ಮಂಗಳವಾರ, ಡಿಸೆಂಬರ್ 26, 2023

ಕೈಗಾ ಸುತ್ತಮುತ್ತಲಿನಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್!

 ‌18ರ ಡಿಸೆಂಬರ್‌ 2023ರ ʻಪ್ರಜಾವಾಣಿʼಯಲ್ಲಿ ಪ್ರಕಟವಾದ ವರದಿಯೊಂದು ʻಕಾರವಾರ: ಮೂರು ವರ್ಷದಲ್ಲಿ 1097 ಕ್ಯಾನ್ಸರ್‌ ಪ್ರಕರಣʼ ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ವರದಿಯಲ್ಲಿ ʻಪ್ರತಿ ವರ್ಷ ಸರಾಸರಿ ಮುನ್ನೂರಕ್ಕೂ ಹೆಚ್ಚು ಕ್ಯಾನ್ಸರ್‌ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗುತ್ತಿವೆ. ಕಳೆದ ಐದಾರು ವರ್ಷಗಳಿಂದ ಈಚೆಗೆ ಅವುಗಳ ಸಂಖ್ಯೆಹೆಚ್ಚುತ್ತಿದೆ ಎಂದು ಹಿರಿಯ ವೈದ್ಯಾಥಿಕಾರಿಗಳು ಹೇಳುತ್ತಾರೆʼ ಎಂದಿದೆ. ಅದರಲ್ಲೆ ವೈದ್ಯರೊಬ್ಬರ ಪ್ರಕಾರ ʻಜೀವನಶೈಲಿ, ಆಹಾರ ಪದ್ಧತಿಗಳು ಕ್ಯಾನ್ಸರ್‌ ಹೆಚ್ಚಳಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಾರಣʼವೆಂದೂ ಸಹ ವರದಿ ಮಾಡಿದೆ.


ಕೈಗಾದ ಅಣುಸ್ಥಾವರಕ್ಕೂ ಈ ಕ್ಯಾನ್ಸರ್‌ ಹೆಚ್ಚಳಕ್ಕೂ ಸಂಬಂಧವಿರಬಹುದೆ? ಸಂಶೋಧನೆ ಮತ್ತು ಅಧ್ಯಯನಗಳು ನಡೆಯಬೇಕಿವೆ.

 ಈ ಸಂದರ್ಭದಲ್ಲಿ ನಾನು 37 ವರ್ಷಗಳ ಹಿಂದೆ 1986ರಲ್ಲಿ ಬರೆದಿದ್ದ ಲೇಖನ ಕೋಲಾರದ ಗೆಳೆಯರಾದ ಲಕ್ಷ್ಮೀಪತಿ ಕೋಲಾರ ಹಾಗೂ ದಿ. ಸೋಮಶೇಖರಗೌಡ ತರುತ್ತಿದ್ದ ʻಸಂಚಿಕೆ -ಮೂಡಲ ಸೀಮೆಯ ವಾರಪತ್ರಿಕೆʼಯಲ್ಲಿ ಪ್ರಕಟವಾಗಿತ್ತು. ಆ ಲೇಖನ ಅಣುಸ್ಥಾವರಗಳ ಅಪಾಯಕಾರಿ ತ್ಯಾಜ್ಯವನ್ನು ಕೋಲಾರದ ಚಿನ್ನದ ಗಣಿಗಳಲ್ಲಿ ಹೂಳಲು ಸರ್ಕಾರ ಆಲೋಚಿಸುತ್ತಿದ್ದಾಗ ಬರೆದಿದ್ದ ಲೇಖನವಾಗಿತ್ತು. ಆ ಲೇಖನ ಪ್ರಕಟವಾದ ನಂತರ ಕೋಲಾರದ ಸಂಸದರು ದೆಹಲಿಯಲ್ಲಿ ಪಾರ್ಲಿಮೆಂಟಿನಲ್ಲಿ ಸಹ ಆ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಲೇಖನದಲ್ಲಿ  ʻದುರಂತಗಳಿಗೆ ಆಹ್ವಾನ ಅಣುಶಕ್ತಿʼ ಎಂಬ ಒಂದು ಬಾಕ್ಸ್‌ ಐಟಂ ಸಹ ಇತ್ತು.  ಆಗಷ್ಟೇ ಕಾರವಾರದ ಕೈಗಾದಲ್ಲಿ ಅಣುಸ್ಥಾವರ ಸ್ಥಾಪಿಸುವ ಸುದ್ದಿಯನ್ನು ಕರ್ನಾಟಕ ಸರ್ಕಾರ ಸಹ ಸ್ವಾಗತಿಸಿತ್ತು. ಆ ಲೇಖನದಲ್ಲಿ ಅಣುಸ್ಥಾವರಗಳಿಂದಾಗುವ ಅಪಾಯದ ಮುನ್ಸೂಚನೆಯನ್ನು ನಾನು ಬರೆದಿದ್ದೆ. ನನ್ನ ಮತ್ತೊಂದು ಲೇಖನ (ಈಗದು ಕಾಲೇಜುಗಳ ಪಠ್ಯವೂ ಆಗಿದೆ) ʻಅಣ್ವಸ್ತ್ರ ಯುದ್ಧ ಮನುಕುಲದ ಚರಮಗೀತೆʼಯಲ್ಲಿ ʻನಮ್ಮ ಮಡಿಲಲ್ಲಿಯೂ ಕೈಗಾ ಎಂಬ ಅಗ್ನಿಪಕ್ಷಿ ಕಾವು ಕೂತಿದೆʼ ಎಂದು ಬರೆದಿದ್ದೇನೆ. ಕೆಲದಿನಗಳ ಹಿಂದೆ ಪ್ರಜಾವಾಣಿಯ ವರದಿ ಓದಿದಾದ ಅದು ನೆನಪಾಯಿತು. ಇಲ್ಲಿ ಶೇರ್‌ ಮಾಡಿದ್ದೇನೆ. ಓದಿ ಅಭಿಪ್ರಾಯ ತಿಳಿಸಿ:


ದುರಂತಗಳಿಗೆ ಆಹ್ವಾನ ಅಣು ಶಕ್ತಿ

 ಕಾರವಾರದ ಬಳಿ ಕಾಳಿ ನದಿಯ ದಂಡೆಯ ಮೇಲೆ ಅಣು ಶಕ್ತಿಯಿಂದ ಉತ್ಪಾದಿಸಬಲ್ಲ ಕುಲುಮೆಯನ್ನು ಕೈಗಾ ಎಂಬಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಸ್ವಾಗತಿಸಿದೆ. ಅಣು ಶಕ್ತಿಯ ವಿದ್ಯುತ್ತು ತುಂಬಾ ವೆಚ್ಚದ್ದೆಂದೂ ಅದರ ಉಸ್ತುವಾರಿ ತೀರಾ ಅಪಾಯಕಾರಿಯೆಂದೂ ಅಮೆರಿಕ, ಸ್ವೀಡನ್ ಮುಂತಾದ ದೇಶಗಳು ತಮ್ಮ ಅಣುಘಟಕಗಳನ್ನು ಮುಚ್ಚುತ್ತಿವೆ. ಅಣುಶಕ್ತಿ ದುರಂತಗಳಿಗೆ ಬೇಕಾದಷ್ಟು ಉದಾಹರಣೆಗಳಿವೆ.

 1957 ರಲ್ಲಿ ಇಂಗ್ಲೆಂಡ್‌ನ ವಿಂಡ್ ಸ್ಕೇಲ್' ಎಂಬಲ್ಲಿ 12 ಟನ್ ಯುರೇನಿಯಂ ಇಂಧನಕ್ಕೆ ಬೆಂಕಿ ಬಿತ್ತು. ಅಲ್ಲಿ ಅಣು ವಿಕಿರಣ 65 ಕಿಲೋಮೀಟರ್ ದೂರಕ್ಕೂ ಪಸರಿಸಿ ದನಕರುಗಳ ವಿಕಾರ ಸಂತತಿ ಸೃಷ್ಟಿಸಿದೆ. ಪಶ್ಚಿಮ ಜರ್ಮನಿಯ ಲಿಂಜೆನ್ ಎಂಬಲ್ಲಿನ ಅಣುಘಟಕದ ಸುತ್ತ ಮುತ್ತ ಮೊದಲಿಗಿಂತ ಏಳು ಪಟ್ಟು ಮಂದಿ ರಕ್ತದ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 1959ರಲ್ಲಿ ರಷ್ಯಾದ ಕಿಷ್ತಿಮ್ ಎಂಬಲ್ಲಿ ಅಣು ಭಸ್ಮವೇ ಆಸ್ಫೋಟಿಸಿ ಸಾವಿರಾರು ಕಿಲೋಮೀಟರ್ ಕ್ಷೇತ್ರದಲ್ಲಿ ಜೀವ ಜಂತುಗಳೆಲ್ಲ ನಾಶವಾಗಿವೆ. ಅಮೇರಿಕದ ಡೆಟ್ರಾಯಿಟ್ ಎಂಬಲ್ಲಿ 1966ರಲ್ಲಿ ಇಡೀ ಆಣುಘಟಕವೇ ಕರಗುವ ಸ್ಥಿತಿಗೆ ಬಂದು ನಗರವನ್ನೇ ಖಾಲಿ  ಮಾಡಿಸಬೇಕಾದ ಸಂದರ್ಭ ಬಂದಿತ್ತು. 1969ರಲ್ಲಿ ಸ್ವಿಟ್ಜರ್ಲೆಂಡಿನಲ್ಲಿ ಅಣುಸ್ಥಾವರ ಸ್ಫೋಟವಾಗಿ ಚೊಕ್ಕ ಮಾಡಲು ತಿಂಗಳು ಬೇಕಾಯಿತು. 1979ರಲ್ಲಿ ಅಮೇರಿಕದ 'ತ್ರೀ ಮೈಲ್ ಐಲೆಂಡ್" ಎಂಬಲ್ಲಿ ಆಣುಘಟಕ ಕರಗಿ ಸ್ಫೋಟಕ ಸ್ಥಿತಿಗೆ ಬಂದು ನೂರುಕೋಟಿ ಡಾಲರ್‌ಗಳಷ್ಟು ನಷ್ಟವಾಯಿತು,

          ತೀರಾ ಇತ್ತೀಚೆಗೆ ನಡೆದ ರಷ್ಯಾದ ಚೆರ್ನೋಬಿಲ್‌ ಅಣುಸ್ಥಾವರದ ದುರಂತ ಅತ್ಯಂತ ಘೋರವಾದದ್ದು, ಎಲ್ಲಾ ರಾಷ್ಟ್ರಗಳೂ ಅಣುಸ್ಥಾವರಗಳ ಸ್ಥಾಪನೆಯನ್ನು ಸಮರ್ಥಿಸಿಕೊಳ್ಳಲು ಧ್ವನಿ ಕಳೆದುಕೊಂಡಿರುವಾಗ ನಮ್ಮ ʻರಾಹುಕಾಲ'ದ ರಾಜಾರಾಮಣ್ಣನಂಥ ವಿಜ್ಞಾನಿಗಳು ನಮ್ಮ ಅಣುಸ್ಥಾವರಗಳು ಅತ್ಯಂತ ಸುರಕ್ಷಿತವಾದದ್ದೆಂದೂ, ಅತಿ ಕಡಿಮೆ ವೆಚ್ಚದ್ದೆಂದೂ ಬಡಾಯಿ ಕೊಚ್ಚಿಕೊಳ್ಳುತ್ತ ಜನರ ಮೌಢ್ಯ ಅಜ್ಞಾನಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ, ರಾಹು ಕೇತುಗಳ ಹಾಗೆ ಇವರಂಥ ವಿಜ್ಞಾನಿಗಳು ಇಂಡಿಯಾದ ವಿಜ್ಞಾನ ರಂಗವನ್ನು ಹಿಡಿದಿರುವವರೆಗೂ ಜನ ನಿರಾಳವಾಗಿ ಉಸಿರಾಡುವ ಹಾಗಿಲ್ಲ.

ಇಡೀ ಲೇಖನ ಇಲ್ಲಿದೆ:

ಸಂಚಿಕೆ - ಮೂಡಲ ಸೀಮೆಯ ವಾರಪತ್ರಿಕೆ, ಸೆಪ್ಟೆಂಬರ್ 21, 1986

ಸಾವಿನ ಮನೆಯಾಗಲಿರುವ ಚಿನ್ನದ ಗಣಿಗಳು

“ಅಣು ಸ್ಥಾವರಗಳಲ್ಲಿ ವಿದ್ಯುಚ್ಛಕ್ತಿ ಉತ್ಪಾದಿಸಿದ ನಂತರ ಉಳಿಯುವ ʻಪ್ಲುಟೋನಿಯಂ' ಎಂಬ ಮೃತ್ತುಕಾರಕ 'ಕಸ'ವನ್ನು ಹೂತುಬಿಡಲು ವಿಜ್ಞಾನಿಗಳು ಕೋಲಾರದ ಚಿನ್ನದ ಗಣಿಗಳನ್ನು ಆರಿಸಿದ್ದಾರೆ. ಚಿನ್ನ ಕೊಟ್ಟ ಕೋಲಾರದ ಮಡಿಲಿಗೆ ಅಣುವಿಜ್ಞಾನಿಗಳು ವೈಜ್ಞಾನಿಕ ʻಅನೈತಿಕತೆಯ ಪಾಪದ ಪಿಂಡ'ಗಳನ್ನು ತುಂಬಿ ಚಿನ್ನದ ಗಣಿಗಳನ್ನು - ʻಸಾವಿನ ಮನೆ'ಗಳನ್ನಾಗಿ ಮಾಡಲು ಹೊರಟಿದ್ದಾರೆ.”

ಇತ್ತೀಚಿನ ಪತ್ರಿಕಾ ವರದಿಯಂತೆ ಇಂಡಿಯಾದ ಅಣು ವಿಜ್ಞಾನಿಗಳು ಅತ್ಯಂತ ಅಪಾಯ ಕಾರಿ ವಿಕಿರಣ (RADIATION ) ಸೂಸುವ ಅಣು ಸ್ಥಾವರಗಳ ಕಸದಿಂದ (RADIATION WASTE ) ಬಿಡುಗಡೆ ಹೊಂದಲು ಅದನ್ನು ಭೂಮಿಯು ಆಳದಲ್ಲಿ ಮಾತು ಬಿಡಲು ಆಲೋಚಿಸುತ್ತಿದ್ದಾರೆ. ಅದಕ್ಕೆ ಅವರು ಹುಡುಕಿಸುವ ಜಾಗ ಕೋಲಾರದ ಚಿನ್ನದ ಗಣಿಗಳು, ಅದರ ಸಾಧ್ಯತೆಗೆಳನ್ನು ಪರೀಕ್ಷಿಸಲು ಈಗ ಯಾವುದೋ ಮೂಲೆಯಲ್ಲಿ ಒಂದು ಪ್ರಾಯೋಗಿಕ ಸಂಶೋಧನಾ ಕೇಂದ್ರ ಕೆಲಸ ಮಾಡುತ್ತಿದೆ. ಚಿನ್ನ ಕೊಟ್ಟ ಕೋಲಾರದ ಮಡಿಲಿಗೆ ಅಣು ವಿಜ್ಞಾನಿಗಳು ವೈಜ್ಞಾನಿಕ ಅನೈತಿಕತೆಯ ಪಾಪದ ಪಿಂಡವನ್ನು ತುಂಬಲು ಸನ್ನಾಹ ನಡೆಸಿದ್ದಾರೆ.

 ಅಣುಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದಿಸಲು ಯುರೇನಿಯಂ ಎಂಬ ಲೋಹ ಬಳಸುತ್ತಾರೆ. ಈ ಲೋಹದಿಂದ ಸದಾ ವಿಕಿರಣ ಹೊರ ಸೂಸುತ್ತಿರುತ್ತವೆ. ಅಣುಸ್ಥಾವರದಲ್ಲಿ ಯುರೇನಿಯಂ ಸಿಡಿದ ನಂತರ ಉಳಿಯುವ ಭಸ್ಮಕ್ಕೆ ಪ್ಲುಟೋನಿಯಂ ಎನ್ನುತ್ತಾರೆ. ಇದೂ ಸಹ ವಿಕಿರಣ ಹೊರಸೂಸುತ್ತದೆ, ಈ ವಿಕಿರಣಗಳು ಅತ್ಯಂತ ಅವಾಯಕಾರಿ, ಈ 'ಕಸ'ವನ್ನು ಎಲ್ಲಿಯೂ ಬಚ್ಚಿಟ್ಟು ವಿಕಿರಣಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವಿಕಿರಣಗಳು ಗಾಳಿ, ನೀರು ಮುಂತಾದವುಗಳಿಂದ ಪಸರಿಸುತ್ತವೆ. ಇದನ್ನು ಗಣಿಗಳಂತಹ ಆಳದಲ್ಲಿ ಹೂತಿಟ್ಟರೂ ಅಂತರ್ಜಲದ ಮೂಲಕ ವಿಕಿರಣ ಪಸರಿಸಬಹುದು. ದೇಹದ ಮೂಲಕ ಸುಲಭವಾಗಿ ತೂರಿ ಹೋಗಬಲ್ಲ ಈ ವಿಕಿರಣಗಳು ಮತ್ತು ಮನುಷ್ಯನ ದೇಹದ ಮೇಲೆ ಭಯಂಕರ ಪರಿಣಾಮ ಬೀರುತ್ತವೆ. ಮನುಷ್ಯನ ಅಂಗಾಗಗಳ ಮೂಲಕ ತೂರಿ ಕ್ಯಾನ್ಸರ್ ಉಂಟು ಮಾಡುತ್ತವೆ. ಗಂಡನರಲ್ಲಿ ನಪುಂಸಕ ಹೆಂಗಸರಲ್ಲಿ ಬಂಜೆತನ ಉಂಟು ಮಾಡುತ್ತವೆ, ಬಸುರಿ ಹೆಂಗಸರ ಗರ್ಭ ಭೇದಿಸಿ ಗರ್ಭಪಾತ ಉಂಟುಮಾಡಬಹುದು, ಇಲ್ಲದಿದ್ದಲ್ಲಿ ಅಂಗವಿಕಲ ಸಂತತಿಯನ್ನೇ ಸೃಷ್ಟಿಸುತ್ತವೆ. ಅಲ್ಲದೆ ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ವಿಕಿರಣಗಳು ಮನುಷ್ಯನ ರೋಗ ನಿರೋಧಕ ಶಕ್ತಿಯನ್ನೇ ಹಾಳು ಮಾಡುವುದರಿಂದ ʻಏಡ್ಸ್'ನಂಥ ಭಯಂಕರ ಖಾಯಿಲೆಗಳು ಸುಲಭವಾಗಿ ಹರಡಿಕೊಂಡು ಬಿಡುತ್ತವೆ. ಐವತ್ತು ಮತ್ತು ಅರವತ್ತರ ದಶಕಗಳಲ್ಲಿ ನಡೆಸಿದ ಅಣುಬಾಂಬ್ ಪ್ರಯೋಗಗಳಿಂದ ಹೊರಹೊಮ್ಮಿದ ವಿಕಿರಣಗಳು ಆಗಿನ ಭ್ರೂಣಾವಸ್ಥೆಯಲ್ಲಿದ್ದವರ ರೋಗ ನಿರೋಧಕ ಶಕ್ತಿಯನ್ನು ಹಾಳುಮಾಡಿದ್ದರಿಂದಲೇ ಈಗ ʻಏಡ್ಸ್‌ʼ ಹುಟ್ಟಿಕೊಂಡಿರಬಹುದೆಂಬ ಗುಮಾನಿಯನ್ನು ಹಲವಾರು ವಿಜ್ಞಾನಿಗಳು ವ್ಯಕ್ತ ಪಡಿಸಿದ್ದಾರೆ.

ಅಣುಸ್ಥಾವರದಲ್ಲಿ ಕೊನೆಯಲ್ಲಿ ಉಳಿಯುವ ಪ್ಲುಟೋನಿಯಂ ಭಸ್ಮ, ಕೆಲಸಕ್ಕೆ ಬಾರದ ಉಪಕರಣಗಳು, ವಿಕಿರಣಗಳಿಂದ ರಕ್ಷಣೆ ಪಡೆಯಲು ಉಪಯೋಗಿಸುವ ಹೊದಿಕೆಗಳು (ವಿಕಿರಣ ಹೀರಿ ಹೀರಿ ಕೊನೆಗೆ ಇವೂ ಸಹ ವಿಕಿರಣ ಹೊರಸೂಸಲು ಪ್ರಾರಂಭಿಸುತ್ತವೆ) ಮುಂತಾದುವುಗಳಿಂದ ಬಿಡುಗಡೆ ಹೊಂದಲು ಪೂರ್ವ ಮತ್ತು ಪಶ್ಚಿಮ ಜರ್ಮನಿ, ಅಮೆರಿಕ ಮುಂತಾದ ದೇಶಗಳು ಹಳೆ ಗಣಿಗಳಲ್ಲಿ, ಸಮುದ್ರಗಳಲ್ಲಿ ಎಸೆದು ಬಿಡುತ್ತಿದ್ದರು. ಆದರೆ ಸಮುದ್ರಗಳಲ್ಲಿ ಜೀವರಾಶಿಗಾಗುವ ಅಪಾರ ಹಾನಿಯಿಂದಾಗಿ ಸಧ್ಯಕ್ಕೆ ಅದನ್ನು ನಿಲ್ಲಿಸಲಾಗಿದೆ.

          ಈ ವಿಕಿರಣ ಸೂಸುವ ಭಸ್ಮ ಮುಂತಾದ 'ಕಸʼವನ್ನು ಹೇಗೆ ಸುರಕ್ಷಿತವಾಗಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ಯಾರೂ ಸಮರ್ಪಕವಾಗಿ ಉತ್ತರ ಹುಡುಕಿಲ್ಲ.

          ಅಣುಸ್ಥಾವರಗಳ 'ಕಸ'ವನ್ನು ಮುನಿಸಿಪಾಲಿಟಿ ಕಸದ ಹಾಗೆ ಎಲ್ಲೆಂದರಲ್ಲಿ ಎಸೆಯುವುದು ಸಾಧ್ಯವಿಲ್ಲ, ಏಕೆಂದರೆ ಅವುಗಳಿಂದ ಅಪಾಯಕಾರಿ ವಿಕಿರಣಗಳು ಸುಮಾರು 1,00,000 ವರ್ಷಗಳವರೆಗೂ ಹೊರಸೂಸುತ್ತಿರುತ್ತವೆ! ಬಾಬಾ ಅಣು ಸಂಶೋಧನಾ ಕೇಂದ್ರದವರು ತಾರಾಪುರ ಅಣುಸ್ಥಾವರದ ಬಳಿ ಒಂದು ತಾತ್ಕಾಲಿಕ ಭೂಗತ ʻಅಣುಶವಾಗಾರʼವನ್ನು ನಿರ್ಮಿಸಿದ್ದಾರೆ. ದಪ್ಪ ಕಾಂಕ್ರಿಟ್ ಗೋಡೆ ಮತ್ತು ಉಕ್ಕಿನ ಹೊದಿಕೆಯಿಂದ ನಿರ್ಮಿಸಲಾಗಿರುವ 'ಶವಾಗಾರʼವನ್ನು ನಿರ್ಮಿಸಲು ಎಂಟು ವರ್ಷ ಸಮಯ ತೆಗೆದುಕೊಂಡಿದೆ ಮತ್ತು ತಗುಲಿರುವ ವೆಚ್ಚ 700 ಕೋಟಿಗಳು.  ಆ ʻಶವಾಗಾರ'ಗಳಲ್ಲಿ ಅಣುಸ್ಥಾವರಗಳ ಕಸವನ್ನು ತುಂಬಿಡಲಾಗುತ್ತದೆ. ಯಾರೂ ನರಪಿಳ್ಳೆಗಳು ಹತ್ತಿರ ಬರದಂತೆ ಹಗಲು ರಾತ್ರಿ ಕಾವಲು ಕಾಯುತ್ತಾರೆ. ಆ ಕಸ ಉಂಟುಮಾಡುವ ಶಾಖವನ್ನು ತಣ್ಣಗಾಗಿಸಲು ದಿನಕ್ಕೆರಡು ಗಂಟೆ ತಣ್ಣನೆ ಗಾಳಿ ಹಾಯಿಸುತ್ತಾರೆ. ಅಲ್ಲಿಂದ ಆ ಕಸವನ್ನು ಸಾಗಿಸಿ ಕೋಲಾರದ ಚಿನ್ನದ ಗಣಿಗಳಲ್ಲಿ ಶಾಶ್ವತವಾಗಿ ಮುಚ್ಚಿಬಿಡಬೇಕೇದು ವಿಜ್ಞಾನಿಗಳು ಅಲೋಚಿಸುತ್ತಿದ್ದಾರೆ. ಅದೇ ಸರಹದ ತಾತ್ಕಾಲಿಕ ಅಣು ಶವಾಗಾರಗಳನ್ನು ಟ್ರಾಂಬೆ, ಕಲ್ಪಕಂ ಮತ್ತು ಮದರಾಸಿನಲ್ಲಿಯೂ ಸಹ ನಿರ್ಮಿಸಲು ನಮ್ಮ ವಿಜ್ಞಾನಿಗಳು ಆಲೋಚಿಸುತ್ತಿದ್ದಾರೆ. ಕೋಲಾರದ ಚಿನ್ನದ ಗಣಿಗಳು  'ಕಸದ ತೊಟ್ಟಿʼಗಳಾಗಲಿವೆ, ಅಷ್ಟೇ ಅಲ್ಲ ʻಮೃತ್ಯುಕೂಪ'ಗಳೂ ಸಹ ಆಗಲಿವೆ.








ನನ್ನ ಮತ್ತೊಂದು ಲೇಖನ: ಅಣ್ವಸ್ತ್ರ ಯುದ್ಧ - ಮನುಕುಲದ ಚರಮಗೀತೆ? ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ:

https://antaragange.blogspot.com/2019/02/blog-post_18.html

ಬುಧವಾರ, ನವೆಂಬರ್ 01, 2023

ಲಕ್ಷ್ಮೀಪತಿ ಕೋಲಾರರವರಿಗೆ ರಾಜ್ಯೋತ್ಸವ ಪ್ರಶಸ್ತಿ (ಸಾಹಿತ್ಯ) ಅಭಿನಂದನೆಗಳು

 

ಗೆಳೆಯ ಲಕ್ಷ್ಮೀಪತಿ ಕೋಲಾರರವರಿಗೆ ರಾಜ್ಯೋತ್ಸವ ಪ್ರಶಸ್ತಿ (ಸಾಹಿತ್ಯ) ಲಭಿಸಿದೆ. ಅಭಿನಂದನೆಗಳು. ಈ ಹಿಂದೆ ನಾನು ಅವರ ಎರಡು ಅಧ್ಭುತ ಕವನ ಸಂಕಲನಗಳನ್ನು- "ನೀಲಿ ತತ್ತಿ" ಹಾಗೂ "ನವಿಲು ಕಿನ್ನರಿ" ಉಚಿತ ಡೌನ್ಲೋಡ್ ಗೆ ಅಪ್ಲೋಡ್ ಮಾಡಿದ್ದೆ. ಈಗಾಗಲೇ ಸಾವಿರಾರು ಜನ ಡೌನ್ಲೋಡ್ ಮಾಡಿಕೊಂಡಿದ್ದಾರೆ. ನೀವೂ ಸಹ ಏಕೆ ಡೌನ್ಲೋಡ್ ಮಾಡಿಕೊಳ್ಳ ಬಾರದು?


ಲಕ್ಷ್ಮೀಪತಿ ಕೋಲಾರರವರ ನವಿಲು ಕಿನ್ನರಿ- ಉಚಿತ ಡೌನ್‌ಲೋಡ್‌ಗೆ ಲಭ್ಯ

ಇದು ಲಕ್ಷ್ಮೀಪತಿ ಅವರ ಚೊಚ್ಚಲು ಕೃತಿ ಎಂಬ ರಿಯಾಯಿತಿ ಈ ಕೃತಿಗೆ ಬೇಕಿಲ್ಲ. ಈ ಕವಿತೆಗಳಿಗೆ ಒಂದು ರೀತಿಯ ಸ್ವಯಂದೀಪಕತೆ ಇದೆ. ಹರೆಯದ ಈ ಕವಿಗೆ ಅನುಭವವನ್ನು ಹೇಗಾದರೂ ಉಡಾಯಸಿಬಿಡಬೇಕೆಂಬ ಹುಸಿ ಹುರುಪಿಲ್ಲ; ಏನು ಕಂಡರೂ ಬರ್ಫದ ಹಾಗಿದ್ದೇವೆ ಎಂದುಕೊಳ್ಳುವ ನಿರಂತರ ವ್ಯಸನಿಗಳ ಸಿನಿಕತನವಿಲ್ಲ; ಸಿದ್ಧಾಂತಗಳನ್ನು ಘೋಷಣೆ, ಹೇಳಿಕೆಗಳ ಮಟ್ಟದಲ್ಲಿ ಮಾತ್ರ ಗ್ರಹಿಸುವವರ ಪೋಸುದಾರಿಕೆ ಇಲ್ಲ. ಬದಲಾಗಿ ಮೊದಲು ಮಬ್ಬು ಮಬ್ಬಾಗಿ ಕಂಡರೂ ಗಮನವಿಟ್ಟು ಓದಿದಾಗ ಅಂತರ್ಜಲದಂತೆ ದುಮುದುಮಿಸುವ ಭಾವಗೀತಾತ್ಮಕತೆ ಈ ಕವಿತೆಗಳ ಕೆಳಗೆ ಹರಿಯುವುದು ಕಾಣಿಸುತ್ತದೆ. ಇಲ್ಲಿಯ ಕಿರುಗವಿತೆಗಳು ಮತ್ತು ನೀಳ್ಗವಿತೆಗಳೆರಡರಲ್ಲೂ ಎಲ್ಲ ಅನುಭವವನ್ನು ಒಂದು ಉತ್ಕಟ ಭಾವಕ್ಷಣದ ಪರಿಧಿಯೊಳಗೆ ತರುವ ಪ್ರಯತ್ನ ಜರುಗಿದೆ. `ರಂಜಾನಿನ ಕೊನೆಯ ರಾತ್ರಿ', `ಮಕ್ಕಲಿ ಘೊಶಾಲ್', `ಬಾವಲಿ' ಮೊದಲಾದ ಕವಿತೆಗಳನ್ನು ಮೊದಲ ಸಂಕಲನದಲ್ಲೇ ಬರೆದಿರುವ ಕವಿಗೆ ಯಾರ ಶಿಫಾರಸೂ ಬೇಕಿಲ್ಲ. -ಎಚ್.ಎಸ್.ಶಿವಪ್ರಕಾಶ

ಲಕ್ಷ್ಮೀಪತಿ ಕೋಲಾರ ಅವರ ನವಿಲು ಕಿನ್ನರಿ ಕವನ ಸಂಕಲನ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:

http://www.archive.org/download/NaviluKinnari-KannadaPoetry/NaviluKinnari_lakshmipathyKolara.pdf

ಲಕ್ಷ್ಮೀಪತಿ ಕೋಲಾರರವರ ನೀಲಿ ತತ್ತಿ- ಉಚಿತ ಡೌನ್‌ಲೋಡ್‌ಗೆ ಲಭ್ಯ

`.........ರು ನಿಮ್ಮ `ನವಿಲು ಕಿನ್ನರಿ' ಕವನ ಸಂಗ್ರಹ ಓದಲೆಂದು ಕೊಟ್ಟರು. ಅವಸರದಲ್ಲಿ ಕೆಲವು ಪದ್ಯಗಳನ್ನು ಓದುತ್ತಿರುವಾಗ ನನಗಾದ ಸಂತೋಷವನ್ನು ಹಂಚಿಕೊಳ್ಳಲು ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮದು ನೈಜವಾದ ಒಂದು ಹೊಸದನಿ ಕನ್ನಡದಲ್ಲಿ. ಮುಖಹೀನವಾಗುತ್ತಿರುವ ಕನ್ನಡದ ಕವನಗಳಿಂದ ಬೇಸತ್ತ ನನಗೆ ನಿಮ್ಮ 1989ರ ಸಂಕಲನವನ್ನು ಗಮನಿಸಲಿಲ್ಲವೆಂದು ಪಶ್ಚಾತ್ತಾಪವಾಯಿತು. ನಿಮ್ಮಿಂದ ಬಹಳ ಘನವಾದ ರಚನೆಗಳು ಬರುತ್ತಾವೆ ಎಂದು ತಿಳಿದಿದ್ದೇನೆ. ಭಾಷೆ, ಲಯ, ನಿಮ್ಮ ವೈಚಾರಿಕತೆ- ಎಲ್ಲವೂ ಗಾಢವಾದ ಅನುಭವವನ್ನು ಕಟ್ಟಬಲ್ಲ ದ್ರವ್ಯಗಳಾಗಿವೆ. ಯಾಕೆಂದರೆ ಅವು ನಿಮ್ಮ ಉತ್ಕಟ ಭಾವ ಕ್ಷಣದ ಅಂಶಗಳಾಗಿವೆ.....'

-ಯು.ಆರ್.ಅನಂತಮೂರ್ತಿ

ಲಕ್ಷ್ಮೀಪತಿ ಕೋಲಾರ ಅವರ ನೀಲಿ ತತ್ತಿ ಕವನ ಸಂಕಲನ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ:


https://archive.org/download/NeeliThatthi/NeeliTatti.pdf


ಮಂಗಳವಾರ, ಸೆಪ್ಟೆಂಬರ್ 26, 2023

ಕಾವೇರಿ ನೀರಿಗಾಗಿ ಹೋರಾಟ - ನನ್ನ ವ್ಯಂಗ್ಯಚಿತ್ರಗಳು

ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದೆ. ಇದೇ ಸಮಯದಲ್ಲಿ ಸರ್ಕಾರ ಹೆಚ್ಚು ಮದ್ಯದ ಅಂಗಡಿಗಳಿಗೆ ಪರವಾನಗಿ ನೀಡುತ್ತಿದೆ.




 

ಬುಧವಾರ, ಸೆಪ್ಟೆಂಬರ್ 06, 2023

ಪುಸ್ತಕದಿಂದ ಬದುಕು ಬದಲಾವಣೆ ಸಾಧ್ಯ!



       

 ನಾನು ಪ್ರತಿದಿನ ದಿನಪತ್ರಿಕೆಗಳನ್ನು ಓದುವಾಗ ಕೆಲವು ಸುದ್ದಿ, ಶೀರ್ಷಿಕೆಗಳನ್ನು ಗಮನಿಸುತ್ತಿರುತ್ತೇನೆ, ಏಕೆಂದರೆ ನಾನು ಒಬ್ಬ ವ್ಯಂಗ್ಯಚಿತ್ರಕಾರನೂ ಆಗಿದ್ದು ಬಹಳಷ್ಟು ಸಾರಿ ಕೆಲವು ಶೀರ್ಷಿಕೆಗಳು ವ್ಯಂಗ್ಯಚಿತ್ರ ವಸ್ತುಗಳಾಗಬಲ್ಲವು. ಕೆಲದಿನಗಳ ಹಿಂದೆ ಅಂತಹುದೇ ಶೀರ್ಷಿಕೆಯೊಂದು ಕಣ್ಣಿಗೆ ಬಿತ್ತು - `ಪುಸ್ತಕದಿಂದ ಬದುಕು ಬದಲಾವಣೆ ಸಾಧ್ಯ'. ಪತ್ರಿಕೆಯ ಸುದ್ದಿ ಸಂಪಾದಕರಿಗೆ ಸ್ಥಳಾವಕಾಶದ ಕೊರತೆಯಿಂದಲೋ ಏನೋ `ಪುಸ್ತಕಗಳು ಓದುಗರ ಬದುಕನ್ನು ಬದಲಿಸಬಲ್ಲವು' ಎನ್ನುವ ಬದಲು ಕೇವಲ `ಪುಸ್ತಕದಿಂದ ಬದುಕು ಬದಲಾವಣೆ ಸಾಧ್ಯ' ಎಂದು ಶೀರ್ಷಿಕೆ ನೀಡಿದ್ದರು. ಸುದ್ದಿಯ ವಿವರವೂ ಸಹ ಅದು ಓದುಗರನ್ನು ಕುರಿತೇ ಆಗಿದ್ದಿತು. ಆದರೂ ನಾನು ಶೀರ್ಷಿಕೆಯನ್ನು ಬಳಸಿಕೊಂಡು ಒಬ್ಬ ಹಳೇ ಪುಸ್ತಕ ಮಾರಾಟಗಾರನ ಅಥವಾ ಮನೆಯ ಮುಂದೆ ಸೈಕಲ್ಲಿನಲ್ಲಿ `ಹಳೇ ಪಾತ್ರೆ, ಹಳೇ ಪುಸ್ತಕ' ಎಂದು ಕೂಗುತ್ತಾ ಬರುವ ಬಡ ವ್ಯಾಪಾರನ ಬದುಕನ್ನು ಪುಸ್ತಕಗಳು ಬದಲಿಸಿವೆಯೇ ಎನ್ನುವ ಕುರಿತು ವ್ಯಂಗ್ಯಚಿತ್ರವೊAದನ್ನು ಬರೆಯಲು ಆಲೋಚಿಸಿದೆ. ಆದರೆ ತಕ್ಷಣ ಮನಸ್ಸು ಚುರುಕಾಗತೊಡಗಿತು, ನಾನೊಬ್ಬ ಬರಹಗಾರನೂ ಆಗಿರುವುದರಿಂದ ನನ್ನ ಅನುಭವದಲ್ಲಿ ಪುಸ್ತಕಗಳು ಪ್ರಕಾಶಕರ, ಪುಸ್ತಕ ಮಾರಾಟಗಾರರ/ಮಳಿಗೆಗಳ, ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಅಧಿಕಾರಿಗಳ, ಗ್ರಂಥಪಾಲಕರ ಬದುಕುಗಳನ್ನು ಮಹತ್ತರವಾಗಿ ಪುಸ್ತಕಗಳು ಬದಲಿಸಿರುವುದನ್ನು ಕಂಡಿರುವುದರಿA ಅವುಗಳ ಕುರಿತೂ ವ್ಯಂಗ್ಯಚಿತ್ರಗಳನ್ನು ಬರೆಯಬೇಕೆನ್ನಿಸಿತು. ಲೇಖಕರ ಬದುಕು ಸಹ ಬದಲಾಗಿಲ್ಲವೆಂದಲ್ಲ, ಅವರಿಗೆ ಹೆಸರು, ಪ್ರಚಾರ, ಅವರ ವಿಚಾರಗಳನ್ನು ಸಮಾಜ ಅರಿಯುವಂತಹ ರೀತಿಯಲ್ಲಿ ಬದಲಾಗಿದೆ ನಿಜ, ಆದರೆ ಅವರ ಬದುಕು ಪುಸ್ತಕಗಳ ಮೂಲಕ ಆರ್ಥಿಕವಾಗಿ ಅವರ ಬದುಕು ಖಂಡಿತಾ ಬದಲಾಗಿಲ್ಲ. ಬದುಕು ಆರ್ಥಿಕವಾಗಿ ಬದಲಾಗಿದೆಯೆಂದರೆ ಅದು ಲೇಖಕರನ್ನು ಹೊರತುಪಡಿಸಿ ಇತರ ಪುಸ್ತಕ ಕ್ಷೇತ್ರದಲ್ಲಿ ತೊಡಗಿರುವ ಎಲ್ಲರದೂ ಆಗಿದೆ. ವ್ಯಂಗ್ಯಚಿತ್ರಗಳ ಜೊತೆಗೆ ನನ್ನ ಅನುಭವಗಳನ್ನೂ ಇಲ್ಲಿ ಬರೆಯಬೇಕೆನ್ನಿಸಿತು.


       ನನ್ನ ಮೊದಲ ಪುಸ್ತಕ 1980 ದಶಕದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಕಟಿಸಿತು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ಭಾವಿಸಿ ನಾನೇನೂ ಕೇಳಲಿಲ್ಲ. ಪರಿಷತ್ತಿನವರೇ ಶೇ.10 ಸಂಭಾವನೆಯನ್ನು ಪಾವತಿಸಿದರು. ಪುಸ್ತಕ ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಸರಬರಾಜು ಮಾಡುವ ಯೋಜನೆಯೊಂದಕ್ಕೆ ಆಯ್ಕೆಯಾಗಿ ಸಾವಿರಾರು ಪ್ರತಿಗಳು ಮುದ್ರಣವಾದವು. ಮೊದಲ ಮರು ಮುದ್ರಣಕ್ಕೆ ಶೇ.5 ಸಂಭಾವನೆ ಪಡೆದದ್ದೂ ನೆನಪಿದೆ.


       ನನ್ನ ಮನೋವೈಜ್ಞಾನಿಕ ಲೇಖನಗಳ ನನ್ನ ಎರಡನೇ ಕೃತಿಯನ್ನು (1980 ದಶಕದಲ್ಲಿ) ನಾನೇ ಪ್ರಕಟಿಸಲು ನಿರ್ಧರಿಸಿದೆ. ನಾನಾಗ ಕೊಡಗಿನ ವಿರಾಜಪೇಟೆಯಲ್ಲಿ ಬ್ಯಾಂಕ್ ಅಧಿಕಾರಿಯಾಗಿದ್ದು ಅಲ್ಲಿ ಗೆಳೆಯರ ಸಾಹಿತ್ಯ ಬಳಗವೊಂದು ಸಹ ಇತ್ತು. ಒಂದು ದಿನ ಗೆಳೆಯರೊಬ್ಬರು ಆಗ ಸಾಹಿತಿಯಾಗಿದ್ದ ಹಾಗೂ ನಂತರ ಕನ್ನಡ ಸಿನೆಮಾ ನಿರ್ದೇಶಕರಾದವರ ಕಥಾ ಸಂಕಲನದ `ಪ್ರಕಟಣಾಪೂರ್ವ ರಿಯಾಯಿತಿ ಕೂಪನ್' ಹಿಡಿದು ಬಂದು ನಮಗೆಲ್ಲಾ ಪುಸ್ತಕ ಕೈಗೆ ದೊರೆಯುವ ಮೊದಲೇ ರಿಯಾಯಿತಿಯಲ್ಲಿ ಕೂಪನ್ ನೀಡಿ ಹಣ ಪಡೆದರು. ಕೆಲವು ತಿಂಗಳುಗಳ ನಂತರ ಪುಸ್ತಕ ಕೈ ಸೇರಿತು. ನನ್ನ ಪುಸ್ತಕ ನಾನೇ ಪ್ರಕಟಿಸಬೇಕೆಂದು ನಿರ್ಧರಿಸಿದ ಮೇಲೆ ನಾನೂ ರೀತಿ `ಪ್ರಕಟಣಾಪೂರ್ವ ರಿಯಾಯಿತಿ ಕೂಪನ್' ಮಾಡಿ ಏಕೆ ಗೆಳೆಯರಿಗೆ ಮಾರಾಟಮಾಡಬಾರದೆಂದು ಆಲೋಚಿಸಿ ಕೂಪನ್ಗಳನ್ನು ಮುದ್ರಿಸಿ ಗೆಳೆಯರಿಗೆ ನೀಡಿದೆ. ಒಂದಷ್ಟು ಗೆಳೆಯರು ನನಗಾಗಿ (ಬಹುಶಃ ಬೈದುಕೊಂಡು) ಮಾರಾಟಮಾಡಿದರು, ನಾನು ಒಂದಷ್ಟು ಮಾರಾಟ ಮಾಡಿದೆ. ಆದರೆ ಮುದ್ರಣದ ಹಣವೂ ಬಂದಿರಲಿಲ್ಲ. ಆಗ ಕಂಪ್ಯೂಟರ್, ಇಮೇಲ್ ಇಲ್ಲದಿದ್ದುದರಿಂದ ಬೆಂಗಳೂರಿನ ಇಳಾ ಮುದ್ರಣಕ್ಕೆ ನಾನು ಹಾಗೂ ಗೆಳೆಯ ಲಕ್ಷ್ಮೀಪತಿ ಕೋಲಾರ ಬಹಳಷ್ಟು ಸಾರಿ ಓಡಾಡಿ ಕೊನೆಗೂ ಪುಸ್ತಕ ಮುದ್ರಣವಾಯಿತು. ಕೂಪನ್ ಖರೀದಿಸಿದವರಿಗೆಲ್ಲಾ ಪ್ರತಿಗಳನ್ನು ಕಳುಹಿಸಿದೆ, ಒಂದಷ್ಟು ಗೆಳೆಯರಿಗೆ `ಗೌರವ ಪ್ರತಿ' ನೀಡಿದೆ. ಒಂದಷ್ಟು ಪುಸ್ತಕ ಮಳಿಗೆಗಳಿಗೆ ನೀಡಲು ಗೆಳೆಯರು ಸೂಚಿಸಿದರು.

       ಆಗ ಲಂಕೇಶ್ ಪತ್ರಿಕೆಯಲ್ಲಿ ಇದ್ದವರೊಬ್ಬರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಅಂಗಡಿಯೊAದನ್ನು ಇರಿಸಿಕೊಂಡಿದ್ದು ಅದರಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳ ಜೊತೆಗೆ ಪುಸ್ತಕಗಳನ್ನೂ ಮಾರುತ್ತಿದ್ದರು. ಅವರಿಗೆ ಒಂದಷ್ಟು ಪ್ರತಿಗಳನ್ನು ನೀಡಿದೆ. ಮಾರಾಟವಾದ ಮೇಲೆ ಹಣ ಕೊಡುತ್ತೇನೆಂದರು.


       ಮೆಜೆಸ್ಟಿಕ್ನಲ್ಲಿದ್ದ ಸಪ್ನಾ ಮಳಿಗೆಗೆ ಹೋದೆ. ಕನ್ನಡ ಪುಸ್ತಕಗಳ ಮಾರಾಟದ ಉಸ್ತುವಾರಿ ವಹಿಸಿದ್ದ ಗೌಡರ ಬಳಿ ಕಳುಹಿಸಿದರು. ಅವರು ಉದಾಸೀನದಿಂದ ನೋಡಿ, ಪರ್ಸೆಂಟೇಜ್ ಲೆಕ್ಕ ಹಾಕಿ `ಆಯ್ತು ಇಟ್ಟೋಗಿ, ಮೂರು ತಿಂಗಳಾದ ಮೇಲೆ ಬನ್ನಿ. ಮಾರಾಟವಾಗಿದ್ದರೆ ಹಣ ಕೊಡುತ್ತೇವೆ' ಎಂದರು.

       ಹಾಗೆಯೇ ನವಕರ್ನಾಟಕ ಮಳಿಗೆಗೆ ಹೋದೆ. ಉಡುಪರ ಬಳಿ ಕಳುಹಿಸಿದರು. ಅವರು ನನ್ನ ಪುಸ್ತಕದ ಪುಟ ತಿರುಗಿಸಿ ನೋಡಿ ನನ್ನ ಬಗ್ಗೆ ವಿಚಾರಿಸಿದರು. `ಶೇ.50ರಂತೆ ನಗದು ಈಗಲೇ ಕೊಟ್ಟುಬಿಡುತ್ತೇನೆ. ಹತ್ತು ಪ್ರತಿ ಕೊಡಿ. ಅವು ಮಾರಾಟವಾದರೆ ನಿಮಗೆ ಹೆಚ್ಚಿನ ಪ್ರತಿ ಕಳುಹಿಸುವಂತೆ ಪತ್ರ ಬರೆಯುತ್ತೇನೆ' ಎಂದರು. ನನಗೆ ಲಾಟರಿ ಹೊಡೆದಷ್ಟು ಖುಷಿಯಾಯಿತು. `ಬೇಗ ಬೇಗ ಲಾಟರಿ, ಬೇಗ ಬೇಗ ಬಹುಮಾನ' ಎಂಬAತೆ. ನವಕರ್ನಾಟಕದ ಅನುಭವದಿಂದ ನನಗೆ ಪುಸ್ತಕ ಮಾರಾಟ ಎಷ್ಟು ಸುಲಭ ಎನ್ನಿಸಿತು. ಹಣ ಎಣಿಸಿಕೊಂಡು ಹೊರಟೆ.

       ಅದಾದ ನಂತರ ಮೆಜೆಸ್ಟಿಕ್ ಬಸ್ ಸ್ಟಾö್ಯಂಡ್ ಹಾಗೂ ಸಪ್ನಾಗೆ ನನ್ನ ಓಡಾಟ ಪ್ರಾರಂಭವಾಯಿತು. ಅದೆಷ್ಟು ಬಾರಿ ಹೋಗಿದ್ದೇನೆಯೋ ತಿಳಿದಿಲ್ಲ. ಪ್ರತಿಗಳು ಎಲ್ಲವೂ ಮಾರಾಟವಾಗಿದ್ದರೂ ಹಣ ಕೊಡಲು `ಇಂದು ಬಾ, ನಾಳೆ ಬಾ' ನಡೆಯಿತು. `ಲೇಖಕರೇ ಪ್ರಕಾಶಕರಾಗಿ ಪುಸ್ತಕದ ಹಣ ದಬಾಯಿಸಿ ಕೇಳುವುದು ಸೌಜನ್ಯವಲ್ಲ' ಎಂದೆನಿಸಿ ಗೋಗರದೇ ಕೇಳುತ್ತಿದ್ದೆ. ಕೊನೆಗೂ ಒಂದು ದಿನ ಹಣ ದೊರಕಿತು. ಲೇಖಕರೇ ಪ್ರಕಾಶಕರಾಗಿ ಪುಸ್ತಕ ಮಾರಾಟ ಮಾಡುವುದು ಎಷ್ಟು ಕಷ್ಟ ಎಂದು ಆಗ ನನಗನ್ನಿಸಿತು.

       ನಾನು ಬೆಂಗಳೂರಿಗೆ ಬಂದನAತರ ನಾನು ಸೂಫಿ ಕತೆಗಳು ಹಾಗೂ ಸೂಫಿಸಂ ಬರೆಯುತ್ತಿದ್ದೇನೆ ಎಂದಾಗ ಗೆಳೆಯ ಡಾ.ಕೆ.ಪುಟ್ಟಸ್ವಾಮಿ ತಾವೇ ಅದನ್ನು ಪ್ರಕಟಿಸುವುದಾಗಿ ತಿಳಿಸಿದರು ಅದರಂತೆ ಪ್ರಕಟಿಸಿದರು ಹಾಗೂ ನಾನು ಕೇಳುವ ಮೊದಲೇ ಶೇ.10 ಸಂಭಾವನೆಯನ್ನೂ ಸಹ ನೀಡಿದರು.

       ಬೆಂಗಳೂರಿನ ಪ್ರಕಾಶಕ ಮಿತ್ರರೊಬ್ಬರು ನನ್ನ ನಾಲ್ಕು ಹಾಗೂ ಗೆಳೆಯರೊಬ್ಬರÀ ಮೂರು ಪುಸ್ತಕಗಳನ್ನು ಒಮ್ಮೆಲೇ ಪ್ರಕಟಿಸಿ ನಯನ ಸಭಾಂಗಣದಲ್ಲಿ ಒಟ್ಟಿಗೇ ಬಿಡುಗಡೆ ಮಾಡಿದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಪ್ರಕಾಶಕರನ್ನು ಯಾವುದೇ ಸಂಭಾವನೆ ಕೇಳಿರಲಿಲ್ಲ. ಪ್ರಕಾಶಕರು ತಲಾ ಇಪ್ಪತ್ತೆöÊದು ಪ್ರತಿಗಳನ್ನು ಅಲ್ಲಿಯೇ ಕೊಟ್ಟುಬಿಟ್ಟರು. ಅದಾದನಂತರ ನನ್ನ ಕೃತಿಗಳ ಕುರಿತು ಯಾವ ಪತ್ರಿಕೆಯಲ್ಲಿಯೂ ಸಾದರ ಸ್ವೀಕಾರವಾಗಲಿ, ಪುಸ್ತಕ ಪರಿಚಯವಾಗಲಿ ಬರಲೇ ಇಲ್ಲ. ಪತ್ರಿಕೆಗಳಿಗೆ ಕಳುಹಿಸಿದ್ದಾರೆಯೇ ಇಲ್ಲವೇ ಎಂಬುದನ್ನು ಪ್ರಕಾಶಕರನ್ನು ಕೇಳುವುದು ಸೌಜನ್ಯವಲ್ಲ ಎಂದು ನಾನು ಕೇಳಲೇ ಇಲ್ಲ. ಅವು ಮಾರಾಟಕ್ಕೆ ಎಲ್ಲಿಯೂ ನೀಡಿಲ್ಲ ಎಂಬುದೂ ಸಹ ತಿಳಿಯಿತು. ನನಗೆ ನೀಡಿದ್ದ `ಗೌರವ ಪ್ರತಿ'ಗಳನ್ನೇ ಗೆಳೆಯರಿಗೆ, ಸಂಬAಧಿಕರಿಗೆ ಹಂಚಿದೆ.

       ಇದರ ಮಧ್ಯೆ ಪ್ರಕಾಶಕರು ಯಾವುದೋ `ವ್ಯವಹಾರ'ದಲ್ಲಿ ಸಂಕಟದಲ್ಲಿ ಸಿಲುಕಿ ಪೋಲೀಸು ಕೇಸು ಆಗುವುದರಲ್ಲಿದೆ ಎಂಬುದು ತಿಳಿಯಿತು. ಆಗ ಒಂದು ದಿನ ನನಗೆ ಫೋನ್ ಕರೆ ಬಂತು, `ಸಾರ್ ನಿಮ್ಮ ಪುಸ್ತಕಗಳಿಗೆ ಸಂಭಾವನೆ ಕೊಟ್ಟಿರಲಿಲ್ಲ. ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ತಿಳಿಸಿ, ಈಗಲೇ ಜಮಾ ಮಾಡಿಬಿಡುತ್ತೇನೆ' ಎಂದರು ಪ್ರಕಾಶಕರು. ನನ್ನ ಕಿವಿಗಳನ್ನು ನಾನೇ ನಂಬಲಿಲ್ಲ. ಯಾವುದೋ ವ್ಯವಹಾರದ ಸಂಕಷ್ಟದ ಕಾರಣದಿಂದಾಗಿ ನನ್ನ ಕೃತಿಗಳಿಗೆ ನನಗೆ ಸಂಭಾವನೆ ಸಿಗುವುದು ಸಂತೋಷವಲ್ಲವೆ? ಪುಸ್ತಕಗಳು ಪ್ರಕಾಶಕರ ಬದುಕನ್ನು ಮಾತ್ರವಲ್ಲ ಲೇಖಕರ ಆರ್ಥಿಕ ಬದುಕನ್ನೂ ಬದಲಿಸಬಲ್ಲವು (ಆಗ ನಾನು ಆರ್ಥಿಕ ಸಂಕಷ್ಟದಲ್ಲಿದ್ದೆ) ಎನ್ನಿಸಿತು. ಹಣವೂ ಜಮೆ ಆಯಿತು.

       ಗೌರಿ ಲಂಕೇಶ್ ನನ್ನ ಎರಡು ಕೃತಿಗಳನ್ನು ಪ್ರಕಟಿಸಿದರು. ಅದರಲ್ಲಿ ಒಂದನ್ನು ಅವರೇ ಹೇಳಿ ಬರೆಸಿದ್ದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ಆದರೂ ಅವರೇ ಕರೆಮಾಡಿ `ನೋಡಪ್ಪಾ, ಹತ್ತು ಪರ್ಸೆಂಟ್ ಕೊಡೋಕೆ ಆಗಲ್ಲ, ಐದು ಪರ್ಸೆಂಟ್ ಕೊಡ್ತೀನಿ' ಎಂದರು. ನನಗೆ ಬೇಸರವಾಗಲಿಲ್ಲ, ಸಂತೋಷವಾಯಿತು. ಪುಸ್ತಕ ಕುರಿತಂತೆ ` ಹಿಂದು' ಪತ್ರಿಕೆ ಹಾಗೂ ಇತರ ಕನ್ನಡ ಪತ್ರಿಕೆಗಳಲ್ಲಿಯೂ ಪರಿಚಯ ಪ್ರಕಟವಾಯಿತು. ಆದರೆ ಅವರ ಹತ್ಯೆಯ ನಂತರ ಅವರು ಪತ್ರಿಕೆ ನಡೆಸಲು ಹಣಕಾಸಿಗೆ ಎಷ್ಟು ಹೆಣಗಾಡುತ್ತಿದ್ದರು, ತಮ್ಮ ಇನ್ಷೂರೆನ್ಸ್ ಪಾಲಿಸಿಗಳನ್ನು ಸಹ ಸರೆಂಡರ್ ಮಾಡಿದ್ದರು ಎಂಬುದೆಲ್ಲಾ ತಿಳಿದಾಗ ನನಗೆ ಐದು ಪರ್ಸೆಂಟ್ ಸಹ ಪಡೆದುಕೊಂಡದ್ದು ನನ್ನಲ್ಲಿ ಪಾಪಪ್ರಜ್ಞೆ ಉಂಟುಮಾಡಿತ್ತು.

       ಬೆಂಗಳೂರಿನ ಮತ್ತೊಬ್ಬ ಪ್ರಕಾಶಕರು ನನ್ನ ಮಹಿಳಾ ಕಥನಗಳ ಕುರಿತ ಸಂಕಲನವನ್ನು ಪ್ರಕಟಿಸಿದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ಪ್ರಕಟವಾದ ಕೂಡಲೇ ಅವರು ಫೋನ್ ಮಾಡಿ, `ಸರ್ ನಿಮ್ಮ ನೂರು ಪ್ರತಿ ತೆಗೆದುಕೊಂಡು ಹೋಗಿ ಸಾರ್' ಎಂದರು. ಸಂಭಾವನೆಯ ವಿಷಯ ಮಾತನಾಡಲಿಲ್ಲ. ಆದರೆ ನನಗೆ ನೂರು ಪ್ರತಿ ನೀಡಿದ್ದು ಸಂಭಾವನೆಗೆ ಸಮಾನವಾದದ್ದು ಎನ್ನಿಸಿ ಸಂತೋಷವಾಯಿತು.

       ನೋಬೆಲ್ ಪ್ರಶಸ್ತಿ ವಿಜೇತರ ಕಥಾಸಂಕಲನವೊAದು ಪ್ರಕಟಿಸುವುದಾಗಿ ಪ್ರಕಾಶಕ ಮಿತ್ರರೊಬ್ಬರು ಕೇಳಿ ಪ್ರಕಟಿಸಿದರು. ಒಂದು ದಿನ ಮನೆಗೆ ಬಂದು ಅರವತ್ತು ಪ್ರತಿಗಳನ್ನು ನೀಡಿ ಪುನಃ ಪ್ರತಿಗಳನ್ನು ಬೇಕಾದಲ್ಲಿ ಕೇಳುವಂತೆ ತಿಳಿಸಿದರು. `ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ನಾನು ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಆಯ್ಕೆಯಾದಾಗ ನನ್ನ ಬಳಿ ನನ್ನದೇ ಪುಸ್ತಕಗಳು ಇಲ್ಲದಿದ್ದುದರಿಂದ ಅವರನ್ನು ಕೇಳಿದೆ. `ಕೊಡ್ತೀನಿ ಬಿಡಿ ಸಾರ್. ನಾನೇ ಅಲ್ಲಿಗೆ ಬಂದು ಮಳಿಗೆ ಹಾಕುತ್ತೇನೆ' ಎಂದರು. ಸಮ್ಮೇಳನದ ದಿನ ಹತ್ತಿರ ಬಂದಾಗ ಫೋನ್ ಮಾಡಿದೆ, ಫೋನ್ ತೆಗೆಯಲಿಲ್ಲ. ವಾಟ್ಸಪ್ನಲ್ಲಿ `ದಯವಿಟ್ಟು ಪುಸ್ತಕ ಕೊಡಿ' ಎಂದು ಕೋರಿಕೆ ಸಲ್ಲಿಸಿದೆ. ಉತ್ತರವಿಲ್ಲ. ಸಮ್ಮೇಳನ ಮುಗಿದುಹೋಯಿತು. `ಲೇಖಕರು ಪದೇ ಪದೇ ಕೇಳುವುದು ಸೌಜನ್ಯವಲ್ಲ' ಎಂದು ಸುಮ್ಮನಿದ್ದೇನೆ.

       ಪ್ರಕಾಶಕರ ಸಹವಾಸವೇ ಬೇಡ ಎಂದು ನನ್ನ `ವ್ಯಂಗ್ಯಚಿತ್ರ - ಚರಿತ್ರೆ' ಕೃತಿಯನ್ನು ನಾನೇ ಪ್ರಕಟಿಸಿದೆ. ಸಪ್ನಾ ಕಡೆಗೆ ಮಾರಾಟಕ್ಕೆ ತಲೆಯೂ ಹಾಕಲಿಲ್ಲ. ನವಕರ್ನಾಟಕಕ್ಕೆ ಇಪ್ಪತ್ತೆöÊದು ಪ್ರತಿಗಳನ್ನು ನೀಡಿದೆ. ಕೆಲವೇ ದಿನಗಳಲ್ಲಿ ಶಿವಕುಮಾರ್ ಫೋನ್ ಮಾಡಿ ಮತ್ತಷ್ಟು ಪ್ರತಿ ಕೊಡಿ ಎಂದು ಕರೆ ಮಾಡಿದರು. ಉಡುಪರವರು ತಕ್ಷಣವೇ ಮಾರಾಟದ ಹಣ ನೀಡಿದರು. `ಪ್ರಜಾವಾಣಿ', `ಹೊಸತು', `ಸಂವಾದ', `ಈದಿನ', ಸೋಷಿಯಲ್ ಮೀಡಿಯಾ ಮುಂತಾದೆಡೆ ಕೃತಿಯ ಪರಿಚಯ, ವಿಮರ್ಶೆ ಬಂದಮೇಲೆ ಬಹಳಷ್ಟು ಜನ ಕೃತಿ ಬೇಕೆಂದು ನನ್ನನ್ನು ನೇರ ಸಂಪರ್ಕಿಸಿದರು.

       ನನ್ನ ಕೃತಿ ತಮಿಳಿಗೂ ಅನುವಾದವಾಯಿತು. ಅನುವಾದಕರು, `ತಮಿಳು ಪ್ರಕಾಶಕರು ನಿಮಗೆ ಎರಡು ಮೂರು ಪ್ರತಿಗಳನ್ನು ನೀಡುತ್ತಾರೆ, ಅವರು ಮೂಲ ಲೇಖಕರಿಗೆ ಹೆಚ್ಚಿಗೆ ಹಣ ನೀಡುವುದಿಲ್ಲ, ಒಂದೆರಡು ಸಾವಿರ ಕೊಡಬಹುದು' ಎಂದು ಮೊದಲೇ ತಿಳಿಸಿದ್ದರು. ನಾನು, `ಹತ್ತು ಪ್ರತಿಗಳನ್ನಾದರೂ ಕೊಡಲು ಹೇಳಿ, ನನ್ನ ತಮಿಳು ಗೆಳೆಯರಿಗೆ ನಾನವುಗಳನ್ನು ಕೊಡಬಹುದು' ಎಂದು ಕೋರಿದ್ದೆ. ಪುಸ್ತಕ ಪ್ರಕಟವಾದ ಮೇಲೆ ಹತ್ತು ಪ್ರತಿಗಳು ತಲುಪಿದವು. ನನ್ನ ಕನ್ನಡದ ಪುಸ್ತಕದ ಬೆಲೆ ಇನ್ನೂರು ರೂ ಇದ್ದರೆ ತಮಿಳು ಪುಸ್ತಕದ ಬೆಲೆ ಮುನ್ನೂರು ಇತ್ತು. ನನಗೆ ಯಾವುದೇ ಸಂಭಾವನೆ ದೊರಕಲಿಲ್ಲ. `ಮೂಲ ಲೇಖಕರು ಸಂಭಾವನೆ ಕೇಳುವುದು ಸೌಜನ್ಯವಲ್ಲ' ಎಂದು ನಾನು ಕೇಳಲಿಲ್ಲ. ಪುಸ್ತಕ ಈಗಲೂ ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾದೆಡೆ ಈಗಲೂ ಮಾರಾಟದಲ್ಲಿದೆ.

       ಲೇಖಕರೇ ಪ್ರಕಾಶಕರಾದಾಗ ಕೆಲವು ಪುಸ್ತಕ ಮಾರಾಟಗಾರರು ಅವರನ್ನು ಬಹಳ ಉದಾಸೀನದಿಂದ ನೋಡುತ್ತಾರೆಂಬುದು ನನ್ನ ಭಾವನೆ. ಅವರಿಗೆ ಮಾರಾಟದ ಹಣಕೊಡದೇ ಅವರ ಪುಸ್ತಕ ಮಾರಾಟ ಮಾಡುವುದೇ ಲೇಖಕರಿಗೆ ತಾವು ಮಾಡುವ ಸಹಾಯ ಹಾಗೂ ಅದರ ಮೂಲಕ ಅವರ ಬದುಕು ಬದಲಾಯಿಸುತ್ತೇವೆ ಎಂದು ಅವರು ಭಾವಿಸಿರಬಹುದು. ನನ್ನ ಬಳಿ ಇದ್ದ ಇಪ್ಪತ್ತೆöÊದು ಪುಸ್ತಕಗಳನ್ನು ಬೆಂಗಳೂರಿನ ಗೆಳೆಯರ ಮಳಿಗೆಯೊಂದಕ್ಕೆ, ಹತ್ತು ಪ್ರತಿಗಳನ್ನು ನನ್ನೂರಿನ ಪುಸ್ತಕ ಮಳಿಗೆಯೊಂದಕ್ಕೆ, ಹತ್ತು ಪ್ರತಿಗಳನ್ನು ಬಿಜಾಪುರದ ಮಳಿಗೆಯೊಂದಕ್ಕೆ ಹಾಗೂ ಮೊದಲು ಅರಮನೆ ಮೈದಾನದಲ್ಲಿ ಪುಸ್ತಕ ಮೇಳ ನಡೆಯುತ್ತಿದ್ದಾಗ ನಾಡಿನ ಪ್ರಖ್ಯಾತ ಪ್ರಕಾಶಕರೊಬ್ಬರ ಮಳಿಗೆಗೆ ಒಂದಷ್ಟು ಪ್ರತಿಗಳನ್ನು ನೀಡಿದ್ದೆ. ಯಾರೊಬ್ಬರೂ ಹಣ ನೀಡಲಿಲ್ಲ. `ಲೇಖಕರು ಹಣ ನೇರವಾಗಿ ಕೇಳುವುದು ಸೌಜನ್ಯವಲ್ಲ' ಎಂದು ಅನ್ನಿಸಿ ಬೆಂಗಳೂರಿನ ಗೆಳೆಯರಿಗೆ ವಾಟ್ಸಪ್ ಮೂಲಕ ನೆನಪಿಸಿದೆ. `ಹೌದು ಕೊಡಬೇಕು, ಕೊಡುತ್ತೇನೆ' ಎಂದು ಉತ್ತರಿಸಿ ವರುಷಗಳೇ ಕಳೆದಿವೆ, ಹಣ ಮಾತ್ರ ಬಂದಿಲ್ಲ.

       ಪ್ರಕಾಶಕರ ಹಾಗೂ ಪುಸ್ತಕ ಮಾರಾಟಗಾರರ ವ್ಯವಹಾರದ ಬದುಕು ಸುಲಭ ಎಂದು ನಾನೇನೂ ಭಾವಿಸಿಲ್ಲ. ಆದರೂ ಪ್ರಕಾಶಕರು ಪ್ರಕಟಣೆಯ ನಂತರ ಸಂಭಾವನೆ ಕೊಡದಿದ್ದಲ್ಲಿ ಕನಿಷ್ಠ ನೂರು ಪ್ರತಿಗಳನ್ನು ನೀಡಬೇಕು ಹಾಗೂ ತಾವು ಎಷ್ಟು ಬಾರಿ ಮರುಮುದ್ರಿಸುತ್ತೇವೆ ಎಂಬುದನ್ನು ತಿಳಿಸಬೇಕು. ಪುಸ್ತಕ ಪ್ರಕಾಶಕರು ಹಾಗೂ ಮಾರಾಟಗಾರರು ಸಂಕಷ್ಟದಲ್ಲಿದ್ದರೂ ಪುಸ್ತಕಗಳು ಅವರ ಬದುಕು ಪಾಸಿಟೀವ್ ಆಗಿ ಬದಲಿಸುತ್ತಿವೆ.

       ಕೃಷಿ ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಮೂರು ವರ್ಷ ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಖರೀದಿ ಯೋಜನೆಯ ಪುಸ್ತಕ ಆಯ್ಕೆ ಸಮಿತಿಯ ಸದಸ್ಯನಾಗಿ ನಾನು ಮೂರು ವರ್ಷ ಕಾರ್ಯ ನಿರ್ವಹಿಸಿದ್ದೇನೆ. ಅಲ್ಲಿ ಪುಸ್ತಕಗಳು ಹಲವರ `ಬದುಕು ಬದಲಾಯಿಸುವುದನ್ನು' ಕಣ್ಣಾರೆ ಕಂಡಿದ್ದೇನೆ.

       ಪುಸ್ತಕಗಳು ಬದುಕು ಬದಲಾಯಿಸುವುದು ನಿಜ ಎಂಬುದು ಈಗ ನಿಮಗೂ ತಿಳಿಯಿತಲ್ಲವೇ?

***

ನನ್ನ ಈ ಬರಹಕ್ಕೆ ಗೆಳೆಯ ಎನ್.ಆರ್. ಬಾಲಸುಬ್ರಹ್ಮಣ್ಯ ಬರೆದಿರುವ ಪ್ರತಿಕ್ರಿಯೆ:

ಗೆಳೆಯ ಜೆ ಬಾಲಕೃಷ್ಣ ನನ್ನ ಅಪ್ತರಲ್ಲೊಬ್ಬರು. ಇಂದು ಅವರ ಫೇಸ್ ಬುಕ್ ಲೇಖನ ಓದಿ ನನಗೆ ಬೇಸರದ ಜೊತೆಗೆ ಅವರ ಮೇಲಿನ ಗೌರವವೂ ಹೆಚ್ಚಿತು. ಸಾಧಾರಣವಾಗಿ ಬಾಲಕೃಷ್ಣ ಅವರು ಎಲ್ಲಿಯೂ ಇಷ್ಟೊಂದು ವೈಯಕ್ತಿಕವಾಗಿ ಬರೆದದ್ದು ತೀರ ಹತ್ತಿರದಿಂದ ಬಲ್ಲನನಗೆ ನೆನಪಿಲ್ಲ


ಬಾಲಕೃಷ್ಣ ಅವರದು ಬಹುಮುಖ ಪ್ರತಿಭೆ. ಅವರು ವ್ಯಂಗ್ಯಚಿತ್ರಕಾರರು, ಅನುವಾದಕರು, ಕತೆಗಾರರು ಉತ್ತಮ ಹವ್ಯಾಸಗಳನ್ನು ಇನ್ನೂ ಉಳಿಸಿಕೊಂಡಿರುವವರು. ಅವರ ಬಳಿ ಸಮಯ ಕಳೆದವರಿಗಷ್ಟೇ ಗೊತ್ತು ಅವರ ವಿಸ್ತೃತ ಅನುಭವ, ಅವರ ಜೀವನ ದೃಷ್ಟಿಅವರ ಯಾವುದೇ ಕೆಲಸ ಅವರ ಶಿಸ್ತು, ಶ್ರದ್ಧೆ, ಜೀವನೋತ್ಸಾಹವನ್ನು ಪ್ರತಿಬಿಂಬಿಸುತ್ತೆ. ಅವರ ಯಾವುದೇ ಲೇಖನ ಗುಣಾತ್ಮಕವಾದದ್ದು ,ಮೌಲ್ಯವಾದ ಅಪರೂಪದ ವಿಷಯಗಳ ಮಾಹಿತಿ ಭಂಢಾರ. ಅವರು ದೇಶ ವಿದೇಶಗಳನ್ನು ಸುತ್ತಿರುವವರು. ತಮ್ಮ ಪ್ರವಾಸ ಕಥಾನುಭವವನ್ನು ಓದಿದವರಿಗೆ ಕೇಳಿದವರಿಗಷ್ಟೇ ಗೊತ್ತು ಅದರ ಸವಿ


ಇಂದಿನ ಲೇಖನ ಕೂಡ ಕೆಲವು ಪ್ರಸ್ತುತ ವಿಷಯಗಳತ್ತ  ಹೊಸ ಬೆಳಕು ಚೆಲ್ಲುತ್ತದೆ. ಪುಸ್ತಕ ಬರೆಯುವ ಬರಹಗಾರನಿಂದ ಹಿಡಿದು ಕೊನೆಗೆ ಓದುಗನವರೆಗೂ ಪ್ರತಿಯೊಬ್ಬರ ಬದುಕನ್ನು ಹೇಗೆ ಬದಲಿಸಬಹುದು ಎಂಬುದನ್ನು ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ. ಅದರೆ ಅದು ಅವರೆ ಹೇಳಿರುವಂತೆ ಅವರ ಅತಿ ಸೌಜನ್ಯದ ಹೊರತಾಗಿಯೂ ಕೆಲವು ತತ್ವಬದ್ದ ಪ್ರಕಾಶಕರು, ಪುಸ್ತಕಮಾರಾಟ ಮಳಿಗೆಯವರು ತಡವಾದರೂ ಸಂಭಾವನೆ ನೀಡಿರುವುದನ್ನು  ಓದಿ ಮನಸ್ಸಿಗೆ ಸಮಾಧಾನವಾಯಿತು


ಓದುವ ಹವ್ಯಾಸ ಕ್ಷೀಣಿಸುತ್ತಿರುವ ಇಂದಿನ ದಿನಗಳಲ್ಕಿ ಅದಕ್ಜೆ ಪುನರುಜ್ಜೀವನ ನೀಡುವಲ್ಲಿ ಬಾಲಕೃಷ್ಣ ತಿಳಿಸಿರುವ ಪ್ರತಿಯೊಬ್ಬರ ಪಾತ್ರ ಮಹತ್ತರವಾದುದು. ನನಗೆ ನವಕರ್ನಾಟಕ ಪ್ರಕಾಶನದವರು ಆನ್ ಲೈನ್ ನಲ್ಲಿ ಖರೀದಿಸಿದರೂ ಶೇ.೧೦% ರಿಯಾಯಿತಿ ನೀಡುವರು. ಹಿಂದೆ ಇದ್ದ ಜಯನಗರದ ಪ್ರಿಸಂ ಪುಸ್ತಕದವರು ಅವರ ಪ್ರಕಟನೆಗೆ ಶೇ.೨೦%, ಇತರೆ ಪುಸ್ತಕ ಖರೀದಿಸಿದರೆ ೧೦%, ಕೆಲವಕ್ಕೆ ಮುಖಬೆಲೆಗೆ ನೀಡುತ್ತಿದ್ದರು. ಒಮ್ಮೆ ಅಪ್ತವಾಗಿ ಮಾತಾಡುವಾಗ ಅವರ ವ್ಯವಸ್ಥಾಪಕರು "ಸರ್ ನಿಜವಾದ ಪುಸ್ತಕಪ್ರೇಮಿಗಳು ನಾವು ನೀಡುವ ರಿಯಾಯಿತಿ ಯನ್ನು ಸಹ ಪುಸ್ತಕ ಕೊಳ್ಳಲು ಉಪಯೋಗಿಸುವರು" ಎಂದಿದ್ದರು


ಇದೆಲ್ಲಾ ಏನೇ ಇರಲಿ, ಲೇಖಕ ತನ್ನ ಬರಹ ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾದರೆ ಅದರಷ್ಟು ಸಂತೋಷ ಬೇರೊಂದಿಲ್ಲ. ಹಾಗೆಯೇ ಇದನ್ನು ಓದುಗರಿಗೆ ತಲುಪಿಸುವುದೂ ಸಹ ಆರೋಗ್ಯ ಸಮಾಜದ ನಿರ್ಮಾಣಕ್ಕೆ ನಮ್ಮ ಕೊಡುಗೆ ಎಂಬ ಭಾವನೆಯಿಂದ ಇತರರೂ ಭಾವಿಸಿದರೆ ಪುಸ್ತಕ ಪ್ರತಿಯೊಬ್ಬರ ಬದುಕನ್ನು ಖಂಡಿತ ಬದಲಿಸಬಲ್ಲದು.