ಜನವರಿ 2016ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳು
ನಿಮಿಷದ
ಕೆಲಸ
ದಂತ
ವೈದ್ಯ ನಸ್ರುದ್ದೀನನ ಬಳಿ ಒಬ್ಬ ರೋಗಿ ಬಂದಿದ್ದ. ಆತನಿಗೆ ತೀರಾ ಹುಳುಕಾಗಿದ್ದ ಒಂದು ಹಲ್ಲಿತ್ತು.
ಅದನ್ನು ನಸ್ರುದ್ದೀನ್ ಕಿತ್ತು ತೆಗೆದು ಶುಲ್ಕ ಸಾವಿರ ರೂಪಾಯಿಯೆಂದು ಹೇಳಿದ.
`ಸಾವಿರ
ರೂಪಾಯಿ! ಅದೂ ಒಂದು ನಿಮಿಷಕ ಕೆಲಸಕ್ಕೆ!’ ಎಂದು ಗೊಣಗಿದ ರೋಗಿ.
`ಹೇ,
ಹಾಗೇನಿಲ್ಲ. ನಿಮಗೆ ಬೇಕೆಂದಿದ್ದರೆ ಅದೇ ಹಲ್ಲನ್ನು ನಾನು ನಿಧಾನವಾಗಿ ಒಂದು ಗಂಟೆ ಕೀಳುತ್ತಿದ್ದೆ’
ಎಂದ ವೈದ್ಯ ನಸ್ರುದ್ದೀನ್.
ಲೈಂಗಿಕ
ಕ್ರಿಯೆ
ನಸ್ರುದ್ದೀನನನ್ನು
ತೀರಾ ಬಳಲಿಕೆ ಕಾಡುತ್ತಿತ್ತು. ವೈದ್ಯರ ಬಳಿ ಪರೀಕ್ಷೆಗೆಂದು ಹೋದ. ಎಲ್ಲಾ ಪರೀಕ್ಷೆ ಮಾಡಿದ ವೈದ್ಯರಿಗೆ
ನಸ್ರುದ್ದೀನನಲ್ಲಿ ಯಾವ ಐಬೂ ಕಾಣಲಿಲ್ಲ. ಆದರೂ ಇರಲಿ ಎಂದು, `ನಿಮ್ಮ ಲೈಂಗಿಕ ಕ್ರಿಯೆಯೇ ನಿಮ್ಮ ಬಳಲಿಕೆಗೆ
ಕಾರಣವೆನ್ನಿಸುತ್ತದೆ. ನೀವು ಅದನ್ನು ಅರ್ಧದಷ್ಟು ಕಡಿಮೆ ಮಾಡಿ’ ಎಂದು ಸಲಹೆ ನೀಡಿದರು.
`ಯಾವ
ಲೈಂಗಿಕ ಕ್ರಿಯೆ ಕಡಿಮೆ ಮಾಡಲಿ? ಅದರ ಬಗ್ಗೆ ಆಲೋಚಿಸುವುದೋ ಅಥವಾ ಅದರ ಬಗ್ಗೆ ಮಾತನಾಡುವುದೋ?’ ಕೇಳಿದ
ನಸ್ರುದ್ದೀನ್.
ತೀರ್ಮಾನ
ಒಂದು
ನಿರ್ದಿಷ್ಟ ದಿನಾಂಕದಂದು ಇಡೀ ಜಗತ್ತೇ ಪ್ರವಾಹದಲ್ಲಿ ಮುಳುಗಿ ಹೋಗುತ್ತದೆಂದು ಬಹಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಆ ದಿನಾಂಕದ ಒಂದು
ವಾರ ಮೊದಲು ಆ ಊರಿನ ಎಲ್ಲ
ಧರ್ಮಗಳ ಮುಖಂಡರು ಊರಿನ ಜನರನ್ನೆಲ್ಲಾ ಒಂದೆಡೆ ಸೇರಿಸಿದರು. ಹಿಂದೂ ಧಾರ್ಮಿಕ ಮುಖಂಡ ಜನರನ್ನುದ್ದೇಶಿಸಿ ಮಾತನಾಡಿ ಹಿಂದೂ ಧರ್ಮಕ್ಕೆ ಮಾತ್ರ ಜನರನ್ನು ಪ್ರವಾಹದಿಂದ ಉಳಿಸಲು ಸಾಧ್ಯವೆಂದು ತಿಳಿಸಿ ಜನ ತಾವು ಬದುಕುಳಿಯಬೇಕಾದರೆ
ಎಲ್ಲರೂ ಹಿಂದೂ ಧರ್ಮಕ್ಕೆ ಮತಾಂತರ ಹೊಂದಬೇಕೆಂದು ಘೋಷಿಸಿದ. ಅದಾದ ನಂತರ ಮುಸಲ್ಮಾನ ಮುಖಂಡರೂ ಸಹ ಮಾತನಾಡಿ ಇಸ್ಲಾಂ
ಧರ್ಮ ಮಾತ್ರ ಜನರನ್ನು ಪ್ರವಾಹದಿಂದ ಕಾಪಾಡಲು ಸಾಧ್ಯವೆಂದು ತಿಳಿಸಿ ಜನರನ್ನೆಲ್ಲಾ ಇಸ್ಲಾಂಗೆ ಮತಾಂತರ ಹೊಂದಲು ತಿಳಿಸಿದ. ಅದೇ ರೀತಿ ಕ್ರೈಸ್ತ ಧರ್ಮಗುರು ಮಾತನಾಡಿ ಜನರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಲು ಪುಸಲಾಯಿಸಿದ. ಅದನ್ನು ಕೇಳಿಸಿಕೊಂಡ ಜನರು ಪ್ರವಾಹದಲ್ಲಿ ಬದುಕುಳಿಯಲು ಅವರಿಗೆ ಸೂಕ್ತವೆನ್ನಿಸುವ ಧರ್ಮಕ್ಕೆ ಮತಾಂತರ ಹೊಂದಲು ತೀರ್ಮಾನಿಸಿದರು. ಅದನ್ನೆಲ್ಲಾ ಕೇಳಿಸಿಕೊಂಡ ನಸ್ರುದ್ದೀನ್ ಅಲ್ಲಿಂದ ಎದ್ದುಹೋಗಲು ಅಣಿಯಾದ. ಅದನ್ನು ನೋಡಿದ ಧಾರ್ಮಿಕ ಮುಖಂಡರು ನಸ್ರುದ್ದೀನನ ತೀರ್ಮಾನವೇನೆಂದು ಕೇಳಿದರು.
`ಪ್ರವಾಹಕ್ಕೆ
ಇನ್ನೂ ಒಂದು ವಾರವಿರುವುದರಿಂದ ನಾನು ಈಜು ಕಲಿಯಲು ತೀರ್ಮಾನಿಸಿದ್ದೇನೆ’ ಎಂದ
ನಸ್ರುದ್ದೀನ್.
ಹೆಂಡತಿಯ
ಮಾತು
ಪ್ರವಾಹದಿಂದ
ಇಡೀ ಜಗತ್ತೇ ಮುಳುಗಿಹೋಯಿತು. ಲಕ್ಷಾಂತರ ಜನ ಪ್ರಾಣಬಿಟ್ಟರು. ಸ್ವರ್ಗದ
ಬಾಗಿಲಲ್ಲಿ ಒಳಕ್ಕೆ ಪ್ರವೇಶಿಸಲು ನೂಕುನುಗ್ಗಲು ಪ್ರಾರಂಭವಾಗಿ ದೇವರಿಗೆ ಅವರನ್ನು ನಿಯಂತ್ರಿಸುವುದು ಕಷ್ಟವಾಯಿತು. ದೇವರಿಗೆ ಒಂದು ವಿಚಾರ ಹೊಳೆಯಿತು.
`ಮಹಿಳೆಯರು
ಮತ್ತು ಮಕ್ಕಳಿಗೆ ಪ್ರವೇಶಿಸಲು ಪ್ರತ್ಯೇಕ ದ್ವಾರವಿದೆ. ಮಹಿಳೆಯರು ಮತ್ತು ಮಕ್ಕಳು ಅಲ್ಲಿಗೆ ಹೋಗಿ’ ಎಂದರು. ಅರ್ಧದಷ್ಟು ನೂಕುನುಗ್ಗಲು ಕಡಿಮೆಯಾಯಿತು. ಆದರೂ ಗಂಡಸರ ನೂಕುನುಗ್ಗಾಟ ಕಡಿಮೆಯಾಗಲಿಲ್ಲ.
`ಹೆಂಡತಿಗೆ
ಹೆದರುವ ಪುಕ್ಕಲು ಗಂಡಂದಿರೆಲ್ಲಾ ಒಂದು ಸಾಲು ಮಾಡಿ ಹಾಗೂ ಹೆಂಡತಿಗೆ ಹೆದರದ ಮತ್ತು ಆಕೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಗಂಡಸರೆಲ್ಲಾ ಮತ್ತೊಂದು ಸಾಲು ಮಾಡಿ’ ಎಂದರು ದೇವರು.
ಗಂಡಸರು
ಎರಡು ಸಾಲು ಮಾಡಿದರು. ನಸ್ರುದ್ದೀನನನ್ನು ಹೊರತುಪಡಿಸಿ ಎಲ್ಲ ಗಂಡಸರೂ ಹೆಂಡತಿಗೆ ಹೆದರುವ ಪುಕ್ಕಲು ಗಂಡಸರ ಸಾಲಿನಲ್ಲೇ ನಿಂತರು. ಹೆಂಡತಿಗೆ ಹೆದರದ ಗಂಡಂದಿರ ಸಾಲಿನಲ್ಲಿ ನಸ್ರುದ್ದೀನ್ ಒಬ್ಬನೇ ನಿಂತದ್ದು ನೋಡಿ ದೇವರಿಗೆ ಸಂತೋಷವಾಯಿತು. ನಸ್ರುದ್ದಿನನ ಬಳಿ ಹೋಗಿ,
`ಶಾಭಾಷ್
ನಸ್ರುದ್ದೀನ್! ನೀನೊಬ್ಬನೇ ನಿಜವಾದ ಗಂಡಸು. ನೀನು ಹೆಂಡತಿಯನ್ನು ಹೇಗೆ ಹಿಡಿತದಲ್ಲಿಟ್ಟುಕೊಂಡಿದ್ದೆ ಎಂಬುದನ್ನು ಈ ಪುಕ್ಕಲು ಗಂಡಸರಿಗೆ
ವಿವರಿಸಿ ಹೇಳು’ ಎಂದರು.
`ನನಗೇನು
ಗೊತ್ತು? ನನ್ನ ಹೆಂಡತಿ ನನಗೆ ಇದೇ ಸಾಲಿನಲ್ಲಿ ನಿಲ್ಲಲು ಆದೇಶ ಮಾಡಿ ಹೋದಳು’ ಎಂದ ನಸ್ರುದ್ದೀನ್.
ಲೆಕ್ಕಾಚಾರ
ನಸ್ರುದ್ದೀನ್
ರೊಟ್ಟಿ ಮತ್ತು ಬೆಣ್ಣೆ ಕೊಳ್ಳಲು ಮಾರುಕಟ್ಟೆಗೆ ಹೋದ. ಅಂಗಡಿಯವ ಹದಿನಾಲ್ಕು ರೂಪಾಯಿ ಎಂದ.
`ಅದ್ಹೇಗೆ?
ನಾನು ಹನ್ನೊಂದು ರೂಪಾಯಿ ಎಂದುಕೊಂಡಿದ್ದೆ’ ಎಂದ
ನಸ್ರುದ್ದೀನ್.
`ರೊಟ್ಟಿಗೆ
ಏಳು ರೂಪಾಯಿ ಹಾಗೂ ಬೆಣ್ಣೆಗೆ ಏಳು ರೂಪಾಯಿ, ಒಟ್ಟು ಹದಿನಾಲ್ಕಾಯಿತು’ ಎಂದ
ಅಂಗಡಿಯವ.
`ನನ್ನ
ಪ್ರಕಾರ ಏಳಕ್ಕೆ ಏಳು ಕೂಡಿದರೆ ಹನ್ನೊಂದಾಗುತ್ತದೆ’ ಎಂದ
ನಸ್ರುದ್ದೀನ್.
`ಸಾಧ್ಯವೇ
ಇಲ್ಲ. ಅದು ಹೇಗೆ ವಿವರಿಸಿ ಹೇಳು’ ಎಂದ ಅಂಗಡಿಯವ, ಏಕೆಂದರೆ ನಸ್ರುದ್ದೀನ್ ಅಸಾಮಾನ್ಯ ಬುದ್ಧಿವಂತನೆಂಬುದು ಅವನಿಗೆ ತಿಳಿದಿತ್ತು.
`ನೋಡು,
ನನಗೆ ನನ್ನ ಮೊದಲ ಪತ್ನಿಯಿಂದ ನಾಲ್ಕು ಮಕ್ಕಳು. ಅವಳು ತೀರಿಕೊಂಡ ಮೇಲೆ ಮತ್ತೊಬ್ಬಳನ್ನು ಮದುವೆಯಾದೆ. ನನ್ನ ಎರಡನೇ ಹೆಂಡತಿಗೆ ಆಕೆಯ ಮೊದಲನೇ ಗಂಡನಿಂದ ನಾಲ್ಕು ಮಕ್ಕಳಿದ್ದರು. ನಾವಿಬ್ಬರೂ ಮದುವೆಯಾದ ಮೇಲೆ ನಮಗೆ ಮೂವರು ಮಕ್ಕಳು ಹುಟ್ಟಿದರು. ಅಂದರೆ ನಮಗೆ ತಲಾ ಏಳು ಮಕ್ಕಳು ಆದರೆ ಒಟ್ಟು ನಮಗಿಬ್ಬರಿಗೂ ಹನ್ನೊಂದು ಮಕ್ಕಳು. ಏಳು ಮತ್ತು ಏಳು ಹನ್ನೊಂದಾಗಲಿಲ್ಲವೆ?’ ನಸ್ರುದ್ದೀನ್ ಕೇಳಿದ.
ಕಳ್ಳತನ
ನಸ್ರುದ್ದೀನ್
ಯುವಕನಾಗಿದ್ದಾಗಲೇ ಮಹಾನ್ ವಿದ್ವಾಂಸನಾಗಿದ್ದ. ತನ್ನ ವಿದ್ವತ್ತಿನಿಂದಾಗಿ ಆ ಪ್ರಾಂತ್ಯದಲ್ಲೆಲ್ಲಾ ಪ್ರಖ್ಯಾತನಾಗಿದ್ದ. ಆ ಊರಿನ
ಪ್ರಖ್ಯಾತ ಧರ್ಮ ಗುರು ಒಂದು ದಿನ ತನ್ನ ಆಶ್ರಮಕ್ಕೆ ನಸ್ರುದ್ದೀನನ ಜೊತೆ ಒಂದಷ್ಟು ವಿಷಯ ಚರ್ಚೆ ಮಾಡಬಹುದೆಂದು ಭೋಜನಕ್ಕೆ ಆಹ್ವಾನಿಸಿದ. ಅದನ್ನು ಮನ್ನಿಸಿ ನಸ್ರುದ್ದೀನ್ ಅವರಲ್ಲಿಗೆ ಹೋದ. ಇಬ್ಬರೂ ಒಂದಷ್ಟು ವಿಚಾರ ವಿಮರ್ಶೆ ಮಾಡಿ ಊಟಕ್ಕೆ ಕೂತರು. ಧರ್ಮ ಗುರುವಿಗೆ ಅಡಿಗೆ ಮಾಡಲು ಒಬ್ಬಳು ಸುಂದರ ಹಾಗೂ ಆಕರ್ಷಕ ಮಹಿಳೆ ಇದ್ದಳು. ಆಕೆ ಅವರಿಬ್ಬರಿಗೂ ಊಟ ಬಡಿಸಿದಳು. ಧರ್ಮಗುರುಗಳು
ತಾವೇ ಪ್ರಚುರಪಡಿಸಿದಂತೆ ಬ್ರಹ್ಮಚಾರಿಗಳು. ಆದರೆ ಅವರಿಬ್ಬರನ್ನೂ ಗಮನಿಸಿದ ನಸ್ರುದ್ದೀನನಿಗೆ ಏನೋ ಸಂಶಯ ಬಂತು. ಅದನ್ನು ಗಮನಿಸಿದ ಧರ್ಮಗುರುಗಳು,
`ನಿನ್ನ
ಮನಸ್ಸಿನಲ್ಲಿ ಏನು ಆಲೋಚಿಸುತ್ತಿರುವೆಯೆಂಬುದು ನನಗೆ ಗೊತ್ತು. ಆದರೆ ನೀನು ಊಹಿಸಿದಂತೆ ನನ್ನ ಮತ್ತು ಆಕೆಯ ನಡುವೆ ವೃತ್ತಿ ಸಂಬಂಧ ಹೊರತುಪಡಿಸಿ ಮತ್ತಾವುದೇ ಸಂಬಂಧವಿಲ್ಲ’ ಎಂದರು.
ನಸ್ರುದ್ದೀನ್
ಹಿಂದಿರುಗಿದ ನಂತರ ಒಂದು ದಿನ ಅಡುಗೆಯವಳು ಧರ್ಮಗುರುಗಳ ಬಳಿ, `ನಿಮ್ಮ ಬಳಿ ಹೇಳಲು ನನಗೆ ಸಂಕೋಚವಾಗುತ್ತಿದೆ. ಆದರೆ ನಿಮ್ಮ ಗೆಳೆಯ ನಸ್ರುದ್ದೀನ್ ಈ ಆಶ್ರಮಕ್ಕೆ ಬಂದು
ಹೋದ ದಿನದಿಂದ ಬೆಳ್ಳಿಯ ಸೌಟು ಕಾಣುತ್ತಿಲ್ಲ. ನಸ್ರುದ್ದೀನ್ ಅದನ್ನು ಕದ್ದಿರಬಹುದೆಂದು ನಿಮಗನ್ನಿಸುತ್ತದೆಯೆ?’ ಎಂದು ಕೇಳಿದಳು.
`ಆತ
ಕದ್ದಿರಲಾರ ಎಂದು ನನಗನ್ನಿಸುತ್ತಿದೆ. ಆದರೂ ಆತನನ್ನು ಕೇಳುತ್ತೇನೆ’ ಎಂದ
ಧರ್ಮಗುರು ನಸ್ರುದ್ದೀನನಿಗೆ ಒಂದು ಪತ್ರಬರೆದರು: `ಪ್ರಿಯ ನಸ್ರುದ್ದೀನ್, ನೀನು ನನ್ನ ಮನೆಯಿಂದ ಬೆಳ್ಳಿಯ ಸೌಟನ್ನು ಕದ್ದಿರುವೆಯೆಂದು ನಾನು ಹೇಳುತ್ತಿಲ್ಲ ಹಾಗೂ ನೀನು ಕದ್ದಿಲ್ಲವೆಂದೂ ಸಹ ನಾನು ಹೇಳುತ್ತಿಲ್ಲ.
ಆದರೆ ವಾಸ್ತವಾಂಶವೇನೆಂದರೆ, ನೀನು ನನ್ನ ಮನೆಗೆ ಊಟಕ್ಕೆ ಬಂದು ಹೋದ ದಿನದಿಂದ ನನ್ನ ಮನೆಯ ಬೆಳ್ಳಿಯ ಸೌಟು ಕಣ್ಮರೆಯಾಗಿದೆ’.
ಕೆಲವು ದಿನಗಳ ನಂತರ ಧರ್ಮಗುರುವಿಗೆ ನಸ್ರುದ್ದೀನನಿಂದ ಪತ್ರವೊಂದು ಬಂದಿತು. ಅದರಲ್ಲಿ ನಸ್ರುದ್ದೀನ್ ಹೀಗೆ ಉತ್ತರ ಬರೆದಿದ್ದ: ಮಾನ್ಯ ಧರ್ಮಗುರುಗಳೇ, ನೀವು ನಿಮ್ಮ ಅಡುಗೆಯವಳೊಂದಿಗೆ ಮಲಗುತ್ತಿರುವಿರಿ ಎಂದು ನಾನು ಹೇಳುತ್ತಿಲ್ಲ ಹಾಗೂ ನೀವು ಮಲಗುತ್ತಿಲ್ಲ ಎಂದೂ ನಾನು ಹೇಳುತ್ತಿಲ್ಲ. ಆದರೆ ವಾಸ್ತವಾಂಶವೇನೆಂದರೆ, ನೀವು ನಿಮ್ಮ ಹಾಸಿಗೆಯ ಮೇಲೆ ಮಲಗಿದ್ದಿದ್ದರೆ ಇಷ್ಟೊತ್ತಿಗಾಗಲೇ ಅದರ ಮೇಲಿನ ಹೊದಿಕೆಯ ಕೆಳಗೆ ನಾನು ಇರಿಸಿದ್ದ ಬೆಳ್ಳಿಯ ಸೌಟು ಇಷ್ಟೊತ್ತಿಗೆ ನಿಮಗೆ ಸಿಕ್ಕಿರುತ್ತಿತ್ತು...’
ಒತ್ತುವರಿ
ಆ
ಊರಿನ ಸ್ಮಶಾನವನ್ನು ಇಬ್ಬರು ಒತ್ತುವರಿ ಮಾಡಿಕೊಂಡಿದ್ದರು. ಕೊನೆಗೆ ಅವರಿಬ್ಬರ ನಡುವೆಯೇ ಆ ಜಾಗ ತಮಗೆ
ಸೇರಿದ್ದು ಎಂದು ಕಿತ್ತಾಟ ಶುರುವಾಯಿತು. ಅವರ ಹೊಡೆದಾಟ ನೋಡಿದ ಸಾರ್ವಜನಿಕರು ಅವರನ್ನು ನ್ಯಾಯಾಧೀಶ ನಸ್ರುದ್ದೀನನ ಮುಂದೆ ತಕರಾರು ಇತ್ಯರ್ಥಕ್ಕಾಗಿ ಕರೆದೊಯ್ದರು. ಇಬ್ಬರ ಅಹವಾಲನ್ನೂ ಆಲಿಸಿದ ನಸ್ರುದ್ದೀನ್,
ನಿಮ್ಮ
ತಕರಾರಿನ ಜಾಗ ಸ್ಮಶಾನವಲ್ಲವೇ? ನಿಮ್ಮಿಬ್ಬರಲ್ಲಿ ಯಾರು ಮೊದಲು ಸಾಯುತ್ತಾರೋ, ಅವರಿಗೆ ಆ ಸ್ಥಳ ಸೇರುತ್ತದೆ.
ಆ ಸ್ಥಳ ಯಾರಿಗೆ ಮೊದಲು ಸೇರಬೇಕು ಎನ್ನುವುದನ್ನು ನೀವೇ ತೀರ್ಮಾನ ಮಾಡಿಕೊಂಡು ಬನ್ನಿ’ ಎಂದು ತೀರ್ಪು ನೀಡಿದ. ಅಂದೇ ಅವರಿಬ್ಬರೂ ಆ ಸ್ಥಳಕ್ಕಾಗಿ ಹೊಡೆದಾಡುವುದನ್ನು
ನಿಲ್ಲಿಸಿದರು.
ಗಡಿಯಾರ
ಮತ್ತು ಅಳಿಯ?
ಮುದುಕ
ನಸ್ರುದ್ದೀನ್ ಟ್ರೈನಿನಲ್ಲಿ ಪ್ರಯಾಣಿಸುತ್ತಿದ್ದ. ರಾತ್ರಿಯ ಸಮಯ, ಟ್ರೈನಿನಲ್ಲಿ ಹೆಚ್ಚು ಜನರಿರಲಿಲ್ಲ. ಒಬ್ಬ ಯುವಕ ನಸ್ರುದ್ದೀನನನ್ನು,
`ಕ್ಷಮಿಸಿ,
ಈಗ ಸಮಯವೆಷ್ಟು?’ ಎಂದು ಕೇಳಿದ. ನಸ್ರುದ್ದೀನ್ ಕೇಳಿಸಿಕೊಳ್ಳದವನಂತೆ ಸುಮ್ಮನಿದ್ದ. ಸ್ವಲ್ಪ ಹೊತ್ತಿನ ನಂತರ ಆ ಯುವಕ ಪುನಃ
ನಸ್ರುದ್ದೀನನನ್ನು ಸಮಯ ಎಷ್ಟೆಂದು ಕೇಳಿದ. ನಸ್ರುದ್ದೀನ್ ಆಗಲೂ ಉತ್ತರಿಸಲಿಲ್ಲ. ಆ ಯುವಕ ಬಿಡದೆ,
`ನೋಡಿ,
ನಾನು ಬಹಳ ಹೊತ್ತಿನಿಂದ ನಿಮ್ಮನ್ನು ಸಮಯ ಕೇಳುತ್ತಿದ್ದೇನೆ, ನೀವು ಮಾತನಾಡುತ್ತಲೇ ಇಲ್ಲ. ಏಕೆ’ ಎಂದು ಒತ್ತಾಯಪೂರ್ವಕವಾಗಿ ಕೇಳಿದ.
ಅದಕ್ಕೆ
ನಸ್ರುದ್ದೀನ್, `ನೋಡಪ್ಪಾ. ಈ ಟ್ರೈನು ತಲುಪುವ
ಮುಂದಿನ ನಿಲ್ದಾಣವೇ ಈ ಹಾದಿಯಲ್ಲಿ ಕೊನೆಯದು.
ನೀನ್ಯಾರೆಂಬುದು ನನಗೆ ತಿಳಿದಿಲ್ಲ, ಹಾಗಾಗಿ ನೀನು ಅಪರಿಚಿತ. ನಿನ್ನನ್ನು ಮಾತನಾಡಿಸಿದರೆ ನಾನು ನಿನ್ನನ್ನು ನನ್ನ ಮನೆಗೆ ಆಹ್ವಾನಿಸಬೇಕಾಗುತ್ತದೆ. ನೀನು ಸ್ಫುರದ್ರೂಪಿ ಹುಡುಗ. ಮನೆಯಲ್ಲಿ ನನಗೆ ಒಬ್ಬ ಸುಂದರ ಮಗಳಿದ್ದಾಳೆ. ನೀನು ನನ್ನ ಮನೆಗೆ ಬಂದರೆ ನನ್ನ ಮಗಳನ್ನು ಕಂಡು ನೀನು ಆಕರ್ಷಿತನಾಗಬಹುದು, ನಿಮ್ಮಿಬ್ಬರ ನಡುವೆ ಪ್ರೇಮಾಂಕುರವಾಗಬಹುದು ಹಾಗೂ ನೀವಿಬ್ಬರೂ ಮದುವೆಯಾಗಲು ತೀರ್ಮಾನಿಸಬಹುದು. ಆದರೆ ಒಂದು ಗಡಿಯಾರವನ್ನೂ ಹೊಂದಿರದ ಹುಡುಗ ನನಗೆ ಅಳಿಯನಾಗುವುದು ಇಷ್ಟವಿಲ್ಲ’
ಎಂದ.
ಅಂಕಾರಾದ
ಹಸು
ಟರ್ಕಿಯ
ಒಂದು ಸಣ್ಣ ಗ್ರಾಮ. ಆ ಇಡೀ ಗ್ರಾಮದಲ್ಲಿ
ಒಂದೇ ಒಂದು ಹಸುವಿತ್ತು. ಆ ಹಸು ಸಾಕಷ್ಟು
ಹಾಲು ಕೊಡುತ್ತಿದ್ದು ಅದೇ ಆ ಊರಿನ ಜನಕ್ಕೆ
ಸಾಕಾಗುತ್ತಿತ್ತು. ಒಂದು ದಿನ ಆ ಹಸು ಹಾಲು
ಕೊಡುವುದು ನಿಲ್ಲಿಸಿತು. ಊರಿನ ಜನಕ್ಕೆ ಹಾಲಿಲ್ಲದೆ ಬಹಳಷ್ಟು ತೊಂದರೆ ಎದುರಿಸಬೇಕಾಯಿತು. ಊರಿನ ಜನರೆಲ್ಲಾ ಸೇರಿ ಮತ್ತೊಂದು ಹಸು ಕೊಂಡು ತರಲು ನಿರ್ಧರಿಸಿದರು. ಎಲ್ಲರೂ ಹಣ ಸಂಗ್ರಹಿಸಿ ಅಂಕಾರಾ
ನಗರಕ್ಕೆ ಹೋಗಿ ಒಂದು ಹಸುವನ್ನು ಕೊಂಡುತಂದರು. ಈ ಹೊಸ ಹಸು
ಹಳೆಯ ಹಸುವಿಗಿಂತ ಹೆಚ್ಚಿನ ಹಾಲು ಕೊಡುತ್ತಿದ್ದುದರಿಂದ ಊರಿನ ಜನಕ್ಕೆ ಆ ಹಸು ತುಂಬಾ
ಇಷ್ಟವಾಯಿತು ಹಾಗೂ ಎಲ್ಲರೂ ಕೂಡಿ ಒಂದು ಹೊಸ ಆಲೋಚನೆ ಮಾಡಿದರು. ಒಂದು ಹೋರಿಯನ್ನು ತಂದು ಹಸುವಿಗೆ ಕೂಡಿಸಿ ಹುಟ್ಟುವ ಕರುಗಳನ್ನು ತಾವೇ ಸಾಕಿ ಬೆಳೆಸಿ ಮುಂದಿನ ತಲಮಾರಿಗೂ ಸಾಕಾಗುವಷ್ಟು ಗೋಸಂಪತ್ತು ಮಾಡಿಕೊಳ್ಳಬಹುದೆಂದೂ ಹಾಗೂ ತಮ್ಮ ಮಕ್ಕಳು, ಮರಿಮಕ್ಕಳು ಹಾಲಿಗಾಗಿ ಚಿಂತಿಸುವ ಅವಶ್ಯಕತೆಯೇ ಇರುವುದಿಲ್ಲವೆಂದು ಯೋಜನೆಯೊಂದನ್ನು ರೂಪಿಸಿದರು.
ಅದರಂತೆ ಒಂದು ದಷ್ಟುಪುಷ್ಟ ಹೋರಿಯೊಂದನ್ನು ತಂದು ಹಸುವಿಗೆ ಕೂಡಿಸುವ ಪ್ರಯತ್ನ ನಡೆಸಿದರು. ಹೋರಿ ಮೇಲೇರಲು ಪ್ರಯತ್ನಿಸಿದರೆ ಹಸು ಎಡಕ್ಕೆ ತಿರುಗುತ್ತಿತ್ತು. ಹೋರಿ ಎಡದಿಂದ ಏರಲು ಪ್ರಯತ್ನಿಸಿದರೆ ಬಲಕ್ಕೆ ತಿರುಗುತ್ತಿತ್ತು. ಎಷ್ಟು ಪ್ರಯತ್ನಿಸಿದರೂ ಹೋರಿಗೆ ಯಶಸ್ಸು ಸಿಗಲಿಲ್ಲ. ಕೊನೆಗೆ ಊರಿನ ಜನರೆಲ್ಲಾ ಪಕ್ಕದೂರಿನ ವಿದ್ವಾಂಸ ನ್ಯಾಯಾಧೀಶ ನಸ್ರುದ್ದೀನನ ಸಲಹೆ ಕೇಳಲು ನಿರ್ಧರಿಸಿ ಆತನಲ್ಲಿಗೆ ಹೋಗಿ ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಕೇಳಿದರು. ಅದನ್ನು ಆಲಿಸಿದ ನಸ್ರುದ್ದೀನ್, `ನೀವು ಹಸುವನ್ನು ಅಂಕಾರಾದಿಂದ ಏಕೆ ಕೊಂಡು ತಂದಿರಿ?’ ಎಂದು ಕೇಳಿದರು. ಜನರಿಗೆ ಅಚ್ಚರಿಯಾಯಿತು.
`ನೀವು
ವಿದ್ವಾಂಸರಷ್ಟೇ ಅಲ್ಲ ಕಾಲಜ್ಞಾನಿಗಳೂ ಹೌದು. ನಾವು ಹಸುವನ್ನು ಎಲ್ಲಿಂದ ಕೊಂಡುತಂದೆವೆಂದು ನಿಮಗೆ ಹೇಳಲೇ ಇಲ್ಲ. ಆದರೆ ಅ ಹಸು ನಾವು
ಅಂಕಾರಾದಿಂದ ಕೊಂಡುತಂದದ್ದೆಂದು ನಿಮಗೆ ಹೇಗೆ ತಿಳಿಯಿತು?’ ಎಂದು ಜನ ಅಚ್ಚರಿಯಿಂದ ಕೇಳಿದರು.
ಅದಕ್ಕೆ
ನ್ಯಾಯಾಧೀಶ ನಸ್ರುದ್ದೀನ್, `ನನ್ನ ಹೆಂಡತಿಯೂ ಅಂಕಾರಾದವಳೆ!’ ಎಂದು ಹೇಳಿದರು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ