ಮಹಿಳಾ ದಿನಾಚರಣೆಯ ಶುಭಾಶಯಗಳು.
7ನೇ ಮಾರ್ಚ್ 1999ರ ʻಪ್ರಜಾವಾಣಿʼಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ. ಕೆಲವು ಅಂಕಿಅಂಶಗಳ ಹೊರತಾಗಿ ವಾಸ್ತವ ಚಿತ್ರಣವೇನೂ ಬದಲಾಗಿಲ್ಲ.
ಚರಿತ್ರೆಯ ಆರಂಭದಿಂದಲೂ ಹೆಣ್ಣು ಗಂಡಿನೊಂದಿಗೆ ಸಮಭಾಗಿಯಾಗಿ ಆರ್ಥಿಕ ಹೊಣೆಗಾರಿಕೆಯ ನೊಗ ಹೊತ್ತು ಸಾಗಿ ಬಂದಿದ್ದಾಳೆ. ಕೃಷಿ ಹಾಗೂ ಕೃಷಿಯೇತರ ಚಟುವಟಿಕೆಗಳಲ್ಲೂ ಹೆಣ್ಣು ಶತಮಾನಗಳಿಂದ ತೊಡಗಿಸಿಕೊಂಡಿದ್ದಾಳೆ. ಮಾನವ ಶಾಸ್ತ್ರಜ್ಞರ ಪ್ರಕಾರ ಕೃಷಿಯ ಆವಿಷ್ಕಾರಕ್ಕೆ ಹೆಣ್ಣೇ ಕಾರಣ. ಬೇಟೆಗಾರರಾಗಿದ್ದ ಗಂಡು ತನ್ನ ಹಾಗೂ ಕುಟುಂಬದ ಆಹಾರ ಮತ್ತು ಚರ್ಮದ ಅವಶ್ಯಕತೆಗಳಿಗಾಗಿ ಪ್ರಾಣಿಗಳ ಹಿಂಡು ಅರಸಿ ಹೋಗುತ್ತಿದ್ದಾಗ, ಮಕ್ಕಳ ಜವಾಬ್ದಾರಿ ಹೆಣ್ಣಿನದಾಗಿತ್ತು. ಆಗ ಮನೆ ಬಳಿಯೇ ಇರಬೇಕಾಗಿದ್ದ ಹೆಣ್ಣು ಪ್ರಕೃತಿಯ ಮಡಿಲಲ್ಲಿ ಬೆಳೆಯುತ್ತಿದ್ದ ಕಾಳು, ಹಣ್ಣು ಹಂಪಲುಗಳನ್ನು ಗಮನಿಸಿ ಅವುಗಳನ್ನು ಕುಟುಂಬದ ಅವಶ್ಯಕತೆಗಾಗಿ ತನ್ನ ಮನೆಯ ಬಳಿಯೇ ಬೆಳೆಸುವುದರ ಮೂಲಕ ಕೃಷಿಯ ಅವಿಷ್ಕಾರ ನಡೆಸಿದಳು ಎನ್ನುವುದು ವಿಜ್ಞಾನಿಗಳ ಅಭಿಮತ. ಆಕ್ಸ್‍ಫ್ಯಾಮ್ ಅಧ್ಯಯನದ ಪ್ರಕಾರ ಇಂದಿಗೂ ಕೃಷಿಯಲ್ಲಿನ ಶೇ. 80ರಷ್ಟು ಕೆಲಸವನ್ನು ಮಹಿಳೆಯರೇ ನಿರ್ವಹಿಸುತ್ತಾರೆ. ಆಕೆ ಮನೆಯಲ್ಲಲ್ಲದೆ ಹೊಲಗದ್ದೆಗಳಲ್ಲೂ ದುಡಿಯಬೇಕು.
ನಗರ ಪ್ರದೇಶಗಳಲ್ಲಿ ಕುಟುಂಬ ನಿರ್ವಹಣೆಗೆ ದುಡಿಯಲು ಹೊರಗೆ ಹೋಗಲು ಮಹಿಳೆ ಇತ್ತೀಚಿಗೆ ಆರಂಭಿಸಿದ್ದಾರೆ. ಗ್ರಾಮೀಣ ಮಹಿಳೆ ಕೃಷಿಯ ಆರಂಭದಿಂದಲೂ ಮನೆಯ ಹಾಗೂ ಹೊರಗಿನ ದುಡಿತದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಬರೇ ಹೊಲ ಗದ್ದೆಗಳಲ್ಲಿ ದುಡಿಯುತ್ತಿದ್ದ ಮಹಿಳೆ ಇಂದು ಕೃಷಿ ಸಂಶೋಧನಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ.
ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳು ದುಡಿಯುವ ಹೆಣ್ಣಿನ ಬದುಕಿನ ಮತ್ತೊಂದು ಮುಖದ ಪರಿಚಯ ಬಹಳ ಮಂದಿಗಿಲ್ಲ. ಹೆಣ್ಣು ಅಂದು ಸಮಾಜದಲ್ಲಿ ಗಂಡಿಗೆ ಎಲ್ಲ ವಿಷಯಗಳಲ್ಲೂ ಸಮನಾಗಿದ್ದಳು. ಕುಟುಂಬದ, ಸಮಾಜದ ಹಾಗೂ ಕೆಲಸದ ಆಧಾರದ ಮೇಲೆ ಆಕೆಯ ದುಡಿತವನ್ನು ಗೌಣಗೊಳಿಸಲು ಧರ್ಮಗಳೂ ಕಾರಣವಾದವು.
ಗ್ರಾಮೀಣ ಕುಟುಂಬದ ಆಹಾರ ಉತ್ಪಾದನೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಹೆಣ್ಣೇ ಇಂದು ಸ್ವತಃ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿದ್ದಾಳೆ. ಗ್ರಾಮೀಣ ಮಹಿಳೆ ಈಗಲೂ ತನ್ನ ಕುಟುಂಬದ ಎಲ್ಲರೂ ಊಟ ಮಾಡಿದ ನಂತರವೇ ತಾನು ತಿನ್ನುವುದು ಈಗೀಗ ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ತಿಳಿಯಲು ಆಧುನಿಕ ವೈದ್ಯ ಪದ್ಧತಿಗಳಿಂದ ಸಾಧ್ಯವಿರುವಾಗ ಹೆಣ್ಣು ಮಗು ಭ್ರೂಣದಲ್ಲಿರುವಾಗಲೇ ತಾರತಮ್ಯಕ್ಕೊಳಪಡುತ್ತದೆ. ಈ ಪರಿಸ್ಥಿತಿ ನಗರಗಳಲ್ಲಿ ದಟ್ಟವಾಗಿರುವಾಗ ಇನ್ನು ಅನಕ್ಷರಸ್ಥ ಗ್ರಾಮೀಣ ಮಹಿಳೆಯ ಪರಿಸ್ಥಿತಿಯನ್ನು ಯಾರೂ ಊಹಿಸಿ ಕೊಳ್ಳಬಹುದು. ಯೂನೆಸೆಫ್ ಅಧ್ಯಯನವೊಂದರಲ್ಲಿ ಒಂದೇ ಕುಟುಂಬಲ್ಲಿನ ಹೆಣ್ಣು ಹಾಗೂ ಗಂಡು ಮಕ್ಕಳನ್ನು ಬೆಳೆಸುವಲ್ಲಿಯೇ ತಾರತಮ್ಯವಿದ್ದು ಹೆಣ್ಣು ಮಕ್ಕಳಿಗೆ ಗಂಡುಮಕ್ಕಳಿಗಿಂತ ಕಡಿಮೆ ಪೋಷಕಾಂಶಗಳೂ ಹಾಗೂ ಕ್ಯಾಲೋರಿಗಳ ಪ್ರಮಾಣ ದೊರಕುತ್ತಿರುವುದು ತಿಳಿದುಬಂದಿದೆ.
ಹೊಲಗಳಲ್ಲಿ ದುಡಿಯುವ ಮಹಿಳಾ ಕೃಷಿ ಕಾರ್ಮಿಕರ ಹಾಗೂ ಗಂಡಾಳುಗಳಿಗೆ ಪಾವತಿಸುವ ಕೂಲಿ ದರಗಳಲ್ಲಿನ ತಾರತಮ್ಯ ಎಲ್ಲರಿಗೂ ತಿಳಿದಿರುವಂತಹುದೆ. ಗಂಡಿಗಿಂತ ಹೆಚ್ಚು ದುಡಿಯುವ ಹೆಣ್ಣಿಗೆ ಇಂದಿಗೂ ಗಂಡಾಳಿಗಿಂತ ಕಡಿಮೆ ಕೂಲಿ.
ಯೋಜನೆ ಯಾವುದೇ ಆದರೂ ಒಟ್ಟಾರೆ ಸಮಾಜದ
ಅದರಲ್ಲೂ ಗಂಡಿನ ದೃಷ್ಟಿಕೋನ ಬದಲಾಗಬೇಕಿದೆ. ಗಂಡಿನಷ್ಟೇ ದುಡಿಯುವ ಗ್ರಾಮೀಣ ಮಹಿಳೆಗೆ ಸಮಾನ ವೇತನ, ಸಮಾನ ಆರ್ಥಿಕ ಸ್ಥಾನಮಾನ ದೊರಕಬೇಕಾಗಿದೆ. ಜೊತೆಗೆ ಆಹಾರ ಉತ್ಪಾದನೆಯಲ್ಲಿ ಭಾಗಿಯಾಗುವ ಹೆಣ್ಣಿಗೆ
ಸಾಕಷ್ಟು ಪೋಷಕಾಂಶಗಳು ಹಾಗೂ ಕ್ಯಾಲೋರಿಗಳ ಕೊರತೆಯಾಗದಂತೆ ನೋಡಿಕೊಳ್ಳುವುದು ಅತ್ಯವಶ್ಯಕವಾಗಿದೆ.
https://antaragange.blogspot.com/2022/03/blog-post.html
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ