ಮಂಗಳವಾರ, ನವೆಂಬರ್ 02, 2010

ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ

ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ
ನವೆಂಬರ್ 2010ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ `ವಿಜ್ಞಾನ ಲೋಕ' ಪತ್ರಿಕೆಯಲ್ಲಿ ನನ್ನ
ಈ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.
2001ರಲ್ಲಿ ಜಾನ್ಸ್ ಹಾಪ್‌ಕಿನ್ಸ್‌ನ ಆಸ್ಪತ್ರೆಯಲ್ಲಿನ ಆಸ್ಟ್ರಿಯಾದ ಸಂಶೋಧಕರೊಬ್ಬರು ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಮಹಿಳೆಯ ಮಗಳಾದ ಡೆಬೊರಾ ಲ್ಯಾಕ್ಸಳನ್ನು ಹಾಗೂ ಆಕೆಯ ತಮ್ಮನನ್ನು ತಮ್ಮ ಪ್ರಯೋಗಾಲಯಕ್ಕೆ ಆಹ್ವಾನಿಸಿದರು. ಅಲ್ಲಿ ಅವರನ್ನು ನೆಲಮಾಳಿಗೆಯೊಂದಕ್ಕೆ ಕರೆದೊಯ್ದು ಶೀತಲಘನೀಕೃತ ಗಾಜಿನ ನಾಳಗಳನ್ನು ಡೆಬೊರಾಳ ಕೈಯಲ್ಲಿರಿಸಿ ಅದರಲ್ಲಿರುವ ಜೀವಕೋಶಗಳು ಆಕೆಯ ತಾಯಿಯದು ಎಂಬುದಾಗಿ ತಿಳಿಸಿದರು. ಅಲ್ಲಿ ತನ್ನ `ತಾಯಿ'ಯನ್ನು `ಕಂಡ' ಡೆಬೊರಾ ಅತ್ಯಂತ ಭಾವುಕಳಾಗಿ ಅವುಗಳನ್ನು ಅತ್ಯಮೂಲ್ಯ ವಸ್ತುವೆಂಬಂತೆ ತನ್ನ ಬೊಗಸೆಯಲ್ಲಿ ಹಿಡಿದು ಚುಂಬಿಸಿ `ನೀನೀಗ ಜಗದ್ವಿಖ್ಯಾತೆ, ಆದರೆ ಯಾರಿಗೂ ಅದು ತಿಳಿದಿಲ್ಲ' ಎಂದು ಪಿಸುಗುಟ್ಟಿದಳು. ಆಕೆಯ ತಮ್ಮ, `ನಮ್ಮ ತಾಯಿ ವಿಜ್ಞಾನ ಜಗತ್ತಿಗೆ ಅಷ್ಟೊಂದು ಬೇಕಾದವಳಾಗಿದ್ದಾಳೆ. ಆದರೆ ನಾವೇಕೆ ಬಡತನದಲ್ಲಿ ನರಳುತ್ತಿದ್ದೇವೆ?' ಎಂದು ಕೇಳಿದ. ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಹೆಣ್ಣಿನ ಕತೆ ಕ್ಯಾನ್ಸರ್, ಜನಾಂಗಭೇದ, ವೈಜ್ಞಾನಿಕ ನೈತಿಕತೆಗಳ ಹಾಗೂ ಕಡುಬಡತನದ ಕುಟುಂಬದ ಒಂದು ಕತೆಯಾಗಿದೆ. ಆ ಕತೆ ಪ್ರಾರಂಭವಾದದ್ದು 1951ರ ಫೆಬ್ರವರಿಯಲ್ಲಿ.
ಫೆಬ್ರವರಿ 1951ರ ಒಂದು ದಿನ ಹೆನ್ರಿಟಾ ಲ್ಯಾಕ್ಸ್ ಎಂಬ ಆಫ್ರಿಕನ್-ಅಮೆರಿಕನ್ ಗುಲಾಮ ಸಂತತಿಯ ನೀಗ್ರೋ ಹೆಣ್ಣು ಅಮೆರಿಕದ ಬಾಲ್ಟಿಮೋರ್‌ನಲ್ಲಿನ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯ ನೀಗ್ರೋಗಳಿಗೆಂದೇ ಪ್ರತ್ಯೇಕವಾಗಿರಿಸಿದ್ದ ವಾರ್ಡ್‌ನ ಹಾಸಿಗೆಯೊಂದರಲ್ಲಿ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದಳು. ನೀಗ್ರೋಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹತ್ತಿರದ ಆಸ್ಪತ್ರೆ ಅದೇ ಆಗಿದ್ದುದರಿಂದ ಆಕೆ 20 ಮೈಲುಗಳ ಪ್ರಯಾಣ ಮಾಡಿಬಂದಿದ್ದಳು. ಉಲ್ಭಣಗೊಂಡಿದ್ದ ತೀವ್ರ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಆಕೆಯ ಬಳಿಯೇ ಸಾವು ಹೊಂಚುಹಾಕಿ ನಿಂತಿತ್ತು. ಎಂದಿನಂತೆ ವೈದ್ಯರು ಪರೀಕ್ಷೆಗಾಗಿ ಆಕೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಜೀವಕೋಶಗಳ ಅಂಗಾಂಶದ ತುಣುಕನ್ನು ಕತ್ತರಿಸಿ ತೆಗೆದು ಅದೇ ಆಸ್ಪತ್ರೆಯ ಅಂಗಾಂಶ ಸಾಕಣೆ ಸಂಶೋಧನೆಯ ಮುಖ್ಯಸ್ಥರಾಗಿದ್ದ ಜಾರ್ಜ್ ಗೌರವರಿಗೆ ಕಳುಹಿಸಿಕೊಟ್ಟರು. ಆ ತುಣುಕನ್ನು ತೆಗೆದದ್ದು ಹೆನ್ರಿಟಾ ಲ್ಯಾಕ್ಸ್‌ಗಾಗಲಿ, ಆಕೆಯ ಕುಟುಂಬದವರಿಗಾಗಲಿ ಅಥವಾ ಹೊರಜಗತ್ತಿಗಾಗಲಿ ತಿಳಿದಿರಲಿಲ್ಲ. ಆದರೆ ಆ ಅಂಗಾಶದ ತುಣುಕು ವೈದ್ಯಕೀಯ ಜಗತ್ತಿನಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಉಂಟುಮಾಡುವುದಾಗಿ ಯಾರೂ ಊಹಿಸಿರಲಿಲ್ಲ. ವೈದ್ಯರೂ ಸಹ ಅಂತಹ ಉಲ್ಬಣ ಕ್ಯಾನ್ಸರ್ ಕಂಡಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ಅಕೆಯ ಮೈಯೆಲ್ಲಾ ಕ್ಯಾನ್ಸರ್ ಗೆಡ್ಡೆಗಳುಂಟಾದವು. ಅತ್ಯಂತ ನೋವಿನಿಂದ ನರಳಿದ ಹೆನ್ರಿಟಾ ಲ್ಯಾಕ್ಸ್ ಅದೇ ವರ್ಷ ಅಕ್ಟೋಬರ್ 4ರಂದು ತನ್ನ ಐದು ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ಕೊನೆಯುಸಿರೆಳದಳು. ಆಕೆ ಸತ್ತಾಗ ಆಕೆಗೆ 31 ವರ್ಷ ವಯಸ್ಸು. ಅತ್ಯಂತ ಬಡತನದಲ್ಲಿದ್ದ ಆಕೆಯ ಕುಟುಂಬದವರು ಆಕೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದು ಹೂತುಬಿಟ್ಟರು. ಕೊನೆಗೆ ತನ್ನ ಅಂಗಾಂಶದಿಂದ ಜಗತ್ಪ್ರಸಿದ್ಧಳಾದ ಆಕೆಯ ಸಮಾಧಿಯನ್ನೂ ಸಹ ಗುರುತಿಸಲು ಸಾಧ್ಯವಾಗಲಿಲ್ಲ.


ಹೆನ್ರಿಟಾ ಲ್ಯಾಕ್ಸ್ ಮತ್ತು ಆಕೆಯ ಪತಿ ಡೇವಿಡ್ ಲ್ಯಾಕ್ಸ್
ಪ್ರಯೋಗಾಲಯಗಳಲ್ಲಿ ಆಕೆಯ ಕ್ಯಾನ್ಸರ್‌ಯುಕ್ತ ಜೀವಕೋಶಗಳನ್ನು ವೃದ್ಧಿಗೊಳಿಸಿ ಜಗತ್ತಿನಾದ್ಯಂತ ವಿಜ್ಞಾನಿಗಳು, ವೈಜ್ಞಾನಿಕ ವ್ಯಾಪಾರಿ ಸಂಸ್ಥೆಗಳು ಅಂತಹ ಜೀವಕೋಶಗಳಿರುವ ಪ್ರತಿ ಸಣ್ಣ ಸೀಸೆಯನ್ನು 10 ಡಾಲರ್‌ನಿಂದ ಹಿಡಿದು 10000 ಡಾಲರ್‌ವರೆಗೂ ಮಾರಾಟಮಾಡತೊಡಗಿದರು. ವೈದ್ಯಕೀಯ ಸಂಶೋಧನೆಯಲ್ಲಿ ಜಗತ್ತಿನಾದ್ಯಂತ ಆ ಜೀವಕೋಶಗಳು ಹರಡಿದ್ದಲ್ಲದೆ ಅಂತರಿಕ್ಷಕ್ಕೂ ಹೋಗಿಬಂದವು. ಆದರೆ ಆ ವಿಷಯ ಹೆನ್ರಿಟಾ ಲ್ಯಾಕ್ಸಳ ಕುಟುಂಬದವರಿಗೆ ತಿಳಿದೇ ಇರಲಿಲ್ಲ. ವೈದ್ಯಕೀಯ ರಂಗದಲ್ಲಿ ಹೆನ್ರಿಟಾ ಲ್ಯಾಕ್ಸಳ ಜೀವಕೋಶಗಳ ಕೊಡುಗೆ ಅಗಣನೀಯ ಮೌಲ್ಯದ್ದಾಗಿತ್ತು. ಆದರೆ ಆಕೆಯ ಗಂಡ, ಮಕ್ಕಳು ಅದೆಷ್ಟು ಬಡತನದಲ್ಲಿದ್ದರೆಂದರೆ ಅವರಿಗೆ ವೈದ್ಯಕೀಯ ವಿಮೆ ಸಹ ಇರಲಿಲ್ಲ. ಅದರಿಂದಾಗಿ ಅವರ ಕಾಯಿಲೆಕಸಾಲೆಗಳಿಗೆ ಅವರು ಆಸ್ಪತ್ರೆಗೆ ಸಹ ಭೇಟಿ ನೀಡುವಂತಿರಲಿಲ್ಲ.
ಹೆನ್ರಿಟಾ ಲ್ಯಾಕ್ಸಳು `ಅಮರ'ಳಾಗಿದ್ದಾಳೆಂದು ಇಂದು ವಿಜ್ಞಾನ ಜಗತ್ತು ಸಾರುತ್ತಿದೆ. ಆಕೆ 1951ರಲ್ಲೇ ಇಹಲೋಕ ತ್ಯಜಿಸಿದ್ದರೂ ಆಕೆಯ ದೇಹದಿಂದ ಕತ್ತರಿಸಿ ತೆಗೆದ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಜೀವಕೋಶಗಳ ಅಂಗಾಂಶದ ತುಣುಕು ಇಂದಿಗೂ ಜಗತ್ತಿನ ಪ್ರಯೋಗಾಲಯಗಳಲ್ಲಿ ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ ವೃದ್ಧಿಗೊಳ್ಳುತ್ತಲೇ ಇದೆ. ವಿಜ್ಞಾನ ಜಗತ್ತಿನಲ್ಲಿ ಆ ಜೀವಕೋಶಗಳನ್ನು `ಹೀಲಾ' (ಸ್ಪೆಲ್ಲಿಂಗ್ HeLa ಆದರೂ ಉಚ್ಚಾರಣೆ ಹೀಲಾ ಎಂದು) ಜೀವಕೋಶಗಳೆಂದು ಕರೆದರು. `ಹೀಲಾ' ಎಂದರೆ ಹೆನ್ರಿಟಾ ಲ್ಯಾಕ್ಸ್‌ನ (Henrietta Lacks) ಸಂಕ್ಷೇಪ ರೂಪ. ಆದರೆ ಮೊದಲಿಗೆ ಹೆನ್ರಿಟಾ ಲ್ಯಾಕ್ಸಳ ಹೆಸರನ್ನು ಗೋಪ್ಯವಾಗಿಡುವ ಸಲುವಾಗಿ ಹೀಲಾ ಎಂದರೆ `ಹೆಲೆನ್ ಲೇನ್' ಅಥವಾ `ಹೆಲೆನ್ ಲಾರ್ಸನ್'ಳಿಂದ ಪಡೆದ ಜೀವಕೋಶಗಳು ಎನ್ನುತ್ತಿದ್ದರು. ವಿಜ್ಞಾನಿಯೊಬ್ಬರ ಪ್ರಕಾರ ಆ ರೀತಿ ಇದುವರೆಗೆ ವೃದ್ಧಿಗೊಂಡಿರುವ ಆಕೆಯ ಜೀವಕೋಶಗಳ ತೂಕ ಸುಮಾರು 50 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟಾಗಿರಬಹುದು! ಪ್ರತಿಯೊಂದು ಜೀವಕೋಶ ಅದೆಷ್ಟು ಸೂಕ್ಷ್ಮವಾಗಿರುತ್ತದೆಯೆಂದರೆ ಅವು ಬರಿಗಣ್ಣಿಗೆ ಕಾಣುವುದಿಲ್ಲ, ಅವುಗಳನ್ನು ಸೂಕ್ಷ್ಮದರ್ಶಕದ ಮೂಲಕವೇ ನೋಡಬೇಕು. ಇದುವರೆಗೆ ವೃದ್ಧಿಗೊಂಡಿರುವ ಆಕೆಯ ಜೀವಕೋಶಗಳನ್ನು ಒಂದಕ್ಕೆ ಒಂದರಂತೆ ಜೋಡಿಸಿದರೆ ಇಡೀ ಭೂಮಿಯನ್ನು ಮೂರು ಸುತ್ತು ಹಾಕಬಹುದು! ಆಕೆ ಬದುಕಿದ್ದಾಗ ಆಕೆಯ ಎತ್ತರ ಸುಮಾರು ಐದಡಿಯಷ್ಟೇ ಇತ್ತು.
ಪ್ರಯೋಗಾಲಯದ ಗಾಜಿನ ನಳಿಕೆಗಳಲ್ಲಿ ವೃದ್ಧಿಗೊಂಡ ಮೊಟ್ಟಮೊದಲ ಅಂಗಾಂಶವೇ ಈಕೆಯದು. ಅದರಿಂದಾಗಿ ವೈದ್ಯಕೀಯ ರಂಗದಲ್ಲಿ ಅದು ಕ್ರಾಂತಿಯನ್ನೇ ಉಂಟುಮಾಡಿತು. ಹೀಲಾ ಜೀವಕೋಶಗಳ ಸಾಲಿನ ಮೌಲ್ಯ ಅಗಣಿತವಾದುದು: ಅವುಗಳ ಮೇಲೆ ಮೊಟ್ಟಮೊದಲ ಪೋಲಿಯೋ ಲಸಿಕೆಯನ್ನು ಪರೀಕ್ಷಿಸಲಾಯಿತು, ಹಲವಾರು ಕ್ಯಾನ್ಸರ್ ಔಷಧಗಳ, ಪಾರ್ಕಿನ್‌ಸನ್, ಲ್ಯೂಕೆಮಿಯಾ ಮತ್ತು ಫ್ಲೂನಂತಹ ಹಲವರು ಕಾಯಿಲೆಗಳ ಔಷಧಗಳ ಆವಿಷ್ಕಾರಕ್ಕೆ ಅವು ಕಾರಣವಾದವು ಹಾಗೂ ಹಲವಾರು ಮೂಲಭೂತ ಜೀವಕೋಶ ಪ್ರಕ್ರಿಯೆಗಳ, ರಾಸಾಯನಿಕ ಚಿಕಿತ್ಸೆ, ಕ್ಲೋನಿಂಗ್, ವಂಶವಾಹಿ ಮ್ಯಾಪಿಂಗ್ ಮುಂತಾದವುಗಳ ಅಧ್ಯಯನಕ್ಕೆ ಆಧಾರವಾದವು. ಆ ಜೀವಕೋಶಗಳ ಮೇಲೆ ಹರ್ಪೀಸ್, ಏಡ್ಸ್ ಮುಂತಾದ ವೈರಸ್ ಕಾಯಿಲೆಗಳ ಅಧ್ಯಯನ ನಡೆಯುತ್ತಿದೆ. ಮಾನವ ಜೀವಕೋಶಗಳ ಮೇಲಾಗುವ ಅಣುಬಾಂಬ್‌ನ ಪರಿಣಾಮಕ್ಕೆ ಆ ಜೀವಕೋಶಗಳನ್ನು ಬಳಸಲಾಗಿದೆ ಹಾಗೂ ಶೂನ್ಯ ಗುರುತ್ವಾಕರ್ಷಣೆ ಮಾನವ ಜೀವಕೋಶಗಳ ಮೇಲೆ ಬೀರುವ ಪರಿಣಾಮದ ಅಧ್ಯಯನಕ್ಕಾಗಿ ಯಾವ ಜೀವಂತ ಮನುಷ್ಯನೂ ಅಂತರಿಕ್ಷಕ್ಕೆ ಕಾಲಿಡುವ ಮೊದಲೇ ಆ ಜೀವಕೋಶಗಳನ್ನು ಅಂತರಿಕ್ಷಕ್ಕೂ ಕಳುಹಿಸಿಕೊಡಲಾಗಿತ್ತು.
ಮಹಿಳೆಯೊಬ್ಬಳ ಜೀವಕೋಶಗಳನ್ನು ಆಕೆಯ ಅಥವಾ ಆಕೆಯ ಕುಟುಂಬದವರ ಅನುಮತಿಯಿಲ್ಲದೆ ಪಡೆದು ಅವುಗಳನ್ನು ಬಳಸುತ್ತಿರುವುದು ಹಲವಾರು ನೈತಿಕ ಸವಾಲುಗಳನ್ನು ಎದುರಿಗಿಡುತ್ತವೆ. ನ್ಯಾಯ, ಗೌರವ ಮತ್ತು ತಿಳಿಸಬೇಕೆಂಬ ಕನಿಷ್ಠ ಸೌಜನ್ಯತೆಯ ಮಿತಿಯನ್ನೂ ಮೀರಿರುವುದು ಇಲ್ಲಿ ಕಣ್ಣಿಗೆ ಕಟ್ಟುವಂತಿದೆ. ಅಮೆರಿಕದ ವೈದ್ಯಕೀಯ ಸಂಶೋಧನೆಗಳ ಜಗತ್ತಿನ ಕರಾಳ ಮುಖದ ಬಗ್ಗೆ ರೆಬೆಕ್ಕಾ ಸ್ಕ್ಲೂಟ್ ತಮ್ಮ ಕೃತಿ `ದ ಇಮಾರ್ಟಲ್ ಲೈಫ್ ಆಫ್ ಹೆನ್ರಿಟಾ ಲ್ಯಾಕ್ಸ್'ನಲ್ಲಿ ಹೇಳಿದ್ದಾರೆ. ಅಮೆರಿಕಾದಲ್ಲಿ `ಕತ್ತಲ ವೈದ್ಯರು' ತಮ್ಮ ಸಂಶೋಧನೆ ಮತ್ತು ಪ್ರಯೋಗಗಳಿಗಾಗಿ ರಾತ್ರಿಯ ಹೊತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ನೀಗ್ರೋಗಳನ್ನು ಅಪಹರಿಸಿ ಕೊಂಡೊಯ್ಯುತ್ತಿದ್ದರು. ಕುಖ್ಯಾತ ಟಸ್ಕೆಜೀ ಸಿಫಿಲಿಸ್ ಅಧ್ಯಯನದಲ್ಲಿ ಅಲಬಾಮಾದಲ್ಲಿ ಅಧ್ಯಯನಕ್ಕಾಗಿ ಸಿಫಿಲಿಸ್ ರೋಗ ಹೊಂದಿರುವ ಬಡ ಮತ್ತು ಅಶಿಕ್ಷಿತ ನೀಗ್ರೋಗಳನ್ನು ಕರೆತಂದು ಅವರಿಗೆ ಪೆನ್ಸಿಲಿನ್ ನೀಡಿ ಬದುಕಿಸುವ ಸಾಧ್ಯತೆಗಳಿದ್ದರೂ ವೈದ್ಯರು ಅವರಿಗೆ ಪೆನ್ಸಿಲಿನ್ ನೀಡುತ್ತಿರುವುದಾಗಿ ಸುಳ್ಳು ಹೇಳಿ ಚಿಕಿತ್ಸೆ ದೊರಕದಿದ್ದಲ್ಲಿ ಕಾಯಿಲೆ ಎಷ್ಟರ ಮಟ್ಟಿಗೆ ಉಲ್ಬಣಗೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವರು ನರಳಿ ಸಾಯುವಂತೆ ಮಾಡುತ್ತಿದ್ದರು. ಅಮೆರಿಕಾದ ಸಿ.ಐ.ಎ. ಎರಡನೇ ವಿಶ್ವಯುದ್ಧದ ಸಮಯದಲ್ಲಿ ದೇಹದ ಮೇಲೆ ಯಾವುದೇ ಹಿಂಸೆಯ ಕುರುಹು ಕಾಣದಂತೆ ಚಿತ್ರಹಿಂಸೆ ನೀಡುವ ಪ್ರಯೋಗಗಳಿಗಾಗಿ ಸಾವಿರಾರು ನೀಗ್ರೋ ಖೈದಿಗಳನ್ನು ಬಳಸಿಕೊಂಡಿದೆ. ಅಮೆರಿಕಾದಲ್ಲಿ ಗುಲಾಮ ಪದ್ಧತಿ ಚಾಲ್ತಿಯಲ್ಲಿದ್ದಾಗ ನೀಗ್ರೋ ಗುಲಾಮರ ಮೇಲೆ ಹೇಳಕೇಳದಷ್ಟು ಹೊಸ ಔಷಧ ಚಿಕಿತ್ಸೆಗಳ ಹಾಗೂ ಶಸ್ತ್ರಚಿಕಿತ್ಸೆಗಳ ಪ್ರಯೋಗಗಳು ನಡೆದಿವೆ. ಕಳೆದ ಶತಮಾನದ ಪ್ರಾರಂಭದಲ್ಲಿ ಕಪ್ಪು ಜನರ ಸಮಾಧಿಗಳನ್ನು ಅಗೆದು ಶವಗಳನ್ನು ಸಂಶೋಧನೆಗಾಗಿ ವೈದ್ಯಕೀಯ ಶಾಲೆಗಳಿಗೆ ಕಳುಹಿಸಲಾಗುತ್ತಿತ್ತು.
ಜಾನ್ಸ್ ಹಾಪ್‌ಕಿನ್ಸ್‌ನ ಅಂಗಾಂಶ ಸಾಕಣೆ ಸಂಶೋಧನೆಯ ಮುಖ್ಯಸ್ಥರಾಗಿದ್ದ ಜಾರ್ಜ್ ಗೌರವರು ಪ್ರಯೋಗಗಳಿಗಾಗಿ ಪ್ರಯೋಗಾಲಯದಲ್ಲಿ ಮಾನವ ಅಂಗಾಂಶ ಜೀವಕೋಶಗಳನ್ನು ವೃದ್ಧಿಸುವ ಪ್ರಯತ್ನವನ್ನು ಮುವ್ವತ್ತು ವರ್ಷಗಳಿಂದ ನಡೆಸಿ ವಿಫಲರಾಗಿದ್ದರು. ಆದರೆ 1951ರಲ್ಲಿ ಹೆನ್ರಿಟಾ ಲ್ಯಾಕ್ಸಳ ಜೀವಕೋಶಗಳು ಅವೆಲ್ಲವನ್ನೂ ಬದಲಿಸಿದವು. ಆಕೆಯ ಜೀವಕೋಶಗಳು ಪ್ರಯೋಗಾಲಯದ ಪೋಷಕಾಂಶಗಳ ಮಾಧ್ಯಮದಲ್ಲಿ ಹುಚ್ಚು ಹಿಡಿದಂತೆ ವೃದ್ಧಿಸತೊಡಗಿದವು, ಆಸುಪಾಸಿನಲ್ಲಿದ್ದ ಇತರ ಜೀವಕೋಶಗಳ ಮೇಲೂ ಆಕ್ರಮಣ ನಡೆಸಿ ಅವುಗಳನ್ನು ತಮ್ಮದಾಗಿಸಿಕೊಂಡವು. ಜಾರ್ಜ್ ಗೌರವರು ಅವುಗಳನ್ನು ಮಾರಾಟ ಮಾಡಿ ತಾವು ಹಣವೇನೂ ಮಾಡಿಕೊಳ್ಳಲಿಲ್ಲ. ಆದರೆ ಈಗ ಅದರ ವಿನಿಮಯ ಸಂಪೂರ್ಣ ವಾಣಿಜ್ಯಮಯವಾಗಿದೆ. ಇಡೀ ಜಗತ್ತಿನಾದ್ಯಂತ ಅವುಗಳ ಕೊಡುಕೊಳ್ಳುವಿಕೆ ಪ್ರತಿದಿನ ನಡೆಯುತ್ತಿದೆ ಹಾಗೂ ಕೋಟ್ಯಂತರ ಡಾಲರ್ ಲಾಭ ಗಳಿಸಿಕೊಟ್ಟಿದೆ. ಮೈಕ್ರೋಬಯಲಾಜಿಕಲ್ ಅಸೋಸಿಯೇಟ್ಸ್ ಎಂಬ ಕಂಪೆನಿ ಹೀಲಾ ಜೀವಕೋಶಗಳನ್ನು ಸಣ್ಣ ಸೀಸೆಯೊಂದಕ್ಕೆ ಹತ್ತು ಸಾವಿರ ಡಾಲರ್‌ನಂತೆ ಮಾರಾಟಮಾಡುತ್ತಿದೆ. ಈ ದಿನ ಹೀಲಾ ಜೀವಕೋಶಗಳನ್ನೊಳಗೊಂಡಂತೆ ಸುಮಾರು 17000ಕ್ಕೂ ಹೆಚ್ಚು ಪೇಟೆಂಟ್‌ಗಳಿವೆ. ಹೀಲಾ ಜೀವಕೋಶಗಳ ಮೇಲಿನ ಸಂಶೋಧನಾ ಪ್ರಬಂಧಗಳು ವೈಜ್ಞಾನಿಕ ಪತ್ರಿಕೆಗಳಲ್ಲಿ ಇದುವರೆಗೆ 60000ಕ್ಕೂ ಹೆಚ್ಚು ಪ್ರಕಟವಾಗಿವೆ ಹಾಗೂ ಪ್ರತಿ ದಿನ ಸರಾಸರಿ ಹತ್ತು ಪ್ರಬಂಧಗಳಂತೆ ಪ್ರಕಟವಾಗುತ್ತಿವೆ. ಸಾವಿರಾರು ಜನರಿಗೆ ಆ ಜೀವಕೋಶಗಳು ಉದ್ಯೋಗ ದೊರಕಿಸಿಕೊಟ್ಟಿವೆ. ಹೀಲಾ ಜೀವಕೋಶಗಳ ಅಧ್ಯಯನದ ವಿಜ್ಞಾನಿಯೊಬ್ಬರಿಗೆ ನೋಬೆಲ್ ಪಾರಿತೋಷಕ ಸಹ ದೊರಕಿದೆ. ವಿಜ್ಞಾನಿ ಡೆಫ್ಲರ್ ಹೇಳುವಂತೆ ಕಳೆದ ನೂರು ವರ್ಷಗಳಲ್ಲಿ ವೈದ್ಯಕೀಯ ಜಗತ್ತು ಕಂಡಿರುವ ಅತ್ಯದ್ಭುತವೆಂದರೆ ಹೀಲಾ ಜೀವಕೋಶಗಳು ಮಾತ್ರ.
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈ ಮುಂದಿನ ಐದು ಅಂಶಗಳಿಂದಾಗಿ ಹೀಲಾ ಜೀವಕೋಶಗಳು ಬಹಳ ಮುಖ್ಯವಾಗಿವೆ:
1. ಹೀಲಾ ಜೀವಕೋಶಗಳ ಪ್ರವೇಶಕ್ಕೆ ಮೊದಲು ವಿಜ್ಞಾನಿಗಳು ಜೀವಕೋಶಗಳ ಮೇಲೆ ನಡೆಸುವ ಸಂಶೋಧನೆಗಳಿಗಿಂತ ಆ ಜೀವಕೋಶಗಳನ್ನು ಜೀವಂತವಾಗಿಡುವಲ್ಲಿ ಹೆಚ್ಚು ಶ್ರಮ ವ್ಯಯಮಾಡುತ್ತಿದ್ದರು. ಹೀಲಾ ಜೀವಕೋಶಗಳು ನಿರಂತರವಾಗಿ ಲಭಿಸಲು ಆರಂಭವಾದಾಗಿನಿಂದ ಅವರಿಗೆ ಸಂಶೋಧನೆಗೆ ಹೆಚ್ಚು ಸಮಯ ಸಿಕ್ಕಿತು.
2. 1952 ಪೋಲಿಯೋ ಕಾಯಿಲೆಯ ರುದ್ರತಾಂಡವದ ವರ್ಷವಾಗಿತ್ತು. ಕೋಟ್ಯಾಂತರ ಜನರನ್ನು ರಕ್ಷಿಸಿದ ಪೋಲಿಯೋ ಲಸಿಕೆಯನ್ನು ಪರೀಕ್ಷಿಸಲು ಹೀಲಾ ಜೀವಕೋಶಗಳನ್ನು ಬಳಸಲಾಯಿತು.
3. ಹೆನ್ರಿಟಾ ಲ್ಯಾಕ್ಸ್‌ರವರ ಅಂಗಾಂಶ ಮಾದರಿಯಲ್ಲಿನ ಕೆಲವು ಜೀವಕೋಶಗಳು ಇತರ ಜೀವಕೋಶಗಳಿಗಿಂತ ವಿಭಿನ್ನವಾಗಿ ವರ್ತಿಸುತ್ತಿದ್ದವು. ಅಂತಹ ಒಂದು ನಿರ್ದಿಷ್ಟ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ವೃದ್ಧಿಸಿ ಒಂದು ಪ್ರತ್ಯೇಕ ಜೀವಕೋಶ ಸಾಲನ್ನೇ ನಿರ್ಮಿಸುವುದು ಸಾಧ್ಯವಾಯಿತು. ಒಂದು ಪ್ರತ್ಯೇಕ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ಜೀವಂತವಾಗಿರಿಸುವುದೇ ಕ್ಲೋನಿಂಗ್ ಮತ್ತು ಪ್ರನಾಳ ನಳಿಕೆ ಫಲವಂತಿಕೆಯ ಮೂಲಭೂತ ತಂತ್ರವಾಗಿದೆ.
4. ವಿಜ್ಞಾನಿಯೊಬ್ಬ ಆಕಸ್ಮಿಕವಾಗಿ ರಾಸಾಯನಿಕವೊಂದನ್ನು ಹೀಲಾ ಜೀವಕೋಶಗಳ ಮೇಲೆ ಚೆಲ್ಲಿದ. ಆ ರಾಸಾಯನಿಕ ಆ ಜೀವಕೋಶದಲ್ಲಿನ ಸಿಕ್ಕುಸಿಕ್ಕಾಗಿದ್ದ ವರ್ಣತಂತುಗಳು ಬಿಡಿಬಿಡಿಯಾಗಿ ಪ್ರತ್ಯೇಕವಾಗುವಂತೆ ಮಾಡಿತು. ಆನಂತರ ವಿಜ್ಞಾನಿಗಳು ಈ ತಂತ್ರವನ್ನೇ ಬಳಸಿ ಮನುಷ್ಯರಲ್ಲಿ 46 (23 ಜೋಡಿಗಳು) ವರ್ಣತಂತುಗಳಿವೆ 48 ಅಲ್ಲ ಎಂಬುದನ್ನು ಕಂಡುಕೊಂಡರು ಹಾಗೂ ಈ ತಂತ್ರವೇ ಹಲವಾರು ವಿಧದ ಆನುವಂಶಿಕ ರೋಗಗಳ ಪತ್ತೆಹಚ್ಚುವಿಕೆಗೆ ನೆರವಾಗುತ್ತಿದೆ.
5. ಹೆನ್ರಿಟಾ ಲ್ಯಾಕ್ಸಳ ಕ್ಯಾನ್ಸರ್‌ಯುಕ್ತ ಜೀವಕೋಶಗಳು ಟೆಲೋಮೆರೇಸ್ ಎಂಬ ಕಿಣ್ವವನ್ನು ತಮ್ಮ ಡಿ.ಎನ್.ಎ.ವನ್ನು ದುರಸ್ತಿಮಾಡಿಕೊಳ್ಳಲು ಬಳಸುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ಇದರಿಂದಾಗಿಯೇ ಇತರ ಸಾಮಾನ್ಯ ಜೀವಕೋಶಗಳು ಸತ್ತುಹೋಗುತ್ತಿದ್ದಲ್ಲಿ, ಕ್ಯಾನ್ಸರ್‌ಯುಕ್ತ ಜೀವಕೋಶಗಳು ವೃದ್ಧಿಯಾಗುತ್ತಿದ್ದವು. ಕ್ಯಾನ್ಸರ್ ಪ್ರತಿರೋಧಕ ಔಷಧಗಳು ಈ ಕಿಣ್ವದ ವಿರುದ್ಧ ಕೆಲಸಮಾಡುತ್ತದೆ ಹಾಗೂ ಆ ರೀತಿಯ ಹಲವಾರು ಔಷಧಗಳು ವೈದ್ಯಕೀಯ ಪ್ರಯೋಗದಲ್ಲಿವೆ.
ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ದ್ವಿಗುಣಗೊಂಡಂತೆ ಅವುಗಳಲ್ಲಿನ ವರ್ಣತಂತುಗಳ ತುದಿಯಲ್ಲಿರುವ ಟೆಲೋಮೆರೇಸ್ ಕಿಣ್ವ ಕಿರಿದಾಗುತ್ತಾ ಬರುತ್ತದೆ. ಮನುಷ್ಯರಿಗೆ ವಯಸ್ಸಾಗಿ ಕೊನೆಗೊಂದು ದಿನ ಅವರು ಜೀವಬಿಡುವುದಕ್ಕೂ ಇದೇ ಕಾರಣ. ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ಒಂದು ನಿರ್ದಿಷ್ಟ ಸಂಖ್ಯೆಯಷ್ಟು ಮಾತ್ರ ವಿಭಜನೆಗೊಳಗಾಗಬಲ್ಲದು ಹಾಗೂ ಇದನ್ನು `ಹೇಫ್ಲಿಕ್ ಮಿತಿ'ಯೆಂದು ವಿಜ್ಞಾನಿಗಳು ಕರೆಯುತ್ತಾರೆ. ಆದರೆ ಹೀಲಾ ಜೀವಕೋಶಗಳು ಮಾತ್ರ ಈ ಮಿತಿಯನ್ನೂ ಮೀರಿ ನಿರಂತರವಾಗಿ ವಿಭಜನೆಗೊಳಗಾಗುತ್ತಿವೆ. ಅದಕ್ಕೆ ಕಾರಣ ಅವುಗಳ ವರ್ಣತಂತುಗಳ ಕೊನೆಯಲ್ಲಿ ಟೆಲೋಮೆರೇಸ್‌ನ ಸಕ್ರಿಯ ಆವೃತ್ತಿ ಹೊಂದಿರುವುದಾಗಿದೆ. ಇದರಿಂದಾಗಿ ಜೀವಕೋಶಗಳು ವಿಭಜನೆಗೊಂಡಾಗ ಟೆಲೋಮೆರೇಸ್ ಕಿರಿದಾಗುತ್ತಾ ಹೋಗುವುದಿಲ್ಲ. ಹೆನ್ರಿಟಾ ಬದುಕಿದ್ದ ಅವಧಿಗಿಂತ ಹೆಚ್ಚಿನ ಸಮಯ ಆಕೆಯ ಜೀವಕೋಶಗಳು ಬದುಕಿವೆ.
ಆದರೆ ಹೆನ್ರಿಟಾ ಲ್ಯಾಕ್ಸ್ ಕುಟುಂಬದವರಿಗೆ ವೈದ್ಯಕೀಯ ಜಗತ್ತಿನಲ್ಲಿ ತಮ್ಮ ತಾಯಿಯ ಕ್ಯಾನ್ಸರ್‌ಯುಕ್ತ ಜೀವಕೋಶಗಳು ನಡೆಸುತ್ತಿರುವ ಕ್ರಾಂತಿಯ ಅರಿವೇ ಇರಲಿಲ್ಲ. ಈ ವ್ಯವಹಾರದಲ್ಲಿ ಅವರಿಗೆ ಚಿಕ್ಕಾಸೂ ಸಿಗಲಿಲ್ಲ. ಅವರು ಅತ್ಯಂತ ಬಡತನದಲ್ಲಿ ಶಿಕ್ಷಣವಿಲ್ಲದೆ, ಆರೋಗ್ಯ ವಿಮೆಯಿಲ್ಲದೆ ನರಳುತ್ತಿದ್ದರು. ತಮ್ಮ ತಾಯಿ ಸತ್ತ ಇಪ್ಪತ್ತು ವರ್ಷಗಳ ನಂತರವೂ ಆಕೆಯ ಜೀವಕೋಶಗಳು ಇನ್ನೂ ಜೀವಂತವಿವೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ. ಕೊನೆಗೆ ಆ ವಿಷಯ ತಿಳಿದದ್ದೂ ಆಕಸ್ಮಿಕವಾಗಿ. ಹೆನ್ರಿಟಾ ಲ್ಯಾಕ್ಸಳ ಸೊಸೆ ಒಮ್ಮೆ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾಗ ಆಕೆಯ ಹೆಸರಿನಲ್ಲಿನ `ಲ್ಯಾಕ್ಸ್' ಪದ ನೋಡಿದ ಅಲ್ಲಿನ ಸಂಶೋಧಕನೊಬ್ಬ ತಾನು `ಹೆನ್ರಿಟಾ ಲ್ಯಾಕ್ಸ್ ಎಂಬ ಹೆಂಗಸಿನಿಂದ ಪಡೆದ ಜೀವಕೋಶ'ಗಳ ಮೇಲೆ ಸಂಶೋಧನೆ ನಡೆಸುತ್ತಿರುವುದಾಗಿ ತಿಳಿಸಿದ. ಲ್ಯಾಕ್ಸ್ ಕುಟುಂಬದ ಬಗೆಗೆ ಹೊರಜಗತ್ತಿಗೆ ತಿಳಿದ ನಂತರ ಹಲವಾರು ವೈದ್ಯರು, ವಿಜ್ಞಾನಿಗಳು ಹೀಲಾ ಜೀವಕೋಶಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಆ ಕುಟುಂಬದವರನ್ನು ಸಹ ಬೇರೇನೋ ನೆಪ ಹೇಳಿ ಪ್ರಯೋಗಾಲಯಗಳಿಗೆ ಕರೆಸಿ ಪರೀಕ್ಷೆಗಳನ್ನು ನಡೆಸತೊಡಗಿದರು.
ಕಳೆದ ಅರವತ್ತು ವರ್ಷಗಳಿಂದ ಸತತವಾಗಿ ವೃದ್ಧಿಯಾಗುತ್ತಿರುವ ಹೀಲಾ ಜೀವಕೋಶಗಳಲ್ಲಿ ಉತ್ಪರಿವರ್ತನೆಯಾಗಿ (Mutation) ಅವು ಸ್ವಯಂ ಏಕಕೋಶಿಕ ಜೀವಿಗಳಾಗಿ ವಿಕಾಸ ಹೊಂದಿವೆ ಹಾಗೂ ಅವು ಈಗ ಮಾನವ ಜೀವಕೋಶಗಳಾಗಿಯೇ ಉಳಿದಿಲ್ಲ ಎನ್ನುವ ಗಾಳಿ ಸುದ್ಧಿ ಸಹ ವಿಜ್ಞಾನ ಜಗತ್ತಿನಲ್ಲಿ ಹಬ್ಬಿತ್ತು. ಲೀ ವ್ಯಾನ್ ವಾಲೆನ್ ಎಂಬ ವಿಜ್ಞಾನಿ ಹೀಲಾ ಜೀವಕೋಶಗಳು ಒಂದು ಹೊಸ ಪ್ರಭೇದವಾಗಿ ವಿಕಾಸಗೊಂಡಿದೆಯೆಂದು ಹೇಳಿ ಅದಕ್ಕೆ ಹೀಲಾಸೈಟಾನ್ ಗಾರ್ಟ್ಲೆರಿ ಎಂಬ ವೈಜ್ಞಾನಿಕ ಹೆಸರನ್ನು ಸಹ ಇರಿಸಿದ. ಆದರೆ ವಿಜ್ಞಾನಿಗಳು ಅದನ್ನು ಅಲ್ಲಗಳೆಯುತ್ತಾರೆ.
ಇಲ್ಲಿನ ವಿಪರ್ಯಾಸವೆಂದರೆ ನಮ್ಮದೇ ದೇಹದ ಜೀವಕೋಶಗಳ ಹಾಗೂ ಅಂಗಾಂಶಗಳ ಯಜಮಾನರು ನಾವು ಅಲ್ಲದಿರುವುದು- ಅವು ನಮ್ಮ ದೇಹದಲ್ಲಿರುವವರೆಗೂ ಅವು ನಮ್ಮವು, ಆದರೆ ದೇಹದಿಂದ ಹೊರಗೆ ತೆಗೆದನಂತರ ಅವುಗಳ ಮೇಲೆ ನಮ್ಮ ಯಾವುದೇ ಹಕ್ಕಿಲ್ಲದಿರುವುದು. 1980ರಲ್ಲಿ ವೈದ್ಯನೊಬ್ಬ ಜಾನ್ ಮೂರ್ ಎಂಬ ರೋಗಿಯ ದೇಹದಿಂದ ಕ್ಯಾನ್ಸರ್‌ಯುಕ್ತ ಗುಲ್ಮವನ್ನು ತೆಗೆದು ಅವುಗಳಿಂದ ಹೊಸ ಜೀವಕೋಶಗಳ ಸಾಲನ್ನು ಅಭಿವೃದ್ಧಿಪಡಿಸಿ ಜಾನ್ ಮೂರ್‌ನ ಅರಿವಿಗೇ ಬರದಂತೆ ಅದನ್ನು ಪೇಟೆಂಟ್ ಮಾಡಿದ. ಆ ಜೀವಕೋಶಗಳ ಮೌಲ್ಯ ಮೂರು ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದ್ದಿತು. ಕೊನೆಗೆ ಈ ವಿಷಯ ತಿಳಿದ ಮೂರ್ ತಮ್ಮ ದೇಹದ ಅಂಗಾಂಶಗಳ ಮೇಲೆ ಅವರವರಿಗೆ ಹಕ್ಕಿರುತ್ತದೆಯೆಂದು ಹೇಳಿ ನ್ಯಾಯಾಲಯದಲ್ಲಿ ದಾವೆಯೊಂದನ್ನು ಹೂಡಿದ. ಮೊದಲ ನ್ಯಾಯಾಲಯದಲ್ಲಿ ತೀರ್ಪು ಆತನ ಕಡೆಗಿತ್ತಾದರೂ ಕ್ಯಾಲಿಫೋರ್ನಿಯಾದ ಉಚ್ಚ ನ್ಯಾಯಾಲಯ ಆ ತೀರ್ಪನ್ನು ತಿರಸ್ಕರಿಸಿ ಜೀವಕೋಶಗಳ ಸಾಲನ್ನು ವೈದ್ಯ ತನ್ನ `ನಾವೀನ್ಯ ಶ್ರಮ'ದಿಂದ `ರೂಪಾಂತರಿಸಿದ್ದಾನೆ' ಎಂದೂ ಹಾಗೂ ದೇಹದಿಂದ ಹೊರತೆಗೆದ ಅಂಗಾಂಶ `ಬರೇ ಒಂದು ವೈದ್ಯಕೀಯ ತ್ಯಾಜ್ಯ ವಸ್ತು'ವೆಂದು ಹೇಳಿ ಅದರ ಮೇಲೆ ಆ ರೋಗಿಗೆ ಯಾವುದೇ ಹಕ್ಕಿಲ್ಲವೆಂದು ತೀರ್ಪು ನೀಡಿತು. ಆದರೆ ನ್ಯಾಯಬದ್ಧವಾಗಿರುವುದೆಲ್ಲವೂ ನೈತಿಕವಾಗಿ ಬದ್ಧವಾಗಿರುವಂತಹುದೇ ಎಂಬ ಪ್ರಶ್ನೆ ಕಾಡದೇ ಇರುವುದಿಲ್ಲ.
ರೋಗಿಗಳ ಅಥವಾ ಅವರ ಕುಟುಂಬದವರ ಸಮ್ಮತಿಯಿಲ್ಲದೆ ತೆಗೆದ ಅಂಗಾಂಶ ಅಥವಾ ರಕ್ತದ ಮಾದರಿಗಳನ್ನು ಸಂಗ್ರಹಿಸಿಡುತ್ತಿದ್ದ ಆಸ್ಪತ್ರೆಯ ಮೇಲೆ ಟೆಕ್ಸಾಸ್‌ನ ನಾಗರಿಕ ಹಕ್ಕುಗಳ ಪ್ರಾಯೋಜನೆಯು ದಾವೆ ಹೂಡಿ ಅದರಲ್ಲಿ ಗೆದ್ದಿತು ಸಹ. ನ್ಯಾಯಾಲಯದ ತೀರ್ಪಿನಂತೆ ಆ ರೀತಿ ಸಂಗ್ರಹಿಸಿದ್ದ ರಕ್ತದ ಮಾದರಿಗಳೆಲ್ಲವನ್ನೂ ನಾಶಪಡಿಸಲಾಯಿತು. ಹಾಗಾಗಿ ಈಗ ಆಸ್ಪತ್ರೆಗೆ ಸೇರುವಾಗಲೇ ಅರ್ಜಿಯಲ್ಲಿ ಆ ರೀತಿಯ ಸಮ್ಮತಿಗೆ ಸಹಿ ಪಡೆದಿರುತ್ತಾರೆ. ಆದರೆ ಅವುಗಳನ್ನು ಎಷ್ಟು ಜನ ಓದಿ ಸಮ್ಮತಿ ನೀಡಿರುತ್ತಾರೆ ಎಂಬುದು ಪ್ರಶ್ನಾರ್ಹ. 1950ರ ಸಮಯದಲ್ಲಿ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯ ವರ್ಣಭೇದ ತಾರತಮ್ಯ ಎಷ್ಟು ತೀವ್ರವಾಗಿತ್ತೆಂದರೆ (ಹೆನ್ರಿಟಾ ಕರಿಯರಿಗೆಂದೇ ಪ್ರತ್ಯೇಕವಾಗಿರಿಸಿದ ವಾರ್ಡ್‌ನಲ್ಲಿದ್ದಳು) ಅನುಮತಿ ಕೇಳಿದ್ದರೂ ಹೆನ್ರಿಟಾ ಬಹುಶಃ ತನ್ನ ಅಂಗಾಂಶ ನೀಡಲು ಸಮ್ಮತಿಸುತ್ತಿರಲಿಲ್ಲ ಎಂದು ಸ್ಕ್ಲೂಟ್ ಹೇಳುತ್ತಾರೆ.
ಈ ರೀತಿ ಪ್ರತಿಯೊಂದಕ್ಕೂ ಮಾಹಿತಿ ನೀಡುತ್ತಾ, ಸಮ್ಮತಿ ಪಡೆಯುತ್ತಾ ಹೋದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ, ಸಂಶೋಧನೆಗಳ ಪ್ರಗತಿ ಸಾಧ್ಯವಾಗುವುದಿಲ್ಲ ಎನ್ನುವುದು ಹಲವಾರು ಸಂಶೋಧಕರ ಅನಿಸಿಕೆ. ಆ ರೀತಿ ಹೆನ್ರಿಟಾಳ ಅನುಮತಿಗಾಗಿ ಕಾದು ನಿಂತಿದ್ದಲ್ಲಿ ಪೋಲಿಯೋ ಲಸಿಕೆ ಬರುವುದು ಇನ್ನಷ್ಟು ವರ್ಷಗಳು ತಡವಾಗುತ್ತಿತ್ತು ಎನ್ನುತ್ತಾರೆ ಅವರು. ಆದರೆ ಹೆನ್ರಿಟಾ ಲ್ಯಾಕ್ಸಳ ವಿಷಯದಲ್ಲಿ ಆಕೆಯ ಕುಟುಂಬದವರಿಗೆ ಹೀಲಾ ಜೀವಕೋಶಗಳ ವಿಷಯವೇ ತಿಳಿದಿರಲಿಲ್ಲ ಎಂಬುದು ಬಹಳ ಮುಖ್ಯವಾದುದು. ವೈಜ್ಞಾನಿಕ ಸಮುದಾಯ ಅವರನ್ನು ಕಡೆಗಣಿಸಿ ಸಂಶೋಧನೆಯ ಲಾಭಗಳನ್ನು ಬೃಹತ್ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿತ್ತು. ವಿಜ್ಞಾನ ಮತ್ತು ಸಂಶೋಧನೆಗಳು ಮುಕ್ತವಾಗಿರಬೇಕು ಹಾಗೂ ಪ್ರಾಮಾಣಿಕವಾಗಿರಬೇಕು ಎನ್ನುತ್ತಾರೆ ರೆಬೆಕ್ಕಾ ಸ್ಕ್ಲೂಟ್. ಹೆನ್ರಿಟಾಳ ಮಗಳಾದ ಡೆಬೊರಾ, `ನಾನು ಸತ್ಯವನ್ನು ಹೇಳುತ್ತೇನೆ, ನನಗೆ ವಿಜ್ಞಾನದ ಬಗ್ಗೆ ಬೇಸರವಿಲ್ಲ, ಏಕೆಂದರೆ ಅದು ಜನರಿಗೆ ಸಹಾಯ ಮಾಡುತ್ತಿದೆ. ವಿಜ್ಞಾನವಿಲ್ಲದಿದ್ದಲ್ಲಿ ನನ್ನ ಬದುಕು ದುಸ್ತರವಾಗುತ್ತಿತ್ತು... ಹಾಗೆಯೇ ನಾನು ಸುಳ್ಳನ್ನು ಸಹ ಹೇಳುವುದಿಲ್ಲ, ನನಗೆ ಆರೋಗ್ಯ ವಿಮೆಯೂ ಬೇಕು, ಏಕೆಂದರೆ ನನ್ನ ತಾಯಿಯ ಜೀವಕೋಶಗಳು ಯಾವ ಔಷಧಗಳನ್ನು ಕಂಡುಹಿಡಿಯಲು ಸಹಾಯಮಾಡಿದವೋ ಆ ಔಷಧಗಳನ್ನು ಕೊಳ್ಳಲು ನಾನು ಪ್ರತಿ ತಿಂಗಳು ಹಣವನ್ನು ಖರ್ಚುಮಾಡುವುದು ನನಗೆ ಕಷ್ಟಕರವಾಗುತ್ತದೆ' ಎಂದಿದ್ದಾಳೆ.
ಹೀಲಾ ಜೀವಕೋಶದ ಮೇಲಿನ ಅಧ್ಯಯನಗಳು- ಕೆಲವು ಮೈಲಿಗಲ್ಲುಗಳು:
1951: ಹೆನ್ರಿಟಾ ಲ್ಯಾಕ್ಸಳಿಂದ ಅವಳ ಅನುಮತಿಯಿಲ್ಲದೆ ಆಕೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಅಂಗಾಂಶವನ್ನು ತೆಗೆದು ಅದನ್ನು ಪ್ರಯೋಗಾಲಯದಲ್ಲಿ ವೃದ್ಧಿಸಿ `ಹೀಲಾ' ಜೀವಕೋಶಗಳನ್ನು ಅಭವೃದ್ಧಿಪಡಿಸಲಾಯಿತು.
1952: * ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳಿಗೆ ಮಂಗನಬಾವು, ದಡಾರ, ಹರ್ಪೀಸ್ ಮುಂತಾದ ವೈರಸ್ ರೋಗಕಾರಕಗಳನ್ನು ಸೋಂಕುಗೊಳಿಸಿದರು. ವೈರಾಲಜಿಯ ಆಧುನಿಕ ಕ್ಷೇತ್ರ ಉಗಮವಾಯಿತು. ಇದರಿಂದಾಗಿ ಲಸಿಕೆಗಳು, ವೈರಸ್ ಪ್ರತಿರೋಧಕ ಚಿಕಿತ್ಸೆಗಳು, ಜೈವಿಕ ಅಸ್ತ್ರಗಳ ಅಭಿವೃದ್ಧಿ ಸಾಧ್ಯವಾಯಿತು.
* ಹೀಲಾ ಜೀವಕೋಶಗಳು ಪೋಲಿಯೋ ಕಾಯಿಲೆಗೆ ತುತ್ತಾಗುತ್ತವೆ ಎಂಬುದನ್ನು ಕಂಡುಕೊಂಡ ಸಂಶೋಧಕರು ಬೃಹತ್ ಲಸಿಕೆ ಕ್ಷೇತ್ರ ಅಧ್ಯಯನ ಪ್ರಾರಂಭಿಸಿದರು.
* ಬೃಹತ್ ಪ್ರಮಾಣದಲ್ಲಿ ಮಾನವ ಜೀವಕೋಶಗಳನ್ನು ವೃದ್ಧಿಸುವ ತಂತ್ರಜ್ಞಾನಕ್ಕಾಗಿ ಹಾಗೂ ಅದರಲ್ಲಿ ಬಳಸಲಾಗುವ ಗಾಜಿನ ಸ್ಲೈಡ್ ಮತ್ತು ಪಾತ್ರೆಗಳನ್ನು ಪರೀಕ್ಷಿಸಲು ಹೀಲಾ ಜೀವಕೋಶಗಳನ್ನು ಬಳಸಲಾಯಿತು. ಇದರಿಂದಾಗಿ ಬಯಲಾಜಿಕಲ್ ಸಪ್ಲೈಸ್ ಕೈಗಾರಿಕೋದ್ಯಮಕ್ಕೆ ಸಹಾಯವಾಯಿತು.
* ಹೀಲಾ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಗಳು ಜೀವಕೋಶಗಳನ್ನು ಸಾಧಾರಣ ಅಂಚೆಯಲ್ಲಿ ಇತರರಿಗೆ ಕಳುಹಿಸಿಕೊಡುವ ವಿಧಾನ ಕಂಡುಕೊಂಡರು. ಅದಕ್ಕೆ ಮೊದಲು ಅವುಗಳನ್ನು ಶೀತಲೀಕರಿಸಿ ವಿಮಾನಗಳಲ್ಲಿ ಕಳುಹಿಸಿಕೊಡಬೇಕಾಗಿದ್ದಿತು.
1953: ಹೀಲಾ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಯೊಬ್ಬರು ಹೀಮೋಟಾಕ್ಸಿಲಿನ್ ಎಂಬ ಬಣ್ಣ ಜೀವಕೋಶದ ವರ್ಣತಂತುಗಳನ್ನು ಕಾಣುವಂತೆ ಮಾಡುತ್ತದೆ ಎಂಬುದನ್ನು ಕಂಡುಕೊಂಡರು. ಇದರ ಪರಿಣಾಮವಾಗಿ ಡೌನ್ ಸಿಂಡ್ರೋಮ್‌ನಂತಹ ಕಾಯಿಲೆಗಳ ಆನುವಂಶಿಕ ಸಂಬಂಧಗಳನ್ನು ಕಂಡುಕೊಳ್ಳಲು, ಆನುವಂಶಿಕ ರೋಗಗಳ ತಪಾಸಣೆ ಹಾಗೂ ಮಗು ಗರ್ಭದಲ್ಲಿರುವಾಗಲೇ ಆಮ್ನಿಯೋಸೆಂಟೆಸಿಸ್ ಮೂಲಕ ಆನುವಂಶಿಕ ರೋಗಗಳ ಪರೀಕ್ಷೆ ಮುಂತಾದುವುಗಳು ಸಾಧ್ಯವಾದವು.
1954: ಹೀಲಾ ಜೀವಕೋಶಗಳು ಅತ್ಯಂತ ಬಲಿಷ್ಠವಾಗಿದ್ದುದರಿಂದ ಅಂಗಾಂಶದಲ್ಲಿನ ಒಂದೇ ಒಂದು ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ವೃದ್ಧಿಸಿ ಒಂದು ಪ್ರತ್ಯೇಕ ಜೀವಕೋಶ ಸಾಲನ್ನೇ ನಿರ್ಮಿಸುವುದು ಸಾಧ್ಯವಾಯಿತು. ಒಂದು ಪ್ರತ್ಯೇಕ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ಜೀವಂತವಾಗಿರಿಸುವುದೇ ಕ್ಲೋನಿಂಗ್ ಮತ್ತು ಪ್ರನಾಳ ನಳಿಕೆ ಫಲವಂತಿಕೆಯ ಮೂಲಭೂತ ತಂತ್ರವಾಗಿದೆ. ಇದರಿಂದಾಗಿ ಪ್ರಾಣಿಗಳ ಕ್ಲೋನಿಂಗ್, ಜೀನ್ ಥೆರಪಿ, ಪ್ರನಾಳ ನಳಿಕೆ ಫಲವಂತಿಕೆ ಮತ್ತು ಸ್ಟೆಮ್ ಜೀವಕೋಶಗಳ ಪ್ರತ್ಯೇಕಿಸುವಿಕೆ ಸಾಧ್ಯವಾಗಿದೆ.
ಇದೇ ವರ್ಷ ಮೈಕ್ರೋಬಯಲಾಜಿಕಲ್ಸ್ ಅಸೋಸಿಯೇಟ್ಸ್ ಕಂಪೆನಿಯು ಹೀಲಾ ಜೀವಕೋಶಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟಮಾಡಲು ಪ್ರಾರಂಭಿಸಿತು.
1960: ಸೋವಿಯತ್ ಅಂತರಿಕ್ಷ ನೌಕೆಯಲ್ಲಿ ಹೀಲಾ ಜೀವಕೋಶಗಳು ಯಾವೊಬ್ಬ ಮಾನವನೂ ಅಂತರಿಕ್ಷಕ್ಕೆ ಕಾಲಿರಿಸುವ ಮೊದಲು ಮಾನವನ ಜೀವಕೋಶಗಳ ಮೇಲೆ ಶೂನ್ಯ ಗುರುತ್ವಾಕರ್ಷಣೆಯ ಪ್ರಭಾವದ ಅಧ್ಯಯನಕ್ಕಾಗಿ ಅಂತರಿಕ್ಷಕ್ಕೆ ಹೋಗಿಬಂದವು. ಅದಾದ ನಂತರ ನ್ಯಾಸಾ ಸಹ ತನ್ನ ಮೊಟ್ಟಮೊದಲ ಮಾನವ ಅಂತರಿಕ್ಷ ಯಾನದಲ್ಲಿ ಹೀಲಾ ಜೀವಕೋಶಗಳನ್ನೂ ಸೇರಿಸಿದ್ದರು ಹಾಗೂ ಅಂತರಿಕ್ಷದಲ್ಲಿ ಕ್ಯಾನ್ಸರ್ ಜೀವಕೋಶಗಳು ವೇಗವಾಗಿ ವೃದ್ಧಿಸುತ್ತವೆ ಎಂಬುದನ್ನು ಕಂಡುಕೊಂಡರು.
1965: ಹೀಲಾ ಜೀವಕೋಶಗಳನ್ನು ಇಲಿಯ ಜೀವಕೋಶಗಳೊಂದಿಗೆ ಸಂಯೋಜಿಸಿ ಮೊಟ್ಟಮೊದಲ ಅಂತರಪ್ರಭೇದ ಹೈಬ್ರಿಡ್ ನಿರ್ಮಿಸಲಾಯಿತು. ಇದರಿಂದಾಗಿ ಮಾನವ ವಂಶವಾಹಿಗಳ ಮ್ಯಾಪಿಂಗ್ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ರಕ್ತದ ವಿಧದ ಗುರುತಿಸುವಿಕೆ, ಕ್ಯಾನ್ಸರ್ ಔಷಧ ಹರ್ಸೆಪ್ಟಿನ್‌ನ ಅಭಿವೃದ್ಧಿ ಸಾಧ್ಯವಾಯಿತು.
1966: ಕ್ಯಾನ್ಸರ್ ಹೇಗೆ ಹರಡುತ್ತದೆಂಬುದನ್ನು ಪರೀಕ್ಷಿಸಲು ವಿಜ್ಞಾನಿಯೊಬ್ಬ ಹಲವಾರು ವ್ಯಕ್ತಿಗಳಿಗೆ ಅವರಿಗೆ ತಿಳಿಸದೆಯೇ ಹೀಲಾ ಜೀವಕೋಶಗಳ ಚುಚ್ಚುಮದ್ದನ್ನು ನೀಡಿದನಂತರ ರಾಷ್ಟ್ರಮಟ್ಟದ ತನಿಖೆ ನಡೆದು ಅದಾದನಂತರ ವೈದ್ಯಕೀಯ ಪರಿಶೀಲನಾ ಮಂಡಳಿಗಳು ಸ್ಥಾಪನೆಗೊಂಡವು ಹಾಗೂ ರೋಗಿಗಳಿಂದ ಸಮ್ಮತಿ ಪಡೆಯುವ ಪದ್ಧತಿ ಜಾರಿಗೆ ಬಂದಿತು.
1973: ರೋಗಕಾರಕ ಸಾಲ್ಮೊನೆಲ್ಲಾ ಸೂಕ್ಷ್ಮಜೀವಿಯ ಸೋಕುಕಾರಕತೆ ಮತ್ತು ಮಾನವ ಜೀವಕೋಶದೊಳಗಿನ ಅವುಗಳ ನಡತೆಯ ಬಗ್ಗೆ ಅಧ್ಯಯನಕ್ಕೆ ಹೀಲಾ ಜೀವಕೋಶಗಳನ್ನು ಬಳಸಲಾಯಿತು.
1984: ಮಾನವ ಪ್ಯಾಪಿಲ್ಲೋಮ ವೈರಸ್ ಕ್ಯಾನ್ಸರ್ ಉಂಟುಮಾಡುತ್ತದೆ ಎನ್ನುವುದನ್ನು ರುಜುವಾತು ಮಾಡಲು ಜರ್ಮನ್ ವಿಜ್ಞಾನಿಯೊಬ್ಬ ಹೀಲಾ ಜೀವಕೋಶಗಳನ್ನು ಬಳಸಿಕೊಂಡರು. ಅವರ ಈ ಆವಿಷ್ಕಾರಕ್ಕಾಗಿ ಅವರಿಗೆ ನೋಬೆಲ್ ಬಹುಮಾನ ಲಭಿಸಿತು.
ಆನಂತರ ಮಾನವ ಪ್ಯಾಪಿಲ್ಲೋಮ ವೈರಸ್ ಲಸಿಕೆಯನ್ನು ಕಂಡುಹಿಡಿಯಲಾಗಿದೆ.
1986: ಎಚ್.ಐ.ವಿ. ಅಥವಾ ಏಡ್ಸ್ ವೈರಸ್ ಸೋಂಕು ವಿಧಾನದ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳನ್ನು ಬಳಸಲಾಯಿತು.
1989: ಹೀಲಾ ಜೀವಕೋಶಗಳು ಟೆಲೋಮೆರೇಸ್ ಎಂಬ ಕಿಣ್ವವನ್ನು ಹೊಂದಿವೆ ಹಾಗೂ ಅದರಿಂದಾಗಿಯೇ ಅವುಗಳಿಗೆ ಸಾವಿಲ್ಲ ಎಂದು ಯೇಲ್ ಸಂಶೋಧಕನೊಬ್ಬ ಕಂಡುಹಿಡಿದ. ಅದರಿಂದಾಗಿ ದೀರ್ಘಾಯಸ್ಸಿನ ಬಗೆಗಿನ ಸಂಶೋಧನೆಗಳು ಪ್ರಾರಂಭವಾದವು ಹಾಗೂ ಕ್ಯಾನ್ಸರ್ ಚಿಕಿತ್ಸೆಗಾಗಿ ಟೆಲೋಮೆರೇಸ್ ಪ್ರತಿಬಂಧಕಗಳ ಸಂಶೋಧನೆ ಪ್ರಾರಂಭವಾಯಿತು.
1993: ಕ್ಷಯರೋಗ ಉಂಟುಮಾಡುವ ಬ್ಯಾಕ್ಟೀರಿಯಾಗಳ ಸೋಂಕು ಪ್ರಕ್ರಿಯೆಯ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳಿಗೆ ಸೋಂಕುಂಟುಮಾಡಿ ಅಧ್ಯಯನ ಮಾಡಲಾಯಿತು.
2005: ಹೀಲಾ ಜೀವಕೋಶಗಳ ಮೇಲೆ ಕಬ್ಬಿಣದ ನ್ಯಾನೊ ತಂತಿಗಳನ್ನು ಸೇರಿಸುವುದು ಮತ್ತು ಅವು ಹೇಗೆ ಸಿಲಿಕಾ ಆವೃತ ನ್ಯಾನೊ ಕಣಗಳನ್ನು ಹೇಗೆ ಹೀರಿಕೊಳ್ಳುತ್ತವೆ ಇವೇ ಮುಂತಾದ ನ್ಯಾನೊತಂತ್ರಜ್ಞಾನದ ಪ್ರಯೋಗಗಳು ಆರಂಭವಾದವು.
-ಡಾ. ಜೆ.ಬಾಲಕೃಷ್ಣ
ಇ- ಮೇಲ್: j.balakrishna@gmail.com

3 ಕಾಮೆಂಟ್‌ಗಳು:

ಮಹೇಶ ಹೇಳಿದರು...

ತುಂಬಾ ಕುತೂಹಲಕಾರಿಯಾಗಿದೆ ಮತ್ತು ಆಶ್ಚರ್ಯಕರವಾಗಿದೆ. ಅವಳ ಅಂಗಾಂಶದ ತುಣುಕುಗಳು ಹೇಗೆ ಬೇರೆ ಬೇರೆ ರೀತಿಯ ಕ್ಯಾನ್ಸರ್ ಮತ್ತು ರೋಗಗಳಲ್ಲಿ ಪ್ರಯೋಗಕ್ಕೆ, ಬಳಕೆಗೆ ಬಂದವು...

H.S. Raghavendra Rao naadaleele ಹೇಳಿದರು...

ನಮಸ್ಕಾರ. ಕೆಲವು ದಿನಗಳ ಹಿಂದೆ ತಾನೇ 'The Immortal Story of Henrietta Lacks' Odi mugisida nanage nimma lekhana Odi rOmAnchanavaayitu. kannadadalli aa pusatkada bagge baravanige ideyeMdu. sADhyvAdare aa pustakavannE kannadakke tarabEku.
H.S. Raghavendra Rao

ಮಂಜಿನ ಹನಿ ಹೇಳಿದರು...

ಕುತೂಹಲಕಾರಿ ವೈಜ್ಞಾನಿಕ ಬರಹ ಸರ್. ಓದಿ ರೋಮಾಂಚಿತನಾದೆ, ಹೆನ್ರಿಟಾ ಲ್ಯಾಕ್ಸ್ ಮತ್ತು ಹೀಲಾ ಜೀವಕೋಶಗಳ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಹುಟ್ಟಿದೆ.

- ಪ್ರಸಾದ್, ಮೈಸೂರು.