ಚಿತ್ರ-ಲೇಖನ: ಡಾ.ಜೆ.ಬಾಲಕೃಷ್ಣ
`ಧರ್ಮ’ ಸಂಘರ್ಷ ಬಹುಶಃ ಮಾನವನ ಜೀವ ವಿಕಾಸದ ಹಾದಿಯಲ್ಲಿ ತಾನು ನಾಗರಿಕನಾದಾಗಿನಿಂದ
ಅವನೊಂದಿಗೇ ನಡೆದು ಬಂದಿದೆಯೆನ್ನಿಸುತ್ತದೆ. ಧರ್ಮಗಳು ತಮ್ಮ ರೂಪ ಬದಲಿಸಿಕೊಂಡಿವೆ,
ಹೊಸ ಹೊಸ ಧರ್ಮಗಳು ರೂಪುಗೊಂಡಿವೆ ಹಾಗೂ ಇಂದಿಗೂ ಅವು ತಮ್ಮ ಉದ್ದೇಶ ಮತ್ತು
ಗುರಿಗಳನ್ನು ಬದಲಿಸಿಕೊಳ್ಳುತ್ತಲೇ ಇವೆ. ಪ್ರಚಲಿತ ಸಾಂಪ್ರದಾಯಕ ಧರ್ಮಗಳಿಗೆ ಪ್ರಾರ್ಥನಾ ಮಂದಿರಗಳು
ಬಹಳ ಮುಖ್ಯ ಸ್ಥಾನಗಳಾಗಿವೆ, ಅವು ಅಧಿಕಾರ ಕೇಂದ್ರದ ಸ್ಥಾನಗಳೂ ಆಗಿವೆ. ಪೂಜಾ ಮಂದಿರಗಳ `ಬಿಡುಗಡೆ’ಗೆ ಸಾವಿರಾರು ಧರ್ಮಯುದ್ಧಗಳು ನಡೆದಿವೆ,
ಇಂದೂ ಸಹ ತಮ್ಮ ಬಲಪ್ರಯೋಗದ ಮೂಲಕ ನಾಶ ಪಡಿಸುವ,
ವಶ ಪಡಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇಂದು ಕಾನೂನು ಕಟ್ಟಲೆಗಳನ್ನು
ಕಟ್ಟುನಿಟ್ಟಾಗಿ ಅನುಸರಿಸುವ `ನಾಗರಿಕ’ ಮಾನವ ನ್ಯಾಯಾಲಯಗಳ ಮೂಲಕ ತನ್ನ `ಧರ್ಮಯುದ್ಧ’ ಮುಂದುವರಿಸುತ್ತಿದ್ದಾನೆ.
1. ಅಯಾ ಸೋಫಿಯಾ
ಪ್ರತಿಯೊಬ್ಬ ರಾಜನೂ, ಸಾಮ್ರಾಟನೂ ತಮ್ಮ ತಮ್ಮ ಅಧಿಕಾರಗಳ ಅವಧಿಯಲ್ಲಿ `ಹಿಂದೆಂದೂ ಇರದಂತಹ’ ಅಥವಾ `ಮುಂದೆ ಯಾರೂ ನಿರ್ಮಿಸಲಾರದಂತಹ’
ತಮ್ಮ ಶ್ರದ್ಧೆಯ ಪೂಜಾ ಮಂದಿರಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದಾರೆ.
ಅದೇ ರೀತಿ ಕಾನ್‍ಸ್ಟಾಂಟಿನೋಪಲ್‍ನಲ್ಲಿ ಕ್ರಿ.ಶ. 537ರಲ್ಲಿ ತಾನು ನಿರ್ಮಿಸಿದ ಅಯಾ ಸೋಫಿಯಾ ಚರ್ಚ್‍ನೊಳಗೆ ರೋಮನ್ ಸಾಮ್ರಾಟ
ಜಸ್ಟೀನಿಯನ್ ಮೊಟ್ಟ ಮೊದಲು ಪ್ರವೇಶಿಸಿದಾಗ ಮಂಡಿಯೂರಿ,
`ಸೋಲೊಮನ್,
ನಾನು ನಿನ್ನನ್ನೂ ಮೀರಿಸಿದ್ದೇನೆ’
ಎನ್ನುತ್ತಾನೆ, ಏಕೆಂದರೆ ಅದುವರೆಗೆ ಜೆರೂಸಲೆಂನಲ್ಲಿ ಸೋಲೊಮನ್ ನಿರ್ಮಿಸಿದ ಕ್ರೈಸ್ತ ಪ್ರಾರ್ಥನಾ ಮಂದಿರವೇ ಅತಿ ದೊಡ್ಡದು,
ಭವ್ಯವಾದುದೆಂದು ಭಾವಿಸಲಾಗಿತ್ತು. ಹೌದು,
ಅದೇ ಸಮಯದ ರೋಮನ್ ಚರಿತ್ರಕಾರ ಪ್ರೊಕೋಪಿಯಸ್ ದಾಖಲಿಸಿರುವಂತೆ,
`ಅದರ (ಅಯ ಸೋಫಿಯಾ) ಸೌಂದರ್ಯ
ಅವರ್ಣನೀಯವಾದುದು, ಅದರಲ್ಲಿ ಯಾವುದೂ ಹೆಚ್ಚು ಅಥವಾ ಯಾವುದರ ಕೊರತೆಯೂ ಇರದ ಬೃಹದಾಕಾರದ ಭವ್ಯ
ಕಟ್ಟಡವಾಗಿತ್ತು. ಅದರೊಳಗಿನ ಕಣ್ಣು ಕೋರೈಸುವ ಬೆಳಕು ಕಂಡಾಗ ಬೆಳಕು ಹೊರಗಿನಿಂದ ಬರುತ್ತಿಲ್ಲ,
ಸೂರ್ಯನೇ ಅದರೊಳಗೆ ಪ್ರವೇಶಿಸಿ ಬೆಳಕನ್ನು ಪ್ರವಹಿಸುತ್ತಿದ್ದಾನೆಂಬ ಭಾವನೆ
ತರಿಸುತ್ತಿತ್ತು. ತಲೆ ಎತ್ತಿ ನೋಡಿದರೆ ಕಟ್ಟಡದ ಗುಮ್ಮಟ ಯಾವುದೇ ಗೋಡೆಗಳ ಮೇಲೆ ನಿಂತಿಲ್ಲ,
ಸ್ವರ್ಗದಿಂದಲೇ ಚಿನ್ನದ ಸರಪಳಿಗಳಿಂದ ತೂಗಿ ಬಿಡಲಾಗಿದೆ ಎನ್ನಿಸುವಂತಿತ್ತು’
ಎಂದಿದ್ದಾನೆ.
2. `ಸ್ವರ್ಗದಿಂದ ಇಳಿಬಿಟ್ಟ ಗುಮ್ಮಟ’ - ಅಯಾ ಸೋಫಿಯಾದ 200 ಅಡಿ ಎತ್ತರದಲ್ಲಿರುವ ಗುಮ್ಮಟ
ಟರ್ಕಿಯ ಇಂದಿನ ಇಸ್ಟಾನ್‍ಬುಲ್ ಹಿಂದಿನ ಕಾನ್‍ಸ್ಟಾಂಟಿನೋಪಲ್
ಆಗಿತ್ತು. ಪ್ರೊಕೋಪಿಯಸ್ ಹೇಳಿದಂತೆ ಅಯಾ ಸೋಫಿಯಾ (ಟರ್ಕಿಷ್‍ನಲ್ಲಿ ಅಯಾಸೋಫ್ಯಾ ಎಂದು ಕರೆಯುತ್ತಾರೆ)
ಅತ್ಯಂತ ಭವ್ಯ ಮತ್ತು ಸುಂದರ ಕ್ಯಾಥೆಡ್ರಲ್ ಆಗಿದೆ. 270 ಅಡಿ ಉದ್ದ,
240 ಅಡಿ ಅಗಲ ಇರುವ ಕಟ್ಟಡದ ಗುಮ್ಮಟ 108 ಅಡಿ ವ್ಯಾಸ
ಹೊಂದಿದ್ದು ನೆಲದಿಂದ 180 ಅಡಿ ಎತ್ತರದಲ್ಲಿದೆ.
ಅದು ಆ ಕಾಲದ ಅತಿ ದೊಡ್ಡ ಹಾಗೂ ಗುಮ್ಮಟ ಹೊಂದಿರುವ ಮೊಟ್ಟಮೊದಲ ಕಟ್ಟಡವಾಗಿತ್ತು ಹಾಗೂ ಸಾವಿರ ವರ್ಷಗಳ
ಕಾಲ ಸಂಪ್ರದಾಯಸ್ತ ಕ್ರೈಸ್ತರ ಅತಿ ದೊಡ್ಡ ಪ್ರಾರ್ಥನಾ ಮಂದಿರವಾಗಿತ್ತು.
3. ಅಯಾ ಸೋಫಿಯಾದ ಗುಮ್ಮಟದ ಮತ್ತೊಂದು ನೋಟ
4. ಅಯಾ ಸೋಫಿಯಾದ ಒಳದೃಶ್ಯ
ಅಯಾ ಸೋಫಿಯಾ ಎಂದರೆ ಪ್ರಾಚೀನ ಗ್ರೀಕ್ ಭಾಷೆಯಲ್ಲಿ `ಪವಿತ್ರ ಜ್ಞಾನ/ವಿವೇಚನೆ’
ಎಂದರ್ಥ. ಬೈಜಾಂಟಿಯನ್ ಸಾಮ್ರಾಟ ಜಸ್ಟೀನಿಯನ್ ನಿರ್ಮಿಸಿದ ಈ ಕಟ್ಟಡ ಅದೇ
ಸ್ಥಳದಲ್ಲಿ ನಿರ್ಮಿತವಾದ ಮೂರನೇ ಕಟ್ಟಡವಾಗಿತ್ತು. ಪೂರ್ವ ರೋಮನ್ ಸಾಮ್ರಾಜ್ಯವು ಬೈಜಾಂಟಿಯನ್ ಸಾಮ್ರಾಜ್ಯವೆಂದು
ಕರೆಯಲ್ಪಟ್ಟಿತ್ತು ಹಾಗೂ ಅದು ಆ ಸಮಯದಲ್ಲಿ ಇಟಲಿ,
ರೋಮ್, ಉತ್ತರ ಆಫ್ರಿಕಾಗಳನ್ನೊಳಗೊಂಡಂತೆ ಇಡೀ ರೋಮನ್ ಮೆಡಿಟರೇನಿಯನ್ ಕರಾವಳಿ
ಪ್ರದೇಶವನ್ನಾವರಿಸಿತ್ತು. ಕ್ರೈಸ್ತ ಧರ್ಮದ ಆರಂಭದ ದಿನಗಳ ಕ್ರೈಸ್ತರು ಮತ್ತು ಪೇಗನ್‍ರ (ಪ್ರಾಚೀನ
ಗ್ರೀಕರ ಧರ್ಮಶ್ರದ್ಧೆ) ನಡುವಿನ ಧರ್ಮ ಸಂಘರ್ಷಗಳ ಸಮಯದಲ್ಲಿ ಮೊದಲನೇ ಕಾನ್‍ಸ್ಟಾಂಟಿನ್ ಕ್ರಿ.ಶ.
325ರಲ್ಲಿ ಅಲ್ಲಿಯೇ ಹಿಂದೆ ಪೇಗನ್ ಪೂಜಾಮಂದಿರವಿದ್ದ ಸ್ಥಳದಲ್ಲಿ ಸಣ್ಣ ಗಾತ್ರದ ಮರದ ಸೂರಿನ ಚರ್ಚ್
ನಿರ್ಮಿಸಿದ್ದ. ಕಾನ್‍ಸ್ಟಾಂಟಿನ್ ನಿರ್ಮಿಸಿದ ನಗರವೇ ಕಾನ್‍ಸ್ಟಾಂಟಿನೋಪಲ್. ನಿರ್ಮಿತವಾಗಿದ್ದು ಸಾಮ್ರಾಟ
ಜಸ್ಟೀನಿಯನ್ನನ ಆಡಳಿತದಿಂದ ಬೇಸತ್ತ ಜನ ದಂಗೆಯೆದ್ದು ಗಲಭೆಗಳಲ್ಲಿ ಅವುಗಳನ್ನು ಸುಟ್ಟುಹಾಕಿದ್ದರು.
ಕ್ರಿ.ಶ. 532ರಲ್ಲಿ ಜಸ್ಟೀನಿಯನ್ ಹಿಂದೆಂದು ನಿರ್ಮಿತವಾಗಿರದ ಕ್ರೈಸ್ತ ಪ್ರಾರ್ಥನಾ
ಮಂದಿರ ನಿರ್ಮಿಸಲು ಪ್ರಾರಂಭಿಸಿ ಆಂಥೆನಿಯಸ್ ಮತ್ತು ಇಸಿಡೋರ್ ಎಂಬ ವಾಸ್ತುಶಿಲ್ಪಿಗಳನ್ನು ನೇಮಿಸುತ್ತಾನೆ.
ಅವರು ವಾಸ್ತುಶಿಲ್ಪಿಗಳಷ್ಟೇ ಆಗಿರಲಿಲ್ಲ ಗಣಿತಶಾಸ್ತ್ರಜ್ಞರೂ ಆಗಿದ್ದರು. ನಿರ್ಮಾಣ ಕಾರ್ಯ ಬೇಗ ಮುಗಿಸಬೇಕೆಂಬ
ಸಾಮ್ರಾಟನ ಒತ್ತಾಯಕ್ಕೆ ಮಣಿದು ಕೇವಲ ಆರು ವರ್ಷಗಳಲ್ಲಿ ಅಂದರೆ 537ರಲ್ಲಿ ಪೂರ್ಣಗೊಳಿಸುತ್ತಾರೆ. ಆತುರದ ಕೆಲಸದಿಂದಲೋ ಏನೋ ಎರಡು ದಶಕಗಳ ನಂತರ
ಗುಮ್ಮಟ ಕುಸಿಯುತ್ತದೆ ಅದನ್ನು ಮತ್ತೊಬ್ಬ ಇಸಿಡೋರ್ ಎಂಬ ವಾಸ್ತುಶಿಲ್ಪಿಯಿಂದ ಪುನಃ ಮೊದಲಿನಂತಹುದೇ
ಹೊಸ ಗುಮ್ಮಟ ನಿರ್ಮಾಣ ಮಾಡಲಾಗುತ್ತದೆ. ಆ ಗುಮ್ಮಟ ಇಂದಿಗೂ ಸುಮಾರು 1400 ವರ್ಷಗಳ ನಂತರವೂ
ಉಳಿದಿದೆ. ಅಯಾ ಸೋಫಿಯಾ ಬೈಜಾಂಟಿನ್ ವಾಸ್ತುಶಿಲ್ಪ ಕಲೆಯ ಅತ್ಯುತ್ತಮ ಮಾದರಿಯಾಗಿದೆ. ಗುಮ್ಮಟದ
ತಳದಲ್ಲಿ 40 ಕಿಟಕಿಗಳಿದ್ದು
ಸೂರ್ಯನ ಬೆಳಕು ಹಾಲಿನಂತೆ ಒಳಚೆಲ್ಲುತ್ತದೆ. ಬಹುಶಃ ಪ್ರಾರಂಭದಲ್ಲಿ ಅಯಾ ಸೋಫಿಯಾದ ಒಳಗಿನ ಅಲಂಕಾರಗಳು
ಸರಳವಾಗಿದ್ದಿರಬಹುದು; ಅಲ್ಲಲ್ಲಿ ಶಿಲುಬೆಯ ಚಿತ್ರಗಳು ಮುಂತಾದವು. ಕ್ರಮೇಣ ಸುಂದರ ಮೊಸಾಯಿಕ್
ಕಲೆಯ ಚಿತ್ರಗಳು ರಚಿಸಲ್ಪಟ್ಟವು. ಹಲವಾರು ಭೂಕಂಪಗಳನ್ನು,
13ನೇ ಶತಮಾನದಲ್ಲಿ `ಕ್ರುಸೇಡ್’ ಧರ್ಮಯುದ್ಧಕ್ಕೆ ಹೊರಟವರ ದಾಳಿಗಳನ್ನು,
ವಿಶ್ವಯುದ್ಧವನ್ನು ಸಹಿಸಿ ಅಯಾ ಸೋಫಿಯಾ ಮುನ್ನಡೆಯಿತು.
5. ಕನ್ಯೆ ಮೇರಿ ಮತ್ತು ಬಾಲಕ ಕ್ರಿಸ್ತ – 9ನೇ ಶತಮಾನದ ಭಿತ್ತಿಚಿತ್ರ
1453ರಲ್ಲಿ ಒಟ್ಟೊಮನ್ ಸುಲ್ತಾನ ಎರಡನೇ ಮೆಹಮ್ಮದ್ ಕಾನ್‍ಸ್ಟಾಂಟಿನೋಪಲ್ ವಶಪಡಿಸಿಕೊಳ್ಳುವ
ಸಮಯದ ಹೊತ್ತಿಗೆ ಅಯಾ ಸೋಫಿಯಾ ತನ್ನ ವೈಭವತೆಗೆ ಜಗತ್ಪ್ರಸಿದ್ಧವಾಗಿತ್ತು. ಹಾಗಾಗಿ ಆತ ತನ್ನ ವಿಜಯದ
ದಿನವೇ ಅಯಾ ಸೋಫಿಯಾಗೆ ಹೋಗಿ ಅದರ ಸೌಂದರ್ಯವನ್ನು ಕಂಡ ಬೆರಗಾಗಿ,
ಮಂಡಿಯೂರಿ ದೇವರಿಗೆ ವಂದಿಸಿ ಅದನ್ನು ಹಾಳುಗೆಡವದೇ ಮಸೀದಿಯನ್ನಾಗಿ ಪರಿವರ್ತಿಸಿದ.
ನಂತರದ ಶತಮಾನದಲ್ಲಿ ಒಟ್ಟೊಮನ್ ಸಾಮ್ರಾಜ್ಯದ ಪ್ರಖ್ಯಾತ ವಾಸ್ತುಶಿಲ್ಪಿ ಸಿನಾನ್‍ನಿಗೆ ಅದರ ದುರಸ್ತಿಯ
ಕಾರ್ಯ ವಹಿಸಲಾಯಿತು. ಅಯಾ ಸೋಫಿಯಾಗೆ ಮಸೀದಿಯಂತೆ ನಾಲ್ಕು ಮಿನಾರ್‍ಗಳನ್ನು ಕಟ್ಟಿಸಲಾಯಿತು. ಇನ್ನೂರು
ಅಡಿ ಎತ್ತರದ ಆ ಮಿನಾರ್‍ಗಳು ಆ ಕಾಲದ ಅತಿ ಎತ್ತರದ ಮಿನಾರ್‍ಗಳಾಗಿದ್ದವು. ಅಯಾ ಸೋಫಿಯಾ ವಾಸ್ತುಶಿಲ್ಪಕ್ಕೆ
ಮಾರು ಹೋದ ಸಿನಾನ್ ಟರ್ಕಿಯಲ್ಲಿ ತಾನು ನಿರ್ಮಿಸಿದ ಹಲವಾರು ಮಸೀದಿಗಳಲ್ಲಿ ಅಯಾ ಸೋಫಿಯಾವನ್ನೇ
ಅನುಕರಿಸಲು ಪ್ರಯತ್ನಿಸಿದ್ದಾನೆ. ಎರಡನೇ ಮೆಹಮ್ಮದ್ ಹಾಯಯ ಅಯಾ ಸೋಫಿಯಾದಲ್ಲಿನ ಮೇರಿ,
ಯೇಸು ಹಾಗೂ ಹಲವಾರು ಕ್ರೈಸ್ತ ಸಂತರ ಭಿತ್ತಿಚಿತ್ರಗಳನ್ನು ಅಳಿಸಲಿಲ್ಲ.
ಆದರೆ ನಂತರ ಬಂದ ಸುಲ್ತಾನರು ಇಸ್ಲಾಂ ಧರ್ಮಶ್ರದ್ಧೆಯಲ್ಲಿ ಪೂಜಾ ಮಂದಿರಗಳಲ್ಲಿ ಯಾವುದೇ ಆಕೃತಿಗಳಿರವಾರದೆಂದು
ಭಿತ್ತಿಚಿತ್ರಗಳು ಕಾಣದಂತೆ ಅವುಗಳ ಮೇಲೆ ಬಣ್ಣ ಬಳಿದರು ಹಾಗೂ ಇಸ್ಲಾಂ ಕ್ಯಾಲಿಗ್ರಫಿ ರಚಿಸಿದರು.
6. ಕ್ರಿಸ್ತ ಮತ್ತು ಬಲಭಾಗದಲ್ಲಿ ಕನ್ಯೆ ಮೇರಿ ಹಾಗೂ ಎಡಭಾಗದಲ್ಲಿ ಜಾನ್ ಬ್ಯಾಪ್ಟಿಸ್ಟ್ – 13ನೇ ಶತಮಾನದ ಭಿತ್ತಿಚಿತ್ರ
1934ರಲ್ಲಿ ಸೆಕ್ಯುಲರ್ ರಿಪಬ್ಲಿಕ್ ಆಫ್ ಟರ್ಕಿಯ ಸರ್ಕಾರದ ಅಧಿಕಾರ ವಹಿಸಿಕೊಂಡ
ಮುಸ್ತಫಾ ಕೆಮಲ್ ಅತಾತುರ್ಕ್ ಟರ್ಕಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದ. ಆತ ಕ್ಯಾಲಿಫೇಟ್ ರದ್ದುಗೊಳಿಸಿ
ಧರ್ಮನಿರಪೇಕ್ಷತೆಯನ್ನು ಟರ್ಕಿಯಲ್ಲಿ ತರಲು ಯತ್ನಿಸಿದ. ಅಯಾ ಸೋಫಿಯಾವನ್ನು ಮನುಕುಲದ ಒಂದು ಮಹತ್ತರ
ಸಾಂಸ್ಕøತಿಕ ಕಲಾಕೃತಿಯೆಂದು ಪರಿಗಣಿಸಿ ಎಲ್ಲ ಸಾರ್ವಜನಿಕರಿಗೂ ಅದನ್ನು ನೋಡುವ
ಅವಕಾಶ ಸಿಗಲೆಂದು ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸಿದ. ಇಂದು ಅದು ವಿಶ್ವಸಂಸ್ಥೆಯ ಪಾರಂಪರಿಕ ತಾಣಗಳಲ್ಲಿ
ಒಂದಾಗಿದೆ. ಅಂದಿನಿಂದ ಇಂದಿವವರೆಗೂ ಕ್ರೈಸ್ತ-ಮುಸಲ್ಮಾನ ಧರ್ಮ ಸಮನ್ವಯತೆಯ ಕೇಂದ್ರವಾಗಿತ್ತು. ಪ್ರಾಖ್ತನನ
ಇಲಾಖೆ ಅದರಲ್ಲಿನ ಸುಂದರ ಭಿತ್ತಿಚಿತ್ರಗಳನ್ನು ಕಲಾಕೃತಿಗಳನ್ನು ಸಂರಕ್ಷಿಸುವ ಕಾರ್ಯ ನಡೆಸಿತ್ತು.
ಆದರೆ ಕಳೆದ 18 ವರ್ಷಗಳ ಹಿಂದೆ ಎರ್ಡೊಗಾನ್ ಅಧಿಕಾರ ವಹಿಸಿಕೊಂಡಾಗಿನಿಂದ ಸಂಪ್ರದಾಯ ಇಸ್ಲಾಂ ಗುಂಪುಗಳು
ಹಾಜಿಯಾ ಸೋಫಿಯಾವನ್ನು ಪುನಃ ಮಸೀದಿಯನ್ನಾಗಿ ಮಾಡಬೇಕೆನ್ನುವ ಬೇಡಿಕೆ ಇಡುತ್ತಿದ್ದವು. ಎರ್ಡೊಗಾನ್
ಸಹ ನಿರಂತರವಾಗಿ ಅಧಿಕಾರದಲ್ಲಿರಬೇಕೆಂಬ ಮಹದಾಸೆ ಹೊಂದಿದ್ದು ಅವರ ಬೇಡಿಕೆಗೆ ಬೆಂಬಲ ನೀಡುತ್ತಿದ್ದನು.
ಕಳೆದ ಶುಕ್ರವಾರ ಟರ್ಕಿಯ ಆಡಳಿತಾತ್ಮಕ ನ್ಯಾಯಾಲಯವು ಹಾಜಿಯಾ ಸೋಫಿಯಾದ ಮ್ಯೂಸಿಯಂ ಸ್ಥಾನಮಾನವನ್ನು
ರದ್ದುಗೊಳಿಸಿತು ಹಾಗೂ ಅದರ ನಿರ್ವಹಣೆ ಹೊತ್ತಿದ್ದ ಸಾಂಸ್ಕೃತಿಕ ಸಚಿವಾಲಯದಿಂದ ಅದರ ನಿರ್ವಹಣೆಯನ್ನು ಎರ್ಡೊಗಾನ್ ಧಾರ್ಮಿಕ ವ್ಯವಹಾರಗಳ
ನಿರ್ದೇಶನಾಲಯಕ್ಕೆ ವರ್ಗಾಯಿಸಿದರು. ಇನ್ನು ಮುಂದೆ ಹಾಜಿಯಾ ಸೋಫಿಯಾ ಮಸೀದಿಯಾಗಲಿದೆ. ಆದರೆ ಟರ್ಕಿಯಲ್ಲಿನ
ಮಸೀದಿಗಳಿಗೂ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಪ್ರವೇಶವಿದೆ. ನಮ್ಮ ಪ್ರವಾಸದ ಸಮಯದಲ್ಲಿ ನಾವು ಬ್ಲೂ ಮಾಸ್ಕ್,
ಸುಲ್ತಾನ ಅಹ್ಮದ್ ಮಸೀದಿ ಮುಂತಾದವುಗಳಿಗೆ ಭೇಟಿ ನೀಡಿದ್ದೆವು. ಆದರೆ ಅಲ್ಲಿ
ಪ್ರಾರ್ಥನೆ ನಡೆಯುವ ಸಮಯದಲ್ಲಿ ಪ್ರವೇಶವಿರುವುದಿಲ್ಲ ಹಾಗೂ ಮಸೀದಿಯಲ್ಲಿನ ಹಲವಾರು ಸ್ಥಳಗಳಿಗೆ ಪ್ರವೇಶ
ನಿಷಿದ್ಧವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಯಾ ಸೋಫಿಯಾದಲ್ಲಿನ ಸುಂದರ ಕಲಾಕೃತಿಗಳು ಏನಾಗುತ್ತವೆಂಬುದೇ
ಕಲಾಪ್ರಿಯರ ಆತಂಕವಾಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ