Translate
ಶುಕ್ರವಾರ, ಏಪ್ರಿಲ್ 01, 2011
ಮಂಗಳವಾರ, ಫೆಬ್ರವರಿ 08, 2011
ನನ್ನ ಹೊಸ ಪುಸ್ತಕ- `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ'

ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ನನ್ನ `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಎಂಬ ಕೃತಿಯನ್ನು ಪ್ರಕಟಿಸಿದೆ. ಅದರ ಕಿರು ಪರಿಚಯ ಈ ಮುಂದಿನಂತಿದೆ:
`ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಒಂದು ಅಪೂರ್ವ ಮಾಹಿತಿಗಳನ್ನು ಒಳಗೊಂಡ ಕಿರುಪುಸ್ತಕ. ಕೃಷಿಗೆ ಸಂಬಂಧಿಸಿದಂತೆ ಪಾರಂಪರಿಕವಾದ ಜ್ಞಾನ ಮಾತ್ರವಿದ್ದು ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬರಲಾಗಿದೆ. ಹಿಂದೆ ಕೃಷಿಯು ಜೀವಕ್ಕೆ ಅನಿವಾರ್ಯವಾದ ಆಹಾರವನ್ನು ಉತ್ಪಾದಿಸುವ ಒಂದು ಕೆಲಸ ಎಂಬ ಭಾವನೆ ಮಾತ್ರ ಇತ್ತು. ಇಂದು ಕೃಷಿ ಲಾಭ ತಂದುಕೊಡುವ ಒಂದು ವ್ಯವಹಾರವೇ ಆಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆಯ ಮೂಲಕ ಕೃಷಿಯು ಸಾಗುವಳಿ ಪದ್ಧತಿಯಲ್ಲಿ ಸುಧಾರಣೆ ಹಾಗೂ ಇಳುವರಿಯಲ್ಲಿನ ಹೆಚ್ಚಳ ಇವೆಲ್ಲದರ ಮೂಲಕ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಪಾರಂಪರಿಕ ಕೃಷಿ ಪದ್ಧತಿಯಿಂದ ಆಧುನಿಕ ವಾಣಿಜ್ಯ ವ್ಯವಸಾಯ ಪದ್ಧತಿಗಳವರೆಗಿನ ಬೆಳವಣಿಗೆಯಲ್ಲಿ ಕೃಷಿವಿಜ್ಞಾನ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳ, ಸಂಘಸಂಸ್ಥೆಗಳ ಚಿಂತನೆಗಳು ಮಿಳಿತವಾಗಿವೆ. ಹೀಗೆ ಕೃಷಿ ಅಭಿವೃದ್ಧಿಯ ಕುರಿತ ಚಿಂತನೆಗಳು ಕೃಷಿವಿಜ್ಞಾನ ಎಂಬ ಹೊಸ ಜ್ಞಾನಶಾಖೆಯನ್ನು ರೂಪಿಸಿವೆ. ಈ ಜ್ಞಾನದ ವಿವರಣೆಗಳ ಸಾಹಿತ್ಯದ ಸ್ವರೂಪವನ್ನು ಈ ಕೃತಿ ಸ್ಥೂಲವಾಗಿ ವಿವರಿಸಿದೆ. ಜೆ.ಬಾಲಕೃಷ್ಣ ಅವರು ಮೂಲತಃ ವಿಜ್ಞಾನ ಲೇಖಕರಾಗಿರುವುದರಿಂದ ಅವರ ಅಧ್ಯಯನದ ಅಗಾಧತೆಯು ಈ ಕೃತಿಯಲ್ಲಿ ಅನಾವರಣಗೊಂಡಿದೆ.
-ಡಾ.ಎ.ಮುರಿಗೆಪ್ಪ
ಕುಲಪತಿ
ಗುರುವಾರ, ಜನವರಿ 27, 2011
ಕತೆ- ಮೂವರು ಸೋದರಿಯರು
ಜನವರಿ 2011ರ `ಮಯೂರ' ಮಾಸಪತ್ರಿಕೆಯಲ್ಲಿ ನನ್ನ ಕತೆ `ಮೂವರು ಸೋದರಿಯರು' ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.

ಮೂವರು ಸೋದರಿಯರು
ಆಟೋದಿಂದ
ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು.
ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ
ಕೋಣೆಯೊಂದರ ಬಾಗಿಲಿನ ಮೇಲೆ `ಆಫೀಸ್' ಎಂದು ಬರೆಯಲಾಗಿತ್ತು, ಆದರೆ ಅದರ ಬಾಗಿಲು ಮುಚ್ಚಿತ್ತು. ಕೈನಲ್ಲಿದ್ದ
ವಾಚಿನಲ್ಲಿ ಸಮಯ ನೋಡಿದೆ. ಎಂಟು ಗಂಟೆ. ಬಂದದ್ದು ತೀರಾ ಬೇಗ ಆಯಿತೇನೋ ಎನ್ನಿಸಿ, ಯಾರಾದರೂ ಕಾಣುತ್ತಾರೇನೋ
ಎಂದು ಪಡಸಾಲೆಯ ಒಳಕ್ಕೆ ಹೊರಟೆ. ಅಲ್ಲಿ ಒಂದು ಹೆಂಗಸು ಕಸ ಗುಡಿಸುತ್ತಿದ್ದವಳು ನನ್ನನ್ನು ನೋಡಿ,
ಪೊರಕೆ ಅಲ್ಲೇ ಇಟ್ಟು ನನ್ನೆಡೆಗೆ ಬಂದಳು. `ಇಲ್ಲಿ, ಆಫೀಸಿನಲ್ಲಿ ಯಾರೂ ಇಲ್ಲವೆ?' ನಾನು ಕೇಳಿದೆ.
`ಆಫೀಸು ಒಂಭತ್ತು ಗಂಟೆಗೆ ತೆರೆಯುತ್ತದೆ. ಯಾರು ಬೇಕಾಗಿತ್ತು?' ಆಕೆ ಕೇಳಿದಳು. ಒಂದೆರಡು ಗಳಿಗೆ
ಹಾಗೆಯೇ ಇದ್ದೆ, ಏನು ಹೇಳಲೂ ತೋಚದೆ. `ಯಾರನ್ನಾದರೂ ನೋಡಬೇಕಿತ್ತೆ?' ಆಕೆ ಪುನಃ ಕೇಳಿದಳು. `ಹ್ಹಾಂ....
ಇಲ್ಲಿ ವೃದ್ಧಾಶ್ರಮದಲ್ಲಿ ಯಾರಾದರೂ ಜಾಕೋಬ್ ಎನ್ನುವವರಿದ್ದಾರೆಯೆ?' ಕೇಳಿದೆ. `ಜಾಕೋಬ್... ಜಾಕೋಬ್
ಹೆಸರಿನ ಇಬ್ಬರು ಮೂವರಿದ್ದಾರೆ... ಅವರ ಪೂರ್ತಿ ಹೆಸರು ಗೊತ್ತೆ? ಯಾವುದಕ್ಕೂ ಫಾದರ್ ಬರಬೇಕು. ಅವರು
ಆಫೀಸಿಗೆ ಒಂಭತ್ತು ಗಂಟೆಗೆ ಬಂದು ಹೋಗುತ್ತಾರೆ. ಬನ್ನಿ ಆಫೀಸಿನಲ್ಲಿ ಕೂತಿರಿ' ಎಂದು ತನ್ನ ಸೊಂಟದಲ್ಲಿ
ಸಿಕ್ಕಿಸಿಕೊಂಡಿದ್ದ ಕೀಲಿಗೊಂಚಲು ತೆಗೆದು ಆಫೀಸಿನೆಡೆಗೆ ಹೊರಟಳು. ನಾನು ಅವಳನ್ನು ಹಿಂಬಾಲಿಸಿದೆ.
ಆಫೀಸಿನಲ್ಲಿ ಭೇಟಿ ನೀಡುವವರು ಕೂಡಲೆಂದು ಮೂಲೆಯೊಂದರಲ್ಲಿ
ಸೋಫಾ ಹಾಕಿದ್ದರು. ರಾತ್ರಿಯ ಪ್ರಯಾಣದಿಂದ ಕೊಂಚ ಬಳಲಿದ್ದೆ. ಸೋಫಾ ದೊರೆತಿದ್ದು ಸುಪ್ಪತ್ತಿಗೆ ದೊರೆತಂತಾಯಿತು.
`ನೀರೇನಾದರೂ ಬೇಕಾದರೆ ಅಲ್ಲೇ ಇದೆ ನೋಡಿ' ಎಂದಳು ಆಕೆ. ಗೋಡೆಯ ಪಕ್ಕದಲ್ಲಿ ನೀರಿನ ಫಿಲ್ಟರ್ ಇಟ್ಟಿದ್ದರು.
`ಜಾಕೋಬ್... ನಿಮಗೇನಾಗಬೇಕು? ನಿಮ್ಮ ನೆಂಟರೆ?' ಆಕೆ ಹೊರಡುವ ಮುನ್ನ ಕೇಳಿದಳು. `ಹ್ಹಾಂ... ಇಲ್ಲ....
ಪರಿಚಯದವರು. ಅವರನ್ನು ಕಂಡು ಬಹಳ ವರ್ಷಗಳಾಗಿವೆ. ಕಂಡುಹೋಗೋಣ ಎಂದು ಬಂದೆ' ಎಂದು ಹೇಳಿದೆ. ಆಕೆ ನನ್ನೆಡೆಗೇ
ನೋಡುತ್ತಿದ್ದು ಹೊರಹೊರಟಳು.
ಸೋಫಾಗೆ ಹಿಂದಕ್ಕೆ ತಲೆಯೊರಗಿಸಿ ಕಣ್ಣು ಮುಚ್ಚಿದೆ. ಇಪ್ಪತ್ತೈದು
ವರ್ಷಗಳು! ಎಷ್ಟು ಬೇಗ ಕಳೆದುಹೋಗಿದೆ! ನಾನು ಎಂಭತ್ತೇಳರಲ್ಲಿ ಮಡಿಕೇರಿ ಬಿಟ್ಟವನು ಕಳೆದ ವಾರವಷ್ಟೇ
ಅಲ್ಲಿಗೆ ಕಾಲಿರಿಸಿದ್ದು. ಸಮಯ ಎಷ್ಟು ಬೇಗ ಹೋಗಿಬಿಡುತ್ತದೆ! ಮೊನ್ನೆ ಮೊನ್ನೆ ತಾನೆ ಮಡಿಕೇರಿಗೆ
ಮೊದಲಬಾರಿ ಹೋಗಿದ್ದೆನ್ನಿಸುತ್ತದೆ. ಈ ಸಾರಿ ಬ್ರಾಂಚ್ ಇನ್ಸ್ಪೆಕ್ಶನ್‌ಗೆ ನಾನೇ ಮಡಿಕೇರಿಗೆ ಹಾಕಿಸಿಕೊಂಡೆ,
ನೋಡಿ ಬಹಳ ವರ್ಷಗಳಾಗಿದೆ ನೋಡಿಬರೋಣ ಎಂದು.
ಎಂಭತ್ತನಾಲ್ಕರಲ್ಲಿ ನಾನು ಆಗ ತಾನೆ ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ
ಎಂಎಸ್.ಸಿ. ಮುಗಿಸಿದ್ದೆ. ಮುಗಿಸಿ ಇನ್ನೂ ಹಾಸ್ಟೆಲ್ ಖಾಲಿ ಮಾಡಿರಲಿಲ್ಲ. ಅಷ್ಟರಲ್ಲಿ ಈ ಹಿಂದೆ ಬ್ಯಾಂಕಿಂಗ್
ಪರೀಕ್ಷೆ ಬರೆದಿದ್ದ ಫಲಿತಾಂಶ ಬಂದು ನನಗೆ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಸಂದರ್ಶನದಲ್ಲಿ ನಾನು
ಆಯ್ಕೆಯಾಗಿ ನನ್ನ ಮೊದಲ ಪೋಸ್ಟಿಂಗ್ ಮಡಿಕೇರಿಗಾಗಿತ್ತು. ಕೊಡಗಿನಲ್ಲಿ ನನಗೆ ಉದ್ಯೋಗಾವಕಾಶ ದೊರೆತಿದ್ದು
ನನಗೆ ಸಂತೋಷದ ವಿಷಯವೇ ಆಗಿತ್ತು. ಕಾಲೇಜಿನಲ್ಲಿದ್ದಾಗ ಶೈಕ್ಷಣಿಕ ಪ್ರವಾಸ ಹೊರಟಾಗಲೇ ನಾನು ಕೊಡಗನ್ನು
ನೋಡಿದ್ದದ್ದು. ಜುಲೈ ತಿಂಗಳ ಕೊನೆಯಲ್ಲಿ ನಾನು ಮಡಿಕೇರಿಗೆ ಬಂದಿಳಿದಾಗ ಅಲ್ಲಿನ ಮಳೆ ಮತ್ತು ಚಳಿಯನ್ನು
ಕಂಡು ಹೆದರಿದ್ದೆ. ನನಗೆ ಹೆದರಿಕೆ ಇದ್ದದ್ದು ನನ್ನ ಆಸ್ತಮಾದ್ದು. ಈ ವಾತಾವರಣದಲ್ಲಿ ನನ್ನ ಆರೋಗ್ಯ
ಏನಾಗಿಬಿಡುತ್ತದೋ ಎಂಬ ಆತಂಕ ಇತ್ತು.
ಬ್ಯಾಂಕಿಗೆ ರಿಪೋರ್ಟ್ ಮಾಡಿಕೊಂಡಾಗ ಬ್ಯಾಂಕಿನಲ್ಲಿನ ಸಹೋದ್ಯೋಗಿಗಳು
ನಾನೂ `ಬ್ಯಾಚುಲರ್' ಎಂದು ತಿಳಿದು ಒಂದಷ್ಟು ಜನ ಬ್ಯಾಂಕಿನ `ಬ್ಯಾಚುಲರ್'ಗಳು ಮನೆ ಮಾಡಿಕೊಂಡಿದ್ದಾರೆಂದೂ
ನನ್ನನ್ನು ಅವರ ಜೊತೆಗೆ ಸೇರಿಕೊಳ್ಳಲು ಸಲಹೆ ಮಾಡಿದರು. ನನಗೂ ಅದೇ ಬೇಕಿತ್ತು. ಆಗ ತಾನೇ ಕೆಲಸ ದೊರೆತಿದೆ.
ಸಂಬಳ ಕೂಡ ಅಷ್ಟು ಹೆಚ್ಚಿಲ್ಲ. ಒಬ್ಬನೇ ಪ್ರತ್ಯೇಕ ಮನೆ ಅಥವಾ ರೂಮು ಬಾಡಿಗೆಗೆ ಪಡೆಯುವ ಬದಲು ಇತರರ
ಜೊತೆಗಿದ್ದರೆ ಬಾಡಿಗೆಯಲ್ಲೂ ಉಳಿತಾಯವಾಗುತ್ತದೆ ಹಾಗೂ ಹೊಸ ಜಾಗದಲ್ಲಿ ಜೊತೆಗಾರರೂ ಇರುತ್ತಾರೆ. ಬೇರೆ
ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿದ್ದ ಆ `ಬ್ಯಾಚುಲರ್'ಗಳೊಂದಿಗೆ ಮಾತನಾಡಿ ಸಂಜೆಯೇ ಹೋಟೆಲಿನ ರೂಮು
ಖಾಲಿಮಾಡಿ ಅವರ ಮನೆಗೆ ಹೊರಟೆ.
ಚರ್ಚ್ ಬೀದಿಯಲ್ಲಿದ್ದ ಆ ಬಾಡಿಗೆ ಮನೆಯ ಯಜಮಾನ ಜಾಕೋಬ್ ಎಂದು,
ಹಾಗೂ ಆತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿಯಿತು. `ಹುಷಾರಾಗಿರಿ' ಎಂದರು ಬ್ಯಾಂಕಿನ
ಸಹೋದ್ಯೋಗಿಗಳು ತಮಾಷೆಗಾಗಿ. ದೊಡ್ಡ ಕಾಂಪೌಂಡ್ ಇದ್ದ ಆ ಮನೆಗಳಲ್ಲಿ ಎರಡನ್ನು ನಮ್ಮಂತಹವರಿಗೆ ಬಾಡಿಗೆ
ನೀಡಿದ್ದರು. ಒಂದೊಂದು ಮನೆಯಲ್ಲಿ ಮೂರು-ನಾಲ್ಕು ಜನ ಬ್ಯಾಚುಲರ್‌ಗಳು ಬಾಡಿಗೆಗಿದ್ದರು. ಜಾಕೋಬ್ ಮತ್ತು
ಕುಟುಂಬದವರಿದ್ದ ಮನೆ ಪಕ್ಕ ಖಾಲಿ ಜಾಗವಿದ್ದು ಅಲ್ಲೊಂದು ಸೇದು ಬಾವಿಯಿತ್ತು. ಅದರಿಂದಲೇ ನಾವೆಲ್ಲಾ
ನೀರು ಸೇದಿಕೊಳ್ಳಬೇಕಾಗಿತ್ತು. ಬಾಡಿಗೆಗೆ ನೀಡಿದ್ದ ಮನೆಗಳು ಕೊಂಚ ಹಿಂದಕ್ಕೆ ಇದ್ದವು. ಹಿತ್ತಲ ಬಾಗಿಲು
ತೆರೆದರೆ ಹಿಂದೆ ಕಾಫಿ ತೋಟವಿತ್ತು.
ಬಯಲುಸೀಮೆಯವನಾದ ನನಗೆ ಮಲೆನಾಡಿನ ಈ ರೀತಿಯ ಮನೆ ಇಷ್ಟವಾಯಿತು.
ನಾನು ಆ ಮನೆಗೆ ಹೊರಟ ದಿನ ಯಾವುದೋ ಹಬ್ಬದ ಪ್ರಯುಕ್ತ ಶುಕ್ರವಾರ- ಶನಿವಾರ ರಜೆ ಬಂದದ್ದರಿಂದ ಆ ಮನೆಯಲ್ಲಿದ್ದ
ಗೆಳೆಯರು ಊರಿಗೆ ಹೊರಟರು. ಹೊರಡುವ ಮೊದಲು ಅವರು ಮನೆಯ ಮಾಲೀಕನ ಪರಿಚಯ ತಿಳಿಸಿಕೊಟ್ಟರು. ಜಾಕೋಬ್ಗೆ
ವಯಸ್ಸಾಗಿದೆ. ಹೆಚ್ಚು ಓಡಾಡಲಾರ. ಇಲ್ಲೇ ಕಾಂಪೌಂಡಿನಲ್ಲಿ ಓಡಾಡುತ್ತಿರುತ್ತಾನೆ. ಹೆಚ್ಚು ಮಾತನಾಡುವುದಿಲ್ಲ.
ಆತನ ಹೆಂಡತಿ ಎಂಥದೋ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ. ಆಕೆ ಹೊರಗೆ ಓಡಾಡುವುದನ್ನು ಯಾರೂ ಕಂಡಿಲ್ಲ.
ಅವರಿಗೆ ಮೂವರು ಹೆಣ್ಣುಮಕ್ಕಳು. ದೊಡ್ಡವಳು ರೀನಾ, ಶಾಲೆಯೊಂದರಲ್ಲಿ ಟೀಚರ್; ಆಕೆಗೆ ಮದುವೆಯಾಗಿಲ್ಲ.
ಆಕೆಯ ತಂಗಿ ಮ್ಯಾಗಿ, ಮದುವೆಯಾಗಿದೆ; ಗಂಡ ಮಸ್ಕಟ್‌ನಲ್ಲಿದ್ದಾನಂತೆ. ಆಕೆಗೆ ರಾಬರ್ಟ್ ಎಂಬ ಐದು ವರ್ಷದ
ಮಗನಿದ್ದಾನೆ. ಕೊನೆಯ ತಂಗಿ ಲೀಸಾ- ಆಕೆ ಹುಚ್ಚಿ. ಮದುವೆಯಾಗಿತ್ತು, ಆದರೆ ಗಂಡ ಈಗ ಬಿಟ್ಟಿದ್ದಾನೆ.
ಆಕೆ ಹುಚ್ಚಿಯಾದರೂ ಯಾರಿಗೂ ಎಂದು ತೊಂದರೆ ಕೊಟ್ಟಿಲ್ಲ.
ನಾನು ಆ ಮನೆಗೆ ಬಂದ ಮೊದಲ ದಿನ ರಾತ್ರಿಯೇ ಒಬ್ಬಂಟಿಯಾಗಿ
ಕಳೆಯಬೇಕಾಯ್ತು. ಆಗ ತಾನೆ ಊರಿಂದ ನಾನು ಬಂದದ್ದರಿಂದ ಪುನಃ ವಾಪಸ್ಸು ಹೋಗಲು ಬೇಸರವಾಯ್ತು. ಮೂರು
ದಿನ ರಜೆಯಲ್ಲಿ ಮಡಿಕೇರಿ ಸುತ್ತ ಮುತ್ತ ಎಲ್ಲಾ ಸುತ್ತಾಡೋಣವೆಂದುಕೊಂಡೆ. ಮಳೆ ಧೋ ಎಂದು ಸುರಿಯುತ್ತಿತ್ತು.
ಮಲೆನಾಡಿನ ಮಳೆಯ ಬಗ್ಗೆ ಕೇಳಿದ್ದೆನಷ್ಟೆ ಹೊರತು ಈ ರೀತಿಯ ಅನುಭವವಾಗಿರಲಿಲ್ಲ. ವಿಪರೀತ ಚಳಿಯಿತ್ತು.
ಸ್ವೆಟರ್, ಮಫ್ಲರ್ ಧರಿಸಿ ಮೇಲೊಂದು ಶಾಲು ಹೊದ್ದು ರಾತ್ರಿ ಗುಬ್ಬಚ್ಚಿಯಂತೆ ಮುದುಡಿಕೊಂಡು ಮಲಗಿದೆ.
ಲೀಸಾ
ರಾತ್ರಿ
ಎಂಟು ಗಂಟೆಗೆಲ್ಲಾ ಊರು ಬಿಕೋ ಎನ್ನುತ್ತಿತ್ತು. ಕರೆಂಟ್ ಸಹ ಹೋಗಿತ್ತು. ಹೊಸ ಜಾಗವಾದದ್ದರಿಂದಲೋ
ಏನೋ ನಿದ್ರೆ ಬರುತ್ತಿರಲಿಲ್ಲ. ಮೋಂಬತ್ತಿಯನ್ನೊಂದು ಹೊತ್ತಿಸಿ ಅದರ ಬೆಳಕಿನಲ್ಲಿ ಮ್ಯಾಗಸಿನ್ ತಿರುವಿ
ಹಾಕುತ್ತಿದ್ದೆ. ಹೆಂಚಿನ ಮನೆಯಾದ್ದರಿಂದ ಮಳೆಯ ಸದ್ದು ಇನ್ನೂ ಜೋರಾಗಿತ್ತು. ಆಗಾಗ ಹಿಂದೆ ಇದ್ದ ಕಾಫಿ
ತೋಟದಲ್ಲಿ ಸರಸರ ಸದ್ದಾಗುತ್ತಿತ್ತು. ಇಳಿಜಾರಿನಲ್ಲಿ ಮನೆ ಕಟ್ಟಿದ್ದುದರಿಂದ ವೆರಾಂಡಾದಿಂದ ನಡುಮನೆಗೆ
ಹೋಗಲು ಒಂದೆರಡು ಮೆಟ್ಟಲು ಹಾಗೂ ನಡುಮನೆಯಿಂದ ಅಡುಗೆ ಮನೆಗೆ ಇಳಿಯಲು ಒಂದೆರಡು ಮೆಟ್ಟಲು ಹಾಗೂ ಹಿಂದೆಯಿದ್ದ
ಬಚ್ಚಲ ಮನೆಗೆ ಒಂದೆರಡು ಮೆಟ್ಟಲು ಇಳಿಯಬೇಕಾಗಿತ್ತು. ಪ್ರತಿಸಾರಿ ಬಾತ್ ರೂಮಿಗೆ ಹೋಗಿಬರಲು ಒಂದಷ್ಟು
ಕಸರತ್ತು ನಡೆಸಬೇಕಾಗುತ್ತಿತ್ತು. ರಾತ್ರಿಯ ನಿಶ್ಶಬ್ದ ಒಂದು ರೀತಿ ನನ್ನನ್ನು ಹೆದರಿಸುವಂತಿತ್ತು.
ನನಗಂತೂ ಎಲ್ಲವೂ ಹೊಸದು, ಹೊಸ ರೀತಿಯ ಅನುಭವ. ಆಗಿನ್ನೂ ಟಿ.ವಿ. ಬಂದಿರಲಿಲ್ಲ. ಕ್ಯಾಸೆಟ್ ಪ್ಲೇಯರ್‌ನಲ್ಲಿ
ಹಾಡು ಕೇಳೋಣವೆಂದರೆ ಕರೆಂಟ್ ಇಲ್ಲ. ಚಳಿಯಲ್ಲಿ ಮುದುಡಿದ್ದ ನನಗೆ ಯಾರೋ ಬಾಗಿಲು ತಟ್ಟಿದಂತೆ ಅನ್ನಿಸಿತು.
ನನ್ನ ಕಿವಿ ನಿಮಿರಿತು. ಮತ್ತೊಮ್ಮೆ ಸರಿಯಾಗಿ ಕೇಳಿಸಿಕೊಳ್ಳಲು ಯತ್ನಿಸಿದೆ. ಹೌದು, ಯಾರೋ ಬಾಗಿಲು
ತಟ್ಟುತ್ತಿದ್ದರು.
ಹಿಂದೆ ಕಾಫಿ ತೋಟದಲ್ಲಿ ಸರಸರ ಸದ್ದಾಯಿತು. `ಯಾರಿರಬಹುದು?
ಈ ಮನೆಯಲ್ಲಿ ಮೊದಲೇ ಇದ್ದ ಕೆನರಾಬ್ಯಾಂಕಿನ ಸುರೇಶ ಅಥವಾ ಸ್ಟೇಟ್ ಬ್ಯಾಂಕಿನ ರಾಜಾರಾಮನ ಗೆಳೆಯರ್ಯಾರಾದರೂ
ಇರಬಹುದೆ?' ಎಂದುಕೊಂಡು ಬಾಗಿಲು ತೆರೆಯಲು ಎದ್ದು ನಿಂತೆ. ಪುನಃ ಬಾಗಿಲು ತಟ್ಟಿದ ಸದ್ದಾಯಿತು. ತೆರೆಯಲೆ?
ಅಥವಾ ಬೇಡವೆ? ಯೋಚಿಸುತ್ತಾ ಬಾಗಿಲ ಬಳಿ ಬಂದೆ. `ಯಾರು?' ಎಂದು ಕೇಳಿದೆ. ಉತ್ತರವಿಲ್ಲ. `ಯಾರು ಬೇಕು?'
ಪುನಃ ಕೇಳಿದೆ. ಯಾರೂ ಉತ್ತರಿಸಲಿಲ್ಲ.
ಆದರೆ ಪುನಃ ಬಾಗಿಲು ತಟ್ಟಿದರು. ತೆರೆದು ನೋಡೇಬಿಡೋಣ ಯಾರಿರಬಹುದು
ಎಂದುಕೊಂಡು ಬಾಗಿಲು ತೆರೆದೆ. ಹೊರಗಿನ ದೃಶ್ಯ ನೋಡಿ ಬೆಚ್ಚಿಬಿದ್ದು ಒಂದೆರಡು ಹೆಜ್ಜೆ ಹಿಂದಿರಿಸಿದೆ.
ಹೊರಗೆ ಹೆಣ್ಣೊಬ್ಬಳು ಎದುರಿಗೆ ಮೋಂಬತ್ತಿ ಹಿಡಿದು ನಿಂತಿದ್ದಳು. ಅದು ಗಾಳಿಗೆ ಆರದಂತೆ ಅದನ್ನು ಮತ್ತೊಂದು
ಹಸ್ತದಲ್ಲಿ ಮುಚ್ಚಿಕೊಂಡಿದ್ದಳು. ಅವಳ ಉದ್ದನೆ ಕೂದಲು ಎರಡೂ ಭುಜಗಳ ಮೇಲೆ ಹರಡಿಕೊಂಡಿತ್ತು. ಆ ಮೋಂಬತ್ತಿಯ
ಬೆಳಕಿನಲ್ಲಿ ಬೆಳಕು ನೆರಳಿನ ಆಟದಲ್ಲಿ ಅವಳ ಮುಖ ಒಂದು ರೀತಿ ಭಯಾನಕವಾಗಿ ಕಾಣುತ್ತಿದೆ ಎನ್ನಿಸಿ ನನಗೆ
ಹೆದರಿಕೆಯಾಯಿತು. `ಯಾರು.... ಯಾರು ಬೇಕು?' ಎಂದೆ ತೊದಲುತ್ತಾ. ಆಕೆ ಅಲ್ಲೇ ನಿಂತು ನನ್ನನ್ನೇ ನೋಡುತ್ತಿದ್ದಳು.
ಅವಳ ಮುಖದಲ್ಲಿ ಮುಗುಳ್ನಗೆ ಮೂಡಿತು. ಆಕೆ ಆಗ ಸುಂದರವಾಗಿದ್ದಾಳೆನ್ನಿಸಿತು. 'ಜೀಸಸ್ ಹೇಳಿದ....'
ಎಂದಳು. ನನಗೆ ಅವಳ ಮಾತೇನೂ ಅರ್ಥವಾಗಲಿಲ್ಲ. ನಾನು ನಿಂತಲ್ಲಿಯೇ ಇದ್ದೆ. ಏರಿದ ಎದೆಬಡಿತ ಇನ್ನೂ ಕಡಿಮೆಯಾಗಿರಲಿಲ್ಲ.
`ಜೀಸಸ್ ಹೇಳಿದ.... ನೀನೇ ನನ್ನ ಗಂಡನಂತೆ....' ಎಂದಳು. ಇನ್ನೂ ಬೆಚ್ಚಿಬಿದ್ದೆ ನಾನು. ಕೈಕಾಲು ನಡುಗತೊಡಗಿತು.
ಅಷ್ಟರಲ್ಲಿ, `ಹೇ, ಲೀಸಾ!' ಎಂದು ಯಾರೋ ಮತ್ತೊಬ್ಬ ಹೆಂಗಸು ಜೋರಾಗಿ ಕೂಗಿದರು. ಈ ಹೆಂಗಸು ಅಲುಗಾಡಲಿಲ್ಲ.
ಮತ್ತೇನೋ ಹೇಳಿದಳು. ಆ ಮಳೆಯ ಆರ್ಭಟದಲ್ಲಿ, ಹೆದರಿಕೊಂಡಿದ್ದ ನನಗೆ ಆಕೆ ಹೇಳಿದ್ದು ಏನೂ ಕೇಳಿಸಲಿಲ್ಲ.
ಹಿಂದಿನಿಂದ ಕೂಗಿದ ಹೆಂಗಸು ಬಂದು `ಲೀಸಾ, ನಡಿ ಮನೆಗೆ' ಎಂದು ಈಕೆಯನ್ನು ಎಳೆದೊಯ್ದಳು. ಹೋಗುತ್ತಿದ್ದಾಗ
ಆಕೆ ಕೈಯಲ್ಲಿ ಹಿಡಿದಿದ್ದ ಮೋಂಬತ್ತಿ ಆರಿಹೋಯಿತು. ತಕ್ಷಣ ನಾನು ಬಾಗಿಲು ಮುಚ್ಚಿ, ಚಿಲಕ ಜಡಿದು ಓಡಿ
ಬಂದು ಮಲಗಿದೆ. ಆ ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ವಿಚಿತ್ರ ಕನಸಗಳು. ಚಳಿಯಲ್ಲಿ ಜ್ವರ
ಬಂದಂತಾಗಿತ್ತು. ಯಾಕಾದರೋ ಈ ಊರಿಗೆ ಬಂದೆನೋ ಎನ್ನಿಸಿತ್ತು.
ಮರುದಿನ ಬೆಳಿಗ್ಗೆ ಎದ್ದಾಗ ಗಂಟೆ ಒಂಭತ್ತಾಗಿತ್ತು. ಸುರಿಯುತ್ತಿದ್ದ
ಮಳೆ ನಿಂತಿರಲಿಲ್ಲ. ಹೊರಗಿನ ಕಾಂಪೌಂಡಿನಲ್ಲಿದ್ದ ಬಾವಿಯಿಂದ ನೀರು ಸೇದಿಕೊಂಡು ಬಂದು ಕಾಯಲು ಸ್ಟೋವ್
ಮೇಲಿಟ್ಟೆ. ಒಂದು ರೀತಿಯ ವಿಚಿತ್ರ ಹೆದರಿಕೆಯಿಂದ ನೀರು ಸೇದುವಾಗ ಜಾಕೋಬ್ ಮನೆಯ ಕಡೆಗೆ ತಿರುಗಿ ಸಹ
ನೋಡಲಿಲ್ಲ. ಕಾಫಿ ಮಾಡಿಕೊಂಡು ಪೇಪರ್ ಓದುತ್ತಿದ್ದಾಗ ಬಾಗಿಲು ತಟ್ಟಿದ ಸದ್ದಾಯಿತು. `ಮತ್ತೇನು ಬಂತು
ಗ್ರಹಚಾರ' ಎಂದುಕೊಂಡೆ. ಪುನಃ ಬಾಗಿಲು ತಟ್ಟಿತು. ಅಳುಕಿನಿಂದಲೇ ಬಾಗಿಲು ತೆರೆದೆ. ಹೊರಗೆ ಹೆಂಗಸೊಬ್ಬಳು
ನಿಂತಿದ್ದಳು. ಆದರೆ ಆಕೆ ರಾತ್ರಿ ಮೋಂಬತ್ತಿ ಹಿಡಿದುಬಂದ ಹೆಂಗಸಲ್ಲ. `ನನ್ನ ಹೆಸರು ರೀನಾ. ಜಾಕೋಬ್ರವರ
ದೊಡ್ಡ ಮಗಳು. ಈ ಮನೆಗೆ ಹೊಸದಾಗಿ ಬಂದವರು ನೀವೇ ಅಲ್ಲವೆ? ನೀವು ಬಂದಿರುವುದಾಗಿ ಸುರೇಶ್ ಹೇಳಿದರು'
ಎಂದಳು ಆಕೆ. `ಹೌದು, ಸುರೇಶ್ ಊರಿಗೇ ಹೋಗಿದ್ದಾರೆ', ನಾನೆಂದೆ. `ಗೊತ್ತು, ಅವರು ಊರಿಗೆ ಹೋಗುವಾಗಲೇ
ನೀವು ಬಂದ ವಿಷಯ ತಿಳಿಸಿದರು. ರಾತ್ರಿ ಬಂದು ನಿಮಗೆ ತೊಂದರೆ ನೀಡಿದವಳು ನನ್ನ ತಂಗಿ ಲೀಸಾ. ಅದಕ್ಕೆ
ನಿಮಗೆ ತಿಳಿಸಲು ಬಂದೆ. ನಿಮಗೆ ತೊಂದರೆ ಕೊಟ್ಟದ್ದಕ್ಕೆ ಕ್ಷಮೆ ಇರಲಿ' ಎಂದಳು. `ಪರವಾಗಿಲ್ಲ, ತೊಂದರೆ
ಏನಿಲ್ಲಾ' ಎಂದೆ. ಅಷ್ಟರಲ್ಲಿ ರಾತ್ರಿಯ ಆತಂಕ, ಹೆದರಿಕೆ ಎಲ್ಲಾ ಮರೆತಿತ್ತು. `ಏನಾದರೂ ಬೇಕಾದಲ್ಲಿ
ಕೇಳಿ, ಸಂಕೋಚಬೇಡ' ಎಂದಳು. `ಥ್ಯಾಂಕ್ಸ್' ಎಂದೆ. ಆಕೆ ಹೊರಟುಹೋದಳು.
ಮಡಿಕೇರಿಗೆ ನನ್ನ ಜೀವ ಒಗ್ಗಿಕೊಂಡಿತು. ಆದರೂ ನನ್ನ ಆಸ್ತಮಾದ
ಬಾಧೆ ಹೆಚ್ಚಾಗಿತ್ತು. ಇಷ್ಟೊಂದು ಸುಂದರ ಪ್ರಕೃತಿಯನ್ನು ಈ ಕಾಯಿಲೆಯಿಂದ ಅಸ್ವಾಧಿಸಲು ಸಾಧ್ಯವಿಲ್ಲವಲ್ಲ
ಎನ್ನುವ ಹಿಂಸೆ ಕಾಡುತ್ತಿತ್ತು. ಮಳೆ ಚಳಿಯಲ್ಲಿ ಸ್ವಲ್ಪ ಹೆಚ್ಚು ಓಡಾಡಿದಲ್ಲಿ ರಾತ್ರಿಯೆಲ್ಲಾ ಉಬ್ಬಸದಿಂದ
ನಿದ್ರೆಯಿಲ್ಲದೆ ಕಳೆಯಬೇಕಾಗಿತ್ತು.
ಮಡಿಕೇರಿಯಲ್ಲಿನ ನನ್ನ ಮೊದಲ ರಾತ್ರಿಯೇ ಮನೆಯ ಬಾಗಿಲು ತಟ್ಟಿದವಳು
ಲೀಸಾ ಎಂದು ಸುರೇಶ್ ತಿಳಿಸಿದ. ಆಕೆ ಹುಚ್ಚಿ ಎಂದು ತಿಳಿಸಿದ. ಆಕೆಗೆ ಮದುವೆಯಾಗಿತ್ತಂತೆ. ಒಂದೂ ಮಗು
ಸಹ ಇದೆಯಂತೆ. ಆದರೆ ಗಂಡ ಆಕೆಯನ್ನು ಬಿಟ್ಟಿದ್ದಾನೆ. ಆಕೆ ಹುಚ್ಚಿ ಆದದ್ದರಿಂದ ಗಂಡ ಬಿಟ್ಟನೋ ಅಥವಾ
ಗಂಡ ಬಿಟ್ಟದ್ದರಿಂದ ಹುಚ್ಚಿಯಾದಳೊ ತಿಳಿಯದು ಎಂದ ಸುರೇಶ. ಆಗಾಗ ಆಕೆ ಜೋರಾಗಿ ಅಳುತ್ತಿರುವುದು ಕೇಳಿಸುತ್ತಿತ್ತು.
ನಾನು ಆಫೀಸಿಗೆ ಅಥವಾ ಹೊರಗೆ ಹೊರಟಾಗಲೆಲ್ಲಾ ಜಾಕೋಬ್ ಮನೆಯ ಹಿಂಭಾಗ ಕಾಣಿಸುತ್ತಿತ್ತು. ಅದೇ ಅವರ
ಊಟದ ಕೋಣೆಯಾಗಿದ್ದು ಅಲ್ಲಿ ದೊಡ್ಡ ಕಿಟಕಿ ಹಾಗೂ ಬಾಗಿಲೊಂದು ಇತ್ತು. ಆ ಬಾಗಿಲಿನಿಂದ ಲೀಸಾ ಹೊರಗೆ
ಹೋಗಿಬಿಡಬಹುದೆಂಬ ಹೆದರಿಕೆಯಿಂದ ಯಾವಾಗಲೂ ಬೀಗ ಹಾಕಿರುತ್ತಾರಂತೆ. ಲೀಸಾ ಯಾವಾಗಲೂ ಅಲ್ಲಿ ನಿಂತಿರುತ್ತಿದ್ದಳು.
ಓಡಾಡುವ ನಮ್ಮನ್ನು ಕಂಡಾಗಲೆಲ್ಲಾ ಏನನ್ನಾದರೂ ಹೇಳುತ್ತಿರುತ್ತಿದ್ದಳು. ಒಂದೆರಡು ದಿನಗಳಲ್ಲಿ ಅದೂ
ನನಗೆ ಅಭ್ಯಾಸವಾಯಿತು. ಕೆಲವೊಮ್ಮೆ ಅವಳು ಏನಾದರೂ ಹೇಳಿದಾಗ ಏನು ಹೇಳುತ್ತಾಳೆ ಎನ್ನುವುದನ್ನು ನಿಂತು
ಕೇಳಿಸಿಕೊಳ್ಳುತ್ತಿದ್ದೆ. ಅವಳ ಮಾತು ಏನೊಂದೂ ಅರ್ಥವಾಗುತ್ತಿರಲಿಲ್ಲ. ನಾನು ಅವಳೊಂದಿಗೆ ಮಾತನಾಡಲೂ
ಯತ್ನಿಸಿದೆ. ನನ್ನ ಏನೋ ಮಾತಿಗೆ ಅವಳೇನೋ ಹೇಳುತ್ತಿರುತ್ತಿದ್ದಳು. ಕೆಲವೊಮ್ಮೆ ಅವಳ ಮಾನಸಿಕ ಆರೋಗ್ಯ
ಚೆನ್ನಾಗಿರುತ್ತಿತ್ತು. ಆಗ ಆಕೆ ಕಿಟಕಿಯ ಬಳಿ ನಿಂತಿರುತ್ತಿರಲಿಲ್ಲ. ಏನಾದರೂ ಮನೆಕೆಲಸದಲ್ಲಿ ತೊಡಗಿರುತ್ತಿದ್ದಳು.
`ಹುಣ್ಣಿಮೆ ಬಂದರೆ ಅವಳ ಹುಚ್ಚು ಹೆಚ್ಚಾಗಿಬಿಡುತ್ತದೆ' ಎಂದು ಸುರೇಶ ಒಮ್ಮೆ ಹೇಳಿದ್ದ. `ಆಗ ಅವಳನ್ನು
ರೂಮಿನಲ್ಲಿ ಕೂಡಿಹಾಕಿ ಬೀಗ ಹಾಕಿಬಿಡುತ್ತಾರೆ' ಎಂದೂ ಸಹ ಹೇಳಿದ್ದ. ನನಗೇನು ಹೇಳಲೂ ತೋಚಿರಲಿಲ್ಲ.
ದೊಡ್ಡ ಮಗಳಾದ ರೀನಾಳೇ ಬಾಡಿಗೆ ಸಂಗ್ರಹಕ್ಕೆ ಹಾಗೂ ಏನಾದರೂ
ಮನೆಯ ರಿಪೇರಿಗಳಿದ್ದಲ್ಲಿ ವಿಚಾರಿಸಲು ಬರುತ್ತಿದ್ದಳು. ಆಕೆಯ ತಂದೆ ಜಾಕೋಬ್ ಸಹ ಅನಾರೋಗ್ಯದಿಂದಾಗಿ
ಹೆಚ್ಚು ಓಡಾಡುತ್ತಿರಲಿಲ್ಲ. ಒಮ್ಮೆ ರೀನಾಳ ಜೊತೆ ಮಾತನಾಡುವಾಗ `ಏಕೆ ಲೀಸಾಗೆ ಚಿಕಿತ್ಸೆ ಏನೂ ಕೊಡಿಸಲಿಲ್ಲವೆ?'
ಎಂದು ಕೇಳಿದ್ದೆ. `ಓಡಾಡಿ ನನಗೂ ಸಾಕಾಗಿದೆ. ಚಿಕಿತ್ಸೆ ಕೊಡಿಸುತ್ತಲೇ ಇದ್ದೇವೆ. ಅವಳಿಗೆ ಮಾತ್ರೆಗಳನ್ನು
ತಿನ್ನಿಸುವುದೂ ಕಷ್ಟ. ಚೆನ್ನಾಗಿದ್ದಾಗ ಅವಳೇ ಮಾತ್ರೆ ಸ್ವತಃ ತೆಗೆದುಕೊಳ್ಳುತ್ತಾಳೆ. ಒಮ್ಮೊಮ್ಮೆ
ಏರುಪೇರಾದಾಗ ನಮಗೂ ತೀರಾ ಕಷ್ಟವಾಗುತ್ತದೆ. ಅದಕ್ಕೆ ಅವಳನ್ನು ಕೋಣೆಯಲ್ಲಿ ಹಾಕಿ ಬೀಗಹಾಕಿಬಿಡುತ್ತೇವೆ'
ಎಂದಳು. ಅವಳ ಕಣ್ಣಂಚಿನಲ್ಲಿ ಹನಿಗೂಡಿತ್ತು. `ಅವಳ ಗಂಡ ಕೇರಳದಲ್ಲಿದ್ದಾನೆ. ಇವಳ ಮಗುವೂ ಅವನ ಬಳಿಯೇ
ಇದೆ. ಅವನು ಬಿಟ್ಟುಹೋದ ಮೇಲೆ ಇವಳ ಆರೋಗ್ಯ ಇನ್ನೂ ಹದಗೆಟ್ಟಿದೆ. ಅವನು ಬಂದು ಕರೆದುಕೊಂಡು ಹೋದರೆ
ಇವಳು ಸರಿಹೋಗಬಹುದೇನೋ. ಆದರೆ ಅವನು ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆಂದು ಹೇಳುತ್ತಾರೆ. ಏನು
ಮಾಡಲೂ ತೋಚುತ್ತಿಲ್ಲ' ಎಂದಿದ್ದಳು.
ರೂಮಿನಲ್ಲಿ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಕೆಲವೊಮ್ಮೆ
ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದೆ. ಅಲ್ಲದೆ ಬ್ಯಾಂಕ್ ಸಹ ಹತ್ತಿರದಲ್ಲೇ ಇದ್ದುದರಿಂದ ಮನೆಗೆ
ನಡೆದುಕೊಂಡೇ ಬರಬಹುದಿತ್ತು. ಅದೊಂದು ದಿನ ಮಧ್ಯಾಹ್ನ ಮನೆಗೆ ಬಂದಾಗ ಮ್ಯಾಗಿ ಮತ್ತು ಒಂದಷ್ಟು ಅಕ್ಕಪಕ್ಕದ
ಹೆಂಗಸರು ಬಾವಿಯ ಬಳಿ ನಿಂತು ಬಗ್ಗಿ ನೋಡಿ ಏನೋ ಹೇಳುತ್ತಿದ್ದರು. ನಾನು ಅಲ್ಲಿಗೆ ಹೋಗುವಷ್ಟರಲ್ಲಿ
`ಲೀಸಾ ಬಾವಿಗೆ ಬಿದ್ದುಬಿಟ್ಟಿದ್ದಾಳೆ' ಎಂದಳು ಮ್ಯಾಗಿ. ನಾನು ಗಾಭರಿಯಿಂದ ಬಗ್ಗಿ ನೋಡಿದೆ. ನೀರಿಗೆ
ಬಿದ್ದಿದ್ದ ಲೀಸಾ ಕಲ್ಲೊಂದನ್ನು ಹಿಡಿದುಕೊಂಡಿದ್ದು ಕಾಣಿಸಿತು. ಅವಳು ಬದುಕಿದ್ದುದನ್ನು ಕಂಡು ಆತಂಕ
ಕಡಿಮೆಯಾಯಿತು. ಮ್ಯಾಗಿ ಲೀಸಾಳಿಗೆ ಹಾಗೇ ಹಿಡಿದುಕೊಂಡಿರುವಂತೆ ಹೇಳುತ್ತಿದ್ದಳು. `ನೀರು ಸೇದಲು ಬಂದಿದ್ದಳು.
ಅದ್ಹೇಗೆ ಬಿದ್ದಳೋ ಗೊತ್ತಿಲ್ಲ' ಎಂದಳು ಮ್ಯಾಗಿ. ಅವಳ ಮುಖದಲ್ಲಿ ಅಂಜಿಕೆ ಕಾಣುತ್ತಿತ್ತು. ಅಲ್ಲಿ
ಇದ್ದವರೆಲ್ಲಾ ಹೆಂಗಸರೇ. `ಯಾರೂ ಬಾವಿಗೆ ಇಳಿಯುವವರಿಲ್ಲವೆ?' ಕೇಳಿದೆ. `ಅಕ್ಕ ರೀನಾಳಿಗೆ ಹೇಳಿ ಕಳುಹಿಸಿದ್ದೇನೆ.
ಅವಳಿನ್ನೇನು ಬರಬಹುದು. ಯಾರನ್ನಾದರೂ ಕರೆತರುತ್ತಾಳೆ' ಎಂದಳು ಮ್ಯಾಗಿ. ಅಷ್ಟರಲ್ಲಿ ಬಾವಿಯಲ್ಲಿದ್ದ
ಲೀಸಾ ಕೈ ರಪರಪ ಹೊಡೆದಳು. ಮ್ಯಾಗಿ ಹಾಗೂ ಇತರ ಹೆಂಗಸರು ಜೋರಾಗಿ ಕಿರುಚಿಕೊಂಡರು. ಲೀಸಾ ಆಗಾಗ ತಲೆಯನ್ನು
ನೀರಿನಲ್ಲಿ ಮುಳುಗಿಸುವುದನ್ನು ಮಾಡುತ್ತಿದ್ದಳು. ನಾನೇ ಇಳಿದು ಅವಳನ್ನು ಮೇಲಕ್ಕೆತ್ತಲು ತಕ್ಷಣ ನಿರ್ಧರಿಸಿ
ಅಲ್ಲೇ ಇದ್ದ ಹಗ್ಗವನ್ನು ಬಿಗಿಯಾಗಿ ಕಟ್ಟಿ ಬಾವಿಗೆ ನಿಧಾನವಾಗಿ ಇಳಿದೆ. ನನಗೆ ಚಿಕ್ಕಂದಿನಿಂದಲೂ
ಈಜುಬರುತ್ತಿತ್ತು ಆದರೆ ನಾನೆಂದೂ ಈ ರೀತಿ ಬಾವಿಗೆ ಬಿದ್ದವರನ್ನು ಎತ್ತಿ ಹಾಕಿರಲಿಲ್ಲ. ಬಾವಿಯ ಅಗಲ
ಹೆಚ್ಚಿರಲಿಲ್ಲ. ಹಾಗೂ ಅಲ್ಲಲ್ಲಿ ಕಾಲು ಊರಲು ಆಧಾರವಾಗಿ ಕಲ್ಲುಗಳನ್ನು ಇರಿಸಿದ್ದರು. ನಾನು ಕೆಳಕ್ಕೆ
ಇಳಿಯುವಷ್ಟರಲ್ಲಿ ಅವಳ ಕೈ ಜಾರಿ ನೀರಿನೊಳಕ್ಕೆ ಮುಳುಗಿದಳು. ಮೇಲಿದ್ದವರು ಜೋರಾಗಿ ಕಿರುಚಿಕೊಂಡರು.
ನಾನೂ ಸರಕ್ಕನೆ ಒಂದು ಕೈಲಿ ಹಗ್ಗವನ್ನು ಹಿಡಿದುಕೊಂಡು ನೀರಿನೊಳಕ್ಕೆ ಧುಮುಕಿದೆ. ಈಜಲು ಬರದವರು ನೀರಿನೊಳಕ್ಕೆ
ಬಿದ್ದಾಗ ಅವರನ್ನು ಕಾಪಾಡಲು ಬರುವವರನ್ನು ಬಿಗಿಯಾಗಿ ಹಿಡಿದುಕೊಂಡುಬಿಡುತ್ತಾರೆ ಎಂಬುದು ತಿಳಿದಿದ್ದುದರಿಂದ
ಹಗ್ಗವನ್ನು ಒಂದು ಕೈಲಿ ಹಿಡಿದುಕೊಂಡೇ ಇದ್ದೆ. ನಾನು ನೀರಿನೊಳಕ್ಕೆ ಧುಮುಕಿ ಅವಳ ಕೈ ಹಿಡಿದು ಮೇಲಕ್ಕೆಳೆದುಕೊಂಡು
ಬಂದೆ. ಅದೆಲ್ಲಾ ಕೆಲಕ್ಷಣಗಳಲ್ಲೇ ಕಳೆದುಹೋಯಿತು. ಲೀಸಾ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು.
ಆದರೆ ಅವಳ ಮುಖದಲ್ಲಿ ಯಾವ ಭಾವನೆಗಳೂ ಇರಲಿಲ್ಲ. ಅಂಜಿಕೆಯೂ ಇರಲಿಲ್ಲ. ಆದರೆ ನನ್ನ ಕೈಕಾಲುಗಳು ಥರಥರ
ನಡುಗುತ್ತಿದ್ದವು. ಸಾವರಿಸಿಕೊಳ್ಳಲು ನನಗೆ ಕೊಂಚ ಸಮಯವೇ ಬೇಕಾಯಿತು. ಅಲ್ಲೇ ನೀರೊಳಗೆ ಕಲ್ಲೊಂದನ್ನು
ಆಧಾರವಾಗಿ ತೆಗೆದುಕೊಂಡು ನನ್ನ ಬಲಗಾಲನ್ನು ಊರಿ ಎಡಗಾಲನ್ನು ಎದುರಿನ ಕಲ್ಲುಕಟ್ಟಡಕ್ಕೆ ಒತ್ತಿಹಿಡಿದು
ಲೀಸಾಳನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡು ಮತ್ತೊಂದು ದಪ್ಪಹಗ್ಗವನ್ನು ಇಳಿಸಲು ಹೇಳಿದೆ. ಅಷ್ಟರಲ್ಲಿ
ರೀನಾ ಬಂದಿದ್ದಳೆನ್ನಿಸುತ್ತದೆ, ಆಕೆಯ ದನಿಯೂ ಕೇಳಿಸುತ್ತಿತ್ತು. ಯಾರೋ ಗಂಡಸರು ಸಹ ಮಾತನಾಡುತ್ತಿದ್ದರು.
ಲೀಸಾ ಎಡಗೈಯಲ್ಲಿ ಹಗ್ಗವನ್ನು ಹಿಡಿದಿದ್ದಳು ಹಾಗೂ ಬಲಗೈಯನ್ನು ನನ್ನ ಹೆಗಲ ಮೇಲೆ ಹಾಕಿದ್ದಳು. ನನ್ನ
ಮುಖವನ್ನೇ ನೋಡುತ್ತಿದ್ದಳು. ಅವಳನ್ನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು. ಅವಳ ಮುಖದಲ್ಲಿ
ಮುಗುಳ್ನಗುವಿತ್ತು. `ಬಾವಿಗೆ ಏಕೆ ಹಾರಿದೆ?' ಎಂದು ಕೇಳಿದೆ. ಅವಳು ಏನೂ ಹೇಳಲಿಲ್ಲ. ಅವಳ ಮುಖದಲ್ಲಿನ
ಮುಗುಳ್ನಗು ಮಾಸಲಿಲ್ಲ. ಒಂದರೆಕ್ಷಣ ತಡವಾಗಿದ್ದಿದ್ದರೆ ಸತ್ತೇ ಹೋಗುತ್ತಿದ್ದಳೇನೊ. ಆದರೂ ಆಕೆಯ ಮುಖದಲ್ಲಿ
ಸಾವಿನ ಹೆದರಿಕೆ ಕೊಂಚವೂ ಇರಲಿಲ್ಲ. ಬಹುಶಃ ಆಕೆಗೆ ಸಾವು ಬದುಕಿನ ನಡುವಿನ ಅಂತರವೇ ತಿಳಿದಿಲ್ಲವೇನೋ
ಎನ್ನಿಸಿತು. `ನನಗೆ ಗೊತ್ತು' ಎಂದಳು. ನನ್ನ ಮನಸ್ಸಿನ ಆಲೋಚನೆ ಆಕೆಗೆ ಹೇಗೆ ತಿಳಿಯಿತು ಎಂದು ನನಗೇ
ಆಶ್ಚರ್ಯವಾಯಿತು. `ಏನು ಗೊತ್ತು?' ಕೇಳಿದೆ. `ಯೂ ಆರ್ ಮೈ ಹಸ್ಬಂಡ್' ಎಂದು ನನ್ನ ಹೆಗಲ ಮೇಲಿನ ಅವಳ
ಕೈಹಿಡಿತವನ್ನು ಬಿಗಿಗೊಳಿಸಿದಳು. ನನ್ನ ನಡುಕ ಹಾಗೂ ಗಾಭರಿ ಕೊಂಚ ಕಡಿಮೆಯಾದಂತೆ ಅನ್ನಿಸಿತು. ಮೇಲೆ
ನೋಡಿದೆ. ಜನ ಮಾತನಾಡುತ್ತಿದ್ದರು. ಹಗ್ಗಕ್ಕೆ ಏನೋ ಕಟ್ಟುತ್ತಿರುವಂತೆ ಅನ್ನಿಸಿತು. ಇತ್ತ ಲೀಸಾಳ
ಕಡೆ ನೋಡಿ `ಯಾರು ಹೇಳಿದರು ನಿನಗೆ?' ಎಂದು ಕೇಳಿದೆ. `ನನಗೆ ಗೊತ್ತು. ಜೀಸಸ್ ಹೇಳಿದ್ದು. ನೀನೇ ನನ್ನ
ಗಂಡ' ಎಂದಳು. ನನಗೆ ಏನು ಹೇಳಲೂ ತೋಚಲಿಲ್ಲ. `ಆಯಿತು, ಆ ವಿಷಯ ಆಮೇಲೆ ಮಾತನಾಡೋಣ' ಎಂದು ಸುಮ್ಮನಾದೆ.
ಅವಳ ದೇಹದ ಇಡೀ ತೂಕವನ್ನು ಹೊತ್ತಿದ್ದ ನನ್ನ ತೊಡೆಯ ನಡುಕ ಇನ್ನೂ ಕಡಿಮೆಯಾಗಿರಲಿಲ್ಲ. ಮೇಲಿದ್ದವರು
ಇನ್ನೂ ಹಗ್ಗವನ್ನೇ ಬಿಡಲಿಲ್ಲ.
ನಾನು ಮತ್ತೊಮ್ಮೆ ಅವರಿಗೆ ಕೂಗಿ ಹೇಳಿದೆ. ಲೀಸಾ ನನ್ನನ್ನು
ಅಪ್ಪಿಕೊಂಡವಳಂತೆ ಇದ್ದವಳು ನನ್ನ ಮುಖವನ್ನು ನೋಡುವುದನ್ನು ನಿಲ್ಲಿಸಲೇ ಇಲ್ಲ. ನನಗೆ ಕೊಂಚ ಕಸಿವಿಸಿಯಾದಂತೆ
ಅನ್ನಿಸಿತು. `ಜೀಸಸ್ ನಿನ್ನ ಜೊತೆ ಯಾವಾಗ ಮಾತನಾಡುತ್ತಾನೆ?' ಕೇಳಿದೆ. ಯಾವುದೋ ಲೋಕದಲ್ಲಿದ್ದ ಲೀಸಾ
ಎಚ್ಚೆತ್ತುಕೊಂಡವಳಂತೆ `ಹ್ಹಾಂ...?' ಎಂದಳು. `ಜೀಸಸ್ ನಿನ್ನ ಜೊತೆ ಯಾವಾಗ ಮಾತನಾಡುತ್ತಾನೆ?' ಪುನಃ
ಕೇಳಿದೆ. `ದಿನಾಲೂ ಮಾತನಾಡುತ್ತಾನೆ. ನೀನೇ ನನ್ನ ಗಂಡನಲ್ಲವೆ?' ಎಂದಳು. ಅಷ್ಟರಲ್ಲಿ ಹಗ್ಗಬಂದಿತು.
ಅದಕ್ಕೊಂದು ದೊಡ್ಡ ದಿಂಬನ್ನು ಕಟ್ಟಿದ್ದರು. ಅವಳನ್ನು ಆ ದಿಂಬಿನ ಮೇಲೆ ಕೂಡಿಸುವಷ್ಟರಲ್ಲಿ ನನಗೆ
ಸಾಕುಸಾಕಾಯಿತು. ಅವಳು ನನ್ನ ಹೆಗಲಿನಿಂದ ಕೈಯನ್ನು ತೆಗೆಯುತ್ತಲೇ ಇರಲಿಲ್ಲ. ಕೊನೆಗೆ ಅವಳನ್ನು ಮೇಲಕ್ಕೆ
ಸಾಗಹಾಕಿ ನಾನು ಮೇಲೆ ಹತ್ತಿಬಂದೆ. ರೀನಾ ಒಂದಷ್ಟು ಜನ ಗಂಡಸರನ್ನು ಕರೆದುತಂದಿದ್ದಳು. ಅವಳ ಅಪ್ಪ
ಜಾಕೋಬ್ ಓಡಾಡಲು ಆಗದಿದ್ದರೂ ಕಷ್ಟಪಟ್ಟು ಹೊರಗೆ ಬಂದಿದ್ದ. ಲೀನಾ ಮತ್ತು ಮ್ಯಾಗಿ `ತುಂಬಾ ಥ್ಯಾಂಕ್ಸ್'
ಹೇಳಿದರು.
ಮ್ಯಾಗಿ
ಮ್ಯಾಗಿಯ
ಐದು ವರ್ಷದ ಮಗ ರಾಬರ್ಟ್ ಶಾಲೆಯಿಂದ ವಾಪಸ್ಸು ಬಂದು ನಾವು ಬ್ಯಾಂಕಿನಿಂದ ಬರುವುದನ್ನೇ ಕಾದಿರುತ್ತಿದ್ದ.
ನಾವು ಬಂದ ಕೂಡಲೇ ನಮ್ಮ ಬಳಿಗೆ ಓಡಿಬರುತ್ತಿದ್ದ. ಮಳೆ ಬೀಳುತ್ತಿದ್ದರೆ ಮಡಿಕೇರಿಯಲ್ಲಿ ನಾವು ಹೊರಗೇ
ಹೋಗುತ್ತಿರಲಿಲ್ಲ. ನಾವು ಕೇರಂ ಆಡುತ್ತಿದ್ದರೆ ರಾಬರ್ಟ್ ಜೊತೆಗೂಡುತ್ತಿದ್ದ. ಅದು ಇದು ಮಾತನಾಡುತ್ತ
ಸಮಯ ಕಳೆಯುತ್ತಿತ್ತು. ರಾಬರ್ಟ್‌ನಿಗೆ ಅವನ ತಂದೆಯನ್ನು ನೋಡಿದ ನೆನಪೇ ಇಲ್ಲ. ಎಲ್ಲಿದ್ದಾರೆ ಅಂದರೆ
ಮಸ್ಕಟ್‌ನಲ್ಲಿ ಎಂದಿದ್ದ. ಒಮ್ಮೆ ಅವನ ಅಪ್ಪನ ಫೋಟೋ ತಂದು ತೋರಿಸಿದ್ದ. `ನಿಮ್ಮಪ್ಪ ಮಸ್ಕಟ್‌ನಿಂದ
ಬರುವುದು ಯಾವಾಗ?' ಎಂದರೆ ಆ ಮುದ್ದುಹುಡುಗ `ಮುಂದಿನ ತಿಂಗಳು' ಎನ್ನುತ್ತಿದ್ದ. ಜೊತೆಗೆ `ನನಗೆ ಅಷ್ಟೊಂದು
ಬೊಂಬೆ ತರುತ್ತಾರೆ' ಎನ್ನುತ್ತಿದ್ದ. `ಅವನು ಇದೇ ರೀತಿ ಒಂದು ವರ್ಷದಿಂದ ಹೇಳುತ್ತಿದ್ದಾನೆ. ಅವನಪ್ಪ
ಬಂದೇ ಇಲ್ಲ' ಎಂದ ಸುರೇಶ. `ಇಲ್ಲ, ಮುಂದಿನ ತಿಂಗಳು ಬರುತ್ತಾರೆ' ಎಂದು ರಾಬರ್ಟ್ ಕೂಗಿದ. ಅವನ ಮುಖದಲ್ಲಿ
ಸಿಟ್ಟಿತ್ತು.
ಅದೊಂದು ದಿನ ಸಂಜೆ ನಾನು ಬ್ಯಾಂಕಿನಿಂದ ಬಂದು ಮನೆಯಲ್ಲಿದ್ದೆ.
ಸುರೇಶ ಮತ್ತು ರಾಜಾರಾಮ ಇನ್ನೂ ಬಂದಿರಲಿಲ್ಲ. ನಾನು ಕೂತು ಮ್ಯಾಗಸಿನ್ ತಿರುವಿ ಹಾಕುತ್ತಿದ್ದೆ. ರಾಬರ್ಟ್
ಓಡಿ ಬಂದ. ಬಂದವನೆ, `ಮಮ್ಮಿ ಮಾತಾಡ್ಬೇಕಂತೆ' ಎಂದ. `ಏನು ವಿಷಯ?' ಎಂದೆ ರಾಬರ್ಟ್‌ನನ್ನು. ಅಷ್ಟರಲ್ಲಿ
ಬಾಗಿಲು ತಟ್ಟಿದ ಸದ್ದಾಯಿತು. ನೋಡಿದರೆ ಬಾಗಿಲಲ್ಲಿ ರಾಬರ್ಟ್‌ನ ಅಮ್ಮ ಮ್ಯಾಗಿ ನಿಂತಿದ್ದಳು. `ಒಂದ್ನಿಮಿಷ
ಒಳಗೆ ಬರಲೆ?' ಎಂದಳು. ತಕ್ಷಣ ಏನೂ ಹೇಳಲು ತೋಚದೆ, `ಬನ್ನಿ, ಬನ್ನಿ' ಎಂದೆ. ಚೇರಿನ ಮೇಲೆ ಬಿದ್ದಿದ್ದ
ಪೇಪರ್, ಮ್ಯಾಗಸಿನ್ಗಳನ್ನು ಎತ್ತಿ ಪಕ್ಕಕ್ಕಿರಿಸಿದೆ. `ನಮ್ಮ ಅಮ್ಮನಿಗೆ ಕಾಯಿಲೆ. ಅವರು ಎದ್ದು ಓಡಾಡಲು
ಆಗುವುದಿಲ್ಲ. ಆ ದಿನ ಲೀಸಾ ಬಾವಿಗೆ ಹಾರಿದಾಗ, ನೀವು ಮಾಡಿದ ಸಹಾಯಕ್ಕೆ ಅಮ್ಮ ಥ್ಯಾಂಕ್ಸ್ ಹೇಳು ಅಂದರು.
ಸ್ವತಃ ಬಂದು ಹೇಳಲಾಗುವುದಿಲ್ಲವಲ್ಲ ಎಂದು ಕಣ್ಣೀರಿಟ್ಟರು' ಎಂದಳು ಮ್ಯಾಗಿ. `ಹೇ, ಪರವಾಗಿಲ್ಲ. ಅಷ್ಟಕ್ಕೆಲ್ಲಾ
ಏಕೆ. ಆ ಕ್ಷಣ ನಾನಿಲ್ಲದಿದ್ದರೂ ಮತ್ತಾರಾದರೂ ಬಾವಿಗೆ ಇಳಿದಿರುತ್ತಿದ್ದರು. ಅದೇನೂ ದೊಡ್ಡ ವಿಷಯವಲ್ಲ'
ಎಂದೆ ನಾನು. ಇಬ್ಬರೂ ಮಾತನಾಡುವುದನ್ನು ರಾಬರ್ಟ್ ಏನೊಂದೂ ಅರ್ಥವಾಗದವನಂತೆ ನೋಡುತ್ತಿದ್ದ.
ಲೀಸಾ ಬಾವಿಗೆ ಬಿದ್ದಿದ್ದ ದಿನ ಸಂಜೆ ನಾನು ಹೊರಗೆ ಹೊರಟಾಗ
ಜಾಕೋಬ್ ಹೊರಗೆ ಕುರ್ಚಿಯ ಮೇಲೆ ಕೂತಿದ್ದ. ನನಗೇ ಕಾಯುತ್ತಿದ್ದಿರಬಹುದೆನ್ನಿಸಿತ್ತು. ನನ್ನನ್ನು ಹತ್ತಿರಕ್ಕೆ
ಕರೆದು ತನ್ನ ಎರಡು ಕೈಗಳಿಂದ ನನ್ನ ಕೈಗಳನ್ನು ಹಿಡಿದುಕೊಂಡು `ಥ್ಯಾಂಕ್ಯೂ' ಎಂದ. ನಾನು ನಕ್ಕು `ಪರವಾಗಿಲ್ಲ.
ಹೇಗಿದೀರಾ? ಹೇಗಿದೆ ನಿಮ್ಮ ಆರೋಗ್ಯ?' ಎಂದು ಕೇಳಿ ಅವರ ಭುಜ ತಟ್ಟಿ ಆಫೀಸಿಗೆ ಹೊರಟಿದ್ದೆ. ಈ ದಿನ
ಜಾಕೋಬ್‌ನ ಹೆಂಡತಿ ಮ್ಯಾಗಿಯ ಕೈಯಲ್ಲಿ ತನ್ನ ಕೃತಜ್ಞತೆಗಳನ್ನು ಕಳುಹಿಸಿದ್ದಳು. ಮ್ಯಾಗಿ ಮತ್ತೇನೂ
ಹೇಳಲಿಲ್ಲ; ಎದ್ದೂ ಸಹ ಹೋಗಲಿಲ್ಲ. ಕೂತೇ ಇದ್ದಳು. ನನಗೆ ಏನೂ ಮಾತನಾಡಲು ತೋಚದೆ, `ರಾಬರ್ಟ್ ಹೇಳುತ್ತಿದ್ದ
ಅವರಪ್ಪ ಮುಂದಿನ ತಿಂಗಳು ಬರುತ್ತಾರಂತೆ. ಅವರೆಲ್ಲಿ ಮಸ್ಕಟ್‌ನಲ್ಲಿದ್ದಾರೆಯೆ?' ಎಂದು ಕೇಳಿದೆ.
`ಹೌದು' ಎಂದ ರಾಬರ್ಟ್. ರಾಬರ್ಟ್‌ನನ್ನು ಹತ್ತಿರಕ್ಕೆ ಎಳೆದುಕೊಂಡಳು ಮ್ಯಾಗಿ. `ಒಂದು ವರ್ಷದಿಂದ
ಸುದ್ದಿಯೇ ಇಲ್ಲ. ಪತ್ರ ಬರೆಯುತ್ತಿಲ್ಲ, ಫೋನ್ ಮಾಡುತ್ತಿಲ್ಲ. ಬರೆಯುವ ಪತ್ರಗಳಿಗೆ ಉತ್ತರವೂ ಇಲ್ಲ.
ನಾನು ಫೋನ್ ಮಾಡಿದರೆ ಆ ನಂಬರ್ ಇದ್ದಂತೆಯೇ ಇಲ್ಲ' ಎಂದಳು ಮ್ಯಾಗಿ ತಲೆ ತಗ್ಗಿಸಿ. `ಅವರು ಹೋಗಿ ನಾಲ್ಕು
ವರ್ಷಗಳಾದವು. ಹೋದಾಗಿನಿಂದ ಬಂದೇ ಇಲ್ಲ. ನಾನು ಇಂದು ನಾಳೆ ಎಂದುಕೊಂಡು ಕಾಯುತ್ತಲೇ ಇದ್ದೀನಿ. ಏನು
ಮಾಡಬೇಕೆಂದು ತಿಳೀತಿಲ್ಲ' ಎಂದಳು. ಈ ಎಲ್ಲಾ ವಿಷಯಗಳನ್ನು ಆಕೆ ಸುರೇಶ ಅಥವಾ ರಾಜಾರಾಮನ ಬಳಿ ಹಿಂದೆಂದೂ
ಮಾತನಾಡಿರಲಿಲ್ಲ. ಬಹುಶಃ ನಾನು ಬಾವಿಗೆ ಇಳಿದು ಲೀಸಾಳನ್ನು ಮುಳುಗುವುದರಿಂದ ಕಾಪಾಡಿದ್ದುದರಿಂದ ನಾನು
ಅವರಿಗೆ ಹತ್ತಿರವೆನ್ನಿಸಿ ನನ್ನಲ್ಲಿ ಹೇಳಿರಬಹುದು ಎನ್ನಿಸಿತು. ಮತ್ತೊಮ್ಮೆ ಆ ಪ್ರಶ್ನೆ ಯಾಕಾದರೂ
ಕೇಳಿದೆನೋ ಎನ್ನಿಸಿತು. `ಹಣ ಕಳುಹಿಸುವುದು ಸಹ ನಿಲ್ಲಿಸಿ ಒಂದು ವರ್ಷವಾಗಿದೆ. ಈಗ ಎಲ್ಲರ ಹೊರೆಯೂ
ರೀನಾಳ ಮೇಲಿದೆ' ಎಂದಳು. ತಲೆ ತಗ್ಗಿಸಿಯೇ ಇದ್ದ ಅವಳ ಕಣ್ಣಿನಿಂದ ಒಂದೆರಡು ಹನಿ ನೆಲದ ಮೇಲೆ ಬಿದ್ದದ್ದು
ಕಾಣಿಸಿತು. ಅದನ್ನು ಗಮನಿಸಿದ ರಾಬರ್ಟ್ ಅವಳ ಗಲ್ಲ ಹಿಡಿದು ತಲೆ ಮೇಲೆತ್ತಲು ಪ್ರಯತ್ನಿಸಿದ. ಅವನು
ಮುಖ ಅಳುವಂತೆ ಮಾಡಿದ. ಇನ್ನೇನು ಅವನು ಜೋರಾಗಿ ಅತ್ತುಬಿಡುತ್ತಾನೆ ಎನ್ನಿಸಿತು. ತಕ್ಷಣ ಮ್ಯಾಗಿ ಎದ್ದು
ರಾಬರ್ಟ್‌ನ ಕೈ ಹಿಡಿದು ದರದರನೆ ಎಳೆದುಕೊಂಡು ಮನೆಗೆ ಓಡಿದಳು.
ರೀನಾ
ಆ
ದಿನ ರಾತ್ರಿ ಪುನಃ ನನ್ನ ಆಸ್ತಮಾ ಕಾಡಿತ್ತು. ಹೊರಗೆ ಧೋ ಎಂದು ಸುರಿಯುತ್ತಿದ್ದ ಮಳೆ. ನಿದ್ರೆ ನನ್ನಿಂದ
ದೂರವಾಗಿತ್ತು. ಬದುಕಿನಲ್ಲಿ ಅತ್ಯಂತ ಸುಲಭದ ಹಾಗೂ ನಿರಾಯಾಸವಾಗಿ ಮಾಡುವ ಕೆಲಸವೆಂದರೆ ಉಸಿರಾಟ. ಆದರೆ
ಅದನ್ನೇ ಅತ್ಯಂತ ಕಷ್ಟಕರವಾಗಿ, ಹಿಂಸೆಯಿಂದ ಮಾಡಬೇಕಾದರೆ? ಮಲಗಿದ್ದಷ್ಟೂ ಉಬ್ಬಸ ಹೆಚ್ಚಾಗುತ್ತಿದ್ದುದರಿಂದ
ಮಂಚದ ಕೊನೆಯಲ್ಲಿ ಎರಡೂ ಬದಿಗೆ ಕೈಗಳನ್ನು ಊರಿ ತಲೆಯನ್ನು ಮಳೆಯಲ್ಲಿ ತೊಯ್ದ ಗುಬ್ಬಚ್ಚಿಯಂತೆ ಭುಜಗಳ
ನಡುವೆ ಹುದುಗಿಸಿಕೊಂಡು ಅದೆಷ್ಟು ಹೊತ್ತು ಕೂತಿದ್ದೆನೊ ಗೊತ್ತಿಲ್ಲ. ರಾತ್ರಿ ಎರಡು ಗಂಟೆಯಲ್ಲಿ ನುಂಗಿದ್ದ
ಮಾತ್ರೆ ಕ್ರಮೇಣ ಕೆಲಸಮಾಡಿದಂತೆ, ಬಳಲಿಕೆಯಿಂದ ಮುಂಜಾನೆ ನಿದ್ರೆ ಬರತೊಡಗಿತು. ತಲೆ ವಿಪರೀತ ನೋಯುತ್ತಿತ್ತು;
ಎದೆಗೂಡ ಮೇಲೆ ಕಲ್ಲ ಚಪ್ಪಡಿ ಇರಿಸಿದಂತೆ ಭಾಸವಾಗುತ್ತಿತ್ತು. ಹಾಗೆಯೇ ಒರಗಿ ನಿದ್ರೆ ಮಾಡಿದೆ. ಬೆಳಿಗ್ಗೆ
ಸುರೇಶ ಮತ್ತು ರಾಜಾರಾಮ ಬ್ಯಾಂಕಿಗೆ ಹೊರಡುವಾಗ ನನ್ನನ್ನು ಎಬ್ಬಿಸಿದರು. ನಮ್ಮ ಬ್ಯಾಂಕಿಗೆ ನಾನು
ರಜೆಯೆಂದು ತಿಳಿಸಿಬಿಡುವಂತೆ ಅವರಿಗೆ ತಿಳಿಸಿ ಹಾಗೆಯೇ ನನ್ನ ನಿದ್ರೆಯನ್ನು ಮುಂದುವರಿಸಿದೆ. ವಿಚಿತ್ರದ
ಹಾಗೂ ಹಿಂಸೆಯ ಕನಸುಗಳು ಬೀಳುತ್ತಿದ್ದವು. ಕನಸಿನಲ್ಲಿ ಯಾರೋ `ಅಂಕಲ್' ಎಂದು ಕರೆಯುತ್ತಿರುವಂತೆ ಭಾಸವಾಯಿತು.
ಯಾರೋ ತಳ್ಳಿದಂತನ್ನಿಸಿ ಎಚ್ಚರವಾಯಿತು. ನೋಡಿದರೆ ರಾಬರ್ಟ್ ನಿಂತು ನನ್ನ ಭುಜತಟ್ಟಿ ಎಬ್ಬಿಸುತ್ತಿದ್ದ.
`ನನಗೆ ಮೈ ಹುಷಾರಿಲ್ಲ. ತೊಂದರೆ ಕೊಡಬೇಡ' ಹೋಗು ಎಂದು ಅವನನ್ನು ಕಳುಹಿಸಿದೆ.
ಒಂದ್ಹತ್ತು ನಿಮಿಷ ಕಳೆದಿರಬೇಕು. ಪುನಃ ಯಾರೋ ನನ್ನ ಹೆಸರಿಡಿದು
ಕರೆದಂತಾಯಿತು. ಕನಸೋ ಎಚ್ಚರವೋ ತಿಳಿಯಲಿಲ್ಲ. ಹಾಗೆಯೇ ಮಲಗಿದ್ದೆ. ಈ ಸಾರಿ ಹೆಣ್ಣು ದನಿಯೊಂದು ನನ್ನ
ಹೆಸರಿಡಿದು ಕರೆಯುತ್ತಿರುವುದು ಸ್ಪಷ್ಟವಾಯಿತು. ಕಣ್ಣುಬಿಟ್ಟರೆ ರೀನಾ ಎದುರಿಗೆ ನಿಂತಿದ್ದಳು. ನನ್ನ
ಈ ಅವಸ್ಥೆಯಲ್ಲಿ ಆಕೆ ಬಂದಿದ್ದು ನನಗಿಷ್ಟವಾಗಲಿಲ್ಲ. ದೇಹವೆಲ್ಲಾ ಬಳಲಿಕೆಯಿಂದ ನಿತ್ರಾಣವಾಗಿತ್ತು.
ಆಕೆ ಹೋಗುವಂತೆ ಕಾಣಲಿಲ್ಲ. `ಮೈ ಹುಷಾರಿಲ್ಲವೆ?' ಕೇಳಿದಳು. `ಹ್ಹೂಂ.. ' ಎಂದು ಎದ್ದು ಕೂತೆ. `ರಾಬರ್ಟ್
ಬಂದು ಹೇಳಿದ, ಅದಕ್ಕೇ ಬಂದೆ' ಎಂದಳು. `ಏನು ಬೇಡ, ಸರಿಹೋಗುತ್ತದೆ' ಎಂದು ಎದ್ದು ನಿಂತೆ. `ಏನಾದರೂ
ಬೇಕೆ?' ಎಂದಳು. `ಏನೂ ಬೇಡ, ನಿದ್ರೆ ಮಾಡಿದರೆ ಎಲ್ಲಾ ಸರಿಹೋಗುತ್ತದೆ' ಎಂದೆ. ನನ್ನನ್ನು ನನ್ನಷ್ಟಕ್ಕೆ
ಬಿಟ್ಟರೆ ಸಾಕಾಗಿತ್ತು. ರಾಬರ್ಟ್ ಆಕೆಯ ಹಿಂದೆಯೇ ನಿಂತಿದ್ದ. ಅವರು ಅಲ್ಲಿ ನಿಂತಿದ್ದಂತೆಯೇ ನಾನು
ಬಾತ್‌ರೂಮಿನ ಕಡೆಗೆ ಮೆಟ್ಟಲಿಳಿದು ಹೋದೆ. ಉಸಿರಾಡುವಾಗ ಇನ್ನೂ ಗೊರಗೊರ ಸದ್ದು ಕೇಳಿಸುತ್ತಲೇ ಇತ್ತು.
ಬಾತ್‌ರೂಮಿನಿಂದ ಬರುವಷ್ಟರಲ್ಲಿ ರೀನಾ ಹಾಗೂ ರಾಬರ್ಟ್ ಕಾಣಲಿಲ್ಲ.
ನನ್ನ ಮಂಚದ ಪಕ್ಕದ ಟೇಬಲ್ಲಿನ ಮೇಲೆ ಹೊಗೆಯಾಡುವ ಚಪಾತಿ ಇತ್ತು. ಬಳಲಿಕೆಯಿಂದ ನನಗೂ ಹಸಿವಾಗುತ್ತಿತ್ತು.
ಬೇರೆ ಏನಾದರೂ ತಿಂಡಿ ಮಾಡಿಕೊಳ್ಳುವ ಮನಸ್ಥಿತಿಯೂ ಇರಲಿಲ್ಲ. ಮನದಲ್ಲೇ ಅವರಿಗೆ ವಂದಿಸಿ ಚಪಾತಿ ತಿನ್ನಲು
ಕೂತೆ. ನಂತರ ಮಾತ್ರೆ ನುಂಗಿ ಹಾಗೆಯೇ ಮಂಚದ ಮೇಲೆ ಒರಗಿದೆ. ಒಂದೈದು ನಿಮಿಷದ ನಂತರ ಬಾಗಿಲು ತಟ್ಟಿದ
ಸದ್ದಾಯಿತು. ರೀನಾಳೇ ಇರಬೇಕೆಂದುಕೊಂಡೆ, ಏಕೆಂದರೆ ರಾಬರ್ಟ್ ಬಾಗಿಲು ತಟ್ಟಿ ಬರುವವನಲ್ಲ. ಅವನಿಗೆ
ಆಹ್ವಾನವೇ ಬೇಡ. ರೀನಾಳೆ ಒಳಗೆ ಬಂದಳು. ಅವಳ ಕೈಯಲ್ಲಿ ಕಾಫಿಯ ಕಪ್ಪಿತ್ತು. `ನಿಮಗೆ ತೊಂದರೆ ಕೊಟ್ಟೆ'
ಎಂದೆ. ಸುಮ್ಮನೆ ಮುಗುಳ್ನಕ್ಕ ಆಕೆ ಕಾಫಿ ಅಲ್ಲೇ ಇರಿಸಿ ನಾನು ಏನೂ ಹೇಳದಿದ್ದರೂ ಅಲ್ಲೇ ಪಕ್ಕದಲ್ಲಿದ್ದ
ಕುರ್ಚಿಯ ಮೇಲೆ ಕೂತಳು. ನನಗೂ ಕಾಫಿ ಬೇಕಿತ್ತು. ಕಾಫಿ ಕುಡಿದೆ.
`ಸ್ಕೂಲಿಗೆ
ಹೋಗೋದಿಲ್ಲವೆ?' ನಾನು ಕೇಳಿದೆ. `ಹ್ಹಾಂ... ಹೋಗಬೇಕು. ಇನ್ನೂ ಸಮಯವಿದೆ' ಎಂದಳು. ಅವಳೊಟ್ಟಿಗೆ ಮಾತನಾಡಲು
ನನ್ನಲ್ಲಿ ಏನೂ ಇರಲಿಲ್ಲ. `ಥ್ಯಾಂಕ್ಸ್' ಎಂದೆ ಕಾಫಿಯ ಕಪ್ಪನ್ನು ಮೇಜಿನ ಮೇಲಿಡುತ್ತಾ. ಆಕೆ ಏನೂ
ಹೇಳಲಿಲ್ಲ, ಪುನಃ ಮುಗುಳ್ನಕ್ಕಳು. ಲೀನಾ ಆಕೆಯ ತಂಗಿಯರಂತೆ ಸುಂದರ ಹೆಣ್ಣಲ್ಲ. ಆದರೆ ಮಾತು ಬಹಳ ಕಡಿಮೆ
ಆದರೆ ಅಷ್ಟೇ ಮೃದು ಎನ್ನಿಸುವಂತಿತ್ತು. ಸುಮ್ಮನೆ ಹಾಗೆಯೇ ಕೂತಿದ್ದಳು. ಆಕೆಯ ವಯಸ್ಸು ಏನಿಲ್ಲವೆಂದರೂ
ನಲವತ್ತಾಗಿರಬಹುದು. ನನಗಿಂತಾ ಸುಮಾರು ಹದಿನೈದು ವರ್ಷ ದೊಡ್ಡವಳು. ಆಕೆಯ ತಂದೆ ತಾಯಿಯರಿಗೆ ಗಂಡು
ಮಕ್ಕಳಿಲ್ಲ. ಈಕೆಯೇ ದೊಡ್ಡವಳು. ತಂದೆ ತಾಯಿಯರಿಬ್ಬರೂ ಹಾಸಿಗೆ ಹಿಡಿದು ಬಹಳ ವರ್ಷಗಳೇ ಕಳೆದಿವೆ.
ಅವರ ಆರೈಕೆಯಲ್ಲಿ ಆಕೆಗೆ ಮದುವೆಯಾಗಲು ಸಮಯವೇ ಸಿಕ್ಕಿರಲಿಲ್ಲವೆನ್ನಿಸುತ್ತದೆ. ಅಷ್ಟೊತ್ತಿಗೆ ಆಕೆಯ
ತೆಕ್ಕೆಯೊಳಕ್ಕೆ ಇನ್ನಿಬ್ಬರು ತಂಗಿಯರು ಬಂದು ಸೇರಿಕೊಂಡಿದ್ದಾರೆ. ಆಗಾಗ ಅವರ ಮನೆಯಲ್ಲಿ ಆಕೆಯ ಇಬ್ಬರು
ತಂಗಿಯರು ಜೋರು ದನಿಯಲ್ಲಿ ಜಗಳವಾಡುತ್ತಿರುವುದು ಕೇಳುತ್ತಿತ್ತು. ಆದರೆ ಒಂದು ದಿನವೂ ರೀನಾಳ ಜೋರುದನಿ
ಕೇಳಿರಲಿಲ್ಲ. ಹಾಗೆಯೇ ಹಾಸಿಗೆಯ ಮೇಲೆ ಕೂತು ಒರಗಿದ್ದವನಿಗೆ ಹಾಗೆಯೇ ನಿದ್ರೆ ಬಂದಿತ್ತು. ಎಚ್ಚರವಾದಾಗ
ರೀನಾ ಇರಲಿಲ್ಲ.
ಅದಾದ ಮೇಲೆ ಆಗಾಗ ಸಿಕ್ಕಾಗಲೆಲ್ಲಾ ಮಾತನಾಡಿಸುತ್ತಿದ್ದಳು.
ಸುರೇಶ, ರಾಜಾರಾಮ ಊರಿಗೆ ಹೋಗಿ ನಾನೊಬ್ಬನೇ ಇದ್ದಾಗ ತಿಂಡಿ ತಂದುಕೊಡುತ್ತಿದ್ದಳು. ಅದೊಂದು ದಿನ ಸುರೇಶ
ಮತ್ತು ರಾಜಾರಾಮ ಹಾಗೂ ಇತರ ಗೆಳೆಯರು ಮನೆಗೆ ಹತ್ತಿರದಲ್ಲೇ ಇದ್ದ ಥಿಯೇಟರಿಗೆ ಸೆಕೆಂಡ್ ಶೋಗೆ ಹೋಗಿದ್ದರು.
ನಾನೂ ಬೇಕಾದಷ್ಟು ಸಾರಿ ಅವರೊಟ್ಟಿಗೆ ಸಿನೆಮಾಗೆ ಹೋಗಿದ್ದೆ. ಆದರೆ ಆ ದಿನ ಅವರು ಹೋಗಿದ್ದ ಸಿನೆಮಾ
ನನ್ನಲ್ಲಿ ಅಷ್ಟೊಂದು ಕುತೂಹಲ ಮೂಡಿಸಿರಲಿಲ್ಲವಾದುದರಿಂದ ನಾನು ಹೋಗಿರಲಿಲ್ಲ. ಮನೆಯಲ್ಲೇ ಕೂತಿದ್ದೆ.
ಸಂಜೆ ಮಳೆ ಇರಲಿಲ್ಲ. ಆದರೆ ರಾತ್ರಿಯಾದಂತೆ ಮಳೆ ಧೋ ಎಂದು ಸುರಿಯಲಾರಂಭಿಸಿತು. ಕರೆಂಟ್ ಸಹಾ ಹೋಯಿತು.
ಎಂದಿನಂತೆ ಮೋಂಬತ್ತಿ ಹಚ್ಚಿ ಮಲಗಲು ಹಾಸಿಗೆ ಸಿದ್ಧಪಡಿಸಿಕೊಳ್ಳುತ್ತಿದ್ದೆ. ಬಾಗಿಲು ತಟ್ಟಿದ ಸದ್ದಾಯಿತು.
ಸಿನೆಮಾಗೆ ಹೋದವರು ಇಷ್ಟು ಬೇಗ ಬರಲು ಸಾಧ್ಯವಿಲ್ಲ. ಪುನಃ ಲೀಸಾ ಬಂದಳೆ ಎಂದುಕೊಂಡೆ. ಈಗ ಅವಳು ಕೂದಲೆಲ್ಲಾ
ಹರಡಿಕೊಂಡು ಬಂದರೂ ನನಗೆ ಹೆದರಿಕೆಯಾಗುವುದಿಲ್ಲ. ನಾನೇ ಅವಳಿಗೆ ಛತ್ರಿ ಹಿಡಿದು ಮನೆಗೆ ವಾಪಸ್ಸು
ಬಿಟ್ಟುಬರಬಲ್ಲೆ. ಹಾಗಾಗಿ ಧೈರ್ಯದಿಂದ ಬಾಗಿಲು ತೆರೆದೆ. ಹೊರಗೆ ಕತ್ತಲಲ್ಲಿದ್ದ ಆಕೃತಿಯ ಕೈಯಲ್ಲಿ
ಯಾವ ಮೋಂಬತ್ತಿಯೂ ಇರಲಿಲ್ಲ. ಆ ಆಕೃತಿ ಸರಕ್ಕನೆ ಮನೆಯೊಳಕ್ಕೆ ನುಗ್ಗಿಬಂತು. ಕೋಣೆಯಿಂದ ಬರುತ್ತಿದ್ದ
ಮೋಂಬತ್ತಿಯ ಬೆಳಕಿನಿಂದ ಅದು ರೀನಾ ಎಂದು ತಿಳಿಯಿತು. ಆಕೆ ಸರಕ್ಕನೆ ಒಳಕ್ಕೆ ನುಗ್ಗಿ ಬಂದದ್ದರಿಂದ
ಕೊಂಚ ಗಾಭರಿಯೇ ಆಯಿತು. ಒಳಕ್ಕೆ ಬಂದವಳೇ ನೇರ ನನ್ನ ರೂಮಿಗೆ ನುಗ್ಗಿ ಕುರ್ಚಿಯ ಮೇಲೆ ಕೂತಳು. ನನಗೊಂದೂ
ಅರ್ಥವಾಗಲಿಲ್ಲ. `ಏನಾದರೂ ಸಹಾಯ ಬೇಕಾಗಿತ್ತೆ?' ಎಂದು ಕೇಳಿದೆ. `ನಿನ್ನ ಜೊತೆ ಮಾತನಾಡಬೇಕಿತ್ತು'
ಎಂದಳು. ಮನೆಯಲ್ಲೇನಾದರೂ ಸಮಸ್ಯೆಯಾಗಿರಬಹುದು ಎಂದುಕೊಂಡು ಅಲ್ಲೇ ಮಂಚದ ಮೂಲೆಯೊಂದರಲ್ಲಿ ಕೂತೆ.
`ಏಕೆ, ಏನಾಗಿದೆ?' ಎಂದೆ. ಮನೆಯಲ್ಲಿ ಲೀಸಾಳನ್ನು ಸೇರಿಸಿಕೊಂಡಲ್ಲಿ ಮೂರುಜನ ರೋಗಿಗಳು. ಏನಾದರೂ ಸಂಕಟದಲ್ಲಿರಬಹುದು
ಎಂದುಕೊಂಡೆ. ಅಳತೊಡಗಿದಳು. ನನಗಿನ್ನೂ ಗಾಭರಿಯಾಯಿತು. ಆಕೆಯ ಅಮ್ಮ ಅಥವಾ ಅಪ್ಪನಿಗೇನಾದರೂ ಆಗಿದೆಯೆ?
`ರೀನಾ ಏನದು ಹೇಳು' ಎಂದೆ. ಇದ್ದಕ್ಕಿದ್ದಂತೆ ಎದ್ದು ನನ್ನನ್ನು ಅಪ್ಪಿಕೊಂಡಳು. ನನಗೆ ಕೊಂಚ ಕಸಿವಿಸಿಯಾಯಿತು.
ಬಿಡಿಸಿಕೊಳ್ಳಲು ಯತ್ನಿಸಿದೆ. ಇನ್ನೂ ಬಲವಾಗಿ ಆತುಕೊಂಡಳು. ಬಲವಂತವಾಗಿ ಅವಳ ಕೈಗಳನ್ನು ಬಿಡಿಸಿ ಪುನಃ
ಕುರ್ಚಿಯ ಮೇಲೆ ಕೂಡಿಸಿದೆ. `ನನಗೆ ಈ ಬದುಕು ಸಾಕಾಗಿದೆ' ಎಂದಳು. ಅವಳ ಆ ಯಾತನೆ ನನಗರ್ಥವಾಗುತ್ತಿತ್ತು.
ಅವಳಿಗೆ ಅವಳದೇ ಬದುಕೆನ್ನುವುದು ಇರಲೇ ಇಲ್ಲ. ಅವಳು ಬದುಕುತ್ತಿರುವುದು, ದುಡಿಯುತ್ತಿರುವುದು ಅವಳಿಗಾಗಿ
ಅಲ್ಲ.
ಏನೂ ಹೇಳಲು ತೋಚದೆ, `ಸಮಾಧಾನ ಮಾಡಿಕೊ, ಎಲ್ಲಾ ಸರಿಹೋಗುತ್ತದೆ'
ಎಂದೆ. ನನ್ನ ಮಾತು ಅವಳಿಗೆ ಒಂದು ಜೋಕ್ ಎನ್ನಿಸಬಹುದು ಎಂಬುದು ನನಗೆ ತಿಳಿದಿತ್ತು. ಅವಳ ಅಳುವಿನ
ತುಟಿಗಳಲ್ಲೂ ನಗು ಕಾಣಿಸಿಕೊಂಡಂತೆ ಅನ್ನಿಸಿತು. ತಲೆ ಎತ್ತಿ ನನ್ನನ್ನೇ ನೋಡುತ್ತಿದ್ದವಳು, `ನನ್ನನ್ನು
ಮದುವೆಯಾಗುತ್ತೀಯಾ?' ಎಂದಳು. ತಕ್ಷಣ ನನ್ನ ತಲೆ ಗಿರಗಿರ ತಿರುಗಿದಂತೆ ನನಗನ್ನಿಸಿತು. ಅವಳಿಂದ ಈ
ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಗರಬಡಿದವನಂತೆ ಎದ್ದು ನಿಂತೆ. ಆಕೆ ನನ್ನನ್ನೇ ನೋಡುತ್ತಿದ್ದಳು.
ಆಕೆ ಆ ಪ್ರಶ್ನೆಯನ್ನು ತಮಾಷೆಗಾಗಿ ಕೇಳುತ್ತಿಲ್ಲ ಎಂದು ನನಗರಿವಾಗತೊಡಗಿತು. `ಸಾಧ್ಯವೇ ಇಲ್ಲ', ನನಗರಿವಿಲ್ಲದಂತೆ
ನನ್ನಿಂದ ಮಾತು ಹೊರಬಿತ್ತು. `ಪ್ಲೀಸ್' ಎಂದಳು. ಇದೇನೋ ಅತಿರೇಕಕ್ಕೆ ಹೋಗುತ್ತಿದೆ ಎನ್ನಿಸಿತು. ಲೀಸಾಳೊಬ್ಬಳೇ
ಅಲ್ಲ, ಅವಳ ಮನೆಯಲ್ಲಿನ ಎಲ್ಲರೂ ಹುಚ್ಚರೆನ್ನಿಸತೊಡಗಿತು. `ಐ ಲವ್ ಯೂ. ಬಹಳ ದಿನಗಳಿಂದ ನಿನ್ನಲ್ಲಿ
ಹೇಳಬೇಕೆಂದಿದ್ದೆ' ಎಂದಳು. ಅವಳ ಮಾತುಗಳು ಎಲ್ಲೋ ದೂರದಲ್ಲಿ ಹೇಳುತ್ತಿರುವಂತೆ ಭಾಸವಾಗುತ್ತಿತ್ತು.
`ನೋಡು, ನಾನೀಗಾಗಲೇ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೇನೆ. ಮುಂದಿನ ವರ್ಷ ನಮ್ಮ ಮದುವೆಯಾಗುತ್ತಿದೆ.
ಈಗ ನೋಡು, ದಯವಿಟ್ಟು ಮನೆಗೆ ಹೋಗು' ಎಂದೆ. ಆ ಕ್ಷಣ ಆಕೆ ಹೊರಹೊರಟರೆ ಸಾಕಾಗಿತ್ತು. ಆಕೆಯ ಮೇಲೆ ನನ್ನ
ಉತ್ತರ ಯಾವ ಪರಿಣಾಮವನ್ನೂ ಬೀರಲಿಲ್ಲ. ಏನೋ ಯೋಚಿಸುತ್ತಿದ್ದವಳು, `ನೀನು ಪ್ರೀತಿಸಿರುವ ಹುಡುಗಿಯನ್ನೇ
ಮದುವೆಯಾಗು, ಆದರೆ ನಾನೂ ಇರುತ್ತೇನೆ. ನಾನು ಇಲ್ಲೇ ಇರುತ್ತೇನೆ, ನನಗೊಂದು ಮನೆ ಮಾಡಿಡು .... ಆಗಾಗ
ಬಂದುಹೋಗುತ್ತಿರು' ಎಂದಳು. ನನಗೆ ವಿಪರೀತ ಸಿಟ್ಟು ಬಂದಿತು. `ನನಗೆ ಇನ್ನು ಹೆಚ್ಚು ಮಾತನಾಡಲು ಇಷ್ಟವಿಲ್ಲ.
ಪ್ಲೀಸ್ ಗೋ ಹೋಮ್' ಎಂದೆ. ಆಕೆ ಎದ್ದು ನನ್ನ ಕಡೆಗೆ ಬರತೊಡಗಿದಳು. ಆಕೆಯನ್ನು ಬಲವಂತವಾಗಿ ಬಾಗಿಲಿನಿಂದ
ಹೊರಕ್ಕೆ ತಳ್ಳಿದೆ. ಆಕೆ ಅಳುತ್ತಲೇ ಇದ್ದಳು. ಆ ಚಳಿ, ಮಳೆಯಲ್ಲೂ ನನ್ನ ಮೈ ಬೆವರಿತ್ತು.
***
ಫಾದರ್
ಬಂದು ನನ್ನನ್ನು ಎಬ್ಬಿಸಿದಾಗಲೇ ನನಗೆ ಎಚ್ಚರವಾದದ್ದು. `ಗುಡ್ ಮಾರ್ನಿಂಗ್' ಹೇಳಿ ನನ್ನ ಪರಿಚಯ ಮಾಡಿಕೊಂಡೆ.
ಮಡಿಕೇರಿಯ ಜಾಕೋಬ್ ಒಬ್ಬರನ್ನು ನೋಡಲು ಬಂದಿದ್ದೇನೆಂದು ತಿಳಿಸಿದೆ. ನಾನು ಅವರ ನೆಂಟನಲ್ಲವೆಂದೂ ನನಗೆ
ಬಹಳ ಹಿಂದೆ ಪರಿಚಯವಿದ್ದವರೆಂದೂ ತಿಳಿಸಿದೆ. ಆ ವೃದ್ಧಾಶ್ರಮದಲ್ಲಿ ಮೂವರು ಜಾಕೋಬ್‌ಗಳಿದ್ದಾರೆ, ಅವರ
ಪೂರ್ತಿ ಹೆಸರು ಏನೆಂದು ಕೇಳಿದರು. ನನಗೆ ನೆನಪಿಲ್ಲವೆಂದೆ. ವಿವರಗಳನ್ನು ಕೇಳಿದ ಫಾದರ್, `ನಿಮ್ಮ
ವಿವರಗಳ ಹಾಗೆ ಇರುವವರು ಒಬ್ಬರಿದ್ದಾರೆ. ಅವರ ವಯಸ್ಸು ತೊಂಭತ್ತಾಗಿರಬಹುದು. ಅವರೊಬ್ಬರೇ ಮಡಿಕೇರಿಯವರು.
ಬನ್ನಿ ತೋರಿಸುತ್ತೇನೆ' ಎಂದು ಕರೆದುಕೊಂಡು ಹೋದರು. ಹೋಗುವಾಗ, `ಆ ಜಾಕೋಬ್ ನಮ್ಮಲ್ಲಿ ಬಂದು ಸುಮಾರು
ಇಪ್ಪತ್ತು ವರ್ಷಗಳಾಯಿತು. ಅವರನ್ನು ನೋಡಲು ಬರುತ್ತಿರುವವರಲ್ಲಿ ನೀವೇ ಮೊದಲು' ಎಂದರು ಫಾದರ್. ಅವರ
ಮೂವರು ಹೆಣ್ಣು ಮಕ್ಕಳಿಗೇನಾಯಿತು ಎನ್ನುವ ಪ್ರಶ್ನೆ ನನ್ನನ್ನು ಮಡಿಕೇರಿಯಿಂದ ಕಾಡುತ್ತಲೇ ಇತ್ತು.
ಹೊರಗೆ ಬಹಳಷ್ಟು ಜನ ವಯಸ್ಸಾದವರಿದ್ದರು. ಕೆಲವರು ಊರುಗೋಲುಗಳನ್ನು ಹಿಡಿದು ಓಡಾಡುತ್ತಿದ್ದರು, ಇನ್ನು
ಕೆಲವರು ಅಲ್ಲಲ್ಲಿ ಕೂತು ಮಾತನಾಡುತ್ತಿದ್ದರು. ಅಲ್ಲೇ ಮರದ ಕೆಳಗೆ ವೀಲ್ ಚೇರಿನಲ್ಲಿ ಒಬ್ಬ ಹಣ್ಣು
ಹಣ್ಣು ಮುದುಕ ಕೂತಿದ್ದರು. ಅಲ್ಲಿಗೆ ನನ್ನನ್ನು ಕರೆದೊಯ್ದು `ಜಾಕೋಬ್ ತಾತ ನೋಡಿ ನಿಮ್ಮನ್ನು ನೋಡಲು
ಯಾರೋ ಬಂದಿದ್ದಾರೆ' ಎಂದು ಜೋರುದನಿಯಲ್ಲಿ ಹೇಳಿದರು. ಆ ತಾತ ತನ್ನ ಕನ್ನಡಕಗಳ ಹಿಂದೆ ಕುಳಿಬಿದ್ದ
ಕಣ್ಣುಗಳಿಂದ ನನ್ನನ್ನೇ ದಿಟ್ಟಿಸಿ ನೋಡಿದರು. ಜಾಕೋಬ್‌ರ ಮುಖ ನಾನು ಇಪ್ಪತ್ತೈದು ವರ್ಷಗಳ ಹಿಂದೆ
ಕಂಡಿದ್ದಂತೆ ಇರಲಿಲ್ಲ. ಆದರೂ ಅವರೇ ಇರಬಹುದೆಂದು ಅಲ್ಲೇ ಪಕ್ಕದ ಕಲ್ಲಿನ ಬೆಂಚಿನ ಮೇಲೆ ಕೂತೆ. `ನೀವು ಮಾತನಾಡುತ್ತಿರಿ, ನಾನು ಬರುತ್ತೇನೆ' ಎಂದು ಫಾದರ್
ಅಲ್ಲಿಂದ ಹೊರಟರು.
ಜಾಕೋಬ್‌ಗೆ ನನ್ನ ಪರಿಚಯ ಹೇಳಿದೆ. `ನೆನಪಿದೆಯಾ?' ಎಂದು
ಕೇಳಿದೆ. `ನೆನಪು' ಎಂದ ಅಜ್ಜನ ಮುಖದಲ್ಲಿ ವಿಷಾದದ ನಗೆ ಮೂಡಿತು. `ನನಗಿರುವುದು ಬರೇ ನೆನಪುಗಳ ಹೊರೆ
ಮಾತ್ರ' ಎಂದರು. `ನೀನೇ ಅಲ್ಲವೆ, ನನ್ನ ಮಗಳು ಲೀಸಾಳನ್ನು ಬಾವಿಯಿಂದ ಕಾಪಾಡಿದ್ದು?' ಹೌದೆಂದು ತಲೆಯಾಡಿಸಿದೆ.
`ಅಲ್ಲಿ ನೋಡು' ಎಂದು ಇಬ್ಬರು ಮುದುಕರೆಡೆಗೆ ಕೈ ತೋರಿದರು. ಎದುರಿನ ಮತ್ತೊಂದು ಮರದ ಕೆಳಗೆ ಇಬ್ಬರು
ವಯಸ್ಸಾದವರು ಕಲ್ಲ ಬೆಂಚುಗಳ ಮೇಲೆ ಕೂತಿದ್ದರು. `ಅವರಿಗೆಂಥದೋ ಕಾಯಿಲೆಯಂತೆ, ಮರೆವಿನ ಕಾಯಿಲೆ. ಅವರಿಗೆ
ಏನೂ ನೆನಪಿರೋಲ್ಲ. ಆ ಮುಠ್ಠಾಳರಿಗೆ ಊಟ ಮಾಡಿದ್ದೂ ನೆನಪಿರೋಲ್ಲ. ಎಂಥಾ ಪುಣ್ಯಾತ್ಮರವರು!' ಸ್ವಲ್ಪ
ಹೊತ್ತು ತಲೆತಗ್ಗಿಸಿ ಕೂತಿದ್ದ ಜಾಕೋಬ್ ಮಾತು ಮುಂದುವರಿಸಿದರು, `ನನಗ್ಯಾಕೆ ಅಂಥ ಮರೆವಿನ ಕಾಯಿಲೆ
ಬರಲಿಲ್ಲ?' ನನಗೇನು ಹೇಳಲೂ ತೋಚಲಿಲ್ಲ. `ಹೇಗಿದ್ದೀರಿ?' ಎಂದು ಕೇಳಲೂ ಮನಸ್ಸಾಗಲಿಲ್ಲ. ಒಂದೈದು ನಿಮಿಷ
ಇಬ್ಬರೂ ಹಾಗೆಯೇ ಕೂತಿದ್ದೆವು.
`ಮಡಿಕೇರಿಯಲ್ಲಿ ನೀವಿದ್ದ ಮನೆ ಬಳಿಹೋಗಿದ್ದೆ. ಆ ಮನೆಯಲ್ಲಿದ್ದವರು
ನೀವು ಇಲ್ಲಿರುವುದು ತಿಳಿಸಿದರು. ನಿಮ್ಮ ಮಕ್ಕಳು ರೀನಾ, ಮ್ಯಾಗಿ, ಲೀಸಾ...ರಾಬರ್ಟ್ ಎಲ್ಲಿದ್ದಾರೆ?'
ಕೇಳಿದೆ. ತೂಕಡಿಸುತ್ತಿದ್ದಂತೆ ಇದ್ದ ಜಾಕೋಬ್ ತಲೆ ಎತ್ತಿ ಸುಮ್ಮನೆ `ಎಲ್ಲೋ ಹೋದರು' ಎನ್ನುವಂತೆ
ಕೈ ಆಡಿಸಿದರು. ಸ್ವಲ್ಪ ಹೊತ್ತಿನ ನಂತರ, `ಲೀಸಾ ಪುನಃ ಬಾವಿಗೆ ಹಾರಿದಳು. ಈ ಸಾರಿ ಅವಳನ್ನು ಎತ್ತುವವರು
ಯಾರೂ ಇರಲಿಲ್ಲ' ಎಂದರು. ನನ್ನ ಬಾಯಿಂದ `ಅಯ್ಯೋ' ಎನ್ನುವ ಶಬ್ದ ನನಗರಿವಿಲ್ಲದಂತೆ ಬಂತು. ಜಾಕೋಬ್‌ರ
ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ. `ಮ್ಯಾಗಿಯ ಗಂಡ ಮಸ್ಕಟ್‌ನಿಂದ ಬರಲೇ ಇಲ್ಲ. ಕೊನೆಗೆ ಅವಳೇ ಒಂದು
ದಿನ ಅವನನ್ನು ಹುಡುಕಿಕೊಂಡು ಅಲ್ಲಿಗೇ ಹೊರಟುಹೋದಳು. ಆಗಾಗ ಪತ್ರ ಬರೆಯುತ್ತಿದ್ದಳು. ಅಲ್ಲಿ ಅವಳ
ಗಂಡ ಸಿಗಲೇ ಇಲ್ಲವಂತೆ. ಅಲ್ಲಿ ಅವರಿವರ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದಳಂತೆ. ಕೊನೆಗೆ ಪತ್ರ
ಬರೆಯುವುದೂ ನಿಲ್ಲಿಸಿದಳು. ಅವಳು ಬದುಕಿದ್ದಾಳೋ ಇಲ್ಲವೋ ಗೊತ್ತಿಲ್ಲ. ರಾಬರ್ಟ್ ಅವಳ ಜೊತೆ ಹೋಗಲಿಲ್ಲ.
ಅವನು ಪುಂಡನಾಗಿ ಎಲ್ಲಿದ್ದಾನೋ ಗೊತ್ತಿಲ್ಲ. ಅವನಿಗೇ ನಾವಿದ್ದ ಮನೆ ಬರೆದುಕೊಟ್ಟೆ. ಅವನು ಅದನ್ನು
ಮಾರಿಕೊಂಡು ಊರುಬಿಟ್ಟು ಹೋಗಿದ್ದಾನೆ. ಇನ್ನು ರೀನಾಳ ಕತೆ... ಆಕೆ ನಿನ್ನನ್ನೂ ಕೇಳಿರಬಹುದಲ್ವೆ ಮದುವೆಯಾಗು
ಎಂದು?' ಎಂದು ಹೇಳಿ ನನ್ನೆಡೆಗೇ ನೋಡಿದರು ಜಾಕೋಬ್. ನಾನು ಏನೂ ಹೇಳಲಿಲ್ಲ. `ಆ ರೀತಿ ಆಕೆ ಎಷ್ಟು
ಜನರನ್ನು ಕೇಳಿಲ್ಲ! ಪಾಪದ ಹುಡುಗಿ. ಅಪ್ಪ ಅಮ್ಮಂದಿರಾದ ನಾವು ಅವಳನ್ನು ನೋಡಿಕೊಳ್ಳಬೇಕಾಗಿತ್ತು.
ನಮ್ಮ ದುರಾದೃಷ್ಟ ನಾವು ಬದುಕಿ ಅವಳ ಬದುಕನ್ನು ಹಾಳುಮಾಡಿಬಿಟ್ಟೆವು.' ಜಾಕೋಬ್ ಕಣ್ಣಂಚಿನಲ್ಲಿ ನೀರ
ಹನಿ ಕಾಣಿಸಿತು. `ರೀನಾ ಏನಾದಳು?' ಎಂದು ಕೇಳುವ ಧೈರ್ಯ ನನಗೆ ಬರಲಿಲ್ಲ. `ಸಾವೂ ಬರಲಿಲ್ಲ, ಹಾಳಾದ್ದು
ನೆನಪುಗಳೂ ಸಾಯಲಿಲ್ಲ' ಎಂದ ಜಾಕೋಬ್ ತಲೆ ತಗ್ಗಿಸಿದರು.
ಹತ್ತು ನಿಮಿಷ ಹಾಗೆಯೇ ಕೂತಿದ್ದೆ. ಜಾಕೋಬ್ ಅಲುಗಾಡಲಿಲ್ಲ.
ಕಣ್ಣು ಮುಚ್ಚಿತ್ತು. ನಿದ್ರೆ ಮಾಡುತ್ತಿರಬಹುದು ಎನ್ನಿಸಿ ನಾನು ತಂದಿದ್ದ ಸೇಬಿನ ಕವರ್ ಅಲ್ಲೇ ಕಲ್ಲಬೆಂಚಿನ
ಮೇಲೆ ಇರಿಸಿ ನನ್ನ ಚೀಲ ಹೆಗಲಿಗೇರಿಸಿ ಸದ್ದಿಲ್ಲದೆ ಅಲ್ಲಿಂದ ಹೊರಟೆ. ಜಾಕೋಬ್ ಅಜ್ಜ ಅವರ ಹೊರೆಯನ್ನು
ನನಗೂ ವರ್ಗಾಯಿಸಿದ್ದಾರೆ ಎನ್ನಿಸಿ ಎದೆ ಭಾರವಾಗಿತ್ತು.
ಮಂಗಳವಾರ, ಜನವರಿ 04, 2011
ಹೊಸ ವರ್ಷದ ರೆಸೊಲ್ಯೂಶನ್
ಶನಿವಾರ, ಡಿಸೆಂಬರ್ 04, 2010
ಡಾಲ್ಫಿನ್: ನೀರೊಳಗಿನ ಬೆರಗು
2ನೇ ಡಿಸೆಂಬರ್ 2010ರ `ಸುಧಾ'ದಲ್ಲಿ ನನ್ನ ಲೇಖನ ಡಾಲ್ಫಿನ್: ನೀರೊಳಗಿನ ಬೆರಗು ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ:

ಪ್ರಾಣಿಗಳನ್ನು ಗುಲಾಮರನ್ನಾಗಿ ಮಾಡಿಕೊಂಡಿರುವ ನಮಗೆ, ಅವುಗಳನ್ನು ನಮ್ಮ ಸಮಜೀವಿಗಳೆಂದು ಪರಿಗಣಿಸುವುದು ಸಾಧ್ಯವಿಲ್ಲ.
-ಚಾರ್ಲ್ಸ್ ಡಾರ್ವಿನ್
1998ರಲ್ಲಿ ಸೌತ್ ಕೆರೀಬಿಯನ್‌ನಲ್ಲಿ ದೋಣಿಯಲ್ಲಿ ಚಲಿಸುತ್ತಿದ್ದ ವ್ಯಕ್ತಿಯೊಬ್ಬ ನೀರಿಗೆ ಬಿದ್ದುಬಿಟ್ಟ. ಸಮುದ್ರದ ಅಲೆಗಳು ಜೋರಾಗಿ ಬೀಸುತ್ತಿದ್ದುದರಿಂದ ಆತನ ಸಹನಾವಿಕರಿಗೆ ಆತನನ್ನು ಹುಡುಕಲಾಗಲಿಲ್ಲ. ಆನಂತರ ಹಲವಾರು ದೋಣಿಗಳಲ್ಲಿ ಆತನನ್ನು ಹುಡುಕಲು ಪ್ರಾರಂಭಿಸಿದರು. ನೀರಿನಲ್ಲಿ ಬಿದ್ದು ಈಜುತ್ತಿದ್ದ ಆತನ ಸುತ್ತ ಹಲವಾರು ಡಾಲ್ಫಿನ್‌ಗಳು ಕಾಣಿಸಿಕೊಂಡವು. ಅದೇ ಸಮಯದಲ್ಲಿ ಎರಡು ಡಾಲ್ಫಿನ್‌ಗಳು ಹುಡುಕುತ್ತಿದ್ದ ದೋಣಿಯ ಬಳಿ ಹೋಗಿ ದೋಣಿಯಿಂದ ದೂರಕ್ಕೆ ಹೋಗುವಂತೆ ಈಜಿದವು ಹಾಗೂ ಅದೇ ರೀತಿ ಮೂರುನಾಲ್ಕು ಸಾರಿ ಮಾಡಿದವು. ಅದರಿಂದಾಗಿ ದೋಣಿಯಲ್ಲಿದ್ದವರಿಗೆ ಆ ಎರಡು ಡಾಲ್ಫಿನ್‌ಗಳು ತಮ್ಮನ್ನು ಹಿಂಬಾಲಿಸುವಂತೆ ಹೇಳುತ್ತಿರುವಂತೆ ಅನ್ನಿಸಿತು. ಅವನ್ನು ಹಿಂಬಾಲಿಸಿದಾಗ ಅವು ಅವರ ಸಹನಾವಿಕ ಇದ್ದಲ್ಲಿಗೆ ಕರೆದುಕೊಂಡುಹೋದವು ಹಾಗೂ ಆತನ ಸುತ್ತ ಹಲವಾರು ಡಾಲ್ಫಿನ್‌ಗಳು ಆತನಿಗೆ ಯಾವುದೇ ಶಾರ್ಕ್ ದಾಳಿಮಾಡದಂತೆ ರಕ್ಷಣೆ ನೀಡುತ್ತಿದ್ದವು.
ಪ್ರಾಚೀನ ನಾಗರಿಕತೆಗಳ ಸಮಯಗಳಿಂದಲೂ ಡಾಲ್ಫಿನ್‌ಗಳು ಮನುಷ್ಯನನ್ನು ಬೆರಗುಗೊಳಿಸುತ್ತಾ ಬಂದಿವೆ. ಸಮುದ್ರದಲ್ಲಿ ಹಡಗಿನ ಅಪಘಾತಗಳಲ್ಲಿ ಮುಳುಗುವ ಜನರನ್ನು ಅವು ಸುರಕ್ಷಿತವಾಗಿ ದಡ ತಲುಪಿಸಿರುವ ಉದಾಹರಣೆಗಳಿವೆ. ಮೆಡಿಟರೇನಿಯನ್‌ನ ಪುರಾತನ ನಬಾಟೀನ್ ಹಾಗೂ ಮಿನೋ ನಾಗರಿಕತೆಯ ಅವಶೇಷಗಳಲ್ಲಿ ಡಾಲ್ಫಿನ್‌ನ ಚಿತ್ರಗಳು ಕಂಡುಬಂದಿವೆ. 2500 ವರ್ಷಗಳ ಹಿಂದಿನ ಗ್ರೀಕ್ ನಾಣ್ಯಗಳಲ್ಲಿ ಡಾಲ್ಫಿನ್‌ನ ಮೇಲೆ ಕೂತು ಸವಾರಿ ಮಾಡುತ್ತಿರುವ ಒಬ್ಬ ಬಾಲಕನ ಚಿತ್ರವಿದೆ.
2500 ವರ್ಷಗಳ ಹಿಂದಿನ ಗ್ರೀಕ್ ನಾಣ್ಯ
ಡಾಲ್ಫಿನ್‌ಗಳಿಗೆ ಮಾನವನನ್ನು ಕಂಡರೆ ಇಷ್ಟವೇಕೆಂದು ಅರ್ಥವಾಗಿಲ್ಲ. ಮನುಷ್ಯ ಎಂದು ನೀರಿನೊಳಕ್ಕೆ ಕಾಲಿರಿಸಿದನೋ ಅಂದಿನಿಂದ ಅವು ಅವನ ಗೆಳೆಯರಾಗಲು ಬಯಸಿ ಅವನ ಬಳಿಗೆ ಬಂದಿವೆ, ಅವನಿಗೆ ಸಹಾಯ ಮಾಡಿವೆ. ನೀರಿನೊಳಗೆ ಅಪಾಯದಲ್ಲಿ ಸಿಲುಕಿಕೊಂಡ ಮನುಷ್ಯರನ್ನು ಡಾಲ್ಫಿನ್‌ಗಳು ರಕ್ಷಿಸುವ ವಿಧಾನ ಅವು ತಮ್ಮ ಮರಿಗಳನ್ನು ರಕ್ಷಿಸುವ ವಿಧಾನದಂತೆಯೇ ಇರುತ್ತದೆ. ಇತರ ಪ್ರಾಣಿಗಳಂತೆ ಡಾಲ್ಫಿನ್‌ಗಳು ಮನುಷ್ಯರ ಬಳಿ ಆಹಾರ ಅರಸಿ ಬರುವುದಿಲ್ಲ. ಅವುಗಳಲ್ಲಿ ಮನುಷ್ಯರಲ್ಲಿ ಬೆರೆಯಬೇಕೆಂಬ ತವಕ, ಕುತೂಹಲ ಹಾಗೂ ಮನೋರಂಜನಾ ಮನೋಭಾವಗಳಿವೆ. ಇವು ಸಾಕಿರುವ ಡಾಲ್ಫಿನ್‌ಗಳಲ್ಲಿ ಮಾತ್ರವಲ್ಲ ಸಾಗರದಲ್ಲಿ ಎಂದಿಗೂ ಮನುಷ್ಯನೊಟ್ಟಿಗೆ ಬೆರೆಯದ ಡಾಲ್ಫಿನ್‌ಗಳಲ್ಲೂ ಕಂಡುಬರುತ್ತದೆ. ಸಾಗರದ ಮಧ್ಯದಲ್ಲಿ ಮನುಷ್ಯನ ಸಂಗವನ್ನು ಅರಸಿಬರುವ ಒಂದೇ ಒಂದು `ಕಾಡುಪ್ರಾಣಿ'ಯೆಂದರೆ ಡಾಲ್ಫಿನ್ ಮಾತ್ರ. ಅದರ ಈ ಪ್ರಜ್ಞಾಪೂರ್ವಕ ನಡವಳಿಕೆಗೆ ನಮ್ಮಲ್ಲಿ ಯಾವುದೇ ವಿವರಣೆಯಿಲ್ಲ. ಕೆಲವು ವಿಜ್ಞಾನಿಗಳ ಪ್ರಕಾರ ಡಾಲ್ಫಿನ್‌ಗಳು ಮನುಷ್ಯರಷ್ಟೇ ಅಥವಾ ಅವನಿಗಿಂತ ಹೆಚ್ಚೇ ಬುದ್ಧಿವಂತ ಪ್ರಾಣಿಗಳು. ಆದರೆ ಡಾಲ್ಫಿನ್ ಮತ್ತು ತಿಮಿಂಗಲಗಳಲ್ಲಿ ಕೈಗಳಾಗಲಿ ಅಥವಾ ಕೈ ತರಹದ ಮತ್ತಾವುದೇ ಅಂಗಗಳಿಲ್ಲದ ಕಾರಣ ಅವು ತಮ್ಮ ಬೌದ್ಧಿಕತೆಯನ್ನು ತಾಂತ್ರಿಕ ರೂಪಕ್ಕೆ ತರಲಾರದಾದವು ಹಾಗೂ ಅದರಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಮ್ಮ ಅನುಕೂಲಕ್ಕೆನ್ನುವಂತೆ ಬದಲಾಯಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಅವುಗಳ ಮಾನಸಿಕ ವಿಕಾಸ ಆಂತರಿಕವಾಗಿ, ಮನುಷ್ಯನಿಗಿಂತಲೂ ಉತ್ತಮವಾಗಿ ನಡೆದಿದೆ ಎನ್ನುತ್ತಾರೆ ವಿಜ್ಞಾನಿಗಳು. ಮಾನವನೂ ಸಹ ತಮ್ಮಷ್ಟೇ ಬುದ್ಧಿವಂತನಾಗಿರುವುದರಿಂದ ಬಹುಶಃ ಡಾಲ್ಫಿನ್‌ಗಳು ಮನುಷ್ಯನಲ್ಲಿ `ಬೌದ್ಧಿಕತೆಯ ಮಿತೃತ್ವ'ವನ್ನು ಅರಸುತ್ತಿರಬಹುದು. ಅವುಗಳಲ್ಲಿರುವ `ಎಕೋಲೊಕೇಶನ್'ನಂತಹ ಗ್ರಹಿಕೆಯ ಸಾಮರ್ಥ್ಯವನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಹಾಗಾಗಿ ಅವುಗಳ ಬೌದ್ಧಿಕತೆ, ಗ್ರಹಿಕೆಯ ಸಾಮರ್ಥ್ಯ, `ಪ್ರಜ್ಞೆ' ನಮಗಿಂತಲೂ ಉತ್ತಮ ಹಾಗೂ ವಿಭಿನ್ನವಾದುದು ಎನ್ನುತ್ತಾರೆ ವಿಜ್ಞಾನಿಗಳು. ಅವುಗಳ ಉನ್ನತ ಬೌದ್ಧಿಕತೆಯ ಮತ್ತೊಂದು ಕುರುಹೆಂದರೆ ಅವು ಮನುಷ್ಯನ ಮಾತುಗಳನ್ನು ಸುಲಭವಾಗಿ ಕಲಿಯಬಲ್ಲವು ಮತ್ತು ಹಾಗೆಯೇ ಉಚ್ಚರಿಸಬಲ್ಲವು. ಆದರೆ ಮಾನವನಿಗೆ ಅವುಗಳ `ಮಾತಿನ' ಎರಡಕ್ಷರವನ್ನೂ ಕಲಿಯಲಾಗಿಲ್ಲ. ಡಾಲ್ಫಿನ್‌ಗಳು ತಮ್ಮ ಶ್ವಾಸರಂಧ್ರಗಳಿಂದ (Spiracles) ಶಬ್ದ ಹೊರಡಿಸುತ್ತವೆ. ಆ ಕೀರಲು ಶಬ್ದಗಳಿಂದಲೇ ಮನುಷ್ಯನೊಟ್ಟಿಗೆ ಹಾಗೂ ಪರಸ್ಪರ ಮಾತನಾಡಿಕೊಳ್ಳಬಲ್ಲವು. ಅವುಗಳಿಗೆ ತಮ್ಮದೇ ಆದ ಶಬ್ದ ಭಂಡಾರವಿದೆ. ತಮ್ಮದೇ ಭಾಷೆಯಲ್ಲಿ ಹಾಡಲೂ ಬಲ್ಲವು. ಅದೇ ಹಾಡನ್ನು `ಅಕ್ಷರ' ತಪ್ಪದೆ ಪುನಃ ಪುನಃ ಹಾಡಬಲ್ಲವು.

ಡಾಲ್ಫಿನ್ ತಿಮಿಂಗಲದ ಜಾತಿಗೆ ಸೇರಿದ ಸಮುದ್ರದಲ್ಲಿ ವಾಸಿಸುವ ಸಸ್ತನಿಗಳು. ಮನುಷ್ಯನೂ ಸಹ ಸಸ್ತನಿಯೇ. ಅಂದರೆ ಮರಿಗಳಿಗೆ ಜನ್ಮನೀಡುವಂತಹ, ಮರಿಗಳಿಗೆ ಹಾಲೂಡಿಸುವಂತಹ ಹಾಗೂ ಬಿಸಿರಕ್ತದ ಪ್ರಾಣಿ. ಅವೂ ಸಹ ನಮ್ಮಂತೆಯೇ ಗಾಳಿ ಉಸಿರಾಡಿ ಬದುಕುತ್ತವೆ. ಅವು ನೀರಿನೊಳಗಿದ್ದರೂ ಅವು ಉಸಿರಾಡಲು ನೀರಿನ ಮೇಲ್ಮೈಗೆ ಬರಲೇಬೇಕು. ಈಗಿನ ತಿಮಿಂಗಲ ಮತ್ತು ಡಾಲ್ಫಿನ್‌ಗಳೆರಡೂ ಸಿಟೇಸಿ ಗುಂಪಿಗೆ ಸೇರಿದ ಪ್ರಾಣಿಗಳು. ಅವುಗಳ ಹಾಗೂ ಮಾನವನ ಅಲ್ಲದೆ ಎಲ್ಲಾ ಸಸ್ತನಿಗಳ ಪೂರ್ವಜರು ಲಕ್ಷಾಂತರ ವರ್ಷಗಳ ಹಿಂದೆ ಒಬ್ಬರೇ ಆಗಿದ್ದರು. ಸುಮಾರು 50 ದಶಲಕ್ಷ ವರ್ಷಗಳ ಹಿಂದೆ ಡಾಲ್ಫಿನ್‌ನ ನೆಲವಾಸಿ ಪೂರ್ವಜ ಪ್ರಾಣಿ ಆಹಾರವನ್ನು ಅರಸಿ ನೀರಿಗೆ ಇಳಿದಿರಬಹುದು. ಪ್ರಾಚೀನ ಸಿಟೇಸಿಯನ್‌ಗಳು ಹಲವಾರು ಹಂತಗಳನ್ನು ಹಾದು ಈಗಿನ ಡಾಲ್ಫಿನ್ ಮತ್ತು ತಿಮಿಂಗಲಗಳಾಗಿವೆ. ಸುಮಾರು 10ರಿಂದ 15 ದಶಲಕ್ಷ ವರ್ಷಗಳ ಹಿಂದೆ ಆಧುನಿಕ ಡಾಲ್ಫಿನ್‌ಗಳು ರೂಪುಗೊಂಡವು. ಮಾನವನ ಪೂರ್ವಜರಾದ ನರವಾನರಗಳು ಸುಮಾರು 5 ಲಕ್ಷ ವರ್ಷಗಳ ಹಿಂದೆಯಷ್ಟೇ ವಿಕಾಸಗೊಂಡಿದ್ದಾರೆ ಹಾಗೂ ಆಧುನಿಕ ಮಾನವರಾದ ನಾವು (ಹೋಮೋ ಸೇಪಿಯೆನ್ಸ್) ಕೇವಲ ಒಂದು ಲಕ್ಷ ವರ್ಷಗಳಿಂದಷ್ಟೇ ಇಲ್ಲಿ ವಾಸಿಸುತ್ತಿದ್ದೇವೆ. ಹಾಗಾಗಿ ಈ ಭೂಮಿಯ ಮೇಲೆ ಮಾನವ ಹೆಜ್ಜೆಯಿರಿಸುವುದಕ್ಕಿಂತ ಬಹಳ ಹಿಂದಿನಿಂದಲೇ ಡಾಲ್ಫಿನ್‌ಗಳು ಈ ಭೂಮಿಯ ಮೇಲೆ ಜೀವಿಸುತ್ತಿವೆ. ವಿಜ್ಞಾನಿಗಳು ಇಂದು ಡಾಲ್ಫಿನ್‌ನ 32 ಪ್ರಭೇದಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಅತ್ಯಂತ ಜನಪ್ರಿಯವಾಗಿರುವುದು ಹಾಗೂ ಸಂಶೋಧನೆ, ಅಧ್ಯಯನ, ಮನರಂಜನೆಗಾಗಿ ಅತಿ ಹೆಚ್ಚು ಸಾಕಲ್ಪಟ್ಟಿರುವುದು ಬಾಟ್ಲ್‌ನೋಸ್ ಡಾಲ್ಫಿನ್. ಡಾಲ್ಫಿನ್‌ಗಳಲ್ಲಿ ಅತಿ ದೊಡ್ಡದು ಕಿಲ್ಲರ್ ವೇಲ್ ಅಥವಾ ಓರ್ಕಾ ಡಾಲ್ಫಿನ್. ಅದು 31 ಅಡಿ ಉದ್ದದವರೆಗೂ ಬೆಳೆಯಬಲ್ಲದು ಹಾಗಾಗಿ ಅದನ್ನು ತಿಮಿಂಗಲ ಎಂದೂ ಕರೆಯುತ್ತಾರೆ. ಡಾಲ್ಫಿನ್‌ಗಳಲ್ಲಿ ನಾಲ್ಕು ಸಿಹಿನೀರ ಡಾಲ್ಫಿನ್‌ಗಳಿದ್ದು ಒಂದು ಪ್ರಭೇಧ ಭಾರತ, ನೇಪಾಳ ಮತ್ತು ಬಾಂಗ್ಲಾದ ಗಂಗಾ ನದಿಯಲ್ಲಿ ಮಾತ್ರ ಕಂಡುಬರುತ್ತದೆ. ಭಾರತದಲ್ಲಿನ ಈ ಗಂಗಾ ನದಿಯ ಡಾಲ್ಫಿನ್ ಅನ್ನು 2009ರಲ್ಲಿ ಭಾರತದ ರಾಷ್ಟ್ರೀಯ ಜಲಚರವೆಂದು ಘೋಷಿಸಲ್ಪಟ್ಟಿದೆ. ದುರಂತವೆಂದರೆ ಈ ಡಾಲ್ಫಿನ್ ವಿನಾಶದ ಅಂಚಿನಲ್ಲಿದ್ದು ಇಂದು ಭಾರತದಲ್ಲಿನ ಅವುಗಳ ಒಟ್ಟು ಸಂಖ್ಯೆ 1500ಕ್ಕೂ ಕಡಿಮೆ ಇದೆ.
ಡಾಲ್ಫಿನ್‌ಗಳು ತಮ್ಮ ಜೀವನ ಸಂಗಾತಿಗಳೊಂದಿಗೆ ನಿಷ್ಠೆಯಿಂದ ಭಾವನಾತ್ಮಕ ಸಂಬಂಧ ಹೊಂದಿರಬಲ್ಲವು. ಒಮ್ಮೆ ಒಂದು ಗಂಡು ಡಾಲ್ಫಿನ್ ದೋಣಿಯೊಂದರ ಬಳಿ ಸಹಾಯಕ್ಕಾಗಿ ಕಿರುಚುತ್ತಾ ಅದನ್ನು ಸುತ್ತುಹಾಕತೊಡಗಿತು. ಆನಂತರ ಗಾಯಗೊಂಡಿದ್ದ ತನ್ನ ಸಂಗಾತಿಯನ್ನೂ, ಅದರ ತಲೆ ನೀರಿನಿಂದ ಉಸಿರಾಡಲು ಹೊರಹಾಕಲು ಪ್ರಯತ್ನಿಸುತ್ತಾ ಕರೆತಂದಿತು. ದೋಣಿಯಲ್ಲಿನ ಜನರನ್ನು ತನ್ನ ಸಂಗಾತಿಯನ್ನು ಬದುಕಿಸಲು ಅಂಗಲಾಚುವಂತೆ ಚೀರುತ್ತಿತ್ತು. ಆದರೆ ತೀರಾ ತಡವಾಗಿದ್ದುದರಿಂದ ಆ ಡಾಲ್ಫಿನ್‌ನ ಸಂಗಾತಿಯನ್ನು ಬದುಕಿಸಲಾಗಿರಲಿಲ್ಲ. ಆ ರೀತಿ ಡಾಲ್ಫಿನ್‌ಗಳು ಮನುಷ್ಯನ ಸಹಾಯವನ್ನು ಅರಸಿ ಬಂದಿರುವ ಹಲವಾರು ಉದಾಹರಣೆಗಳಿವೆ.
ಗ್ರೋವರ್ ಎಂಬಾತ ಫ್ಲಾರಿಡಾದ ಪಾಮ್ ಬೀಚ್‌ನಲ್ಲಿ ಸ್ಕೂಬಾಗೇರ್ ಧರಿಸಿ ಈಜುತ್ತಿದ್ದಾಗ ಎರಡು ವಯಸ್ಕ ಬಾಟಲ್‌ನೋಸ್ ಡಾಲ್ಫಿನ್‌ಗಳು ಒಂದು ಮರಿ ಡಾಲ್ಫಿನ್‌ನನ್ನು ಆತನ ಬಳಿ ಕರೆತಂದವು. ಬಂದವು. ಆ ಮರಿ ಡಾಲ್ಫಿನ್‌ನ ಬಾಲದ ಹತ್ತಿರ ಒಂದು ದೊಡ್ಡದಾದ ಮೀನುಗಾರರು ಬಳಸುವ ಕೊಂಡಿಯೊಂದು ಸಿಕ್ಕಿಕೊಂಡಿತ್ತು. `ಅದು ನನ್ನ ಕಲ್ಪನೆಯೋ ಅಥವಾ ತರ್ಕವೋ ಗೊತ್ತಿಲ್ಲ, ಆದರೆ ಅವು ನನ್ನ ಸಹಾಯ ಅರಸಿ ಬಂದಿವೆ ಎಂದು ನನಗನ್ನಿಸಿತು. ಆ ಕೊಂಡಿ ಮರಿಯ ದೇಹದ ತೀರಾ ಒಳಕ್ಕೆ ಹೋಗಿದ್ದುದರಿಂದ ನಾನು ಆ ಮರಿಯನ್ನು ತಳಕ್ಕೆ ಒತ್ತಿ ಹಿಡಿದು ನನ್ನ ಡೈವಿಂಗ್ ಕತ್ತಿಯಿಂದ ನೈಲಾನ್ ತಂತಿಯನ್ನು ಕತ್ತರಿಸಿ ಕೊಂಡಿಯನ್ನು ಹೊರತೆಗೆದೆ. ನಾನು ಆ ಕೆಲಸ ಮಾಡುತ್ತಿರುವಾಗ ಆ ಎರಡೂ ಡಾಲ್ಫಿನ್‌ಗಳು ನನ್ನ ಕೆಲಸವನ್ನೇ ಗಮನಿಸುತ್ತಿದ್ದವು. ಕೊಂಡಿಯನ್ನು ತೆಗೆದನಂತರ ಅವುಗಳಲ್ಲಿ ದೊಡ್ಡದಾಗಿದ್ದ ಡಾಲ್ಫಿನ್ ನನ್ನೆದುರಿಗೆ ನನ್ನ ಕಣ್ಣಿನ ಸಮಕ್ಕೆ ಬಂದು ನನ್ನ ಮುಖವಾಡದ ಹಿಂದಿದ್ದ ಕಣ್ಣುಗಳನ್ನೇ ದಿಟ್ಟಿಸಿ ನೋಡಿತು. ಒಂದರೆಕ್ಷಣ ನಾವಿಬ್ಬರೂ ನಮ್ಮ ಪರಸ್ಪರ ಕಣ್ಣುಗಳ ಆಳವನ್ನು ದಿಟ್ಟಿಸಿ ನೋಡುತ್ತಿರುವಂತೆ ಭಾಸವಾಯಿತು. ಆನಂತರ ಆ ಡಾಲ್ಫಿನ್ ತನ್ನ ಮೂತಿಯಿಂದ ನನ್ನನ್ನು ನಿಧಾನವಾಗಿ ತಳ್ಳಿ ಅಲ್ಲಿಂದ ಹೊರಟುಹೋದವು' ಎಂದು ಸ್ವತಃ ಗ್ರೋವರ್ ದಾಖಲಿಸಿದ್ದಾನೆ.
ಡಾಲ್ಫಿನ್‌ಗಳದು ಒಂದು ಸುವ್ಯವಸ್ಥಿತ `ಸಮಾಜ'. ಡಾಲ್ಫಿನ್‌ಗಳು ತಾಯಿಯನ್ನು ಕಳೆದುಕೊಂಡ ಇತರ ಡಾಲ್ಫಿನ್ ಮರಿಗಳನ್ನು `ದತ್ತು' ಪಡೆದು ತಮ್ಮವೆಂಬಂತೆಯೇ ಸಾಕುತ್ತವೆ (Allomaternal Care). ಅವು ಪರಸ್ಪರ ಎಷ್ಟು ಪ್ರೀತಿಸುತ್ತವೆಂದರೆ, ಯಾವುದಾದರೂ ಒಂದು ಡಾಲ್ಫಿನ್ ಕಷ್ಟದಲ್ಲಿದ್ದಲ್ಲಿ ಅಥವಾ ಇರುಕಲಿನಲ್ಲಿ ಸಿಕ್ಕಿಕೊಂಡು ಹೊರಬರಲಾಗದಿದ್ದಲ್ಲಿ ಇತರ ಡಾಲ್ಫಿನ್‌ಗಳು ತಮ್ಮ ಜೀವ ಆಪತ್ತಿನಲ್ಲಿದ್ದರೂ ಕಡೆಗಣಿಸಿ ಅದರ ಸಹಾಯಕ್ಕೆ ನಿಲ್ಲುತ್ತವೆ ಹಾಗೂ ಅದನ್ನು ಬಿಟ್ಟು ಹೋಗುವುದಿಲ್ಲ. ಕಷ್ಟದಲ್ಲಿರುವ ಡಾಲ್ಫಿನ್‌ನ ಮೈ ನೇವರಿಸಿ ಸಂತೈಸುತ್ತವೆ. ಡಾಲ್ಫಿನ್‌ಗಳು ತಿಮಿಂಗಲಗಳನ್ನೂ ಸಂರಕ್ಷಿಸಿರುವ ಉದಾಹರಣೆಗಳಿವೆ. ಪರೋಪಕಾರ ಬುದ್ಧಿ ಮನುಷ್ಯನಲ್ಲಿ ಇದೆ ಎನ್ನುವುದಾದಲ್ಲೆ ಆ ರೀತಿಯ ಗುಣ ಇರುವಂಥ ಎರಡನೇ ಪ್ರಾಣಿಯೇ ಡಾಲ್ಫಿನ್ ಆಗಿದೆ.
ಡಾಲ್ಫಿನ್‌ಗಳು ಇತರ ಸಸ್ತನಿಗಳ ಹಾಗೆ ನಿರಿಚ್ಛಾ ಉಸಿರಾಟ ಹೊಂದಿಲ್ಲ, ಅಂದರೆ ಅವು ಉಸಿರನ್ನು ಕೆಲಕಾಲ ಬಿಗಿಹಿಡಿಯಬಲ್ಲವು ಹಾಗೂ ಆ ನಂತರ ಗಾಳಿಗಾಗಿ ನೀರಿನ ಮೇಲಕ್ಕೆ ಬರಲೇಬೇಕು. ತಾಯಿ ಡಾಲ್ಫಿನ್ ತನ್ನ ಮರಿ ಹುಟ್ಟಿದ ತಕ್ಷಣ ಅದು ಉಸಿರು ತೆಗೆದುಕೊಳ್ಳಲು ಸಾಧ್ಯವಾಗುವಂತೆ ನೀರಿನ ಮೇಲಕ್ಕೆ ತಳ್ಳಿಕೊಂಡುಹೋಗುತ್ತದೆ. ಅನಾರೋಗ್ಯದಿಂದ ನರಳುವ ಡಾಲ್ಫಿನ್‌ಗಳು ಗಾಳಿ ಉಸಿರಾಡಲು ಮೇಲಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಇತರ ಡಾಲ್ಫಿನ್‌ಗಳು ಅದನ್ನು ಮೇಲಕ್ಕೆ ತಳ್ಳಿ ಸಹಾಯಮಾಡುತ್ತವೆ. ಈ ರೀತಿ ನಿದ್ರಿಸುವಾಗ ಮುಳುಗಿ ಸಾಯದೇ ಇರಲು ಪ್ರಕೃತಿಯಲ್ಲಿ ಅವುಗಳ ನಿದ್ರೆಗೆ ಒಂದು ಸುವ್ಯವಸ್ಥಿತ ವ್ಯವಸ್ಥೆಯಿದೆ. ಅದರ ಮಿದುಳಿನ ಒಂದು ಭಾಗ ನಿದ್ರಿಸುವಾಗ ಮತ್ತೊಂದು ಭಾಗ ಎಚ್ಚರವಾಗಿರುತ್ತದೆ. ಆದರೂ ಕೆಲವೊಮ್ಮೆ ಗಾಢ ನಿದ್ರೆಗೆ ಹೋದಾಗ ತಕ್ಷಣ ಇತರ ಡಾಲ್ಫಿನ್‌ಗಳು ಅದನ್ನು ತಟ್ಟಿ ಎಬ್ಬಿಸುತ್ತವೆ. ಈ ನಡತೆ ಅವುಗಳಲ್ಲಿ ಅದೆಷ್ಟು ಗಾಢವಾಗಿದೆಯೆಂದರೆ ನೀರಿನಲ್ಲಿ ಮುಳುಗುವ ಮನುಷ್ಯರನ್ನು ಸಹ ಇದೇ ಕಾರಣದಿಂದಲೇ ಅವು ರಕ್ಷಿಸುತ್ತಿರಬಹುದು ಎನ್ನುತ್ತಾರೆ ವಿಜ್ಞಾನಿಗಳು. ಡಾಲ್ಫಿನ್‌ಗಳ ಬಗೆಗೆ ಬಹಳಷ್ಟು ಸಂಶೋಧನೆ ನಡೆಸಿರುವ ಡಯಾನ ರೀಸ್ ಎಂಬ ವಿಜ್ಞಾನಿ ಅವುಗಳನ್ನು `ಮಾನವೇತರ ವ್ಯಕ್ತಿ'ಗಳೆಂದು ಪರಿಗಣಿಸಬೇಕೆಂದು ಹೇಳುತ್ತಾರೆ. ಅವುಗಳಿಗೆ ಸ್ವ-ಪ್ರಜ್ಞೆಯಿದೆ (ಕನ್ನಡಿಯಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬಲ್ಲವು), ಭಾವನೆಗಳಿವೆ, ಅವುಗಳಿಗೆ ಅವುಗಳದೇ ಆದ ಸಾಮಾಜಿಕ ಜೀವನ ಮತ್ತು ಸಂಸ್ಕೃತಿಯಿದೆ. ಹಾಗಾಗಿ ನಾವು ಅವುಗಳನ್ನು ಬರೇ `ಪ್ರಾಣಿ'ಗಳೆಂದು ಪರಿಗಣಿಸದೆ ಅವುಗಳನ್ನು `ವ್ಯಕ್ತಿ'ಗಳೆಂದು ಪರಿಗಣಿಸಿ ಗೌರವಿಸಬೇಕೆನ್ನುತ್ತಾರೆ. ಅದಕ್ಕಾಗೇ ಅವರು ಅವುಗಳನ್ನು `ಏಲಿಯೆನ್ ಇಂಟೆಲಿಜೆನ್ಸ್' (ಅನ್ಯ ಬುದ್ಧಿವಂತ) ಜೀವಿಗಳು ಎಂದು ಕರೆಯುತ್ತಾರೆ. ನಮ್ಮಲ್ಲಿ ಬುದ್ಧಿವಂತಿಕೆ ಮತ್ತು ಭಾವನೆಗಳಿರುವುದರಿಂದ ನಾವು ನಮ್ಮಲ್ಲಿರುವ ಅಂಶಗಳನ್ನು `ಮಾನವೀಯ' ಅಂಶಗಳೆಂದು ಪರಿಗಣಿಸಿ ಈ ಭೂಮಿಯ ಮೇಲಿನ ಇತರ ಎಲ್ಲಾ ಜೀವಿಗಳನ್ನು `ಪ್ರಾಣಿ' ಹಾಗೂ ಸಸ್ಯಗಳೆಂದು ಪರಿಗಣಿಸಿದ್ದೇವೆ. ಆದರೆ ನಾವೂ ಸಹ ಈ ಭೂಮಿಯ ಮೇಲಿನ ಇತರ `ಪ್ರಾಣಿ' ವರ್ಗಕ್ಕೆ ಸೇರಿದವರೆ. ಆದರೆ ನಾವು ಈ ಭೂಮಿಯ ಮೇಲಿರುವ ಅತಿ ಬುದ್ಧಿವಂತ ಜೀವಿಗಳೆಂದು ನಮ್ಮಷ್ಟಕ್ಕೆ ನಾವೇ ಬೆನ್ನುತಟ್ಟಿಕೊಂಡು ಭ್ರಮೆಯ ಲೋಕದಲ್ಲಿದ್ದೇವೆ ಹಾಗೂ ನಮ್ಮನ್ನು ಇತರ ಪ್ರಾಣಿಗಳಿಂದ ಪ್ರತ್ಯೇಕಿಸಿಕೊಂಡಿದ್ದೇವೆ. ಇದೇ ದೃಷ್ಟಿಯಲ್ಲಿಯೇ ನಾವು ಡಾಲ್ಫಿನ್‌ಗಳನ್ನು ಸಹ ಪ್ರತ್ಯೇಕಿಸಿ ನೋಡಬೇಕಾಗಿದೆ ಹಾಗೂ ಈ ಜಗತ್ತಿನ ಜೀವಲೋಕವನ್ನು ಅವಲೋಕಿಸುವಾಗ ನಾವು ಮಾನವಕೇಂದ್ರಿತ ಸಿದ್ಧಾಂತಗಳ ಚಿಪ್ಪಿನಿಂದ ಹೊರಬರಬೇಕಾಗಿದೆ. ಭೂಮಿ ಈ ವಿಶ್ವದ ಕೇಂದ್ರವಲ್ಲ. ಅದೇ ರೀತಿ ಮನುಷ್ಯ ಸಹ ಈ ಭೂಮಿಯ ಕೇಂದ್ರವಲ್ಲ. ಇದರ ಹಿನ್ನೆಲೆಯಲ್ಲಿ ನಾವು ಅವುಗಳನ್ನು ಹಿಡಿದು ನಮ್ಮ ಮನರಂಜನೆ ಮತ್ತು ಸ್ವಾರ್ಥಕ್ಕಾಗಿ ಬಳಸುವುದು ಅಪರಾಧವೆನ್ನುತ್ತಾರೆ.
ಆದರೆ `ಮಹಾನ್ ಬುದ್ಧಿವಂತ' ಮಾನವ ಅವುಗಳ ಬಗ್ಗೆ ಅಂತಹ ಒಲವನ್ನೇನೂ ಹೊಂದಿಲ್ಲ. ಮಾನವನ ಕ್ರಿಯೆಗಳಿಂದಾಗಿ ಇಂದು ಪ್ರತಿವರ್ಷ ಮೂರು ಲಕ್ಷಕ್ಕೂ ಹೆಚ್ಚು ಡಾಲ್ಫಿನ್‌ಗಳು, ತಿಮಿಂಗಲಗಳು ಮತ್ತು ಕಡಲಹಂದಿಗಳು (ಅದೇ ಬಳಗದ ಪಾರ್‌ಪಾಯ್ಸ್ ಎನ್ನುವ ಜಲಚರ ಸಸ್ತನಿ) ಬಲಿಯಾಗುತ್ತಿವೆ. ಇಂದಿಗೂ ಜಗತ್ತಿನಲ್ಲಿ ಅತಿ ಹೆಚ್ಚು ಡಾಲ್ಫಿನ್‌ಗಳನ್ನು ಆಹಾರಕ್ಕಾಗಿ ಬೇಟೆಯಾಡುತ್ತಿರುವ ದೇಶಗಳು ಜಪಾನ್, ನಾರ್ವೆ ಮತ್ತು ಐಸ್‌ಲ್ಯಾಂಡ್. ಅಂತರರಾಷ್ಟ್ರೀಯ ವೇಲಿಂಗ್ ಕಮೀಶನ್ ೧೯೮೬ರಿಂದಲೇ ಡಾಲ್ಫಿನ್ ಮತ್ತು ತಿಮಿಂಗಲಗಳನ್ನು ಬೇಟೆಯಾಡಿ ಕೊಲ್ಲುವುದನ್ನು ನಿಷೇಧಿಸುತ್ತಿದ್ದರೂ ಈ ದೇಶಗಳು ಅದನ್ನು ಉಲ್ಲಂಘಿಸುತ್ತಿವೆ. ಆ ಸರ್ಕಾರಗಳೇ ಅಂತಹ ಕೃತ್ಯಗಳನ್ನು ಉತ್ತೇಜಿಸುತ್ತಿವೆ. ಡಾಲ್ಫಿನ್ ಮತ್ತು ತಿಮಿಂಗಲಗಳನ್ನು ಓಡಿಸಿಕೊಂಡು ಇಕ್ಕಟ್ಟಾದ ದಡಕ್ಕೆ ತಂದು ಅವುಗಳನ್ನು ಹಾರೆ, ಹಾರ್ಪೂನುಗಳಂಥ ಆಯುಧಗಳಿಂದ ಚುಚ್ಚಿ ಚುಚ್ಚಿ ಕೊಲ್ಲುವ ಭೀಕರ ದೃಶ್ಯಗಳನ್ನು ಹಲವಾರು ಜನ ಚಿತ್ರಿಸಿ ಈ ಕ್ರೌರ್ಯದೆಡೆಗೆ ಸಮಾಜದ ಗಮನವನ್ನು ಸೆಳೆಯುವ ಪ್ರಯತ್ನ ನಡೆಸಲಾಗುತ್ತಿದೆ. ಹಲವಾರು ಸಂಘ ಸಂಸ್ಥೆಗಳು ವಿಶ್ವದಾದ್ಯಂತ ಈ ಕೃತ್ಯಗಳನ್ನು ವಿರೋಧಿಸುತ್ತಿವೆ ಹಾಗೂ ಡಾಲ್ಫಿನ್‌ಗಳಿಗೂ ಸಹ ಅವು ಸ್ವಪ್ರಜ್ಞೆಯುಳ್ಳ ಬುದ್ಧಿವಂತ ಜೀವಿಗಳಾಗಿರುವುದರಿಂದ ಹಾಗೂ ಅವು ತಮ್ಮದೇ ಸಮಾಜ, ಸಂಸ್ಕೃತಿಗಳನ್ನು ಹೊಂದಿರುವುದರಿಂದ ಅವುಗಳಿಗೂ ಸಹ ಮಾನವ ಹಕ್ಕುಗಳ ರೀತಿಯೇ ಹಕ್ಕುಗಳನ್ನು ನೀಡಿ ಗೌರವಿಸಬೇಕೆಂದು ಹಲವಾರು ಸಂಘ ಸಂಸ್ಥೆಗಳು ಒತ್ತಾಯಿಸುತ್ತಿವೆ.
ಚಿತ್ರ-ಲೇಖನ: ಡಾ.ಜೆ.ಬಾಲಕೃಷ್ಣ
j.balakrishna@gmail.com
ಮಂಗಳವಾರ, ನವೆಂಬರ್ 02, 2010
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ
ಹೆನ್ರಿಟಾ ಲ್ಯಾಕ್ಸ್ ಎಂಬ ಕಪ್ಪು ಮಹಿಳೆಯ `ಅಮರ' ಕತೆ
ನವೆಂಬರ್ 2010ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ `ವಿಜ್ಞಾನ ಲೋಕ' ಪತ್ರಿಕೆಯಲ್ಲಿ ನನ್ನ
ಈ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.

2001ರಲ್ಲಿ ಜಾನ್ಸ್ ಹಾಪ್‌ಕಿನ್ಸ್‌ನ ಆಸ್ಪತ್ರೆಯಲ್ಲಿನ ಆಸ್ಟ್ರಿಯಾದ ಸಂಶೋಧಕರೊಬ್ಬರು ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಮಹಿಳೆಯ ಮಗಳಾದ ಡೆಬೊರಾ ಲ್ಯಾಕ್ಸಳನ್ನು ಹಾಗೂ ಆಕೆಯ ತಮ್ಮನನ್ನು ತಮ್ಮ ಪ್ರಯೋಗಾಲಯಕ್ಕೆ ಆಹ್ವಾನಿಸಿದರು. ಅಲ್ಲಿ ಅವರನ್ನು ನೆಲಮಾಳಿಗೆಯೊಂದಕ್ಕೆ ಕರೆದೊಯ್ದು ಶೀತಲಘನೀಕೃತ ಗಾಜಿನ ನಾಳಗಳನ್ನು ಡೆಬೊರಾಳ ಕೈಯಲ್ಲಿರಿಸಿ ಅದರಲ್ಲಿರುವ ಜೀವಕೋಶಗಳು ಆಕೆಯ ತಾಯಿಯದು ಎಂಬುದಾಗಿ ತಿಳಿಸಿದರು. ಅಲ್ಲಿ ತನ್ನ `ತಾಯಿ'ಯನ್ನು `ಕಂಡ' ಡೆಬೊರಾ ಅತ್ಯಂತ ಭಾವುಕಳಾಗಿ ಅವುಗಳನ್ನು ಅತ್ಯಮೂಲ್ಯ ವಸ್ತುವೆಂಬಂತೆ ತನ್ನ ಬೊಗಸೆಯಲ್ಲಿ ಹಿಡಿದು ಚುಂಬಿಸಿ `ನೀನೀಗ ಜಗದ್ವಿಖ್ಯಾತೆ, ಆದರೆ ಯಾರಿಗೂ ಅದು ತಿಳಿದಿಲ್ಲ' ಎಂದು ಪಿಸುಗುಟ್ಟಿದಳು. ಆಕೆಯ ತಮ್ಮ, `ನಮ್ಮ ತಾಯಿ ವಿಜ್ಞಾನ ಜಗತ್ತಿಗೆ ಅಷ್ಟೊಂದು ಬೇಕಾದವಳಾಗಿದ್ದಾಳೆ. ಆದರೆ ನಾವೇಕೆ ಬಡತನದಲ್ಲಿ ನರಳುತ್ತಿದ್ದೇವೆ?' ಎಂದು ಕೇಳಿದ. ಹೆನ್ರಿಟಾ ಲ್ಯಾಕ್ಸ್ ಎಂಬ ನೀಗ್ರೋ ಹೆಣ್ಣಿನ ಕತೆ ಕ್ಯಾನ್ಸರ್, ಜನಾಂಗಭೇದ, ವೈಜ್ಞಾನಿಕ ನೈತಿಕತೆಗಳ ಹಾಗೂ ಕಡುಬಡತನದ ಕುಟುಂಬದ ಒಂದು ಕತೆಯಾಗಿದೆ. ಆ ಕತೆ ಪ್ರಾರಂಭವಾದದ್ದು 1951ರ ಫೆಬ್ರವರಿಯಲ್ಲಿ.
ಫೆಬ್ರವರಿ 1951ರ ಒಂದು ದಿನ ಹೆನ್ರಿಟಾ ಲ್ಯಾಕ್ಸ್ ಎಂಬ ಆಫ್ರಿಕನ್-ಅಮೆರಿಕನ್ ಗುಲಾಮ ಸಂತತಿಯ ನೀಗ್ರೋ ಹೆಣ್ಣು ಅಮೆರಿಕದ ಬಾಲ್ಟಿಮೋರ್‌ನಲ್ಲಿನ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯ ನೀಗ್ರೋಗಳಿಗೆಂದೇ ಪ್ರತ್ಯೇಕವಾಗಿರಿಸಿದ್ದ ವಾರ್ಡ್‌ನ ಹಾಸಿಗೆಯೊಂದರಲ್ಲಿ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದಳು. ನೀಗ್ರೋಗಳಿಗೆ ಚಿಕಿತ್ಸೆ ನೀಡುತ್ತಿದ್ದ ಹತ್ತಿರದ ಆಸ್ಪತ್ರೆ ಅದೇ ಆಗಿದ್ದುದರಿಂದ ಆಕೆ 20 ಮೈಲುಗಳ ಪ್ರಯಾಣ ಮಾಡಿಬಂದಿದ್ದಳು. ಉಲ್ಭಣಗೊಂಡಿದ್ದ ತೀವ್ರ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ನಿಂದ ನರಳುತ್ತಿದ್ದ ಆಕೆಯ ಬಳಿಯೇ ಸಾವು ಹೊಂಚುಹಾಕಿ ನಿಂತಿತ್ತು. ಎಂದಿನಂತೆ ವೈದ್ಯರು ಪರೀಕ್ಷೆಗಾಗಿ ಆಕೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಜೀವಕೋಶಗಳ ಅಂಗಾಂಶದ ತುಣುಕನ್ನು ಕತ್ತರಿಸಿ ತೆಗೆದು ಅದೇ ಆಸ್ಪತ್ರೆಯ ಅಂಗಾಂಶ ಸಾಕಣೆ ಸಂಶೋಧನೆಯ ಮುಖ್ಯಸ್ಥರಾಗಿದ್ದ ಜಾರ್ಜ್ ಗೌರವರಿಗೆ ಕಳುಹಿಸಿಕೊಟ್ಟರು. ಆ ತುಣುಕನ್ನು ತೆಗೆದದ್ದು ಹೆನ್ರಿಟಾ ಲ್ಯಾಕ್ಸ್‌ಗಾಗಲಿ, ಆಕೆಯ ಕುಟುಂಬದವರಿಗಾಗಲಿ ಅಥವಾ ಹೊರಜಗತ್ತಿಗಾಗಲಿ ತಿಳಿದಿರಲಿಲ್ಲ. ಆದರೆ ಆ ಅಂಗಾಶದ ತುಣುಕು ವೈದ್ಯಕೀಯ ಜಗತ್ತಿನಲ್ಲಿ ಬಹು ದೊಡ್ಡ ಕ್ರಾಂತಿಯನ್ನೇ ಉಂಟುಮಾಡುವುದಾಗಿ ಯಾರೂ ಊಹಿಸಿರಲಿಲ್ಲ. ವೈದ್ಯರೂ ಸಹ ಅಂತಹ ಉಲ್ಬಣ ಕ್ಯಾನ್ಸರ್ ಕಂಡಿರಲಿಲ್ಲ. ಕೆಲವೇ ತಿಂಗಳುಗಳಲ್ಲಿ ಅಕೆಯ ಮೈಯೆಲ್ಲಾ ಕ್ಯಾನ್ಸರ್ ಗೆಡ್ಡೆಗಳುಂಟಾದವು. ಅತ್ಯಂತ ನೋವಿನಿಂದ ನರಳಿದ ಹೆನ್ರಿಟಾ ಲ್ಯಾಕ್ಸ್ ಅದೇ ವರ್ಷ ಅಕ್ಟೋಬರ್ 4ರಂದು ತನ್ನ ಐದು ಮಕ್ಕಳನ್ನು ಮತ್ತು ಗಂಡನನ್ನು ಬಿಟ್ಟು ಕೊನೆಯುಸಿರೆಳದಳು. ಆಕೆ ಸತ್ತಾಗ ಆಕೆಗೆ 31 ವರ್ಷ ವಯಸ್ಸು. ಅತ್ಯಂತ ಬಡತನದಲ್ಲಿದ್ದ ಆಕೆಯ ಕುಟುಂಬದವರು ಆಕೆಯನ್ನು ತಮ್ಮ ಹಳ್ಳಿಗೆ ಕೊಂಡೊಯ್ದು ಹೂತುಬಿಟ್ಟರು. ಕೊನೆಗೆ ತನ್ನ ಅಂಗಾಂಶದಿಂದ ಜಗತ್ಪ್ರಸಿದ್ಧಳಾದ ಆಕೆಯ ಸಮಾಧಿಯನ್ನೂ ಸಹ ಗುರುತಿಸಲು ಸಾಧ್ಯವಾಗಲಿಲ್ಲ.

ಹೆನ್ರಿಟಾ ಲ್ಯಾಕ್ಸ್ ಮತ್ತು ಆಕೆಯ ಪತಿ ಡೇವಿಡ್ ಲ್ಯಾಕ್ಸ್
ಪ್ರಯೋಗಾಲಯಗಳಲ್ಲಿ ಆಕೆಯ ಕ್ಯಾನ್ಸರ್‌ಯುಕ್ತ ಜೀವಕೋಶಗಳನ್ನು ವೃದ್ಧಿಗೊಳಿಸಿ ಜಗತ್ತಿನಾದ್ಯಂತ ವಿಜ್ಞಾನಿಗಳು, ವೈಜ್ಞಾನಿಕ ವ್ಯಾಪಾರಿ ಸಂಸ್ಥೆಗಳು ಅಂತಹ ಜೀವಕೋಶಗಳಿರುವ ಪ್ರತಿ ಸಣ್ಣ ಸೀಸೆಯನ್ನು 10 ಡಾಲರ್‌ನಿಂದ ಹಿಡಿದು 10000 ಡಾಲರ್‌ವರೆಗೂ ಮಾರಾಟಮಾಡತೊಡಗಿದರು. ವೈದ್ಯಕೀಯ ಸಂಶೋಧನೆಯಲ್ಲಿ ಜಗತ್ತಿನಾದ್ಯಂತ ಆ ಜೀವಕೋಶಗಳು ಹರಡಿದ್ದಲ್ಲದೆ ಅಂತರಿಕ್ಷಕ್ಕೂ ಹೋಗಿಬಂದವು. ಆದರೆ ಆ ವಿಷಯ ಹೆನ್ರಿಟಾ ಲ್ಯಾಕ್ಸಳ ಕುಟುಂಬದವರಿಗೆ ತಿಳಿದೇ ಇರಲಿಲ್ಲ. ವೈದ್ಯಕೀಯ ರಂಗದಲ್ಲಿ ಹೆನ್ರಿಟಾ ಲ್ಯಾಕ್ಸಳ ಜೀವಕೋಶಗಳ ಕೊಡುಗೆ ಅಗಣನೀಯ ಮೌಲ್ಯದ್ದಾಗಿತ್ತು. ಆದರೆ ಆಕೆಯ ಗಂಡ, ಮಕ್ಕಳು ಅದೆಷ್ಟು ಬಡತನದಲ್ಲಿದ್ದರೆಂದರೆ ಅವರಿಗೆ ವೈದ್ಯಕೀಯ ವಿಮೆ ಸಹ ಇರಲಿಲ್ಲ. ಅದರಿಂದಾಗಿ ಅವರ ಕಾಯಿಲೆಕಸಾಲೆಗಳಿಗೆ ಅವರು ಆಸ್ಪತ್ರೆಗೆ ಸಹ ಭೇಟಿ ನೀಡುವಂತಿರಲಿಲ್ಲ.
ಹೆನ್ರಿಟಾ ಲ್ಯಾಕ್ಸಳು `ಅಮರ'ಳಾಗಿದ್ದಾಳೆಂದು ಇಂದು ವಿಜ್ಞಾನ ಜಗತ್ತು ಸಾರುತ್ತಿದೆ. ಆಕೆ 1951ರಲ್ಲೇ ಇಹಲೋಕ ತ್ಯಜಿಸಿದ್ದರೂ ಆಕೆಯ ದೇಹದಿಂದ ಕತ್ತರಿಸಿ ತೆಗೆದ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಜೀವಕೋಶಗಳ ಅಂಗಾಂಶದ ತುಣುಕು ಇಂದಿಗೂ ಜಗತ್ತಿನ ಪ್ರಯೋಗಾಲಯಗಳಲ್ಲಿ ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ ವೃದ್ಧಿಗೊಳ್ಳುತ್ತಲೇ ಇದೆ. ವಿಜ್ಞಾನ ಜಗತ್ತಿನಲ್ಲಿ ಆ ಜೀವಕೋಶಗಳನ್ನು `ಹೀಲಾ' (ಸ್ಪೆಲ್ಲಿಂಗ್ HeLa ಆದರೂ ಉಚ್ಚಾರಣೆ ಹೀಲಾ ಎಂದು) ಜೀವಕೋಶಗಳೆಂದು ಕರೆದರು. `ಹೀಲಾ' ಎಂದರೆ ಹೆನ್ರಿಟಾ ಲ್ಯಾಕ್ಸ್‌ನ (Henrietta Lacks) ಸಂಕ್ಷೇಪ ರೂಪ. ಆದರೆ ಮೊದಲಿಗೆ ಹೆನ್ರಿಟಾ ಲ್ಯಾಕ್ಸಳ ಹೆಸರನ್ನು ಗೋಪ್ಯವಾಗಿಡುವ ಸಲುವಾಗಿ ಹೀಲಾ ಎಂದರೆ `ಹೆಲೆನ್ ಲೇನ್' ಅಥವಾ `ಹೆಲೆನ್ ಲಾರ್ಸನ್'ಳಿಂದ ಪಡೆದ ಜೀವಕೋಶಗಳು ಎನ್ನುತ್ತಿದ್ದರು. ವಿಜ್ಞಾನಿಯೊಬ್ಬರ ಪ್ರಕಾರ ಆ ರೀತಿ ಇದುವರೆಗೆ ವೃದ್ಧಿಗೊಂಡಿರುವ ಆಕೆಯ ಜೀವಕೋಶಗಳ ತೂಕ ಸುಮಾರು 50 ದಶಲಕ್ಷ ಮೆಟ್ರಿಕ್ ಟನ್‌ಗಳಷ್ಟಾಗಿರಬಹುದು! ಪ್ರತಿಯೊಂದು ಜೀವಕೋಶ ಅದೆಷ್ಟು ಸೂಕ್ಷ್ಮವಾಗಿರುತ್ತದೆಯೆಂದರೆ ಅವು ಬರಿಗಣ್ಣಿಗೆ ಕಾಣುವುದಿಲ್ಲ, ಅವುಗಳನ್ನು ಸೂಕ್ಷ್ಮದರ್ಶಕದ ಮೂಲಕವೇ ನೋಡಬೇಕು. ಇದುವರೆಗೆ ವೃದ್ಧಿಗೊಂಡಿರುವ ಆಕೆಯ ಜೀವಕೋಶಗಳನ್ನು ಒಂದಕ್ಕೆ ಒಂದರಂತೆ ಜೋಡಿಸಿದರೆ ಇಡೀ ಭೂಮಿಯನ್ನು ಮೂರು ಸುತ್ತು ಹಾಕಬಹುದು! ಆಕೆ ಬದುಕಿದ್ದಾಗ ಆಕೆಯ ಎತ್ತರ ಸುಮಾರು ಐದಡಿಯಷ್ಟೇ ಇತ್ತು.
ಪ್ರಯೋಗಾಲಯದ ಗಾಜಿನ ನಳಿಕೆಗಳಲ್ಲಿ ವೃದ್ಧಿಗೊಂಡ ಮೊಟ್ಟಮೊದಲ ಅಂಗಾಂಶವೇ ಈಕೆಯದು. ಅದರಿಂದಾಗಿ ವೈದ್ಯಕೀಯ ರಂಗದಲ್ಲಿ ಅದು ಕ್ರಾಂತಿಯನ್ನೇ ಉಂಟುಮಾಡಿತು. ಹೀಲಾ ಜೀವಕೋಶಗಳ ಸಾಲಿನ ಮೌಲ್ಯ ಅಗಣಿತವಾದುದು: ಅವುಗಳ ಮೇಲೆ ಮೊಟ್ಟಮೊದಲ ಪೋಲಿಯೋ ಲಸಿಕೆಯನ್ನು ಪರೀಕ್ಷಿಸಲಾಯಿತು, ಹಲವಾರು ಕ್ಯಾನ್ಸರ್ ಔಷಧಗಳ, ಪಾರ್ಕಿನ್‌ಸನ್, ಲ್ಯೂಕೆಮಿಯಾ ಮತ್ತು ಫ್ಲೂನಂತಹ ಹಲವರು ಕಾಯಿಲೆಗಳ ಔಷಧಗಳ ಆವಿಷ್ಕಾರಕ್ಕೆ ಅವು ಕಾರಣವಾದವು ಹಾಗೂ ಹಲವಾರು ಮೂಲಭೂತ ಜೀವಕೋಶ ಪ್ರಕ್ರಿಯೆಗಳ, ರಾಸಾಯನಿಕ ಚಿಕಿತ್ಸೆ, ಕ್ಲೋನಿಂಗ್, ವಂಶವಾಹಿ ಮ್ಯಾಪಿಂಗ್ ಮುಂತಾದವುಗಳ ಅಧ್ಯಯನಕ್ಕೆ ಆಧಾರವಾದವು. ಆ ಜೀವಕೋಶಗಳ ಮೇಲೆ ಹರ್ಪೀಸ್, ಏಡ್ಸ್ ಮುಂತಾದ ವೈರಸ್ ಕಾಯಿಲೆಗಳ ಅಧ್ಯಯನ ನಡೆಯುತ್ತಿದೆ. ಮಾನವ ಜೀವಕೋಶಗಳ ಮೇಲಾಗುವ ಅಣುಬಾಂಬ್‌ನ ಪರಿಣಾಮಕ್ಕೆ ಆ ಜೀವಕೋಶಗಳನ್ನು ಬಳಸಲಾಗಿದೆ ಹಾಗೂ ಶೂನ್ಯ ಗುರುತ್ವಾಕರ್ಷಣೆ ಮಾನವ ಜೀವಕೋಶಗಳ ಮೇಲೆ ಬೀರುವ ಪರಿಣಾಮದ ಅಧ್ಯಯನಕ್ಕಾಗಿ ಯಾವ ಜೀವಂತ ಮನುಷ್ಯನೂ ಅಂತರಿಕ್ಷಕ್ಕೆ ಕಾಲಿಡುವ ಮೊದಲೇ ಆ ಜೀವಕೋಶಗಳನ್ನು ಅಂತರಿಕ್ಷಕ್ಕೂ ಕಳುಹಿಸಿಕೊಡಲಾಗಿತ್ತು.
ಮಹಿಳೆಯೊಬ್ಬಳ ಜೀವಕೋಶಗಳನ್ನು ಆಕೆಯ ಅಥವಾ ಆಕೆಯ ಕುಟುಂಬದವರ ಅನುಮತಿಯಿಲ್ಲದೆ ಪಡೆದು ಅವುಗಳನ್ನು ಬಳಸುತ್ತಿರುವುದು ಹಲವಾರು ನೈತಿಕ ಸವಾಲುಗಳನ್ನು ಎದುರಿಗಿಡುತ್ತವೆ. ನ್ಯಾಯ, ಗೌರವ ಮತ್ತು ತಿಳಿಸಬೇಕೆಂಬ ಕನಿಷ್ಠ ಸೌಜನ್ಯತೆಯ ಮಿತಿಯನ್ನೂ ಮೀರಿರುವುದು ಇಲ್ಲಿ ಕಣ್ಣಿಗೆ ಕಟ್ಟುವಂತಿದೆ. ಅಮೆರಿಕದ ವೈದ್ಯಕೀಯ ಸಂಶೋಧನೆಗಳ ಜಗತ್ತಿನ ಕರಾಳ ಮುಖದ ಬಗ್ಗೆ ರೆಬೆಕ್ಕಾ ಸ್ಕ್ಲೂಟ್ ತಮ್ಮ ಕೃತಿ `ದ ಇಮಾರ್ಟಲ್ ಲೈಫ್ ಆಫ್ ಹೆನ್ರಿಟಾ ಲ್ಯಾಕ್ಸ್'ನಲ್ಲಿ ಹೇಳಿದ್ದಾರೆ. ಅಮೆರಿಕಾದಲ್ಲಿ `ಕತ್ತಲ ವೈದ್ಯರು' ತಮ್ಮ ಸಂಶೋಧನೆ ಮತ್ತು ಪ್ರಯೋಗಗಳಿಗಾಗಿ ರಾತ್ರಿಯ ಹೊತ್ತು ರಸ್ತೆಯಲ್ಲಿ ಓಡಾಡುತ್ತಿದ್ದ ನೀಗ್ರೋಗಳನ್ನು ಅಪಹರಿಸಿ ಕೊಂಡೊಯ್ಯುತ್ತಿದ್ದರು. ಕುಖ್ಯಾತ ಟಸ್ಕೆಜೀ ಸಿಫಿಲಿಸ್ ಅಧ್ಯಯನದಲ್ಲಿ ಅಲಬಾಮಾದಲ್ಲಿ ಅಧ್ಯಯನಕ್ಕಾಗಿ ಸಿಫಿಲಿಸ್ ರೋಗ ಹೊಂದಿರುವ ಬಡ ಮತ್ತು ಅಶಿಕ್ಷಿತ ನೀಗ್ರೋಗಳನ್ನು ಕರೆತಂದು ಅವರಿಗೆ ಪೆನ್ಸಿಲಿನ್ ನೀಡಿ ಬದುಕಿಸುವ ಸಾಧ್ಯತೆಗಳಿದ್ದರೂ ವೈದ್ಯರು ಅವರಿಗೆ ಪೆನ್ಸಿಲಿನ್ ನೀಡುತ್ತಿರುವುದಾಗಿ ಸುಳ್ಳು ಹೇಳಿ ಚಿಕಿತ್ಸೆ ದೊರಕದಿದ್ದಲ್ಲಿ ಕಾಯಿಲೆ ಎಷ್ಟರ ಮಟ್ಟಿಗೆ ಉಲ್ಬಣಗೊಳ್ಳುತ್ತದೆ ಎಂಬುದನ್ನು ಅಧ್ಯಯನ ಮಾಡಲು ಅವರು ನರಳಿ ಸಾಯುವಂತೆ ಮಾಡುತ್ತಿದ್ದರು. ಅಮೆರಿಕಾದ ಸಿ.ಐ.ಎ. ಎರಡನೇ ವಿಶ್ವಯುದ್ಧದ ಸಮಯದಲ್ಲಿ ದೇಹದ ಮೇಲೆ ಯಾವುದೇ ಹಿಂಸೆಯ ಕುರುಹು ಕಾಣದಂತೆ ಚಿತ್ರಹಿಂಸೆ ನೀಡುವ ಪ್ರಯೋಗಗಳಿಗಾಗಿ ಸಾವಿರಾರು ನೀಗ್ರೋ ಖೈದಿಗಳನ್ನು ಬಳಸಿಕೊಂಡಿದೆ. ಅಮೆರಿಕಾದಲ್ಲಿ ಗುಲಾಮ ಪದ್ಧತಿ ಚಾಲ್ತಿಯಲ್ಲಿದ್ದಾಗ ನೀಗ್ರೋ ಗುಲಾಮರ ಮೇಲೆ ಹೇಳಕೇಳದಷ್ಟು ಹೊಸ ಔಷಧ ಚಿಕಿತ್ಸೆಗಳ ಹಾಗೂ ಶಸ್ತ್ರಚಿಕಿತ್ಸೆಗಳ ಪ್ರಯೋಗಗಳು ನಡೆದಿವೆ. ಕಳೆದ ಶತಮಾನದ ಪ್ರಾರಂಭದಲ್ಲಿ ಕಪ್ಪು ಜನರ ಸಮಾಧಿಗಳನ್ನು ಅಗೆದು ಶವಗಳನ್ನು ಸಂಶೋಧನೆಗಾಗಿ ವೈದ್ಯಕೀಯ ಶಾಲೆಗಳಿಗೆ ಕಳುಹಿಸಲಾಗುತ್ತಿತ್ತು.
ಜಾನ್ಸ್ ಹಾಪ್‌ಕಿನ್ಸ್‌ನ ಅಂಗಾಂಶ ಸಾಕಣೆ ಸಂಶೋಧನೆಯ ಮುಖ್ಯಸ್ಥರಾಗಿದ್ದ ಜಾರ್ಜ್ ಗೌರವರು ಪ್ರಯೋಗಗಳಿಗಾಗಿ ಪ್ರಯೋಗಾಲಯದಲ್ಲಿ ಮಾನವ ಅಂಗಾಂಶ ಜೀವಕೋಶಗಳನ್ನು ವೃದ್ಧಿಸುವ ಪ್ರಯತ್ನವನ್ನು ಮುವ್ವತ್ತು ವರ್ಷಗಳಿಂದ ನಡೆಸಿ ವಿಫಲರಾಗಿದ್ದರು. ಆದರೆ 1951ರಲ್ಲಿ ಹೆನ್ರಿಟಾ ಲ್ಯಾಕ್ಸಳ ಜೀವಕೋಶಗಳು ಅವೆಲ್ಲವನ್ನೂ ಬದಲಿಸಿದವು. ಆಕೆಯ ಜೀವಕೋಶಗಳು ಪ್ರಯೋಗಾಲಯದ ಪೋಷಕಾಂಶಗಳ ಮಾಧ್ಯಮದಲ್ಲಿ ಹುಚ್ಚು ಹಿಡಿದಂತೆ ವೃದ್ಧಿಸತೊಡಗಿದವು, ಆಸುಪಾಸಿನಲ್ಲಿದ್ದ ಇತರ ಜೀವಕೋಶಗಳ ಮೇಲೂ ಆಕ್ರಮಣ ನಡೆಸಿ ಅವುಗಳನ್ನು ತಮ್ಮದಾಗಿಸಿಕೊಂಡವು. ಜಾರ್ಜ್ ಗೌರವರು ಅವುಗಳನ್ನು ಮಾರಾಟ ಮಾಡಿ ತಾವು ಹಣವೇನೂ ಮಾಡಿಕೊಳ್ಳಲಿಲ್ಲ. ಆದರೆ ಈಗ ಅದರ ವಿನಿಮಯ ಸಂಪೂರ್ಣ ವಾಣಿಜ್ಯಮಯವಾಗಿದೆ. ಇಡೀ ಜಗತ್ತಿನಾದ್ಯಂತ ಅವುಗಳ ಕೊಡುಕೊಳ್ಳುವಿಕೆ ಪ್ರತಿದಿನ ನಡೆಯುತ್ತಿದೆ ಹಾಗೂ ಕೋಟ್ಯಂತರ ಡಾಲರ್ ಲಾಭ ಗಳಿಸಿಕೊಟ್ಟಿದೆ. ಮೈಕ್ರೋಬಯಲಾಜಿಕಲ್ ಅಸೋಸಿಯೇಟ್ಸ್ ಎಂಬ ಕಂಪೆನಿ ಹೀಲಾ ಜೀವಕೋಶಗಳನ್ನು ಸಣ್ಣ ಸೀಸೆಯೊಂದಕ್ಕೆ ಹತ್ತು ಸಾವಿರ ಡಾಲರ್‌ನಂತೆ ಮಾರಾಟಮಾಡುತ್ತಿದೆ. ಈ ದಿನ ಹೀಲಾ ಜೀವಕೋಶಗಳನ್ನೊಳಗೊಂಡಂತೆ ಸುಮಾರು 17000ಕ್ಕೂ ಹೆಚ್ಚು ಪೇಟೆಂಟ್‌ಗಳಿವೆ. ಹೀಲಾ ಜೀವಕೋಶಗಳ ಮೇಲಿನ ಸಂಶೋಧನಾ ಪ್ರಬಂಧಗಳು ವೈಜ್ಞಾನಿಕ ಪತ್ರಿಕೆಗಳಲ್ಲಿ ಇದುವರೆಗೆ 60000ಕ್ಕೂ ಹೆಚ್ಚು ಪ್ರಕಟವಾಗಿವೆ ಹಾಗೂ ಪ್ರತಿ ದಿನ ಸರಾಸರಿ ಹತ್ತು ಪ್ರಬಂಧಗಳಂತೆ ಪ್ರಕಟವಾಗುತ್ತಿವೆ. ಸಾವಿರಾರು ಜನರಿಗೆ ಆ ಜೀವಕೋಶಗಳು ಉದ್ಯೋಗ ದೊರಕಿಸಿಕೊಟ್ಟಿವೆ. ಹೀಲಾ ಜೀವಕೋಶಗಳ ಅಧ್ಯಯನದ ವಿಜ್ಞಾನಿಯೊಬ್ಬರಿಗೆ ನೋಬೆಲ್ ಪಾರಿತೋಷಕ ಸಹ ದೊರಕಿದೆ. ವಿಜ್ಞಾನಿ ಡೆಫ್ಲರ್ ಹೇಳುವಂತೆ ಕಳೆದ ನೂರು ವರ್ಷಗಳಲ್ಲಿ ವೈದ್ಯಕೀಯ ಜಗತ್ತು ಕಂಡಿರುವ ಅತ್ಯದ್ಭುತವೆಂದರೆ ಹೀಲಾ ಜೀವಕೋಶಗಳು ಮಾತ್ರ.
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಈ ಮುಂದಿನ ಐದು ಅಂಶಗಳಿಂದಾಗಿ ಹೀಲಾ ಜೀವಕೋಶಗಳು ಬಹಳ ಮುಖ್ಯವಾಗಿವೆ:
1. ಹೀಲಾ ಜೀವಕೋಶಗಳ ಪ್ರವೇಶಕ್ಕೆ ಮೊದಲು ವಿಜ್ಞಾನಿಗಳು ಜೀವಕೋಶಗಳ ಮೇಲೆ ನಡೆಸುವ ಸಂಶೋಧನೆಗಳಿಗಿಂತ ಆ ಜೀವಕೋಶಗಳನ್ನು ಜೀವಂತವಾಗಿಡುವಲ್ಲಿ ಹೆಚ್ಚು ಶ್ರಮ ವ್ಯಯಮಾಡುತ್ತಿದ್ದರು. ಹೀಲಾ ಜೀವಕೋಶಗಳು ನಿರಂತರವಾಗಿ ಲಭಿಸಲು ಆರಂಭವಾದಾಗಿನಿಂದ ಅವರಿಗೆ ಸಂಶೋಧನೆಗೆ ಹೆಚ್ಚು ಸಮಯ ಸಿಕ್ಕಿತು.
2. 1952 ಪೋಲಿಯೋ ಕಾಯಿಲೆಯ ರುದ್ರತಾಂಡವದ ವರ್ಷವಾಗಿತ್ತು. ಕೋಟ್ಯಾಂತರ ಜನರನ್ನು ರಕ್ಷಿಸಿದ ಪೋಲಿಯೋ ಲಸಿಕೆಯನ್ನು ಪರೀಕ್ಷಿಸಲು ಹೀಲಾ ಜೀವಕೋಶಗಳನ್ನು ಬಳಸಲಾಯಿತು.
3. ಹೆನ್ರಿಟಾ ಲ್ಯಾಕ್ಸ್‌ರವರ ಅಂಗಾಂಶ ಮಾದರಿಯಲ್ಲಿನ ಕೆಲವು ಜೀವಕೋಶಗಳು ಇತರ ಜೀವಕೋಶಗಳಿಗಿಂತ ವಿಭಿನ್ನವಾಗಿ ವರ್ತಿಸುತ್ತಿದ್ದವು. ಅಂತಹ ಒಂದು ನಿರ್ದಿಷ್ಟ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ವೃದ್ಧಿಸಿ ಒಂದು ಪ್ರತ್ಯೇಕ ಜೀವಕೋಶ ಸಾಲನ್ನೇ ನಿರ್ಮಿಸುವುದು ಸಾಧ್ಯವಾಯಿತು. ಒಂದು ಪ್ರತ್ಯೇಕ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ಜೀವಂತವಾಗಿರಿಸುವುದೇ ಕ್ಲೋನಿಂಗ್ ಮತ್ತು ಪ್ರನಾಳ ನಳಿಕೆ ಫಲವಂತಿಕೆಯ ಮೂಲಭೂತ ತಂತ್ರವಾಗಿದೆ.
4. ವಿಜ್ಞಾನಿಯೊಬ್ಬ ಆಕಸ್ಮಿಕವಾಗಿ ರಾಸಾಯನಿಕವೊಂದನ್ನು ಹೀಲಾ ಜೀವಕೋಶಗಳ ಮೇಲೆ ಚೆಲ್ಲಿದ. ಆ ರಾಸಾಯನಿಕ ಆ ಜೀವಕೋಶದಲ್ಲಿನ ಸಿಕ್ಕುಸಿಕ್ಕಾಗಿದ್ದ ವರ್ಣತಂತುಗಳು ಬಿಡಿಬಿಡಿಯಾಗಿ ಪ್ರತ್ಯೇಕವಾಗುವಂತೆ ಮಾಡಿತು. ಆನಂತರ ವಿಜ್ಞಾನಿಗಳು ಈ ತಂತ್ರವನ್ನೇ ಬಳಸಿ ಮನುಷ್ಯರಲ್ಲಿ 46 (23 ಜೋಡಿಗಳು) ವರ್ಣತಂತುಗಳಿವೆ 48 ಅಲ್ಲ ಎಂಬುದನ್ನು ಕಂಡುಕೊಂಡರು ಹಾಗೂ ಈ ತಂತ್ರವೇ ಹಲವಾರು ವಿಧದ ಆನುವಂಶಿಕ ರೋಗಗಳ ಪತ್ತೆಹಚ್ಚುವಿಕೆಗೆ ನೆರವಾಗುತ್ತಿದೆ.
5. ಹೆನ್ರಿಟಾ ಲ್ಯಾಕ್ಸಳ ಕ್ಯಾನ್ಸರ್‌ಯುಕ್ತ ಜೀವಕೋಶಗಳು ಟೆಲೋಮೆರೇಸ್ ಎಂಬ ಕಿಣ್ವವನ್ನು ತಮ್ಮ ಡಿ.ಎನ್.ಎ.ವನ್ನು ದುರಸ್ತಿಮಾಡಿಕೊಳ್ಳಲು ಬಳಸುತ್ತದೆ ಎಂಬುದನ್ನು ವಿಜ್ಞಾನಿಗಳು ಕಂಡುಕೊಂಡರು. ಇದರಿಂದಾಗಿಯೇ ಇತರ ಸಾಮಾನ್ಯ ಜೀವಕೋಶಗಳು ಸತ್ತುಹೋಗುತ್ತಿದ್ದಲ್ಲಿ, ಕ್ಯಾನ್ಸರ್‌ಯುಕ್ತ ಜೀವಕೋಶಗಳು ವೃದ್ಧಿಯಾಗುತ್ತಿದ್ದವು. ಕ್ಯಾನ್ಸರ್ ಪ್ರತಿರೋಧಕ ಔಷಧಗಳು ಈ ಕಿಣ್ವದ ವಿರುದ್ಧ ಕೆಲಸಮಾಡುತ್ತದೆ ಹಾಗೂ ಆ ರೀತಿಯ ಹಲವಾರು ಔಷಧಗಳು ವೈದ್ಯಕೀಯ ಪ್ರಯೋಗದಲ್ಲಿವೆ.
ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ದ್ವಿಗುಣಗೊಂಡಂತೆ ಅವುಗಳಲ್ಲಿನ ವರ್ಣತಂತುಗಳ ತುದಿಯಲ್ಲಿರುವ ಟೆಲೋಮೆರೇಸ್ ಕಿಣ್ವ ಕಿರಿದಾಗುತ್ತಾ ಬರುತ್ತದೆ. ಮನುಷ್ಯರಿಗೆ ವಯಸ್ಸಾಗಿ ಕೊನೆಗೊಂದು ದಿನ ಅವರು ಜೀವಬಿಡುವುದಕ್ಕೂ ಇದೇ ಕಾರಣ. ದೇಹದಲ್ಲಿನ ಪ್ರತಿಯೊಂದು ಜೀವಕೋಶವೂ ಒಂದು ನಿರ್ದಿಷ್ಟ ಸಂಖ್ಯೆಯಷ್ಟು ಮಾತ್ರ ವಿಭಜನೆಗೊಳಗಾಗಬಲ್ಲದು ಹಾಗೂ ಇದನ್ನು `ಹೇಫ್ಲಿಕ್ ಮಿತಿ'ಯೆಂದು ವಿಜ್ಞಾನಿಗಳು ಕರೆಯುತ್ತಾರೆ. ಆದರೆ ಹೀಲಾ ಜೀವಕೋಶಗಳು ಮಾತ್ರ ಈ ಮಿತಿಯನ್ನೂ ಮೀರಿ ನಿರಂತರವಾಗಿ ವಿಭಜನೆಗೊಳಗಾಗುತ್ತಿವೆ. ಅದಕ್ಕೆ ಕಾರಣ ಅವುಗಳ ವರ್ಣತಂತುಗಳ ಕೊನೆಯಲ್ಲಿ ಟೆಲೋಮೆರೇಸ್‌ನ ಸಕ್ರಿಯ ಆವೃತ್ತಿ ಹೊಂದಿರುವುದಾಗಿದೆ. ಇದರಿಂದಾಗಿ ಜೀವಕೋಶಗಳು ವಿಭಜನೆಗೊಂಡಾಗ ಟೆಲೋಮೆರೇಸ್ ಕಿರಿದಾಗುತ್ತಾ ಹೋಗುವುದಿಲ್ಲ. ಹೆನ್ರಿಟಾ ಬದುಕಿದ್ದ ಅವಧಿಗಿಂತ ಹೆಚ್ಚಿನ ಸಮಯ ಆಕೆಯ ಜೀವಕೋಶಗಳು ಬದುಕಿವೆ.
ಆದರೆ ಹೆನ್ರಿಟಾ ಲ್ಯಾಕ್ಸ್ ಕುಟುಂಬದವರಿಗೆ ವೈದ್ಯಕೀಯ ಜಗತ್ತಿನಲ್ಲಿ ತಮ್ಮ ತಾಯಿಯ ಕ್ಯಾನ್ಸರ್‌ಯುಕ್ತ ಜೀವಕೋಶಗಳು ನಡೆಸುತ್ತಿರುವ ಕ್ರಾಂತಿಯ ಅರಿವೇ ಇರಲಿಲ್ಲ. ಈ ವ್ಯವಹಾರದಲ್ಲಿ ಅವರಿಗೆ ಚಿಕ್ಕಾಸೂ ಸಿಗಲಿಲ್ಲ. ಅವರು ಅತ್ಯಂತ ಬಡತನದಲ್ಲಿ ಶಿಕ್ಷಣವಿಲ್ಲದೆ, ಆರೋಗ್ಯ ವಿಮೆಯಿಲ್ಲದೆ ನರಳುತ್ತಿದ್ದರು. ತಮ್ಮ ತಾಯಿ ಸತ್ತ ಇಪ್ಪತ್ತು ವರ್ಷಗಳ ನಂತರವೂ ಆಕೆಯ ಜೀವಕೋಶಗಳು ಇನ್ನೂ ಜೀವಂತವಿವೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ. ಕೊನೆಗೆ ಆ ವಿಷಯ ತಿಳಿದದ್ದೂ ಆಕಸ್ಮಿಕವಾಗಿ. ಹೆನ್ರಿಟಾ ಲ್ಯಾಕ್ಸಳ ಸೊಸೆ ಒಮ್ಮೆ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ಗೆ ಹೋಗಿದ್ದಾಗ ಆಕೆಯ ಹೆಸರಿನಲ್ಲಿನ `ಲ್ಯಾಕ್ಸ್' ಪದ ನೋಡಿದ ಅಲ್ಲಿನ ಸಂಶೋಧಕನೊಬ್ಬ ತಾನು `ಹೆನ್ರಿಟಾ ಲ್ಯಾಕ್ಸ್ ಎಂಬ ಹೆಂಗಸಿನಿಂದ ಪಡೆದ ಜೀವಕೋಶ'ಗಳ ಮೇಲೆ ಸಂಶೋಧನೆ ನಡೆಸುತ್ತಿರುವುದಾಗಿ ತಿಳಿಸಿದ. ಲ್ಯಾಕ್ಸ್ ಕುಟುಂಬದ ಬಗೆಗೆ ಹೊರಜಗತ್ತಿಗೆ ತಿಳಿದ ನಂತರ ಹಲವಾರು ವೈದ್ಯರು, ವಿಜ್ಞಾನಿಗಳು ಹೀಲಾ ಜೀವಕೋಶಗಳ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಆ ಕುಟುಂಬದವರನ್ನು ಸಹ ಬೇರೇನೋ ನೆಪ ಹೇಳಿ ಪ್ರಯೋಗಾಲಯಗಳಿಗೆ ಕರೆಸಿ ಪರೀಕ್ಷೆಗಳನ್ನು ನಡೆಸತೊಡಗಿದರು.
ಕಳೆದ ಅರವತ್ತು ವರ್ಷಗಳಿಂದ ಸತತವಾಗಿ ವೃದ್ಧಿಯಾಗುತ್ತಿರುವ ಹೀಲಾ ಜೀವಕೋಶಗಳಲ್ಲಿ ಉತ್ಪರಿವರ್ತನೆಯಾಗಿ (Mutation) ಅವು ಸ್ವಯಂ ಏಕಕೋಶಿಕ ಜೀವಿಗಳಾಗಿ ವಿಕಾಸ ಹೊಂದಿವೆ ಹಾಗೂ ಅವು ಈಗ ಮಾನವ ಜೀವಕೋಶಗಳಾಗಿಯೇ ಉಳಿದಿಲ್ಲ ಎನ್ನುವ ಗಾಳಿ ಸುದ್ಧಿ ಸಹ ವಿಜ್ಞಾನ ಜಗತ್ತಿನಲ್ಲಿ ಹಬ್ಬಿತ್ತು. ಲೀ ವ್ಯಾನ್ ವಾಲೆನ್ ಎಂಬ ವಿಜ್ಞಾನಿ ಹೀಲಾ ಜೀವಕೋಶಗಳು ಒಂದು ಹೊಸ ಪ್ರಭೇದವಾಗಿ ವಿಕಾಸಗೊಂಡಿದೆಯೆಂದು ಹೇಳಿ ಅದಕ್ಕೆ ಹೀಲಾಸೈಟಾನ್ ಗಾರ್ಟ್ಲೆರಿ ಎಂಬ ವೈಜ್ಞಾನಿಕ ಹೆಸರನ್ನು ಸಹ ಇರಿಸಿದ. ಆದರೆ ವಿಜ್ಞಾನಿಗಳು ಅದನ್ನು ಅಲ್ಲಗಳೆಯುತ್ತಾರೆ.
ಇಲ್ಲಿನ ವಿಪರ್ಯಾಸವೆಂದರೆ ನಮ್ಮದೇ ದೇಹದ ಜೀವಕೋಶಗಳ ಹಾಗೂ ಅಂಗಾಂಶಗಳ ಯಜಮಾನರು ನಾವು ಅಲ್ಲದಿರುವುದು- ಅವು ನಮ್ಮ ದೇಹದಲ್ಲಿರುವವರೆಗೂ ಅವು ನಮ್ಮವು, ಆದರೆ ದೇಹದಿಂದ ಹೊರಗೆ ತೆಗೆದನಂತರ ಅವುಗಳ ಮೇಲೆ ನಮ್ಮ ಯಾವುದೇ ಹಕ್ಕಿಲ್ಲದಿರುವುದು. 1980ರಲ್ಲಿ ವೈದ್ಯನೊಬ್ಬ ಜಾನ್ ಮೂರ್ ಎಂಬ ರೋಗಿಯ ದೇಹದಿಂದ ಕ್ಯಾನ್ಸರ್‌ಯುಕ್ತ ಗುಲ್ಮವನ್ನು ತೆಗೆದು ಅವುಗಳಿಂದ ಹೊಸ ಜೀವಕೋಶಗಳ ಸಾಲನ್ನು ಅಭಿವೃದ್ಧಿಪಡಿಸಿ ಜಾನ್ ಮೂರ್‌ನ ಅರಿವಿಗೇ ಬರದಂತೆ ಅದನ್ನು ಪೇಟೆಂಟ್ ಮಾಡಿದ. ಆ ಜೀವಕೋಶಗಳ ಮೌಲ್ಯ ಮೂರು ಬಿಲಿಯನ್ ಡಾಲರ್‌ಗಿಂತ ಹೆಚ್ಚಾಗಿದ್ದಿತು. ಕೊನೆಗೆ ಈ ವಿಷಯ ತಿಳಿದ ಮೂರ್ ತಮ್ಮ ದೇಹದ ಅಂಗಾಂಶಗಳ ಮೇಲೆ ಅವರವರಿಗೆ ಹಕ್ಕಿರುತ್ತದೆಯೆಂದು ಹೇಳಿ ನ್ಯಾಯಾಲಯದಲ್ಲಿ ದಾವೆಯೊಂದನ್ನು ಹೂಡಿದ. ಮೊದಲ ನ್ಯಾಯಾಲಯದಲ್ಲಿ ತೀರ್ಪು ಆತನ ಕಡೆಗಿತ್ತಾದರೂ ಕ್ಯಾಲಿಫೋರ್ನಿಯಾದ ಉಚ್ಚ ನ್ಯಾಯಾಲಯ ಆ ತೀರ್ಪನ್ನು ತಿರಸ್ಕರಿಸಿ ಜೀವಕೋಶಗಳ ಸಾಲನ್ನು ವೈದ್ಯ ತನ್ನ `ನಾವೀನ್ಯ ಶ್ರಮ'ದಿಂದ `ರೂಪಾಂತರಿಸಿದ್ದಾನೆ' ಎಂದೂ ಹಾಗೂ ದೇಹದಿಂದ ಹೊರತೆಗೆದ ಅಂಗಾಂಶ `ಬರೇ ಒಂದು ವೈದ್ಯಕೀಯ ತ್ಯಾಜ್ಯ ವಸ್ತು'ವೆಂದು ಹೇಳಿ ಅದರ ಮೇಲೆ ಆ ರೋಗಿಗೆ ಯಾವುದೇ ಹಕ್ಕಿಲ್ಲವೆಂದು ತೀರ್ಪು ನೀಡಿತು. ಆದರೆ ನ್ಯಾಯಬದ್ಧವಾಗಿರುವುದೆಲ್ಲವೂ ನೈತಿಕವಾಗಿ ಬದ್ಧವಾಗಿರುವಂತಹುದೇ ಎಂಬ ಪ್ರಶ್ನೆ ಕಾಡದೇ ಇರುವುದಿಲ್ಲ.
ರೋಗಿಗಳ ಅಥವಾ ಅವರ ಕುಟುಂಬದವರ ಸಮ್ಮತಿಯಿಲ್ಲದೆ ತೆಗೆದ ಅಂಗಾಂಶ ಅಥವಾ ರಕ್ತದ ಮಾದರಿಗಳನ್ನು ಸಂಗ್ರಹಿಸಿಡುತ್ತಿದ್ದ ಆಸ್ಪತ್ರೆಯ ಮೇಲೆ ಟೆಕ್ಸಾಸ್‌ನ ನಾಗರಿಕ ಹಕ್ಕುಗಳ ಪ್ರಾಯೋಜನೆಯು ದಾವೆ ಹೂಡಿ ಅದರಲ್ಲಿ ಗೆದ್ದಿತು ಸಹ. ನ್ಯಾಯಾಲಯದ ತೀರ್ಪಿನಂತೆ ಆ ರೀತಿ ಸಂಗ್ರಹಿಸಿದ್ದ ರಕ್ತದ ಮಾದರಿಗಳೆಲ್ಲವನ್ನೂ ನಾಶಪಡಿಸಲಾಯಿತು. ಹಾಗಾಗಿ ಈಗ ಆಸ್ಪತ್ರೆಗೆ ಸೇರುವಾಗಲೇ ಅರ್ಜಿಯಲ್ಲಿ ಆ ರೀತಿಯ ಸಮ್ಮತಿಗೆ ಸಹಿ ಪಡೆದಿರುತ್ತಾರೆ. ಆದರೆ ಅವುಗಳನ್ನು ಎಷ್ಟು ಜನ ಓದಿ ಸಮ್ಮತಿ ನೀಡಿರುತ್ತಾರೆ ಎಂಬುದು ಪ್ರಶ್ನಾರ್ಹ. 1950ರ ಸಮಯದಲ್ಲಿ ಜಾನ್ಸ್ ಹಾಪ್‌ಕಿನ್ಸ್ ಆಸ್ಪತ್ರೆಯ ವರ್ಣಭೇದ ತಾರತಮ್ಯ ಎಷ್ಟು ತೀವ್ರವಾಗಿತ್ತೆಂದರೆ (ಹೆನ್ರಿಟಾ ಕರಿಯರಿಗೆಂದೇ ಪ್ರತ್ಯೇಕವಾಗಿರಿಸಿದ ವಾರ್ಡ್‌ನಲ್ಲಿದ್ದಳು) ಅನುಮತಿ ಕೇಳಿದ್ದರೂ ಹೆನ್ರಿಟಾ ಬಹುಶಃ ತನ್ನ ಅಂಗಾಂಶ ನೀಡಲು ಸಮ್ಮತಿಸುತ್ತಿರಲಿಲ್ಲ ಎಂದು ಸ್ಕ್ಲೂಟ್ ಹೇಳುತ್ತಾರೆ.
ಈ ರೀತಿ ಪ್ರತಿಯೊಂದಕ್ಕೂ ಮಾಹಿತಿ ನೀಡುತ್ತಾ, ಸಮ್ಮತಿ ಪಡೆಯುತ್ತಾ ಹೋದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ, ಸಂಶೋಧನೆಗಳ ಪ್ರಗತಿ ಸಾಧ್ಯವಾಗುವುದಿಲ್ಲ ಎನ್ನುವುದು ಹಲವಾರು ಸಂಶೋಧಕರ ಅನಿಸಿಕೆ. ಆ ರೀತಿ ಹೆನ್ರಿಟಾಳ ಅನುಮತಿಗಾಗಿ ಕಾದು ನಿಂತಿದ್ದಲ್ಲಿ ಪೋಲಿಯೋ ಲಸಿಕೆ ಬರುವುದು ಇನ್ನಷ್ಟು ವರ್ಷಗಳು ತಡವಾಗುತ್ತಿತ್ತು ಎನ್ನುತ್ತಾರೆ ಅವರು. ಆದರೆ ಹೆನ್ರಿಟಾ ಲ್ಯಾಕ್ಸಳ ವಿಷಯದಲ್ಲಿ ಆಕೆಯ ಕುಟುಂಬದವರಿಗೆ ಹೀಲಾ ಜೀವಕೋಶಗಳ ವಿಷಯವೇ ತಿಳಿದಿರಲಿಲ್ಲ ಎಂಬುದು ಬಹಳ ಮುಖ್ಯವಾದುದು. ವೈಜ್ಞಾನಿಕ ಸಮುದಾಯ ಅವರನ್ನು ಕಡೆಗಣಿಸಿ ಸಂಶೋಧನೆಯ ಲಾಭಗಳನ್ನು ಬೃಹತ್ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿತ್ತು. ವಿಜ್ಞಾನ ಮತ್ತು ಸಂಶೋಧನೆಗಳು ಮುಕ್ತವಾಗಿರಬೇಕು ಹಾಗೂ ಪ್ರಾಮಾಣಿಕವಾಗಿರಬೇಕು ಎನ್ನುತ್ತಾರೆ ರೆಬೆಕ್ಕಾ ಸ್ಕ್ಲೂಟ್. ಹೆನ್ರಿಟಾಳ ಮಗಳಾದ ಡೆಬೊರಾ, `ನಾನು ಸತ್ಯವನ್ನು ಹೇಳುತ್ತೇನೆ, ನನಗೆ ವಿಜ್ಞಾನದ ಬಗ್ಗೆ ಬೇಸರವಿಲ್ಲ, ಏಕೆಂದರೆ ಅದು ಜನರಿಗೆ ಸಹಾಯ ಮಾಡುತ್ತಿದೆ. ವಿಜ್ಞಾನವಿಲ್ಲದಿದ್ದಲ್ಲಿ ನನ್ನ ಬದುಕು ದುಸ್ತರವಾಗುತ್ತಿತ್ತು... ಹಾಗೆಯೇ ನಾನು ಸುಳ್ಳನ್ನು ಸಹ ಹೇಳುವುದಿಲ್ಲ, ನನಗೆ ಆರೋಗ್ಯ ವಿಮೆಯೂ ಬೇಕು, ಏಕೆಂದರೆ ನನ್ನ ತಾಯಿಯ ಜೀವಕೋಶಗಳು ಯಾವ ಔಷಧಗಳನ್ನು ಕಂಡುಹಿಡಿಯಲು ಸಹಾಯಮಾಡಿದವೋ ಆ ಔಷಧಗಳನ್ನು ಕೊಳ್ಳಲು ನಾನು ಪ್ರತಿ ತಿಂಗಳು ಹಣವನ್ನು ಖರ್ಚುಮಾಡುವುದು ನನಗೆ ಕಷ್ಟಕರವಾಗುತ್ತದೆ' ಎಂದಿದ್ದಾಳೆ.
ಹೀಲಾ ಜೀವಕೋಶದ ಮೇಲಿನ ಅಧ್ಯಯನಗಳು- ಕೆಲವು ಮೈಲಿಗಲ್ಲುಗಳು:
1951: ಹೆನ್ರಿಟಾ ಲ್ಯಾಕ್ಸಳಿಂದ ಅವಳ ಅನುಮತಿಯಿಲ್ಲದೆ ಆಕೆಯ ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಯುಕ್ತ ಅಂಗಾಂಶವನ್ನು ತೆಗೆದು ಅದನ್ನು ಪ್ರಯೋಗಾಲಯದಲ್ಲಿ ವೃದ್ಧಿಸಿ `ಹೀಲಾ' ಜೀವಕೋಶಗಳನ್ನು ಅಭವೃದ್ಧಿಪಡಿಸಲಾಯಿತು.
1952: * ಸಂಶೋಧಕರು ತಮ್ಮ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳಿಗೆ ಮಂಗನಬಾವು, ದಡಾರ, ಹರ್ಪೀಸ್ ಮುಂತಾದ ವೈರಸ್ ರೋಗಕಾರಕಗಳನ್ನು ಸೋಂಕುಗೊಳಿಸಿದರು. ವೈರಾಲಜಿಯ ಆಧುನಿಕ ಕ್ಷೇತ್ರ ಉಗಮವಾಯಿತು. ಇದರಿಂದಾಗಿ ಲಸಿಕೆಗಳು, ವೈರಸ್ ಪ್ರತಿರೋಧಕ ಚಿಕಿತ್ಸೆಗಳು, ಜೈವಿಕ ಅಸ್ತ್ರಗಳ ಅಭಿವೃದ್ಧಿ ಸಾಧ್ಯವಾಯಿತು.
* ಹೀಲಾ ಜೀವಕೋಶಗಳು ಪೋಲಿಯೋ ಕಾಯಿಲೆಗೆ ತುತ್ತಾಗುತ್ತವೆ ಎಂಬುದನ್ನು ಕಂಡುಕೊಂಡ ಸಂಶೋಧಕರು ಬೃಹತ್ ಲಸಿಕೆ ಕ್ಷೇತ್ರ ಅಧ್ಯಯನ ಪ್ರಾರಂಭಿಸಿದರು.
* ಬೃಹತ್ ಪ್ರಮಾಣದಲ್ಲಿ ಮಾನವ ಜೀವಕೋಶಗಳನ್ನು ವೃದ್ಧಿಸುವ ತಂತ್ರಜ್ಞಾನಕ್ಕಾಗಿ ಹಾಗೂ ಅದರಲ್ಲಿ ಬಳಸಲಾಗುವ ಗಾಜಿನ ಸ್ಲೈಡ್ ಮತ್ತು ಪಾತ್ರೆಗಳನ್ನು ಪರೀಕ್ಷಿಸಲು ಹೀಲಾ ಜೀವಕೋಶಗಳನ್ನು ಬಳಸಲಾಯಿತು. ಇದರಿಂದಾಗಿ ಬಯಲಾಜಿಕಲ್ ಸಪ್ಲೈಸ್ ಕೈಗಾರಿಕೋದ್ಯಮಕ್ಕೆ ಸಹಾಯವಾಯಿತು.
* ಹೀಲಾ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಗಳು ಜೀವಕೋಶಗಳನ್ನು ಸಾಧಾರಣ ಅಂಚೆಯಲ್ಲಿ ಇತರರಿಗೆ ಕಳುಹಿಸಿಕೊಡುವ ವಿಧಾನ ಕಂಡುಕೊಂಡರು. ಅದಕ್ಕೆ ಮೊದಲು ಅವುಗಳನ್ನು ಶೀತಲೀಕರಿಸಿ ವಿಮಾನಗಳಲ್ಲಿ ಕಳುಹಿಸಿಕೊಡಬೇಕಾಗಿದ್ದಿತು.
1953: ಹೀಲಾ ಜೀವಕೋಶಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಯೊಬ್ಬರು ಹೀಮೋಟಾಕ್ಸಿಲಿನ್ ಎಂಬ ಬಣ್ಣ ಜೀವಕೋಶದ ವರ್ಣತಂತುಗಳನ್ನು ಕಾಣುವಂತೆ ಮಾಡುತ್ತದೆ ಎಂಬುದನ್ನು ಕಂಡುಕೊಂಡರು. ಇದರ ಪರಿಣಾಮವಾಗಿ ಡೌನ್ ಸಿಂಡ್ರೋಮ್‌ನಂತಹ ಕಾಯಿಲೆಗಳ ಆನುವಂಶಿಕ ಸಂಬಂಧಗಳನ್ನು ಕಂಡುಕೊಳ್ಳಲು, ಆನುವಂಶಿಕ ರೋಗಗಳ ತಪಾಸಣೆ ಹಾಗೂ ಮಗು ಗರ್ಭದಲ್ಲಿರುವಾಗಲೇ ಆಮ್ನಿಯೋಸೆಂಟೆಸಿಸ್ ಮೂಲಕ ಆನುವಂಶಿಕ ರೋಗಗಳ ಪರೀಕ್ಷೆ ಮುಂತಾದುವುಗಳು ಸಾಧ್ಯವಾದವು.
1954: ಹೀಲಾ ಜೀವಕೋಶಗಳು ಅತ್ಯಂತ ಬಲಿಷ್ಠವಾಗಿದ್ದುದರಿಂದ ಅಂಗಾಂಶದಲ್ಲಿನ ಒಂದೇ ಒಂದು ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ವೃದ್ಧಿಸಿ ಒಂದು ಪ್ರತ್ಯೇಕ ಜೀವಕೋಶ ಸಾಲನ್ನೇ ನಿರ್ಮಿಸುವುದು ಸಾಧ್ಯವಾಯಿತು. ಒಂದು ಪ್ರತ್ಯೇಕ ಜೀವಕೋಶವನ್ನು ಪ್ರತ್ಯೇಕಿಸಿ ಅದನ್ನು ಜೀವಂತವಾಗಿರಿಸುವುದೇ ಕ್ಲೋನಿಂಗ್ ಮತ್ತು ಪ್ರನಾಳ ನಳಿಕೆ ಫಲವಂತಿಕೆಯ ಮೂಲಭೂತ ತಂತ್ರವಾಗಿದೆ. ಇದರಿಂದಾಗಿ ಪ್ರಾಣಿಗಳ ಕ್ಲೋನಿಂಗ್, ಜೀನ್ ಥೆರಪಿ, ಪ್ರನಾಳ ನಳಿಕೆ ಫಲವಂತಿಕೆ ಮತ್ತು ಸ್ಟೆಮ್ ಜೀವಕೋಶಗಳ ಪ್ರತ್ಯೇಕಿಸುವಿಕೆ ಸಾಧ್ಯವಾಗಿದೆ.
ಇದೇ ವರ್ಷ ಮೈಕ್ರೋಬಯಲಾಜಿಕಲ್ಸ್ ಅಸೋಸಿಯೇಟ್ಸ್ ಕಂಪೆನಿಯು ಹೀಲಾ ಜೀವಕೋಶಗಳನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟಮಾಡಲು ಪ್ರಾರಂಭಿಸಿತು.
1960: ಸೋವಿಯತ್ ಅಂತರಿಕ್ಷ ನೌಕೆಯಲ್ಲಿ ಹೀಲಾ ಜೀವಕೋಶಗಳು ಯಾವೊಬ್ಬ ಮಾನವನೂ ಅಂತರಿಕ್ಷಕ್ಕೆ ಕಾಲಿರಿಸುವ ಮೊದಲು ಮಾನವನ ಜೀವಕೋಶಗಳ ಮೇಲೆ ಶೂನ್ಯ ಗುರುತ್ವಾಕರ್ಷಣೆಯ ಪ್ರಭಾವದ ಅಧ್ಯಯನಕ್ಕಾಗಿ ಅಂತರಿಕ್ಷಕ್ಕೆ ಹೋಗಿಬಂದವು. ಅದಾದ ನಂತರ ನ್ಯಾಸಾ ಸಹ ತನ್ನ ಮೊಟ್ಟಮೊದಲ ಮಾನವ ಅಂತರಿಕ್ಷ ಯಾನದಲ್ಲಿ ಹೀಲಾ ಜೀವಕೋಶಗಳನ್ನೂ ಸೇರಿಸಿದ್ದರು ಹಾಗೂ ಅಂತರಿಕ್ಷದಲ್ಲಿ ಕ್ಯಾನ್ಸರ್ ಜೀವಕೋಶಗಳು ವೇಗವಾಗಿ ವೃದ್ಧಿಸುತ್ತವೆ ಎಂಬುದನ್ನು ಕಂಡುಕೊಂಡರು.
1965: ಹೀಲಾ ಜೀವಕೋಶಗಳನ್ನು ಇಲಿಯ ಜೀವಕೋಶಗಳೊಂದಿಗೆ ಸಂಯೋಜಿಸಿ ಮೊಟ್ಟಮೊದಲ ಅಂತರಪ್ರಭೇದ ಹೈಬ್ರಿಡ್ ನಿರ್ಮಿಸಲಾಯಿತು. ಇದರಿಂದಾಗಿ ಮಾನವ ವಂಶವಾಹಿಗಳ ಮ್ಯಾಪಿಂಗ್ ಸಾಧ್ಯವಾಗಿದೆ. ಇದರ ಪರಿಣಾಮವಾಗಿ ರಕ್ತದ ವಿಧದ ಗುರುತಿಸುವಿಕೆ, ಕ್ಯಾನ್ಸರ್ ಔಷಧ ಹರ್ಸೆಪ್ಟಿನ್‌ನ ಅಭಿವೃದ್ಧಿ ಸಾಧ್ಯವಾಯಿತು.
1966: ಕ್ಯಾನ್ಸರ್ ಹೇಗೆ ಹರಡುತ್ತದೆಂಬುದನ್ನು ಪರೀಕ್ಷಿಸಲು ವಿಜ್ಞಾನಿಯೊಬ್ಬ ಹಲವಾರು ವ್ಯಕ್ತಿಗಳಿಗೆ ಅವರಿಗೆ ತಿಳಿಸದೆಯೇ ಹೀಲಾ ಜೀವಕೋಶಗಳ ಚುಚ್ಚುಮದ್ದನ್ನು ನೀಡಿದನಂತರ ರಾಷ್ಟ್ರಮಟ್ಟದ ತನಿಖೆ ನಡೆದು ಅದಾದನಂತರ ವೈದ್ಯಕೀಯ ಪರಿಶೀಲನಾ ಮಂಡಳಿಗಳು ಸ್ಥಾಪನೆಗೊಂಡವು ಹಾಗೂ ರೋಗಿಗಳಿಂದ ಸಮ್ಮತಿ ಪಡೆಯುವ ಪದ್ಧತಿ ಜಾರಿಗೆ ಬಂದಿತು.
1973: ರೋಗಕಾರಕ ಸಾಲ್ಮೊನೆಲ್ಲಾ ಸೂಕ್ಷ್ಮಜೀವಿಯ ಸೋಕುಕಾರಕತೆ ಮತ್ತು ಮಾನವ ಜೀವಕೋಶದೊಳಗಿನ ಅವುಗಳ ನಡತೆಯ ಬಗ್ಗೆ ಅಧ್ಯಯನಕ್ಕೆ ಹೀಲಾ ಜೀವಕೋಶಗಳನ್ನು ಬಳಸಲಾಯಿತು.
1984: ಮಾನವ ಪ್ಯಾಪಿಲ್ಲೋಮ ವೈರಸ್ ಕ್ಯಾನ್ಸರ್ ಉಂಟುಮಾಡುತ್ತದೆ ಎನ್ನುವುದನ್ನು ರುಜುವಾತು ಮಾಡಲು ಜರ್ಮನ್ ವಿಜ್ಞಾನಿಯೊಬ್ಬ ಹೀಲಾ ಜೀವಕೋಶಗಳನ್ನು ಬಳಸಿಕೊಂಡರು. ಅವರ ಈ ಆವಿಷ್ಕಾರಕ್ಕಾಗಿ ಅವರಿಗೆ ನೋಬೆಲ್ ಬಹುಮಾನ ಲಭಿಸಿತು.
ಆನಂತರ ಮಾನವ ಪ್ಯಾಪಿಲ್ಲೋಮ ವೈರಸ್ ಲಸಿಕೆಯನ್ನು ಕಂಡುಹಿಡಿಯಲಾಗಿದೆ.
1986: ಎಚ್.ಐ.ವಿ. ಅಥವಾ ಏಡ್ಸ್ ವೈರಸ್ ಸೋಂಕು ವಿಧಾನದ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳನ್ನು ಬಳಸಲಾಯಿತು.
1989: ಹೀಲಾ ಜೀವಕೋಶಗಳು ಟೆಲೋಮೆರೇಸ್ ಎಂಬ ಕಿಣ್ವವನ್ನು ಹೊಂದಿವೆ ಹಾಗೂ ಅದರಿಂದಾಗಿಯೇ ಅವುಗಳಿಗೆ ಸಾವಿಲ್ಲ ಎಂದು ಯೇಲ್ ಸಂಶೋಧಕನೊಬ್ಬ ಕಂಡುಹಿಡಿದ. ಅದರಿಂದಾಗಿ ದೀರ್ಘಾಯಸ್ಸಿನ ಬಗೆಗಿನ ಸಂಶೋಧನೆಗಳು ಪ್ರಾರಂಭವಾದವು ಹಾಗೂ ಕ್ಯಾನ್ಸರ್ ಚಿಕಿತ್ಸೆಗಾಗಿ ಟೆಲೋಮೆರೇಸ್ ಪ್ರತಿಬಂಧಕಗಳ ಸಂಶೋಧನೆ ಪ್ರಾರಂಭವಾಯಿತು.
1993: ಕ್ಷಯರೋಗ ಉಂಟುಮಾಡುವ ಬ್ಯಾಕ್ಟೀರಿಯಾಗಳ ಸೋಂಕು ಪ್ರಕ್ರಿಯೆಯ ಅಧ್ಯಯನಕ್ಕಾಗಿ ಹೀಲಾ ಜೀವಕೋಶಗಳಿಗೆ ಸೋಂಕುಂಟುಮಾಡಿ ಅಧ್ಯಯನ ಮಾಡಲಾಯಿತು.
2005: ಹೀಲಾ ಜೀವಕೋಶಗಳ ಮೇಲೆ ಕಬ್ಬಿಣದ ನ್ಯಾನೊ ತಂತಿಗಳನ್ನು ಸೇರಿಸುವುದು ಮತ್ತು ಅವು ಹೇಗೆ ಸಿಲಿಕಾ ಆವೃತ ನ್ಯಾನೊ ಕಣಗಳನ್ನು ಹೇಗೆ ಹೀರಿಕೊಳ್ಳುತ್ತವೆ ಇವೇ ಮುಂತಾದ ನ್ಯಾನೊತಂತ್ರಜ್ಞಾನದ ಪ್ರಯೋಗಗಳು ಆರಂಭವಾದವು.
ಇ- ಮೇಲ್: j.balakrishna@gmail.com
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)


