Friday, July 24, 2020

ಮಾತಾ ಹರಿಯ ಕೊನೆಯ ದಿನಗಳು
ನ್ಯಾಯಾಧೀಶ: ದಯವಿಟ್ಟು ನಿಮ್ಮ ಹೆಸರು ಹೇಳಿ.
ಮಾತಾ ಹರಿ: ಮಾತಾ ಹರಿ, ಸರ್.
ನ್ಯಾ: ಅದು ನಿನ್ನ ನಿಜವಾದ ಹೆಸರೆ?
ಮಾ.ಹ.: ಅಲ್ಲ, ನನ್ನ ಹುಟ್ಟು ಹೆಸರು ಮಾರ್ಗರೆಟ್ ಜೆಟ್ರ್ರೂಡ್ ಝೆಲ್ಲೆ.
ನ್ಯಾ: ನಿಮ್ಮ ಹೆಸರು ಏಕೆ ಬದಲಿಸಿಕೊಂಡಿರಿ? ನಿಮ್ಮ ಬೇಹುಗಾರಿಕೆಗೆ ಅನುಕೂಲವಾಗುತ್ತದೆಂದೆ?
ಮಾ.ಹ.: ಖಂಡಿತಾ ಇಲ್ಲ, ಮಾತಾ ಹರಿ ನನ್ನ ನೃತ್ಯ ನಾಮ. 1903ರಿಂದ 1906ರವರೆಗೆ ಹಲವಾರು ಯೂರೋಪಿಯನ್ ನಗರಗಳಲ್ಲಿ ನಾನು ಜಾವಾದ ಕಾಮೋದ್ರೇಕ ದೇಗುಲ ನೃತ್ಯಗಳನ್ನು ಪ್ರದರ್ಶಿಸುತ್ತಿದ್ದೆ.
ನ್ಯಾ: ಹಾ! ಹೌದು, ನನಗೆ ನೆನಪಿದೆ..... ಮಾತಾ ಹರಿ..... ಅದರಲ್ಲಿ ನೀನು ಬಹಳ ಯಶಸ್ವಿಯಾಗಿದ್ದೆಯಲ್ಲವೆ?
ಮಾ.ಹ: ಹೌದು, ಸರ್.
ನ್ಯಾ: ನಮ್ಮ ದೇಶದಲ್ಲಿ ನೀನು ಜರ್ಮನ್ನರಿಗೇಕೆ ಬೇಹುಗಾರಿಕೆ ಮಾಡಲು ನಿರ್ಧರಿಸಿದೆ?
ಮಾ.ಹ: ಸುಳ್ಳು! ನಾನೆಂದಿಗೂ ಬೇಹುಗಾರಿಕೆ ಮಾಡಿಲ್ಲ.
ನ್ಯಾ: ಮಿಸಸ್ ಝೆಲ್ಲೆ, 1916ರಿಂದ 1917ರವರೆಗೆ ನೀವು ಬೇಹುಗಾರಿಕೆ ಮಾಡಿರುವ ಆರೋಪದ ಮೇಲೆ ಇಲ್ಲಿ ನಿಮ್ಮನ್ನು ನಿಲ್ಲಿಸಲಾಗಿದೆ. ಹಾಗಾಗಿ ದಯವಿಟ್ಟು ಇಲ್ಲವೆನ್ನಬೇಡಿ. 1916ರಲ್ಲಿ ಒಂದು ವಿಮಾನನಿಲ್ದಾಣದ ಬಳಿಯ ಆಸ್ಪತ್ರೆಯ ಬಳಿ ಕೆಲ ಕಾಲ ಕಳೆದರಲ್ಲವೆ?
ಮಾ.ಹ: ಹೌದು, ನನ್ನ ಗೆಳೆಯನೊಬ್ಬ ಆಸ್ಪತ್ರೆಯಲ್ಲಿದ್ದ. ಅವನ ಶುಶ್ರೂಶೆಗೆ ಅಲ್ಲಿಗೆ ಹೋಗಿದ್ದೆ.
ನ್ಯಾ: ಅಲ್ಲದೆ, ವಿಮಾನಗಳು ಆ ನಿಲ್ದಾಣದಿಂದ ಜರ್ಮನ್ ಕಾರ್ಖಾನೆಗಳ ಮೇಲೆ ಬಾಂಬ್ ದಾಳಿ ಮಾಡಲು ಹೋಗುತ್ತಿದ್ದವು. ಅವುಗಳ ಬಗ್ಗೆಯೂ ನೀವು ಜರ್ಮನ್ನರಿಗೆ ತಿಳಿಸಿದರಲ್ಲವೆ?
ಮಾ.ಹ: ಇಲ್ಲ, ನಾನು ನನ್ನ ಗೆಳೆಯನಿಗೆ ಸಹಾಯಮಾಡಲಷ್ಟೇ ಹೋಗಿದ್ದೆ. ಇತರ ವಿಷಯಗಳಲ್ಲಿ ನನಗೆ ಆಸಕ್ತಿಯಿಲ್ಲ.
ನ್ಯಾ: ನೀನು ಜರ್ಮನ್ನರಿಂದ ನಿಯತವಾಗಿ ಪಡೆಯುತ್ತಿದ್ದ ಹಣದ ವಿಷಯ?
ಮಾ.ಹ: ನಾನು ಕೆಲವು ಜರ್ಮನ್ ಅಧಿಕಾರಿಗಳ ನಲ್ಲೆಯಾಗಿದ್ದೆ. ಹಾಗಾಗಿ ಅವರು ನನ್ನ ಲೈಂಗಿಕ ಸೇವೆಗಾಗಿ ಅವರು ಹಣ ಕಳುಹಿಸುತ್ತಿದ್ದರು.
ನ್ಯಾ: ಅಂದರೆ ವೇಶ್ಯೆಯಾಗಿ! ಗುಪ್ತ ಮಾಹಿತಿ ಪಡೆಯಲು ಅದು ಸುಲಭದ ದಾರಿ ಅಲ್ಲವೆ? ಅದೇ ರೀತಿ ಫ್ರೆಂಚ್ ಅಧಿಕಾರಿಗಳನ್ನೂ ಬಲೆಗೆ ಹಾಕಿಕೊಂಡಿದ್ದೆಯಾ?
ಮಾ.ಹ: ಹೌದು, ಏಕೆಂದರೆ ನನಗೆ ಸಮವಸ್ತ್ರದ ಅಧಿಕಾರಿಗಳೆಂದರೆ ಇಷ್ಟ, ಅವರು ಯಾವ ದೇಶದವರೆನ್ನುವುದು ನನಗೆ ಮುಖ್ಯವಲ್ಲ. ನನಗೆ ಅವರೊಂದಿಗೆ ಮೋಜಿನ ಸಮಯ ಕಳೆಯಬೇಕಿತ್ತು. ಅದಕ್ಕಿಂತ ಹೆಚ್ಚಿನದೇನೂ ಇಲ್ಲ, ಅವರೆಲ್ಲ ನನಗೆ ಯಾವುದೇ ರಹಸ್ಯ ಮಾಹಿತಿ ನೀಡಿಲ್ಲ ಸರ್.
ನ್ಯಾ: ಕೊನೆಯದಾಗಿ, ಬೆಲ್ಜಿಯಂನಲ್ಲಿ ಜರ್ಮನ್ನರಿಗೆ ಸಿಕ್ಕಿಹಾಕಿಕೊಂಡ ಫ್ರೆಂಚ್ ಏಜೆಂಟ್‍ನ ಬಗ್ಗೆ ನಿನ್ನ ವಿವರಣೆ ಏನು? ಅದು ನೀನು ಈ ದೇಶಕ್ಕೆ ಬಂದ ಕೆಲಸಮಯದ ನಂತರ ನಡೆಯಿತು. ನಂತರ ನೀನು ಯಾರಿಗೂ ತಿಳಿಯದಂತೆ ಬೆಲ್ಜಿಯಂನಿಂದ ಸ್ಪೇನಿಗೆ ಹೋದೆ. ಅದು ಸಂಶಯಾಸ್ಪದವೆಂದು ನೀನು ಒಪ್ಪಿಕೊಳ್ಳಲೇಬೇಕು.
ಮಾ.ಹ: ಇಲ್ಲ ಸರ್, ನಾನು ಬೆಲ್ಜಿಯಂನಿಂದ ಹೋಗಬಯಸಿದ್ದೆ. ಅದಕ್ಕಾಗಿ ನಾನು ಅಲ್ಲಿಂದ ಹೋದೆ. ಬೇರೆ ನನಗೇನೂ ತಿಳಿದಿಲ್ಲ. ನಾನು ನಿರಪರಾಧಿ.
ನ್ಯಾ: ವಂದನೆಗಳು, ಅಷ್ಟು ಸಾಕು.

            ಅಷ್ಟೆ ಮಾತಾ ಹರಿ ಅಲಿಯಾಸ್ ಮಾರ್ಗರೆಟ್ ಜೆಟ್ರ್ರೂಡ್ ಝೆಲ್ಲೆಯ ವಿಚಾರಣೆ ನಡೆದದ್ದು. ಖಾಸಗಿ ಕೋಣೆಯಲ್ಲಿ ಹತ್ತು ನಿಮಿಷ ವಿಚಾರ ವಿನಿಮಯ ಮಾಡಿಕೊಂಡ ನ್ಯಾಯಾಧೀಶರು ನಂತರ ಹೊರಬಂದು ಮಾತಾ ಹರಿಗೆ ಈ ಮೊದಲೇ ನಿರ್ಧರಿಸಿದ್ದಂತೆ ಬೇಹುಗಾರಿಕೆಯಲ್ಲಿ ತೊಡಗಿದ್ದ ಯಾರಿಗೇ ಕೊಡುವ ಶಿಕ್ಷೆಯನ್ನೇ ಆಕೆಗೆ ವಿಧಿಸಿದರು- ಮರಣ ದಂಡನೆ. ಅಲ್ಲದೆ ಆಕೆ ನ್ಯಾಯಾಲಯದ ವೆಚ್ಚವನ್ನೂ ಕಟ್ಟಿಕೊಡಬೇಕೆಂದು ಹೇಳಿದರು. 

    ಅದನ್ನು ಕೇಳಿದ ಮಾತಾ ಹರಿ ಗರಬಡಿದವಳಂತೆ ನಿಂತಳು. ಅವಳಿಗೆ ಏನು ಹೇಳಲೂ ತೋಚಲಿಲ್ಲ. ಕಲ್ಲಾದವಳಂತೆ ಶೂನ್ಯದತ್ತ ನೋಟ ನೆಟ್ಟಿದ್ದಳು. ಆಕೆಯ ಪಕ್ಕದಲ್ಲಿದ್ದ ಆಕೆಯ ವಕೀಲ ಎಡ್ವರ್ಡ್ ಕ್ಲೂನೆಟ್ ಕಣ್ಣೀರು ಹಾಕುತ್ತಿದ್ದ.

    ಫ್ರಾನ್ಸಿನಲ್ಲಿ ಆಗ ಮರಣದಂಡನೆಯ ಶಿಕ್ಷೆಗೊಳಗಾದವರನ್ನು ಕೂಡಲೇ ಕೊಲ್ಲುತ್ತಿರಲಿಲ್ಲ. ಖೈದಿಗಳಿಗೆ ಆ ದಿನ ಯಾವುದೆಂದು ತಿಳಿಸುವುದೇ ಇಲ್ಲ, ಏಕೆಂದರೆ ಖೈದಿಗೆ ತನ್ನ ಸಾವಿನ ದಿನ ತಿಳಿಸುವುದು ಅಮಾನವೀಯವಾದುದು ಎಂದು ಅವರು ನಂಬಿದ್ದರು. ಎಂದು ಬೆಳಗಿನ ಜಾವ ಬಂದು ಮಲಗಿದ್ದ ಖೈದಿಯನ್ನು ಎಬ್ಬಿಸಿ ಸಿದ್ಧವಾಗಲು ತಿಳಿಸುತ್ತಾರೋ ಅಂದೇ ಆ ಖೈದಿಯ ಕೊನೆಯ ದಿನ. ಅಲ್ಲದೆ ಆದಿನ ಖೈದಿಯನ್ನು ನಿದ್ದೆಯಿಂದ ಎಬ್ಬಿಸಲು ಬರುವಾಗ ಆದಷ್ಟು ಜೋರಾಗಿ ಮಾತನಾಡುತ್ತ, ಗಲಾಟೆ ಮಾಡುತ್ತಾ ಬರಬೇಕು. ನಿದ್ದೆಯಲ್ಲಿದ್ದ ಖೈದಿಗೆ ಎಚ್ಚರವಾಗಿ ತನ್ನ ಸಾವು ಆ ದಿನವೇ ಇರುವುದು ಅಧಿಕಾರಿಗಳು ಹೇಳುವ ಮೊದಲೇ ತಿಳಿದುಬಿಡಬೇಕು. ಇದರಿಂದ ಅಧಿಕಾರಿಗಳಿಗೆ ಖೈದಿಗೆ ಸಿದ್ಧವಾಗುವಂತೆ ತಿಳಿಸುವುದು ಸುಲಭವಾಗುತ್ತದೆ. ಮಾತಾ ಹರಿಗೆ ಅತ್ಯಂತ ಯಾತನೆಯ ದಿನಗಳವು. ಸಾವು ಖಾತ್ರಿಯಾಗಿದೆ, ಆದರೆ ಅದಕ್ಕಾಗಿ ಕಾಯುವುದು ಅತ್ಯಂತ ಘೋರ ಹಿಂಸೆ. ಪ್ರತಿ ರಾತ್ರಿ ಮಲಗುವಾಗಲೂ ಎಂಥದೋ ಆತಂಕ, ಹೆದರಿಕೆ. ನಾಳೆಯ ದಿನ ಕೊನೆಯ ದಿನವಾಗಿರಬಹುದೇ? ಹಿಂಸೆಯಿಂದ ಆಕೆಗೆ ನಿದ್ದೆಯೇ ಬರುತ್ತಿರಲಿಲ್ಲ. ಬಂಧೀಖಾನೆಯ ವೈದ್ಯರನ್ನು ಕೇಳಿ ನಿದ್ದೆ ಮಾತ್ರೆಗಳನ್ನು ನುಂಗುತ್ತಿದ್ದಳು. ಶನಿವಾರ ರಾತ್ರಿ ಮಲಗುವಾಗ ಮಾತ್ರ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಳು. ಏಕೆಂದರೆ ಫ್ರಾನ್ಸ್‍ನಲ್ಲಿ ಭಾನುವಾರ ರಜೆ, ಯಾವುದೇ ಖೈದಿಗಳನ್ನು ಕೊಲ್ಲುವುದಿಲ್ಲ. ಬಂಧೀಖಾನೆಯ ಪಿಷ್ಟದ ಆಹಾರ ತಿಂದು ಯಾವುದೇ ದೈಹಿಕ ಚಟುವಟಿಕೆಗಳಿಲ್ಲದೆ ಮಾತಾ ಹರಿ ದಪ್ಪವಾಗಿದ್ದಳು. ಆಕೆಯ ಕೊನೆಯ ದಿನದ ಫೋಟೋಗಳಲ್ಲಿ ಆಕೆ ದಪ್ಪವಾಗಿ ದುಃಖದಿಂದಿರುವುದು ಕಾಣುತ್ತದೆ.

    ತಾನು ಬಸುರಿಯೆಂದು ಹೇಳಿ ಮರಣದಂಡನೆಯನ್ನು ತಡೆಯಲು ಕೋರುವಂತೆ ಆಕೆಯ ವಕೀಲ ತಿಳಿಸಿದ. ಆಕೆ ಅದಕ್ಕೆ ಒಪ್ಪಲಿಲ್ಲ. ಕೊನೆಯ ಪ್ರಯತ್ನವಾಗಿ ತಾನು ನಿರ್ದೋಷಿಯೆಂದೂ ತನ್ನ ಮೇಲೆ ದಯೆತೋರಬೇಕೆಂದು ಕೋರಿ ಫ್ರೆಂಚ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದಳು.

    ಆದಿನ 1917ರ ಅಕ್ಟೋಬರ್ 15, ಸೋಮವಾರ. ಆಕೆಯನ್ನು ಕರೆದುಕೊಂಡು ಬರುವ ಕಾರ್ಯವನ್ನು ಕ್ಯಾಪ್ಟನ್ ಬೋಶಾರ್ಡನ್‍ಗೆ ವಹಿಸಲಾಗಿತ್ತು. ನಿದ್ರೆ ಔಷಧಿಯ ಪ್ರಭಾವದಿಂದ ಮಾತಾ ಹರಿ ಗಾಢ ನಿದ್ರೆಯಲ್ಲಿದ್ದಳು. ಅಧಿಕಾರಿಗಳು, ಕ್ರೈಸ್ತ ಸಂನ್ಯಾಸಿನಿಯರು ಜೋರಾಗಿ ಮಾತನಾಡುತ್ತ, ಬೂಟುಗಾಲುಗಳ ಸಪ್ಪಳ ಮಾಡುತ್ತಾ ಬಂದರೂ ಆಕೆಗೆ ಎಚ್ಚರವಾಗಿರಲಿಲ್ಲ. ಇನ್ನೂ ನಿದ್ದೆಯ ಮಂಪರಿನಲ್ಲೇ ಇದ್ದ ಮಾತಾ ಹರಿಗೆ ಕ್ಯಾಪ್ಟನ್ ಬೋಶಾರ್ಡನ್, `ಧೈರ್ಯ ತಂದುಕೊ. ನಿನ್ನ ದಯಾಕೋರಿಕೆ ಅರ್ಜಿಯನ್ನು ಫ್ರೆಂಚ್ ಅಧ್ಯಕ್ಷರು ತಿರಸ್ಕರಿಸಿದ್ದಾರೆ. ಈ ದಿನವೇ ನೀನು ಸಿದ್ಧವಾಗಿ ಹೊರಡಬೇಕು’ ಎಂದು ದೃಢವಾಗಿ ಹೇಳಿದ.

    ನಿದ್ದೆಯ ಮಂಪರಿನಲ್ಲಿದ್ದ ಮಾತಾ ಹರಿ ತಕ್ಷಣ ಬೆಚ್ಚಿ ಬೆವರಿದಳು. `ಇಲ್ಲ, ಸಾಧ್ಯವೇ ಇಲ್ಲ!’ ಎಂದು ಚೀರಿದಳು. ಕ್ರೈಸ್ತ ಸಂನ್ಯಾಸಿನಿಯರು ಮುಂದೆ ಬಂದು ಆಕೆಯನ್ನು ಸಂತೈಸಿದರು. ಅಷ್ಟರಲ್ಲಿ ವಾಸ್ತವತೆಗೆ ಬಂದಿದ್ದ ಮಾತಾ ಹರಿ ಕಳೆದ ಮೂರು ತಿಂಗಳುಗಳಲ್ಲಿ ಸಾವಿಗೆ ಮಾನಸಿಕವಾಗಿ ಸಿದ್ಧವಾಗುವ ತಯಾರಿ ನಡೆಸಿದ್ದಳು. ಸಾವರಿಸಿಕೊಂಡು, `ಹೆದರಿಕೋ ಬೇಡಿ ಸಿಸ್ಟರ್, ನನಗೆ ಗೊತ್ತು ಹೇಗೆ ಸಾಯಬೇಕೆಂದು’ ಎಂದು ಅವರಿಗೇ ಹೇಳಿದಳು. ತನ್ನಲ್ಲಿದ್ದ ಅತ್ಯುತ್ತಮ ಬಟ್ಟೆ ಧರಿಸಿದಳು, ಅತ್ಯುತ್ತಮ ಬೂಟು ಧರಿಸಿದಳು, ತಲೆಗೆ ಸ್ಕಾರ್ಫ್ ಕಟ್ಟಿಕೊಂಡಳು, ಕೈಗವಸು ತೊಟ್ಟಳು. ತಲೆಯೆತ್ತಿ ಸಾವಿನ ಮೆರವಣಿಗೆಯಲ್ಲಿ ಹೊರಟಳು.

    ಇಡೀ ಊರೆಲ್ಲಾ ನಿದ್ರಿಸುತ್ತಿತ್ತು. ಆಕೆಯನ್ನು ಕಾರಿನಲ್ಲಿ ಮಸುಕು ಕತ್ತಲಿನಲ್ಲಿ ಊರಾಚೆಯ ಚೇಟೋ ವಿನ್ಸೆನ್ಸ್‍ಗೆ ಕರೆದೊಯ್ಯಲಾಯಿತು. ಅಲ್ಲಿ ಫೈರಿಂಗ್ ಸ್ಕ್ವಾಡ್ ಸಿದ್ಧವಾಗಿತ್ತು. ಹನ್ನೆರಡು ಜನ ಬಂದೂಕುಧಾರಿಗಳು ಮರದ ಬೊಡ್ಡೆಯೊಂದಕ್ಕೆ ಮುಖ ಮಾಡಿ ನಿಂತಿದ್ದರು. ಮಾತಾ ಹರಿ ಆ ಮರದ ಬೊಡ್ಡೆಯವರೆಗೆ ಧೈರ್ಯವಾಗಿಯೇ ನಡೆದು ಹೋದಳು. ಸಂಪ್ರದಾಯದಂತೆ ಸ್ವಲ್ಪ ರಮ್ ಕೊಟ್ಟಾಗ ಅದನ್ನು ಕುಡಿದಳು. ಸಾಯಲು ಬಂದವರಿಗೆ ಹೆದರಿಕೆಯಿಂದ ನಿಲ್ಲಲೇ ಸಾಧ್ಯವಾಗುವುದಿಲ್ಲ. ಹಾಗಾಗಿ ಅಂಥವರನ್ನು ಮರಕ್ಕೆ ಕಟ್ಟಿಬಿಡುತ್ತಾರೆ. ಮಾತಾ ಹರಿಯನ್ನು ಮರಕ್ಕೆ ಕಟ್ಟುತ್ತೇವೆಂದಾಗ ಬೇಡವೆಂದಳು; ಕಣ್ಣಿಗೆ ಬಟ್ಟೆ ಕಟ್ಟುತ್ತೇವೆಂದರೂ ತನಗೆ ಹೆದರಿಕೆಯಿಲ್ಲ, ಬೇಡವೆಂದಳು. ಸೂರ್ಯ ಉದಯಿಸಿ ರಾತ್ರಿಯ ಮಂಜನ್ನು ಕರಗಿಸುತ್ತಿದ್ದ. ಪಾದ್ರಿ ಮತ್ತು ಕ್ರೈಸ್ತ ಸಂನ್ಯಾಸಿನಿಯರು ತಮ್ಮ ಕರ್ತವ್ಯ ಮುಗಿಸಿ ಹಿಂದೆ ಸರಿದರು. ಫೈರಿಂಗ್ ಸ್ಕ್ವಾಡ್‍ನವರು ಬಂಧೂಕುಗಳನ್ನು ಗುರಿಯಿಟ್ಟು ಸಂಕೇತಕ್ಕಾಗಿ ಕಾಯುತ್ತಿದ್ದರು. ಹನ್ನೆರಡು ಬಂಧೂಕುಗಳು ತನ್ನ ಎದೆಯನ್ನೇ ನೋಡುತ್ತಿರುವುದನ್ನು ಕಂಡಳು. ಬಲಗೈಯನ್ನು ಚುಂಬಿಸಿ ಚುಂಬನವನ್ನು ಗಾಳಿಯಲ್ಲಿ ಬಂಧೂಕುದಾರಿಗಳೆಡೆ ಹಾರಿ ಬಿಟ್ಟು ಎದೆಯೊಡ್ಡಿ ನಿಂತಳು. ಸಂಕೇತ ದೊರೆತೊಡನೆಯೇ ಹನ್ನೆರಡು ಬಂಧೂಕುಗಳ ಸಪ್ಪಳ ಅದುವರೆಗೂ ಇದ್ದ ಮೌನವನ್ನು ಛಿದ್ರಿಸಿತು. ಆಕೆ ಚೀರಲಿಲ್ಲ, ಅರಚಲಿಲ್ಲ. ಎತ್ತಿದ ತಲೆ ಎತ್ತಿದಂತೆಯೇ ಇತ್ತು. ಮುಖ ನಿರ್ವಿಕಾರವಾಗಿತ್ತು. ಒಂದು ಗುಂಡು ಅವಳ ಹೃದಯ ಭೇದಿಸಿತ್ತು. ಆಕೆಯ ದೇಹ ಮೊಣಕಾಲೂರಿ ಕೂತಂತೆ ಕಂಡಿತು, ಒಂದರೆಕ್ಷಣ ತನ್ನ ಮೇಲೆ ಗುಂಡು ಹಾರಿಸಿದವರನ್ನು ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ನೋಡನೊಡುತ್ತಿದ್ದಂತೆಯೇ ಆಕೆಯ ದೇಹ ಹಿಂದಕ್ಕೆ ಬಾಗಿ ದೊಪ್ಪನೆ ಕಾಲುಮಡಚಿರುವಂತೆಯೇ ಹಿಂದಕ್ಕೆ ಬಿತ್ತು. ಅವಳ ಕಣ್ಣು ಆಕಾಶ ದಿಟ್ಟಿಸುತ್ತಿತ್ತು. ಮತ್ತೊಂದು ಸಂಪ್ರದಾಯ ಉಳಿದಿತ್ತು. ಅಲ್ಲಿರುವ ಫ್ರೆಂಚ್ ಅಧಿಕಾರಿ ತನ್ನ ರಿವಾಲ್ವಾರ್‍ನಲ್ಲಿ ಖೈದಿಯ ತಲೆಗೆ ಗುಂಡು ಹಾರಿಸಿ ಖೈದಿಯ ಸಾವನ್ನು ಖಾತ್ರಿಪಡಿಸಬೇಕು. ಮಾತಾ ಹರಿ ಆಗಲೇ ಸತ್ತಿದ್ದು ಆಕೆಯ ವಿಷಯದಲ್ಲಿ ಅದು ಅವಶ್ಯಕತೆಯಿಲ್ಲದಿದ್ದರೂ ಸಂಪ್ರದಾಯದಂತೆ ಕೆಳಗುರುಳಿದ್ದ ಮಾತಾ ಹರಿಯ ದೇಹದ ಬಳಿ ಬಂದು ತನ್ನ ರಿವಾಲ್ವಾರ್‍ನ ಗುಂಡುಗಳನ್ನು ಆಕೆಯ ತಲೆಯಲ್ಲಿ ಹೊಗಿಸಿದ. ಸತ್ತಾಗ ಮಾತಾ ಹರಿಯ ವಯಸ್ಸು 42 ವರ್ಷ.

    ಆಕೆಯ ಸಾವಿನಲ್ಲೂ ಅನೇಕ ದಂತಕತೆಗಳು ಹುಟ್ಟಿಕೊಂಡವು. ಪಿಯರ್ರೆ ದ ಮೋರ್ರಿಸ್ಯಾಕ್ ಎಂಬ ಆಕೆಯ ಅಭಿಮಾನಿ ಫೈರಿಂಗ್ ಸ್ಕ್ವಾಡ್‍ನವರಿಗೆ ಲಂಚ ನೀಡಿ ನಿಜವಾದ ತೋಟಾಗಳ ಬದಲಿಗೆ ಖಾಲಿ ತೋಟಾಗಳನ್ನು ತುಂಬಿಸುವಂತೆ ಮಾಡಲು ಪ್ರಯತ್ನಿಸಿದ್ದ, ಆದರೆ ಅದು ಸಫಲವಾಗಲಿಲ್ಲ ಎಂದರು ಕೆಲವರು. ಸಾಯುವ ಮುನ್ನ ಹಠಾತ್ತನೆ ತಾನು ತೊಟ್ಟಿದ್ದ ಕೋಟನ್ನು ಕಿತ್ತೆಸೆದು ಫೈರಿಂಗ್ ಸ್ಕ್ವಾಡ್‍ನವರಿಗೆ ತನ್ನ ನಗ್ನದೇಹ ತೋರಿಸಿ ಅವರನ್ನು ಬೆಚ್ಚಿ ಬೀಳಿಸಿದಳು ಎಂದರು ಹಲವರು. ಆದರೆ ಅದೆಲ್ಲಾ ಅಷ್ಟು ಮುಖ್ಯವಲ್ಲ. ಮಾತಾ ಹರಿಗೆ ಸಾವು ಬಂದಾಗಿತ್ತು. ಇಡೀ ಯೂರೋಪಿನ ಗಂಡಸರನ್ನೇ ಮೋಡಿ ಮಾಡಿದ್ದ ಮಾತಾ ಹರಿ ಮರದ ಬೊಡ್ಡೆಯ ಬಳಿ ಹೆಣವಾಗಿ ಬಿದ್ದಿದ್ದಳು. ಅವಳ ಬದುಕಿನ ಕತೆಗಳಲ್ಲಿ ಎಷ್ಟು ಸತ್ಯವಿತ್ತು, ಎಷ್ಟು ಸುಳ್ಳಿತ್ತು ಎಂಬುದು ಯಾರಿಗೂ ತಿಳಿದಿಲ್ಲ. 

    ಆಕೆ ಬದುಕಿದ್ದಾಗ ಅವಳ ಹಿಂದೆ ಜನ ಸುತ್ತುತ್ತಿದ್ದರು. ಅವಳ ನೃತ್ಯ ನೋಡಲು ಜನ ಕಿಕ್ಕಿರಿಯುತ್ತಿದ್ದರು. ಸಂತೋಷ ಕೂಟಗಳಿಗೆ ಅವಳನ್ನು ತಮ್ಮ ಜೊತೆಯಲ್ಲಿ ಕರೆದೊಯ್ಯಲು ಹೆಚ್ಚು ಹೆಚ್ಚು ಹಣ ಕೊಡಲು ತಯಾರಿದ್ದರು. ಆದರೆ ಮಾತಾ ಹರಿಯ ಹೆಣವನ್ನು ಪಡೆಯಲು ಯಾರೂ `ವಾರಸುದಾರರು’ ಮುಂದೆ ಬರಲಿಲ್ಲ. ಹಾಗಾಗಿ ಆಕೆಯ ದೇಹವನ್ನು ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ವೈದ್ಯಕೀಯ ಶಾಲೆಯೊಂದಕ್ಕೆ ಕೊಡಲಾಯಿತು. ಆಕೆಯ ಆಸ್ತಿಯನ್ನೆಲ್ಲಾ ಮಾರಿ ಕೋರ್ಟಿನ ಶುಲ್ಕಕ್ಕೆ ವಜಾಮಾಡಿಕೊಂಡರು. ಮಾತಾ ಹರಿಯ ಗಂಡ ರುಡಾಲ್ಫ್ ಆಕೆಯ ಸಾವಿನ ಸುದ್ದಿ ಕೇಳಿ, `ಆಕೆ ಬದುಕಿನಲ್ಲಿ ಏನೇನೋ ಮಾಡಿರಬಹುದು, ಆದರೆ ಆಕೆಗೆ ಇಂತಹ ಸಾವು ಬರಬಾರದಿತ್ತು’ ಎಂದನಂತೆ.

    ಕಾಕತಾಳೀಯವೆಂಬಂತೆ ಮಾತಾ ಹರಿಯ ಮಗಳು ನೋನ್, ತಾಯಿಯ ವಾತ್ಸಲ್ಯವಿಲ್ಲದೆ ಬೆಳೆದವಳು, ತಾಯಿಯನ್ನೇ ಬಹುವಾಗಿ ಹೋಲುತ್ತಿದ್ದವಳು ಇದ್ದಕ್ಕಿದ್ದಂತೆ ತನ್ನ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದಳು. ಆಕೆಗೆ ಡಚ್ ಈಸ್ಟ್ ಇಂಡೀಸ್‍ಗೆ ಹೋಗಿ ಅಧ್ಯಾಪಕಿಯಾಗುವ ಆಸೆಯಿತ್ತು. ಆದರೆ ಒಂದು ರಾತ್ರಿ ಮಲಗಿದವಳು ಬೆಳಿಗ್ಗೆ ಏಳಲೇ ಇಲ್ಲ.

    ಮಾತಾ ಹರಿಯ ತಲೆಯನ್ನು ಎಲ್ಲ ಪ್ರಖ್ಯಾತ ಅಪರಾಧಿಗಳ ತಲೆಯಂತೆ ಕತ್ತರಿಸಿ ಪ್ಯಾರಿಸ್ಸಿನ `ಮೆಕಾಬರ್' ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿತ್ತು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಆ ತಲೆಯೂ ನಿಗೂಢವಾಗಿ ಮಾಯವಾಯಿತು.

    1921ರಲ್ಲಿ ಹಾಲೆಂಡಿನ ಹೆನ್ರಿ ನೋಡ್‍ಮೇಕರ್ ಎಂಬಾತ ಆತ್ಯಹತ್ಯೆ ಮಾಡಿಕೊಂಡ. ಆತನ ಸಂಬಂಧಿಕರು ಹೇಳಿದಂತೆ ತನ್ನಿಂದಲೇ ಮಾತಾ ಹರಿ ಸತ್ತಿದ್ದು ಎಂಬ ಪಾಪಪ್ರಜ್ಞೆ ಆತನನ್ನು ಕಾಡುತ್ತಿತ್ತು. ಆತ ಬ್ರಿಟಿಷರಿಗೆ ಕೊಟ್ಟ ಸುಳ್ಳು ಮಾಹಿತಿಯಿಂದಲೇ ಮಾತಾ ಹರಿ ಗೂಢಚಾರಿಣಿಯೆಂಬ ಸಂಶಯ ಬಂದು ಆಕೆಯನ್ನು ಕೊಲ್ಲಲಾಯಿತು ಎನ್ನುವ ಕೊರಗಿನಲ್ಲೇ ಇದ್ದು ಕೊನೆಗೊಂದು ಆತ್ಮಹತ್ಯೆ ಮಾಡಿಕೊಂಡ ಎಂದರು. ಆತ ಮಾತಾ ಹರಿಯ ಬಗ್ಗೆ ಏಕೆ ಸುಳ್ಳು ಮಾಹಿತಿ ಕೊಟ್ಟಿದ್ದ? ಅದಕ್ಕೆ ಕಾರಣ 1916ರಲ್ಲಿ ನಡೆದ ಒಂದು ಘಟನೆ. ಮಾತಾ ಹರಿ 1916ರಲ್ಲಿ ಹಾಲೆಂಡಿನಿಂದ ಫ್ರಾನ್ಸ್‍ಗೆ ಝೀಲ್ಯಾಂಡಿಯಾ ಎಂಬ ಹಡಗಿನಲ್ಲಿ ವಿಗೊ ಮತ್ತು ಮ್ಯಾಡ್ರಿಡ್ ಮೂಲಕ ಹೋಗುತ್ತಿದ್ದಳು. ಅದೇ ಹಡಗಿನಲ್ಲಿ ಹಾಲೆಂಡಿನ ಹೆನ್ರಿ ನೋಡ್‍ಮೇಕರ್ ಸಹ ಇದ್ದ. ಆತ ಬ್ರಿಟಿಷ್ ಏಜೆಂಟನಾಗಿದ್ದು ಮಾತಾ ಹರಿ ಹೊರಗೆ ಇದ್ದಾಗ ಆಕೆಯ ಕ್ಯಾಬಿನ್ ಪ್ರವೇಶಿಸಿ ಅದೂ ಇದು ಹುಡುಕಾಟ ನಡೆಸಿದ್ದ. ಇದನ್ನು ತಿಳಿದ ಮಾತಾ ಹರಿ ಎಲ್ಲರೆದುರು ಆಕೆಯ ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದಳು. ಆತ ಒಪ್ಪದಿದ್ದಾಗ ಆಕೆ ಸಿಟ್ಟಿನಿಂದ ಆತನ ಕಪಾಳಕ್ಕೆ ಹೊಡೆದಿದ್ದಳು. ಹೊಡೆತ ಎಷ್ಟು ತೀವ್ರವಾಗಿತ್ತೆಂದರೆ ಆತನ ಬಾಯಿಯಿಂದ ರಕ್ತ ಸುರಿದಿತ್ತು. ಆಕೆಯ ಮೇಲಿನ ಸೇಡಿನಿಂದ ನೋಡ್‍ಮೇಕರ್ ಬ್ರಿಟಿಷರಿಗೆ ಆಕೆಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದ. ಅದರಿಂದಲೇ ಅವಳ ಸಾವುಂಟಾಯಿತು ಎಂದೇ ಆತ ನಂಬಿದ್ದ.

     ಮಾತಾ ಹರಿ ನಿರಪರಾಧಿ, ನಿರ್ದೋಷಿ ಎಂದು ಈಗಲೂ ನಂಬಿರುವ ಹಾಲೆಂಡಿನ ಆಕೆಯ ಊರಿನ ಜನ 1976ರಲ್ಲಿ ಆಕೆಯ ನೆನಪಿನಲ್ಲಿ ಲ್ಯೂಡಾರ್ಡೆನ್ ಊರಿನಲ್ಲಿ ಆಕೆಯ ಕಂಚಿನ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅದೇ ಊರಿನ ಫ್ರೈಸ್ ಮ್ಯೂಸಿಯಂನಲ್ಲಿ ಆಕೆಯ ಕೈಬರಹವಿರುವ ಪುಸ್ತಕ ಹಾಗೂ ಆಕೆಯ ಅಭಿಮಾನಿಗಳ ನರ್ತನದ ಹೆಜ್ಜೆಯ ಗುರುತಿರುವ ಜಮಖಾನೆಯೊಂದನ್ನು ಶಾಶ್ವತ ಪ್ರದರ್ಶನದಲ್ಲಿರಿಸಿದ್ದಾರೆ. ಇಂದಿಗೂ ಅವರು ಆಕೆಯ ಕೇಸ್‍ನ ಕಡತವನ್ನು ತೆರೆದು ಮರುಪರಿಶೀಲಿಸಲು ಫ್ರೆಂಚ್ ಸರ್ಕಾರವನ್ನು ಕೋರುತ್ತಿದ್ದಾರೆ. ಆಕೆಯನ್ನು ಬೇಹುಗಾರಿಕೆ ಮಾಡುವಂತೆ ಒತ್ತಾಯಿಸಿದ ಫ್ರೆಂಚ್ ಸೇನೆಯ ಕಮ್ಯಾಂಡೆಂಟ್ ಲಡೂಕ್ಸ್‍ನನ್ನು 1918 ಬೇಹುಗಾರಿಕೆಯ ಆರೋಪದ ಮೇಲೆ ಬಂಧಿಸಲಾಯಿತು.

    ವಾಸ್ತವವಾಗಿ ಮಾತಾ ಹರಿ ಬದುಕನ್ನು ಅತಿಯಾಗಿ ಪ್ರೀತಿಸುವ ಹೆಣ್ಣಾಗಿದ್ದಳು. ಅವಳ ಬದುಕಿನ ಪ್ರೀತಿ ಮತ್ತು `ಪೌರುಷ’ ಯುದ್ಧದ ಕ್ರೌರ್ಯ ಮುಖಾಮುಖಿಯಾಗಿ ನಿಲ್ಲಲು ಸಾಧ್ಯವಿರಲಿಲ್ಲ. ಯಾವುದಾದರೊಂದು ಸೋಲಲೇಬೇಕಿತ್ತು. ಆ ಕ್ರೌರ್ಯಕ್ಕೆ `ಮುಂಜಾವಿನ ಕಣ್ಣು’- ಮಾತಾ ಹರಿ ಬಲಿಯಾದಳು.

ನನ್ನ ಪುಸ್ತಕ `ಮಾತಾ ಹರಿ’ಯ ಸಾಫ್ಟ್ ಕಾಪಿ ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್ ಇಲ್ಲಿದೆ:


No comments: