Tuesday, September 11, 2012

ಮುಲ್ಲಾ ನಸ್ರುದ್ದೀನ್ ಕತೆಗಳ 9ನೇ ಕಂತು

ಸೆಪ್ಟೆಂಬರ್ 2012ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 9ನೇ ಕಂತು.
ಚಿತ್ರ: ಮುರಳೀಧರ ರಾಠೋಡ್
ಮೋಸಗಾರ ಫಕೀರ
ಆ ಊರಿಗೆ ಬಂದಿದ್ದ ಫಕೀರ ತಾನು ಮಂತ್ರದಿಂದ ಓದು ಬರಹ ಬಾರದ ಅನಕ್ಷರಸ್ಥರಿಗೂ ಸಹ ತತ್‌ಕ್ಷಣವೇ ಓದುವಂತೆ ಮಾಡಬಲ್ಲೆನೆಂದು ಹೇಳುತ್ತಿದ್ದ. ಆದರೆ ಯಾರೂ ಆತನ ಮಾತು ನಂಬಲಿಲ್ಲ. ಅನಕ್ಷರಸ್ಥನಾಗಿದ್ದ ನಸ್ರುದ್ದೀನನಿಗೆ ಬಹಳ ದಿನಗಳಿಂದ ಓದುವುದನ್ನು ಕಲಿಯಬೇಕೆಂಬ ಆಸೆ ಇತ್ತು, ಆದರೆ ಅದಕ್ಕೆ ಆತನಿಗೆ ಅವಕಾಶವೇ ಸಿಕ್ಕಿರಲಿಲ್ಲ. ಈಗ ಸುಲಭವಾಗಿ ಅದೂ ತತ್‌ಕ್ಷಣವೇ ಓದಲು ಕಲಿಯಲು ಅವಕಾಶ ಸಿಕ್ಕಿರುವಾಗ ಏಕೆ ಬಿಡಬೇಕೆಂದು ಆತ ಮುಂದೆ ಬಂದ. ಫಕೀರ ನಸ್ರುದ್ದೀನ್‌ನನ್ನು ಮುಂದೆ ಕೂಡ್ರಿಸಿಕೊಂಡು ಅದೇನೋ ಮಂತ್ರವನ್ನು ಗುಣಗುಣಿಸಿ ತನ್ನ ಮಂತ್ರದಂಡವನ್ನು ಆತನ ತಲೆಯಮೇಲಿರಿಸಿ ‘ಹೋಗು ಈಗ ನಿನಗೆ ಓದಲು ಬರುತ್ತದೆ’ ಎಂದು ಹೇಳಿ ಕಳುಹಿಸಿದ. ನಸ್ರುದ್ದೀನ್ ಸಂತೋಷದಿಂದ ಓಡಿದ.
ಜನ ನೋಡುತ್ತಿರುವಂತೆ ನಸ್ರುದ್ದೀನ್ ಓಡುತ್ತಾ ಬಂದ. ಆತನ ಮುಖ ಕೋಪದಿಂದ ಬುಸುಗುಡುತ್ತಿತ್ತು ಹಾಗೂ ಆತನ ಕೈಯಲ್ಲಿ ಒಂದು ಪುಸ್ತಕವೂ ಇತ್ತು. ಫಕೀರನ ಬಳಿ ಇದ್ದ ಜನರೆಲ್ಲಾ ನಸ್ರುದ್ದೀನನ ಮುಖವನ್ನು  ನೋಡಿ, ‘ಏಕೆ ನಸ್ರುದ್ದೀನ್ ಫಕೀರನ ಮಾಯಾ ಮಂತ್ರ ನಿನಗೆ ಓದು ಕಲಿಸಿಕೊಡಲಿಲ್ಲವೆ?’ ಎಂದು ಕೇಳಿದರು. ‘ಓದಲು ಕಲಿತಿದ್ದೇನೆ. ಆದರೆ ನಾನು ವಾಪಸ್ಸು ಬಂದದ್ದು ಅದಕ್ಕಲ್ಲ. ಎಲ್ಲಿ ಹೋದ ಮೋಸಗಾರ ಫಕೀರ?’ ಎಂದು ಕೇಳಿದ.
‘ಏನು? ನಿನಗೆ ಒಂದು ನಿಮಿಷದಲ್ಲಿ ಓದಲು ಕಲಿಸಿದ ಫಕೀರ ಮೋಸಗಾರನೆಂದು ಕರೆಯುತ್ತಿದ್ದೀಯಾ?’ ಎಂದರು ಅಲ್ಲಿದ್ದ ಜನರು. 
‘ಹೌದು, ಮನೆಗೆ ಹೋದ ತಕ್ಷಣ ಈ ಪುಸ್ತಕ ಓದಿದೆ. ನೋಡಿ, ಇದರಲ್ಲಿ ಫಕೀರರೆಲ್ಲಾ ಮೋಸಗಾರರು ಎಂದು ಬರೆದಿದೆ’ ಎಂದ ತನ್ನ ನಸ್ರುದ್ದೀನ್ ತನ್ನ ಬಳಿ ಇದ್ದ ಪುಸ್ತಕ ತೋರಿಸುತ್ತಾ.

ಚಳಿ
ಅದೊಂದು ಚಳಿಗಾಲದ ದಿನ. ಉಣ್ಣೆಯ ಬಟ್ಟೆ ಧರಿಸಿದ್ದರೂ ಚಳಿ ತಡೆಯಲಾಗದೆ ಆತ ಗಡಗಡ ನಡುಗುತ್ತಿದ್ದ. ಆತನ ಎದುರಿಗೆ ಮುಲ್ಲಾ ನಸ್ರುದ್ದೀನ್ ನಡೆದು ಹೋಗುತ್ತಿದ್ದ. ನಸ್ರುದ್ದೀನ್ ತೆಳುವಾದ ಬಟ್ಟೆ ಧರಿಸಿದ್ದರೂ ಆತನ ಮೇಲೆ ಚಳಿ ಯಾವುದೇ ಪ್ರಭಾವ ಬೀರಿದಂತಿರಲಿಲ್ಲ. ಚಳಿಯಲ್ಲಿ ನಡುಗುತ್ತಿದ್ದಾತ ನಸ್ರುದ್ದೀನ್‌ನನ್ನು ಕರೆದು, ‘ಮುಲ್ಲಾ ನಾನು ಇಷ್ಟೊಂದು ಉಣ್ಣೆ ಬಟ್ಟೆ ಧರಿಸಿದ್ದರೂ ಚಳಿ ತಡೆಯಲಾಗದೆ ಗಡಗಡ ನಡುಗುತ್ತಿದ್ದೇನೆ. ನೀನು ಅಷ್ಟು ತೆಳುವಾದ ಬಟ್ಟೆ ಧರಿಸಿದ್ದರೂ ಆರಾಮವಾಗಿ ಓಡಾಡುತ್ತಿದ್ದೀಯಲ್ಲಾ. ನಿನ್ನಿಂದ ಅದು ಹೇಗೆ ಸಾಧ್ಯ?’ ಎಂದು ಕೇಳಿದ.
ಆ ಮಾತಿಗೆ ನಸ್ರುದ್ದೀನ್, ‘ನೋಡಿ. ನನ್ನ ಬಳಿ ಇರುವುದು ಈಗ ನಾನು ಧರಿಸಿರುವ ಬಟ್ಟೆ ಮಾತ್ರ. ಹಾಗಾಗಿ ಚಳಿಯನ್ನು ಅನುಭವಿಸುವಂತಹ ಸಿರಿತನ ನನ್ನಲ್ಲಿಲ್ಲ. ನಿಮ್ಮ ಬಳಿ ಬೇಕಾದಷ್ಟು ಬಟ್ಟೆಗಳಿವೆ ಹಾಗೂ ಅದರಿಂದಾಗಿ ಚಳಿಯನ್ನು ಅನುಭವಿಸುವಂತಹ ಸ್ವಾತಂತ್ರ್ಯವೂ ನಿಮಗಿದೆ’ ಎಂದ.

ಕತ್ತೆ ಮತ್ತು ಹಸು
ಒಂದು ದಿನ ನಸ್ರುದ್ದೀನ್‌ನ ಪತ್ನಿ ‘ನಾವೊಂದು ಹಸುವನ್ನು ಸಾಕಿಕೊಳ್ಳೋಣ. ಅದರಿಂದಾಗಿ ನಾವು ಹಾಲಿಗೆ ಪರದಾಡುವುದು ತಪ್ಪುತ್ತದೆ’ ಎಂದಳು. ನಸ್ರುದ್ದೀನನಿಗೆ ಹಸು ಸಾಕುವುದು ಇಷ್ಟವಿರಲಿಲ್ಲ, ಏಕೆಂದರೆ ಅವನ ಕೊಟ್ಟಿಗೆ ಚಿಕ್ಕದಾಗಿದ್ದು ಅದರಲ್ಲಿ ಅವನ ಪ್ರೀತಿಪಾತ್ರವಾದ ಕತ್ತೆಗೆ ಸಾಕಾಗುವಷ್ಟು ಮಾತ್ರ ಜಾಗವಿತ್ತು. ಆದರೂ ಅವನ ಹೆಂಡತಿಯು ತನ್ನ ಹಠ ಬಿಡಲಿಲ್ಲ. ಕೊನೆಗೆ ಒಂದು ಹಸುವನ್ನು ಕೊಂಡುತಂದರು. ಹಸುವನ್ನು ಕೊಟ್ಟಿಗೆಗೆ ಕೊಂಡೊಯ್ದಾಗ ಅಲ್ಲಿ ಅವನು ಊಹಿಸಿದಂತೆಯೇ ಇತ್ತು. ಹಸು ಮತ್ತು ಕತ್ತೆಯನ್ನು ಒಟ್ಟಿಗೇ ಕಟ್ಟಿದಾಗ ಆ ಎರಡು ಪ್ರಾಣಿಗಳಿಗೂ ಇಕ್ಕಟ್ಟಾಗಿತ್ತು. ತನ್ನ ಕತ್ತೆಗೆ ಹಿಂಸೆಯಾಗುತ್ತಿರುವುದನ್ನು ಸಹಿಸದ ನಸ್ರುದ್ದೀನ್ ಆ ದಿನ ರಾತ್ರಿ ಮಲಗುವಾಗ, ‘ಹೋ ದೇವರೇ! ಬೆಳಗಾಗುವಷ್ಟರಲ್ಲಿ ಆ ಹಸು ಸತ್ತು ಹೋಗಿರಲಿ. ಅದರಿಂದಾದರೂ ನನ್ನ ಹೆಂಡತಿ ಸುಮ್ಮನಾಗಬಹುದು. ಮತ್ತೊಂದು ಹಸು ತರಲು ಆಕೆ ಒತ್ತಾಯ ಮಾಡುವುದಿಲ್ಲ. ನನ್ನ ಕತ್ತೆ ತನ್ನ ಕೊಟ್ಟಿಗೆಯಲ್ಲಿ ಆರಾಮವಾಗಿರುತ್ತದೆ’ ಎಂದು ಪ್ರಾರ್ಥಿಸಿದ.
ಬೆಳಗಾಗೆದ್ದು ನೋಡಿದಾಗ ಕೊಟ್ಟಿಗೆಯಲ್ಲಿ ನಸ್ರುದ್ದೀನನ ಪ್ರೀತಿಪಾತ್ರ ಕತ್ತೆ ಸತ್ತುಬಿದ್ದಿತ್ತು. ಆತನಿಗೆ ವಿಪರೀತ ಸಿಟ್ಟುಬಂತು. ‘ದೇವರೇ! ನಿನಗೇನು ಬುದ್ದಿ ಇದೆಯೋ ಇಲ್ಲವೋ? ಇಷ್ಟು ವರ್ಷಗಳ ನಂತರವೂ ನಿನಗೆ ನಿನಗೆ ಕತ್ತೆ ಮತ್ತು ಹಸುವಿನ ನಡುವಿನ ಅಂತರವೇ ತಿಳಿದಿಲ್ಲವಲ್ಲಾ!’ ಎಂದು ಗೊಣಗಿದ.

ಅರ್ಧಪಾಲು ಮಗು
ಸರಿ ರಾತ್ರಿಯಲ್ಲಿ ಮಗು ಜೋರಾಗಿ ಅಳುತ್ತಿತ್ತು. ನಸ್ರುದ್ದೀನನ ಪತ್ನಿ ಆತನನ್ನು ಎಬ್ಬಿಸಿ, ‘ನೋಡು ಮಗು ಅಳುತ್ತಿದೆ. ನನಗೂ ಸಾಕಾಗಿದೆ. ಮಗುವಿನಲ್ಲಿ ನಿನ್ನದೂ ಅರ್ಧ ಪಾಲಿದೆಯಲ್ಲವೆ? ಹೋಗಿ ಮಗುವಿಗೆ ನಿದ್ರೆ ಮಾಡಿಸು’ ಎಂದಳು. ಅದಕ್ಕೆ ನಸ್ರುದ್ದೀನ್, ‘ನೀನು ಹೋಗಿ ನಿನ್ನ ಅರ್ಧ ಪಾಲು ಮಗುವಿಗೆ ನಿದ್ರೆ ಮಾಡಿಸು. ನನ್ನ ಅರ್ಧ ಪಾಲು ಅತ್ತರೆ ಅಳಲಿ’ ಎಂದು ಮಗ್ಗುಲು ಬದಲಿಸಿದ.


No comments: