ಗುರುವಾರ, ಜುಲೈ 13, 2017

ಬಾಬರಿ ಮಸೀದಿಯ ದುರಂತ ಮತ್ತು ವ್ಯಂಗ್ಯಚಿತ್ರ




            ಒಂದು ಛಾಯಾಚಿತ್ರದಂತೆ ವ್ಯಂಗ್ಯಚಿತ್ರವೂ ಸಹ ಓದುಗನಿಗೆ/ವೀಕ್ಷಕನಿಗೆ ತಕ್ಷಣವೇ ತನ್ನಲ್ಲಿನ ಮಾಹಿತಿಯನ್ನು ಒದಗಿಸುತ್ತದೆ, ವ್ಯಂಗ್ಯಚಿತ್ರವು ಒಂದು ದೃಶ್ಯ ಸಂಪನ್ಮೂಲವಾಗಿರುವುದಷ್ಟೇ ಅಲ್ಲ ಅದು ಮಾಹಿತಿ ಭಂಡಾರವೂ ಹಾಗೂ ಒಂದು ಸಾಂಸ್ಕತಿಕ ಕಲಾಕೃತಿಯೂ ಆಗಿರುತ್ತದೆ. ಪ್ರತಿಯೊಂದು ರಾಜಕೀಯ ವ್ಯಂಗ್ಯಚಿತ್ರಕ್ಕೂ ಒಂದು ಚಾರಿತ್ರಿಕ ಹಿನ್ನೆಲೆಯಿದ್ದು ಅದರ ಗ್ರಹಿಕೆ ಮತ್ತು ಸ್ವೀಕೃತಿಯನ್ನು ಅದರ ರಚನೆಯ ಹಿನ್ನೆಲೆಯಲ್ಲಿ ಮಾಡಬೇಕಾಗುತ್ತದೆ. ವ್ಯಂಗ್ಯಚಿತ್ರಗಳನ್ನು ಚಾರಿತ್ರಿಕ ದಾಖಲೆಗಳಾಗಿ ಕಳೆದ ಮುನ್ನೂರು ವರ್ಷಗಳಿಂದ ಪಾಶ್ಚಿಮಾತ್ಯ ದೇಶಗಳಲ್ಲಿ ಹಾಗೂ 20ನೇ ಶತಮಾನದ ಅಂತ್ಯದಿಂದ ಭಾರತದಲ್ಲಿ ಬಳಸಲಾಗುತ್ತಿದೆ. ಚಾರಿತ್ರಿಕ ಘಟನೆಗಳನ್ನು ಅತ್ಯಂತ ನಿಷ್ಠುರವಾಗಿ ಚಿತ್ರಿಸಬಲ್ಲವರು ವ್ಯಂಗ್ಯಚಿತ್ರಕಾರರು ಮಾತ್ರ. ಈ ಕೆಲಸವನ್ನು ಇಂದಿಗೂ ರಾಜಕೀಯ ವ್ಯಂಗ್ಯಚಿತ್ರಕಾರರು ಪ್ರತಿ ದಿನವೂ ಮಾಡುತ್ತಿದ್ದಾರೆ. ದೇಶದ ಪ್ರತಿಯೊಂದು ಚಾರಿತ್ರಿಕ, ಸಾಮಾಜಿಕ, ರಾಜಕೀಯ ಹಾಗೂ ಬದುಕಿನ ಪ್ರತಿಯೊಂದು ಕ್ಷಣವನ್ನೂ ತಮ್ಮದೇ ದೃಷ್ಟಿಕೋನದಿಂದ ದಾಖಲಿಸುತ್ತಿದ್ದಾರೆ. ವ್ಯಂಗ್ಯಚಿತ್ರಕಾರರು ಮನರಂಜನೆ ನೀಡುವುದರ ಜೊತೆಗೆ ಚಾರಿತ್ರಿಕ ದಾಖಲೆಕಾರರಷ್ಟೇ ಅಲ್ಲ ಪ್ರತಿಭಟನೆಯ ರೂವಾರಿಗಳೂ ಆಗಿರುತ್ತಾರೆ. ಕೆಲಗುಂಪುಗಳು ಹಾಗೂ ರಾಜಕೀಯ ಪಕ್ಷಗಳು ಸಮಾಜದ ಸ್ವಾಸ್ಥ್ಯ ಕೆಡಿಸುವ ಹಾದಿಯಲ್ಲಿ ನಡೆವಾಗ ವ್ಯಂಗ್ಯಚಿತ್ರಕಾರರು ಅಂಥವರ ಕೃತ್ಯಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಮಾಜದ ಎದುರಿಗಿಟ್ಟು ಜನರ ಪ್ರಜ್ಞೆಯನ್ನು ಕಾಯ್ದುಕೊಳ್ಳುವ ಕೆಲಸ ಮಾಡುತ್ತಿರುತ್ತಾರೆ. ರಾಜಕೀಯ ನಾಯಕರ ದುರ್ಬಲತೆಯನ್ನು, ಅವಕಾಶವಾದಿ ಕುಟಿಲತೆಗಳನ್ನು ಸಾರ್ವಜನಿಕವಾಗಿ ತೆರೆದಿಡುತ್ತಾರೆ. ಅದೇ ಕಾರಣದಿಂದಾಗಿಯೇ ವ್ಯಂಗ್ಯಚಿತ್ರಕಾರರು ಅಂತಹ ರಾಜಕೀಯ ನಾಯಕರ ಮತ್ತು ಸರ್ಕಾರದ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತಾರೆ. 1975-77ರ ಭಾರತದ ತುರ್ತುಪರಿಸ್ಥಿತಿಯ ಸಮಯದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಇತರ ಸುದ್ದಿ ಪ್ರಕಟಣೆಗಳನ್ನು ಸೆನ್ಸಾರ್ ನಿಬಂಧನೆಗಳೊಳಪಡಿಸಿದಂತೆ ವ್ಯಂಗ್ಯಚಿತ್ರಗಳ ಮೇಲೂ ಸೆನ್ಸಾರ್‍ಶಿಪ್ ಹೇರಿದರು. ಆ ಸಮಯದಲ್ಲಿ ತಮ್ಮ ತಿರಸ್ಕøತ ವ್ಯಂಗ್ಯಚಿತ್ರಗಳ ಸಂಕಲನವೊಂದನ್ನು ‘ದ ಗೇಮ್ಸ್ ಆಫ್ ಎಮರ್ಜೆನ್ಸಿ’ ಹೆಸರಿನಲ್ಲಿ ವ್ಯಂಗ್ಯಚಿತ್ರಕಾರ ಅಬು ಅಬ್ರಹಾಂ ಪ್ರಕಟಿಸಿದರು. ಈ ನಿರ್ಬಂಧಗಳಿಗೆ ರೋಸಿಯೇ ಶಂಕರ್ ಪಿಳ್ಳೈ ತಮ್ಮ `ಶಂಕರ್ಸ್ ವೀಕ್ಲಿ’ ಪ್ರಕಟಣೆಯನ್ನು ನಿಲ್ಲಿಸಿದರು. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ವ್ಯಂಗ್ಯಚಿತ್ರ ಬರೆದಿದ್ದಕ್ಕಾಗಿ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಿದ್ದರು. ಪಾರ್ಲಿಮೆಂಟ್ ಅವಹೇಳನ ಮಾಡಿದ್ದಕ್ಕಾಗಿ ಮತ್ತೊಬ್ಬ ವ್ಯಂಗ್ಯಚಿತ್ರಕಾರ ಬಂಧನಕ್ಕೊಳಗಾಗಿದ್ದ. ಇಂತಹ ಘಟನೆಗಳು ಇಂದಿನ ಭಾರತದಲ್ಲಿ ಸಾಮಾನ್ಯವಾಗಿವೆ.
ದೇಶ ವಿಭಜನೆಯ ನಂತರದ ದುರಂತ
1947ರಲ್ಲಿ ನಡೆದ ಭಾರತ ಉಪಖಂಡದ ಧರ್ಮಾಧಾರಿತ ವಿಭಜನೆ ಹಾಗೂ ಅದರ ಪರಿಣಾಮವಾಗಿ ಉಂಟಾದ ಅಪಾರ ಸಾವು ನೋವಿನ ಗಾಯ ಬಹುಶಃ ಎಂದಿಗೂ ಮಾಸುವುದಿಲ್ಲ. ಆ ಹಸಿ ಗಾಯದ ಪಕ್ಕಕ್ಕೇ ಮತ್ತೊಂದು ಅಂಥದೇ ಗಾಯ ಉಂಟಾದದ್ದು 1992ರ ಬಾಬರಿ ಮಸೀದಿ ಕೆಡವಿದ ದುರ್ಘಟನೆ. ಆ ಘಟನೆ ಭಾರತೀಯ ರಾಜಕೀಯದ ದಿಕ್ಕನ್ನೇ ಬದಲಿಸಿತು. ಪುರಾಣ ಮತ್ತು ಚರಿತ್ರೆಯನ್ನು ಏಕೀಕರಿಸಲು ಪ್ರಯತ್ನಿಸುತ್ತಿರುವ ರಾಜಕೀಯ ಪಕ್ಷಗಳು ಹಾಗೂ ಹಲವಾರು ಧರ್ಮಾಧಾರಿತ ಸಂಘಟನೆಗಳು ಇಂದು ಪರಸ್ಪರ ತಮ್ಮನ್ನು ತಾವು ಪೋಷಿಸಿಕೊಂಡು ಸದೃಢವಾಗಿ ನೆಲೆಗೊಳ್ಳುತ್ತಿವೆ. ಅವುಗಳಿಗೆ ಇಂಬಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳೂ ನಡೆಯುತ್ತಿವೆ.
ವಿವಾದವಿರುವುದು ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ 2.77 ಎಕರೆ ಜಾಗದ್ದು. ಬಾಬರ್ ಭಾರತ ಉಪಖಂಡದ ಮೇಲೆ ದಾಳಿ ನಡೆಸಿದಾಗ ಅವನ ವಿಜಯದ ಸಂಕೇತವಾಗಿ ಆತನ ದಂಡನಾಯಕ ಮೀರ್ ಬಾಖಿ 1528ರಲ್ಲಿ ಮಸೀದಿಯನ್ನು ಕಟ್ಟಿಸಿದ. ಅದು ಬಾಬರಿ ಮಸೀದಿಯೆಂದು ಕರೆಯಲ್ಪಟ್ಟು ಅಂದಿನಿಂದ ಮುಸಲ್ಮಾನರು ಅಲ್ಲಿ ಪ್ರಾರ್ಥನೆ ನಡೆಸಿಕೊಂಡು ಬಂದಿದ್ದರು. ಬಾಬರ್‍ನ ವಿಜಯದ ಸಂಕೇತವಾಗಿ ಬಾಬರಿ ಮಸೀದಿಯನ್ನು ಕಟ್ಟಿಸಲಾಗಿದೆ ಎಂದು ಮುರಳಿಮನೋಹರ್ ಜೋಷಿ ಹೇಳಿದಾಗ 2001ರ `ಮಿಲಿ ಗೆಜೆಟ್'ನಲ್ಲಿ ಪ್ರಕಟವಾದ ಇರ್ಫನ್‍ರವರ ವ್ಯಂಗ್ಯಚಿತ್ರದಲ್ಲಿ ಅದನ್ನು ಕೆಡವಲು ಪ್ರಚೋದನೆ ನೀಡಿರುವ ಅಪಾದನೆ ಹೊತ್ತಿರುವ ರಾಮಕೃಷ್ಣ ಆದ್ವಾನಿ ಮತ್ತು ಮುರಳಿ ಮನೋಹರ್ ಜೋಷಿಯವರು ಅದನ್ನು ಕೆಡವಿರುವುದು `ನಮ್ಮ ವಿಜಯದ ಸಂಕೇತ' ಎನ್ನುತ್ತಿದ್ದಾರೆ (ಚಿತ್ರ 1). 
 

ಚಿತ್ರ 01: `ನಮ್ಮ ವಿಜಯದ ಸಂಕೇತ' - 2001ರ `ಮಿಲಿ ಗೆಜೆಟ್'ನಲ್ಲಿ ಪ್ರಕಟವಾದ ಇರ್ಫನ್‍ರವರ ವ್ಯಂಗ್ಯಚಿತ್ರ.


ಆದರೆ ಆ ಮಸೀದಿಯನ್ನು ಅಲ್ಲಿದ್ದ ರಾಮ ಮಂದಿರವನ್ನು ಕೆಡವಿ ಕಟ್ಟಲಾಗಿದೆಯೆಂದು ಹಿಂದೂಗಳು ಆಪಾದಿಸಿ 1853ರಲ್ಲೇ ಅವಧ್‍ನ ನವಾಬ್ ಅಲಿ ಶಾನ ಆಳ್ವಿಕೆಯ ಸಮಯದಲ್ಲಿ ಅಲ್ಲಿ ಗಲಭೆ ಉಂಟಾಗಿತ್ತು. ನಿರ್ಮೋಹಿಗಳೆಂಬ ಹಿಂದೂ ಪಂಥವೊಂದು ಬಾಬರ್‍ನ ಸಮಯದಲ್ಲಿ ಅಲ್ಲಿದ್ದ ದೇವಾಲಯವೊಂದನ್ನು ಕೆಡವಿ ಮಸೀದಿ ಕಟ್ಟಿದ್ದಾರೆಂದು ಆರೋಪಿಸಿತ್ತು.
ಆಗಿನ ಬ್ರಿಟಿಷ್ ಸರ್ಕಾರ 1859ರಲ್ಲಿ ಮಸೀದಿಯ ಆ ಸ್ಥಳಕ್ಕೆ ಬೇಲಿ ಹಾಕಿ ಪ್ರತ್ಯೇಕಿಸಿ ಒಳಾಂಗಣವನ್ನು ಮುಸಲ್ಮಾನರ ಬಳಕೆಗೆ ಹಾಗೂ ಹೊರಾಂಗಣವನ್ನು ಹಿಂದೂಗಳ ಬಳಕೆಗೆ ಅವಕಾಶ ಮಾಡಿಕೊಟ್ಟರು. ಬಹುಶಃ ಅದು ಹಾಗೆಯೇ ಮುಂದುವರಿದಿದ್ದರೆ ಒಂದೇ ಸ್ಥಳದಲ್ಲಿ, ಅಕ್ಕಪಕ್ಕದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರು ಪೂಜಿಸಲು ಅವಕಾಶವಿರುವ ಅತ್ಯಂತ ಧರ್ಮಸಮನ್ವಯತೆಯ ತಾಣವಾಗುತ್ತಿತ್ತೇನೋ ಅದು!
ಆದರೆ 1949ರಲ್ಲಿ ಇದ್ದಕ್ಕಿದ್ದಂತೆ ಮಸೀದಿಯ ಒಳಗಡೆ ರಾಮನ ವಿಗ್ರಹಗಳು ಪ್ರತ್ಯಕ್ಷವಾದವು. ಅದನ್ನು ಹಿಂದೂಗಳು ಪವಾಡವೆಂದರು. ಆದರೆ ಪೋಲೀಸರು, ಅಧಿಕಾರಿಗಳು, ಊರಿನ ಪ್ರಮುಖರು ಹಾಗೂ ಇತರರು ಸೇರಿ ನಡೆಸಿದ ಪಿತೂರಿಯೆಂದು ನಂತರದ ಪ್ರಥಮ ತನಿಖಾ ವರದಿ ತಿಳಿಸಿತು. ಮುಸಲ್ಮಾನರು ಪ್ರತಿಭಟಿಸಿದರು ಮತ್ತು ಎರಡೂ ಕೋಮಿನವರು ನ್ಯಾಯಾಲಯದಲ್ಲಿ ಸಿವಿಲ್ ದಾವೆ ಹೂಡಿದರು. ಸರ್ಕಾರ ಅದನ್ನು ವಿವಾದಾಸ್ಪದ ಸ್ಥಳವೆಂದು ಘೋಷಿಸಿ ಮಸೀದಿಗೆ ಬೀಗ ಜಡಿದರು. ಎರಡೂ ಕೋಮಿನವರು ದಾವೆಗಳನ್ನು ಹೂಡಿದರು. 1950ರಲ್ಲಿ ಗೋಪಾಲ್ ಸಿಂಗ್ ವಿಶಾರದ ಮತ್ತು ಮಹಾಂತ್ ಪರಮಹಂಸ ರಾಮಚಂದ್ರ ದಾಸ್ ಫೈಜಾಬಾದ್ ನ್ಯಾಯಾಲಯದಲ್ಲಿ ದಾವೆ ಹೂಡಿ ಜನ್ಮಸ್ಥಾನದಲ್ಲಿನ ರಾಮನ ವಿಗ್ರಹಗಳಿಗೆ ಪೂಜೆ ಮಾಡಲು ಅನುಮತಿ ಕೇಳಿದರು. ಒಳಾಂಗಣಕ್ಕೇ ಹಾಕಿರುವ ಬೀಗ ಹಾಗೇ ಮುಂದುವರಿಸಬೇಕೆಂದು ಹೇಳಿದ ನ್ಯಾಯಾಲಯ ಪೂಜೆಗೆ ಅನುಮತಿಸಿತು. 1959ರಲ್ಲಿ ನಿರ್ಮೋಹಿ ಅಖಾಡ ಮೂರನೇ ದಾವೆ ಹೂಡಿ ಆ ರಾಮ ಜನ್ಮಭೂಮಿಯ ಹಕ್ಕುದಾರರು ತಾವೇ ಎಂದು ಹಕ್ಕೊತ್ತಾಯ ಮಾಡಿದರು. 1961ರಲ್ಲಿ ಸುನ್ನಿ ಸೆಂಟ್ರಲ್ ಬೋರ್ಡ್ ಆಫ್ ವಕ್ಫ್ ಮಸೀದಿಯಲ್ಲಿ ವಿಗ್ರಹಗಳನ್ನು ಇರಿಸಿರುವುದನ್ನು ವಿರೋಧಿಸಿ ಮಸೀದಿ ಮತ್ತು ಅದರ ಸುತ್ತಲ ಜಾಗ ಒಂದು ಸ್ಮಶಾನವೆಂದೂ ಅದು ಮಸೀದಿಗೆ ಸೇರಿದ್ದೆಂದು ದಾವೆಯೊಂದನ್ನು ಹೂಡಿತು.
1886ರಿಂದ 1949ರವರೆಗೂ ಫೈಜಾಬಾದ್‍ನಲ್ಲಿ ಒಂದು ರೀತಿಯ ಶಾಂತಿ ನೆಲೆಸಿತ್ತು ಹಾಗೂ ನ್ಯಾಯಾಲಯದಲ್ಲಾಗಲೀ, ಹಾದಿ ಬೀದಿಗಳಲ್ಲಾಗಲೀ ಯಾವುದೇ ಹೋರಾಟಗಳು ನಡೆಯಲಿಲ್ಲ. ಅದೇ ರೀತಿ 1951ರಿಂದ 1986ರವರೆಗೂ ಸಹ ಆಯೋಧ್ಯಾ ವಿವಾದ ಕುರಿತಂತೆ ಯಾವುದೇ ಪ್ರಮುಖ ಘಟನೆಗಳು ನಡೆಯಲಿಲ್ಲ. ಅಖಿಲ ಭಾರತ ಹಿಂದೂ ಮಹಾ ಸಭಾ ಮತ್ತು ಭಾರತೀಯ ಜನಸಂಘಗಳು ತಮ್ಮ ಪ್ರಾರಂಭದಿಂದಲೂ ಅಯೋಧ್ಯಾ, ಮಥುರಾ ಮತ್ತು ಕಾಶಿಯನ್ನು ತಮ್ಮ ಅಜೆಂಡಾದಲ್ಲಿ ಹೊಂದಿದ್ದವಾದರೂ ರಾಮ ಮತ್ತು ರಾಮ ಜನ್ಮಭೂಮಿಯನ್ನು ತಮ್ಮ ಭವಿಷ್ಯದ ಅಸ್ತಿತ್ವಕ್ಕಾಗಿ ಅತ್ಯಂತ ಪ್ರಬಲವಾಗಿ ಬಳಸಿಕೊಳ್ಳಲು ಆರಂಭಿಸಿದ್ದು ಎಂಭತ್ತರ ದಶಕದಲ್ಲಿಯೇ. 1984ರ ಜುಲೈನಲ್ಲಿ ಸ್ಥಾಪನೆಗೊಂಡ ಶ್ರೀ ರಾಮ ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿಯ ಮೂಲಕ ವಿಶ್ವ ಹಿಂದೂ ಪರಿಷತ್ ರಾಮ ಜನ್ಮಭೂಮಿಯನ್ನು ಮುಕ್ತಿಗೊಳಿಸುವ ಆಂದೋಳನ ಆರಂಭಿಸಿತು. ಅದರ ನಾಯಕತ್ವವನ್ನು ಬಿ.ಜೆ.ಪಿ.ಯ ನಾಯಕರಾದ ಎಲ್.ಕೆ.ಆದ್ವಾನಿಯವರು ವಹಿಸಿಕೊಂಡರು. 1986ರಲ್ಲಿ ಜಿಲ್ಲಾ ನ್ಯಾಯಾಲಯವು ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿತು. ಪ್ರತಿಭಟಿಸಿದ ಮುಸಲ್ಮಾನರು ಬಾಬ್ರಿ ಮಸೀದಿ ಕ್ರಿಯಾ ಸಮಿತಿ ರಚಿಸಿಕೊಂಡರು. 1989ರಲ್ಲಿ ವಿಶ್ವ ಹಿಂದೂ ಪರಿಷತ್ ಬಾಬ್ರಿ ಮಸೀದಿಯ ಪಕ್ಕದಲ್ಲಿ ರಾಮ ಮಂದಿರದ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿತು.
1989ರ ನವೆಂಬರ್‍ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಜೆ.ಪಿ. ಬೆಂಬಲದಿಂದ ವಿ.ಪಿ. ಸಿಂಗ್ ಪ್ರಧಾನಿಗಳಾದರು. 1990ರ ಸೆಪ್ಟೆಂಬರ್‍ನಲ್ಲಿ ಆದ್ವಾನಿಯವರು ರಾಮ ಮಂದಿರ ನಿರ್ಮಾಣಕ್ಕೆ ಜನರನ್ನು ಎಚ್ಚರಿಸಲು ಗುಜರಾಥ್‍ನ ಸೋಮನಾಥನಿಂದ ಆಯೋಧ್ಯೆಯವರೆಗೆ ಹತ್ತು ಸಾವಿರ ಕಿ.ಮೀ. ದೂರದ ರಥ ಯಾತ್ರೆ ಪ್ರಾರಂಭಿಸಿದರು. ಈ ರಥಯಾತ್ರೆ ಭಾರತೀಯ ರಾಜಕೀಯದ ಹಾಗೂ ಸಾಮಾಜಿಕ ಬದುಕಿನಲ್ಲಿ ತಲ್ಲಣವನ್ನುಂಟುಮಾಡಿತು. ಗುಜರಾತ್, ಕರ್ನಾಟಕ, ಉತ್ತರಪ್ರದೇಶ ಮುಂತಾದೆಡೆ ಮತೀಯ ಗಲಭೆಗಳುಂಟಾದವು. 1993ರ ಫೆಬ್ರವರಿ 2ರಂದು `ರಾಷ್ಟ್ರೀಯ ಸಹಾರಾ' ಪತ್ರಿಕೆಯಲ್ಲಿ ಪ್ರಕಟವಾದ ಗೋವಿಂದ್‍ರವರ ವ್ಯಂಗ್ಯಚಿತ್ರದಲ್ಲಿ ಹಿಂದೂ ರಾಷ್ಟ್ರವೆಂಬ ತಾವಿಟ್ಟಿರುವ ಮೊಟ್ಟೆಗೆ ಆದ್ವಾನಿಯವರು ಅಕ್ಕರೆಯಿಂದ ಕಾವುಕೊಡುತ್ತಿದ್ದಾರೆ. ಮೊಟ್ಟೆಯೊಡೆದು ಮರಿಯ ಪುಟ್ಟ ರೆಕ್ಕೆ ಮಾತ್ರ ಅವರಿಗೆ ಮುಂದೆ ಕಾಣುತ್ತಿದೆ, ಆದರೆ ಹಿಂಭಾಗದಲ್ಲಿ ಅದರ ರಕ್ಕಸ ಕಾಲು ಹೊರಬರುತ್ತಿರುವುದು ಅವರಿಗೆ ಕಾಣುತ್ತಿಲ್ಲ (ಚಿತ್ರ 2). 

ಚಿತ್ರ 02: `ರಕ್ಕಸ ಮೊಟ್ಟೆಗೆ ಕಾವು' - 1993ರ ಫೆಬ್ರವರಿ 2ರ `ರಾಷ್ಟ್ರೀಯ ಸಹಾರಾ' ಪತ್ರಿಕೆಯಲ್ಲಿ ಪ್ರಕಟವಾದ ಗೋವಿಂದ್‍ರವರ ವ್ಯಂಗ್ಯಚಿತ್ರ.


ಅವರ ರಥಯಾತ್ರೆಯ ಫಲವಾಗಿ 1989ರಲ್ಲಿ 85ರಷ್ಟಿದ್ದ ಬಿಜೆ.ಪಿ.ಯವರ ಸಂಸತ್ ಸದಸ್ಯರ ಬಲಾಬಲ 1991ರ ಚುನಾವಣೆಯಲ್ಲಿ 120ಕ್ಕೇರಿತು ಅಲ್ಲದೆ, ಉತ್ತರಪ್ರದೇಶದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದಿತು. 1992ರ ಡಿಸೆಂಬರ್ 9ರ ಹಿಂದಿ ಪತ್ರಿಕೆ `ಜನಸತ್ತಾ'ದಲ್ಲಿ ಪ್ರಕಟವಾದ ರಾಜೇಂದ್ರರವರ ವ್ಯಂಗ್ಯಚಿತ್ರದಲ್ಲಿ ಕಟ್ಟಡವೊಂದರ ಮೇಲೆ ಹಿಂದೂ ವೋಟ್ ಬ್ಯಾಂಕ್ ಎಂದು ಬರೆದಿದೆ. ಆಗ ಹಲವಾರು ವಾಣಿಜ್ಯ ಬ್ಯಾಂಕ್‍ಗಳ ಅವ್ಯವಹಾರ ಬಯಲಿಗೆ ಬಂದ ಸಂದರ್ಭ. ವ್ಯಂಗ್ಯಚಿತ್ರದಲ್ಲಿನ ಜನಸಾಮಾನ್ಯರು `ಈ ಬ್ಯಾಂಕಿನಲ್ಲಿಯೂ (ಹಿಂದೂ ವೋಟ್ ಬ್ಯಾಂಕ್) ಸಹ ದೊಡ್ಡ ಅವ್ಯವಹಾರ ನಡೆದಿದೆ ಮತ್ತು ಅದರಲ್ಲಿಯೂ ದೊಡ್ಡ ದೊಡ್ಡ ಮನುಷ್ಯರು ಶಾಮೀಲಾಗಿದ್ದಾರೆ' ಎಂದು ಮಾತನಾಡಿಕೊಳ್ಳುತ್ತಿದ್ದಾರೆ (ಚಿತ್ರ 3). 

ಚಿತ್ರ 03: `ಹಿಂದೂ ವೋಟ್ ಬ್ಯಾಂಕ್ ಅವ್ಯವಹಾರ' - 1992ರ ಡಿಸೆಂಬರ್ 9ರ `ಜನಸತ್ತಾ'ದಲ್ಲಿ ಪ್ರಕಟವಾದ ರಾಜೇಂದ್ರರವರ ವ್ಯಂಗ್ಯಚಿತ್ರ. 

ಅಕ್ಟೋಬರ್ 23ರಂದು ಬಿಹಾರದದ ಸಮಷ್ಟಿಪುರದಲ್ಲಿ ಬಿಹಾರದ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಆದ್ವಾನಿಯವರ ರಥಯಾತ್ರೆಯನ್ನು ನಿಲ್ಲಿಸಿ ಅವರನ್ನು ಬಂಧಿಸಿದರು. ಬಿ.ಜೆ.ಪಿ. ಕೇಂದ್ರದಲ್ಲಿ ವಿ.ಪಿ. ಸಿಂಗ್‍ರವರಿಗೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡಿತು ಹಾಗೂ ನವೆಂಬರ್ 9ರಂದು ಕೇಂದ್ರ ಸರ್ಕಾರ ಪತನಗೊಂಡಿತು.
ಉತ್ತರಪ್ರದೇಶದಲ್ಲಿ ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಮ ಜನ್ಮಭೂಮಿ ಮಂದಿರ ಆಂದೋಳನ ಹೆಚ್ಚು ಪ್ರಬಲವಾಯಿತು ಹಾಗೂ ಕರಸೇವಕರು ಆಯೋಧ್ಯೆಗೆ ಹೆಚ್ಚು ಹೆಚ್ಚು ಪ್ರವೇಶಿಸತೊಡಗಿದರು. 1992ರಲ್ಲಿ ಕೇಂದ್ರದಲ್ಲಿ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್‍ರವರು ಆದ್ವಾನಿ, ಮುರಳಿ ಮನೋಹರ್ ಜೋಷಿ ಮುಂತಾದವರು ಮಸೀದಿ ಕೆಡವಲು ಎಷ್ಟು ಕಾರಣವೋ ಅಷ್ಟೇ ಕಾರಣಕರ್ತರಾಗಿದ್ದಾರೆ. ಅಕ್ಟೋಬರ್ 1992ರಲ್ಲಿ ಹಿಂದೂವಾದಿಗಳು ಮಸೀದಿ ಕೆಡವುವುದಾಗಿ ಘೋಷಿಸಿದರೂ ಕೇಂದ್ರ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. 1992ರ ನವೆಂಬರ್ 7ರ `ಇಂಡಿಯನ್ ಎಕ್ಸ್‍ಪ್ರೆಸ್’ನಲ್ಲಿ ಪ್ರಕಟವಾದ ರಂಗಾರವರ ವ್ಯಂಗ್ಯಚಿತ್ರದಲ್ಲಿ ವಿಶ್ವ ಹಿಂದೂ ಪರಿಷತ್ ಡಿಸೆಂಬರ್ 6ರಿಂದ ಕರಸೇವೆ ಕೈಗೊಳ್ಳುವುದಾಗಿ `ಘಂಟಾಘೋಷ’ ಮಾಡುತ್ತಿದ್ದರೂ `ಈ ಘಂಟೆ ಬಡಿಯುತ್ತಿರುವುದು ಯಾರಿಗೆ’ (For Whom The Bell Tolls) ಎಂದು ಆಲೋಚಿಸುತ್ತಿದ್ದಾರೆ (ಚಿತ್ರ 4). 

ಚಿತ್ರ 04: `ಈ ಘಂಟೆ ಬಡಿಯುತ್ತಿರುವುದು ಯಾರಿಗೆ’ - 1992ರ ನವೆಂಬರ್ 7ರ `ಇಂಡಿಯನ್ ಎಕ್ಸ್‍ಪ್ರೆಸ್’ನಲ್ಲಿ ಪ್ರಕಟವಾದ ರಂಗಾರವರ ವ್ಯಂಗ್ಯಚಿತ್ರ. 

ನರಸಿಂಹರಾವ್‍ರವರ ಈ ನಡೆಯ ಬಗ್ಗೆ ಸಾಕಷ್ಟು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. `ರಾಷ್ಟ್ರೀಯ ಸಹಾರಾ' ಪತ್ರಿಕೆಯಲ್ಲಿ 1992ನೇ ಡಿಸೆಂಬರ್ 5ರಂದು ಪ್ರಕಟವಾದ ಗೋವಿಂದ್‍ರವರ ವ್ಯಂಗ್ಯಚಿತ್ರದಲ್ಲಿ ಪಿ.ವಿ.ನರಸಿಂಹರಾವ್‍ರವರಿಗೆ ಕ್ಷೌರ ಮಾಡುತ್ತಿರುವ ಆದ್ವಾನಿ, `ಯಜಮಾನರೇ ನೀವು ಹೇಳಿದಂತೆ ನಿಮ್ಮ ತಲೆಯ ಹಿಂಭಾಗದ ಕೂದಲನ್ನು ಹಗುರವಾಗಿ ಕತ್ತರಿಸಿದ್ದೇನೆ' ಎನ್ನುತ್ತಿದ್ದಾರೆ ಹಾಗೂ ನರಸಿಂಹರಾವ್‍ರವರ ತಲೆಯ ಹಿಂಭಾಗದಲ್ಲಿ `ರಾಮ್' ಎಂದು ಹಾಗೆಯೇ ಉಳಿಸಿದ್ದಾರೆ (ಚಿತ್ರ 5).

ಚಿತ್ರ 05: `ಯಜಮಾನರೇ ನೀವು ಹೇಳಿದಂತೆ... '- `ರಾಷ್ಟ್ರೀಯ ಸಹಾರಾ' ಪತ್ರಿಕೆಯಲ್ಲಿ 1992ನೇ ಡಿಸೆಂಬರ್ 5ರಂದು ಪ್ರಕಟವಾದ ಗೋವಿಂದ್‍ರವರ ವ್ಯಂಗ್ಯಚಿತ್ರ.  
 ನರಸಿಂಹರಾವ್‍ರವರನ್ನು 1971ರಿಂದಲೂ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ ಅವರಿಗೆ ಹತ್ತಿರದವರಾಗಿದ್ದ ಹಾಗೂ ಪ್ರಧಾನ ಮಂತ್ರಿಗಳಾದಾಗ ಅವರ ಮಾಧ್ಯಮ ಸಲಹೆಗಾರ ಮತ್ತು ಅಪರ ಕಾರ್ಯದರ್ಶಿಗಳಾಗಿದ್ದ ಪಿ.ವಿ.ಆರ್.ಕೆ. ಪ್ರಸಾದ್‍ರವರ ಪ್ರಕಾರ ನರಸಿಂಹರಾವ್‍ರವರೂ ಸಹ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಗುಪ್ತ ಹುನ್ನಾರ ಹೊಂದಿದ್ದರು. ಅದನ್ನು ರಾಜಿಂದರ್ ಪುರಿಯವರು 1992ರ ಡಿಸೆಂಬರ್ 10ರ `ದ ಸ್ಟೇಟ್ಸ್‍ಮನ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಅದ್ಭುತವಾಗಿ ಚಿತ್ರಿಸಿದ್ದಾರೆ. ಮೇಲ್ನೋಟಕ್ಕೆ ಮೇಲೆ ನರಸಿಂಹರಾವ್ ಮತ್ತು ಆದ್ವಾನಿಯವರು ಅಯೋಧ್ಯೆಯ ವಿಷಯ ಕುರಿತಂತೆ ಪರಸ್ಪರರ ವಿರುದ್ಧ ಬಲಪ್ರದರ್ಶನ ಮಾಡುತ್ತಿದ್ದರೂ, ಮೇಜಿನ ಕೆಳಗಡೆ ಗೆಳೆಯರೆಂಬಂತೆ ಕೈ ಕುಲುಕುತ್ತಿದ್ದಾರೆ (ಚಿತ್ರ 6).

ಚಿತ್ರ 06: ರಾಜಿಂದರ್ ಪುರಿಯವರ 1992ರ ಡಿಸೆಂಬರ್ 10ರ `ದ ಸ್ಟೇಟ್ಸ್‍ಮನ್’ ಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರ.


ಪಿ.ವಿ.ನರಸಿಂಹರಾವ್‍ರವರ ಈ ಸೋಗಲಾಡಿತನ ಕುರಿತಂತೆ ಹಲವಾರು ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ಅದೇ ಪುರಿಯವರ `ದ ಸ್ಟೇಟ್ಸ್‍ಮನ್’ನ 1993ರ ಜನವರಿ 23ರ ವ್ಯಂಗ್ಯಚಿತ್ರದಲ್ಲಿ ಹಿಂದೂ ರಾಷ್ಟ್ರವೆಂಬ ಹೆಣ್ಣಿಗೆ ಮನಸೋತಿರುವ ನರಸಿಂಹರಾವ್‍ರವರ ಒಲವನ್ನು `ರಹಸ್ಯ ಬಯಕೆ - ಬೇಸಿಕ್ ಇನ್‍ಸ್ಟಿಂಕ್ಟ್’ ಎಂದು ಕರೆದಿದ್ದಾರೆ (ಚಿತ್ರ 7). 

ಚಿತ್ರ 07: `ರಹಸ್ಯ ಬಯಕೆ - ಬೇಸಿಕ್ ಇನ್‍ಸ್ಟಿಂಕ್ಟ್’ - ರಾಜಿಂದರ್ ಪುರಿಯವರ `ದ ಸ್ಟೇಟ್ಸ್‍ಮನ್’ನ 1993ರ ಜನವರಿ 23ರ ವ್ಯಂಗ್ಯಚಿತ್ರ.


ಹಿಂದೂಗಳ ಮೇಲೆ ಬಿ.ಜೆ.ಪಿ.ಯವರಿಗೆ ಮಾತ್ರವಲ್ಲ, ಕಾಂಗ್ರೆಸ್ಸಿಗೂ ಹಕ್ಕಿದೆ ಎನ್ನುವಂತಿತ್ತು ಅವರ ನಡವಳಿಕೆ. ತಾವು ತಟಸ್ಥವಾಗಿದ್ದು ಮಸೀದಿ ಕೆಡವಲು ಅವಕಾಶ ಕೊಟ್ಟರೆ ಭಾರತದ ಬಹುಸಂಖ್ಯಾತರಾದ ಹಿಂದೂಗಳ ಮತ ಕಾಂಗ್ರೆಸ್ಸಿಗೇ ಬೀಳುತ್ತದೆ ಎಂದು ನಂಬಿದ್ದರು ಎಂದು ಅವರ ಕ್ಯಾಬಿನೆಟ್ ಸದಸ್ಯರಾದ ಅರ್ಜುನ್ ಸಿಂಗ್ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿದ್ದಾರೆ. ಮಸೀದಿಯನ್ನು ಕೆಡವುವ ಎಲ್ಲ ಯೋಜನೆಗಳೂ ವಿಶ್ವ ಹಿಂದೂ ಪರಿಷತ್ ಮತ್ತು ಬಿ.ಜೆ.ಪಿ. ಹಾಕುತ್ತಿವೆ ಎಂದು ಅರ್ಜುನ್ ಸಿಂಗ್‍ರವರು ಪ್ರಧಾನಿ ನರಸಿಂಹರಾವ್‍ರವರಿಗೆ ಹಲವಾರು ಎಚ್ಚರಿಕೆಯ ಪತ್ರಗಳನ್ನು ಬರೆದಿದ್ದರಂತೆ. ಮಸೀದಿ ಕೆಡವುವ ಸಮಯದಲ್ಲಿ ನರಸಿಂಹರಾವ್‍ರವರು ಯಾರ ಸಂಪರ್ಕಕ್ಕೂ ಸಿಗದಂತಿದ್ದರು ಎಂದಿದ್ದಾರೆ. ಅದಕ್ಕಾಗೇ 1993ರ ಫೆಬ್ರವರಿ 5ರ `ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟವಾದ ಬಿ.ವಿ.ರಾಮಮೂರ್ತಿಯವರ ವ್ಯಂಗ್ಯಚಿತ್ರದಲ್ಲಿ ನರಸಿಂಹರಾವ್‍ರವರ ಬ್ಯಾಟಿಂಗ್ ಜೊತೆಗಾರ ಅರ್ಜುನ್ ಸಿಂಗ್ ಸ್ವತಃ ತಾನೇ ನರಸಿಂಹರಾವ್‍ರವರ ಕ್ಯಾಚ್ ಹಿಡಿದು ಅವರನ್ನು ಔಟ್ ಮಾಡಿದ್ದಾರೆ (ಚಿತ್ರ 8). 

ಚಿತ್ರ 08: `ಕಾಟ್ ಅಂಡ್ ಬೌಲ್ಡ್' - 1993ರ ಫೆಬ್ರವರಿ 5ರ `ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟವಾದ ಬಿ.ವಿ.ರಾಮಮೂರ್ತಿಯವರ ವ್ಯಂಗ್ಯಚಿತ್ರ.


1992ರ ಡಿಸೆಂಬರ್ 21ರ `ರಾಷ್ಟ್ರೀಯ ಸಹಾರಾ’ ಪತ್ರಿಕೆಯ ಗೋವಿಂದ್‍ರವರ ವ್ಯಂಗ್ಯಚಿತ್ರದಲ್ಲಿ ಪ್ರಧಾನಿ ನರಸಿಂಹರಾವ್ 6ನೇ ಡಿಸೆಂಬರ್ ಮಧ್ಯಾಹ್ನ 3 ಗಂಟೆಯಲ್ಲಿ ತಮ್ಮ ಕಾಲ ಬಳಿಯ ಫೋನ್ ರಿಂಗ್ ಆಗುತ್ತಿದ್ದರೂ ಅದನ್ನು ಗಮನಿಸದೆ ಕಾಲು ಚಾಚಿ ಮಲಗಿ ರೇಡಿಯೋ ಕೇಳಿ `ಮಸೀದಿಯ ಒಂದು ಗುಂಬಜ್ ಮಾತ್ರ ಕೆಡವಿದ್ದಾರೆ, ಪುನರ್ನಿರ್ಮಾಣ 

ಚಿತ್ರ 09: `ಉತ್ತಮ ರಚನೆಗೆ ಸದೃಢ ತಳಪಾಯ ಅತ್ಯವಶ್ಯಕ’ - 1992ರ ಡಿಸೆಂಬರ್ 21ರ `ರಾಷ್ಟ್ರೀಯ ಸಹಾರಾ’ ಪತ್ರಿಕೆಯ ಗೋವಿಂದ್‍ರವರ ವ್ಯಂಗ್ಯಚಿತ್ರ.


ಸುಲಭ’ ಎಂದು ಹೇಳುತ್ತಿದ್ದರೆ, `ಇಲ್ಲ ಚವಾಣ್, ಉತ್ತಮ ರಚನೆಗೆ ಸದೃಢ ತಳಪಾಯ ಅತ್ಯವಶ್ಯಕ’ ಎನ್ನುತ್ತಿದ್ದಾರೆ (ಚಿತ್ರ 9).
1992ರ ಡಿಸೆಂಬರ್ 6ರಂದು ಸುಮಾರು 1,50,000 ವಿ.ಎಚ್.ಪಿ. ಮತ್ತು ಬಿ.ಜೆ.ಪಿ. ಸ್ವಯಂಸೇವಕರು ಅಯೋಧ್ಯೆಯಲ್ಲಿ ಜಮಾಯಿಸಿದರು. ಆದ್ವಾನಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿಯನ್ನೊಳಗೊಂಡಂತೆ ಹಲವಾರು ಬಿ.ಜೆ.ಪಿ. ನಾಯಕರು ಆ ಬೃಹತ್ ರ್ಯಾಲಿಯನ್ನುದ್ದೇಶಿಸಿ ಉದ್ರೇಕಕಾರಿ ಭಾಷಣಗಳನ್ನು ಮಾತನಾಡಿದರು. ಕೆಲವು ವರದಿಗಳು ಹೇಳುವಂತೆ ಎಲ್ಲವೂ ಪೂರ್ವನಿಯೋಜಿತವಾಗಿದ್ದು, ಅ ಬೃಹತ್ ಗುಂಪು ಮಸೀದಿಯ ಮೇಲೆ ದಾಳಿ ನಡೆಸಿ ಅದನ್ನು ನೆಲಸಮ ಮಾಡಿದವು. ಇದ್ದ ಅಲ್ಪ ಸ್ವಲ್ಪ ಪೋಲೀಸರು ಆ ಗುಂಪನ್ನು ನಿಯಂತ್ರಿಸಲಾಗದೆ ಹಿಂದೆ ಸರಿದರು. ಇಡೀ ದೇಶವನ್ನು ಕೋಮು ಗಲಭೆಗಳು ಆವರಿಸಿದವು. ಆ ಗಲಭೆಗಳಲ್ಲಿ 2000ಕ್ಕೂ ಹೆಚ್ಚು ಜನ ಮೃತಪಟ್ಟರು, ಅವರಲ್ಲಿ ಬಹುಪಾಲು ಮುಸಲ್ಮಾನರು ಪ್ರಾಣ ಬಿಟ್ಟಿದ್ದರು.
ಪಿ.ವಿ.ನರಸಿಂಹರಾವ್‍ರವರ ಸರ್ಕಾರ ಆ ಘಟನೆಯನ್ನು ಖಂಡಿಸಿತು. ನಿವೃತ್ತ ನ್ಯಾಯಾಧೀಶ ಮನಮೋಹನ್ ಸಿಂಗ್ ಲಿಬರ್ಹಾನ್‍ರವರ ಅಧ್ಯಕ್ಷತೆಯಲ್ಲಿ ವಿಚಾರಣಾ ಸಮಿತಿಯೊಂದನ್ನು ನೇಮಿಸಿತು. ಅವರ ವರದಿ ಆದ್ವಾನಿ, ವಾಜಪೇಯಿ, ಜೋಷಿ, ಉಮಾ ಭಾರತಿ ಹಾಗೂ ಆಗಿನ ಉತ್ತರ ಪ್ರದೇಶದ ಬಿ.ಜೆ.ಪಿ. ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರನ್ನು ಒಳಗೊಂಡಂತೆ ಹಲವರನ್ನು ಆ ದುರಂತಕ್ಕೆ ಕಾರಣಕರ್ತರನ್ನಾಗಿ ಸೂಚಿಸಿತು. ಆದ್ವಾನಿ, ಜೋಷಿ, ಉಮಾಭಾರತಿ ಮುಂತಾದವರನ್ನು ಬಂಧಿಸಿದರು. ಆಗ ಪ್ರಕಟವಾದ `ದ ಹಿಂದು’ ಪತ್ರಿಕೆಯಲ್ಲಿನ (9ನೇ ಡಿಸೆಂಬರ್, 1992) ಕೇಶವ್‍ರವರ ವ್ಯಂಗ್ಯಚಿತ್ರದಲ್ಲಿ ಆದ್ವಾನಿ ಟ್ರಾಯ್‍ನ ಮೇಲೆ ದಾಳಿ ಮಾಡಿದ ಟ್ರೋಜನ್ ಕುದುರೆಯ ಗೊಂಬೆಯಂತಿದ್ದಾರೆ ಹಾಗೂ ಅದರಲ್ಲಿ ಅಡಗಿದ್ದ ಸೈನಿಕರೆಲ್ಲಾ (ಕರಸೇವಕರು) ಮಸೀದಿ ನಾಶ ಮಾಡಿದ್ದಾರೆ. ನರಸಿಂಹರಾವ್ ಖಾಲಿ ಗೊಂಬೆಯನ್ನು (ಆದ್ವಾನಿಯನ್ನು) ಬಂಧಿಸಿ ಎಳೆದೊಯ್ಯುತ್ತಿದ್ದಾರೆ (ಚಿತ್ರ 10). 

ಚಿತ್ರ 10: ಟ್ರೋಜನ್ ಕುದುರೆ - `ದ ಹಿಂದು’ ಪತ್ರಿಕೆಯಲ್ಲಿನ (9ನೇ ಡಿಸೆಂಬರ್, 1992) ಕೇಶವ್‍ರವರ ವ್ಯಂಗ್ಯಚಿತ್ರ.


ಪಿ.ಉನ್ನಿಯವರ ವ್ಯಂಗ್ಯಚಿತ್ರದಲ್ಲಿ ರಾಜಕಾರಣಿಯೊಬ್ಬ ಮುಸಲ್ಮಾನನೊಬ್ಬನನ್ನು `ಚಿಂತಿಸಬೇಡ! ಪೋಲೀಸರು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ!' ಎನ್ನುತ್ತಿದ್ದರೆ ಪೋಲೀಸರೇ ಹಿಂದೂವಾದಿಗಳೊಂದಿಗೆ ಸೇರಿ `ಜೈ ಶ್ರೀ ರಾಮ್' ಎನ್ನುತ್ತಿದ್ದಾರೆ (ಚಿತ್ರ 11). 

ಚಿತ್ರ 11: `ಪೋಲೀಸರು ಕಾನೂನು ಸುವ್ಯವಸ್ಥೆ ಕಾಪಾಡುತ್ತಾರೆ!' - ಪಿ.ಉನ್ನಿಯವರ ವ್ಯಂಗ್ಯಚಿತ್ರ.


ಬಾಬರಿ ಮಸೀದಿಯನ್ನು ಕೆಡವಿದ ನಂತರ ದೇಶದಾದ್ಯಂತ ವ್ಯಂಗ್ಯಚಿತ್ರಗಳ ಮಹಾಪೂರವೇ ಹರಿದುಬಂದಿತು. ಅವು ವ್ಯಂಗ್ಯಕ್ಕಿಂತ ಹೆಚ್ಚಾಗಿ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದ್ದವು. ತಮಿಳು ದೈನಿಕ `ತೀಕ್ಕದಿರ್' ಪತ್ರಿಕೆಯಲ್ಲಿನ ವೀರಾರವರ ವ್ಯಂಗ್ಯಚಿತ್ರದಲ್ಲಿ ಕಮಲ ಹಿಡಿದಿರುವ ಆದ್ವಾನಿ ನೋಡನೋಡುತ್ತಿರುವಂತೆಯೇ ತ್ರಿಶೂಲ ಹಿಡಿದಿರುವ ರಕ್ಕಸನಾಗಿ ರೂಪಾಂತರಗೊಂಡಿದ್ದಾರೆ (ಚಿತ್ರ 12). 

ಚಿತ್ರ 12: `ರೂಪಾಂತರ' - ತಮಿಳು ದೈನಿಕ `ತೀಕ್ಕದಿರ್' ಪತ್ರಿಕೆಯಲ್ಲಿನ ವೀರಾರವರ ವ್ಯಂಗ್ಯಚಿತ್ರ.


ಇದೇ ವ್ಯಂಗ್ಯಚಿತ್ರಕಾರರ ಮತ್ತೊಂದು ವ್ಯಂಗ್ಯಚಿತ್ರದಲ್ಲಿ ಹನುಮಂತ ಸಂಜೀವಿನಿ ಪರ್ವತ ಹೊತ್ತು ತಂದಿದ್ದರೆ, ಆದ್ವಾನಿ ಬಾಬ್ರಿ ಮಸೀದಿಯ ಗುಂಬಜ್ ಹೊತ್ತು ತಂದಿದ್ದಾರೆ ಹಾಗೂ ಹನುಮಂತ, `ಹೇ ರಾಮ್! ನಾನು ಜನರನ್ನು ಉಳಿಸಲು ಸಂಜೀವಿನಿ ಪರ್ವತ ಹೊತ್ತು ತಂದರೆ ಈ ಮನುಷ್ಯ ಜನರನ್ನು ಸಾಯಿಸಲು ಇದನ್ನು ತಂದಿದ್ದಾನೆ!' ಎನ್ನುತ್ತಿದ್ದಾನೆ. (ಚಿತ್ರ 13). 

ಚಿತ್ರ 13: `ಸಂಜೀವಿನಿ ಮತ್ತು ಗುಂಬಜ್' - ತಮಿಳು ದೈನಿಕ `ತೀಕ್ಕದಿರ್' ಪತ್ರಿಕೆಯಲ್ಲಿನ ವೀರಾರವರ ವ್ಯಂಗ್ಯಚಿತ್ರ.


1993ರ ಜನವರಿ 15ರ ಬೆಂಗಾಲಿ ಪತ್ರಿಕೆ `ದೈನಿಕ್ ಸಂಬದ್’ನಲ್ಲಿ ಪ್ರಕಟವಾದ ಭೋಲಾ ಮೊಯ್ರರವರ ವ್ಯಂಗ್ಯಚಿತ್ರದಲ್ಲಿ ಆದ್ವಾನಿ ಶಾಂತಿ ಸಂಕೇತವಾದ ಬಿಳಿಯ ಪಾರಿವಾಳವನ್ನು ಕೊಂದು, `ನನ್ನ ಕೃತ್ಯದಿಂದ ನನಗೇನೂ ನಾಚಿಕೆಯಾಗುತ್ತಿಲ್ಲ...’ ಎನ್ನುತ್ತಿದ್ದಾರೆ (ಚಿತ್ರ 14). 


ಚಿತ್ರ 14: `ನನಗೇನೂ ನಾಚಿಕೆಯಾಗುತ್ತಿಲ್ಲ...’ - 1993ರ ಜನವರಿ 15ರ ಬೆಂಗಾಲಿ ಪತ್ರಿಕೆ `ದೈನಿಕ್ ಸಂಬದ್’ನಲ್ಲಿನ ಭೋಲಾ ಮೊಯ್ರರವರ ವ್ಯಂಗ್ಯಚಿತ್ರ.


ಬಾಬ್ರಿ ಮಸೀದಿ ಕೆಡವಿದ ಕ್ಷಣದಿಂದಲೇ ಭಾರತದ ಬಹುರೂಪಿ ಸಂಸ್ಕತಿಯ ಬುಡಕ್ಕೂ ಕೊಡಲಿಯಿಟ್ಟಂತಾಯಿತು.  `ಮುಂಗಾರು’ ಪತ್ರಿಕೆಯಲ್ಲಿನ (8ನೇ ಡಿಸೆಂಬರ್ 1992) ಪಿ.ಮಹಮದ್‍ರವರ ವ್ಯಂಗ್ಯಚಿತ್ರದಲ್ಲಿ ನಾಶಗೊಂಡಿರುವ ಗುಂಬಜ್‍ಗಳು ಜಾತ್ಯಾತೀತತೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನಗಳನ್ನು ಪ್ರತಿನಿಧಿಸುತ್ತಿದ್ದರೆ ಅಲ್ಲಿ ನರಸಿಂಹರಾವ್, ಆದ್ವಾನಿ ಮುಂತಾದವರು ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ (ಚಿತ್ರ 15).


ಚಿತ್ರ 15: `ಮುಂಗಾರು’ ಪತ್ರಿಕೆಯಲ್ಲಿನ (8ನೇ ಡಿಸೆಂಬರ್ 1992) ಪಿ.ಮಹಮದ್‍ರವರ ವ್ಯಂಗ್ಯಚಿತ್ರ.


`ಪಂಜಾಬ್ ಕೇಸರಿ’ಯಲ್ಲಿ (7ನೇ ಡಿಸೆಂಬರ್ 1992) ಪ್ರಕಟವಾದ ಶೇಖರ್ ಗುರೇರಾರವರ ವ್ಯಂಗ್ಯಚಿತ್ರ ಇದನ್ನೇ ಕೊಂಚ ವಿಭಿನ್ನವಾಗಿ ಹೇಳಿ ಕೆಡವಿದ ಅವಶೇಷಗಳಲ್ಲಿ ಮೂರು ಶವಗಳು ದೊರೆತಿವೆ ಎಂದು ಹೇಳಿ ಆ ಶವಗಳ ಮೇಲೆ ಹೊದಿಸಿರುವ ಬಟ್ಟೆಯ ಮೇಲೆ ಉತ್ತರ ಪ್ರದೇಶ ಸರ್ಕಾರ, ಮಾನವೀಯತೆ ಮತ್ತು ಪ್ರಜಾಪ್ರಭುತ್ವ ಎಂದು ಬರೆದಿದೆ (ಚಿತ್ರ 16).

ಚಿತ್ರ 16: `ಪಂಜಾಬ್ ಕೇಸರಿ’ಯಲ್ಲಿ (7ನೇ ಡಿಸೆಂಬರ್ 1992) ಪ್ರಕಟವಾದ ಶೇಖರ್ ಗುರೇರಾರವರ ವ್ಯಂಗ್ಯಚಿತ್ರ.


`ದ ಟೈಮ್ಸ್ ಆಫ್ ಇಂಡಿಯಾ’ದಲ್ಲಿನ (9ನೇ ಡಿಸೆಂಬರ್ 1992) ಪೊನ್ನಪ್ಪನವರ ವ್ಯಂಗ್ಯಚಿತ್ರದಲ್ಲಿ ಭಾರತವೆಂಬ ಕಟ್ಟಡಕ್ಕೇ ಬೆಂಕಿಯಿಟ್ಟಿರುವ ಆದ್ವಾನಿ ಇನ್ನೂ ತಮ್ಮ ಕೈಯಲ್ಲಿ ಕೊಳ್ಳಿ ಇದ್ದರೂ ಕಣ್ಣೀರು ಹಾಕುತ್ತಾ `ನನ್ನಿಂದ ತಪ್ಪಾಯಿತು’ ಎನ್ನುತ್ತಿರುವುದು (ಚಿತ್ರ 17) ಆದ್ವಾನಿಯವರ ಮನಸ್ಥಿತಿಯನ್ನೇ ತೋರಿಸುತ್ತದೆ. 
ಚಿತ್ರ 17: `ನನ್ನಿಂದ ತಪ್ಪಾಯಿತು’ - `ದ ಟೈಮ್ಸ್ ಆಫ್ ಇಂಡಿಯಾ’ದಲ್ಲಿನ (9ನೇ ಡಿಸೆಂಬರ್ 1992) ಪೊನ್ನಪ್ಪನವರ ವ್ಯಂಗ್ಯಚಿತ್ರ.



2017ರ ಮಾರ್ಚ್‍ನಲ್ಲಿ ಸರ್ವೋಚ್ಛ ನ್ಯಾಯಾಲಯ ಆದ್ವಾನಿ, ಮುರಳಿ ಮನೋಹರ ಜೋಷಿ ಮತ್ತು ಉಮಾಭಾರತಿ ಮತ್ತಿತರರ ಮೇಲಿನ ಆರೋಪಗಳನ್ನು ಕೈ ಬಿಡಲಾಗದು ಎಂದು ಹೇಳಿದೆ. ವ್ಯಂಗ್ಯಚಿತ್ರವೊಂದರಲ್ಲಿ `ಈಗ ಒಂಟಿತನವೆಂದರೇನೆಂದು ಅರ್ಥವಾಗುತ್ತಿದೆ’ ಎನ್ನುತ್ತಿದ್ದಾರೆ ಆದ್ವಾನಿ. ಮಸೀದಿ ಕೆಡವಿದಾಗ `ಕನ್ನಡ ಪ್ರಭ’ದಲ್ಲಿ ಪ್ರಕಟವಾಗಿದ್ದ ಕೆಡವಿದ ಮಸೀದಿಯ ಅವಶೇಷಗಳಡಿ ಸಿಕ್ಕಿಬಿದ್ದಿರುವ ಆದ್ವಾನಿ ಮತ್ತು ಜೋಷಿಯವರು, `ನಮ್ಮನ್ನು ಕಾಪಾಡಲು ಶ್ರೀರಾಮನೇ ಬರಬೇಕು’ ಎನ್ನುತ್ತಿರುವ ನರೇಂದ್ರರವರ ವ್ಯಂಗ್ಯಚಿತ್ರ (ಚಿತ್ರ 18) ಈಗ ಆದ್ವಾನಿ ಮತ್ತು ಜೋಷಿಯವರಿಗೆ ಹೆಚ್ಚು ಪ್ರಸ್ತುತವೆನ್ನಿಸುತ್ತದೆ. 


ಚಿತ್ರ 18: `ನಮ್ಮನ್ನು ಕಾಪಾಡಲು ಶ್ರೀರಾಮನೇ ಬರಬೇಕು’ - `ಕನ್ನಡ ಪ್ರಭ’ದಲ್ಲಿ ಪ್ರಕಟವಾಗಿರುವ ನರೇಂದ್ರರವರ ವ್ಯಂಗ್ಯಚಿತ್ರ.


1992ರಲ್ಲಿ ಹುಮ್ಮಸ್ಸಿನಿಂದ ರಾಮ ಮಂದಿರ ನಿರ್ಮಾಣಕ್ಕೆ ಹೊರಟ ಆದ್ವಾನಿಯವರಿಗೆ ಈಗ 2017ರಲ್ಲಿ ಅದೇ ಇಟ್ಟಿಗೆ ಹೊರೆಯಾಗಿರುವುದನ್ನು ಸತೀಶ್ ಆಚಾರ್ಯರವರ ವ್ಯಂಗ್ಯಚಿತ್ರ ತೋರಿಸುತ್ತದೆ. ತಾವು ಆಯೋಧ್ಯೆಗೆ ರಥ ಯಾತ್ರೆ ಹೊರಟು ದೇಶದ ಇಡೀ ರಾಜಕೀಯ ಚರಿತ್ರೆಯನ್ನೇ ಬದಲಿಸಿ, ದೇಶ ವಿಭಜನೆಯ ನಂತರದ ಗಾಯಗಳು ಆರದಂತೆ ಅವುಗಳನ್ನು ಮತ್ತಷ್ಟು ಕೆದಕಿದ ಆದ್ವಾನಿಗೆ ಇದು ಆತ್ಮಾವಲೋಕನದ ಸಮಯ. ಅವರು ಇಂದು ತಮ್ಮ ರಥವನ್ನು ತಾವೊಬ್ಬರೇ ಎಳೆಯಬೇಕಾಗಿರುವುದನ್ನು `ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾದ ಸಂದೀಪ್ ಅಧ್ವರ್ಯುರವರ ವ್ಯಂಗ್ಯಚಿತ್ರ (ಚಿತ್ರ 19) ತೋರಿಸುತ್ತದೆ. 

 

ಚಿತ್ರ 19: `ಒಬ್ಬಂಟಿ' - `ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾದ ಸಂದೀಪ್ ಅಧ್ವರ್ಯುರವರ ವ್ಯಂಗ್ಯಚಿತ್ರ.
 

`ಮಂದಿರ ಕೆಡವಿ ಮಸೀದಿ ಕಟ್ಟಲಾಗಿದೆ. ಚರಿತ್ರೆಯಲ್ಲಾಗಿರುವ ತಪ್ಪನ್ನು ಸರಿಪಡಿಸುತ್ತೇವೆ’ ಎಂದು ಹಿಂದೂ ಸಂಘಟನೆಗಳು ಮಸೀದಿ ಕೆಡವಿದವು. ಇದೇ ಮಾರ್ಚ್‍ನಲ್ಲಿ ಸರ್ವೋಚ್ಛ ನ್ಯಾಯಾಲಯ ವಿಷಯ ಸೂಕ್ಷ್ಮವಾಗಿರುವುದರಿಂದ ನ್ಯಾಯಾಲಯದ ಹೊರಗೇ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ಹೇಳಿರುವುದು ಇಂಗ್ಲಿಷಿನ `It has come a full circle’ ಎನ್ನುವ ಮಾತನ್ನು ನೆನಪಿಸುತ್ತದೆ.

(ವ್ಯಂಗ್ಯಚಿತ್ರಗಳ ಕೃಪೆ: ಸಫ್ದರ್ ಹಷ್ಮಿ ಮೆಮೊರಿಯಲ್ ಟ್ರಸ್ಟ್)