ ಈಗಲೂ ಪ್ಯಾರಿಸ್‍ನಲ್ಲಿನ ಕನ್ಸರ್‍ವೆಟೋರ್ ಡೆ ಆಟ್ರ್ಸ್ ಎಟ್ ಮೇಟಿಯರ್ಸ್‍ನಲ್ಲಿ ಸಂರಕ್ಷಿಸಿಡಲಾಗಿದೆ. ಅವುಗಳ ಹಿಂದಿನ ತತ್ವವೇನೆಂದರೆ, ಹಲವಾರು ಚಕ್ರಗಳು ಒಂದಕ್ಕೊಂಡು ಕೂಡಿಕೊಂಡಿದ್ದವು ಹಾಗೂ ಅವುಗಳನ್ನು ತಲಾ ಒಂಭತ್ತು ಹಾಗೂ ಸೊನ್ನೆ ಅಂಕಿಗಳ ಹಾಗೆ ವಿಭಜಿಸಲಾಗಿತ್ತು. ಆ ಪ್ರತಿ ಚಕ್ರವೂ ಗಿಯರ್ ಸಂಪರ್ಕ ಹೊಂದಿದ್ದು ತನ್ನ ಬಲಭಾಗಕ್ಕಿದ್ದ ಚಕ್ರದ ಪ್ರತಿ ಸುತ್ತಿಗೆ ಹತ್ತನೇ ಒಂದು ಭಾಗದಷ್ಟು ಸುತ್ತುತ್ತಿತ್ತು ಹಾಗೂ ಪ್ರತಿಯೊಂದು ಚಕ್ರವು ತನ್ನಲ್ಲಿನ ಮೇಲ್ಭಾಗದಲ್ಲಿನ ಸಂಖ್ಯೆಯನ್ನು ಮೇಲಿದ್ದ ತೆರೆದ ಅಂಕಣದಲ್ಲಿ ಪ್ರದರ್ಶಿಸುತ್ತಿತ್ತು. ಆ ಯಂತ್ರವು ಸಂಕಲನ ಮಾತ್ರ ಮಾಡುತ್ತಿತ್ತು ಹಾಗೂ ವಾಣಿಜ್ಯವಾಗಿ ಬಳಸಲು ಸಾಧ್ಯವಿರಲಿಲ್ಲ ಆದರೆ ಇಂದು ಜಗತ್ತನ್ನೇ ದಂಗುಬಡಿಸುವ ಅಭಿವೃದ್ಧಿಯ ಪ್ರಾರಂಭವಾಗಿತ್ತು. ಪಾಸ್ಕಲ್ ತನ್ನ ಗಣಕಯಂತ್ರವೊಂದನ್ನು ಸ್ವೀಡನ್ನಿನ ಕ್ರಿಸ್ಟಿನಾರವರಿಗೆ ತನ್ನ ಮೆಚ್ಚುಗೆಯಿಂದ ಕಳುಹಿಸಿದ. ಆಕೆ ಆತನನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದಳು, ಆದರೆ ಆತ ಅಂತಹ ಅತ್ಯಂತ ಅಭಿನಂದನಾರ್ಹತೆಯನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲವೆನ್ನಿಸಿತು.
           
ಟೊರ್ರಿಸೆಲ್ಲಿ ಪ್ರಕಟಿಸಿದ್ದ ವಾತಾವರಣದ ತೂಕದ ಪ್ರಯೋಗಗಳ ಕುರಿತು ಅತ್ಯುತ್ಸಾಹದ ಯುವ ವಿಜ್ಞಾನಿ ಪ್ಯಾಸ್ಕಲ್ ಅತ್ಯಂತ ಆಸಕ್ತಿ ವಹಿಸಿದ್ದ. ತಾನೇ ಸ್ವತಂತ್ರವಾಗಿ, ಬಹುಶಃ ಡೆಕಾರ್ಟೆಯ ಸಲಹೆಯಿಂದಲೋ ಏನೋ ವಾತಾವರಣದ ಒತ್ತಡಕ್ಕೆ ಅನುಗುಣವಾಗಿ ಟೊರ್ರಿಸೆಲ್ಲಿಯ ನಳಿಕೆಯಲ್ಲಿನ ಪಾದರಸವು ವಿವಿಧ ಸ್ಥಳಗಳ ವಿವಿಧ ಎತ್ತರಗಳಲ್ಲಿ ಮೇಲಕ್ಕೇರುತ್ತದೆಂಬ ವಿಚಾರವನ್ನು ಪ್ಯಾಸ್ಕಲ್ ಕಂಡುಕೊಂಡ. ಆವರ್ನೆಯಲ್ಲಿನ ತನ್ನ ಭಾವನಿಗೆ ಒಂದು ತುದಿ ಮುಚ್ಚಿರುವ ಹಾಗೂ ಮತ್ತೊಂದು ತುದಿ ವಾತಾವರಣಕ್ಕೆ ತೆರೆದುಕೊಂಡಿರುವ ಪಾದರಸದ ನಳಿಕೆಯೊಂದನ್ನು ಪರ್ವತದ ಶಿಖರಕ್ಕೆ ಕೊಂಡೊಯ್ದು ವಿವಿಧ ಎತ್ತರಗಳಲ್ಲಿ ಪಾದರಸದ ಮಟ್ಟವನ್ನು ಗಮನಿಸಿ ದಾಖಲಿಸುವಂತೆ ಕೋರಿಕೆಯೊಂದನ್ನು ಕಳುಹಿಸಿದ. ಆತನ ಭಾವ ಫ್ಲೋರಿನ ಪೆರಿಯರ್ ಅದರಂತೆ ಮಾಡಿದ. ಆತ 1648ರ ಸೆಪ್ಟೆಂಬರ್ 19ರಂದು ತನ್ನ ಹಲವಾರು ಗೆಳೆಯರೊಂದಿಗೆ ಪಯ್ ದ ಡೋಮ್ ಪರ್ವತದ ಐದು ಸಾವಿರ ಅಡಿಗಳ ಎತ್ತರದಲ್ಲಿನ ಕ್ಲೆರ್‍ಮಾಂಟ್-ಫೆರ್ರಾಂಡ್ ಪಟ್ಟಣಕ್ಕೆ ಹೋದ ಹಾಗೂ ಪರ್ವತದ ಬುಡದಲ್ಲಿ ಇಪ್ಪತ್ತ ಆರು ಅಂಗುಲಗಳಷ್ಟು ಏರಿದ್ದ ಪಾದರಸವು ಪರ್ವತ ಶಿಖರದಲ್ಲಿ ಇಪ್ಪತ್ತ ಮೂರು ಅಂಗುಲಗಳಷ್ಟೇ ಏರಿದುದನ್ನು ದಾಖಲಿಸಿದ. ಈ ಪ್ರಯೋಗವು ಇಡೀ ಯೂರೋಪಿನಲ್ಲಿ ಪ್ರಶಂಸೆಗೊಳಗಾಯಿತು ಹಾಗೂ ಅಂತಿಮವಾಗಿ ಬಾರೋಮೀಟರ್‍ನ ತತ್ವವನ್ನು ಪ್ರತಿಷ್ಠಾಪಿಸಿತು.
ವಿಜ್ಞಾನಿಯಾಗಿ ಪ್ಯಾಸ್ಕಲ್ ಪಡೆದುಕೊಂಡ ಖ್ಯಾತಿಯಿಂದಾಗಿ (1648) ಒಬ್ಬ ಜೂಜುಕೋರನು ಸಂಭವದ ಗಣಿತಶಾಸ್ತ್ರ ರಚಿಸಿಕೊಡುವಂತೆ ಕೇಳಿಕೊಂಡನು. ಆತ ಆ ಸವಾಲನ್ನು ಸ್ವೀಕರಿಸಿ ಸಂಭವನೀಯತೆಯ ಕಲನಶಾಸ್ತ್ರವನ್ನು ಫಮ್ರ್ಯಾಟ್‍ನೊಂದಿಗೆ ಹಂಚಿಕೊಂಡನು ಹಾಗೂ ಇಂದು ಅದು ವಿಮಾ ಕೋಷ್ಟಕಗಳ ಕಾಯಿಲೆಯ ಮತ್ತು ಸಾವಿನ ಅಂದಾಜು ನಿರ್ಧರಣೆಯಲ್ಲಿ ಲಾಭದಾಯಕವಾಗಿ ಬಳಕೆಯಾಗುತ್ತಿದೆ. ಅವನ ಬೆಳವಣಿಗೆಯ ಈ ಹಂತದಲ್ಲಿ ಆತ ತನ್ನ ಶ್ರದ್ಧೆಯನ್ನು ವಿಜ್ಞಾನದಿಂದ ಧರ್ಮದೆಡೆಗೆ ವರ್ಗಾಯಿಸುತ್ತಾನೆಂಬ ಅಥವಾ ವೈಚಾರಿಕತೆ ಮತ್ತು ಪ್ರಯೋಗದಲ್ಲಿ ತನ್ನ ನಂಬಿಕೆಯನ್ನು ಕಳೆದುಕೊಳ್ಳುತ್ತಾನೆಂಬ ಯಾವುದೇ ಸೂಚನೆಯಿರಲಿಲ್ಲ. ಆತ ತನ್ನ ವೈಜ್ಞಾನಿಕ ಅನ್ವೇಷಣೆಯನ್ನು, ವಿಶೇಷವಾಗಿ ಗಣಿತಶಾಸ್ತ್ರದ ಕುರಿತಂತೆ ತನ್ನ ಕಾರ್ಯವನ್ನು ಹತ್ತು ವರ್ಷಗಳ ಕಾಲ ಮುಂದುವರಿಸಿದನು. 1658ರಲ್ಲಿ ತಾನು ಅನಾಮಧೇಯನಾಗಿದ್ದುಕೊಂಡೇ ಆತ ಚಕ್ರಜದ ಚದರೀಕರಣಕ್ಕೆ ಬಹುಮಾನವೊಂದನ್ನು ಘೋಷಿಸಿದನು. ಚಕ್ರಜದ ಚದರೀಕರಣವೆಂದರೆ ಸಮತಲದ ಮೇಲಿನ ವೃತ್ತದ ಮೇಲೆ ಬಿಂದುವೊಂದು ನೇರವಾಗಿ ಚಲಿಸುತ್ತಾ ರೂಪಿಸುವ ವಕ್ರ ರೇಖೆ. ಅದಕ್ಕೆ ಉತ್ತರವನ್ನು ವಲ್ಲೀಸ್, ಹಯ್ಗೆನ್ಸ್, ರೆನ್ ಮತ್ತು ಇತರರು ನೀಡಿದರು; ಪ್ಯಾಸ್ಕಲ್ ಗುಪ್ತನಾಮ ಬಳಸಿ ತನ್ನದೇ ಉತ್ತರವನ್ನು ಪ್ರಕಟಿಸಿದ. ಅದರಿಂದ ಉಂಟಾದ ವಿವಾದದಿಂದ ಸ್ಪರ್ಧಿಗಳು ಪ್ಯಾಸ್ಕಲ್ ಒಳಗೊಂಡಂತೆ ಹೆಚ್ಚು ತಾತ್ವಿಕವಾಗಿ ವರ್ತಿಸಲಿಲ್ಲ.
ಆದರೆ ಆತನ ಬದುಕಿನ ಮೇಲೆ ಎರಡು ಮೂಲಭೂತ ಪರಿಣಾಮಗಳು ಹೆಚ್ಚು ಪ್ರಬಲವಾಗುತ್ತಿದ್ದವು- ಕಾಯಿಲೆ ಮತ್ತು ಜಾನ್ಸೆನಿಸಂ. ಆತನ ಹದಿನೆಂಟನೇ ವಯಸ್ಸಿನ ಪ್ರಾರಂಭದಲ್ಲೇ ಆತ ನರಗಳ ಕಾಯಿಲೆಯೊಂದರಿಂದ ನರಳಿ ನೋವಿಲ್ಲದೆ ಆತ ಒಂದು ದಿನವೂ ಕಳೆಯಲಿಲ್ಲ. 1647ರಲ್ಲಿ ಆತ ಪಾರ್ಶ್ವವಾಯುವಿಗೆ ಬಲಿಯಾಗಿ ಕಂಕುಳಗೋಲುಗಳಿಲ್ಲದೆ ನಡೆದಾಡದಂತಾದ. ಆತನ ತಲೆ ನೋಯುತ್ತಿತ್ತು, ಕರಳುಗಳಲ್ಲಿ ಉರಿ ಕಾಣಿಸಿಕೊಳ್ಳುತ್ತಿತ್ತು, ಆತನ ಕಾಲು ಮತ್ತು ಕೈಗಳು ಸದಾ ತಂಡಿಯಾಗುತ್ತಿದ್ದವು ಹಾಗೂ ರಕ್ತದ ಪರಿಚಲನೆ ಹೆಚ್ಚಿಸಲು ಸಂಕೀರ್ಣ ಉಪಕರಣಗಳ ಅವಶ್ಯಕತೆಯಿತ್ತು; ಬ್ರಾಂಡಿಯಲ್ಲಿ ನೆನೆಸಿದ ಕಾಲುಚೀಲಗಳನ್ನು ಬಳಸಿ ತನ್ನ ಕಾಲುಗಳನ್ನು ಬಿಸಿಯಾಗಿರಿಸಿಕೊಳ್ಳುತ್ತಿದ್ದ. ಬಹುಶಃ ವೈದ್ಯಕೀಯ ಚಿಕಿತ್ಸೆಗಾಗಿಯೋ ಏನೋ ಆತ ಜಾಕ್ವೆಲಿನ್‍ಳೊಂದಿಗೆ ಪ್ಯಾರಿಸ್‍ಗೆ ತನ್ನ ವಾಸ್ತವ್ಯ ಬದಲಾಯಿಸಿದ. ಆತನ ಆರೋಗ್ಯ ಸುಧಾರಿಸಿತು ಆದರೆ ಆತನ ನರ ವ್ಯವಸ್ಥೆ ಶಾಶ್ವತವಾಗಿ ಹಾನಿಗೊಳಗಾಗಿತ್ತು. ಅಂದಿನಿಂದ ಆತ ಗಾಢ ವ್ಯಾದಿಭ್ರಮೆಗೊಳಗಾದ ಹಾಗೂ ಅದು ಆತನ ನಡತೆ ಮತ್ತು ತತ್ವ ಸಿದ್ಧಾಂತಗಳ ಮೇಲೆ ಪರಿಣಾಮ ಬೀರಿತು. ಬೇಗ ಕಿರಿಕಿರಿಗೊಳಗಾಗುತ್ತಿದ್ದ, ಆಗಾಗ ಅಹಂಕಾರ ಮತ್ತು ವಿಪರೀತ ಸಿಟ್ಟಿನಿಂದ ವರ್ತಿಸುತ್ತಿದ್ದ ಹಾಗೂ ಎಂದಿಗೂ ಮುಗುಳ್ನಗುತ್ತಿರಲಿಲ್ಲ.
ಆತನ ತಂದೆ ತನ್ನ ವಿಜ್ಞಾನದ ಹವ್ಯಾಸಗಳ ನಡುವೆಯೂ ಅತ್ಯಂತ ಶ್ರದ್ಧೆಯ, ವಿರಕ್ತಿಯ ಕ್ಯಾಥೊಲಿಕ್ ಆಗಿದ್ದ ಹಾಗೂ ತನ್ನ ಮಕ್ಕಳಿಗೆ ಧಾರ್ಮಿಕ ಶ್ರದ್ಧೆ ಅತ್ಯಂತ ಅಮೂಲ್ಯವಾದದ್ದೆಂದು ಹಾಗೂ ಆ ನಂಬಿಕೆ ಮಾನವರ ಹುಲು ವೈಚಾರಿಕತೆಯನ್ನು ಮೀರಿರುವುದು ಎಂಬುದನ್ನು ಬೋಧಿಸಿದ್ದ. ರೌವೆನ್‍ನಲ್ಲಿದ್ದಾಗ ಒಮ್ಮೆ ಆತನಿಗೆ ತೀವ್ರ ಗಾಯವಾಗಿದ್ದಾಗ ಒಬ್ಬ ಜಾನ್ಸೆನ್ ವೈದ್ಯ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದ ಹಾಗೂ ಆತನ ಸಂಪರ್ಕದಿಂದಾಗಿ ಆತನ ಕುಟುಂಬದ ಶ್ರದ್ಧೆಗೆ ಒಂದು ರೀತಿಯ ಜಾನ್ಸೆನಿಸ್ಟ್ ಲೇಪ ಹಚ್ಚಿಕೊಂಡಿತು. ಬ್ಲೇಸ್ ಮತ್ತು ಜಾಕ್ವೆಲಿನ್ ರಾಜಧಾನಿಗೆ ಸ್ಥಳಾಂತರಗೊಂಡಾಗ ಅವರು ಆದಷ್ಟು ಹೆಚ್ಚು ಸಮಯ ಪೋರ್ಟ್-ರಾಯಲ್-ಡೆ-ಪ್ಯಾರಿಸ್‍ನಲ್ಲಿ ನಡೆಯುತ್ತಿದ್ದ ದಿವ್ಯಾಚರಣೆಯಲ್ಲಿ ಭಾಗವಹಿಸುತ್ತಿದ್ದರು. ಜಾಕ್ವೆಲಿನ್ ಕ್ರೈಸ್ತ ಸಂನ್ಯಾಸಿನಿಯಾಗಿ ಕಾನ್ವೆಂಟಿಗೆ ಸೇರಿಕೊಳ್ಳಲು ಬಯಸಿದ್ದಳು, ಆದರೆ ಆಕೆಯ ತಂದೆ ತನ್ನ ಮಗಳನ್ನು ತನ್ನ ಬದುಕಿನಿಂದ ಬಿಟ್ಟುಕೊಡಲು ಬಯಸಲಿಲ್ಲ. ಆತ 1651ರಲ್ಲಿ ತೀರಿಕೊಂಡ ಹಾಗೂ ಕೂಡಲೇ ಜಾಕ್ವೆಲಿನ್ ಪೋರ್ಟ್-ರಾಯಲ್-ಡೆಸ್ ಚಾಂಪ್ಸ್‍ನಲ್ಲಿ ಸಂನ್ಯಾಸಿನಿಯಾಗಿ ಸೇರಿಕೊಂಡಳು. ಆಕೆಯ ಸಹೋದರ ಬೇಡವೆಂದು ಎಷ್ಟೇ ಕೇಳಿಕೊಂಡರೂ ಆಕೆ ಒಪ್ಪಲಿಲ್ಲ.
ತಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಅಬರಿಬ್ಬರ ನಡುವೆ ಕೆಲಕಾಲ ತಕರಾರಿದ್ದಿತು. ಅದು ಇತ್ಯರ್ಥವಾದ ಕೂಡಲೇ ಬ್ಲೇಸ್ ಸ್ವತಂತ್ರನೂ ಸಿರಿವಂತನೂ ಆದ- ಅಂದರೆ ಪಾವಿತ್ರತೆಗೆ ವಿರುದ್ಧದ ಸಂದರ್ಭ. ಒಂದು ಭವ್ಯ ಸಕಲ ಅನುಕೂಲಗಳ ಮನೆಯನ್ನು ತೆಗೆದುಕೊಂಡ, ಮನೆಯಲ್ಲಿ ಹಲವಾರು ಕೆಲಸಗಾರರಿದ್ದರು ಹಾಗೂ ಪ್ಯಾರಿಸ್ಸಿನಲ್ಲೆಲ್ಲಾ ನಾಲ್ಕು ಅಥವಾ ಆರು ಕುದುರೆಗಳ ಸಾರೋಟಿನಲ್ಲಿ ಸುತ್ತಾಡುತ್ತಿದ್ದ. ಆತನ ತಾತ್ಕಾಲಿಕ ಪುನಶ್ಚೈತನ್ಯ ಒಂದು ರೀತಿಯ ಕಪಟದ ಮನೋಲ್ಲಾಸದ ಭಾವನೆ ನೀಡಿತು ಹಾಗೂ ಅದರಿಂದ ಆತ ಭಕ್ತಿ ಶ್ರದ್ಧೆಯಿಂದ ಲೋಲುಪತೆಯೆಡೆಗೆ ವಾಲಿದ. ಆತ “ಪ್ರಾಪಂಚಿಕ ಜಗತ್ತಿನಲ್ಲಿ” ಪ್ಯಾರಿಸ್ಸಿನ ಮೋಜಿನ, ಕ್ರೀಡೆಗಳ ಮತ್ತು ಹೆಣ್ಣುಗಳ ಒಡನಾಟದ ಹಾಗೂ “ಹಳ್ಳಿಗಾಡಿನ ಸ್ಯಾಫೊ” ಎಂದು ಖ್ಯಾತಳಾಗಿದ್ದ ಆವರ್ನೆಯ ಸುಂದರ ಹಾಗೂ ಸುಶಿಕ್ಷಿತ ಹೆಣ್ಣಿನ ಹಿಂದೆ ಬಿದ್ದ ಅವಧಿಯನ್ನು ನಾವು ಅಸೂಯೆಯಿಂದ ನೋಡಬಾರದು. ಇದೇ ಅವಧಿಯಲ್ಲಿಯೇ ಆತ ಡಿಸ್ಕೋರ್ಸ್ ಸುರ್ ಲೆಸ್ ಪ್ಯಾಶನ್ಸ್ ಡೆ ಎಲ್’ಅಮೋರ್ ಕೃತಿಯನ್ನು ರಚಿಸಿದ ಹಾಗೂ ಬಹುಶಃ ಮದುವೆಯ ಆಲೋಚನೆಯೂ ಆತನ ತಲೆ ಹೊಕ್ಕಿತ್ತು- ಇದನ್ನು ನಂತರ “ಕ್ರೈಸ್ತಧರ್ಮೀಯನೊಬ್ಬನ ಬದುಕಿನಲ್ಲಿ ಇದು ಅತ್ಯಂತ ಕೀಳುಮಟ್ಟದ ಪರಿಸ್ಥಿತಿ” ಎಂದು ವಿವರಿಸಿಕೊಂಡಿದ್ದಾನೆ. ಅವನ ಕೆಲವು ಗೆಳೆಯರಲ್ಲಿ ಲಿಬರ್ಟಿನ್ನರು ಇದ್ದು ಅವರು ಸ್ವಚ್ಛಂದ ನೈತಿಕತೆಯನ್ನು ಸ್ವಚ್ಛಂದ ಆಲೋಚನೆಗಳೊಂದಿಗೆ ಮಿಶ್ರಣ ಮಾಡುವವರಾಗಿದ್ದರು. ಬಹುಶಃ ಅವರ ಮೂಲಕವೇ ಇರಬೇಕು ಪ್ಯಾಸ್ಕಲ್‍ಗೆ ಮೋಟೇನ್‍ನಲ್ಲಿ ಆಸಕ್ತಿ ಮೂಡಿತು ಹಾಗೂ ಆತನ ಎಸ್ಸೇಸ್ ಆತನ ಬದುಕನ್ನು ಗಾಢವಾಗಿ ಪ್ರವೇಶಿಸಿತು. ಅವರ ಮೊದಲ ಪ್ರಭಾವವೇ ಆತನನ್ನು ಧಾರ್ಮಿಕ ಅಪನಂಬಿಕೆಯೆಡೆ ಕರೆದೊಯ್ಯಿತು.
ಆತನ ಈ ಹೊಸ ಚಿತ್ತಚಾಂಚಲ್ಯದ ಕುರಿತು ಆಲಿಸಿದ ಜಾಕ್ವೆಲಿನ್ ಆತನನ್ನು ಎಚ್ಚರಿಸಿದಳು ಮತ್ತು ಆತನ ಸುಧಾರಣೆಗಾಗಿ ಪ್ರಾರ್ಥಿಸಿದಳು. ಆತನ ಭಾವನಾತ್ಮಕ ಸ್ವರೂಪದಿಂದಲೋ ಏನೋ ಒಂದು ಅಪಘಾತದಿಂದಾಗಿ ಆಕೆಯ ಪ್ರಾರ್ಥನೆ ಫಲಗೂಡುವಂತಾಯಿತು. ಒಂದು ದಿನ ಆತ ಪೋಂಟ್ ಡೆ ನ್ಯೂಲ್ಲಿಯಲ್ಲಿ ತನ್ನ ನಾಲ್ಕು ಕುದುರೆಗಳ ಸಾರೋಟಿನಲ್ಲಿ ಹೋಗುತ್ತಿದ್ದಾಗ ಆ ಕುದುರೆಗಳು ಬೆದರಿ ಸಿಯೆನ್ ನದಿಯ ತಡೆಗೋಡೆ ಹಾರಿದವು. ಆತನ ಗಾಡಿಯೂ ಸಹ ನದಿಗೆ ಬೀಳುತ್ತಿತ್ತೇನೊ, ಅಷ್ಟರಲ್ಲಿ ಲಗಾಮುಗಳು ಕಿತ್ತು ಗಾಡಿ ಅಂಚಿನಲ್ಲಿ ತೂಗಾಡತೊಡಗಿತು. ಪ್ಯಾಸ್ಕಲ್ ಮತ್ತು ಆತನ ಗೆಳೆಯರು ಸುರಕ್ಷಿತವಾಗಿ ಪಾರಾಗಿ ಹೊರಬಂದರು, ಆದರೆ ಸೂಕ್ಷ್ಮಮತಿಯಾದ ನಮ್ಮ ತತ್ವಜ್ಞಾನಿ ಸಾವಿನ ಹೆದರಿಕೆಗೆ ಅಂಜಿ ಎಚ್ಚರ ತಪ್ಪಿದ ಹಾಗೂ ಕೆಲ ಸಮಯ ಪ್ರಜ್ಞಾಹೀನನಾಗಿದ್ದ. ಪುನಃ ಎಚ್ಚರಗೊಂಡಾಗ ಆತನಿಗೆ ದೇವರನ್ನು ಕಂಡು ಹಿಂದಿರುಗಿದಂತೆ ಭಾಸವಾಯಿತು. ಹೆದರಿಕೆಯ, ಪಶ್ಚಾತ್ತಾಪದ ಹಾಗೂ ಧನ್ಯತೆಯ ಉನ್ಮಾದದಲ್ಲಿ ಆತ ತಾನು ಕಂಡದ್ದನ್ನು ಒಂದು ತೊಗಲು ಹಾಳೆಯ ಮೇಲೆ ಈ ಮುಂದಿನಂತೆ ದಾಖಲಿಸಿ ಅದನ್ನು ತನ್ನ ಕೋಟಿನ ಒಳಭಾಗಕ್ಕೆ ಸದಾ ಹೊಲಿದುಕೊಂಡಿರುತ್ತಿದ್ದ:

ಕೃಪೆಯ ವರ್ಷ 1654.
ನವೆಂಬರ್ 23ರ ಸೋಮವಾರ... ಸಂಜೆ ಆರು ಮುವ್ವತ್ತರಿಂದ ಮಧ್ಯರಾತ್ರಿ ಒಂದು ಗಂಟೆಯ ನಂತರದವರೆಗೂ
ಅಬ್ರಹಾಂನ ದೇವರು, ಇಸಾಕ್‍ನ ದೇವರು, ಜಾಕೋಬ್‍ನ ದೇವರು,
ತತ್ವಜ್ಞಾನಿಗಳ ಮತ್ತು ವಿದ್ವಾಂಸರ ದೇವರುಗಳಲ್ಲ
ಖಂಡಿತವಾಗಿಯೂ ಸುಖ ಸಂತೋಷದ, ಶಾಂತಿಯ ಭಾವನೆಗಳು
ಯೇಸು ಕ್ರಿಸ್ತನ ದೇವರು . . .
ಸುವಾರ್ತೆಯಲ್ಲಿನ ವಿಧಾನಗಳನ್ನು ಹೊರತುಪಡಿಸಿ ಆತ ಕಾಣಲಾರ
ಮಾನವ ಆತ್ಮದ ವೈಭವವೇ.
ತಂದೆಯೇ ಜಗತ್ತು ನಿನ್ನನ್ನು ಎಂದಿಗೂ ಅರಿತಿಲ್ಲ, ಆದರೆ ನಾನು ನಿನ್ನನ್ನು ಅರಿತಿದ್ದೇನೆ.
ಮಹದಾನಂದ, ಮಹದಾನಂದ, ಸಂತೋಷದ ಅಶ್ರಧಾರೆ. . .
ಹೋ ನನ್ನ ದೇವರೇ, ನನ್ನನ್ನು ತೊರೆಯುವೆಯಾ? . . .
ಯೇಸು ಕ್ರಿಸ್ತ
ಯೇಸು ಕ್ರಿಸ್ತ. . .
ನಾನು ಆತನಿಂದ ದೂರವಾಗಿದ್ದೆ, ನಾನು ಆತನಿಂದ ಓಡಿಹೋಗಿದ್ದೆ, ಆತನನ್ನು ತ್ಯಜಿಸಿದ್ದೆ,
ಶಿಲುಬೆಗೇರಿಸಿದ್ದೆ.
ಆತನಿಂದ ನಾನೆಂದೂ ದೂರವಾಗಬಾರದು. . .
ಮರುಸಾಂಗತ್ಯ ಮಧುರ ಮತ್ತು ಪರಿಪೂರ್ಣ.

ಆತ ಪೋರ್ಟ್-ರಾಯಲ್‍ಗೆ ಹಾಗೂ ಸಹೋದರಿ ಜಾಕ್ವೆಲಿನ್‍ಳಿಗೆ ತನ್ನ ಭೇಟಿಗಳನ್ನು ಪುನಃ ಪ್ರಾರಂಭಿಸಿದ, ಆಕೆಯಲ್ಲಿಯೂ ಆತನ ಹೊಸ ವಿನಮ್ರತೆ ಮತ್ತು ಶ್ರದ್ಧೆ ಭಕ್ತಿಗಳು ಸಂತೋಷ ಉಂಟುಮಾಡಿದವು. ಆತ ಆಂತ್ವಾನ್ ಸಿಂಗ್ಲಿನ್‍ರ ಪ್ರವಚನಗಳನ್ನು ಆಲಿಸಿದ. ಡಿಸೆಂಬರ್ 1654ರಲ್ಲಿ ಪೋರ್ಟ್-ರಾಯಲ್ ಸಮುದಾಯದ ಸದಸ್ಯನೂ ಆದ.28 ಜನವರಿಯಲ್ಲಿ ಸೇಸಿಯೊಂದಿಗೆ ದೀರ್ಘ ಸಂವಾದ ನಡೆಸಿದ ಹಾಗೂ ಅದು ವಿಜ್ಞಾನದ ಜಾಳುತನವನ್ನು ಮತ್ತು ತತ್ವಶಾಸ್ತ್ರದ ನಿರುಪಯುಕ್ತತೆಯನ್ನು ಕಂಡುಕೊಳ್ಳುವಂತೆ ಮನದಟ್ಟುಮಾಡಿತು. ಅರ್ನಾಲ್ಡ್ ಮತ್ತು ನಿಕೋಲ್‍ರವರು ಈ ಹೊಸದಾಗಿ ಸೇರಿಕೊಂಡ ಈ ವ್ಯಕ್ತಿಯಲ್ಲಿ ಮತಾಂತರದ ಅತ್ಯುತ್ಸಾಹ, ಸಾಹಿತ್ಯಿಕ ಅಭಿವ್ಯಕ್ತತೆಯನ್ನು ಕಂಡುಕೊಂಡರು ಹಾಗೂ ಶತ್ರುಗಳಿಂದ ಪೋರ್ಟ್-ರಾಯಲ್ ಕಾಪಾಡಿಕೊಳ್ಳಲು ಅವರಿಗೆ ಹೊಸ ಅಸ್ತ್ರ ದೊರಕಿದಂತಾಯಿತು. ಅವರು ಆತನ ಲೇಖನಿಯ ಮೂಲಕ ಜಾನ್ಸೆನಿಸಂ ಒಂದು ಪಾಪವೆಂದು ಹೇಳುತ್ತಿರುವ ಜೀಸ್ಯೂಟ್‍ರಿಗೆ ತಕ್ಕ ಉತ್ತರ ನೀಡುವಂತೆ ಕೇಳಿಕೊಂಡರು. ಆತ ಅದಕ್ಕೆ ತನ್ನ ಮೇಧಾವಿತನದಿಂದ ಹಾಗೂ ಪ್ರಬಲತೆಯಿಂದ ನೀಡಿದ ಪ್ರತಿಕ್ರಿಯೆ ಎಷ್ಟು ಶಕ್ತಿಯುತವಾಗಿತ್ತೆಂದರೆ ಸೊಸೈಟಿ ಆಫ್ ಜೀಸಸ್ ಈಗಲೂ ಅದರ ತೀಕ್ಷ್ಣತೆಯಿಂದ ಪಾರಾಗಿಲ್ಲ.
2. ಪ್ರಾಂತೀಯ ಪತ್ರಗಳು
1656ರ ಜನವರಿ 23 ಮತ್ತು 26ರಂದು ಪ್ಯಾಸ್ಕಲ್ ಪ್ರಾಂತೀಯ ಗೆಳೆಯ ಹಾಗೂ ಮಾನ್ಯ ಜೀಸ್ಯೂಟ್ ಫಾಧರ್‍ಗಳಿಗೆ ಅವರ ನೈತಿಕತೆ ಮತ್ತು ರಾಜಕೀಯ ಕುರಿತಂತೆ “ಲೂಯಿಸ್ ಡೆ ಮೊನಾಲ್ಟೆ ಬರೆದ ಪತ್ರಗಳ” (ಕಾಲ್ಪನಿಕ ಲೇಖಕ) ಮೊದಲ ಹಾಗೂ ಎರಡನೇ ಸಂಪುಟಗಳನ್ನು ಪ್ರಕಟಿಸಿದ. ಇದರ ಸ್ವರೂಪ ಬುದ್ಧಿವಂತಿಕೆಯಿಂದ ಕೂಡಿತ್ತು: ಅದು ಒಬ್ಬ ಪ್ಯಾರಿಸ್ಸಿನವನು ಪ್ರಾಂತ್ಯದಲ್ಲಿರುವ ತನ್ನ ಗೆಳೆಯನಿಗೆ ಆಗಿನ ನೈತಿಕ ಮತ್ತು ಧರ್ಮಶಾಸ್ತ್ರೀಯ ವಿಷಯಗಳ ಕುರಿತು ಬರೆದಂತಿತ್ತು ಹಾಗೂ ಅದು ಆಗ ರಾಜಧಾನಿಯಲ್ಲಿ ವೈಚಾರಿಕ ಮತ್ತು ಧಾರ್ಮಿಕ ಗುಂಪುಗಳ ನಡುವೆ ಚರ್ಚೆಗೆ ಗ್ರಾಸವಾಯಿತು. ಅರ್ನಾಲ್ಡ್ ಮತ್ತು ನಿಕೋಲ್ ಮಾಹಿತಿಯನ್ನು ಮತ್ತು ಆಕರಗಳನ್ನು ಪ್ಯಾಸ್ಕಲ್‍ಗೆ ಒದಗಿಸಿದರು ಹಾಗೂ ಆತ ಮತಾಂತರದ ಹುಮ್ಮಸ್ಸಿನಲ್ಲಿ ಪ್ರಾಪಂಚಿಕ ಮನುಷ್ಯನ ಲೇವಡಿಯನ್ನು, ನಯ ನಾಜೂಕನ್ನು ಸೇರಿಸಿ ಫ್ರೆಂಚ್ ಗದ್ಯ ಸಾಹಿತ್ಯದಲ್ಲೇ ಅತ್ಯುತ್ತಮವಾದುದನ್ನು ನೀಡಿದ.
ಮೊದಲ ಪತ್ರಗಳು ಅರ್ನಾಲ್ಡ್ ವಾದಿಸುತ್ತಿದ್ದಂತಹ ದೈವ ಕೃಪೆ ಮತ್ತು ಮುಕ್ತಿಯ ಕುರಿತಂತೆ ಜಾನ್ಸೆನಿಸ್ಟ್ ದೃಷ್ಟಿ ಕೋನಕ್ಕೆ ಸಾರ್ವಜನಿಕ ಬೆಂಬಲವನ್ನು ಕೋರುತ್ತಿದ್ದವು; ಅವನ್ನು ಅರ್ನಾಲ್ಡ್‍ನನ್ನು ಉಚ್ಛಾಟಿಸಬೇಕೆಂಬ ನಿರ್ಧಾರದ ವಿರುದ್ಧ ಸೋರ್ಬೋನ್‍ನನ್ನು ಪ್ರಭಾವಿತಗೊಳಿಸುವಂತೆ ವಿನ್ಯಾಸಗೊಳಿಸಲಾಗಿತ್ತು. ಅದರಲ್ಲಿ ಅವರು ವಿಫಲರಾದರು; ಅರ್ನಾಲ್ಡ್‍ನನ್ನು ಕೆಳದರ್ಜೆಗಿಳಿಸಿ ಉಚ್ಛಾಟಿಸಲಾಯಿತು (ಜನವರಿ 31). ಈ ವಿಫಲತೆಯು ಪ್ಯಾಸ್ಕಲ್ ಮತ್ತು ಅರ್ನಾಲ್ಡ್‍ರು ತಮ್ಮ ಧರ್ಮಸೂಕ್ಷ್ಮ ವಿವೇಚನೆಯಲ್ಲಿನ ನ್ಯೂನತೆಗಳ ಮತ್ತು ಅವರ ತಪ್ಪೊಪ್ಪಿಗೆಗಾರರ ಸಡಿಲ ನಡತೆಯಿಂದ ನೈತಿಕತೆಯನ್ನು ಅಧೋಗತಿಗೆ ತಳ್ಳುತ್ತಿದ್ದಾರೆಂದು ಜೀಸ್ಯೂಟ್‍ಗಳ ಮೇಲೆ ಆಕ್ರಮಣ ಮಾಡುವಂತೆ ಮಾಡಿತು. ಅವರು ಎಸ್ಕೋಬಾರ್ ಮತ್ತು ಇತರ ಜೀಸ್ಯೂಟ್‍ಗಳ ಗ್ರಂಥಗಳನ್ನು ಪರಾಮರ್ಶಿಸಿ “ಸಂಭವನೀಯತಾ ಸಿದ್ಧಾಂತ”ವನ್ನು, “ಇಚ್ಛೆಯ ದಿಕ್ಕನ್ನು” ಮತ್ತು “ಮಾನಸಿಕ ಮೀಸಲಾತಿಯನ್ನು” ಹಾಗೂ ಜೀಸ್ಯೂಟ್ ಮಿಶನರಿಗಳ ಚೀನೀ ಪೂರ್ವಜರ ಆರಾಧನೆಯನ್ನು ಕ್ರೈಸ್ತ ಧರ್ಮಶಾಸ್ತ್ರದಲ್ಲಿ ಅಳವಡಿಸಿಕೊಂಡಿರುವುದನ್ನೂ ಅಲ್ಲಗಳೆದರು29- ಆದರೆ ಅವರೆಂದೂ ಜೀಸ್ಯೂಟ್‍ಗಳ ವಿಧಾನಗಳ ಸಮರ್ಥನಾ ವಿಧಾನವನ್ನು ಖಂಡಿಸಲಿಲ್ಲ. ಒಂದರ ನಂತರ ಮತ್ತೊಂದರಂತೆ ಪತ್ರಗಳ ಸಾಲು ಬೆಳೆದಂತೆ ಅರ್ನಾಲ್ಡ್ ಎಸ್ಕೋಬಾರ್‍ನ ಧರ್ಮಸೂಕ್ಷ್ಮ ವಿವೇಚನೆಯನ್ನು ಪ್ಯಾಸ್ಕಲ್‍ಗೆ ಪರಿಚಯಿಸುತ್ತಾ ಹೋದ ಹಾಗೂ ಆ ಮತಾಂತರಿಯ ಭಾವುಕತೆ ಮತ್ತಷ್ಟು ಹೆಚ್ಚಾಗುತ್ತಾ ಹೋಯಿತು. ಹತ್ತನೇ ಪತ್ರದ ನಂತರ ಪ್ಯಾರಿಸ್ಸಿನ ಶೈಲಿಯ ಕಾಲ್ಪನಿಕ ಕಥನ ನಿರೂಪಣೆ ತ್ಯಜಿಸಿ ಪ್ರಾಂತೀಯ ಶೈಲಿಯನ್ನು ಅನುಕರಿಸತೊಡಗಿದ. ಈಗ ತನ್ನ ಹೆಸರಿನಲ್ಲೇ ಬರೆಯತೊಡಗಿದ ಹಾಗೂ ಜೀಸ್ಯೂಟ್‍ಗಳ ಮೇಲೆ ನೇರವಾಗಿ ಸಿಟ್ಟಿನ ಹಾಗೂ ಲೇವಡಿಯ ಮಾತುಗಳಿಂದ ದಾಳಿ ನಡೆಸಿದ. ಕೆಲವೊಮ್ಮೆ ಒಂದೊಂದು ಪತ್ರವನ್ನು ಬರೆಯಲು ಇಪ್ಪತ್ತು ದಿನಗಳವರೆಗೆ ಸಮಯ ತೆಗೆದುಕೊಳ್ಳುತ್ತಿದ್ದ ಹಾಗೂ ಬರೆದ ತಕ್ಷಣ ವಿವಾದ ತಣ್ಣಗಾಗುವ ಮುನ್ನವೇ ಮುದ್ರಣಕ್ಕೆ ಕಳುಹಿಸುತ್ತಿದ್ದ. ಪತ್ರ 16ಕ್ಕೆ ಒಂದು ವಿಶಿಷ್ಟ ತಪ್ಪೊಪ್ಪಿಗೆಯನ್ನು ನೀಡಿದ: “ಅದನ್ನು ಸಂಕ್ಷಿಪ್ತಗೊಳಿಸಲು ನನಗೆ ಸಮಯವಿರಲಿಲ್ಲ.” ಹದಿನೆಂಟನೇ ಮತ್ತು ಅಂತಿಮ ಪತ್ರದಲ್ಲಿ (ಮಾರ್ಚ್ 24, 1657) ಆತ ಪೋಪ್‍ರವರನ್ನೇ ಉಲ್ಲಂಘಿಸಿದ. ಏಳನೇ ಅಲೆಕ್ಸಾಂಡರ್ ಜಾನ್ಸೆನಿಸಂನ ಖಂಡನಾ ಪತ್ರವನ್ನು ನೀಡಿದ್ದರು (ಅಕ್ಟೋಬರ್ 16, 1656); ಪ್ಯಾಸ್ಕಲ್ ತನ್ನ ಓದುಗರಿಗೆ ಪೋಪ್‍ರವರ ನ್ಯಾಯ ನಿರ್ಣಯ ತಪ್ಪಾಗಬಹುದು (ತನಗನ್ನಿಸಿದಂತೆ) ಗೆಲಿಲಿಯೋನ ವಿಷಯದಲ್ಲಿ ಆದಂತೆ ಎಂದು ನೆನಪಿಸಿದ. ಪೋಪ್‍ರವರು ಆ ಪತ್ರಗಳನ್ನು ಖಂಡಿಸಿದರು (ಸೆಪ್ಟೆಂಬರ್ 6, 1657), ಆದರೆ ಫ್ರಾನ್ಸ್‍ನ ಎಲ್ಲ ಶಿಕ್ಷಿತರೂ ಅವುಗಳನ್ನು ಓದಿದರು.
ಅವರು ಜೀಸ್ಯೂಟ್‍ಗಳನ್ನು ನ್ಯಾಯಸಮ್ಮತವಾಗಿ ಕಂಡರೆ? ಜೀಸ್ಯೂಟ್ ಲೇಖಕರ ಬರಹಗಳನ್ನು ಸರಿಯಾಗಿ ಉಲ್ಲೇಖಿಸಿದರೆ? “ಅರ್ಹ ಉಲ್ಲೇಖಗಳನ್ನು ಬಿಟ್ಟಿದ್ದಿದು, ಕೆಲವನ್ನು ತಪ್ಪಾಗಿ ಅನುವಾದಿಸಿದ್ದುದು ಹಾಗೂ ಉದ್ದದ ವಾಕ್ಯಗಳನ್ನು ಸಂಕ್ಷಿಪ್ತಗೊಳಿಸಿರುವುದರಿಂದ ಮೂಲ ಆಶಯಕ್ಕೆ ಧಕ್ಕೆಯಾಗಿರುವುದು ಸತ್ಯವಾದುದು” ಎಂದರು ವಿಚಾರವಾದಿಯೊಬ್ಬರು; ಆದರೆ, “ಅಂತಹ ಸಂದರ್ಭಗಳು ತೀರಾ ಕಡಿಮೆ ಹಾಗೂ ಗೌಣವಾದುದು:  ಎಂದು ಸಹ ಅವರು ಹೇಳಿದರು; ಉಲ್ಲೇಖಗಳ ನಿಖರತೆಯನ್ನು ಈಗ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಪ್ಯಾಸ್ಕಲ್ ತನ್ನ ಅನುಕೂಲಕ್ಕನುಗುಣವಾಗಿ ಕೆಲವು ಧರ್ಮಸೂಕ್ಷ್ಮ ವಿವೇಚಕರ ಸಾಂದರ್ಭಿಕವಲ್ಲದ ಮತ್ತು ಪ್ರಶ್ನಾರ್ಹ ಉಲ್ಲೇಖಗಳನ್ನು ಎತ್ತಿ ಹಿಡಿದು ಈ ಧಾರ್ಮಿಕ ಪಂಥದ ವ್ಯಕ್ತಿಗಳು ಕ್ರೈಸ್ತ ಧರ್ಮದ ನೈತಿಕತೆಯನ್ನು ಹಾಳು ಮಾಡುತ್ತಿರುವರೆಂದು ಸಾರ್ವಜನಿಕರು ನಂಬುವಂತೆ ಮಾಡಿದ ಎನ್ನುವುದನ್ನು ಸಹ ಒಪ್ಪಬೇಕಾಗುತ್ತದೆ. ವಾಲ್ಟೈರ್ ಲೆಟರ್ಸ್ ಅನ್ನು ಉತ್ಕøಷ್ಟ ಸಾಹಿತ್ಯವೆಂದು ಪ್ರಶಂಸಿಸಿದ ಆದರೆ “ಇಡೀ ಕೃತಿಯು ತಪ್ಪ ಕಲ್ಪನೆಯ ತಳಹದಿಯ ಮೇಲಿದೆ. ಕೃತಿಕಾರನು ಕೆಲವು ಸ್ಪಾನಿಶ್ ಮತ್ತು ಫ್ಲೆಮಿಶ್ ಜಿಸ್ಯೂಟ್‍ಗಳ ಆಡಂಭರದ ವಿಚಾರಗಳನ್ನು ಇಡೀ ಸಮಾಜಕ್ಕೆ ಅತ್ಯಂತ ಕೌಶಲದಿಂದ ಪರಿಚಯಿಸಿದ್ದಾನೆ “ ಎಂದ. ಈ ವಿಚಾರಗಳನ್ನು ಇತರ ಹಲವಾರು ಜೀಸ್ಯೂಟ್‍ಗಳು ಸಹ ಒಪ್ಪುತ್ತಿರಲಿಲ್ಲ. ಪ್ಯಾಸ್ಕಲ್ ಜಾನ್ಸೆನಿನಸ್ಟರನ್ನೂ ಲೇವಡಿ ಮಾಡಿಲ್ಲವೆಂದು ಡಿ’ಅಲೆಂಬರ್ಟ್ ಪಶ್ಚಾತ್ತಾಪ ಪಟ್ಟ, ಏಕೆಂದರೆ “ಜಾನ್ಸೆನ್ ಮತ್ತು ಸಂತ-ಸೈರಾನ್‍ರ ಆಘಾತಕಾರಿ ತತ್ವವು ಮೊಲೀನಾ, ಟ್ಯಾಂಬೂರಿನ್ ಮತ್ತು ವಾಸ್ಕ್ವೆಜ್‍ರ ನಮ್ಯ ತತ್ವಗಳಂತೆಯೇ ಲೇವಡಿಯ ಅವಕಾಶಗಳನ್ನು ಹೊಂದಿತ್ತು.”
ಲೆಟರ್ಸ್‍ನ ಪರಿಣಾಮವು ಅಗಾಧವಾಗಿತ್ತು. ಅವು ಜೀಸ್ಯೂಟ್‍ಗಳ ಅಧಿಕಾರವನ್ನು ತಕ್ಷಣ ಕಡಿಮೆಗೊಳಿಸಲಿಲ್ಲ- ರಾಜನೊಂದಿಗಂತೂ ಇಲ್ಲವೇ ಇಲ್ಲ – ಆದರೆ ಅವು ಧರ್ಮಸೂಕ್ಷ್ಮ ವಿವೇಚಕರ ಅತಿರೇಕವನ್ನು ಅದೆಷ್ಟು ನಾಚಿಕೆಗೊಳಿಸಿದುವೆಂದರೆ, ಏಳನೇ ಅಲೆಕ್ಸಾಂಡರ್ ಸ್ವತಃ ಜಾನ್ಸೆನಿಸಂ ಅನ್ನು ವಿರೋಧಿಸುತ್ತಿದ್ದರೂ “ಸಡಿಲತೆ”ಯನ್ನು ಖಂಡಿಸಿದನು ಮತ್ತು ಧರ್ಮಸೂಕ್ಷ್ಮ ಪಠ್ಯಗಳ ಪರಿಷ್ಕರಣೆಗೆ ಆದೇಶಿಸಿದನು (1665-66). “ಧರ್ಮಸೂಕ್ಷ್ಮ ವಿವೇಚನೆ”ಗೆ ತಪ್ಪು ಕ್ರಿಯೆ ಅಥವಾ ವಿಚಾರಗಳನ್ನು ಸಮರ್ಥಿಸಿಕೊಳ್ಳುವ ಕಪಟ ಸೂಕ್ಷ್ಮತೆಗಳಿಗೆ ಹಂದರವನ್ನು ಕೊಟ್ಟದ್ದೇ ಲೆಟರ್ಸ್.  ಅದರ ಜೊತೆಗೆ ಫ್ರೆಂಚ್ ಸಾಹಿತ್ಯಕ್ಕೆ ಒಂದು ಅದ್ವಿತೀಯ ಶೈಲಿಯನ್ನು ಸಹ ಕೊಟ್ಟಿತ್ತು. ಅದೊಂದು ರೀತಿ ವಾಲ್ಟೈರ್ ನೂರು ವರ್ಷ ಮೊದಲೇ ಹುಟ್ಟಿಬಂದಂತಿತ್ತು- ಏಕೆಂದರೆ ಅವುಗಳಲ್ಲಿ ವಿಡಂಬನೆ, ಅಣಕ, ಸಂಶಯದ ವ್ಯಂಗ್ಯ, ವಾಲ್ಟೈರ್‍ನ ಭಾವನಾತ್ಮಕ ಅಣಕು ಹಾಗೂ ನಂತರದ ಪತ್ರಗಳಲ್ಲಿ ಕಂಡುಬಂದ ಅನ್ಯಾಯದ ವಿರುದ್ಧದ ನವಿರಾದ ಪ್ರತಿಭಟನೆ ಇವುಗಳು ವಾಲ್ಟೈರ್‍ನನ್ನು ಜ್ಞಾನಭಂಡಾರದ ಹಿಡಿತದಲ್ಲಿದ್ದಾನೆನ್ನುವ ಕುಚೋದ್ಯದ ಮಾತುಗಳಿಂದ ಮುಕ್ತಗೊಳಿಸಿದವು. ವಾಲ್ಟೈರ್ ತಾನೇ ಸ್ವತಃ ಲೆಟರ್ಸ್ ಅನ್ನು “ಫ್ರಾನ್ಸ್ ಹಿಂದೆಂದೂ ಕಾಣದಂತಹ ಅತ್ಯುತ್ತಮ ರೀತಿ ರಚಿಸಿದ ಕೃತಿ” ಎಂದು ಕರೆದ;37 ಎಷ್ಟೇ ಕಟುವಾಗಿ ಟೀಕಿಸುವವರೂ ಸಹ ಪ್ಯಾಸ್ಕಲ್ “ಫ್ರಾನ್ಸ್‍ನಲ್ಲಿ ಅತ್ಯತ್ಕೃಷ್ಟ ಗದ್ಯದ ಆವಿಷ್ಕಾರ ಮಾಡಿದ್ದಾನೆ” ಎಂದಿದ್ದಾರೆ. ಬೋಸೆಯನ್ನು ಒಮ್ಮೆ ನೀವು ನಿಮ್ಮ ಪುಸ್ತಕವನ್ನು ರಚಿಸಿಲ್ಲದಿದ್ದಲ್ಲಿ ಮತ್ತಾವ ಪುಸ್ತಕವನ್ನು ರಚಿಸಲು ಬಯಸುತ್ತಿದ್ದಿರಿ ಎಂದಾಗ, ಪ್ರಾವನ್ಷಿಯಲ್ ಲೆಟರ್ಸ್ ಆಫ್ ಪ್ಯಾಸ್ಕಲ್ ಎಂದನಂತೆ.
3. ಶ್ರದ್ಧೆಯ ಸಮರ್ಥನೆಯಲ್ಲಿ
ಪ್ಯಾಸ್ಕಲ್ 1656ರಲ್ಲಿ ಲೆಟರ್ಸ್‍ನ ಪ್ರಕಾಶನಕ್ಕೆಂದು ಪ್ಯಾರಿಸ್ಸಿಗೆ ಹಿಂದಿರುಗಿದ ಹಾಗೂ ತನ್ನ ಉಳಿದ ಆರು ವರ್ಷಗಳನ್ನು ಅಲ್ಲಿಯೇ ಕಳೆದ. ಆತ ಜಗತ್ತನ್ನು ತ್ಯಜಿಸಿದವನಾಗಿರಲಿಲ್ಲ; ತಾನು ಮರಣಿಸಿದ ವರ್ಷವೇ ರಾಜಧಾನಿಯಲ್ಲಿ ನಿಯತ ಕೋಚ್ ಸೇವೆಯನ್ನು ಪ್ರಾರಂಭಿಸುವ ವ್ಯವಸ್ಥೆ ಮಾಡಿದ ಹಾಗೂ ಅದು ಈಗಿನ ಆಮ್ನಿಬಸ್ ಜಾಲದ ಅಂಕುರವಾಗಿತ್ತು. ಆದರೆ ಎರಡು ಘಟನೆಗಳು ಆತನ ಭಕ್ತಿ ಶ್ರದ್ಧೆಯನ್ನು ಪುನರ್ನವೀಕರಿಸಲು ಕಾರಣವಾಗಿ ಸಾಹಿತ್ಯ ಮತ್ತು ಧರ್ಮಕ್ಕೆ ತನ್ನ ಅಂತಿಮ ಕೊಡುಗೆಯನ್ನು ನೀಡಲು ಕಾರಣವಾದ. 1657ರ ಮಾರ್ಚ್ 15ರಂದು ಜೀಸ್ಯೂಟ್‍ಗಳು ಕ್ವೀನ್ ಮಧರ್‍ನಿಂದ ಸೊಲಿಟರಿಗಳ ಶಾಲೆಗಳನ್ನು ಮುಚ್ಚಲು ಮತ್ತು ಪೋರ್ಟ್-ರಾಯಲ್‍ಗೆ ಹೊಸ ಸದಸ್ಯರಿಗೆ ಪ್ರವೇಶ ನೀಡುವುದನ್ನು ನಿಷೇಧಿಸಿ ಆದೇಶವೊಂದನ್ನು ತಂದರು. ಆದೇಶವನ್ನು ಶಾಂತಿಯುತವಾಗಿ ಪಾಲಿಸಲಾಯಿತು; ರೆಸೀನ್ ಒಳಗೊಂಡಂತೆ ಮಕ್ಕಳನ್ನು ಗೆಳೆಯರ ಮನೆಗಳಿಗೆ ಕಳುಹಿಸಲಾಯಿತು ಹಾಗೂ ಅಧ್ಯಾಪಕರನ್ನು ದುಃಖಭರಿತವಾಗಿ ಬೀಳ್ಕೊಡಲಾಯಿತು. ಒಂಭತ್ತು ದಿನಗಳ ನಂತರ (ಕೊನೆಯ ಪ್ರಾವಿನ್ಷಿಯಲ್ ಪತ್ರಗಳ ದಿನಾಂಕದಂದು) ತೊಂದರೆಗೀಡಾದ ಕ್ರೈಸ್ತ ಸಂನ್ಯಾಸಿನಿಯರ ಆಶ್ರಮದಲ್ಲಿ ಪವಾಡವೊಂದು ನಡೆಯಿತು. ಪ್ಯಾಸ್ಕಲ್‍ನ ಸಹೋದರಿಯ ಹತ್ತು ವರ್ಷದ ಮಗಳಾದ ಮಾರ್ಗರೈಟ್ ಪೆರಿಯೆರ್ ಅತ್ಯಂತ ನೋವಿನ ಲ್ಯಾಕ್ರಿಮಲ್ ಫಿಸ್ಟುಲಾಗೆ ಬಲಿಯಾದಳು ಹಾಗೂ ಅವಳ ಕಣ್ಣು ಮತ್ತು ಮೂಗಿನಿಂದ ದುರ್ನಾತದ ಕೀವು ಸೋರಲಾರಂಭಿಸಿತು. ಮೇರೆ ಆಂಜೆಲಿಕ್‍ಳ ಸಂಬಂಧಿಕರೊಬ್ಬರು ಕ್ರಿಸ್ತನನ್ನು ಹಿಂಸಿಸಲು ಬಳಸಿದೆಯೆನ್ನಲಾಗಿದ್ದ ಮುಳ್ಳಿನ ಕಿರೀಟದ ಮುಳ್ಳೊಂದನ್ನು ಪೋರ್ಟ್-ರಾಯಲ್‍ಗೆ ಕೊಡುಗೆಯನ್ನಾಗಿ ನೀಡಿದ್ದರು. ಮಾರ್ಚ್ 24ರಂದು ಸಂನ್ಯಾಸಿನಿಯರು ಆಚರಣೆಯೊಂದಿಗೆ ಪವಿತ್ರ ಶ್ಲೋಕಗಳನ್ನು ಹಾಡುತ್ತಾ ಆ ಮುಳ್ಳನ್ನು ತಮ್ಮ ಪೂಜಾ ಸ್ಥಳದ ವೇದಿಕೆಯ ಮೇಲಿರಿಸಿದರು. ಪ್ರತಿಯೊಬ್ಬರೂ ಆ ಪುರಾತನ ವಸ್ತುವನ್ನು ಚುಂಬಿಸಿದರು ಹಾಗೂ ಅವರಲ್ಲೊಬ್ಬಾರೆ ಪೂಜಿಸುವವರ ನಡುವೆ ಮಾರ್ಗರೈಟ್‍ಳನ್ನು ಕಂಡು ಆ ಮುಳ್ಳನ್ನು ಆ ಹುಡುಗಿಯ ಹುಣ್ಣಿಗೆ ಸೋಕಿಸಿದಳು. ಆ ಸಂಜೆ, ನಮಗೆ ತಿಳಿಸಿದಂತೆ ಮಾರ್ಗರೈಟ್‍ಳ ಕಣ್ಣಿನ ನೋವು ಮಾಯವಾಗಿತ್ತು ಹಾಗೂ ಆಕೆಯ ತಾಯಿ ಹುಣ್ಣು ವಾಸಿಯಾಗಿರುವುದನ್ನು ಗಮನಿಸಿದಳು. ವೈದ್ಯನನ್ನು ಕರೆಸಲಾಯಿತು ಹಾಗೂ ಆತ ಕೀವು ಸೋರಿಕೆ ಹಾಗೂ ಊತ ಕಡಿಮೆಯಾಗಿದೆಯೆಂದು ತಿಳಿಸಿದ. ಸಂನ್ಯಾಸಿನಿಯರ ಬದಲಿಗೆ ಆ ವೈದ್ಯನೇ ಪವಾಡದಿಂದ ಹುಣ್ಣು ವಾಸಿಯಾಗಿರುವ ಸುದ್ದಿಯನ್ನು ಊರಿನಲ್ಲೆಲ್ಲಾ ಹರಡಿದ. ಮಾರ್ಗರೈಟ್‍ಳ ಫಿಸ್ಟುಲಾ ಕಾಯಿಲೆಯ ಬಗ್ಗೆ ತಿಳಿದಿದ್ದ ಇತರ ಏಳು ವೈದ್ಯರು ಸಹ ಪವಾಡವೇ ನಡೆದಿದೆಯೆಂಬ ಹೇಳಿಕೆ ನೀಡಿದರು. ಪ್ರಾಂತೀಯ ಬಿಷಪ್‍ನ ಅಧಿಕಾರಿಗಳು ಸಹ ಪರಿಶೋಧಿಸಿ ನಡೆಸಿ ಅದೇ ನಿರ್ಧಾರಕ್ಕೆ ಬಂದು ಪೋರ್ಟ್-ರಾಯಲ್‍ನಲ್ಲಿ ಡೆ ಡೆಯುಮ್ ಮಾಸ್ ನಡೆಸಲು ಅನುಮತಿ ನೀಡಿದರು. ನಂಬಿಕೆಯಿರಿಸಿದ್ದ ಜನ ಸಮೂಹ ಅಲ್ಲಿಗೆ ಆಗಮಿಸಿ ಆ ಮುಳ್ಳನ್ನು ಚುಂಬಿಸಿದರು; ಎಲ್ಲಾ ಕ್ಯಾಥೊಲಿಕ್ ಪ್ಯಾರಿಸ್ ಪವಾಡವೆಂದು ನಿಬ್ಬೆರಗಾದರು; ಕ್ವೀನ್ ಮಧರ್ ಸಂನ್ಯಾಸಿನಿಯರನ್ನು ಹಿಂಸಿಸುವುದನ್ನು ನಿಲ್ಲಿಸಬೇಕೆಂದು ಆದೇಶಿಸಿದರು; ಸೊಲಿಟರಿಗಳು ಲೆಸ್ ಗ್ರಾಂಜಸ್‍ಗೆ ಹಿಂದಿರುಗಿದರು. (1728ರಲ್ಲಿ ಹದಿಮೂರನೇ ಪೋಪ್ ಬೆನೆಡಿಕ್ಟ್ ಪವಾಡಗಳ ಯುಗ ಮುಗಿದಿಲ್ಲವೆಂದು ಈ ಪ್ರಕರಣವನ್ನು ಉದಾಹರಿಸಿದರು.) ಪ್ಯಾಸ್ಕಲ್ ಮುಳ್ಳಿನ ಕಿರೀಟದಿಂದ ಆವೃತವಾದ ಕಣ್ಣಿನ ಚಿಹ್ನೆಯೊಂದನ್ನು ತನಗಾಗಿ ತಯಾರಿಸಿಕೊಂಡು ಅದರ ಮೇಲೆ ಸಯೊ ಕ್ಯು ಕ್ರೆಡಿಡಿ, ಅಂದರೆ “ನನಗೆ ತಿಳಿದಿದೆ ನಾನು ಯಾರನ್ನು ನಂಬಿದ್ದೇನೆ” ಎಂದು ಕೊರೆಸಿದ.
ಆತ ಈಗ ಪುನಃ ಬರೆಯಲು ಆರಂಭಿಸಿದ, ತನ್ನ ಕೊನೆಯ ಒಡಂಬಡಿಕೆಯ ಹಾಗೆ, ಧಾರ್ಮಿಕ ಶ್ರದ್ಧೆಯ ಒಂದು ವಿಸ್ತøತ ಸಮರ್ಥನೆ. ಆದರೆ ಆತ ತನಗಿದ್ದ ಶಕ್ತಿಯಲ್ಲಿ ಅಲ್ಲೊಂದು ಇಲ್ಲೊಂದು ವಿಚಾರಗಳನ್ನು ದಾಖಲಿಸಲು ಸಾಧ್ಯವಾಯಿತು ಹಾಗೂ ಅವುಗಳನ್ನು ಕೊನೆಗೆ ವ್ಯವಸ್ಥಿತವಾಗಿ ಜೋಡಿಸಿದ. ಆ ನಂತರ (1658) ಆತನ ಹಳೆಯ ಕಾಯಿಲೆಗಳು ಹಿಂದಿರುಗಿದವು ಹಾಗೂ ಅದು ಎಷ್ಟು ತೀವ್ರವಾಯಿತೆಂದರೆ ಆತ ತನ್ನ ಟಿಪ್ಪಣಿಗಳಿಗೆ ಒಂದು ರಚನೆ ಅಥವಾ ಸರಣಿಯನ್ನು ನೀಡಲು ಆತನಿಗೆ ಸಾಧ್ಯವಾಗಲಿಲ್ಲ. ಆತನ ಸಾವಿನ ನಂತರ ಆತನ ಶ್ರದ್ಧಾ ನಿಷ್ಠ ಗೆಳೆಯ ಡಕ್ ಡೆ ರೋನೇಜ್ ಮತ್ತು ಪೋರ್ಟ್-ರಾಯಲ್‍ನ ವಿದ್ವಾಂಸರು ಆತನ ಟಿಪ್ಪಣಿಗಳನ್ನು ಸಂಪಾದಿಸಿ ಪೆನ್ಸೀಸ್ ಡೆ ಎಂ. ಪ್ಯಾಸ್ಕಲ್ ಸುರ್ ಲಾ ರಿಲಿಜಿಯನ್, ಎಟ್ ಸುರ ಕ್ವೆಲ್ಕೇಸ್ ಆಟ್ರೆಸ್ ಸುಜೆಟ್ಸ್ ಎಂಬ ಹೆಸರಿನಲ್ಲಿ ಪ್ರಕಟಿಸಿದರು (1670). ಈ ಚದುರಿಹೋದ ಆತನ “ಆಲೋಚನೆಗಳು” ಶ್ರದ್ಧೆಗಿಂತ ಸಂಶಯ ಉಂಟುಮಾಡಬಹುದೆಂದು ಅವುಗಳಲ್ಲಿ ಕೆಲವನ್ನು ಅಡಗಿಸಿಟ್ಟರು ಮತ್ತು ಕೆಲವನ್ನು ರಾಜನಿಗೆ ಅಥವಾ ಚರ್ಚ್‍ಗೆ ಸಿಟ್ಟು ಉಂಟುಮಾಡಬಹುದೆಂದು ಬದಲಾಯಿಸಿದರು; ಅಷ್ಟೊತ್ತಿಗೆ ಪೋರ್ಟ್-ರಾಯಲ್‍ನ ಮೇಲಿನ ದಾಳಿ ಕಡಿಮೆಯಾಗಿತ್ತು ಹಾಗೂ ಸಂಪಾದಕರು ವಿವಾದವನ್ನು ಪುನರಾರಂಭಿಸಲು ಬಯಸಿದರು. ಹತ್ತೊಂಭತ್ತನೇ ಶತಮಾನದ ಅಂತ್ಯದವರೆಗೂ ಪ್ಯಾಸ್ಕಲ್‍ನ ಪೆನ್ಸೀಸ್ ಸಂಪೂರ್ಣವಾಗಿ ಹಾಗೂ ದೃಢೀಕೃತ ರೂಪದಲ್ಲಿ ಪ್ರಕಟವಾಗಲಿಲ್ಲ.
ಅವರ ಕಾರ್ಯಗಳಿಗೆ ಒಂದು ವ್ಯವಸ್ಥಿತ ರಚನೆಯನ್ನು ನಾವು ನೀಡಲು ಪ್ರಯತ್ನಿಸಿದಲ್ಲಿ ಅವರ ಪ್ರಾರಂಭದ ಬಿಂದುವನ್ನು ಕೋಪರ್ನಿಕನ್ ಖಗೋಳಶಾಸ್ತ್ರದಲ್ಲಿ ಗುರುತಿಸಬಹುದು. ನಾವು ಪ್ಯಾಸ್ಕಲ್‍ನ ಮಾತುಗಳನ್ನು ಕೇಳುತ್ತಿದ್ದಲ್ಲಿ ಸಾಂಪ್ರದಾಯಕ ಕ್ರೈಸ್ತಧರ್ಮಕ್ಕೆ ಕೋಪರ್ನಿಕನ್-ಗೆಲಿಲಿಯನ್ ಖಗೋಳಶಾಸ್ತ್ರ ನೀಡಿದ ಪ್ರಭಾವೀ ಹೊಡೆತವನ್ನು ನೆನಪಿಸುತ್ತದೆ.
ಮಾನವ ಪ್ರಕೃತಿಯನ್ನು ಅದರ ಸಂಪೂರ್ಣತೆ ಮತ್ತು ಭವ್ಯತೆಯಲ್ಲಿ ಗ್ರಹಿಸಲಿ; ಆತನ ಸುತ್ತಲಿನ ಕೀಳು ವಸ್ತುಗಳ ದೃಶ್ಯವನ್ನು ಆತ ದೂರಕ್ಕಿರಿಸಲಿ; ಆ ಪ್ರಜ್ವಲ ಬೆಳಕನ್ನು ಜಗತ್ತನ್ನು ಬೆಳಕಾಗಿಸುವ ಚಿರಂತನ ದೀಪವೆಂದು ಪರಿಗಣಿಸಲಿ; ಆ ನಕ್ಷತ್ರ ವಿವರಿಸುವ ಈ ಭೂಮಿಯು ತಾರೆಗಳ ನಡುವೆ ಕೇವಲ ಒಂದು ಬಿಂದುವಿನಂತೆ ಹಾಗೂ ಈ ಅಗಾಧ ಪರಿಧಿಯು ಚಲಿಸುತ್ತಿರುವ ತಾರೆಯ ವೀಕ್ಷಣೆಯ ಒಂದು ಧೂಳಿನ ಕಣವೆಂಬಂತೆ ಕಾಣಲಿ. ನಮ್ಮ ದೃಷ್ಟಿ ಅಲ್ಲಿಗೇ ನಿಂತಲ್ಲಿ ನಮ್ಮ ಕಲ್ಪನೆಯು ಇನ್ನೂ ಮುಂದಕ್ಕೆ ಸಾಗಲಿ... ಕಣ್ಣಿಗೆ ಕಾಣುವ ಜಗತ್ತು ಪ್ರಕೃತಿಯ ಒಂದು ಭಾಗವಷ್ಟೇ. ಯಾವ ಆಲೋಚನೆಯೂ ಅದನ್ನು ಮೀರಿ ಮುಂದಕ್ಕೆ ಹೋಗುವುದಿಲ್ಲ... ಅದೊಂದು ಅಸೀಮ ಗೋಲ ಮತ್ತು ಅದರ ಕೇಂದ್ರವು ಎಲ್ಲೆಲ್ಲಿಯೂ ಇದೆ, ಹಾಗೂ ಅದರ ಪರಿಧಿಯು ಎಲ್ಲಿಯೂ ಇಲ್ಲ. ಇದು ದೇವರನ್ನು ಆತ್ಯಂತಿಕವಾಗಿ ಗ್ರಹಿಸಿಕೊಳ್ಳಬಲ್ಲ ಲಕ್ಷಣ ಹಾಗೂ ಈ ಆಲೋಚನೆಯಲ್ಲಿಯೇ ನಮ್ಮ ಕಲ್ಪನೆಯೂ ಕಳೆದುಹೋಗುತ್ತದೆ.
            ತನ್ನ ವಿಶಿಷ್ಟ ತಾತ್ವಿಕ ಸೂಕ್ಷ್ಮತೆಯೊಂದಿಗೆ ಪ್ಯಾಸ್ಕಲ್, “ಈ ಅಸೀಮ ಕಾಲದ ಚಿರಂತನ ಮೌನ ನನ್ನನ್ನು ಹೆದರಿಸುತ್ತದೆ” ಎಂದೂ ಹೇಳಿದ್ದಾನೆ.
            ಆದರೆ ಮತ್ತೊಂದು ಅನಂತತೆಯಿದೆ- ಅತ್ಯಂತ ಸಣ್ಣದಾದ, “ಕತ್ತರಿಸಲಾಗದ” ಅಣುವಿನ ನಿರಂತರ ಸೈದ್ಧಾಂತಿಕ ವಿಭಜನೆ; ಯಾವುದನ್ನೇ ಆಗಲಿ ನಾವು ಎಷ್ಟೇ ಚಿಕ್ಕಚಿಕ್ಕದಾಗಿ ಕತ್ತರಿಸುತ್ತಾ ಹೋದರೂ ಹಾಗೂ ಕತ್ತರಿಸಲ್ಪಟ್ಟ ವಸ್ತುವು ಎಷ್ಟೇ ಚಿಕ್ಕದಾಗಿದ್ದರೂ ಅದಕ್ಕಿಂತ ಚಿಕ್ಕದಾದ ಭಾಗಗಳು ಅದರಲ್ಲಿವೆ ಎಂಬುದನ್ನು ನಾವು ನಂಬಲೇಬೇಕಾಗುತ್ತದೆ. ಅನಂತ ವಿಸ್ತೃತತೆ ಮತ್ತು ಅನಂತ ಸೂಕ್ಷ್ಮತೆಗಳ ನಡುವೆ ನಮ್ಮ ವಿಚಾರಗಳು ಏರುಪೇರಾಗುತ್ತವೆ.
ಆ ಅವಸ್ಥೆಯಲ್ಲಿ ತನ್ನನ್ನು ತಾನೇ ಕಂಡುಕೊಂಡಾಗ ಬೆಚ್ಚಿಬೀಳುತ್ತಾನೆ ಹಾಗೂ ಅನಂತಾನಂತತೆ ಮತ್ತು ಶೂನ್ಯದ ಕಣಿವೆಗಳ ನಡುವೆ ತ್ರಿಶಂಕು ಸ್ಥಿತಿಯಲ್ಲಿ ತಾನಿರುವಾಗ ತತ್ತರಿಸುತ್ತಾನೆ... ಮತ್ತು ಈ ಅದ್ಭುತಗಳನ್ನು ಪೂರ್ವಾಗ್ರಹದಿಂದ ಅನ್ವೇಷಿಸುವ ಬದಲು ಮೌನದಿಂದ ಅವಲೋಕಿಸತೊಡಗುತ್ತಾನೆ. ಅಂತ್ಯದಲ್ಲಿ, ಪ್ರಕೃತಿಯಲ್ಲಿ ಮಾನವನ ಸ್ಥಾನ ಯಾವುದು? ಅನಂತತೆಗೆ ಹೋಲಿಸಿದಲ್ಲಿ ಏನೂ ಅಲ್ಲ, ಏನೂ ಇಲ್ಲದ ಅವಸ್ಥೆಗೆ ಹೋಲಿಸಿದಲ್ಲಿ ಎಲ್ಲವೂ ಹೌದು, ಏನೂ ಅಲ್ಲ ಹಾಗೂ ಎಲ್ಲವೂ ಹೌದುಗಳ ನಡುವಿನ ಅವಸ್ಥೆ. ಈ ಎರಡೂ ಅತಿರೇಕಗಳ ಗ್ರಹಿಕೆಯಿಂದ ಅನಂತಾನಂತ ದೂರದಲ್ಲಿ ಅಂತ್ಯ ಹಾಗೂ ಪ್ರಾರಂಭಗಳು ಅಥವಾ ವಸ್ತುಗಳ ತತ್ವಗಳು ಆದಮ್ಯ ರಹಸ್ಯದಲ್ಲಿ ಅಡಗಿ ಕೂತಿವೆ; ಆತನನ್ನು ಹತ್ತಿರಕ್ಕೆ ಸೆಳೆದಾಗ ಇಲ್ಲದುದನ್ನು ಆತ ಕಾಣಲು ಸಾಧ್ಯವಿಲ್ಲ ಹಾಗೂ ಆತನನ್ನು ಆವರಿಸಿಕೊಂಡಾಗ ಅನಂತಾನಂತತೆಯನ್ನೂ ಸಹ.*
(*ಫುಟ್‍ನೋಟ್: “ಸೇಂತ್-ಬ್ಯೂ ಹೇಳುವಂತೆ, “ಫ್ರೆಂಚ್ ಭಾಷೆಯಲ್ಲಿ ಈ ಹೋಲಿಸಲಾಗದ ಚಿತ್ರದ ಸರಳ ಹಾಗೂ ಗಂಭೀರ ಸಾಲುಗಳು ಮತ್ತೆಲ್ಲೂ ಇಲ್ಲ.”
ಆದುದರಿಂದ ವಿಜ್ಞಾನ ಒಂದು ನೀರಸ ಪೂರ್ವಾಗ್ರಹವಾಗಿದೆ. ಅದು ವಿವೇಚನೆಯಾಧಾರಿತವಾಗಿದೆ ಹಾಗೂ ವಿವೇಚನೆ ಇಂದ್ರಿಯಾಧಾರಿತವಾಗಿವೆ ಮತ್ತು ಇಂದ್ರಿಯಗಳು ನಮ್ಮನ್ನು ನೂರಾರು ವಿಧಗಳಲ್ಲಿ ಮೋಸಗೊಳಿಸುತ್ತವೆ. ಅದು ನಮ್ಮ ಇಂದ್ರಿಯಗಳು ಕಾರ್ಯನಿರ್ವಹಿಸುವ ಸೀಮಿತ ಚೌಕಟ್ಟಿನಿಂದ ಬಂಧಿತವಾಗಿದೆ ಹಾಗೂ ಭ್ರಷ್ಟಗೊಳ್ಳಬಲ್ಲ ಇಂದ್ರಿಯಾಸಕ್ತಿಯಿಂದ ಸಹ. ಅದನ್ನಷ್ಟಕ್ಕೇ ಬಿಟ್ಟಲ್ಲಿ ದೇವರನ್ನು ಅರ್ಥಮಾಡಿಕೊಳ್ಳುವ ಮಾತಿರಲಿ ಜಗತ್ತಿನ ನಿಜವಾದ ಸ್ವರೂಪ ಮತ್ತು ರಚನೆಯನ್ನು ಸಹ ವಿವೇಚನೆಯು ಅರಿತುಕೊಳ್ಳಲಾರದು – ಅಥವಾ ನೈತಿಕತೆಗೆ, ಕುಟುಂಬಕ್ಕೆ ಅಥವಾ ಸರ್ಕಾರಕ್ಕೆ ಸದೃಢ ಆಧಾರ ನೀಡಲಾರದು. ವಿವೇಚನೆಗಿಂತ ಸಂಪ್ರದಾಯದಲ್ಲಿ, ಕಲ್ಪನೆ ಮತ್ತು ಪುರಾಣಗಳಲ್ಲಿಯೂ ಸಹ ಹೆಚ್ಚಿನ ವಿವೇಕವಿದೆ ಮತ್ತು “ಎಲ್ಲೆಲ್ಲಿಯೂ ಆತುರದಿಂದ ಪರಿಚಯಿಸಲಾಗಿರುವ ಮಾನವನ ಕಲ್ಪನೆಯನ್ನು ತನ್ನದೇ ತತ್ವಗಳೆಂದು ಅತ್ಯಂತ ವಿವೇಕಯುತ ವಿವೇಚನೆಯು ಪರಿಗಣಿಸುತ್ತದೆ.” ಎರಡು ರೀತಿಯ ವಿವೇಕವಿದೆ: ಸಂಪ್ರದಾಯ ಮತ್ತು ಕಲ್ಪನೆಯಿಂದ (ಆಚರಣೆ ಹಾಗೂ ಪುರಾಣದ) ಜೀವಿಸುವ ಸರಳವಾದ ಮತ್ತು ಬಹುಸಂಖ್ಯಾತ “ಮುಗ್ಧ”ತೆಯದು ಹಾಗೂ ವಿಜ್ಞಾನ ಮತ್ತು ತತ್ವಶಾಸ್ತ್ರವನ್ನು ಭೇದಿಸಿ ತನ್ನ ಅಜ್ಞಾನವನ್ನು ಗುರುತಿಸಿಕೊಳ್ಳುವ ಋಷಿಯಂಥದು. ಆದುದರಿಂದ “ವಿವೇಚನೆಯನ್ನು ತಿರಸ್ಕರಿಸುವುದಕ್ಕಿಂತ ಸ್ವೀಕರಿಸುವುದೇ ಅತ್ಯಂತ ತೃಪ್ತಿ ನೀಡುವುದು” ಮತ್ತು “ತತ್ವಶಾಸ್ತ್ರವನ್ನು ಅರಿಯಬೇಕಾದಲ್ಲಿ ನಿಜವಾದ ತತ್ವಜ್ಞಾನಿಯೇ ಆಗಬೇಕು.”
ಹಾಗಾಗಿ, ಕೆಲವು ಜಾನ್ಸೆನಿಸ್ಟರು ಪ್ರಯತ್ನಿಸಿದ್ದರೂ ಸಹ ಪ್ಯಾಸ್ಕಲ್ ಧರ್ಮವನ್ನು ವಿವೇಚನೆಗೆ ಬಿಡುವುದು ವಿವೇಕಯುತವಲ್ಲ ಎಂದು ಆಲೋಚಿಸಿದ. ವಿವೇಚನೆಯು ದೇವರನ್ನಾಗಲೀ ಅಮರತ್ವವನ್ನಾಗಲೀ ರುಜುವಾತುಗೊಳಿಸುವುದಿಲ್ಲ ಅಲ್ಲದೆ, ಎರಡೂ ಸಂದರ್ಭಗಳಲ್ಲಿಯೂ ಕುರುಹು ಪರಸ್ಪರ ವಿರುದ್ಧವಾಗಿವೆ. ಬೈಬಲ್ ಸಹ ಶ್ರದ್ಧೆಯ ಅಂತಿಮ ಆಧಾರವಲ್ಲ, ಏಕೆಂದರೆ ಅದರಲ್ಲಿ ಅಸ್ಪಷ್ಟ ಹಾಗೂ ದ್ವಂದ್ವಾರ್ಥದ ನಿರೂಪಣೆಗಳು ಹೇರಳವಾಗಿವೆ ಮತ್ತು ಶ್ರದ್ಧಾಳುಗಳು ಕ್ರೈಸ್ತನ ಕುರಿತಾಗಿ ವ್ಯಾಖ್ಯಾನಿಸುವ ಭವಿಷ್ಯವಾಣಿಗಳು ಮತ್ತಾವುದೋ ಆರ್ಥವನ್ನು ಹೊಂದಿರಬಹುದು. ಅಲ್ಲದೆ ದೇವರು ಬೈಬಲ್ಲಿನಲ್ಲಿ ಚಿತ್ರಗಳ ಮೂಲಕ ಮಾತನಾಡುತ್ತಾನೆ ಹಾಗೂ ಅವುಗಳ ಅಕ್ಷರಶಃ ಅರ್ಥ ತಪ್ಪು ಗ್ರಹಿಕೆ ನೀಡುವಂತಾದಾಗಿದ್ದು ಅವುಗಳ ನಿಜವಾದ ಅರ್ಥವನ್ನು ದೈವೀಕೃಪೆಗೊಳಗಾದವರು ಮಾತ್ರ ಗ್ರಹಿಸಬಲ್ಲವರಾಗಿರುತ್ತಾರೆ. “ದೇವರು ಕೆಲವರನ್ನು ಕುರುಡರನ್ನಾಗಿಸುವ ಹಾಗೂ ಇತರರಿಗೆ ಜ್ಞಾನದ ಜ್ಯೋತಿ ನೀಡುವುದನ್ನು ಅದನ್ನು ದೇವರ ತತ್ವವೆಂದು ಪರಿಗಣಿಸದ ಹೊರತು ನಾವು ದೇವರ ಯಾವುದೇ ಕಾರ್ಯವನ್ನೂ ಅರಿತುಕೊಳ್ಳಲಾರೆವು.” (ಬಹುಶಃ ಇಲ್ಲಿ ಪ್ಯಾಸ್ಕಲ್ ಫೇರೋನ ಹೃದಯವನ್ನು ಕಲ್ಲಾಗಿಸುವ ಯಾಹ್ವೆಯ ಕತೆಯನ್ನು ಅಕ್ಷರಶಃ ಅರ್ಥದಲ್ಲಿ ಪರಿಗಣಿಸಿರಬಹುದು.)
ಎಲ್ಲೆಡೆಯೂ ನಾವು ವಿವೇಚನೆಯನ್ನೇ ಅವಲಂಬಿಸಿದರೆ, ನಾವು ಗ್ರಾಹ್ಯವಲ್ಲದುದನ್ನೇ ಕಾಣುತ್ತೇವೆ. ಮಾನವನ ಮೂರ್ತ ದೇಹದಲ್ಲಿ ಅಮೂರ್ತ ಮನಸ್ಸಿನ ಮಿಲನ ಹಾಗೂ ಅಂತರ್‍ಪ್ರಕ್ರಿಯೆಗಳನ್ನು ಯಾರು ತಾನೆ ಅರಿತುಕೊಳ್ಳಬಲ್ಲರು? “ಮೂರ್ತವಾದುದು ಸ್ವತಃ ಪ್ರಜ್ಞಾಪೂರ್ವಕವಾಗಿರಬೇಕು ಎಂಬಂತಹ ಗ್ರಹಿಸಿಕೊಳ್ಳಲಾರದ ವಾಸ್ತವ ಮತ್ತೊಂದಿರಲಾರದು.” ತಮ್ಮ ವ್ಯಾಮೋಹಗಳನ್ನು ನಿಯಂತ್ರಿಸಿರುವ ತತ್ವಜ್ಞಾನಿಗಳು- “ಯಾವ ವಸ್ತು ಅದನ್ನು ಮಾಡಬಲ್ಲದು?” ಮಾನವನ ಸ್ವರೂಪ, ದೇವತೆಗಳ ಹಾಗೂ ರಕ್ಕಸರ ಮಿಶ್ರಣವಾಗಿದೆ, ಎಂದು ಹೇಳುತ್ತಾ ಮನಸ್ಸು ಮತ್ತು ದೇಹದ ವೈರುಧ್ಯಗಳನ್ನು ಪುನರಾವರ್ತಿಸುತ್ತಾನೆ ಹಾಗೂ ಗ್ರೀಕ್ ಪುರಾಣಗಳ ಕಿಮಿರಾ- ಸಿಂಹದ ತಲೆ ಮತ್ತು ಹಾವಿನ ಬಾಲ ಹೊಂದಿರುವ ಮೇಕೆಯೇ ಎಂದು ನೆನಪಿಸುತ್ತಾನೆ.
ಮಾನವ ಎಂತಹ ಕಿಮಿರಾ! ಎಂತಹ ನಾಜೂಕುತನ, ತಕ್ಕಸ, ಗೊಂದಲಜೀವಿ, ವೈರುಧ್ಯಗಳ ಗೂಡು ಹಾಗೂ ಒಬ್ಬ ಮೇಧಾವಿ! ಎಲ್ಲ ವಿಷಯಗಳ ನ್ಯಾಯಾಧಿಪತಿ, ಹಾಗೂ ಭೂಮಿಯ ಮೇಲಿನ ದುರ್ಬಲ ಜೀವಿ; ಸತ್ಯದ ಆಗರ, ಮತ್ತು ದೋಷ ಅಪನಂಬಿಕೆಗಳ ರೊಜ್ಜು; ವಿಶ್ವದ ವೈಭವ ಮತ್ತು ತಿರಸ್ಕಾರದ ಧೂಳು. ಈ ಗೊಂದಲವನ್ನು ಪರಿಹರಿಸುವವರು ಯಾರು?
ನೈತಿಕವಾಗಿ ಮಾನವ ನಿಗೂಢನಾದವನು. ಅವನಲ್ಲಿ ಎಲ್ಲ ರೀತಿಯ ಕೆಟ್ಟತನಗಳು ಕಾಣಿಸಿಕೊಳ್ಳುತ್ತವೆ ಅಥವಾ ಅವನಲ್ಲಿ ಅಡಗಿ ಕುಳಿತಿರುತ್ತವೆ. “ಮಾನವ ಕೇವಲ ಒಬ್ಬ ಕಪಟಿ, ಸುಳ್ಳುಗಾರ ಮತ್ತು ಬೂಟಾಟಿಕೆಯವನು- ತನಗೂ ಹಾಗೂ ಇತರರಿಗೂ ಸಹ”. “ಎಲ್ಲ ಮಾನವರೂ ಪ್ರಾಕೃತಿಕವಾಗಿ ಒಬ್ಬರನ್ನೊಬ್ಬರು ದ್ವೇಷಿಸುತ್ತಾರೆ; ಜಗತ್ತಿನಲ್ಲಿ ನಾಲ್ಕು ಜನ ಗೆಳೆಯರಾಗಿರಲು ಸಾಧ್ಯವೇ ಇಲ್ಲ.” “ಮನುಷ್ಯನ ಹೃದಯ ಎಷ್ಟು ಟೊಳ್ಳಾಗಿದೆ ಹಾಗೂ ಅದರಲ್ಲಿ ಎಷ್ಟು ಹೊಲಸು ತುಂಬಿದೆ!” ಎಂತಹ ಕೊನೆಯೇ ಇಲ್ಲದ, ತೃಪ್ತಿ ಪಡಲಾಗದ ಟೊಳ್ಳುತನ! “ನಮ್ಮಲ್ಲಿ ನಂತರ ಹೇಳಬಲ್ಲ ಭರವಸೆ ಇಲ್ಲದಿದ್ದಲ್ಲಿ ನಾವೆಂದಿಗೂ ಸಾಗರದ ಮೇಲೆ ಪಯಣಿಸುತ್ತಿರಲಿಲ್ಲ... ತತ್ವಜ್ಞಾನಿಗಳೂ ಸಮ ಹೊಗಳುಭಟ್ಟರಿಗಾಗಿ ಪರಿತಪಿಸುತ್ತಾರೆ.” ಆದರೂ ಅವನ ನೀಚತನದಿಂದ, ಅವನ ದ್ವೇಷದಿಂದ ಹಾಗೂ ಅವನ ಟೊಳ್ಳುತನದಿಂದ ತನ್ನ ನೀಚತನವನ್ನು ನಿಯಂತ್ರಿಸಲು ಕಾನೂನಿನ ನಿಬಂಧನೆಗಳನ್ನು ಮತ್ತು ನೈತಿಕತೆಗಳನ್ನು ರೂಪಿಸಿ ಹಾಗೂ ತನ್ನಲ್ಲಿನ ಕಾಮದಿಂದ ಆದರ್ಶ ಪ್ರೇಮವನ್ನು ರಚಿಸಿರುವುದು ಮಾನವನ ಹಿರಿತನದ ಭಾಗವೇ ಆಗಿದೆ.
            ಮಾನವನ ಯಾತನೆಯು ಮತ್ತೊಂದು ನಿಗೂಢ. ತನ್ನ ಸಂತೋಷದಲ್ಲಿ ನಲುಗುವ, ಪ್ರತಿಯೊಂದು ನರದಲ್ಲೂ ನೋವಿನಿಂದ ನರಳುವ, ಪ್ರತಿಯೊಂದು ಪ್ರೇಮದಲ್ಲೂ ಕೊರಗುವ ಹಾಗೂ ಪ್ರತಿಯೊಂದು ಬದುಕಿನಲ್ಲೂ ಸಾಯುವಂತಹ ಪ್ರಭೇದವನ್ನು ತಯಾರಿಸಲು ವಿಶ್ವ ಅಷ್ಟೊಂದು ದೀರ್ಘ ಶ್ರಮ ಏಕೆ ಪಡಬೇಕಾಗಿತ್ತು? ಆದರೂ “ಮಾನವನ ವೈಭವತೆ ಅದ್ಭುತವಾದುದು ಏಕೆಂದರೆ ತಾನೊಬ್ಬ ಅಸಹಾಯಕವೆಂಬುದು ಆತನಿಗೆ ತಿಳಿದಿದೆ.”
ಮಾನವ ಈ ಪ್ರಕೃತಿಯಲ್ಲಿ ಒಂದು ಹುಲ್ಲುಕಡ್ಡಿಯಷ್ಟೆ; ಆದರೆ ಅವನೊಬ್ಬ ಆಲೋಚಿಸಬಲ್ಲ ಹುಲ್ಲುಕಡ್ಡಿ.* ಅವನನ್ನು ದಮನ ಮಾಡಲು ಇಡೀ ವಿಶ್ವ ಶಸ್ತ್ರಸಜ್ಜಿತವಾಗಬೇಕಾಗಿಲ್ಲ, ನೀರಾವಿ, ಒಂದು ನೀರ ಹನಿ ಸಾಕು ಅವನನ್ನು ಕೊಲ್ಲಲು. ಆದರೆ ವಿಶ್ವ ಅವನನ್ನು ದಮನಗೊಳಿಸಿದ ನಂತರ ಮಾನವ ತನ್ನನ್ನು ಕೊಲ್ಲುವುದಕ್ಕಿಂತ ಹೆಚ್ಚು ವಿವೇಕಯುತನಾಗಿರುತ್ತಾನೆ ಏಕೆಂದರೆ ಅವನಿಗೆ ತಾನು ಸಾಯುತ್ತಿದ್ದೇನೆಂದು ತಿಳಿದಿರುತ್ತದೆ, ಆದರೆ ವಿಶ್ವಕ್ಕೆ ತನ್ನ ಜಯದ ಬಗ್ಗೆ ಏನೇನೂ ತಿಳಿದಿರುವುದಿಲ್ಲ.
            ಈ ಎಲ್ಲ ನಿಗೂಢಗಳಿಗೆ ವಿವೇಚನೆಯಲ್ಲಿ ಉತ್ತರ ಸಿಗುವುದಿಲ್ಲ. ನಾವು ಕೇವಲ ವಿವೇಚನೆಯ ಮೇಲೆ ವಿಶ್ವಾಸವಿರಿಸಿದರೆ ನಾವು ನೋವು ಮತ್ತು ಸಾವನ್ನು ಹೊರತುಪಡಿಸಿ ಎಲ್ಲವನ್ನೂ ಸಂಶಯದಿಂದ ನೋಡುವಂತಹ ಪಿರ್ರೋನಿಸಂಗೆ ಬಲಿಯಾಗುತ್ತೇವೆ ಹಾಗೂ ತತ್ವಶಾಸ್ತ್ರ ಸೋಲನ್ನು ವಿವೇಚನಾಪೂರ್ಣಗೊಳಿಸುವಂತಹ ಸಾಧನವಾಗಬಲ್ಲದು ಅಷ್ಟೆ. ಆದರೆ ಮನುಷ್ಯನ ವಿಧಿ ವಿವೇಚನೆ ಕಾಣುವಂಥದೆಂದು ನಾವು ನಂಬಲು ಸಾಧ್ಯವಿಲ್ಲ- ಬದುಕಿನ ಹೊಡೆದಾಟ, ಯಾತನೆ, ಸಾವು, ಪುನಃ ಬದುಕಿನ ಹೊಡೆದಾಟ, ಯಾತನೆ, ಸಾವು ಎದುರಿಸಲು ಸಂತಾನವೃದ್ಧಿ, ತಲೆಮಾರಿನ ನಂತರ ತಲೆಮಾರು, ಗುರಿಯಿಲ್ಲದೆ, ಮುಠ್ಠಾಳತನದಿಂದ ಮೂರ್ಖತನದ ಹಾಗೂ ನಿಕೃಷ್ಟತೆಯ ಪರಮಾವಧಿಯೊಂದಿಗೆ ಸೆಣಸಾಡುವುದು. ಇದು ಸತ್ಯವಲ್ಲವೆಂದು ನಮ್ಮ ಹೃದಯಗಳಿಗೆ ತಿಳಿದಿದೆ, ಬದುಕು ಮತ್ತು ವಿಶ್ವ ಅರ್ಥರಹಿತವಾದುದೆಂದು ಆಲೋಚಿಸುವುದೇ ಒಂದು ಮಹಾನ್ ಧರ್ಮನಿಂದೆ. ದೇವರು ಮತ್ತು ಬದುಕಿನ ಅರ್ಥವನ್ನು ಹೃದಯದಿಂದ ಅನುಭವಿಸಬೇಕೇ ಹೊರತು ವಿವೇಚನೆಯಿಂದಲ್ಲ. “ಹೃದಯಕ್ಕೆ ಅದರದ್ದೇ ಆದ ಕಾರಣಗಳಿವೆ ಹಾಗೂ ಅದು ವಿವೇಚನೆಗೆ ನಿಲುಕುವುದಿಲ್ಲ,” ನಮ್ಮ ಹೃದಯಗಳನ್ನು ಆಲಿಸುವುದು ಹಾಗೂ “ಭಾವನೆಯಲ್ಲಿ ಶ್ರದ್ಧೆಯಿರಿಸುವುದು” ಸರಿಯಾದ ಕೆಲಸ. ಎಲ್ಲಾ ನಂಬಿಕೆಯೂ, ಪ್ರಾಪಂಚಿಕ ವಿಷಯಗಳಲ್ಲೂ ಸಹ ಒಂದು ರೀತಿಯ ಮಾನಸಿಕ ಇಚ್ಛೆ ಹಾಗೂ ಗಮನದ ಮತ್ತು ಬಯಕೆಯ ದಿಕ್ಕಾಗಿದೆ.” (“ನಂಬಿಕೆಯ ಇಚ್ಛೆ”) ಆಧ್ಯಾತ್ಮಿಕತೆಯ ಅನುಭವ ಇಂದ್ರಿಯಗಳ ಅಥವಾ ವಿವೇಚನೆಯ ವಾದವಿವಾದಗಳಿಗಿಂತ ಮಹತ್ತರವಾದುದು.
            ಹಾಗಾದರೆ, ಬದುಕಿನ ಮತ್ತು ಆಲೋಚನೆಗಳ ನಿಗೂಢಗಳಿಗೆ ಭಾವನೆಗಳು ಏನನ್ನು ನೀಡುತ್ತವೆ? ಧರ್ಮವೇ ಅದಕ್ಕಿರುವ ಉತ್ತರ. ಧರ್ಮ ಮಾತ್ರವೇ ಬದುಕಿಗೆ ಅರ್ಥ ನೀಡಬಲ್ಲದು ಮತ್ತು ಮಾನವನಿಗೆ ಘನತೆ ತಂದುಕೊಡಬಲ್ಲದು; ಧರ್ಮವಿಲ್ಲದಿದ್ದಲ್ಲಿ ನಾವು ಮತ್ತಷ್ಟು ಆಳವಾಗಿ ಮಾನಸಿಕ ಹತಾಶೆಗೆ ಮತ್ತು ನೈತಿಕ ಅಧಃಪತನಕ್ಕೆ ಒಳಗಾಗುತ್ತೇವೆ. ಧರ್ಮ ನಮಗೆ ಬೈಬಲ್ ನೀಡಿದೆ ಮತ್ತು ಬೈಬಲ್ ಮಾನವ ದೈವಿಕ ಅವಕೃಪೆಗೆ ಒಳಗಾದುದನ್ನು ಹೇಳುತ್ತದೆ; ಆ ಮೂಲ ಪಾಪ ಮಾತ್ರವೇ ಮಾನವನಲ್ಲಿನ ಪ್ರೇಮದೊಂದಿಗೆ ದ್ವೇಷದ, ಮುಕ್ತಿಯ ಮತ್ತು ದೇವರ ಶ್ರದ್ಧೆಯ ಜೊತೆಗೆ ಮೃಗೀಯ ಕ್ರೌರ್ಯದಂತಹ ವಿಚಿತ್ರ ಸಮ್ಮಿಶ್ರತೆಯನ್ನು ವಿವರಿಸಬಲ್ಲದು. ಮಾನವ ದೈವ ಕೃಪೆಯಿಂದ ಪ್ರಾರಂಭಿತನಾಗಿ (ತತ್ವಜ್ಞಾನಿಗಳಿಗೆ ಇದು ಅಸಂಬದ್ಧವೆನ್ನಿಸಬಹುದು) ನಂತರ ಅದನ್ನು ಪಾಪದಿಂದ ಕಳೆದುಕೊಂಡು ಪುನಃ ಅದನ್ನು ಆತ ಶಿಲುಬೆಗೇರಿದ ಕ್ರಿಸ್ತನ ಮೂಲಕ ಮಾತ್ರ ಹಿಂಪಡೆದುಕೊಳ್ಳಲು ಸಾಧ್ಯವೆಂದು ನಾವು ನಂಬುವುದಾದಲ್ಲಿ ಮಾತ್ರ ತತ್ವಜ್ಞಾನಿಗಳಿಗೆ ಸಿಗದ ಮನೋಶಾಂತಿಯನ್ನು ನಾವು ಪಡೆದುಕೊಳ್ಳಬಲ್ಲೆವು. ಯಾವನು ನಂಬುವುದಿಲ್ಲವೋ ಅವನು ಶಾಪಗ್ರಸ್ತನು, ಏಕೆಂದರೆ ಅವನು ತನ್ನ ಅಪನಂಬಿಕೆಯಿಂದಾಗಿ ಕೃಪೆ ಪಡೆಯಲು ದೇವರು ಅವನನ್ನು ಆಯ್ಕೆ ಮಾಡಿಕೊಂಡಿರುವುದಿಲ್ಲ.
            ನಂಬಿಕೆ ಎನ್ನುವುದು ಜೂಜಿದ್ದಹಾಗೆ. ಶ್ರದ್ಧೆಯನ್ನು ರುಜುವಾತುಪಡಿಸಲು ಸಾಧ್ಯವಾಗುವುದಿಲ್ಲ, ಅದು ಸತ್ಯವೆಂದು ಪಣ ತೊಟ್ಟು ಅದು ಸುಳ್ಳೆಂದಾದಲ್ಲಿ ನಿನಗೇನು ನಷ್ಟವಾಗುತ್ತದೆ? “ನೀವು ಪಣ ಕಟ್ಟಬೇಕು; ಅದು ಆಯ್ಕೆಯ ಮಾತಲ್ಲ... ದೇವರಿದ್ದಾನೆ ಎಂದು ಪಣ ತೊಡುವುದರಿಂದ ಉಂಟಾಗುವ ಲಾಭ-ನಷ್ಟಗಳೇನು ಎಂಬುದನ್ನು ಗಮನಿಸೋಣ... ನೀವು ಗೆದ್ದಲ್ಲಿ ನೀವು ಎಲ್ಲವನ್ನೂ ಪಡೆದುಕೊಳ್ಳುವಿರಿ; ನೀವು ಸೋತಲ್ಲಿ, ನೀವು ಏನನ್ನೂ ಕಳೆದುಕೊಳ್ಳುವುದಿಲ್ಲ. ಹಾಗಾದರೆ ಹಿಂಜರಿಕೆಯಿಲ್ಲದೆ ದೇವರಿದ್ದಾನೆ ಎಂದು ಪಣ ತೊಡಿ.” ಪ್ರಾರಂಭದಲ್ಲಿ ನಿಮಗೆ ಶ್ರದ್ಧೆ ಕಷ್ಟವೆನ್ನಿಸಿದರೆ, ಚರ್ಚ್‍ನ ರೀತಿ ರಿವಾಜುಗಳನ್ನು ನೀವು ನಂಬಿಕೆ ಇರುವವರಂತೆಯೇ ಅನುಸರಿಸಿ. “ಪವಿತ್ರ ಜಲದಿಂದ ಆಶೀರ್ವದಿಸಿಕೊಳ್ಳಿ, ಪ್ರಾರ್ಥನೆಗಳಲ್ಲಿ ಮುಂತಾದುವುಗಳಲ್ಲಿ ಭಾಗವಹಿಸಿ; ಇಂತಹ ಸರಳ ಮತ್ತು ಸಹಜ ಆಚರಣೆಗಳು ನಿಮ್ಮಲ್ಲಿ ಶ್ರದ್ಧೆಯನ್ನು ತರುತ್ತವೆ ಮತ್ತು ಶಮನಗೊಳಿಸುತ್ತವೆ- ನಿಮ್ಮ ಅಹಂಕಾರದ ವಿಶ್ಲೇಷಕ ಬುದ್ಧಿಮತ್ತೆಯನ್ನು ಸುಮ್ಮನಾಗಿಸುತ್ತವೆ. ತಪ್ಪೊಪ್ಪಿಕೊಳ್ಳುವಿಕೆಯಲ್ಲಿ ಹಾಗೂ ಮೈತ್ರಿಕೂಟಗಳಲ್ಲಿ ಭಾಗವಹಿಸಿ; ಅವು ನಿಮ್ಮಲ್ಲಿ ನಿರಾಳ ಭಾಗ ಉಂಟುಮಾಡುತ್ತವೆ ಮತ್ತು ಶಕ್ತಿ ತುಂಬುತ್ತವೆ.
ನಾವು ಈ ಚಾರಿತ್ರಿಕ ಸಮರ್ಥನೆಯನ್ನು ಹೇಡಿಗಳಂತೆ ಅಂತ್ಯಗೊಳ್ಳಲು ಬಿಟ್ಟಲ್ಲಿ ಅನ್ಯಾಯ ಮಾಡಿದಂತಾಗುತ್ತದೆ. ಪ್ಯಾಸ್ಕಲ್ ತನ್ನ ನಂಬಿಕೆಯನ್ನು ಇರಿಸಿದಾಗ ಆತ ಅದನ್ನು ಜೂಜುಗಾರನಂತೆ ನಂಬಲಿಲ್ಲ, ಬದಲಿಗೆ ಬದುಕಿನಿಂದ ಅಚ್ಚರಿಗೊಳಗಾಗಿ ಹಾಗೂ ಜರ್ಜರಿತನಾಗಿ, ತನ್ನ ಬುದ್ಧಿಮತ್ತೆಯಿಂದ ವಿನೀತನಾಗಿ- ಅದು ತನ್ನ ಗೆಳೆಯರನ್ನು ಮತ್ತು ಶತ್ರುಗಳನ್ನು ದಿಗ್ಭ್ರಮೆಗೊಳಿಸಿದ್ದರೂ ವಿಶ್ವಕ್ಕೆ ಅದು ಸರಿಸಾಟಿಯಲ್ಲವೆಂಬುದನ್ನು ಹಾಗೂ ಅವನ ನೋವುಗಳಿಗೆ ಅರ್ಥ ಮತ್ತು ಕ್ಷಮೆಯನ್ನು ಒದಗಿಸಬಲ್ಲದೆಂಬ ವಿಶ್ವಾಸ ಹೊಂದಿದ್ದ. “ಪ್ಯಾಸ್ಕಲ್ ರೋಗಗ್ರಸ್ಥ; ಆತನನ್ನು ಓದುವಾಗ ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದಿದ್ದರು ಸಂತ-ಬ್ಯೂವ್. ಆ ಮಾತಿಗೆ ಪ್ಯಾಸ್ಕಲ್‍ಗೆ ಉತ್ತರ ಹೀಗಿರುತ್ತಿತ್ತು:

ಕಾಮೆಂಟ್‌ಗಳಿಲ್ಲ: