2008ರ ಸೆಪ್ಟೆಂಬರ್ 14ರ `ಕನ್ನಡ ಪ್ರಭ'ದಲ್ಲಿ ನನ್ನ ಕತೆ ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ ಕತೆ ಪ್ರಕಟವಾಗಿದೆ. ಅದನ್ನು ಇಲ್ಲಿ ನನ್ನ ಬ್ಲಾಗ್‌ನಲ್ಲಿ ಓದಿ ಅಥವಾ ನೇರ ಕನ್ನಡ ಪ್ರಭದ ವೆಬ್ ಸೈಟ್‌ನಲ್ಲಿ (ಇದರ ಫಾಂಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಸರಿಯಾಗಿ ಕಾಣುತ್ತದೆ. ಲಿಂಕ್ : http://www.kannadaprabha.com/NewsItems.asp?ID=KP420080913031408&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=9/14/2008&Dist=0) ಓದಿ ತಮ್ಮ ಅಭಿಪ್ರಾಯ ತಿಳಿಸಿ:
ಸುಶೀಲಾ ಕಿಟಕಿಯ ಬಳಿ ನಿಂತು ಧೋ ಎಂದು ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದಳು. ನೋಡುತ್ತಿದ್ದುದು ಮಳೆಯನ್ನಾದರೂ ಅವಳ ಮನಸ್ಸು ಎಲ್ಲೆಲ್ಲೋ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿತ್ತು. ಎಷ್ಟು ಅಲೆದಾಡಿದರೂ ಆ ಮನಸ್ಸು ಬಾಟಲಿಯೊಳಗೆ ಬಂಧಿಸಲ್ಪಟ್ಟ ಜೀನಿಯಂತಾಗಿತ್ತು. ಮನಸ್ಸಿನ ಜೊತೆಗೆ ಅವಳ ನೆನಪೂ ಸಹ ಬಾಟಲಿಯೊಳಗೆ ಸೇರಿಕೊಂಡಂತಾಗಿ ಆ ಕೋಣೆ ಬಿಟ್ಟು ಹೊರಗೆ ಹೋಗಲು ಆಗುತ್ತಿರಲಿಲ್ಲ. ಅವಳೆಲ್ಲ ನೆನಪುಗಳೂ ಅಲ್ಲೇ ನಿಂತುಹೋಗಿದ್ದವು. ಆ ರೀತಿ ಎಷ್ಟು ದಿನಗಳಿಂದ ಎನ್ನುವುದು ಅವಳಿಗೇ ತಿಳಿದಿರಲಿಲ್ಲ ಆಗಾಗ ಬೀಸುತ್ತಿದ್ದ ಗಾಳಿ ಕಿಟಕಿಯ ಮೂಲಕ ಕೋಣೆಯೊಳಕ್ಕೂ ನುಗ್ಗುತ್ತಿತ್ತು ಹಾಗೂ ಒಂದಷ್ಟು ಹನಿ ನೀರುಗಳನ್ನೂ ಅವಳ ಮುಖದ ಮೇಲೆ ಸಿಂಪಡಿಸುತ್ತಿತ್ತು. ಕೊಂಚ ಚಳಿಯೆನ್ನಿಸಿದರೂ ತಂಗಾಳಿ ಹಿತವಾಗಿತ್ತು. ಕಿಟಕಿಯ ಆಚೆ ಏನೂ ಕಾಣುತ್ತಿರಲಿಲ್ಲ. ಏಕೆಂದರೆ ಪಕ್ಕದಲ್ಲೇ ಒತ್ತರಿಸಿಕೊಂಡು ಕಟ್ಟಿದ್ದ ಕಟ್ಟಡವೊಂದರ ಗೋಡೆಯಿತ್ತು. ಆ ಗೋಡೆಗೆ ಕಿಟಕಿಗಳಿಲ್ಲ, ಬಾಗಿಲುಗಳಿಲ್ಲ. ಅವಳಿಗೆ ಕಿಟಕಿಯ ಮೂಲಕ ಒಬ್ಬ ನರಮನುಷ್ಯನೂ ಕಾಣುತ್ತಿರಲಿಲ್ಲ, ಯಾವುದೇ ಸದ್ದು ಕೇಳುತ್ತಿರಲಿಲ್ಲ. ಕೇಳುತ್ತಿದ್ದುದು ಅವಳದೇ ಸದ್ದುಗಳು. ಎಷ್ಟೋ ಸಾರಿ ಆ ಸದ್ದು ಬೇರ್‍ಯಾರದೋ ಹೆಣ್ಣಿನದು ಇರಬಹುದೇನೋ ಎಂದು ಅವಳಿಗೇ ಗಾಭರಿಯಾಗುತ್ತಿತ್ತು.
***
ಆತ ಎದ್ದುಹೋಗಿ ಬಹಳ ಹೊತ್ತಾಗಿತ್ತು. ಹಾಗೆಯೇ ಮಂಚದ ಮೇಲೆ ಮಲಗಿಯೇ ಇದ್ದಳು. ನಿಧಾನವಾಗಿ ಮುಷ್ಠಿ ತೆರೆದು ಬೆರಳುಗಳನ್ನು ಅಗಲಿಸಿದಳು. ಬೆರಳುಗಳಿಗೆ ರಕ್ತ ನುಗ್ಗಿದಂತಾಗಿ ಜುಮ್ಮೆಂದಿತು. ಕೈಯಲ್ಲಿದ್ದ ಚೀಟಿಯನ್ನು ದಿಂಬಿನಡಿಗೆ ಸೇರಿಸಿ ಬಟ್ಟೆ ಧರಿಸಿಕೊಂಡು ಹಾಗೆಯೇ ಮಂಚದ ಮೇಲೆ ಕೂತು ಆ ಚೀಟಿಯನ್ನು ಕೈಗೆತ್ತಿಕೊಂಡಳು. ಅದರೊಳಗೆ ಬರೆದಿರುವುದನ್ನು ಅದೇನೆಂದು ಗೊತ್ತಿದ್ದರೂ ಮತ್ತೊಮ್ಮೆ ಓದುವ ಮನಸ್ಸಾಯಿತು. ನಿಧಾನವಾಗಿ ಕಾಗದದ ಮಡಿಕೆಯನ್ನು ಬಿಡಿಸಿದಳು. ಬಿಗಿ ಮುಷ್ಠಿಯಲ್ಲಿನ ಬೆವರಿಗೆ ಕಾಗದ ತೇವವಾಗಿತ್ತು. ಮತ್ತೊಮ್ಮೆ ಓದಿದಳು- `ನಾನು ನಿನ್ನನ್ನು ಪ್ರೀತಿಸುತ್ತೇನೆ'. ಅವಳ ಹೊಟ್ಟೆ ತೊಳೆಸಲು ಆರಂಭವಾಯಿತು. ಹೊಟ್ಟೆಯಲ್ಲಿ ವಿಪರೀತ ಸಂಕಟವಾಗತೊಡಗಿತು. ಆ ಕಾಗದ ಚೂರನ್ನು ಮುದುಡಿ ಕೈಯಲ್ಲಿ ಬಿಗಿಹಿಡಿದು ಹೊಟ್ಟೆಯನ್ನು ಅದುಮಿ ಹಿಡಿದಳು. ಹೊಟ್ಟೆ ತೊಳೆಸುವುದು ಹೆಚ್ಚಾಗಿ ವಾಂತಿಯಾಗುತ್ತದೆನ್ನಿಸಿತು. ಎದ್ದು ಬಚ್ಚಲುಮನೆಗೆ ಓಡಿಹೋದಳು. ಅಲ್ಲಿ ಎಷ್ಟು ಹೊತ್ತು ಕೂತಿದ್ದಳೋ ಅವಳಿಗೇ ಗೊತ್ತಿಲ್ಲ. ಬಚ್ಚಲು ಮನೆಯ ಬಾಗಿಲು ಧಡಧಡ ತಟ್ಟಿತು. ಎದ್ದು ಬಾಯಿ ತೊಳೆದುಕೊಂಡು ಕೋಣೆಗೆ ಹೋದಳು. ಅಲ್ಲಿ ಮತ್ತೊಬ್ಬಾತ ಮಂಚದ ಮೇಲೆ ಕೂತಿದ್ದ. ಕೋಣೆಯ ಬಾಗಿಲ ಚಿಲಕ ಹಾಕುವಾಗ ಕೈ ನೋಡಿಕೊಂಡಳು, ಕೈಯಲ್ಲಿ ಆ ಕಾಗದದ ಚೂರು ಇರಲಿಲ್ಲ. `ಬಚ್ಚಲು ಮನೆಗೆ ಹೋಗಿ ಆ ಕಾಗದದ ಚೂರನ್ನು ಹುಡುಕಿ ತರಲೇ?' ಎಂದುಕೊಂಡು ಅಲ್ಲೇ ಬಾಗಿಲ ಬಳಿಯೇ ನಿಂತಿದ್ದಳು. ಆಕೆ ಅಲ್ಲೇ ನಿಂತಿದ್ದನ್ನು ನೋಡಿ ಮಂಚದ ಮೇಲೆ ಕೂತಿದ್ದಾತ ಎದ್ದು ಬಂದು ಆಕೆಯನ್ನು ಹಿಂದಿನಿಂದ ತಬ್ಬಿಕೊಂಡ. ಅವಳ ಎದೆಯನ್ನು ಅದುಮಿ ಹಿಡಿದ. ಅವಳಿಗೇ ಅರಿವಿಲ್ಲದಂತೆ `ಬ್ಲೌಸ್ ಬಿಚ್ಚಲು ಐವತ್ತು ರೂಪಾಯಿ, ಎಲ್ಲಾ ಬಿಚ್ಚಲು ನೂರು ರೂಪಾಯಿ' ಎಂಬ ಮಾತುಗಳು ಅವಳಿಂದ ಹೊರಬಂತು.
***
ಹಾಗೆಯೇ ಕೂತಿದ್ದ ಸುಶೀಲಳಿಗೆ `ಆಂಟಿ ಊಟಕ್ಕೆ ಕರೀತಾರೆ' ಎಂದು ನಾಗರಾಜ ಹೇಳಿದ. ಎದ್ದು ಹೋಗಿ ಊಟಮಾಡಿ ಅಡುಗೆ ಮನೆಯಿಂದ ಹೊರಗೆ ಬಂದು ಕೋಣೆಯ ಕಡೆಗೆ ನಡೆದಳು. `ಯಾಕ್ ಅಂಗೇ ಹೋಗ್ತೀಯ? ಮಾತ್ರೆ ನುಂಗೋ ಗ್ಯಾನಾ ಇಲ್ಲವಾ ನಿಂಗೆ? ಬಾ ಇಲ್ಲಿ' ಎಂದು ಆಂಟಿ ಅರಚಿದಳು. ಆಕೆ ಕೊಟ್ಟ ಮಾತ್ರೆಯನ್ನು ಅಲ್ಲೇ ಇಟ್ಟಿದ್ದ ಚೆಂಬಿನ ನೀರನ್ನು ಗ್ಲಾಸಿಗೆ ಬಗ್ಗಿಸಿ ನುಂಗಿದಳು. `ದರಿದ್ರ ಮುಂಡೆ. ಗೊತ್ತಿದ್ರೂ ದಿನಾ ಮರ್‍ತಂಗೆ ಈ ನಾಟಕ ಆಡ್ತಾಳೆ. ಆಮೇಲೆ ಹೊಟ್ಟೆ ಇಳಿಸೋಕೆ ಇವ್ಳಿಗೆ ಎರಡು ಸಾವಿರ ಖರ್ಚುಮಾಡಬೇಕು. ನಿಮ್ಮಪ್ಪ ಕೊಡ್ತಾನಾ ದುಡ್ಡು!' ಎಂದಳು. ಸುಶೀಲಾ ಏನೊಂದೂ ಹೇಳದೆ ಕೋಣೆಗೆ ಹೋಗಿ ಮಲಗಿದಳು. ಈ ಮಾತುಗಳನ್ನು ದಿನಾಲೂ ಕೇಳುತ್ತಿದ್ದಳು. ಆಗಲೇ ಮರೆತುಹೋಗುತ್ತಿದ್ದಳು.
ಅರೆ ನಿದ್ರೆ, ಅರೆ ಎಚ್ಚರಾವಸ್ಥೆ. ಆ ಕಾಗದದ ಚೂರು ಅವಳ ಸ್ಮೃತಿಗೆ ಒಂದು ಚೂರು ಜೀವಕೊಟ್ಟಿತ್ತು. ಆ ಚೀಟಿ ಕೊಟ್ಟವನನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದಳು. ಅವನ ಮುಖ ಅಸ್ಪಷ್ಟ. ಅವಳು ಮುಖಗಳನ್ನು ನೆನಪಿಟ್ಟುಕೊಳ್ಳುವುದೇ ಮರೆತು ಎಷ್ಟೋ ತಿಂಗಳುಗಳಾಗಿತ್ತು. ಈ ದಿನದ ಮೊದಲ ಗಿರಾಕಿಯಲ್ಲವೇ ಅವನು? ಈ ಮೊದಲೂ ಆತ ಬರುತ್ತಿದ್ದನೆ? ಈ ಸಾರಿ ಬಂದರೆ ಆತನನ್ನು ಕೇಳಬೇಕೆನ್ನಿಸಿತು. ತಕ್ಷಣ ಆಕೆಯ ಮೈ ಹೆದರಿಕೆಯಿಂದ ನಡುಗತೊಡಗಿತು. ಎದೆಬಡಿತ ಏರಿತು. ಮೈಯೆಲ್ಲಾ ಬೆವರತೊಡಗಿತು. `ಯಾಕ್ ಹಾಗ್ ನಡುಗ್ತಾ ಇದೀಯ? ಮೈ ಹುಷಾರಿಲ್ಲವಾ?' ಎಂಬ ಪ್ರಶ್ನೆ ಕೇಳಿ ಬೆಚ್ಚಿಬಿದ್ದಳು. ಯಾವನೋ ಗಿರಾಕಿ ಆಗಲೇ ಅವಳ ಮೇಲೇರಿದ್ದ. ಅವಳ ಬಟ್ಟೆಯೆಲ್ಲಾ ಬಿಚ್ಚಿದ್ದ. ಇವನೇ ಅವನಿರಬಹುದಾ ಎಂದು ಕಣ್ಣು ಕಿರಿದು ಮಾಡಿ ಮೇಲೇರಿದವನ ಮುಖ ನೋಡಲು ಯತ್ನಿಸಿದಳು. ಮುಖ ಅಸಹ್ಯವಾಗಿತ್ತು. ಬಾಯಿ ವಾಸನೆ ಬರುತ್ತಿತ್ತು. ಇವನು ಅವನಾಗಿರಲಾರ ಎಂದುಕೊಂಡು ಮುಖ ಪಕ್ಕಕ್ಕೆ ತಿರುಗಿಸಿದಳು. ಅವನು ಬಿಡಲಿಲ್ಲ. ಪಕ್ಕಕ್ಕೆ ತಿರುಗಿದ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡ, ನಕ್ಕ. ಅವನು ನಗುತ್ತಿದ್ದಾನೆಯೋ, ಅಳುತ್ತಿದ್ದಾನೆಯೋ ತಿಳಿಯಲಿಲ್ಲ. ಕಣ್ಣು ತೆರೆದು ಅವನನ್ನೇ ದಿಟ್ಟಿಸಿ ನೋಡಿದಳು. ಅವಳು ತನ್ನನ್ನೇ ನೋಡುತ್ತಿದ್ದಾಳೆಂದು ಖುಷಿಪಟ್ಟ. ಆದರೆ ಸುಶೀಲಾ ಕಣ್ಣು ತೆರೆದಿದ್ದರೂ ಅದನ್ನು ಮುಚ್ಚಿಕೊಳ್ಳುವ ಕಲೆ ಕರಗತಗೊಳಿಸಿಕೊಂಡಿದ್ದಾಳೆಂದು ಅವನಿಗೆ ತಿಳಿದಿರಲಿಲ್ಲ. ಅವನು ಮುಗಿಸಿ ಎದ್ದುನಿಂತರೂ ಅವಳ ದೃಷ್ಟಿ ಹಾಗೆಯೇ ಇದ್ದದ್ದು ಕಂಡು ಅವನಿಗೆ ಆಶ್ಚರ್ಯವಾಯಿತು.
***
ಸುಶೀಲಾಳಿಗೆ ಅದು ಮೊದಲ ಅನುಭವ, ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದು. ಆಗ ತಾನೆ ಎಸ್ಸೆಸ್ಸೆಲ್ಸಿ ಮುಗಿಸಿ ಕೋಲಾರದ ಕಾಲೇಜಿಗೆ ಸೇರಿದ್ದಳು. ಆಗಿನ್ನೂ ಕೋ-ಎಜುಕೇಶನ್ ಇತ್ತು. ಈಗಿನ ಹಾಗೆ ಹುಡುಗಿಯರ ಕಾಲೇಜನ್ನು ದೂರದ ಕೆರೆಯ ಪಕ್ಕದಲ್ಲಿ ಮಾಡಿರಲಿಲ್ಲ. ಕೋ-ಎಜುಕೇಶನ್ನಿನ ಫಸ್ಟ್ ಗ್ರೇಡ್ ಕಾಲೇಜಿನಿಂದ ಹುಡುಗಿಯರ ಕಾಲೇಜನ್ನು ಪ್ರತ್ಯೇಕಿಸಿದಾಗ ಹುಡುಗರಿಗೆ ಪಕ್ಕೆಲುಬನ್ನೇ ಕಿತ್ತು ಪ್ರತ್ಯೇಕಿಸಿದಂತಾಗಿತ್ತು. ಸುಶೀಲಾಳಿಗೆ ಎಲ್ಲವೂ ಹೊಸತು. ಇದ್ದಕ್ಕಿದ್ದಂತೆ ತಾನು ದೊಡ್ಡವಳಾದಂತೆ ಅನ್ನಿಸುತ್ತಿತ್ತು. ಪಡ್ಡೆ ಹುಡುಗರು ರೇಗಿಸಿದರೆ ಸಿಡಿಮಿಡಿಯಾಗುತ್ತಿತ್ತು. ಯಾರೂ ರೇಗಿಸದಿದ್ದರೆ ಏನೋ ಕಳಕೊಂಡಂತೆ ಅನ್ನಿಸುತ್ತಿತ್ತು.
ಆ ದಿನಗಳಲ್ಲೇ ಅಲ್ಲವೆ ಅವನ ಪರಿಚಯವಾಗಿದ್ದು. ದಿನಾ ಬೈಕಿನಲ್ಲಿ ಹಿಂದೆಯೇ ಬರುತ್ತಿದ್ದ. ಅವಳು ಬಸ್ಸಿನಿಂದ ಇಳಿಯುವುದನ್ನೇ ಕಾಯುತ್ತಿರುತ್ತಿದ್ದ. ಆ ದಿನ ಹಿಂದೆಯೇ ಬಂದವನು ಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮಿಂಚಿನಿಂದ ಬಂದು ಕಾಗದದ ತುಣುಕೊಂದನ್ನು ಕೈಯಲ್ಲಿ ತುರುಕಿ ಹೋಗಿದ್ದ. ಅವಳಿಗೆ ಒಂದರೆಕ್ಷಣ ಗಾಭರಿಯಾಗಿತ್ತು, ಕಣ್ಣು ಕಪ್ಪಿಟ್ಟಿತ್ತು. ಅದ್ಹೇಗೆ ಸಾವರಿಸಿಕೊಂಡುಬಂದು ಸೀಟಿನಲ್ಲಿ ಕೂತ್ತಿದ್ದಳೋ ಅವಳಿಗೇ ಗೊತ್ತಿರಲಿಲ್ಲ. ಎಷ್ಟು ಹೊತ್ತು ಕೂತರೂ ಏದುಸಿರು ಕಡಿಮೆಯಾಗಿರಲಿಲ್ಲ, ಹಣೆಯ ಮೇಲೆ ಬೆವರಹನಿಗಳು ಸಾಲುಗಟ್ಟಿದ್ದವು. ತನ್ನ ಬಲಗೈಯೆಡೆಗೆ ನೋಡಿದಳು. ಮುಷ್ಠಿ ಬಿಗಿಯಾಗಿತ್ತು. ಬೆರಳ ಸಂದಿಯಲ್ಲಿ ಕಾಗದದ ಚೂರು ಇಣುಕುತ್ತಿತ್ತು. ಬೆರಳು ಸಡಿಲಗೊಳಿಸಲು ನೋಡಿದಳು. ಆಗಲಿಲ್ಲ. ಬಸ್ ಹೋಗುತ್ತಿತೋ, ನಿಂತಿತ್ತೋ ಅಥವಾ ಏರೋಪ್ಲೇನಿನಂತೆ ಆಕಾಶದಲ್ಲಿ ಹಾರುತ್ತಿತ್ತೋ, ಆಕೆಗೆ ಒಂದೂ ತಿಳಿಯುತ್ತಿರಲಿಲ್ಲ. ಬಸ್ಸಿನಲ್ಲಿ ಜನರ ಮಾತು ಎಲ್ಲೆಡೆಯಿಂದ ಕೇಳುತ್ತಿದ್ದರೂ ಕಿವಿಯಲ್ಲಿ ವಿಚಿತ್ರ ನಿಶ್ಶಬ್ದ ತುಂಬಿಕೊಂಡಿತ್ತು. ತನ್ನ ಊರಿನ ಬಸ್ಸ್ಟಾಪಿನಲ್ಲಿ ಇಳಿದವಳಿಗೆ ಹೆಜ್ಜೆಯೇ ಮುಂದೆ ಹೋಗಲಿಲ್ಲ. ಅಲ್ಲೇ ಬಸ್ಸ್ಟಾಪಿನಲ್ಲಿ ಸ್ವಲ್ಪಹೊತ್ತು ಕೂತಳು. ನಿಧಾನವಾಗಿ ಸಾವರಿಸಿಕೊಂಡು ಬೆರಳು ಸಡಿಲ ಮಾಡಿ ಆ ಚೀಟಿಯನ್ನು ಬಿಡಿಸಿದಳು. `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಬರೆದಿತ್ತು. ಕೈಕಾಲು ನಡುಗತೊಡಗಿತು, ಮೈ ಮತ್ತೆ ಬೆವರಿಟ್ಟಿತು, ಹೊಟ್ಟೆ ತೊಳಸಿಕೊಂಡು ಬಂತು. ಚರಚರನೆ ಆ ಚೀಟಿ ಹರಿದುಹಾಕಿದಳು. ಎಲ್ಲಿ ನೋಡಿದರೂ ಅದೇ ಅಕ್ಷರಗಳು ಕಾಣಿಸತೊಡಗಿದವು- ಬಸ್ಸ್ಟಾಪಿನ ಗೋಡೆಯ ಮೇಲೆ, ಕಸಕಡ್ಡಿ ತುಂಬಿದ್ದ ನೆಲದ ಮೇಲೆ, ಕಪ್ಪನೆ ಮೋಡ ತುಂಬಿದ್ದ ಆಕಾಶದಲ್ಲಿ. ಫಳಾರೆಂದು ಕಣ್ಣು ಕೋರೈಸುವ ಮಿಂಚೊಂದು ಹೊಡೆಯಿತು. ಬೆಚ್ಚಿ ಬಿದ್ದಳು. ಇನ್ನೇನು ಕೇಳಲಿರುವ ಗುಡಗಿನ ಅಬ್ಬರಕ್ಕೆ ಸಿದ್ಧಳಾಗಿ ಎದೆಗಟ್ಟಿಮಾಡಿಕೊಂಡು ಕೂತಳು. ಸಿದ್ಧಳಾಗಿದ್ದರಿಂದ ಗುಡುಗು ಅಷ್ಟೊಂದು ಹೆದರಿಸಲಿಲ್ಲ. ಧೋ ಎಂದು ಮಳೆ ಸುರಿಯತೊಡಗಿತು. ಅವಳ ಏರು ಎದೆಬಡಿತ ನಿಧಾನವಾಗಿ ಕಡಿಮೆಯಾಗತೊಡಗಿತು.
ಅದೆಂಥದೋ ವಿಚಿತ್ರ ಹೆದರಿಕೆ ಸುಶೀಲಾಳನ್ನು ಕಾಡತೊಡಗಿತು. ಎರಡು ದಿನ ಕಾಲೇಜಿಗೆ ಹೋಗುವ ಧೈರ್ಯಮಾಡಲಿಲ್ಲ. ಅಮ್ಮನಿಗೆ ತಲೆನೋವಿನ ಸಬೂಬು ಹೇಳಿ ಕೋಣೆಯಿಂದ ಹೊರಗೆ ಬರಲಿಲ್ಲ. ಆ ಎರಡೂ ದಿನ ವಿಚಿತ್ರ ಚಡಪಡಿಕೆಯಿಂದ ತತ್ತರಿಸಿದಳು. ನೆಪಕ್ಕೆ ಪುಸ್ತಕ ಹಿಡಿದರೂ ಆ ಸಾಲೇ ಕಾಣುತ್ತಿತ್ತು, ಅವನ ಮುಖವೇ ನೆನಪಾಗುತ್ತಿತ್ತು. ಮೂರನೇ ದಿನ ಧೈರ್ಯಮಾಡಿ ಕಾಲೇಜಿಗೆ ಹೋದಳು. ಕೋಲಾರದಲ್ಲಿ ಬಸ್ಸು ಇಳಿದವಳೇ ಸುತ್ತಮುತ್ತ ನೋಡಿದಳು. ಅವನೆಲ್ಲೂ ಕಾಣಲಿಲ್ಲ. ಬಿರಬಿರನೆ ಕಾಲೇಜಿನೆಡೆಗೆ ಹೆಜ್ಜೆ ಹಾಕಿದಳು. ವಾಪಸ್ಸು ಬರುವಾಗಲೂ ಎಚ್ಚರಿಕೆಯಿಂದ ಗಮನಿಸುತ್ತಿದ್ದಳು. ಅವನು ಕಾಣಲೇ ಇಲ್ಲ. ನಿಟ್ಟುಸಿರಿಟ್ಟಳು. `ಸಧ್ಯ ಅವನು ಕಾಣಲಿಲ್ಲ' ಎಂಬ ನಿಟ್ಟುಸಿರೇ ಅಥವಾ `ಛೆ, ಎಲ್ಲಿ ಹೋದ ಹಾಳಾದವ. ಅವನೇಕೆ ಕಾಣುತ್ತಿಲ್ಲ' ಎಂಬುದರ ನಿಟ್ಟುಸಿರೇ ಎಂಬುದು ಅವಳಿಗೇ ಅರ್ಥವಾಗಲಿಲ್ಲ.
ಆಮೇಲಿನ ಘಟನೆಗಳೆಲ್ಲಾ ಬಹಳ ಬೇಗ ನಡೆದುಹೋದವು. ಅವರಿಬ್ಬರೂ ಗಾಢವಾಗಿ ಪ್ರೇಮಿಸತೊಡಗಿದರು. ಅವನ ಹೆಸರು ರಾಜೇಶ. ಅವನ ಸ್ವಂತ ಊರು ಬೆಂಗಳೂರಂತೆ. ಅವರಪ್ಪನದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಇದೆಯಂತೆ. ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಬರುತ್ತದಂತೆ. ಬೆಂಗಳೂರಿನಲ್ಲಿದ್ದರೆ ಅವನು ಓದುವುದಿಲ್ಲ, ಹಾಳಾಗುತ್ತಾನೆ ಎಂದು ಅವನನ್ನು ಕೋಲಾರದ ಕಾಲೇಜಿಗೆ ಸೇರಿಸಿ ಅವನ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರಂತೆ. ಆದರೆ ಅವನು ಯಾವ ಕ್ಲಾಸಿಗೆ ಹೋಗುತ್ತಾನೆ, ಏನು ಓದುತ್ತಿದ್ದಾನೆಂಬುದು ಅವಳಿಗೆ ಸರಿಯಾಗಿ ತಿಳಿಯಲೇ ಇಲ್ಲ ಅಥವಾ ಆಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. `ಇಲ್ಲಿ ಕೋಲಾರದ ಜನ ಸರಿಯಿಲ್ಲ. ಇಲ್ಲಿ ನಾವು ಕೂತು ಮಾತನಾಡಲು ಆಗೋಲ್ಲ' ಎಂದು ಹೇಳಿದ ಅವನು ಅವಳನ್ನು ಆಗಾಗ ಬೈಕಿನಲ್ಲಿ ಬೆಂಗಳೂರಿಗೆ ಕರೆದೊಯ್ದ, ಸಿನೆಮಾ ತೋರಿಸಿದ, ಹೋಟೆಲಲ್ಲಿ ತಿಂಡಿ ತಿನ್ನಿಸಿದ. ಹೀಗೆಯೇ ಒಂದು ವರ್ಷ ನಡೆಯಿತು. ಅವನು ಮಧ್ಯೆ ಮಧ್ಯೆ ಒಂದೊಂದು ವಾರವೇ ಕಾಣಿಸುತ್ತಿರಲಿಲ್ಲ.
ಅದೊಂದು ದಿನ ಹೀಗೆ ಬೆಂಗಳೂರಿಗೆ ಹೋದಾಗ, ಸಿನೆಮಾ ನೋಡಿ, ಹೋಟೆಲಲ್ಲಿ ತಿಂಡಿ ತಿಂದು ಹಿಂದಿರುಗುವ ಮುನ್ನ ತನ್ನ ಗೆಳೆಯನ ತೋಟದಮನೆಯೊಂದಿದೆಯೆಂದೂ ಅಲ್ಲಿಗೆ ಹೋಗಿ ಹಿಂತಿರುಗೋಣವೆಂದು ಕರೆದೊಯ್ದ. ಒಂಟಿ ತೋಟದ ಮನೆ, ದೊಡ್ಡ ತೋಪಿನ ನಡುವೆಯಿತ್ತು. ನಿರ್ಜನವೆನಿಸಿದರೂ ಆಕೆಗೆ ಹೆದರಿಕೆಯಾಗಲಿಲ್ಲ, ಜೊತೆಗೆ ರಾಜೇಶನಿದ್ದನಲ್ಲ!
ರಾಜೇಶನ ಗೆಳೆಯ ಇವರಿಬ್ಬರನ್ನೂ ಮಾತನಾಡಿಸಿದ. ಕುಡಿಯಲು ಜ್ಯೂಸ್ ಕೊಟ್ಟ. ಅವಳಿಗರಿವಿಲ್ಲದಂತೆ ಅವಳಿಗೆ ನಿದ್ದೆ ಬರತೊಡಗಿತು. ಮತ್ತೇನಾಯಿತೋ ಸುಶೀಲಳಿಗೆ ಒಂದೂ ತಿಳಿಯಲಿಲ್ಲ. ಎಚ್ಚರವಾದಾಗ ಅವಳ ತಲೆ ಧಿಂ ಎಂದು ನೋಯುತ್ತಿತ್ತು. ಮೈ ಕೈ ನೋಯುತ್ತಿತ್ತು. ನೋಡಿಕೊಂಡಳು. ಅವಳ ಮೈಮೇಲೆ ಒಂಚೂರು ಬಟ್ಟೆಯಿರಲಿಲ್ಲ. ತೊಡೆಯೆಲ್ಲಾ ರಕ್ತವಾಗಿತ್ತು. ಎದೆ ಭುಜದ ಮೇಲೆಲ್ಲಾ ಕಚ್ಚಿದ ಗಾಯಗಳಾಗಿದ್ದವು. ಜೋರಾಗಿ ಕಿರುಚಿಕೊಂಡಳು. ತಕ್ಷಣ ರಾಜೇಶ ಒಳಬಂದ. ಅವನ ಹಿಂದೆಯೇ ಇಬ್ಬರು ಮೂವರು ಬಂದರು. ಕಿರುಚಿ ಹಾಸಿಗೆಯ ಮೇಲಿನ ರಕ್ತಸಿಕ್ತ ಹೊದಿಕೆಯನ್ನೇ ಹೊದ್ದುಕೊಳ್ಳಲು ಪ್ರಯತ್ನಿಸಿದಳು. ಮುಂದೆ ಬಂದ ರಾಜೇಶ ಅವನ್ಯಾಕೆ ಬರುತ್ತಿದ್ದಾನೆ ಎಂದು ಊಹಿಸುವ ಮೊದಲೇ ಅವಳ ಕಪಾಳಕ್ಕೆ ಬಲವಾಗಿ ಬಾರಿಸಿದ. ಬಿಕ್ಕುತ್ತಿದ್ದ ಅವಳ ದನಿ ನಿಂತುಹೋಯಿತು. ಕಣ್ಣು ಕಪ್ಪಿಟ್ಟಿತು.
***
ಆ ರಾತ್ರಿ ಸುಶೀಲಾಳಿಗೆ ನಿದ್ರೆಯೇ ಬರಲಿಲ್ಲ. ಪ್ರತಿ ದಿನ ರಾತ್ರಿ ಆಕೆ ಮಲಗುತ್ತಿದ್ದುದೇ ರಾತ್ರಿ ಒಂದು ಗಂಟೆಗೋ ಎರಡು ಗಂಟೆಗೋ. ಪ್ರತಿ ದಿನ ಆಯಾಸದಿಂದ ಮಲಗುವುದೇ ತಡ, ಗಾಢ ನಿದ್ದೆಗೆ ಹೋಗಿಬಿಡುತ್ತಿದ್ದಳು. ಇತ್ತೀಚೆಗೆ, ಯಾವನಾದರೂ ಗಿರಾಕಿ ಮೇಲಿರುವಾಗ ಹಾಗೆಯೇ ನಿದ್ದೆಮಾಡುವುದನ್ನು ಕಲಿಯಲು ಪ್ರಾರಂಭಿಸಿದ್ದಳು. ಎಷ್ಟೋ ಸಾರಿ ಒಬ್ಬ ಹೋಗಿ ಮತ್ತೊಬ್ಬ ಬಂದು ತಟ್ಟಿ ಎಬ್ಬಿಸಿದಾಗಲೇ ಅವಳಿಗೆ ಎಚ್ಚರವಾಗುತ್ತಿತ್ತು. ಕೆಲವು ಒರಟರು ಕೆನ್ನೆಗೆ ಹೊಡೆದು ಎಬ್ಬಿಸಿ ಏನಾದರೂ ಮಾತನಾಡೆಂದು ಬಯ್ಯುತ್ತಿದ್ದರು. ಅವಳಿಗೆ ರಾತ್ರಿಯೆಲ್ಲಾ ಬೆಳಿಗ್ಗೆ ಮೊದಲ ಗಿರಾಕಿ ಕೊಟ್ಟುಹೋದ ಚೀಟಿಯದೇ ನೆನಪು ಕಾಡುತ್ತಿತ್ತು. ಕೆಲವು ತಿಂಗಳುಗಳಿಂದೀಚೆಗೆ (ಅದೆಷ್ಟು ತಿಂಗಳುಗಳೆಂಬುದು ಸುಶೀಲಳಿಗೇ ನೆನಪಿರಲಿಲ್ಲ) ಮರೆವನ್ನು ಬಲವಂತವಾಗಿ ಆವಾಹಿಸಿಕೊಂಡಿದ್ದಳು. ಎಲ್ಲವನ್ನೂ ಮರೆಯಬೇಕು, ಯಾವ ಭಾವನೆಗಳನ್ನೂ ಇಟ್ಟುಕೊಳ್ಳಬಾರದೆಂದು ದೃಢನಿರ್ಧಾರ ಮಾಡಿ ಆಂಟಿಯ `ಮನೆ'ಯಲ್ಲಿ ಬದುಕುತ್ತಿದ್ದಳು. ಆ ಮನೆಗೆ ತಂದುಬಿಟ್ಟ ಹೊಸತರಲ್ಲಿ ಓಡಿಹೋಗಲು ಯತ್ನಿಸಿದ್ದಳು. ಆಗಲೇ ಗೊತ್ತಾದದ್ದು ಆಂಟಿ ಎಂಥ ಕಟುಕಿ ಎಂಬುದು. ಕತ್ತಲ ಕೋಣೆಗೆ ಕೂಡಿಹಾಕಿ, ಧಡಿಯನೊಬ್ಬನಿಂದ ಮೈಯೆಲ್ಲಾ ಬಾಸುಂಡೆ ಬರುವಂತೆ ಹೊಡೆಸಿ, ಅನ್ನ ನೀರು ಕೊಡದೆ ಹಿಂಸೆ ನೀಡಿದ್ದಳು. ಕ್ರಮೇಳ ಅವಳ ನಿರ್ಧಾರದಂತೆ ಎಲ್ಲವೂ ಅವಳ ನೆನಪಿನಿಂದ ಕಣ್ಮರೆಯಾಗತೊಡಗಿತು. ಅಪ್ಪ, ಅಮ್ಮ, ತಮ್ಮ, ತನ್ನ ಊರು, ಓದಿದ ಶಾಲೆ, ಕಾಲೇಜು, ಗೆಳತಿಯರು, ರಾಜೇಶ, ಅವನ ಬೈಕು, ಅವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಸುಖವಾಗಿ ಬದುಕುವ ಕನಸು.... ಎಲ್ಲವೂ ಮರೆತಳು. ಅಮ್ಮ ಅಪ್ಪನಿಂದ ದೂರವಾದ ದುಃಖ ಮರೆತಳು, ಅವರು ಎಷ್ಟು ಕಣ್ಣೀರು ಹಾಕಿರಬಹುದೆಂದು ಕೊರಗುವುದನ್ನು ನಿಲ್ಲಿಸಿದಳು. ಆಂಟಿಯ ಮನೆಯ ತಲೆಹಿಡುಕ ನಾಗರಾಜ ಆಗಾಗ ಗಿರಾಕಿಗಳನ್ನು ಕರೆತಂದು `ಅಕ್ಕಾ' ಎಂದು ಕರೆಯುತ್ತಿದ್ದಾಗ ಸುಶೀಲಳಿಗೆ ಅವಳ ತಮ್ಮನ ನೆನಪಾಗುತ್ತಿತ್ತು. ಆ ನೆನಪನ್ನೂ ದೂರ ತಳ್ಳಿದಳು. ಕೊನೆಕೊನೆಗೆ ಊಟ ಮಾಡುವುದನ್ನೂ ಮರೆತಳು. ಆಂಟಿ ಹೇಳಿಕಳುಹಿಸಿದರೆ ಮಾತ್ರ ಊಟ ಮಾಡುತ್ತಿದ್ದಳು. ಒಂದು ದಿನ ನೋಡೋಣವೆಂದು ಆಂಟಿ ತಮಾಷೆ ಮಾಡಲು, ಎರಡು ದಿನ ಊಟಕ್ಕೆ ಹೇಳಿಕಳುಹಿಸದಿದ್ದರೂ ಸುಶೀಲ ಊಟ ಬೇಕು ಎಂದು ಹೋಗಲಿಲ್ಲ. ಗಿರಾಕಿ ಟಿಪ್ಸ್ ದುಡ್ಡು ಕೊಟ್ಟರೆ ಮಾತ್ರ ಬಟ್ಟೆ ಬಿಚ್ಚು ಎಂದು ಆಂಟಿಯ ಮನೆಯಲ್ಲಿದ್ದ ಇತರ ಹೆಂಗಸರು ಮೊದಲಿಗೆ ಬಂದಾಗ ಹೇಳಿಕೊಟ್ಟಿದ್ದರು. ಈಗ ಯಾಂತ್ರಿಕವಾಗಿ ಅದನ್ನು ಹೇಳಿ ಹಣ ಪಡೆದುಕೊಳ್ಳುತ್ತಿದ್ದರೂ ಆ ಹಣ ಎಲ್ಲಿದೆ ಎಂಬುದೇ ಅವಳಿಗೆ ತಿಳಿದಿರಲಿಲ್ಲ.
ಆ ರಾತ್ರಿ ಆ ಕಾಗದದ ಚೂರು ಅವಳ ನಿದ್ರೆ ಕೆಡಿಸಿತ್ತು. ಅವಳ ಸ್ಮೃತಿಯ ಕತ್ತಲ ಕೋಣೆಗೆ ಬೆಳಕು ಚೆಲ್ಲಿ ಎಲ್ಲ ಕದಡಿತ್ತು. ಕತ್ತಲ ಗುಹೆಯಲ್ಲಿನ ದೀರ್ಘ ನಿದ್ರೆಯಲ್ಲಿನ ಬಾವಲಿಗಳು ಬೆದರಿ ದಿಕ್ಕಾಪಾಲಾಗಿ ಅರಚಿ ಹಾರಾಡುತ್ತಿರುವಂತಾಗಿತ್ತು. ಹಾಗೆಯೇ ಕಣ್ಣು ಎಳೆದುಕೊಂಡು ಹೋದರೂ ಭಯಂಕರ ಕನಸುಗಳು ಬೀಳತೊಡಗಿದವು. ಇಷ್ಟು ದಿನ ತನಗೆ ಕನಸುಗಳೇ ಬೀಳುತ್ತಿರಲಿಲ್ಲವೆಂಬುದು ನೆನಪಾಗಿ ಅವಳಿಗೆ ಅಚ್ಚರಿಯಾಯಿತು. ನಿದ್ರೆಯ ಕನಸುಗಳೆಲ್ಲಾ ಇಷ್ಟು ದಿನ ಎಲ್ಲಿ ಹೋಗಿದ್ದವು ಎಂದು ತನ್ನನ್ನೇ ತಾನು ಕೇಳಿಕೊಂಡಳು. ಕನಸಿನಲ್ಲಿ ಸುಶೀಲಾ ತನ್ನ ಊರಿಗೆ ಹೋದಳು. ಬೆಳಗಿನ ಜಾವವಿರಬಹುದು. ಎಲ್ಲೆಲ್ಲೂ ಮಂಜು ಮುಸುಕಿತ್ತು. ನಿಶ್ಶಬ್ದವಾಗಿತ್ತು, ಏನೊಂದೂ ಶಬ್ದವಿರಲಿಲ್ಲ. ದೂರದಲ್ಲೆಲ್ಲೋ ಮೋಟಾರ್ಬೈಕ್ ಬರುತ್ತಿರುವ ಸದ್ದು ಕೇಳಿಸಿತು. ಸುಶೀಲಾಳಿಗೆ ಹೆದರಿಕೆಯಾಗತೊಡಗಿತು. ರಾಜೇಶ ಬೈಕ್ನಲ್ಲಿ ಬರುತ್ತಿದ್ದಾನೆನ್ನಿಸಿತು. ಮನೆಯೆಡೆಗೆ ಓಡತೊಡಗಿದಳು. `ಅಮ್ಮಾ, ಅಮ್ಮಾ' ಎಂದು ತನ್ನ ತಾಯಿಯನ್ನು ಕರೆದಳು. ಬಾಯಿಯಿಂದ ಶಬ್ದವೇ ಬರಲಿಲ್ಲ. ಕುತ್ತಿಗೆಯನ್ನು ಒತ್ತಿಹಿಡಿದಂತಿತ್ತು. ಓಡಲೂ ಸಾಧ್ಯವಾಗುತ್ತಿಲ್ಲ. ಕಾಲು ಎತ್ತಿಡಲೇ ಆಗುತ್ತಿಲ್ಲ. ಬೈಕ್ ಸದ್ದು ಇನ್ನೂ ಹತ್ತಿರವಾಯಿತು; ಅದರ ಫುಟ್ ಫುಟ್ ಸದ್ದು ಕಿವಿಯ ತಮಟೆ ಒಡೆಯುವಷ್ಟು ಜೋರಾಗತೊಡಗಿತು. ಮನೆ ಇನ್ನೂ ದೂರದಲ್ಲೇ ಇದೆ. ಹೆಜ್ಜೆಗಳು ಮುಂದಕ್ಕೆ ಹೋಗುತ್ತಲೇ ಇಲ್ಲ. ಯಾರೋ ಹಿಂದಿನಿಂದ ಕುತ್ತಿಗೆಯನ್ನು ಬಿಗಿಹಿಡಿದಂತಾಯಿತು. ಎಡವಿ ಮುಂದಕ್ಕೆ ಬಿದ್ದಂತಾಯಿತು. ಸುಶೀಲಾಳಿಗೆ ಗಕ್ಕನೆ ಎಚ್ಚರವಾಯಿತು. ಮೈಯೆಲ್ಲಾ ಬೆವರಿನಿಂದ ತೊಯ್ದಿತ್ತು. ಎದೆ ಇನ್ನೂ ತಮಟೆಯ ಹಾಗೆ ಹೊಡೆದುಕೊಳ್ಳುತ್ತಿತ್ತು. ಕಿಟಕಿಯ ಹೊರಗಿನಿಂದ ಧೋ ಎಂದು ಸುರಿಯುವ ಮಳೆಯ ಸದ್ದು ಕೇಳುತ್ತಿತ್ತು. ಕಾಲಬಳಿ ಹೋಗಿದ್ದ ಬೆಡ್ಶೀಟ್ ಹೊದ್ದು ಮುದುರಿಕೊಂಡಳು. ಕನಸಿನ ಬಗ್ಗೆ ಯೋಚಿಸಿದಳು. ಅವಳಿಗರಿವಿಲ್ಲದೆ ಮೈ ನಡುಗುತ್ತಿತ್ತು. ಹಾಗೇ ಕಣ್ಣು ಮುಚ್ಚಿಕೊಂಡಿತು. ದೂರದಲ್ಲೆಲ್ಲೋ ಅವಳ ಅಮ್ಮ ಕರೆದಂತಾಯಿತು. ನಿದ್ರೆಯಲ್ಲಿದ್ದೇನೆಯೋ ಅಥವಾ ಕನಸೋ ಅವಳಿಗೊಂದೂ ತಿಳಿಯಲಿಲ್ಲ. ದೂರದಲ್ಲಿ ಮನೆ ಕಾಣುತ್ತಿತ್ತು. ಎಲ್ಲೋ ತನ್ನ ಅಮ್ಮ ಅಳುತ್ತಾ ತನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಮುಸುಕಿದ್ದ ಮಂಜು ಇನ್ನೂ ಗಾಢವಾಗತೊಡಗಿತು. ಮನೆಯೆಡೆಗೆ ಹೆಜ್ಜೆ ಹಾಕಿದಳು. ಮನೆಯೊಳಗೆ ಹೋಗಲು ಹೆದರಿಕೆಯಾಯಿತು. ತನ್ನ ಅಪ್ಪ ಬಯ್ಯಬಹುದೆ? ತಮ್ಮ ಕಿಶೋರನನ್ನು ಕರೆಯಬೇಕೆನಿಸಿತು. ಮತ್ತೆ ಬೈಕ್ ಸದ್ದು ಕೇಳಿತು. ಬೆದರಿದಳು. ಬೈಕ್ ಸದ್ದು ಹತ್ತಿರಹತ್ತಿರವಾಯಿತು. ಗಕ್ಕನೆ ಸುಶೀಲಾಳಿಗೆ ಎಚ್ಚರವಾಯಿತು. ನೆನಪುಗಳ ಯಾತನೆ ಸಹಿಸಲಾರದಾಯಿತು. ಎದ್ದು ಕಿಟಕಿಯ ಬಳಿ ನಿಂತು ಸುರಿಯುವ ಮಳೆಯ ಸದ್ದು ಕೇಳಿಸಕೊಳ್ಳತೊಡಗಿದಳು. ಆ ಚೀಟಿ ಕೊಟ್ಟ ಗಿರಾಕಿ ಎಂಥವನು, ಅವನು ಮುಖ ಹೇಗಿದೆ, ಅವನ ಮಾತು ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದಳು. ಏನೊಂದೂ ನೆನಪಾಗಲಿಲ್ಲ.
***
ರಾತ್ರಿ ಸರಿಯಾಗಿ ನಿದ್ರೆಯಿಲ್ಲದಿದ್ದರೂ ಆ ದಿನ ಬೆಳಿಗ್ಗೆ ಉತ್ಸುಕಳಾಗಿದ್ದಳು. ತಾನೇ ಹೋಗಿ ತಿಂಡಿ ತಿಂದು ಬಂದು ಕೋಣೆಯಲ್ಲಿ ಸಿದ್ದಳಾಗಿ ಕೂತಳು. ತಾನೇ ಆ ಹಾಳಾದ ಗಂಡಸರಿಗೆ ಕಾಯುತ್ತಾ ಕೂರುವುದು ಸುಶೀಲಾಳಿಗೆ ವಿಚಿತ್ರವೆನ್ನಿಸಿತು. ಆ ದಿನ ಹಲವಾರು ಜನ ಬಂದುಹೋದರು. ಅವರಲ್ಲಿ ವಯಸ್ಸಿನಲ್ಲಿದ್ದವರೊಂದಿಗೆ ಆಕೆ ಅತ್ಯಂತ ಸಡಗರದಿಂದ ಸಹಕರಿಸಿದಳು. ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದಳು. ಅವರು ಕೊಟ್ಟ ಭಕ್ಷೀಸು ಹಣದ ನೋಟುಗಳ ನಡುವೆ ಏನಾದರೂ ಬರೆದಿರುವ ಕಾಗದದ ಚೂರುಗಳು ಇವೆಯೇನೋ ಎಂದು ಆತುರಾತುರವಾಗಿ ನೋಡಿದಳು. ಅವರ್ಯಾರೂ ಅವಳಲ್ಲಿ ಪತ್ರದ ಬಗ್ಗೆಯೂ ಮಾತನಾಡಲಿಲ್ಲ. ರಾತ್ರಿಯ ಹೊತ್ತಿಗೆ ಅವಳ ಉತ್ಸಾಹವೆಲ್ಲ ಕುಂದಿತು. ಮರುದಿನವೂ ಹಾಗೆಯೇ ಆಯಿತು. ಒಂದು ವಾರವೇ ಕಳೆದುಹೋಯಿತು. ಆ ವಾರವೆಲ್ಲಾ ರಾತ್ರಿಯ ಹೊತ್ತು ಚಡಪಡಿಸಿದಳು; ಅ ಪತ್ರ ಕೊಟ್ಟ ವ್ಯಕ್ತಿ ಬರಬಾರದೇ ಎಂದು ತಹತಹಿಸಿದಳು; ಹೊರಗಿನ ಮಳೆಯನ್ನು ನಾಚಿಸುವಂತೆ ಕಣ್ಣೀರು ಹಾಕಿದಳು. ಒಂದು ರೀತಿಯ ಖಿನ್ನತೆ ಸುಶೀಲಾಳನ್ನು ಆವರಿಸಿಕೊಂಡಿತು. ಮೊದಲಿನ ಹಾಗೆ ಎಲ್ಲವನ್ನೂ ಮರೆತು, ಕನಸುಗಳ ಉಗ್ರಾಣಕ್ಕೆ ಬೀಗ ಜಡಿದು ಇದ್ದೂ ಇಲ್ಲದ ಸ್ಥಿತಿಗೆ ತಲುಪಬೇಕೆಂದು ನಿರ್ಧರಿಸಿ ಒಂದೆರಡು ದಿನವಾಗಿತ್ತಷ್ಟೆ. ಆ ದಿನ ಮಧ್ಯಾಹ್ನ ಒಬ್ಬ ನಡುವಯಸ್ಸಿನ, ಒಬ್ಬ ಗಿರಾಕಿ ಬಂದ. ಆಕೆಗೆ ಇತರರ ಹಾಗೂ ಆತನ ನಡುವೆ ಏನೂ ವ್ಯತ್ಯಾಸ ಕಾಣಲಿಲ್ಲ. ತನ್ನ ಕೆಲಸ ಮುಗಿಸಿದ ನಂತರ ತಕ್ಷಣ ಎದ್ದುಹೋಗಲಿಲ್ಲ. ಅಲ್ಲೇ ಮಂಚದ ಮೇಲೆ ಕೂತು ಆಕೆಯ ಎಡಗೈ ಹಸ್ತವನ್ನು ಹಿಡಿದುಕೊಂಡು ಅವಳೆಡೆಗೆ ನೋಡಿ ಮುಗುಳ್ನಕ್ಕ. ಸರಕ್ಕನೆ ಹಿಂದಕ್ಕೆಳೆದುಕೊಳ್ಳಲು ಹೋದವಳಿಗೆ ತಕ್ಷಣ ಆ ಪತ್ರದ ಕೊಟ್ಟ ವ್ಯಕ್ತಿ ಈತನೇ ಇರಬಹುದೇ ಎಂದುಕೊಂಡು ಸುಮ್ಮನಾದಳು. ಆಕೆಯ ಹಸ್ತವನ್ನು ಎರಡೂ ಕೈಗಳಿಂದ ಅದುಮಿ ಹಿಡಿದ. ಬೆಚ್ಚಗಿನ ಅನುಭವ ಅವಳಿಗೆ ಹಿತವೆನಿಸಿತು. ಬಹಳ ಹೊತ್ತು ಹಾಗೆಯೇ ಹಿಡಿದಿದ್ದ.
`ನನ್ನ ಚೀಟಿ ನೋಡಿದೆಯಾ?' ಆತ ಕೇಳಿದ.
ಒಂದರೆಕ್ಷಣ ರಾಜೇಶನ ಚೀಟಿ ನೆನಪಾಯಿತು, ರಾಜೇಶ ನೆನಪಾದ. ಹಾವನ್ನು ಮುಟ್ಟಿ ಹೆದರಿದಂತೆ ಕೈಯನ್ನು ಸರಕ್ಕನೆ ಹಿಂದಕ್ಕೆಳೆದುಕೊಂಡಳು. ಮೈ ನಡುಗತೊಡಗಿತು, ಹಣೆ ಬೆವರಿಟ್ಟಿತು, ಎದೆ ಢವಢವ ಹೊಡೆದುಕೊಳ್ಳತೊಡಗಿತು. ಅವಳಿಗರಿವಿಲ್ಲದೆ ಸುಶೀಲಾಳ ಕಣ್ಣಿನಿಂದ ನೀರು ಸುರಿಯತೊಡಗಿತು. `ಯಾಕೆ? ಏನಾಯ್ತು?' ಎಂದು ಆತ ಕೇಳುತ್ತಿರುವಂತೆ ಆಕೆ ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಾ ಬಚ್ಚಲುಮನೆಗೆ ಓಡಿದಳು.
ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಕೋಣೆಯಲ್ಲಿ ಯಾರೂ ಇರಲಿಲ್ಲ. ಹಾಗೆಯೇ ಧುತ್ತನೆ ಹಾಸಿಗೆಯ ಮೇಲೆ ಉರುಳಿದಳು.
***
ಮರುದಿನ ಮಧ್ಯಾಹ್ನ ಆತ ಮತ್ತೆ ಬಂದ. ಆತ ಕೋಣೆಯೊಳಕ್ಕೆ ಬಂದಾಕ್ಷಣ ಮಂಚದ ಮೇಲೆ ಕೂತ್ತಿದ್ದ ಸುಶೀಲಾ ಎದ್ದು ನಿಂತಳು. ಆತ ಕೂತು ನಿಂತೇ ಇದ್ದ ಆಕೆಯ ಕೈ ಹಿಡಿದುಕೊಂಡ. ಈ ಸಾರಿ ಕೈ ಹಿಂದಕ್ಕೆ ಎಳೆದುಕೊಳ್ಳಲಿಲ್ಲ. `ನಿನ್ನ ಜೊತೆ ನಾನು ಮಾತನಾಡಬೇಕು' ಎಂದ. ಮತ್ತೆ ಆತ ಬಂದಲ್ಲಿ ತಾನು ಏನು ಮಾತನಾಡಬೇಕೆಂಬುದನ್ನು ಆಕೆ ನಿರ್ಧರಿಸಿಕೊಂಡಿದ್ದಳು. ಸುಶೀಲಾಳನ್ನು ಎಳೆದು ಪಕ್ಕದಲ್ಲಿ ಕೂರಿಸಿಕೊಂಡು ಆಕೆಯ ಹೆಗಲ ಮೇಲೆ ಕೈಹಾಕಿದ. ಆ ರೀತಿ ಎಷ್ಟು ಜನ ಗಂಡಸರು ಕೈ ಹಾಕಿಲ್ಲ! ಆದರೆ ಸುಶೀಲಾಳಿಗೆ ಹೊಸತೆನ್ನಿಸುತ್ತಿತ್ತು, ಮೈ ಸಣ್ಣಗೆ ನಡುಗತೊಡಗಿತು. ಆತನಿಗೆ ಸುಶೀಲಾಳ ಅಪ್ಪನ ವಯಸ್ಸಾಗಿದ್ದಿರಬಹುದು. ಹಾಗೆಯೇ ಆತನ ಭುಜಕ್ಕೊರಗಿದಳು, ತುಟಿ ಕಚ್ಚಿ ಕಣ್ಣೀರು ತಡೆದಳು. ಆದರೂ ಆತನ ಕುತ್ತಿಗೆ ತೇವವಾಯಿತು. ಅವಳ ತಲೆ ನೇವರಿಸಿದ. ಅವಳ ಬಿಕ್ಕುವಿಕೆ ಹೆಚ್ಚಾಯಿತು. `ಅಳಬೇಡ' ಎಂದ. ಏನೋ ಹೇಳಲು ಹೊರಟಳು. ಮಾತು ಹೊರಬರಲಿಲ್ಲ, ತಡವರಿಸಿದಳು. `ಹೆದರಿಕೋ ಬೇಡ. ಅದೇನು ಹೇಳಬೇಕೋ ಹೇಳು' ಎಂದ.
`ನನ್ನ ಅಮ್ಮನನ್ನು ನೋಡಬೇಕು' ಎಂದಳು ಬಿಕ್ಕುತ್ತ. ಅವಳ ಅಳು ಹೆಚ್ಚಾಯಿತು. ಆತನ ತೋಳ್ತೆಕ್ಕೆಯಲ್ಲಿ ಸುಶೀಲಾ ಅಳುತ್ತಿರುವ ಪುಟ್ಟ ಮಗುವಿನಂತೆ ಕಂಡಳು.
***
ಸುಶೀಲಾಳ ಊರಿನವರು ಆಕೆಯನ್ನು ಮರೆತಂತಿದ್ದರೂ ಒಳಗೊಳಗೆ ಆಕೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆಕೆ ಬೊಂಬಾಯಿಯಲ್ಲಿ ಸೂಳೆಯಾಗಿದ್ದಾಳೆಂದೂ ಮನೆಗೆ ಬೇಕಾದಷ್ಟು ದುಡ್ಡು ಕಳುಹಿಸಿಕೊಡುತ್ತಿದ್ದಾಳೆಂದೂ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಆಕೆಯ ಅಪ್ಪ ಅವಳು ಯಾವನೋ ಜೊತೆ ಓಡಿಹೋಗಿದ್ದಾಳೆ. ಹೋದವಳು ಹಾಳಾಗಿ ಹೋಗಲಿ. ಎಲ್ಲಾದರೂ ಚೆನ್ನಾಗಿದ್ದರೆ ಸಾಕು ಎಂದುಕೊಳ್ಳುತ್ತಿದ್ದರು. ಆಕೆಯ ಅಮ್ಮ ಏನೂ ಹೇಳುತ್ತಿರಲಿಲ್ಲ. ಬರೇ ಕಣ್ಣೀರು ಹಾಕುತ್ತಿದ್ದರು. ತಮ್ಮ ಕಿಶೋರನಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. `ಅಕ್ಕ ಎಲ್ಲಿ ಹೋದಳು?' ಎಂದು ಆಗಾಗ ಕೇಳುತ್ತಿದ್ದ.
ಆ ದಿನ ರಾತ್ರಿಯ ಸರಿ ಹೊತ್ತಲ್ಲಿ ಸುಶೀಲಾಳ ಅಪ್ಪನ ಕಾರು ನಿಶ್ಶಬ್ದವಾಗಿ, ಹೆಡ್ಲೈಟುಗಳನ್ನು ಹಾಕದೆ ಮನೆಮುಂದೆ ಬಂದು ನಿಂತಿತು. ಸುಶೀಲಾಳ ಅಮ್ಮ ಆಕೆಯ ಗಂಡ ಹೇಳಿದ್ದಂತೆ ಲೈಟುಗಳನ್ನೆಲ್ಲ ಆರಿಸಿದ್ದರೂ ಮುಂದುಗಡೆಯ ಕಿಟಕಿಯಲ್ಲಿ ಕೂತು ಕಾರಿಗಾಗಿ ಎದುರುನೋಡುತ್ತಿದ್ದಳು. ಕಾರು ನಿಂತಾಕ್ಷಣ ಆತುರಾತುರವಾಗಿ ಬಾಗಿಲು ತೆರೆದಳು. ತನ್ನ ಗಂಡ ಕಾರಿನಿಂದ ಇಳಿದ ನಂತರ ಹೆಣ್ಣಾಕೃತಿಯೊಂದು ಇಳಿದು ಊರು ಹೊಸತೆಂಬಂತೆ ಸುತ್ತಲೂ ನೋಡಿದಳು. ಸುಶೀಲಾ ಸೀರೆ ಉಟ್ಟುಕೊಂಡು ದೊಡ್ಡ ಹೆಂಗಸಂತೆ ಆಕೆಯ ತಾಯಿಗೆ ಕಂಡುಬಂದಳು. ರಾತ್ರಿಯೆಲ್ಲಾ ತಾಯಿ ಮಗಳ ಅಳು ಊರನ್ನೇ ತೋಯಿಸಿತು.
`ಮಗಳು ಮನೆಗೆ ಬಂದಾಯಿತು. ಇವಳನ್ನು ಮುಂದಿಟ್ಟುಕೊಂಡು ಊರಲ್ಲಿ ಜೀವನ ನಡೆಸುವುದು ಸಾಧ್ಯವೇ ಇಲ್ಲ. ಇವಳು ಬಂದಿರುವುದು ಯಾರಿಗೂ ತಿಳಿದಿಲ್ಲ. ಯಾರಿಗೂ ತಿಳಿಯುವ ಮೊದಲೇ ಇವಳನ್ನು ಸಾಯಿಸಿಬಿಡಬೇಕು' ಎಂದು ಸುಶೀಲಾಳ ಅಪ್ಪ ತನ್ನ ಕೋಣೆಯಲ್ಲಿ ಕೂತು ತೀರ್ಮಾನಿಸಿದ.
`ಇವಳನ್ನು ಮತ್ಯಾವನು ಮದುವೆಯಾಗುತ್ತಾನೆ? ಇವಳನ್ನು ಯಾವುದಾದರೂ ದೂರದ ಊರಿಗೆ ಕಳುಹಿಸಿ, ಹಾಸ್ಟೆಲಿಗೆ ಸೇರಿಸಿ ಕಾಲೇಜಿಗೆ ಕಳುಹಿಸಿ ಓದಿಸಬೇಕು. ಇನ್ನು ಅವಳ ಕರ್ಮ. ಅವಳ ಬದುಕು ಆದಂತಾಗಲಿ' ಎಂದು ಮಗಳ ತಲೆ ನೇವರಿಸುತ್ತಾ ತಾಯಿ ಯೋಚಿಸಿದಳು.
ಇದನ್ನೆಲ್ಲಾ ಬಾಗಿಲ ಮರೆಯಿಂದ ನೋಡಿದ್ದ ತಮ್ಮ ಕಿಶೋರನಿಗೆ ಏನೊಂದೂ ಅರ್ಥವಾಗಿರಲಿಲ್ಲ. `ಅಕ್ಕ ವಾಪಸ್ಸು ಬಂದಳಲ್ಲ. ಗಣಿತಕ್ಕೆ ಇನ್ನು ಆ ಕಟುಕ ಮಾಸ್ತರನ ಹತ್ತಿರ ಟ್ಯೂಶನ್ನಿಗೆ ಹೋಗುವಷ್ಟಿಲ್ಲ' ಎಂದು ಅವನಿಗೆ ಖುಷಿಯಾಗಿತ್ತು.
ಕಳೆದ ಒಂದು ವಾರದ ಹಿಂದೆಯೇ ಸುಶೀಲಾ ಒಂದು ತೀರ್ಮಾನಕ್ಕೆ ಬಂದಿದ್ದಳು. ತನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದಿದ್ದ ವ್ಯಕ್ತಿಯ ಕಾಲಿಗೆ ಬಿದ್ದು ಬೇಡಿಕೊಂಡಿದ್ದಳು; ತನ್ನೆಲ್ಲ ಕತೆ ಹೇಳಿಕೊಂಡಿದ್ದಳು. ಹೇಗಾದರೂ ತನ್ನನ್ನು ತನ್ನ ಅಮ್ಮ ಅಪ್ಪನ ಬಳಿ ಕೊಂಡೊಯ್ಯುವಂತೆ ಕೇಳಿಕೊಂಡಿದ್ದಳು. ಆತ ಮದುವೆಯ ಬಗ್ಗೆ ಕೇಳಿದಾಗ ಆಕೆಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಆದರೆ ಮನಸ್ಸಿನಲ್ಲಿ ಮದುವೆಯ ಆಲೋಚನೆ ಬಂದಾಗ ಹೆದರಿಕೆಯಾಗುತ್ತಿದ್ದು ಇನ್ನು ಮದುವೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದಳು. ಆತನಿಗೆ ತನ್ನ ಮನೆಯ ವಿಳಾಸ ನೀಡಿದ್ದಳು. ಆತ ಕನಿಕರದಿಂದಲೋ, ಹಣದ ಆಸೆಯಿಂದಲೋ ಸುಶೀಲಾಳ ಅಪ್ಪನ ಬಳಿ ಹೋಗಿ ಮಾತನಾಡಿ, `ಆಂಟಿ'ಯ ಬಳಿ ಮಾತನಾಡಿ, ಪೋಲೀಸರಿಗೆ ತಿಳಿಸಿ ದೊಡ್ಡ ಸುದ್ದಿ ಮಾಡುವ ಬದಲು ಮಾನಮರ್ಯಾದೆ ಕಾಪಾಡಿಕೊಳ್ಳಲು ಹಣದಿಂದಲೇ ಎಲ್ಲ ಇತ್ಯರ್ಥ ಮಾಡಿಕೊಳ್ಳೋಣವೆಂದು ತಿಳಿಸಿ, ಮಧ್ಯಸ್ಥಿಕೆ ವಹಿಸಿ ಸುಶೀಲಾಳನ್ನು ಬಿಡಿಸಿ ಕರೆತಂದಿದ್ದ. ಅವಳು ಅಪ್ಪನ ಜೊತೆ ಹೋಗುವ ಮೊದಲು ಮತ್ತೊಮ್ಮೆ ಮದುವೆಯನ್ನು ನೆನಪಿಸಿದ್ದ. ಕೆಲದಿನಗಳ ನಂತರ ಮನೆಗೆ ಬರುವುದಾಗಿ ತಿಳಿಸಿದ. ಸುಶೀಲಾ ಏನೂ ಹೇಳಿರಲಿಲ್ಲ. ಆಕೆಗೆ ಆ ನರಕದಿಂದ ಹೊರಬಂದರೆ ಸಾಕಾಗಿತ್ತು. ಆಕೆ ಸಾಯಲು ತೀರ್ಮಾನಿಸಿದ್ದಳು. ಆದರೆ ಅಲ್ಲಿ ಆಕೆಗೆ ಸಾಯಲೂ ಆಸ್ಪದವಿರಲಿಲ್ಲ ಹಾಗೂ ಸ್ವಾತಂತ್ರವೂ ಇರಲಿಲ್ಲ.
ಆಕೆ ಬದುಕಿನಲ್ಲಿ ಬಹಳಷ್ಟು ಅನುಭವಿಸಿಬಿಟ್ಟಿದ್ದಳು. ವಿಚಿತ್ರವೆಂದರೆ ಅವಳಿಗೆ ರಾಜೇಶನ ಬಗ್ಗೆ ಸ್ವಲ್ಪವೂ ದ್ವೇಷದ ಭಾವನೆಯೇ ಇರಲಿಲ್ಲ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿ ಈ ಲೋಕದಿಂದ, ಎಲ್ಲರಿಂದ ದೂರವಾಗಬೇಕಾಗಿತ್ತು. ಅಮ್ಮನನ್ನು ತಬ್ಬಿಕೊಂಡು ಅಳುವಾಗ ಅದರ ಬಗ್ಗೆಯೇ ಆಲೋಚಿಸುತ್ತಿದ್ದಳು.
ಇ.ಮೇಲ್: balukolar@yahoo.com
2 ಕಾಮೆಂಟ್‌ಗಳು:
ಅದ್ಭುತ.. ತುಂಬಾ ಚೆನ್ನಾಗಿದೆ. ನಿಮ್ಮ ಕಥೆ ಓದಿ ಯಾವುದೋ ವಿಚಾರ ಉಂಟಾಯಿತು. ನಿಜಕ್ಕೂ ಅದ್ಭುತ ಕಥೆ.
ಇದಕ್ಕೂ ಮೊದಲು ಕನ್ನಡಪ್ರಭದಲ್ಲಿ ನಿಮ್ಮ ಕಥೆ ಓದಿದ್ದೆ. ಇದೀಗ ನಿಮ್ಮ ಬ್ಲಾಗ್ ನಲ್ಲಿ ಮತ್ತೋಮ್ಮೆ ಓದಿ ಖುಷಿ ಆಯ್ತು..
Hi sir,
Story thumba chennagide. nenne thane nimma blogna parichayavaythu.
navu saha kolara davare.
ಕಾಮೆಂಟ್ ಪೋಸ್ಟ್ ಮಾಡಿ