ಈ ವರ್ಷವೂ ವಿರಾಜಪೇಟೆಯ ಗೆಳೆಯ ಡಾ.ಎಸ್.ವಿ.ನರಸಿಂಹನ್ ರವರ ವನ್ಯಜೀವಿ ಸಂದೇಶಗಳು ತಲುಪಿದವು. ಅವರು ಕಳೆದ 26 ವರ್ಷಗಳಿಂದ ವರ್ಣರಂಜಿತ ವನ್ಯಜೀವಿ ಸಂದೇಶಗಳನ್ನು ಕೈಯಲ್ಲೇ ಚಿತ್ರಿಸಿ ಕಳುಹಿಸುತ್ತಿದ್ದಾರೆ.
ಕೈಯಲ್ಲೇ ಚಿತ್ರಿಸಿದ ಒಟ್ಟು ಸಂದೇಶಪತ್ರಗಳ ಸಂಖ್ಯೆ: ಈ ವರ್ಷ 2050; ಕಳೆದ 26 ವರ್ಷಗಳಲ್ಲಿ 53, 870
ಸಂದೇಶ ಪತ್ರಗಳನ್ನು ಪಡೆದವರು: ಈ ವರ್ಷ 1130; ಕಳೆದ 26 ವರ್ಷಗಳಲ್ಲಿ 7,460
ಚಿತ್ರಪಕ್ಷಿ (Scarlet Minivet- Pericrocotus flammeus): ಗಂಡು ಮತ್ತು ಹೆಣ್ಣು ಹಕ್ಕಿಗಳು ನೋಡಲು ಬೇರೆ ಬೇರೆ! ಗಂಡಿಗೆ ಅಚ್ಚಗಪ್ಪು ಮತ್ತು ಉಜ್ವಲ ಕೆಂಪು-ಕಿತ್ತಳೆ ಬಣ್ಣದ ದೇಹವಿದ್ದರೆ, ಹೆಣ್ಣಿಗೆ ಬೂದು-ಕಪ್ಪು ಮತ್ತು ಹೊಳೆಯುವ ಹಳದಿ.
ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ಹೂತಳೆದ ಮರಗಳ ಮೇಲೆ ಗುಂಪಾಗಿ ಸಂಭ್ರಮದಿಂದ ಚಿಲಿಪಿಲಿ ಉಲಿತದೊಂದಿಗೆ ಹಾರಾಡುವುದನ್ನು ನೋಡಲು ಕಣ್ಣಿಗೆ ಹಬ್ಬ.
ಹೆಮ್ಮರಕುಟ್ಟಿಗ (Great Black Woodpecker- Dryocopus javensis): ನಿತ್ಯ ಹರಿದ್ವರ್ಣ ಮತ್ತು ಶೀತ ಉದುರೆಲೆ ಕಾಡುಗಳಲ್ಲಿ ಹಾಗೂ ಎಸ್ಟೇಟುಗಳ ದೊಡ್ಡ ಮರಗಳ ಮೇಲೆ ಕಾಣಬಹುದು. ಎಲ್ಲಿಂದಲೋ ರಿವ್ವನೆ ಹಾರಿಬಂದು ಗಪ್ಪನೆ
ಪಕ್ಕದ ಮರಕ್ಕೆ ಆತುಕೊಂಡು ಕುಳಿತು ಆಗಂತುಕರನ್ನು ಕುತೂಹಲದಿಂದ ನೋಡುತ್ತೇವೆ! ಕಾಗೆಯ ಗಾತ್ರದ ಗಂಡು ಹಕ್ಕಿಗೆ ಅತ್ಯಾಕರ್ಷಕವಾದ ಕೆಂಪು ಕಿರೀಟ!
2010ರ ಡಾ.ಎಸ್.ವಿ.ನರಸಿಂಹನ್ ರವರ ವನ್ಯಜೀವಿ ಸಂದೇಶ
ಭೂಮಿಯ ಮೇಲೆ ಮಾನವನಿಗೆ ಭವಿಷ್ಯವಿದೆಯೆ?
ಮಿತ್ರರೆ,
ಇಂದು ಇಳೆಯ ಮೇಲೆ ಜನಿಸಿದ ಎಲ್ಲಾ ಜೀವಿಗಳಿಗಿಂತ ಹೆಚ್ಚು ವಿಕಾಸ ಹೊಂದಿದ ಪ್ರಾಣಿಗಳು ನಾವು ಎಂದು ಹೆಮ್ಮೆಯಿಂದ ಬೀಗುತ್ತೇವೆ. ಆಲೋಚಿಸುವ, ಪ್ರಶ್ನಿಸುವ, ವಿಶ್ಲೇಷಿಸುವ ಶಕ್ತಿಯುಳ್ಳ ನಾವು ಉಳಿದೆಲ್ಲ ಜೀವಿಗಳನ್ನೂ ಮೀರಿ ಅವುಗಳನ್ನು ಆಳುತ್ತಿದ್ದೇವೆ.
ನಮ್ಮ ಬುದ್ಧಿವಂತಿಕೆಯಿಂದ ದೊಡ್ಡ ದೊಡ್ಡ ಅಣೆಕಟ್ಟುಗಳನ್ನು ಕಟ್ಟಿ ನಮ್ಮ ಆಹಾರದ ಪೂರೈಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ. ಅಣುಶಕ್ತಿಯಿಂದ ವಿದ್ಯುತ್ತಿನ ಉತ್ಪಾದನೆಯಲ್ಲದೆ, ಪರಸ್ಪರ ಶಕ್ತಿ ಪ್ರದರ್ಶನಕ್ಕೂ ಬಳಸುತ್ತಿದ್ದೇವೆ. ನೆಲ, ನೀರು ಹಾಗೂ ಆಕಾಶದಲ್ಲಿ ಲೀಲಾಜಾಲವಾಗಿ ಓಡಾಡುವುದಲ್ಲದೆ, ಇತರ ಗ್ರಹಗಳಲ್ಲಿಯೂ ನಮ್ಮ ಕಾಲಿಟ್ಟಿದ್ದೇವೆ. ಈವತ್ತು ಪ್ರಪಂಚದ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಯನ್ನು ಕ್ಷಣಾರ್ಧದಲ್ಲಿ ಸಂಪರ್ಕಿಸಬಹುದಾಗಿದೆ. ಒಟ್ಟಿನಲ್ಲಿ ನಮ್ಮ ಬೌದ್ಧಿಕ ನಿಪುಣತೆಯಿಂದ ಭೂಮಿಯ ಮೇಲೆ ದೊರಕುವ ಎಲ್ಲ ನೈಸರ್ಗಿಕ ಸಂಪತ್ತನ್ನು ನಮ್ಮ ಸ್ವಂತಕ್ಕೆ ಉಪಯೋಗಿಸಿಕೊಳ್ಳಲು ಸಮರ್ಥರಾಗಿದ್ದೇವೆ.
ಎಲ್ಲವೂ ನಮ್ಮ ಸ್ವಾರ್ಥಕ್ಕಾಗಿ, ನಮ್ಮ ನಮ್ಮ ದುರಾಸೆಗಳ ಪೂರೈಕೆಗಾಗಿ ಮತ್ತು ನಮ್ಮ ಕ್ರೌರ್ಯದ ಬಲ ಪ್ರದರ್ಶನಕ್ಕಾಗಿ!
ಆದರೆ ಇದೇ ಭೂಮಿಯ ಮೇಲಿರುವ ಇತರ ಜೀವಿಗಳನ್ನು ನೋಡಿ! ಅತಿ ಸೂಕ್ಷ್ಮ ಬ್ಯಾಕ್ಟೀರಿಯಾದಿಂದ ಹಿಡಿದು ದೈತ್ಯ ಸಿಕೋಯಾ ಮರದವರೆಗೆ, ಅಮೀಬಾದಿಂದ ಹಿಡಿದು ತಿಮಿಂಗಿಲದವರೆಗೆ, ಪ್ರತಿಯೊಂದು ಜೀವಿಯೂ ಪ್ರಕೃತಿಯನ್ನು ಪೋಷಿಸಲು ಮತ್ತು ಅದರ ಸಮತೋಲನವನ್ನು ಕಾಪಾಡಲು ತಮ್ಮ ನಿರಂತರ ಕೊಡುಗೆಯನ್ನು ನೀಡುತ್ತಲೇ ಬಂದಿವೆ. ಈ ಅತ್ಯಗತ್ಯ ಮತ್ತು ಜವಾಬ್ದಾರಿಯುತ ಪ್ರಕ್ರಿಯೆಯಲ್ಲಿ ಭಾಗವಹಿಸದವರು ನಾವು- ಮನುಷ್ಯರು- ಮಾತ್ರ! ಬದುಕಿನುದ್ದಕ್ಕೂ ಭೂಮಿಯ ಮೇಲಿರುವ ಎಲ್ಲ ಚರಾಚರ ವಸ್ತುಗಳೂ ಕೇವಲ ನಮ್ಮ ಉಪಯೋಗಕ್ಕಾಗಿ ಮತ್ತು ನಮ್ಮ ಭೋಗಲಾಲಸೆಗಾಗಿ ಎಂದೇ ಭಾವಿಸಿಕೊಂಡು ಬಂದಿದ್ದೇವೆ. ನಾವು ಈ ಭೂಮಿಗೇ ಸೇರಿದವರಲ್ಲವೇನೋ ಎಂಬಂತೆ!
ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಬಂದಿದೆ. ಪ್ರಪಂಚದ ಮೇಲೆ ವಿಕಾಸಗೊಂಡ ಜೀವಿಗಳಲ್ಲಿ ಇಂದು ಶೇಕಡ 99ರಷ್ಟು ಜೀವಿಗಳು ಅಳಿದುಹೋಗಿವೆಯೆಂದು ವಿಜ್ಞಾನಿಗಳು ಹೇಳುತ್ತಾರೆ. ಇದಕ್ಕೆ ಕಾರಣ, ಅವುಗಳ ನೈಸರ್ಗಿಕ ಆಯ್ಕೆ ತಪ್ಪಾಗಿರಬಹುದು, ಅಥವಾ ಅವು ಜೀವಿಸಲು ಅಯೋಗ್ಯವಾಗಿರಬಹುದು, ಅಥವಾ ಅವೂ ಕೂಡ ಪ್ರತಿಯಾಗಿ ಪ್ರಕೃತಿಗೆ ಏನ್ನೂ ನೀಡಿಲ್ಲದೆ ಇರಬಹುದು. ಈಗಲೂ ಕೂಡ ನಾವು ತಿದ್ದಿಕೊಳ್ಳದಿದ್ದರೆ, ನೈಸರ್ಗಿಕ ಸಂಪತ್ತಿನ ದುರ್ಬಳಕೆಯನ್ನುನಿಲ್ಲಿಸದಿದ್ದರೆ, ಶೀಘ್ರದಲ್ಲಿಯೇ ಪ್ರಕೃತಿಯು ನಾವು ಈ ಭೂಮಿಗೆ ಭಾರ ಎಂದು ತೀರ್ಮಾನಿಸಿ, ನಮ್ಮನ್ನೂ ವಿನಾಶದ ಅಂಚಿಗೆ ದೂಡಿಬಿಡುವ ಸಾಧ್ಯತೆ ಇದೆ ಎಂದು ನನಗನ್ನಿಸುತ್ತದೆ.
ನಾವೆಲ್ಲಾ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.
ವಂದನೆಗಳು.
ಡಾ.ಎಸ್.ವಿ.ನರಸಿಂಹನ್
ವಿರಾಜಪೇಟೆ- 571 218
2 ಕಾಮೆಂಟ್‌ಗಳು:
ನಿಮ್ಮ ಸ್ನೇಹಿತರಿಗೆ ನನ್ನ ಧನ್ಯವಾದ ತಿಳಿಸಿ.ವನ್ಯ ಜೀವಿಗಳ ಬಗ್ಗೆ ಅವರ ಕಾಳಜಿ ಅನುಕರಣೀಯ ಹಾಗು ಶ್ಲಾಗನೀಯ ನಿಮ್ಮ ಲೇಖನ ಉತ್ತಮವಾಗಿ ಮೂಡಿ ಬಂದಿದೆ. ನನ್ನಂತ ಪರಿಸರ ಪ್ರೇಮಿಗೆ ಉತ್ತಮ ಮಾಹಿತಿ ನೀಡಿದ್ದೀರಿ ಥ್ಯಾಂಕ್ಸ್.
ಡಾಕ್ಟ್ರೇ, ನಾನು ಸುಧಾ ಹಾಗೂ ತರ೦ಗದ ಕಾಯ೦ ಕೊಳ್ಳುಗ ಹಾಗೂ ಓದುಗ. ಸುಧಾದಲ್ಲಿ ಪ್ರಕಟವಾದ ನಿಮ್ಮೆಲ್ಲ ಲೇಖನ ಗಳನ್ನೂ ಓದಿದ್ದೇನೆ. ಬಹಳಷ್ಟು ವಿಷಯಗಳನ್ನು ತಿಳಿದುಕೊ೦ಡಿ ದ್ದೇನೆ.ಅವುಗಳ್ ಅಲೇಖಕರು ನೀವು ಅ೦ಥ ಗೊತ್ತಿರಲಿಲ್ಲ. ಏನೋ ಹುಡುಕಲು ಹೋಗಿ,ನಿಮ್ಮನ್ನು ನಿಮ್ಮ ಬ್ಲಾಗ್ ಹುಡುಕಿದೆ!ಒ೦ದು ಅದ್ಭುತ ಸಾಹಿತ್ಯ ಲೋಕಕ್ಕೆ ನನ್ನನ್ನು ಕರೆದೊಯ್ದಿತು. ಪ್ರೇಮ,ಕಾಮ-ನಿಯಾರ್ತಾ೦ಡಲ್ ಮಾನವ,ಮಾ೦ಟೋನ ಕಥೆಗಳು ಪ್ರತಿಯೊ೦ದೂಸೊಗಸಾಗಿವೆ ಹಾಗೂ ಮಾಹಿತಿ ಪೂರಕವಾಗಿವೆ. “ತೆಗೆದುಬಿಡು“ ನನ್ನ ಮನಸ್ಸನ್ನೊಮ್ಮೆ ಚಿ೦ತೆಗೀಡು ಮಾಡಿತು ಹಾಗೂ ವಿಭಜನಾ ಸಮಯವನ್ನು ಆನ೦ತರದ ಸಾವು-ನೋವುಗಳನ್ನು ಚೆನ್ನಾಗಿ ಹಿಡಿದಿಟ್ಟಿದೆ. ಅನುವಾದವೂ ಸೊಗಸಾಗಿದೆ. ಒ೦ದೊಳ್ಳೆಯ ಬ್ಲಾಗ್ ಗೆ ಬ೦ದ ಹಾಗೆ ಆಯ್ತು. ಧನ್ಯವಾದಗಳು.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಕಾಮೆಂಟ್ ಪೋಸ್ಟ್ ಮಾಡಿ