ಜೆ.ಬಾಲಕೃಷ್ಣ ಮತ್ತು ಬಿ.ಜಿ.ಗುಜ್ಜಾರಪ್ಪ ಸಂವಾದ
( 'ವ್ಯಂಗ್ಯಚಿತ್ರ ಚರಿತ್ರೆ' ಕುರಿತು ) 27.08.23
••••••••••••••••••••••••••••••••••••••••••••••••••••••••••
ಕೋಲಾರದ "ಓದುಗ ಕೇಳುಗ - ನಮ್ಮ ನಡೆ" ತಿಂಗಳ ಕಾರ್ಯಕ್ರಮದ ಅಂಗವಾಗಿ ಕೊನೆಯ ಭಾನುವಾರ ಬೆಳಿಗ್ಗೆ 10.30 ಕ್ಕೆ ಜೆ.ಬಾಲಕೃಷ್ಣ ರಚಿಸಿದ "ವ್ಯಂಗ್ಯಚಿತ್ರ ಚರಿತ್ರೆ" ಕುರಿತು ಖ್ಯಾತ ವ್ಯಂಗ್ಯಚಿತ್ರ ಕಲಾವಿದರಾದ ಬಿ.ಜಿ. ಗುಜ್ಜಾರಪ್ಪ ಅವರು ನಗರದ ಪತ್ರಕರ್ತರ ಭವನದಲ್ಲಿ ಮಾತನಾಡಿದರು.
ಬಿ.ಜಿ.ಗುಜ್ಜಾರಪ್ಪ ( ಗುಜ್ಜಾರ್) ನನ್ನ ಸಹಾಧ್ಯಾಯಿ. ದೀರ್ಘಕಾಲದ ನಂತರ ಗೆಳೆಯನನ್ನು ನೋಡುವ ಮತ್ತು ಮಾತುಗಳನ್ನು ಕೇಳುವ ಅವಕಾಶವನ್ನು ತಪ್ಪಿಸಿಕೊಳ್ಳದೆ ನಾನು ಭಾಗವಹಿಸಿದ್ದೆನು. ಜೆ.ಬಾಲಕೃಷ್ಣ ಬಹುಮುಖ ಪ್ರತಿಭೆಯ ಸಂಪನ್ಮೂಲ ವ್ಯಕ್ತಿ. ಕೋಲಾರದ ಗೆಳೆಯರ ಬಳಗದ ಕೀರ್ತಿ ಪತಾಕೆ. ಕೃಷಿ ವಿಜ್ಞಾನ ಪದವೀಧರರಾದ ಬಾಲು ಸಣ್ಣಕತೆಗಳ ಕರ್ತೃ, ಶ್ರೇಷ್ಠ ಅನುವಾದಕ, ವಿಜ್ಞಾನ ಲೇಖಕ, ಮಾನವಿಕ ಅಧ್ಯಯನಗಳ ಬರಹಗಾರ, ಪ್ರವಾಸ ಕಥನಕಾರ, ಅಂತರಗಂಗೆ ಎಂಬ ಸ್ವಂತ ಬ್ಲಾಗ್ ನಲ್ಲಿ ಅಂಕಣ ಬರಹಗಳನ್ನು ಸತತವಾಗಿ ಬರೆಯುತ್ತಿರುವ ಪ್ರತಿಭಾವಂತ.
ಕನ್ನಡದಲ್ಲಿ ಮೊದಲಬಾರಿಗೆ ವ್ಯಂಗ್ಯಚಿತ್ರ ರಚನೆಯ ಸ್ವರೂಪ ಮತ್ತು ಇತಿಹಾಸವನ್ನು ಕುರಿತು ಅಧ್ಯಯನ ನಡೆಸಿ, ಸಂಶೋಧನಾತ್ಮಕ ಕೃತಿ "ವ್ಯಂಗ್ಯಚಿತ್ರ ಚರಿತ್ರೆ" ಎಂಬ ಅಪೂರ್ವ ಕೃತಿಯನ್ನು ಕನ್ನಡ ಸಂಸ್ಕೃತಿಗೆ ಕೊಟ್ಟಿದ್ದಾರೆ. ಇಂಥ ಕೃತಿಯನ್ನು ಕುರಿತು ಆತ್ಮೀಯ ಗೆಳೆಯ ಗುಜ್ಜಾರ್ ಸ್ವತಃ ವ್ಯಂಗ್ಯಚಿತ್ರ ಕಲಾವಿದರಾಗಿ ಮಾತನಾಡಲು ಕೋಲಾರಕ್ಕೆ ಬಂದದ್ದು ವಿಶೇಷ. ಈ ಕೃತಿಯ ಮಹತ್ವ ಮತ್ತು ಅಗತ್ಯವನ್ನು ಕುರಿತು ಎಳೆ ಎಳೆಯಾಗಿ ಗುಜ್ಜಾರ್ ಬಿಡಿಸಿ ಹೇಳಿದ್ದು ಸಹೃದಯರ ಮನಮುಟ್ಟಿತು. ಅದರಲ್ಲು ವ್ಯಂಗ್ಯಚಿತ್ರಗಳನ್ನು ಕುರಿತು ವಿಶ್ವಾತ್ಮಕ ಮತ್ತು ಸ್ಥಳೀಯ ನೆಲೆಗಳೆರಡರಲ್ಲೂ ಗುರುತಿಸಿ ಮಾತನಾಡಿದ್ದು ಬಹುಮುಖ್ಯವೆನಿಸಿತು. ಕನ್ನಡದ ದೇಶಭಾಷೆಯಲ್ಲಿ ವ್ಯಂಗ್ಯಚಿತ್ರಗಳ ಉಗಮ ಮತ್ತು ವಿಕಾಸವನ್ನು ನಿರೂಪಣೆ ಮಾಡಿದ್ದು ಅದ್ಭುತವಾಗಿತ್ತು. ಆದಿಮಾನವರ ಗುಹಾಚಿತ್ರಗಳ ರೇಖೆಗಳಿಂದ ಹಿಡಿದು ಈಗಿನ ವ್ಯಂಗ್ಯಚಿತ್ರ ಕಲಾವಿದರ ವರೆಗೆ ಬಾಲಕೃಷ್ಣ ಅವರು ನಡೆಸಿದ ಸಿಂಹಾವಲೋಕನ ಕ್ರಮದಲ್ಲಿ ಅಪೂರ್ವ ಒಳನೋಟಗಳಿವೆ ಎಂದು ಹೇಳಿದರು. ಪ್ರಭುತ್ವವನ್ನು ಎದುರುಹಾಕಿಕೊಳ್ಳುವ ಈ ಗೆರೆಗಳು ಸರ್ವಾಧಿಕಾರಿಗಳ ಪಿತ್ಥವನ್ನು ನೆತ್ತಿಗೇರಿಸಿದ ಬಗೆಯನ್ನು ಹಲವು ನಿದರ್ಶನಗಳ ಸಹಿತ ಗುಜ್ಜಾರ್ ನಿರೂಪಿಸಿದರು.
ನೆಹರೂ ಅವರು ಶಂಕರ್ಸ್ ವೀಕ್ಲಿ ವ್ಯಂಗ್ಯಚಿತ್ರಗಳನ್ನು ಪ್ರೋತ್ಸಾಹಿಸಿ ಮಾತನಾಡುತ್ತಾ "ನನ್ನನ್ನೂ ಬಿಡಬೇಡಿ" ಎಂದು ಬೆನ್ನು ತಟ್ಟಿದರೆ, ತುರ್ತುಪರಿಸ್ಥಿತಿಯ ಕಾಲದಲ್ಲಿ ಮತ್ತು ಈಗಿನ ಪರಿಸ್ಥಿತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತು ವ್ಯಂಗ್ಯಚಿತ್ರ ಕಲಾವಿದರಿಗೆ ಒದಗಿದ ಇಕ್ಕಟ್ಟು ಮತ್ತು ಬಿಕ್ಕಟ್ಟುಗಳನ್ನು ಗುಜ್ಜಾರ್ ಹೇಳಿದ್ದು ಔಚಿತ್ಯ ಪೂರ್ಣವಾಗಿತ್ತು. ಸಂಚಿಕೆ ಪತ್ರಿಕೆಯ ಸಂಪಾದಕ ಸಿ.ಎಂ. ಮುನಿಯಪ್ಪ "ನಿಮಗೆ ವ್ಯಂಗ್ಯಚಿತ್ರ ರಚನೆಯ ಪ್ರೇರಣೆ ಹೇಗೆ ?" ಎಂದು ಕೇಳಿದ ಪ್ರಶ್ನೆಯನ್ನು ಸ್ವಾಗತಿಸುತ್ತಾ ಗುಜ್ಜಾರ್ "ಬಿ.ವಿ.ರಾಮಮೂರ್ತಿ ಅವರ ವ್ಯಂಗ್ಯಚಿತ್ರ ನೋಡಿ ಅನುಸರಿಸುತ್ತಾ ಏಕಾಗ್ರಚಿತ್ತದ ಏಕಲವ್ಯನ ಸಿದ್ಧಿಯಂತೆ ನಾನು ಕೂಡಾ ವ್ಯಂಗ್ಯಚಿತ್ರ ಬರೆಯಲು ಕಲಿತೆನು" ಎಂದು ಹೇಳಿದ್ದು ಗುಜ್ಜಾರ್ ಅವರ ವಿನಯ ಮತ್ತು ಮುಂಬರುವ ಯುವಪೀಳಿಗೆಗೆ ಮಾರ್ಗದರ್ಶಕ ಸೂತ್ರಗಳೆರಡನ್ನೂ ಸೂಚಿಸುತ್ತದೆ.
ಮಾತುಕತೆಯ ಮಧ್ಯೆ ಸ್ಥಳದಲ್ಲೇ ವ್ಯಂಗ್ಯಚಿತ್ರ ರಚನೆ ಮಾಡಿದ ಗುಜ್ಜಾರ್ ತೇಜಸ್ವಿ ಜೊತೆಗಿನ ಅನುಭವಗಳನ್ನು ಲವಲವಿಕೆಯಿಂದ ನಿರೂಪಣೆ ಮಾಡಿದ್ದು ಎಲ್ಲರಿಗೂ ತುಂಬಾ ಇಷ್ಟವಾಯಿತು. ಕ್ಯಾರಿಕೇಚರ್ ಅಥವಾ ವ್ಯಂಗ್ಯ ಭಾವಚಿತ್ರ ರಚನೆಗೆ ರೂಪದರ್ಶಿಯಾಗಿ ಹೊಳಲಿ ಪ್ರಕಾಶ್ ಅವರನ್ನು ಕೂರಿಸಿ, ಸ್ಥಳದಲ್ಲೇ ಚಿತ್ರರಚನೆ ಮಾಡಿದ್ದೂ ಅಷ್ಟೇ ವಿಶಿಷ್ಟವಾಗಿತ್ತು.
ಜೆ.ಬಾಲಕೃಷ್ಣ ಅವರು PPT ಪ್ರದರ್ಶನದ ಮೂಲಕ ತಮ್ಮ ಸ್ವಂತ ಕೃತಿಯ ಸ್ವರೂಪವನ್ನು ನಿರೂಪಣೆ ಮಾಡಿದ್ದು ಎಲ್ಲಾ ಕೇಳುಗರನ್ನು ಮಂತ್ರಮುಗ್ಧಗೊಳಿಸಿತು. ಗೆರೆಗಳು ಪ್ರಭುತ್ವ ಮತ್ತು ಸಾಮಾನ್ಯರ ಮುಖಾಮುಖಿಯನ್ನು ಸಾಧ್ಯವಾಗಿಸುತ್ತಾ , ಮಾನವೀಯ ಅಂತಃಕರಣದ ಅಭಿವ್ಯಕ್ತಿಯಾಗಿ ಮೂಡಿಬಂದ ಬಗೆಯನ್ನು ಬಾಲು ಸೊಗಸಾಗಿ ಪರಿಚಯಿಸಿದರು.
ಅಧ್ಯಕ್ಷತೆ ವಹಿಸಿದ್ದ ರಮೇಶ್ ಅಗ್ರಹಾರ ಅವರು ವ್ಯಂಗ್ಯಚಿತ್ರ ಕಲಾವಿದರು "ಕತ್ತಿಯ ಅಲಗಿನ ಮೇಲೆ ನಡೆಯುವ ಸಾಹಸಿಗಳು" ಎಂದು ಅವರ ಪ್ರತಿಭೆ ಮತ್ತು ಅಂತರ್ ದೃಷ್ಟಿಯನ್ನು ಮೆಚ್ಚಿದರು. "ಪ್ರಭುತ್ವವನ್ನು ಉಗಿಯಲು ಮತ್ತು ಉಗಿಸಿಕೊಳ್ಳಲು ಸಿದ್ಧರಾದವರು" ಎಂಬ ರಮೇಶ್ ಅವರ ನಿರೂಪಣೆ ಗೆರೆಗಳ ಗ್ರಹಣಶಕ್ತಿಯನ್ನು ಸೂಚಿಸುತ್ತದೆ. H.A ಪುರುಷೋತ್ತಮ ರಾವ್ , ಹಾ.ಮ. ರಾಮಚಂದ್ರ, ಜೆ.ಜಿ.ನಾಗರಾಜ್ , C.M. ಮುನಿಯಪ್ಪ ಇತರ ಗೆಳೆಯರ ನೇತೃತ್ವದಲ್ಲಿ ಮತ್ತು ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.
- ವಿ.ಚಂದ್ರಶೇಖರ ನಂಗಲಿ, ೨೬.೦೮.೨೩
ಗಂಭೀರವಾದ ವಿಚಾರ ವಸ್ತುವನ್ನು ಹಾಸ್ಯದ ಮೂಲಕ ತಿಳಿಸುವುದೇ ವ್ಯಂಗ್ಯ ಚಿತ್ರದ ಶೈಲಿ.ಇಲ್ಲಿ ಕಲ್ಪನೆ ಬಹಳ ಮುಖ್ಯ. ವ್ಯಂಗ್ಯ ಚಿತ್ರಕಾರನಿಗೆ ವ್ಯಕ್ತಿ,ಘಟನೆ ಕುರಿತು ಚಿತ್ರ ರಚಿಸುವಾಗ ಆಂಗಿಕ ಭಾಷೆ,ಕಾಲ್ಪನಿಕ ವಿವೇಚನೆ ಅತ್ಯಗತ್ಯ. ಈ ಮೂಲಕ ಪ್ರಕಟವಾಗುವ ವ್ಯಂಗ್ಯ ಚಿತ್ರಗಳು ಒಂದು ಪ್ರಬಲ ಶಕ್ತಿಯಾಗಿ ಪರಿಣಾಮ ಬೀರುತ್ತದೆ ಎಂದು ಖ್ಯಾತ ವ್ಯಂಗ್ಯ ಚಿತ್ರಕಾರ ಗುಜ್ಜಾರಪ್ಪ (ಗುಜ್ಜಾರ್ ) ತಿಳಿಸಿದರು.
ಅವರು ಇಂದು (ದಿನಾಂಕ 27 - 8 - 2023)ಕೋಲಾರದಲ್ಲಿ ಜರುಗಿದ ಓದುಗ - ಕೇಳುಗ -ನಮ್ಮ ನಡೆಕಾರ್ಯಕ್ರಮದಲ್ಲಿ ಡಾ.ಜೆ ಬಾಲಕೃಷ್ಣ ಅವರ 'ವ್ಯಂಗ್ಯ ಚಿತ್ರ ಚರಿತ್ರೆ 'ಕೃತಿ ಕುರಿತು ಮಾತನಾಡಿದರು. ಈ ಕೃತಿಯಲ್ಲಿ ಪ್ರಕಟವಾಗಿರುವ ಚಿತ್ರಗಳು ಆಳವಾದ ಅಧ್ಯಯನದಿಂದ ದೊರೆತವುಗಳಾಗಿವೆ.ಆದಿ ಮಾನವನ ಗುಹೆಗಳಲ್ಲಿನ ಚಿತ್ರಗಳಿಂದ ಹಿಡಿದುಇಂದಿನ ಸಾಮಾಜಿಕ ಪ್ರಸ್ತುತತೆಯವರೆಗೆ ಇಲ್ಲಿ ಸಂಗ್ರಹಿಸಲಾದ ಜಗತ್ತಿನ ವಿವಿಧ ವ್ಯಂಗ್ಯಚಿತ್ರಗಳು ಒಟ್ಟಾರೆ ವ್ಯಂಗ್ಯ ಚಿತ್ರ ಚರಿತ್ರೆಯ ಯಶಸ್ವಿ ಕೃತಿಯಾಗಿ ರೂಪಗೊಂಡಿದೆ ಎಂದರು ಹಾಗೂ ಕನ್ನಡದಲ್ಲಿಇದು ಪ್ರಥಮ ಪ್ರಯತ್ನ ಎಂದು ಬಣ್ಣಿಸಿದರು. ಗುಜ್ಜಾರ್ ಅವರು ಕೆಲವು ಚಿತ್ರಗಳನ್ನು ಪ್ರಾತ್ಯಕ್ಷಿಕವಾಗಿ ರಚಿಸುವ ಮೂಲಕ ಸಭಿಕರ ಗಮನ ಸೆಳೆದರು.
ಸಭೆಯಲ್ಲಿ ಉಪಸ್ಥಿತರಿದ್ದಕೃತಿ ರಚನಕಾರ ಡಾ. ಜೆ. ಬಾಲಕೃಷ್ಣ ಪಿಪಿಟಿ ಮೂಲಕ ಅನೇಕ ಅದ್ಭುತ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದರು.ಕಾರ್ಟೂನ್ ಎಂಬ ಪದ ಹುಟ್ಟಿಕೊಂಡ ವಿದ್ಯಮಾನದಿಂದ ಹಿಡಿದು ಈವರೆಗಿನ ಅನೇಕ ವಿಡಂಬನೆ,ಸಾಮಾಜಿಕ ಪ್ರಜ್ಞೆ,ತಿಳುವಳಿಕೆ,ಭಾಷಾ ಸಾಮರಸ್ಯ,ಬದುಕು ಕುರಿತಂತೆ ವಿವಿಧ ಸ್ಥರಗಳನ್ನು ಬಿಂಬಿಸುವ ಅನೇಕ ಚಿತ್ರಗಳನ್ನು ಅವರು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಿತ್ರಕಲಾವಿದ ಅಗ್ರಹಾರ ರಮೇಶ್ ಮಾತನಾಡಿ ಬದುಕಿನ ನೋವು, ನಲಿವು ಸಂಭ್ರಮ ಕುರಿತು ವ್ಯಂಗ್ಯ ಚಿತ್ರಗಳೇ ಮಾತನಾಡುತ್ತವೆ.ಇತರ ಪ್ರಕಾರಗಳಿಗೆ ಹೋಲಿಸಿದರೆ ವ್ಯಂಗ್ಯ ಚಿತ್ರ ರಚನೆ ಅಷ್ಟು ಸುಲಭವಲ್ಲ. ಚಿತ್ರಕಾರನಿಗೆ ಇದು ಆತಂಕ, ಆಪತ್ತುಗಳನ್ನೂ ಉಂಟುಮಾಡಬಲ್ಲ ಸಾಧ್ಯತೆಗಳಿವೆ ಎಂದರು.ಆದರೂ ಇದು ಸುಲಭವಾಗಿ ಸಾಮಾನ್ಯರಿಗೂ ಏನನ್ನಾದರೂ ಅರ್ಥವಾಗಿಸಬಲ್ಲ ಸಾಧನ ಎಂದರು.
ಈ ಸಂದರ್ಭದಲ್ಲಿ ಡಾ. ಜೆ. ಬಾಲಕೃಷ್ಣ ಅವರ ವ್ಯಂಗ್ಯ ಚಿತ್ರಗಳ ಪ್ರದರ್ಶನ ಸಹ ಏರ್ಪಡಿಸಲಾಗಿದ್ದು ಸಭಿಕರು ಆಸಕ್ತಿಯಿಂದ ವೀಕ್ಷಿಸಿದರು.
ವಿಜ್ಞಾನ ಮತ್ತು ಪರಿಸರ ಲೇಖಕ ಎಚ್ ಎ ಪುರುಷೋತ್ತಮರಾವ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ರಮಾನಂದ್,ಸಾಹಿತಿ ಸುಬ್ಬಲಕ್ಷ್ಮಿ ಹಾಗು ನಂಜುಂಡಪ್ಪ ಪುಸ್ತಕ ನೀಡಿ ಗಣ್ಯರನ್ನು ಸ್ವಾಗತಿಸಿದರು.
ಚರ್ಚೆಯಲ್ಲಿ ಹಿರಿಯ ಪತ್ರಕರ್ತ ಡಾ. ಸಿ ಮುನಿಯಪ್ಪ,ಡಾ. ವಿ ಚಂದ್ರಶೇಖರನಂಗಲಿ,ಸಮುದಾಯದ ಅಚ್ಯುತ,ಹ ಮಾ ರಾಮಚಂದ್ರ ,ಡಾ. ಸಿ ಎ ರಮೇಶ್, ಡಾ. ಶಂಕರಪ್ಪ, ವಿಜ್ಞಾನಿ ನಿಶಾ ಶಾಸ್ತ್ರಿ, ಗೊಲ್ಲಳ್ಳಿ ಶಿವಪ್ರಸಾದ್, ಸಾ ರಘುನಾಥ, ಡಾ. ಕುಪ್ಪನಹಳ್ಳಿ ಜೆ.ಜಿ. ನಾಗರಾಜ್, ಹೊಳಲಿ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು.
- ಪುರುಷೋತ್ತಮ ರಾವ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ