ಇಪ್ಪತ್ತು ವರ್ಷಗಳ ಹಿಂದೆ
31/12/2000ದ
`ಪ್ರಜಾವಾಣಿ’ಯ
ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನಾನು ಅನುವಾದಿಸಿದ
ನನ್ನ ಮೆಚ್ಚಿನ ಇಟಾಲಿಯನ್
ಲೇಖಕ ಆಲ್ಬರ್ಟೊ ಮೊರಾವಿಯಾನ `ರೋಮನ್ ಟೇಲ್ಸ್’ನಿಂದ ಆಯ್ದ ಕತೆ
`ಮಗು’
ಮಗು
ಇಟಾಲಿಯನ್ ಮೂಲ : ಆಲ್ಬರ್ಟೊ
ಮೊರಾವಿಯ
ಅನುವಾದ: : ಜೆ.
ಬಾಲಕೃಷ್ಣ
ಆ ದಿನ ಕುಟುಂಬ
ಯೋಜನಾ ಇಲಾಖೆಯ ಒಬ್ಬ
ಹೆಂಗಸು ಸಮೀಕ್ಷೆಗೆಂದು ಬಂದವಳು ನನ್ನ
ಪತ್ನಿಯನ್ನು ಕೇಳಿದ್ದಳು,
"ನೀವ್ಯಾಕೆ ಇಷ್ಟೊಂದು ಮಕ್ಕಳನ್ನು ಮಾಡಿಕೊಂಡಿರಿ?".
ಅದಕ್ಕೆ ನನ್ನ ಪತ್ನಿ,
"ಏನು ಮಾಡುವುದು? ನಮ್ಮ ಬಳಿ
ಹಣ ಇದ್ದಿದ್ದರೆ ಸಂಜೆ ಸಿನೆಮಾಕ್ಕೊ,
ನಾಟಕಕ್ಕೊ ಹೋಗುತ್ತಿದ್ದೆವು. ನಮ್ಮ ಬಳಿ
ಹಣ ಇಲ್ಲವಲ್ಲ, ಹಾಗಾಗಿ ಸಂಜೆ
ಬೇಗ ಮಲಗಿಬಿಡುತ್ತೇವೆ. ಅದಕ್ಕೇ ಇಷ್ಟೊಂದು
ಮಕ್ಕಳು" ಎಂದು ಸತ್ಯವನ್ನೇ
ಹೇಳಿಬಿಟ್ಟಿದ್ದಳು.
ಆ ಹೆಂಗಸು ನನ್ನ
ಪತ್ನಿಯ ಉತ್ತರ ಕೇಳಿ
ಕಸಿವಿಸಿಗೊಂಡವಳಂತೆ ಮುಖ ನೋಡಿ ಏನೂ
ಹೇಳದೆ ಹೊರಟು ಹೋದಳು.
ಆಕೆ ಹೋದ ನಂತರ
ನಾನು ನನ್ನ ಪತ್ನಿಯನ್ನು
ಬೈದಿದ್ದೆ, "ಹಾಗೆ ಸತ್ಯವನ್ನು
ಇದ್ದದ್ದು ಇದ್ದ ಹಾಗೆ
ಹೇಳುವುದು ಸರಿಯಲ್ಲ. ಹೇಳುವ
ಮುಂಚೆ ಯಾರೊಂದಿಗೆ ಮಾತನಾಡುತ್ತಿದ್ದೇವೆಂಬ ಪರಿಜ್ಞಾನವಿರಬೇಕು".
ನಾನು ಮದುವೆಯಾಗದ ಯುವಕನಾಗಿದ್ದಾಗ ಆಗಾಗ ವೃತ್ತಪತ್ರಿಕೆಗಳಲ್ಲಿನ
ಸ್ಥಳೀಯ ವಾರ್ತೆಗಳನ್ನು ಓದಿ ಮೋಜು
ತೆಗೆದುಕೊಳ್ಳುತ್ತಿದೆ. ಅದರಲ್ಲಿ ಕಳ್ಳತನ, ಕೊಲೆ,
ಆತ್ಮಹತ್ಯೆ, ಅಪಘಾತ ಮುಂತಾದ
ಮನುಷ್ಯರಿಗೆ ಒದಗಬಹುದಾದ ದುರಂತಗಳ ವಿವರದ
ಮಹಾಪೂರವೇ ಇರುತ್ತಿತ್ತು. ಆದರೆ ಈ
ಎಲ್ಲ ದುರಂತಗಳಲ್ಲೂ ನನಗೆ ಎಂದಿಗೂ
ಬರುವುದಿಲ್ಲವೆಂದುಕೊಂಡಿದ್ದ,
ಆ ವೃತ್ತಪತ್ರಿಕೆ ವಿವರಿಸಿದ್ದ `ದಯನೀಯ ಸ್ಥಿತಿ':
"ಆ ವ್ಯಕ್ತಿ ಎಂತಹ
ನತದೃಷ್ಟನೆಂದರೆ ಆತನ ಅಸ್ತಿತ್ವದಿಂದಾಗಿಯೇ
ಆತ `ದಯನೀಯ ಸ್ಥಿತಿ'
ತಲುಪಿದ್ದ".
ಆಗ ನಾನಿನ್ನೂ
ಮದುವೆಯಾಗದ ಯುವಕನಾಗಿದ್ದುದರಿಂದ ದೊಡ್ಡ ಕುಟುಂಬದ
ಹೊಣೆಗಾರಿಕೆ ಏನೆಂದು ನನಗೆ
ತಿಳಿದಿರಲಿಲ್ಲ. ಆದರೆ ಈಗ,
ನನಗೇ ಆಶ್ಚರ್ಯವಾಗುವಂತೆ, ನನ್ನ ಬದುಕು
ಅಂತಹ `ದಯನೀಯ ಸ್ಥಿತಿ'
ತಲುಪಿಬಿಟ್ಟಿದೆ.
ಆಗ ಪತ್ರಿಕೆಯಲ್ಲಿ
ನಾನು ಓದುತ್ತಿದ್ದೆ, "ಅವರು ಕಡು
ದಾರಿದ್ರ್ಯದಲ್ಲಿ ಬದುಕುತ್ತಿದ್ದಾರೆ".
ನೋಡಿ, ಈಗ
ನಾನೂ ಸಹ ಕಡು
ದಾರಿದ್ರ್ಯದಲ್ಲಿ ಬದುಕುತ್ತಿದ್ದೇನೆ.
ಅಥವಾ, "ಅವರು
ವಾಸಿಸುತ್ತಿರುವ ಮನೆ ಹೆಸರಿಗೆ
ಮಾತ್ರ ಮನೆ".
ಈಗ, ನಾನು,
ನನ್ನ ಪತ್ನಿ ಹಾಗೂ
ಆರು ಜನ ಮಕ್ಕಳು
ವಾಸಿಸುತ್ತಿರುವ ಮನೆ ಅಥವಾ
ಶೆಡ್ಡೆನ್ನಬಹುದು, ಅದರಲ್ಲಿ ನೆಲದ
ಮೇಲೆ ಹಾಸಿರುವ ಛಾಪೆಗಳನ್ನು
ಬಿಟ್ಟಲ್ಲಿ ಬೇರೇನೂ ಇಲ್ಲ.
ಮಳೆ ಸುರಿದಲ್ಲಿ, ಪಾರ್ಕಿನ ಬೆಂಚಿನ
ಮೇಲೆ ಮಲಗಿದ್ದಾಗ ಸುರಿಯುವಂತೆಯೇ ನಮ್ಮ ಮೇಲೆ
ಮಳೆ ಸುರಿಯುತ್ತದೆ.
ಅಥವಾ ಆ
ವೃತ್ತಪತ್ರಿಕೆಯಲ್ಲಿದ್ದಂತೆ,
"ಆ ಪಾಪಿ ಹೆಂಗಸು
ತಾನು ಬಸುರಾಗಿದ್ದೇನೆಂದು ತಿಳಿದ ಕೂಡಲೆ,
ತನ್ನ ಉನ್ಮಾದದ ಫಲದಿಂದ
ವಿಮುಕ್ತಿ ಹೊಂದುವ ನೀಚ
ನಿರ್ಧಾರವನ್ನು ಮಾಡಿದಳು".
ನಿಜ ಹೇಳಬೇಕೆಂದರೆ,
ನನ್ನ ಪತ್ನಿ ಏಳನೆಯ
ಸಾರಿ ಬಸುರಾದಾಗ, ನಾನೂ ಆಕೆ
ಒಮ್ಮತಕ್ಕೆ ಬಂದು ಅದೇ
ನಿರ್ಧಾರಕ್ಕೆ ಬಂದೆವು. ಚಳಿಗಾಲ
ಮುಗಿದು ಬೇಸಿಗೆ ಕಾಲಿಡುತ್ತದ್ದಂತೆಯೇ
ಆ ಮಗುವನ್ನು ಯಾವುದಾದರೂ ಚರ್ಚಿನಲ್ಲಿ ಬಿಟ್ಟು ಬರುವುದೆಂದು
ತೀರ್ಮಾನಿಸಿದೆವು. ಆ
ಚರ್ಚಿನವರು ಮಗುವನ್ನು ಯಾವುದಾದರೂ ಅನಾಥಾಶ್ರಮಕ್ಕೋ ಅಥವಾ ಮಕ್ಕಳಿಲ್ಲದ
ಯಾರಿಗಾದರೂ ಕೊಡಬಹುದೆಂದು ಊಹಿಸಿದೆವು.
ನನ್ನ ಪತ್ನಿ ಓರಗೆಯ
ಹೆಂಗಸರ ಸಹಾಯದಿಂದ ಆಸ್ಪತ್ರೆಗೆ ಹೋದಳು. ಕೆಲ
ದಿನಗಳಲ್ಲೇ ಒಂದು ಗಂಡುಮಗುವನ್ನು
ಹೆತ್ತು ಬಂದಳು. ಮಗು
ದಷ್ಟಪುಷ್ಟವಾಗಿದ್ದ. ಅವನ ಗಂಟಲೂ ಸಹ
ಅಷ್ಟೇ ಬಲಿಷ್ಠವಾಗಿತ್ತು. ರಾತ್ರಿ ಎಚ್ಚೆತ್ತು
ಕಿರುಚತೊಡಗಿದನೆಂದರೆ ಯಾರಿಗೂ ನಿದ್ರೆ ಮಾಡಗೊಡುತ್ತಿರಲಿಲ್ಲ.
ಚಳಿಗಾಲ ಮುಗಿಯಿತು. ಆರಂಭವಾದ ಬೇಸಿಗೆ
ಗಾಳಿಯನ್ನು ಬೆಚ್ಚಗೆ ಮಾಡತೊಡಗಿತ್ತು.
ಒಂದು ದಿನ ನಾನೂ
ನನ್ನ ಪತ್ನಿ ನಗರಕ್ಕೆ
ಹೊರಟೆವು. ನನ್ನ ಪತ್ನಿ
ಮಗುವನ್ನು ಎದೆಗವಚಿ ನಡೆದಳು.
ಆ ಮಗುವನ್ನು ಅದೆಷ್ಟು ಚೂರು
ಪಾರು ಬಟ್ಟೆಗಳಿಂದ ಹೊದಿಸಿದ್ದಳೆಂದರೆ, ಅದನ್ನು ನಾವು
ಹಿಮದ ನಡುವೆಯೂ ಧೈರ್ಯವಾಗಿ
ಬಿಟ್ಟು ಬರಬಹುದಿತ್ತು.
ನನ್ನ ಪತ್ನಿ ತನಗೆ
ಮಗುವನ್ನು ಬಿಟ್ಟುಬರುವುದು ಇಷ್ಟವಿಲ್ಲವೆಂಬುದನ್ನು ಮರೆಮಾಚಲೋ ಏನೋ, ನಗರಕ್ಕೆ
ಕಾಲಿಟ್ಟ ತಕ್ಷಣ ನಿರಂತರವಾಗಿ
ಮಾತನಾಡತೊಡಗಿದಳು. ತನ್ನ ಕೆದರಿದ
ಕೂದಲಿನೊಂದಿಗೆ, ಇಣುಕಿ ನೋಡುವ
ಕಣ್ಣುಗಳಿಂದ, ಮಗುವನ್ನು ಎದೆಗವಚಿ ಏದುಸಿರುಬಿಡುತ್ತಾ
ಮಾತನಾಡುತ್ತಿದ್ದಳು. ಒಂದು ಕ್ಷಣ ಸಾಹುಕಾರರು
ಹೋಗುವಂತಹ ಚರ್ಚುಗಳಲ್ಲಿ ಮಗುವನ್ನು ಬಿಡೋಣವೆಂದು ಹೇಳಿದರೆ, ಮತ್ತೊಂದು
ಕ್ಷಣ, `ಯಾರಾದರೂ ಬಡವರಿಗೆ
ಮಗು ಸಿಗುವ ಹಾಗಿದ್ದರೆ
ಯಾಕೆ ಬಿಡಬೇಕು, ನಾವೇ
ಇಟ್ಟುಕೊಳ್ಳೋಣ' ಎನ್ನುತ್ತಿದ್ದಳು. ತಕ್ಷಣವೇ, ಮಾತೆ
ಮೇರಿಯ ಚರ್ಚಿನಲ್ಲೇ ಮಗುವನ್ನು ಇಟ್ಟು ಬರೋಣವೆನ್ನುತ್ತಿದ್ದಳು.
ಏಕೆಂದರೆ, ಮಾತೆ ಮೇರಿಯೂ
ತಾಯಾಗಿದ್ದು ಆಕೆಗೂ ಒಬ್ಬ
ಮಗನಿದ್ದುದ್ದರಿಂದ ಆಕೆ ಕೆಲವು
ವಿಷಯಗಳನ್ನು ಅರ್ಥಮಾಡಿಕೊಂಡು ತನ್ನ ಮನದಿಚ್ಛೆಯನ್ನು
ಪೂರೈಸುವಳೆಂದು ಹೇಳುತ್ತಿದ್ದಳು. ಇವಳ ಬಡಬಡಿಸುವ
ಮಾತುಗಳಿಂದಾಗಿ ನನಗೆ ಬಳಲಿಕೆಯಾದಂತಾಯಿತು
ಹಾಗೂ ನನ್ನನ್ನು ಗೊಂದಲಕ್ಕೀಡುಮಾಡಿತು. ಏಕೆಂದರೆ ನಾನು
ಮಾಡುತ್ತಿರುವ ಕೆಲಸ ನನಗೂ
ಇಷ್ಟವಿಲ್ಲದಿದ್ದುದರಿಂದ ನಾನು ನೀಚನಂತೆ ನನಗನ್ನಿಸುತ್ತಿತ್ತು.
ಆದರೆ ನನಗೆ ನಾನೇ
ಧೈರ್ಯ ಹೇಳಿಕೊಂಡು ಅವಳಲ್ಲೂ ಧೈರ್ಯ
ತುಂಬಲು ಪ್ರಯತ್ನಿಸಿದೆ. ಅವಳ ನಿರಂತರ
ಮಾತಿನ ಪ್ರವಾಹವನ್ನು ತಡೆಯಲು ನಾನೇ
ಮಧ್ಯೆ ಮಾತನಾಡಿದೆ, "ನನಗನ್ನಿಸುತ್ತೆ........ ನಾವ್ಯಾಕೆ ಮಗುವನ್ನು ಸೇಂಟ್ ಪೀಟರ್ಸ್
ಚರ್ಚಿನಲ್ಲಿ ಬಿಡಬಾರದು?". ಮಾತು ನಿಲ್ಲಿಸಿದ ಆಕೆ ಒಂದರೆಕ್ಷಣ
ಯೋಚಿಸಿ, ಬೇಡ, ಅದು
ತುಂಬಾ ದೊಡ್ಡ ಚರ್ಚ್.
ಅಲ್ಲಿ ಯಾರೂ ಮಗುವನ್ನು
ಗಮನಿಸದೇ ಹೋಗಬಹುದು.............ಬದಲಿಗೆ ಚಿನಿವಾರರ ರಸ್ತೆಯಲ್ಲಿನ ಚರ್ಚಿನಲ್ಲಿ ಬಿಡೋಣ. ಅಲ್ಲಿ
ಸುಂದರ ಒಡವೆಗಳ ಅಂಗಡಿಗಳು
ಬಹಳಷ್ಟಿವೆ..........ಹಾಗೂ ಬಹಳಷ್ಟು ಸಿರಿವಂತ
ಜನ ಅಲ್ಲಿಗೆ ಬರುತ್ತಿರುತ್ತಾರೆ"
ಎಂದಳು.
ಅಲ್ಲಿಂದ ಬಸ್ ಹಿಡಿದು
ಹೊರಟೆವು. ಬಸ್ಸಿನಲ್ಲಿ ಆಕೆ ಮೌನವಾಗಿದ್ದಳು.
ಆಗಾಗ ಮಗುವಿನ ಕಂಬಳಿಯನ್ನು
ಸರಿಪಡಿಸುತ್ತಿದ್ದಳು ಹಾಗೂ ಎಚ್ಚರದಿಂದ ಮುಸುಕು ಸರಿಸಿ
ಮಗುವಿನ ಮುಖ ದಿಟ್ಟಿಸಿ
ನೋಡುತ್ತಿದ್ದಳು. ಮಗು ನಿದ್ರಿಸುತ್ತಿತ್ತು.
ಅವನ ಕಡುಗೆಂಪು ಮುಖ ಹೊದಿಕೆಯಲ್ಲಿ
ಆಳವಾಗಿ ಹುದುಗಿತ್ತು. ನಮ್ಮ ಬಟ್ಟೆಗಳಂತೆಯೇ
ಅವನ ಬಟ್ಟೆಗಳೂ ಹರಕಲಾಗಿದ್ದವು. ಆದರೆ ಅವನ
ಕೈಗವಸು ಮಾತ್ರ ಹೊಸದಾಗಿತ್ತು.
ಅದನ್ನು ತೋರಿಸಲೋ ಎಂಬಂತೆ
ಆಗಾಗ ಕೈಗಳನ್ನು ಮೇಲೆತ್ತುತ್ತಿದ್ದನು.
ಬಸ್ಸಿನಿಂದ ಇಳಿದಾಕ್ಷಣ ಮತ್ತೆ ಮಾತನಾಡಲು
ಆರಂಭಿಸಿದಳು. ಅಲ್ಲಿ ಒಂದು
ಚಿನ್ನದ ಆಭರಣಗಳ ಅಂಗಡಿಯ
ಮುಂದೆ ನಿಂತು, ಕಿಟಕಿಯ
ಗಾಜಿನ ಕಪಾಟಿನಲ್ಲಿ ತೂಗುಹಾಕಿದ್ದ ಒಡವೆಗಳನ್ನು ಬಿಟ್ಟಗಣ್ಣಿನಿಂದ ನೋಡುತ್ತ, "ಎಷ್ಟು
ಸುಂದರವಾಗಿವೆ............ಈ ರಸ್ತೆಗೆ ಬರುವ
ಜನ ಒಡವೆ ಅಥವಾ
ಇನ್ನಿತರ ಸುಂದರ ವಸ್ತುಗಳನ್ನು
ಕೊಳ್ಳಲು ಬರುತ್ತಾರೆ..........ಬಡವರ್ಯಾರೂ ಈ
ರಸ್ತೆಗೆ ಬರುವುದಿಲ್ಲ...........ಸಿರಿವಂತ ಜನ ವ್ಯಾಪಾರದ
ನಡುವೆ ಒಂದೆರೆಡುಕ್ಷಣ ಚರ್ಚಿಗೆ ಪ್ರಾರ್ಥಿಸಲು
ಹೋಗಬಹುದು.......ಆಗ ಅವರ
ಮನಸ್ಸು ಸಂತೋಷದಿಂದಿರುವಾಗ ನಮ್ಮ ಮಗುವನ್ನು
ನೋಡಿ, ಕೊಂಡೊಯ್ಯಬಹುದು........" ಎಂದು ಮಗುವನ್ನು ಎದೆಗವಚಿ ತನಗೆ
ತಾನೇ ಮಾತನಾಡಿಕೊಳ್ಳುವಂತೆ ಹೇಳಿಕೊಳ್ಳುತ್ತಿದ್ದಳು. ಅವಳಿಗೆ ನಾನು
ಎದುರು ಹೇಳುವ ಹಾಗಿರಲಿಲ್ಲ.
ನಾವು ಚರ್ಚಿನೊಳಕ್ಕೆ ಹೋದೆವು. ಚರ್ಚ್
ಸಣ್ಣದಾದರೂ ಒಳಭಾಗವೆಲ್ಲಾ ಅಮೃತಶಿಲೆಯಂತೆ ಕಾಣುವ ಹಾಗೆ
ಹಳದಿ ಬಣ್ಣ ಬಳಿಯಲಾಗಿತ್ತು.
ನನ್ನ ಪತ್ನಿಗೆ ಆ
ಚರ್ಚ್ ಬೇರೆ ರೀತಿಯಲ್ಲಿ
ಇತ್ತೆಂದು ಅವಳ ನೆನಪು
ಹೇಳುತ್ತಿತ್ತು. ಈಗಿನ ಅದರ
ಸ್ಥಿತಿ ಆಕೆಗೆ ಇಷ್ಟವಾಗಲಿಲ್ಲ.
ಆದರೂ ಮೂಲೆ ಮೂಲೆಯನ್ನು
ಅಸಂತೃಪ್ತಿಯಿಂದ, ಅಪನಂಬಿಕೆಯಿಂದ ಪರೀಕ್ಷಿಸತೊಡಗಿದಳು; ಮಗುವನ್ನು ಎಲ್ಲಿ ಬಿಟ್ಟರೆ
ಸೂಕ್ತ ಎಂದು ಆಲೋಚಿಸತೊಡಗಿದಳು.
ನಾನು ದೂರದಲ್ಲಿ ನಿಂತು ಅವಳನ್ನೇ
ಗಮನಿಸುತ್ತಿದ್ದೆ. ಆಗ ಇದ್ದಕ್ಕಿದ್ದಂತೆ
ಚರ್ಚಿನೊಳಗೆ ಒಬ್ಬ ಉದ್ದನೆ
ಯುವತಿಯೊಬ್ಬಳು ಬಂದಳು. ಅವಳ
ಕೂದಲು ಚಿನ್ನದಂತೆ ಹೊಳೆಯುತ್ತಿತ್ತು. ಮೊಣಕಾಲೂರಿ ಪ್ರಾರ್ಥಿಸತೊಡಗಿದಳು. ಅವಳ ಬಿಗಿಯಾದ
ಸ್ಕರ್ಟ್ ಬಿರಿಯುವಂತಾಗಿತ್ತು. ಆ
ಯುವತಿ ಒಂದು ನಿಮಿಷ
ಪ್ರಾರ್ಥಿಸಿ ಎದೆಯ ಮೇಲೆ
ಅಡ್ಡಗೆರೆ ಎಳೆದುಕೊಂಡು ನಮ್ಮ ಕಡೆ
ತಿರುಗಿಯೂ ನೋಡದೆ ಬಂದ
ಹಾಗೆ ಬಿರಬಿರನೆ ಹೊರಟು ಹೋದಳು.
ಆಕೆಯನ್ನೇ ಗಮನಿಸುತ್ತಿದ್ದ ನನ್ನ ಪತ್ನಿ,
"ಇಲ್ಲ.....ಈ
ಚರ್ಚ್ ಸರಿಯಿಲ್ಲ.........ಇಲ್ಲಿಗೆ ಬರುವವರೆಲ್ಲಾ ಆ
ಹೆಂಗಸಿನ ಹಾಗೆಯೇ ಇರುತ್ತಾರೆ..........ಅಂಗಡಿಗಳಿಗೆ ಏನಾದರೂ ಕೊಳ್ಳಲು
ವಾಪಸ್ಸು ಹೋಗಲು ಹಾತೊರೆಯುತ್ತಿರುತ್ತಾರೆ..........ಹೋಗೋಣ ಬಾ" ಎಂದು
ಹೇಳಿ ಚರ್ಚಿನಿಂದ ಹೊರಹೊರಟಳು.
ಅಲ್ಲಿಂದ ಏನೂ ಮಾತಾಡದೆ
ಹೊರಟೆವು. ನನ್ನ ಪತ್ನಿ
ಮುಂದೆ ಹೋಗುತ್ತಿದ್ದಳು, ನಾನು ಅವಳನ್ನು
ಹಿಂಬಾಲಿಸುತ್ತಿದ್ದೆ. ಮುಖ್ಯ ರಸ್ತೆಯಲ್ಲಿನ ಮತ್ತೊಂದು ಚರ್ಚ್ನ
ಒಳಹೊಕ್ಕೆವು. ಇದು ಮೊದಲನೆಯದಕ್ಕಿಂತ
ದೊಡ್ಡದಾಗಿತ್ತು, ಒಳಗೆಲ್ಲಾ ಕತ್ತಲು ಕತ್ತಲು......
ತೂಗು ದೀಪಗಳು ಮಂದ
ಬೆಳಕಿನೊಂದಿಗೆ ಮಿಣಮಿಣಗುಟ್ಟುತ್ತಿದ್ದವು. ಚರ್ಚಿನಲ್ಲಿ ಬಹಳ ಜನ
ಇದ್ದರು. ನಿಶ್ಯಬ್ದವಾಗಿ ಪಾದ್ರಿಯ ಪ್ರವಚನ
ಕೇಳುತ್ತಿದ್ದರು. ಎಲ್ಲರೂ ಪಾದ್ರಿಯನ್ನೇ
ನೋಡುತ್ತಿದ್ದರು. ನನಗೆ ಇದು
ಒಳ್ಳೆಯ ಅವಕಾಶವೆನಿಸಿತು. ನನ್ನ ಪತ್ನಿಯ
ಕಿವಿಯಲ್ಲಿ ಪಿಸುಗುಟ್ಟಿದೆ, "ಮಗುವನ್ನು ಇಲ್ಲೇ ಬಿಟ್ಟು
ಹೊರಡೋಣವಾ?" ಆಕೆ "ಹ್ಹೂಂ"
ಎಂದು ತಲೆದೂಗಿದಳು. ಇಬ್ಬರೂ ಚರ್ಚ್ನ ಕಂಬಗಳ ಪಕ್ಕದಲ್ಲಿ
ಹೆಚ್ಚು ಕತ್ತಲಿರುವೆಡೆಯಲ್ಲಿಗೆ ನಿಧಾನವಾಗಿ ಹೋದೆವು. ನನ್ನ
ಪತ್ನಿ ನಿದ್ರಿಸುತ್ತಿದ್ದ ಮಗುವಿನ ಮುಖ
ಕಾಣದಂತೆ ಹೊದಿಕೆ ಹೊದಿಸಿ
ಸದ್ದಿಲ್ಲದೆ ಭಾರವಾದ ಹೊರೆಯನ್ನಿಡುವಂತೆ
ಪಕ್ಕದ ಬೆಂಚಿನ ಮೇಲೆ
ನಿಧಾನವಾಗಿಟ್ಟಳು. ನಂತರ ಮೊಣಕಾಲೂರಿ
ಅಂಗೈಗಳಲ್ಲಿ ಮುಖ ಮುಚ್ಚಿ
ಪ್ರಾರ್ಥಿಸುತ್ತಾ ಕೂತಳು. ನನಗೇನೂ
ಮಾಡಲು ತೋಚದೆ ಗೋಡೆಗೆ
ಸಿಕ್ಕಿಸಿದ್ದ ನಕ್ಷತ್ರಗಳನ್ನು ಎಣಿಸುತ್ತಾ ನಿಂತೆ. ಕೊನೆಗೆ
ಪ್ರಾರ್ಥನೆ ಮುಗಿಸಿ ಎದ್ದು
ನಿಂತು ಎದೆಯ ಮೇಲೆ
ಅಡ್ಡಗೆರೆ ಎಳೆದುಕೊಂಡು ನಿಧಾನವಾಗಿ ನನ್ನನ್ನು ಹಿಂಬಾಲಿಸಿದಳು. ಅವಳ ಮುಖದಲ್ಲಿ
ದೃಢ ನಿಲುವಿತ್ತು. ಆಗ ಇದ್ದಕ್ಕಿದ್ದಂತೆ
ಪಾದ್ರಿ, "ಪೀಟರ್ ಎಲ್ಲಿಗೆ
ಹೋಗುತ್ತಿದ್ದೀಯಾ? ಎಂದು ಯೇಸು
ಪ್ರಭು ಕೇಳಿದರು" ಎಂದು
ಜೋರಾಗಿ ಕೂಗಿದರು. ನಾನು
ಬೆಚ್ಚಿ ಬಿದ್ದೆ, ಏಕೆಂದರೆ
ಆ ಪ್ರಶ್ನೆ ನನ್ನನ್ನೇ
ಕೇಳಿದ ಹಾಗಿತ್ತು. ಬಾಗಿಲ ಬಳಿ
ಪರದೆ ಎತ್ತಿ ಹೆಜ್ಜೆ
ಹೊರಗಿಡಬೇಕೆನ್ನುವಷ್ಟರಲ್ಲಿ
ಹಿಂದಿನಿಂದ ಒಂದು ಧ್ವನಿ
ನಾವು ಹೌಹಾರುವಂತೆ ಮಾಡಿತು: "ನೋಡಿ,
ನೀವು ಕುಳಿತಿದ್ದ ಬೆಂಚಿನ ಬಳಿ
ಬಟ್ಟೆಯ ಗಂಟೊಂದನ್ನು ಬಿಟ್ಟು ಬಂದಿದ್ದೀರ",
ಕಪ್ಪು ಬಟ್ಟೆ ಧರಿಸಿದ್ದ
ಚರ್ಚಿನ ಸಂನ್ಯಾಸಿನಿಯೊಬ್ಬಳು ನಮ್ಮ ಹಿಂದೆಯೇ
ಬಂದು ಹೇಳಿದಳು. "ಹೋ,
ಹೌದು. ಮರೆತೇಬಿಟ್ಟಿದ್ದೆ.........ಥ್ಯಾಂಕ್ಸ್" ಎಂದು ಹೇಳಿದ
ನನ್ನ ಪತ್ನಿ ಮಗುವಿದ್ದ
`ಗಂಟನ್ನು' ಹೋಗಿ ತಂದಳು.
ಚರ್ಚ್ ಬಿಟ್ಟು ಹೊರಬಂದಾಗ
ನಮ್ಮ ಕಾಲುಗಳು ಸೋತು
ನಿತ್ರಾಣವಾದಂತೆನ್ನಿಸುತ್ತಿತ್ತು.
ಸ್ವಲ್ಪ ದೂರ ನಡೆದ
ನಂತರ ನನ್ನ ಪತ್ನಿ
ಹೇಳಿದಳು, "ಈ
ನನ್ನ ಪುಟ್ಟ ಪಾಪು
ಯಾರಿಗೂ ಬೇಡವಾಗಿದ್ದಾನೆ". ಅವಳ ಧ್ವನಿಯಲ್ಲಿ
ವ್ಯಾಪಾರಿಯೊಬ್ಬ ಲಾಭ ಪಡೆಯಲು
ವಸ್ತುವೊಂದನ್ನು ಮಾರಲು ಮಾರುಕಟ್ಟೆಗೆ
ಬಂದು ಅದನ್ನು ಯಾರೂ
ಕೊಳ್ಳುವವರಿಲ್ಲದಿದ್ದಾಗ ಕಾಡುವ ಹತಾಷೆಯ ಭಾವನೆಯಿತ್ತು.
ತಕ್ಷಣ ಆಕೆ ಅಲ್ಲಿಂದ
ಓಡಿ ಸಂತೆಪೇಟೆಯ ಚರ್ಚಿನ ಬಳಿ
ಬಂದಳು. ಅವಳು ಎಷ್ಟು
ವೇಗವಾಗಿ ಬಂದಳೆಂದರೆ, ನಾನು ಅವಳ
ಹಿಂದೆ ಓಡಿಬರಬೇಕಾಯ್ತು. ಚರ್ಚ್ ವಿಶಾಲವಾಗಿತ್ತು.
ಒಳಗೆ ಯಾರೂ ಕಾಣಲಿಲ್ಲ.
"ಇದೆ ಸರಿಯಾದ ಸ್ಥಳ"
ಎಂದು ನನಗೆ ಪಿಸುಗುಟ್ಟಿದಳು.
ತಕ್ಷಣ ಒಳಗೆ ಹೋಗಿ
ಮಗುವನ್ನು ಬೆಂಚೊಂದರ ಮೇಲೆ ಮಲಗಿಸಿ,
ಯಾವುದೇ ಪ್ರಾರ್ಥನೆಯನ್ನೂ ಮಾಡದೆ, ಮಗುವಿನ
ಹಣೆ ಚುಂಬಿಸದೆ, ಕೆಂಡದ ಮೇಲೆ
ನಡೆಯುವಂತೆ ಬಿರಬಿರನೆ ಹೊರಬಂದಳು. ಎರಡು ಹೆಜ್ಜೆ
ಹೊರಗೆ ಇಟ್ಟಿರಬೇಕು, ಅಷ್ಟರಲ್ಲಿ ಇಡೀ ಚರ್ಚು
ಪ್ರತಿಧ್ವನಿಸುವಂತೆ ಮಗು ಕಿರುಚತೊಡಗಿತು. ಮಗುವಿಗೆ ಹಸಿವಾಗಿರಬೇಕು.
ಮರುಕ್ಷಣವೇ ನನ್ನ ಪತ್ನಿ
ಚರ್ಚಿನೊಳಗೆ ಬಿರುಗಾಳಿಯಂತೆ ನುಗ್ಗಿದಳು. ಓಡಿ ಮಗುವನ್ನೆತ್ತಿಕೊಂಡು
ಅಲ್ಲೇ ಬೆಂಚಿನ ಮೇಲೆ
ಕೂತು, ತನ್ನ ಕುಬುಸ
ಸಡಿಲಿಸಿ ಮೊಲೆಯೂಡಿಸತೊಡಗಿದಳು. ಮಗು ಹಸಿದ
ತೋಳದಂತೆ ಎರಡೂ ಕೈಲಿ
ಮೊಲೆ ಹಿಡಿದು ಚಪ್ಪರಿಸತೊಡಗಿದ.
ಅವನ ಅಳು ನಿಂತಿತ್ತು.
"ನೀನದನ್ನು ಇಲ್ಲಿ ಮಾಡುವ
ಹಾಗಿಲ್ಲ.........ಇದು ದೇವರ ಮನೆ........ಹೋಗಾಚೆ" ಎಂದು ಕರ್ಕಶವಾಗಿ
ಕೂಗುತ್ತಾ ಒಬ್ಬ ಪಾದ್ರಿ
ಅಲ್ಲಿಗೆ ಬಂದ. ನನ್ನ
ಪತ್ನಿ ಸ್ವಲ್ಪ ಎದ್ದು
ತನ್ನ ಹರಕಲು ಬಟ್ಟೆಯಿಂದಲೇ
ಮಗುವಿನ ಮುಖ ಹಾಗೂ
ಮೊಲೆ ಮುಚ್ಚಿಕೊಳ್ಳಲು ಪ್ರಯತ್ನಿಸುತ್ತ, "ಸ್ವಾಮಿ, ಮಾತೆ
ಮೇರಿಯೂ ತಾಯಲ್ಲವೇ. ಮಗುವನ್ನು ಸದಾ ಎತ್ತಿಕೊಂಡಿರುತ್ತಾಳೆ,
ಚಿತ್ರಗಳಲ್ಲಿ ನೀವೂ ನೋಡಿರಬಹುದಲ್ಲ"
ಎಂದಳು.
"ಏನು, ನಿನ್ನನ್ನು
ಮೇರಿ ಮಾತೆಗೆ ಹೋಲಿಸಿಕೊಳ್ಳುತ್ತೀಯ!
ದುರಹಂಕಾರದ ಹೆಂಗಸೆ! ಹೋಗಾಚೆ!"
ಎಂದು ಬಾಗಿಲ ಕಡೆಗೆ
ಕೈ ತೋರಿಸುತ್ತ ಅರಚಿದ. ನಾವು
ಹೊರಗೆ ಬಂದು ಚರ್ಚಿನ
ಆವರಣದ ಹುಲ್ಲಿನ ಮೇಲೆ
ಕೂತೆವು. ಮಗು ತೃಪ್ತಿಯಾಗುವಷ್ಟು
ಹಾಲು ಕುಡಿದು ಮತ್ತೆ
ನಿದ್ದೆ ಮಾಡಿತು.
ಸಂಜೆಯಾಗುತ್ತಿತ್ತು. ಎಲ್ಲಾ ಚರ್ಚುಗಳನ್ನು ಮುಚ್ಚುವ ಸಮಯವಾಗಿತ್ತು.
ನನಗಂತೂ ಏನೂ ತೋಚದೆ
ಗೊಂದಲದಲ್ಲಿದ್ದೆ. ನಾನು ಮಾಡಬಾರದ್ದನ್ನು
ಮಾಡುತ್ತಿದ್ದೇನೆನ್ನುವ ಪಾಪ ಪ್ರಜ್ಞೆ ಹತಾಶನನ್ನಾಗಿ
ಮಾಡಿತ್ತು. ಕೊನೆಗೆ ನನ್ನ
ಪತ್ನಿಗೆ ಹೇಳಿದೆ, "ನೋಡು
ಕತ್ತಲಾಗುತ್ತಿದೆ. ಇದೇ ರೀತಿ
ನಡೆಯಲು ನನ್ನಿಂದ ಸಾಧ್ಯವಿಲ್ಲ.
ನಾವು ಏನಾದರೂ ನಿರ್ಧಾರ
ಮಾಡಲೇಬೇಕು".
"ಆದರೆ......... ಇವನು ನಿನ್ನದೇ ರಕ್ತ.
ಯಾರಾದರೂ ಉಳಿದ ಆಹಾರ
ಬೆÉಕ್ಕು ನಾಯಿಗಳಿಗೆಸೆಯುವಂತೆ
ಇವನನ್ನು ಯಾವುದಾದರೂ ರಸ್ತೆಯ ಮೂಲೆಯಲ್ಲಿ
ಎಸೆಯಬೇಕೆನ್ನುತ್ತೀಯೇನು?", ಸಿಡುಕುತ್ತಾ ಕೇಳಿದಳು.
"ಇಲ್ಲ....ಹಾಗಲ್ಲ" ನಾನೆಂದೆ,
"ಕೆಲವೊಂದು ಕೆಲಸಗಳು ಹಾಗಿರುತ್ತವೆ.
ಮಾಡುವುದಿದ್ದಲ್ಲಿ ಯೋಚಿಸದೆ ತಕ್ಷಣ
ಮಾಡಿಬಿಡಬೇಕು. ಇಲ್ಲದಿದ್ದಲ್ಲಿ ಅದನ್ನು ಮಾಡಲಾಗುವುದೇ
ಇಲ್ಲ".
"ಸತ್ಯ ಹೇಳಲೆ? ನಿನಗೆ
ಹೆದರಿಕೆಯಿದೆ, ನಾನೆಲ್ಲಿ ಮನಸ್ಸು ಬದಲಾಯಿಸಿ
ಮಗುವನ್ನು ಮನೆಗೆ ವಾಪಸ್ಸು
ತರುತ್ತೇನೋ ಎಂದು.........ನೀವು
ಗಂಡಸರೆಲ್ಲಾ ಹೇಡಿಗಳು", ಎಂದಳು
ನನ್ನ ಪತ್ನಿ.
ಅವಳಿರುವ ಮನಸ್ಥಿತಿಯಲ್ಲಿ ಎದುರುತ್ತರ ಹೇಳುವುದು ಸರಿಯಲ್ಲವೆಂದೆನ್ನಿಸಿ, ನಿಧಾನವಾಗಿ ಹೇಳಿದೆ, "ಯೋಚಿಸಬೇಡ,
ನಿನ್ನ ಭಾವನೆಗಳು ನನಗೆ ಅರ್ಥವಾಗುತ್ತಿವೆ.........ಅವನು ಎಲ್ಲೇ ಬೆಳೆದರೂ,
ಅಡುಗೆ ಮನೆ, ಬಚ್ಚಲು
ಇಲ್ಲದಿರುವ ನಮ್ಮ ಹಂದಿಗೂಡಿನಂತಹ
ಮನೆಯಲ್ಲಿ, ಚಳಿಗಾಲದಲ್ಲಿ ತಿಗಣೆಗಳು, ಬೇಸಿಗೆಯಲ್ಲಿ ಸೊಳ್ಳೆ, ನೊಣಗಳ
ಕಾಟದಲ್ಲಿ ಬೆಳೆಯುವದಕ್ಕಿಂತ ಚೆನ್ನಾಗಿ ಬೆಳೆಯುತ್ತಾನೆ. ಅದು ನಮಗೆ
ನೆನಪಿರಬೇಕು". ಅವಳು ಏನೂ
ಉತ್ತರಿಸಲಿಲ್ಲ, ಸುಮ್ಮನಿದ್ದಳು.
ನಮಗರಿವಿಲ್ಲದೆ, ಯಾವ ದಿಕ್ಕಿನಲ್ಲಿ
ಹೋಗುತ್ತಿದ್ದೇವೆ ಎಂಬುದನ್ನೂ ಆಲೋಚಿಸದೆ ಮೌನವಾಗಿ ಹೆಜ್ಜೆ
ಹಾಕುತ್ತಿದ್ದೆವು. ಹಾಗೇ ಹೋಗುತ್ತಿದ್ದಾಗ,
ಪಕ್ಕದಲ್ಲಿನ ಅಡ್ಡರಸ್ತೆಯೊಂದು ಒಂದು ನರಪಿಳ್ಳೆಯೂ
ಇಲ್ಲದೆ ಭಣಭಣಗುಟ್ಟುತ್ತಿತ್ತು. ಅಲ್ಲಿ ಮನೆಯ
ಮುಂದೆ ಬೂದು ಬಣ್ಣದ
ಕಾರೊಂದು ನಿಂತಿತ್ತು. ತಕ್ಷಣ ಏನೋ
ಹೊಳೆದಂತನ್ನಿಸಿ ಆ
ಕಾರಿನ ಬಳಿ ಹೋಗಿ
ಬಾಗಿಲ ಹಿಡಿಯನ್ನು ಎಳೆದೆ. ಬಾಗಿಲು
ತೆರೆದುಕೊಂಡಿತು. ನನ್ನ ಪತ್ನಿಗೆ
ಪಿಸುಗುಟ್ಟಿದೆ, “ಬೇಗ, ಇದೇ
ಸದವಕಾಶ. ಹಿಂದಿನ ಸೀಟಿನಲ್ಲಿ
ಅವನನ್ನು ಮಲಗಿಸು". ತಕ್ಷಣವೇ
ಅವಳು ಮಲಗಿಸಿದಳು. ನಾನು ಸದ್ದಾಗದಂತೆ
ಬಾಗಿಲು ಮುಚ್ಚಿ ನನ್ನ
ಪತ್ನಿಯ ಕೈ ಹಿಡಿದು
ಬೇಗ ಬೇಗನೆ ಹತ್ತಿರದಲ್ಲಿದ್ದ
ನಗರದ ಚೌಕದ ಕಡೆಗೆ
ಹೊರಟೆ.
ಚೌಕವೂ ನಿರ್ಜನವಾಗಿತ್ತು. ಬೀದಿ ದೀಪಗಳು
ಆಗ ತಾನೆ ಹೊತ್ತಿಕೊಂಡಿದ್ದವು.
ನನ್ನ ಪತ್ನಿ ನನ್ನಿಂದ
ಕೈ ಬಿಡಿಸಿಕೊಂಡು ಚೌಕದ ಮಧ್ಯದಲ್ಲಿನ
ನೀರಿನ ಕಾರಂಜಿಯ ಕಟ್ಟೆಯ
ಮೆಲೆ ಕೂತು ಅಳತೊಡಗಿದಳು.
ನಾನು ಹತ್ತಿರಹೋದಾಗ ನನ್ನಿಂದ ಮುಖ
ತಿರುಗಿಸಿದಳು.
"ಏನಾಯಿತೀಗ?" ನಾನೆಂದೆ.
"ಅವನನ್ನು ಬಿಟ್ಟುಬಂದ
ಮೇಲೆ ಏನೋ ಕಳೆದುಕೊಂಡಂತಿದೆ.
ನನ್ನ ಎದೆಗವುಚಿ ಹಾಲು ಕುಡಿಯುತ್ತಿದ್ದ.
ನನ್ನೆದೆ, ನನ್ನ ಮಡಿಲೆಲ್ಲಾ
ಖಾಲಿ ಖಾಲಿಯೆನ್ನಿಸುತ್ತಿದೆ" ಅಳುತ್ತಲೇ ಹೇಳಿದಳು.
"ಹೌದು.........ಸ್ವಲ್ಪ
ದಿನ ಎಲ್ಲಾ ಸರಿಹೋಗುತ್ತದೆ".
ಅವಳ ಭುಜದ ಮೇಲೆ
ಕೈ ಇಡುತ್ತಾ ಹೇಳಿದೆ.
ಭುಜ ಕೊಸರಿದಳು. ಇದ್ದಕ್ಕಿದ್ದಂತೆ ಅವಳ ಕಣ್ಣೀರು
ನಿಂತಿತು. ತಕ್ಷಣ ಎದ್ದು
ಅಲ್ಲೇ ಇದ್ದ ಅರಮನೆಯ
ದಿಕ್ಕಿಗೆ ಕೈ ತೋರಿಸುತ್ತಾ,
"ನಾನಲ್ಲಿ ಹೋಗುತ್ತೇನೆ; ರಾಜನನ್ನೇ ಕೇಳುತ್ತೇನೆ ಇದು ನ್ಯಾಯವಾ
ಎಂದು" ಎನ್ನುತ್ತಾ ಅರಮನೆಯ ದಿಕ್ಕಿಗೆ
ಓಡತೊಡಗಿದಳು. ನಾನು ತಕ್ಷಣ
ಅವಳ ಕೆ ಹಿಡಿದು
ನಿಲ್ಲಿಸಿ, "ನಿನಗೇನು ತಲೆ
ಕೆಟ್ಟಿದೆಯಾ? ರಾಜರೆಲ್ಲಿದ್ದಾರೆ ಈಗ? ರಾಜ
ರಾಣಿಯರ ಕಾಲ ಮುಗಿದು
ಎಷ್ಟೋ ವರ್ಷಗಳಾಗಿದೆ" ಎಂದು ಹೇಳಿದೆ.
"ಆದರೇನಂತೆ. ಅರಮನೆಯಲ್ಲಿ ಯಾರಿದ್ದಾರೋ ಅವರನ್ನೇ ಕೇಳುತ್ತೇನೆ"
ಎನ್ನುತ್ತಾ ಕೈ ಜಗ್ಗಿದಳು.
ಕೈ ಬಿಡಿಸಿಕೊಂಡು ಮತ್ತೆ ಓಡಿದಳು.
ಹಾಗೇ ಬಿಟ್ಟಿದ್ದರೆ ಅರಮನೆಗೆ ನುಗ್ಗಿ
ಏನು ರಾದ್ಧಾಂತ ಮಾಡುತ್ತಿದ್ದಳೋ! ನಾನು ತಕ್ಷಣ
ಹೇಳಿದೆ, "ನೋಡಿಲ್ಲಿ, ನನಗೂ ಅನ್ನಿಸುತ್ತಿದೆ...........
ಆ ಕಾರಿಗೆ ವಾಪಸ್ಸು
ಹೋಗಿ ನಮ್ಮ ಮಗುವನ್ನು
ತೆಗೆದುಕೊಳ್ಳೋಣ......... ನಮ್ಮ ಮಗು ನಮಗೇ
ಇರಲಿ........... ಆರಿರುವಾಗ ಏಳನೆಯದೇನು ಭಾರವೆ?"
ಓಡುತ್ತಿದ್ದವಳು ತಟ್ಟನೆ ನಿಂತಳು.
ಮುಖ ಅರಳಿ ಹೂವಾಗಿತ್ತು.
"ಕಾರಿನ್ನೂ ಅಲ್ಲೇ ಇದೆಯಾ?"
ಎನ್ನುತ್ತ ಕಾರಿನ ದಿಕ್ಕಿಗೆ
ಓಡಿದಳು.
ಕಾರು ಅಲ್ಲೇ
ನಿಂತಿತ್ತು. ನನ್ನ ಪತ್ನಿ
ಕಾರಿನ ಬಾಗಿಲು ತೆಗೆಯಬೆÉೀಕೆನ್ನುವಷ್ಟರಲ್ಲಿ ಸೂಟುಬೂಟು ತೊಟ್ಟಿದ್ದ ಒಬ್ಬ ಮಧ್ಯವಯಸ್ಕ
ಮನೆಯಿಂದ ಹೊರಬಂದ. ನನ್ನ
ಪತ್ನಿಯನ್ನು ನೋಡಿದ ಕೂಡಲೆ,
"ಯಾರದು? ನನ್ನ ಕಾರಿಗೆ
ಏನು ಮಾಡುತ್ತಿದ್ದೀಯ?" ಎಂದು ಕೂಗಿದ.
ಆತನನ್ನು ಲೆಕ್ಕಿಸದೆ
ನನ್ನ ಪತ್ನಿ ಕಾರಿನ
ಬಾಗಿಲು ತೆಗೆದು, "ನನ್ನ
ಮಗು..... ನನಗೇ ಬೇಕು"
ಎನ್ನುತ್ತ ಮಗುವನ್ನು ಎತ್ತಿಕೊಂಡಳು.
ಆತನಿಗೆ ಗಾಭರಿಯಾಯ್ತು.
"ಹೇ, ಏನದು? ಏನು
ತೆಗೆದುಕೊಳ್ಳುತ್ತಿದ್ದೀಯ?
ನನ್ನ ಕಾರದು" ಎಂದು
ಮತ್ತೊಮ್ಮೆ ಕೂಗಿದ.
ಆಗ ನನ್ನ
ಪತ್ನಿಯನ್ನು ನೋಡಬೇಕಿತ್ತು! ಸೆಟೆದು ನಿಂತು
ನೇರ ಆತನ ಬಳಿ
ಹೋದಳು. "ನಿನ್ನದೇನು ತೆಗೆದುಕೊಂಡಿದ್ದೇನೆ? ಯೋಚಿಸಬೇಡ, ನಿನ್ನದ್ಯಾವುದನ್ನೂ ನಾನು ಮುಟ್ಟಿಲ್ಲ............
ನಿನ್ನ ಕಾರು ಯಾರಿಗೆ
ಬೇಕು! ಥೂ!" ಎಂದು
ಕಾರಿನ ಮೇಲೆ ಉಗುಳಿದಳು.
ಆತನಿಗೆ ಗಾಭರಿ,
ದಿಗ್ಭ್ರಮೆ ಎರಡೂ ಆಗಿತ್ತು.
"ಅದೇನದು ನಿನ್ನ ಕೈಯ್ಯಲ್ಲಿರುವುದು?"
ಎಂದ.
"ಅದು ನನ್ನ
ಮಗು........ ಬೇಕಿದ್ದರೆ ನೋಡು!" ಎಂದಳು.
ಮಗುವಿನ ಮುಖದ ಮೇಲಿನ
ಹೊದಿಕೆ ಸರಿಸಿ ತೋರಿಸಿದಳು.
"ನೀನೂ ನಿನ್ನ ಹೆಂಡತಿ
ಎಷ್ಟು ಕಷ್ಟಪಟ್ಟರೂ ನಿಮಗೆ ಇಂಥ
ಮಗು ಹುಟ್ಟಲಾರದು......ಈ
ಜನ್ಮವೇನು, ಎಷ್ಟು ಜನ್ಮ
ತಳೆದರೂ ನಿಮ್ಮಿಂದ ಸಾಧ್ಯವಿಲ್ಲ............ಮತ್ತೊಮ್ಮೆ ನೀನು ಕೂಗಿದರೆ
ನೀನು ನನ್ನ ಮಗುವಿನ
ಕಳ್ಳನೆಂದು ಕಿರುಚಿ ಪೋಲಿಸಿಗೆ
ದೂರು ಕೊಡುತ್ತೇನೆ" ಎಂದು ದಬಾಯಿಸಿದಳು.
ಆ
ಬಡಪಾಯಿಗೆ ಏನೊಂದೂ ಅರ್ಥವಾಗದೆ
ಹೆದರಿ ಕಂಗಾಲಾಗಿ ಕೆಂಪಗಾಗಿದ್ದ. ಬಿಟ್ಟ ಬಾಯಿ
ಬಿಟ್ಟಂತೆ, ಆಕೆ ನನ್ನೆಡೆಗೆ
ಬರುವುದನ್ನೇ ನೋಡುತ್ತಿದ್ದ.
j.balakrishna@gmail.com
j.balakrishna@gmail.com
1 ಕಾಮೆಂಟ್:
ಬಡತನದ ಬದುಕಿನ ತಾಕಲಾಟ, ತಾಯಿ ಮಗುವಿನ ಸಂಬಂಧ ಅದ್ಭುತ ಸಾಲುಗಳು
ಕಾಮೆಂಟ್ ಪೋಸ್ಟ್ ಮಾಡಿ