Translate

ಶನಿವಾರ, ಮೇ 21, 2011

ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

ಕಾಲಗರ್ಭದ ಕತ್ತಲ ಸಾಮ್ರಾಜ್ಯದ ಅದ್ಭುತ ಮೀನು: ಸೀಲಾಕ್ಯಾಂತ್

5ನೇ ಮೇ 2011ರ `ಸುಧಾ' ವಾರಪತ್ರಿಕೆಯಲ್ಲಿ ಸೀಲಾಕ್ಯಾಂತ್ ಬಗೆಗಿನ ಲೇಖನ ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ


ಡಿಸೆಂಬರ್ ೨೨, ೧೯೩೮ರಂದು ದಕ್ಷಿಣ ಆಫ್ರಿಕಾದ ಸಣ್ಣ ಮ್ಯೂಸಿಯಂನ ಕ್ಯೂರೇಟರ್ ಮಾರ್ಜೊರಿ ಕರ್ಟ್ನೆ ಲ್ಯಾಟಿಮರ್‌ಳಿಗೆ ಕ್ಯಾಪ್ಟನ್ ಹೆಂಡ್ರಿಕ್ ಗೂಸೆನ್‌ನಿಂದ ಕರೆಯೊಂದು ಬಂದಿತು. ಆತ ಮೀನು ಹಿಡಿದಾಗ ತನ್ನ ಬಲೆಯಲ್ಲಿ ಸಿಕ್ಕ ಮೀನುಗಳಲ್ಲಿ ಅಪರೂಪದ ಮೀನುಗಳಿದ್ದಲ್ಲಿ ಆಕೆಗೆ ಹೇಳಿಕಳುಹಿಸುತ್ತಿದ್ದ ಹಾಗೂ ತನ್ನ ಮ್ಯೂಸಿಯಂನ ಸಂಗ್ರಹಕ್ಕೆಂದು ಅಂಥವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಳು. ತಾನು ಯಾವ ಜೀವಿಯ ಬಗ್ಗೆ ಕೇಳುತ್ತೇನೆಯೋ ಅದಕ್ಕೆ ತನ್ನದೇ ಹೆಸರಿಡುತ್ತಾರೆಂದು ಆಕೆ ಊಹಿಸಿಯೂ ಇರಲಿಲ್ಲ. ಮೀನುಗಾರರಿಗೆ ಒಂದು ವಿಚಿತ್ರ ಮೀನು ಸಿಕ್ಕಿದೆಯೆಂದೂ ಆಕೆ ಕೂಡಲೇ ಬರಬೇಕೆಂದು ಕರೆ ತಿಳಿಸಿತು. ತಕ್ಷಣ ಹೊರಟ ಆಕೆಗೆ ಅಲ್ಲಿ ಒಂದೂವರೆ ಮೀಟರ್ ಉದ್ದವಿರುವ ನೀಲಿ ಬಣ್ಣದ ಹಾಗೂ ಬೆಳ್ಳಿಯ ಗುರುತುಗಳನ್ನು ಹೊಂದಿದ್ದ, ಆಕೆ ಎಂದೂ ಕಂಡಿರದ ಮೀನೊಂದು ಕಾದಿತ್ತು. ಆಕೆಗೆ ಅದನ್ನು ಗುರುತಿಸಲಾಗಲಿಲ್ಲ. ಆದರೆ ಆಕೆಯೇ ಹೇಳಿದಂತೆ ಅದು ಆಕೆ ಕಂಡ ಅತ್ಯಂತ ಸುಂದರ ಮೀನಾಗಿತ್ತು. ಅದು ಆಕೆ ಎಂದೂ ಕಂಡಿರದ ಮೀನಾಗಿದ್ದುದರಿಂದ ಅದನ್ನು ಆಕೆ ಕೂಡಲೆ ತನ್ನ ಮ್ಯೂಸಿಯಂಗೆ ಕೊಂಡೊಯ್ಯಲು ನಿರ್ಧರಿಸಿದಳು. ಐದೂವರೆ ಅಡಿ ಉದ್ದದ ಹಾಗೂ ವಾಸನೆ ಹೊಡೆಯುತ್ತಿದ್ದ ಮೀನನ್ನು ಕೊಂಡೊಯ್ಯಲು ಟ್ಯಾಕ್ಸಿಯವ ಒಪ್ಪಲಿಲ್ಲ. ಆತನನ್ನು ಪುಸಲಾಯಿಸಿ ಕೊನೆಗೂ ಅಕೆ ಅದನ್ನು ಮ್ಯೂಸಿಯಂಗೆ ಕೊಂಡೊಯ್ದಳು.

ಮಾರ್ಜೊರಿ ಕರ್ಟ್ನೆ ಲ್ಯಾಟಿಮರ್ ಮತ್ತು ಆಕೆ ಪ್ರೊಫೆಸರ್ ಸ್ಮಿತ್‌ರವರಿಗೆ ಬರೆದು ಕಳುಹಿಸಿದ ಚಿತ್ರ.

ಅಲ್ಲಿ ತನ್ನಲ್ಲಿದ್ದ ಕೆಲವೇ ಆಕರ ಗ್ರಂಥಗಳನ್ನು ಪರಾಮರ್ಶಿಸಿದಾಗ ತಾನೇ ಸ್ವತಃ ನಂಬಲಾಗದ ತೀರ್ಮಾನಕ್ಕೆ ಆಕೆ ಬರಬೇಕಾಯಿತು. ಆಕೆ ತಂದಿದ್ದ ಮೀನು ಒಂದು ಪ್ರಾಗೈತಿಹಾಸಿಕ ಮೀನನ್ನು ಹೋಲುತ್ತಿತ್ತು. ಆಕೆ ಮೀನಿನ ಒಂದು ಕರಡು ಚಿತ್ರ ರಚಿಸಿ ಅದನ್ನು ದಕ್ಷಿಣ ಆಫ್ರಿಕಾದ ರೋಡ್ಸ್ ವಿಶ್ವವಿದ್ಯಾನಿಲಯದ ರಾಸಾಯನಶಾಸ್ತ್ರ ಪ್ರೊಫೆಸರ್ ಜೆ.ಎಲ್.ಬಿ.ಸ್ಮಿತ್‌ರವರಿಗೆ ಕಳುಹಿಸಿದಳು. ಪ್ರೊಫೆಸರ್ ಜೆ.ಎಲ್.ಬಿ.ಸ್ಮಿತ್ ರಾಸಾಯನಶಾಸ್ತ್ರಜ್ಞರಾದರೂ ಮೀನುಗಳ ಬಗೆಗೆ ಅಪಾರ ಆಸಕ್ತಿ ಹೊಂದಿದ್ದರು. ಆದರೆ ಆತ ಕ್ರಿಸ್‌ಮಸ್ ರಜೆಯಿದ್ದುದರಿಂದ ಈಸ್ಟ್ ಲಂಡನ್‌ಗೆ ಹೋಗಿದ್ದರು.

ಜನವರಿ ೩, ೧೯೩೯ರಂದು ರಜೆಯಿಂದ ಹಿಂದಿರುಗಿದ ಸ್ಮಿತ್ ಆ ಮೀನಿನ ಚಿತ್ರವನ್ನು ನೋಡಿದರು. ಆ ಮೀನನ್ನು ಎಂದೂ ಸ್ವತಃ ನೋಡಿರದ, ಅದರ ಪಳೆಯುಳಿಕೆಗಳನ್ನು ಮಾತ್ರ ನೋಡಿದ್ದ ಪ್ರೊಫೆಸರ್ ಸ್ಮಿತ್ ಕೂಡಲೇ ಅದನ್ನು ಸೀಲಾಕ್ಯಾಂತ್ ಎಂದು ಗುರುತಿಸಿದರು. ತಕ್ಷಣವೇ ಆ ಮೀನಿನ ಅಸ್ಥಿಪಂಜರ ಹಾಗೂ ಕಿವಿರುಗಳನ್ನು ಸುರಕ್ಷಿತವಾಗಿಡುವಂತೆ ತಾರು ಕಳುಹಿಸಿದರು. ಆದರೆ ಆ ಮೀನನ್ನು ಪ್ರದರ್ಶನಕ್ಕೆ ಸಂಗ್ರಹಿಸಿಡುವ ಭರದಲ್ಲಿ ಅದರ ಒಳಾಂಗಗಳನ್ನು ತೆಗೆದೆಸೆಯಲಾಗಿತ್ತು. ತಾರು ತಲುಪಿದ ನಂತರ ಮ್ಯೂಸಿಯಂ ಮತ್ತು ನಗರದ ಕಸದ ತೊಟ್ಟಿಗಳನ್ನು ಹುಡುಕಿದರೂ ಅವು ಸಿಕ್ಕಲಿಲ್ಲ. ತೆಗೆದ ಕೆಲವು ಫೋಟೋಗಳು ಸಹ ಹಾಳಾಗಿದ್ದವು.

ನಂತರ ಪ್ರೊಫೆಸರ್ ಸ್ಮಿತ್ ಹೇಳಿದಂತೆ ಸೀಲಾಕ್ಯಾಂತ್‌ನ ಆವಿಷ್ಕಾರ ಇಡೀ ವಿಜ್ಞಾನ ಸಮುದಾಯವನ್ನೇ ಬೆಚ್ಚಿಬೀಳಿಸುವಂಥ ಸುದ್ದಿಯಾಗಿತ್ತು, ಸತ್ತ ವ್ಯಕ್ತಿ ಪ್ರೇತಾತ್ಮವಾಗಿ ಎದ್ದು ಬಂದ ಹಾಗಿತ್ತು; ಶತಮಾನದ ಅತ್ಯಂತ ಪ್ರಮುಖ ಪ್ರಾಣಿವಿಜ್ಞಾನಶಾಸ್ತ್ರದ ಆವಿಷ್ಕಾರವಾಗಿತ್ತು. ಏಕೆಂದರೆ ಆ ಮೀನು ನಶಿಸಿ ಹೋಗಿ ಐದು ಕೋಟಿ ವರ್ಷಗಳಾಗಿವೆಯೆಂದು ನಂಬಲಾಗಿತ್ತು. ಪಶ್ಚಿಮ ಜರ್ಮನಿಯಲ್ಲಿ ಸಿಕ್ಕ ಸೀಲಾಕ್ಯಾಂತ್‌ನ ಪಳೆಯುಳಿಕೆಯೊಂದು ೧೪ ಕೋಟಿ ವರ್ಷಗಳಷ್ಟು ಹಿಂದಿನದಾಗಿತ್ತು. ಸಿಕ್ಕಿರುವ ಪಳೆಯುಳಿಕೆಗಳಲ್ಲಿ ಇತ್ತೀಚಿನದೆಂದರೂ ಆರು ಕೋಟಿ ವರ್ಷಗಳಷ್ಟು ಹಿಂದಿನದು! ಅಷ್ಟೊಂದು ಪ್ರಾಚೀನ ಕಾಲದ ಜೀವಿಯೊಂದು ಇನ್ನೂ ಜೀವಂತವಾಗಿದೆಯೆನ್ನುವ ವಿಷಯ ವಿಜ್ಞಾನಿಗಳಿಗೆ ಊಹಿಸಲೂ ಸಾಧ್ಯವಾಗದಾಗಿತ್ತು. ಆ ಮೀನನ್ನು ಮೊದಲಿಗೆ ಕಂಡುಹಿಡಿದ ಲ್ಯಾಟಿಮರ್‌ಳ ಹಾಗೂ ಅದು ದೊರಕಿದ ಚಾಲುಮ್ನಾ ನದಿಯ ನೆನಪಿಗೆ ಆ ಮೀನನ್ನು ಲ್ಯಾಟಿಮೆರಿಯಾ ಚಾಲುಮ್ನೇ ಎಂದು ಕರೆದರು.

ಸ್ಥಳೀಯ ವೃತ್ತಪತ್ರಿಕೆಯೊಂದು ಅದರ ಒಂದೇ ಫೋಟೊ ತೆಗೆದು ಪ್ರಕಟಿಸಿದ ನಂತರ ಅದು ಜಗತ್ತಿನಾದ್ಯಂತ ಪ್ರಕಟವಾಯಿತು ಹಾಗೂ ಸಣ್ಣ ಮ್ಯೂಸಿಯಂನ ಕ್ಯೂರೇಟರ್ ಲ್ಯಾಟಿಮರ್ ಹಾಗೂ ಪ್ರೊಫೆಸರ್ ಜೆ.ಎಲ್.ಬಿ. ಸ್ಮಿತ್‌ರನ್ನು ವಿಶ್ವವಿಖ್ಯಾತರನ್ನಾಗಿ ಮಾಡಿತು. ಅಲ್ಲಿಯೇ ಅದರ ಪ್ರದರ್ಶನ ಏರ್ಪಡಿಸಿದಾಗ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡಿದರು.

ಲ್ಯಾಟಿಮರ್‌ಳಿಂದ ಸುದ್ದಿ ತಿಳಿದು ಸ್ಮಿತ್ ಅಲ್ಲಿಗೆ ಹೋಗುವಷ್ಟರಲ್ಲಿ ಸೀಲಾಕ್ಯಾಂತ್‌ನ ಮೆದು ಭಾಗಗಳೆಲ್ಲಾ ಕೊಳೆತು ಬಹಳಷ್ಟು ಹಾಳಾಗಿದ್ದುದರಿಂದ ಸ್ಮಿತ್ ಕೂಡಲೆ ಮತ್ತೊಂದು ಸೀಲಾಕ್ಯಾಂತ್ ಹುಡುಕುವ ತಯಾರಿ ನಡೆಸಿದರು. ಸೀಲಾಕ್ಯಾಂತ್ ಹಿಡಿದುಕೊಟ್ಟವರಿಗೆ ನೂರು ಪೌಂಡ್ ಹಣವನ್ನು ಬಹುಮಾನವನ್ನಾಗಿ ಕೊಡುವುದಾಗಿ ಇಂಗ್ಲಿಷ್, ಪೋರ್ಚುಗೀಸ್ ಹಾಗೂ ಫ್ರೆಂಚ್ ಭಾಷೆಯಲ್ಲಿ ಸಾವಿರಾರು ಕರಪತ್ರಗಳನ್ನು ಪ್ರಕಟಿಸಿ ಅವುಗಳನ್ನು ಪಶ್ಚಿಮ ಆಫ್ರಿಕದ ಕರಾವಳಿಯ ಊರುಗಳಲ್ಲಿ ಹಾಗೂ ಸುತ್ತಮುತ್ತಲ ದ್ವೀಪಗಳಲ್ಲಿ ಹಂಚಿದರು.

ಸೀಲಾಕ್ಯಾಂತ್ ಹುಡುಕಿ ಕೊಟ್ಟವರಿಗೆ ನೂರು ಪೌಂಡ್ ಬಹುಮಾನ ನೀಡುವುದಾಗಿ ಪ್ರೊಫೆಸರ್ ಸ್ಮಿತ್ ಹೊರಡಿಸಿದ ಕರಪತ್ರ

ನಂತರ ೧೪ ವರ್ಷಗಳವರೆಗೂ ಅದರ ಸುದ್ದಿಯೇ ಇರಲಿಲ್ಲ. ಈ ಸಮಯದಲ್ಲಿಯೇ ಅದು ಸಮುದ್ರ ತಳದಲ್ಲಿ ವಾಸಿಸುವ ಮೀನು ಹಾಗೂ ಅದರಿಂದಲೇ ಯಾರಿಗೂ ಅದು ಕಂಡುಬರುತ್ತಿಲ್ಲ ಎಂದು ಪ್ರಚಾರವಾಗತೊಡಗಿತು. ಯೂರೋಪಿನ ಹಲವಾರು ದೇಶಗಳು ಸಮುದ್ರ ತಳದಲ್ಲಿ ಸೀಲಾಕ್ಯಾಂತನ್ನು ಹುಡುಕತೊಡಗಿದರು.

ಜಾಂಜಿಬಾರ್, ಮಡಗಾಸ್ಕರ್ ಮತ್ತು ಕೊಮೊರೊ ದ್ವೀಪಗಳ ನಡುವೆ ಹಡಗೊಂದನ್ನು ನಡೆಸುತ್ತಿದ್ದ ಎರಿಕ್ ಹಂಟ್ ಎಂಬ ಬ್ರಿಟಿಷ್ ಕ್ಯಾಪ್ಟನ್ ಒಮ್ಮೆ ಜಾಂಜಿಬಾರ್‌ನಲ್ಲಿ ಸ್ಮಿತ್‌ರವರ ಸೀಲಾಕ್ಯಾಂತ್ ಬಗೆಗಿನ ಉಪನ್ಯಾಸವನ್ನು ಕೇಳಿ ಆತನೂ ಸಹ ಸೀಲಾಕ್ಯಾಂತ್ ಬಗೆಗಿನ ಆಸಕ್ತಿಯಿಂದ ತನ್ನ ಯಾನದ ಸಮಯದಲ್ಲಿ ಅದಕ್ಕಾಗಿ ಕಣ್ಣಲ್ಲಿ ಕಣ್ಣಿಟ್ಟು ಹುಡುಕತೊಡಗಿದ. ತಾನೇ ಸ್ವತಃ ಸ್ಮಿತ್‌ರವರ ಕರಪತ್ರಗಳನ್ನು ತಾನು ಹೋದಲ್ಲೆಲ್ಲಾ ಹಂಚತೊಡಗಿದ.

ಅದರ ಪ್ರತಿಫಲವೆಂಬಂತೆ ೧೯೫೨ರ ಡಿಸೆಂಬರ್ ೨೧ರಂದು, ಮೊದಲ ಜೀವಂತ ಸೀಲಾಕ್ಯಾಂತ್ ಕಂಡ ಹದಿನಾಲ್ಕು ವರ್ಷಗಳ ನಂತರ ಕ್ಯಾಪ್ಟನ್ ಹಂಟ್ ಕೊಮೊರೊ ದ್ವೀಪವಾದ ಅಂಜುವಾನ್‌ನ ಬಂದರಿಗೆ ಹಿಂದಿರುಗಿದಾಗ ಇಬ್ಬರು ವ್ಯಕ್ತಿಗಳು ದೊಡ್ಡ ಕಟ್ಟೊಂದನ್ನು ಹೊತ್ತು ತಂದರು. ಅವರಲ್ಲಿ ಒಬ್ಬಾತ ಅಹ್ಮದಿ ಅಬ್ದಲ್ಲಾ ಎಂಬ ಬೆಸ್ತ ಹಾಗೂ ಮತ್ತೊಬ್ಬಾತ ಅಫಾನೆ ಮೊಹಮ್ಮದ್ ಎಂಬ ಶಾಲಾ ಅಧ್ಯಾಪಕ. ಆ ಪ್ರದೇಶಗಳಲ್ಲಿ ಆಗಾಗ ಅಲ್ಲಿನ ಬೆಸ್ತರ ಬಲೆಗಳಲ್ಲಿ ಸ್ಥಳೀಯರು 'ಮಾಮೆ' ಅಥವಾ 'ಗೊಂಬೆಸ್ಸಾ' ಎಂದು ಕರೆಯುವ ಮೀನು ಸಿಕ್ಕಿಬೀಳುತ್ತಿತ್ತು. ಈ ಸಾರಿ ಆ ಮೀನನ್ನು ಕಂಡ ಶಾಲಾ ಅಧ್ಯಾಪಕನಿಗೆ ಅದು ಕ್ಯಾಪ್ಟನ್ ಹಂಟ್ ಅಂಟಿಸಿದ್ದ ಕರಪತ್ರದಲ್ಲಿನ ಸೀಲಾಕ್ಯಾಂತ್ ಎಂಬುದು ತಿಳಿದು ಅದನ್ನು ಇಬ್ಬರೂ ಕ್ಯಾಪ್ಟನ್ ಬಳಿಗೆ ಹೊತ್ತು ತಂದಿದ್ದರು.


ಕ್ಯಾಪ್ಟನ್ ಹಂಟ್ ಅದನ್ನು ಸಂರಕ್ಷಿಸಿಡಲು ಅಲ್ಲಿ ಬೇರೇ ವ್ಯವಸ್ಥೆ ಇಲ್ಲದಿದ್ದುದರಿಂದ ಉಪ್ಪಿನಲ್ಲಿ ಇಟ್ಟು ಮಯೋಟ್ಟೆ ಎಂಬ ಕೊಮೊರನ್ ದ್ವೀಪಕ್ಕೆ ಕೊಂಡೊಯ್ದು ಅಲ್ಲಿ ಆಸ್ಪತ್ರೆಯೊಂದರಿಂದ ಫಾರ್ಮಲಿನ್ ಪಡೆದು ಅದರಲ್ಲಿ ಸಂರಕ್ಷಿಸಿಟ್ಟ ಹಾಗೂ ಸ್ಮಿತ್‌ರವರಿಗೆ ತಾರು ಕಳುಹಿಸಿ ಕೂಡಲೇ ಬರಬೇಕೆಂದು ತಿಳಿಸಿದ. ಪ್ರೊಫೆಸರ್ ಸ್ಮಿತ್ ಕೊಮೊರೊ ದ್ವೀಪಗಳಿಂದ ಸುಮಾರು ೨೫೦೦ ಕಿ.ಮೀ.ಗಳ ದೂರದಲ್ಲಿದ್ದರು. ಅವರು ಕೂಡಲೇ ಹೊರಡಬೇಕಿತ್ತು. ಈಗ ಬಿಟ್ಟರೆ ಮತ್ತೊಮ್ಮೆ ಅವಕಾಶ ಸಿಗುತ್ತದೆಯೋ ಇಲ್ಲವೋ! ಅಲ್ಲಿಗೆ ವಿಮಾನ ಯಾನದ ವ್ಯವಸ್ಥೆಯೂ ಇರಲಿಲ್ಲ. ಕೂತಲ್ಲೇ ಚಡಪಡಿಸಿ ಕೈ ಕೈ ಹಿಸುಕಿಕೊಂಡರು. ಕೊನೆಗೆ ದಕ್ಷಿಣ ಆಫ್ರಿಕಾದ ಪ್ರಧಾನಮಂತ್ರಿ ಡೇನಿಯಲ್ ಮಲಾನ್‌ರ ಮೊರೆ ಹೊಕ್ಕು ಅವರಿಗೆ ಎಲ್ಲಾ ವಿವರಿಸಿ ಹೇಳಿದರು; ಕೆಲದಿನಗಳ ಕಾಲ ವಾಯುಪಡೆಯ ವಿಮಾನವನ್ನು ಕೊಡಲು ಕೇಳಿಕೊಂಡರು. ಅವರು ಸಮ್ಮತಿಸಿ ಡಿಸಿ೩ ಡಕೋಟ ವಿಮಾನದ ವ್ಯವಸ್ಥೆ ಮಾಡಿಕೊಟ್ಟರು. ಸ್ಮಿತ್ ೩೨ ಗಂಟೆಗಳೊಳಗೆ ಕೊಮೊರೊ ದ್ವೀಪ ಸಮೂಹ ತಲುಪಿದರು. ಸ್ಮಿತ್ ವಿಮಾನದಲ್ಲಿ ಹಾರಿದ್ದು, ಸೀಲಾಕ್ಯಾಂತ್ ತಂದಿದ್ದು ಪ್ರಪಂಚದ ಪತ್ರಿಕೆಗಳ ಮುಖಪುಟಗಳನ್ನಲಂಕರಿಸಿತ್ತು. ಮೀನನ್ನು ತರುವಾಗ ಸ್ಮಿತ್ ಅದನ್ನು ಒಂದರೆಕ್ಷಣವೂ ಬಿಟ್ಟಿರುತ್ತಿರಲಿಲ್ಲ. ರಾತ್ರಿ ಮಲಗುವಾಗಲೂ ಮೀನಿದ್ದ ಪೆಟ್ಟಿಗೆ ಅವರ ಪಕ್ಕದಲ್ಲೇ ಇರಬೇಕಾಗಿತ್ತು.


ಕ್ಯಾಪ್ಟನ್ ಎರಿಕ್ ಹಂಟ್ ಆ ಮೀನನ್ನು ಹಿಡಿದ ಬೆಸ್ತ ಅಹ್ಮದಿ ಅಬ್ದಲ್ಲಾ ಹಾಗೂ ಶಾಲಾ ಅಧ್ಯಾಪಕ ಅಫಾನೆ ಮೊಹಮ್ಮದ್‌ರಿಗೆ ನೂರು ಪೌಂಡ್ ಬಹುಮಾನದ ಹಣ ಕೊಡಿಸಿದ. ಅದಾದ ನಂತರ ಕ್ಯಾಪ್ಟನ್ ಎರಿಕ್ ಹಂಟ್‌ನ ಹಡಗು ಅಪಘಾತಕ್ಕೀಡಾಗಿ ಸಮುದ್ರದಲ್ಲಿ ಆತ ನಾಪತ್ತೆಯಾದ. ಆತನ ದೇಹ ಸಿಗಲೇ ಇಲ್ಲ. ಪ್ರೊಫೆಸರ್ ಸ್ಮಿತ್ ೧೯೬೮ರಲ್ಲಿ ದೀರ್ಘಕಾಲದ ಕಾಯಿಲೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ಮಾರ್ಜೊರಿ ಕರ್ಟ್ನೆ ಲ್ಯಾಟಿಮರ್ ತಮ್ಮ ೯೭ನೇ ವಯಸ್ಸಿನಲ್ಲಿ ೧೭ರ ಮೇ ೨೦೦೪ರಂದು ತೀರಿಕೊಂಡರು. ಆಕೆ ತಮ್ಮ ಜೀವನ ಪರ್ಯಂತ ಅವಿವಾಹಿತಳಾಗಿಯೇ ಉಳಿದಿದ್ದರು.

ಸೀಲಾಕ್ಯಾಂತ್

ಸೀಲಾಕ್ಯಾಂತ್ ಒಂದು ಮೀನಿನ ಪ್ರತ್ಯೇಕ ವರ್ಗ ಹಾಗೂ ಈ ಭೂಮಿಯ ಮೇಲೆ ೪೧೦ ದಶಲಕ್ಷ ವರ್ಷಗಳ ಹಿಂದೆ ಕಾಣಿಸಿಕೊಂಡ ಅದು ನೂರಾರು ಪ್ರಭೇದಗಳನ್ನು ಒಳಗೊಂಡಿತ್ತು. ಆದರೆ ೬೫ ದಶಲಕ್ಷ ವರ್ಷಗಳ ಹಿಂದೆ ಡೈನೋಸಾರ್‌ಗಳು ನಿರ್ನಾಮವಾದ ಅವಧಿಯ ಸಮಯದಿಂದಲೇ ಅವುಗಳ ಪಳೆಯುಳಿಕೆಗಳ ದಾಖಲೆಗಳು ಕಣ್ಮರೆಯಾಗಿವೆ. ಹಾಗಾಗಿ ಸೀಲಾಕ್ಯಾಂತ್‌ಗಳ ಸಂತತಿ ಸಂಪೂರ್ಣವಾಗಿ ನಾಮಾವಶೇಷವಾಗಿದೆ ಎಂದು ನಂಬಲಾಗಿತ್ತು.



ವರ್ಗ ಸೀಲಾಕ್ಯಾಂತಸ್ ಎಂದರೆ 'ಟೊಳ್ಳು ಬೆನ್ನುಹುರಿ' ಎಂದರ್ಥ. ಇತರ ಯಾವುದೇ ಮೀನುಗಳಿಗೆ ಇಲ್ಲದಿರುವ ಈ ಲಕ್ಷಣ ಈಗ ನಿರ್ನಾಮವಾಗಿರುವ ಹಾಗೂ ಈಗ ಜೀವಂತವಿರುವ ಸೀಲಾಕ್ಯಾಂತ್‌ಗಳಲ್ಲಿಯೂ ಕಂಡುಬರುತ್ತದೆ. ತನ್ನ ಪೂರ್ವಜ ಸಂತತಿಯ ಎಲ್ಲಾ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಂಡು ತನ್ನ ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿರುವ ಜೀವಿಯ ಅತ್ಯುತ್ತಮ ಉದಾಹರಣೆ ಸೀಲಾಕ್ಯಾಂತ್ ಆಗಿದೆ. ಜೀವವಿಕಾಸದ ಹಾದಿಯಲ್ಲಿ ಎಲ್ಲ ಜೀವಿಗಳಲ್ಲೂ ಪ್ರೊಟೀನುಗಳಲ್ಲಿ ಬದಲಾವಣೆಯಾಗಿ ವಿಕಾಸ ಪ್ರಕ್ರಿಯೆ ಮುನ್ನಡೆಯುತ್ತದೆ. ಆದರೆ ಸೀಲಾಕ್ಯಾಂತ್‌ನಲ್ಲಿ ಆ ಪ್ರಕ್ರಿಯೆಯೇ ಸ್ಥಾಯಿಯಾಗಿ ನಿಂತುಬಿಟ್ಟಿದೆ ಎನ್ನಿಸುತ್ತದೆ. ಈ ರೀತಿ ದೈಹಿಕ ಚಹರೆಯಲ್ಲಿ ಯಾವುದೇ ಬದಲಾವಣೆಯಿಲ್ಲದೆ ಅಥವಾ ಅತ್ಯಂತ ನಿಧಾನವಾಗಿ ಬದಲಾವಣೆಯಾಗುತ್ತಾ ಲಕ್ಷಾಂತರ ವರ್ಷಗಳಿಂದ ಸೀಲಾಕ್ಯಾಂತ್ ತನ್ನ ಪರಿಸರಕ್ಕೆ ಹೊಂದಿಕೊಂಡು ಬಂದಿರುವುದಕ್ಕೆ ಹಲವಾರು ವಿವರಣೆಗಳನ್ನು ವಿಜ್ಞಾನಿಗಳು ನೀಡುತ್ತಾರೆ. ಅಂತಹ ಒಂದು ವಿವರಣೆ ಡಾರ್ವಿನ್‌ನ ವಿಕಾಸವಾದಕ್ಕೆ ಪೂರಕವಾಗಿಯೇ ಇದೆ. ಅದರ ಪ್ರಕಾರ ಕೆಲವೊಂದು ಪರಿಸರಗಳಲ್ಲಿ ಹಾಗೂ ಯಾವುದೇ ಸ್ಪರ್ಧೆಯಿಲ್ಲದಿದ್ದಲ್ಲಿ ವಿಕಾಸದ ಹಾದಿಯಲ್ಲಿ ಯಾವುದೇ ದೈಹಿಕ ಚಹರೆಯ ಬದಲಾವಣೆಯಾಗುವುದಿಲ್ಲ. ಸೀಲಾಕ್ಯಾಂತ್ ಸಮುದ್ರದಲ್ಲಿ ೧೦೦ರಿಂದ ೩೦೦ ಮೀಟರ್ ಆಳದಲ್ಲಿ ಕಲ್ಲ ಗುಹೆಗಳ ಆಸರೆಯಲ್ಲಿ ಬದುಕುವುದರಿಂದ ಅಲ್ಲಿ ಆಹಾರ ಮತ್ತು ಸ್ಥಳಕ್ಕಾಗಿ ಸ್ಪರ್ಧೆ ತೀರಾ ಕಡಿಮೆ ಇರುತ್ತದೆ. ಸೀಲಾಕ್ಯಾಂತ್‌ನ ವಿಷಯದಲ್ಲಿ 'ಪ್ರಾಕೃತಿಕ ಆಯ್ಕೆ' (ನ್ಯಾಚುರಲ್ ಸೆಲೆಕ್ಷನ್) ಕಾರ್ಯನಿರ್ವಹಿಸಲಿಲ್ಲ ಅಥವಾ ಅದರ ಅವಶ್ಯಕತೆಯೇ ಇರಲಿಲ್ಲ ಏಕೆಂದರೆ, ಆ ಜೀವಿಗಳು ಸಮುದ್ರ ತಳದಲ್ಲಿನ ತಾವಿದ್ದ ಪರಿಸರಕ್ಕೆ ಅತ್ಯಂತ ಯಶಸ್ವಿಯಾಗಿ ಹೊಂದಿಕೊಂಡುಬಿಟ್ಟಿದ್ದವು ಹಾಗೂ ಆ ಪರಿಸರದಲ್ಲಿ ಸಹ ಹೆಚ್ಚಿನ ಬದಲಾವಣೆಗಳಾಗುತ್ತಿರಲಿಲ್ಲ. ನೀರಿನಿಂದ ಭೂಮಿಗೆ ನಡೆದ ಅವುಗಳ 'ಸೋದರ ಸಂಬಂಧಿ'ಗಳು ಪರಿಸರಕ್ಕೆ ತಕ್ಕಂತೆ ಅತ್ಯಂತ ವೈವಿಧ್ಯಮಯವಾಗಿ ವಿಕಾಸಹೊಂದಿದವು. ೨೯೦ರಿಂದ ೨೦೮ ದಶಲಕ್ಷ ವರ್ಷಗಳ ಹಿಂದೆ ಭೂಮಿಯ ಮೇಲೆ ಅತ್ಯಂತ ಹುಲುಸಾಗಿದ್ದ ಸೀಲಾಕ್ಯಾಂತ್‌ನ ಲ್ಯಾಟಿಮೆರಿಯಾ ಪ್ರಭೇದ ಡಾರ್ವಿನ್ ವಿವರಣೆಯ ಜೀವಂತ ಪಳೆಯುಳಿಕೆಯಾಗಿದೆ.

ವಿಜ್ಞಾನಿಗಳ ಪ್ರಕಾರ ಈಗಿನ ಸೀಲಾಕ್ಯಾಂತ್ ಸುಮಾರು ಮೂರು ಕೋಟಿ ತಲೆಮಾರುಗಳನ್ನು ದಾಟಿ ಬಂದಿದೆ. ಈಗಿನ ಸೀಲಾಕ್ಯಾಂತ್‌ಗೂ ೧೪ ಕೋಟಿ ವರ್ಷಗಳಷ್ಟು ಹಿಂದಿನ ಸೀಲಾಕ್ಯಾಂತ್‌ನ ಪಳೆಯುಳಿಕೆಗೂ ಮಹತ್ತರ ವ್ಯತ್ಯಾಸವಿಲ್ಲ. ಅದಕ್ಕೇ ಅದನ್ನು ಜೀವಂತ ಪಳೆಯುಳಿಕೆ ಎನ್ನುತ್ತಾರೆ. ಅದರಿಂದಾಗಿಯೇ ಸೀಲಾಕ್ಯಾಂತ್‌ನ ಪಳೆಯುಳಿಕೆಯನ್ನು ಮಾತ್ರ ನೋಡಿದ್ದ ಸ್ಮಿತ್, ಲ್ಯಾಟಿಮರ್ ಕಳುಹಿಸಿದ ಚಿತ್ರ ನೋಡಿಯೇ ಆ ಮೀನನ್ನು ಸೀಲಾಕ್ಯಾಂತ್ ಎಂದು ಗುರುತಿಸಿದ್ದರು.

ಈ ವಸುಂಧರೆಯ ಮೇಲೆ ಸೀಲಾಕ್ಯಾಂತ್‌ಗಳು ಸುಮಾರು ೪೦ ಕೋಟಿ ವರ್ಷಗಳಷ್ಟು ಹಿಂದೆ ಕಾಣಿಸಿಕೊಂಡವು. ಬಹಳ ನಂತರ ಕಾಣಿಸಿಕೊಂಡ ದೈತ್ಯಕಾಯದ ಡೈನೊಸಾರ್‌ಗಳು ಬಹುಬೇಗ ನಶಿಸಿಹೋದವು. ಸೀಲಾಕ್ಯಾಂತ್‌ಗಳು ಹಾಗೂ ಅವುಗಳ ಹತ್ತಿರದ 'ನೆಂಟ'ರಾಗಿರುವ ಲಂಗ್ ಮೀನುಗಳ ಜೀವವಿಜ್ಞಾನದ ಅಧ್ಯಯನ ಜೀವವಿಕಾಸದ ರಹಸ್ಯವಾಗಿರುವ, ಮೊಟ್ಟಮೊದಲ ಜೀವಿ ನೀರಿನಿಂದ ಹೊರಬಂದು ಭೂಮಿಯ ತೆವಳಿದ, ನಡೆದಾಡಿದ ಕಾಲದ ಬಗ್ಗೆ ಬೆಳಕು ಚೆಲ್ಲಬಹುದು. ಸೀಲಾಕ್ಯಾಂತ್ ಇತರ ಮೀನುಗಳ ಹಾಗೆ ಮೊಟ್ಟೆ ಇಡುವುದಿಲ್ಲ, ಸಸ್ತನಿಗಳ ಹಾಗೆ ಮರಿಯನ್ನೇ ಹೆರುತ್ತದೆ.

ಹಾಗಾದರೆ ಸುಮಾರು ೭೦ರಿಂದ ೬೫ ದಶಲಕ್ಷ ವರ್ಷಗಳಿಂದೀಚೆಗೆ ಅವುಗಳ ಪಳೆಯುಳಿಕೆಗಳೇಕೆ ಕಂಡುಬಂದಿಲ್ಲ? ಅದಕ್ಕೆ ಕಾರಣಗಳು ಹಲವಾರಿವೆ. ಪಳೆಯುಳಿಕೆಗಳನ್ನು ಸಾಮಾನ್ಯವಾಗಿ ಭೂಮಿಯ ಮೇಲೆಯೇ ಹುಡುಕಲಾಗುತ್ತದೆ. ಸೀಲಾಕ್ಯಾಂತ್ ಸಾಗರದ ತಳದಲ್ಲಿ ವಾಸಿಸುವ ಜೀವಿ. ಸಾಗರ ತಳಗಳು ಸ್ಥಿರವಲ್ಲ. ಅವುಗಳ ಮೇಲೆ ಹೂಳು ಮತ್ತಿತರ ವಸ್ತುಗಳು ಸಂಗ್ರಹವಾಗುತ್ತಿರುತ್ತದೆ ಅಲ್ಲದೆ ಕೆಲವು ವಲಯಗಳಲ್ಲಿ ಭೂಮಿಯೊಳಕ್ಕೆ ಸೆಳೆದುಕೊಳ್ಳಲ್ಪಡುತ್ತಿರುತ್ತದೆ. ಹಾಗಾಗಿ ಸಾಗರಗಳ ತಳದಲ್ಲಿ ಪಳೆಯುಳಿಕೆಗಳು ಸಿಗುವುದು ಅಪರೂಪ.

೧೯೩೮ರ ನಂತರ ಆಫ್ರಿಕಾದ ಕರಾವಳಿಯಲ್ಲಿ ಸಿಕ್ಕ ಸೀಲಾಕ್ಯಾಂತ್‌ಗಳ ನಂತರ ೧೯೯೮ರಲ್ಲಿ ಇಂಡೋನೇಶ್ಯಾದ ಕರಾವಳಿಯಲ್ಲಿ ಮತ್ತೊಂದು ಸೀಲಾಕ್ಯಾಂತ್ ಸಿಕ್ಕಿತು. ಅದನ್ನು ಸೀಲಾಕ್ಯಾಂತ್‌ನ ಮತ್ತೊಂದು ಪ್ರಭೇದವೆಂದು ವಿಜ್ಞಾನಿಗಳು ಗುರುತಿಸಿದ್ದಾರೆ. ಇಂದು ವಿಜ್ಞಾನಿಗಳಿಗೆ ತಿಳಿದಿರುವ ಸೀಲಾಕ್ಯಾಂತ್‌ನ ಪ್ರಭೇದಗಳು ಎರಡು ಮಾತ್ರ ಇವೆ. ಆಫ್ರಿಕಾದ ಸೀಲಾಕ್ಯಾಂತ್ ಲ್ಯಾಟಿಮೆರಿಯಾ ಚಾಲುಮ್ನೆ ಮತ್ತು ಇಂಡೋನೇಶ್ಯಾದ ಲ್ಯಾಟಿಮೆರಿಯಾ ಮೆನಡೋನ್ಸಿಸ್. ಈ ಎರಡೂ ಸೀಲಾಕ್ಯಾಂತ್ ಪ್ರಭೇದಗಳ ಆನುವಂಶಿಕ ಅಧ್ಯಯನಗಳನ್ನು ನಡೆಸಲಾಗಿದೆ. ಮೈಟೋಕಾಂಡ್ರಿಯಾ ಪೂರಕ ಆನುವಂಶಿಕ ಅಧ್ಯಯನಗಳಿಂದ ಈ ಎರಡೂ ಪ್ರಭೇದಗಳು ಒಂದೇ ಪೂರ್ವಜನನ್ನು ಹೊಂದಿದ್ದು ಸುಮಾರು ೪೦ರಿಂದ ೩೦ ದಶಲಕ್ಷ ವರ್ಷಗಳ ಹಿಂದೆ ಪ್ರತ್ಯೇಕಗೊಂಡು ವಿಕಾಸಹೊಂದಿವೆ.

ಸೀಲಾಕ್ಯಾಂತ್ ಸಮುದ್ರದಲ್ಲಿ ಸುಮಾರು ೧೭೦ರಿಂದ ೨೦೦ ಮೀಟರ್‌ಗಳ ಆಳದಲ್ಲಿ ನೀರು ತಣ್ಣಗಿರುವ ಕಡೆ ವಾಸಿಸುತ್ತದೆ. ಅದು ಮನುಷ್ಯನ ಬಂಧನದಲ್ಲಿ ೨೦ ಗಂಟೆಗೂ ಹೆಚ್ಚು ಕಾಲ ಬದುಕಿಲ್ಲ. ಅದರ ಆಯಸ್ಸು ಸುಮಾರು ಅರವತ್ತು ವರ್ಷಗಳು ಹಾಗೂ ಅವು ಎರಡು ಮೀಟರ್ ಉದ್ದದವರೆಗೂ ಬೆಳೆಯುತ್ತವೆ. ಅವುಗಳ ಗರಿಷ್ಠ ತೂಕ ೯೦ ಕಿ.ಗ್ರಾಂಗಳು. ಅದನ್ನು ಜೀವಂತವಾಗಿ ವೀಕ್ಷಿಸುವ, ಜೀವಂತವಾಗಿರುವಂತೆ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ವಿಜ್ಞಾನಿಗಳ ಅರ್ಧಶತಮಾನದ ಆಸೆ ಮೊದಲ ಬಾರಿಗೆ ಜನವರಿ ೧೭, ೧೯೮೭ರಂದು ನೆರವೇರಿತು. ಪಶ್ಚಿಮ ಜರ್ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್‌ಸ್ಟಿಟ್ಯೂಟ್‌ನ ಹ್ಯಾನ್ಸ್ ಫ್ರಿಕ್ ತಮ್ಮ ಚಲನಚಿತ್ರ ಕ್ಯಾಮೆರಾದೊಂದಿಗೆ, ಸೀಲಾಕ್ಯಾಂತ್‌ನ ಚಿತ್ರೀಕರಣಕ್ಕೆಂದು ತಾವೇ ರೂಪಿಸಿದ ಒಂದು ಸಣ್ಣ ಸಬ್‌ಮರೀನ್‌ನಲ್ಲಿ ಕೊಮೊರೊ ದ್ವೀಪಗಳ ಬಳಿ ಸೀಲಾಕ್ಯಾಂತ್‌ನ ಅನ್ವೇಷಣೆ ನಡೆಸಿದರು. ಹಲವಾರು ದಿನಗಳ ಹುಡುಕಾಟದ ನಂತರ ಸೀಲಾಕ್ಯಾಂತ್ ಕಂಡಿತು. ಹ್ಯಾನ್ಸ್ ಫ್ರಿಕ್ ತೆಗೆದಿರುವ ವೀಡಿಯೋ ಇಂಟರ್‌ನೆಟ್‌ನಲ್ಲಿದ್ದು ಆ ಅದ್ಭುತ ವೀಡಿಯೋವನ್ನು ಎಲ್ಲರೂ ನೋಡಬಹುದು: http://www.arkive.org/coelacanth/latimeria-chalumnae/video-00.html

ARKive video - Coelacanth in deep submarine canyon

ಮೀನುಗಾರರು ಸೀಲಾಕ್ಯಾಂತ್ ತಮ್ಮ ಬಲೆಯಲ್ಲಿ ಸಿಕ್ಕಾಗಲೂ ಅದರ ಮಾಂಸ ತಿನ್ನಲು ಯೋಗ್ಯವಿರುವುದಿಲ್ಲವೆಂದು ಎಸೆದುಬಿಡುತ್ತಿದ್ದರು. ಬರೀ ಎಣ್ಣೆಯಿಂದ ತುಂಬಿದಂತಿರುವ ಅದರ ಮಾಂಸವನ್ನು ಪ್ರೊಫೆಸರ್ ಸ್ಮಿತ್ ಬೇಯಿಸಿದಾಗ ಪೂರ್ತಿ 'ಕರಗಿ' ಹೋಯಿತಂತೆ!

ಹ್ಯಾನ್ಸ್ ಫ್ರಿಕ್‌ಗೆ ಸೀಲಾಕ್ಯಾಂತ್‌ಗಳು ರಾತ್ರಿಯ ಹೊತ್ತು ಮಾತ್ರ ಕಂಡವು. ಸಾಗರ ತಳದಲ್ಲಿ ತಣ್ಣನೆಯ ನೀರಿರುವ ಕಡೆ ಅವು ಅತ್ಯಂತ ನಿಧಾನವಾಗಿ ಸೋಮಾರಿಗಳ ಹಾಗೆ ಈಜಾಡುತ್ತಿದ್ದವು. ಅವನ ಎಂಟೂವರೆ ಗಂಟೆಗಳ ಕಾಲದ ವೀಕ್ಷಣೆಯಲ್ಲಿ ಅವು ಏನನ್ನೂ ತಿನ್ನಲಿಲ್ಲ. ಆದರೂ ಇನ್ನಿತರ ಸೀಲಾಕ್ಯಾಂತ್‌ಗಳ ಹೊಟ್ಟೆಯಲ್ಲಿ ಮೀನು, ಸ್ಕ್ವಿಡ್ ಮೀನುಗಳ ಅವಶೇಷಗಳು ಕಂಡುಬಂದಿವೆ. ಬಹುಶಃ ಅವು ಜೀವಿವಿಕಾಸದ ಹಾದಿಯಲ್ಲಿ ಇನ್ನಿತರ ವೇಗವಾಗಿ ಓಡಾಡುವ ಮೀನುಗಳೊಂದಿಗೆ ಸ್ಪರ್ಧಿಸಲಾಗದೆ ಸಮುದ್ರದ ಆಳಕ್ಕೆ, ಆಹಾರಕ್ಕೆ ಯಾವುದೇ ಪೈಪೋಟಿ ಇಲ್ಲದಿರುವಲ್ಲಿಗೆ ಹೋಗಿರಬಹುದು. ಅಲ್ಲದೆ ತಾನು ತಿನ್ನುವ ಮಿತ ಆಹಾರದಿಂದಾಗಿ ತನ್ನ ದೇಹದ ಚಟುವಟಿಕೆಯನ್ನು ಕಡಿಮೆಮಾಡಿಕೊಳ್ಳಲು ಹಾಗೂ ಶಕ್ತಿಯನ್ನು ಕಾಪಾಡಿಕೊಂಡು ಬರಲು ಸಾಗರದ ಆಳದ ತಣ್ಣನೆಯ, ಕತ್ತಲ ನೀರಿನ ಜಾಗವನ್ನು ಹುಡುಕಿಕೊಂಡಿರಬಹುದು. ಹ್ಯಾನ್ಸ್ ಫ್ರಿಕ್‌ನ ವೀಕ್ಷಣೆಯ ಸಮಯದಲ್ಲಿ ಅವು ಇದ್ದಕ್ಕಿದ್ದ ಹಾಗೆ ಸಮುದ್ರದ ತಳದಲ್ಲಿ 'ಶೀರ್ಷಾಸನ' ಹಾಕಿ ಸುಮಾರು ಎರಡು ನಿಮಿಷಗಳವರೆಗೂ ಅಲುಗಾಡದೆ ನಿಲ್ಲುತ್ತಿದವು. ಕೆಲವು ಮೀನುಗಳು ಆಹಾರ ತಿನ್ನುವಾಗ ಅಥವಾ ಶತ್ರುವನ್ನು ಹೆದರಿಸಬೇಕಾದಾಗ ಹೀಗೆ ನಿಲ್ಲುತ್ತವೆ. ಆದರೆ ಆ ರೀತಿಯ ವಾತಾವರಣ ಇಲ್ಲದಿದ್ದರೂ ಸೀಲಾಕ್ಯಾಂತ್ ತಲೆಕೆಳಗಾಗಿ ನಿಲ್ಲುತ್ತಿತ್ತು.

ಇನ್ನಿತರ ಮೀನುಗಳಿಗಿಲ್ಲದ ಭಿನ್ನ ರೀತಿಯ ಈಜುರೆಕ್ಕೆಗಳು ಸೀಲಾಕ್ಯಾಂತ್‌ಗಳಿಗಿವೆ. ಆ ಈಜುರೆಕ್ಕೆಗಳಿಗೆ ತಮ್ಮದೇ ಆದ ಎಲುಬುಗಳು ಹಾಗೂ ಸ್ನಾಯುಗಳಿವೆ. ಆದ್ದರಿಂದ ಆ ಈಜುರೆಕ್ಕೆಗಳನ್ನು ಸೀಲಾಕ್ಯಾಂತ್‌ಗಳು ಸಾಗರ ತಳದಲ್ಲಿ ಕಾಲುಗಳ ಹಾಗೆ ಬಳಸಿ ನಡೆದಾಡಬಹುದೆಂದು ವಿಜ್ಞಾನಿಗಳು ತಿಳಿದಿದ್ದರು. ಆದರೆ ಹ್ಯಾನ್ಸ್ ಫ್ರಿಕ್‌ನ ಸೀಲಾಕ್ಯಾಂತ್‌ನ ಜೀವಂತ ವೀಕ್ಷಣೆಯಲ್ಲಿ ಆ ರೀತಿಯ ನಡತೆ ಕಂಡುಬರಲೇ ಇಲ್ಲ.

ಹ್ಯಾನ್ಸ್ ಫ್ರಿಕ್ ಜೀವಂತ ಸೀಲಾಕ್ಯಾಂತನ್ನು ಕಂಡುಬಂದ ನಂತರ, ಜಪಾನಿನ ಟೋಬಾ ಅಕ್ವೇರಿಯಂ, ನ್ಯೂಯಾರ್ಕ್‌ನ ಅಕ್ವೇರಿಯಂನವರು ಅದನ್ನು ಜೀವಂತ ಹಿಡಿದು ಸಾಕುವ ಪ್ರಯತ್ನಕ್ಕೆ ಮುಂದಾಗಿದ್ದವು. ಅದರ ಬಗ್ಗೆ ವಿಜ್ಞಾನಿಗಳಲ್ಲಿ ಸಾಕಷ್ಟು ವಿವಾದವಿದ್ದು, ಬಹುತೇಕರು ಈ ಕ್ರಮವನ್ನು ವಿರೋಧಿಸಿದ್ದಾರೆ. ಸೀಲಾಕ್ಯಾಂತ್ ಏನಾದರೂ 'ಬಂಧನ'ದಲ್ಲಿ ಬದುಕಿಕೊಂಡಲ್ಲಿ ಅದರ ಬಗ್ಗೆ ಹೆಚ್ಚು ಸಂಶೋಧನೆ ಸಾಧ್ಯವಾಗುತ್ತದೆ ಎನ್ನುತ್ತಾರೆ ಅಕ್ವೇರಿಯಂನವರು. ಆದರೆ ಅಲ್ಪಸಂಖ್ಯೆಯಲ್ಲಿ ಹಾಗೂ ವಿನಾಶದ ಅಂಚಿನಲ್ಲಿರುವ ಸೀಲಾಕ್ಯಾಂತ್ ಪ್ರಕೃತಿಯಲ್ಲಿ ಕೋಟ್ಯಂತರ ವರ್ಷ ಬದುಕಿಕೊಂಡು ಬಂದಿದ್ದರೂ ಈಗ ಮನುಷ್ಯನ 'ಆಸಕ್ತಿ' ಹಾಗೂ 'ಕುತೂಹಲ'ದಿಂದ ಎಂದೆಂದಿಗೂ ಕಣ್ಮರೆಯಾಗಿಬಿಡಬಹುದು ಎನ್ನುವ ಆತಂಕ ವಿಜ್ಞಾನಿಗಳದು. ಈ ವಿವಾದಕ್ಕೆ ಹೆದರಿ ನ್ಯೂಯಾರ್ಕ್‌ನ ಅಕ್ವೇರಿಯಂ ಹಿಂದೆ ಸರಿಯಿತು. ಆದರೆ ಜಪಾನಿನ ಟೋಬಾ ಅಕ್ವೇರಿಯಂ ೧೯೮೯ರಲ್ಲಿ ಪ್ರಯತ್ನಿಸಿದರೂ ಸೀಲಾಕ್ಯಾಂತ್ ಅದಕ್ಕೆ ಸಿಗಲಿಲ್ಲ.

ಜೀವಂತ ಸೀಲಾಕ್ಯಾಂತ್ ಸಿಕ್ಕ ನಂತರ ಆ ವಿಷಯ ಮತ್ತೊಂದು ಚರ್ಚೆಗೆ ಗ್ರಾಸವಾಯಿತು. ಚಾರ್ಲ್ಸ್ ಡಾರ್ವಿನ್ ಮತ್ತು ಆಲ್‌ಫ್ರೆಡ್ ವಾಲೇಸ್ ೧೮೫೮ರಲ್ಲಿ ತಮ್ಮ ಜೀವವಿಕಾಸ ಸಿದ್ಧಾಂತವನ್ನು ಮಂಡಿಸಿದಾಗಿನಿಂದ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳ ಅನುಯಾಯಿಗಳು ಅದನ್ನು ವಿರೋಧಿಸುತ್ತಾ ಬಂದಿದ್ದಾರೆ. ಮಾನವ ಮತ್ತು ಮಂಗ ಒಬ್ಬನೇ ಪೂರ್ವಜನನ್ನು ಹೊಂದಿದ್ದ ಎನ್ನುವುದನ್ನು ನಂಬಲು ಅವರು ಸಿದ್ಧರಿರಲಿಲ್ಲ. ಎಲ್ಲ ಜೀವಿಗಳನ್ನು, ಈ ಭೂಮಿ, ಆಕಾಶ ಹಾಗೂ ಬೆಳಕನ್ನು ದೇವರೇ ಸೃಷ್ಟಿಸಿದ ಎನ್ನುವುದು ಅವರ ನಂಬಿಕೆ. ಮಂಗನ ದೇಹಕ್ಕೆ ಡಾರ್ವಿನ್‌ನ ಮುಖವಿರುವ ಚಿತ್ರ ಬಿಡಿಸಿ ಆತನನ್ನು ಅಪಹಾಸ್ಯ ಮಾಡಿದ್ದರು. ಅತ್ಯಂತ ಮುಂದುವರಿದ ದೇಶವೆನ್ನಿಸಿಕೊಂಡಿರುವ ಅಮೆರಿಕದಲ್ಲಿ ಇಂದಿಗೂ ಶೇ. ೫೧ರಷ್ಟು ಜನ ದೇವರೇ ಮನುಷ್ಯನನ್ನು ಸೃಷ್ಟಿಸಿದ ಹಾಗೂ ಶೇ. ೩೦ರಷ್ಟು ಜನ ದೇವರ ಸಹಾಯದಿಂದ ಮನುಷ್ಯ ವಿಕಾಸಹೊಂದಿದ ಎಂಬ ನಂಬಿಕೆ ಇರಿಸಿದ್ದಾರೆ. ತಮ್ಮ ನಂಬಿಕೆಯ ಸೃಷ್ಟಿವಾದವನ್ನು ಶಿಕ್ಷಣದಲ್ಲೂ ತರಬೇಕೆಂದು ಅಂಥವರು ಒತ್ತಾಯ ತರುತ್ತಿದ್ದಾರೆ.

ಲಕ್ಷಾಂತರ ವರ್ಷಗಳಿಂದ ಬದಲಾವಣೆಗಳಿಲ್ಲದೆ ಬಂದಿರುವ 'ಜೀವಂತ ಪಳೆಯುಳಿಕೆ' ಸೀಲಾಕ್ಯಾಂತ್ ವಿಕಾಸವಾದದ ಎಲ್ಲ ನಿಯಮಗಳನ್ನೂ ಬದಿಗೆ ತಳ್ಳಿ ಸೃಷ್ಟಿವಾದಕ್ಕೆ ಪುಷ್ಟಿ ನೀಡುತ್ತದೆ ಎನ್ನುತ್ತಿದ್ದಾರೆ ಸೃಷ್ಟಿವಾದದಲ್ಲಿ ನಂಬಿಕೆ ಇರಿಸಿರುವವರು. ಆದರೆ ಈ ವಾದಗಳನ್ನು ತಿರಸ್ಕರಿಸಿರುವ ವಿಜ್ಞಾನಿಗಳು ವಿಕಾಸದ ಹಾದಿಯಲ್ಲಿ 'ಸ್ಥಾಯಿತ್ವ' ಕಂಡುಬರುವುದೂ ಸಹ ಜೀವವಿಕಾಸವಾದಕ್ಕೆ ಪೂರಕವಾಗಿಯೇ ಇದೆ. ಜೀವವಿಕಾಸವಾದದ ಬಹುಮುಖ್ಯ ಅಂಗವಾದ ಪ್ರಾಕೃತಿಕ ಆಯ್ಕೆ ಒಂದು ಸಂರಕ್ಷಿಸುವ ಶಕ್ತಿಯಾಗಿದ್ದು ಎಲ್ಲಿ ಸ್ಪರ್ಧೆ ಇರುವುದಿಲ್ಲವೋ ಹಾಗೂ ಪರಿಸರ ಎಲ್ಲಿ ಸಮರ್ಪಕವಾಗಿರುತ್ತದೆಯೋ ಅಲ್ಲಿ ಜೀವ ವಿಕಾಸ ಅತ್ಯಂತ ಮಂದಗತಿಯಲ್ಲಿ ಸಾಗುತ್ತದೆ.

ಸೀಲಾಕ್ಯಾಂತ್‌ನಲ್ಲಿ ಬದಲಾವಣೆಗಳಾಗಿವೆಯೇ ಇಲ್ಲವೆಂದಲ್ಲ. ಡಿವೋನಿಯನ್ ಅವಧಿಯಲ್ಲಿ (೪೧೦ ದಶಲಕ್ಷ ವರ್ಷಗಳ ಹಿಂದೆ) ಮೊದಲಿಗೆ ಕಂಡುಬಂದ ಸೀಲಾಕ್ಯಾಂತ್‌ಗಳ ಹಾಗೂ ಕಾರ್ಬೊನಿಫೆರಸ್ (೩೬೦ ದಶಲಕ್ಷ ವರ್ಷಗಳ ಹಿಂದೆ) ಮತ್ತು ಕ್ರಿಟೇಶಿಯಸ್‌ನ ಅವಧಿಯ (೧೩೮ ದಶಲಕ್ಷ ವರ್ಷಗಳ ಹಿಂದೆ) ಸೀಲಾಕ್ಯಾಂತ್‌ಗಳ ನಡುವೆ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಆದರೂ ಇಷ್ಟು ಸುದೀರ್ಘ ಅವಧಿಯಲ್ಲಿ ಅತ್ಯಂತ ಕನಿಷ್ಠ ಬದಲಾವಣೆಗಳನ್ನು ಪಡೆದಿರುವುದು ಒಂದು ಪ್ರಕೃತಿಯ ಕೌತುಕವೇ ಸರಿ. ಸೀಲಾಕ್ಯಾಂತ್ ಒಂದನ್ನೇ ತಮ್ಮ ಸಮರ್ಥನೆಗೆ ಹಿಡಿದಿಟ್ಟುಕೊಂಡಿರುವ ಸೃಷ್ಟಿವಾದಿಗಳು ಮಂಗಗಳ ಹಾಗೂ ಇತರ ಜೀವಿಗಳ ವಿಕಾಸದ ಬಗ್ಗೆ ಏಕೆ ಚರ್ಚಿಸುವುದಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಈ ಜೀವಜಗತ್ತಿನ ಅತ್ಯದ್ಭುತ ಕೌತುಕವಾದ ಸೀಲಾಕ್ಯಾಂತ್ ಒಂದು ನಿಗೂಢ ಪೆಟ್ಟಿಗೆ. ಅದು ತನ್ನ ಒಡಲೊಳಗೆ ಜೀವಜಗತ್ತಿನ ಹಲವಾರು ರಹಸ್ಯಗಳನ್ನು ಅಡಗಿಸಿಕೊಂಡಿದೆ. ಕೋಟ್ಯಾಂತರ ವರ್ಷಗಳಿಂದ ಜೀವವಿಕಾಸದ ಹಾದಿಯಲ್ಲಿ ಮಹತ್ತರ ಬದಲಾವಣೆಗಳನ್ನು ಕಾಣದೆ ಈ ಮೀನು ಹೇಗೆ ಉಳಿದುಬಂತು? ಬದಲಾವಣೆಗಳಿಲ್ಲದೆ ಮೂರು ಕೋಟಿ ತಲೆಮಾರುಗಳನ್ನು ಹಾದುಬರಲು ವಾತಾವರಣದ ಯಾವ್ಯಾವ ಕಾರಣಗಳು ಸಹಕಾರಿಯಾಗಿದ್ದವು? ಸೀಲಾಕ್ಯಾಂತ್ ಭೂಮಿಯ ಮೇಲಿನ ಜೀವಿಗಳಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಜೀವವಿಕಾಸದ ಹಲವಾರು 'ವಿಶಿಷ್ಟ ಸಮಸ್ಯೆ'ಗಳನ್ನು ಪರಿಹರಿಸಿಕೊಂಡಿರುವುದರಿಂದ ಅದು ಇಷ್ಟು ಕಾಲ ಬದುಕಿಕೊಂಡು ಬಂದಿದೆ ಎನ್ನುತ್ತಾರೆ ಕೆಲವು ವಿಜ್ಞಾನಿಗಳು. ಈಗ ಎಷ್ಟು ಸೀಲಾಕ್ಯಾಂತ್‌ಗಳು ಬದುಕಿರಬಹುದೆಂಬುದೂ ತಿಳಿದಿಲ್ಲ. ಆದರೆ ಅವುಗಳ ಸಂಖ್ಯೆ ತೀರಾ ಕಡಿಮೆಯಿದ್ದು ಅವು ವಿನಾಶದ ಅಂಚಿನಲ್ಲಿವೆ ಎಂಬುದಂತೂ ಖಚಿತ. ಸ್ಪೇನ್‌ನಲ್ಲಿ ೧೯೬೫ರಲ್ಲಿ ಸಿಕ್ಕಿರುವ ಹತ್ತೊಂಭತ್ತನೇ ಶತಮಾನದ ಬೆಳ್ಳಿಯ ಧಾರ್ಮಿಕ ವಸ್ತುವೊಂದರ ಮೇಲೆ ಸೀಲಾಕ್ಯಾಂತ್‌ನ ಸ್ಫುಟ ಚಿತ್ರವೊಂದಿದೆ. ಅದನ್ನು ರೂಪಿಸಿದ ಕಲಾಕಾರನಿಗೆ ಸೀಲಾಕ್ಯಾಂತ್ ಬಗ್ಗೆ ಹೇಗೆ ಗೊತ್ತಾಯಿತು? ಏಕೆಂದರೆ ಅದುವರೆಗೂ ಪಳೆಯುಳಿಕೆಯಲ್ಲದೆ ಜೀವಂತ ಸೀಲಾಕ್ಯಾಂತ್ ಸಿಕ್ಕಿರುವ ಉಲ್ಲೇಖವೇ ಚರಿತ್ರೆಯಲ್ಲಿಲ್ಲ. ಸೀಲಾಕ್ಯಾಂತ್‌ಗೆ ಅತ್ಯಂತ ನಿಕಟ ಸಂಬಂಧಿಯಾದ ಯಾವುದಾದರೂ ಜೀವಿ ಇದೆಯೆ? ಸೀಲಾಕ್ಯಾಂತ್‌ನ ರಹಸ್ಯಗಳ ಸರಮಾಲೆ ಹೀಗೆಯೇ ಹಿಗ್ಗುತ್ತಾ ಹೋಗುತ್ತದೆ.

ಪೂರಕ ಮಾಹಿತಿ

ಪಳೆಯುಳಿಕೆಗಳು ಎಂದರೇನು?

ಪಳೆಯುಳಿಕೆಯನ್ನು ಇಂಗ್ಲಿಷಿನಲ್ಲಿ ಫಾಸಿಲ್ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ಫಾಸಿಲಿಸ್ ಎಂದರೆ `ಅಗೆದಿರುವುದು' ಎಂದರ್ಥ. ಪಳೆಯುಳಿಕೆಗಳೆಂದರೆ ಸಾಮಾನ್ಯವಾಗಿ ಮರಳುಗಲ್ಲು, ಗೋಡುಕಲ್ಲು, ಜೇಡಿಪದರಗಲ್ಲು ಅಥವಾ ಸುಣ್ಣಕಲ್ಲುಗಳಂತಹ ಸಂಚಿತ ಶಿಲೆಗಳಲ್ಲಿ ಸಂರಕ್ಷಿಸಲ್ಪಟ್ಟಿರುವ ಬಹಳ ಹಿಂದೆ ಸತ್ತುಹೋದ ಜೀವಿಗಳ ಉಳಿಕೆಗಳು ಅಥವಾ ಅವುಗಳ ಭೌತಿಕ ರಚನೆಯ ಅಚ್ಚುಗಳು. ಪಳೆಯುಳಿಕೆಗಳು ಬಹಳ ಹಿಂದೆ ಭೂಮಿಯ ಮೇಲೆ ಜೀವಿಸಿದ್ದ ಜೀವಿಗಳ ಸಾಕ್ಷ್ಯಾಧಾರಗಳಾಗಿವೆ. ಪಳೆಯುಳಿಕೆಗಳು ಸಸ್ಯ ಉಳಿಕೆಗಳಾದಂತಹ ಎಲೆಗಳು, ಮರ, ಹೂಗಳ ಪರಾಗ ಮತ್ತು ಸಸ್ಯಗಳ ಒಳಭಾಗಗಳು, ಚಿಪ್ಪುಗಳು ಅಥವಾ ಹವಳಗಳು, ಹುಳುಗಳು, ಬಸವನಹುಳುಗಳು ಮತ್ತು ಸಮುದ್ರ ಮುಳ್ಳುಹಂದಿಗಳಂತಹ ಅಕಶೇರುಕಗಳ ದೇಹದ ಇತರ ಭಾಗಗಳು, ಡೈನೋಸಾರ್, ಮೀನು, ಪಕ್ಷಿ ಮತ್ತು ಸ್ತನಿಗಳಂತಹ ಕಶೇರುಕಗಳ ಅಸ್ಥಿಪಂಜರಗಳನ್ನು ಒಳಗೊಂಡಿರುತ್ತವೆ. ಇದುವರೆಗೆ ಸುಮಾರು ೨,೫೦,೦೦೦ ವಿವಿಧ ಪ್ರಭೇದಗಳ ಪಳೆಯುಳಿಕೆಗಳನ್ನು ಗುರುತಿಸಲಾಗಿದೆ.

ಪಳೆಯುಳಿಕೆಗಳು ಹೇಗೆ ರೂಪುಗೊಳ್ಳುತ್ತವೆ

ಸುಮಾರು ೩೦೦೦ ದಶಲಕ್ಷ ವರ್ಷಗಳವರೆಗೆ ಜೀವಿಗಳು ಸಮುದ್ರಗಳಲ್ಲಿ ಮಾತ್ರ ಬದುಕಿದ್ದವು. ಹಾಗಾಗಿ ನಮಗೆ ದೊರೆತಿರುವ ಅತ್ಯಂತ ಹಳೆಯ ಪಳೆಯುಳಿಕೆಗಳು ಸಾಗರ ಜೀವಿಗಳದು ಮಾತ್ರ. ಸಾಗರ ಪ್ರಾಣಿಗಳು ಅಥವಾ ಸಸ್ಯಗಳು ಸತ್ತಾಗ ಅವುಗಳ ದೇಹದ ಉಳಿಕೆಗಳು ಸಾಗರ ತಳ ಸೇರಿ ಅಲ್ಲಿ ಮಣ್ಣು, ಮರಳು ಅಥವಾ ಗೋಡಿನಲ್ಲಿ ಹೂತುಹೋದವು. ಬಹಳ ದೀರ್ಘ ಕಾಲದ ನಂತರ ಈ ಸಂಚಿತ ವಸ್ತುಗಳು ಸಂಚಿತ ಶಿಲೆಯಾಗಿ ರೂಪುಗೊಂಡವು ಹಾಗೂ ಪ್ರಾಣಿ ಅಥವಾ ಸಸ್ಯಗಳ ಭಾಗಗಳು ಆ ಶಿಲೆಗಳಲ್ಲೇ ಉಳಿದುಬಿಟ್ಟವು. ಸುಮಾರು ೪೩೦ ದಶಲಕ್ಷ ವರ್ಷಗಳ ಹಿಂದೆ ಪ್ರಾಣಿಗಳು ಮತ್ತು ಸಸ್ಯಗಳು ಸಾಗರಗಳಿಂದಾಚೆ ಭೂಮಿಯ ಮೇಲೆ ವಿಕಾಸಹೊಂದಿ ಜೀವಿಸುತ್ತಿದ್ದವು. ಅವು ಸತ್ತಾಗ ಅವುಗಳ ಮೃದು ಭಾಗಗಳು ಕೊಳೆತುಹೋಗುತ್ತಿದ್ದವು ಅಥವಾ ಇತರ ಪ್ರಾಣಿ ಪಕ್ಷಿಗಳು ಅವುಗಳನ್ನು ಭಕ್ಷಿಸುತ್ತಿದ್ದವು. ಆದರೆ ಅವುಗಳ ಗಡಸು ಭಾಗಗಳು (ಮೂಳೆಗಳು, ಚಿಪ್ಪುಗಳು, ಮರ ಮುಂತಾದುವು) ನೀರು, ಮರಳು ಅಥವಾ ಅಗ್ನಿಪರ್ವತಗಳ ಬೂದಿಯಿಂದ ಮುಚ್ಚಿಹೋಗಿ ಕೆಲವೊಮ್ಮೆ ಸಂರಕ್ಷಿಸಲ್ಪಡುತ್ತಿದ್ದವು. ಹಲ್ಲುಗಳು ಪ್ರಾಣಿಯೊಂದರ ಅತ್ಯಂತ ಹೆಚ್ಚು ಗಡಸು ಭಾಗವಾಗಿದ್ದು ಅವು ಸಂರಕ್ಷಿಸಲ್ಪಡುವ ಸಾಧ್ಯತೆ ಹೆಚ್ಚು ಇರುತ್ತಿತ್ತು.

ಮೂಳೆ, ಮರ ಮತ್ತು ಚಿಪ್ಪುಗಳು ಗಡಸಾಗಿದ್ದರೂ ಅವು ಅತ್ಯಂತ ಸಣ್ಣ ರಂಧ್ರಗಳನ್ನು ಹೊಂದಿರುತ್ತವೆ. ಅವು ಹೂತು ಹೋದಾಗ ಕರಗಿರುವ ಖನಿಜಗಳನ್ನು ಹೊಂದಿರುವ ನೀರು ಆ ರಂಧ್ರಗಳೊಳಗೆ ಪ್ರವೇಶಿಸಿ ಅಲ್ಲಿ ಖನಿಜಗಳು ಸೇರಿಕೊಳ್ಳುವಂತೆ ಮಾಡುತ್ತದೆ. ಲಕ್ಷಾಂತರ ವರ್ಷಗಳು ಕಳೆದಂತೆ ಎಲ್ಲ ಮೂಲ ಮೂಳೆ ಅಥವಾ ಚಿಪ್ಪು ಸಂಪೂರ್ಣ ಕರಗಿಹೋಗಿ ತನ್ನನ್ನು ಆವರಿಸಿರುವ ಶಿಲೆಯ ನಡುವೆ ತನ್ನದೇ ಆಕಾರದಲ್ಲಿ ಸಂಪೂರ್ಣ ಖನಿಜಗಳನ್ನೇ ಹೊಂದಿರುತ್ತದೆ. ಆ ಮೂಳೆ ಅಥವಾ ಚಿಪ್ಪು ಸಂಪೂರ್ಣವಾಗಿ ಶಿಲೆಯಾಗಿಬಿಟ್ಟಿರುತ್ತದೆ. ಕೆಲವೊಮ್ಮೆ ಶಿಲೆಯ ನಡುವೆ ಇರುವ ಪ್ರಾಣಿ ಸಂಪೂರ್ಣವಾಗಿ ಕೊಳೆತುಹೋಗಿ ಅಲ್ಲಿ ಉಳಿಯುವ ಅದರ ಖಾಲಿ ಸ್ಥಳವನ್ನು ಸಂಚಿತ ಶಿಲೆ ಅಥವಾ ಖನಿಜಗಳು ಆವರಿಸಿಕೊಂಡು ಆ ಪ್ರಾಣಿಯಂತೆಯೇ ಇರುವ `ಅಚ್ಚು' ತಯಾರಿಸಿರುತ್ತದೆ. ಪಳೆಯುಳಿಕೆಗಳು ಶಿಲೆಗಳಲ್ಲಿ ಮಾತ್ರ ಕಂಡುಬಂದಿರುವುದಿಲ್ಲ. ಟಾರ್ ಗುಂಡಿಗಳಲ್ಲಿ ಸಿಕ್ಕಿಬಿದ್ದ ಪ್ರಾಣಿಗಳು ಹಾಗೆಯೇ ಸಂರಕ್ಷಿಸಲ್ಪಟ್ಟಿವೆ. ಹಿಮಯುಗದಲ್ಲಿದ್ದ ವೂಲಿ ಮ್ಯಾಮತ್‌ಗಳು ಹಿಮದಲ್ಲೇ ಹೂತುಹೋಗಿ ಮಾಂಸ ಹಸಿಯಾಗಿರುವಂತೆಯೇ ಸಂರಕ್ಷಿಸಲ್ಪಟ್ಟಿವೆ. ಸಂಪೂರ್ಣವಾಗಿ ನಿರ್ನಾಮವಾಗಿರುವ ಕೀಟಗಳು ಮರಗಳ ಅಂಟುಗಳಲ್ಲಿ ಸಿಕ್ಕಿಬಿದ್ದಿದ್ದು ಲಕ್ಷಾಂತರ ವರ್ಷಗಳಾದರೂ ಹಾಗೆಯೇ ಸಂರಕ್ಷಿಸಲ್ಪಟ್ಟಿರುವ ಉದಾಹರಣೆಗಳಿವೆ.

ಶಿಲೆಗಳ ಮತ್ತು ಪಳೆಯುಳಿಕೆಗಳ ವಯಸ್ಸನ್ನು ವಿಜ್ಞಾನಿಗಳು ರಿಲೆಟೀವ್ ಡೇಟಿಂಗ್ ವಿಧಾನ ಮತ್ತು ಆಬ್ಸಲ್ಯೂಟ್ (ರೇಡಿಯೋಮೆಟ್ರಿಕ್) ಡೇಟಿಂಗ್ ವಿಧಾನ ಎಂಬ ಎರಡು ವಿಧಾನಗಳಿಂದ ಪತ್ತೆ ಹಚ್ಚುತ್ತಾರೆ. ಇವುಗಳಲ್ಲಿ ಆಬ್ಸಲ್ಯೂಟ್ (ರೇಡಿಯೋಮೆಟ್ರಿಕ್) ಡೇಟಿಂಗ್ ವಿಧಾನ ಹೆಚ್ಚು ನಿಖರವಾದುದು. ರಿಲೆಟೀವ್ ಡೇಟಿಂಗ್ ವಿಧಾನದಲ್ಲಿ ಶಿಲೆಯ ಪದರಗಳ ಬಾಹ್ಯ ಅಧ್ಯಯನ ಮಾಡಲಾಗುತ್ತದೆ. ಆಬ್ಸಲ್ಯೂಟ್ (ರೇಡಿಯೋಮೆಟ್ರಿಕ್) ಡೇಟಿಂಗ್ ವಿಧಾನದಲ್ಲಿ ಪ್ರಾಚೀನ ಪಳೆಯುಳಿಕೆ, ಶಿಲೆಗಳು ಅಥವಾ ಭೂಮಿಯಲ್ಲಿನ ರೇಡಿಯೋ‌ಆಕ್ಟೀವ್ ನಶಿಸುವಿಕೆಯ ಅಧ್ಯಯನದ ಮೂಲಕ ಅವುಗಳ ವಯಸ್ಸನ್ನು ಅಂದಾಜು ಮಾಡಲಾಗುತ್ತದೆ.

-ಡಾ. ಜೆ.ಬಾಲಕೃಷ್ಣ

j.balakrishna@gmail.com




ಬುಧವಾರ, ಮೇ 04, 2011

ವ್ಯಂಗ್ಯಚಿತ್ರ


5ನೇ ಮೇ 2011ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ನನ್ನ ಈ ವ್ಯಂಗ್ಯಚಿತ್ರ:

ಬುಧವಾರ, ಏಪ್ರಿಲ್ 27, 2011

ನನ್ನ `ನೆನಪುಗಳಿಗೇಕೆ ಸಾವಿಲ್ಲ?' (ಕಥಾ ಸಂಕಲನ) ಮತ್ತು `ಮಳೆಬಿಲ್ಲ ನೆರಳು' (ವಿಜ್ಞಾನ ಲೇಖನಗಳ ಸಂಕಲನ) ಕೃತಿಗಳ ಲೋಕಾರ್ಪಣೆ

ನನ್ನ `ನೆನಪುಗಳಿಗೇಕೆ ಸಾವಿಲ್ಲ?' (ಕಥಾ ಸಂಕಲನ) ಮತ್ತು `ಮಳೆಬಿಲ್ಲ ನೆರಳು' (ವಿಜ್ಞಾನ ಲೇಖನಗಳ ಸಂಕಲನ) ಕೃತಿಗಳ ಬಿಡುಗಡೆ 26/04/2011ರಂದು ಕನ್ನಡ ಭವನದ `ನಯನ' ಸಭಾಂಗಣದಲ್ಲಿದಲ್ಲಿ ನಡೆಯಿತು. ಬರಹ ಪಬ್ಲಿಷಿಂಗ್ ಹೌಸ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ. ಜಿ ರಾಮಕೃಷ್ಣ ಕೃತಿಗಳ ಲೋಕಾರ್ಪಣೆ ಮಾಡಿದರು. `ನೆನಪುಗಳಿಗೇಕೆ ಸಾವಿಲ್ಲ?' ಕಥಾ ಸಂಕಲನವನ್ನು ಡಾ.ಕೆ ವೈ ನಾರಾಯಣ ಸ್ವಾಮಿ ಪರಿಚಯಿಸಿದರು ಹಾಗೂ `ಮಳೆಬಿಲ್ಲ ನೆರಳು' ವಿಜ್ಞಾನ ಲೇಖನಗಳ ಸಂಕಲನವನ್ನು ಮಂಜುನಾಥ ಅದ್ದೆ ಪರಿಚಯಿಸಿದರು. ಪ್ರಕಾಶಕರಾದ ಡಾ. ಎಂ ಬೈರೇಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾನು ರಚಿಸಿದ ವ್ಯಂಗ್ಯ ಚಿತ್ರಗಳ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿತ್ತು.

ಚಿತ್ರ ಕೃಪೆ: ಶಿವಪ್ರಸಾದ್, http://avadhimag.com/?p=33264






ಭಾನುವಾರ, ಏಪ್ರಿಲ್ 17, 2011

ನನ್ನ ಪುಸ್ತಕಗಳ ಬಿಡುಗಡೆ ಹಾಗೂ ವ್ಯಂಗ್ಯಚಿತ್ರ ಪ್ರದರ್ಶನ

ಆತ್ಮೀಯರೆ,
ಇದೇ ತಿಂಗಳ 26ರಂದು (26/04/2011) ಸಂಜೆ 6 ಗಂಟೆಗೆ ನನ್ನ
'ನೆನಪುಗಳಿಗೇಕೆ ಸಾವಿಲ್ಲ' - ಕಥಾಸಂಕಲನ ಹಾಗೂ
'ಮಳೆಬಿಲ್ಲ ನೆರಳು' - ವಿಜ್ಞಾನ ಲೇಖನಗಳ ಸಂಕಲನ ಬಿಡುಗಡೆಯಾಗುತ್ತಿದೆ.

ಪುಸ್ತಕಗಳ ಬಿಡುಗಡೆ ಮತ್ತು ಅಧ್ಯಕ್ಷತೆ: ಡಾ.ಜಿ.ರಾಮಕೃಷ್ಣ
'ನೆನಪುಗಳಿಗೇಕೆ ಸಾವಿಲ್ಲ' ಕೃತಿ ಪರಿಚಯ: ಡಾ.ಕೆ.ವೈ.ನಾರಾಯಣಸ್ವಾಮಿ
'ಮಳೆಬಿಲ್ಲ ನೆರಳು' ಕೃತಿ ಪರಿಚಯ: ಶ್ರೀ ಅದ್ದೆ ಮಂಜುನಾಥ್

ಸ್ಥಳ: ನಯನ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು

ಎಲ್ಲರಿಗೂ ಸ್ವಾಗತ

ಪುಸ್ತಕ ಪರಿಚಯ ಇಲ್ಲಿದೆ:



ಮಳೆಬಿಲ್ಲ ನೆರಳು- ವಿಜ್ಞಾನ ಲೇಖನಗಳ ಸಂಕಲನ

ಪುಟಗಳು:244, ಬೆಲೆ ರೂ.150-00

ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

"ಮೇಲುನೋಟಕ್ಕೆ ವಿಜ್ಞಾನದ ಲೇಖನಗಳು ಎಂಬಂಥೆ ತೋರಿದರೂ ಸೂಕ್ಷ್ಮ ಮತ್ತು ಸಮಗ್ರ, ವೈಯುಕ್ತಿಕ ಮತ್ತು ಸಾಮಾಜಿಕ ಸ್ಥಳೀಯ ಮತ್ತು ಜಾಗತಿಕ ಎಂಬ ಧ್ರುವೀಕರಣವಿಲ್ಲದ ಅಖಂಡ ಗ್ರಹಿಕೆ ಮತ್ತು ಸಂಕೀರ್ಣ ನೇಯ್ಗೆಯ ಮೂಲಕ ಕೇವಲ ಮಾಹಿತಿಯ ತಂತ್ರಜ್ಞಾನವಾಗುಳಿಯದೆ ಸಂಸ್ಕೃತಿ ಚಿಂತನೆಯ ನಿಜೋದಯವಾಗಿ ಸ್ಥಿತ್ಯಂತರಗೊಂಡಿರುವ ಇಲ್ಲಿನ ಬರೆಹಗಳನ್ನು `ನಿರಂಕುಶ ಸಾಹಿತ್ಯ'ವೆಂದೇ ಕರೆಯಲಿಚ್ಛಿಸುತ್ತೇನೆ. ಮಾನವ ಕೇಂದ್ರಿತವಾದ ಎಲ್ಲ ಬಗೆಯ ರಚನೆಗಳನ್ನು ನಿರಾಕರಿಸುತ್ತಾ ಉಳ್ಳವರು ಹುಟ್ಟುಹಾಕಿದ ಸುಳ್ಳು ಸೃಷ್ಟಿಯ `ಸಚರಾಚರವೆಲ್ಲ' ರಚನೆಗೆ ಬಾರದಂದಿನ ನೆಲೆಗೆ ನಮ್ಮನ್ನು ಕರೆದೊಯ್ಯುವ ಇಲ್ಲಿನ ಬರೆಹಗಳು ಅಪರಿಮಿತದ ಕತ್ತಲೆಯೊಳಗೆ ಈಜುತ್ತಿರುವ ವಿಪರೀತದ ಬೆಳಕಿನ ಹುಳುಗಳಾಗಿ ಕಾಣುತ್ತವೆ."

- ಪ್ರೊ.ವಿ.ಚಂದ್ರಶೇಖರ ನಂಗಲಿ

"ಪ್ರತಿ ಪ್ರಬಂಧದಲ್ಲಿಯೂ ಓದುಗನನ್ನು ತನ್ನದೆ ಅವಲೋಕನೆಯತ್ತ ನೂಕಿ, ಆ ಪ್ರಬಂಧ ರಚನೆಯಲ್ಲಿಯೇ ತಾನೂ ಒಂದು ಪಾತ್ರವಾಗುವಂತೆ ಪ್ರೇರೇಪಿಸುತ್ತಾರೆ. ಇದು ಬಾಲು ಅವರ ಲೇಖನಗಳ ಅನನ್ಯತೆ. ಬಹುಶಃ ಈ ವಿಭಿನ್ನತೆಗೆ ಕಾರಣ - `ವಿಜ್ಞಾನದಲ್ಲಿ ರಹಸ್ಯ ಬಗೆದಷ್ಟೂ ನಿಗೂಢ ಹೆಚ್ಚುತ್ತಾ ಹೋಗುತ್ತದೆ. ಆ ನಿಗೂಢದ ಬೆಡಗೇ ಜೀವನ ಪ್ರೀತಿಯ ಮೂಲ ಸೆಲೆ' ಎಂಬ ಅವರ ನಂಬಿಕೆ. ಈ ನಂಬಿಕೆಯಿಂದಲೇ ಬರೆಯುವ ಅವರು ತಮ್ಮೆಲ್ಲ ಲೇಖನಗಳಲ್ಲೂ, ವಿಜ್ಞಾನವನ್ನು ಓದುಗನ ಆಂತರ್ಯದ ಸಮೀಪಕ್ಕೆ ತಂದಿಡುವ ಕುಶಲತೆಯನ್ನು ಅಳವಡಿಸಿಕೊಂಡಿರುವುದು ವಿಶೇಷ."

- ಡಾ.ಕೆ.ಎನ್.ಗಣೇಶಯ್ಯ



ನೆನಪುಗಳಿಗೇಕೆ ಸಾವಿಲ್ಲ? - ಕಥಾ ಸಂಕಲನ; ಡಾ. ಜೆ.ಬಾಲಕೃಷ್ಣ

ಪುಟಗಳು:146; ಬೆಲೆ ರೂ.100-00

ಪ್ರಕಾಶಕರು: ಬರಹ ಪಬ್ಲಿಶಿಂಗ್ ಹೌಸ್, ಹಂಪಿನಗರ, ಬೆಂಗಳೂರು-560104

ಇದು ನನ್ನ ಮೊದಲ ಕಥಾ ಸಂಕಲನ. ನಾನು 1983ರಿಂದ ಬರೆದ ಹದಿನಾಲ್ಕು ಕತೆಗಳು ಇಲ್ಲಿವೆ. ಸಾವಿರಾರು ವರ್ಷಗಳ ಹಿಂದೆ ಆದಿಮಾನವ ಮಾಡಿದ ಕೆಲಸವನ್ನೇ ನಾನು ಮಾಡಿದ್ದೇನೆ. ಬಾಲ್ಯದಿಂದ ಇದುವರೆಗಿನ ನನ್ನ ಬದುಕಿನ ಅಲ್ಲೊಂದು ಇಲ್ಲೊಂದು ಎಳೆಯನ್ನು ತೆಗೆದು ಅದಕ್ಕೆ ನನ್ನ ಕಲ್ಪನೆಯ ಮತ್ತೊಂದಷ್ಟು ಎಳೆಗಳನ್ನು ಸೇರಿಸಿ `ಕತೆ ಕಟ್ಟುವ' ಪ್ರಯತ್ನ ಮಾಡಿದ್ದೇನೆ.





ಕೇಂದ್ರ ಸಾಹಿತ್ಯ ಅಕಾದೆಮಿಯಿಂದ ನಾನು ಅನುವಾದಿಸಿರುವ 'ಭಾರತದ ಮೊದಲ ಕಾದಂಬರಿಗಳು' ಇತ್ತೀಚೆಗೆ ಪ್ರಕಟವಾಗಿದೆ. ಅದರ ಪರಿಚಯವನ್ನೂ ಇಲ್ಲಿ ನೀಡಿದ್ದೇನೆ.

ಭಾರತದ ಮೊದಲ ಕಾದಂಬರಿಗಳು: ಮೂಲ ಸಂಪಾದಕರು: ಮೀನಾಕ್ಷಿ ಮುಖರ್ಜಿ

ಕನ್ನಡ ಅನುವಾದ: ಜೆ.ಬಾಲಕೃಷ್ಣ

ಪುಟಗಳು: 21+282; ಬೆಲೆ:ರೂ.175-00

ಪ್ರಕಾಶಕರು: ಸಾಹಿತ್ಯ ಅಕಾದೆಮಿ; ನವದೆಹಲಿ

ಯಾವುದೇ ಸಾಹಿತ್ಯ ಪ್ರಕಾರದ ಪ್ರಾರಂಭ ಮಸುಕು ಮಸುಕಾಗಿರುವಂತೆ ಭಾರತೀಯ ಕಾದಂಬರಿಗಳ ಪ್ರಾರಂಭವೂ ಮಸಕು ಮಸುಕಾಗಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷರು ಪರಿಚಯಿಸಿದ ಇಂಗ್ಲಿಷ್ ಶಿಕ್ಷಣದ ನೇರ ಪರಿಣಾಮದಿಂದಾಗಿ ಭಾರತದ ಕಾದಂಬರಿ ಒಂದು ಎರವಲು ಪ್ರಕಾರವೆಂಬ ಅನಿಸಿಕೆ ಬಹಳ ಕಾಲ ಪ್ರಶ್ನಾತೀತವಾಗಿ ಉಳಿದಿತ್ತು. ಆದರೆ ಇಂತಹ ಸಿದ್ಧಾಂತಗಳನ್ನು ಮರುಪರೀಕ್ಷಿಸುವ ಮತ್ತು ಭಾರತದಂತಹ ಬಹುಸಂಸ್ಕೃತಿಯ ಹಾಗೂ

ಬಹು ಭಾಷಾ ಪರಂಪರೆ ಆಯಾ ಚಾರಿತ್ರಿಕ-ಸಾಮಾಜಿಕ ಘಟ್ಟಗಳಲ್ಲಿ ಸಾಹಿತ್ಯದ ಈ ಪ್ರಕಾರದ ಮೇಲೆ ಬೀರಿರುವ ಪರಿಣಾಮಗಳನ್ನು ಈ ಕೃತಿ ಪರಿಶೋಧಿಸುವ ಪ್ರಯತ್ನ ಮಾಡುತ್ತದೆ. ಭಾರತದಲ್ಲಿ ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ರಾಷ್ಟ್ರದ ಪರಿಕಲ್ಪನೆಯೊಂದಿಗೇ ಕಾದಂಬರಿ ಪ್ರಕಾರ ಉಗಮವಾಯಿತೆನ್ನುತ್ತಾರೆ ಕೆಲ ಸಾಹಿತ್ಯ ಚರಿತ್ರಕಾರರು. ಈ ಸಂಪುಟವು ಸಾಹಿತ್ಯ ವಿಮರ್ಶಕರು, ಚರಿತ್ರಕಾರರು ಮತ್ತು ರಾಜಕೀಯ ತಾತ್ವಿಕ ಸಿದ್ಧಾಂತಕಾರರು ರಚಿಸಿರುವ ಹದಿನಾಲ್ಕು ಪ್ರಬಂಧಗಳನ್ನು ಒಳಗೊಂಡಿದೆ ಹಾಗೂ ಅವು ವಿವಿಧ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿಗಳನ್ನು ಮತ್ತು ಅವು ರಚನೆಗೊಂಡ ಸಂದರ್ಭಗಳನ್ನು ಪರಾಮರ್ಶಿಸುತ್ತದೆ.


ಮಂಗಳವಾರ, ಫೆಬ್ರವರಿ 08, 2011

ನನ್ನ ಹೊಸ ಪುಸ್ತಕ- `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ'


ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ನನ್ನ `ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಎಂಬ ಕೃತಿಯನ್ನು ಪ್ರಕಟಿಸಿದೆ. ಅದರ ಕಿರು ಪರಿಚಯ ಈ ಮುಂದಿನಂತಿದೆ:
`ಕೃಷಿವಿಜ್ಞಾನ ಸಾಹಿತ್ಯ ನಡೆದು ಬಂದ ಹಾದಿ' ಒಂದು ಅಪೂರ್ವ ಮಾಹಿತಿಗಳನ್ನು ಒಳಗೊಂಡ ಕಿರುಪುಸ್ತಕ. ಕೃಷಿಗೆ ಸಂಬಂಧಿಸಿದಂತೆ ಪಾರಂಪರಿಕವಾದ ಜ್ಞಾನ ಮಾತ್ರವಿದ್ದು ಅವುಗಳನ್ನು ತಲೆಮಾರಿನಿಂದ ತಲೆಮಾರಿಗೆ ಉಳಿಸಿಕೊಂಡು ಬರಲಾಗಿದೆ. ಹಿಂದೆ ಕೃಷಿಯು ಜೀವಕ್ಕೆ ಅನಿವಾರ್ಯವಾದ ಆಹಾರವನ್ನು ಉತ್ಪಾದಿಸುವ ಒಂದು ಕೆಲಸ ಎಂಬ ಭಾವನೆ ಮಾತ್ರ ಇತ್ತು. ಇಂದು ಕೃಷಿ ಲಾಭ ತಂದುಕೊಡುವ ಒಂದು ವ್ಯವಹಾರವೇ ಆಗಿದೆ. ಇಂತಹ ಸಂದರ್ಭದಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆಯ ಮೂಲಕ ಕೃಷಿಯು ಸಾಗುವಳಿ ಪದ್ಧತಿಯಲ್ಲಿ ಸುಧಾರಣೆ ಹಾಗೂ ಇಳುವರಿಯಲ್ಲಿನ ಹೆಚ್ಚಳ ಇವೆಲ್ಲದರ ಮೂಲಕ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಪಾರಂಪರಿಕ ಕೃಷಿ ಪದ್ಧತಿಯಿಂದ ಆಧುನಿಕ ವಾಣಿಜ್ಯ ವ್ಯವಸಾಯ ಪದ್ಧತಿಗಳವರೆಗಿನ ಬೆಳವಣಿಗೆಯಲ್ಲಿ ಕೃಷಿವಿಜ್ಞಾನ ಕ್ಷೇತ್ರದಲ್ಲಿ ದುಡಿದ ವ್ಯಕ್ತಿಗಳ, ಸಂಘಸಂಸ್ಥೆಗಳ ಚಿಂತನೆಗಳು ಮಿಳಿತವಾಗಿವೆ. ಹೀಗೆ ಕೃಷಿ ಅಭಿವೃದ್ಧಿಯ ಕುರಿತ ಚಿಂತನೆಗಳು ಕೃಷಿವಿಜ್ಞಾನ ಎಂಬ ಹೊಸ ಜ್ಞಾನಶಾಖೆಯನ್ನು ರೂಪಿಸಿವೆ. ಈ ಜ್ಞಾನದ ವಿವರಣೆಗಳ ಸಾಹಿತ್ಯದ ಸ್ವರೂಪವನ್ನು ಈ ಕೃತಿ ಸ್ಥೂಲವಾಗಿ ವಿವರಿಸಿದೆ. ಜೆ.ಬಾಲಕೃಷ್ಣ ಅವರು ಮೂಲತಃ ವಿಜ್ಞಾನ ಲೇಖಕರಾಗಿರುವುದರಿಂದ ಅವರ ಅಧ್ಯಯನದ ಅಗಾಧತೆಯು ಈ ಕೃತಿಯಲ್ಲಿ ಅನಾವರಣಗೊಂಡಿದೆ.
-ಡಾ.ಎ.ಮುರಿಗೆಪ್ಪ
ಕುಲಪತಿ

ಗುರುವಾರ, ಜನವರಿ 27, 2011

ಕತೆ- ಮೂವರು ಸೋದರಿಯರು

ಜನವರಿ 2011ರ `ಮಯೂರ' ಮಾಸಪತ್ರಿಕೆಯಲ್ಲಿ ನನ್ನ ಕತೆ `ಮೂವರು ಸೋದರಿಯರು' ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ.



ಮೂವರು ಸೋದರಿಯರು
ಆಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ ಹೊರಟೆ. ಅಲ್ಲಿ ಯಾರೂ ಕಾಣಲಿಲ್ಲ. ಪಡಸಾಲೆಯ ಪಕ್ಕದಲ್ಲಿನ ಕೋಣೆಯೊಂದರ ಬಾಗಿಲಿನ ಮೇಲೆ `ಆಫೀಸ್' ಎಂದು ಬರೆಯಲಾಗಿತ್ತು, ಆದರೆ ಅದರ ಬಾಗಿಲು ಮುಚ್ಚಿತ್ತು. ಕೈನಲ್ಲಿದ್ದ ವಾಚಿನಲ್ಲಿ ಸಮಯ ನೋಡಿದೆ. ಎಂಟು ಗಂಟೆ. ಬಂದದ್ದು ತೀರಾ ಬೇಗ ಆಯಿತೇನೋ ಎನ್ನಿಸಿ, ಯಾರಾದರೂ ಕಾಣುತ್ತಾರೇನೋ ಎಂದು ಪಡಸಾಲೆಯ ಒಳಕ್ಕೆ ಹೊರಟೆ. ಅಲ್ಲಿ ಒಂದು ಹೆಂಗಸು ಕಸ ಗುಡಿಸುತ್ತಿದ್ದವಳು ನನ್ನನ್ನು ನೋಡಿ, ಪೊರಕೆ ಅಲ್ಲೇ ಇಟ್ಟು ನನ್ನೆಡೆಗೆ ಬಂದಳು. `ಇಲ್ಲಿ, ಆಫೀಸಿನಲ್ಲಿ ಯಾರೂ ಇಲ್ಲವೆ?' ನಾನು ಕೇಳಿದೆ. `ಆಫೀಸು ಒಂಭತ್ತು ಗಂಟೆಗೆ ತೆರೆಯುತ್ತದೆ. ಯಾರು ಬೇಕಾಗಿತ್ತು?' ಆಕೆ ಕೇಳಿದಳು. ಒಂದೆರಡು ಗಳಿಗೆ ಹಾಗೆಯೇ ಇದ್ದೆ, ಏನು ಹೇಳಲೂ ತೋಚದೆ. `ಯಾರನ್ನಾದರೂ ನೋಡಬೇಕಿತ್ತೆ?' ಆಕೆ ಪುನಃ ಕೇಳಿದಳು. `ಹ್ಹಾಂ.... ಇಲ್ಲಿ ವೃದ್ಧಾಶ್ರಮದಲ್ಲಿ ಯಾರಾದರೂ ಜಾಕೋಬ್ ಎನ್ನುವವರಿದ್ದಾರೆಯೆ?' ಕೇಳಿದೆ. `ಜಾಕೋಬ್... ಜಾಕೋಬ್ ಹೆಸರಿನ ಇಬ್ಬರು ಮೂವರಿದ್ದಾರೆ... ಅವರ ಪೂರ್ತಿ ಹೆಸರು ಗೊತ್ತೆ? ಯಾವುದಕ್ಕೂ ಫಾದರ್ ಬರಬೇಕು. ಅವರು ಆಫೀಸಿಗೆ ಒಂಭತ್ತು ಗಂಟೆಗೆ ಬಂದು ಹೋಗುತ್ತಾರೆ. ಬನ್ನಿ ಆಫೀಸಿನಲ್ಲಿ ಕೂತಿರಿ' ಎಂದು ತನ್ನ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕೀಲಿಗೊಂಚಲು ತೆಗೆದು ಆಫೀಸಿನೆಡೆಗೆ ಹೊರಟಳು. ನಾನು ಅವಳನ್ನು ಹಿಂಬಾಲಿಸಿದೆ.

 ಆಫೀಸಿನಲ್ಲಿ ಭೇಟಿ ನೀಡುವವರು ಕೂಡಲೆಂದು ಮೂಲೆಯೊಂದರಲ್ಲಿ ಸೋಫಾ ಹಾಕಿದ್ದರು. ರಾತ್ರಿಯ ಪ್ರಯಾಣದಿಂದ ಕೊಂಚ ಬಳಲಿದ್ದೆ. ಸೋಫಾ ದೊರೆತಿದ್ದು ಸುಪ್ಪತ್ತಿಗೆ ದೊರೆತಂತಾಯಿತು. `ನೀರೇನಾದರೂ ಬೇಕಾದರೆ ಅಲ್ಲೇ ಇದೆ ನೋಡಿ' ಎಂದಳು ಆಕೆ. ಗೋಡೆಯ ಪಕ್ಕದಲ್ಲಿ ನೀರಿನ ಫಿಲ್ಟರ್ ಇಟ್ಟಿದ್ದರು. `ಜಾಕೋಬ್... ನಿಮಗೇನಾಗಬೇಕು? ನಿಮ್ಮ ನೆಂಟರೆ?' ಆಕೆ ಹೊರಡುವ ಮುನ್ನ ಕೇಳಿದಳು. `ಹ್ಹಾಂ... ಇಲ್ಲ.... ಪರಿಚಯದವರು. ಅವರನ್ನು ಕಂಡು ಬಹಳ ವರ್ಷಗಳಾಗಿವೆ. ಕಂಡುಹೋಗೋಣ ಎಂದು ಬಂದೆ' ಎಂದು ಹೇಳಿದೆ. ಆಕೆ ನನ್ನೆಡೆಗೇ ನೋಡುತ್ತಿದ್ದು ಹೊರಹೊರಟಳು.
 ಸೋಫಾಗೆ ಹಿಂದಕ್ಕೆ ತಲೆಯೊರಗಿಸಿ ಕಣ್ಣು ಮುಚ್ಚಿದೆ. ಇಪ್ಪತ್ತೈದು ವರ್ಷಗಳು! ಎಷ್ಟು ಬೇಗ ಕಳೆದುಹೋಗಿದೆ! ನಾನು ಎಂಭತ್ತೇಳರಲ್ಲಿ ಮಡಿಕೇರಿ ಬಿಟ್ಟವನು ಕಳೆದ ವಾರವಷ್ಟೇ ಅಲ್ಲಿಗೆ ಕಾಲಿರಿಸಿದ್ದು. ಸಮಯ ಎಷ್ಟು ಬೇಗ ಹೋಗಿಬಿಡುತ್ತದೆ! ಮೊನ್ನೆ ಮೊನ್ನೆ ತಾನೆ ಮಡಿಕೇರಿಗೆ ಮೊದಲಬಾರಿ ಹೋಗಿದ್ದೆನ್ನಿಸುತ್ತದೆ. ಈ ಸಾರಿ ಬ್ರಾಂಚ್ ಇನ್ಸ್ಪೆಕ್ಶನ್‌ಗೆ ನಾನೇ ಮಡಿಕೇರಿಗೆ ಹಾಕಿಸಿಕೊಂಡೆ, ನೋಡಿ ಬಹಳ ವರ್ಷಗಳಾಗಿದೆ ನೋಡಿಬರೋಣ ಎಂದು.

 ಎಂಭತ್ತನಾಲ್ಕರಲ್ಲಿ ನಾನು ಆಗ ತಾನೆ ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಎಂಎಸ್.ಸಿ. ಮುಗಿಸಿದ್ದೆ. ಮುಗಿಸಿ ಇನ್ನೂ ಹಾಸ್ಟೆಲ್ ಖಾಲಿ ಮಾಡಿರಲಿಲ್ಲ. ಅಷ್ಟರಲ್ಲಿ ಈ ಹಿಂದೆ ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದ ಫಲಿತಾಂಶ ಬಂದು ನನಗೆ ಸಂದರ್ಶನಕ್ಕೆ ಆಹ್ವಾನ ಬಂದಿತ್ತು. ಸಂದರ್ಶನದಲ್ಲಿ ನಾನು ಆಯ್ಕೆಯಾಗಿ ನನ್ನ ಮೊದಲ ಪೋಸ್ಟಿಂಗ್ ಮಡಿಕೇರಿಗಾಗಿತ್ತು. ಕೊಡಗಿನಲ್ಲಿ ನನಗೆ ಉದ್ಯೋಗಾವಕಾಶ ದೊರೆತಿದ್ದು ನನಗೆ ಸಂತೋಷದ ವಿಷಯವೇ ಆಗಿತ್ತು. ಕಾಲೇಜಿನಲ್ಲಿದ್ದಾಗ ಶೈಕ್ಷಣಿಕ ಪ್ರವಾಸ ಹೊರಟಾಗಲೇ ನಾನು ಕೊಡಗನ್ನು ನೋಡಿದ್ದದ್ದು. ಜುಲೈ ತಿಂಗಳ ಕೊನೆಯಲ್ಲಿ ನಾನು ಮಡಿಕೇರಿಗೆ ಬಂದಿಳಿದಾಗ ಅಲ್ಲಿನ ಮಳೆ ಮತ್ತು ಚಳಿಯನ್ನು ಕಂಡು ಹೆದರಿದ್ದೆ. ನನಗೆ ಹೆದರಿಕೆ ಇದ್ದದ್ದು ನನ್ನ ಆಸ್ತಮಾದ್ದು. ಈ ವಾತಾವರಣದಲ್ಲಿ ನನ್ನ ಆರೋಗ್ಯ ಏನಾಗಿಬಿಡುತ್ತದೋ ಎಂಬ ಆತಂಕ ಇತ್ತು.

 ಬ್ಯಾಂಕಿಗೆ ರಿಪೋರ್ಟ್ ಮಾಡಿಕೊಂಡಾಗ ಬ್ಯಾಂಕಿನಲ್ಲಿನ ಸಹೋದ್ಯೋಗಿಗಳು ನಾನೂ `ಬ್ಯಾಚುಲರ್' ಎಂದು ತಿಳಿದು ಒಂದಷ್ಟು ಜನ ಬ್ಯಾಂಕಿನ `ಬ್ಯಾಚುಲರ್'ಗಳು ಮನೆ ಮಾಡಿಕೊಂಡಿದ್ದಾರೆಂದೂ ನನ್ನನ್ನು ಅವರ ಜೊತೆಗೆ ಸೇರಿಕೊಳ್ಳಲು ಸಲಹೆ ಮಾಡಿದರು. ನನಗೂ ಅದೇ ಬೇಕಿತ್ತು. ಆಗ ತಾನೇ ಕೆಲಸ ದೊರೆತಿದೆ. ಸಂಬಳ ಕೂಡ ಅಷ್ಟು ಹೆಚ್ಚಿಲ್ಲ. ಒಬ್ಬನೇ ಪ್ರತ್ಯೇಕ ಮನೆ ಅಥವಾ ರೂಮು ಬಾಡಿಗೆಗೆ ಪಡೆಯುವ ಬದಲು ಇತರರ ಜೊತೆಗಿದ್ದರೆ ಬಾಡಿಗೆಯಲ್ಲೂ ಉಳಿತಾಯವಾಗುತ್ತದೆ ಹಾಗೂ ಹೊಸ ಜಾಗದಲ್ಲಿ ಜೊತೆಗಾರರೂ ಇರುತ್ತಾರೆ. ಬೇರೆ ಬ್ಯಾಂಕುಗಳಲ್ಲಿ ಕೆಲಸ ಮಾಡುತ್ತಿದ್ದ ಆ `ಬ್ಯಾಚುಲರ್'ಗಳೊಂದಿಗೆ ಮಾತನಾಡಿ ಸಂಜೆಯೇ ಹೋಟೆಲಿನ ರೂಮು ಖಾಲಿಮಾಡಿ ಅವರ ಮನೆಗೆ ಹೊರಟೆ.

 ಚರ್ಚ್ ಬೀದಿಯಲ್ಲಿದ್ದ ಆ ಬಾಡಿಗೆ ಮನೆಯ ಯಜಮಾನ ಜಾಕೋಬ್ ಎಂದು, ಹಾಗೂ ಆತನಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿಯಿತು. `ಹುಷಾರಾಗಿರಿ' ಎಂದರು ಬ್ಯಾಂಕಿನ ಸಹೋದ್ಯೋಗಿಗಳು ತಮಾಷೆಗಾಗಿ. ದೊಡ್ಡ ಕಾಂಪೌಂಡ್ ಇದ್ದ ಆ ಮನೆಗಳಲ್ಲಿ ಎರಡನ್ನು ನಮ್ಮಂತಹವರಿಗೆ ಬಾಡಿಗೆ ನೀಡಿದ್ದರು. ಒಂದೊಂದು ಮನೆಯಲ್ಲಿ ಮೂರು-ನಾಲ್ಕು ಜನ ಬ್ಯಾಚುಲರ್‌ಗಳು ಬಾಡಿಗೆಗಿದ್ದರು. ಜಾಕೋಬ್ ಮತ್ತು ಕುಟುಂಬದವರಿದ್ದ ಮನೆ ಪಕ್ಕ ಖಾಲಿ ಜಾಗವಿದ್ದು ಅಲ್ಲೊಂದು ಸೇದು ಬಾವಿಯಿತ್ತು. ಅದರಿಂದಲೇ ನಾವೆಲ್ಲಾ ನೀರು ಸೇದಿಕೊಳ್ಳಬೇಕಾಗಿತ್ತು. ಬಾಡಿಗೆಗೆ ನೀಡಿದ್ದ ಮನೆಗಳು ಕೊಂಚ ಹಿಂದಕ್ಕೆ ಇದ್ದವು. ಹಿತ್ತಲ ಬಾಗಿಲು ತೆರೆದರೆ ಹಿಂದೆ ಕಾಫಿ ತೋಟವಿತ್ತು.

 ಬಯಲುಸೀಮೆಯವನಾದ ನನಗೆ ಮಲೆನಾಡಿನ ಈ ರೀತಿಯ ಮನೆ ಇಷ್ಟವಾಯಿತು. ನಾನು ಆ ಮನೆಗೆ ಹೊರಟ ದಿನ ಯಾವುದೋ ಹಬ್ಬದ ಪ್ರಯುಕ್ತ ಶುಕ್ರವಾರ- ಶನಿವಾರ ರಜೆ ಬಂದದ್ದರಿಂದ ಆ ಮನೆಯಲ್ಲಿದ್ದ ಗೆಳೆಯರು ಊರಿಗೆ ಹೊರಟರು. ಹೊರಡುವ ಮೊದಲು ಅವರು ಮನೆಯ ಮಾಲೀಕನ ಪರಿಚಯ ತಿಳಿಸಿಕೊಟ್ಟರು. ಜಾಕೋಬ್ಗೆ ವಯಸ್ಸಾಗಿದೆ. ಹೆಚ್ಚು ಓಡಾಡಲಾರ. ಇಲ್ಲೇ ಕಾಂಪೌಂಡಿನಲ್ಲಿ ಓಡಾಡುತ್ತಿರುತ್ತಾನೆ. ಹೆಚ್ಚು ಮಾತನಾಡುವುದಿಲ್ಲ. ಆತನ ಹೆಂಡತಿ ಎಂಥದೋ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದಾಳೆ. ಆಕೆ ಹೊರಗೆ ಓಡಾಡುವುದನ್ನು ಯಾರೂ ಕಂಡಿಲ್ಲ. ಅವರಿಗೆ ಮೂವರು ಹೆಣ್ಣುಮಕ್ಕಳು. ದೊಡ್ಡವಳು ರೀನಾ, ಶಾಲೆಯೊಂದರಲ್ಲಿ ಟೀಚರ್; ಆಕೆಗೆ ಮದುವೆಯಾಗಿಲ್ಲ. ಆಕೆಯ ತಂಗಿ ಮ್ಯಾಗಿ, ಮದುವೆಯಾಗಿದೆ; ಗಂಡ ಮಸ್ಕಟ್‌ನಲ್ಲಿದ್ದಾನಂತೆ. ಆಕೆಗೆ ರಾಬರ್ಟ್ ಎಂಬ ಐದು ವರ್ಷದ ಮಗನಿದ್ದಾನೆ. ಕೊನೆಯ ತಂಗಿ ಲೀಸಾ- ಆಕೆ ಹುಚ್ಚಿ. ಮದುವೆಯಾಗಿತ್ತು, ಆದರೆ ಗಂಡ ಈಗ ಬಿಟ್ಟಿದ್ದಾನೆ. ಆಕೆ ಹುಚ್ಚಿಯಾದರೂ ಯಾರಿಗೂ ಎಂದು ತೊಂದರೆ ಕೊಟ್ಟಿಲ್ಲ.

 ನಾನು ಆ ಮನೆಗೆ ಬಂದ ಮೊದಲ ದಿನ ರಾತ್ರಿಯೇ ಒಬ್ಬಂಟಿಯಾಗಿ ಕಳೆಯಬೇಕಾಯ್ತು. ಆಗ ತಾನೆ ಊರಿಂದ ನಾನು ಬಂದದ್ದರಿಂದ ಪುನಃ ವಾಪಸ್ಸು ಹೋಗಲು ಬೇಸರವಾಯ್ತು. ಮೂರು ದಿನ ರಜೆಯಲ್ಲಿ ಮಡಿಕೇರಿ ಸುತ್ತ ಮುತ್ತ ಎಲ್ಲಾ ಸುತ್ತಾಡೋಣವೆಂದುಕೊಂಡೆ. ಮಳೆ ಧೋ ಎಂದು ಸುರಿಯುತ್ತಿತ್ತು. ಮಲೆನಾಡಿನ ಮಳೆಯ ಬಗ್ಗೆ ಕೇಳಿದ್ದೆನಷ್ಟೆ ಹೊರತು ಈ ರೀತಿಯ ಅನುಭವವಾಗಿರಲಿಲ್ಲ. ವಿಪರೀತ ಚಳಿಯಿತ್ತು. ಸ್ವೆಟರ್, ಮಫ್ಲರ್ ಧರಿಸಿ ಮೇಲೊಂದು ಶಾಲು ಹೊದ್ದು ರಾತ್ರಿ ಗುಬ್ಬಚ್ಚಿಯಂತೆ ಮುದುಡಿಕೊಂಡು ಮಲಗಿದೆ. 

ಲೀಸಾ
ರಾತ್ರಿ ಎಂಟು ಗಂಟೆಗೆಲ್ಲಾ ಊರು ಬಿಕೋ ಎನ್ನುತ್ತಿತ್ತು. ಕರೆಂಟ್ ಸಹ ಹೋಗಿತ್ತು. ಹೊಸ ಜಾಗವಾದದ್ದರಿಂದಲೋ ಏನೋ ನಿದ್ರೆ ಬರುತ್ತಿರಲಿಲ್ಲ. ಮೋಂಬತ್ತಿಯನ್ನೊಂದು ಹೊತ್ತಿಸಿ ಅದರ ಬೆಳಕಿನಲ್ಲಿ ಮ್ಯಾಗಸಿನ್ ತಿರುವಿ ಹಾಕುತ್ತಿದ್ದೆ. ಹೆಂಚಿನ ಮನೆಯಾದ್ದರಿಂದ ಮಳೆಯ ಸದ್ದು ಇನ್ನೂ ಜೋರಾಗಿತ್ತು. ಆಗಾಗ ಹಿಂದೆ ಇದ್ದ ಕಾಫಿ ತೋಟದಲ್ಲಿ ಸರಸರ ಸದ್ದಾಗುತ್ತಿತ್ತು. ಇಳಿಜಾರಿನಲ್ಲಿ ಮನೆ ಕಟ್ಟಿದ್ದುದರಿಂದ ವೆರಾಂಡಾದಿಂದ ನಡುಮನೆಗೆ ಹೋಗಲು ಒಂದೆರಡು ಮೆಟ್ಟಲು ಹಾಗೂ ನಡುಮನೆಯಿಂದ ಅಡುಗೆ ಮನೆಗೆ ಇಳಿಯಲು ಒಂದೆರಡು ಮೆಟ್ಟಲು ಹಾಗೂ ಹಿಂದೆಯಿದ್ದ ಬಚ್ಚಲ ಮನೆಗೆ ಒಂದೆರಡು ಮೆಟ್ಟಲು ಇಳಿಯಬೇಕಾಗಿತ್ತು. ಪ್ರತಿಸಾರಿ ಬಾತ್ ರೂಮಿಗೆ ಹೋಗಿಬರಲು ಒಂದಷ್ಟು ಕಸರತ್ತು ನಡೆಸಬೇಕಾಗುತ್ತಿತ್ತು. ರಾತ್ರಿಯ ನಿಶ್ಶಬ್ದ ಒಂದು ರೀತಿ ನನ್ನನ್ನು ಹೆದರಿಸುವಂತಿತ್ತು. ನನಗಂತೂ ಎಲ್ಲವೂ ಹೊಸದು, ಹೊಸ ರೀತಿಯ ಅನುಭವ. ಆಗಿನ್ನೂ ಟಿ.ವಿ. ಬಂದಿರಲಿಲ್ಲ. ಕ್ಯಾಸೆಟ್ ಪ್ಲೇಯರ್‌ನಲ್ಲಿ ಹಾಡು ಕೇಳೋಣವೆಂದರೆ ಕರೆಂಟ್ ಇಲ್ಲ. ಚಳಿಯಲ್ಲಿ ಮುದುಡಿದ್ದ ನನಗೆ ಯಾರೋ ಬಾಗಿಲು ತಟ್ಟಿದಂತೆ ಅನ್ನಿಸಿತು. ನನ್ನ ಕಿವಿ ನಿಮಿರಿತು. ಮತ್ತೊಮ್ಮೆ ಸರಿಯಾಗಿ ಕೇಳಿಸಿಕೊಳ್ಳಲು ಯತ್ನಿಸಿದೆ. ಹೌದು, ಯಾರೋ ಬಾಗಿಲು ತಟ್ಟುತ್ತಿದ್ದರು.

 ಹಿಂದೆ ಕಾಫಿ ತೋಟದಲ್ಲಿ ಸರಸರ ಸದ್ದಾಯಿತು. `ಯಾರಿರಬಹುದು? ಈ ಮನೆಯಲ್ಲಿ ಮೊದಲೇ ಇದ್ದ ಕೆನರಾಬ್ಯಾಂಕಿನ ಸುರೇಶ ಅಥವಾ ಸ್ಟೇಟ್ ಬ್ಯಾಂಕಿನ ರಾಜಾರಾಮನ ಗೆಳೆಯರ್ಯಾರಾದರೂ ಇರಬಹುದೆ?' ಎಂದುಕೊಂಡು ಬಾಗಿಲು ತೆರೆಯಲು ಎದ್ದು ನಿಂತೆ. ಪುನಃ ಬಾಗಿಲು ತಟ್ಟಿದ ಸದ್ದಾಯಿತು. ತೆರೆಯಲೆ? ಅಥವಾ ಬೇಡವೆ? ಯೋಚಿಸುತ್ತಾ ಬಾಗಿಲ ಬಳಿ ಬಂದೆ. `ಯಾರು?' ಎಂದು ಕೇಳಿದೆ. ಉತ್ತರವಿಲ್ಲ. `ಯಾರು ಬೇಕು?' ಪುನಃ ಕೇಳಿದೆ. ಯಾರೂ ಉತ್ತರಿಸಲಿಲ್ಲ.

 ಆದರೆ ಪುನಃ ಬಾಗಿಲು ತಟ್ಟಿದರು. ತೆರೆದು ನೋಡೇಬಿಡೋಣ ಯಾರಿರಬಹುದು ಎಂದುಕೊಂಡು ಬಾಗಿಲು ತೆರೆದೆ. ಹೊರಗಿನ ದೃಶ್ಯ ನೋಡಿ ಬೆಚ್ಚಿಬಿದ್ದು ಒಂದೆರಡು ಹೆಜ್ಜೆ ಹಿಂದಿರಿಸಿದೆ. ಹೊರಗೆ ಹೆಣ್ಣೊಬ್ಬಳು ಎದುರಿಗೆ ಮೋಂಬತ್ತಿ ಹಿಡಿದು ನಿಂತಿದ್ದಳು. ಅದು ಗಾಳಿಗೆ ಆರದಂತೆ ಅದನ್ನು ಮತ್ತೊಂದು ಹಸ್ತದಲ್ಲಿ ಮುಚ್ಚಿಕೊಂಡಿದ್ದಳು. ಅವಳ ಉದ್ದನೆ ಕೂದಲು ಎರಡೂ ಭುಜಗಳ ಮೇಲೆ ಹರಡಿಕೊಂಡಿತ್ತು. ಆ ಮೋಂಬತ್ತಿಯ ಬೆಳಕಿನಲ್ಲಿ ಬೆಳಕು ನೆರಳಿನ ಆಟದಲ್ಲಿ ಅವಳ ಮುಖ ಒಂದು ರೀತಿ ಭಯಾನಕವಾಗಿ ಕಾಣುತ್ತಿದೆ ಎನ್ನಿಸಿ ನನಗೆ ಹೆದರಿಕೆಯಾಯಿತು. `ಯಾರು.... ಯಾರು ಬೇಕು?' ಎಂದೆ ತೊದಲುತ್ತಾ. ಆಕೆ ಅಲ್ಲೇ ನಿಂತು ನನ್ನನ್ನೇ ನೋಡುತ್ತಿದ್ದಳು. ಅವಳ ಮುಖದಲ್ಲಿ ಮುಗುಳ್ನಗೆ ಮೂಡಿತು. ಆಕೆ ಆಗ ಸುಂದರವಾಗಿದ್ದಾಳೆನ್ನಿಸಿತು. 'ಜೀಸಸ್ ಹೇಳಿದ....' ಎಂದಳು. ನನಗೆ ಅವಳ ಮಾತೇನೂ ಅರ್ಥವಾಗಲಿಲ್ಲ. ನಾನು ನಿಂತಲ್ಲಿಯೇ ಇದ್ದೆ. ಏರಿದ ಎದೆಬಡಿತ ಇನ್ನೂ ಕಡಿಮೆಯಾಗಿರಲಿಲ್ಲ. `ಜೀಸಸ್ ಹೇಳಿದ.... ನೀನೇ ನನ್ನ ಗಂಡನಂತೆ....' ಎಂದಳು. ಇನ್ನೂ ಬೆಚ್ಚಿಬಿದ್ದೆ ನಾನು. ಕೈಕಾಲು ನಡುಗತೊಡಗಿತು. ಅಷ್ಟರಲ್ಲಿ, `ಹೇ, ಲೀಸಾ!' ಎಂದು ಯಾರೋ ಮತ್ತೊಬ್ಬ ಹೆಂಗಸು ಜೋರಾಗಿ ಕೂಗಿದರು. ಈ ಹೆಂಗಸು ಅಲುಗಾಡಲಿಲ್ಲ. ಮತ್ತೇನೋ ಹೇಳಿದಳು. ಆ ಮಳೆಯ ಆರ್ಭಟದಲ್ಲಿ, ಹೆದರಿಕೊಂಡಿದ್ದ ನನಗೆ ಆಕೆ ಹೇಳಿದ್ದು ಏನೂ ಕೇಳಿಸಲಿಲ್ಲ. ಹಿಂದಿನಿಂದ ಕೂಗಿದ ಹೆಂಗಸು ಬಂದು `ಲೀಸಾ, ನಡಿ ಮನೆಗೆ' ಎಂದು ಈಕೆಯನ್ನು ಎಳೆದೊಯ್ದಳು. ಹೋಗುತ್ತಿದ್ದಾಗ ಆಕೆ ಕೈಯಲ್ಲಿ ಹಿಡಿದಿದ್ದ ಮೋಂಬತ್ತಿ ಆರಿಹೋಯಿತು. ತಕ್ಷಣ ನಾನು ಬಾಗಿಲು ಮುಚ್ಚಿ, ಚಿಲಕ ಜಡಿದು ಓಡಿ ಬಂದು ಮಲಗಿದೆ. ಆ ದಿನ ರಾತ್ರಿ ಸರಿಯಾಗಿ ನಿದ್ರೆಯೇ ಬರಲಿಲ್ಲ. ವಿಚಿತ್ರ ಕನಸಗಳು. ಚಳಿಯಲ್ಲಿ ಜ್ವರ ಬಂದಂತಾಗಿತ್ತು. ಯಾಕಾದರೋ ಈ ಊರಿಗೆ ಬಂದೆನೋ ಎನ್ನಿಸಿತ್ತು.

 ಮರುದಿನ ಬೆಳಿಗ್ಗೆ ಎದ್ದಾಗ ಗಂಟೆ ಒಂಭತ್ತಾಗಿತ್ತು. ಸುರಿಯುತ್ತಿದ್ದ ಮಳೆ ನಿಂತಿರಲಿಲ್ಲ. ಹೊರಗಿನ ಕಾಂಪೌಂಡಿನಲ್ಲಿದ್ದ ಬಾವಿಯಿಂದ ನೀರು ಸೇದಿಕೊಂಡು ಬಂದು ಕಾಯಲು ಸ್ಟೋವ್ ಮೇಲಿಟ್ಟೆ. ಒಂದು ರೀತಿಯ ವಿಚಿತ್ರ ಹೆದರಿಕೆಯಿಂದ ನೀರು ಸೇದುವಾಗ ಜಾಕೋಬ್ ಮನೆಯ ಕಡೆಗೆ ತಿರುಗಿ ಸಹ ನೋಡಲಿಲ್ಲ. ಕಾಫಿ ಮಾಡಿಕೊಂಡು ಪೇಪರ್ ಓದುತ್ತಿದ್ದಾಗ ಬಾಗಿಲು ತಟ್ಟಿದ ಸದ್ದಾಯಿತು. `ಮತ್ತೇನು ಬಂತು ಗ್ರಹಚಾರ' ಎಂದುಕೊಂಡೆ. ಪುನಃ ಬಾಗಿಲು ತಟ್ಟಿತು. ಅಳುಕಿನಿಂದಲೇ ಬಾಗಿಲು ತೆರೆದೆ. ಹೊರಗೆ ಹೆಂಗಸೊಬ್ಬಳು ನಿಂತಿದ್ದಳು. ಆದರೆ ಆಕೆ ರಾತ್ರಿ ಮೋಂಬತ್ತಿ ಹಿಡಿದುಬಂದ ಹೆಂಗಸಲ್ಲ. `ನನ್ನ ಹೆಸರು ರೀನಾ. ಜಾಕೋಬ್ರವರ ದೊಡ್ಡ ಮಗಳು. ಈ ಮನೆಗೆ ಹೊಸದಾಗಿ ಬಂದವರು ನೀವೇ ಅಲ್ಲವೆ? ನೀವು ಬಂದಿರುವುದಾಗಿ ಸುರೇಶ್ ಹೇಳಿದರು' ಎಂದಳು ಆಕೆ. `ಹೌದು, ಸುರೇಶ್ ಊರಿಗೇ ಹೋಗಿದ್ದಾರೆ', ನಾನೆಂದೆ. `ಗೊತ್ತು, ಅವರು ಊರಿಗೆ ಹೋಗುವಾಗಲೇ ನೀವು ಬಂದ ವಿಷಯ ತಿಳಿಸಿದರು. ರಾತ್ರಿ ಬಂದು ನಿಮಗೆ ತೊಂದರೆ ನೀಡಿದವಳು ನನ್ನ ತಂಗಿ ಲೀಸಾ. ಅದಕ್ಕೆ ನಿಮಗೆ ತಿಳಿಸಲು ಬಂದೆ. ನಿಮಗೆ ತೊಂದರೆ ಕೊಟ್ಟದ್ದಕ್ಕೆ ಕ್ಷಮೆ ಇರಲಿ' ಎಂದಳು. `ಪರವಾಗಿಲ್ಲ, ತೊಂದರೆ ಏನಿಲ್ಲಾ' ಎಂದೆ. ಅಷ್ಟರಲ್ಲಿ ರಾತ್ರಿಯ ಆತಂಕ, ಹೆದರಿಕೆ ಎಲ್ಲಾ ಮರೆತಿತ್ತು. `ಏನಾದರೂ ಬೇಕಾದಲ್ಲಿ ಕೇಳಿ, ಸಂಕೋಚಬೇಡ' ಎಂದಳು. `ಥ್ಯಾಂಕ್ಸ್' ಎಂದೆ. ಆಕೆ ಹೊರಟುಹೋದಳು.

 ಮಡಿಕೇರಿಗೆ ನನ್ನ ಜೀವ ಒಗ್ಗಿಕೊಂಡಿತು. ಆದರೂ ನನ್ನ ಆಸ್ತಮಾದ ಬಾಧೆ ಹೆಚ್ಚಾಗಿತ್ತು. ಇಷ್ಟೊಂದು ಸುಂದರ ಪ್ರಕೃತಿಯನ್ನು ಈ ಕಾಯಿಲೆಯಿಂದ ಅಸ್ವಾಧಿಸಲು ಸಾಧ್ಯವಿಲ್ಲವಲ್ಲ ಎನ್ನುವ ಹಿಂಸೆ ಕಾಡುತ್ತಿತ್ತು. ಮಳೆ ಚಳಿಯಲ್ಲಿ ಸ್ವಲ್ಪ ಹೆಚ್ಚು ಓಡಾಡಿದಲ್ಲಿ ರಾತ್ರಿಯೆಲ್ಲಾ ಉಬ್ಬಸದಿಂದ ನಿದ್ರೆಯಿಲ್ಲದೆ ಕಳೆಯಬೇಕಾಗಿತ್ತು.

 ಮಡಿಕೇರಿಯಲ್ಲಿನ ನನ್ನ ಮೊದಲ ರಾತ್ರಿಯೇ ಮನೆಯ ಬಾಗಿಲು ತಟ್ಟಿದವಳು ಲೀಸಾ ಎಂದು ಸುರೇಶ್ ತಿಳಿಸಿದ. ಆಕೆ ಹುಚ್ಚಿ ಎಂದು ತಿಳಿಸಿದ. ಆಕೆಗೆ ಮದುವೆಯಾಗಿತ್ತಂತೆ. ಒಂದೂ ಮಗು ಸಹ ಇದೆಯಂತೆ. ಆದರೆ ಗಂಡ ಆಕೆಯನ್ನು ಬಿಟ್ಟಿದ್ದಾನೆ. ಆಕೆ ಹುಚ್ಚಿ ಆದದ್ದರಿಂದ ಗಂಡ ಬಿಟ್ಟನೋ ಅಥವಾ ಗಂಡ ಬಿಟ್ಟದ್ದರಿಂದ ಹುಚ್ಚಿಯಾದಳೊ ತಿಳಿಯದು ಎಂದ ಸುರೇಶ. ಆಗಾಗ ಆಕೆ ಜೋರಾಗಿ ಅಳುತ್ತಿರುವುದು ಕೇಳಿಸುತ್ತಿತ್ತು. ನಾನು ಆಫೀಸಿಗೆ ಅಥವಾ ಹೊರಗೆ ಹೊರಟಾಗಲೆಲ್ಲಾ ಜಾಕೋಬ್ ಮನೆಯ ಹಿಂಭಾಗ ಕಾಣಿಸುತ್ತಿತ್ತು. ಅದೇ ಅವರ ಊಟದ ಕೋಣೆಯಾಗಿದ್ದು ಅಲ್ಲಿ ದೊಡ್ಡ ಕಿಟಕಿ ಹಾಗೂ ಬಾಗಿಲೊಂದು ಇತ್ತು. ಆ ಬಾಗಿಲಿನಿಂದ ಲೀಸಾ ಹೊರಗೆ ಹೋಗಿಬಿಡಬಹುದೆಂಬ ಹೆದರಿಕೆಯಿಂದ ಯಾವಾಗಲೂ ಬೀಗ ಹಾಕಿರುತ್ತಾರಂತೆ. ಲೀಸಾ ಯಾವಾಗಲೂ ಅಲ್ಲಿ ನಿಂತಿರುತ್ತಿದ್ದಳು. ಓಡಾಡುವ ನಮ್ಮನ್ನು ಕಂಡಾಗಲೆಲ್ಲಾ ಏನನ್ನಾದರೂ ಹೇಳುತ್ತಿರುತ್ತಿದ್ದಳು. ಒಂದೆರಡು ದಿನಗಳಲ್ಲಿ ಅದೂ ನನಗೆ ಅಭ್ಯಾಸವಾಯಿತು. ಕೆಲವೊಮ್ಮೆ ಅವಳು ಏನಾದರೂ ಹೇಳಿದಾಗ ಏನು ಹೇಳುತ್ತಾಳೆ ಎನ್ನುವುದನ್ನು ನಿಂತು ಕೇಳಿಸಿಕೊಳ್ಳುತ್ತಿದ್ದೆ. ಅವಳ ಮಾತು ಏನೊಂದೂ ಅರ್ಥವಾಗುತ್ತಿರಲಿಲ್ಲ. ನಾನು ಅವಳೊಂದಿಗೆ ಮಾತನಾಡಲೂ ಯತ್ನಿಸಿದೆ. ನನ್ನ ಏನೋ ಮಾತಿಗೆ ಅವಳೇನೋ ಹೇಳುತ್ತಿರುತ್ತಿದ್ದಳು. ಕೆಲವೊಮ್ಮೆ ಅವಳ ಮಾನಸಿಕ ಆರೋಗ್ಯ ಚೆನ್ನಾಗಿರುತ್ತಿತ್ತು. ಆಗ ಆಕೆ ಕಿಟಕಿಯ ಬಳಿ ನಿಂತಿರುತ್ತಿರಲಿಲ್ಲ. ಏನಾದರೂ ಮನೆಕೆಲಸದಲ್ಲಿ ತೊಡಗಿರುತ್ತಿದ್ದಳು. `ಹುಣ್ಣಿಮೆ ಬಂದರೆ ಅವಳ ಹುಚ್ಚು ಹೆಚ್ಚಾಗಿಬಿಡುತ್ತದೆ' ಎಂದು ಸುರೇಶ ಒಮ್ಮೆ ಹೇಳಿದ್ದ. `ಆಗ ಅವಳನ್ನು ರೂಮಿನಲ್ಲಿ ಕೂಡಿಹಾಕಿ ಬೀಗ ಹಾಕಿಬಿಡುತ್ತಾರೆ' ಎಂದೂ ಸಹ ಹೇಳಿದ್ದ. ನನಗೇನು ಹೇಳಲೂ ತೋಚಿರಲಿಲ್ಲ.

 ದೊಡ್ಡ ಮಗಳಾದ ರೀನಾಳೇ ಬಾಡಿಗೆ ಸಂಗ್ರಹಕ್ಕೆ ಹಾಗೂ ಏನಾದರೂ ಮನೆಯ ರಿಪೇರಿಗಳಿದ್ದಲ್ಲಿ ವಿಚಾರಿಸಲು ಬರುತ್ತಿದ್ದಳು. ಆಕೆಯ ತಂದೆ ಜಾಕೋಬ್ ಸಹ ಅನಾರೋಗ್ಯದಿಂದಾಗಿ ಹೆಚ್ಚು ಓಡಾಡುತ್ತಿರಲಿಲ್ಲ. ಒಮ್ಮೆ ರೀನಾಳ ಜೊತೆ ಮಾತನಾಡುವಾಗ `ಏಕೆ ಲೀಸಾಗೆ ಚಿಕಿತ್ಸೆ ಏನೂ ಕೊಡಿಸಲಿಲ್ಲವೆ?' ಎಂದು ಕೇಳಿದ್ದೆ. `ಓಡಾಡಿ ನನಗೂ ಸಾಕಾಗಿದೆ. ಚಿಕಿತ್ಸೆ ಕೊಡಿಸುತ್ತಲೇ ಇದ್ದೇವೆ. ಅವಳಿಗೆ ಮಾತ್ರೆಗಳನ್ನು ತಿನ್ನಿಸುವುದೂ ಕಷ್ಟ. ಚೆನ್ನಾಗಿದ್ದಾಗ ಅವಳೇ ಮಾತ್ರೆ ಸ್ವತಃ ತೆಗೆದುಕೊಳ್ಳುತ್ತಾಳೆ. ಒಮ್ಮೊಮ್ಮೆ ಏರುಪೇರಾದಾಗ ನಮಗೂ ತೀರಾ ಕಷ್ಟವಾಗುತ್ತದೆ. ಅದಕ್ಕೆ ಅವಳನ್ನು ಕೋಣೆಯಲ್ಲಿ ಹಾಕಿ ಬೀಗಹಾಕಿಬಿಡುತ್ತೇವೆ' ಎಂದಳು. ಅವಳ ಕಣ್ಣಂಚಿನಲ್ಲಿ ಹನಿಗೂಡಿತ್ತು. `ಅವಳ ಗಂಡ ಕೇರಳದಲ್ಲಿದ್ದಾನೆ. ಇವಳ ಮಗುವೂ ಅವನ ಬಳಿಯೇ ಇದೆ. ಅವನು ಬಿಟ್ಟುಹೋದ ಮೇಲೆ ಇವಳ ಆರೋಗ್ಯ ಇನ್ನೂ ಹದಗೆಟ್ಟಿದೆ. ಅವನು ಬಂದು ಕರೆದುಕೊಂಡು ಹೋದರೆ ಇವಳು ಸರಿಹೋಗಬಹುದೇನೋ. ಆದರೆ ಅವನು ಮತ್ತೊಂದು ಮದುವೆ ಮಾಡಿಕೊಂಡಿದ್ದಾನೆಂದು ಹೇಳುತ್ತಾರೆ. ಏನು ಮಾಡಲೂ ತೋಚುತ್ತಿಲ್ಲ' ಎಂದಿದ್ದಳು.

 ರೂಮಿನಲ್ಲಿ ನಾವೇ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಕೆಲವೊಮ್ಮೆ ಮಧ್ಯಾಹ್ನ ಊಟಕ್ಕೆ ಮನೆಗೆ ಬರುತ್ತಿದ್ದೆ. ಅಲ್ಲದೆ ಬ್ಯಾಂಕ್ ಸಹ ಹತ್ತಿರದಲ್ಲೇ ಇದ್ದುದರಿಂದ ಮನೆಗೆ ನಡೆದುಕೊಂಡೇ ಬರಬಹುದಿತ್ತು. ಅದೊಂದು ದಿನ ಮಧ್ಯಾಹ್ನ ಮನೆಗೆ ಬಂದಾಗ ಮ್ಯಾಗಿ ಮತ್ತು ಒಂದಷ್ಟು ಅಕ್ಕಪಕ್ಕದ ಹೆಂಗಸರು ಬಾವಿಯ ಬಳಿ ನಿಂತು ಬಗ್ಗಿ ನೋಡಿ ಏನೋ ಹೇಳುತ್ತಿದ್ದರು. ನಾನು ಅಲ್ಲಿಗೆ ಹೋಗುವಷ್ಟರಲ್ಲಿ `ಲೀಸಾ ಬಾವಿಗೆ ಬಿದ್ದುಬಿಟ್ಟಿದ್ದಾಳೆ' ಎಂದಳು ಮ್ಯಾಗಿ. ನಾನು ಗಾಭರಿಯಿಂದ ಬಗ್ಗಿ ನೋಡಿದೆ. ನೀರಿಗೆ ಬಿದ್ದಿದ್ದ ಲೀಸಾ ಕಲ್ಲೊಂದನ್ನು ಹಿಡಿದುಕೊಂಡಿದ್ದು ಕಾಣಿಸಿತು. ಅವಳು ಬದುಕಿದ್ದುದನ್ನು ಕಂಡು ಆತಂಕ ಕಡಿಮೆಯಾಯಿತು. ಮ್ಯಾಗಿ ಲೀಸಾಳಿಗೆ ಹಾಗೇ ಹಿಡಿದುಕೊಂಡಿರುವಂತೆ ಹೇಳುತ್ತಿದ್ದಳು. `ನೀರು ಸೇದಲು ಬಂದಿದ್ದಳು. ಅದ್ಹೇಗೆ ಬಿದ್ದಳೋ ಗೊತ್ತಿಲ್ಲ' ಎಂದಳು ಮ್ಯಾಗಿ. ಅವಳ ಮುಖದಲ್ಲಿ ಅಂಜಿಕೆ ಕಾಣುತ್ತಿತ್ತು. ಅಲ್ಲಿ ಇದ್ದವರೆಲ್ಲಾ ಹೆಂಗಸರೇ. `ಯಾರೂ ಬಾವಿಗೆ ಇಳಿಯುವವರಿಲ್ಲವೆ?' ಕೇಳಿದೆ. `ಅಕ್ಕ ರೀನಾಳಿಗೆ ಹೇಳಿ ಕಳುಹಿಸಿದ್ದೇನೆ. ಅವಳಿನ್ನೇನು ಬರಬಹುದು. ಯಾರನ್ನಾದರೂ ಕರೆತರುತ್ತಾಳೆ' ಎಂದಳು ಮ್ಯಾಗಿ. ಅಷ್ಟರಲ್ಲಿ ಬಾವಿಯಲ್ಲಿದ್ದ ಲೀಸಾ ಕೈ ರಪರಪ ಹೊಡೆದಳು. ಮ್ಯಾಗಿ ಹಾಗೂ ಇತರ ಹೆಂಗಸರು ಜೋರಾಗಿ ಕಿರುಚಿಕೊಂಡರು. ಲೀಸಾ ಆಗಾಗ ತಲೆಯನ್ನು ನೀರಿನಲ್ಲಿ ಮುಳುಗಿಸುವುದನ್ನು ಮಾಡುತ್ತಿದ್ದಳು. ನಾನೇ ಇಳಿದು ಅವಳನ್ನು ಮೇಲಕ್ಕೆತ್ತಲು ತಕ್ಷಣ ನಿರ್ಧರಿಸಿ ಅಲ್ಲೇ ಇದ್ದ ಹಗ್ಗವನ್ನು ಬಿಗಿಯಾಗಿ ಕಟ್ಟಿ ಬಾವಿಗೆ ನಿಧಾನವಾಗಿ ಇಳಿದೆ. ನನಗೆ ಚಿಕ್ಕಂದಿನಿಂದಲೂ ಈಜುಬರುತ್ತಿತ್ತು ಆದರೆ ನಾನೆಂದೂ ಈ ರೀತಿ ಬಾವಿಗೆ ಬಿದ್ದವರನ್ನು ಎತ್ತಿ ಹಾಕಿರಲಿಲ್ಲ. ಬಾವಿಯ ಅಗಲ ಹೆಚ್ಚಿರಲಿಲ್ಲ. ಹಾಗೂ ಅಲ್ಲಲ್ಲಿ ಕಾಲು ಊರಲು ಆಧಾರವಾಗಿ ಕಲ್ಲುಗಳನ್ನು ಇರಿಸಿದ್ದರು. ನಾನು ಕೆಳಕ್ಕೆ ಇಳಿಯುವಷ್ಟರಲ್ಲಿ ಅವಳ ಕೈ ಜಾರಿ ನೀರಿನೊಳಕ್ಕೆ ಮುಳುಗಿದಳು. ಮೇಲಿದ್ದವರು ಜೋರಾಗಿ ಕಿರುಚಿಕೊಂಡರು. ನಾನೂ ಸರಕ್ಕನೆ ಒಂದು ಕೈಲಿ ಹಗ್ಗವನ್ನು ಹಿಡಿದುಕೊಂಡು ನೀರಿನೊಳಕ್ಕೆ ಧುಮುಕಿದೆ. ಈಜಲು ಬರದವರು ನೀರಿನೊಳಕ್ಕೆ ಬಿದ್ದಾಗ ಅವರನ್ನು ಕಾಪಾಡಲು ಬರುವವರನ್ನು ಬಿಗಿಯಾಗಿ ಹಿಡಿದುಕೊಂಡುಬಿಡುತ್ತಾರೆ ಎಂಬುದು ತಿಳಿದಿದ್ದುದರಿಂದ ಹಗ್ಗವನ್ನು ಒಂದು ಕೈಲಿ ಹಿಡಿದುಕೊಂಡೇ ಇದ್ದೆ. ನಾನು ನೀರಿನೊಳಕ್ಕೆ ಧುಮುಕಿ ಅವಳ ಕೈ ಹಿಡಿದು ಮೇಲಕ್ಕೆಳೆದುಕೊಂಡು ಬಂದೆ. ಅದೆಲ್ಲಾ ಕೆಲಕ್ಷಣಗಳಲ್ಲೇ ಕಳೆದುಹೋಯಿತು. ಲೀಸಾ ನನ್ನನ್ನು ಬಿಗಿಯಾಗಿ ಹಿಡಿದುಕೊಂಡಿದ್ದಳು. ಆದರೆ ಅವಳ ಮುಖದಲ್ಲಿ ಯಾವ ಭಾವನೆಗಳೂ ಇರಲಿಲ್ಲ. ಅಂಜಿಕೆಯೂ ಇರಲಿಲ್ಲ. ಆದರೆ ನನ್ನ ಕೈಕಾಲುಗಳು ಥರಥರ ನಡುಗುತ್ತಿದ್ದವು. ಸಾವರಿಸಿಕೊಳ್ಳಲು ನನಗೆ ಕೊಂಚ ಸಮಯವೇ ಬೇಕಾಯಿತು. ಅಲ್ಲೇ ನೀರೊಳಗೆ ಕಲ್ಲೊಂದನ್ನು ಆಧಾರವಾಗಿ ತೆಗೆದುಕೊಂಡು ನನ್ನ ಬಲಗಾಲನ್ನು ಊರಿ ಎಡಗಾಲನ್ನು ಎದುರಿನ ಕಲ್ಲುಕಟ್ಟಡಕ್ಕೆ ಒತ್ತಿಹಿಡಿದು ಲೀಸಾಳನ್ನು ನನ್ನ ತೊಡೆಯ ಮೇಲೆ ಕೂರಿಸಿಕೊಂಡು ಮತ್ತೊಂದು ದಪ್ಪಹಗ್ಗವನ್ನು ಇಳಿಸಲು ಹೇಳಿದೆ. ಅಷ್ಟರಲ್ಲಿ ರೀನಾ ಬಂದಿದ್ದಳೆನ್ನಿಸುತ್ತದೆ, ಆಕೆಯ ದನಿಯೂ ಕೇಳಿಸುತ್ತಿತ್ತು. ಯಾರೋ ಗಂಡಸರು ಸಹ ಮಾತನಾಡುತ್ತಿದ್ದರು. ಲೀಸಾ ಎಡಗೈಯಲ್ಲಿ ಹಗ್ಗವನ್ನು ಹಿಡಿದಿದ್ದಳು ಹಾಗೂ ಬಲಗೈಯನ್ನು ನನ್ನ ಹೆಗಲ ಮೇಲೆ ಹಾಕಿದ್ದಳು. ನನ್ನ ಮುಖವನ್ನೇ ನೋಡುತ್ತಿದ್ದಳು. ಅವಳನ್ನು ಅಷ್ಟು ಹತ್ತಿರದಿಂದ ನೋಡಿದ್ದು ಅದೇ ಮೊದಲು. ಅವಳ ಮುಖದಲ್ಲಿ ಮುಗುಳ್ನಗುವಿತ್ತು. `ಬಾವಿಗೆ ಏಕೆ ಹಾರಿದೆ?' ಎಂದು ಕೇಳಿದೆ. ಅವಳು ಏನೂ ಹೇಳಲಿಲ್ಲ. ಅವಳ ಮುಖದಲ್ಲಿನ ಮುಗುಳ್ನಗು ಮಾಸಲಿಲ್ಲ. ಒಂದರೆಕ್ಷಣ ತಡವಾಗಿದ್ದಿದ್ದರೆ ಸತ್ತೇ ಹೋಗುತ್ತಿದ್ದಳೇನೊ. ಆದರೂ ಆಕೆಯ ಮುಖದಲ್ಲಿ ಸಾವಿನ ಹೆದರಿಕೆ ಕೊಂಚವೂ ಇರಲಿಲ್ಲ. ಬಹುಶಃ ಆಕೆಗೆ ಸಾವು ಬದುಕಿನ ನಡುವಿನ ಅಂತರವೇ ತಿಳಿದಿಲ್ಲವೇನೋ ಎನ್ನಿಸಿತು. `ನನಗೆ ಗೊತ್ತು' ಎಂದಳು. ನನ್ನ ಮನಸ್ಸಿನ ಆಲೋಚನೆ ಆಕೆಗೆ ಹೇಗೆ ತಿಳಿಯಿತು ಎಂದು ನನಗೇ ಆಶ್ಚರ್ಯವಾಯಿತು. `ಏನು ಗೊತ್ತು?' ಕೇಳಿದೆ. `ಯೂ ಆರ್ ಮೈ ಹಸ್ಬಂಡ್' ಎಂದು ನನ್ನ ಹೆಗಲ ಮೇಲಿನ ಅವಳ ಕೈಹಿಡಿತವನ್ನು ಬಿಗಿಗೊಳಿಸಿದಳು. ನನ್ನ ನಡುಕ ಹಾಗೂ ಗಾಭರಿ ಕೊಂಚ ಕಡಿಮೆಯಾದಂತೆ ಅನ್ನಿಸಿತು. ಮೇಲೆ ನೋಡಿದೆ. ಜನ ಮಾತನಾಡುತ್ತಿದ್ದರು. ಹಗ್ಗಕ್ಕೆ ಏನೋ ಕಟ್ಟುತ್ತಿರುವಂತೆ ಅನ್ನಿಸಿತು. ಇತ್ತ ಲೀಸಾಳ ಕಡೆ ನೋಡಿ `ಯಾರು ಹೇಳಿದರು ನಿನಗೆ?' ಎಂದು ಕೇಳಿದೆ. `ನನಗೆ ಗೊತ್ತು. ಜೀಸಸ್ ಹೇಳಿದ್ದು. ನೀನೇ ನನ್ನ ಗಂಡ' ಎಂದಳು. ನನಗೆ ಏನು ಹೇಳಲೂ ತೋಚಲಿಲ್ಲ. `ಆಯಿತು, ಆ ವಿಷಯ ಆಮೇಲೆ ಮಾತನಾಡೋಣ' ಎಂದು ಸುಮ್ಮನಾದೆ. ಅವಳ ದೇಹದ ಇಡೀ ತೂಕವನ್ನು ಹೊತ್ತಿದ್ದ ನನ್ನ ತೊಡೆಯ ನಡುಕ ಇನ್ನೂ ಕಡಿಮೆಯಾಗಿರಲಿಲ್ಲ. ಮೇಲಿದ್ದವರು ಇನ್ನೂ ಹಗ್ಗವನ್ನೇ ಬಿಡಲಿಲ್ಲ.

 ನಾನು ಮತ್ತೊಮ್ಮೆ ಅವರಿಗೆ ಕೂಗಿ ಹೇಳಿದೆ. ಲೀಸಾ ನನ್ನನ್ನು ಅಪ್ಪಿಕೊಂಡವಳಂತೆ ಇದ್ದವಳು ನನ್ನ ಮುಖವನ್ನು ನೋಡುವುದನ್ನು ನಿಲ್ಲಿಸಲೇ ಇಲ್ಲ. ನನಗೆ ಕೊಂಚ ಕಸಿವಿಸಿಯಾದಂತೆ ಅನ್ನಿಸಿತು. `ಜೀಸಸ್ ನಿನ್ನ ಜೊತೆ ಯಾವಾಗ ಮಾತನಾಡುತ್ತಾನೆ?' ಕೇಳಿದೆ. ಯಾವುದೋ ಲೋಕದಲ್ಲಿದ್ದ ಲೀಸಾ ಎಚ್ಚೆತ್ತುಕೊಂಡವಳಂತೆ `ಹ್ಹಾಂ...?' ಎಂದಳು. `ಜೀಸಸ್ ನಿನ್ನ ಜೊತೆ ಯಾವಾಗ ಮಾತನಾಡುತ್ತಾನೆ?' ಪುನಃ ಕೇಳಿದೆ. `ದಿನಾಲೂ ಮಾತನಾಡುತ್ತಾನೆ. ನೀನೇ ನನ್ನ ಗಂಡನಲ್ಲವೆ?' ಎಂದಳು. ಅಷ್ಟರಲ್ಲಿ ಹಗ್ಗಬಂದಿತು. ಅದಕ್ಕೊಂದು ದೊಡ್ಡ ದಿಂಬನ್ನು ಕಟ್ಟಿದ್ದರು. ಅವಳನ್ನು ಆ ದಿಂಬಿನ ಮೇಲೆ ಕೂಡಿಸುವಷ್ಟರಲ್ಲಿ ನನಗೆ ಸಾಕುಸಾಕಾಯಿತು. ಅವಳು ನನ್ನ ಹೆಗಲಿನಿಂದ ಕೈಯನ್ನು ತೆಗೆಯುತ್ತಲೇ ಇರಲಿಲ್ಲ. ಕೊನೆಗೆ ಅವಳನ್ನು ಮೇಲಕ್ಕೆ ಸಾಗಹಾಕಿ ನಾನು ಮೇಲೆ ಹತ್ತಿಬಂದೆ. ರೀನಾ ಒಂದಷ್ಟು ಜನ ಗಂಡಸರನ್ನು ಕರೆದುತಂದಿದ್ದಳು. ಅವಳ ಅಪ್ಪ ಜಾಕೋಬ್ ಓಡಾಡಲು ಆಗದಿದ್ದರೂ ಕಷ್ಟಪಟ್ಟು ಹೊರಗೆ ಬಂದಿದ್ದ. ಲೀನಾ ಮತ್ತು ಮ್ಯಾಗಿ `ತುಂಬಾ ಥ್ಯಾಂಕ್ಸ್' ಹೇಳಿದರು. 

ಮ್ಯಾಗಿ
ಮ್ಯಾಗಿಯ ಐದು ವರ್ಷದ ಮಗ ರಾಬರ್ಟ್ ಶಾಲೆಯಿಂದ ವಾಪಸ್ಸು ಬಂದು ನಾವು ಬ್ಯಾಂಕಿನಿಂದ ಬರುವುದನ್ನೇ ಕಾದಿರುತ್ತಿದ್ದ. ನಾವು ಬಂದ ಕೂಡಲೇ ನಮ್ಮ ಬಳಿಗೆ ಓಡಿಬರುತ್ತಿದ್ದ. ಮಳೆ ಬೀಳುತ್ತಿದ್ದರೆ ಮಡಿಕೇರಿಯಲ್ಲಿ ನಾವು ಹೊರಗೇ ಹೋಗುತ್ತಿರಲಿಲ್ಲ. ನಾವು ಕೇರಂ ಆಡುತ್ತಿದ್ದರೆ ರಾಬರ್ಟ್ ಜೊತೆಗೂಡುತ್ತಿದ್ದ. ಅದು ಇದು ಮಾತನಾಡುತ್ತ ಸಮಯ ಕಳೆಯುತ್ತಿತ್ತು. ರಾಬರ್ಟ್‌ನಿಗೆ ಅವನ ತಂದೆಯನ್ನು ನೋಡಿದ ನೆನಪೇ ಇಲ್ಲ. ಎಲ್ಲಿದ್ದಾರೆ ಅಂದರೆ ಮಸ್ಕಟ್‌ನಲ್ಲಿ ಎಂದಿದ್ದ. ಒಮ್ಮೆ ಅವನ ಅಪ್ಪನ ಫೋಟೋ ತಂದು ತೋರಿಸಿದ್ದ. `ನಿಮ್ಮಪ್ಪ ಮಸ್ಕಟ್‌ನಿಂದ ಬರುವುದು ಯಾವಾಗ?' ಎಂದರೆ ಆ ಮುದ್ದುಹುಡುಗ `ಮುಂದಿನ ತಿಂಗಳು' ಎನ್ನುತ್ತಿದ್ದ. ಜೊತೆಗೆ `ನನಗೆ ಅಷ್ಟೊಂದು ಬೊಂಬೆ ತರುತ್ತಾರೆ' ಎನ್ನುತ್ತಿದ್ದ. `ಅವನು ಇದೇ ರೀತಿ ಒಂದು ವರ್ಷದಿಂದ ಹೇಳುತ್ತಿದ್ದಾನೆ. ಅವನಪ್ಪ ಬಂದೇ ಇಲ್ಲ' ಎಂದ ಸುರೇಶ. `ಇಲ್ಲ, ಮುಂದಿನ ತಿಂಗಳು ಬರುತ್ತಾರೆ' ಎಂದು ರಾಬರ್ಟ್ ಕೂಗಿದ. ಅವನ ಮುಖದಲ್ಲಿ ಸಿಟ್ಟಿತ್ತು.

 ಅದೊಂದು ದಿನ ಸಂಜೆ ನಾನು ಬ್ಯಾಂಕಿನಿಂದ ಬಂದು ಮನೆಯಲ್ಲಿದ್ದೆ. ಸುರೇಶ ಮತ್ತು ರಾಜಾರಾಮ ಇನ್ನೂ ಬಂದಿರಲಿಲ್ಲ. ನಾನು ಕೂತು ಮ್ಯಾಗಸಿನ್ ತಿರುವಿ ಹಾಕುತ್ತಿದ್ದೆ. ರಾಬರ್ಟ್ ಓಡಿ ಬಂದ. ಬಂದವನೆ, `ಮಮ್ಮಿ ಮಾತಾಡ್ಬೇಕಂತೆ' ಎಂದ. `ಏನು ವಿಷಯ?' ಎಂದೆ ರಾಬರ್ಟ್‌ನನ್ನು. ಅಷ್ಟರಲ್ಲಿ ಬಾಗಿಲು ತಟ್ಟಿದ ಸದ್ದಾಯಿತು. ನೋಡಿದರೆ ಬಾಗಿಲಲ್ಲಿ ರಾಬರ್ಟ್‌ನ ಅಮ್ಮ ಮ್ಯಾಗಿ ನಿಂತಿದ್ದಳು. `ಒಂದ್ನಿಮಿಷ ಒಳಗೆ ಬರಲೆ?' ಎಂದಳು. ತಕ್ಷಣ ಏನೂ ಹೇಳಲು ತೋಚದೆ, `ಬನ್ನಿ, ಬನ್ನಿ' ಎಂದೆ. ಚೇರಿನ ಮೇಲೆ ಬಿದ್ದಿದ್ದ ಪೇಪರ್, ಮ್ಯಾಗಸಿನ್ಗಳನ್ನು ಎತ್ತಿ ಪಕ್ಕಕ್ಕಿರಿಸಿದೆ. `ನಮ್ಮ ಅಮ್ಮನಿಗೆ ಕಾಯಿಲೆ. ಅವರು ಎದ್ದು ಓಡಾಡಲು ಆಗುವುದಿಲ್ಲ. ಆ ದಿನ ಲೀಸಾ ಬಾವಿಗೆ ಹಾರಿದಾಗ, ನೀವು ಮಾಡಿದ ಸಹಾಯಕ್ಕೆ ಅಮ್ಮ ಥ್ಯಾಂಕ್ಸ್ ಹೇಳು ಅಂದರು. ಸ್ವತಃ ಬಂದು ಹೇಳಲಾಗುವುದಿಲ್ಲವಲ್ಲ ಎಂದು ಕಣ್ಣೀರಿಟ್ಟರು' ಎಂದಳು ಮ್ಯಾಗಿ. `ಹೇ, ಪರವಾಗಿಲ್ಲ. ಅಷ್ಟಕ್ಕೆಲ್ಲಾ ಏಕೆ. ಆ ಕ್ಷಣ ನಾನಿಲ್ಲದಿದ್ದರೂ ಮತ್ತಾರಾದರೂ ಬಾವಿಗೆ ಇಳಿದಿರುತ್ತಿದ್ದರು. ಅದೇನೂ ದೊಡ್ಡ ವಿಷಯವಲ್ಲ' ಎಂದೆ ನಾನು. ಇಬ್ಬರೂ ಮಾತನಾಡುವುದನ್ನು ರಾಬರ್ಟ್ ಏನೊಂದೂ ಅರ್ಥವಾಗದವನಂತೆ ನೋಡುತ್ತಿದ್ದ.

 ಲೀಸಾ ಬಾವಿಗೆ ಬಿದ್ದಿದ್ದ ದಿನ ಸಂಜೆ ನಾನು ಹೊರಗೆ ಹೊರಟಾಗ ಜಾಕೋಬ್ ಹೊರಗೆ ಕುರ್ಚಿಯ ಮೇಲೆ ಕೂತಿದ್ದ. ನನಗೇ ಕಾಯುತ್ತಿದ್ದಿರಬಹುದೆನ್ನಿಸಿತ್ತು. ನನ್ನನ್ನು ಹತ್ತಿರಕ್ಕೆ ಕರೆದು ತನ್ನ ಎರಡು ಕೈಗಳಿಂದ ನನ್ನ ಕೈಗಳನ್ನು ಹಿಡಿದುಕೊಂಡು `ಥ್ಯಾಂಕ್ಯೂ' ಎಂದ. ನಾನು ನಕ್ಕು `ಪರವಾಗಿಲ್ಲ. ಹೇಗಿದೀರಾ? ಹೇಗಿದೆ ನಿಮ್ಮ ಆರೋಗ್ಯ?' ಎಂದು ಕೇಳಿ ಅವರ ಭುಜ ತಟ್ಟಿ ಆಫೀಸಿಗೆ ಹೊರಟಿದ್ದೆ. ಈ ದಿನ ಜಾಕೋಬ್‌ನ ಹೆಂಡತಿ ಮ್ಯಾಗಿಯ ಕೈಯಲ್ಲಿ ತನ್ನ ಕೃತಜ್ಞತೆಗಳನ್ನು ಕಳುಹಿಸಿದ್ದಳು. ಮ್ಯಾಗಿ ಮತ್ತೇನೂ ಹೇಳಲಿಲ್ಲ; ಎದ್ದೂ ಸಹ ಹೋಗಲಿಲ್ಲ. ಕೂತೇ ಇದ್ದಳು. ನನಗೆ ಏನೂ ಮಾತನಾಡಲು ತೋಚದೆ, `ರಾಬರ್ಟ್ ಹೇಳುತ್ತಿದ್ದ ಅವರಪ್ಪ ಮುಂದಿನ ತಿಂಗಳು ಬರುತ್ತಾರಂತೆ. ಅವರೆಲ್ಲಿ ಮಸ್ಕಟ್‌ನಲ್ಲಿದ್ದಾರೆಯೆ?' ಎಂದು ಕೇಳಿದೆ. `ಹೌದು' ಎಂದ ರಾಬರ್ಟ್. ರಾಬರ್ಟ್‌ನನ್ನು ಹತ್ತಿರಕ್ಕೆ ಎಳೆದುಕೊಂಡಳು ಮ್ಯಾಗಿ. `ಒಂದು ವರ್ಷದಿಂದ ಸುದ್ದಿಯೇ ಇಲ್ಲ. ಪತ್ರ ಬರೆಯುತ್ತಿಲ್ಲ, ಫೋನ್ ಮಾಡುತ್ತಿಲ್ಲ. ಬರೆಯುವ ಪತ್ರಗಳಿಗೆ ಉತ್ತರವೂ ಇಲ್ಲ. ನಾನು ಫೋನ್ ಮಾಡಿದರೆ ಆ ನಂಬರ್ ಇದ್ದಂತೆಯೇ ಇಲ್ಲ' ಎಂದಳು ಮ್ಯಾಗಿ ತಲೆ ತಗ್ಗಿಸಿ. `ಅವರು ಹೋಗಿ ನಾಲ್ಕು ವರ್ಷಗಳಾದವು. ಹೋದಾಗಿನಿಂದ ಬಂದೇ ಇಲ್ಲ. ನಾನು ಇಂದು ನಾಳೆ ಎಂದುಕೊಂಡು ಕಾಯುತ್ತಲೇ ಇದ್ದೀನಿ. ಏನು ಮಾಡಬೇಕೆಂದು ತಿಳೀತಿಲ್ಲ' ಎಂದಳು. ಈ ಎಲ್ಲಾ ವಿಷಯಗಳನ್ನು ಆಕೆ ಸುರೇಶ ಅಥವಾ ರಾಜಾರಾಮನ ಬಳಿ ಹಿಂದೆಂದೂ ಮಾತನಾಡಿರಲಿಲ್ಲ. ಬಹುಶಃ ನಾನು ಬಾವಿಗೆ ಇಳಿದು ಲೀಸಾಳನ್ನು ಮುಳುಗುವುದರಿಂದ ಕಾಪಾಡಿದ್ದುದರಿಂದ ನಾನು ಅವರಿಗೆ ಹತ್ತಿರವೆನ್ನಿಸಿ ನನ್ನಲ್ಲಿ ಹೇಳಿರಬಹುದು ಎನ್ನಿಸಿತು. ಮತ್ತೊಮ್ಮೆ ಆ ಪ್ರಶ್ನೆ ಯಾಕಾದರೂ ಕೇಳಿದೆನೋ ಎನ್ನಿಸಿತು. `ಹಣ ಕಳುಹಿಸುವುದು ಸಹ ನಿಲ್ಲಿಸಿ ಒಂದು ವರ್ಷವಾಗಿದೆ. ಈಗ ಎಲ್ಲರ ಹೊರೆಯೂ ರೀನಾಳ ಮೇಲಿದೆ' ಎಂದಳು. ತಲೆ ತಗ್ಗಿಸಿಯೇ ಇದ್ದ ಅವಳ ಕಣ್ಣಿನಿಂದ ಒಂದೆರಡು ಹನಿ ನೆಲದ ಮೇಲೆ ಬಿದ್ದದ್ದು ಕಾಣಿಸಿತು. ಅದನ್ನು ಗಮನಿಸಿದ ರಾಬರ್ಟ್ ಅವಳ ಗಲ್ಲ ಹಿಡಿದು ತಲೆ ಮೇಲೆತ್ತಲು ಪ್ರಯತ್ನಿಸಿದ. ಅವನು ಮುಖ ಅಳುವಂತೆ ಮಾಡಿದ. ಇನ್ನೇನು ಅವನು ಜೋರಾಗಿ ಅತ್ತುಬಿಡುತ್ತಾನೆ ಎನ್ನಿಸಿತು. ತಕ್ಷಣ ಮ್ಯಾಗಿ ಎದ್ದು ರಾಬರ್ಟ್‌ನ ಕೈ ಹಿಡಿದು ದರದರನೆ ಎಳೆದುಕೊಂಡು ಮನೆಗೆ ಓಡಿದಳು.

ರೀನಾ
ಆ ದಿನ ರಾತ್ರಿ ಪುನಃ ನನ್ನ ಆಸ್ತಮಾ ಕಾಡಿತ್ತು. ಹೊರಗೆ ಧೋ ಎಂದು ಸುರಿಯುತ್ತಿದ್ದ ಮಳೆ. ನಿದ್ರೆ ನನ್ನಿಂದ ದೂರವಾಗಿತ್ತು. ಬದುಕಿನಲ್ಲಿ ಅತ್ಯಂತ ಸುಲಭದ ಹಾಗೂ ನಿರಾಯಾಸವಾಗಿ ಮಾಡುವ ಕೆಲಸವೆಂದರೆ ಉಸಿರಾಟ. ಆದರೆ ಅದನ್ನೇ ಅತ್ಯಂತ ಕಷ್ಟಕರವಾಗಿ, ಹಿಂಸೆಯಿಂದ ಮಾಡಬೇಕಾದರೆ? ಮಲಗಿದ್ದಷ್ಟೂ ಉಬ್ಬಸ ಹೆಚ್ಚಾಗುತ್ತಿದ್ದುದರಿಂದ ಮಂಚದ ಕೊನೆಯಲ್ಲಿ ಎರಡೂ ಬದಿಗೆ ಕೈಗಳನ್ನು ಊರಿ ತಲೆಯನ್ನು ಮಳೆಯಲ್ಲಿ ತೊಯ್ದ ಗುಬ್ಬಚ್ಚಿಯಂತೆ ಭುಜಗಳ ನಡುವೆ ಹುದುಗಿಸಿಕೊಂಡು ಅದೆಷ್ಟು ಹೊತ್ತು ಕೂತಿದ್ದೆನೊ ಗೊತ್ತಿಲ್ಲ. ರಾತ್ರಿ ಎರಡು ಗಂಟೆಯಲ್ಲಿ ನುಂಗಿದ್ದ ಮಾತ್ರೆ ಕ್ರಮೇಣ ಕೆಲಸಮಾಡಿದಂತೆ, ಬಳಲಿಕೆಯಿಂದ ಮುಂಜಾನೆ ನಿದ್ರೆ ಬರತೊಡಗಿತು. ತಲೆ ವಿಪರೀತ ನೋಯುತ್ತಿತ್ತು; ಎದೆಗೂಡ ಮೇಲೆ ಕಲ್ಲ ಚಪ್ಪಡಿ ಇರಿಸಿದಂತೆ ಭಾಸವಾಗುತ್ತಿತ್ತು. ಹಾಗೆಯೇ ಒರಗಿ ನಿದ್ರೆ ಮಾಡಿದೆ. ಬೆಳಿಗ್ಗೆ ಸುರೇಶ ಮತ್ತು ರಾಜಾರಾಮ ಬ್ಯಾಂಕಿಗೆ ಹೊರಡುವಾಗ ನನ್ನನ್ನು ಎಬ್ಬಿಸಿದರು. ನಮ್ಮ ಬ್ಯಾಂಕಿಗೆ ನಾನು ರಜೆಯೆಂದು ತಿಳಿಸಿಬಿಡುವಂತೆ ಅವರಿಗೆ ತಿಳಿಸಿ ಹಾಗೆಯೇ ನನ್ನ ನಿದ್ರೆಯನ್ನು ಮುಂದುವರಿಸಿದೆ. ವಿಚಿತ್ರದ ಹಾಗೂ ಹಿಂಸೆಯ ಕನಸುಗಳು ಬೀಳುತ್ತಿದ್ದವು. ಕನಸಿನಲ್ಲಿ ಯಾರೋ `ಅಂಕಲ್' ಎಂದು ಕರೆಯುತ್ತಿರುವಂತೆ ಭಾಸವಾಯಿತು. ಯಾರೋ ತಳ್ಳಿದಂತನ್ನಿಸಿ ಎಚ್ಚರವಾಯಿತು. ನೋಡಿದರೆ ರಾಬರ್ಟ್ ನಿಂತು ನನ್ನ ಭುಜತಟ್ಟಿ ಎಬ್ಬಿಸುತ್ತಿದ್ದ. `ನನಗೆ ಮೈ ಹುಷಾರಿಲ್ಲ. ತೊಂದರೆ ಕೊಡಬೇಡ' ಹೋಗು ಎಂದು ಅವನನ್ನು ಕಳುಹಿಸಿದೆ.

 ಒಂದ್ಹತ್ತು ನಿಮಿಷ ಕಳೆದಿರಬೇಕು. ಪುನಃ ಯಾರೋ ನನ್ನ ಹೆಸರಿಡಿದು ಕರೆದಂತಾಯಿತು. ಕನಸೋ ಎಚ್ಚರವೋ ತಿಳಿಯಲಿಲ್ಲ. ಹಾಗೆಯೇ ಮಲಗಿದ್ದೆ. ಈ ಸಾರಿ ಹೆಣ್ಣು ದನಿಯೊಂದು ನನ್ನ ಹೆಸರಿಡಿದು ಕರೆಯುತ್ತಿರುವುದು ಸ್ಪಷ್ಟವಾಯಿತು. ಕಣ್ಣುಬಿಟ್ಟರೆ ರೀನಾ ಎದುರಿಗೆ ನಿಂತಿದ್ದಳು. ನನ್ನ ಈ ಅವಸ್ಥೆಯಲ್ಲಿ ಆಕೆ ಬಂದಿದ್ದು ನನಗಿಷ್ಟವಾಗಲಿಲ್ಲ. ದೇಹವೆಲ್ಲಾ ಬಳಲಿಕೆಯಿಂದ ನಿತ್ರಾಣವಾಗಿತ್ತು. ಆಕೆ ಹೋಗುವಂತೆ ಕಾಣಲಿಲ್ಲ. `ಮೈ ಹುಷಾರಿಲ್ಲವೆ?' ಕೇಳಿದಳು. `ಹ್ಹೂಂ.. ' ಎಂದು ಎದ್ದು ಕೂತೆ. `ರಾಬರ್ಟ್ ಬಂದು ಹೇಳಿದ, ಅದಕ್ಕೇ ಬಂದೆ' ಎಂದಳು. `ಏನು ಬೇಡ, ಸರಿಹೋಗುತ್ತದೆ' ಎಂದು ಎದ್ದು ನಿಂತೆ. `ಏನಾದರೂ ಬೇಕೆ?' ಎಂದಳು. `ಏನೂ ಬೇಡ, ನಿದ್ರೆ ಮಾಡಿದರೆ ಎಲ್ಲಾ ಸರಿಹೋಗುತ್ತದೆ' ಎಂದೆ. ನನ್ನನ್ನು ನನ್ನಷ್ಟಕ್ಕೆ ಬಿಟ್ಟರೆ ಸಾಕಾಗಿತ್ತು. ರಾಬರ್ಟ್ ಆಕೆಯ ಹಿಂದೆಯೇ ನಿಂತಿದ್ದ. ಅವರು ಅಲ್ಲಿ ನಿಂತಿದ್ದಂತೆಯೇ ನಾನು ಬಾತ್‌ರೂಮಿನ ಕಡೆಗೆ ಮೆಟ್ಟಲಿಳಿದು ಹೋದೆ. ಉಸಿರಾಡುವಾಗ ಇನ್ನೂ ಗೊರಗೊರ ಸದ್ದು ಕೇಳಿಸುತ್ತಲೇ ಇತ್ತು.

 ಬಾತ್‌ರೂಮಿನಿಂದ ಬರುವಷ್ಟರಲ್ಲಿ ರೀನಾ ಹಾಗೂ ರಾಬರ್ಟ್ ಕಾಣಲಿಲ್ಲ. ನನ್ನ ಮಂಚದ ಪಕ್ಕದ ಟೇಬಲ್ಲಿನ ಮೇಲೆ ಹೊಗೆಯಾಡುವ ಚಪಾತಿ ಇತ್ತು. ಬಳಲಿಕೆಯಿಂದ ನನಗೂ ಹಸಿವಾಗುತ್ತಿತ್ತು. ಬೇರೆ ಏನಾದರೂ ತಿಂಡಿ ಮಾಡಿಕೊಳ್ಳುವ ಮನಸ್ಥಿತಿಯೂ ಇರಲಿಲ್ಲ. ಮನದಲ್ಲೇ ಅವರಿಗೆ ವಂದಿಸಿ ಚಪಾತಿ ತಿನ್ನಲು ಕೂತೆ. ನಂತರ ಮಾತ್ರೆ ನುಂಗಿ ಹಾಗೆಯೇ ಮಂಚದ ಮೇಲೆ ಒರಗಿದೆ. ಒಂದೈದು ನಿಮಿಷದ ನಂತರ ಬಾಗಿಲು ತಟ್ಟಿದ ಸದ್ದಾಯಿತು. ರೀನಾಳೇ ಇರಬೇಕೆಂದುಕೊಂಡೆ, ಏಕೆಂದರೆ ರಾಬರ್ಟ್ ಬಾಗಿಲು ತಟ್ಟಿ ಬರುವವನಲ್ಲ. ಅವನಿಗೆ ಆಹ್ವಾನವೇ ಬೇಡ. ರೀನಾಳೆ ಒಳಗೆ ಬಂದಳು. ಅವಳ ಕೈಯಲ್ಲಿ ಕಾಫಿಯ ಕಪ್ಪಿತ್ತು. `ನಿಮಗೆ ತೊಂದರೆ ಕೊಟ್ಟೆ' ಎಂದೆ. ಸುಮ್ಮನೆ ಮುಗುಳ್ನಕ್ಕ ಆಕೆ ಕಾಫಿ ಅಲ್ಲೇ ಇರಿಸಿ ನಾನು ಏನೂ ಹೇಳದಿದ್ದರೂ ಅಲ್ಲೇ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕೂತಳು. ನನಗೂ ಕಾಫಿ ಬೇಕಿತ್ತು. ಕಾಫಿ ಕುಡಿದೆ.
`ಸ್ಕೂಲಿಗೆ ಹೋಗೋದಿಲ್ಲವೆ?' ನಾನು ಕೇಳಿದೆ. `ಹ್ಹಾಂ... ಹೋಗಬೇಕು. ಇನ್ನೂ ಸಮಯವಿದೆ' ಎಂದಳು. ಅವಳೊಟ್ಟಿಗೆ ಮಾತನಾಡಲು ನನ್ನಲ್ಲಿ ಏನೂ ಇರಲಿಲ್ಲ. `ಥ್ಯಾಂಕ್ಸ್' ಎಂದೆ ಕಾಫಿಯ ಕಪ್ಪನ್ನು ಮೇಜಿನ ಮೇಲಿಡುತ್ತಾ. ಆಕೆ ಏನೂ ಹೇಳಲಿಲ್ಲ, ಪುನಃ ಮುಗುಳ್ನಕ್ಕಳು. ಲೀನಾ ಆಕೆಯ ತಂಗಿಯರಂತೆ ಸುಂದರ ಹೆಣ್ಣಲ್ಲ. ಆದರೆ ಮಾತು ಬಹಳ ಕಡಿಮೆ ಆದರೆ ಅಷ್ಟೇ ಮೃದು ಎನ್ನಿಸುವಂತಿತ್ತು. ಸುಮ್ಮನೆ ಹಾಗೆಯೇ ಕೂತಿದ್ದಳು. ಆಕೆಯ ವಯಸ್ಸು ಏನಿಲ್ಲವೆಂದರೂ ನಲವತ್ತಾಗಿರಬಹುದು. ನನಗಿಂತಾ ಸುಮಾರು ಹದಿನೈದು ವರ್ಷ ದೊಡ್ಡವಳು. ಆಕೆಯ ತಂದೆ ತಾಯಿಯರಿಗೆ ಗಂಡು ಮಕ್ಕಳಿಲ್ಲ. ಈಕೆಯೇ ದೊಡ್ಡವಳು. ತಂದೆ ತಾಯಿಯರಿಬ್ಬರೂ ಹಾಸಿಗೆ ಹಿಡಿದು ಬಹಳ ವರ್ಷಗಳೇ ಕಳೆದಿವೆ. ಅವರ ಆರೈಕೆಯಲ್ಲಿ ಆಕೆಗೆ ಮದುವೆಯಾಗಲು ಸಮಯವೇ ಸಿಕ್ಕಿರಲಿಲ್ಲವೆನ್ನಿಸುತ್ತದೆ. ಅಷ್ಟೊತ್ತಿಗೆ ಆಕೆಯ ತೆಕ್ಕೆಯೊಳಕ್ಕೆ ಇನ್ನಿಬ್ಬರು ತಂಗಿಯರು ಬಂದು ಸೇರಿಕೊಂಡಿದ್ದಾರೆ. ಆಗಾಗ ಅವರ ಮನೆಯಲ್ಲಿ ಆಕೆಯ ಇಬ್ಬರು ತಂಗಿಯರು ಜೋರು ದನಿಯಲ್ಲಿ ಜಗಳವಾಡುತ್ತಿರುವುದು ಕೇಳುತ್ತಿತ್ತು. ಆದರೆ ಒಂದು ದಿನವೂ ರೀನಾಳ ಜೋರುದನಿ ಕೇಳಿರಲಿಲ್ಲ. ಹಾಗೆಯೇ ಹಾಸಿಗೆಯ ಮೇಲೆ ಕೂತು ಒರಗಿದ್ದವನಿಗೆ ಹಾಗೆಯೇ ನಿದ್ರೆ ಬಂದಿತ್ತು. ಎಚ್ಚರವಾದಾಗ ರೀನಾ ಇರಲಿಲ್ಲ.

 ಅದಾದ ಮೇಲೆ ಆಗಾಗ ಸಿಕ್ಕಾಗಲೆಲ್ಲಾ ಮಾತನಾಡಿಸುತ್ತಿದ್ದಳು. ಸುರೇಶ, ರಾಜಾರಾಮ ಊರಿಗೆ ಹೋಗಿ ನಾನೊಬ್ಬನೇ ಇದ್ದಾಗ ತಿಂಡಿ ತಂದುಕೊಡುತ್ತಿದ್ದಳು. ಅದೊಂದು ದಿನ ಸುರೇಶ ಮತ್ತು ರಾಜಾರಾಮ ಹಾಗೂ ಇತರ ಗೆಳೆಯರು ಮನೆಗೆ ಹತ್ತಿರದಲ್ಲೇ ಇದ್ದ ಥಿಯೇಟರಿಗೆ ಸೆಕೆಂಡ್ ಶೋಗೆ ಹೋಗಿದ್ದರು. ನಾನೂ ಬೇಕಾದಷ್ಟು ಸಾರಿ ಅವರೊಟ್ಟಿಗೆ ಸಿನೆಮಾಗೆ ಹೋಗಿದ್ದೆ. ಆದರೆ ಆ ದಿನ ಅವರು ಹೋಗಿದ್ದ ಸಿನೆಮಾ ನನ್ನಲ್ಲಿ ಅಷ್ಟೊಂದು ಕುತೂಹಲ ಮೂಡಿಸಿರಲಿಲ್ಲವಾದುದರಿಂದ ನಾನು ಹೋಗಿರಲಿಲ್ಲ. ಮನೆಯಲ್ಲೇ ಕೂತಿದ್ದೆ. ಸಂಜೆ ಮಳೆ ಇರಲಿಲ್ಲ. ಆದರೆ ರಾತ್ರಿಯಾದಂತೆ ಮಳೆ ಧೋ ಎಂದು ಸುರಿಯಲಾರಂಭಿಸಿತು. ಕರೆಂಟ್ ಸಹಾ ಹೋಯಿತು. ಎಂದಿನಂತೆ ಮೋಂಬತ್ತಿ ಹಚ್ಚಿ ಮಲಗಲು ಹಾಸಿಗೆ ಸಿದ್ಧಪಡಿಸಿಕೊಳ್ಳುತ್ತಿದ್ದೆ. ಬಾಗಿಲು ತಟ್ಟಿದ ಸದ್ದಾಯಿತು. ಸಿನೆಮಾಗೆ ಹೋದವರು ಇಷ್ಟು ಬೇಗ ಬರಲು ಸಾಧ್ಯವಿಲ್ಲ. ಪುನಃ ಲೀಸಾ ಬಂದಳೆ ಎಂದುಕೊಂಡೆ. ಈಗ ಅವಳು ಕೂದಲೆಲ್ಲಾ ಹರಡಿಕೊಂಡು ಬಂದರೂ ನನಗೆ ಹೆದರಿಕೆಯಾಗುವುದಿಲ್ಲ. ನಾನೇ ಅವಳಿಗೆ ಛತ್ರಿ ಹಿಡಿದು ಮನೆಗೆ ವಾಪಸ್ಸು ಬಿಟ್ಟುಬರಬಲ್ಲೆ. ಹಾಗಾಗಿ ಧೈರ್ಯದಿಂದ ಬಾಗಿಲು ತೆರೆದೆ. ಹೊರಗೆ ಕತ್ತಲಲ್ಲಿದ್ದ ಆಕೃತಿಯ ಕೈಯಲ್ಲಿ ಯಾವ ಮೋಂಬತ್ತಿಯೂ ಇರಲಿಲ್ಲ. ಆ ಆಕೃತಿ ಸರಕ್ಕನೆ ಮನೆಯೊಳಕ್ಕೆ ನುಗ್ಗಿಬಂತು. ಕೋಣೆಯಿಂದ ಬರುತ್ತಿದ್ದ ಮೋಂಬತ್ತಿಯ ಬೆಳಕಿನಿಂದ ಅದು ರೀನಾ ಎಂದು ತಿಳಿಯಿತು. ಆಕೆ ಸರಕ್ಕನೆ ಒಳಕ್ಕೆ ನುಗ್ಗಿ ಬಂದದ್ದರಿಂದ ಕೊಂಚ ಗಾಭರಿಯೇ ಆಯಿತು. ಒಳಕ್ಕೆ ಬಂದವಳೇ ನೇರ ನನ್ನ ರೂಮಿಗೆ ನುಗ್ಗಿ ಕುರ್ಚಿಯ ಮೇಲೆ ಕೂತಳು. ನನಗೊಂದೂ ಅರ್ಥವಾಗಲಿಲ್ಲ. `ಏನಾದರೂ ಸಹಾಯ ಬೇಕಾಗಿತ್ತೆ?' ಎಂದು ಕೇಳಿದೆ. `ನಿನ್ನ ಜೊತೆ ಮಾತನಾಡಬೇಕಿತ್ತು' ಎಂದಳು. ಮನೆಯಲ್ಲೇನಾದರೂ ಸಮಸ್ಯೆಯಾಗಿರಬಹುದು ಎಂದುಕೊಂಡು ಅಲ್ಲೇ ಮಂಚದ ಮೂಲೆಯೊಂದರಲ್ಲಿ ಕೂತೆ. `ಏಕೆ, ಏನಾಗಿದೆ?' ಎಂದೆ. ಮನೆಯಲ್ಲಿ ಲೀಸಾಳನ್ನು ಸೇರಿಸಿಕೊಂಡಲ್ಲಿ ಮೂರುಜನ ರೋಗಿಗಳು. ಏನಾದರೂ ಸಂಕಟದಲ್ಲಿರಬಹುದು ಎಂದುಕೊಂಡೆ. ಅಳತೊಡಗಿದಳು. ನನಗಿನ್ನೂ ಗಾಭರಿಯಾಯಿತು. ಆಕೆಯ ಅಮ್ಮ ಅಥವಾ ಅಪ್ಪನಿಗೇನಾದರೂ ಆಗಿದೆಯೆ? `ರೀನಾ ಏನದು ಹೇಳು' ಎಂದೆ. ಇದ್ದಕ್ಕಿದ್ದಂತೆ ಎದ್ದು ನನ್ನನ್ನು ಅಪ್ಪಿಕೊಂಡಳು. ನನಗೆ ಕೊಂಚ ಕಸಿವಿಸಿಯಾಯಿತು. ಬಿಡಿಸಿಕೊಳ್ಳಲು ಯತ್ನಿಸಿದೆ. ಇನ್ನೂ ಬಲವಾಗಿ ಆತುಕೊಂಡಳು. ಬಲವಂತವಾಗಿ ಅವಳ ಕೈಗಳನ್ನು ಬಿಡಿಸಿ ಪುನಃ ಕುರ್ಚಿಯ ಮೇಲೆ ಕೂಡಿಸಿದೆ. `ನನಗೆ ಈ ಬದುಕು ಸಾಕಾಗಿದೆ' ಎಂದಳು. ಅವಳ ಆ ಯಾತನೆ ನನಗರ್ಥವಾಗುತ್ತಿತ್ತು. ಅವಳಿಗೆ ಅವಳದೇ ಬದುಕೆನ್ನುವುದು ಇರಲೇ ಇಲ್ಲ. ಅವಳು ಬದುಕುತ್ತಿರುವುದು, ದುಡಿಯುತ್ತಿರುವುದು ಅವಳಿಗಾಗಿ ಅಲ್ಲ.

 ಏನೂ ಹೇಳಲು ತೋಚದೆ, `ಸಮಾಧಾನ ಮಾಡಿಕೊ, ಎಲ್ಲಾ ಸರಿಹೋಗುತ್ತದೆ' ಎಂದೆ. ನನ್ನ ಮಾತು ಅವಳಿಗೆ ಒಂದು ಜೋಕ್ ಎನ್ನಿಸಬಹುದು ಎಂಬುದು ನನಗೆ ತಿಳಿದಿತ್ತು. ಅವಳ ಅಳುವಿನ ತುಟಿಗಳಲ್ಲೂ ನಗು ಕಾಣಿಸಿಕೊಂಡಂತೆ ಅನ್ನಿಸಿತು. ತಲೆ ಎತ್ತಿ ನನ್ನನ್ನೇ ನೋಡುತ್ತಿದ್ದವಳು, `ನನ್ನನ್ನು ಮದುವೆಯಾಗುತ್ತೀಯಾ?' ಎಂದಳು. ತಕ್ಷಣ ನನ್ನ ತಲೆ ಗಿರಗಿರ ತಿರುಗಿದಂತೆ ನನಗನ್ನಿಸಿತು. ಅವಳಿಂದ ಈ ಪ್ರಶ್ನೆಯನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಗರಬಡಿದವನಂತೆ ಎದ್ದು ನಿಂತೆ. ಆಕೆ ನನ್ನನ್ನೇ ನೋಡುತ್ತಿದ್ದಳು. ಆಕೆ ಆ ಪ್ರಶ್ನೆಯನ್ನು ತಮಾಷೆಗಾಗಿ ಕೇಳುತ್ತಿಲ್ಲ ಎಂದು ನನಗರಿವಾಗತೊಡಗಿತು. `ಸಾಧ್ಯವೇ ಇಲ್ಲ', ನನಗರಿವಿಲ್ಲದಂತೆ ನನ್ನಿಂದ ಮಾತು ಹೊರಬಿತ್ತು. `ಪ್ಲೀಸ್' ಎಂದಳು. ಇದೇನೋ ಅತಿರೇಕಕ್ಕೆ ಹೋಗುತ್ತಿದೆ ಎನ್ನಿಸಿತು. ಲೀಸಾಳೊಬ್ಬಳೇ ಅಲ್ಲ, ಅವಳ ಮನೆಯಲ್ಲಿನ ಎಲ್ಲರೂ ಹುಚ್ಚರೆನ್ನಿಸತೊಡಗಿತು. `ಐ ಲವ್ ಯೂ. ಬಹಳ ದಿನಗಳಿಂದ ನಿನ್ನಲ್ಲಿ ಹೇಳಬೇಕೆಂದಿದ್ದೆ' ಎಂದಳು. ಅವಳ ಮಾತುಗಳು ಎಲ್ಲೋ ದೂರದಲ್ಲಿ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. `ನೋಡು, ನಾನೀಗಾಗಲೇ ಒಬ್ಬ ಹುಡುಗಿಯನ್ನು ಪ್ರೀತಿಸಿದ್ದೇನೆ. ಮುಂದಿನ ವರ್ಷ ನಮ್ಮ ಮದುವೆಯಾಗುತ್ತಿದೆ. ಈಗ ನೋಡು, ದಯವಿಟ್ಟು ಮನೆಗೆ ಹೋಗು' ಎಂದೆ. ಆ ಕ್ಷಣ ಆಕೆ ಹೊರಹೊರಟರೆ ಸಾಕಾಗಿತ್ತು. ಆಕೆಯ ಮೇಲೆ ನನ್ನ ಉತ್ತರ ಯಾವ ಪರಿಣಾಮವನ್ನೂ ಬೀರಲಿಲ್ಲ. ಏನೋ ಯೋಚಿಸುತ್ತಿದ್ದವಳು, `ನೀನು ಪ್ರೀತಿಸಿರುವ ಹುಡುಗಿಯನ್ನೇ ಮದುವೆಯಾಗು, ಆದರೆ ನಾನೂ ಇರುತ್ತೇನೆ. ನಾನು ಇಲ್ಲೇ ಇರುತ್ತೇನೆ, ನನಗೊಂದು ಮನೆ ಮಾಡಿಡು .... ಆಗಾಗ ಬಂದುಹೋಗುತ್ತಿರು' ಎಂದಳು. ನನಗೆ ವಿಪರೀತ ಸಿಟ್ಟು ಬಂದಿತು. `ನನಗೆ ಇನ್ನು ಹೆಚ್ಚು ಮಾತನಾಡಲು ಇಷ್ಟವಿಲ್ಲ. ಪ್ಲೀಸ್ ಗೋ ಹೋಮ್' ಎಂದೆ. ಆಕೆ ಎದ್ದು ನನ್ನ ಕಡೆಗೆ ಬರತೊಡಗಿದಳು. ಆಕೆಯನ್ನು ಬಲವಂತವಾಗಿ ಬಾಗಿಲಿನಿಂದ ಹೊರಕ್ಕೆ ತಳ್ಳಿದೆ. ಆಕೆ ಅಳುತ್ತಲೇ ಇದ್ದಳು. ಆ ಚಳಿ, ಮಳೆಯಲ್ಲೂ ನನ್ನ ಮೈ ಬೆವರಿತ್ತು. 

***
ಫಾದರ್ ಬಂದು ನನ್ನನ್ನು ಎಬ್ಬಿಸಿದಾಗಲೇ ನನಗೆ ಎಚ್ಚರವಾದದ್ದು. `ಗುಡ್ ಮಾರ್ನಿಂಗ್' ಹೇಳಿ ನನ್ನ ಪರಿಚಯ ಮಾಡಿಕೊಂಡೆ. ಮಡಿಕೇರಿಯ ಜಾಕೋಬ್ ಒಬ್ಬರನ್ನು ನೋಡಲು ಬಂದಿದ್ದೇನೆಂದು ತಿಳಿಸಿದೆ. ನಾನು ಅವರ ನೆಂಟನಲ್ಲವೆಂದೂ ನನಗೆ ಬಹಳ ಹಿಂದೆ ಪರಿಚಯವಿದ್ದವರೆಂದೂ ತಿಳಿಸಿದೆ. ಆ ವೃದ್ಧಾಶ್ರಮದಲ್ಲಿ ಮೂವರು ಜಾಕೋಬ್‌ಗಳಿದ್ದಾರೆ, ಅವರ ಪೂರ್ತಿ ಹೆಸರು ಏನೆಂದು ಕೇಳಿದರು. ನನಗೆ ನೆನಪಿಲ್ಲವೆಂದೆ. ವಿವರಗಳನ್ನು ಕೇಳಿದ ಫಾದರ್, `ನಿಮ್ಮ ವಿವರಗಳ ಹಾಗೆ ಇರುವವರು ಒಬ್ಬರಿದ್ದಾರೆ. ಅವರ ವಯಸ್ಸು ತೊಂಭತ್ತಾಗಿರಬಹುದು. ಅವರೊಬ್ಬರೇ ಮಡಿಕೇರಿಯವರು. ಬನ್ನಿ ತೋರಿಸುತ್ತೇನೆ' ಎಂದು ಕರೆದುಕೊಂಡು ಹೋದರು. ಹೋಗುವಾಗ, `ಆ ಜಾಕೋಬ್ ನಮ್ಮಲ್ಲಿ ಬಂದು ಸುಮಾರು ಇಪ್ಪತ್ತು ವರ್ಷಗಳಾಯಿತು. ಅವರನ್ನು ನೋಡಲು ಬರುತ್ತಿರುವವರಲ್ಲಿ ನೀವೇ ಮೊದಲು' ಎಂದರು ಫಾದರ್. ಅವರ ಮೂವರು ಹೆಣ್ಣು ಮಕ್ಕಳಿಗೇನಾಯಿತು ಎನ್ನುವ ಪ್ರಶ್ನೆ ನನ್ನನ್ನು ಮಡಿಕೇರಿಯಿಂದ ಕಾಡುತ್ತಲೇ ಇತ್ತು. ಹೊರಗೆ ಬಹಳಷ್ಟು ಜನ ವಯಸ್ಸಾದವರಿದ್ದರು. ಕೆಲವರು ಊರುಗೋಲುಗಳನ್ನು ಹಿಡಿದು ಓಡಾಡುತ್ತಿದ್ದರು, ಇನ್ನು ಕೆಲವರು ಅಲ್ಲಲ್ಲಿ ಕೂತು ಮಾತನಾಡುತ್ತಿದ್ದರು. ಅಲ್ಲೇ ಮರದ ಕೆಳಗೆ ವೀಲ್ ಚೇರಿನಲ್ಲಿ ಒಬ್ಬ ಹಣ್ಣು ಹಣ್ಣು ಮುದುಕ ಕೂತಿದ್ದರು. ಅಲ್ಲಿಗೆ ನನ್ನನ್ನು ಕರೆದೊಯ್ದು `ಜಾಕೋಬ್ ತಾತ ನೋಡಿ ನಿಮ್ಮನ್ನು ನೋಡಲು ಯಾರೋ ಬಂದಿದ್ದಾರೆ' ಎಂದು ಜೋರುದನಿಯಲ್ಲಿ ಹೇಳಿದರು. ಆ ತಾತ ತನ್ನ ಕನ್ನಡಕಗಳ ಹಿಂದೆ ಕುಳಿಬಿದ್ದ ಕಣ್ಣುಗಳಿಂದ ನನ್ನನ್ನೇ ದಿಟ್ಟಿಸಿ ನೋಡಿದರು. ಜಾಕೋಬ್‌ರ ಮುಖ ನಾನು ಇಪ್ಪತ್ತೈದು ವರ್ಷಗಳ ಹಿಂದೆ ಕಂಡಿದ್ದಂತೆ ಇರಲಿಲ್ಲ. ಆದರೂ ಅವರೇ ಇರಬಹುದೆಂದು ಅಲ್ಲೇ ಪಕ್ಕದ ಕಲ್ಲಿನ ಬೆಂಚಿನ ಮೇಲೆ ಕೂತೆ.  `ನೀವು ಮಾತನಾಡುತ್ತಿರಿ, ನಾನು ಬರುತ್ತೇನೆ' ಎಂದು ಫಾದರ್ ಅಲ್ಲಿಂದ ಹೊರಟರು.

 ಜಾಕೋಬ್‌ಗೆ ನನ್ನ ಪರಿಚಯ ಹೇಳಿದೆ. `ನೆನಪಿದೆಯಾ?' ಎಂದು ಕೇಳಿದೆ. `ನೆನಪು' ಎಂದ ಅಜ್ಜನ ಮುಖದಲ್ಲಿ ವಿಷಾದದ ನಗೆ ಮೂಡಿತು. `ನನಗಿರುವುದು ಬರೇ ನೆನಪುಗಳ ಹೊರೆ ಮಾತ್ರ' ಎಂದರು. `ನೀನೇ ಅಲ್ಲವೆ, ನನ್ನ ಮಗಳು ಲೀಸಾಳನ್ನು ಬಾವಿಯಿಂದ ಕಾಪಾಡಿದ್ದು?' ಹೌದೆಂದು ತಲೆಯಾಡಿಸಿದೆ. `ಅಲ್ಲಿ ನೋಡು' ಎಂದು ಇಬ್ಬರು ಮುದುಕರೆಡೆಗೆ ಕೈ ತೋರಿದರು. ಎದುರಿನ ಮತ್ತೊಂದು ಮರದ ಕೆಳಗೆ ಇಬ್ಬರು ವಯಸ್ಸಾದವರು ಕಲ್ಲ ಬೆಂಚುಗಳ ಮೇಲೆ ಕೂತಿದ್ದರು. `ಅವರಿಗೆಂಥದೋ ಕಾಯಿಲೆಯಂತೆ, ಮರೆವಿನ ಕಾಯಿಲೆ. ಅವರಿಗೆ ಏನೂ ನೆನಪಿರೋಲ್ಲ. ಆ ಮುಠ್ಠಾಳರಿಗೆ ಊಟ ಮಾಡಿದ್ದೂ ನೆನಪಿರೋಲ್ಲ. ಎಂಥಾ ಪುಣ್ಯಾತ್ಮರವರು!' ಸ್ವಲ್ಪ ಹೊತ್ತು ತಲೆತಗ್ಗಿಸಿ ಕೂತಿದ್ದ ಜಾಕೋಬ್ ಮಾತು ಮುಂದುವರಿಸಿದರು, `ನನಗ್ಯಾಕೆ ಅಂಥ ಮರೆವಿನ ಕಾಯಿಲೆ ಬರಲಿಲ್ಲ?' ನನಗೇನು ಹೇಳಲೂ ತೋಚಲಿಲ್ಲ. `ಹೇಗಿದ್ದೀರಿ?' ಎಂದು ಕೇಳಲೂ ಮನಸ್ಸಾಗಲಿಲ್ಲ. ಒಂದೈದು ನಿಮಿಷ ಇಬ್ಬರೂ ಹಾಗೆಯೇ ಕೂತಿದ್ದೆವು.

 `ಮಡಿಕೇರಿಯಲ್ಲಿ ನೀವಿದ್ದ ಮನೆ ಬಳಿಹೋಗಿದ್ದೆ. ಆ ಮನೆಯಲ್ಲಿದ್ದವರು ನೀವು ಇಲ್ಲಿರುವುದು ತಿಳಿಸಿದರು. ನಿಮ್ಮ ಮಕ್ಕಳು ರೀನಾ, ಮ್ಯಾಗಿ, ಲೀಸಾ...ರಾಬರ್ಟ್ ಎಲ್ಲಿದ್ದಾರೆ?' ಕೇಳಿದೆ. ತೂಕಡಿಸುತ್ತಿದ್ದಂತೆ ಇದ್ದ ಜಾಕೋಬ್ ತಲೆ ಎತ್ತಿ ಸುಮ್ಮನೆ `ಎಲ್ಲೋ ಹೋದರು' ಎನ್ನುವಂತೆ ಕೈ ಆಡಿಸಿದರು. ಸ್ವಲ್ಪ ಹೊತ್ತಿನ ನಂತರ, `ಲೀಸಾ ಪುನಃ ಬಾವಿಗೆ ಹಾರಿದಳು. ಈ ಸಾರಿ ಅವಳನ್ನು ಎತ್ತುವವರು ಯಾರೂ ಇರಲಿಲ್ಲ' ಎಂದರು. ನನ್ನ ಬಾಯಿಂದ `ಅಯ್ಯೋ' ಎನ್ನುವ ಶಬ್ದ ನನಗರಿವಿಲ್ಲದಂತೆ ಬಂತು. ಜಾಕೋಬ್‌ರ ಮುಖದಲ್ಲಿ ಯಾವ ಭಾವನೆಯೂ ಇರಲಿಲ್ಲ. `ಮ್ಯಾಗಿಯ ಗಂಡ ಮಸ್ಕಟ್‌ನಿಂದ ಬರಲೇ ಇಲ್ಲ. ಕೊನೆಗೆ ಅವಳೇ ಒಂದು ದಿನ ಅವನನ್ನು ಹುಡುಕಿಕೊಂಡು ಅಲ್ಲಿಗೇ ಹೊರಟುಹೋದಳು. ಆಗಾಗ ಪತ್ರ ಬರೆಯುತ್ತಿದ್ದಳು. ಅಲ್ಲಿ ಅವಳ ಗಂಡ ಸಿಗಲೇ ಇಲ್ಲವಂತೆ. ಅಲ್ಲಿ ಅವರಿವರ ಮನೆಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದಳಂತೆ. ಕೊನೆಗೆ ಪತ್ರ ಬರೆಯುವುದೂ ನಿಲ್ಲಿಸಿದಳು. ಅವಳು ಬದುಕಿದ್ದಾಳೋ ಇಲ್ಲವೋ ಗೊತ್ತಿಲ್ಲ. ರಾಬರ್ಟ್ ಅವಳ ಜೊತೆ ಹೋಗಲಿಲ್ಲ. ಅವನು ಪುಂಡನಾಗಿ ಎಲ್ಲಿದ್ದಾನೋ ಗೊತ್ತಿಲ್ಲ. ಅವನಿಗೇ ನಾವಿದ್ದ ಮನೆ ಬರೆದುಕೊಟ್ಟೆ. ಅವನು ಅದನ್ನು ಮಾರಿಕೊಂಡು ಊರುಬಿಟ್ಟು ಹೋಗಿದ್ದಾನೆ. ಇನ್ನು ರೀನಾಳ ಕತೆ... ಆಕೆ ನಿನ್ನನ್ನೂ ಕೇಳಿರಬಹುದಲ್ವೆ ಮದುವೆಯಾಗು ಎಂದು?' ಎಂದು ಹೇಳಿ ನನ್ನೆಡೆಗೇ ನೋಡಿದರು ಜಾಕೋಬ್. ನಾನು ಏನೂ ಹೇಳಲಿಲ್ಲ. `ಆ ರೀತಿ ಆಕೆ ಎಷ್ಟು ಜನರನ್ನು ಕೇಳಿಲ್ಲ! ಪಾಪದ ಹುಡುಗಿ. ಅಪ್ಪ ಅಮ್ಮಂದಿರಾದ ನಾವು ಅವಳನ್ನು ನೋಡಿಕೊಳ್ಳಬೇಕಾಗಿತ್ತು. ನಮ್ಮ ದುರಾದೃಷ್ಟ ನಾವು ಬದುಕಿ ಅವಳ ಬದುಕನ್ನು ಹಾಳುಮಾಡಿಬಿಟ್ಟೆವು.' ಜಾಕೋಬ್ ಕಣ್ಣಂಚಿನಲ್ಲಿ ನೀರ ಹನಿ ಕಾಣಿಸಿತು. `ರೀನಾ ಏನಾದಳು?' ಎಂದು ಕೇಳುವ ಧೈರ್ಯ ನನಗೆ ಬರಲಿಲ್ಲ. `ಸಾವೂ ಬರಲಿಲ್ಲ, ಹಾಳಾದ್ದು ನೆನಪುಗಳೂ ಸಾಯಲಿಲ್ಲ' ಎಂದ ಜಾಕೋಬ್ ತಲೆ ತಗ್ಗಿಸಿದರು.

 ಹತ್ತು ನಿಮಿಷ ಹಾಗೆಯೇ ಕೂತಿದ್ದೆ. ಜಾಕೋಬ್ ಅಲುಗಾಡಲಿಲ್ಲ. ಕಣ್ಣು ಮುಚ್ಚಿತ್ತು. ನಿದ್ರೆ ಮಾಡುತ್ತಿರಬಹುದು ಎನ್ನಿಸಿ ನಾನು ತಂದಿದ್ದ ಸೇಬಿನ ಕವರ್ ಅಲ್ಲೇ ಕಲ್ಲಬೆಂಚಿನ ಮೇಲೆ ಇರಿಸಿ ನನ್ನ ಚೀಲ ಹೆಗಲಿಗೇರಿಸಿ ಸದ್ದಿಲ್ಲದೆ ಅಲ್ಲಿಂದ ಹೊರಟೆ. ಜಾಕೋಬ್ ಅಜ್ಜ ಅವರ ಹೊರೆಯನ್ನು ನನಗೂ ವರ್ಗಾಯಿಸಿದ್ದಾರೆ ಎನ್ನಿಸಿ ಎದೆ ಭಾರವಾಗಿತ್ತು.

j.balakrishna@gmail.com

ಮಂಗಳವಾರ, ಜನವರಿ 04, 2011

ಹೊಸ ವರ್ಷದ ರೆಸೊಲ್ಯೂಶನ್

ನನ್ನ ಮೆಚ್ಚಿನ ಕಾರ್ಟೂನ್ `ಕ್ಯಾಲ್ವಿನ್ ಅಂಡ್ ಹಾಬ್ಸ್'ನ ಒಂದು ಸ್ಟ್ರಿಪ್ ಅನ್ನು ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿದ್ದೇನೆ. ವ್ಯಂಗ್ಯಚಿತ್ರಕಾರ Bill Wattersonಗೆ ಧನ್ಯವಾದಗಳು.

© Universal Press Syndicate