Wednesday, January 21, 2015

ಮುಲ್ಲಾ ನಸ್ರುದ್ದೀನ್ ಕತೆಗಳ 34ನೇ ಕಂತು

`ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 34ನೇ ಕಂತುನಂಬಿಕೆ
ಮುಲ್ಲಾ ನಸ್ರುದ್ದೀನ್ ಮತ್ತು ಅವನ ಗೆಳೆಯ ಅಬ್ದುಲ್ಲಾ ಜೂಜಾಡಲು ಹೊರಟರು. ಮುಲ್ಲಾನ ಕುತ್ತಿಗೆಯಲ್ಲಿ ತಾಯತವೊಂದಿರುವುದನ್ನು ಅಬ್ದುಲ್ಲಾ ಕಂಡ.
`ಮುಲ್ಲಾ ನಿನಗೆ ಮೂಢನಂಬಿಕೆಯಲ್ಲಿ ವಿಶ್ವಾಸವಿಲ್ಲ ಅಲ್ಲವೆ?’ ಕೇಳಿದ ಅಬ್ದುಲ್ಲಾ.
`ಹೌದು, ನನಗೆ ಅಂತಹ ಅಂಧಶ್ರದ್ಧೆಯಲ್ಲಿ ಖಡಾಖಂಡಿತವಾಗಿ ನಂಬಿಕೆಯಿಲ್ಲಹೇಳಿದ ಮುಲ್ಲಾ.
`ಹಾಗಿದ್ದರೆ ನಿನ್ನ ಕುತ್ತಿಗೆಯಲ್ಲಿ ತಾಯತವಿದೆಯೆಲ್ಲಾ ಏಕೆ?’
`ಹೋ ಅದೇ! ನನ್ನ ಹೆಂಡತಿ ಅದನ್ನು ಕಟ್ಟಿದ್ದಾಳೆ. ಅವಳು ಹೇಳಿದ್ದಾಳೆ ನಂಬಿಕೆ ಇರಲಿ, ಇಲ್ಲದಿರಲಿ ಅದು ಅದೃಷ್ಟ ತರುತ್ತದಂತೆ!’  ಹೇಳಿದ ನಸ್ರುದ್ದೀನ್.

ದೀರ್ಘಾಯುಷ್ಯದ ರಹಸ್ಯ
ಮುಲ್ಲಾ ನಸ್ರುದ್ದೀನನಿಗೆ 105 ವರ್ಷಗಳಾಗಿತ್ತು. ಅವನ ಮಕ್ಕಳು ಮತ್ತು ಮೊಮ್ಮಕ್ಕಳು ಅವನ ಹುಟ್ಟುಹಬ್ಬ ಆಚರಿಸುತ್ತಿದ್ದರು. ಮನೆಗೆ ಬಂದ ಅತಿಥಿಗಳಲ್ಲಿ ಕೆಲವರು ಮಾತನಾಡಿಕೊಳ್ಳುತ್ತಿದ್ದರು.
`ಮುಲ್ಲಾನ ದೀರ್ಘಾಯುಷ್ಯದ ರಹಸ್ಯ ಏನಿರಬಹುದು?’ ಒಬ್ಬಾತ ಮತ್ತೊಬ್ಬಾತನನ್ನು ಕೇಳಿದ.
`ಅವನೊಬ್ಬ ಸೋಮಾರಿ. ಇಷ್ಟು ವರ್ಷ ಅವನು ಬದುಕುವುದು ಬಿಟ್ಟು ಬೇರೇನು ಕೆಲಸವನ್ನೂ ಮಾಡಿಲ್ಲಹೇಳಿದ ಮತ್ತೊಬ್ಬಾತ.

ಖಂಡಿತಾ ಮಾಡುತ್ತೇನೆ
ಮುಲ್ಲಾ ನಸ್ರುದ್ದೀನನಿಗೆ 105 ವರ್ಷಗಳಾಗಿತ್ತು. ಅವನ ಹುಟ್ಟು ಹಬ್ಬದ ಸಂದರ್ಭದಲ್ಲಿ ಒಬ್ಬ ಪತ್ರಿಕಾ ವರದಿಗಾರ ಬಂದಿದ್ದ.
`ಮುಲ್ಲಾ ನಿಮ್ಮ ಬದುಕಲ್ಲಿ ನೀವು ಹಲವಾರು ತಪ್ಪುಗಳನ್ನು ಮಾಡಿದ್ದೀರಿ. ನಿಮಗೆ ಅವುಗಳ ಬಗ್ಗೆ ಪಶ್ಚಾತ್ತಾಪವಿರಬೇಕಲ್ಲವೆ? ನೀವು ಮತ್ತೊಮ್ಮೆ ಹುಟ್ಟುವಿರಾದಲ್ಲಿ ನಿಮ್ಮ ತಪ್ಪುಗಳ ಅನುಭವದಿಂದ ನೀವು ತಪ್ಪುಗಳನ್ನು ಮತ್ತೊಮ್ಮೆ ಮಾಡುವುದಿಲ್ಲ ಅಲ್ಲವೆ?’ ಎಂದು ಕೇಳಿದ ವರದಿಗಾರ.
`ಖಂಡಿತಾ ಮಾಡುತ್ತೇನೆ!’ ಹೇಳಿದ ಮುಲ್ಲಾ, ` ಸಾರಿ ಅವುಗಳನ್ನು ಆದಷ್ಟು ಬೇಗ ಮಾಡುತ್ತೇನೆ.’

ವಿಪರೀತ ಚಳಿ
ಅಜ್ಜ ಮುಲ್ಲಾ ನಸ್ರುದ್ದೀನ್ ಚಳಿಗೆ ನಡುಗುತ್ತಾ ಮಲಗಿದ್ದ.
` ವರ್ಷ ವಿಪರೀತ ಚಳಿ ಇದೆಯಲ್ಲವೆ?’ ತನ್ನ ಪತ್ನಿ ಫಾತೀಮಾಳನ್ನು ಕೇಳಿದ.
`ಏನಿಲ್ಲಾ, ನಿನಗೆ ಹಾಗನ್ನಿಸುತ್ತಿದೆ ಅಷ್ಟೆಹೇಳಿದಳು ಫಾತಿಮಾ.
`ಇಲ್ಲ, ಚಳಿ ಜಾಸ್ತಿಯಿದೆ. ಬೇಕಾದರೆ ಅಲ್ಲಿ ನೋಡು, ಮೇಜಿನ ಮೇಲಿನ ನನ್ನ ಹಲ್ಲಿನ ಸೆಟ್ಟೂ ಸಹ ಚಳಿಗೆ ಹಲ್ಲು ಕಡಿಯುತ್ತಿದೆ.’


ನನಗೂ ತಿಳಿಸಿ
ಮುಲ್ಲಾ ನಸ್ರುದ್ದೀನನ ಪತ್ನಿ ತನ್ನ ಮಗನನ್ನು ಶಾಲೆಯಿಂದ ಕರೆದುಕೊಂಡ ಬರಲು ಹೋದಾಗ, ಮಗನ ಟೀಚರ್ ಆಕೆಯನ್ನು ತನ್ನ ಕೋಣೆಗೆ ಕರೆದು,
`ನಿಮ್ಮ ಮಗ ಓದಿನಲ್ಲಿ ಹೆಚ್ಚು ಗಮನ ಹರಿಸುತ್ತಿಲ್ಲ, ಯಾವಾಗಲೂ ಹುಡುಗಿಯರ ಜೊತೆ ಆಟವಾಡುತ್ತಿರುತ್ತಾನೆ. ಆದರೆ ಅದರ ಬಗ್ಗೆ ಚಿಂತಿಸಬೇಡಿ. ಅವನನ್ನು ನಾನು ಸರಿಯಾದ ದಾರಿಗೆ ತರುತ್ತೇನೆಎಂದರು.
`ಹೌದೆ? ಅವನನ್ನು ಸರಿಯಾದ ದಾರಿಗೆ ತಂದ ಮೇಲೆ ವಿಧಾನವನ್ನು ನನಗೂ ತಿಳಿಸಿ. ಅವನ ಅಪ್ಪನನ್ನು ಅದೇ ಅಭ್ಯಾಸದಿಂದ ಸರಿಯಾದ ದಾರಿಗೆ ತರಲು ನಾನು ಹದಿನೈದು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆಎಂದಳು ತಾಯಿ.

ತಪ್ಪು ಒಬ್ಬನದೆ?
ಮುಲ್ಲಾ ನಸ್ರುದ್ದೀನನ ಮಗನ ಶಾಲೆಯಲ್ಲಿ ಅವನ ಟೀಚರ್ ಹೋಂವರ್ಕ್ ಪರೀಕ್ಷಿಸುತ್ತಿದ್ದರು. ಅವನನ್ನು ಕರೆದು,
`ನೋಡಿಲ್ಲಿ, ಇಷ್ಟು ಜನ ವಿದ್ಯಾರ್ಥಿಗಳಲ್ಲಿ ತಪ್ಪು ಮಾಡಿರುವವನು ನೀನೊಬ್ಬನೇ!’ ಎಂದು ಹೇಳಿ ಗದರಿಸಿದರು.
`ತಪ್ಪು ನನ್ನೊಬ್ಬನದೇ ಅಲ್ಲ ಟೀಚರ್, ಅದಕ್ಕೆ ನಮ್ಮ ತಂದೆಯೂ ಸಹಾಯ ಮಾಡಿದ್ದಾರೆಹೇಳಿದ ನಸ್ರುದ್ದೀನನ ಮಗ.
ಮಕ್ಕಳ ಉಪಕಾರ
ಅಬ್ದುಲ್ಲಾ ತನ್ನ ಗೆಳೆಯ ಮುಲ್ಲಾ ನಸ್ರುದ್ದೀನನಿಗೆ ಹೇಳಿದ,
`ನನ್ನ ಹೆಂಡತಿ ಮೊದಲು ಬಹಳಷ್ಟು ಹಾಡುತ್ತಿದ್ದಳು. ಈಗ ಮಕ್ಕಳು ಹುಟ್ಟಿದ ನಂತರ ಅವಳಿಗೆ ಹಾಡಲು ಸಮಯವೇ ಇರುವುದಿಲ್ಲ `ಮಕ್ಕಳಿಂದಲೂ ಎಂತಹ ಉಪಕಾರವಾಗುತ್ತದಲ್ಲವೆ?’ ಹೇಳಿದ ಮುಲ್ಲಾ.

ಅಪಘಾತ
ಮುಲ್ಲಾ ನಸ್ರುದ್ದೀನ್ ಹೊಸ ವಾಹನವೊಂದನ್ನು ಕೊಂಡ. ಒಂದು ದಿನ ವಾಹನಚಾಲನೆ ಮಾಡುತ್ತಿರುವಾಗ ಪಕ್ಕದ ಮೋರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿದ. ಅಲ್ಲಿಗೆ ಬಂದ ಪೋಲೀಸ್ ಅದನ್ನು ನೋಡಿ,
`ಏನಿದು? ಹೇಗಾಯಿತು ಅಪಘಾತ?’ ಎಂದು ಕೇಳಿದ.
`ನನಗೇನು ಗೊತ್ತು ಸ್ವಾಮಿ ಹೇಗಾಯಿತೋ? ನಾನು ನಿದ್ದೆ ಮಾಡುತ್ತಿದ್ದೆಎಂದ ನಸ್ರುದ್ದೀನ್.

ಅಪಘಾತ ವಲಯ
ಮುಲ್ಲಾ ನಸ್ರುದ್ದೀನ್ ತನ್ನ ವಾಹನ ಚಾಲಿಸುತ್ತಿದ್ದ. ರಸ್ತೆಯಲ್ಲಿ `ಅಪಘಾತ ವಲಯ. ಎಚ್ಚರಿಕೆಯಿಂದ ವಾಹನ ಚಾಲಿಸಿಎಂದು ಬರೆದಿತ್ತು.
` ಇಂಜಿನಿಯರುಗಳಿಗೆ ಬುದ್ಧಿಯೇ ಇಲ್ಲ. ಅದ್ಯಾಕೆ ಅಪಘಾತ ವಲಯಗಳಲ್ಲಿ ರಸ್ತೆ ನಿರ್ಮಿಸುತ್ತಾರೋ!’ ಎಂದು ಗೊಣಗಿಕೊಂಡ.

ಅಲ್ಲಾಡುವ ಮನೆ
ಮುಲ್ಲಾ ನಸ್ರುದ್ದೀನ್ ಅವನ ಗೆಳೆಯ ಅಬ್ದುಲ್ಲಾ ಇಬ್ಬರೂ ಒಂದು ದಿನ ಸಂಜೆ ಗಡಂಗಿನಲ್ಲಿ ಕೂತು ಮೈಮರೆಯುವಷ್ಟು ಕುಡಿದರು. ಸಮಯ ಹೋಗಿದ್ದೇ ತಿಳಿಯಲಿಲ್ಲ. ರಾತ್ರಿ ನಿಧಾನವಾಗಿ ಎದ್ದು ಮನೆಯ ಕಡೆ ಹೊರಟರು. ಮುಲ್ಲಾ ಕಿಸೆಯಿಂದ ಕೀಲಿ ತೆಗೆದು ಬೀಗ ತೆಗೆಯಲು ಹೊರಟ. ಅವನ ಇಡೀ ಮೈ ಓಲಾಡುತ್ತಿದ್ದುದರಿಂದ ಬೀಗದಲ್ಲಿ ಕೀಲಿ ಹಾಕಲು ಅವನಿಂದ ಆಗಲಿಲ್ಲ. ಅದನ್ನು ಕಂಡ ಅಬ್ದುಲ್ಲಾ,
`ಹೇ, ಮುಲ್ಲಾ ಕೀಲಿ ನನಗೆ ಕೊಡು ನಾನು ಬೀಗ ತೆಗೆಯುತ್ತೇನೆಎಂದ.
`ಬೇಡ. ಮನೆ ಅಲುಗಾಡುತ್ತಿದೆ. ನೀನು ಮನೆ ಹಿಡಕೋ, ನಾನೇ ಬೀಗ ತೆರೆಯುತ್ತೇನೆಎಂದ ನಸ್ರುದ್ದೀನ್.
ಬದುಕು ಬದಲಾಯಿಸು
ಮುಲ್ಲಾ ನಸ್ರುದ್ದೀನ್ ರಸ್ತೆಬದಿ ತನ್ನ ತಳ್ಳು ಗಾಡಿಯಲ್ಲಿ ತರಕಾರಿ ಮಾರುತ್ತಿದ್ದ. ಹಲವಾರು ವರ್ಷಗಳ ನಂತರ ಊರಿಗೆ ಬಂದ ಅವನ ಬಾಲ್ಯದ ಗೆಳೆಯ ಅವನನ್ನು ಭೇಟಿಯಾದ.
`ಏನು ಮುಲ್ಲಾ, ನಿನ್ನ ಬಡತನದ ಬದುಕನ್ನೇ ಬದಲಾಯಿಸಿಬಿಡುತ್ತೇನೆ ಎಂದು ಆಗ ನೀನು ಶಪಥ ಮಾಡಿದ್ದೆ? ಏನಾಯಿತು ನಿನ್ನ ಶಪಥ? ಇನ್ನೂ ಅದೇ ವ್ಯಾಪಾರ ಮಾಡುತ್ತಿದ್ದೀಯಲ್ಲಾ?’ ಎಂದು ಗೆಳೆಯ ಕೇಳಿದ.
`ಹೇ, ಬದುಕು ಬದಲಾಯಿಸುವುದಕ್ಕಿಂತ ಮನಸ್ಸು ಬದಲಾಯಿಸುವುದು ಸುಲಭ. ಅದಕ್ಕೆ ಮನಸ್ಸೇ ಬದಲಾಯಿಸಿದೆಹೇಳಿದ ಮುಲ್ಲಾ.

ಸೊಸೆ-ಅಳಿಯ
ಮುಲ್ಲಾ ನಸ್ರುದ್ದೀನ್ ಮತ್ತು ಅವನ ಬಾಲ್ಯದ ಗೆಳೆಯನೊಬ್ಬ ಭೇಟಿಯಾದ. ತಮ್ಮ ಹಿಂದಿನ ದಿನಗಳ ಬಗ್ಗೆ ಮಾತನಾಡಿ,
`ನಿನ್ನ ಮಗನಿಗೆ ಮದುವೆ ಮಾಡಿದೆಯಂತೆ? ಹೇಗಿದ್ದಾರೆ ನಿನ್ನ ಮಗ ಮತ್ತು ಸೊಸೆ?’ ಎಂದು ಕೇಳಿದ ನಸ್ರುದ್ದೀನ್.
`ಅಯ್ಯೋ ಅವನ ಕತೆ ಹೇಳುವುದೇನು? ಅವನೊಬ್ಬ ನತದೃಷ್ಟ. ನನ್ನ ಸೊಸೆ ಶುದ್ಧ ಸೋಮಾರಿ. ಅವಳಿಗೆ ಅಡುಗೆ ಮಾಡಲು ಬರುವುದಿಲ್ಲ, ಮನೆಗೆಲಸ ಮಾಡುವುದಿಲ್ಲ, ಬಟ್ಟೆ ಒಗೆಯುವುದಿಲ್ಲ. ದಿನಾಲೂ ಸೂರ್ಯ ನೆತ್ತಿಗೇರಿದ ಮೇಲೆ ಏಳುತ್ತಾಳೆ. ಎಲ್ಲಾ ನನ್ನ ಮಗನೇ ಮಾಡಬೇಕುಎಂದು ತನ್ನ ಅಳಲು ತೋಡಿಕೊಂಡ ಗೆಳೆಯ.
`ಛೆ, ಛೆ. ಹಾಗಾಗಬಾರದಿತ್ತುಎಂದ ನಸ್ರುದ್ದೀನ್.
`ಅಂದ ಹಾಗೆ ನಸ್ರುದ್ದೀನ್, ನಿನ್ನ ಮಗಳಿಗೂ ಮದುವೆ ಮಾಡಿದೆಯಂತೆ? ಹೇಗಿದ್ದಾನೆ ನಿನ್ನ ಅಳಿಯ?’ ಎಂದು ಕೇಳಿದ ಗೆಳೆಯ.
`ಹಾ, ನನ್ನ ಮಗಳು ಅದೃಷ್ಟವಂತಳು. ನನಗೆ ಬಹಳ ಒಳ್ಳೆಯ ಅಳಿಯ ಸಿಕ್ಕಿದ್ದಾನೆ. ದಿನಾಲೂ ಅವನೇ ಅಡುಗೆ ಮಾಡುತ್ತಾನೆ, ಎಲ್ಲಾ ಮನೆಗೆಲಸ ಮಾಡುತ್ತಾನೆ, ಬಟ್ಟೆ ಒಗೆಯುತ್ತಾನೆ. ಅವಳು ಮಲಗಿರುವಂತೆ ಕಾಫಿ, ತಿಂಡಿ ಹಾಸಿಗೆಗೇ ಸರಬರಾಜು ಮಾಡುತ್ತಾನೆ. ನಂಬಿದರೆ ನಂಬು ಬಿಟ್ಟರೆ ಬಿಡು, ಅವಳು ಮನೆಯಲ್ಲಿ ಎಷ್ಟು ಹೊತ್ತು ಬೇಕಾದರೂ ಮಲಗಿರಬಹುದುಎಂದ ನಸ್ರುದ್ದೀನ್.

ಬೌ ಬೌ
ಮುಲ್ಲಾ ನಸ್ರುದ್ದೀನ್ ಅವನ ಹೆಂಡತಿ ಫಾತಿಮಾ ಸಿಕ್ಕಾಪಟ್ಟೆ ಜಗಳವಾಡಿದರು. ಆಕೆ ಅವನನ್ನು ಏನೋ ಬೈದಳು. ಸಿಟ್ಟಿನಿಂದ ನಸ್ರುದ್ದೀನ್ ಅವಳ ಬಳಿ ಬಂದು,
`ಏನು? ನೀನು ನನ್ನನ್ನು ನಾಯಿ ಎಂದು ಕರೆದೆಯಾ?’ ಕೇಳಿದ.
ಆಕೆ ಏನೂ ಹೇಳಲಿಲ್ಲ.
`ಏಕೆ ಸುಮ್ಮನಿದ್ದೀಯಾ? ಹೇಳು ನೀನು ನನ್ನನ್ನು ನಾಯಿ ಎಂದು ಕರೆದೆಯಾ?’ ಮತ್ತೊಮ್ಮೆ ಕೇಳಿದ.
ಆಕೆ ಬಾಯಿ ಬಿಡಲಿಲ್ಲ. ತನ್ನ ಕೆಲಸ ತಾನು ಮುಂದುವರಿಸಿದಳು.
ಮುಲ್ಲಾ ಇನ್ನೂ ಸಿಟ್ಟಿನಿಂದ `ಬಾಯಿ ಬಿಡುತ್ತೀಯೋ ಇಲ್ಲವೋ, ಹೇಳು ನೀನು ನನ್ನನ್ನು ನಾಯಿ ಎಂದು ಕರೆದೆಯಾ?’ ಎಂದು ಕೇಳಿದ.
`ಇಲ್ಲಾ, ಮಾರಾಯಾ. ನಾನೇನೂ ಹೇಳಲಿಲ್ಲ. ನೀನು ದಯವಿಟ್ಟು ಬೊಗಳುವುದನ್ನು ನಿಲ್ಲಿಸುಎಂದಳು ಫಾತಿಮಾ.

ದೇವರ ಸೈನಿಕ
ಮುಲ್ಲಾ ನಸ್ರುದ್ದೀನ್ ಒಂದು ದಿನ ಮಸೀದಿಯ ಮುಂದೆ ಹೋಗುತ್ತಿದ್ದಾಗ, ಮೌಲ್ವಿ ಅವನನ್ನು ಹತ್ತಿರಕ್ಕೆ ಕರೆದು,
`ಮುಲ್ಲಾ, ನಾನು ನಿನ್ನನ್ನು ದಿನಾಲೂ ಗಮನಿಸುತ್ತಿದ್ದೇನೆ. ನೀನೇಕೆ ಮಸೀದಿಗೆ ಬರುವುದಿಲ್ಲ? ಇಲ್ಲಿ ನೋಡು ಎಷ್ಟೊಂದು ಜನ ದೇವರನ್ನು ಪ್ರಾರ್ಥಿಸಲು ಮಸೀದಿಗೆ ಬರುತ್ತಾರೆ. ಅವರೆಲ್ಲಾ ದೇವರ ಸೈನಿಕರಿದ್ದಂತೆ. ನೀನೇಕೆ ಸೈನ್ಯವನ್ನು ಸೇರಿಕೊಳ್ಳಬಾರದು?’ ಎಂದು ಕೇಳಿದ.
`ನಾನೂ ಸೈನ್ಯಕ್ಕೆ ಸೇರಿಕೊಂಡಿದ್ದೇನೆಹೇಳಿದ ಮುಲ್ಲಾ.
`ಆದರೆ ನಾನು ನಿನ್ನನ್ನು ಒಂದು ದಿನವೂ ಇಲ್ಲಿ ಕಂಡಿಲ್ಲವಲ್ಲ?’ ಕೇಳಿದ ಮೌಲ್ವಿ.
ಹತ್ತಿರಕ್ಕೆ ಬಂದ ನಸ್ರುದ್ದೀನ್ ಮೌಲ್ಯಿಯ ಕಿವಿಯಲ್ಲಿ ಉಸುರಿದ,
`ನಾನು ಸೇರಿರುವುದು ರಹಸ್ಯಪಡೆಗೆ.’

ಹೆಂಡತಿಯ ತಂಗಿ
ಮುಲ್ಲಾ ನಸ್ರುದ್ದೀನ್ ಒಂದು ದಿನ ತನ್ನ ಪತ್ನಿ ಫಾತಿಮಾಳನ್ನು ಕೇಳಿದ,
`ನಾನೇನಾದರೂ ಸತ್ತು ಹೋದರೆ ನೀನು ಮತ್ತೊಂದು ಮದುವೆಯಾಗುವೆಯಾ?’
`ಖಂಡಿತಾ ಇಲ್ಲ. ನಾನು ನನ್ನ ತಂಗಿಯ ಜೊತೆ ವಾಸಿಸುತ್ತೇನೆಎಂದಳು ಫಾತಿಮಾ. ಅವಳು ಹಾಗೇ ಮಾತು ಮುಂದುವರಿಸಿ,
`ಅಕಸ್ಮಾತ್ ನಾನು ಸತ್ತುಹೋದರೆ, ನೀನು ಮದುವೆಯಾಗುತ್ತೀಯೇನು?’ ಎಂದು ನಸ್ರುದ್ದೀನನನ್ನು ಕೇಳಿದಳು.
`ನಾನೂ ಅಷ್ಟೆ, ನಿನ್ನ ತಂಗಿಯ ಜೊತೆ ವಾಸಿಸುತ್ತೇನೆಎಂದ ನಸ್ರುದ್ದೀನ್.

ಮಕ್ಕದ ಮನೆಯ ಮಗು
ಮುಲ್ಲಾ ನಸ್ರುದ್ದೀನ್ ತನ್ನ ಮನೆಯ ಕಾಂಪೌಂಡಿನಲ್ಲಿ ಸಣ್ಣ ಬಾಲಕನೊಡನೆ ಆಟವಾಡುತ್ತಿದ್ದ. ಬಹಳ ವರ್ಷಗಳ ನಂತರ ಅವನನ್ನು ಭೇಟಿಯಾಗಲು ಅವನ ಗೆಳೆಯ ಅಬ್ದುಲ್ಲಾ ಬಂದ.
`ಏನು ನಸ್ರುದ್ದೀನ್? ನಿನ್ನ ಮಗ ಥೇಟ್ ನಿನ್ನಂತೆಯೇ ಇದ್ದಾನೆ!’ ಎಂದ ಅಬ್ದುಲ್ಲಾ.
`ಶ್ಶ್! ಜೋರಾಗಿ ಹೇಳಬೇಡ. ಅವನು ಪಕ್ಕದ ಮನೆಯಾಕೆಯ ಮಗಎಂದ ನಸ್ರುದ್ದೀನ್.

ಸುಳ್ಳು ಎಂದರೆ?
ಮುಲ್ಲಾ ನಸ್ರುದ್ದೀನ್ ಒಂದು ಶಾಲೆಯಲ್ಲಿ ಅಧ್ಯಾಪಕನಾಗಿದ್ದ. ಒಂದು ದಿನ ತರಗತಿಗೆ ಪ್ರವೇಶಿಸಿದಾಗ ಇಬ್ಬರು ಬಾಲಕರು ಜೋರಾಗಿ ವಾದ ಮಾಡುತ್ತಿದ್ದರು.
`ಏನದು? ಏಕೆ ಇಬ್ಬರೂ ವಾದ ಮಾಡುತ್ತಿದ್ದೀರಿ?’ ಕೇಳಿದ ನಸ್ರುದ್ದೀನ್.
`ಸಾರ್, ನಮಗೆ ದಾರಿಯಲ್ಲಿ ನೂರು ರೂಪಾಯಿ ನೋಟು ಸಿಕ್ಕಿತು. ಯಾರು ದೊಡ್ಡ ಸುಳ್ಳು ಹೇಳುವರೋ ಅವರಿಗೆ ಹಣ ಎಂದು ತೀರ್ಮಾನಿಸಿದ್ದೇವೆಎಂದ ಒಬ್ಬ ಬಾಲಕ.
`ನಿಮಗೆ ನಾಚಿಕೆಯಾಗಬೇಕುಹೇಳಿದ ಅಧ್ಯಾಪಕ ನಸ್ರುದ್ದೀನ್, ನಿಮ್ಮ ವಯಸ್ಸಿನಲ್ಲಿ ನನಗೆ ಸುಳ್ಳು ಎಂದರೆ ಏನೆಂದು ತಿಳಿದೇ ಇರಲಿಲ್ಲ.]’
ಇಬ್ಬರು ಬಾಲಕರು ತಕ್ಷಣವೇ ನೂರು ರೂಪಾಯಿಯನ್ನು ತಮ್ಮ ಅಧ್ಯಾಪಕ ನಸ್ರುದ್ದೀನನಿಗೆ ನೀಡಿದರು.
j.balakrishna@gmail.com

No comments: