Friday, August 21, 2020

ಟೋನಿ ಜೋಸೆಫ್ `Early Indians’: ಮೊದಲ ಭಾರತೀಯರು ನಾವು ಬಂದದ್ದು ಹೇಗೆ?


 12 ಆಗಸ್ಟ್‌ 2020ರ ʻನ್ಯಾಯಪಥʼ ಪತ್ರಿಕೆಯಲ್ಲಿ ಪ್ರಕಟವಾದ ಟೋನಿ ಜೋಸೆಫ್‌ ರವರ ʻEarly Indians' ಕೃತಿಯ ನಾನು ಅನುವಾದಿಸಿರುವ ಮೊದಲ ಅಧ್ಯಾಯದ ಅನುವಾದ ಇಲ್ಲಿದೆ.:

ನಮ್ಮ ಪೂರ್ವಜರು, ಮೊದಲ/ಪ್ರಾಚೀನ ಭಾರತೀಯರು, ಆಪ್ರಿಕಾ, ಪಶ್ಚಿಮ ಏಷ್ಯಾ, ಪೂರ್ವ ಏಷ್ಯಾ ಮತ್ತು ಮಧ್ಯ ಏಷ್ಯಾಗಳಿಂದ ಬಂದವರು ಕಳೆದ 65,000 ವರ್ಷಗಳಿಂದ ಈ ನಾಡನ್ನು ಹೇಗೆ ತಮ್ಮದಾಗಿಸಿಕೊಂಡರು ಎಂಬ ಕಥೆ.

‘ನೀವು ಚಲಿಸುತ್ತಲೇ ಇಲ್ಲ ಎಂದು ಅನ್ನಿಸುತ್ತಿದ್ದರೂ ನೀವು ನಿಜವಾಗಿಯೂ ಎಷ್ಟು ವೇಗವಾಗಿ ಚಲಿಸುತ್ತಿರುವಿರಿ ಎಂಬುದು ನಿಮಗೆ ತಿಳಿದಿದೆಯೇ?’ – ಪ್ರೊಫೆಸರ್ ಆಂಡ್ರ್ಯೂ ಫ್ರಕ್ನೋಯ್, ಖಗೋಳಶಾಸ್ತ್ರಜ್ಞ

ಜಗತ್ತು ನಮಗೆ ಕಾಣುವಂತೆಯೇ ಇರುವುದಿಲ್ಲ. ನೀವು ಈ ವಾಕ್ಯ ಓದುತ್ತಿರುವಂತೆ, ಬಹುಶಃ ನಿಮ್ಮ ಓದುವ ಕೋಣೆಯಲ್ಲಿ ಆರಾಮ ಕುರ್ಚಿಯಲ್ಲಿ ಕುಳಿತಿದ್ದಲ್ಲಿ ನೀವು ಒಂದೆಡೆ ತಟಸ್ಥವಾಗಿರುವಂತೆ ಭಾವಿಸಿರುತ್ತೀರಿ. ಆದರೆ ನೀವು ಒಂದೆಡೆ ತಟಸ್ಥವಾಗಿಲ್ಲ, ಏಕೆಂದರೆ ನೀವು ಭಾಗವಾಗಿರುವ ಹಾಲು ಹಾದಿ (ಮಿಲ್ಕಿ ವೇ ಗ್ಯಾಲೆಕ್ಸಿ) ಆಕಾಶಗಂಗೆಯು ಅಂತರಿಕ್ಷದಲ್ಲಿ ಗಂಟೆಗೆ 2.1 ದಶಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದು ಭೂಮಿ ತನ್ನದೇ ಅಕ್ಷದ ಮೇಲೆ ಸುತ್ತುತ್ತಿರುವುದರ ಪರಿಣಾಮವನ್ನು (ಭೂಮಧ್ಯ ರೇಖೆಯ ಬಳಿ ಗಂಟೆಗೆ 1600 ಮತ್ತು ಧೃವಗಳ ಬಳಿ ಸೊನ್ನೆ ಕಿಲೋಮೀಟರ್ ವೇಗ), ಸೂರ್ಯನ ಸುತ್ತ ಸುತ್ತುತ್ತಿರುವುದರ (ಗಂಟೆಗೆ 107,000 ಕಿಲೋಮೀಟರ್) ಹಾಗೂ ಹಾಲು ಹಾದಿಯ ಸುತ್ತ ಸೂರ್ಯನ ಪಯಣವನ್ನು (ಗಂಟೆಗೆ 792,000 ಕಿಲೋಮೀಟರ್‌ಗಳು) ಪರಿಗಣನೆಗೆ ತೆಗೆದುಕೊಂಡಿಲ್ಲ.

ನೀವು ಮೇಲಿನ ಪ್ಯಾರಾ ಓದಲು ತೆಗೆದುಕೊಂಡಿರುವ ಸುಮಾರು ಇಪ್ಪತ್ತು ಸೆಕೆಂಡುಗಳ ಸಮಯದಲ್ಲಿ ನೀವು ನಿಮಗರಿವಿಲ್ಲದೆ ಸಾವಿರಾರು ಕಿಲೋಮೀಟರ್‌ಗಳಷ್ಟು ಪಯಣಿಸಿದ್ದೀರಿ.

ಈ ಮೇಲಿನ ಲೆಕ್ಕಾಚಾರಗಳನ್ನು ಕಂಡುಕೊಳ್ಳುವಂತಹ ಪ್ರತಿಯೊಂದು ಆವಿಷ್ಕಾರವೂ – ಸೂರ್ಯನನ್ನು ಸುತ್ತುತ್ತಿರುವ ಹಲವಾರು ಗ್ರಹಗಳಲ್ಲಿ ಭೂಮಿಯೂ ಕೇವಲ ಒಂದು ಗ್ರಹ; ಹಾಲುಹಾದಿ ಆಕಾಶಗಂಗೆಯಲ್ಲಿ ಸೂರ್ಯನೂ ಸಹ ಒಂದು ಸಾಧಾರಣ ಮಧ್ಯವಯಸ್ಸಿನ ನಕ್ಷತ್ರವಾಗಿದೆ; ಈ ಆಕಾಶಗಂಗೆಯೂ ಸಹ ನೂರಾರು ಕೋಟಿ ಆಕಾಶಗಂಗೆಗಳಲ್ಲಿ ಒಂದು ಎಂಬುದು – ಕೆಲವರಲ್ಲಿ ಕುಬ್ಜ ಭಾವನೆ ತರಿಸಿದರೆ ಇನ್ನು ಕೆಲವು ವಿವೇಕವುಳ್ಳವರಲ್ಲಿ ನಾವು ಭಾಗವಾಗಿರುವ ಈ ಭವ್ಯ ವ್ಯವಸ್ಥೆಯ ಬಗೆಗೆ ಹೊಸ ವಿಸ್ಮಯ ಭಾವ ಉಂಟುಮಾಡಿದೆ.

ಇದು ಅನಂತ ವಿಶ್ವದ ದೃಷ್ಟಿಯಿಂದ ಮಾತ್ರವಲ್ಲ, ಜೈವಿಕ ದೃಷ್ಟಿಯಿಂದಲೂ ಸಹ ಸತ್ಯವಾಗಿದೆ. ಡಾರ್ವಿನ್ ಒಂದೂವರೆ ಶತಮಾನದ ಹಿಂದೆ ಜೀವ ವಿಕಾಸ ಸಿದ್ಧಾಂತವನ್ನು ಮಂಡಿಸಿ ಚಿಂಪಾಂಜಿಗಳು ನಮ್ಮ ಅತ್ಯಂತ ನಿಕಟ ಸಂಬಂಧಿಗಳೆಂದು ಸೂಚಿಸಿ ಮನುಕುಲಕ್ಕೇ ಆಘಾತ ನೀಡಿದಾಗಿನಿಂದ, ನಡೆಯುತ್ತಿರುವ ಪ್ರತಿಯೊಂದು ಆವಿಷ್ಕಾರವೂ ನಾವು ನಮಗಾಗಿ ನಿರ್ಮಿಸಿಕೊಂಡ ವಿಶೇಷ ಅಂತಸ್ತು, ಸ್ಥಾನಮಾನಗಳ ಬುಡವನ್ನೇ ಅಲುಗಾಡಿಸುತ್ತಿವೆ. ಮೊದಲಿಗೆ, ಆಧುನಿಕ ಮಾನವರಾದ ನಾವು ಅಥವಾ ಹೋಮೊ ಸೇಪಿಯೆನ್ಸ್1, ಕಾಣಿಸಿಕೊಂಡಾಗಿನಿಂದ ನಿರ್ಮಿಸುತ್ತಿದ್ದ ಸಲಕರಣೆಗಳಲ್ಲಿ ಇದ್ದಕ್ಕಿದ್ದಂತೆ ಮತ್ತು ಅನುಕೂಲಕರ ವ್ಯತ್ಯಾಸಗಳು ಕಂಡುಬಂದಿವೆ ಹಾಗೂ ಕಲೆ ಮತ್ತು ಅಮೂರ್ತ ಚಿಂತನೆಗಳು ರೂಪುಗೊಳ್ಳತೊಡಗಿದವು ಎಂದು ಭಾವಿಸಿದ್ದೇವೆ. ಅದೆಲ್ಲವೂ ಸುಳ್ಳೆಂದು ಈಗ ನಮಗೆ ತಿಳಿದಿದೆ, ಜೀವವಿಕಾಸದ ಹಾದಿಯಲ್ಲಿನ ನಮ್ಮ ಅತ್ಯಂತ ನಿಕಟ ಸಂಬಂಧಿಗಳಾಗಿದ್ದ ಹೋಮೊ ಎರೆಕ್ಟಸ್, ಹೋಮೊ ನಿಯಾಂಡರ್ತೆಲೆನ್ಸಿಸ್, ಡೆನಿಸೋವನ್ನರು ತಯಾರಿಸುತ್ತಿದ್ದ ಹಾಗೂ ನಾವು ತಯಾರಿಸುತ್ತಿದ್ದ ಸಲಕರಣೆಗಳಲ್ಲಿ ವ್ಯತ್ಯಾಸವಿರಲಿಲ್ಲ ಮತ್ತು ಯಾವುದೇ ಪರ್ವಕಾಲದ ಕ್ಷಣವೂ ಇರಲಿಲ್ಲ. ವಿನಾಶವಾಗಿರುವ ಹೋಮೊ ಪ್ರಭೇದದ (ಹೋಮೊ ಕುಟುಂಬದ ಸದಸ್ಯರಲ್ಲಿ ಇಂದು ಜೀವಂತವಾಗಿರುವುದು ಹೋಮೊ ಸೇಪಿಯೆನ್ಸ್ ಮಾತ್ರ) ಎಲ್ಲ ಸದಸ್ಯರೂ ನಮ್ಮಂತೆಯೇ ದೊಡ್ಡ ಮಿದುಳನ್ನು ಹೊಂದಿದ್ದರು.
 

ಆ ಇತರ ಪ್ರಭೇದಗಳು ಹೋಮೊ ಸೇಪಿಯೆನ್ಸ್‍ಗೆ ಆನುವಂಶಿಕವಾಗಿ ಎಷ್ಟು ಸಾಮ್ಯತೆ ಹೊಂದಿದ್ದರೆಂದರೆ, ಅವರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ಆ ಮೂಲಕ ಹುಟ್ಟಿದ ಮಕ್ಕಳೂ ಸಹ ಫಲವಂತಿಕೆ ಹೊಂದಿದ್ದರೆಂಬುದನ್ನು ನಾವು ಕಳೆದ ಒಂದು ದಶಕದಲ್ಲಿ ತಿಳಿದಿದ್ದೇವೆ. ಇದು ನಮಗೆ ತಿಳಿದಿದೆ ಏಕೆಂದರೆ ಎಲ್ಲಾ ಆಫ್ರಿಕೇತರ ಹೋಮೊ ಸೇಪಿಯೆನ್ಸ್ ಇಂದು ತಮ್ಮ ಡಿ.ಎನ್.ಎ.ಗಳಲ್ಲಿ ಶೇ.2ರಷ್ಟು ನಿಯಾಂಡರ್ತಲ್ ವಂಶವಾಹಿಗಳನ್ನು ಹೊಂದಿವೆ. ನಮ್ಮಲ್ಲಿ ಕೆಲವರು – ಮೆಲನೇಸಿಯನ್ನರು, ಪಪುವನ್ನರು ಮತ್ತು ಆಸ್ಟ್ರೇಲಿಯಾದ ಮೂಲನಿವಾಸಿಗಳು – ಸಹ ಶೇ.3ರಿಂದ 6ರಷ್ಟು ಡೆನಿಸೋವನ್ ಡಿ.ಎನ್.ಎ. ಹೊಂದಿದ್ದಾರೆ. ಆನುವಂಶಿಕತೆಯಿಂದಾಗಿ ನಾವು ಅವರನ್ನು ನಮ್ಮ ಪೂರ್ವಜರೆಂದು ಕರೆಯಬಹುದು, ಆದರೆ ಅವರನ್ನು ಹೋಮೊ ಸೇಪಿಯೆನ್ನರು ಒಡನಾಡಿದ ಜೀವವಿಕಾಸದ ಹಾದಿಯ ಬಂಧುಗಳೆಂದು ಕರೆಯುವುದು ಹೆಚ್ಚು ಉಚಿತ. ಚಿಂಪಾಂಜಿಗಳು ಶೇ. 96ರಷ್ಟು ಹೋಮೊ ಸೇಪಿಯೆನ್ಸ್ ಡಿ.ಎನ್.ಎ. ಹಂಚಿಕೊಂಡಿದ್ದು, ಜೈವಿಕವಾಗಿ ನಾವು ಜೀವವಿಕಾಸದ ಹಾದಿಯ ಸಹಪಯಣಿಗರಾಗಿದ್ದೇವೆ. ಅಲ್ಲದೆ ಹೋಮೊ ಸೇಪಿಯೆನ್ನರೂ ಇದ್ದಕ್ಕಿದ್ದಂತೆ ಈ ಭೂಮಿಯ ಮೇಲೆ ಪ್ರತ್ಯಕ್ಷರಾದವರಲ್ಲ. ಅದೊಂದು ಬಹಳ ನಿಧಾನದ ಪ್ರಕ್ರಿಯೆಯ ಹಾದಿ; ಆ ಹಾದಿಯಲ್ಲಿ ಹಲವಾರು ಹೋಮೊ ಪ್ರಭೇದಗಳು (ಈಗ ಅವೆಲ್ಲವೂ ವಿನಾಶಗೊಂಡಿವೆ) ಉಗಮವಾಗಿ ಪರಸ್ಪರ ಅಂತರಮಿಶ್ರಣಗೊಂಡಿವೆ. ನಮ್ಮಲ್ಲಿನ ಸಂಕುಚಿತ ಮನೋಭಾವದವರಿಗೆ ಈ ಕಟುವಾಸ್ತವ ಸ್ವೀಕೃತವಲ್ಲದಿದ್ದರೂ ಮರೆಯಬಲ್ಲ ವಿಷಯವಾಗಿದೆ. ಇತರರಿಗೆ, ನಮ್ಮ ಸುತ್ತಮತ್ತಲಿನ ಜೀವ ಜಗತ್ತನ್ನು ಮೆಚ್ಚುವ ಮತ್ತು ಈ ಎಲ್ಲ ಜೀವರಾಶಿಯನ್ನು ಒಟ್ಟಿಗೆ ಬಂಧಿಸಿರುವ ಏಕತೆಯನ್ನು ವಿಸ್ಮಯದಿಂದ ಕಾಣಲು ಇದು ಮತ್ತೊಂದು ಕಾರಣವಾಗಿದೆ.

ಯಾವುದು ಖಗೋಳಶಾಸ್ತ್ರ ಮತ್ತು ಜೀವಶಾಸ್ತ್ರಗಳಿಗೆ ಅನ್ವಯಿಸುತ್ತದೋ ಅದು ನಮ್ಮ ಚರಿತ್ರೆಗೂ ಅನ್ವಯಿಸುತ್ತದೆ. ಹೋಮೊ ಸೇಪಿಯೆನ್ಸ್‍ಗಳ ಅಲ್ಪಾವಧಿ ಚರಿತ್ರೆಯಲ್ಲಿ (ಭೂಮಿಯ ಮೇಲೆ ಜೀವರಾಶಿ ಇರುವ 3.8 ಬಿಲಿಯನ್ ವರ್ಷಗಳಿಗೆ ಹೋಲಿಸಿದಲ್ಲಿ ಕೇವಲ 300,000 ವರ್ಷಗಳು) ನಮ್ಮ ಪ್ರತಿಯೊಂದು ಬುಡಕಟ್ಟು, ಪಂಗಡಗಳು, ಸಾಮ್ರಾಜ್ಯಗಳು ಮತ್ತು ರಾಷ್ಟ್ರಗಳು ತಾವೇ ಎಲ್ಲರಿಗಿಂತ ಉತ್ತಮರೆಂದು ಪರಿಗಣಿಸಿದ್ದಾರೆ. ಕೆಲವರು ತಮ್ಮನ್ನು ವಿಶೇಷ ದೇವರ ಮಕ್ಕಳೆಂದು ಪರಿಗಣಿಸಿದರೆ, ಇತರರು ತಾವು ದೇವರಿಂದ ಆಯ್ಕೆಯಾದವರೆಂದೂ ಅಥವಾ ತಾವು ಇತರ ಎಲ್ಲರನ್ನೂ ಆಳಬಲ್ಲ ದೈವಾಂಶಸಂಭೂತರೆಂದೂ ಪರಿಗಣಿಸಿದ್ದರು. ಇನ್ನು ಕೆಲವರು ತಾವು ಆಕ್ರಮಿಸಿರುವ ಭೂಮಿಯೇ ಎಲ್ಲವುಗಳ ಕೇಂದ್ರವೆಂದು ಭಾವಿಸಿದ್ದರು. ಉದಾಹರಣೆಗೆ, ಚೀನಿಯರು ಮಧ್ಯ ಸಾಮ್ರಾಜ್ಯ ಅಥವಾ ನಾರ್ಸ್ ಪುರಾಣಗಳಲ್ಲಿನ ‘ಮಿಡ್ ಗಾರ್ಡ್’ (ಮಧ್ಯಾವರಣ). ಹೊಸದಾಗಿ ರಚಿತವಾದ ‘ರಾಷ್ಟ್ರಗಳು’ ಇತರ ರಾಷ್ಟ್ರಗಳಿಗಿಂತ ಅಸೀಮ ಹಿರಿತನ ಹೊಂದಿವೆಯೆಂದೂ ಮತ್ತು ಅವು ‘ಸ್ಮೃತಿಪೂರ್ವ ಸಮಯ’(Time immemorial)ದಿಂದಲೂ ಅಸ್ತಿತ್ವದಲ್ಲಿವೆಯೆಂದು ಎಲ್ಲರನ್ನೂ ನಂಬಿಸಲು ಈ ತಮ್ಮ ವಿಚಾರಗಳ ತಳಹದಿಯ ಮೇಲೆ ಹದಿನೆಂಟು ಮತ್ತು ಹತ್ತೊಂಭತ್ತನೇ ಶತಮಾನಗಳ ನವರಾಷ್ಟ್ರೀಯತೆಯ ಕಲ್ಪನೆಗಳು ರೂಪುಗೊಂಡಿದ್ದವು. ವಾಸ್ತವವೆಂದರೆ, ನಮ್ಮ ಚರಿತ್ರೆಯನ್ನು ನಾವು ಅರಿಯಲು ಹೊರಟಾಗ ‘ಸ್ಮೃತಿಪೂರ್ವ ಸಮಯ’ ಎನ್ನುವ ಮಾತನ್ನು ಅತಿ ಹೆಚ್ಚು ಕೇಳುತ್ತಿರುತ್ತೇವೆ.

ಆದರೆ, ಇವು ಯಾವುವೂ ನಿಜವಲ್ಲ. ಯಾವ ಮಾನವ ಸಮುದಾಯವೂ ಇತರರಿಗೆ ಹೋಲಿಸಿದಲ್ಲಿ ವಿಶೇಷ ಸ್ಥಾನಮಾನ ಹೊಂದಿಲ್ಲ. ಎಲ್ಲ ಮಾನವರೂ ಆಗಿರದಿದ್ದಲ್ಲಿ, ಇತರ ಯಾರೂ ದೇವರ ಮಕ್ಕಳು ಅಥವಾ ದೇವರ ಆಯ್ಕೆಯ ಮಾನವರಾಗಿಲ್ಲ. ನಾವು ಭೂಮಿಯ ಮಧ್ಯದಲ್ಲಾಗಲೀ, ಅದರ ಅಂಚಿನಲ್ಲಾಗಲೀ ವಾಸಿಸುತ್ತಿಲ್ಲ, ಏಕೆಂದರೆ ನಾವು ಒಂದು ಗೋಳದ ಮೇಲ್ಮೈನಲ್ಲಿ ವಾಸಿಸುತ್ತಿದ್ದೇವೆ. ಇಂದು ನಾವು ಅರಿತಿರುವ ರಾಷ್ಟ್ರಗಳು ಕೆಲವು ಶತಮಾನಗಳಷ್ಟೇ ಹಳೆಯವು ಮತ್ತು ನಾವೆಲ್ಲರೂ ಆನುವಂಶಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಚಾರಿತ್ರಿಕವಾಗಿ ನಾವು ಊಹಿಸಿರುವುದಕ್ಕಿಂತ ಹೆಚ್ಚಿಗೇ ಪರಸ್ಪರ ಸಂಬಂಧ ಹೊಂದಿದವರೇ ಆಗಿದ್ದೇವೆ. ‘ಸ್ಮೃತಿಪೂರ್ವ ಸಮಯ’ ಎನ್ನುವುದನ್ನೂ ಸಹ ಈಗಿನ ತಂತ್ರಜ್ಞಾನದಲ್ಲಿ ನಿಖರವಾಗಿ ಗುರುತಿಸಿ, ದಿನಾಂಕ ನಿರ್ಧರಿಸಿ, ವಿಶ್ಲೇಷಿಸಿ ಅರ್ಥಮಾಡಿಕೊಳ್ಳಬಹುದಾಗಿದೆ. ನಾವು ಅದನ್ನು ಮಾಡಿದಾಗಲೇ ನಮ್ಮ ಸಮಾಜ, ಸಂಸ್ಕೃತಿ ಹಾಗೂ ಅದರ ನಿರ್ಮಾಣದ ಹಿನ್ನೆಲೆಯನ್ನು ಉತ್ತಮವಾಗಿ ಅರಿತುಕೊಳ್ಳಲು ಸಾಧ್ಯ.

ಇದು ಕೆಲವರಿಗೆ ಸರಿದೋರುವುದಿಲ್ಲವೆ? ಹೌದು. ನಿಮ್ಮ ಬಾಲ್ಯದಲ್ಲಿ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸಿದ ಮಾಂತ್ರಿಕನ ರಹಸ್ಯಗಳನ್ನು ನಿಮ್ಮ ಮುಂದೆ ಬಿಚ್ಚಿಟ್ಟ ಅನುಭವ. ನೀವು ಆತನ ರಹಸ್ಯಗಳನ್ನು ತಿಳಿದುಕೊಂಡಲ್ಲಿ, ನಿಮ್ಮ ಮುಗ್ಧತೆಯನ್ನು ಕಳೆದುಕೊಂಡದ್ದನ್ನು ಮತ್ತು ಮಾಂತ್ರಿಕತೆ ಉಂಟುಮಾಡುತ್ತಿದ್ದ ರೋಚಕ ಅನುಭವ ಹಾಳಾಗಿರುವುದನ್ನು ದೂಷಿಸಬಹುದು ಅಥವಾ ಹೊಸ ಜ್ಞಾನದ ಅರಿವಿನಿಂದ, ಹಲವಾರು ವಿಷಯಗಳ ಬಗೆಗೆ ಅದು ನೀಡುವ ಸ್ಪಷ್ಟತೆಯಿಂದ ಹಾಗೂ ಆ ಜ್ಞಾನದ ಸಾಧ್ಯತೆಗಳ ಬಗ್ಗೆ ಪುಳಕಿತರಾಗುತ್ತೀರಿ. ಪ್ರಿಯ ಓದುಗರೇ, ನೀವು ಆ ಎರಡನೇ ಗುಂಪಿನವರೆಂದು ಈ ಕೃತಿ ಭಾವಿಸುತ್ತದೆ.

ಈ ಮುಂದಿನ ಅಧ್ಯಾಯಗಳಲ್ಲಿ, ನಾವು ಆಧುನಿಕ ಮಾನವರು ಅಥವಾ ಹೋಮೊ ಸೇಪಿಯೆನ್ಸ್ ಭಾರತಕ್ಕೆ ಮೊದಲಿಗೆ ಬಂದದ್ದು ಯಾವಾಗ; ಅವರು ಯಾವ ಕುರುಹುಗಳನ್ನು ಉಳಿಸಿ ಹೋಗಿದ್ದಾರೆ; ಇಂದು ಅವರ ಸಂತತಿ ಯಾರಿದ್ದಾರೆ; ಈ ನಮ್ಮ ನಾಡಿಗೆ ಅವರನ್ನು ವಲಸಿಗರಾಗಿ ಮತ್ತಾರು ಹಿಂಬಾಲಿಸಿದರು; ಹೇಗೆ ಮತ್ತು ಯಾವಾಗ ನಾವು ಬೇಸಾಯ ಆರಂಭಿಸಿದೆವು ಮತ್ತು ಆ ಸಮಯದ ಅತಿ ದೊಡ್ಡ ನಾಗರಿಕತೆಯ ನಿರ್ಮಾಣ ಮಾಡಿದೆವು; ಯಾವಾಗ ಮತ್ತು ಏಕೆ ಈ ನಾಗರಿಕತೆ ಕ್ರಮೇಣ ಇಲ್ಲವಾಯಿತು ಹಾಗೂ ಮುಂದೇನು ನಡೆಯಿತು ಎನ್ನುವುದರ ಕುರಿತು ಅವಲೋಕಿಸೋಣ.

ಈ ಕೃತಿಯು ಪೂರ್ವಚರಿತ್ರೆ ಕುರಿತಾದುದು ಮತ್ತು ಪೂರ್ವಚರಿತ್ರೆಯು ಚರಿತ್ರೆಯ ಹಿಂದಿನ ಅವಧಿಯದು. ಚರಿತ್ರೆ ಪ್ರಾರಂಭವಾಗುವುದು ಬರವಣಿಗೆ ಪ್ರಾರಂಭವಾದಾಗ ಮತ್ತು ಸ್ಥಳಗಳು ಹಾಗೂ ವ್ಯಕ್ತಿಗಳು ನಮ್ಮ ಕಣ್ಣೆದುರಿಗೆ ಅವರದೇ ಹೆಸರುಗಳಿಂದ, ಕೆಲವೊಮ್ಮೆ ಗುರುತಿಸಬಲ್ಲ ಕತೆಗಳಿಂದ ಜೀವಂತವಾಗಿ ಬರುತ್ತಾರೆ. ಪೂರ್ವಚರಿತ್ರೆಯಲ್ಲಿ ಯಾವುದೆ ಲಿಖಿತ ದಾಖಲೆಗಳಿರುವುದಿಲ್ಲ, ಹಾಗಾಗಿ ನಮಗೆ ಅವರ ಹೆಸರುಗಳ, ಸ್ಥಳಗಳ ಅಥವಾ ಆ ವ್ಯಕ್ತಿಗಳ ಕತೆಗಳ ಕುರಿತು ಖಾತರಿಯಾಗಿ ತಿಳಿದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಇತರ ಕುರುಹುಗಳನ್ನು ಬಳಸಿಕೊಂಡು ಆ ಸಮಯದಲ್ಲಿನ ಜನರ ಬದುಕು ಹೇಗಿತ್ತೆಂಬುದನ್ನು ತಕ್ಕ ಮಟ್ಟಿಗೆ ವಿಶ್ಲೇಷಿಸಿ ತಿಳಿಯಬಹುದು. ಪೂರ್ವಚರಿತ್ರೆಯ ಕುರುಹುಗಳು ನಮಗೆ ಪಳೆಯುಳಿಕೆಗಳು, ಪ್ರಾಚೀನ ಮಾನವರ ವಾಸಸ್ಥಾನಗಳ ಪ್ರಾಕ್ತನನ ಅಗೆತಗಳಿಂದ, ಸಲಕರಣೆಗಳಂತಹ ಮಾನವರು ನಿರ್ಮಿಸಿದ ಹಲವಾರು ವಸ್ತುಗಳಿಂದ ಮತ್ತು ಈಗ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ಪ್ರಾಚೀನ ಮತ್ತು ಈಗಿನ ವ್ಯಕ್ತಿಗಳ ಡಿ.ಎನ್.ಎ. ವಿಶ್ಲೇಷಣೆಯಿಂದ ದೊರಕುತ್ತದೆ.

 

ಹಾಗಿದ್ದಲ್ಲಿ ಭಾರತದ ಪೂರ್ವಚರಿತ್ರೆ ಕೊನೆಗೊಳ್ಳುವುದು ಮತ್ತು ಚರಿತ್ರೆ ಪ್ರಾರಂಭವಾಗುವುದು ಎಲ್ಲಿಂದ? ಇದೊಂದು ಸರಳ ಪ್ರಶ್ನೆಯಲ್ಲ ಏಕೆಂದರೆ, ಕ್ರಿ.ಪೂ. 2600ರಿಂದ ಕ್ರಿ.ಪೂ. 1900ರ ಅವಧಿಯವರೆಗೆ ಉಚ್ಛ್ರಾಯದಲ್ಲಿದ್ದ ಹರಪ್ಪ ನಾಗರಿಕತೆಯ ಮುದ್ರೆಗಳು ಮತ್ತು ಫಲಕಗಳಲ್ಲಿ ಲಿಖಿತ ದಾಖಲೆಗಳಿವೆ. ಹಾಗಾದರೆ ಅಲ್ಲಿಂದಲೇ ನಮ್ಮ ಚರಿತ್ರೆ ಪ್ರಾರಂಭವಾಗಿದೆ ಹಾಗೂ ಪೂರ್ವಚರಿತ್ರೆ ಅಂತ್ಯವಾಗಿದೆ ಎಂದು ಹೇಳಬಹುದೆ? ಆದರೆ ಹರಪ್ಪ ಲಿಪಿಯನ್ನು ನಮಗೆ ಓದಲು ಇನ್ನೂ ಸಾಧ್ಯವಾಗಿಲ್ಲ, ಹಾಗಾಗಿ ಆ ದಾಖಲೆಗಳಲ್ಲಿ ಏನು ಬರೆದಿದೆಯೆಂಬ ಅರಿವು ನಮಗಿಲ್ಲ. ಆದುದರಿಂದ ಆ ಅವಧಿಯು ಚರಿತ್ರೆಯ ಪರಿಧಿಯಿಂದ ಹೊರಗೆ ಮತ್ತು ಪೂರ್ವಚರಿತ್ರೆಯೊಳಗೆ ಬರುತ್ತದೆ. ಆದರೆ, ಹರಪ್ಪ ನಾಗರಿಕತೆಯ ಬಗ್ಗೆ ಪಶ್ಚಿಮ ಏಷ್ಯಾದ ಮೆಸೊಪೊಟೇಮಿಯನ್ ನಾಗರಿಕತೆಯ ಸಮಕಾಲೀನ ದಾಖಲೆಗಳಲ್ಲಿ ಕೆಲವು ಉಲ್ಲೇಖಗಳಿವೆ. ಆದುದರಿಂದ ಅದು ಚರಿತ್ರೆಯ ಭಾಗವೂ ಆಗತ್ತದೆ.

ಈ ದ್ವಂದ್ವದಿಂದಾಗಿಯೇ ಕೆಲವು ಚರಿತ್ರಕಾರರು ಪೂರ್ವಚರಿತ್ರೆ ಮತ್ತು ಚರಿತ್ರೆಯ ನಡುವಿನ ಅವಧಿಯನ್ನು ವಿವರಿಸಲು ‘ಪ್ರೋಟೊ-ಚರಿತ್ರೆ’ ಎಂಬ ಪರಿಕಲ್ಪನೆ ಬಳಸುತ್ತಾರೆ. (ಇಲ್ಲಿ ‘ಪ್ರೋಟೊ’ ಪದದ ಅರ್ಥ ಆದಿಮ ಅಥವಾ ಮೂಲ ಎಂದಾಗುತ್ತದೆ). ಈ ಕೃತಿಯಲ್ಲಿ ನಾವು ಹರಪ್ಪ ನಾಗರಿಕತೆಯ ಅಂತ್ಯದ ಹಾಗೂ ಆನಂತರದ ಕೆಲವು ಶತಮಾನಗಳವರೆಗೂ ತಲುಪಲು ಪ್ರಯತ್ನಿಸಿದ್ದೇವೆ ಮತ್ತು ಬಹುಶಃ ಮುಂದಿನದನ್ನು ಮತ್ತೊಂದು ಕೃತಿಯಲ್ಲಿ ಪರಿಚಯಿಸಬಹುದೇನೋ!

ಈ ಕೃತಿ ಈಗ ಪ್ರಕಟಿಸುತ್ತಿರುವ ಉದ್ದೇಶವೇನು
ಈ ಕೃತಿಯನ್ನು ಈ ಮೊದಲಿಗಿಂತ ಈಗ ಬರೆಯುತ್ತಿರುವುದಕ್ಕೆ ಒಂದು ಕಾರಣವೂ ಇದೆ. ಅದೇನೆಂದರೆ, ನಮ್ಮ ಗಾಢ ಚರಿತ್ರೆಯ ಅರಿವು ಕಳೆದ ಐದು ವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಕಂಡಿದೆ. ನಾವು ಮಾತನಾಡುತ್ತಿರುವಂತೆ ಹತ್ತಾರು ಸಾವಿರ ವರ್ಷಗಳ ಹಿಂದೆ ಬದುಕಿದ್ದವರ ಡಿ.ಎನ್.ಎ. ಸಾರದ ವಿಶ್ಲೇಷಣೆಯ ಆಧಾರದ ಮೇಲೆ ನಮ್ಮ ಪೂರ್ವಚರಿತ್ರೆಯ ಮರುವ್ಯಾಖ್ಯಾನ ನಡೆಯುತ್ತಿದೆ. ನಾವು ಯಾವುದನ್ನು ‘ಸತ್ಯ’ವೆಂದು ಪರಿಗಣಿಸಿದ್ದೆವೋ ಅವು ಸುಳ್ಳೆಂದು ಸಾಬೀತಾಗುತ್ತಿವೆ, ಚರಿತ್ರೆಕಾರರು, ಪ್ರಾಕ್ತನತಜ್ಞರು ಮತ್ತು ಮಾನವಶಾಸ್ತ್ರಜ್ಞರು ಚರ್ಚಿಸುತ್ತಿದ್ದ ಹಲವಾರು ಪ್ರಶ್ನೆಗಳಿಗೆ ಹೊಸ ಉತ್ತರಗಳು ದೊರಕುತ್ತಿವೆ. ಆನುವಂಶಿಕ ವಿಜ್ಞಾನಿಗಳು ಪ್ರಾಚೀನ ಪಳೆಯುಳಿಕೆಗಳಿಂದ ಯಶಸ್ವಿಯಾಗಿ ಡಿ.ಎನ್.ಎ. ಸಾರ ತೆಗೆದು ಅದನ್ನು ಸರಣಿಗೊಳಿಸಿ ಜನರ ಪರಸ್ಪರ ಸಾಮ್ಯತೆಗಳನ್ನು ಅಥವಾ ವ್ಯತ್ಯಾಸಗಳನ್ನು ಅರಿತುಕೊಳ್ಳುವ ಪ್ರಯತ್ನದಿಂದಲೇ ಇವೆಲ್ಲವೂ ಸಾಧ್ಯವಾಗುತ್ತಿದೆ. ಈ ಹಂತಕ್ಕೆ ಇಂದು ತಂತ್ರಜ್ಞಾನವು ತಲುಪಿಲ್ಲದಿದ್ದಲ್ಲಿ, ವಿಜ್ಞಾನಿಗಳ ಇಂದಿನ ಆವಿಷ್ಕಾರಗಳು ಸಾಧ್ಯವಾಗುತ್ತಿರಲಿಲ್ಲ. ಅವರ ಇತ್ತೀಚಿನ ಆವಿಷ್ಕಾರಗಳಿಲ್ಲದಿದ್ದಲ್ಲಿ, ನಮ್ಮ ಪೂರ್ವಚರಿತ್ರೆ ಮೊದಲಿನಂತೆ ಇನ್ನೂ ಅಸ್ಪಷ್ಟ ಹಾಗೂ ವಿವಾದಾಸ್ಪದವಾಗಿಯೇ ಉಳಿಯುತ್ತಿತ್ತು ಹಾಗೂ ಈ ಪುಸ್ತಕ ಬರೆಯುವ ಅವಶ್ಯಕತೆಯೇ ಇರುತ್ತಿರಲಿಲ್ಲ.

ಈ ಸಂಶೋಧನೆಗಳು ಎಷ್ಟು ವೇಗವಾಗಿ ನಡೆಯುತ್ತಿವೆಯೆಂದರೆ, ಈ ಪುಸ್ತಕ ಬರೆಯಲು ಆರು ವರ್ಷಗಳ ಹಿಂದೆ ಪ್ರಾರಂಭಿಸಿದಾಗ ಹರಪ್ಪ ನಾಗರಿಕತೆಯ ಜನ ಅಥವಾ ಅವರ ಮುಂದಿನ ತಲೆಮಾರಿನವರು ಎಲ್ಲಿಗೆ ಹೋದರೆಂಬುದು ತಿಳಿದಿರಲಿಲ್ಲ, ಆದರೆ ನಮಗೆ ಈಗ ಅದು ತಿಳಿದಿದೆ. ನಮ್ಮ ಸಂತತಿಯು 65,000 ವರ್ಷಗಳ ಹಿಂದೆ ಭಾರತ ತಲುಪಿದ ಆಫ್ರಿಕಾದಿಂದ ಹೊರ ಹೊರಟ ಮೂಲ ವಲಸೆಗಾರರಿಗೆ ಆನುವಂಶಿಕವಾಗಿ ಋಣಿಯಾಗಿದೆ ಎಂಬುದು ಆರು ವರ್ಷಗಳ ಹಿಂದೆ ತಿಳಿದಿರಲಿಲ್ಲ, ಆದರೆ ಈಗ ಅದು ತಿಳಿದಿದೆ. ಜಾತಿ ಪದ್ಧತಿ ಆರಂಭವಾದುದು ಯಾವಾಗ ಎಂಬುದು ನಮಗೆ ಆರು ವರ್ಷಗಳ ಹಿಂದೆ ತಿಳಿದಿರಲಿಲ್ಲ, ಆದರೆ ಈಗ ತಕ್ಕ ಮಟ್ಟಿನ ಆನುವಂಶಿಕ ನಿಖರತೆಯಿಂದಾಗಿ ಅದು ಪ್ರಾರಂಭವಾದ ಅವಧಿಯನ್ನು ಗುರುತಿಸಬಹುದಾಗಿದೆ. ಭಾರತದ ಪೂರ್ವಚರಿತ್ರೆ ಮಾತ್ರವಲ್ಲ, ಇಡೀ ಜಗತ್ತಿನ ಪೂರ್ವಚರಿತ್ರೆಯ ನಮ್ಮ ಅರಿವು ಹೆಚ್ಚುತ್ತಿರುವುದಕ್ಕೆ ಇವು ಕೆಲವು ಉದಾಹರಣೆಗಳು ಮಾತ್ರ.

ಪ್ರಾಚೀನ ಡಿ.ಎನ್.ಎ.ನಿಂದಾಗಿ ಜಗತ್ತಿನ ಇತರೆಡೆ ಮಾನವ ಪೂರ್ವಚರಿತ್ರೆಯ ಸಂಗತಿಗಳ ಬದಲಾವಣೆಗಳ ಒಂದು ಸಂಕ್ಷಿಪ್ತ ಪಟ್ಟಿ ಇಲ್ಲಿದೆ: ಕಳೆದ 10,000 ವರ್ಷಗಳಲ್ಲಿ ಯೂರೋಪಿನ ಜನಸಮೂಹದ ಬಹುಪಾಲು ಭಾಗವು ಒಮ್ಮೆಯೆಲ್ಲ ಎರಡು ಬಾರಿ ಬದಲಾಯಿಸಲ್ಪಟ್ಟಿದೆ. ಮೊದಲಿಗೆ, ಪಶ್ಚಿಮ ಏಷ್ಯಾದಿಂದ ಸುಮಾರು 9000 ವರ್ಷಗಳ ಹಿಂದೆ ಕೃಷಿಕರು ಸಮೂಹ ವಲಸೆ ಬಂದು ಯೂರೋಪಿನಲ್ಲಿ ಈಗಾಗಲೇ ನೆಲೆಸಿದ್ದ ಬೇಟೆಗಾರ-ಆಹಾರ ಸಂಗ್ರಹಿಸುವವರೊಂದಿಗೆ ಬೆರೆತುಹೋದರು ಅಥವಾ ಅವರ ಸ್ಥಾನವನ್ನು ಆಕ್ರಮಿಸಿದರು. ಆನಂತರ ಸುಮಾರು 5000 ವರ್ಷಗಳ ಹಿಂದೆ ಯುರೇಶಿಯನ್ ಸ್ಟೆಪ್(ಹುಲ್ಲುಗಾವಲು ಮೈದಾನ)ಗಳಿಂದ ಸಮೂಹ ವಲಸೆ ಬಂದವರು ಆಗ ಯೂರೋಪಿನಲ್ಲಿ ನೆಲೆಯೂರಿದ್ದ ಕೃಷಿಕ ಜನ ಸಮೂಹದೊಂದಿಗೆ ಬೆರೆತುಹೋದರು ಅಥವಾ ಅವರ ಸ್ಥಾನ ಆಕ್ರಮಿಸಿ ಅವರನ್ನು ಬದಲಿಸಿದರು. ಅಮೆರಿಕಾಗಳಲ್ಲಿ, ಯೂರೋಪಿಯನ್ನರು ಬರುವ ಮೊದಲು ಅಲ್ಲಿದ್ದ ಮೂಲ ಅಮೆರಿಕನ್ನರು ಏಷ್ಯಾದ ಒಂದಲ್ಲ ಮೂರು ವಲಸೆಗಳಲ್ಲಿ ತಮ್ಮ ವಂಶಮೂಲವನ್ನು ಹೊಂದಿದ್ದರೆಂಬುದು ನಮಗೀಗ ತಿಳಿದಿದೆ. ಪೂರ್ವ ಏಷ್ಯಾದಲ್ಲಿ, ಆ ಪ್ರದೇಶದ ಜನರ ವಂಶಮೂಲವು ಚೀನಿ ಕೃಷಿ ಕೇಂದ್ರಸ್ಥಾನದ ಜನ ಸಮೂಹದ ಎರಡು ಅಥವಾ ಹೆಚ್ಚಿನ ಪ್ರಮುಖ ವಿಸ್ತರಣೆಗಳಲ್ಲಿದೆಯೆಂಬುದು ನಮಗೀಗ ತಿಳಿದಿದೆ. ಆಧುನಿಕ ಮಾನವರು ನಿಯಾಂಡರ್ತಲ್ ಮಾನವರೊಂದಿಗೆ ಅಂತರ್ ಸಂವರ್ಧನೆಗೊಂಡಿದ್ದರೆಂದು ನಮಗೆ 2010ರಲ್ಲಿ ತಿಳಿದುಬಂದಿದೆ ಹಾಗೂ ಅದೇ ರೀತಿ ನಮ್ಮ ಪೂರ್ವಜರು ಡೆನಿಸೋವನ್‍ರೊಂದಿಗೆ (ಹೋಮೊ ಪ್ರಭೇದದ ಜೀವಿ ಹಾಗೂ ಪ್ರಾಚೀನ ಡಿ.ಎನ್.ಎ. ಸರಣಿ ಮೂಲಕವಷ್ಟೇ ಗುರುತಿಸಲಾಗಿದೆ) ಅಂತರ್ ಸಂವರ್ಧನೆಗೊಂಡಿದ್ದರೆಂದು 2014ರಲ್ಲಿ ತಿಳಿದುಬಂದಿದೆ.
 

ಆರು ವರ್ಷಗಳ ಹಿಂದೆ ನಾನು ಪೂರ್ವಚರಿತ್ರೆಯ ಜಗತ್ತಿನೊಳಗಿನ ಈ ಪಯಣ ಆರಂಭಿಸಿದಾಗ ಹೊಸ ಜ್ಞಾನದ ಈ ಮಹಾಸ್ಪೋಟವನ್ನು ಅನುಭವಿಸುತ್ತೇನೆಂದು ಊಹಿಸಿರಲಿಲ್ಲ. ಈ ಘಟನೆಗಳು ಸುಪ್ತ ಆಕಸ್ಮಿಕಗಳೆಂದೇ ಹೇಳಬಹುದು. ನಾನು ಪ್ರಾರಂಭಿಸಿದಾಗ, ಹರಪ್ಪ ನಾಗರಿಕತೆಯ ಬಗ್ಗೆ ಹಾಗೂ ಇನ್ನೂ ಉತ್ತರ ದೊರಕದ ಪ್ರಶ್ನೆಗಳ ಬಗ್ಗೆ ನನಗೆ ಕುತೂಹಲವಿತ್ತು: ಆ ಸಮಯದ ಅತ್ಯಂತ ಬೃಹತ್ ನಾಗರಿಕತೆಯನ್ನು ನಿರ್ಮಿಸಿದವರು ಯಾರು ಮತ್ತು ಅವರು ಎಲ್ಲಿಗೆ ಹೋದರು? ನಾನು ಗುಜರಾತ್‍ನಲ್ಲಿನ ಧೊಳವೀರ ಮತ್ತು ಲೋಥಲ್‍ಗಳಿಗೆ, ಹರಿಯಾಣಾದಲ್ಲಿನ ರಾಖಿಘರಿ ಹರಪ್ಪ ನಾಗರಿಕತೆಯಿದ್ದ ಸ್ಥಳಗಳಿಗೆ ಭೇಟಿ ನೀಡಿದೆ ಹಾಗೂ ಅದರ ಮೂಲಕ ಭಾರತದ ಮತ್ತು ಪ್ರಪಂಚದೆಲ್ಲೆಡೆಯ ಪ್ರಮುಖ ಚರಿತ್ರೆಕಾರರು, ಪ್ರಾಕ್ತನತಜ್ಞರು, ಲಿಪಿಶಾಸ್ತ್ರಜ್ಞರು, ಭಾಷಾತಜ್ಞರು ಮತ್ತು ಆನುವಂಶಿಕ ತಜ್ಞರೊಂದಿಗೆ ಹಲವಾರು ಸಭೆಗಳು ಮತ್ತು ಇಮೇಲ್ ಚರ್ಚೆಗಳಿಗೆ ಹಾದಿಯಾಯಿತು – ನವದೆಹಲಿಯಲ್ಲಿ ರೊಮಿಲಾ ಥಾಪರ್ ಮತ್ತು ಬಿ.ಬಿ.ಲಾಲ್; ನ್ಯೂ ಯಾರ್ಕ್‍ನಲ್ಲಿನ ಶೆಲ್ಡಾನ್ ಪೊಲ್ಲಾಕ್; ಹಾರ್ವರ್ಡ್‍ನಲ್ಲಿನ ಮೈಖೆಲ್ ವಿಟ್ಜೆಲ್, ಡೇವಿಡ್ ರೀಚ್ ಹಾಗೂ ವಾಗೀಶ್ ನರಸಿಂಹನ್; ಚೆನ್ನೈನಲ್ಲಿನ ಇರಾವತಂ ಮಹದೇವನ್; ಯುನೈಟೆಡ್ ಕಿಂಗ್‍ಡಮ್‍ನ ಹಡ್ಡರ್ಸ್ ಫೀಲ್ಡ್‍ನಲ್ಲಿನ ಮಾರ್ಟಿನ್ ಬಿ. ರಿಚಡ್ರ್ಸ್; ಸ್ಟ್ಯಾನ್‍ಫರ್ಡ್‍ನಲ್ಲಿನ ಪೀಟರ್ ಅಂಡರ್ ಹಿಲ್; ಪುಣೆಯಲ್ಲಿನ ಎಂ.ಕೆ. ಧವಳೀಕರ್, ವಿ.ಎನ್. ಮಿಶ್ರಾ, ವಸಂತ್ ಶಿಂಧೆ ಮತ್ತು ಹೈದರಾಬಾದ್‍ನಲ್ಲಿನ ಕೆ.ತಂಗರಾಜ್; ವಾರಣಾಸಿಯಲ್ಲಿನ ಲಾಲ್ಜಿ ಸಿಂಗ್; ಲಕ್ನೋದಲ್ಲಿನ ನೀರಜ್ ರಾಯ್; ಜರ್ಮನಿಯ ಜೇನಾದಲ್ಲಿನ ಮೈಖೆಲ್ ಪೆಟ್ರಾಗ್ಲಿಯ …. ಪಟ್ಟಿ ದೊಡ್ಡದು.

ಎಲ್ಲರಲ್ಲೂ ಒಮ್ಮತವಿರಲಿಲ್ಲ ನಿಜ, ಆದರೆ ಪ್ರತಿಯೊಂದು ಚರ್ಚೆಯೂ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಗಳನ್ನು ಒದಗಿಸುತ್ತಿತ್ತು, ಹಾಗೆಯೇ ನನ್ನಲ್ಲಿ ಹರಪ್ಪ ನಾಗರಿಕತೆಯ ಬಗೆಗೆ ಮಾತ್ರವಲ್ಲ ಅದರ ಮೊದಲಿನ ಅವಧಿಯ ಬಗೆಗೂ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದವು. ನಾನು ಹರಪ್ಪನ್ನರು ಯಾರು ಎಂದು ಉತ್ತರ ಅರಸುತ್ತಿದ್ದ ಪ್ರಶ್ನೆ ನನ್ನ ಅರಿವಿಗೆ ಬಾರದಂತೆ ನಾವು ಭಾರತೀಯರು ಬಂದದ್ದು ಹೇಗೆ ಎಂದು ರೂಪಾಂತರಗೊಂಡಿತು.

ಈ ಅನ್ವೇಷಣೆಯ ಹಾದಿಯಲ್ಲಿ, ಜನಸಮೂಹ ಆನುವಂಶಿಕತೆಯ (Population Genetics) ಹೊಸ ಕ್ಷೇತ್ರದಿಂದ ಬಹುಮುಖ್ಯ ಹೊಳಹಿನ ಹಾದಿಗಳು ತೆರೆದುಕೊಳ್ಳುತ್ತಿವೆ ಎನ್ನುವುದು ಸ್ಪಷ್ಟವಾಗತೊಡಗಿತು. ಇದರಿಂದಾಗಿ ನಾನು ದಕ್ಷಿಣ ಏಷ್ಯಾ ಜನರ ಮೇಲಿನ ಜನಸಮೂಹ ಆನುವಂಶಿಕ ಸಂಶೋಧನಾ ಪ್ರಬಂಧಗಳನ್ನು ಅರಸತೊಡಗಿದೆ- ಅವು ನೂರಾರು ಇದ್ದವು – ಆನಂತರ ಅವುಗಳ ಲೇಖಕರೊಂದಿಗೆ ಅವುಗಳ ಕುರಿತು ಚರ್ಚಿಸಿದೆ. ನಾನು ಹೈದರಾಬಾದ್‍ನಲ್ಲಿನ ಸೆಂಟರ್ ಫಾರ್ ಸೆಲ್ಲುಲಾರ್ ಅಂಡ್ ಮಾಲಿಕ್ಯುಲಾರ್ ಬಯಾಲಜಿಯ (ಸಿ.ಸಿ.ಎಂ.ಬಿ.) ಪ್ರಧಾನ ವಿಜ್ಞಾನಿ ಕೆ.ತಂಗರಾಜ್‍ರವರನ್ನು ಮತ್ತು ಸಿ.ಸಿ.ಎಂ.ಬಿ.ಯ ಹಿಂದಿನ ಮುಖ್ಯಸ್ಥರಾಗಿದ್ದ ನಂತರ ವಾರಣಾಸಿಯ ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿದ್ದ ಲಾಲ್ಜಿ ಸಿಂಗ್‍ರವರನ್ನು ಭೇಟಿಯಾದೆ. ಇದು 2015ರಲ್ಲಿ ಹಾಗೂ ನನ್ನ ಸಂಶೋಧನೆ ಮತ್ತು ಸಂವಾದಗಳ ಆಧಾರದ ಮೇಲೆ ಹರಪ್ಪ ನಾಗರಿಕತೆ ಮತ್ತು ಚರ್ಚಾಸ್ಪದ ‘ಆರ್ಯರ ವಲಸೆ’2ಯ ವಿಷಯದ ಕುರಿತು ನಾನು ನನ್ನ ಮೊದಲ ಲೇಖನ ಪ್ರಕಟಿಸುವವನಿದ್ದೆ. ಅಷ್ಟರಲ್ಲಿ ಸಮಸ್ಯೆಯೊಂದು ಉದ್ಭವಿಸಿತು. ನಾನು ನನ್ನ ಲೇಖನವನ್ನು ಪೂರ್ಣಗೊಳಿಸಲಾಗಲಿಲ್ಲ ಏಕೆಂದರೆ ಸಿಂಗ್ ಮತ್ತು ತಂಗರಾಜ್‍ರವರು ಹೇಳಿದ ವಿಷಯಗಳು ನಾನು ಓದಿದ ಜಗತ್ತಿನೆಡೆಯ ಇತರ ವಿಜ್ಞಾನಿಗಳೊಂದಿಗೆ ಅವರು 2009ರಲ್ಲಿ ಬರೆದ ಪ್ರಬಂಧಗಳ ವಿಷಯಗಳಿಗೆ ತಾಳೆಯಾಗುತ್ತಿರಲಿಲ್ಲ3. ಹಾಗಾಗಿ ನಾನು ಬರೆಯುವುದನ್ನು ನಿಲ್ಲಿಸಿದೆ ಹಾಗೂ ಆ ಕುರಿತು ಹೆಚ್ಚಿನದನ್ನು ಬರೆಯುವ ಮೊದಲು ಜನಸಮೂಹ ಆನುವಂಶಿಕತೆ ಕುರಿತು ಇನ್ನೂ ಹೆಚ್ಚು ತಿಳಿದುಕೊಳ್ಳಲು ನಿರ್ಧರಿಸಿದೆ. ಎರಡು ವರ್ಷಗಳ ನಂತರ 2017ರಲ್ಲಿ ಯುನೈಟೆಡ್ ಕಿಂಗ್ ಡಮ್‍ನ ಹಡ್ಡರ್ಸ್ ಫೀಲ್ಡ್ ವಿಶ್ವವಿದ್ಯಾನಿಲಯದ ಪ್ರೊ.ಮಾರ್ಟಿನ್ ಬಿ. ರಿಚಡ್ರ್ಸ್‍ರವರು ತಮ್ಮ ವಿಜ್ಞಾನಿಗಳ ತಂಡದೊಂದಿಗೆ ಬರೆದ ‘ಎ ಜೆನೆಟಿಕ್ ಕ್ರೋನಾಲಜಿ ಆಫ್ ದ ಇಂಡಿಯನ್ ಸಬ್ ಕಾಂಟಿನೆಂಟ್ ಪಾಯಿಂಟ್ಸ್ ಟು ಹೆವ್ವೀಲಿ ಸೆಕ್ಸ್-ಬಯಾಸ್ಡ್ ಡಿಸ್ಪರ್ಸಲ್ಸ್’ ಎನ್ನುವ ಪ್ರಬಂಧ ಕಣ್ಣಿಗೆ ಬಿತ್ತು4. ನನಗೆ ವಿಷಯ ಮನವರಿಕೆಯಾಗುವವರೆಗೂ ಅದನ್ನು ಪುನಃ ಪುನಃ ಓದಿದೆ. ಕೊನೆಗೂ ನನಗೆ ಈ ವಿಷಯದ ಅರಿವಿನ ಸಮಸ್ಯೆಯ ಮೂಲವನ್ನು ಕಂಡುಕೊಂಡೆ.

ಈ ಗೊಂದಲಕ್ಕೆ ಕಾರಣ ನಾನು ಆ ವಿಜ್ಞಾನಿಗಳನ್ನು 2015ರಲ್ಲಿ ಭೇಟಿಯಾಗಿದ್ದು. ಆಗ ಅವರು 2009ರಲ್ಲಿನ ಅವರ ಪ್ರಬಂಧದಲ್ಲಿ ಇಲ್ಲದ ಒಂದು ಹೊಸ ಆಧಾರಕಲ್ಪನೆಯನ್ನು ಮಂಡಿಸಿದ್ದರು. ಈ ಆಧಾರಕಲ್ಪನೆ ಏನೆಂದರೆ, ಕಳೆದ ಸುಮಾರು 40,000 ವರ್ಷಗಳಲ್ಲಿ ಭಾರತಕ್ಕೆ ಯಾವುದೇ ದೊಡ್ಡ ಪ್ರಮಾಣದ ವಲಸೆಗಳಾಗಿಲ್ಲ ಎನ್ನುವುದು. ಎರಡು ಬಹಳ ಪ್ರಾಚೀನ ಜನ ಸಮೂಹಗಳು, ಒಂದು ಉತ್ತರ ಭಾರತದಲ್ಲಿ ಹಾಗೂ ಮತ್ತೊಂದು ದಕ್ಷಿಣ ಭಾರತದಲ್ಲಿ ನೆಲೆಸಿವೆ ಮತ್ತು ಈಗಿನ ಎಲ್ಲ ಜನರೂ ಈ ಎರಡೂ ಗುಂಪುಗಳ ನಡುವಿನ ಮಿಶ್ರಣದ ಸಂತತಿಯಾಗಿದ್ದಾರೆ ಎಂದೂ ಸಹ ಹೇಳಿದರು ಹಾಗೂ ಈ ಗುಂಪುಗಳಿಗೆ ಪೂರ್ವಜ ಉತ್ತರ ಭಾರತೀಯರು (Ancestral North Indian – ANI) ಮತ್ತು ಪೂರ್ವಜ ದಕ್ಷಿಣ ಭಾರತೀಯರು (Ancestral South Indian – ASI) ಎಂಬ ಹೆಸರುಗಳನ್ನು ಸಹ ನೀಡಿದ್ದಾರೆ.

ಆದರೆ ಲಾಲ್ಜಿ ಸಿಂಗ್ ಮತ್ತು ತಂಗರಾಜ್‍ರವರು 2009ರಲ್ಲಿ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ವಿಜ್ಞಾನಿಗಳೊಂದಿಗೆ ಸಹ ಲೇಖಕರಾಗಿ ಬರೆದಿದ್ದ ‘ರಿಕನ್ಸ್‍ಟ್ರಕ್ಟಿಂಗ್ ಇಂಡಿಯನ್ ಪಾಪ್ಯುಲೇಶನ್ ಹಿಸ್ಟರಿ’ ಪ್ರಬಂಧದಲ್ಲಿ ಕಳೆದ 40,000 ವರ್ಷಗಳಲ್ಲಿ ಭಾರತಕ್ಕೆ ಯಾವುದೇ ದೊಡ್ಡ ಪ್ರಮಾಣದಲ್ಲಿ ವಲಸೆಗಳು ಬಂದಿಲ್ಲ ಎಂಬುದಾಗಿ ತಿಳಿಸಿರಲಿಲ್ಲ. ಅವರ ಪ್ರಬಂಧದಲ್ಲಿ ಪೂರ್ವಜ ಉತ್ತರ ಭಾರತೀಯರು (ANI) ಪೂರ್ವಜ ದಕ್ಷಿಣ ಭಾರತೀಯ(ASI)ರಂತಲ್ಲದೆ ಪಶ್ಚಿಮ ಯುರೇಶಿಯನ್ನರಿಗೆ (ಪಶ್ಚಿಮ ಏಷ್ಯಾ, ಯೂರೋಪಿಯನ್ನರು, ಮಧ್ಯ ಏಷಿಯನ್ನರು ಮತ್ತು ಕಾಕಸಸ್ ಪ್ರದೇಶದ ಜನರು) ಸಂಬಂಧ ಹೊಂದಿದವರು ಎಂದು ಸ್ಪಷ್ಟವಾಗಿ ಹೇಳಿದ್ದರು. ತಮ್ಮನ್ನು ಆರ್ಯನ್ನರೆಂದು ಕರೆದುಕೊಳ್ಳುವ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ಸುಮಾರು 4000 ವರ್ಷಗಳ ಹಿಂದೆ ಹರಪ್ಪ ನಾಗರಿಕತೆಯ ಅವನತಿಯ ಪ್ರಾರಂಭದ ನಂತರ ವಲಸೆ ಬಂದಿದ್ದರೆಂಬ ಸಿದ್ಧಾಂತಕ್ಕೆ ಇದು ಹೆಚ್ಚಿನ ಬೆಂಬಲ ನೀಡಬಲ್ಲುದಾಗಿತ್ತು. ‘ಆರ್ಯನ್ನರ ವಲಸೆ’ಯು ದಶಕಗಳಿಂದ ರಾಜಕೀಯ ಚರ್ಚೆಗೆ ಬಿಸಿ ಬಿಸಿ ವಿಷಯವಾಗಿದೆ. ಬಹಳಷ್ಟು ಜನ ‘ಆರ್ಯನ್ನರು’ ತಡವಾಗಿ ವಲಸೆ ಬಂದವರು ಹಾಗೂ ಮೊದಲ ಭಾರತೀಯ ಜನಸಮೂಹದ ಭಾಗವಾಗಿರಲಿಲ್ಲ ಎನ್ನುವುದನ್ನು ವಿರೋಧಿಸುತ್ತಿದ್ದರು. ಇದರ ಜೊತೆಗೆ ಹರಪ್ಪ ನಾಗರಿಕತೆಯ ಮತ್ತೊಂದು ಸಮಸ್ಯೆಯಿದ್ದಿತು: ಭಾರತದ ಮೇಲೆ ಅಳಿಸಲಾಗದ ಅಚ್ಚೊತ್ತಿರುವ ಈ ಬೃಹತ್ ನಾಗರಿಕತೆ ‘ಆರ್ಯನ್ನರ ವಲಸೆ’ಗಳಿಗಿಂತ ಮೊದಲಿನಿಂದಲೂ ಇತ್ತು ಎಂದಾದರೆ, ‘ಆರ್ಯನ್ನರು’ ಸಂಸ್ಕೃತ ಮತ್ತು ವೇದಗಳು ಭಾರತೀಯ ಸಂಸ್ಕೃತಿಯ ಆದಿಮೂಲ ಎನ್ನುವ ಬಲಪಂಥೀಯ ಹೇಳಿಕೆಗಳಿಗೆ ಬಲವಾದ ಹೊಡೆತ ಬೀಳುತ್ತದೆ.

ಮಾರ್ಟಿನ್ ಬಿ. ರಿಚಡ್ರ್ಸ್‍ರವರು ಸಹ-ಲೇಖಕರಾಗಿರುವ ಪ್ರಬಂಧ 2017ರ ಮಾರ್ಚ್ 23ರಂದು ಪ್ರಕಟವಾಯಿತು ಹಾಗೂ ನನಗೆ ಅದು ಒಂದು ವಾರದ ನಂತರ ದೊರಕಿತು. ಮುಂದಿನ ಎರಡು ತಿಂಗಳುಗಳು ನನಗೆ ಸುಲಭವಾಗಿ ಅರ್ಥವಾಗದ ಭಾರತೀಯರ ವಿವಿಧ ಕಾಲಾವಧಿಗಳ ಆನುವಂಶಿಕತೆ ಕುರಿತ ಪ್ರಬಂಧಗಳನ್ನು ಹಲವಾರು ಬಾರಿ ಓದಿ ಅರ್ಥೈಸಿಕೊಳ್ಳಲು ನಾನು ಪ್ರಯತ್ನಿಸಿದೆ; ಈ ಪ್ರತಿ ಪ್ರಬಂಧ ಪ್ರಕಟವಾದಾಗಲೂ ಕಾಣುತ್ತಿದ್ದ ಜನಸಮೂಹ ಆನುವಂಶಿಕತೆಯ ಅಭಿವೃದ್ಧಿಯ ಸ್ಥಿತಿಗತಿಗಳ ಪರಸ್ಪರ ವಿರೋಧದ ಆವಿಷ್ಕಾರಗಳನ್ನು ತಾಳೆ ಹಾಕಲು ಪ್ರಯತ್ನಿಸುತ್ತಿದ್ದೆ; ತಮ್ಮ ಕ್ಷೇತ್ರಗಳಲ್ಲಿ ಮಹಾನ್ ಸಾಧನೆ, ಆವಿಷ್ಕಾರ ಮಾಡಿದ ಈ ಪ್ರಬಂಧಗಳ ಲೇಖಕರನ್ನು ಸಂಪರ್ಕಿಸುತ್ತಿದ್ದೆ ಹಾಗೂ ನಾನು ಕೈಗೊಳ್ಳುತ್ತಿದ್ದ ನಿರ್ಧಾರಗಳನ್ನು ಪರೀಕ್ಷಿಸಿ- ಮರು ಪರೀಕ್ಷಿಸುತ್ತಿದ್ದೆ ಹಾಗೂ ಇನ್ನೂ ಹೆಚ್ಚು ಹೆಚ್ಚು ಪ್ರಬಂಧಗಳ ಮನನ ಮಾಡುತ್ತಿದ್ದೆ.

2017ರ ಜೂನ್ 17ರಂದು `ದ ಹಿಂದು’ ಪತ್ರಿಕೆ ನನ್ನ ಲೇಖನ ‘ಹೌ ಜೆನೆಟಿಕ್ಸ್ ಈಸ್ ಸೆಟ್ಲಿಂಗ್ ದ ಆರ್ಯನ್ ಮೈಗ್ರೇಶನ್ ಡಿಬೇಟ್’ (ಹೇಗೆ ಆನುವಂಶಿಕತೆಯ ಅಧ್ಯಯನಗಳು ಆರ್ಯರ ವಲಸೆ ಚರ್ಚೆಯನ್ನು ನಿರ್ಧರಿಸುತ್ತಿದೆ) ಪ್ರಕಟಿಸಿತು. ಈ ಲೇಖನದಲ್ಲಿ ನಾನು ತಮ್ಮನ್ನು ಆರ್ಯನ್ನರೆಂದು ಕರೆದುಕೊಳ್ಳುವ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ಸುಮಾರು 4000 ವರ್ಷಗಳ ಹಿಂದೆ ಭಾರತಕ್ಕೆ ವಲಸೆ ಬಂದಿದ್ದರೆಂಬ ಸಿದ್ಧಾಂತಕ್ಕೆ ಹೇಗೆ ಡಿ.ಎನ್.ಎ. ಸಾಕ್ಷಿ ಬೆಂಬಲ ನೀಡುತ್ತದೆ ಎಂಬುದನ್ನು ವಿವರಿಸಿದ್ದೆ. 2018ರ ಮಾರ್ಚ್‍ನಲ್ಲಿ ಜಗತ್ತಿನಾದ್ಯಂತದ ತೊಂಭತ್ತೆರಡು ಜನ ವಿಜ್ಞಾನಿಗಳು ಬರೆದ ಹಾಗೂ biology, bioRxiv ಮುದ್ರಣಪೂರ್ವ ಸರ್ವರ್‍ನಲ್ಲಿ ಪ್ರಕಟವಾದ ‘The Genomic Formation of South and Central Asia’ (ದಕ್ಷಿಣ ಮತ್ತು ಮಧ್ಯ ಏಷ್ಯಾದ ಪೂರಕ ವಂಶವಾಹಿ ಮಾಹಿತಿ ಭಂಡಾರದ ರಚನೆ) ಎಂಬ ಅನ್ವೇಷಕ ಪ್ರಬಂಧವು ನನ್ನ ಆ ಲೇಖನದಲ್ಲಿನ ಹೇಳಿಕೆಗಳನ್ನು ಪುಷ್ಟೀಕರಿಸಿದವು. ರೀಚ್ ಮತ್ತು ತಂಗರಾಜ್‍ರವರು ಅ ಅಧ್ಯಯನದ ಸಹ-ನಿರ್ದೇಶಕರಾಗಿದ್ದರು. ಆ ಅಧ್ಯಯನದ ಹರವು ಮತ್ತು ಪ್ರಾಚೀನ ಡಿ.ಎನ್.ಎ. ಆಧಾರಿತವಾದುದೆಂಬ ವಾಸ್ತವತೆ ಸಂಶೋಧನೆಯ ಫಲಿತಗಳು ಹೆಚ್ಚು ಪರಿಣಾಮಕಾರಿ ಹಾಗೂ ವಲಸೆ ಬಂದವರ ಕಾಲಾನುಕ್ರಮಣಿಕೆಯನ್ನು ಹೆಚ್ಚು ನಿಖರವಾಗಿ ಹೇಳಲು ಸಾಧ್ಯವಾಯಿತು.
 

ಎಂತಹ ವೃತ್ತಿಪರ ಪರಿಸರವಿದ್ದರೂ ಸಂಶೋಧನಾ ಫಲಿತಾಂಶಗಳನ್ನು ಹೇಗೆ ಅರಿತುಕೊಳ್ಳಬಹುದು ಹಾಗೂ ಅವುಗಳನ್ನು ಹೇಗೆ ನಿರೂಪಿಸಬಹುದೆಂಬುದರ ಮೇಲೆ ವೈಯಕ್ತಿಕ ಆದ್ಯತೆಗಳು ಪಾತ್ರ ವಹಿಸುತ್ತವೆ ಎಂಬುದನ್ನು ಈ ಪುಸ್ತಕದ ಬರವಣಿಗೆಯ ನನ್ನ ಅನುಭವಗಳು ತಿಳಿಸಿಕೊಟ್ಟಿವೆ. ಬಹಳಷ್ಟು ಸಾರಿ ಅದು ಪಕ್ಷಪಾತದ ಪ್ರಶ್ನೆಯಾಗಿರುವುದಿಲ್ಲ, ಆದರೆ ಸತ್ಯಾಸತ್ಯತೆ ಹಾನಿಯುಂಟುಮಾಡಬಹುದಾದುದರಿಂದ ಅದನ್ನು ಎಚ್ಚರಿಕೆಯಿಂದ ನಿಭಾಯಿಸಬೇಕೆಂಬ ಪ್ರಾಮಾಣಿಕ ನಂಬಿಕೆಯೂ ಕಾರಣವಾಗಿರುತ್ತದೆ. ಉದಾಹರಣೆಗೆ, ಮಧ್ಯಕಾಲೀನ ಅವಧಿಯಲ್ಲಿನ ದಬ್ಬಾಳಿಕೆ, ಅತ್ಯಾಚಾರಗಳ ವಿವರಗಳು ವಿವಿಧ ಧರ್ಮಗಳ ನಡುವೆ ಶತ್ರುತ್ವ ಉಂಟುಮಾಡಬಹುದೆಂಬ ಭಾರತೀಯ ಚರಿತ್ರೆಕಾರರಲ್ಲಿನ ಐವತ್ತು ವರ್ಷಗಳ ಹಿಂದೆಯಿದ್ದ ಅಂಜಿಕೆಯಂತೆಯೇ ಹುಲ್ಲುಗಾವಲು ಮೈದಾನ ಪ್ರದೇಶಗಳಿಂದ (Steppe) ವಲಸೆ ಬಂದಿರುವರೆಂಬ ವಾಸ್ತವಾಂಶವು ಭಾಷೆ ಮತ್ತು ಪ್ರಾದೇಶಿಕ ವಿಭಜನೆಯ ಸಂಘರ್ಷವನ್ನು ಪುನರಾರಂಭಿಸಬಹುದೆಂಬ ಅಂಜಿಕೆಯೂ ಇರಬಹುದು. ವಾಸ್ತವವೇನೆಂದರೆ, ಸತ್ಯವನ್ನು ಅವಿತಿಡುವುದು ವಿಭಜನೆಗಳ ಗಾಯವನ್ನು ಶಮನಗೊಳಿಸುವುದಿಲ್ಲ. ಅದು ಗಾಯ ಒಳಗೇ ಹುಣ್ಣಾಗುವಂತೆ, ಮುಂದೆ ಇನ್ನೂ ಹೆಚ್ಚು ನೋವು ಕೊಡುವಂತಾಗಬಹುದು. ಅಲ್ಲದೆ, ಯಾವುದೇ ವಿಜ್ಞಾನಿಯಾಗಲೀ ಅಥವಾ ಲೇಖಕನಾಗಲೀ ಸತ್ಯಾಂಶವೊಂದನ್ನು ಅವಿತಿಡುವುದರ ಪರಿಣಾಮದ ಮುನ್ಸೂಚನೆ ನಿಖರವಾಗಿ ಹೇಳಲಾರ: ಚರಿತ್ರೆಯು ಸಂಪೂರ್ಣವಾಗಿ ಅಂತಹ ಅನಿರೀಕ್ಷಿತ ಪರಿಣಾಮಗಳಿಂದಲೇ ರಚಿತವಾಗಿದೆ. ಹಾಗಾಗಿ ಯಾವುದೇ ವಿಜ್ಞಾನಿ ಅಥವಾ ಯಾವುದೇ ಲೇಖಕರಾಗಲಿ ಮೊದಲಿಗೆ ವಾಸ್ತವಾಂಶಗಳು ಮಾತನಾಡಲು ಬಿಡಬೇಕು, ಆದರೆ ಅವುಗಳಿಂದ ಯಾವುದೇ ಆಧಾರವಿಲ್ಲದ ನಿರ್ಧಾರಗಳನ್ನು ಕೈಗೊಳ್ಳದಂತೆ ನೋಡಿಕೊಳ್ಳಬೇಕು.

ಈ ವಿಷಯ ಕುರಿತಂತೆ, ಕ್ರಿ.ಪೂ. ಎರಡು ಸಾವಿರ ವರ್ಷಗಳ ಹಿಂದೆ ಬೃಹತ್ ಪ್ರಮಾಣದಲ್ಲಿ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವವರು ವಲಸೆ ಬಂದರೆಂಬುದು ಸತ್ಯವಾದ ವಿಷಯ, ಆದರೆ ಈಗಿನ ಭಾರತದಲ್ಲಿನ ಜನರು ತಮ್ಮ ವಂಶವಾಹಿಗಳನ್ನು ಭಾರತಕ್ಕೆ ಬಂದಿರುವ ಹಲವಾರು ವಲಸೆಗಳ ವಿವಿಧ ಕಾಲಾವಧಿಯ ಜನಸಮೂಹಗಳಿಂದ ಪಡೆದಿದ್ದಾರೆಂಬುದೂ ಸತ್ಯ: ಹಾಗಾಗಿ ‘ಅನಾದಿ ಕಾಲ’ದಿಂದಲೂ ‘ಪರಿಶುದ್ಧ’ ಗುಂಪು, ಜನಾಂಗ ಅಥವಾ ಜಾತಿ ಎನ್ನುವುದು ಇರಲೇ ಇಲ್ಲ. ಆದರೆ, ವಿವಿಧ ಜನಸಮೂಹಗಳ ನಡುವಿನ ಮಿಶ್ರಣದ ಪ್ರಮಾಣದಲ್ಲಿ ವಿವಿಧ ಪ್ರದೇಶ ಹಾಗೂ ಸಮುದಾಯಗಳ ನಡುವೆ ವ್ಯತ್ಯಾಸವಿದೆ. ಹಾಗಾಗಿ, ಸಾವಿರಾರು ವರ್ಷಗಳಿಂದ ನಡೆದ ಬಹುಸಂಖ್ಯೆಯ ವಲಸೆಗಳು ಹಾಗೂ ಬೃಹತ್ ಪ್ರಮಾಣದ ಜನಸಮೂಹಗಳು ಮಿಶ್ರಣಗೊಂಡ ಸತ್ಯದೊಂದಿಗೆ ಇಂಡೋ-ಯೂರೋಪಿಯನ್ ವಲಸೆಗಳ ವಾಸ್ತವತೆಯ ಕುರಿತೂ ಸಹ ಹೇಳಬೇಕಾಗಿದೆ. ಹಲವಾರು ಜನಸಮೂಹಗಳ ವಿವಿಧ ವಲಸೆ ಚರಿತ್ರೆಗಳೊಂದಿಗೆ ಮತ್ತು ಒಂದಲ್ಲ ಹಲವಾರು ವಿವಿಧ ಮೂಲಗಳಿಂದ ಪಡೆದ ನಡೆ, ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳನ್ನು ಮೈಗೂಡಿಸಿಕೊಂಡಿರುವ ನಾವು ಇಂದು ಒಂದು ವಿಶಿಷ್ಟ ಭಾರತೀಯ ನಾಗರಿಕತೆಯಾಗಿದ್ದೇವೆ.
***
ಅಡಿ ಟಿಪ್ಪಣಿಗಳು
1 : ಈ ಕೃತಿಯಲ್ಲಿ ಎಲ್ಲೆಡೆ ಆಧುನಿಕ ಮಾನವರು ಮತ್ತು ಹೋಮೊ ಸೇಪಿಯೆನ್ಸ್ ಪದಗಳನ್ನು ಒಂದೇ ಅರ್ಥದಲ್ಲಿ ಬಳಸಲಾಗಿದೆ. ಮಾನವರು ಎಂದಾಗ ಅವರು ಹೋಮೊ ಪ್ರಭೇದದ ಹೋಮೊ ಹ್ಯಾಬಿಲಿಸ್, ಹೋಮೊ ಎರೆಕ್ಟಸ್, ಹೋಮೊ ನಿಯಾಂಡರ್ತಲೆನ್ಸಿಸ್ ಅಥವಾ ಹೋಮೊ ಸೇಪಿಯೆನ್ಸ್ ನ ಸದಸ್ಯರಾಗಿರಬಹುದು. ಆದಿ ಮಾನವರು ಎಂದಾಗ ಅವರು ನಾಮಾವಶೇಷವಾಗಿರುವ ಹೋಮೊ ಪ್ರಭೇದದ ಹೋಮೊ ಹ್ಯಾಬಿಲಿಸ್, ಹೋಮೊ ಎರೆಕ್ಟಸ್ ಅಥವಾ ಹೋಮೊ ನಿಯಾಂಡರ್ತಲೆನ್ಸಿಸ್ ನ ಸದಸ್ಯರಾಗಿರುತ್ತಾರೆ. ಆದರೆ, ಹೋಲೊಸೀನ್ (ಕ್ರಿ.ಪೂ. 9700ರ ನಂತರದ ಅವಧಿ) ಅವಧಿಯಲ್ಲಿ ‘ಮಾನವರು’ ಎಂದರೆ ಆಧುನಿಕ ಮಾನವರು ಮಾತ್ರ, ಏಕೆಂದರೆ ಅಷ್ಟೊತ್ತಿಗಾಗಲೇ ಆದಿ ಮಾನವರು ನಿರ್ನಾಮ ಹೊಂದಿದ್ದರೆಂದು ನಂಬಲಾಗಿದೆ.
2 : ‘ಆರ್ಯನ್ನರ ವಲಸೆ’ ಎನ್ನುವುದು ಕ್ರಿ.ಪೂ. 2000ದ ನಂತರದ ಅವಧಿಯಲ್ಲಿ ಯುರೇಶಿಯನ್ ಹುಲ್ಲುಗಾವಲು ಮೈದಾನ ಪ್ರದೇಶಗಳಿಂದ ಭಾರತಕ್ಕೆ ವಲಸೆ ಬಂದವರು ಹಾಗೂ ತಮ್ಮನ್ನು ಆರ್ಯನ್ನರೆಂದು ಕರೆದುಕೊಂಡವರು ಸಂಸ್ಕೃತದ ಪ್ರಾಚೀನ ಅವೃತ್ತಿಯನ್ನೊಳಗೊಂಡಂತೆ ಇಂಡೋ-ಯೂರೋಪಿಯನ್ ಭಾಷೆಗಳನ್ನು ತಂದರೆಂಬ ಸಿದ್ಧಾಂತ. ‘ಆರ್ಯ’ರು ಎನ್ನುವುದು ಒಂದೇ ಕುಟುಂಬದ ಭಾಷೆಯನ್ನು ಮಾತನಾಡುವ ಜನಸಮೂಹದ ಸ್ವ-ವಿವರಣೆ. ಈ ಕೃತಿಯಲ್ಲಿ ‘ಆರ್ಯನ್ನರ ವಲಸೆ’ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ, ‘ತಮ್ಮನ್ನು ಆರ್ಯರೆಂದು ಕರೆದುಕೊಂಡ ಇಂಡೋ-ಯೂರೋಪಿಯನ್-ಭಾಷೆ ಮಾತನಾಡುವ ಜನರ ವಲಸೆ’ ಎಂಬರ್ಥದಲ್ಲಿ ಓದಿಕೊಳ್ಳಬೇಕು ಹಾಗೂ ‘ಆರ್ಯನ್ನರು’ ಎಂದು ಎಲ್ಲೆಲ್ಲಿ ಬಳಸಲಾಗಿದೆಯೋ ಅಲ್ಲೆಲ್ಲಾ, ‘ತಮ್ಮನ್ನು ಆರ್ಯರೆಂದು ಕರೆದುಕೊಂಡವರು’ ಎಂಬರ್ಥದಲ್ಲಿ ಓದಿಕೊಳ್ಳಬೇಕು
3 : David Reich, et al., ‘Reconstructing Indian Population History’, Nature 461: 489-94 (September 2009).
4 : Marina Silva, et al., ‘A Genetic Chronology . . .’, BMC Evolutionary Biology (2017).
ಈ ಆಯ್ದ ಭಾಗವನ್ನು ಟೋನಿ ಜೋಸೆಫ್‍ರವರ `Early Indians ಪ್ರಕಾಶಕರಾದ ಜಗರ್‍ನಾಟ್ ಬುಕ್ಸ್ ಅನುಮತಿಯಿಂದ ಬಳಸಿಕೊಳ್ಳಲಾಗಿದೆ.

ಅನುವಾದ: ಡಾ.ಜೆ.ಬಾಲಕೃಷ್ಣ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಕನ್ನಡದಲ್ಲಿ ವಿಜ್ಞಾನ ಸಂವಹನೆಯಲ್ಲಿ ಕೆಲಸ ಮಾಡಿರುವ ಇವರು, ಮಂಟೋ ಕಥೆಗಳನ್ನೊಳಗೊಂಡಂತೆ ಹಲವು ಸೃಜನಶೀಲ ಕೃತಿಗಳನ್ನು ಕನ್ನಡಿಸಿದ್ದಾರೆ.

No comments: