ಗುರುವಾರ, ಜುಲೈ 16, 2020

ಅಘೋಷಿತ ಸ್ತ್ರೀವಾದಿ- ಇಸ್ಮತ್ ಚುಗ್ತಾಯ್‍


ಇಸ್ಮತ್ ಚುಗ್ತಾಯ್- ಅಘೋಷಿತ ಸ್ತ್ರೀವಾದಿ ಲೇಖಕಿ

4/11/2012ರ `ಪ್ರಜಾವಾಣಿ’ಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಖ್ಯಾತ ಉರ್ದು ಲೇಖಕಿ ಇಸ್ಮತ್ ಚುಗ್ತಾಯ್ ಕುರಿತ ನನ್ನ ಲೇಖನ - `ಅಘೋಷಿತ ಸ್ತ್ರೀವಾದಿ ಲೇಖಕಿ ಇಸ್ಮತ್ ಚುಗ್ತಾಯ್’. ನಾನು ಅನುವಾದಿಸಿದ ಆಕೆಯ ಪ್ರಖ್ಯಾತ ಮತ್ತು ವಿವಾದಾಸ್ಪದ ಕತೆ `ಲಿಹಾಫ್’ (ಕೌದಿ) ಸಹ ಇಲ್ಲಿದೆ. ಇಸ್ಮತ್ 1941ರಲ್ಲಿ `ಲಿಹಾಫ್’ ಕತೆಯನ್ನು ಪ್ರಕಟಣೆಗೆ ಕಳುಹಿಸಿದಾಗ ಪತ್ರಿಕೆಯ ಸಂಪಾದಕ ಅಂತಹ ಕತೆಯನ್ನು ಹೆಣ್ಣೊಬ್ಬಳು ಬರೆಯಲು ಸಾಧ್ಯವೇ ಇಲ್ಲ, ಯಾರೋ ಗಂಡಸರು ಹೆಣ್ಣಿನ ಹೆಸರಿನಲ್ಲಿ ಬರೆದಿದ್ದಾರೆ ಎಂದೇ ನಂಬಿದ್ದ. ಕತೆ ಪ್ರಕಟವಾದ ನಂತರ ಓದುಗರು ಮತ್ತು ವಿಮರ್ಶಕರಿಬ್ಬರೂ ಕೃತಿ ಮತ್ತು ಕೃತಿಕಾರಳನ್ನು ಖಂಡಿಸಿದರು. ಕತೆ ಅಶ್ಲೀಲವೆಂದು ಆಕೆಯ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ಲಾಹೋರಿನ ನ್ಯಾಯಾಲಯದಲ್ಲಿ ನಾಲ್ಕು ವರ್ಷ ನಡೆದ ವಿಚಾರಣೆಯಲ್ಲಿ ಕೃತಿಯಲ್ಲಿ ಅಶ್ಲೀಲದ `ನಾಲ್ಕಕ್ಷರ’ ಸಿಗದಿದ್ದುದರಿಂದ ದಾವೆ ವಜಾ ಆಯಿತು.


 ಪ್ರಖ್ಯಾತ ಉರ್ದು ಸಾಹಿತಿ ಇಸ್ಮತ್ ಚುಗ್ತಾಯ್ ವಿವಾದಗಳಲ್ಲೇ ಬದುಕಿದವಳು. ಆಕೆಯ ಸಾವಿನಲ್ಲೂ ವಿವಾದವನ್ನು ಸೃಷ್ಟಿಸಿದ್ದಳು. ಆಕೆ ಸತ್ತಾಗ ಇಸ್ಲಾಂನ ಪದ್ಧತಿಗಳನುಸಾರ ಆಕೆಯನ್ನು ಮಣ್ಣಿನಲ್ಲಿ ಹೂಳದೆ ಸುಡಬೇಕೆಂದು ಅಕೆ ಬರೆದಿಟ್ಟಿದ್ದಳಂತೆ. ಮತ್ತೊಬ್ಬ ಪ್ರಖ್ಯಾತ ಸಾಹಿತಿ ಸಾದತ್ ಹಸನ್ ಮಂಟೋನ ಸಮಕಾಲೀನಳಾದ ಈಕೆ ಮಂಟೋನ ಆತ್ಮೀಯ ಗೆಳತಿಯಾಗಿದ್ದಳು. ಅವರಿಬ್ಬರ ಆದರ್ಶ ಮತ್ತು ಗೆಳೆತನ ಹೇಗಿತ್ತೆಂದರೆ ಒಮ್ಮೆ ಮಂಟೊ, `ಇಸ್ಮತ್ ಗಂಡಸಾಗಿದ್ದರೆ ಆಕೆ ಮಂಟೊ ಆಗಿರುತ್ತಿದ್ದಳು ಹಾಗೂ ನಾನೇನಾದರೂ ಹೆಂಗಸಾಗಿದ್ದಿದ್ದರೆ ನಾನು ಇಸ್ಮತ್ ಆಗಿರುತ್ತಿದ್ದೆ’ ಎಂದಿದ್ದ. ಎಷ್ಟೋ ಜನ ನೀವೇ ಏಕೆ ಒಬ್ಬರನ್ನೊಬ್ಬರು ಮದುವೆಯಾಗಲಿಲ್ಲ ಎಂದೂ ಕೇಳಿದ್ದರು. ಮಂಟೋ ತಮಾಷೆಗೆ ತಾವಿಬ್ಬರೂ ಮದುವೆಯಾಗಿದ್ದಿದ್ದರೆ ಇಬ್ಬರೂ ಬರೆಯುವುದನ್ನೇ ನಿಲ್ಲಿಸಿಬಿಡುತ್ತಿದ್ದೆವೇನೋ ಎಂದಿದ್ದ. ಮಂಟೊ, ಕ್ರಿಷನ್ ಚಂದರ್ ಮತ್ತು ರಾಜಿಂದರ್ ಸಿಂಗ್ ಬೇಡಿಯ ಜೊತೆಗೆ ಇಸ್ಮತ್ ಉರ್ದು ಸಣ್ಣ ಕಥಾ ಸಾಹಿತ್ಯದ ನಾಲ್ಕನೇ ಆಧಾರ ಸ್ಥಂಭವಾಗಿದ್ದಳು. ಮಹಿಳೆಯರು, ಅದರಲ್ಲೂ ಮುಸಲ್ಮಾನ ಮಹಿಳೆಯರು ಮನೆಯಿಂದಲೇ ಹೊರಗೆ ಬರಬಾರದು ಎಂದಿದ್ದ ಸಮಯದಲ್ಲಿ ಎಲ್ಲವನ್ನೂ ಧಿಕ್ಕರಿಸಿ ಬರಹಗಾರಳಾಗಲು ಹೊರಟಂಥ ಬಂಡಾಯಗಾರ್ತಿ ಆಕೆ. ಆಕೆಯ ಕತೆ ಅಶ್ಲೀಲ ಎಂದು ಸ್ವಾತಂತ್ರಪೂರ್ವದಲ್ಲಿ ಆಕೆಯ ಮೇಲೆ ದಾವೆಯನ್ನು ಹೂಡಲಾಗಿತ್ತು. ಹತ್ತು ಮಕ್ಕಳಲ್ಲಿ ಒಂಭತ್ತನೆಯವಳಾದ ಆಕೆ ಸಣ್ಣ ಮಗುವಾಗಿರುವಾಗಲೇ ಆಕೆಯ ಅಕ್ಕಂದಿರಿಗೆ ಮದುವೆಯಾಗಿತ್ತು. ತನ್ನ ಅಣ್ಣ ತಮ್ಮಂದಿರೊಂದಿಗೆ ಬೆಳೆದ ಆಕೆಯನ್ನು ಆಕೆಯ ತಂದೆತಾಯಿಯರು ಶಾಲೆಗೆ ಕಳುಹಿಸದಿದ್ದಾಗ ತನ್ನ ಅಣ್ಣಂದಿರು ಶಾಲೆಗೆ ಹೋಗುತ್ತಿದ್ದಾರೆ, ನಾನೂ ಹೋಗುತ್ತೇನೆ ಎಂದು ಹಟ ಹಿಡಿದು ಶಾಲೆಗೆ ಹೊರಟವಳು. `ಬೇಡಮ್ಮಾ, ಶಾಲೆಗೆ ಹೋಗಬೇಡ, ನೀನು ಅಡಿಗೆ ಮಾಡೋದು ಕಲಿತುಕೊ. ಇಲ್ಲವಾದಲ್ಲಿ ಮದುವೆಯಾದ ಮೇಲೆ ಏನು ಮಾಡುತ್ತಿ?' ಎಂದಾಗ, `ನಾನು ಮದುವೆಯಾಗುವ ಗಂಡ ಬಡವನಾಗಿದ್ದಲ್ಲಿ ನಾವು ಕಿಚಿಡಿ ಮಾಡಿಕೊಂಡು ತಿನ್ನುತ್ತೀವಿ ಅಥವಾ ಅವನು ಸಾಹುಕಾರನಾಗಿದ್ದಲ್ಲಿ ಅಡುಗೆಯವನನ್ನು ಇಟ್ಟುಕೊಳ್ಳುತ್ತೇವೆ' ಎಂದಿದ್ದಳು.
          ಇಸ್ಮತ್ ಚುಗ್ತಾಯ್ ಒಂದು ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಉತ್ತರ ಪ್ರದೇಶದ ಬದಯುನ್‍ನಲ್ಲಿ 1915ರ ಆಗಸ್ಟ್ 15ರಂದು ಜನಿಸಿದಳು. ಆಕೆಯ ಅಣ್ಣಾ ಮಿರ್ಜಾ ಅಜೀಮ್ ಬೇಗ್ ಚುಗ್ತಾಯ್ ಆಕೆ ಚಿಕ್ಕ ಹುಡುಗಿಯಾಗಿದ್ದಾಗಲೇ ಖ್ಯಾತ ಲೇಖಕನಾಗಿದ್ದ. ಆತನೇ ಆಕೆಯ ಮೊದಲು ಗುರು ಮತ್ತು ಮಾರ್ಗದರ್ಶಿ. ಆಕೆ ಥಾಮಸ್ ಹಾರ್ಡಿಯ ಕೃತಿಗಳ ಜೊತೆಗೆ ಹಿಜಾಬ್ ಇಮ್ತಿಯಾಜ್ ಅಲಿ, ಮಜ್ನೂನ್ ಗೋರಖ್‍ಪುರಿ ಮತ್ತು ನಿಯಾಜ್ ಫತೇಪುರಿಯವರ ಕೃತಿಗಳನ್ನು ಓದಿದ್ದಳು. ಅದಕ್ಕೂ ಮೊದಲು ಆಕೆ ಯಾರಿಗೂ ತಿಳಿಯದಂತೆ ಗೋಪ್ಯವಾಗಿ ಪ್ರೇಮದ ಕತೆಗಳನ್ನು ಬರೆಯುತ್ತಿದ್ದಳು. ಹೆಣ್ಣಾಗಿ ಬರೆಯುವಂಥ `ಅಪರಾಧ' ಮಾಡುತ್ತಿದ್ದುದರಿಂದ ಸಿಕ್ಕಿಹಾಕಿಕೊಂಡರೆ ಆಕೆಯನ್ನು ಶಿಕ್ಷಿಸುವರೆಂಬ ಭಯವಿತ್ತು. ದಾಸ್ತೋವ್‍ಸ್ಕಿ, ಡಿಕನ್ಸ್, ಟಾಲ್‍ಸ್ಟಾಯ್, ಸೋಮರ್‍ಸೆಟ್ ಮಾಮ್, ಚೆಕೋವ್, ಓ ಹೆನ್ರಿ ಮುಂತಾದ ಲೇಖಕರು ಆಕೆಯ ಮೆಚ್ಚಿನ ಲೇಖಕರಾಗಿದ್ದರು. ಓ ಹೆನ್ರಿಯಿಂದಲೇ ಕತೆ ಬರೆಯುವುದನ್ನು ಕಲಿತೆ ಎಂದು ಆಕೆಯೇ ಹೇಳಿಕೊಂಡಿದ್ದಾಳೆ. ಮುನ್ಷಿ ಪ್ರೇಮ್ ಚಂದ್ ಉರ್ದು ಲೇಖಕರಲ್ಲಿ ಆಕೆಗೆ ಪ್ರಿಯವಾದವರು. ಆ ನಂತರ ಆಕೆ ಗಾಂಧಿಯ ಕೃತಿಗಳನ್ನೂ ಮೆಚ್ಚುಗೆಯಿಂದ ಓದತೊಡಗಿದಳು. ತನ್ನ ಕಾಲೇಜಿನಲ್ಲಿ ಆಕೆ ಗ್ರೀಕ್ ನಾಟಕಗಳನ್ನು, ಶೇಕ್ಸ್‍ಪಿಯರ್‍ನ ನಾಟಕಗಳನ್ನು, ಇಬ್ಸೆನ್ ಮತ್ತು ಬರ್ನಾಡ್ ಶಾರವರ ನಾಟಕಗಳನ್ನು ಅತ್ಯಂತ ಆಸಕ್ತಿಯಿಂದ ಓದಿದಳು.
          ಆಕೆಗೆ ಶಾಲೆಗೆ ಹೋಗಿ ಓದಬೇಕೆಂಬ ಬಯಕೆ ಎಷ್ಟಿತ್ತೆಂದರೆ, ಆಕೆಗೆ ಹದಿನೈದು ವರ್ಷವಾಗಿ ಒಂಭತ್ತನೇ ತರಗತಿಯಲ್ಲಿದ್ದಾಗ ಆಕೆಗೆ ಮದುವೆಮಾಡಬೇಕೆನ್ನುವ ಸಿದ್ಧತೆಯನ್ನು ಆಕೆಯ ತಂದೆತಾಯಿಗಳು ಮಾಡುತ್ತಿದ್ದರು. ಒಂದು ದಿನ ಆಕೆ ಶಾಲೆಯಿಂದ ಮನೆಗೆ ಬಂದಾಗ ಮನೆಯಲ್ಲಿ ಚಿನಿವಾರರು ಮತ್ತು ದರ್ಜಿಗಳು ಬೀಡುಬಿಟ್ಟಿದ್ದರು. ಆಕೆಯೊಂದಿಗೆ ಅಂತಹ ವಿಷಯಗಳನ್ನು ಮಾತನಾಡುವಂತಹ ಅವಿವಾಹಿತ ಅಕ್ಕ ತಂಗಿಯರೂ ಇರಲಿಲ್ಲ. ಕೊನೆಗೆ ವಿಷಯ ತಿಳಿದ ಆಕೆ ಮದುವೆಯಾದಲ್ಲಿ ತನ್ನ ಓದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲವೆಂದು ತನಗೆ ಮದುವೆಯೇ ಬೇಡವೆಂದು ಹಠ ಹಿಡಿದಳು. `ನಿನಗೆ ಹುಚ್ಚು ಹಿಡಿದಿದೆ' ಎಂದು ತಾಯಿ ಬೈದರು. `ನೀನು ಗಂಡನ ಮನೆಗೆ ಹೋದಮೇಲೆ ಓದಬಹುದಲ್ಲಾ?' ಎಂದರು ತಂದೆ. `ಗಂಡನ ಮನೆಯಲ್ಲಿ ಓದಿದ ಹಾಗೆ! ಆ ಗಂಡನೂ ನನ್ನ ತಂದೆಯಂಥವನೇ ಆದಲ್ಲಿ ಪ್ರತಿ ವರ್ಷ ಒಂದು ಮಗುವನ್ನು ಹೆತ್ತುಕೊಡಲೆ? ಅಥವಾ ಪರೀಕ್ಷೆಗಳನ್ನು ಬರೆಯಲೆ?' ಎಂದು ಮನಸ್ಸಿನಲ್ಲೇ ಗೊಣಗಿ ಆ ಮದುವೆ ನಿಲ್ಲಿಸಲು ಉಪಾಯವೊಂದನ್ನು ಹುಡುಕಿದಳು. ಆಕೆಯ ಮಾವನ ಮಗನೊಬ್ಬ ಬಾಂಬೆಯಲ್ಲಿ ವೈದ್ಯ ಪದವಿ ಓದುತ್ತಿದ್ದ. ಇಸ್ಮತ್ ಅವನಿಗೊಂದು ಪತ್ರ ಬರೆದು `ನನ್ನನ್ನು ಈಗ ನೀನೇ ಪಾರು ಮಾಡಬೇಕು, ಅದಕ್ಕಾಗಿ ನೀನು ಏನೂ ಮಾಡಬೇಕಾಗಿಲ್ಲ. ನೀನು ನಿಮ್ಮ ತಂದೆಗೆ ನನ್ನನ್ನು ಕಂಡರೆ ಇಷ್ಟ ಹಾಗೂ ನನ್ನನ್ನು ಮದುವೆಯಾಗುತ್ತೇನೆ ಎಂದು ಪತ್ರ ಬರೆದುಬಿಡು. ಇದು ಮಾತ್ರ ನನ್ನ ಮದುವೆಯನ್ನು ನಿಲ್ಲಿಸಬಲ್ಲದು. ಆಮೇಲೆ ನೀನು ಹೆದರಿಕೊಳ್ಳುವ ಅವಶ್ಯಕತೆಯೇನೂ ಇಲ್ಲ. ನಾನು ಕೊರಾನ್ ಮೇಲೆ, ಅಲ್ಲಾಹ್‍ನ ಮೇಲೆ ಹಾಗೂ ನನ್ನ ಶಿಕ್ಷಣದ ಮೇಲೆ ಪ್ರಮಾಣಮಾಡಿ ಹೇಳುತ್ತೇನೆ ನಿನ್ನನ್ನು ಮದುವೆಯಾಗುವುದಿಲ್ಲವೆಂದು. ದಯವಿಟ್ಟು ಈ ಮದುವೆಯನ್ನು ನಿಲ್ಲಿಸಿಬಿಡು' ಎಂದು ಹೇಳಿದಳು. ಆತ ಅದೇ ರೀತಿ ಮಾಡಿದ. ಕೆಲದಿನಗಳ ನಂತರ ಇಸ್ಮತ್‍ಳ ತಾಯಿ ಮದುವೆಯ ಸಿದ್ಧತೆಯ ಉತ್ಸಾಹದಲ್ಲೇ ಇರುವಾಗ ಅವಳ ಮಾವ ಓಡಿಬಂದು, `ನೋಡಿಲ್ಲಿ, ನಮ್ಮ ಶೌಕತ್‍ಗೆ ಇಸ್ಮತ್ ಕಂಡರೆ ಇಷ್ಟವಂತೆ. ನೀನು ಅವಳನ್ನು ಹೊರಗಿನವನಿಗೆ ಮದುವೆಮಾಡಿಕೊಡುವುದು ಬೇಡ. ಬೇಕಾದರೆ ಈ ಪತ್ರ ನೋಡು' ಎಂದು ತೋರಿಸಿದ. ಇಸ್ಮತ್‍ಳ ಅಮ್ಮನ ಮುಖವೂ ಸಂತೋಷದಿಂದ ಊರಗಲವಾಯಿತು. ದರ್ಜಿಗಳು ಮತ್ತು ಚಿನಿವಾರರು ಕತ್ತರಿಸಿದ ಬಟ್ಟೆ ಹಾಗೂ ಕರಗಿಸಿದ ಚಿನ್ನ ಬಿಟ್ಟು ಹೊರಟರು. ಇಸ್ಮತ್‍ಳ ಮದುವೆ ಸಧ್ಯಕ್ಕೆ ಅನಿರ್ದಿಷ್ಟಕಾಲ ಮುಂದೆ ಹೋಯಿತು.
          ತನಗೆ ಇಪ್ಪತ್ತ ಮೂರು ವರ್ಷಗಳಾಗಿದ್ದಾಗ ತಾನೂ ಬರೆಯಬಲ್ಲೆ ಎಂದು ಆಕೆಗೆ ಆತ್ಮವಿಶ್ವಾಸ ಬಂದಾಗ ಆಕೆ ತನ್ನ ಮೊಟ್ಟಮೊದಲ ಕತೆ `ಫಾಸದಿ' ಬರೆದಳು ಹಾಗೂ ಅದು ಪ್ರತಿಷ್ಠಿತ ಸಾಹಿತ್ಯ ಪತ್ರಿಕೆ `ಸಾಖಿ' ಪತ್ರಿಕೆಯಲ್ಲಿ ಪ್ರಕಟವಾಯಿತು. ಅದನ್ನು ಓದಿದವರು ಅಜೀಮ್ ಬೇಗ ಚುಗ್ತಾಯ್ (ಆಕೆಯ ಸಾಹಿತಿ ಅಣ್ಣ) ಯಾವಾಗ ತನ್ನ ಹೆಸರು ಬದಲಿಸಿಕೊಂಡು ಬರೆಯಲು ಶುರುಮಾಡಿದ ಎಂದು ಅಚ್ಚರಿಗೊಂಡರು!
          1936ರಲ್ಲಿ ತನ್ನ ಬ್ಯಾಚುಲರ್ ಪದವಿಯಲ್ಲಿದ್ದಾಗಲೇ ಆಕೆ ಲಕ್ನೋದಲ್ಲಿನ ಪ್ರಗತಿಪರ ಬರಹಗಾರರ ಸಂಘದ ಸಭೆಗೆ ಹಾಜರಾದಳು. ಇಂಗ್ಲೆಂಡಿನಲ್ಲಿ ಪ್ರಾರಂಭವಾಗಿದ್ದ ಆ ಸಂಘ ಭಾರತಕ್ಕೂ ಬಂದಿತ್ತು ಹಾಗೂ ಅದು ಫಯಾಜ್ ಅಹ್ಮದ್ ಫಯಾಜ್, ಸಜ್ಜದ್ ಜಹೀರ್, ಕೈಫಿ ಆಜ್ಮಿಯಂಥವರನ್ನು ಆಕರ್ಷಿಸಿತ್ತು. ಇವರೆಲ್ಲಾ ಉರ್ದು ಸಾಹಿತ್ಯ ಹೊಸ ದಿಕ್ಕಿನೆಡೆ ಸಾಗಲು ಸಂಪೂರ್ಣ ಹೊಸ ಮೌಲ್ಯಗಳನ್ನು ಹುಟ್ಟುಹಾಕುತ್ತಿದ್ದರು. ಅಲ್ಲಿ ಭೇಟಿಯಾದ ರಶೀದ್ ಜಾನ್ ಎಂಬ ವೈದ್ಯೆ ಮತ್ತು ಲೇಖಕಿ ಇಸ್ಮತ್‍ಳ ಮೇಲೆ ಅಗಾಧ ಪ್ರಭಾವ ಬೀರಿದಳು. ರಶೀದ್ ಜಾನ್ ಸ್ವತಂತ್ರ ಮನೋಭಾವದ ಹೆಣ್ಣಾಗಿದ್ದಳು. ಇಸ್ಮತ್, `ದಿಟ್ಟ ಹಾಗೂ ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಿಬಿಡುವ ಆಕೆಯನ್ನು ನೋಡಿದಾಕ್ಷಣ ನಾನೂ ಸಹ ಅದೇ ರೀತಿ ಇರಬೇಕೆಂದೆನ್ನಿಸಿತ್ತು' ಎಂದು ಹೇಳಿದ್ದಾಳೆ. ತನ್ನ ಬ್ಯಾಚುಲರ್ ಪದವಿಯ ನಂತರ ಶಿಕ್ಷಣದಲ್ಲಿ ಬ್ಯಾಚುಲರ್ ಪದವಿ ಪಡೆದಳು ಹಾಗೂ ಈ ಎರಡೂ ಪದವಿಗಳನ್ನು ಪಡೆದ ಮೊಟ್ಟ ಮೊದಲ ಭಾರತದ ಮುಸಲ್ಮಾನ ಮಹಿಳೆಯಾದಳು. ಆಕೆ ಬಾಂಬೆಯಲ್ಲಿನ ಮಹಿಳಾ ಕಾಲೇಜಿನ ಪ್ರಿನ್ಸಿಪಾಲಳಾಗಿ ನೇಮಕಗೊಂಡಳು ಆನಂತರ ಶಾಲೆಗಳ ನಿರೀಕ್ಷಕಳಾದಳು. ಆಕೆ ಕೆಲ ಸಮಯ ಆಲಿಘರ್‍ನಲ್ಲಿ ಸಹ ಕೆಲಸ ಮಾಡಿದಳು. ಅಲ್ಲಿ ಆಕೆ ಆಗ ಮಾಸ್ಟರ್ಸ್ ಪದವಿ ಮಾಡುತ್ತಿದ್ದ ಶಾಹೀದ್ ಲತೀಫ್‍ನನ್ನು ಭೇಟಿಯಾದಳು. ಗೆಳೆತನ ಕೆಲಸಮಯದ ನಂತರ ಪ್ರೇಮವಾಗಿ ಅವರಿಬ್ಬರೂ 1942ರಲ್ಲಿ ಮದುವೆಯಾದರು. ಆಕೆಯೇ ಬರೆದುಕೊಂಡಿರುವಂತೆ ಶಾಹೀದ್‍ನನ್ನು ಮದುವೆಯಾಗುವ ಮುನ್ನ, `ಮತ್ತೊಮ್ಮೆ ಸರಿಯಾಗಿ ಆಲೋಚಿಸು, ನಾನು ಸ್ವತಂತ್ರ ಆಲೋಚನೆಯುಳ್ಳವಳು, ನಾನು ನಿನಗೆ ಸರಿಹೊಂದುತ್ತೇನೆಯೋ ಇಲ್ಲವೋ' ಎಂದೂ ಹೇಳಿದ್ದಳು. ತನ್ನ ಮದುವೆಯ ಬಗ್ಗೆ ಹೇಳುತ್ತ ಆಕೆ, `ಗಂಡು ಹೆಣ್ಣನ್ನು ದೇವತೆ ಎನ್ನುವಂತೆ ಪೂಜಿಸುತ್ತಾನೆ, ಪ್ರೀತಿಸುತ್ತಾನೆ, ಗೌರವಿಸುತ್ತಾನೆ ಆದರೆ ಆಕೆಯನ್ನು ತನ್ನ ಸಮಾನಳು ಎಂದು ಸ್ವೀಕರಿಸಲು ಮಾತ್ರ ಸಿದ್ಧವಿರುವುದಿಲ್ಲ. ಒಬ್ಬ ಅನಕ್ಷರಸ್ಥ ಹೆಣ್ಣಿನೊಂದಿಗೆ ಆತ ಹೇಗೆ ಗೆಳೆಯನಾಗಿರಲು ಸಾಧ್ಯ? ಆದರೆ ಗೆಳೆತನಕ್ಕೆ ಬೇಕಾಗಿರುವುದು ಪ್ರೀತಿ ಪ್ರೇಮಗಳು, ಶಿಕ್ಷಣವಲ್ಲ. ಶಾಹೀದ್ ನನ್ನನ್ನು ತನ್ನ ಸರಿಸಮಳೆಂದು ಪರಿಗಣಿಸಿದ. ಅದಕ್ಕಾಗಿಯೇ ನಮ್ಮ ದಾಂಪತ್ಯ ಜೀವನ ಸುಖಕರವಾಗಿತ್ತು' ಎಂದಿದ್ದಳು.
ತನ್ನ ಮದುವೆಗೆ ಎರಡು ತಿಂಗಳಿದ್ದಾಗಲೇ ಆಕೆಯ ಕತೆ `ಲಿಹಾಫ್’ (ಕೌದಿ) ಪ್ರಕಟವಾಯಿತು ಹಾಗೂ ಅದು ವಿವಾದವನ್ನೂ ಹುಟ್ಟುಹಾಕಿತು. ಇಂದಿಗೂ ಈ ಉಪಖಂಡದಲ್ಲಿ ಹೆಣ್ಣೊಬ್ಬಳು ಬರೆದ ಅತ್ಯಂತ ವಿವಾದಾಸ್ಪದ ವಿಷಯದ ಕತೆಯೆಂದು ಪರಿಗಣಿಸಲ್ಪಟ್ಟಿದೆ. ನವಾಬನ ಪತ್ನಿಯೊಬ್ಬಳು ತನ್ನ ಗಂಡ ತನಗಾಗಿ ಸಮಯವನ್ನೇ ಕೊಡದಿದ್ದಾಗ ತನ್ನ ಸಹಜ ಲೈಂಗಿಕ ತೃಷೆಯ ತೃಪ್ತಿಯನ್ನು ಹಾಗೂ ಭಾವನಾತ್ಮಕ ಸಾಂತ್ವನವನ್ನು ತನ್ನ ಸೇವಕಿಯಲ್ಲಿ ಕಂಡುಕೊಳ್ಳುತ್ತಾಳೆ. ವಯಸ್ಕ ಹೆಣ್ಣು ನಿರೂಪಕಿ ವಹಿಸಬೇಕಾದ ಎಚ್ಚರಿಕೆ ಮತ್ತು ನಿಗ್ರಹವನ್ನು ತೊಡಗಿಸಲು ಈ ಕತೆಯ ನಿರೂಪಣೆಯನ್ನು ಒಂಭತ್ತು ವರ್ಷಗಳ ಹುಡುಗಿಯ ದೃಷ್ಟಿಯಿಂದ ಮಾಡಲಾಗಿದೆ. ಇಸ್ಮತ್ 1941ರಲ್ಲಿ `ಲಿಹಾಫ್’ ಕತೆಯನ್ನು ಪ್ರಕಟಣೆಗೆ ಕಳುಹಿಸಿದಾಗ ಪತ್ರಿಕೆಯ ಸಂಪಾದಕ ಅಂತಹ ಕತೆಯನ್ನು ಹೆಣ್ಣೊಬ್ಬಳು ಬರೆಯಲು ಸಾಧ್ಯವೇ ಇಲ್ಲ, ಯಾರೋ ಗಂಡಸರು ಹೆಣ್ಣಿನ ಹೆಸರಿನಲ್ಲಿ ಬರೆದಿದ್ದಾರೆ ಎಂದೇ ನಂಬಿದ್ದ. ಕತೆ ಪ್ರಕಟವಾದ ನಂತರ ಓದುಗರು ಮತ್ತು ವಿಮರ್ಶಕರಿಬ್ಬರೂ ಕೃತಿ ಮತ್ತು ಕೃತಿಕಾರಳನ್ನು ಖಂಡಿಸಿದರು. ಕತೆ ಅಶ್ಲೀಲವೆಂದು ಆಕೆಯ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತು. ಲಾಹೋರಿನ ನ್ಯಾಯಾಲಯದಲ್ಲಿ ನಾಲ್ಕು ವರ್ಷ ನಡೆದ ವಿಚಾರಣೆಯಲ್ಲಿ ಕೃತಿಯಲ್ಲಿ ಅಶ್ಲೀಲದ `ನಾಲ್ಕಕ್ಷರ’ ಸಿಗದಿದ್ದುದರಿಂದ ದಾವೆ ವಜಾ ಆಯಿತು. ಅದೇ ಸಮಯದಲ್ಲಿ ಸಾದತ್ ಹಸನ್ ಮಂಟೋನ ಕತೆಗಳ ಮೇಲೂ ಸಹ ಅವು ಅಶ್ಲೀಲವೆಂದು ದಾವೆ ಹೂಡಲಾಗಿತ್ತು. ಎಷ್ಟೋ ಸಾರಿ ಇಬ್ಬರೂ ಜೊತೆಯಲ್ಲಿಯೇ ಲಾಹೋರಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಲಾಹೋರಿನ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ಸನ್ನಿವೇಶಗಳನ್ನು ಇಸ್ಮತ್ ತಾನೇ ಸ್ವತಃ ದಾಖಲಿಸಿದ್ದಾಳೆ:
"ಮರುದಿನ ನ್ಯಾಯಾಲಯ ಕಿಕ್ಕಿರಿದಿತ್ತು. ನನ್ನನ್ನು ಮತ್ತು ಮಂಟೋನನ್ನು ನೋಡಲು ಬಹಳಷ್ಟು ಜನ
ಬಂದಿದ್ದರು. ಆಗ ನಾನು ಮಂಟೊ ಕಿವಿಯಲ್ಲಿ ತಮಾಷೆಗೆ ಪಿಸುಗುಟ್ಟಿದೆ, `ನಮ್ಮನ್ನು ನೋಡಬೇಕಾದಲ್ಲಿ ಟಿಕೀಟು ತೆಗೆದುಕೊಳ್ಳಬೇಕೆಂದು ಹೇಳೋಣ. ಕನಿಷ್ಠ ನಮಗೆ ವಾಪಸ್ಸು ಹೋಗಲು ಟ್ರೈನ್ ಚಾರ್ಜ್ ಆದರೂ ಸಿಗುತ್ತದೆ'.
ಕ್ಷಮಾಪಣೆ ಕೇಳಿ ಕೇಸನ್ನು ವಾಪಸ್ಸು ತೆಗೆದುಕೊಳ್ಳಿ ಹಾಗೂ ಬೇಕಾದಲ್ಲಿ ನಾವೇ ಜುಲ್ಮಾನೆಯ ಅರ್ಧ ಹಣವನ್ನು ಪಾವತಿಸುತ್ತೇವೆ ಎಂದು ಬಹಳಷ್ಟು ಜನ ನಮಗೆ ಸಲಹೆ ನೀಡಿದ್ದರು. ನಾನು ಬರೆದಿರುವುದು ನಿಜವಾಗಿಯೂ ಅಶ್ಲೀಲ ಅಥವಾ ತಪ್ಪು ಎಂದು ರುಜುವಾತಾದಲ್ಲಿ ನಾನು ಶಿಕ್ಷೆ ಅನುಭವಿಸಲು ಸಿದ್ಧಳಿದ್ದೆ. ಲಿಹಾಫ್ ಅಶ್ಲೀಲ ಎಂದು ಸಾಕ್ಷಿ ನೀಡಲು ಬಂದಿದ್ದವನನ್ನು ನನ್ನ ವಕೀಲ ಗೊಂದಲಕ್ಕೀಡುಮಾಡಿ ಅದರಲ್ಲಿ ಅಶ್ಲೀಲವಾಗಿರುವುದು ಯಾವುದೆಂದು ಹೇಳಲು ಅವನಿಂದ ಸಾಧ್ಯವಾಗಲೇ ಇಲ್ಲ. ಕೊನೆಗೆ ಒಬ್ಬ ಸಾಕ್ಷಿದಾರ ಹೇಳಿದ: `ನೋಡಿ ಈ ವಾಕ್ಯ..... ಪ್ರೇಮಿಗಳನ್ನು ಸೆಳೆದುಕೊಳ್ಳುವುದು... ಇದು ಅಶ್ಲೀಲ' ಎಂದ.
`ಯಾವ ಪದ ಅಶ್ಲೀಲ? ಪ್ರೇಮಿಗಳನ್ನು ಎನ್ನುವುದೋ ಅಥವಾ ಸೆಳೆದುಕೊಳ್ಳುವುದು ಎನ್ನುವುದೋ?' ನನ್ನ ವಕೀಲ ಕೇಳಿದ.
`ಪ್ರೇಮಿಗಳನ್ನು' ಕೊಂಚ ಅನಿಶ್ಚಯದ ಮನಸ್ಸಿನಿಂದಲೇ ಹೇಳಿದ ಸಾಕ್ಷಿದಾರ.
`ಮೈ ಲಾರ್ಡ್, ಪ್ರೇಮಿ ಎನ್ನುವ ಪದವನ್ನು ಮಹಾನ್ ಕವಿಗಳು ಎಲ್ಲೆಡೆ ಬೇಕಾದಷ್ಟು ಬಳಸಿದ್ದಾರೆ. ಪ್ರವಾದಿಯನ್ನು ಪ್ರಶಂಸಿಸಿ ಬರೆದಿರುವ ಪದ್ಯಗಳಲ್ಲಿಯು ಪ್ರೇಮಿ ಎನ್ನುವ ಪದದ ಬಳಕೆಯಿದೆ. ದೇವರಿಗೆ ಅಂಜುವ ಜನರು ಆ ಪದಕ್ಕೆ ಮಹತ್ವದ ಸ್ಥಾನ ನೀಡಿದ್ದಾರೆ.'
`ಆದರೆ, ಹುಡುಗಿಯರು ತಾವಾಗಿಯೇ ತಮ್ಮ ಪ್ರೇಮಿಗಳನ್ನು ಸೆಳೆದುಕೊಳ್ಳುವುದು ಆಕ್ಷೇಪಾರ್ಹ,' ಹೇಳಿದ ಸಾಕ್ಷಿದಾರ.
`ಏಕೆ?'
`ಏಕೆಂದರೆ.... ಒಳ್ಳೆಯ ಹುಡುಗಿಯರು ಆ ರೀತಿ ಮಾಡುವುದು ಆಕ್ಷೇಪಾರ್ಹ.'
`ಹಾಗಾದರೆ ಹುಡುಗಿಯರು ಕೆಟ್ಟವರಾದರೆ, ಆ ರೀತಿ ಮಾಡುವುದರಿಂದ ಆಕ್ಷೇಪಾರ್ಹವಾಗುವುದಿಲ್ಲವೆ?'
`ಹ್ಹೂಂ.... ಇಲ್ಲ.'
`ನನ್ನ ಕಕ್ಷಿದಾರ ಲೇಖಕಿ ತನ್ನ ಕತೆಯಲ್ಲಿ ಕೆಟ್ಟ ಹುಡುಗಿಯರ ಬಗ್ಗೆಯೇ ಬರೆದಿರಬಹುದು. (ನನ್ನೆಡೆಗೆ ತಿರುಗಿ) ಅಲ್ಲವೇ? ನೀವು ನಿಮ್ಮ ಕತೆಯಲ್ಲಿ ಕೆಟ್ಟ ಹುಡುಗಿಯರು ಪ್ರೇಮಿಗಳನ್ನು ಸೆಳೆದುಕೊಂಡರು ಎನ್ನುವ ಅರ್ಥದಲ್ಲಿ ಬರೆದಿದ್ದೀರೆಯೆ?'
`ಹೌದು,' ನಾನು ಹೇಳಿದೆ.
`ಇಲ್ಲಿ ಅದು ಅಶ್ಲೀಲವಲ್ಲದಿರಬಹುದು. ಆದರೆ ಒಂದು ಮರ್ಯಾದಸ್ಥ ಕುಟುಂಬದ, ಶಿಕ್ಷಿತ ಹೆಣ್ಣು ಈ ರೀತಿ ಬರೆಯುವುದು ನಿಂದನೀಯ,' ಗುಡುಗಿದ ಸಾಕ್ಷಿದಾರ.
`ನೀ ಎಷ್ಟು ಬೇಕಾದರೂ ನಿಂದಿಸಿಕೊ. ಆದರೆ ಅದು ನನ್ನ ಕಾನೂನಿನಡಿ ಅಪರಾಧವಲ್ಲ.'
ಅಷ್ಟರಲ್ಲಿ `ಕ್ಷಮಾಪಣೆ ಕೇಳಿಬಿಡಿ. ಕೇಸು ವಜಾ ಆಗುತ್ತದೆ ಹಾಗೂ ನೀವು ಇದುವರೆಗೆ ಮಾಡಿರುವ ಖರ್ಚನ್ನೆಲ್ಲಾ ನಾನು ನಿಮಗೆ ಕೊಟ್ಟುಬಿಡುತ್ತೇನೆ,' ಎಂದು ಯಾರೋ ಬಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು.
ನಾನು ಪಕ್ಕದಲ್ಲಿದ್ದ ಮಂಟೋನನ್ನು, `ಏನು ಹೇಳುವಿರಿ ಮಂಟೊ ಸಾಹೆಬ್? ಕ್ಷಮಾಪಣೆ ಕೇಳಿಬಿಡೋಣವೆ? ಅವರು ಕೊಡುವ ದುಡ್ಡಿನಿಂದ ಬೇಕಾದಷ್ಟು ವಸ್ತುಗಳನ್ನು ಖರೀದಿಸಿ ನಾವು ಬಾಂಬೆಗೆ ಹೋಗಬಹುದು,' ಎಂದು ಹೇಳಿದೆ.
`ನಾನ್‍ಸೆನ್ಸ್,' ಎಂದು ಗುಡುಗಿದ ಮಂಟೊ.
`ಕ್ಷಮಿಸಿ, ಈ ನನ್ನ ಹುಚ್ಚ ಗೆಳೆಯ ಮಂಟೊ ಒಪ್ಪುತ್ತಿಲ್ಲ,' ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದವರಿಗೆ ಹೇಳಿದೆ.
`ಅವರು ಒಪ್ಪದಿದ್ದರೆ ಹೋಗಲಿ, ನೀವು... ನೀವು ಏನನ್ನುತ್ತೀರಿ?'
`ಅಯ್ಯೋ, ನಿಮಗೆ ಗೊತ್ತಿಲ್ಲ, ಈ ಮಂಟೊ ಎಂಥ ಜಗಳಗಂಟ ಎಂಬುದು. ನಾನು ಹಾಗೇನಾದರೂ ಮಾಡಿದರೆ ಬಾಂಬೆಯಲ್ಲಿ ಆತ ನನ್ನ ಬದುಕನ್ನು ಸಂಕಟವಾಗಿಸಿಬಿಡುತ್ತಾನೆ. ಬೇಕಾದರೆ ನನ್ನ ಕತೆ ಅಶ್ಲೀಲ ಎಂದು ನನಗೆ ಶಿಕ್ಷೆ ಕೊಟ್ಟುಬಿಡಲಿ, ಅದನ್ನು ಸುಲಭವಾಗಿ ಅನುಭವಿಸುತ್ತೇನೆ, ಆದರೆ ಅವನೊಂದಿಗೆ ಜಗಳ ಮಾತ್ರ ನನಗೆ ಬೇಡ' ಎಂದೆ.
ನಮಗೆ ಏನೂ ಶಿಕ್ಷೆ ಆಗಲಿಲ್ಲವೆಂದು ಆ ವ್ಯಕ್ತಿಗೆ ಬೇಸರವಾಯಿತೋ ಏನೋ. ವಿಚಾರಣೆ ಮುಗಿದ ನಂತರ ನ್ಯಾಯಾಧೀಶರು ನನ್ನನ್ನು ಅವರ ಹೊರಕೋಣೆಗೆ ಕರೆಸಿಕೊಂಡು ಅನೌಪಚಾರಿಕವಾಗಿಯೇ,
`ನಾನು ನಿಮ್ಮ ಬಹುಪಾಲು ಎಲ್ಲಾ ಕತೆಗಳನ್ನು ಓದಿದ್ದೇನೆ. ಅವೇನೂ ಅಶ್ಲೀಲವಲ್ಲ. ಲಿಹಾಫ್ ಸಹ ಅಶ್ಲೀಲವಲ್ಲ. ಆದರೆ ಆ ಮಂಟೋನ ಕೆಲವು ಬರಹಗಳಲ್ಲಿ ಹೊಲಸು ತುಂಬಿರುತ್ತದೆ' ಎಂದರು.
`ಈ ಜಗತ್ತು ಸಹ ಹೊಲಸಿನಿಂದಲೇ ತುಂಬಿದೆ,' ನಾನು ಹೇಳಿದೆ.
`ಹಾಗೆಂದು, ಅದನ್ನು ಕೆದಕಿ ಮೇಲೆಸೆಯಬೇಕೆ?'
`ಅದನ್ನು ಕೆದಕಿ, ಮೇಲೆಸೆದರೇನೇ ಅದು ಎಲ್ಲರ ಕಣ್ಣಿಗೆ ಬೀಳುವುದು ಹಾಗೂ ಜನರಿಗೆ ಆಗಲೇ ಅದನ್ನು ಶುಚಿಗೊಳಿಸುವ ಅವಶ್ಯಕತೆಯೂ ಕಂಡುಬರುವುದು.'
ನ್ಯಾಯಾಧೀಶರು ಜೋರಾಗಿ ನಕ್ಕು ಸುಮ್ಮನಾದರು. ನನ್ನ ಮೇಲೆ ದಾವೆ ಹೂಡಿದಾಗ ನನಗೇನೂ ತುಂಬಾ ಚಿಂತೆಯಾಗಿರಲಿಲ್ಲ. ಅದೇ ರೀತಿ ಅದು ವಜಾ ಆದಾಗಲೂ ನನಗೇನೂ ತುಂಬಾ ಸಂತೋಷವಾಗಲಿಲ್ಲ. ಆದರೆ ಲಾಹೋರ್‍ಗೆ ಹೋಗುವ ಅವಕಾಶ ಮತ್ತೆ ಸಿಗುವುದಿಲ್ಲವಲ್ಲಾ ಎಂದು ಬೇಸರವಾಯಿತು."
          `ಕಲಿಯಾಂ’ ಮತ್ತು `ಕೋಟೇನ್’ ಆಕೆಯ ಮೊದಲ ಕಥಾ ಸಂಕಲನಗಳು ಹಾಗೂ ಅವು ಆಕೆಯ ಅಣ್ಣ ಅಜೀಂ ಬೇಗ್ ಚುಗ್ತಾಯ್ ಬದುಕಿದ್ದಾಗಲೇ ಪ್ರಕಟವಾದವು. ಅದಾದನಂತರ ಹಲವಾರು ಸಂಕಲನಗಳು ಪ್ರಕಟವಾದವು- `ಏಕ್ ಬಾತ್’, `ಚುಯ್ ಮುಯ್’, `ದೋ ಹಾತ್’, `ಖರೀದ್ ಲೋ’, `ಏಕ್ ಕತ್ರಾಯೆ ಖೂನ್’ ಮತ್ತು `ಥೋಡಿ ಸಿ ಪಾಗಲ್’. `ತೇರ್ಹಿ ಲಖೀರ್’ ಮತ್ತು `ಸೌದಾಯೆ’ ಎಂಬ ಕಾದಂಬರಿಗಳು ಮತ್ತು `ಜಿದ್ದಿ’, `ದಿಲ್ ಕಿ ದುನಿಯಾ’ ಹಾಗೂ `ಮಾಸೂಮಾ’ ಎಂಬ ಕಿರುಕಾದಂಬರಿಗಳೂ ಪ್ರಕಟವಾದವು. ಇದರ ಜೊತೆಗೆ ಆಕೆಯ ಹಲವಾರು ಪ್ರಬಂಧಗಳು ಮತ್ತು ಲೇಖನಗಳೂ ಪ್ರಕಟವಾದವು. ತನ್ನ ಪತಿಯೊಂದಿಗೆ ಹನ್ನೆರಡು ಚಲನಚಿತ್ರಗಳಿಗೆ ಚಿತ್ರಕತೆಗಳನ್ನು ಬರೆದಳು ಮತ್ತು ಸ್ವತಂತ್ರವಾಗಿ ಐದು ಚಲನಚಿತ್ರಗಳನ್ನು ಸಹ ನಿರ್ಮಿಸಿದಳು. ಶಶಿಕಪೂರ್‍ನ `ಜುನೂನ್’ ಸಿನೆಮಾದಲ್ಲಿ ಒಂದು ಪಾತ್ರವನ್ನು ಸಹ ನಿರ್ವಹಿಸಿದ್ದಳು.
          ಇಸ್ಮತ್ ಚುಗ್ತಾಯ್ ಬರೆಯಲು ಆರಂಭಿಸಿದ ಸಮಯದಲ್ಲಿ ಮಹಿಳೆಯರಿಗೆ ಅದರಲ್ಲೂ ಮುಸಲ್ಮಾನ ಮಹಿಳೆಯರಿಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಅವರನ್ನು ಅಡುಗೆ ಮನೆಗಳಲ್ಲಿ ಕೂಡಿಹಾಕಿ ಅವರ ದನಿಗಳನ್ನು ಅದುಮಿಡಲಾಗಿತ್ತು. ಸಂಪ್ರದಾಯದ ಮತ್ತು ನೈತಿಕತೆಯ ಸರಪಳಿಗಳನ್ನು ಮಹಿಳೆಯರಿಗಾಗಿಯೇ ಇದೆಯೆಂಬಂತೆ ಅವರನ್ನು ಅವುಗಳಲ್ಲಿ ಬಂಧಿಸಿಡಲಾಗಿತ್ತು. ಆಗ ಭಾರತೀಯ ಮುಸಲ್ಮಾನ ಮಹಿಳೆಯರಿಗೆ ಓದಲು ಸಿಗುತ್ತಿದ್ದ ಪುಸ್ತಕವೆಂದರೆ 1905ರಲ್ಲಿ ಪ್ರಕಟವಾಗಿದ್ದ ಎರಡು ಸಂಪುಟಗಳ `ಗೂದರ್ ಕ ಲಾಲ್’ ಎಂಬ ಕಾದಂಬರಿ. ಅದರ ಕರ್ತೃ ವಲೀದಾ ಅಫ್ಜಲ್ ಅಲಿ, ಅಂದರೆ `ಅಫ್ಜಲ್ ಅಲಿಯ ತಾಯಿ’ ಎಂದರ್ಥ. ಆಗ ಹೆಣ್ಣೊಬ್ಬಳು ಕೃತಿಕಾರಳಾಗಿದ್ದರೂ ಆಕೆ ತನ್ನ ಹೆಸರನ್ನು ಹಾಕಿಕೊಳ್ಳುವಂತಿರಲಿಲ್ಲ! ಆ ಕಾದಂಬರಿಯಲ್ಲಿ ಮುಸಲ್ಮಾನ ಸಂಸ್ಕೃತಿಯ ಬಗ್ಗೆ, ಸಂಪ್ರದಾಯ ಮತ್ತು ಆಚರಣೆಗಳ ಬಗ್ಗೆ ವಿವರಗಳಿತ್ತು. ಹಾಗಾಗಿ ಅದನ್ನು ಹೊಸದಾಗಿ ಮದುವೆಯಾದ ಹೆಣ್ಣಿಗೆ ಓದಲು ಕೊಡುತ್ತಿದ್ದರು. ಅದೇ ಸಮಯದಲ್ಲಿ ಮುಸಲ್ಮಾನ ಹೆಣ್ಣು ಹೇಗೆ ನಡೆದುಕೊಳ್ಳಬೇಕು ಎನ್ನುವುದರ ಬಗ್ಗೆಯೂ ಹಲವಾರು ಕಾದಂಬರಿಗಳು ಇದ್ದವು ಹಾಗೂ ಅವುಗಳನ್ನೆಲ್ಲಾ ಗಂಡಸರೇ ಬರೆದಿದ್ದರು. ಅಂತಹ ಸಮಯದಲ್ಲಿ ಇಸ್ಮತ್‍ಳ ಕೃತಿಗಳು ಉಪಖಂಡದ ಉರ್ದು ಸಾಹಿತ್ಯಕ್ಕೆ ಹೊಸ ದಾರಿಯನ್ನೇ ರೂಪಿಸಿಕೊಟ್ಟವು. ಹೆಣ್ಣೊಬ್ಬಳು `ನಿಷೇಧಿತ’ ವಿಷಯಗಳಾದಂತಹ ತಮ್ಮ ಭಾವನೆಗಳು, ಪ್ರೀತಿ ಪ್ರೇಮ, ಸಂಬಂಧಗಳು, ಲೈಂಗಿಕತೆಯ ಬಗ್ಗೆ ಬರೆಯಬಹುದೆಂದು ತೋರಿಸಿಕೊಟ್ಟಳು. ಆದರೆ ವಿಪರ್ಯಾಸವೆಂದರೆ ಆಕೆಯನ್ನು ಅದರಿಂದಾಗಿ ಅಶ್ಲೀಲ ಲೇಖಕಿಯೆಂದೇ ಗುರುತಿಸಿದರು ಮತ್ತು ಲಿಹಾಫ್‍ನ ಮೊದಲು ಮತ್ತು ಆನಂತರ ಬರೆದ ಕೃತಿಗಳನ್ನು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. `ಕಳೆದ ಕೆಲವರ್ಷಗಳಿಂದಷ್ಟೇ ಯುವಪೀಳಿಗೆ ನನ್ನ ಇತರ ಕೃತಿಗಳನ್ನು ಓದಿ ನಾನೊಬ್ಬ ವಾಸ್ತವವಾದಿ, ಅಶ್ಲೀಲ ಲೇಖಕಿಯಲ್ಲ ಎಂದು ಗುರುತಿಸಿದ್ದಾರೆ' ಎಂದು ನೋವಿನಿಂದ ಹೇಳಿಕೊಂಡಿದ್ದಾಳೆ.
ಇಸ್ಮತ್ ಮಧ್ಯಮ ವರ್ಗದ ಸಾಧಾರಣ ಮಹಿಳೆಯರ ಬದುಕುಗಳ ಬಗ್ಗೆಯೇ ಹೆಚ್ಚು ಬರೆದಿದ್ದಾಳೆ ಎಂದು ವಿಮರ್ಶಕರು ಗೊಣಗುತ್ತಿದ್ದರು. ಆದರೆ ಆಕೆಯ ಜಗತ್ತೇ ಅದಾಗಿತ್ತು. ಉತ್ತರ ಪ್ರದೇಶದ ಮಧ್ಯಮ ವರ್ಗದ ಮುಸಲ್ಮಾನ ಕುಟುಂಬಗಳಲ್ಲಿನ ಮಹಿಳೆಯ ಸಂವೇದನೆಗಳ ಚಿತ್ರಣವನ್ನು ಆಕೆಯಷ್ಟು ಸೂಕ್ಷ್ಮವಾಗಿ ಮತ್ತಾವ ಉರ್ದು ಬರಹಗಾರರು ಮಾಡಿಲ್ಲ. ತನ್ನ ಕತೆಗಳಲ್ಲಿ ಆತುರತೆ ಇದೆಯೆಂದು ಯಾರೋ ಕೇಳಿದ್ದಕ್ಕೆ ತನಗೆ ಒಂಟಿಯಾಗಿ, ಪ್ರಶಾಂತವಾಗಿ ಬರೆಯಲು ಅವಕಾಶವೇ ಇರಲಿಲ್ಲವೆಂದು ಆಕೆ ಹೇಳಿದ್ದಳು. ತನ್ನ ಸಮಕಾಲೀನ ಉರ್ದು ಲೇಖಕರಾದ ಸಾದತ್ ಹಸನ್ ಮಂಟೊ, ರಾಜಿಂದರ್ ಸಿಂಗ್ ಬೇಡಿ ಮತ್ತು ಕ್ರಿಶನ್ ಚಂದರ್‍ರವರಂತೆ ಆಕೆಯೂ ಪಶ್ಚಿಮದ ಕಥನ ಲೇಖಕರ ಪ್ರಭಾವಕ್ಕೊಳಗಾಗಿದ್ದಳು. ಅದು ಆಕೆಯ ಕೃತಿಗಳಲ್ಲಿನ ಸಾಮಾಜಿಕ ಮತ್ತು ಲೈಂಗಿಕ ವಿಷಯಗಳ ಆಯ್ಕೆಯಲ್ಲಿಯೂ ಕಂಡುಬರುತ್ತದೆ. ಆದರೆ ಆಕೆ ಆ ವಿಷಯಗಳನ್ನು ಮುಕ್ತತೆಯಿಂದ ಮತ್ತು ಅಷ್ಟೇ ಸೂಕ್ಷ್ಮತೆಯಿಂದ ಯಾವುದೇ ತೀರ್ಪು ನೀಡದ ಎಚ್ಚರ ವಹಿಸಿ ತನ್ನ ಕೃತಿಗಳಲ್ಲಿ ಬಳಸಿಕೊಂಡಿದ್ದಳು. ಅದರಿಂದಾಗಿಯೇ ಆಕೆ `ಲಿಹಾಫ್’ ರಚಿಸಲು ಸಾಧ್ಯವಾಯಿತು.
ಲಿಹಾಫ್ ಕತೆಯಲ್ಲಿನ ಬೇಗಂ ಆಲಿಘರ್ ನವಾಬನ ಪತ್ನಿಯಾಗಿದ್ದಳು. ಯಾರೋ ಆ ವಿಷಯವನ್ನು ಬೇಗಂಗೆ ತಿಳಿಸಿದ್ದರು. ಎಷ್ಟೋ ವರ್ಷಗಳ ನಂತರ ಇಸ್ಮತ್ ಆಲಿಘರ್‍ಗೆ ಹೋದಾಗ ಆ ಬೇಗಂಳನ್ನು ಭೇಟಿಯಾಗಬೇಕಾಯ್ತು. ಆಕೆ ಏನನ್ನುವಳೋ ಎಂದು ಇಸ್ಮತ್ ಕೊಂಚ ಹೆದರಿಕೊಂಡೇ ಇದ್ದಳು. ಆ ಭೇಟಿಯ ಬಗ್ಗೆ ಇಸ್ಮತ್ ಸ್ವತಃ ಈ ರೀತಿ ಬರೆದಿದ್ದಾಳೆ:
"ಇಬ್ಬರೂ ಎದುರುಬದುರು ನಿಂತಾಗ ನನ್ನ ಕಾಲ ಕೆಳಗಿನ ಭೂಮಿ ಕುಸಿಯುತ್ತಿದೆ ಎಂದೆನ್ನಿಸಿತು. ಆಕೆ ತನ್ನ ಬಟ್ಟಲುಗಣ್ಣುಗಳಿಂದ ನನ್ನನ್ನೇ ನೋಡುತ್ತಿದ್ದಳು. ಆಕೆಯ ಕಣ್ಣುಗಳಲ್ಲಿ ಸಂತೋಷ ಮತ್ತು ಉತ್ಸಾಹವಿತ್ತು. ಜನಜಂಗುಳಿಯಲ್ಲಿ ಆಕೆ ಮುನ್ನುಗ್ಗಿ ನನ್ನೆಡೆಗೆ ಬಂದು ನನ್ನನ್ನು ತಬ್ಬಿಕೊಂಡಳು. ನನ್ನನ್ನು ಪಕ್ಕಕ್ಕೆ ಕರೆದೊಯ್ದು, `ನಿನಗೆ ಗೊತ್ತೇನು, ನವಾಬನಿಗೆ ವಿಚ್ಛೇದನ ನೀಡಿ ಎರಡನೆಯ ಮದುವೆಯಾಗಿದ್ದೇನೆ. ದೇವರ ದಯದಿಂದ ನನಗೆ ಮುತ್ತಿನಂತ ಮಗ ಹುಟ್ಟಿದ್ದಾನೆ,' ಎಂದಳು. ನಾನು ಯಾರದಾದರೂ ಎದೆಗೊರಗಿ ಜೋರಾಗಿ ಅಳಬೇಕೆನ್ನಿಸಿತು. ನನ್ನ ಕಣ್ಣೀರು ತಡೆಯಲಾಗಲಿಲ್ಲ, ಆದರೂ ತೋರಗೊಡದೆ ನಗುತ್ತಿದ್ದೆ. ಬೇಗಂ ನನ್ನನ್ನು ಅತ್ಯದ್ಭುತ ಔತಣಕ್ಕೆ ಆಹ್ವಾನಿಸಿದಳು. ಹೂವಿನಂಥ ಆಕೆಯ ಮಗನನ್ನು ನೋಡಿ ನನಗೆ ಬಹಳ ಸಂತೋಷವಾಯಿತು. ಆ ಮಗು ನನ್ನದೂ ಸಹ ಎನ್ನಿಸುತ್ತಿತ್ತು. ನನ್ನ ಮಾನಸಪುತ್ರ, ನನ್ನ ಮನಸ್ಸಿನ ಒಂದು ಜೀವಂತ ಭಾಗ, ನನ್ನ ಲೇಖನಿಯ ಕುಡಿ ಅವನು ಎನ್ನಿಸುತ್ತಿತ್ತು. ಆ ಕ್ಷಣ ನನಗನ್ನಿಸಿತು, ಕಲ್ಲುಗಳಲ್ಲಿಯೂ ಹೂಗಳನ್ನು ಅರಳಿಸಬಹುದು. ಆದರೆ ಅದಕ್ಕಾಗಿ ತಮ್ಮ ಹೃದಯದಿಂದ ನೀರೆರೆಯುವರು ಬೇಕಷ್ಟೆ..."
          ಇಸ್ಮತ್ ಚುಗ್ತಾಯ್‍ರವರ ಬದುಕಿನ ಬಗ್ಗೆ ಬರೆದಿರುವ ಹಾಗೂ ಆಕೆಯ ಹಲವಾರು ಕೃತಿಗಳನ್ನು ಅನುವಾದ ಮಾಡಿರುವ ತಾಹೀರಾ ನಕ್ವಿಯವರ ಪ್ರಕಾರ ಇಸ್ಮತ್ ಒಬ್ಬ ಪ್ರಜ್ಞಾಪೂರ್ವಕವಲ್ಲದ ಮತ್ತು ಅಘೋಷಿತ ಸ್ತ್ರೀವಾದಿ. ಸ್ತ್ರೀವಾದಿಗಳು ಅಥವಾ ಮುಕ್ತಗೊಂಡ ಮಹಿಳೆಯರು ಮಾಡುತ್ತಿದ್ದ ಎಲ್ಲಾ ಹೋರಾಟಗಳನ್ನು ಆಕೆ ಮಾಡುತ್ತಿದ್ದಳು, ಆದರೆ ಆಕೆಗೆ ಅವು ಯಾವುದೇ ವಿಶೇಷ ಕೃತ್ಯಗಳೆನ್ನಿಸುತ್ತಿರಲಿಲ್ಲ.
          ಆಕೆಗೆ ಇಬ್ಬರು ಪುತ್ರಿಯರಿದ್ದು ತನ್ನ ಪತಿಯ ಮರಣಾನಂತರ ಬಾಂಬೆಯಲ್ಲೇ ವಾಸಿಸುತ್ತಿದ್ದಳು. ಆಕೆಯ ಈಡೇರದ ಆಸೆಯೇನಾದರೂ ಇದೆಯೇ ಎಂದು ಒಮ್ಮೆ ಕೇಳಿದ್ದಕ್ಕೆ ಆಕೆ ತನಗೆ ಪುನಃ ಭಾರತದಲ್ಲೇ ಹುಟ್ಟುವ ಆಸೆ ಎಂದಿದ್ದಳು. ವಿಷಾದವೆಂದರೆ ಆಕೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಗಲಿಲ್ಲ ಆದರೆ ತನ್ನ ಸಾವಿನ ಒಂದು ವರ್ಷದ ಮೊದಲು 1990ರಲ್ಲಿ ಉರ್ದು ಸಾಹಿತ್ಯಕ್ಕಾಗಿ ಸಮ್ಮಾನ್ ಪ್ರಶಸ್ತಿ ಲಭಿಸಿತು. ಇಸ್ಮತ್ ಚುಗ್ತಾಯ್ 1991ರ ಅಕ್ಟೋಬರ್ 24ರಂದು ಕೊನೆಯುಸಿರೆಳೆದರು. 

ನಾನು ಅನುವಾದಿಸಿದ ಆಕೆಯ ಪ್ರಖ್ಯಾತ ಮತ್ತು ವಿವಾದಾಸ್ಪದ ಕತೆ `ಲಿಹಾಫ್’ (ಕೌದಿ) ಇಲ್ಲಿದೆ.
https://antaragange.blogspot.com/2020/07/blog-post_45.html


1 ಕಾಮೆಂಟ್‌:

Girish Babu ಹೇಳಿದರು...

ಸ್ತ್ರೀವಾದಿ ಬರಹಗಾರ್ತಿ ಇಸ್ಮತ್‌ ವ್ಯಕ್ತಿತ್ವ ಮತ್ತು ಆಕೆಯ ಬರಹಗಳ ಬಗ್ಗೆ ಉಪಯುಕ್ತ ಲೇಖನ