ಜೂನ್ 2012ರ 'ಸಂವಾದ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 5ನೇ ಕಂತು.
ಚಿತ್ರಗಳು: ಮುರಳೀಧರ ರಾಠೋಡ್
ಸಿಕ್ಕಷ್ಟು ಸೀರುಂಡೆ
ಆ ದಿನ ರಾತ್ರಿ ನಿದ್ರೆಯಲ್ಲಿದ್ದ ಮುಲ್ಲಾ ನಸ್ರುದ್ದೀನನಿಗೆ ಒಂದು ಕನಸು ಬಿತ್ತು. ಕನಸಿನಲ್ಲಿ ಆತನ ಗೆಳೆಯ ಮುಲ್ಲಾನಿಗೆ ಒಂಭತ್ತು ನಾಣ್ಯಗಳನ್ನು ನೀಡುತ್ತಿದ್ದ. ಆದರೆ ಮುಲ್ಲಾ ಕನಿಷ್ಠ ಹತ್ತು ನಾಣ್ಯಗಳನ್ನಾದರೂ ಕೊಡದಿದ್ದರೆ ಅವುಗಳನ್ನು ಸ್ವೀಕರಿಸುವುದಿಲ್ಲ ಎನ್ನುತ್ತಿದ್ದ. ಆ ಗೆಳೆಯರ ನಡುವೆ ಮಾತುಕತೆ ಮುಂದುವರಿದಿತ್ತು. ಅಷ್ಟರಲ್ಲಿ ರಸ್ತೆಯಲ್ಲಿ ಏನೋ ಜೋರಾಗಿ ಸಪ್ಪಳವಾಗಿ ಮುಲ್ಲಾನಿಗೆ ಎಚ್ಚರವಾಯಿತು. ಕಣ್ಣುಬಿಟ್ಟು ನೋಡಿದ ಮುಲ್ಲಾನ ಕೈ ಚಾಚಿದಂತೆಯೇ ಇತ್ತು, ಆದರೆ ಅದರಲ್ಲಿ ಯಾವ ನಾಣ್ಯವೂ ಇರಲಿಲ್ಲ. ತಕ್ಷಣ ಕಣ್ಣು ಮುಚ್ಚಿದ ಮುಲ್ಲಾ, ‘ಆಯಿತು ಗೆಳೆಯಾ, ಆ ಒಂಭತ್ತೇ ನಾಣ್ಯಗಳನ್ನು ಕೊಡು’ ಎಂದ.
ವಿಧಿಯೆಂಬ ಊಹೆ
ಒಬ್ಬ ವ್ಯಕ್ತಿ ಬಂದು ವಿದ್ವಾಂಸ ಮುಲ್ಲಾ ನಸ್ರುದ್ದೀನ್‌ನನ್ನು ‘ವಿಧಿಯ ಅರ್ಥವೇನು?’ ಎಂದು ಕೇಳಿದ.
‘ವಿಧಿಯೆನ್ನುವುದು ಒಂದು ಊಹೆ’ ಎಂದ ನಸ್ರುದ್ದೀನ್ ತನ್ನ ಗಡ್ಡ ಕೆರೆದುಕೊಳ್ಳುತ್ತಾ.
‘ಅದನ್ನು ವಿವರಿಸಿ ಹೇಳುತ್ತೀರಾ?’ ಆತ ಅರ್ಥವಾಗದೆ ಕೇಳಿದ.
ಮುಲ್ಲಾ ಆತನೆಡೆಗೆ ನೋಡುತ್ತಾ, ‘ಎಲ್ಲವೂ ಸರಿಯಾಗುತ್ತದೆ ಎಂದು ನೀನು ಊಹಿಸಿಕೊಳ್ಳುತ್ತೀಯಾ- ಆದರೆ ಆ ರೀತಿ ನಡೆಯದಾದಾಗ ಅದನ್ನು ದುರಾದೃಷ್ಟ ಎನ್ನುತ್ತಾರೆ ಅಥವಾ ನೀನು ಊಹಿಸಿದಂತೆಯೇ ನಡೆದರೆ ಅದು ನಿನ್ನ ಅದೃಷ್ಟ ಎನ್ನುತ್ತಾರೆ. ಇದೇ ರೀತಿ ನಡೆಯಬಹುದೆಂದು ನೀನು ಕೆಲವು ಕೆಲಸಗಳನ್ನು ಮಾಡುತ್ತೀಯೆ. ಆ ರೀತಿ ನಡೆಯದಾದಾಗ ನಿನಗೆ ಮುಂದಾಲೋಚನೆ ಇಲ್ಲವೆನ್ನುತ್ತಾರೆ. ನಿನಗೆ ಭವಿಷ್ಯವಾಗಲಿ ಮುಂದೆ ನಡೆಯುವುದಾಗಲಿ ತಿಳಿದಿಲ್ಲವೆಂದು ಊಹಿಸಿಕೊ, ಆಗ ಅದನ್ನೇ ನಿನ್ನ ವಿಧಿಯೆನ್ನುತ್ತಾರೆ’ ಎಂದ.
ವಿಮರ್ಶಕ ಮುಲ್ಲಾ
ಆ ರಾಜ್ಯದ ಸುಲ್ತಾನನಿಗೆ ತಾನು ಇದ್ದಕ್ಕಿದ್ದಂತೆ ಕವಿಯಾಗಬೇಕೆನ್ನಿಸಿತು. ಹಗಲು ರಾತ್ರಿ ಕೂತು ಪದ್ಯವೊಂದನ್ನು ರಚಿಸಿದ. ಆ ಪ್ರಾಂತ್ಯದಲ್ಲೆಲ್ಲಾ ಅತ್ಯಂತ ಖ್ಯಾತ ಕವಿಯಾಗಿದ್ದ ನಸ್ರುದ್ದೀನ್‌ನನ್ನು ತನ್ನ ಆಸ್ಥಾನಕ್ಕೆ ಕರೆಸಿ ತನ್ನ ಕಾವ್ಯ ವಾಚನ ಆಲಿಸುವಂತೆ ಕೇಳಿದ. ಅತ್ಯಂತ ತನ್ಮಯನಾಗಿ ಸುಲ್ತಾನ ಕಾವ್ಯ ವಾಚನ ಮಾಡಿದ. ಅದು ನಸ್ರುದ್ದೀನ್ ಕೇಳಿದ ಪದ್ಯಗಳಲ್ಲೇ ಅತ್ಯಂತ ಕೆಟ್ಟದ್ದಾಗಿತ್ತು. ಆದರೂ ಸಹಿಸಿಕೊಂಡು ಮೌನವಾಗಿ ಪದ್ಯವನ್ನು ಕೇಳಿ ತಲೆದೂಗಿದ.
ಅಷ್ಟಕ್ಕೇ ಬಿಟ್ಟಿದ್ದಲ್ಲಿ ಏನೂ ಸಮಸ್ಯೆ ಇರಲಿಲ್ಲ. ಆದರೆ ಸುಲ್ತಾನ ತನ್ನ ವಾಚನ ಮುಗಿಸಿ ತನ್ನ ಕಾವ್ಯ ಹೇಗಿದೆ ಎಂದು ನಸ್ರುದ್ದೀನ್‌ನನ್ನು ಕೇಳಿದ. ನಸ್ರುದ್ದೀನ್ ಪೀಕಲಾಟಕ್ಕೆ ಸಿಕ್ಕಿಕೊಂಡ. ಆದರೆ ಆತ ನಿಷ್ಠುರವಾದಿ, ಇದ್ದದ್ದು ಇದ್ದಹಾಗೇ ಹೇಳುವವನು. ‘ನಿಮ್ಮ ಕಾವ್ಯದ ಬಗೆಗೆ ನನ್ನ ಅನಿಸಿಕೆಯನ್ನು ಪ್ರಾಮಾಣಿಕವಾಗಿ ಹೇಳುತ್ತೇನೆ’ ಎನ್ನುತ್ತಾ ಎದ್ದುನಿಂತ. ಖ್ಯಾತ ಕವಿ ನಸ್ರುದ್ದೀನ್ ತನ್ನ ಪದ್ಯವನ್ನು ಹಾಡಿಹೊಗಳುತ್ತಾನೆ ಎಂದು ಸುಲ್ತಾನ್ ಗರ್ವದಿಂದ ಗಡ್ಡ ನೇವರಿಸಿಕೊಳ್ಳುತ್ತಿದ್ದ.
‘ನಿಜ ಹೇಳುತ್ತೇನೆ, ನಿಮ್ಮ ಪದ್ಯ ಅತ್ಯಂತ ಕೆಟ್ಟದ್ದಾಗಿದೆ......’ ಎಂದ ನಸ್ರುದ್ದೀನ್.
ಅವನ ಮಾತಿನಿಂದ ಅತ್ಯಂತ ಕೋಪಗೊಂಡ ಸುಲ್ತಾನ, ‘ಸೈನಿಕರೇ! ಈ ವ್ಯಕ್ತಿಯನ್ನು ಸೆರೆಮನೆಗೆ ಹಾಕಿ’ ಎಂದ. ಸೈನಿಕರು ನಸ್ರುದ್ದೀನ್‌ನನ್ನು ಹಿಡಿದುಕೊಂಡು ಹೋಗುವಾಗ ‘ಸೆರೆಮನೆ ವಾಸ ಮುವ್ವತ್ತು ದಿನಗಳು....’ ಎನ್ನುತ್ತಾ ಎಚ್ಚರಿಕೆಯೆಂಬಂತೆ ನಸ್ರುದ್ದೀನ್ ಕಡೆಗೆ ತನ್ನ ಬೆರಳು ತೋರಿಸಿದ.
ಮುವ್ವತ್ತು ದಿನಗಳ ಸೆರೆಮನೆ ವಾಸದ ನಂತರ ನಸ್ರುದ್ದೀನ್ ತನ್ನ ಮನೆಯಲ್ಲಿದ್ದಾಗ ಮತ್ತೊಂದು ದಿನ ಸುಲ್ತಾನನಿಂದ ಕರೆಬಂದಿತು.
ಸುಲ್ತಾನ ತನ್ನ ಮತ್ತೊಂದು ಪದ್ಯದ ವಾಚನಕ್ಕೆ ನಸ್ರುದ್ದೀನ್‌ನನ್ನು ಆಹ್ವಾನಿಸಿದ್ದ. ಎಂದಿನಂತೆ ಕಾವ್ಯವಾಚನ ನಡೆಯಿತು ಹಾಗೂ ಪುನಃ ಕವಿ ನಸ್ರುದ್ದೀನ್‌ನಿಗೆ ತನ್ನ ಅಭಿಪ್ರಾಯ ತಿಳಿಸುವಂತೆ ಹೇಳಲಾಯಿತು.
ಈ ಬಾರಿ ನಸ್ರುದ್ದೀನ್ ಏನೂ ಹೇಳಲಿಲ್ಲ. ಎದ್ದು ನಿಂತವನೇ ಬಾಗಿಲಿನ ಕಡೆಗೆ ನಡೆಯತೊಡಗಿದ. ಅವನ ವರ್ತನೆ ಅರ್ಥವಾಗದ ಸುಲ್ತಾನ, ‘ಎಲ್ಲಿಗೆ ಹೋಗುತ್ತಿದ್ದೀಯೆ?’ ಎಂದು ಕೇಳಿದ.
‘ಸೆರೆಮನೆಗೆ’ ಎಂದ ನಸ್ರುದ್ದೀನ್.
ಸತ್ಯವನ್ನೇ ಹೇಳುವೆ.....
ತನ್ನ ನಗರಕ್ಕೆ ಸುತ್ತಮುತ್ತಲ ಜನರೆಲ್ಲಾ ನಗರದ ದ್ವಾರಪಾಲಕರಿಗೆ ಅದೂ ಇದೂ ಸುಳ್ಳು ಹೇಳಿ ನಗರಕ್ಕೆ ಬಂದು ದಾಂಧಲೆ ಮಾಡುತ್ತಿದ್ದುದು ಸುಲ್ತಾನನಿಗೆ ತಲೆನೋವಾಗಿ ಪರಿಣಮಿಸಿತ್ತು. ಇದಕ್ಕೆ ಹೇಗಾದರೂ ಮಾಡಿ ಕಡಿವಾಣ ಹಾಕಬೇಕೆಂದು ನಿರ್ಧರಿಸಿದ ಸುಲ್ತಾನ ತನ್ನ ದ್ವಾರಪಾಲಕರಿಗೆ ನಗರಕ್ಕೆ ಬರುವವರು ಹೇಳುವ ತಮ್ಮ ಪ್ರವೇಶದ ಕಾರಣ ಸುಳ್ಳಾಗಿದ್ದಲ್ಲಿ ಅವರನ್ನು ಅಲ್ಲೇ ನೇಣಿಗೆ ಹಾಕುವಂತೆ ಅಜ್ಞಾಪಿಸಿದ.
ಈ ಅಜ್ಞೆಯ ಬಗ್ಗೆ ಕೇಳಿದ್ದ ಮುಲ್ಲಾ ನಸ್ರುದ್ದೀನ್ ಅದೊಂದು ದಿನ ನಗರಕ್ಕೆ ತನ್ನ ಕತ್ತೆಯ ಮೇಲೆ ಕೂತು ಹೊರಟ. ನಗರದ ಪ್ರವೇಶ ದ್ವಾರದಲ್ಲಿದ್ದ ದ್ವಾರಪಾಲಕರು ನಸ್ರುದ್ದೀನ್‌ನನ್ನು ತಡೆದು ನಗರದಲ್ಲಿ ಆತನಿಗೆ ಇರುವ ಕೆಲಸವೇನು ಹಾಗೂ ಅದರ ಬಗ್ಗೆ ಸತ್ಯವನ್ನೇ ಹೇಳಬೇಕು, ಇಲ್ಲದಿದ್ದಲ್ಲಿ ಅವನನ್ನು ಅಲ್ಲೇ ನೇಣಿಗೆ ಹಾಗುವುದಾಗಿ ಎಚ್ಚರಿಕೆ ನೀಡಿದರು. ಅದಕ್ಕೆ ಮುಲ್ಲಾ ನಸ್ರುದ್ದೀನ್,
‘ನಾನು ಸತ್ಯವನ್ನೇ ಹೇಳುತ್ತೇನೆ. ನನಗೆ ಬದುಕು ಸಾಕಾಗಿದೆ. ನಿಮ್ಮ ಕೈಯಲ್ಲಿ ನೇಣು ಹಾಕಿಸಿಕೊಂಡು ಸಾಯೋಣವೆಂದು ಬಂದಿದ್ದೇನೆ’ ಎಂದ.
‘ಸುಳ್ಳು ಹೇಳುತ್ತಿದ್ದೀಯಾ! ನಿನ್ನನ್ನು ಖಂಡಿತವಾಗಿ ನೇಣು ಹಾಕುತ್ತೇವೆ!!’ ಎಂದರು ದ್ವಾರಪಾಲಕರು.
‘ಹಾಗಾದರೆ, ನಾನು ಹೇಳಿದ್ದು ಸತ್ಯವಾಗುತ್ತದೆ. ಸತ್ಯ ಹೇಳುವವರನ್ನು ನೇಣಿಗೆ ಹಾಕಬಾರದಲ್ಲವೆ?’ ಕೇಳಿದ ನಸ್ರುದ್ದೀನ್.
ಜ್ಞಾನೋದಯದ ಹಾದಿ
ಒಂದು ದಿನ ಮುಲ್ಲಾ ನಸ್ರುದ್ದೀನ್ ತನ್ನ ಊರಿನ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ. ಒಂದಷ್ಟು ಜನರ ಗುಂಪು ಆತನನ್ನು ಹಿಂಬಾಲಿಸುತ್ತಿತ್ತು ಹಾಗೂ ಅವರು ನಸ್ರುದ್ದೀನ್ ಏನು ಮಾಡುತ್ತಾನೋ ಅದನ್ನೇ ಅನುಕರಿಸುತ್ತಿದ್ದರು. ನಸ್ರುದ್ದೀನ್ ಒಂದೆರಡು ಹೆಜ್ಜೆ ಹಾಕಿ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ಮುಂದಕ್ಕೆ ಬಾಗಿ ತಕ್ಷಣ ಮೇಲಕ್ಕೆ ಹಾರಿ ‘ಹ್ಹೆ...ಹ್ಹೆ...ಹ್ಹೇ....’ ಎಂದು ಜೋರಾಗಿ ಕೇಕೆ ಹಾಕುತ್ತಿದ್ದ. ಅವನ ಹಿಂಬಾಲಕರು ಅದನ್ನೇ ಅನುಕರಿಸುತ್ತಿದ್ದರು. ಅವರೆಲ್ಲರ ನಡತೆ ಊರಿನ ಜನರಿಗೆ ತಮಾಷೆಯಾಗಿ ಕಾಣುತ್ತಿತ್ತು.
ಆ ರಸ್ತೆಯಲ್ಲಿನ ಅಂಗಡಿಯೊಂದರ ವ್ಯಾಪಾರಿ ನಸ್ರುದ್ದೀನ್‌ನ ಗೆಳೆಯನಾಗಿದ್ದ. ಆತ ತನ್ನ ಗೆಳೆಯನ ಮಂಗಾಟ ನೋಡಿ, ‘ಏನಿದು ನಸ್ರುದ್ದೀನ್, ಏನು ಮಾಡುತ್ತಿದ್ದೀಯ? ಇವರೆಲ್ಲಾ ಯಾರು? ಅವರೇಕೆ ನಿನ್ನನ್ನು ಅನುಕರಿಸುತ್ತಿದ್ದಾರೆ? ಎಂದು ಕೇಳಿದ.
‘ನಾನು ಸೂಫಿ ಗುರುವಾಗಿದ್ದೇನೆ’ ಹೇಳಿದ ನಸ್ರುದ್ದೀನ್, ‘ಇವರೆಲ್ಲಾ ನನ್ನ ಶಿಷ್ಯರು. ಅವರಿಗೆ ನಾನು ಜ್ಞಾನೋದಯದ ಹಾದಿ ತೋರಿಸುತ್ತಿದ್ದೇನೆ.’
‘ಹೌದೆ? ಆದರೆ, ಅವರಿಗೆ ಯಾವಾಗ ಜ್ಞಾನೋದಯವಾಗಿದೆಯೆಂದು ನಿನಗೆ ಹೇಗೆ ತಿಳಿಯುತ್ತದೆ?’ ಎಂದ ಆ ಗೆಳೆಯ.
‘ಹೋ, ಅದು ಬಹಳ ಸುಲಭ. ಪ್ರತಿ ದಿನ ಬೆಳಿಗ್ಗೆ ನಾನು ನನ್ನ ಶಿಷ್ಯರನ್ನು ಎಣಿಸುತ್ತೇನೆ. ಯಾರ‍್ಯಾರು ಬಿಟ್ಟುಹೋಗಿದ್ದಾರೋ, ಅವರಿಗೆಲ್ಲಾ ಜ್ಞಾನೋದಯ ವಾಗಿದೆಯೆಂದು ಅರ್ಥ!’ ಎಂದ ಸೂಫಿ ಗುರು ನಸ್ರುದ್ದೀನ್.
ಚಂದ್ರನೇ ವಾಸಿ!
ಆ ದಿನ ತಾನು ಸದಾ ಹರಟೆ ಹೊಡೆಯಲು ಹೋಗುವಾ ಚಹಾದಂಗಡಿಗೆ ಬಂದ ಮುಲ್ಲಾ ನಸ್ರುದ್ದೀನ್, ‘ಸೂರ್ಯನಿಗಿಂತ ಚಂದ್ರನೇ ಹೆಚ್ಚು ಉಪಕಾರಿ’ ಎಂದ ಅಲ್ಲೇ ಗೆಳೆಯರ ಜೊತೆ ಕೂಡುತ್ತ. ಅಲ್ಲೇ ಕೂತಿದ್ದ ಒಬ್ಬ ಮುದುಕ, ‘ಅದು ಹೇಗೆ ಮುಲ್ಲಾ?’ ಎಂದು ಕೇಳಿದ.
‘ಇನ್ನೇನು? ನಮಗೆ ರಾತ್ರಿಯ ಕತ್ತಲಲ್ಲಿ ಬೆಳಕು ಬೇಕಾಗಿರುವಾಗ ಸೂರ್ಯ ಬರುವುದಿಲ್ಲ. ಆಗ ನಮಗೆ ಬೆಳಕು ಕೊಡುವುದು ಚಂದ್ರ ತಾನೆ?’ ಎಂದ ನಸ್ರುದ್ದೀನ್.
ಮುಲ್ಲಾನ ವಯಸ್ಸು
ಬಹಳ ವರ್ಷಗಳ ನಂತರ ಗೆಳೆಯನೊಬ್ಬ ಮುಲ್ಲಾನನ್ನು ಭೇಟಿಯಾದ. ಮುಲ್ಲಾನನ್ನು ಅಪ್ಪಿಕೊಳ್ಳುತ್ತಾ, ‘ಹೇಗಿದ್ದೀಯ ಗೆಳೆಯಾ? ನೋಡಿ ಬಹಳ ವರ್ಷಗಳೇ ಆದುವು. ಈಗ ನಿನ್ನ ವಯಸ್ಸೆಷ್ಟು?’ ಎಂದು ಕೇಳಿದ.
‘ನನಗೆ ನಲವತ್ತು ವರ್ಷ ವಯಸ್ಸು ಎಂದ’ ಮುಲ್ಲಾ.
‘ಅದ್ಹೇಗೆ ಸಾಧ್ಯ? ಕಳೆದ ಸಾರಿ ಭೇಟಿಯಾದಾಗಲೂ ನೀನು ನಿನ್ನ ವಯಸ್ಸು ನಲವತ್ತು ಎಂದೇ ಹೇಳಿದ್ದೆ?’ ಕೇಳಿದ ಆ ಗೆಳೆಯ.
‘ಹೌದಪ್ಪ. ನಾನು ದಿನಕ್ಕೊಮ್ಮೆ ಮಾತು ಬದಲಿಸುವವನಲ್ಲ. ಹೇಳಿದ ಮಾತಿಗೆ ಬದ್ಧನಾಗಿರುವವನು ನಾನು’ ಎಂದ ಮುಲ್ಲಾ ನಸ್ರುದ್ದೀನ್.
ಎಷ್ಟು ವರ್ಷ ದೊಡ್ಡವನು?
‘ನಿನ್ನ ವಯಸ್ಸೆಷ್ಟು?’ ಗೆಳೆಯನೊಬ್ಬ ಮುಲ್ಲಾನನ್ನು ಕೇಳಿದ.
‘ನಾನು ನನ್ನ ತಮ್ಮನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ.
‘ನಿನಗೆ ಅಷ್ಟು ನಿಖರವಾಗಿ ಗೊತ್ತೇ?’
‘ಹೌದು. ಕಳೆದ ವರ್ಷ ನನ್ನ ತಮ್ಮ ಯಾರೊಂದಿಗೋ ನನ್ನ ಅಣ್ಣ ನನಗಿಂತ ಎರಡು ವರ್ಷ ದೊಡ್ಡವನು ಎಂದು ಹೇಳುತ್ತಿದ್ದ. ಅವನು ಆ ಮಾತು ಹೇಳಿ ಒಂದು ವರ್ಷವಾಗಿದೆ. ಹಾಗಾಗಿ ಈಗ ನಾನು ಅವನಿಗಿಂತ ಮೂರು ವರ್ಷ ದೊಡ್ಡವನು’ ಎಂದ ಮುಲ್ಲಾ ನಸ್ರುದ್ದೀನ್.
ಮುಲ್ಲಾ ನಸ್ರುದ್ದೀನ್‌ನ ಊರಿನಲ್ಲಿ ಹೊಸ ವಸ್ತ್ರ ವಿನ್ಯಾಸಗಳ ಫ್ಯಾಶನ್ ಶೋ ನಡೆಯುತ್ತಿತ್ತು. ಸುಂದರ ಯುವತಿಯರು ಆ ಹೊಸ ವಸ್ತ್ರಗಳನ್ನು ಧರಿಸಿ ಪ್ರದರ್ಶನ ನಡೆಸಿದರು. ಮುಲ್ಲಾ ಹೊರಗೆ ಬಂದಾಗ ಆ ಹೊಸ ವಸ್ತ್ರಗಳನ್ನು ಮಾರಾಟಕ್ಕೆ ಇರಿಸಿದ್ದರು. ಅದನ್ನು ನೋಡಿದ ಮುಲ್ಲಾ, ‘ಇದು ಮೋಸ’ ಎಂದರಚಿದ. ಆಯೋಜಕರು ಆತನ ಬಳಿ ಬಂದು ‘ಯಾವುದು ಮೋಸ?’ ಎಂದು ಕೇಳಿದರು.
‘ಒಳಗಡೆ ಸುಂದರ ಯುವತಿಯರು ಹಾಗೂ ವಸ್ತ್ರಗಳನ್ನು ಪ್ರದರ್ಶಿಸಿದಿರಿ. ಆದರೆ ಇಲ್ಲಿ ವಸ್ತ್ರಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದೀರಾ!’ ಎಂದ ಮುಲ್ಲಾ ನಸ್ರುದ್ದೀನ್.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ