ಗುರುವಾರ, ಏಪ್ರಿಲ್ 27, 2023

ಹೀಗೊಂದು "ಮೂರ್ಖತನದ ಸಿದ್ಧಾಂತ"







 

  ಇಂದಿನ (27/04/2023) ವಾರ್ತಾಭಾರತಿ ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ - ಹೀಗೊಂದು ಮೂರ್ಖತನದ ಸಿದ್ಧಾಂತ 

         ನಾವು ಎಂದಿಗೂ ಬಾಯಿಬಿಟ್ಟು ಹೇಳದಿದ್ದರೂ, ಪ್ರತಿಯೊಬ್ಬರೂ ಅವರವರ ಬದುಕುಗಳಲ್ಲಿ - ಎಲ್ಲ ವಿಷಯಗಳಲ್ಲಿ ಅಲ್ಲದಿದ್ದರೂ ಕೆಲವು ವಿಷಯಗಳಲ್ಲಿಯಂತೂ ಕೊಂಚ ದಡ್ಡರೆನ್ನುವ ವ್ಯಕ್ತಿಗಳನ್ನು ಖಂಡಿತಾ ಕಂಡಿರುತ್ತಾರೆ. ಬಹಳಷ್ಟು ಸಾರಿ ಅವರ ನಡವಳಿಕೆಯನ್ನು ಕಂಡು ನಕ್ಕು ಸುಮ್ಮನಾಗಿರುತ್ತಾರೆ. ಅಲ್ಲದೆ ದಡ್ಡತನ ಕೊಂಚ ತಮಾಷೆಯ ವಿಷಯವೂ ಹೌದು. ವ್ಯಕ್ತಿಯೊಬ್ಬನ ದಡ್ಡತನವನ್ನು ಒಳ್ಳೆಯ ಮನಸ್ಸಿನಿಂದ ಲೇವಡಿ ಮಾಡುವುದು ಎಲ್ಲರ ದಿನನಿತ್ಯದ ಭಾಗವಾಗಿರುತ್ತದೆ. ಆದರೆ ಮೂರ್ಖತನಕ್ಕೆ ಒಂದು ಅಪಾಯಕಾರಿ ಮಗ್ಗುಲು ಸಹ ಇದೆ. ಡೀಟ್ರಿಚ್ ಬಾನ್ಹಾಫರ್ ಹೇಳುವಂತೆ ಒಬ್ಬ ದಡ್ಡ ಅಥವಾ ಮೂರ್ಖ ವ್ಯಕ್ತಿ ದುಷ್ಟ ವ್ಯಕ್ತಿಗಿಂತ ಹೆಚ್ಚು ಅಪಾಯಕಾರಿ.

       ಡೀಟ್ರಿಚ್ ಬಾನ್ಹಾಫರ್ ಜರ್ಮನಿಯ ಒಬ್ಬ ಧರ್ಮಬೋಧಕ ಮತ್ತು ತತ್ವಜ್ಞಾನಿ, ಜರ್ಮನಿಯ ಹಿಟ್ಲರ್ ಸಮಯದಲ್ಲಿ ಬದುಕಿದ್ದವನು ಹಾಗೂ ಹಿಟ್ಲರ್ನಿಂದಲೇ ಸಾವಿಗೀಡಾದವನು. 1934ರಲ್ಲಿ ಅಧಿಕಾರಕ್ಕೆ ಬಂದ ಹಿಟ್ಲರ್ ಯೆಹೂದಿಗಳ ಮೇಲೆ ಎಸಗಿದ ಕ್ರೌರ್ಯ ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಸಮಯದಲ್ಲಿ ಜರ್ಮನಿಯ ಬಹಳಷ್ಟು ಜನರು - ವಿದ್ಯಾವಂತರು, ನಾಗರಿಕರು ಹಾಗೂ ಅವರ ಮಕ್ಕಳು ಯೆಹೂದಿಗಳ ಮಕ್ಕಳು, ಮಹಿಳೆಯರನ್ನು ಕಾಡಿಸಿ, ಪೀಡಿಸುತ್ತಿದ್ದರು, ಅವರ ಮೇಲೆ ಹಾಗೂ ಅವರ ಮನೆ, ಅಂಗಡಿಗಳ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದರು. ಆಗ ಧರ್ಮಬೋಧಕನಾಗಿದ್ದ ಡೀಟ್ರಿಚ್ ಬಾನ್ಹಾಫರ್ ಅದನ್ನು ವಿರೋಧಿಸಿದ ಹಾಗೂ ಹಿಟ್ಲರ್ ವಿಚಾರಗಳನ್ನು ಖಂಡಿಸಿದ. ಬಾನ್ಹಾಫರ್ನನ್ನು ಹಿಟ್ಲರ್ ಗೆಸ್ಟಪೊ ಪೋಲೀಸರು ಬಂಧಿಸಿ ಸೆರೆಮನೆಗೆ ದೂಡಿದರು. ಅಲ್ಲಿ ಸೆರೆಮನೆಯಲ್ಲಿ ತನ್ನ ದೇಶದ ಜನರ ಬಗ್ಗೆ ಚಿಂತಿಸತೊಡಗಿದ - ಅದು ಹೇಗೆ ಕವಿಗಳು, ವಿದ್ಯಾವಂತರು, ನಾಗರಿಕರು, ಚಿಂತಕರು ಇದ್ದಕ್ಕಿದ್ದಂತೆ ಹೇಡಿಗಳು, ಅಮಾನವೀಯ ಕ್ರೂರಿಗಳು, ಕಪಟಿಗಳು ಹಾಗೂ ಅಪರಾಧಿಗಳಂತೆ ವರ್ತಿಸುತ್ತಿದ್ದಾರೆ ಎಂದು ಆತನಿಗೆ ಅಚ್ಚರಿಯಾಗತೊಡಗಿತು. ಆತನಿಗೆ ಕ್ರಮೇಣ ಅನ್ನಿಸತೊಡಗಿತು ಅದಕ್ಕೆ ಕಾರಣ ಅವರಲ್ಲಿನ ದ್ವೇಷ ಮತ್ತು ಹಗೆತನವಲ್ಲ ಬದಲಿಗೆ ಅವರಲ್ಲಿನ ಮೂರ್ಖತನ ಎಂದು. ಅದೇ ಇಂದು `ಮೂರ್ಖತನದ ಸಿದ್ಧಾಂತ'ವೆAದು ಜನಪ್ರಿಯವಾಗಿದೆ. ಫ್ಲಾಸೆನ್ಬರ್ಗ್ ಕಾನ್ಸನ್ಟ್ರೇಶನ್ ಕ್ಯಾಂಪಿನಲ್ಲಿ ಸೆರೆಯಾಗಿದ್ದರೂ ತನಗೆ ಸರಿ ಎನ್ನಿಸಿದ್ದನ್ನು ಪ್ರತಿಪಾದಿಸುತ್ತಿದ್ದ ಬಾನ್ಹಾಫರ್ನನ್ನು 9ನೇ ಏಪ್ರಿಲ್ 1945ರಂದು ಹಿಟ್ಲರ್ ಕೊಲೆ ಆರೋಪದಲ್ಲಿ ಕೊಂದುಹಾಕಿದರು.

       ಕತೆ ಕಾದಂಬರಿಗಳಲ್ಲಿ ಹಾಗೂ ಸಿನೆಮಾಗಳಲ್ಲಿನ ಪಾತ್ರಗಳಲ್ಲಿ ವಿಲನ್ ಯಾರೆಂಬುದು ನಮಗೆ ತಿಳಿದಿರುತ್ತದೆ. ಅವರ ವಸ್ತçಗಳಿಂದ, ಅವರ ನಡವಳಿಕೆಯಿಂದ ಅವರನ್ನು ಗುರುತಿಸಬಹುದು. ಅವರು ವಿವೇಚನೆಯಿಲ್ಲದೆ ಯಾರೆಂದರೆ ಅವರನ್ನು ಕೊಲ್ಲುತ್ತಾರೆ ಹಾಗೂ ತಮ್ಮ ಕ್ರೂರ ಯೋಜನೆಗಳ ಕುರಿತಂತೆ ಅಟ್ಟಹಾಸದಿಂದ ಕೇಕೆ ಹಾಕಿ ನಗುತ್ತಾರೆ. ನಮ್ಮ ದಿನ ನಿತ್ಯದ ಬದುಕಿನಲ್ಲೂ ಸಹ ವಿಲನ್ಗಳಿದ್ದಾರೆ - ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಸರ್ವಾಧಿಕಾರಿಗಳು ಅಥವಾ ಕೊಲೆಗಾರರು ಮತ್ತು ಹಿಂಸಾತ್ಮಕ ಮನೋಭಾವದ ಅಪರಾಧಿಗಳು. ವ್ಯಕ್ತಿಗಳು ಎಷ್ಟೇ ದುಷ್ಟರಾದರೂ ಅವರು ಹೆಚ್ಚು ಅಪಾಯಕಾರಿಗಳಲ್ಲ, ಏಕೆಂದರೆ ಅವರು ಯಾರೆಂಬುದು ಎಲ್ಲರಿಗೂ ತಿಳಿದಿರುತ್ತದೆ. ಕೆಟ್ಟದು ಯಾವುದೆಂದು ಒಮ್ಮೆ ತಿಳಿದಲ್ಲಿ, ಜಗತ್ತಿನ ಒಳ್ಳೆಯ ಜನ ಒಂದಾಗಿ ತಮ್ಮನ್ನು ಕಾಪಾಡಿಕೊಳ್ಳಲು ಅಥವಾ ಅದರ ವಿರುದ್ಧ ಹೋರಾಡಲು ಸಜ್ಜುಗೊಳ್ಳಬಲ್ಲರು. ಬಾನ್ಹಾಫರ್ ಹೇಳುವಂತೆ, "ಮೂರ್ಖತನ ದುಷ್ಟತನಕ್ಕಿಂತ ಹೆಚ್ಚು ಅಪಾಯಕಾರಿಯಾದುದು. ನಮ್ಮ ಬದುಕುಗಳನ್ನು ಹಾನಿಗೊಳಿಸುವ ಸಾಮರ್ಥ್ಯ ಅತಿ ಹೆಚ್ಚು ಮೂರ್ಖತನಕ್ಕಿದೆ. ಅಧಿಕಾರದಲ್ಲಿರುವ ಒಬ್ಬ ಮೂರ್ಖ ಕುತಂತ್ರಗಳನ್ನು ಹೆಣೆಯುವ ಒಂದು ದೊಡ್ಡ ಗ್ಯಾಂಗ್ಗಿA ಹೆಚ್ಚು ಹಾನಿಯುಂಟುಮಾಡಬಲ್ಲ. ದುಷ್ಟತನ ನಮ್ಮ ಕಣ್ಣಿಗೆ ಬಿದ್ದಾಗ ಅದಕ್ಕೆ ಹೇಗೆ ಅಧಿಕಾರ ನೀಡಬಾರದೆಂಬುದು ನಮಗೆ ತಿಳಿದಿರುತ್ತದೆ. ಭ್ರಷ್ಟಾಚಾರಿಗಳು, ಧಮನಕಾರಿಗಳು ಹಾಗೂ ಹಿಂಸಾಪ್ರವೃತ್ತಿಯವರು ಎದುರಾದಾಗ ಹೇಗೆ ಪ್ರತಿರೋಧಿಸಬೇಕೆಂಬುದು ನಮಗೆ ತಿಳಿದಿದೆ. ನೀವು ಯಾವ ನಿಲುವನ್ನು ತಳೆಯಬೇಕೆಂಬುದೂ ಸಹ ನಿಮಗೆ ತಿಳಿದಿರುತ್ತದೆ. ದುಷ್ಟತನ ಸದಾ ತನ್ನೊಳಗೇ ತನ್ನ ವಿನಾಶದ ಬೀಜವನ್ನು ಹೊಂದಿರುತ್ತದೆ."

       ಆದರೆ ಮೂರ್ಖತನ? ಅದರ ಸಮಸ್ಯೆಯೇ ವಿಭಿನ್ನವಾದುದು. ನಾವು ಮೂರ್ಖತನವನ್ನು ಎರಡು ಕಾರಣಗಳಿಗಾಗಿ ಸುಲಭವಾಗಿ ಎದುರಿಸಲಾರೆವು. ಮೊದಲನೆಯದು, ನಾವು ಒಂದು ಸಮೂಹವಾಗಿ ಅದರ ಕುರಿತು ಹೆಚ್ಚು ಸಹಿಷ್ಣುಗಳಾಗಿದ್ದೇವೆ. ದುಷ್ಟತನದ ಹಾಗೆ, ಮೂರ್ಖತನ ನಾವು ಗಂಭೀರವಾಗಿ ಪರಿಗಣಿಸಬೇಕಾದಷ್ಟು ಕೆಡುಕಿನದಲ್ಲ ಎನ್ನುವುದು ಎಲ್ಲರ ಭಾವನೆ. ಇತರರ ದಡ್ಡತನವನ್ನು ನಾವು ಸದಾ ಲೇವಡಿ ಮಾಡುವುದಿಲ್ಲ. ಇತರರು ಏನಾದರೂ ತಿಳಿದಿಲ್ಲದಿದ್ದಲ್ಲಿ ಅದನ್ನು ಬಹಿರಂಗವಾಗಿ ಛೇಡಿಸುವುದಿಲ್ಲ. ಎರಡನೆಯದು, ಮೂರ್ಖ ವ್ಯಕ್ತಿ ಒಬ್ಬ ನುಣುಚಿಕೊಳ್ಳುವ ಎದುರಾಳಿ. ಅವರನ್ನು ತರ್ಕದ ಚರ್ಚೆಯಿಂದ ಅಥವಾ ವಿವೇಚನೆಯಿಂದ ಸುಲಭವಾಗಿ ಮಣಿಸಲಾಗುವುದಿಲ್ಲ. ಅಷ್ಟಲ್ಲದೆ, ಮೂರ್ಖ ವ್ಯಕ್ತಿಯನ್ನು ನೀವು ತರ್ಕದಿಂದ ಮಣಿಸಿ ಆತ ನಿರಾಕರಿಸಲಾಗದ ವಾಸ್ತವಾಂಶಗಳನ್ನು ಆತನೆದುರು ಮಂಡಿಸಿ ಅವುಗಳಿಗೆ ಆತನ ಬಳಿ ಉತ್ತರವಿಲ್ಲದಿದ್ದಾಗ ಆತ ಸಿಡಿದೇಳುತ್ತಾನೆ ಹಾಗೂ ಅರಚಾಡುತ್ತಾನೆ. ಅದನ್ನು ಬಾನ್ಹಾಫರ್ ಹೇಳುವುದು ಹೀಗೆ:  "ಇಲ್ಲಿ ಪ್ರತಿಭಟನೆ ಅಥವಾ ಬಲಪ್ರಯೋಗ ಏನೂ ಪ್ರಯೋಗಕ್ಕೆ ಬರುವುದಿಲ್ಲ; ತರ್ಕ ಅವರ ಕಿವಿಗೆ ಬೀಳುವುದಿಲ್ಲ; ತಮ್ಮ ಪೂರ್ವಾಗ್ರಹ ನಂಬಿಕೆಗಳಿಗೆ ವಿರೋಧವಾದ ಯಾವುದೇ ವಾಸ್ತವಾಂಶಗಳನ್ನು ಅವರು ಪರಿಗಣಿಸುವುದಿಲ್ಲ - ಅಂತಹ ಸಂದರ್ಭಗಳಲ್ಲಿ ಮೂರ್ಖ ವ್ಯಕ್ತಿ ಮತ್ತಷ್ಟು ಟೀಕಿಸುವವನಾಗುತ್ತಾನೆ - ನಿಮ್ಮ ಮಂಡನೆಯ ಸತ್ಯದ ಮತ್ತು ವಾಸ್ತವಾಂಶಗಳು ಕೇವಲ ಆಕಸ್ಮಿಕಗಳೆಂದೂ ಹಾಗೂ ಅವು ಪರಿಗಣಿಸಲು ಪ್ರಮುಖ ವಿಷಯಗಳಲ್ಲವೆಂದು ನಿರಾಕರಿಸುತ್ತಾರೆ. ಒಟ್ಟಾರೆಯಾಗಿ ಮೂರ್ಖ ವ್ಯಕ್ತಿ, ದುಷ್ಟ ವ್ಯಕ್ತಿಗೆ ಹೋಲಿಸಿದಲ್ಲಿ, ಸಂಪೂರ್ಣ ಸ್ವ-ಸಂತೃಪ್ತನಾಗಿರುತ್ತಾನೆ, ಸುಲಭವಾಗಿ ಕಿರಿಕಿರಿಗೊಳಗಾಗುತ್ತಾನೆ ಹಾಗೂ ಆಕ್ರಮಣ ಮಾಡಬಲ್ಲ ಅಪಾಯಕಾರಿ ವ್ಯಕ್ತಿಯಾಗುತ್ತಾನೆ."

       ತನಗೆ ಅಧಿಕಾರವಿಲ್ಲದಿದ್ದಲ್ಲಿ ಮೂರ್ಖತನ ದುಷ್ಟತನದ ಹಾಗೆ ಅಪಾಯಕಾರಿಯಲ್ಲ. ಕೆಲವೊಂದು ವಿಷಯಗಳು ಹಾನಿಕರವಿಲ್ಲದಿದ್ದಲ್ಲಿ ನಾವು ಅವುಗಳ ಬಗ್ಗೆ ನಕ್ಕು ಸುಮ್ಮನಾಗಿಬಿಡುತ್ತೇವೆ - ಅವು ನಮಗೆ ಕೇವಲ ತಮಾಷೆಯ ವಿಷಯಗಳಾಗುತ್ತವೆ. ಮೂರ್ಖತನದ ಸಮಸ್ಯೆಯೆಂದರೆ, ಬಹಳಷ್ಟು ಸಾರಿ ಅದು ಅಧಿಕಾರದೊಂದಿಗೆ ಕೈ ಜೋಡಿಸಿರುತ್ತದೆ. ಬಾನ್ಹಾಫರ್ ಹೇಳುವಂತೆ, "ಸಾರ್ವಜನಿಕ ರಂಗದಲ್ಲಿ ಪ್ರತಿಯೊಂದು ಬಾರಿಯೂ ಅಧಿಕಾರ ಮುಂಚೂಣಿಗೆ ಬಂದಾಗ, ಅದು ರಾಜಕೀಯದ್ದಾಗಿರಲಿ ಅಥವಾ ಧಾರ್ಮಿಕದ್ದಾಗಿರಲಿ, ಅದು ಬಹಳಷ್ಟು ಮಾನವರಲ್ಲಿ ಮೂರ್ಖತನದ ಸೋಂಕನ್ನು ಹರಡುತ್ತದೆ ಎನ್ನುವುದು ಸೂಕ್ಷ್ಮವಾಗಿ ಅವಲೋಕಿಸಿದಾಗ ಸ್ಪಷ್ಟವಾಗುತ್ತದೆ.

       ಇದು ಎರಡು ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೊದಲನೆಯದು, ನೀವು ಅಧಿಕಾರ ವಹಿಸಿಕೊಳ್ಳಲು ಅಥವಾ ಪಡೆದುಕೊಳ್ಳಲು ನಿಮ್ಮ ಮೂರ್ಖತನ ಅಡ್ಡಿಬರುವುದಿಲ್ಲ. ಮೂರ್ಖರು ಅಧಿಕಾರ ಹಿಡಿದಿರುವ ಉದಾಹರಣೆಗಳು ಚರಿತ್ರೆಯಲ್ಲಿ ಸಾಕಷ್ಟಿವೆ (ಹಾಗೆಯೇ ಬುದ್ಧಿವಂತರನ್ನು ಹೊರಗುಳಿಸಿರುವ ಅಥವಾ ಕೊಲೆಮಾಡಿರುವ ಉದಾಹರಣೆಗಳೂ ಇವೆ). ಎರಡನೆಯದು, ಅಧಿಕಾರದ ಸ್ವರೂಪ ಹೇಗಿರುತ್ತದೆಂದರೆ ಅದು ಬೌದ್ಧಿಕ ಚಿಂತನೆಗಳಿಗೆ ಅವಶ್ಯಕವಿರುವ ಸ್ವತಂತ್ರ ಮನೋಭಾವ, ವಿಮರ್ಶಾತ್ಮಕ ಚಿಂತನೆ ಮತ್ತು ವಿವೇಚನೆಯಂತಹ ನಿಮ್ಮ ಕೆಲವು ಸಾಮರ್ಥ್ಯವನ್ನು ಅದಕ್ಕೆ ಒಪ್ಪಿಸಿಬಿಡಬೇಕಾಗುತ್ತದೆ.

       ಬಾನ್ಹಾಫರ್ ವಾದವೇನೆಂದರೆ ಒಬ್ಬ ವ್ಯಕ್ತಿ ಒಂದು ಸಂಸ್ಥೆಯ ಹೆಚ್ಚು ಹೆಚ್ಚು ಭಾಗವಾದಂತೆ, ಆತ ತನ್ನ ಸ್ವತಂತ್ರ ಅಸ್ತಿತ್ವವನ್ನು ಹೆಚ್ಚು ಹೆಚ್ಚು ಕಳೆದುಕೊಳ್ಳುತ್ತಾನೆ ಎಂಬುದು. ಒಬ್ಬ ಚಾಣಾಕ್ಷ, ಉತ್ಸಾಹಭರಿತ, ಬುದ್ಧಿವಂತ ಹಾಗೂ ಸೂಕ್ಷ್ಮಸಂವೇದನೆಯ ವ್ಯಕ್ತಿಯೊಬ್ಬನಿಗೆ ಅಧಿಕಾರ ದೊರೆತಕೂಡಲೇ ಆತ ಬುದ್ಧಿಶೂನ್ಯನಂತಾಗುತ್ತಾನೆ. ಕೆಲವು ಪುನಾರಾವರ್ತಿತ ಘೋಷಣೆಗಳ, ಆಕರ್ಷಕ ಪದಗಳನ್ನು ಮಾತ್ರ ಬಳಸುವವನಂತಾಗುತ್ತಾನೆ. ಆತ ಒಂದು ರೀತಿಯಲ್ಲಿ ಯಾವುದೋ ಸಂಮೋಹನಕ್ಕೊಳಗಾದAತೆ, ಸುತ್ತಮುತ್ತಲ ವಾಸ್ತವಾಂಶಗಳಿಗೆ ಕುರುಡಾದಂತೆ, ಇತರರು ಅವನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ ಕಾಣಬರುತ್ತಾನೆ.

       ಅಧಿಕಾರ ಜನರನ್ನು ಯಂತ್ರಮಾನವರAತೆ ಬದಲಾಯಿಸಿಬಿಡುತ್ತದೆ. ಬುದ್ಧಿವಂತರು, ವಿಮರ್ಶಾತ್ಮಕ ದೃಷ್ಟಿಕೋನವುಳ್ಳವರೂ ಸಹ ಈಗ ಪೂರ್ವಸಿದ್ಧ ಪಠ್ಯವನ್ನು ಯಾಂತ್ರಿಕವಾಗಿ ಓದುವಂತವರಾಗುತ್ತಾರೆ. ಅವರು ತಮ್ಮ ಮಿದುಳಿನ ಬದಲು ತಮ್ಮ ಕೃತಕ ನಗೆಯನ್ನು ಹೆಚ್ಚು ಹೆಚ್ಚು ಬಳಸತೊಡಗುತ್ತಾರೆ. ಬಹಳಷ್ಟು ಜನ ಯಾವುದೇ ರಾಜಕೀಯ ಪಕ್ಷಗಳಿಗೆ ಸೇರಿಕೊಳ್ಳುವುದು ತಮ್ಮ ಅಧಿಕಾರಲಾಲಸೆಯಿಂದ ಮಾತ್ರವೇ ಹೊರತು ತಮ್ಮ ವಿವೇಚನೆ ಅಥವಾ ತರ್ಕದ ಆಲೋಚನೆಯಿಂದಲ್ಲ. ಅಧಿಕಾರ ವ್ಯಕ್ತಿಯೊಬ್ಬನಿಂದ ಅವನ ಬುದ್ಧಿಮತ್ತೆಯನ್ನು ಹೀರಿ ಅವನನ್ನು ಯಾಂತ್ರಿಕ ಗೊಂಬೆಯನ್ನಾಗಿಸುತ್ತದೆ.

       ನಾವು ಮೂರ್ಖತನವನ್ನು ಅರಿಯಬೇಕಾದರೆ ಮೊದಲಿಗೆ ನಾವು ಅದರ ಸ್ವರೂಪವನ್ನು ಅರಿಯಬೇಕಾಗುತ್ತದೆ ಎಂದ ಬಾನ್ಹಾಫರ್. ಮೂರ್ಖತನವು ನಮ್ಮ ಸುಪ್ತಮನಸ್ಸಿನಲ್ಲಿ ಆಳವಾಗಿ ಬೇರುಬಿಟ್ಟಿರುತ್ತದೆ. ಇತರ ಮಾನವ ಅನುಭವಗಳ ಅಭಿವ್ಯಕ್ತಿಯಂತೆಯೇ ಅದೂ ಸಹ ವ್ಯಕ್ತಗೊಳ್ಳುತ್ತದೆ. ಮಾನವ ಒಬ್ಬ ಸಾಮಾಜಿಕ ಹಾಗೂ ಸಂಘಜೀವಿ. ಅವನ ಸಂಘಜೀವಿ ಮನೋಭಾವವೇ ಮೂರ್ಖತನದ ತಳಹದಿಯಾಗಿದೆ. ಯಾವುದೋ ಕಾಡಿನಲ್ಲೋ, ದ್ವೀಪದಲ್ಲೋ ಅಥವಾ ಸದಾ ಒಬ್ಬಂಟಿಯಾಗಿರುವ ವ್ಯಕ್ತಿಗಳು ಇತರ ಸಾಮಾಜಿಕ ಹಾಗೂ ಸಂಘಜೀವಿ ಮಾನವನಿಗಿಂತ `ನ್ಯೂನತೆ'ಯನ್ನು ಕಡಿಮೆ ಹೊಂದಿರುತ್ತಾರೆ.

       ಒಮ್ಮೆ ಮುಲ್ಲಾ ನಸ್ರುದ್ದೀನ್ ಹಾಗೂ ಆತನ ಗೆಳೆಯ ಊರಿನ ಜನರನ್ನು ತಮಾಷೆ ಮಾಡೋಣವೆಂದು ಊರಿನ ಎಲ್ಲರಿಗೂ ಬೆಟ್ಟದ ಮೇಲಿನ ನಿರ್ದಿಷ್ಟ ಮರದ ಬುಡದಲ್ಲಿ ನಿಧಿ ಅಡಗಿಸಿಡಲಾಗಿದೆಯೆಂದು ತಿಳಿಸಿದ. ಊರಿನ ಜನ ಅವನ ಮಾತನ್ನು ನಂಬಿ ಎಲ್ಲರೂ ನಿಧಿ ಪಡೆಯಲು ಓಡತೊಡಗಿದರು. ಅವರನ್ನು ನೋಡಿದ ನಸ್ರುದ್ದೀನ್ ತಾನೂ ಸಹ ಅವರ ಜೊತೆಗೆ ಬೆಟ್ಟಕ್ಕೆ ಓಡಲು ಆರಂಭಿಸಿದ. ಅದನ್ನು ನೋಡಿ ಆತನ ಗೆಳೆಯ, `ನಸ್ರುದ್ದೀನ್, ನಾವು ಹೇಳಿದ್ದು ಸುಳ್ಳಲ್ಲವೆ? ನೀನು ಸಹ ಅವರ ಜೊತೆಗೆ ಏಕೆ ಓಡುತ್ತಿದ್ದೀಯಾ?' ಎಂದು ಕೇಳುತ್ತಾನೆ. ಅದಕ್ಕೆ ನಸ್ರುದ್ದೀನ್, `ಆದರೆ ಇಷ್ಟೊಂದು ಜನ ನನ್ನ ಮಾತನ್ನು ನಂಬಿದರಲ್ಲಾ! ಅಲ್ಲಿ ನಿಧಿ ಇದ್ದರೂ ಇರಬಹುದೇನೋ!' ಎನ್ನುತ್ತಾನೆ.

       ಮಾನವ ನಡತೆಯ ಹಲವಾರು ವೈಜ್ಞಾನಿಕ ಅಧ್ಯಯನಗಳು ಮೂರ್ಖತನದ ಕಾರಣವನ್ನು ಅರಸಲು ಯತ್ನಿಸಿವೆ. ಒಬ್ಬ ವ್ಯಕ್ತಿಯ ತರ್ಕಭರಿತ ನಂಬಿಕೆಯನ್ನು ಸಹ ಹೇಗೆ ಒಂದು ಸಮೂಹ ಬದಲಿಸಬಲ್ಲದು ಎನ್ನುವುದನ್ನು ಸಂಶೋಧನೆಗಳು ತೋರಿಸಿಕೊಟ್ಟಿವೆ. ಸೊಲೊಮನ್ ಆಶ್ ಎಂಬ ಮನೋವಿಜ್ಞಾನಿ ನಡೆಸಿದ ಅಧ್ಯಯನವೊಂದರಲ್ಲಿ ಭಾಗವಹಿಸಿದ ಪ್ರಯೋಗಾರ್ಥಿಗಳಲ್ಲಿ ಮುಕ್ಕಾಲು ಭಾಗ ಜನ ತಮ್ಮ ತರ್ಕವನ್ನೂ ಮೀರಿ ತಾವಿದ್ದ ಗುಂಪಿನ ಬಹುಸಂಖ್ಯಾತರ ಅಭಿಪ್ರಾಯಗಳನ್ನು ಬೆಂಬಲಿಸಿ ಸಮರ್ಥಿಸುತ್ತಿದ್ದುದು ಕಂಡುಬAದಿದೆ. ಅಂದರೆ ಪ್ರಶ್ನೆಗೆ ಉತ್ತರ ತಪ್ಪು ಎನ್ನುವುದು ಅವರಿಗೆ ತಿಳಿದಿದ್ದರೂ ಸಹ ಅವರು ಸಂಶೋಧಕರಿಗೆ ಅಚ್ಚರಿಗೊಳಿಸುವಂತೆ ಸರಿ ಎಂಬ ಉತ್ತರ ನೀಡಿದ್ದರು. ಇದೇ ರೀತಿಯ ಮೂರ್ಖತನವೇ ದುಷ್ಟ ಶಕ್ತಿಗೆ ಬೆಂಬಲವಾಗಿ ನಿಲ್ಲುವುದು.

       ಪ್ರಖ್ಯಾತ ಮನಶಾಸ್ತçಜ್ಞ ಎರಿಕ್ ಫ್ರಾಮ್ ಸಹ ಜರ್ಮನಿಯ ಯೆಹೂದಿಯಾಗಿದ್ದು ತಾನೂ ಸಹ ಅಲ್ಲಿನ ನಾತ್ಸಿ ಕ್ರೌರ್ಯವನ್ನು ಸ್ವತಃ ಅನುಭವಿಸಿದವನಾಗಿದ್ದ. ಹೇಗೆ ಗಾಳಿಯಲ್ಲಿನ ಮಲಿನತೆ ಮನುಷ್ಯರ ಮನಸ್ಥಿತಿಯ ಮೇಲೆ ಪರಿಣಾಮ ಬೀರುವಂತೆ ಇಂದು ನಮ್ಮ ದಿನಿತ್ಯದ ಬದುಕಿನಲ್ಲಿ ಎಲ್ಲ ಸಾಮಾಜಿಕ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಹರಿದುಬರುತ್ತಿರುವ ಮಾಹಿತಿಯ ಹೆಸರಿನ `ಕಸ' ಮನುಷ್ಯರ ಮನಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ, ಜನರಲ್ಲಿ ಸಿನಿಕತೆ ಮತ್ತು ಪರಸ್ಪರ ಸಂಶಯಗಳನ್ನು ಹುಟ್ಟುಹಾಕುತ್ತಿವೆ. ಅಧಿಕಾರದ ಗುದ್ದುಗೆ ಹಿಡಿದವರ ಮಾತುಗಳನ್ನು ಜನ ಸಣ್ಣ ಮಕ್ಕಳ ಮನಸ್ಸಿನೊಂದಿಗೆ ನಂಬುತ್ತಿದ್ದಾರೆ. ಎರಿಕ್ ಫ್ರಾಮ್ ಹೇಳುವಂತೆ ಆಧುನಿಕ ಸಮಾಜ ತನ್ನೊಂದಿಗೆ ಸ್ವಾತಂತ್ರö್ಯವನ್ನು ತಂದಿದೆ, ಆದರೆ ಅದರೊಂದಿಗೆ ಜನರಲ್ಲಿ ಆತಂಕ ಮತ್ತು ಸಂಶಯದ ಬಿತ್ತನೆ ಮಾಡಿದೆ. ಜನರನ್ನು ಇಂದು ಪ್ರತ್ಯೇಕತಾ ಮನೋಭಾವ ಕಾಡುತ್ತಿದೆ ಹಾಗಾಗಿ ಅವರು ತಮ್ಮದೇ ಮನಸ್ಥಿತಿಯ ಜನರೊಂದಿಗೆ ಸುರಕ್ಷತೆ ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ರೀತಿಯ ಪ್ರತ್ಯೇಕತಾ ಮನೋಭಾವವೇ ಮೂರ್ಖತನ ಹೆಚ್ಚಾಗಲು ಕಾರಣವೆನ್ನುತ್ತಾನೆ ಎರಿಕ್ ಫ್ರಾಮ್.

       ಫ್ರೆಡರಿಕ್ ನೀಚ್ಛೆಯ ಪ್ರಖ್ಯಾತ ಮಾತೊಂದಿದೆ, `ಹುಚ್ಚುತನ ಒಂಟಿ ವ್ಯಕ್ತಿಗಳಲ್ಲಿ ಅಪರೂಪ, ಆದರೆ ಗುಂಪುಗಳಲ್ಲಿ, ಪಾರ್ಟಿಗಳಲ್ಲಿ, ರಾಷ್ಟçಗಳಲ್ಲಿ ಮತ್ತು ಯುಗಗಳಲ್ಲಿ ಅದು ಇರಲೇಬೇಕಾಗಿರುವುದು ನಿಯಮವಾಗಿದೆ'. ಹಾಗಾಗಿ ಬಾನ್ಹಾಫರ್ ಹೇಳುವಂತೆ ಇದು ಒಂದು ಮಾನಸಿಕ ಸಮಸ್ಯೆಗಿಂತ ಹೆಚ್ಚು ಸಾಮಾಜಿಕ ಸಮಸ್ಯೆಯಾಗಿದೆ. ಮೂರ್ಖತನವನ್ನು ಒಂದು `ಸಮೂಹ ಸನ್ನಿ' ಎನ್ನಬಹುದು. ಒಬ್ಬ ಒಬ್ಬಂಟಿ ವ್ಯಕ್ತಿ ಮೂರ್ಖನಾಗಿದ್ದಲ್ಲಿ ಅದು ಸಮಾಜದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ಒಂದು ಗುಂಪು ಅಥವಾ ಸಮೂಹ ಮೂರ್ಖತನವನ್ನು ವ್ಯಕ್ತಪಡಿಸಿದಲ್ಲಿ ಅದು ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಪರಿಣಾಮ ತಮಗೂ ಕೇಡುಂಟು ಮಾಡುತ್ತದೆ ಎನ್ನುವುದು ಸಹ ಅವರ ಗಮನಕ್ಕೆ ಬರುವುದಿಲ್ಲ.

       ಒಬ್ಬನ ಅಧಿಕಾರದ ಬೆಂಬಲಕ್ಕೆ ಮತ್ತೊಬ್ಬನ ಮೂರ್ಖತನದ ಅವಶ್ಯಕತೆಯಿರುತ್ತದೆ. ಎಲ್ಲ ಹುಸಿ ಜನಪ್ರಿಯ ನಾಯಕರು, ಭ್ರಷ್ಟ ರಾಜಕಾರಣಿಗಳು ಜನಸಮೂಹದ ಇಂತಹ ಮಾನಸಿಕ ಅವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ಜನಸಮೂಹ ಮೂರ್ಖತನ ತಮ್ಮ ಮೈಮೇಲೆ ಆವಾಹಿಸಿಕೊಂಡಿರುವುದು ತಮಗೇ ಅರಿವಿಲ್ಲದಂತೆ ರಾಜಕಾರಣಿಗಳ ಕೈಗೊಂಬೆಗಳAತೆ ವರ್ತಿಸತೊಡಗುತ್ತಾರೆ ಅವರೊಂದಿಗೆ ಯಾವುದೇ ತರ್ಕಬದ್ಧ ಚರ್ಚೆ ಸಾಧ್ಯವೇ ಆಗುವುದಿಲ್ಲ ಹಾಗೂ ಅವರ ಮಾತುಕತೆ ಕೇವಲ ಘೋಷಣೆಗಳ, ಕಿರುಚಾಟ, ಅರಚಾಟದ ಮಟ್ಟಕ್ಕೆ ತಲುಪಿಬಿಡುತ್ತದೆ. ದುಷ್ಟ ರಾಜಕಾರಣಿಗಳಿಗೆ ಇಂತಹ ಮಾನಸಿಕ ಅವಸ್ಥೆಯ ವಿಸ್ತೃತ ಸಮಾಜದ ಬೆಂಬಲವಿಲ್ಲದೆ ಗದ್ದುಗೆಯೇರುವುದು ಸಾಧ್ಯವೇ ಇಲ್ಲ.

j.balakrishna@gmail.com

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಭಾರತದ ಇಂದಿನ ವಾಸ್ತವ ವೇ 'ಸಮೂಹ ಮೂರ್ಖತನ'. ಅದಕ್ಕೆ ಉದಾಹರಣೆಯಾಗಿ ಪತ್ರಕರ್ತರು, ವಿಜ್ಞಾನಿಗಳು, ಚರಿತ್ರಕಾರರು, ಸಾಹಿತಿಗಳು, ನಟರು-ವಿಟರು ತುಂಬಿ ತುಳುಕುತ್ತಿದ್ದಾರೆ...ಒಂಭತ್ತು ವರ್ಷಗಳಿಂದ ಇವರೆಲ್ಲಾ ಎಂಥಾ 'ಸುವರ್ಣ ಕಾಲ' ಅನುಭವಿಸುತ್ತಿದ್ದಾರೆಂದರೆ 'ಮೂರ್ಖತನದ ದಶಕ' ವಾಗಿ ಈ ಅವಧಿಯನ್ನು ಘೋಷಿಸಿಬಡಬಹುದು...!

ಲೇಖನ ಅತ್ಯಂತ ಸಾಂದರ್ಭಿಕ ಮತ್ತು ಪ್ರಸ್ತುತ...

ಅನುರಾಗಿ ಹೇಳಿದರು...

ಮಾನವ ಸಂಘಜೀವಿ. ಅವನ ಈ ಸಂಘಜೀವಿ ಮನೋಭಾವವೇ *ಮೂರ್ಖತನದ *ತಳಹದಿಯಾಗಿದೆ. ‘ಯಾವುದೋ ಕಾಡಿನಲ್ಲೋ, ದ್ವೀಪದಲ್ಲೋ ಅಥವಾ ಸದಾ ಒಬ್ಬಂಟಿಯಾಗಿರುವ ವ್ಯಕ್ತಿಗಳು ಇತರ ಸಾಮಾಜಿಕ ಹಾಗೂ ಸಂಘಜೀವಿ ಮಾನವನಿಗಿಂತ ಈ `ನ್ಯೂನತೆ'ಯನ್ನು ಕಡಿಮೆ ಹೊಂದಿರುತ್ತಾರೆ.’!!!ಅರಿತು ಮನನ ಮಾಡಿಕೊಳ್ಬೇಕಾದ ವಿಷಯ ಹಾಗು ಅತ್ಯಂತ ಅರ್ಥಪೂರ್ಣ ಸಮಯೋಚಿತ ಲೇಖನ👍👌