ಶನಿವಾರ, ಜೂನ್ 16, 2012
ಗುರುವಾರ, ಜೂನ್ 14, 2012
ಕತೆ ಹೇಳದ ಶಿಲೆಗಳು- ಸ್ಟೋನ್‌ಹೆಂಜ್
ಈ ವಾರದ `ಸುಧಾ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಚಿತ್ರ ಲೇಖನ
ಐದು ಸಾವಿರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಲೋಹಗಳೇ ಇಲ್ಲದ ಸಮಯದಲ್ಲಿ ಸ್ಟೋನ್‌ಹೆಂಜ್ ನಿರ್ಮಾಣಕ್ಕೆ ಕುಳಿತೋಡಲು ಬಳಸಲಾಗಿರುವ ಜಿಂಕೆಯ ಕವಲು ಕೊಂಬುಗಳು ಹಾಗೂ ಅದಕ್ಕೂ ಹಿಂದಿನ ಸಮಯದ ಬಹುಶಃ ಬಲಿನೀಡಿರಬಹುದಾದ ಎತ್ತಿನ ಕೆಳದವಡೆ
ಅಮೀಸ್‌ಬರಿಯ ಬಿಲ್ಲುಗಾರ
(Photos courtesy: Wessex Archaeology)
2002ರಲ್ಲಿ ಕಂಡುಹಿಡಿಯಲಾದ ಅಮೀಸ್‌ಬರಿ ಬಿಲ್ಲುಗಾರನ ಸಮಾಧಿ.
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಚಿನ್ನದ ಕಿವಿಯೋಲೆ ಅಥವಾ ಕೂದಲು ಸಿಂಗರಿಸುವ ಆಭರಣಗಳು. ಇಡೀ ಬ್ರಿಟನ್ನಿನಲ್ಲೇ ದೊರಕಿರುವ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳು ಇವಾಗಿವೆ
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಫ್ಲಿಂಟ್ ಶಿಲೆಯ ಬಾಣದ ಮೊನೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬೀಕರ್ ಆಕಾರದ ಮಡಕೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ತಾಮ್ರದ ಚಾಕುಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬಿಲ್ಲುಗಾರರ ಮುಷ್ಠಿ ರಕ್ಷಕ ಪಟ್ಟಿಗಳು
ಡಾ.ಜೆ.ಬಾಲಕೃಷ್ಣ
j.balakrishna@gmail.com
ಕತೆ ಹೇಳದ ಶಿಲೆಗಳು- ಸ್ಟೋನ್‌ಹೆಂಜ್
ಬಾತ್ ನಗರದ ರೋಮನ್ನರು ನಿರ್ಮಿಸಿದ ಬಿಸಿನೀರ ‘ಸ್ನಾನದಮನೆ’ಯಿಂದ ನಮ್ಮ ಪಯಣ ಮುಂದುವರಿದದ್ದು ಸ್ಟೋನ್‌ಹೆಂಜ್ ದಿಕ್ಕಿನೆಡೆಗೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಅದರ ಬಗ್ಗೆ ಓದಿದಾಗಿನಿಂದಲೂ ಅದರ ನಿಗೂಢತೆಯ ಬೆರಗು ನನ್ನಿಂದ ದೂರವಾಗಿರಲಿಲ್ಲ. ಒಂದಲ್ಲ ಒಂದು ದಿನ ನಾನೇ ಸ್ವತಃ ಅದನ್ನು ನೋಡುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಸುಮಾರು ಐದು ಸಾವಿರ ವರ್ಷಗಳ ಅಥವಾ ಅದಕ್ಕಿಂತಲೂ ಹಳೆಯದಾದ ಈ ಪುರಾತನ ಮಾನವ ನಿರ್ಮಿತ ರಚನೆ ಶತಶತಮಾನಗಳಿಂದ ನಿಬ್ಬೆರಗಿನ ವಸ್ತುವಾಗಿದೆ. ಸ್ಟೋನ್‌ಹೆಂಜ್ ಒಬ್ಬ ವ್ಯಕ್ತಿಯ ಅಥವಾ ಸಮುದಾಯದ ಸ್ಮಶಾನವೇ? ಖಗೋಳ ಅಧ್ಯಯನದ ರಚನೆಯೆ? ಬಲಿ ನೀಡುತ್ತಿದ್ದ ಒಂದು ಆರಾಧನಾ ಸ್ಥಳವೇ? ಯಾವುದೇ ಲೋಹದ ಆವಿಷ್ಕಾರವಾಗಿರದ ಸಮಯದ ಆದಿ ಮಾನವ ಅಷ್ಟೊಂದು ಬೃಹತ್ ಶಿಲಾರಚನೆಯನ್ನು ಹೇಗೆ ನಿರ್ಮಿಸಿದ? ಅವುಗಳ ನಿರ್ಮಾಣಕ್ಕೆ ಬೃಹತ್ ಶಿಲೆಗಳನ್ನು ನೂರಾರು ಮೈಲುಗಳ ದೂರದಿಂದ ಹೇಗೆ ಸಾಗಿಸಿದ? ಅವುಗಳ ನಿರ್ಮಾಣದಲ್ಲಿ ಎಷ್ಟು ಜನ ತೊಡಗಿರಬಹುದು ಎಷ್ಟು ತಲೆಮಾರುಗಳು ಅವುಗಳನ್ನು ನಿರ್ಮಿಸಿರಬಹುದು? ಅಥವಾ ಕೆಲವರು ಹೇಳುವಂತೆ ಅದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿದವೆ? ಅದು ಅವರು ಬಂದಿಳಿಯುವ ನಿಲ್ದಾಣವಾಗಿತ್ತೆ? ಅದರ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಅದನ್ನು ಅನ್ಯಗ್ರಹ ಜೀವಿಗಳು ನಿರ್ಮಿಸಿರುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಅದೇನೇ ಆಗಿರಲಿ, ಅದನ್ನು ನಿರ್ಮಿಸಿದ ಮಾನವನಿಗೆ ಅದನ್ನು ಏಕೆ ನಿರ್ಮಿಸುತ್ತಿದ್ದೇನೆ ಎನ್ನುವ ಸ್ಪಷ್ಟ ಕಲ್ಪನೆ ಖಂಡಿತಾ ಇತ್ತು ಎನ್ನುವುದು ನಿಜ.
ಆದರೆ, ಕಲ್ಲು ಮಾತನಾಡುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೆ? ನಾವು ಸ್ಟೋನ್‌ಹೆಂಜ್ ತಲುಪಿದಾಗ ಸಂಜೆ ಸುಮಾರು ಐದು ಗಂಟೆಯಾಗಿತ್ತು. ದಕ್ಷಿಣ ಇಂಗ್ಲೆಂಡಿನ ಸ್ಯಾಲಿಸ್‌ಬರಿ ಬಯಲುಸೀಮೆಯ ದೊಡ್ಡ ಬಯಲಿನಲ್ಲಿರುವ ಸ್ಟೋನ್‌ಹೆಂಜ್ ಈಗ ಒಂದು ‘ಇಂಗ್ಲಿಷ್ ಹೆರಿಟೇಜ್’ ಸ್ಥಾನವಾಗಿದ್ದು ಅಲ್ಲಿ ಯಾವುದೇ ಶಾಶ್ವತ ಸಿಮೆಂಟ್ ಕಟ್ಟಡಗಳಿಲ್ಲ. ಅಲ್ಲಿನ ಸ್ಥಳ ಮತ್ತು ರಚನೆಯನ್ನು ವಿವರಿಸಲು ಅಥವಾ ಗೈಡ್ ಮಾಡಲು ಯಾರೂ ಬರುವುದಿಲ್ಲ. ಬದಲಿಗೆ ಎಲ್ಲರಿಗೂ ಉಚಿತವಾಗಿ ‘ಆಡಿಯೋ ಗೈಡ್’ ಕೊಡುತ್ತಾರೆ. ಅದು ಇಂಗ್ಲಿಷ್ ಮತ್ತು ಹಲವಾರು ಯೂರೋಪಿಯನ್ ಭಾಷೆಗಳಲ್ಲಿ ಸ್ಟೋನ್‌ಹೆಂಜ್‌ನ ವಿವರಣೆ ನೀಡುತ್ತದೆ. ಸ್ಟೋನ್‌ಹೆಂಜ್ ಸುತ್ತಲೂ ಅಲ್ಲಲ್ಲಿ ಸಂಖ್ಯೆ ಮತ್ತು ಹೆಡ್‌ಫೋನ್ ಚಿತ್ರವಿದ್ದು ಆ ಸ್ಥಳದಲ್ಲಿ ನಿಂತು ಆ ಸಂಖ್ಯೆಯನ್ನು ನಿಮ್ಮ ಆಡಿಯೋ ಗೈಡ್‌ನಲ್ಲಿ ಒತ್ತಿದರೆ ಅದು ಆ ಸ್ಥಳದ ವಿವರಣೆ ಹೇಳುತ್ತದೆ. ಆ ವಿವರಣೆ ಎಷ್ಟು ಸ್ಪಷ್ಟವಾಗಿ ಮತ್ತು ನಿಖರವಾಗಿ ಇರುತ್ತದೆಂದರೆ ಯಾವುದೋ ವ್ಯಕ್ತಿ ನಿಮ್ಮೆದುರಿಗೆ ನಿಂತು ವಿವರಣೆ ನೀಡುವಂತಿರುತ್ತದೆ. ಆ ಸ್ಥಳದ ವಿವರಣೆ ಮುಗಿದ ತಕ್ಷಣ ಅದೇ ಮುನ್ನಡೆಯಲು ಹೇಳಿ ಕರೆದೊಯ್ಯುತ್ತದೆ.
ರೊಯ್ಯನೆ ಬೀಸುತ್ತಿದ್ದ ತಂಗಾಳಿ ವಾತಾವರಣವನ್ನು ನಿಗೂಢವಾಗಿಸಿತ್ತು. ಇದೇ ಸ್ಥಳದಲ್ಲಲ್ಲವೇ ಸಾವಿರಾರು ವರ್ಷಗಳ ಹಿಂದಿನ ಮಾನವ ನಡೆದಾಡಿದ್ದು? ಆ ಬೃಹತ್ ಶಿಲೆಗಳನ್ನು ಎಳೆದಾಡಿದ್ದು? ಇಲ್ಲಿಯೇ ಎಷ್ಟೋ ಜನರ ಸಮಾಧಿಗಳು ದೊರೆತಿವೆ. ಪ್ರೇತಾತ್ಮಗಳಲ್ಲಿ ನನಗೆ ನಂಬಿಕೆ ಇಲ್ಲದಿದ್ದರೂ ಒಂದರೆಕ್ಷಣ ಈ ಶಿಲಾರಚನೆಯನ್ನು ನಿರ್ಮಿಸಿದ ಮಾನವರ ಆತ್ಮಗಳು ನಮ್ಮನ್ನು ಗಮನಿಸುತ್ತಿರಬಹುದೆ ಎನ್ನಿಸಿತು.
ಮೊದಲ ನೋಟಕ್ಕೆ ಸ್ಟೋನ್‌ಹೆಂಜ್ ಏನೂ ಅನ್ನಿಸುವುದಿಲ್ಲ. ಯಾವುದೋ ಬಯಲಿನಲ್ಲಿ ಏನೋ ಕಲ್ಲುಗಳನ್ನು ತಂದು ನಿಲ್ಲಿಸಿದ್ದಾರೆ ಎನ್ನಿಸುತ್ತದೆ. ನೋಡನೋಡುತ್ತಿದ್ದಂತೆ ಶತಶತಮಾನಗಳಿಂದ ತನ್ನೆಲ್ಲ ನಿಗೂಢಗಳನ್ನು ಇಂದಿಗೂ ಬಿಟ್ಟುಕೊಡದ ಅದು ನಮ್ಮ ಬೆರಗನ್ನು ಅಪಹಾಸ್ಯ ಮಾಡುವಂತೆ ತೋರುತ್ತದೆ, ನಾಗರಿಕತೆಯ ಎಲ್ಲ ಹಂತಗಳನ್ನು ಕಂಡಿರುವ ಅದೊಂದು ನಿಗೂಢ ಕಾಲನೌಕೆಯಂತೆ ಭಾಸವಾಗುತ್ತದೆ.
ಸ್ಟೋನ್‌ಹೆಂಜ್ ನಿರ್ಮಿಸಿದ ಜನರು ಅದನ್ನು ಬೇಕಾಬಿಟ್ಟಿ ನಿರ್ಮಿಸಿಲ್ಲ. ಅವರು ಎಂಥದನ್ನೋ, ಹಿಂದೆಂದು ತಿಳಿದಿರದ ಹೊಸ ವಿಷಯವೊಂದನ್ನು, ಎಂಥದೋ ಸತ್ಯವೊಂದನ್ನು ಕಂಡುಕೊಂಡಿದ್ದರು. ಆ ಶಿಲಾರಚನೆಗಳು ನಮಗೆ ಬಿಟ್ಟುಕೊಡದ ನಿಗೂಢ ಅರ್ಥವನ್ನು ತಮ್ಮ ಒಡಲಲ್ಲಿ ಹುದುಗಿಸಿಕೊಂಡಿವೆ. ಆ ರಚನೆಗಳ ಅರ್ಥ ಏನಿರಬಹುದು? ಶತಶತಮಾನಗಳಿಂದ ಜನ ಅವುಗಳಿಗೆ ತಮ್ಮದೇ ವ್ಯಾಖ್ಯಾನಗಳನ್ನು ನೀಡುತ್ತಾ ಬಂದಿದ್ದಾರೆ. ಇಡೀ ಜಗತ್ತಿನಲ್ಲೇ ಅತಿ ಹೆಚ್ಚು ವ್ಯಾಖ್ಯಾನಗಳನ್ನು ಪಡೆದಿರುವ ಹಾಗೂ ಇನ್ನೂ ಪಡೆಯುತ್ತಿರುವ ಅತ್ಯಂತ ಪ್ರಾಚೀನ ಮಾನವ ನಿರ್ಮಿತ ರಚನೆ ಇದೇ ಆಗಿರಬಹುದು- ಇಂದಿಗೂ ಅದನ್ನು ನಿರ್ಮಿಸಿದವರು ಅದನ್ನು ಯಾವುದಕ್ಕಾಗಿ ನಿರ್ಮಿಸಿದರು ಎಂಬುದು ನಮಗೆ ತಿಳಿದಿಲ್ಲ. ಈ ಹಿಂದೆ ಪ್ರಾಕ್ತನ ಶಾಸ್ತ್ರಜ್ಞರು ಅದರ ಅಂಗುಲ ಅಂಗುಲವನ್ನೂ, ಅವುಗಳ ನೆರಳನ್ನೂ ಬಿಡದಂತೆ ಅಭ್ಯಸಿಸಿ ಅವುಗಳ ಅರ್ಥ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಅವುಗಳ ಮೇಲಿನ ಅಧ್ಯಯನಗಳು ಇಂದಿಗೂ ನಡೆಯುತ್ತಿವೆ. ಸುತ್ತಮುತ್ತಲ ಪ್ರದೇಶಗಳಲ್ಲೂ ಅಧ್ಯಯನಗಳು ನಡೆಯುತ್ತಿವೆ. ಹತ್ತಿರದಲ್ಲೇ ಒಂದು ಶಿಲಾಯುಗದ ಗ್ರಾಮಗಳ ಉಳಿಕೆಗಳು ದೊರೆತಿವೆ, ಸತ್ತವರನ್ನು ಹೂತಿಟ್ಟಿ ಸ್ಥಳಗಳಲ್ಲಿ ಅಸ್ಥಿಪಂಜರಗಳು ದೊರೆತಿವೆ, ಶಿಲೆಯ ಬಾಣದ ಮೊನೆಗಳು ದೊರೆತಿವೆ.
ಸ್ಟೋನ್‌ಹೆಂಜ್ ಪೂರ್ಣಗೊಂಡಾಗ ಹೀಗಿದ್ದಿರಬಹುದು- ಕಲಾವಿದನ ಕಲ್ಪನೆ
ಇಂಗ್ಲಿಷ್‌ನಲ್ಲಿ ‘ಹೆಂಜ್’ ಎಂದರೆ ಮಧ್ಯೆ ತಗ್ಗು ಇದ್ದು ಸುತ್ತಲೂ ಬದು ಅಥವಾ ಕಾಲುವೆಯಂತಹ ರಚನೆ ಇರುವುದು. ಆ ಅರ್ಥದಲ್ಲಿ ಸ್ಟೋನ್‌ಹೆಂಜ್ ಒಂದು ‘ಹೆಂಜ್’ ಅಲ್ಲವೇ ಅಲ್ಲ. ಅಲ್ಲಿ ವರ್ತುಲಾಕಾರದಲ್ಲಿ ಸುತ್ತಲೂ ಕಾಲುವೆಯಿದ್ದು ಮಧ್ಯೆ ಉಬ್ಬಿದ ಅಥವಾ ದಿಬ್ಬದಂತಹ ರಚನೆ ಇತ್ತು. ಈಗ ಜನರು, ಪ್ರಾಖ್ತನ ತಜ್ಞರು ಓಡಾಡಿ ಅದು ಸಮತಟ್ಟಾಗಿದೆ. ಶಿಲಾಯುಗದ ವೃತ್ತಾಕಾರದ ಕಾಲುವೆಯಂತಹ ರಚನೆಗಳು, ದಿಬ್ಬಗಳು, ವೃತ್ತಾಕಾರದ ಮರದ ರಚನೆಗಳು, ಕಲ್ಲಿನ ವೃತ್ತಾಕಾರದ ಮತ್ತು ಕುದುರೆ ಲಾಳದ ಆಕಾರದ ರಚನೆಗಳು ಬ್ರಿಟನ್ನಿನಲ್ಲೆಲ್ಲಾ ಕಂಡುಬಂದಿವೆ. ಸ್ಟೋನ್‌ಹೆಂಜ್ ತನ್ನ ವಿಕಾಸದ ಹಾದಿಯಲ್ಲಿ ಈ ಎಲ್ಲ ಹಂತಗಳನ್ನೂ ಹಾದುಬಂದಿದೆ. ಇಂದಿನ ಕಾಲಕ್ಕೆ ವಿಶಿಷ್ಟ ರಚನೆಯೆನ್ನಿಸುವ ಸ್ಟೋನ್‌ಹೆಂಜ್ ಬಹುಶಃ ಸುಮಾರು 5000 ವರ್ಷಗಳ ಹಿಂದೆ ತನ್ನದೇ ಸಮಯದಲ್ಲೂ ವಿಶಿಷ್ಟ ರಚನೆಯೇ ಆಗಿದ್ದಿರಬಹುದು. ಆ ಶಿಲಾರಚನೆ ನಿರ್ಮಾಣವಾಗಿ ಸುಮಾರು 5000 ವರ್ಷಗಳಾಗಿದ್ದಲ್ಲಿ ಅದು ಇರುವ ಸ್ಥಳದಲ್ಲಿ ಅದಕ್ಕಿಂತಲೂ ಮೊದಲು ಅದೇ ಸ್ಥಳದಲ್ಲಿ ಮರದ ರಚನೆಗಳಿದ್ದ ಕುರುಹುಗಳಿವೆ. ಆ ರಚನೆಗಳು ಅಲ್ಲಿನ ಜನರ ವಾಸವನ್ನು ಸುಮಾರು ಎಂಟು ಸಾವಿರ ವರ್ಷಕ್ಕೂ ಹಿಂದಕ್ಕೆ ಕೊಂಡೊಯ್ಯುತ್ತವೆ.
ಸ್ಟೋನ್‌ಹೆಂಜ್‌ನ ಬೃಹತ್ ನೀಲಶಿಲೆಗಳನ್ನು 240 ಕಿ.ಮೀ. ದೂರದಲ್ಲಿರುವ ವೇಲ್ಸ್‌ನ ಪ್ರೆಸಿಲಿ ಪರ್ವತಗಳ ಕ್ವಾರಿಗಳಿಂದ ಸಾಗಿಸಿ ತರಲಾಗಿದೆ. ಬಹುಪಾಲು ಆ ಶಿಲೆಗಳನ್ನು ಕ್ರಿ.ಪೂ.2500 ವರ್ಷಗಳಿಗೆ ಮೊದಲೇ ಸಾಗಿಸಿರಬೇಕು. ಇನ್ನೂರ ಐವತ್ತು ಮೈಲುಗಳ ದೂರದಿಂದ ಆ ಶಿಲೆಗಳನ್ನು ಆ ಕಾಲದಲ್ಲಿ ಹೇಗೆ ಸಾಗಿಸಿದರೆಂಬುದೇ ವಿಸ್ಮಯದ ವಿಷಯ. ಅದಾದನಂತರ ತಲಾ 40 ಟನ್‌ಗೂ ಹೆಚ್ಚು ತೂಕವಿರುವ ಸಾರ್ಸೆನ್ ಶಿಲೆಗಳೆಂದು ಕರೆಯಲ್ಪಡುವ ದೈತ್ಯ ಶಿಲೆಗಳನ್ನು 30 ಕಿ.ಮೀ. ದೂರದ ಮಾರ್ಲ್‌ಬರೋ ಡೌನ್‌ನಿಂದ ಸಾಗಿಸಿ ತಂದಿದ್ದಾರೆ. ಅವುಗಳ ಸಾಗಾಣಿಕೆಯನ್ನು ಏವಾನ್ ನದಿಯ ಮೂಲಕ ಮಾಡಿರಬಹುದೆಂಬುದು ತಜ್ಞರ ಊಹೆ. ಸ್ಟೋನ್‌ಹೆಂಜ್ ಒಂದು ರೀತಿಯಲ್ಲಿ ನಿರಂತರವಾಗಿ ವಿಕಾಸಗೊಂಡ ರಚನೆಯಾಗಿದೆ. ಕಾರ್ಬನ್ ಡೇಟಿಂಗ್ ಅನ್ವಯ ಸ್ಟೋನ್‌ಹೆಂಜ್‌ನ ಶಿಲಾರಚನೆಯ ಮೊದಲ ಹಂತದ ನಿರ್ಮಾಣ ಕಾರ್ಯ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಪ್ರಾರಂಭವಾಯಿತು ಹಾಗೂ ಕೊನೆಯ ಹಂತದ ನಿರ್ಮಾಣ ಕಾರ್ಯ ಸುಮಾರು ಮೂರು ಸಾವಿರದ ಮುನ್ನೂರು ವರ್ಷಗಳ ಹಿಂದೆ ನಡೆದಿದೆ. ಶಿಲಾರಚನೆಯ ನಿರ್ಮಾಣ ಕಾರ್ಯಕ್ಕೂ ಮೊದಲು ಅಲ್ಲಿ ಮರದ ರಚನೆಯಿದ್ದ ಗುರುತುಗಳಿವೆ. ಜಾನ್ ಆಬ್ರೆ (1626-1697) ಎಂಬ ಪ್ರಾಖ್ತನ ತಜ್ಞ ಮೊದಲಿಗೆ ಮರದ ಕಂಬಗಳನ್ನು ನೆಟ್ಟಿದ್ದ ಗುರುತುಗಳನ್ನು ಪತ್ತೆ ಹಚ್ಚಿದ್ದರಿಂದ ಆ ಗುರುತುಗಳಿಗೆ ‘ಆಬ್ರೆ ರಂಧ್ರಗಳು’ ಎಂಬ ಹೆಸರಿನಿಂದಲೇ ಕರೆಯಲಾಗುತ್ತದೆ. ಆ ರಂಧ್ರಗಳು ವೃತ್ತಾಕಾರದಲ್ಲಿ ಸ್ಟೋನ್‌ಹೆಂಜ್‌ನ ಸುತ್ತಲೂ ಇವೆ. ಶಿಲಾರಚನೆಗೂ ಮೊದಲು ಅಲ್ಲಿ ಮರದ ಕಂಬಗಳ ರಚನೆಯಿದ್ದು ಆ ಕಂಬಗಳು ಕ್ರಮೇಣ ಶಿಥಿಲಗೊಂಡು, ಕೊಳೆತುಹೋದನಂತರ ಆ ರಂಧ್ರಗಳಲ್ಲಿ ಸತ್ತವರನ್ನು ಸುಟ್ಟನಂತರ ಅವರ ಬೂದಿ ಮತ್ತು ಇತರ ಅವಶೇಷಗಳನ್ನು ಹೂಳಲಾಗಿದೆ.
ಸ್ಟೋನ್‌ಹೆಂಜ್‌ನ ಪಕ್ಷಿನೋಟ- ಇಂಟರ್‌ನೆಟ್ ಚಿತ್ರ
ಹತ್ತಿರದ ಏವಾನ್ ನದಿಯೊಂದಿಗೆ ನಮಗೆ ತಿಳಿದಿರದ ಸಂಬಂಧ ಹೊಂದಿರುವ ಅದರ ಅಂತಿಮ ರೂಪ ನೀಡಿದ ಜನರ ಉದ್ದೇಶ ಬಹುಶಃ ಅವರ ಪೂರ್ವಜರು ಮೂಲದಲ್ಲಿ ಆ ಸ್ಥಳದಲ್ಲಿ ಮಣ್ಣು ಮತ್ತು ಮರದಿಂದ ರಚಿಸಿದ ರಚನೆಗಿಂತ ತೀರಾ ಭಿನ್ನವಾಗಿದ್ದಿರಬಹುದು. ಆ ಶಿಲೆಗಳ ಬಳಿ ನಿಂತಾಗ ಆ ಸ್ಮಾರಕದ ಮೂಲ ರಚನೆ ಹೇಗಿದ್ದಿರಬಹುದೆಂಬುದನ್ನು ಊಹಿಸಿಕೊಳ್ಳುವುದು ಕಷ್ಟ. ಅಳಿದುಳಿದಿರುವ ಶಿಲೆಗಳಿಂದ ವಿಜ್ಞಾನಿಗಳು ಅದರ ಮೂಲ ರಚನೆ ಹೇಗಿದ್ದಿರಬಹುದೆಂದು ಊಹಿಸಿದ್ದಾರೆ. ಮುವ್ವತ್ತು ಸಾರ್ಸೆನ್ ಶಿಲೆಗಳು ಹೊರಗಿನ ವೃತ್ತಾಕಾರವನ್ನು ರಚಿಸಿದ್ದವು. ಅವುಗಳಲ್ಲಿ ಇಂದು ಹದಿನೇಳು ಮಾತ್ರ ಉಳಿದಿವೆ. ಆ ಸಾರ್ಸೆನ್ ಶಿಲೆಗಳ ಮೇಲೆ ಆಯತಾಕಾರದ ಕಲ್ಲುಗಳನ್ನು (ಕ್ಯಾಪ್ ಸ್ಟೋನ್ಸ್) ಇರಿಸಲಾಗಿದೆ. ಅವು ನಿಖರ ಆಯಾತಾಕಾರದ ರಚನೆಗಳಲ್ಲ. ಅವುಗಳ ಹೊರಭಾಗ ಹಾಗೂ ಒಳಭಾಗವನ್ನು ಅವು ಒಟ್ಟಿಗೆ ಒಂದರ ಪಕ್ಕ ಒಂದನ್ನು ಜೋಡಿಸಿದಾಗ ಸಂಪೂರ್ಣ ವೃತ್ತಾಕಾರವಾಗುವಂತೆ ರಚಿಸಲಾಗಿದೆ. ಅಷ್ಟೇ ಅಲ್ಲದೆ ಆ ಶಿಲೆಗಳನ್ನು ಎರಡು ಮರಗಳನ್ನು ಕೂಡಿಸುವಾಗ ಒಂದರಲ್ಲಿ ರಂಧ್ರ ಹಾಗೂ ಮತ್ತೊಂದರಲ್ಲಿ ಗೂಟದಂತೆ ಮಾಡಿ, ಬಿಗಿಯಾಗಿ ಕೂಡಿಸಲಾಗಿದೆ. ಇಂದು ಆ ರೀತಿಯ ಮೂರು ಕ್ಯಾಪ್‌ಸ್ಟೋನ್‌ಗಳು ಮೂಲ ಆಕಾರದಲ್ಲೇ ಇರುವುದನ್ನು ಈಶಾನ್ಯ ದಿಕ್ಕಿನಿಂದ ಕಾಣಬಹುದಾಗಿದೆ (ಚಿತ್ರ ನೋಡಿ). ಆ ಹೊರ ವೃತ್ತದೊಳಗೆ ಅರವತ್ತು ನೀಲ ಶಿಲೆಗಳ ಮತ್ತೊಂದು ಒಳವೃತ್ತಾಕಾರದ ರಚನೆಯಿತ್ತು. ಆ ರಚನೆಯ ಒಳಗೆ ಕುದುರೆಯಲಾಳದಾಕಾರದಲ್ಲಿ ಬೃಹತ್ ಸಾರ್ಸೆನ್ ಶಿಲೆಗಳ ರಚನೆಯಿತ್ತು. ಅದರೊಳಗೆ ‘ಬಲಿಪೀಠ’ ಶಿಲೆಯಿದೆ.
ಸ್ಟೋನ್‌ಹೆಂಜ್‌ನ ಅದರ ನಿರ್ಮಾಣ ಹೇಗೆ ನಡೆದಿರಬಹುದೆಂಬುದನ್ನು ಊಹಿಸಿಕೊಳ್ಳಬಹುದು- ಯೋಜನೆ, ಕೌಶಲ್ಯ, ಆ ಶಿಲೆಗಳನ್ನು ನೂರಾರು ಕಿಲೋಮೀಟರುಗಳಿಂದ ಸಾಗಿಸುವಾಗಿನ ಶ್ರಮ, ಅದರ ನಿರ್ಮಾಣದಲ್ಲಿ ನೂರಾರು ಜನರನ್ನು ತೊಡಗಿಸಿಕೊಂಡಿರುವುದು, ಅವರಿಂದ ದುಡಿಸಿಕೊಳ್ಳುವ ಚಾಕಚಕ್ಯತೆ. ಅದರ ನಿರ್ಮಾಣದ ಸಮಯದಲ್ಲಿನ ಬ್ರಿಟನ್ನರು ಬಹುಪಾಲು ರೈತರು ಮತ್ತು ದನಗಾಹಿಗಳಾಗಿದ್ದರು ಎನ್ನುತ್ತಾರೆ ವಿಜ್ಞಾನಿಗಳು. ಆಗಿನ ಅವರ ಸಾಮಾಜಿಕ ರಚನೆ ಹೇಗಿತ್ತು, ಆಗ ಅವರ ಭಾಷೆ ಯಾವುದಿತ್ತು ಎನ್ನುವುದು ಯಾರಿಗೂ ತಿಳಿದಿಲ್ಲ. ಸ್ಟೋನ್‌ಹೆಂಜ್‌ನ ಆಸುಪಾಸಿನಲ್ಲಿ ದೊರೆದಿರುವ ಅಸ್ಥಿಪಂಜರಗಳಿಂದ ಅವರ ದೇಹ ರಚನೆ ಆಧುನಿಕ ಮಾನವರಿಗಿಂತ ಕೊಂಚ ಸಣ್ಣದೇ ಆಗಿತ್ತು ಎನ್ನುವುದಾಗಿ ತಿಳಿದುಬಂದಿದೆ. ಅವರ ಸರಾಸರಿ ಆಯುಷ್ಯ ಎಷ್ಟಿತ್ತೆನ್ನುವುದನ್ನು ಲೆಕ್ಕಹಾಕುವುದು ಕಷ್ಟ, ಆದರೆ ಅವರು ಆರೋಗ್ಯಕರ ಜೀವನ ನಡೆಸುತ್ತದ್ದರೆನ್ನಲು ಬೇಕಾದಷ್ಟು ಪುರಾವೆಗಳಿವೆ. ಆದರೂ ಶೇ.5ರಿಂದ 6ರಷ್ಟು ಜನರ ತಲೆಯ ಬುರುಡೆಗಳಲ್ಲಿ -ಗಂಡು ಮತ್ತು ಹೆಣ್ಣುಗಳಿಬ್ಬರದೂ- ಬಲವಾದ ಹೊಡೆತದ ಗುರುತುಗಳಿವೆ ಎನ್ನುತ್ತಾರೆ ಸೆಂಟ್ರಲ್ ಲ್ಯಾಂಕಾಶೈರ್‌ನ ವಿಜ್ಞಾನಿ ಮೈಖೆಲ್ ವೈಸೋಕಿ. ಈ ಆಘಾತಗಳು ಯಾವುದಾದರೂ ಆಚರಣೆಯ ಹಿಂಸೆಯ ಅಭಿವ್ಯಕ್ತಿಯಾಗಿರಬಹುದು ಅಥವಾ ಆಗಿನ ಬದುಕು ಅಷ್ಟೇ ಕ್ರೂರವಾಗಿದ್ದಿರಬಹುದು ಎನ್ನುತ್ತಾರೆ ಅವರು.
ಸ್ಟೋನ್‌ಹೆಂಜ್‌ನ ಬಳಿ ವಿಸ್ಮಯಕಾರಿ ಆವಿಷ್ಕಾರಗಳು ನಡೆಯುತ್ತಲೇ ಇವೆ. 2002ರಲ್ಲಿ ಪ್ರಾಕ್ತನ ತಜ್ಞರಿಗೆ ಸ್ಟೋನ್‌ಹೆಂಜ್‌ನಿಂದ ಎರಡೂವರೆ ಮೈಲು ದೂರದಲ್ಲಿ ಏವಾನ್ ನದಿಯ ಪೂರ್ವದಿಕ್ಕಿನಲ್ಲಿ ಎರಡು ಅಸ್ಥಿಪಂಜರಗಳ ಸಮಾಧಿ ದೊರಕಿತು. ಸುಮಾರು ಕ್ರಿ.ಪೂ. 2500ರಿಂದ 2300ರ ಸಮಯದ ಆ ಸಮಾಧಿಯಲ್ಲಿ 35ರಿಂದ 45ರ ವಯಸ್ಸಿನ ಒಬ್ಬ ವ್ಯಕ್ತಿಯ ಅವಶೇಷಗಳಿದ್ದವು ಹಾಗೂ ಸನಿಹದ ಮತ್ತೊಂದರಲ್ಲಿ ಆತನಿಗಿಂತ ಚಿಕ್ಕ ವಯಸ್ಸಿನವನೊಬ್ಬನ ಬಹುಶಃ ಹಿರಿಯನ ಸಂಬಂಧಿಯಿರಬಹುದು- ಅವಶೇಷಗಳಿದ್ದವು. ಹಿರಿಯನ ಸಮಾಧಿಯಲ್ಲಿ ಆ ಸಮಯದ ಬ್ರಿಟನ್ನಿನ ಯಾವುದೇ ಸಮಾಧಿಯಲ್ಲಿರದ ಐಶ್ವರ್ಯ ಸೂಚಕ ವಸ್ತುಗಳಿದ್ದವು- ತಲೆಗೆ ಧರಿಸುವ ಚಿನ್ನದ ಆಭರಣಗಳು, ತಾಮ್ರದ ಚಾಕುಗಳು, ಚಕಮಕಿ ಕಲ್ಲುಗಳು, ಪಾಲಿಶ್ ಮಾಡಿದ ಬಿಲ್ಲುಗಾರರ ಮುಷ್ಠಿ ರಕ್ಷಕಗಳು, ಲೋಹದ ಕೆಲಸ ನಡೆಸುವ ‘ದಿಂಬಿನಾಕಾರದ ಶಿಲೆ’ ಮತ್ತು ಯೂರೋಪಿನಲ್ಲಿ ಸಾಮಾನ್ಯವಾಗಿ ಇದ್ದ ಆದರೆ ಬ್ರಿಟನ್ನಿನಲ್ಲಿ ಇಲ್ಲದಿದ್ದ ವಿಶಿಷ್ಟ ‘ಬೀಕರ್’ ಶೈಲಿಯ ಕುಡಿಕೆಗಳು. ಹಿರಿಯನ ಕಾಲು ಊನವಾಗಿ ಆತ ಕುಂಟ ಸಹ ಆಗಿದ್ದ. ಅಮೀಸ್‌ಬರಿ ಬಿಲ್ಲುಗಾರನೆಂದು ಕರೆಯಲ್ಪಟ್ಟಿರುವ ಹಿರಿಯನ ಮತ್ತು ಕಿರಿಯನ ಹಲ್ಲಿನ ಎನಾಮೆಲ್‌ನ ರಾಸಾಯನಿಕ ವಿಶ್ಲೇಷಣೆ ನಡೆಸಲಾಗಿದೆ. ಇದರಿಂದ ತಿಳಿದುಬಂದ ವಿಸ್ಮಯದ ವಿಷಯವೆಂದರೆ, ಆ ಹಿರಿಯ ಬ್ರಿಟನ್ನಿನವನೇ ಆಗಿರಲಿಲ್ಲ- ಆತ ಆಲ್ಪ್ಸ್ ಪರ್ವತಗಳ, ಈಗಿನ ಸ್ವಿಟ್ಜರ್‌ಲ್ಯಾಂಡ್ ಮತ್ತು ಜರ್ಮನಿಯಿರುವ ಯೂರೋಪ್ ಪ್ರದೇಶದವನಾಗಿದ್ದ ಹಾಗೂ ಕಿರಿಯ ಬ್ರಿಟನ್ನಿನ ಹತ್ತಿರದ ವೆಸೆಕ್ಸ್‌ನವನಾಗಿದ್ದ. ವೆಸೆಕ್ಸ್ ಆರ್ಕಿಯಾಲಜಿಯ ಆಂಡ್ರೂ ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಯೂರೋಪಿನಿಂದ ವಲಸೆಬಂದ ಹಿರಿಯ ಆ ಪ್ರದೇಶದಲ್ಲಿ ನೆಲೆಸಿ ತನ್ನ ಮಡಿಕೆ, ಕುಡಿಕೆ ತಯಾರಿಸುವ ಮತ್ತು ಲೋಹದ ಕೌಶಲ್ಯದಿಂದಾಗಿ ಸಾಕಷ್ಟು ಸಿರಿವಂತನಾಗಿ, ಮಾನ್ಯತೆಯನ್ನೂ ಪಡೆದಿದ್ದ.
ಆ ಬಿಲ್ಲುಗಾರ ಮತ್ತು ಆತನ ಸಂಗಾತಿಯೊಬ್ಬನ ಅವಶೇಷಗಳು ದೊರೆತ ಮರುವರ್ಷವೇ ಏಳು ಜನರ ಸಮಾಧಿಯೊಂದು ದೊರಕಿ ಅವರೂ ಸಹ ದೂರದ ಪ್ರದೇಶಗಳಿಂದ ವಲಸೆ ಬಂದವರಾಗಿದ್ದರು. ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಆ ಜನರೆಲ್ಲಾ ಯಾವ ಪ್ರದೇಶಗಳಿಂದ ಬಂದವರೆಂಬುದು ಮುಖ್ಯವಲ್ಲ, ಆದರೆ ಆ ಕಾಲದ ಜನ ಅಷ್ಟೊಂದು ದೂರ ಪ್ರಯಾಣ ಮಾಡುತ್ತಿದ್ದರೆಂಬುದೇ ಮುಖ್ಯ. ಆ ‘ಪರದೇಶಿಗಳು’ ಸ್ಟೋನ್‌ಹೆಂಜ್ ನೋಡಿರಬಹುದು, ಅಥವಾ ಅದರ ನಿರ್ಮಾಣದಲ್ಲಿ ಸಹಾಯವನ್ನೂ ಮಾಡಿರಬಹುದು.
ಶೆಫೀಲ್ಡ್ ವಿಶ್ವವಿದ್ಯಾನಿಲಯದ ಮೈಕ್ ಪಾರ್ಕರ್ ಪಿಯರ್ಸನ್‌ರವರ ನೇತೃತ್ವದಲ್ಲಿ ಹಾಗೂ ನ್ಯಾಶನಲ್ ಜಿಯೋಗ್ರಾಫಿಕ್ ಸೊಸೈಟಿಯ ಸಹಯೋಗದೊಂದಿಗೆ ಸ್ಟೋನ್‌ಹೆಂಜ್ ರಿವರ್‌ಸೈಡ್ ಪ್ರಾಜೆಕ್ಟ್ 2003ರಿಂದಲೂ ಸ್ಟೋನ್‌ಹೆಂಜ್‌ನ ಅಧ್ಯಯನ ನಡೆಸುತ್ತಿದೆ. ಸ್ಟೋನ್‌ಹೆಂಜ್‌ನ ಸುತ್ತಮುತ್ತಲೂ ಉತ್ಖನನ ನಡೆಸಿರುವ ಆ ತಂಡ ಸ್ಟೋನ್‌ಹೆಂಜ್‌ನ ನೈಋತ್ಯ ದಿಕ್ಕಿನಲ್ಲಿ ಸುಮಾರು ಎರಡು ಮೈಲಿಗಳ ದೂರದಲ್ಲಿ ಸುಮಾರು 1500 ಅಡಿಗಳ ವ್ಯಾಸವಿರುವ ಒಂದು ಬೃಹತ್ ‘ಹೆಂಜ್’ ಆದ ಡ್ಯೂರಿಂಗ್‌ಟನ್ ವಾಲ್ಸ್ ಬಗ್ಗೆ ತನ್ನ ಅಧ್ಯಯನವನ್ನು ಕೇಂದ್ರೀಕರಿಸಿದೆ. 1812ರಲ್ಲೇ ಡ್ಯೂರಿಂಗ್‌ಟನ್ ಬಗೆಗೆ ತಿಳಿದಿತ್ತು. ಆ ‘ಹೆಂಜ್’ ಎಷ್ಟು ಬೃಹತ್ತಾಗಿದೆಯೆಂದರೆ, ಅದರ ಬದುಗಳು ಸುಮಾರು ನೂರು ಅಡಿ ಅಗಲವಿತ್ತು ಹಾಗೂ ಅದರ ಎತ್ತರ ಸುಮಾರು ಹತ್ತು ಅಡಿಗಳಷ್ಟಿತ್ತು. ಆದರೆ ಮಣ್ಣಿನ ಕೊಚ್ಚಣೆಯಿಂದಾಗಿ ಬದು ಸಮತಟ್ಟಾಗುತ್ತಾ ಬಂದಿದೆ. ಆ ಬೃಹತ್ ಹೆಂಜ್‌ನ ಹೊರಭಾಗದಲ್ಲಿ ಮತ್ತು ಒಳಭಾಗದಲ್ಲಿ ವೃತ್ತಾಕಾರದಲ್ಲಿ ಮೂರು ಸಾಲು ಮರದ ಕಂಬಗಳ ರಚನೆಗಳಿದ್ದುವಂತೆ ಹಾಗೂ ಈಗಲೂ ಅವುಗಳನ್ನು ನೆಟ್ಟಿದ್ದ ಗುಂಡಿಗಳ ಗುರುತುಗಳು ಇವೆಯೆನ್ನುತ್ತಾರೆ. ಈ ಮರದ ರಚನೆಗಳ ವೃತ್ತಾಕಾರಗಳು ರಹಸ್ಯ ಆಚರಣೆಗಳ ಸ್ಥಳಗಳಾಗಿದ್ದವು ಹಾಗೂ ಅವುಗಳನ್ನು ಪರದೆಗಳಿಂದ ಮುಚ್ಚಿರುತ್ತಿದ್ದರು ಎನ್ನುತ್ತಾರೆ ಬ್ರಾಡ್‌ಫರ್ಡ್ ವಿಶ್ವವಿದ್ಯಾನಿಲಯದ ಅಲೆಕ್ಸ್ ಗಿಬ್ಸನ್. ಇತ್ತೀಚೆಗೆ ಆ ಹೆಂಜ್‌ನ ಮಧ್ಯಭಾಗದಲ್ಲಿ ವಸತಿಗಳ ಅವಶೇಷಗಳು ದೊರಕಿದ್ದು ಅವು ಆಗಿನ ಮುಖ್ಯಸ್ಥರ ಅಥವಾ ಮೇಲ್ವಿಚಾರಕರ ವಸತಿಗಳಾಗಿದ್ದಿರಬಹುದು ಅಥವಾ ಗುಪ್ತಾಚರಣೆಗಳ ಸ್ಥಳಗಳೂ ಆಗಿದ್ದಿರಬಹುದೆನ್ನುತ್ತಾರೆ. ಹೆಂಜ್‌ನ ಬದುವಿನ ಹೊರಗೂ ಸುಮಾರು ಕ್ರಿ.ಪೂ. 2600ರಿಂದ 2500 ವರ್ಷಗಳಷ್ಟು ಹಳೆಯದಾದ ಏಳು ಮನೆಗಳ ಅವಶೇಷಗಳೂ ದೊರಕಿವೆ. ಅವುಗಳೊಳಗೆ ಒಲೆಗಳ ಮತ್ತು ಅವುಗಳ ಮುಂದೆ ಕೂತಿದ್ದಿರಬಹುದಾದವರ ಗುರುತುಗಳೂ ದೊರಕಿವೆ. ಆ ಸ್ಥಳಗಳ ಸುತ್ತಮುತ್ತಲ ಅಧ್ಯಯನಗಳಿಂದ ಸುಮಾರು ಮುನ್ನೂರು ಮನೆಗಳ ಅವಶೇಷಗಳಿವೆ ಎನ್ನುತ್ತಾರೆ ಪಾರ್ಕರ್ ಪಿಯರ್‌ಸನ್. ಹಾಗಿದ್ದಲ್ಲಿ ಅದು ಬ್ರಿಟನ್ನಿನ ಶಿಲಾಯುಗದ ಅತ್ಯಂತ ದೊಡ್ಡ ವಸತಿತಾಣವಾಗುತ್ತದೆ.
ಡ್ಯೂರಿಂಗ್‌ಟನ್ ವಾಲ್ಸ್‌ನಲ್ಲಿನ ‘ಜೀವದ ತಾಣ’ವಾದ ‘ವುಡ್‌ಹೆಂಜ್’ ಹೀಗಿದ್ದಿರಬಹುದೆ?
ತಮ್ಮ ಮಡಗಾಸ್ಕರ್‌ನ ಕ್ಷೇತ್ರಾಧ್ಯಯನಗಳ ಅನುಭವದಿಂದ ಪಾರ್ಕರ್ ಪಿಯರ್‌ಸನ್ ಸ್ಟೋನ್‌ಹೆಂಜ್ ಶಿಲಾರಚನೆಗೆ ತಮ್ಮದೇ ‘ಉತ್ತರ’ವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಮಲಗಸಿ ಸಂಸ್ಕೃತಿಯಲ್ಲಿ ತಮ್ಮ ಪೂರ್ವಿಕರಿಗೆ ಶಿಲಾ ಸ್ಮಾರಕಗಳ ಮೂಲಕ ಗೌರವ ಸಲ್ಲಿಸುತ್ತಾರೆ. ಅದರರ್ಥ ದೇಹವು ಸಾವಿನ ನಂತರ ಗಟ್ಟಿಯಾಗಿ ಕೊನೆಗೆ ಶಿಲೆಯಂತೆ ಗಡುಸಾದ ಮೂಳೆ ಮಾತ್ರ ಉಳಿಯುವುದನ್ನು ಸಂಕೇತಿಸುತ್ತದೆ. ಅದಕ್ಕೆ ತದ್ವಿರುದ್ಧವಾಗಿ ಮರವು ಕೊಳೆತು ಶಿಥಿಲವಾಗುವುದರಿಂದ ಅದು ಬದುಕಿನ ನಶ್ವರತೆಯನ್ನು ಸಂಕೇತಿಸುತ್ತದೆ. ಪಿಯರ್‌ಸನ್ ಹೇಳುವಂತೆ ಶಿಲೆಯು ಪ್ರಾಚೀನವಾದುದು, ವಂಶಪಾರಂಪರ್ಯವಾದುದು ಹಾಗೂ ಪುರುಷ ಸಂಕೇತ ಮತ್ತು ಮರವು ಸ್ತ್ರೀಯರು ಹಾಗೂ ಶಿಶುಗಳ ಹಾಗೆ ಮೃದುವಾದುದು. ಅವರೇ ಹೇಳುವಂತೆ ಆ ರೀತಿಯ ‘ಲಿಂಗಭೇದ ಬ್ರಿಟನ್ನಿನಲ್ಲಿ ಕಂಡುಬಂದಿರದಿದ್ದರೂ, ಪಾಶ್ಚಿಮಾತ್ಯ ಸ್ಮರಣೆಯ ಆಚರಣೆಗಳಲ್ಲಿ ಅದು ಕಂಡುಬರುತ್ತದೆ. ಈ ಮಾದರಿಯ ಆಧಾರದಿಂದಲೇ ಮರದ ಡ್ಯೂರಿಂಗ್‌ಟನ್ ವಾಲ್ಸ್‌ನ ರಚನೆಗಳ ಹಾಗೂ ಶಿಲೆಯ ಸ್ಟೋನ್‌ಹೆಂಜ್ ರಚನೆಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಪಿಯರ್‌ಸನ್ ಮಾಡುತ್ತಾರೆ. ಅವರ ವಿಶ್ಲೇಷಣೆಗೆ ಪೂರಕವಾಗಿಯೂ ಆ ರಚನೆಗಳಿವೆ. ಸ್ಟೋನ್‌ಹೆಂಜ್ ದಕ್ಷಿಣಾಯನ ಸಂಕ್ರಮಣದ ಸೂರ್ಯೋದಯಕ್ಕೆ ಹಾಗೂ ಉತ್ತರಾಯಣ ಸಂಕ್ರಮಣದ ಸೂರ್ಯಾಸ್ತಮಾನದ ಕಕ್ಷೆಗೆ ಹೊಂದಿಕೊಂಡಿದೆ ಆದರೆ, ಡ್ಯೂರಿಂಗ್‌ಟನ್ ವಾಲ್ಸ್‌ನ ದಕ್ಷಿಣ ವೃತ್ತ ಉತ್ತರಾಯಣ ಸಂಕ್ರಮಣದ ಸೂರ್ಯೋದಯವನ್ನು ಸೆರೆಹಿಡಿಯುತ್ತದೆ. ಡ್ಯೂರಿಂಗ್‌ಟನ್ ವಾಲ್ಸ್ ಬಳಿ ಔತಣಕೂಟಗಳು ನಡೆಯುತ್ತಿದ್ದವು ಎನ್ನಲು ಪುರಾವೆಯಂತೆ ಮಡಿಕೆ ಕುಡಿಕೆಗಳ ಮತ್ತು ಪ್ರಾಣಿಗಳ ಮೂಳೆಗಳ ಅದರಲ್ಲೂ ವಿಶೇಷವಾಗ ಹಂದಿಗಳ ಮೂಳೆಗಳ ಅವಶೇಷಗಳು ದೊರೆತಿವೆ. ಇದಕ್ಕೆ ತದ್ವಿರುದ್ಧವಾಗಿ ಸ್ಟೋನ್‌ಹೆಂಜ್ ಬಳಿ ಯಾವುದೇ ಮಡಿಕೆ ಕುಡಿಕೆಗಳು ದೊರೆತಿಲ್ಲ ಬದಲಿಗೆ ಸ್ಟೋನ್‌ಹೆಂಜ್ ಬಳಿ ಇನ್ನೂರ ನಲವತ್ತಕ್ಕೂ ಹೆಚ್ಚು ಶವಸಂಸ್ಕಾರಗಳ ಕುರುಹುಗಳು ದೊರೆತಿವೆ. ಅಂದರೆ ಪಿಯರ್‌ಸನ್ ಹೇಳುವಂತೆ ಡ್ಯೂರಿಂಗ್‌ಟನ್ ಬದುಕಿನ ಆಚರಣೆಗಳ ತಾಣವಾದರೆ ಸ್ಟೋನ್‌ಹೆಂಜ್ ಸಾವಿನ ಆಚರಣೆಗಳ ತಾಣವಾಗಿರಬಹುದು. ಆದರೆ ಸ್ವತಃ ಸ್ಟೋನ್‌ಹೆಂಜ್ ಬಳಿಯಲ್ಲಿ ಉತ್ಖನನ ಕಾರ್ಯದಲ್ಲಿ ಭಾಗಿಯಾಗಿರುವ ಬ್ರಿಟಿಶ್ ಆರ್ಕಿಯಾಲಜಿ ಪತ್ರಿಕೆಯ ಸಂಪಾದಕರಾಗಿರುವ ಮೈಕ್ ಪಿಟ್ಸ್ ಹೇಳುವಂತೆ ಅಲ್ಲಿ ಶಿಲಾರಚನೆಗಳು ಬರುವ ಮುನ್ನ ಮರದ ರಚನೆಗಳು ಇದ್ದ ಸಮಯದಲ್ಲಿ ಅಲ್ಲಿ ಶವಸಂಸ್ಕಾರಗಳಾಗಿದ್ದು ಅದು ಸಾವಿನ ಆಚರಣೆಗಳ ತಾಣವಾಗಿದ್ದಿರಬಹುದು ಹಾಗೂ ಶಿಲಾರಚನೆಗಳು ರೂಪುಗೊಂಡ ನಂತರದ ಸಮಯದ ಅಧ್ಯಯನದಿಂದ ಅಲ್ಲಿ ದಿನನಿತ್ಯದ ಆಚರಣೆಗಳಾದಂತಹ ಕೃಷಿ, ಪ್ರಾಣಿಗಳನ್ನು ಮೇಯಿಸಿರುವುದು ಮುಂತಾದವುಗಳು ಕುರುಹುಗಳು ಕಂಡುಬರುತ್ತವೆ. ಹಾಗಾಗಿ ನಂತರದಲ್ಲಿ ಅದು ಸಾವಿನ ಆಚರಣೆಗಳ ತಾಣವಾಗಿರಲಿಲ್ಲ. ಅವರ ಅಭಿಪ್ರಾಯದಂತೆ ಸ್ಟೋನ್‌ಹೆಂಜ್‌ನಿಂದ ಏವಾನ್ ನದಿಗೆ ಇರುವ ರಸ್ತೆಯ ಬಗೆಗೆ ಹಾಗೂ ಸ್ಟೋನ್‌ಹೆಂಜ್ ಮತ್ತು ಡ್ಯೂರಿಂಗ್‌ಟನ್ ವಾಲ್ಸ್‌ಗಳ ನಡುವಿನ ಸಂಬಂಧದ ಬಗೆಗೆ ಹೆಚ್ಚಿನ ಅಧ್ಯಯನ ನಡೆಯಬೇಕಾಗಿದೆ.
ಐದು ಸಾವಿರ ವರ್ಷಗಳ ಹಿಂದೆ ಸ್ಟೋನ್‌ಹೆಂಜ್‌ನ ನಿರ್ಮಾಣ ಪ್ರಾರಂಭವಾದ ಸಮಯದಲ್ಲಿ ಅಲ್ಲಿನ ಜನರು ಅಷ್ಟೊತ್ತಿಗಾಗಲೇ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ತೊಡಗಿದ್ದರು. ಅವರಲ್ಲಿ ಸುಸಜ್ಜಿತ ಸಾಮಾಜಿಕ ವ್ಯವಸ್ಥೆಯಿತ್ತು. ಅವರು ಬಾರ‍್ಲಿ ಮತ್ತು ಗೋಧಿಯನ್ನು ಬೆಳೆಯುತ್ತಿದ್ದ ಪುರಾವೆಗಳು ದೊರೆತಿವೆ. ಕೃಷಿಕರಾಗಿದ್ದ ಅವರಿಗೆ ಬ್ರಿಟನ್ನಿನ ಚಳಿಗಾಲ ಅಂಧಕಾರದಿಂದ ಕೂಡಿರುತ್ತಿದ್ದು ಬೇಸಿಗೆ ಒಂದು ರೀತಿಯಲ್ಲಿ ಬೆಳಕಿನ ಹಬ್ಬವಾಗಿರುತ್ತಿತ್ತು. ಸ್ಟೋನ್‌ಹೆಂಜ್ ದಕ್ಷಿಣಾಯನ ಸಂಕ್ರಮಣದ ಸೂರ್ಯೋದಯಕ್ಕೆ (ವರ್ಷದ ಅತಿ ದೀರ್ಘ ದಿನ ಜೂನ್ 21) ಹಾಗೂ ಉತ್ತರಾಯಣ ಸಂಕ್ರಮಣದ ಸೂರ್ಯಾಸ್ತಮಾನದ (ವರ್ಷದ ಅತಿ ಕಡಿಮೆ ಅವಧಿಯ ದಿನ ಡಿಸೆಂಬರ್ 21) ಕಕ್ಷೆಗೆ ಹೊಂದಿಕೊಂಡಂತೆ ಅದನ್ನು ನಿರ್ಮಿಸಿರುವುದರಿಂದ ಆಗಿನ ಜನ ವರ್ಷದ ಅತಿ ದೀರ್ಘ ದಿನದ ಆಚರಣೆಗೆ ಅದನ್ನು ನಿರ್ಮಿಸಿರಬಹುದು ಎನ್ನುತ್ತಾರೆ.
ಇನ್ನು ಕೆಲವರ ಪ್ರಕಾರ ಸ್ಟೋನ್‌ಹೆಂಜ್ ಅನ್ನು ಬ್ರಿಟನ್ನಿನ ಕೆಲ್ಟ್ ಜನರ ಪುರೋಹಿತರು ಮತ್ತು ಮಾಂತ್ರಿಕರು ಆಗಿದ್ದ ‘ಡ್ರೂಯಿಡ್’ಗಳು ತಮ್ಮ ಆಚರಣೆಗಳಿಗೆ ನಿರ್ಮಿಸಿದ್ದಾರೆ. ವಿಲಿಯಂ ಸ್ಟುಕೀಲೆ (1647-1765) ಎಂಬಾತನ ಪ್ರಕಾರ ಡ್ರೂಯಿಡ್‌ಗಳು ಕ್ರಿ.ಶ. 43ರಲ್ಲಿ ಸ್ಟೋನ್‌ಹೆಂಜ್ ನಿರ್ಮಿಸಿದರು. ಆದರೆ ಅಧ್ಯಯನಗಳು ಸ್ಟೋನ್‌ಹೆಂಜ್ ಅದಕ್ಕಿಂತಲೂ ಪುರಾತನವಾದುದು ಎಂಬುದನ್ನು ತೋರಿಸಿಕೊಟ್ಟಿವೆ.
ಸ್ಟೋನ್‌ಹೆಂಜ್‌ನ ಶಿಲೆಗಳು ಮಳೆಯಲ್ಲಿ ನೆನೆದು ಬಿಸಿಲಿಗೆ ತಮ್ಮ ಮೈಯೊಡ್ಡಿದಾಗ ನೀಲ ವರ್ಣವಾಗಿ ಹೊಳೆಯುತ್ತವೆ. ಈ ನೀಲ ಶಿಲೆಗಳ ಮೂಲವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅದು ಇನ್ನೂರ ಐವತ್ತು ಮೈಲುಗಳ ದೂರದಲ್ಲಿ ನೈರುತ್ಯ ವೇಲ್ಸ್‌ನ ಪ್ರೆಸೆಲಿ ಪರ್ವತಗಳಾಗಿವೆ. ವಿಜ್ಞಾನಿಗಳಿಗೆ ಕಗ್ಗಂಟಾಗಿರುವುದು ಶಿಲಾಯುಗದ ಮಾನವ ಯಾವುದೇ ಲೋಹಗಳಿಲ್ಲದೆ ಹೇಗೆ ತಲಾ ಸುಮಾರು ನಲವತ್ತು ಟನ್ ತೂಕದ ಬೃಹತ್ ಶಿಲೆಗಳನ್ನು ಹೇಗೆ ಸಾಗಿಸಿದ ಎಂಬುದು. ಸ್ಟೋನ್‌ಹೆಂಜ್‌ನ ನಿರ್ಮಾಣಕ್ಕೆಂದು ಒಮ್ಮೆಲೇ ಎಲ್ಲವನ್ನೂ ಸಾಗಿಸಿದನೆ ಅಥವಾ ಅದರ ನಿರ್ಮಾಣವನ್ನು ಹಲವಾರು ತಲಮಾರುಗಳ ಕಾಲ ನಡೆಸಲಾಯಿತೆ? ಪ್ರಿಸೆಲಿ ಪರ್ವತಗಳ ಕ್ವಾರಿಗಳಲ್ಲಿ ಕ್ರಿ.ಪೂ. 4000 ವರ್ಷಗಳ ಹಿಂದೆಯೇ ಕಲ್ಲುಗಳನ್ನು ಕತ್ತರಿಸಿ ತೆಗೆದಿರುವ ಕುರುಹುಗಳಿವೆ. ಆ ರೀತಿ ಶಿಲೆಗಳನ್ನು ತೆಗೆದಿರುವುದು ಸ್ಟೋನ್‌ಹೆಂಜ್‌ಗೆ ಮಾತ್ರವಲ್ಲ, ಆ ತರಹದ ಸಣ್ಣಪುಟ್ಟ ಶಿಲಾರಚನೆಗಳು ಬ್ರಿಟನ್ನಿನ ಇತರೆಡೆಯೂ ಇವೆ. ಆ ಸಮಯದಲ್ಲಿ ಶಿಲಾಯುಗದ ಮಾನವ ಪ್ರೆಸಿಲಿ ಪರ್ವತಗಳಿಗೆ ಭೇಟಿ ನೀಡುತ್ತಿದ್ದ ಹಾಗೂ ಆ ಸ್ಥಳವನ್ನು ಆರಾಧಿಸುತ್ತಿದ್ದ ಎನ್ನಲು ಪುರಾವೆಗಳೂ ದೊರೆತಿವೆ.
ಆ ಸ್ಥಳದಿಂದ ಶಿಲಾಯುಗದ ಮಾನವ ಸ್ಯಾಲಿಸ್‌ಬರಿ ಬಯಲುಸೀಮೆಗೆ ಬೃಹತ್ ಶಿಲೆಗಳನ್ನು ಹೇಗೆ ಸಾಗಿಸಿದ ಎನ್ನುವುದು ಇಂದಿಗೂ ವಿಜ್ಞಾನಿಗಳಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಅವುಗಳನ್ನು ಒಮ್ಮೆಲೇ ಸಾಗಿಸಿದನೆ? ಅಥವಾ ಅದನ್ನು ಹಲವಾರು ತಲಮಾರುಗಳ ಕಾಲ ಸಾಗಿಸಲಾಯಿತೆ? ಅವುಗಳನ್ನು ಹೇಗೆ ಸಾಗಿಸಲಾಯಿತು? ಹಿಮಯುಗದಲ್ಲಿ ಬೃಹತ್ ನೀರ್ಗಲ್ಲುಗಳು ಆ ಶಿಲೆಗಳನ್ನು ಸಡಿಲಗೊಳಿಸಿ ಕೆಳಕ್ಕೆ ತಳ್ಳಿರಬಹುದೆಂಬ ಕೆಲವರ ವಾದವನ್ನು ಆಧುನಿಕ ಅಧ್ಯಯನಗಳು ತಿರಸ್ಕರಿಸಿವೆ. ಈಗ ಸ್ಟೋನ್‌ಹೆಂಜ್ ಇರುವ ಸ್ಥಳಕ್ಕೆ ಅತಿ ಹತ್ತಿರದ ದಾರಿ ಎಂದರೆ ವೇಲ್ಸ್‌ನ ಕರಾವಳಿಯಲ್ಲಿ ನದಿಯ ಮೂಲಕ ಹೊರಟು ಏವಾನ್ ನದಿ ತಲುಪುವುದು. ಇದು ಸುಮಾರು ಇನ್ನೂರ ಐವತ್ತು ಮೈಲುಗಳಾಗುತ್ತದೆ. ಆ ದಿನಗಳ ಶಿಲಾಯುಗದ ಮಾನವ ಇವುಗಳನ್ನು ಸಾಗಿಸಲು ಯಾವ ತಂತ್ರಜ್ಞಾನ ಬಳಸಿದ ಎನ್ನುವುದು ಇನ್ನೂ ನಿಗೂಢ. ಮರ್ಲಿನ್‌ನ ಮಾಂತ್ರಿಕ ಅವುಗಳನ್ನು ತನ್ನ ಮಂತ್ರಶಕ್ತಿಯಿಂದ ಅವುಗಳನ್ನು ಸಾಗಿಸಿದ ಎನ್ನುವ 3600 ವರ್ಷಗಳ ಹಿಂದಿನ ಜನಪದದ ಕತೆಯೂ ಪ್ರಚಲಿತದಲ್ಲಿದೆ.
ಸ್ಟೋನ್‌ಹೆಂಜ್‌ಅನ್ನು ಯಾವ ಉದ್ದೇಶಕ್ಕಾಗಿ ನಿರ್ಮಿಸಲಾಯಿತು ಎನ್ನುವುದೂ ಸಹ ಊಹೆಯಷ್ಟೇ ಆಗಿದೆ. ಜಗತ್ತಿನ ಹಲವಾರು ಪುರಾತನ ರಚನೆಗಳ ಹಿಂದಿನ ಉದ್ದೇಶ ಅಥವಾ ಆ ಸ್ಥಳಗಳಲ್ಲಿ ನಡೆಸಲಾಗುತ್ತಿದ್ದ ಹಲವಾರು ಆಚರಣೆಗಳ ವಿವರಗಳು ಯಾವುದಾದರೂ ಪಠ್ಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಭ್ಯವಿವೆ. ಆದರೆ ಸ್ಟೋನ್‌ಹೆಂಜ್‌ನ ಬಗೆಗಿನ ವಿವರಣೆ ಇರುವ ಯಾವುದೇ ಪಠ್ಯ ದೊರಕಿಲ್ಲ. ಹಾಗಾಗಿ ಅದರ ನಿರ್ಮಾಣಕ್ಕೆ, ರಚನೆಗೆ ಬಹುಅರ್ಥಗಳನ್ನು ನೀಡುವ ಪ್ರಯತ್ನ ಅನಿವಾರ್ಯವೆನ್ನಿಸುವಂತಿದೆ. ಅದು ಸೂರ್ಯ ದೇವಾಲಯವಾಗಿತ್ತೆ ಅಥವಾ ಚಂದ್ರನ ದೇವಾಲಯವಾಗಿತ್ತೆ ಅಥವಾ ಖಗೋಳ ದಿನಸೂಚಿಯಾಗಿತ್ತೆ ಅಥವಾ ಶಮನ ಕೇಂದ್ರವಾಗಿತ್ತೆ ಅಥವಾ ಮರಣಿಸಿದವರ ಆರಾಧನೆಯ ಸ್ಥಳವಾಗಿತ್ತೆ? ಅಲ್ಲಿನ ಶಿಲೆಗಳು ದೇವರನ್ನು ಪ್ರತಿನಿಧಿಸುತ್ತಿದ್ದವೆ ಅಥವಾ ಅಂತಸ್ತು ಮತ್ತು ಶಕ್ತಿಯ ಸಂಕೇತವಾಗಿದ್ದವೆ? ಉತ್ತರ ಯಾರಿಗೂ ತಿಳಿದಿಲ್ಲ.
ಮಾನವ ಸ್ಟೋನ್‌ಹೆಂಜ್ ಯಾವ ಉದ್ದೇಶಕ್ಕಾಗಿ ನಿರ್ಮಿಸಿದ್ದನೋ ಆ ಉದ್ದೇಶದ ಉಪಯೋಗ ಕ್ರಿ.ಪೂ. 1500ರಲ್ಲೇ ಮಾಡುವುದನ್ನು ನಿಲ್ಲಿಸಿರಬೇಕು. ಅಂದಿನಿಂದ ಅದು ಉದಾಸೀನಕ್ಕೊಳಗಾಗಿ ಶಿಥಿಲಾವಸ್ಥೆ ತಲುಪಿತು. ಹಲವಾರು ಶಿಲೆಗಳು ಮುರಿದುಹೋದವು ಹಾಗೂ ಅಲ್ಲಿಂದ ಸಾಗಿಸಲ್ಪಟ್ಟವು. ಆ ಶಿಥಿಲ ರಚನೆಯ ಬಗೆಗೆ ಅಲ್ಲಲ್ಲಿ ಉಲ್ಲೇಖಗಳಿವೆ. ಕ್ರಿ.ಪೂ. ಮೊದಲ ಶತಮಾನದ ಗ್ರೀಕ್ ಚರಿತ್ರಕಾರನಾದ ಸಿಸಿಲಿಯ ಡಯೊಡೋರಸ್, ‘ಅಪೋಲೋ ದೇವತೆಗೆ ಪವಿತ್ರವಾಗಿರುವ ಒಂದು ವೃತ್ತಾಕಾರದ ದೇವಾಲಯ ಉತ್ತರದ ದ್ವೀಪದ ಮೇಲಿದೆ’ ಎಂದಿದ್ದಾನೆ. 1668ರಲ್ಲಿ ಅಲ್ಲಿಗೆ ಭೇಟಿ ನೀಡಿದ ಸ್ಯಾಮ್ಯುಯೆಲ್ ಪೆಪೀಸ್ ‘ತಾನೆಂದೂ ಕೇಳಿರದ, ಕಂಡಿರದ ಬೃಹತ್ ಶಿಲೆಗಳ ರಚನೆಯನ್ನು ಕಂಡೆ. ಅದನ್ನು ಯಾವುದಕ್ಕೆ ಬಳಸುತ್ತಿದ್ದರೆಂಬುದು ದೇವರಿಗೇ ಗೊತ್ತು’ ಎಂದು ಬರೆದಿದ್ದಾನೆ.
ನಾವು ಇಂಗ್ಲೆಂಡಿಗೆ ಭೇಟಿ ನೀಡಿದ ಜುಲೈ ತಿಂಗಳಿನಲ್ಲಿ ರಾತ್ರಿ ಹತ್ತಾದರೂ ಕತ್ತಲಾಗುತ್ತಿರಲಿಲ್ಲ. ಆದರೆ ಸ್ಯಾಲಿಸ್‌ಬರಿಯ ಬಯಲಿನಲ್ಲಿ ಸಂಜೆ ಆರಕ್ಕೇ ಮೋಡ ಕವಿದಿದ್ದು ಇಡೀ ವಾತಾವರಣವೇ ಮಸಕು ಮಸಕಾದಂತಿತ್ತು. ಶೀತಲ ಗಾಳಿ ರೊಯ್ಯನೆ ಬೀಸುತ್ತಿತ್ತು. ಆ ಗಾಳಿಯಲ್ಲಿ ಸ್ಟೋನ್‌ಹೆಂಜ್‌ನ ನಿಗೂಢ ಬಿಡಿಸಿ ಹೇಳುವ ಏನಾದರೂ ಪಿಸುಮಾತಿದೆಯೇನೋ ಎಂದು ಆಲಿಸುವ ನನ್ನ ಪ್ರಯತ್ನ ವಿಫಲವಾಗುತ್ತಿತ್ತು. ಬೆನ್ನಿಗೇರಿಸಿದ್ದ ಚೀಲ ಪ್ರಶ್ನೆಗಳಿಂದ ತುಂಬಿರುವಂತೆ ಭಾರವೆನ್ನಿಸುತ್ತಿತ್ತು.
(Photos courtesy: Wessex Archaeology)
ಸೆನ್‌ಹೆಂಜ್ ನಿರಂತರವಾಗಿ ಸುಮಾರು ಎರಡು ಸಾವಿರ ವರ್ಷಗಳ ಕಾಲ ವಿಕಾಸಗೊಂಡ ರಚನೆಯಾಗಿದೆ. ಕಾರ್ಬನ್ ಡೇಟಿಂಗ್ ಅನ್ವಯ ಸ್ಟೋನ್‌ಹೆಂಜ್‌ನ ಶಿಲಾರಚನೆಯ ಮೊದಲ ಹಂತದ ನಿರ್ಮಾಣ ಕಾರ್ಯ ಸುಮಾರು ಐದು ಸಾವಿರ ವರ್ಷಗಳ ಹಿಂದೆ ಶಿಲಾಯುಗದಲ್ಲಿ ಪ್ರಾರಂಭವಾಯಿತು ಹಾಗೂ ಕೊನೆಯ ಹಂತದ ನಿರ್ಮಾಣ ಕಾರ್ಯ ಸುಮಾರು ಮೂರು ಸಾವಿರದ ಮುನ್ನೂರು ವರ್ಷಗಳ ಹಿಂದೆ ಕಂಚಿನ ಯುಗದಲ್ಲಿ ನಡೆದಿದೆ. ನಾಗರಿಕತೆಯ ಎಲ್ಲ ಹಂತಗಳನ್ನು ಕಂಡಿರುವ ಅದೊಂದು ನಿಗೂಢ ಕಾಲನೌಕೆಯಂತೆ ಭಾಸವಾಗುತ್ತದೆ. ಮೊದಲಿಗೆ ಅದರ ನಿರ್ಮಾಣ ಕಾರ್ಯ ಪ್ರಾರಂಭಿಸಿದ ಮಾನವನಲ್ಲಿ ಯಾವುದೇ ಲೋಹದ ಸಲಕರಣೆಗಳಿರಲಿಲ್ಲ. ಆಗ ಆತ ಗುಂಡಿ ತೋಡಲು ಬಳಸಿರಬಹುದಾದ ಜಿಂಕೆಯ ಕವಲುಕೊಂಬಿನ ‘ಗುದ್ದಲಿ’ಗಳು ದೊರೆತಿವೆ. ಕಾರ್ಬನ್ ಡೇಟಿಂಗ್ ಮೂಲಕ ಅವು ಕ್ರಿ.ಪೂ. 3000ದಿಂದ 2920 ವರ್ಷಗಳಷ್ಟು ಹಳೆಯವು ಎಂದು ತಿಳಿದುಬಂದಿದೆ. ಅಲ್ಲಿಯೇ ಎತ್ತಿನ ಕೆಳದವಡೆ ಎಲುಬುಗಳೂ ದೊರೆತಿದ್ದು ಅವು ಜಿಂಕೆಯ ಕೊಂಬುಗಳಿಗಿಂತ ಹಳೆಯವು ಎಂಬುದಾಗಿ ತಿಳಿದುಬಂದಿದೆ. ಎತ್ತುಗಳನ್ನು ಬಹುಶಃ ಅವರು ಬಲಿಯಾಗಿ ಬಳಸಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಸ್ಟೋನ್‌ಹೆಂಜ್‌ನ ಕೊನೆಯ ಹಂತದ ನಿರ್ಮಾಣದ ಅವಧಿಯ ಕಂಚಿನ ಕತ್ತಿಗಳೂ ದೊರೆತಿವೆ.
2002ರಲ್ಲಿ ಕಂಡುಹಿಡಿಯಲಾದ ಅಮೀಸ್‌ಬರಿ ಬಿಲ್ಲುಗಾರನ ಸಮಾಧಿ.
2002ರಲ್ಲಿ ಪ್ರಾಕ್ತನ ತಜ್ಞರಿಗೆ ಸ್ಟೋನ್‌ಹೆಂಜ್‌ನಿಂದ ಎರಡೂವರೆ ಮೈಲು ದೂರದಲ್ಲಿ ಏವಾನ್ ನದಿಯ ಪೂರ್ವದಿಕ್ಕಿನಲ್ಲಿ ಸುಮಾರು ಕ್ರಿ.ಪೂ. 2500ರಿಂದ 2300ರ ಅವಧಿಯ ‘ಅಮೀಸ್‌ಬರಿ ಬಿಲ್ಲುಗಾರ’ನೆಂದು ಕರೆಯಲ್ಪಟ್ಟಿರುವ ವ್ಯಕ್ತಿಯ ಸಮಾಧಿಯ ಅವಶೇಷಗಳು ದೊರೆತವು. ಕೆಲವರು ಆತನನ್ನು ಸ್ಟೋನ್‌ಹೆಂಜ್‌ನ ರಾಜನೆಂದೂ ಕರೆಯುತ್ತಾರೆ. ಆತನ ಸಮಾಧಿ ಮತ್ತು ಅದರಲ್ಲಿ ದೊರೆತ ಸುಮಾರು ನೂರರಷ್ಟು ವಸ್ತುಗಳು ಬಹಳ ಮುಖ್ಯವಾದುದು. ಆತನ ಸಮಾಧಿಯಲ್ಲಿ ದೊರೆತ ಬಹುಶಃ ಕಿವಿಯೋಲೆ ಅಥವಾ ತಲೆಯ ಕೂದಲಿಗೆ ಧರಿಸಬಹುದಾದಂತಹ ಚಿನ್ನದ ಆಭರಣಗಳು ಇಡೀ ಇಂಗ್ಲೆಂಡಿನಲ್ಲೇ ದೊರೆತ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳಾಗಿವೆ (ಚಿತ್ರ ನೋಡಿ).
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಚಿನ್ನದ ಕಿವಿಯೋಲೆ ಅಥವಾ ಕೂದಲು ಸಿಂಗರಿಸುವ ಆಭರಣಗಳು. ಇಡೀ ಬ್ರಿಟನ್ನಿನಲ್ಲೇ ದೊರಕಿರುವ ಅತ್ಯಂತ ಪ್ರಾಚೀನ ಚಿನ್ನದ ಆಭರಣಗಳು ಇವಾಗಿವೆ
ಆ ಸಮಯದ ಬ್ರಿಟನ್ನಿನ ಯಾವುದೇ ಸಮಾಧಿಯಲ್ಲಿರದ ಐಶ್ವರ್ಯ ಸೂಚಕ ವಸ್ತುಗಳು ಆತನ ಸಮಾಧಿಯಲ್ಲಿದ್ದವು- ತಲೆಗೆ ಧರಿಸುವ ಚಿನ್ನದ ಆಭರಣಗಳು, ತಾಮ್ರದ ಚಾಕುಗಳು, ಚಕಮಕಿ ಕಲ್ಲುಗಳು, ಪಾಲಿಶ್ ಮಾಡಿದ ಬಿಲ್ಲುಗಾರರ ಮುಷ್ಠಿ ರಕ್ಷಕಗಳು, ಲೋಹದ ಕೆಲಸ ನಡೆಸುವ ‘ದಿಂಬಿನಾಕಾರದ ಶಿಲೆ’ ಮತ್ತು ಯೂರೋಪಿನಲ್ಲಿ ಸಾಮಾನ್ಯವಾಗಿ ಇದ್ದ ಆದರೆ ಬ್ರಿಟನ್ನಿನಲ್ಲಿ ಇಲ್ಲದಿದ್ದ ವಿಶಿಷ್ಟ ‘ಬೀಕರ್’ ಶೈಲಿಯ ಕುಡಿಕೆಗಳು ಆ ಸಮಾಧಿಯಲ್ಲಿ ಕಂಡುಬಂದಿವೆ. ಆತನ ಕಾಲಿಗೆ ಏನೋ ಏಟು ತಗುಲಿ ಆತನ ಒಂದು ಕಾಲು ಊನ ಸಹ ಆಗಿತ್ತು. ಅಧ್ಯಯನದಿಂದ ತಿಳಿದು ಬಂದ ಮತ್ತೊಂದು ವಿಸ್ಮಯದ ಅಂಶವೆಂದರೆ, ಆ ಹಿರಿಯ ಬ್ರಿಟನ್ನಿನವನೇ ಆಗಿರಲಿಲ್ಲ- ಆತ ಆಲ್ಪ್ಸ್ ಪರ್ವತಗಳ, ಈಗಿನ ಸ್ವಿಟ್ಜರ್‌ಲ್ಯಾಂಡ್ ಮತ್ತು ಜರ್ಮನಿಯಿರುವ ಯೂರೋಪ್ ಪ್ರದೇಶದವನಾಗಿದ್ದ ಹಾಗೂ ಕಿರಿಯ ಬ್ರಿಟನ್ನಿನ ಹತ್ತಿರದ ವೆಸೆಕ್ಸ್‌ನವನಾಗಿದ್ದ. ವೆಸೆಕ್ಸ್ ಆರ್ಕಿಯಾಲಜಿಯ ಆಂಡ್ರೂ ಫಿಟ್ಜ್‌ಪ್ಯಾಟ್ರಿಕ್ ಹೇಳುವಂತೆ ಯೂರೋಪಿನಿಂದ ವಲಸೆಬಂದ ಹಿರಿಯ ಆ ಪ್ರದೇಶದಲ್ಲಿ ನೆಲೆಸಿ ತನ್ನ ಮಡಿಕೆ, ಕುಡಿಕೆ ತಯಾರಿಸುವ ಮತ್ತು ಲೋಹದ ಕೌಶಲ್ಯದಿಂದಾಗಿ ಸಾಕಷ್ಟು ಸಿರಿವಂತನಾಗಿ, ಮಾನ್ಯತೆಯನ್ನೂ ಪಡೆದಿದ್ದ. ಅವನ ಅಂತ್ಯಸಂಸ್ಕಾರ ಮಾಡಿದವರಿಗೆ ಪುನರ್ಜನ್ಮದಲ್ಲಿ ನಂಬಿಕೆ ಇತ್ತೆನ್ನಿಸುತ್ತದೆ, ಏಕೆಂದರೆ ಆತನಿಗೆ ಮರುಜನ್ಮದಲ್ಲಿ ಬೇಕಾಗುವ ಎಲ್ಲಾ ವಸ್ತುಗಳನ್ನು- ಬಟ್ಟೆಬರೆ, ಸಲಕರಣೆಗಳು, ಆಯುಧಗಳು, ಮಡಿಕೆ ಕುಡಿಕೆ ಮತ್ತು ಹೊಸ ಸಲಕರಣೆಗಳನ್ನು ತಯಾರಿಸಿಕೊಳ್ಳಲೆಂದು ಹೆಚ್ಚಿನ ‘ಫ್ಲಿಂಟ್’ ಶಿಲೆಗಳನ್ನು ಸಹ ಇರಿಸಿದ್ದರು.
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಫ್ಲಿಂಟ್ ಶಿಲೆಯ ಬಾಣದ ಮೊನೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬೀಕರ್ ಆಕಾರದ ಮಡಕೆಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ತಾಮ್ರದ ಚಾಕುಗಳು
ಅಮೀಸ್‌ಬರಿ ಬಿಲ್ಲುಗಾರನ ಸಮಾಧಿಯಲ್ಲಿ ದೊರೆತ ಬಿಲ್ಲುಗಾರರ ಮುಷ್ಠಿ ರಕ್ಷಕ ಪಟ್ಟಿಗಳು
ಆ ಅಮೀಸ್‌ಬರಿ ಬಿಲ್ಲುಗಾರನ ಅಧ್ಯಯನ ಮುಖ್ಯವಾದುದು ಏಕೆಂದರೆ ಆತ ಬದುಕಿದ್ದ ಸಮಯ ಸರಿಸುಮಾರು ಸ್ಟೋನ್‌ಹೆಂಜ್ ನಿರ್ಮಾಣದ ಪ್ರಾರಂಭದ ಸಮಯ. ಆತ ಅದರ ವಿನ್ಯಾಸದಲ್ಲಿ ಅಥವಾ ನಿರ್ಮಾಣದಲ್ಲಿ ಪಾಲ್ಗೊಂಡ ವ್ಯಕ್ತಿಯಾಗಿರಬಹುದು ಅಥವಾ ಅದರ ನಿರ್ಮಾಣ ಕಾರ್ಯ ನಡೆಯುತ್ತಿದ್ದುದರಿಂದ ಕುತೂಹಲದಿಂದ ಅದನ್ನು ನೋಡಲು ಬಂದ ವ್ಯಕ್ತಿಯಾಗಿರಬಹುದು. ಮತ್ತೊಂದು ಕುತೂಹಲಕರವಾದ ಅಂಶವೆಂದರೆ ಆತ ಬ್ರಿಟನ್ನಿನವನಾಗಿರದೆ ಯೂರೋಪ್ ಖಂಡದವನಾಗಿದ್ದುದು. ಆತನ ಸಮಾಧಿಯಲ್ಲಿದ್ದ ‘ಬೀಕರ್’ ರೀತಿಯ ಮಡಿಕೆ ಕುಡಿಕೆಗಳು ಯೂರೋಪಿನಲ್ಲಿದ್ದವು ಹಾಗೂ ಅವನ ಬದುಕಿದ್ದ ಸಮಯದಲ್ಲೇ ಅವು ಬ್ರಿಟನ್ನಿನಲ್ಲಿ ಕಂಡುಬಂದಿವೆ. ವಿಸ್ಮಯಕರವಾದ ವಿಷಯವೆಂದರೆ ಜನ ಆಗ ಖಂಡಾಂತರ ಪ್ರಯಾಣ ಮಾಡುತ್ತಿದ್ದರು ಹಾಗೂ ಆಗ ಸಾಂಸ್ಕೃತಿಕ ವಿನಿಮಯ ನಡೆಯುತ್ತಿತ್ತು ಎನ್ನುವುದು. ಆತ ಬದುಕಿದ್ದ ಸಮಯ ಬ್ರಿಟನ್ನಿನ ಕಂಚಿನ ಯುಗದ ಪ್ರಾರಂಭದ ಸಮಯವಾಗಿತ್ತು. ‘ತಾಮ್ರ ಮತ್ತು ಚಿನ್ನದಂತಹ ಲೋಹಗಳು ಯೂರೋಪಿನಿಂದ ಬ್ರಿಟನ್ ಪ್ರವೇಶಿಸಿತೆನ್ನುವ ಸಂಶಯ ಮೊದಲಿನಿಂದಲೂ ಇತ್ತು. ಈ ಅಮೀಸ್‌ಬರಿಯ ಬಿಲ್ಲುಗಾರ ಅದಕ್ಕೆ ಪುರಾವೆಯಾಗಿದ್ದಾನೆ’ ಎನ್ನುತ್ತಾರೆ ವೆಸೆಕ್ಸ್ ಆರ್ಕಿಯಾಲಜಿಯ ಡಾ. ಆಂಡ್ರೂ ಫಿಟ್ಜ್ ಪ್ಯಾಟ್ರಿಕ್.
ಡಾ.ಜೆ.ಬಾಲಕೃಷ್ಣ
j.balakrishna@gmail.com
ಶನಿವಾರ, ಜೂನ್ 09, 2012
ಮುಲ್ಲಾ ನಸ್ರುದ್ದೀನ್ ಕತೆಗಳು-5
ಜೂನ್ 2012ರ 'ಸಂವಾದ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 5ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್
ಸಿಕ್ಕಷ್ಟು ಸೀರುಂಡೆ
ಆ ದಿನ ರಾತ್ರಿ ನಿದ್ರೆಯಲ್ಲಿದ್ದ ಮುಲ್ಲಾ ನಸ್ರುದ್ದೀನನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಆತನ ಗೆಳೆಯ ಮುಲ್ಲಾನಿಗೆ ಒಂಭತ್ತು ನಾಣ್ಯಗಳನ್ನು ನೀಡುತ್ತಿದ್ದ. ಆದರೆ ಮುಲ್ಲಾ ಕನಿಷ್ಠ ಹತ್ತು ನಾಣ್ಯಗಳನ್ನಾದರೂ ಕೊಡದಿದ್ದರೆ ಅವುಗಳನ್ನು ಸ್ವೀಕರಿಸುವುದಿಲ್ಲ ಎನ್ನುತ್ತಿದ್ದ. ಆ ಗೆಳೆಯರ ನಡುವೆ ಮಾತುಕತೆ ಮುಂದುವರಿದಿತ್ತು. ಅಷ್ಟರಲ್ಲಿ ರಸ್ತೆಯಲ್ಲಿ ಏನೋ ಜೋರಾಗಿ ಸಪ್ಪಳವಾಗಿ ಮುಲ್ಲಾನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನೋಡಿದ ಮುಲ್ಲಾನ ಕೈ ಚಾಚಿದಂತೆಯೇ ಇತ್ತು, ಆದರೆ ಅದರಲ್ಲಿ ಯಾವ ನಾಣ್ಯವೂ ಇರಲಿಲ್ಲ. ತಕ್ಷಣ ಕಣ್ಣು ಮುಚ್ಚಿದ ಮುಲ್ಲಾ, ‘ಆಯಿತು ಗೆಳೆಯಾ, ಆ ಒಂಭತ್ತೇ ನಾಣ್ಯಗಳನ್ನು ಕೊಡು’ ಎಂದ.
ವಿಧಿಯೆಂಬ ಊಹೆ
ಒಬ್ಬ ವ್ಯಕ್ತಿ ಬಂದು ವಿದ್ವಾಂಸ ಮುಲ್ಲಾ ನಸ್ರುದ್ದೀನ್‌ನನ್ನು ‘ವಿಧಿಯ ಅರ್ಥವೇನು?’ ಎಂದು ಕೇಳಿದ.
‘ವಿಧಿಯೆನ್ನುವುದು ಒಂದು ಊಹೆ’ ಎಂದ ನಸ್ರುದ್ದೀನ್ ತನ್ನ ಗಡ್ಡ ಕೆರೆದುಕೊಳ್ಳುತ್ತಾ.
‘ಅದನ್ನು ವಿವರಿಸಿ ಹೇಳುತ್ತೀರಾ?’ ಆತ ಅರ್ಥವಾಗದೆ ಕೇಳಿದ.
ಮುಲ್ಲಾ ಆತನೆಡೆಗೆ ನೋಡುತ್ತಾ, ‘ಎಲ್ಲವೂ ಸರಿಯಾಗುತ್ತದೆ ಎಂದು ನೀನು ಊಹಿಸಿಕೊಳ್ಳುತ್ತೀಯಾ- ಆದರೆ ಆ ರೀತಿ ನಡೆಯದಾದಾಗ ಅದನ್ನು ದುರಾದೃಷ್ಟ ಎನ್ನುತ್ತಾರೆ ಅಥವಾ ನೀನು ಊಹಿಸಿದಂತೆಯೇ ನಡೆದರೆ ಅದು ನಿನ್ನ ಅದೃಷ್ಟ ಎನ್ನುತ್ತಾರೆ. ಇದೇ ರೀತಿ ನಡೆಯಬಹುದೆಂದು ನೀನು ಕೆಲವು ಕೆಲಸಗಳನ್ನು ಮಾಡುತ್ತೀಯೆ. ಆ ರೀತಿ ನಡೆಯದಾದಾಗ ನಿನಗೆ ಮುಂದಾಲೋಚನೆ ಇಲ್ಲವೆನ್ನುತ್ತಾರೆ. ನಿನಗೆ ಭವಿಷ್ಯವಾಗಲಿ ಮುಂದೆ ನಡೆಯುವುದಾಗಲಿ ತಿಳಿದಿಲ್ಲವೆಂದು ಊಹಿಸಿಕೊ, ಆಗ ಅದನ್ನೇ ನಿನ್ನ ವಿಧಿಯೆನ್ನುತ್ತಾರೆ’ ಎಂದ.
ವಿಮರ್ಶಕ ಮುಲ್ಲಾ
ಆ ರಾಜ್ಯದ ಸುಲ್ತಾನನಿಗೆ ತಾನು ಇದ್ದಕ್ಕಿದ್ದಂತೆ ಕವಿಯಾಗಬೇಕೆನ್ನಿಸಿತು. ಹಗಲು ರಾತ್ರಿ ಕೂತು ಪದ್ಯವೊಂದನ್ನು ರಚಿಸಿದ. ಆ ಪ್ರಾಂತ್ಯದಲ್ಲೆಲ್ಲಾ ಅತ್ಯಂತ ಖ್ಯಾತ ಕವಿಯಾಗಿದ್ದ ನಸ್ರುದ್ದೀನ್‌ನನ್ನು ತನ್ನ ಆಸ್ಥಾನಕ್ಕೆ ಕರೆಸಿ ತನ್ನ ಕಾವ್ಯ ವಾಚನ ಆಲಿಸುವಂತೆ ಕೇಳಿದ. ಅತ್ಯಂತ ತನ್ಮಯನಾಗಿ ಸುಲ್ತಾನ ಕಾವ್ಯ ವಾಚನ ಮಾಡಿದ. ಅದು ನಸ್ರುದ್ದೀನ್ ಕೇಳಿದ ಪದ್ಯಗಳಲ್ಲೇ ಅತ್ಯಂತ ಕೆಟ್ಟದ್ದಾಗಿತ್ತು. ಆದರೂ ಸಹಿಸಿಕೊಂಡು ಮೌನವಾಗಿ ಪದ್ಯವನ್ನು ಕೇಳಿ ತಲೆದೂಗಿದ.
ಅಷ್ಟಕ್ಕೇ ಬಿಟ್ಟಿದ್ದಲ್ಲಿ ಏನೂ ಸಮಸ್ಯೆ ಇರಲಿಲ್ಲ. ಆದರೆ ಸುಲ್ತಾನ ತನ್ನ ವಾಚನ ಮುಗಿಸಿ ತನ್ನ ಕಾವ್ಯ ಹೇಗಿದೆ ಎಂದು ನಸ್ರುದ್ದೀನ್‌ನನ್ನು ಕೇಳಿದ. ನಸ್ರುದ್ದೀನ್ ಪೀಕಲಾಟಕ್ಕೆ ಸಿಕ್ಕಿಕೊಂಡ. ಆದರೆ ಆತ ನಿಷ್ಠುರವಾದಿ, ಇದ್ದದ್ದು ಇದ್ದಹಾಗೇ ಹೇಳುವವನು. ‘ನಿಮ್ಮ ಕಾವ್ಯದ ಬಗೆಗೆ ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ’ ಎನ್ನುತ್ತಾ ಎದ್ದುನಿಂತ. ಖ್ಯಾತ ಕವಿ ನಸ್ರುದ್ದೀನ್ ತನ್ನ ಪದ್ಯವನ್ನು ಹಾಡಿಹೊಗಳುತ್ತಾನೆ ಎಂದು ಸುಲ್ತಾನ್ ಗರ್ವದಿಂದ ಗಡ್ಡ ನೇವರಿಸಿಕೊಳ್ಳುತ್ತಿದ್ದ.
‘ನಿಜ ಹೇಳುತ್ತೇನೆ, ನಿಮ್ಮ ಪದ್ಯ ಅತ್ಯಂತ ಕೆಟ್ಟದ್ದಾಗಿದೆ......’ ಎಂದ ನಸ್ರುದ್ದೀನ್.
ಅವನ ಮಾತಿನಿಂದ ಅತ್ಯಂತ ಕೋಪಗೊಂಡ ಸುಲ್ತಾನ, ‘ಸೈನಿಕರೇ! ಈ ವ್ಯಕ್ತಿಯನ್ನು ಸೆರೆಮನೆಗೆ ಹಾಕಿ’ ಎಂದ. ಸೈನಿಕರು ನಸ್ರುದ್ದೀನ್‌ನನ್ನು ಹಿಡಿದುಕೊಂಡು ಹೋಗುವಾಗ ‘ಸೆರೆಮನೆ ವಾಸ ಮುವ್ವತ್ತು ದಿನಗಳು....’ ಎನ್ನುತ್ತಾ ಎಚ್ಚರಿಕೆಯೆಂಬಂತೆ ನಸ್ರುದ್ದೀನ್ ಕಡೆಗೆ ತನ್ನ ಬೆರಳು ತೋರಿಸಿದ.
ಮುವ್ವತ್ತು ದಿನಗಳ ಸೆರೆಮನೆ ವಾಸದ ನಂತರ ನಸ್ರುದ್ದೀನ್ ತನ್ನ ಮನೆಯಲ್ಲಿದ್ದಾಗ ಮತ್ತೊಂದು ದಿನ ಸುಲ್ತಾನನಿಂದ ಕರೆಬಂದಿತು.
ಸುಲ್ತಾನ ತನ್ನ ಮತ್ತೊಂದು ಪದ್ಯದ ವಾಚನಕ್ಕೆ ನಸ್ರುದ್ದೀನ್‌ನನ್ನು ಆಹ್ವಾನಿಸಿದ್ದ. ಎಂದಿನಂತೆ ಕಾವ್ಯವಾಚನ ನಡೆಯಿತು ಹಾಗೂ ಪುನಃ ಕವಿ ನಸ್ರುದ್ದೀನ್‌ನಿಗೆ ತನ್ನ ಅಭಿಪ್ರಾಯ ತಿಳಿಸುವಂತೆ ಹೇಳಲಾಯಿತು.
ಈ ಬಾರಿ ನಸ್ರುದ್ದೀನ್ ಏನೂ ಹೇಳಲಿಲ್ಲ. ಎದ್ದು ನಿಂತವನೇ ಬಾಗಿಲಿನ ಕಡೆಗೆ ನಡೆಯತೊಡಗಿದ. ಅವನ ವರ್ತನೆ ಅರ್ಥವಾಗದ ಸುಲ್ತಾನ, ‘ಎಲ್ಲಿಗೆ ಹೋಗುತ್ತಿದ್ದೀಯೆ?’ ಎಂದು ಕೇಳಿದ.
‘ಸೆರೆಮನೆಗೆ’ ಎಂದ ನಸ್ರುದ್ದೀನ್.
ಸತ್ಯವನ್ನೇ ಹೇಳುವೆ.....
ತನ್ನ ನಗರಕ್ಕೆ ಸುತ್ತಮುತ್ತಲ ಜನರೆಲ್ಲಾ ನಗರದ ದ್ವಾರಪಾಲಕರಿಗೆ ಅದೂ ಇದೂ ಸುಳ್ಳು ಹೇಳಿ ನಗರಕ್ಕೆ ಬಂದು ದಾಂಧಲೆ ಮಾಡುತ್ತಿದ್ದುದು ಸುಲ್ತಾನನಿಗೆ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಹೇಗಾದರೂ ಮಾಡಿ ಕಡಿವಾಣ ಹಾಕಬೇಕೆಂದು ನಿರ್ಧರಿಸಿದ ಸುಲ್ತಾನ ತನ್ನ ದ್ವಾರಪಾಲಕರಿಗೆ ನಗರಕ್ಕೆ ಬರುವವರು ಹೇಳುವ ತಮ್ಮ ಪ್ರವೇಶದ ಕಾರಣ ಸುಳ್ಳಾಗಿದ್ದಲ್ಲಿ ಅವರನ್ನು ಅಲ್ಲೇ ನೇಣಿಗೆ ಹಾಕುವಂತೆ ಅಜ್ಞಾಪಿಸಿದ.
ಈ ಅಜ್ಞೆಯ ಬಗ್ಗೆ ಕೇಳಿದ್ದ ಮುಲ್ಲಾ ನಸ್ರುದ್ದೀನ್ ಅದೊಂದು ದಿನ ನಗರಕ್ಕೆ ತನ್ನ ಕತ್ತೆಯ ಮೇಲೆ ಕೂತು ಹೊರಟ. ನಗರದ ಪ್ರವೇಶ ದ್ವಾರದಲ್ಲಿದ್ದ ದ್ವಾರಪಾಲಕರು ನಸ್ರುದ್ದೀನ್‌ನನ್ನು ತಡೆದು ನಗರದಲ್ಲಿ ಆತನಿಗೆ ಇರುವ ಕೆಲಸವೇನು ಹಾಗೂ ಅದರ ಬಗ್ಗೆ ಸತ್ಯವನ್ನೇ ಹೇಳಬೇಕು, ಇಲ್ಲದಿದ್ದಲ್ಲಿ ಅವನನ್ನು ಅಲ್ಲೇ ನೇಣಿಗೆ ಹಾಗುವುದಾಗಿ ಎಚ್ಚರಿಕೆ ನೀಡಿದರು. ಅದಕ್ಕೆ ಮುಲ್ಲಾ ನಸ್ರುದ್ದೀನ್,
‘ನಾನು ಸತ್ಯವನ್ನೇ ಹೇಳುತ್ತೇನೆ. ನನಗೆ ಬದುಕು ಸಾಕಾಗಿದೆ. ನಿಮ್ಮ ಕೈಯಲ್ಲಿ ನೇಣು ಹಾಕಿಸಿಕೊಂಡು ಸಾಯೋಣವೆಂದು ಬಂದಿದ್ದೇನೆ’ ಎಂದ.
‘ಸುಳ್ಳು ಹೇಳುತ್ತಿದ್ದೀಯಾ! ನಿನ್ನನ್ನು ಖಂಡಿತವಾಗಿ ನೇಣು ಹಾಕುತ್ತೇವೆ!!’ ಎಂದರು ದ್ವಾರಪಾಲಕರು.
‘ಹಾಗಾದರೆ, ನಾನು ಹೇಳಿದ್ದು ಸತ್ಯವಾಗುತ್ತದೆ. ಸತ್ಯ ಹೇಳುವವರನ್ನು ನೇಣಿಗೆ ಹಾಕಬಾರದಲ್ಲವೆ?’ ಕೇಳಿದ ನಸ್ರುದ್ದೀನ್.
ಜ್ಞಾನೋದಯದ ಹಾದಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಊರಿನ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ. ಒಂದಷ್ಟು ಜನರ ಗುಂಪು ಆತನನ್ನು ಹಿಂಬಾಲಿಸುತ್ತಿತ್ತು ಹಾಗೂ ಅವರು ನಸ್ರುದ್ದೀನ್ ಏನು ಮಾಡುತ್ತಾನೋ ಅದನ್ನೇ ಅನುಕರಿಸುತ್ತಿದ್ದರು. ನಸ್ರುದ್ದೀನ್ ಒಂದೆರಡು ಹೆಜ್ಜೆ ಹಾಕಿ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮುಂದಕ್ಕೆ ಬಾಗಿ ತಕ್ಷಣ ಮೇಲಕ್ಕೆ ಹಾರಿ ‘ಹ್ಹೆ...ಹ್ಹೆ...ಹ್ಹೇ....’ ಎಂದು ಜೋರಾಗಿ ಕೇಕೆ ಹಾಕುತ್ತಿದ್ದ. ಅವನ ಹಿಂಬಾಲಕರು ಅದನ್ನೇ ಅನುಕರಿಸುತ್ತಿದ್ದರು. ಅವರೆಲ್ಲರ ನಡತೆ ಊರಿನ ಜನರಿಗೆ ತಮಾಷೆಯಾಗಿ ಕಾಣುತ್ತಿತ್ತು.
ಆ ರಸ್ತೆಯಲ್ಲಿನ ಅಂಗಡಿಯೊಂದರ ವ್ಯಾಪಾರಿ ನಸ್ರುದ್ದೀನ್‌ನ ಗೆಳೆಯನಾಗಿದ್ದ. ಆತ ತನ್ನ ಗೆಳೆಯನ ಮಂಗಾಟ ನೋಡಿ, ‘ಏನಿದು ನಸ್ರುದ್ದೀನ್, ಏನು ಮಾಡುತ್ತಿದ್ದೀಯ? ಇವರೆಲ್ಲಾ ಯಾರು? ಅವರೇಕೆ ನಿನ್ನನ್ನು ಅನುಕರಿಸುತ್ತಿದ್ದಾರೆ? ಎಂದು ಕೇಳಿದ.
‘ನಾನು ಸೂಫಿ ಗುರುವಾಗಿದ್ದೇನೆ’ ಹೇಳಿದ ನಸ್ರುದ್ದೀನ್, ‘ಇವರೆಲ್ಲಾ ನನ್ನ ಶಿಷ್ಯರು. ಅವರಿಗೆ ನಾನು ಜ್ಞಾನೋದಯದ ಹಾದಿ ತೋರಿಸುತ್ತಿದ್ದೇನೆ.’
‘ಹೌದೆ? ಆದರೆ, ಅವರಿಗೆ ಯಾವಾಗ ಜ್ಞಾನೋದಯವಾಗಿದೆಯೆಂದು ನಿನಗೆ ಹೇಗೆ ತಿಳಿಯುತ್ತದೆ?’ ಎಂದ ಆ ಗೆಳೆಯ.
‘ಹೋ, ಅದು ಬಹಳ ಸುಲಭ. ಪ್ರತಿ ದಿನ ಬೆಳಿಗ್ಗೆ ನಾನು ನನ್ನ ಶಿಷ್ಯರನ್ನು ಎಣಿಸುತ್ತೇನೆ. ಯಾರ‍್ಯಾರು ಬಿಟ್ಟುಹೋಗಿದ್ದಾರೋ, ಅವರಿಗೆಲ್ಲಾ ಜ್ಞಾನೋದಯ ವಾಗಿದೆಯೆಂದು ಅರ್ಥ!’ ಎಂದ ಸೂಫಿ ಗುರು ನಸ್ರುದ್ದೀನ್.
ಚಂದ್ರನೇ ವಾಸಿ!
ಆ ದಿನ ತಾನು ಸದಾ ಹರಟೆ ಹೊಡೆಯಲು ಹೋಗುವಾ ಚಹಾದಂಗಡಿಗೆ ಬಂದ ಮುಲ್ಲಾ ನಸ್ರುದ್ದೀನ್, ‘ಸೂರ್ಯನಿಗಿಂತ ಚಂದ್ರನೇ ಹೆಚ್ಚು ಉಪಕಾರಿ’ ಎಂದ ಅಲ್ಲೇ ಗೆಳೆಯರ ಜೊತೆ ಕೂಡುತ್ತ. ಅಲ್ಲೇ ಕೂತಿದ್ದ ಒಬ್ಬ ಮುದುಕ, ‘ಅದು ಹೇಗೆ ಮುಲ್ಲಾ?’ ಎಂದು ಕೇಳಿದ.
‘ಇನ್ನೇನು? ನಮಗೆ ರಾತ್ರಿಯ ಕತ್ತಲಲ್ಲಿ ಬೆಳಕು ಬೇಕಾಗಿರುವಾಗ ಸೂರ್ಯ ಬರುವುದಿಲ್ಲ. ಆಗ ನಮಗೆ ಬೆಳಕು ಕೊಡುವುದು ಚಂದ್ರ ತಾನೆ?’ ಎಂದ ನಸ್ರುದ್ದೀನ್.
ಮುಲ್ಲಾನ ವಯಸ್ಸು
ಬಹಳ ವರ್ಷಗಳ ನಂತರ ಗೆಳೆಯನೊಬ್ಬ ಮುಲ್ಲಾನನ್ನು ಭೇಟಿಯಾದ. ಮುಲ್ಲಾನನ್ನು ಅಪ್ಪಿಕೊಳ್ಳುತ್ತಾ, ‘ಹೇಗಿದ್ದೀಯ ಗೆಳೆಯಾ? ನೋಡಿ ಬಹಳ ವರ್ಷಗಳೇ ಆದುವು. ಈಗ ನಿನ್ನ ವಯಸ್ಸೆಷ್ಟು?’ ಎಂದು ಕೇಳಿದ.
‘ನನಗೆ ನಲವತ್ತು ವರ್ಷ ವಯಸ್ಸು ಎಂದ’ ಮುಲ್ಲಾ.
‘ಅದ್ಹೇಗೆ ಸಾಧ್ಯ? ಕಳೆದ ಸಾರಿ ಭೇಟಿಯಾದಾಗಲೂ ನೀನು ನಿನ್ನ ವಯಸ್ಸು ನಲವತ್ತು ಎಂದೇ ಹೇಳಿದ್ದೆ?’ ಕೇಳಿದ ಆ ಗೆಳೆಯ.
‘ಹೌದಪ್ಪ. ನಾನು ದಿನಕ್ಕೊಮ್ಮೆ ಮಾತು ಬದಲಿಸುವವನಲ್ಲ. ಹೇಳಿದ ಮಾತಿಗೆ ಬದ್ಧನಾಗಿರುವವನು ನಾನು’ ಎಂದ ಮುಲ್ಲಾ ನಸ್ರುದ್ದೀನ್.
ಎಷ್ಟು ವರ್ಷ ದೊಡ್ಡವನು?
‘ನಿನ್ನ ವಯಸ್ಸೆಷ್ಟು?’ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿದ.
‘ನಾನು ನನ್ನ ತಮ್ಮನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ.
‘ನಿನಗೆ ಅಷ್ಟು ನಿಖರವಾಗಿ ಗೊತ್ತೇ?’
‘ಹೌದು. ಕಳೆದ ವರ್ಷ ನನ್ನ ತಮ್ಮ ಯಾರೊಂದಿಗೋ ನನ್ನ ಅಣ್ಣ ನನಗಿಂತ ಎರಡು ವರ್ಷ ದೊಡ್ಡವನು ಎಂದು ಹೇಳುತ್ತಿದ್ದ. ಅವನು ಆ ಮಾತು ಹೇಳಿ ಒಂದು ವರ್ಷವಾಗಿದೆ. ಹಾಗಾಗಿ ಈಗ ನಾನು ಅವನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ ನಸ್ರುದ್ದೀನ್.
ಮುಲ್ಲಾ ನಸ್ರುದ್ದೀನ್‌ನ ಊರಿನಲ್ಲಿ ಹೊಸ ವಸ್ತ್ರ ವಿನ್ಯಾಸಗಳ ಫ್ಯಾಶನ್ ಶೋ ನಡೆಯುತ್ತಿತ್ತು. ಸುಂದರ ಯುವತಿಯರು ಆ ಹೊಸ ವಸ್ತ್ರಗಳನ್ನು ಧರಿಸಿ ಪ್ರದರ್ಶನ ನಡೆಸಿದರು. ಮುಲ್ಲಾ ಹೊರಗೆ ಬಂದಾಗ ಆ ಹೊಸ ವಸ್ತ್ರಗಳನ್ನು ಮಾರಾಟಕ್ಕೆ ಇರಿಸಿದ್ದರು. ಅದನ್ನು ನೋಡಿದ ಮುಲ್ಲಾ, ‘ಇದು ಮೋಸ’ ಎಂದರಚಿದ. ಆಯೋಜಕರು ಆತನ ಬಳಿ ಬಂದು ‘ಯಾವುದು ಮೋಸ?’ ಎಂದು ಕೇಳಿದರು.
‘ಒಳಗಡೆ ಸುಂದರ ಯುವತಿಯರು ಹಾಗೂ ವಸ್ತ್ರಗಳನ್ನು ಪ್ರದರ್ಶಿಸಿದಿರಿ. ಆದರೆ ಇಲ್ಲಿ ವಸ್ತ್ರಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದೀರಾ!’ ಎಂದ ಮುಲ್ಲಾ ನಸ್ರುದ್ದೀನ್.
ಮಂಗಳವಾರ, ಜೂನ್ 05, 2012
ಶುಕ್ರವಾರ, ಜೂನ್ 01, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)