ಮಂಗಳವಾರ, ಮಾರ್ಚ್ 12, 2013

ಮುಲ್ಲಾ ನಸ್ರುದ್ದೀನ್ ಕತೆಗಳ 15ನೇ ಕಂತು


2013ರ ಮಾರ್ಚ್ ತಿಂಗಳ `ಸಂವಾದ’ದಲ್ಲಿ ಪ್ರಕಟವಾಗಿರುವ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 15ನೇ ಕಂತು.
ಚಿತ್ರ: ಮುರಳೀಧರ ರಾಠೋಡ್


ಕತ್ತೆಯ ಮಾರಾಟ
        ನಸ್ರುದ್ದೀನ್ ತನ್ನ ಕತ್ತೆಯನ್ನು ಮಾರಾಟಮಾಡಲು ಸಂತೆಗೆ ಬಂದಿದ್ದ. ಅವನ ಕತ್ತೆ ಒಂದು ಪುಂಡು ಕತ್ತೆಯಾಗಿದ್ದು ಅದನ್ನು ಪರೀಕ್ಷಿಸಲು ಯಾರನ್ನೂ ಬಿಡುತ್ತಿರಲಿಲ್ಲ. ಮುಂದೆ ಬಂದರೆ ಕಚ್ಚುತ್ತಿತ್ತು, ಹಿಂದೆ ಬಂದರೆ ಒದೆಯುತ್ತಿತ್ತು. ಇದನ್ನೆಲ್ಲಾ ನೋಡುತ್ತಿದ್ದ ಅಲ್ಲೇ ಪಕ್ಕದಲ್ಲೇ ಇದ್ದ ಮತ್ತೊಬ್ಬ ಮಾರಾಟಗಾರ,
 `ಏನು ನಸ್ರುದ್ದೀನ್? ನಿನ್ನ ಕತ್ತೆಯನ್ನು ಯಾರಿಗಾದರೂ ಮಾರಾಟಮಾಡಬಹುದೆಂಬ ನಂಬಿಕೆ ನಿನಗಿದೆಯೆ?’ ಎಂದು ಕೇಳಿದ.
`ಖಂಡಿತಾ ಇಲ್ಲ. ಆದರೆ ನಾನು ದಿನಾ ಏನು ಅನುಭವಿಸುತ್ತಿದ್ದೀನೆಯೋ ಅದನ್ನು ಜನರೂ ಸ್ವಲ್ಪ ಅನುಭವಿಸಲಿ ಎಂದು ನನ್ನ ಕತ್ತೆಯನ್ನು ಇಲ್ಲಿಗೆ ಕರೆತಂದಿದ್ದೇನೆಎಂದ ನಸ್ರುದ್ದೀನ್.

ದೇವರ ಕೊಡುಗೆ
 ನಸ್ರುದ್ದೀನನ ಕತ್ತೆ ಒಂದು ದಿನ ಕಳೆದುಹೋಯಿತು. ನಸ್ರುದ್ದೀನ್ ದೇವರಿಗೆ ಪ್ರಾರ್ಥಿಸಿ, `ದೇವರೇ ನನ್ನ ಕತ್ತೆ ನನಗೆ ಮರಳಿ ದೊರಕಿಸು. ಬಡಬಗ್ಗರಿಗೆ ಸಾವಿರ ರೂಪಾಯಿ ದಾನ ಮಾಡುತ್ತೇನೆಎಂದ. ಪ್ರಾರ್ಥಿಸಿದ ಒಂದು ಗಂಟೆಯಲ್ಲೇ ಎಲ್ಲೋ ಮೇಯಲು ಹೋಗಿದ್ದ ಕತ್ತೆ ಮನೆಗೆ ಹಿಂದಿರುಗಿತು. ನಸ್ರುದ್ದೀನ್ ಪುನಃ ದೇವರನ್ನು ಪ್ರಾರ್ಥಿಸಿದ, `ದೇವರೇ ನಿನ್ನ ಕೊಡುಗೆ ಅದ್ಭುತ. ನಾನು ಮೊದಲು ಮಾತುಕೊಟ್ಟಂತೆ ಒಂದು ಸಾವಿರ ರೂ ದಾನ ಮಾಡುತ್ತೇನೆ. ಅದರ ಜೊತೆಗೆ ಇನ್ನೂ ಒಂದು ಸಾವಿರ ಸೇರಿಸಿ ದಾನ ಮಾಡುತ್ತೇನೆ, ಆದರೆ ನನಗೆ ಒಂದು ಗಂಟೆಯೊಳಗೆ ಹತ್ತು ಸಾವಿರ ರೂಪಾಯಿ ಸಿಕ್ಕುವಂತೆ ಮಾಡು.’

ನನ್ನ ಬಟ್ಟೆ ಅಷ್ಟೆ
 ನಸ್ರುದ್ದೀನನ ಪತ್ನಿಗೆ ಪಕ್ಕದ ಕೋಣೆಯಲ್ಲಿ ಏನೋ ಬಿದ್ದಂತಾಗಿ ಶಬ್ದವಾಯಿತು. ಏನೆಂದು ಬಂದು ನೋಡಲು ನಸ್ರುದ್ದೀನ್ ನೆಲದ ಮೇಲೆ ಕೂತಿದ್ದ.
`ಏನದು ಶಬ್ದವಾಯಿತು?’ ಎಂದು ಕೇಳಿದಳು ಆಕೆ.
`ಏನಿಲ್ಲ. ನನ್ನ ಅಂಗಿ ಮತ್ತು ಪೈಜಾಮ ಕೆಳಕ್ಕೆ ಬಿದ್ದಿತು ಅಷ್ಟೆಎಂದ ನಸ್ರುದ್ದೀನ್.
`ಆದರೆ ಅಷ್ಟೊಂದು ಶಬ್ದವಾಯಿತಲ್ಲ ಏಕೆ?’ ಎಂದಳು ಆಕೆ.
` ಬಟ್ಟೆಗಳೊಳಗೆ ನಾನು ಇದ್ದೆನಲ್ಲಾ... ಅದಕ್ಕೇ ಶಬ್ದವಾಗಿದೆಎಂದ ನಸ್ರುದ್ದೀನ್ ಏಟುಬಿದ್ದ ಮೊಣಕಾಲು ಉಜ್ಜಿಕೊಳ್ಳುತ್ತ.

ಸರಿಯಾದ ಸಮಯ
 `ನಸ್ರುದ್ದೀನ್, ಊಟ ಮಾಡಲು ಯಾವುದು ಒಳ್ಳೆಯ ಸಮಯ?’ ವ್ಯಕ್ತಿಯೊಬ್ಬ ಕೇಳಿದ.
`ಸಾಹುಕಾರರು ಯಾವಾಗ ಊಟಮಾಡಿದರೂ ಅದು ಒಳ್ಳೆಯ ಸಮಯವೇ. ಆದರೆ ಬಡವರು ಆಹಾರ ಸಿಕ್ಕಾಗ ಊಟಮಾಡುವುದು ಒಳ್ಳೆಯ ಸಮಯಎಂದ ನಸ್ರುದ್ದೀನ್.

ತಲೆಹರಟೆ
 ನಸ್ರುದ್ದೀನ್ ತಾನು ಕೊಳ್ಳಲು ಬಯಸಿದ್ದ ಮನೆಯನ್ನು ಪರಿಶೀಲಿಸುತ್ತಿದ್ದ. ಪಕ್ಕದ ಮನೆಯಾತ ನಸ್ರುದ್ದೀನ್ ಮನೆ ಕೊಳ್ಳಲು ಬಂದವನೆಂಬುದನ್ನು ತಿಳಿದುಕೊಂಡು ಬಂದು ಮನೆ ತುಂಬಾ ಚೆನ್ನಾಗಿದೆ, ಅದನ್ನು ಕೊಳ್ಳುವುದು ಒಳ್ಳೆಯದು ಎಂದು ಅದು ಇದು ಮಾತನಾಡಲು ತೊಡಗಿದ. ಆತನ ಮಾತು ಮುಗಿದ ಮೇಲೆ,
`ಮನೆಯೇನೋ ಚೆನ್ನಾಗಿದೆ, ಆದರೆ ಮನೆಗೆ ಲೋಪವೊಂದಿದೆ. ಅದರ ಬಗ್ಗೆ ನೀವು ಹೇಳಲೇ ಇಲ್ಲವಲ್ಲಾಎಂದ ನಸ್ರುದ್ದೀನ್.
`ಹೌದೆ? ಏನದು?’ ಕೇಳಿದ ಪಕ್ಕದ ಮನೆಯಾತ.
` ಮನೆಯ ಪಕ್ಕದ ಮನೆಯಾತ ಬಾಯಿಬಡುಕ ತಲೆಹರಟೆ ಎಂಬುದುಎಂದ ನಸ್ರುದ್ದೀನ್.

ಪ್ರಶ್ನೆಗೆ ಪ್ರಶ್ನೆ
 ವ್ಯಕ್ತಿ: `ಮುಲ್ಲಾ, ನಿನಗೆ ಯಾವುದೇ ಪ್ರಶ್ನೆ ಕೇಳಿದರೂ ನೀನು ಉತ್ತರವಾಗಿ ಮತ್ತೊಂದು ಪ್ರಶ್ನೆಯನ್ನು ಕೇಳುತ್ತೀಯಲ್ಲಾ?’
ನಸ್ರುದ್ದೀನ್: `ಏಕೆ ಕೇಳಬಾರದು?’

ದಡ್ಡ
 ನಸ್ರುದ್ದೀನ್ ಸಾಹುಕಾರನೊಬ್ಬನ ಬಳಿ ಕೆಲಸಕ್ಕಿದ್ದ. ಆತ ಮಾಡುವ ಕೆಲಸದ ವೈಖರಿಯನ್ನು ಕಂಡು ಒಂದು ದಿನ ಸಾಹುಕಾರ,
`ನಸ್ರುದ್ದೀನ್ ನೀನು ದಡ್ಡ. ಕೆಲಸಗಳನ್ನು ತುಂಬಾ ನಿಧಾನವಾಗಿ ಮಾಡುತ್ತೀಯೆ. ಏನಾದರೂ ತೆಗೆದುಕೊಂಡು ಬಾ ಎಂದರೆ ನೀನು ಮಾರುಕಟ್ಟೆಗೆ ಮೂರು ಮೂರು ಸಾರಿ ಹೋಗಿಬರುತ್ತೀಯೆಎಂದ.
`ಕ್ಷಮಿಸಿ ತಪ್ಪಾಯಿತು. ಇನ್ನು ಮೇಲೆ ಎಲ್ಲಾ ಸರಿಯಾಗಿ ಮಾಡುತ್ತೇನೆಎಂದ ನಸ್ರುದ್ದೀನ್.
 ಒಂದು ದಿನ ಸಾಹುಕಾರನಿಗೆ ಮೈ ಹುಷಾರಿರಲಿಲ್ಲ. ನಸ್ರುದ್ದೀನನನ್ನು ಕರೆದು ವೈದ್ಯರನ್ನು ಕರೆತರುವಂತೆ ಹೇಳಿದ.
ನಸ್ರುದ್ದೀನ್ ಹಿಂದಿರುಗಿದಾಗ ಆತನ ಜೊತೆ ಮೂರು ಜನರಿದ್ದರು. ವೈದ್ಯರನ್ನು ಕರೆದುಕೊಂಡು ಬರಲು ತಿಳಿಸಿದರೆ ಮೂರು ಜನರನ್ನು ಕರೆದುಕೊಂಡು ಬಂದಿದ್ದನ್ನು ನೋಡಿದ ಸಾಹುಕಾರ ಅವರೆಲ್ಲಾ ಯಾರೆಂದು ಕೇಳಿದ.
`ಒಂದೇ ಸಾರಿ ಮಾಡಬಹುದಾದುದನ್ನು ಮಾಡಲು ಮೂರು ಸಾರಿ ಏಕೆ ಮಾರುಕಟ್ಟೆಗೆ ಹೋಗಬೇಕೆಂದು ಎಲ್ಲರನ್ನೂ ಒಮ್ಮೆಲೇ ಕರೆದುಕೊಂಡು ಬಂದಿದ್ದೇನೆ. ಒಬ್ಬರು ನೀವು ಹೇಳಿದ್ದಂತೆ ವೈದ್ಯರು. ಮತ್ತೊಬ್ಬರು ಅಕಸ್ಮಾತ್ ನೀವು ಸತ್ತುಹೋದರೆ ಪ್ರಾರ್ಥನೆ ಮಾಡಲು ಮಸೀದಿಯ ಇಮಾಂ ಸಾಹೇಬರು ಹಾಗೂ ಮತ್ತೊಬ್ಬರು ನಿಮ್ಮ ಅಂತ್ಯಕ್ರಿಯೆಗೆ ಸಿದ್ಧತೆಗಳನ್ನು ಮಾಡುವವರುಎಂದ ನಸ್ರುದ್ದೀನ್ ವಿನಮ್ರನಾಗಿ.
j.balakrishna@gmail.com

ಕಾಮೆಂಟ್‌ಗಳಿಲ್ಲ: