ಶುಕ್ರವಾರ, ನವೆಂಬರ್ 08, 2013

ನವೆಂಬರ್ 2013ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 22ನೇ ಕಂತು





1. ಕತ್ತೆಯ ಮೇಲೆ ನಾನಿರಲಿಲ್ಲ
ಮೇಯಲು ಹೋಗಿದ್ದ ಮುಲ್ಲಾ ನಸ್ರುದ್ದೀನನ ಕತ್ತೆ ಒಂದು ದಿನ ಕಳೆದುಹೋಯಿತು. ಕತ್ತೆಗಾಗಿ ಮುಲ್ಲಾ ಎಲ್ಲೆಲ್ಲೋ ಹುಡುಕಿದ. ಎಷ್ಟು ಹುಡುಕಿದರೂ ಸಿಗಲಿಲ್ಲ. ಸುದ್ದಿ ಊರಿಗೆಲ್ಲಾ ಹಬ್ಬಿತು. ಮುಲ್ಲಾ ನಸ್ರುದ್ದೀನ್ ತನ್ನ ಕತ್ತೆಯನ್ನು ಬಹಳಷ್ಟು ಪ್ರೀತಿಸುತ್ತಿದ್ದ. ಊರಿನ ಜನವೆಲ್ಲಾ ಮುಲ್ಲಾನಿಗೆ ಬಹಳ ಬೇಸರವಾಗಿರುತ್ತದೆಂದು ಅವನಿಗೆ ಸಾಂತ್ವನ ಹೇಳಲು ಅವನ ಮನೆಗೆ ಬಂದರು. ಆದರೆ ಮುಲ್ಲಾ ಬಹಳ ಸಂತೋಷದಿಂದ ಇದ್ದ ಹಾಗೂ ದೇವರಿಗೆ ಧನ್ಯವಾದಗಳನ್ನು ತಿಳಿಸುತ್ತಿದ್ದ. ಜನರಿಗೆ ಆಶ್ಚರ್ಯವಾಯಿತು.
`ಅಲ್ಲಾ, ಮುಲ್ಲಾ.... ನಿನ್ನ ಪ್ರೀತಿಯ ಕತ್ತೆ ಕಳೆದುಹೋಗಿದೆ. ಆದರೆ ನೀನು ಮಾತ್ರ ಸಂತೋಷದಿಂದ ಇದ್ದೀಯ. ಅಷ್ಟಲ್ಲದೆ ದೇವರಿಗೆ ಧನ್ಯವಾದಗಳನ್ನು ಸಹ ಹೇಳುತ್ತಿದ್ದೀಯ. ನಿನ್ನ ಕತ್ತೆ ಕಳೆದುಹೋದುದಕ್ಕೆ ಬೇಸರವಿಲ್ಲವೆ?’ ಎಂದು ಊರಿನ ಜನ ಕೇಳಿದರು.
`ನನ್ನ ಪ್ರೀತಿ ಪಾತ್ರ ಕತ್ತೆ ಕಳೆದುಹೋಗಿದೆ ನಿಜ. ಆದರೆ ದೇವರ ಕೃಪೆ ಹೇಗಿದೆ ನೋಡಿ. ಸದ್ಯ, ಕತ್ತೆ ಕಳೆದುಹೋದಾಗ ನಾನು ಅದರ ಮೇಲೆ ಕೂತಿರಲಿಲ್ಲ. ಇಲ್ಲದಿದ್ದಲ್ಲಿ ನಾನು ದಿನ ಇಲ್ಲಿ ನಿಮ್ಮೆದುರಿಗೆ ಇರುತ್ತಿರಲಿಲ್ಲಎಂದ ನಸ್ರುದ್ದೀನ್ ಮತ್ತೊಮ್ಮೆ ದೇವರಿಗೆ ವಂದಿಸುತ್ತಾ.



2. ಹೆಂಡತಿಗೆ ಒದ್ದ ಕತ್ತೆ
ಒಂದು ದಿನ ಮುಲ್ಲಾ ನಸ್ರುದ್ದೀನನ ಹೆಂಡತಿ ಹಿತ್ತಲಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಅವನ ಕತ್ತೆ ಆಕೆಯನ್ನು ಜಾಡಿಸಿ ಒದ್ದಿತು. ಆಕೆಯ ಕೈಕಾಲು ಮುರಿದು ಹೋಯಿತು. ವೈದ್ಯರು ಬಂದು ಕಟ್ಟು ಕಟ್ಟಿ ಆಕೆಗೆ ವಿಶ್ರಾಂತಿ ಪಡೆಯಲು ತಿಳಿಸಿದರು. ಸುದ್ದಿ ತಿಳಿದ ಊರಿನ ಗಂಡಸರೆಲ್ಲಾ ಆಕೆಯನ್ನು ನೋಡಲು ಬಂದರು. ಅವರನ್ನು ನೋಡಿ ವೈದ್ಯರು ಮುಲ್ಲಾನನ್ನು, `ನಿಮ್ಮ ಹೆಂಡತಿ ಬಹಳಷ್ಟು ಜನಪ್ರಿಯಳಾಗಿರಬೇಕಲ್ಲವೇ?’ ಎಂದು ಕೇಳಿದರು.
`ಏನಿಲ್ಲಾ... ಊರಿನ ಗಂಡಂದಿರೆಲ್ಲಾ ಕತ್ತೆಯನ್ನು ಕೊಳ್ಳಬೇಕೆಂದು ಒಬ್ಬರ ಮೇಲೊಬ್ಬರು ದುಂಬಾಲು ಬಿದ್ದಿದ್ದಾರೆಎಂದ ಮುಲ್ಲಾ.

3. ಕೊನೆಯ ಆಸೆ
ಮುಲ್ಲಾ ನಸ್ರುದ್ದೀನನ ಪತ್ನಿಗೆ ಬಹಳ ದಿನಗಳಿಂದ ಕಾಯಿಲೆಯಿತ್ತು, ವಾಸಿಯಾಗಿರಲೇ ಇಲ್ಲ. ಆಕೆಗೆ ಇನ್ನು ತಾನು ಹೆಚ್ಚು ದಿನ ಬದುಕುಳಿಯುವುದಿಲ್ಲ ಎನ್ನಿಸಿತು. ಒಂದು ದಿನ ತನ್ನ ಗಂಡ ಮುಲ್ಲಾನನ್ನು ಕರೆದು, `ನನಗನ್ನಿಸುತ್ತಿದೆ ಇನ್ನು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದು. ನನ್ನದೊಂದು ಕೊನೆಯ ಆಸೆ ಇದೆ. ನೆರವೇರಿಸುವಿರಾ?’ ಎಂದು ಕೇಳಿದಳು.
`ಖಂಡಿತಾ ನೆರವೇರಿಸುತ್ತೇನೆಎಂದ ಮುಲ್ಲಾ.
`ನಾನು ಸತ್ತ ಮೇಲೆ ನೀವು ಖಂಡಿತಾ ಮರುಮದುವೆಯಾಗಬೇಕುಎಂದಳು ಆಕೆ.
`ಆಯಿತು, ನಿನ್ನಿಷ್ಟದಂತೆಯೇ ನಡೆಯುತ್ತೇನೆಎಂದ ಮುಲ್ಲಾ.
`ಆದರೆ, ನಿಮ್ಮ ಹೊಸ ಪತ್ನಿ ನನ್ನ ಹಳೆಯ ಯಾವುದೂ ಬಟ್ಟೆ ಧರಿಸಬಾರದು. ಏಕೆಂದರೆ ಆಕೆ ಧರಿಸಿರುವುದನ್ನು ನೋಡಿದರೆ ನಿಮಗೆ ನನ್ನ ನೆನಪಾಗಬಹುದುಎಂದಳು.
`ಖಂಡಿತವಾಗಿಯೂ ಆಕೆಗೆ ನಿನ್ನ ಬಟ್ಟೆ ಧರಿಸಲು ಅವಕಾಶ ಕೊಡುವುದಿಲ್ಲ. ಅಲ್ಲದೆ ಫಾತೀಮಾಳಿಗೆ ನಿನ್ನ ಬಟ್ಟೆ ಸರಿಹೊಂದುವುದಿಲ್ಲ ಬಿಡುಎಂದ ಮುಲ್ಲಾ ನಸ್ರುದ್ದೀನ್.

4. ಕಾಲಿನ ವಯಸ್ಸು
ಮುಲ್ಲಾ ನಸ್ರುದ್ದೀನನಿಗೆ ಎಡಗಾಲು ಮಂಡಿ ತುಂಬಾ ನೋಯುತ್ತಾ ಇತ್ತು. ತೋರಿಸಿಕೊಳ್ಳೋಣವೆಂದು ವೈದ್ಯರ ಬಳಿ ಹೋದ. ಕಾಲನ್ನು ಪರೀಕ್ಷಿಸಿದ ವೈದ್ಯರು,
`ವಯಸ್ಸಾಯಿತಲ್ಲಾ ಮುಲ್ಲಾ, ಅದಕ್ಕೇ ನಿನ್ನ ಎಡಗಾಲಿಗೆ ನೋವಾಗುತ್ತಿದೆ. ಅದಕ್ಕೇನೂ ಚಿಕಿತ್ಸೆ ಮಾಡಲು ಸಾಧ್ಯವಿಲ್ಲಎಂದರು.
`ಹೌದೆ? ನನ್ನ ಬಲಗಾಲಿಗೂ ಅಷ್ಟೇ ವಯಸ್ಸಾಗಿದೆ... ಆದರೆ ಅದಕ್ಕೇನೂ ಆಗಿಲ್ಲವಲ್ಲಾ?’ ಕೇಳಿದ ಮುಲ್ಲಾ.

5. ಸ್ವರ್ಗಕ್ಕೆ ಹೋಗಬೇಕೆ?
ಗುರೂಜಿ ಪ್ರವಚನ ನೀಡುತ್ತಿದ್ದಾಗ ಊರಿನ ಜನರೆಲ್ಲಾ ಬಹಳ ಆಸಕ್ತಿಯಿಂದ ಕೇಳಿಸಿಕೊಳ್ಳುತ್ತಿದ್ದರು. ಮುಲ್ಲಾ ನಸ್ರುದ್ದೀನ್ ಸಹ ಅವರ ನಡುವೆ ಕುಳಿತಿದ್ದ. ಪ್ರವಚನದ ಮಧ್ಯೆ ಗುರೂಜಿ `ಯಾರ್ಯಾರು ಸ್ವರ್ಗಕ್ಕೆ ಹೋಗಲು ಬಯಸುತ್ತೀರಿ ನಿಂತುಕೊಳ್ಳಿಎಂದರು. ಎಲ್ಲರೂ ನಿಂತರು. ಮುಲ್ಲಾ ಮಾತ್ರ ನಿಲ್ಲಲಿಲ್ಲ.
`ಏನಯ್ಯಾ.. ನಿನಗೆ ಸ್ವರ್ಗಕ್ಕೆ ಹೋಗಲು ಇಷ್ಟವಿಲ್ಲವೆ?’ ಕೇಳಿದರು ಗುರೂಜಿ.
`ಇದೆ ಸ್ವಾಮಿ. ಆದರೆ ನಾನು ನಮ್ಮ ಊರಿನವರ ಜೊತೆ ಹೋಗುವುದಿಲ್ಲಎಂದ ನಸ್ರುದ್ದೀನ್.

6. ಕಾವ್ಯಕ್ಕೆ ಕಿಚ್ಚು
ಒಬ್ಬ ಯುವ ಕವಿ ತನ್ನ ಚೊಚ್ಚಲ ಸಂಕಲನವನ್ನು ತೆಗೆದುಕೊಂಡು ಹಿರಿಯನಾದ ಮುಲ್ಲಾ ನಸ್ರುದ್ದೀನನ ಅಭಿಪ್ರಾಯ ಕೇಳೋಣವೆಂದು ಆತನಿಗೆ ಕೊಟ್ಟ. ಪದ್ಯಗಳನ್ನು ಓದಿದ ಮುಲ್ಲಾ ಅವನ್ನು ಯುವ ಕವಿಗೆ ಹಿಂದಿರುಗಿಸಿದ. ಮುಲ್ಲಾನ ಮುಖದಲ್ಲಿ ಉತ್ಸಾಹವಿರಲಿಲ್ಲ, ಬೇಸರವಿತ್ತು.
`ಏಕೆ ಮುಲ್ಲಾ? ನನ್ನ ಪದ್ಯಗಳು ಚೆನ್ನಾಗಿಲ್ಲವೆ? ಅವುಗಳಿಗೆ ಇನ್ನಷ್ಟು ಕಿಚ್ಚು ಸೇರಿಸಿದರೆ ಹೇಗಿರುತ್ತದೆ?’ ಎಂದ ಯುವ ಕವಿ.
`ಹೇ, ಬೇಡ. ಪದ್ಯಗಳಿಗೆ ಕಿಚ್ಚು ಸೇರಿಸಬೇಡ, ಕಿಚ್ಚಿಗೆ ನಿನ್ನ ಪದ್ಯಗಳನ್ನು ಸೇರಿಸುಎಂದು ಸಲಹೆ ಕೊಟ್ಟ ಮುಲ್ಲಾ.

7. ಏಣಿ ಹಿಡಿದುಕೊಂಡಿರುವವರು
ರಾತ್ರಿ ಸರಿಹೊತ್ತಿನಲ್ಲಿ ಮುಲ್ಲಾ ನಸ್ರುದ್ದೀನನ ಮಗಳ ಕೋಣೆಯ ಕಿಟಕಿಯನ್ನು ತಟ್ಟಿದ ಸದ್ದಾಯಿತು. ಆಕೆ ತನ್ನ ಗೆಳೆಯನನ್ನು ನಿರೀಕ್ಷಿಸಿದ್ದಳು. ಅವಳು ಮತ್ತು ಆಕೆಯ ಗೆಳೆಯ ಇಬ್ಬರೂ ಓಡಿ ಹೋಗಿ ಮದುವೆಯಾಗುವ ಯೋಜನೆ ಹಾಕಿದ್ದರು. ಏಣಿ ಹತ್ತಿ ಮೊದಲ ಮಹಡಿಯ ತನ್ನ ಕಿಟಕಿಗೆ ಬಂದಿದ್ದ ತನ್ನ ಗೆಳೆಯನನ್ನು ಕೇಳಿದಳು, `ಎಲ್ಲಾ ಸಿದ್ಧವಿದೆಯಾ?’
`ಎಲ್ಲಾ ಸಿದ್ಧವಿದೆ. ಬೇಗ ನಿನ್ನ ಚೀಲ ತೆಗೆದುಕೊಂಡು ಹೊರಡುಎಂದ ಆಕೆಯ ಗೆಳೆಯ.
`ಹುಷ್! ನಿಧಾನವಾಗಿ ಮಾತನಾಡು. ಜೋರಾಗಿ ಮಾತನಾಡಿದರೆ ಶಬ್ದಕ್ಕೆ ನನ್ನ ತಂದೆ ಎಚ್ಚರಾಗಿಬಿಡುತ್ತಾರೆಎಂದಳು ನಸ್ರುದ್ದೀನನ ಮಗಳು.
`ಎಚ್ಚರಾಗಿಬಿಡುತ್ತಾರೆ? ಕೆಳಗೆ ಏಣಿ ಹಿಡಿದುಕೊಂಡು ನಿಂತಿರುವವರು ಯಾರು ಎಂದುಕೊಂಡಿದ್ದೀಯಾ?’ ಕೇಳಿದ ಆಕೆಯ ಗೆಳೆಯ.

8. ಕೆಟ್ಟ ಆಲೋಚನೆಗಳು
ಯಾವಾಗಲೂ ಭ್ರಮಾಲೋಕದಲ್ಲಿರುತ್ತಿದ್ದ ಮುಲ್ಲಾ ನಸ್ರುದ್ದೀನನನ್ನು ಸರಿಪಡಿಸಲು ಅವನ ಪತ್ನಿ ಅವನನ್ನು ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಕರೆದೊಯ್ದಳು
ಮುಲ್ಲಾನನ್ನು ಪರೀಕ್ಷಿಸಿದ ವೈದ್ಯರು,
`ಏನಪ್ಪಾ, ನಿನಗೆ ಕೆಟ್ಟ ಆಲೋಚನೆಗಳು ತುಂಬಾ ತೊಂದರೆ ಕೊಡುತ್ತಿರಬಹುದಲ್ಲವೆ?' ಕೇಳಿದರು.
`ಖಂಡಿತಾ ಇಲ್ಲ, ಕೆಟ್ಟ ಆಲೋಚನೆಗಳು ತುಂಬಾ ಬರುತ್ತಿವೆ ನಿಜ. ಆದರೆ ಅವು ನನಗೆ ತುಂಬಾ ಮಜಾ ಕೊಡುತ್ತಿವೆ' ಎಂದ ಮುಲ್ಲಾ.

9. ಹುಚ್ಚು ನಾಯಿ
ಒಂದು ದಿನ ಮುಲ್ಲಾನಿಗೆ ಬೀದಿ ನಾಯಿಯೊಂದು ಕಚ್ಚಿಬಿಟ್ಟಿತು. ಮುಲ್ಲಾ ಗಾಯಕ್ಕೆ ಚಿಕಿತ್ಸೆ ಮಾಡಿಕೊಳ್ಳಲು ವೈದ್ಯರ ಬಳಿ ಹೋದ. ವೈದ್ಯರು ಪರೀಕ್ಷಿಸಿ ಅವನನ್ನು ಯಾವ ನಾಯಿ ಕಚ್ಚಿತೆಂದು ವಿಚಾರಿಸಿದರು. ಮುಲ್ಲಾ ಎಲ್ಲಾ ವಿವರಗಳನ್ನು ತಿಳಿಸಿದ. ಕೂಡಲೇ ವೈದ್ಯರು ಅವನನ್ನು ಆಸ್ಪತ್ರೆಗೆ ಒಳರೋಗಿಯಾಗಿ ಸೇರಿಸಿಕೊಂಡು ಮತ್ತಷ್ಟು ಪರೀಕ್ಷೆಗಳನ್ನು ನಡೆಸಿ ತಾವು ಕಂಡುಕೊಂಡುದನ್ನು ಅವನಿಗೆ ತಿಳಿಸಿದರು.
`ಮುಲ್ಲಾ, ನಮಗೆ ಹೇಳಲು ದುಃಖವಾಗುತ್ತಿದೆ. ನಿನಗೆ ಕಚ್ಚಿರುವುದು ಹುಚ್ಚು ನಾಯಿ. ಇನ್ನು ನಿನ್ನ ಕೊನೆಯ ದಿನಗಳ ಹತ್ತಿರವಾದವು' ಎಂದರು.
ಕೂಡಲೇ ಮುಲ್ಲಾ ಹಾಳೆಯೊಂದನ್ನು ತರಿಸಿಕೊಂಡು ಏನೋ ಪಟ್ಟಿಮಾಡತೊಡಗಿದ.
ಅದನ್ನು ನೋಡಿದ ವೈದ್ಯರು,
`ಏನಪ್ಪಾ, ನಿನ್ನ ಕೊನೆಯ ಆಸೆಗಳನ್ನು ಪಟ್ಟಿ ಮಾಡುತ್ತಿದ್ದೀಯೇನು?' ಎಂದು ಕೇಳಿದರು.
`ಇಲ್ಲಾ, ನಾನು ಕಚ್ಚಬೇಕಾದವರ ಹೆಸರುಗಳ ಪಟ್ಟಿ ಮಾಡುತ್ತಿದ್ದೇನೆ' ಎಂದ ಮುಲ್ಲಾ.

10. ವಿವಾಹ ವಿಚ್ಛೇದನ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಾರುಕಟ್ಟೆಗೆ ಹೋಗಿದ್ದಾಗ ತನ್ನ ಬಾಲ್ಯದ ಗೆಳೆಯನೊಬ್ಬ ಸಿಕ್ಕ. ಅವರಿಬ್ಬರೂ ಭೇಟಿಯಾಗಿ ಬಹಳ ದಿನಗಳಾಗಿದ್ದವು. ಆ ಗೆಳೆಯ ತೀರಾ ಬೇಸರದಿಂದಿದ್ದ. `ಏನು ಸಮಾಚಾರ?' ಎಂದು ವಿಚಾರಿಸಿದ ಮುಲ್ಲಾ.
`ಏನು ಹೇಳಲಿ?  ನಾನು ನನ್ನ ಪತ್ನಿಯಿಂದ ವಿವಾಹ ವಿಚ್ಛೇದನ ಪಡೆಯಬೇಕೆಂದಿದ್ದೇನೆ, ಆಕೆ ನನ್ನ ಜೊತೆ ಮೂರು ತಿಂಗಳಿನಿಂದ ಮಾತನಾಡಿಲ್ಲ' ಎಂದ ಆ ಗೆಳೆಯ ಬೇಸರದಿಂದ.
`ವಿವಾಹ ವಿಚ್ಛೇದನ ಪಡೆಯುವ ಬಗ್ಗೆ ಮತ್ತೊಮ್ಮೆ ಯೋಚಿಸು ಗೆಳೆಯಾ, ಅಂತಹ ಹೆಂಡತಿ ಸಿಗುವುದು ತೀರಾ ಅಪರೂಪ' ಎಂದ ಮುಲ್ಲಾ.

11. ಸನ್ನಡತೆ
ಒಂದು ದಿನ ಮುಲ್ಲಾನ ಗೆಳೆಯ ಎದುರಿಗೆ ಸಿಕ್ಕ. 
`ನೋಡಯ್ಯಾ, ನನ್ನ ಮಗ ಜೈಲಿನಿಂದ ಪತ್ರ ಬರೆದಿದ್ದಾನೆ. ಅವನ ಸನ್ನಡತೆಯಿಂದಾ ಸಂತೃಪ್ತಗೊಂಡ ಜೈಲು ಅಧಿಕಾರಿಗಳು ಅವನ ಶಿಕ್ಷೆಯನ್ನು ಆರು ತಿಂಗಳು ಕಡಿಮೆಗೊಳಿಸಿದ್ದಾರಂತೆ' ಎಂದ ಾತ.
`ಬಹಳ ಸಂತೋಷ ಕಣಯ್ಯಾ, ಅಷ್ಟು ಒಳ್ಳೆಯ ನಡತೆಯ ಮಗ ಹೊಂದಿರುವುದಕ್ಕೆ ನೀನು ಹೆಮ್ಮೆ ಪಡಬೇಕು' ಎಂದ ಮುಲ್ಲಾ ಅವನ ಬೆನ್ನು ತಟ್ಟುತ್ತಾ.

ಕಾಮೆಂಟ್‌ಗಳಿಲ್ಲ: