ಬುಧವಾರ, ಜನವರಿ 10, 2024

ನಡೆದಷ್ಟು ದೂರ.... ನನ್ನ ಪ್ರವಾಸ ಕಥನ

ನನ್ನ ಹೊಸ ಕೃತಿ ಹಾಗೂ ಪ್ರವಾಸ ಕಥನ "ನಡೆದಷ್ಟು ದೂರ" ಈಗಷ್ಟೇ ಪ್ರಕಟವಾಗಿದೆ. ಆ ಕೃತಿಗೆ ನಾನು ಬರೆದಿರುವ ಲೇಖಕರ ಮಾತು ಹಾಗೂ ಪ್ರವಾಸ ಕಥನ ಸಾಹಿತ್ಯದ ಪೀಠಿಕೆ, ಪರಿಚಯ ಇಲ್ಲಿದೆ.


 

ನಡೆದಷ್ಟು ದೂರ....

         ಮಾನವ ಒಂದೆಡೆ ಹೆಚ್ಚುಕಾಲ ನಿಲ್ಲುವವನಲ್ಲ. ಇಲ್ಲದಿದ್ದಲ್ಲಿ ಸುಮಾರು ಮೂರು ಲಕ್ಷ ವರ್ಷಗಳ ಹಿಂದೆ ಆಫ್ರಿಕಾದಲ್ಲಿ ವಿಕಾಸಗೊಂಡನೆಂದು ಹೇಳಲಾಗುವ ಆಧುನಿಕ ಮಾನವ ಇಂದು ವಿಶ್ವದೆಲ್ಲೆಡೆ ಪಸರಿಸಿರುತ್ತಿರಲಿಲ್ಲ. ಆದರೂ ಮಾನವನ ಎಲ್ಲ ಪ್ರಯಾಣಗಳೂ ಪ್ರವಾಸಗಳಲ್ಲ. ಇಂದೂ ಸಹ ಮಾನವ ಜಗತ್ತಿನಾದ್ಯಂತ ನಿರಂತರ ಚಲನೆಯಲ್ಲಿದ್ದಾನೆ- ಉದ್ಯೋಗ ಅರಸುವವನಾಗಿ, ನಿರಾಶ್ರಿತನಾಗಿ, ವ್ಯಾಪಾರಿಗಳಾಗಿ, ವಿಜ್ಞಾನಿಗಳಾಗಿ, ಸೈನಿಕರಾಗಿ. ಇವೆಲ್ಲವೂ ಬದುಕನ್ನು ಅರಸುವ ಚಲನೆಗಳಾಗಿವೆ.

         ಆದರೆ ಪ್ರವಾಸದಲ್ಲಿ ಮಾನವನಿಗೆ ಮೊದಲಿನಿಂದಲೂ ವಿಶಿಷ್ಟ ಆಸಕ್ತಿಯಿದೆ; ಅದೊಂದು ಬೌದ್ಧಿಕ ಹಂಬಲ, ವಿಸ್ಮಯಗಳನ್ನು, ಅಚ್ಚರಿಗೊಳಿಸುವಂಥವನ್ನು ಕಾಣಬೇಕೆಂಬ ಹಾಗೂ ಅನುಭವಿಸಬೇಕೆಂಬ ಕುತೂಹಲ ಮಾನವನ ವಿಕಾಸದ ಹಾದಿಯಲ್ಲಿ ಮೊದಲಿನಿಂದಲೂ ಕಂಡುಬಂದಿದೆ. ಅದೇ ರೀತಿ ತಾನು ಕಂಡದ್ದನ್ನು ವಿವರಿಸುವ, ನಿರೂಪಿಸುವ ಅವನ ಕಾರ್ಯವೂ ಸಹ ಅಷ್ಟೇ ಪ್ರಾಚೀನವಾದದ್ದು. ಭಾಷೆಯ ಆವಿಷ್ಕಾರದ ನಂತರ ಲಿಪಿಯ ಆವಿಷ್ಕಾರಕ್ಕೆ ಮೊದಲು ಮಾನವನ ಈ ರೀತಿಯ ತನ್ನೆಲ್ಲ ವಿವರಣೆಗಳು ಮೌಖಿಕವಾಗಿಯೇ ಇರುತ್ತಿದ್ದವು. ಹಲವಾರು ದಿನಗಳು ಬೇಟೆಗಾಗಿ ಅಥವಾ ಆಹಾರ ಅರಸಿ ದೂರ ಪ್ರದೇಶಗಳಿಗೆ ಹೋಗಿರುತ್ತಿದ್ದ ಮಾನವ ತಾನು ಹಿಂದಿರುಗಿದ ನಂತರ ತನ್ನ ಕುಟುಂಬಕ್ಕೆ, ಸಮುದಾಯಕ್ಕೆ ತಾವು ಕಂಡದ್ದನ್ನು, ಅನುಭವಿಸಿದ್ದನ್ನು ಸಂಜೆ ಬೆಂಕಿಯ ಸುತ್ತಲೂ ಕೂತು, ತಂದಿದ್ದ ಆಹಾರ ಸೇವಿಸುತ್ತಾ ವರ್ಣಿಸುತ್ತಿದ್ದ. ಬಹುಶಃ ಜಗತ್ತಿನ ಮೊಟ್ಟ ಮೊದಲ ಪ್ರವಾಸ ಕಥನಗಳು ಇವೇ ಆಗಿದ್ದವೆನ್ನಿಸುತ್ತದೆ. ಅವುಗಳನ್ನು ಆತ ತನ್ನ ಗುಹಾಚಿತ್ರಗಳಲ್ಲಿ ಚಿತ್ರಿಸಿರಲೂಬಹುದು.

         ಮಾನವನ ಹಾಗೂ ನಾಗರಿಕತೆಯ ವಿಕಾಸದ ಮುಂದಿನ ಹಂತದಲ್ಲಿ ರಾಜರು, ಸಾಮ್ರಾಟರು ಹಾಗೂ ಸೈನಿಕರು ತಮ್ಮ ಸಾಮ್ರಾಜ್ಯ ವಿಸ್ತರಣೆಗೆ, ಶತ್ರುಗಳ ಮೇಲಿನ ದಾಳಿಗೆ ಸಾವಿರಾರು ಮೈಲಿಗಳು ಪ್ರಯಾಣ ಮಾಡುತ್ತಿದ್ದರು. ಇಲ್ಲಿಯೂ ಸಹ ರಾಜರು, ಸೈನಿಕರು ಯುದ್ಧದಲ್ಲಿ ಬದುಕುಳಿದವರು ಹಿಂದಿರುಗಿದಾಗ ತಾವು ನೋಡಿದ ಹೊಸ ಸ್ಥಳಗಳ ವಿವರಣೆಗಳನ್ನು ನೀಡುತ್ತಿದ್ದರು ಹಾಗೂ ಹೊಸ ಸ್ಥಳಗಳಿಂದ ತಂದ `ಪ್ರವಾಸ ಸ್ಮರಣಿಕೆ'(ಸಾವೆನಿರ್)ಗಳನ್ನು ತಮ್ಮ ಕುಟುಂಬಗಳಿಗೆ, ಗೆಳೆಯರಿಗೆ ನೀಡುತ್ತಿದ್ದರು. ಕ್ರಮೇಣ ರಾಜರು ತಾವು ಯುದ್ಧಗಳಿಗೆ ಹೊರಟಾಗ ಹೊಸ ಸ್ಥಳಗಳ ವಿವರಗಳನ್ನು ದಾಖಲಿಸಲು ಕೆಲವರನ್ನು ಪ್ರತ್ಯೇಕವಾಗಿ ಕರೆದೊಯ್ಯತೊಡಗಿದರು.

         ಇಂದು ನಾವು ಒಂದು ಪ್ರದೇಶದ, ದೇಶದ, ಒಂದು ಸಮುದಾಯದ ಚರಿತ್ರೆಯನ್ನು, ಸಂಸ್ಕೃತಿಯನ್ನು ಅರಿಯಲು ಹಲವಾರು ಆಕರಗಳಿವೆ. ಅವುಗಳಲ್ಲಿ ಮುಖ್ಯವಾದುವು ಅಲ್ಲಿನ ಪುರಾಣಗಳು (ಉದಾಹರಣೆಗೆ, ಸುಮಾರು 4000 ವರ್ಷಗಳ ಹಿಂದೆ ಲಿಖಿತ ರೂಪದಲ್ಲಿ ರಚಿತವಾಗಿದೆಯೆನ್ನಲಾದ ಮೆಸಪೊಟೇಮಿಯಾದ ʻಗಿಲ್ಗಮೇಶ್ʼ ಪುರಾಣದಲ್ಲಿ ಗಿಲ್ಗಮೇಶ್ ಮತ್ತು ಎಂಕಿಡು ಸಿಡಾರ್ ಕಾಡಿಗೆ ಭೇಟಿ ನೀಡುವ ವೃತ್ತಾಂತವನ್ನು ಅತ್ಯಂತ ಪ್ರಾಚೀನ ಲಭ್ಯವಿರುವ ಲಿಖಿತ ಸಾಹಿತ್ಯವೆಂದು ಪರಿಗಣಿಸಲಾಗಿದೆ), ಸ್ಥಳದ ವೃತ್ತಾಂತವನ್ನು ತಿಳಿಸುವ ಗ್ರಂಥಗಳು (ಉದಾ: ಕ್ರಿ.ಶ. 1149-50ರಲ್ಲಿ ರಚಿತವಾಗಿದೆಯೆನ್ನಲಾದ ಕಾಶ್ಮೀರದ ಚರಿತ್ರೆಯನ್ನು ತಿಳಿಸುವ ಕಲ್ಹಣನ ʻರಾಜತರಂಗಿಣಿʼ), ನಾಣ್ಯಗಳು, ಶಾಸನಗಳು, ಸ್ಮಾರಕಗಳಂತಹ ಪ್ರಾಚ್ಯವಸ್ತು ಅವಶೇಷಗಳು ಹಾಗೂ ಬಹಳ ಮುಖ್ಯವಾಗಿ ಪ್ರವಾಸ ಕಥನಗಳು. ಇಂದು ನಾವು ಪ್ರಾಚೀನ ಭಾರತದ ಚರಿತ್ರೆ ಮತ್ತು ಸಂಸ್ಕೃತಿಯ ಚಿತ್ರಣವನ್ನು ನಾನಾಮೂಲಗಳಿಂದ ಕಟ್ಟಬೇಕಾಗಿದೆ. ದೂರದ ಗ್ರೀಸ್ ಮುಂತಾದ ಹಲವಾರು ದೇಶಗಳಿಂದ ನೂರಾರು ಪ್ರವಾಸಿಗಳು ಸುಮಾರು ಕ್ರಿ.ಪೂ. 500ರಿಂದ ಅಂದರೆ ಇಲ್ಲಿಗೆ 2500 ವರ್ಷಗಳಿಂದ ನಮ್ಮ ದೇಶಕ್ಕೆ ಬಂದು ತಾವು ಕಂಡು ಕೇಳಿದ ವಿಷಯಗಳನ್ನು ಬರೆದಿಟ್ಟು ಹೋಗಿರುವ ದಾಖಲೆಗಳೇ ಬಹುಮುಖ್ಯ ಆಕರಗಳಾಗಿವೆ. ಇದೇ 1964ರಲ್ಲಿ ಪ್ರಕಟವಾದ ಶ್ರೀ ಎಚ್.ಎಲ್.ನಾಗೇಗೌಡರ ಬೃಹತ್ ಸಂಪುಟ `ಪ್ರವಾಸಿ ಕಂಡ ಇಂಡಿಯಾ'ದ ವಸ್ತು ವಿಷಯವಾಗಿದೆ. ಗ್ರೀಸ್ ನ ಹೆರೊಡೋಟಸ್ ಮತ್ತು ಟೇಸಿಯಾಸ್ ರಿಂದ ಹಿಡಿದು ಅಲೆಕ್ಸಾಂಡರ್ ನ ಅವಧಿಯಲ್ಲಿ ಮೆಗಾಸ್ತನೀಸ್, ಟಾಲೆಮಿ, ಅರಬ್ಬಿ ಪ್ರವಾಸಿಗರಾದ ಸುಲೇಮಾನ್ ಮತ್ತು ಅಲ್ಮಸೂದಿ, ಐದನೇ ಶತಮಾನದಲ್ಲಿ ಚೀನಾದಿಂದ ಬಂದ ಫಾಹಿಯಾನ್, ಏಳನೇ ಶತಮಾನದಲ್ಲಿ ಬಂದ ಹುಯೆನ್‌ ತ್ಸಾಂಗ್, ಹತ್ತನೇ ಶತಮಾನದಲ್ಲಿ ಘಜ್ನಿಯ ಸುಲ್ತಾನ್ ಮಹಮೂದನ ಕಾಲದಲ್ಲಿ ಬಂದ ಅಲ್ಬೆರೂನಿ, ಹದಿಮೂರನೇ ಶತಮಾನದಲ್ಲಿ ಬಂದ ಮಾರ್ಕೊಪೋಲೋ, ನಂತರದ ಇಬನ್ ಬತೂತ, ಹದಿನೈದನೇ ಶತಮಾನದಲ್ಲಿ ಅಂದರೆ ವಿಜಯನಗರ ಸಾಮ್ರಾಜ್ಯ ಅಸ್ಥಿತ್ವದಲ್ಲಿದ್ದಾಗ ಇಟಲಿಯ ನಿಕೊಲೋ ಟಿಕಾಂಟಿ, ಹೇರಾತಿನ ಅಬ್ದುಲ್ ರಜಾಕ್, ರಷ್ಯಾ ದೇಶದ ನಿಕಿಟಿನ್, ಪೋರ್ಚುಗಲ್ಲಿನ ಬಾಬರೋಸಾ, ಹದಿನೇಳನೇ ಶತಮಾನದಲ್ಲಿ ಟಾವೆರ್ನಿಯರ್, ಥೇವನಾಟ್, ಹದಿನೆಂಟನೇ ಶತಮಾನದಲ್ಲಿ ಅಬ್ಬೆ ಡೂಬೆ ಮುಂತಾದವರು ತಮ್ಮ ಸ್ವಾರಸ್ಯದ, ಅಮೂಲ್ಯದ ಪ್ರವಾಸ ಕಥನಗಳನ್ನು ಬರೆದಿಟ್ಟು ಹೋಗಿದ್ದಾರೆ. ಈ ಕಥನಗಳಿಂದ ಇಂಡಿಯಾ ದೇಶದ ಕೇವಲ ರಾಜಕೀಯ ಚರಿತ್ರೆಯಷ್ಟೇ ಅಲ್ಲದೆ ಆಯಾಕಾಲದ ಸಾಮಾಜಿಕ, ನೈತಿಕ, ಆರ್ಥಿಕ, ವಾಣಿಜ್ಯ ವ್ಯಾಪಾರಗಳ ವಿಚಾರಗಳೂ ತಿಳಿಯುತ್ತವೆ. ಎಚ್.ಎಲ್.ನಾಗೇಗೌಡರ ಈ ಸಂಪುಟಕ್ಕೆ ಕುವೆಂಪುರವರು ಬರೆದಿರುವ ಮುನ್ನುಡಿಯಲ್ಲಿ ಅವರು ಹೇಳಿರುವಂತೆ, `ಈ ಪ್ರವಾಸಾನುಭವ ಕಥನಗಳಲ್ಲಿ ಒಮ್ಮೊಮ್ಮೆ ನಿರ್ಲಕ್ಷಿಸಬಹುದಾದ ತಪ್ಪು ಕಲ್ಪನೆ ನುಸುಳಬಹುದು, ಅತಿರೇಕಗಳು ಕಾಣಿಸಬಹುದು; ಆದರೆ ಒಟ್ಟಿನಲ್ಲಿ ಅವರ ಕಣ್ಣಿಗೆ ಕಂಡ ಆಯಾ ಕಾಲದ ಇಂಡಿಯಾ ದೇಶದ ನೈಜ ಚಿತ್ರಣ ಕಂಡುಬರುತ್ತದೆ. ಈ ಕಥನದ ಪುಟಗಳನ್ನು ತಿರುಹುವಾಗ, ಗತಕಾಲದ ಭಾರತೀಯ ಸಂಸ್ಕೃತಿಯ ವೈಭವದ ಚಿತ್ರಪಟವನ್ನು ನಮ್ಮ ಕಣ್ಮುಂದೆ ಸುರುಳಿ ಬಿಚ್ಚಿ ಹರಡಿದಂತೆ ಭಾಸವಾಗುತ್ತದೆ'.

         ಹಾಗಾಗಿ ಪ್ರವಾಸ ಕಥನ ಸಾಹಿತ್ಯದ ಒಂದು ಪ್ರಕಾರವಾಗಿ ವಿಶಿಷ್ಟವಾದುದು. ಏಕೆಂದರೆ ಅದು ಇತರ ಪ್ರಕಾರಗಳನ್ನೂ ತನ್ನಲ್ಲಿ ಒಳಗೊಳ್ಳುತ್ತದೆ - ಅದು ಚರಿತ್ರೆ, ಸಂಸ್ಕೃತಿ, ಕಲೆಯಲ್ಲದೆ, ಪುರಾಣಗಳ, ಸಾಹಸಗಾಥೆಗಳಂತಹ ಇತರ ಅಧ್ಯಯನ ಶಿಸ್ತುಗಳನ್ನು ಸಹ ಒಳಗೊಳ್ಳುತ್ತದೆ. ಪ್ರವಾಸ ಕಥನಗಳು ಜಗತ್ತಿನ ಇತರ ಸಂಪ್ರದಾಯ, ನಡವಳಿಕೆಗಳನ್ನು ಪರಿಚಯಿಸುತ್ತವೆ ಹಾಗೂ ವಿವಿಧ ಸಮಾಜಗಳ ನಡುವಿನ ಈ ಸಂಪ್ರದಾಯಗಳ ಭಿನ್ನತೆಗಳನ್ನು ಸಂಭ್ರಮಿಸುತ್ತವೆ, ಗತಕ್ಕೂ ವರ್ತಮಾನಕ್ಕೂ ಸೇತುವೆಗಳ ಹಾಗೆ ಕಾರ್ಯನಿರ್ವಹಿಸುತ್ತವೆ.

         ಶೇಕ್ಸ್‌ ಪಿಯರ್ ತನ್ನ `ಮರ್ಚಂಟ್ ಆಫ್ ವೆನೀಸ್' ಮತ್ತು `ರೋಮಿಯೋ ಜೂಲಿಯೆಟ್' ನಾಟಕಗಳ ಕಥಾವಸ್ತುಗಳ ಹಿನ್ನೆಲೆಯನ್ನು ಇಟಲಿಗೆ ಪ್ರಯಾಣ ಮಾಡದೆ, ಪ್ರವಾಸ ಕಥನಗಳ ಆಕರದಿಂದಲೇ ಪಡೆದನಂತೆ.

         ಇಂಥ ಸುದೀರ್ಘ ಇತಿಹಾಸ ಹೊಂದಿದ್ದರೂ ಸಹ ಪ್ರವಾಸ ಕಥನಗಳನ್ನು ಸಾಹಿತ್ಯ ಪ್ರಕಾರವಾಗಿ 15-16 ಶತಮಾನಗಳಲ್ಲಿ ಯೂರೋಪಿನ ತನ್ನ ವಸಾಹತು ಮತ್ತು ವ್ಯಾಪಾರದ ವಿಸ್ತರಣೆಗೆ ಮಾಹಿತಿ ಒದಗಿಸುವ ಒಂದು ಆಧುನಿಕ ಪ್ರಕಾರವೆಂದೇ ಪರಿಗಣಿಸಲ್ಪಟ್ಟಿದೆ. ಮುದ್ರಣ ತಂತ್ರಜ್ಞಾನವೂ ಅದಕ್ಕೆ ಕೊಡುಗೆ ನೀಡಿದೆ.

         ನನ್ನ ಹಲವಾರು ವರ್ಷಗಳ ಪ್ರವಾಸದಲ್ಲಿ ನಾನು ಕಂಡುದನ್ನು, ನನ್ನ ಅನುಭವಗಳನ್ನು, ಅಲ್ಲಿನ ಚರಿತ್ರೆ ಮತ್ತು ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸಿ ಅವುಗಳನ್ನು ಇಲ್ಲಿ ದಾಖಲಿಸಲು ಪ್ರಯತ್ನಿಸಿದ್ದೇನೆ. ಇಲ್ಲಿರುವ ಎಲ್ಲ ಬರೆಹಗಳನ್ನೂ ನಾನು ಪ್ರವಾಸ ಕಥನಗಳೆಂದು ಹೇಳಲಾರೆ, ಆದರೆ ಅವು ನನ್ನ ಪ್ರವಾಸದ ಹಿನ್ನೆಲೆಯಿಂದ ರೂಪುಗೊಂಡ ಬರೆಹಗಳೇ ಆಗಿವೆ. ಈ ಬರೆಹಗಳಲ್ಲಿ ಬಳಸಿಕೊಂಡಿರುವ ಛಾಯಾಚಿತ್ರಗಳನ್ನು ನಾನೇ ತೆಗೆದದ್ದು ಹಾಗೂ ಕೆಲವನ್ನು ಇಂಟರ್ನೆಟ್ ನಿಂದ/ವಿಕಿಪೀಡಿಯಾ ಮುಂತಾದ ಆಕರಗಳಿಂದ ಪಡೆದಿದ್ದೇನೆ.

         ಇದರಲ್ಲಿನ ಲೇಖನಗಳಲ್ಲಿ ಬಹುಪಾಲು ಲೇಖನಗಳು ಇಡಿಯಾಗಿ ಇಲ್ಲವೇ ಸಂಕ್ಷಿಪ್ತ ರೂಪದಲ್ಲಿ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಆ ಪತ್ರಿಕೆಗಳ ಸಂಪಾದಕರಿಗೆ ನನ್ನ ಕೃತಜ್ಞತೆಗಳು. ನನ್ನ ಈ ಸಂಕಲನಕ್ಕೆ ಸುಂದರ ಹೆಸರನ್ನು ಸೂಚಿಸಿದ ಮಂಡ್ಯದ ಗೆಳೆಯ ರಾಜೇಂದ್ರ ಪ್ರಸಾದ್ ಗೆ ಧನ್ಯವಾದಗಳು. ಇದನ್ನು ಸುಂದರವಾಗಿ ಮುದ್ರಿಸಿದ ರಘು ಪ್ರಿಂಟ್ಸ್ ನ ರಘು ಮತ್ತು ಪದ್ಮನಾಭರೆಡ್ಡಿಯವರಿಗೂ ಸಹ ಧನ್ಯವಾದಗಳು.

ಜೆ.ಬಾಲಕೃಷ್ಣ

j.balakrishna@gmail.com

     

ಪ್ರತಿಗಳಿಗೆ ಸಂಪರ್ಕಿಸಿ: 

 j.balakrishna@gmail.com

 

 

 

ಕಾಮೆಂಟ್‌ಗಳಿಲ್ಲ: