ಮುಲ್ಲಾ ನಸ್ರುದ್ದೀನ್ ಕತೆಗಳ 23ನೇ ಕಂತು - ಸಂವಾದ, ಡಿಸೆಂಬರ್ 2013ರ ಸಂಚಿಕೆ
ಚಿತ್ರಗಳು: ಮುರಳೀಧರ ರಾಠೋಡ್
1. ಅವನಲ್ಲ ನೀನು
ಮುಲ್ಲಾ ನಸ್ರುದ್ದೀನನ ಹೆಂಡತಿ ಹಿತ್ತಲಲ್ಲಿ ಕೆಲಸ
ಮಾಡುತ್ತಿದ್ದವಳು ಮನೆಯೊಳಕ್ಕೆ ಬಂದಳು. ಬಂದ ತಕ್ಷಣ
ಮುಲ್ಲಾ,
`ಅಡುಗೆಯವನು ಕೆಲಸ ಬಿಡುತ್ತಾನಂತೆ. ಆತ
ಮುನಿಸಿಕೊಂಡಿದ್ದಾನೆ’ ಎಂದ.
`ಹೌದೆ? ಯಾಕಂತೆ?’ ಎಂದು ಕೇಳಿದಳು.
`ನೀನು ಆಗಲೇ ಹಿತ್ತಲಿನಿಂದ ಅವನನ್ನು
ದಡ್ಡ, ನಿನ್ನ ತಲೆಯಲ್ಲಿ ಮಿದುಳಿಲ್ಲ,
ನಾಲಾಯಕ್ ಎಂದೆಲ್ಲಾ ಬೈದೆಯಂತೆ’ ಎಂದ ನಸ್ರುದ್ದೀನ್.
`ಅಯ್ಯೋ, ನಾನು ಬೈದಿದ್ದು ಅವನನ್ನಲ್ಲಾ.
ನಿಮ್ಮನ್ನು.....’ ಎಂದಳು ಮುಲ್ಲಾನ ಹೆಂಡತಿ
ಮುಲ್ಲಾನ ಕಡೆಗೆ ಕೈ ತೋರಿಸುತ್ತಾ.
2. ಚಿಕಿತ್ಸೆ
ಮುಲ್ಲಾ ನಸ್ರುದ್ದೀನ್ ಒಂದು ದಿನ ಮನೋವೈದ್ಯರ
ಬಳಿ ತನ್ನ ಸಮಸ್ಯೆ ಹೇಳಿಕೊಂಡು
ಪರಿಹಾರ ಪಡೆಯಲು ಹೋದ.
`ನನಗೊಂದು ಸಮಸ್ಯೆ ಇದೆ. ನನ್ನ
ನೈತಿಕತೆ ಹಿಂದಿನಂತೆ ಇಲ್ಲ ಹಾಗೂ ನನ್ನ
ಆತ್ಮಸಾಕ್ಷಿ ನನಗೆ ತೊಂದರೆ ಕೊಡುತ್ತಿದೆ’ ಎಂದ.
`ನಿನ್ನ ಸಮಸ್ಯೆ ನನಗರ್ಥವಾಗುತ್ತದೆ. ನಿನಗೆ
ಚಿಕಿತ್ಸೆ ಬೇಕು. ನಿನ್ನ ನೈತಿಕತೆ
ಉತ್ತಮಗೊಳ್ಳಬೇಕು ಅದಕ್ಕಾಗಿ ನಿನ್ನ ಆತ್ಮಸಾಕ್ಷಿಯನ್ನು ಮತ್ತಷ್ಟು
ಸದೃಢಗೊಳಿಸಬೇಕು’ ಎಂದರು
ಮನೋವೈದ್ಯರು.
`ಅಲ್ಲ, ಆ ರೀತಿ ಮಾಡಬೇಡಿ.
ಬದಲಾದ ನನ್ನ ನೈತಿಕತೆ ಚೆನ್ನಾಗಿಯೇ
ಇದೆ. ನನ್ನ ಆತ್ಮಸಾಕ್ಷಿಯನ್ನು ದುರ್ಬಲಗೊಳಿಸಿ
ಸಾಕು’ ಎಂದ ಮುಲ್ಲಾ.
3. ಸಹಜ ಸಾವು
ಮುಲ್ಲಾ ನಸ್ರುದ್ದೀನ್ ಒಂದು ದಿನ ಕಾಯಿಲೆ
ಬಿದ್ದ. ಚಿಕಿತ್ಸೆ ಪಡೆಯಲು ವೈದ್ಯರ ಬಳಿಗೆ
ಹೋದ. ವೈದ್ಯರನ್ನು ಭೇಟಿಯಾಗಲು ಜನ ಕಿಕ್ಕಿರಿದಿದ್ದರು. ಮುಲ್ಲಾ
ಕೂತುಕೊಂಡು ಕಾಯೋಣವೆಂದು ನೋಡಿದರೆ ಒಂದು ಕುರ್ಚಿಯೂ
ಖಾಲಿಯಿರಲಿಲ್ಲ. ಕೊನೆಗೆ, `ಆಯಿತು ನಾನು ಮನೆಗೆ
ಹೋಗಿ ಸಹಜ ಸಾವನ್ನೇ ಪಡೆಯುತ್ತೇನೆ’ ಎಂದು ಗೊಣಗಿ ಮನೆಗೆ ಹೊರಟ.
4. ಅಂಗಡಿ ತೆರೆದಿಲ್ಲ
ಮುಲ್ಲಾ ಹೆಂಡದ ಅಂಗಡಿಯಿಂದ ಮಧ್ಯರಾತ್ರಿ
ಮನೆಗೆ ಹಿಂದಿರುಗಿ ಪಡಸಾಲೆಯಲ್ಲಿ ಹೆಂಡತಿ ಹಾಸಿದ್ದ ಹಾಸಿಗೆಯ
ಮೇಲೆ ಮಲಗಿದ. ಬೆಳಿಗ್ಗೆ ಅವನ
ಹೆಂಡತಿ, `ಕೊನೆಗೂ ಮನೆಗೆ ಹಿಂದಿರುಗಿದೆಯೆಲ್ಲಾ.
ಈಗ ತಿಳಿಯಿತಾ, ಊರೆಲ್ಲಾ ತಿರುಗಿದರೂ ರಾತ್ರಿ
ಮಲಗಲು ಮನೆಗಿಂತಾ ಬೇರೆ ಪ್ರಶಸ್ತ ಸ್ಥಳವಿಲ್ಲಾ
ಎಂಬುದು’ ಎಂದಳು.
`ಹಾಗೇನಿಲ್ಲಾ.... ಮಧ್ಯರಾತ್ರಿಯ ನಂತರ ನನಗೆ ಬಾಗಿಲು
ತೆರೆದಿರುವುದೆಂದರೆ ನನ್ನ ಮನೆ ಮಾತ್ರ’ ಎಂದ ಮುಲ್ಲಾ ಮುಸುಕಿನೊಳಗಿಂದಲೇ.
5. ನಾಚಿಕೆಯಾಗಲೇಬೇಕು
ಮುಲ್ಲಾನ ಪತ್ನಿ ಒಂದು ದಿನ
ಬೇಸರದಿಂದ, `ನಾವು ಬದುಕುವ ರೀತಿಯಿಂದಾಗಿ
ನನಗೆ ನಾಚಿಕೆಯಾಗುತ್ತದೆ. ನನ್ನ ತಾಯಿ ಮನೆ
ಬಾಡಿಗೆ ಕೊಡುತ್ತಾಳೆ, ನನ್ನ ಅಕ್ಕ ಬಟ್ಟೆ
ಬರೆಗೆ ಹಣ ಕೊಡುತ್ತಾಳೆ, ನನ್ನ
ತಂದೆ ಅಕ್ಕಿ ಬೇಳೆ ತಂದು
ಹಾಕುತ್ತಾರೆ. ನನಗೆ ನಿಜವಾಗಿಯೂ ನಾಚಿಕೆಯಾಗುತ್ತದೆ’ ಎಂದಳು.
`ಹೌದು, ಹೌದು. ನಿನಗೆ ನಾಚಿಕೆಯಾಗಲೇ
ಬೇಕು. ನೋಡು ನಿನ್ನ ಇಬ್ಬರು
ಸೋದರ ಮಾವಂದಿರು ಒಂದು ಪುಡಿಗಾಸೂ ಬಿಚ್ಚುವುದಿಲ್ಲ!’
ಎಂದ ಮುಲ್ಲಾ.
6. ಈಗಾಗಲೇ ತಡವಾಗಿದೆ
ಮುಲ್ಲಾನ ಮೊದಲ ಅಂತಸ್ತಿನ ಮನೆಯಲ್ಲಿ
ವಾಸಿಸುತ್ತಿದ್ದ. ಒಂದು ದಿನ ರಾತ್ರಿ
ಕೆಳಗಿನ ಮನೆಯಾತ ಸರಿ ಹೊತ್ತಿನಲ್ಲಿ
ಬಾಗಿಲು ಬಡಿದು,
`ಮುಲ್ಲಾ! ನನಗೆ ತಲೆ ಚಿಟ್ಟು
ಹಿಡಿದುಹೋಗಿದೆ. ನೀನು ಪಿಟೀಲು ಕೊಯ್ಯುವುದನ್ನು
ನಿಲ್ಲಿಸು! ಇಲ್ಲದಿದ್ದಲ್ಲಿ ನಾನು ಹುಚ್ಚನಾಗಿಬಿಡುತ್ತೇನೆ!’ ಎಂದು ಅರಚಿದ.
`ಹೋ. ಈಗಾಗಲೇ ತಡವಾಗಿದೆ ಎನ್ನಿಸುತ್ತಿದೆ.
ನಾನು ಪಿಟೀಲು ನುಡಿಸುವುದನ್ನು ನಿಲ್ಲಿಸಿ
ಆಗಲೇ ಎರಡು ಗಂಟೆಗಳಾಗಿವೆ’ ಎಂದ ಮುಲ್ಲಾ.
7. ಎಷ್ಟು ಕಳಕೊಂಡೆ?
ಇಬ್ಬರು ಕಳ್ಳರು ಒಂದು ದಿನ
ರಾತ್ರಿ ಕಳ್ಳತನಕ್ಕೆಂದು ಹೊರಟರು. ಮನೆಯೊಂದಕ್ಕೆ ಕನ್ನ
ಹಾಕಿದರು. ಒಬ್ಬನು ಹೊರಗಡೆ ಕಾವಲು
ನಿಂತರೆ ಮತ್ತೊಬ್ಬ ಒಳಹೊಕ್ಕ. ಸ್ವಲ್ಪ ಹೊತ್ತಾದ ಮೇಲೆ
ಒಳಕ್ಕೆ ಹೋಗಿದ್ದ ಕಳ್ಳ ಹಿಂದಿರುಗಿದ.
`ಎಷ್ಟು ಸಿಕ್ಕಿತು?’ ಹೊರಗಿದ್ದ ಕಳ್ಳ ಕೇಳಿದ.
`ಏನೂ ಸಿಗಲಿಲ್ಲ. ಇದು ಮುಲ್ಲಾ ನಸ್ರುದ್ದೀನನ
ಮನೆ’ ಎಂದ ಬರಿಗೈಲಿ ಹಿಂದಿರುಗಿದ
ಕಳ್ಳ.
`ಹೌದೆ! ಹಾಗಾದರೆ ಎಷ್ಟು ಕಳಕೊಂಡೆ?’
ಎಂದ ಹೊರಗಿದ್ದ ಕಳ್ಳ.
8. ಹಂಡೆ ಹಿಂದಿರುಗಿಸಬೇಕೆ?
ಮುಲ್ಲಾ ನಸ್ರುದ್ದೀನ್ ತನ್ನ ಮನೆಯ ಹಿತ್ತಲಲ್ಲಿದ್ದ
ಹಂಡೆ ಕದ್ದಿದ್ದಾನೆಂದು ಒಬ್ಬಾತ ದೂರು ಸಲ್ಲಿಸಿದ.
ವಿಚಾರಣೆ ನಡೆಯಿತು. ಆದರೆ ಮುಲ್ಲಾ ನಸ್ರುದ್ದೀನ್
ಹಂಡೆ ಕದ್ದಿರುವುದಕ್ಕೆ ಯಾವುದೇ ಸಾಕ್ಷಿ ಆಧಾರಗಳು
ಇರಲಿಲ್ಲ. ನ್ಯಾಯಾಧೀಶರು ಅವನ ಮೇಲಿನ ಅಪರಾಧದ
ದೂರನ್ನು ವಜಾ ಮಾಡಿ, `ವಿಚಾರಣೆ
ಮುಗಿಯುತು. ಮುಲ್ಲಾ ನೀನಿನ್ನು ಹೋಗಬಹುದು.
ನಿನ್ನ ಮೇಲಿನ ಅಪರಾಧ ಸಾಬೀತಾಗಿಲ್ಲ’ ಎಂದರು.
ಮುಲ್ಲಾ ವಿಚಲಿತನಾದ. ಆದರೂ ಸಾವರಿಸಿಕೊಂಡು, `ಧನ್ಯವಾದಗಳು
ನ್ಯಾಯಾಧೀಶರೆ. ನಾನು ಆತನಿಗೆ ಹಂಡೆ
ಹಿಂದಿರುಗಿಸಬೇಕಾಗಿಲ್ಲ ತಾನೇ?’ ಎಂದು ಮತ್ತೊಮ್ಮೆ
ಖಾತರಿ ಪಡಿಸಿಕೊಳ್ಳಲು ಕೇಳಿದ.
9. ಬಕ್ಕ ತಲೆಯ ಹೆಂಗಸರೊಂದಿಗೆ..
ಮುಲ್ಲಾ ನಸ್ರುದ್ದೀನ್ ಪ್ರತಿ ರಾತ್ರಿ ತನ್ನ
ಮನೆಗೆ ಹಿಂದಿರುಗಿದಾಗ ಆತನ ಮೇಲೆ ಸಂಶಯದಿಂದ
ಪತ್ನಿ ಅವನ ಬಟ್ಟೆಯಲ್ಲಿ ಉದ್ದದ
ಕೂದಲೇನಾದರೂ ಸಿಗುತ್ತದೆಯೇನೋ ಎಂದು ಕೂಲಂಕಷವಾಗಿ ಹುಡುಕುತ್ತಿದ್ದಳು.
ಆದರೆ ಒಂದು ದಿನವೂ ಆಕೆಗೆ
ಉದ್ದ ಕೂದಲೊಂದೂ ಸಿಗಲಿಲ್ಲ. ಆಕೆ ಕಣ್ಣೀರು ಹಾಕುತ್ತಾ
ಹೇಳಿದಳು,
`ನನಗೆ ಗೊತ್ತು.... ನೀನು ಬಕ್ಕ ತಲೆಯ
ಹೆಂಗಸರೊಂದಿಗೆ ಸಲ್ಲಾಪವಾಡುತ್ತಿದ್ದೀಯಾ....’.
10. ಕೆಟ್ಟ ಕನಸು
ಮುಲ್ಲಾ ನಸ್ರುದ್ದೀನ್ ಮನೋವೈದ್ಯರ ಬಳಿ ಹೋದ. `ವೈದ್ಯರೆ
ನನಗೆ ರಾತ್ರಿ ಕೆಟ್ಟ ಕನಸು
ಬೀಳುತ್ತಿದೆ, ಹಾಗೂ ಆ ಭಯಂಕರ
ಕನಸು ಪ್ರತಿ ರಾತ್ರಿ ಬೀಳುತ್ತಿದೆ’ ಎಂದ. ಮುಲ್ಲಾನನ್ನು ಪರಿಶೀಲಿಸಿದ ವೈದ್ಯರು ಕನಸಿನಲ್ಲಿ ಏನು
ಬರುತ್ತಿದೆ ಎಂದು ಕೇಳಿದರು.
`ಪ್ರತಿ ರಾತ್ರಿ ನನ್ನ ಕನಸಿನಲ್ಲಿ
ನನಗೆ ಮದುವೆಯಾಗುತ್ತಿದೆ’ ಎಂದ ಮುಲ್ಲಾ.
`ಹೌದೆ? ಯಾರೊಂದಿಗೆ ನಿನ್ನ ಮದುವೆಯಾಗುತ್ತಿದೆ?’ ಕೇಳಿದರು
ವೈದ್ಯರು.
`ಪ್ರತಿ ರಾತ್ರಿ ನನ್ನ ಕನಸಿನಲ್ಲಿ
ನನ್ನ ಪತ್ನಿಯೊಂದಿಗೇ ನನ್ನ ಮದುವೆಯಾಗುತ್ತಿದೆ. ದಯವಿಟ್ಟು
ಈ ಭಯಂಕರ ಕನಸ್ಸು
ಬೀಳದಂತೆ ಮಾಡಿ’ ಎಂದು ಮುಲ್ಲಾ ಗೋಗರೆದ.
11. ಯುದ್ಧ ಮತ್ತು ಶಾಂತಿ
ಮುಲ್ಲಾ ನಸ್ರುದ್ದೀನ್ ಒಂದು ದಿನ ಸೈನ್ಯಕ್ಕೆ
ಸೇರಿಕೊಳ್ಳಲು ಹೊರಟ. ಸೈನ್ಯಕ್ಕೆ ಸೇರುವವರು
ಬಹಳಷ್ಟು ಜನರಿದ್ದು ಎಲ್ಲರೂ ಸರತಿಯ ಸಾಲಿನಲ್ಲಿ
ನಿಂತಿದ್ದರು. ಮುಂದೆ ನಿಂತಿದ್ದವನನ್ನು ಮುಲ್ಲಾ
ಕೇಳಿದ,
`ಏನಪ್ಪಾ, ನೀನು ಸೈನ್ಯಕ್ಕೆ ಏಕೆ
ಸೇರುತ್ತಿದ್ದೀಯಾ?’
`ನನಗಿನ್ನೂ ಮದುವೆಯಾಗಿಲ್ಲ, ನನಗೆ ಹೆಂಡತಿ ಮಕ್ಕಳಿಲ್ಲ,
ನನಗೆ ಯುದ್ಧವೆಂದರೆ ಇಷ್ಟ’ ಎಂದು ಹೇಳಿದ ಆತ,
`ಹೌದು, ನೀವೇಕೆ ಸೈನ್ಯಕ್ಕೆ ಸೇರುತ್ತಿದ್ದೀರಿ?’
ಎಂದು ಮರುಪ್ರಶ್ನಿಸಿದ.
`ನನಗೆ ಮದುವೆಯಾಗಿದೆ, ಹೆಂಡತಿ ಮಕ್ಕಳಿದ್ದಾರೆ ಹಾಗೂ
ನನಗೆ ಶಾಂತಿಯೆಂದರೆ ಇಷ್ಟ. ಅದಕ್ಕೇ ಸೈನ್ಯಕ್ಕೆ
ಸೇರುತ್ತಿದ್ದೇನೆ’ ಎಂದ ಮುಲ್ಲಾ.
12. ಮನೆಯ ಪ್ರಾರ್ಥನೆ
ಮುಲ್ಲಾ ನಸ್ರುದ್ದೀನ್ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ.
ಮನೆ ತೀರಾ ಹಳೆಯದಾಗಿದ್ದು ಗಾಳಿ
ಬೀಸಿದಾಗಲೆಲ್ಲಾ ಅದರ ಛಾವಣಿ ಕಿರುಗುಡುತ್ತಿತ್ತು.
ಆ ಸದ್ದಿನಿಂದ ಅವನಿಗೆ
ನಿದ್ರೆ ಬರುತ್ತಿರಲಿಲ್ಲ, ಅಲ್ಲದೆ ಅದು ಎಲ್ಲಿ
ತನ್ನ ತಲೆಯ ಮೇಲೆ ಬಿದ್ದುಬಿಡುವುದೋ
ಎಂಬ ಹೆದರಿಕೆಯೂ ಅವನನ್ನು ಕಾಡುತ್ತಿತ್ತು.
ಮನೆಯ ಮಾಲೀಕ ಬಾಡಿಗೆ ವಸೂಲಿಗೆಂದು
ಬಂದಾಗ ನಸ್ರುದ್ದೀನ್ ಮನೆಯ ಛಾವಣಿ ಮಾಡುವ
ಸದ್ದಿನ ಬಗೆಗೆ ಹೇಳಿದ.
`ಅದರ ಬಗ್ಗೆ ಚಿಂತಿಸಬೇಡಿ' ಹೇಳಿದ
ಮಾಲೀಕ, `ಆ ಕಿರುಗುಡುವ ಶಬ್ದಗಳು,
ಶಬ್ದಗಳಲ್ಲ, ಅದು ಆ ಹಳೆಯ
ಮನೆ ದೇವರಿಗೆ ಮಾಡುತ್ತಿರುವ ಪ್ರಾರ್ಥನೆ'
ಎಂದ.
`ನಾನು ಆ ಪ್ರಾರ್ಥನೆಯ ಬಗೆಗೆ
ಚಿಂತಿಸುತ್ತಿಲ್ಲ. ಆ ಮನೆಗೆ ದೇವರ
ಭಕ್ತಿ ಹೆಚ್ಚಾಗಿ, ದೇವರನ್ನು ಆರಾಧಿಸಲು ಮೊಣಕಾಲೂರಿ ಕೂತುಬಿಟ್ಟರೆ ಏನು ಮಾಡಲಿ? ಎನ್ನುವುದೇ
ನನ್ನ ಚಿಂತೆ' ಎಂದ ನಸ್ರುದ್ದೀನ್.
13. ರಾಜನ ಸಿಂಹಾಸನ
ಮುಲ್ಲಾ ನಸ್ರುದ್ದೀನನ ಮನೆಯಲ್ಲಿ ಎಮ್ಮೆಯೊಂದಿತ್ತು. ಅದರ ಕೊಂಬುಗಳು ತೀರಾ
ಅಗಲವಾಗಿದ್ದು, ಮುಲ್ಲಾನಿಗೆ ಅವುಗಳನ್ನು ನೋಡಿದಾಗಲೆಲ್ಲಾ, ಹೇಗಾದರೂ ಮಾಡಿ ಅವುಗಳ
ನಡುವೆ ಒಮ್ಮೆ ಕೂತುಕೊಳ್ಳಬೇಕು ಎನ್ನಿಸುತ್ತಿತ್ತು.
ಒಂದು ದಿನ ಅವನು ಮತ್ತು
ಅವನ ಹೆಂಡತಿ ಜಗುಲಿಯ ಮೇಲೆ
ಕೂತು ಮಾತನಾಡಿಕೊಳ್ಳುತ್ತಿರುವಾಗ ಆ ಎಮ್ಮೆ ಅವನ
ಬಳಿಯೇ ಬಂದು ನಿಂತು ಮೆಲುಕು
ಹಾಕತೊಡಗಿತು. ಅವಕಾಶ ಸಿಕ್ಕಿದೆ ಎಂದುಕೊಂಡ
ನಸ್ರುದ್ದೀನ್ ಥಟ್ಟನೆ ಜಗುಲಿಯ ಮೇಲಿಂದ
ಆ ಎಮ್ಮೆಯ ಕೊಂಬುಗಳ
ನಡುವೆ ತಲೆಯ ಮೇಲೆ ಕೂತು,
`ಆಹಾ ನಾನೇ ರಾಜ. ಇದು
ನನ್ನ ಸಿಂಹಾಸನ' ಎಂದು ತನ್ನ ಹೆಂಡತಿಗೆ
ಹೇಳಿ ಎರಡೂ ಕೈಗಳಿಂದ ಒಂದೊಂದು
ಕೊಂಬು ಹಿಡಿದು ರಾಜನಂತೆ ಬೀಗಿದ.
ಬೆದರಿದ ಎಮ್ಮೆ ತನ್ನ ತಲೆಯನ್ನು
ಜೋರಾಗಿ ಕೊಡವಿತು. ನಸ್ರುದ್ದೀನ್ ಹಾರಿ ಅಷ್ಟು ದೂರ
ಹೋಗಿ ಬಿದ್ದ. ಅವನು ಮೇಲೇಳಲು
ಅವನಿಗೆ ತನ್ನ ಕೈ ಕೊಡುತ್ತಾ
ಆತನ ಹೆಂಡತಿ,
`ತಲೆ ಕೆಡಿಸಿಕೊಳ್ಳಬೇಡ. ರಾಜರು ಸಿಂಹಾಸನ ಕಳೆದುಕೊಳ್ಳುತ್ತಿರುವುದು
ಇದು ಮೊದಲ ಬಾರಿಯೇನಲ್ಲ' ಎಂದಳು.
j.balakrishna@gmail.com