Thursday, October 02, 2008

ಪರಿಸರ ಸಂರಕ್ಷಣೆ ಸಂದೇಶಗಳು


ಪ್ರತಿ ವರ್ಷ ಅಕ್ಟೋಬರ್ ಮೊದಲ ವಾರದಲ್ಲಿ (ವಿಶ್ವ ವನ್ಯಜೀವಿ ಸಪ್ತಾಹ) ಎಂದಿನಂತೆ ನಾನು ಎದುರು ನೋಡುವ ವಿರಾಜಪೇಟೆಯ ಮಿತ್ರ ಡಾ.ಎಸ್.ವಿ.ನರಸಿಂಹನ್ರವರ ಸುಂದರ ವನ್ಯಜೀವಿ ಸಂದೇಶಗಳ ಕಾರ್ಡುಗಳು ಈ ವರ್ಷವೂ ತಮ್ಮ ಸಂದೇಶ ಹೊತ್ತು ಬಂದವು. ಡಾ. ನರಸಿಂಹನ್ರವರ ಬಗ್ಗೆ ಈಗಾಗಲೇ ಈ ಬ್ಲಾಗ್ ನಲ್ಲಿ ಬರೆದಿದ್ದೇನೆ: http://antaragange.blogspot.com/2007/02/blog-post_18.html


ಕಳೆದ 24 ವರ್ಷಗಳಿಂದ 50,000ಕ್ಕೂ ಹೆಚ್ಚು ವನ್ಯಜೀವಿ ಸಂದೇಶದ ಕಾರ್ಡುಗಳನ್ನು ಕೈಯಲ್ಲೇ ಚಿತ್ರಿಸಿ ಸುಮಾರು 7000 ಮಂದಿಗೆ ಅವುಗಳನ್ನು ಹಂಚಿದ್ದಾರೆ. ವರ್ಷ ಅವರು ಕೈಯಲ್ಲೇ ಚಿತ್ರಿಸಿರುವ ಕಾರ್ಡುಗಳ ಸಂಖ್ಯೆ 2490; ಕಳೆದ 24 ವರ್ಷಗಳಲ್ಲಿ 50,040. ಕಾರ್ಡುಗಳನ್ನು ಪಡೆದವರು ವರ್ಷ 1230 ಹಾಗೂ ಕಳೆದ 24 ವರ್ಷಗಳಲ್ಲಿ 7110. ಪರಿಸರದ ಬಗೆಗಿರುವ ಅವರ ಕಾಳಜಿ ಶ್ಲಾಘನೀಯ.

ಕೊಡಗಿನ 310 ಪಕ್ಷಿ ಪ್ರಭೇದಗಳ ಸಚಿತ್ರ ವಿವರಣೆ ಮತ್ತು ಮಾಹಿತಿಯುಳ್ಳ ಅವರು ಬರೆದಿರುವ ಕೊಡಗಿನ ಖಗರತ್ನಗಳು ಕೃತಿ ಈಗಾಗಲೇ ಎರಡನೇ ಆವೃತ್ತಿ ಕಂಡಿದೆ. ಅದ್ಭುತ ಪುಸ್ತಕ! ಪ್ರತಿಗಳಿಗೆ ಲೇಖಕರನ್ನು ಸಂಪರ್ಕಿಸಿ: drnsimhan@yahoo.com

Tuesday, September 16, 2008

ಕತೆ- ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ

2008ರ ಸೆಪ್ಟೆಂಬರ್ 14ರ `ಕನ್ನಡ ಪ್ರಭ'ದಲ್ಲಿ ನನ್ನ ಕತೆ ಆತ್ಮಹತ್ಯಾ ಟಿಪ್ಪಣಿಗೊಂದು ಮುನ್ನುಡಿ ಕತೆ ಪ್ರಕಟವಾಗಿದೆ. ಅದನ್ನು ಇಲ್ಲಿ ನನ್ನ ಬ್ಲಾಗ್‌ನಲ್ಲಿ ಓದಿ ಅಥವಾ ನೇರ ಕನ್ನಡ ಪ್ರಭದ ವೆಬ್ ಸೈಟ್‌ನಲ್ಲಿ (ಇದರ ಫಾಂಟ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನಲ್ಲಿ ಮಾತ್ರ ಸರಿಯಾಗಿ ಕಾಣುತ್ತದೆ. ಲಿಂಕ್ : http://www.kannadaprabha.com/NewsItems.asp?ID=KP420080913031408&Title=Sapthahikaprabha&lTitle=%D1%DB%AE%DB%A1%D5O%DA%AE%DA%C3%BA%DA&Topic=0&ndate=9/14/2008&Dist=0) ಓದಿ ತಮ್ಮ ಅಭಿಪ್ರಾಯ ತಿಳಿಸಿ:

ಸುಶೀಲಾ ಕಿಟಕಿಯ ಬಳಿ ನಿಂತು ಧೋ ಎಂದು ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದಳು. ನೋಡುತ್ತಿದ್ದುದು ಮಳೆಯನ್ನಾದರೂ ಅವಳ ಮನಸ್ಸು ಎಲ್ಲೆಲ್ಲೋ ಗೊತ್ತುಗುರಿಯಿಲ್ಲದೆ ಅಲೆದಾಡುತ್ತಿತ್ತು. ಎಷ್ಟು ಅಲೆದಾಡಿದರೂ ಆ ಮನಸ್ಸು ಬಾಟಲಿಯೊಳಗೆ ಬಂಧಿಸಲ್ಪಟ್ಟ ಜೀನಿಯಂತಾಗಿತ್ತು. ಮನಸ್ಸಿನ ಜೊತೆಗೆ ಅವಳ ನೆನಪೂ ಸಹ ಬಾಟಲಿಯೊಳಗೆ ಸೇರಿಕೊಂಡಂತಾಗಿ ಆ ಕೋಣೆ ಬಿಟ್ಟು ಹೊರಗೆ ಹೋಗಲು ಆಗುತ್ತಿರಲಿಲ್ಲ. ಅವಳೆಲ್ಲ ನೆನಪುಗಳೂ ಅಲ್ಲೇ ನಿಂತುಹೋಗಿದ್ದವು. ಆ ರೀತಿ ಎಷ್ಟು ದಿನಗಳಿಂದ ಎನ್ನುವುದು ಅವಳಿಗೇ ತಿಳಿದಿರಲಿಲ್ಲ ಆಗಾಗ ಬೀಸುತ್ತಿದ್ದ ಗಾಳಿ ಕಿಟಕಿಯ ಮೂಲಕ ಕೋಣೆಯೊಳಕ್ಕೂ ನುಗ್ಗುತ್ತಿತ್ತು ಹಾಗೂ ಒಂದಷ್ಟು ಹನಿ ನೀರುಗಳನ್ನೂ ಅವಳ ಮುಖದ ಮೇಲೆ ಸಿಂಪಡಿಸುತ್ತಿತ್ತು. ಕೊಂಚ ಚಳಿಯೆನ್ನಿಸಿದರೂ ತಂಗಾಳಿ ಹಿತವಾಗಿತ್ತು. ಕಿಟಕಿಯ ಆಚೆ ಏನೂ ಕಾಣುತ್ತಿರಲಿಲ್ಲ. ಏಕೆಂದರೆ ಪಕ್ಕದಲ್ಲೇ ಒತ್ತರಿಸಿಕೊಂಡು ಕಟ್ಟಿದ್ದ ಕಟ್ಟಡವೊಂದರ ಗೋಡೆಯಿತ್ತು. ಆ ಗೋಡೆಗೆ ಕಿಟಕಿಗಳಿಲ್ಲ, ಬಾಗಿಲುಗಳಿಲ್ಲ. ಅವಳಿಗೆ ಕಿಟಕಿಯ ಮೂಲಕ ಒಬ್ಬ ನರಮನುಷ್ಯನೂ ಕಾಣುತ್ತಿರಲಿಲ್ಲ, ಯಾವುದೇ ಸದ್ದು ಕೇಳುತ್ತಿರಲಿಲ್ಲ. ಕೇಳುತ್ತಿದ್ದುದು ಅವಳದೇ ಸದ್ದುಗಳು. ಎಷ್ಟೋ ಸಾರಿ ಆ ಸದ್ದು ಬೇರ್‍ಯಾರದೋ ಹೆಣ್ಣಿನದು ಇರಬಹುದೇನೋ ಎಂದು ಅವಳಿಗೇ ಗಾಭರಿಯಾಗುತ್ತಿತ್ತು.

ಎಷ್ಟು ಹೊತ್ತು ರೀತಿ ನಿಂತಿದ್ದಳೋ ಅವಳಿಗೇ ಗೊತ್ತಿಲ್ಲ. ಅವಳಿಗೆ ಗೊತ್ತಾಗುತ್ತಲೂ ಇರಲಿಲ್ಲ. ಮನೆಯಲ್ಲಿ ಗಡಿಯಾರವೇ ಇರಲಿಲ್ಲ. ಇದ್ದರೂ ಅವಳಿಗೆ ಸಮಯ ನೋಡುವುದೇ ಮರೆತುಹೋಗಿತ್ತೇನೋ. ಕೋಣೆಯ ಬಾಗಿಲು ತಟ್ಟಿದ ಸದ್ದಾಯಿತು. ದೀರ್ಘ ನಿದ್ದೆಯಿಂದ ಎಚ್ಚರಿಕೆಯಾದಂತಾಯಿತು. ಮಳೆ ನಿಂತುಹೋಗಿತ್ತು. ಬರೇ ತಂಗಾಳಿ ಬೀಸುತ್ತಿತ್ತು. ಬಾಗಿಲ ಚಿಲಕ ತೆಗೆಯಲು ಹೋದಳು. ಬಲಗೈ ಮುಷ್ಠಿ ಬಿಗಿಹಿಡಿದಿರುವುದು ಅರಿವಿಗೆ ಬಂತು. ಮುಷ್ಠಿ ತೆರೆಯಲಿಲ್ಲ, ಎಲ್ಲಿ ಚೀಟಿ ಗಾಳಿಗೆ ಹಾರಿಹೋಗುವುದೋ ಎನ್ನುವ ಭಯವಾಯಿತು. ಎಡಗೈಯಲ್ಲಿ ಚಿಲಕ ತೆರೆದಳು. ಒಬ್ಬಾತ ಒಳಗೆ ಬಂದ. ಹಾಗೆಯೇ ತನ್ನ ದೇಹದ ಭಾಗವೇ ಆಗಿರುವಂತಹ ಮದ್ಯದ ವಾಸನೆಯನ್ನೂ ಹೊತ್ತು ತಂದ. ಕಿಟಕಿಯಿಂದ ಬೀಸುತ್ತಿದ್ದ ತಂಗಾಳಿ ವಾಸನೆಯನ್ನು ಗಿರಗಿರನೆ ತಿರುಗಿಸಿ ಕೋಣೆಯೆಲ್ಲಾ ಹರಡಿತು. ಹಾಗೆಯೇ ಎಡಗೈಯಿಂದ ಚಿಲಕ ಹಾಕಿದಳು. ಆತ ಮಂಚದ ಮೇಲೆ ಕೂತಿದ್ದ. ಸುಶೀಲಳು ಕಣ್ಣು ಬಿಟ್ಟಿದ್ದರೂ ಆಕೆಗೆ ಏನೂ ಕಾಣುತ್ತಿರಲಿಲ್ಲ. ಆತ ಅವಳನ್ನು ದಿಟ್ಟಿಸಿ ನೋಡುತ್ತಿದ್ದ. ಅವಳ ಮುಷ್ಠಿ ಬಿಗಿಯಾಗಿ ಹಿಡಿದೇ ಇತ್ತು. `ಬ್ಲೌಸ್ ಬಿಚ್ಚಲು ಐವತ್ತು ರೂಪಾಯಿ, ಎಲ್ಲಾ ಬಿಚ್ಚಲು ನೂರು ರೂಪಾಯಿ' ಎಂದಳು, ಯಾಂತ್ರಿಕವಾಗಿ. `ಅದೇನ್ ದಿನಾ ವದರಿದ್ದೇ ವದರ್ತೀಯಾ. ನೀನು ಕೇಳೋಕ್ ಮೊದಲೇ ಅಲ್ಲಿ ಹಾಕಿದ್ದೀನಿ ನೋಡು' ಎಂದ. ಮಂಚದ ಮೇಲೆ ನೂರರ ನೋಟು ತಂಗಾಳಿಗೆ ಜೀವಪಡಕೊಂಡತ್ತಿತ್ತು. ಎತ್ತಿಕೊಳ್ಳಲು ಹೋದಳು. ಮುಷ್ಠಿ ಬಿಗಿಹಿಡಿದಿರುವುದು ಅರಿವಾಗಿ ಅದನ್ನು ಬಿಡಿಸದೇ ಎಡಗೈಯಲ್ಲಿ ತೆಗೆದುಕೊಂಡು ಮತ್ತೊಂದು ಮುಷ್ಠಿಯಲ್ಲಿ ಬಿಗಿಹಿಡಿದಳು. 'ಏನಿದೆ ಕೈಯಲ್ಲಿ. ನನಗೇನಾದರೂ ಕೊಡೋಕೆ ಇಟ್ಕೊಂಡಿದೀಯಾ?' ಎನ್ನುತ್ತ ಆತ ಕೈ ಹಿಡಿದು ಅವಳನ್ನು ಮಂಚಕ್ಕೆ ಎಳೆದುಕೊಂಡ. ಅವಳ ಮುಷ್ಠಿ ಇನ್ನಷ್ಟು ಬಿಗಿಯಾಯಿತು. ಅವಳ ಎರಡೂ ಕೈಗಳು ಮುಷ್ಠಿಯಾಗಿಯೇ ಇದ್ದುದರಿಂದ ಅವಳ ಬಟ್ಟೆಯನ್ನು ಆತನೇ ಬಿಚ್ಚಬೇಕಾಯಿತು. ಆತನಿಗೆ ಅದು ಇನ್ನೂ ಖುಷಿಕೊಟ್ಟಿತು.
***
ಆತ ಎದ್ದುಹೋಗಿ ಬಹಳ ಹೊತ್ತಾಗಿತ್ತು. ಹಾಗೆಯೇ ಮಂಚದ ಮೇಲೆ ಮಲಗಿಯೇ ಇದ್ದಳು. ನಿಧಾನವಾಗಿ ಮುಷ್ಠಿ ತೆರೆದು ಬೆರಳುಗಳನ್ನು ಅಗಲಿಸಿದಳು. ಬೆರಳುಗಳಿಗೆ ರಕ್ತ ನುಗ್ಗಿದಂತಾಗಿ ಜುಮ್ಮೆಂದಿತು. ಕೈಯಲ್ಲಿದ್ದ ಚೀಟಿಯನ್ನು ದಿಂಬಿನಡಿಗೆ ಸೇರಿಸಿ ಬಟ್ಟೆ ಧರಿಸಿಕೊಂಡು ಹಾಗೆಯೇ ಮಂಚದ ಮೇಲೆ ಕೂತು ಚೀಟಿಯನ್ನು ಕೈಗೆತ್ತಿಕೊಂಡಳು. ಅದರೊಳಗೆ ಬರೆದಿರುವುದನ್ನು ಅದೇನೆಂದು ಗೊತ್ತಿದ್ದರೂ ಮತ್ತೊಮ್ಮೆ ಓದುವ ಮನಸ್ಸಾಯಿತು. ನಿಧಾನವಾಗಿ ಕಾಗದದ ಮಡಿಕೆಯನ್ನು ಬಿಡಿಸಿದಳು. ಬಿಗಿ ಮುಷ್ಠಿಯಲ್ಲಿನ ಬೆವರಿಗೆ ಕಾಗದ ತೇವವಾಗಿತ್ತು. ಮತ್ತೊಮ್ಮೆ ಓದಿದಳು- `ನಾನು ನಿನ್ನನ್ನು ಪ್ರೀತಿಸುತ್ತೇನೆ'. ಅವಳ ಹೊಟ್ಟೆ ತೊಳೆಸಲು ಆರಂಭವಾಯಿತು. ಹೊಟ್ಟೆಯಲ್ಲಿ ವಿಪರೀತ ಸಂಕಟವಾಗತೊಡಗಿತು. ಕಾಗದ ಚೂರನ್ನು ಮುದುಡಿ ಕೈಯಲ್ಲಿ ಬಿಗಿಹಿಡಿದು ಹೊಟ್ಟೆಯನ್ನು ಅದುಮಿ ಹಿಡಿದಳು. ಹೊಟ್ಟೆ ತೊಳೆಸುವುದು ಹೆಚ್ಚಾಗಿ ವಾಂತಿಯಾಗುತ್ತದೆನ್ನಿಸಿತು. ಎದ್ದು ಬಚ್ಚಲುಮನೆಗೆ ಓಡಿಹೋದಳು. ಅಲ್ಲಿ ಎಷ್ಟು ಹೊತ್ತು ಕೂತಿದ್ದಳೋ ಅವಳಿಗೇ ಗೊತ್ತಿಲ್ಲ. ಬಚ್ಚಲು ಮನೆಯ ಬಾಗಿಲು ಧಡಧಡ ತಟ್ಟಿತು. ಎದ್ದು ಬಾಯಿ ತೊಳೆದುಕೊಂಡು ಕೋಣೆಗೆ ಹೋದಳು. ಅಲ್ಲಿ ಮತ್ತೊಬ್ಬಾತ ಮಂಚದ ಮೇಲೆ ಕೂತಿದ್ದ. ಕೋಣೆಯ ಬಾಗಿಲ ಚಿಲಕ ಹಾಕುವಾಗ ಕೈ ನೋಡಿಕೊಂಡಳು, ಕೈಯಲ್ಲಿ ಕಾಗದದ ಚೂರು ಇರಲಿಲ್ಲ. `ಬಚ್ಚಲು ಮನೆಗೆ ಹೋಗಿ ಕಾಗದದ ಚೂರನ್ನು ಹುಡುಕಿ ತರಲೇ?' ಎಂದುಕೊಂಡು ಅಲ್ಲೇ ಬಾಗಿಲ ಬಳಿಯೇ ನಿಂತಿದ್ದಳು. ಆಕೆ ಅಲ್ಲೇ ನಿಂತಿದ್ದನ್ನು ನೋಡಿ ಮಂಚದ ಮೇಲೆ ಕೂತಿದ್ದಾತ ಎದ್ದು ಬಂದು ಆಕೆಯನ್ನು ಹಿಂದಿನಿಂದ ತಬ್ಬಿಕೊಂಡ. ಅವಳ ಎದೆಯನ್ನು ಅದುಮಿ ಹಿಡಿದ. ಅವಳಿಗೇ ಅರಿವಿಲ್ಲದಂತೆ `ಬ್ಲೌಸ್ ಬಿಚ್ಚಲು ಐವತ್ತು ರೂಪಾಯಿ, ಎಲ್ಲಾ ಬಿಚ್ಚಲು ನೂರು ರೂಪಾಯಿ' ಎಂಬ ಮಾತುಗಳು ಅವಳಿಂದ ಹೊರಬಂತು.

***
ಹಾಗೆಯೇ ಕೂತಿದ್ದ ಸುಶೀಲಳಿಗೆ `ಆಂಟಿ ಊಟಕ್ಕೆ ಕರೀತಾರೆ' ಎಂದು ನಾಗರಾಜ ಹೇಳಿದ. ಎದ್ದು ಹೋಗಿ ಊಟಮಾಡಿ ಅಡುಗೆ ಮನೆಯಿಂದ ಹೊರಗೆ ಬಂದು ಕೋಣೆಯ ಕಡೆಗೆ ನಡೆದಳು. `ಯಾಕ್ ಅಂಗೇ ಹೋಗ್ತೀಯ? ಮಾತ್ರೆ ನುಂಗೋ ಗ್ಯಾನಾ ಇಲ್ಲವಾ ನಿಂಗೆ? ಬಾ ಇಲ್ಲಿ' ಎಂದು ಆಂಟಿ ಅರಚಿದಳು. ಆಕೆ ಕೊಟ್ಟ ಮಾತ್ರೆಯನ್ನು ಅಲ್ಲೇ ಇಟ್ಟಿದ್ದ ಚೆಂಬಿನ ನೀರನ್ನು ಗ್ಲಾಸಿಗೆ ಬಗ್ಗಿಸಿ ನುಂಗಿದಳು. `ದರಿದ್ರ ಮುಂಡೆ. ಗೊತ್ತಿದ್ರೂ ದಿನಾ ಮರ್ತಂಗೆ ನಾಟಕ ಆಡ್ತಾಳೆ. ಆಮೇಲೆ ಹೊಟ್ಟೆ ಇಳಿಸೋಕೆ ಇವ್ಳಿಗೆ ಎರಡು ಸಾವಿರ ಖರ್ಚುಮಾಡಬೇಕು. ನಿಮ್ಮಪ್ಪ ಕೊಡ್ತಾನಾ ದುಡ್ಡು!' ಎಂದಳು. ಸುಶೀಲಾ ಏನೊಂದೂ ಹೇಳದೆ ಕೋಣೆಗೆ ಹೋಗಿ ಮಲಗಿದಳು. ಮಾತುಗಳನ್ನು ದಿನಾಲೂ ಕೇಳುತ್ತಿದ್ದಳು. ಆಗಲೇ ಮರೆತುಹೋಗುತ್ತಿದ್ದಳು.
ಅರೆ ನಿದ್ರೆ, ಅರೆ ಎಚ್ಚರಾವಸ್ಥೆ. ಕಾಗದದ ಚೂರು ಅವಳ ಸ್ಮೃತಿಗೆ ಒಂದು ಚೂರು ಜೀವಕೊಟ್ಟಿತ್ತು. ಚೀಟಿ ಕೊಟ್ಟವನನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದಳು. ಅವನ ಮುಖ ಅಸ್ಪಷ್ಟ. ಅವಳು ಮುಖಗಳನ್ನು ನೆನಪಿಟ್ಟುಕೊಳ್ಳುವುದೇ ಮರೆತು ಎಷ್ಟೋ ತಿಂಗಳುಗಳಾಗಿತ್ತು. ದಿನದ ಮೊದಲ ಗಿರಾಕಿಯಲ್ಲವೇ ಅವನು? ಮೊದಲೂ ಆತ ಬರುತ್ತಿದ್ದನೆ? ಸಾರಿ ಬಂದರೆ ಆತನನ್ನು ಕೇಳಬೇಕೆನ್ನಿಸಿತು. ತಕ್ಷಣ ಆಕೆಯ ಮೈ ಹೆದರಿಕೆಯಿಂದ ನಡುಗತೊಡಗಿತು. ಎದೆಬಡಿತ ಏರಿತು. ಮೈಯೆಲ್ಲಾ ಬೆವರತೊಡಗಿತು. `ಯಾಕ್ ಹಾಗ್ ನಡುಗ್ತಾ ಇದೀಯ? ಮೈ ಹುಷಾರಿಲ್ಲವಾ?' ಎಂಬ ಪ್ರಶ್ನೆ ಕೇಳಿ ಬೆಚ್ಚಿಬಿದ್ದಳು. ಯಾವನೋ ಗಿರಾಕಿ ಆಗಲೇ ಅವಳ ಮೇಲೇರಿದ್ದ. ಅವಳ ಬಟ್ಟೆಯೆಲ್ಲಾ ಬಿಚ್ಚಿದ್ದ. ಇವನೇ ಅವನಿರಬಹುದಾ ಎಂದು ಕಣ್ಣು ಕಿರಿದು ಮಾಡಿ ಮೇಲೇರಿದವನ ಮುಖ ನೋಡಲು ಯತ್ನಿಸಿದಳು. ಮುಖ ಅಸಹ್ಯವಾಗಿತ್ತು. ಬಾಯಿ ವಾಸನೆ ಬರುತ್ತಿತ್ತು. ಇವನು ಅವನಾಗಿರಲಾರ ಎಂದುಕೊಂಡು ಮುಖ ಪಕ್ಕಕ್ಕೆ ತಿರುಗಿಸಿದಳು. ಅವನು ಬಿಡಲಿಲ್ಲ. ಪಕ್ಕಕ್ಕೆ ತಿರುಗಿದ ಮುಖವನ್ನು ತನ್ನೆಡೆಗೆ ತಿರುಗಿಸಿಕೊಂಡ, ನಕ್ಕ. ಅವನು ನಗುತ್ತಿದ್ದಾನೆಯೋ, ಅಳುತ್ತಿದ್ದಾನೆಯೋ ತಿಳಿಯಲಿಲ್ಲ. ಕಣ್ಣು ತೆರೆದು ಅವನನ್ನೇ ದಿಟ್ಟಿಸಿ ನೋಡಿದಳು. ಅವಳು ತನ್ನನ್ನೇ ನೋಡುತ್ತಿದ್ದಾಳೆಂದು ಖುಷಿಪಟ್ಟ. ಆದರೆ ಸುಶೀಲಾ ಕಣ್ಣು ತೆರೆದಿದ್ದರೂ ಅದನ್ನು ಮುಚ್ಚಿಕೊಳ್ಳುವ ಕಲೆ ಕರಗತಗೊಳಿಸಿಕೊಂಡಿದ್ದಾಳೆಂದು ಅವನಿಗೆ ತಿಳಿದಿರಲಿಲ್ಲ. ಅವನು ಮುಗಿಸಿ ಎದ್ದುನಿಂತರೂ ಅವಳ ದೃಷ್ಟಿ ಹಾಗೆಯೇ ಇದ್ದದ್ದು ಕಂಡು ಅವನಿಗೆ ಆಶ್ಚರ್ಯವಾಯಿತು.
***
ಸುಶೀಲಾಳಿಗೆ ಅದು ಮೊದಲ ಅನುಭವ, ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದು. ಆಗ ತಾನೆ ಎಸ್ಸೆಸ್ಸೆಲ್ಸಿ ಮುಗಿಸಿ ಕೋಲಾರದ ಕಾಲೇಜಿಗೆ ಸೇರಿದ್ದಳು. ಆಗಿನ್ನೂ ಕೋ-ಎಜುಕೇಶನ್ ಇತ್ತು. ಈಗಿನ ಹಾಗೆ ಹುಡುಗಿಯರ ಕಾಲೇಜನ್ನು ದೂರದ ಕೆರೆಯ ಪಕ್ಕದಲ್ಲಿ ಮಾಡಿರಲಿಲ್ಲ. ಕೋ-ಎಜುಕೇಶನ್ನಿನ ಫಸ್ಟ್ ಗ್ರೇಡ್ ಕಾಲೇಜಿನಿಂದ ಹುಡುಗಿಯರ ಕಾಲೇಜನ್ನು ಪ್ರತ್ಯೇಕಿಸಿದಾಗ ಹುಡುಗರಿಗೆ ಪಕ್ಕೆಲುಬನ್ನೇ ಕಿತ್ತು ಪ್ರತ್ಯೇಕಿಸಿದಂತಾಗಿತ್ತು. ಸುಶೀಲಾಳಿಗೆ ಎಲ್ಲವೂ ಹೊಸತು. ಇದ್ದಕ್ಕಿದ್ದಂತೆ ತಾನು ದೊಡ್ಡವಳಾದಂತೆ ಅನ್ನಿಸುತ್ತಿತ್ತು. ಪಡ್ಡೆ ಹುಡುಗರು ರೇಗಿಸಿದರೆ ಸಿಡಿಮಿಡಿಯಾಗುತ್ತಿತ್ತು. ಯಾರೂ ರೇಗಿಸದಿದ್ದರೆ ಏನೋ ಕಳಕೊಂಡಂತೆ ಅನ್ನಿಸುತ್ತಿತ್ತು.
ದಿನಗಳಲ್ಲೇ ಅಲ್ಲವೆ ಅವನ ಪರಿಚಯವಾಗಿದ್ದು. ದಿನಾ ಬೈಕಿನಲ್ಲಿ ಹಿಂದೆಯೇ ಬರುತ್ತಿದ್ದ. ಅವಳು ಬಸ್ಸಿನಿಂದ ಇಳಿಯುವುದನ್ನೇ ಕಾಯುತ್ತಿರುತ್ತಿದ್ದ. ದಿನ ಹಿಂದೆಯೇ ಬಂದವನು ಇನ್ನೇನು ಬಸ್ಸು ಹತ್ತಬೇಕೆನ್ನುವಷ್ಟರಲ್ಲಿ ಮಿಂಚಿನಿಂದ ಬಂದು ಕಾಗದದ ತುಣುಕೊಂದನ್ನು ಕೈಯಲ್ಲಿ ತುರುಕಿ ಹೋಗಿದ್ದ. ಅವಳಿಗೆ ಒಂದರೆಕ್ಷಣ ಗಾಭರಿಯಾಗಿತ್ತು, ಕಣ್ಣು ಕಪ್ಪಿಟ್ಟಿತ್ತು. ಅದ್ಹೇಗೆ ಸಾವರಿಸಿಕೊಂಡುಬಂದು ಸೀಟಿನಲ್ಲಿ ಕೂತ್ತಿದ್ದಳೋ ಅವಳಿಗೇ ಗೊತ್ತಿರಲಿಲ್ಲ. ಎಷ್ಟು ಹೊತ್ತು ಕೂತರೂ ಏದುಸಿರು ಕಡಿಮೆಯಾಗಿರಲಿಲ್ಲ, ಹಣೆಯ ಮೇಲೆ ಬೆವರಹನಿಗಳು ಸಾಲುಗಟ್ಟಿದ್ದವು. ತನ್ನ ಬಲಗೈಯೆಡೆಗೆ ನೋಡಿದಳು. ಮುಷ್ಠಿ ಬಿಗಿಯಾಗಿತ್ತು. ಬೆರಳ ಸಂದಿಯಲ್ಲಿ ಕಾಗದದ ಚೂರು ಇಣುಕುತ್ತಿತ್ತು. ಬೆರಳು ಸಡಿಲಗೊಳಿಸಲು ನೋಡಿದಳು. ಆಗಲಿಲ್ಲ. ಬಸ್ ಹೋಗುತ್ತಿತೋ, ನಿಂತಿತ್ತೋ ಅಥವಾ ಏರೋಪ್ಲೇನಿನಂತೆ ಆಕಾಶದಲ್ಲಿ ಹಾರುತ್ತಿತ್ತೋ, ಆಕೆಗೆ ಒಂದೂ ತಿಳಿಯುತ್ತಿರಲಿಲ್ಲ. ಬಸ್ಸಿನಲ್ಲಿ ಜನರ ಮಾತು ಎಲ್ಲೆಡೆಯಿಂದ ಕೇಳುತ್ತಿದ್ದರೂ ಕಿವಿಯಲ್ಲಿ ವಿಚಿತ್ರ ನಿಶ್ಶಬ್ದ ತುಂಬಿಕೊಂಡಿತ್ತು. ತನ್ನ ಊರಿನ ಬಸ್ಸ್ಟಾಪಿನಲ್ಲಿ ಇಳಿದವಳಿಗೆ ಹೆಜ್ಜೆಯೇ ಮುಂದೆ ಹೋಗಲಿಲ್ಲ. ಅಲ್ಲೇ ಬಸ್ಸ್ಟಾಪಿನಲ್ಲಿ ಸ್ವಲ್ಪಹೊತ್ತು ಕೂತಳು. ನಿಧಾನವಾಗಿ ಸಾವರಿಸಿಕೊಂಡು ಬೆರಳು ಸಡಿಲ ಮಾಡಿ ಚೀಟಿಯನ್ನು ಬಿಡಿಸಿದಳು. `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಬರೆದಿತ್ತು. ಕೈಕಾಲು ನಡುಗತೊಡಗಿತು, ಮೈ ಮತ್ತೆ ಬೆವರಿಟ್ಟಿತು, ಹೊಟ್ಟೆ ತೊಳಸಿಕೊಂಡು ಬಂತು. ಚರಚರನೆ ಚೀಟಿ ಹರಿದುಹಾಕಿದಳು. ಎಲ್ಲಿ ನೋಡಿದರೂ ಅದೇ ಅಕ್ಷರಗಳು ಕಾಣಿಸತೊಡಗಿದವು- ಬಸ್ಸ್ಟಾಪಿನ ಗೋಡೆಯ ಮೇಲೆ, ಕಸಕಡ್ಡಿ ತುಂಬಿದ್ದ ನೆಲದ ಮೇಲೆ, ಕಪ್ಪನೆ ಮೋಡ ತುಂಬಿದ್ದ ಆಕಾಶದಲ್ಲಿ. ಫಳಾರೆಂದು ಕಣ್ಣು ಕೋರೈಸುವ ಮಿಂಚೊಂದು ಹೊಡೆಯಿತು. ಬೆಚ್ಚಿ ಬಿದ್ದಳು. ಇನ್ನೇನು ಕೇಳಲಿರುವ ಗುಡಗಿನ ಅಬ್ಬರಕ್ಕೆ ಸಿದ್ಧಳಾಗಿ ಎದೆಗಟ್ಟಿಮಾಡಿಕೊಂಡು ಕೂತಳು. ಸಿದ್ಧಳಾಗಿದ್ದರಿಂದ ಗುಡುಗು ಅಷ್ಟೊಂದು ಹೆದರಿಸಲಿಲ್ಲ. ಧೋ ಎಂದು ಮಳೆ ಸುರಿಯತೊಡಗಿತು. ಅವಳ ಏರು ಎದೆಬಡಿತ ನಿಧಾನವಾಗಿ ಕಡಿಮೆಯಾಗತೊಡಗಿತು.
ಅದೆಂಥದೋ ವಿಚಿತ್ರ ಹೆದರಿಕೆ ಸುಶೀಲಾಳನ್ನು ಕಾಡತೊಡಗಿತು. ಎರಡು ದಿನ ಕಾಲೇಜಿಗೆ ಹೋಗುವ ಧೈರ್ಯಮಾಡಲಿಲ್ಲ. ಅಮ್ಮನಿಗೆ ತಲೆನೋವಿನ ಸಬೂಬು ಹೇಳಿ ಕೋಣೆಯಿಂದ ಹೊರಗೆ ಬರಲಿಲ್ಲ. ಎರಡೂ ದಿನ ವಿಚಿತ್ರ ಚಡಪಡಿಕೆಯಿಂದ ತತ್ತರಿಸಿದಳು. ನೆಪಕ್ಕೆ ಪುಸ್ತಕ ಹಿಡಿದರೂ ಸಾಲೇ ಕಾಣುತ್ತಿತ್ತು, ಅವನ ಮುಖವೇ ನೆನಪಾಗುತ್ತಿತ್ತು. ಮೂರನೇ ದಿನ ಧೈರ್ಯಮಾಡಿ ಕಾಲೇಜಿಗೆ ಹೋದಳು. ಕೋಲಾರದಲ್ಲಿ ಬಸ್ಸು ಇಳಿದವಳೇ ಸುತ್ತಮುತ್ತ ನೋಡಿದಳು. ಅವನೆಲ್ಲೂ ಕಾಣಲಿಲ್ಲ. ಬಿರಬಿರನೆ ಕಾಲೇಜಿನೆಡೆಗೆ ಹೆಜ್ಜೆ ಹಾಕಿದಳು. ವಾಪಸ್ಸು ಬರುವಾಗಲೂ ಎಚ್ಚರಿಕೆಯಿಂದ ಗಮನಿಸುತ್ತಿದ್ದಳು. ಅವನು ಕಾಣಲೇ ಇಲ್ಲ. ನಿಟ್ಟುಸಿರಿಟ್ಟಳು. `ಸಧ್ಯ ಅವನು ಕಾಣಲಿಲ್ಲ' ಎಂಬ ನಿಟ್ಟುಸಿರೇ ಅಥವಾ `ಛೆ, ಎಲ್ಲಿ ಹೋದ ಹಾಳಾದವ. ಅವನೇಕೆ ಕಾಣುತ್ತಿಲ್ಲ' ಎಂಬುದರ ನಿಟ್ಟುಸಿರೇ ಎಂಬುದು ಅವಳಿಗೇ ಅರ್ಥವಾಗಲಿಲ್ಲ.
ಆಮೇಲಿನ ಘಟನೆಗಳೆಲ್ಲಾ ಬಹಳ ಬೇಗ ನಡೆದುಹೋದವು. ಅವರಿಬ್ಬರೂ ಗಾಢವಾಗಿ ಪ್ರೇಮಿಸತೊಡಗಿದರು. ಅವನ ಹೆಸರು ರಾಜೇಶ. ಅವನ ಸ್ವಂತ ಊರು ಬೆಂಗಳೂರಂತೆ. ಅವರಪ್ಪನದು ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಇದೆಯಂತೆ. ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಬರುತ್ತದಂತೆ. ಬೆಂಗಳೂರಿನಲ್ಲಿದ್ದರೆ ಅವನು ಓದುವುದಿಲ್ಲ, ಹಾಳಾಗುತ್ತಾನೆ ಎಂದು ಅವನನ್ನು ಕೋಲಾರದ ಕಾಲೇಜಿಗೆ ಸೇರಿಸಿ ಅವನ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟಿದ್ದರಂತೆ. ಆದರೆ ಅವನು ಯಾವ ಕ್ಲಾಸಿಗೆ ಹೋಗುತ್ತಾನೆ, ಏನು ಓದುತ್ತಿದ್ದಾನೆಂಬುದು ಅವಳಿಗೆ ಸರಿಯಾಗಿ ತಿಳಿಯಲೇ ಇಲ್ಲ ಅಥವಾ ಆಕೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. `ಇಲ್ಲಿ ಕೋಲಾರದ ಜನ ಸರಿಯಿಲ್ಲ. ಇಲ್ಲಿ ನಾವು ಕೂತು ಮಾತನಾಡಲು ಆಗೋಲ್ಲ' ಎಂದು ಹೇಳಿದ ಅವನು ಅವಳನ್ನು ಆಗಾಗ ಬೈಕಿನಲ್ಲಿ ಬೆಂಗಳೂರಿಗೆ ಕರೆದೊಯ್ದ, ಸಿನೆಮಾ ತೋರಿಸಿದ, ಹೋಟೆಲಲ್ಲಿ ತಿಂಡಿ ತಿನ್ನಿಸಿದ. ಹೀಗೆಯೇ ಒಂದು ವರ್ಷ ನಡೆಯಿತು. ಅವನು ಮಧ್ಯೆ ಮಧ್ಯೆ ಒಂದೊಂದು ವಾರವೇ ಕಾಣಿಸುತ್ತಿರಲಿಲ್ಲ.
ಅದೊಂದು ದಿನ ಹೀಗೆ ಬೆಂಗಳೂರಿಗೆ ಹೋದಾಗ, ಸಿನೆಮಾ ನೋಡಿ, ಹೋಟೆಲಲ್ಲಿ ತಿಂಡಿ ತಿಂದು ಹಿಂದಿರುಗುವ ಮುನ್ನ ತನ್ನ ಗೆಳೆಯನ ತೋಟದಮನೆಯೊಂದಿದೆಯೆಂದೂ ಅಲ್ಲಿಗೆ ಹೋಗಿ ಹಿಂತಿರುಗೋಣವೆಂದು ಕರೆದೊಯ್ದ. ಒಂಟಿ ತೋಟದ ಮನೆ, ದೊಡ್ಡ ತೋಪಿನ ನಡುವೆಯಿತ್ತು. ನಿರ್ಜನವೆನಿಸಿದರೂ ಆಕೆಗೆ ಹೆದರಿಕೆಯಾಗಲಿಲ್ಲ, ಜೊತೆಗೆ ರಾಜೇಶನಿದ್ದನಲ್ಲ!
ರಾಜೇಶನ ಗೆಳೆಯ ಇವರಿಬ್ಬರನ್ನೂ ಮಾತನಾಡಿಸಿದ. ಕುಡಿಯಲು ಜ್ಯೂಸ್ ಕೊಟ್ಟ. ಅವಳಿಗರಿವಿಲ್ಲದಂತೆ ಅವಳಿಗೆ ನಿದ್ದೆ ಬರತೊಡಗಿತು. ಮತ್ತೇನಾಯಿತೋ ಸುಶೀಲಳಿಗೆ ಒಂದೂ ತಿಳಿಯಲಿಲ್ಲ. ಎಚ್ಚರವಾದಾಗ ಅವಳ ತಲೆ ಧಿಂ ಎಂದು ನೋಯುತ್ತಿತ್ತು. ಮೈ ಕೈ ನೋಯುತ್ತಿತ್ತು. ನೋಡಿಕೊಂಡಳು. ಅವಳ ಮೈಮೇಲೆ ಒಂಚೂರು ಬಟ್ಟೆಯಿರಲಿಲ್ಲ. ತೊಡೆಯೆಲ್ಲಾ ರಕ್ತವಾಗಿತ್ತು. ಎದೆ ಭುಜದ ಮೇಲೆಲ್ಲಾ ಕಚ್ಚಿದ ಗಾಯಗಳಾಗಿದ್ದವು. ಜೋರಾಗಿ ಕಿರುಚಿಕೊಂಡಳು. ತಕ್ಷಣ ರಾಜೇಶ ಒಳಬಂದ. ಅವನ ಹಿಂದೆಯೇ ಇಬ್ಬರು ಮೂವರು ಬಂದರು. ಕಿರುಚಿ ಹಾಸಿಗೆಯ ಮೇಲಿನ ರಕ್ತಸಿಕ್ತ ಹೊದಿಕೆಯನ್ನೇ ಹೊದ್ದುಕೊಳ್ಳಲು ಪ್ರಯತ್ನಿಸಿದಳು. ಮುಂದೆ ಬಂದ ರಾಜೇಶ ಅವನ್ಯಾಕೆ ಬರುತ್ತಿದ್ದಾನೆ ಎಂದು ಊಹಿಸುವ ಮೊದಲೇ ಅವಳ ಕಪಾಳಕ್ಕೆ ಬಲವಾಗಿ ಬಾರಿಸಿದ. ಬಿಕ್ಕುತ್ತಿದ್ದ ಅವಳ ದನಿ ನಿಂತುಹೋಯಿತು. ಕಣ್ಣು ಕಪ್ಪಿಟ್ಟಿತು.
***
ರಾತ್ರಿ ಸುಶೀಲಾಳಿಗೆ ನಿದ್ರೆಯೇ ಬರಲಿಲ್ಲ. ಪ್ರತಿ ದಿನ ರಾತ್ರಿ ಆಕೆ ಮಲಗುತ್ತಿದ್ದುದೇ ರಾತ್ರಿ ಒಂದು ಗಂಟೆಗೋ ಎರಡು ಗಂಟೆಗೋ. ಪ್ರತಿ ದಿನ ಆಯಾಸದಿಂದ ಮಲಗುವುದೇ ತಡ, ಗಾಢ ನಿದ್ದೆಗೆ ಹೋಗಿಬಿಡುತ್ತಿದ್ದಳು. ಇತ್ತೀಚೆಗೆ, ಯಾವನಾದರೂ ಗಿರಾಕಿ ಮೇಲಿರುವಾಗ ಹಾಗೆಯೇ ನಿದ್ದೆಮಾಡುವುದನ್ನು ಕಲಿಯಲು ಪ್ರಾರಂಭಿಸಿದ್ದಳು. ಎಷ್ಟೋ ಸಾರಿ ಒಬ್ಬ ಹೋಗಿ ಮತ್ತೊಬ್ಬ ಬಂದು ತಟ್ಟಿ ಎಬ್ಬಿಸಿದಾಗಲೇ ಅವಳಿಗೆ ಎಚ್ಚರವಾಗುತ್ತಿತ್ತು. ಕೆಲವು ಒರಟರು ಕೆನ್ನೆಗೆ ಹೊಡೆದು ಎಬ್ಬಿಸಿ ಏನಾದರೂ ಮಾತನಾಡೆಂದು ಬಯ್ಯುತ್ತಿದ್ದರು. ಅವಳಿಗೆ ರಾತ್ರಿಯೆಲ್ಲಾ ಬೆಳಿಗ್ಗೆ ಮೊದಲ ಗಿರಾಕಿ ಕೊಟ್ಟುಹೋದ ಚೀಟಿಯದೇ ನೆನಪು ಕಾಡುತ್ತಿತ್ತು. ಕೆಲವು ತಿಂಗಳುಗಳಿಂದೀಚೆಗೆ (ಅದೆಷ್ಟು ತಿಂಗಳುಗಳೆಂಬುದು ಸುಶೀಲಳಿಗೇ ನೆನಪಿರಲಿಲ್ಲ) ಮರೆವನ್ನು ಬಲವಂತವಾಗಿ ಆವಾಹಿಸಿಕೊಂಡಿದ್ದಳು. ಎಲ್ಲವನ್ನೂ ಮರೆಯಬೇಕು, ಯಾವ ಭಾವನೆಗಳನ್ನೂ ಇಟ್ಟುಕೊಳ್ಳಬಾರದೆಂದು ದೃಢನಿರ್ಧಾರ ಮಾಡಿ ಆಂಟಿಯ `ಮನೆ'ಯಲ್ಲಿ ಬದುಕುತ್ತಿದ್ದಳು. ಮನೆಗೆ ತಂದುಬಿಟ್ಟ ಹೊಸತರಲ್ಲಿ ಓಡಿಹೋಗಲು ಯತ್ನಿಸಿದ್ದಳು. ಆಗಲೇ ಗೊತ್ತಾದದ್ದು ಆಂಟಿ ಎಂಥ ಕಟುಕಿ ಎಂಬುದು. ಕತ್ತಲ ಕೋಣೆಗೆ ಕೂಡಿಹಾಕಿ, ಧಡಿಯನೊಬ್ಬನಿಂದ ಮೈಯೆಲ್ಲಾ ಬಾಸುಂಡೆ ಬರುವಂತೆ ಹೊಡೆಸಿ, ಅನ್ನ ನೀರು ಕೊಡದೆ ಹಿಂಸೆ ನೀಡಿದ್ದಳು. ಕ್ರಮೇಳ ಅವಳ ನಿರ್ಧಾರದಂತೆ ಎಲ್ಲವೂ ಅವಳ ನೆನಪಿನಿಂದ ಕಣ್ಮರೆಯಾಗತೊಡಗಿತು. ಅಪ್ಪ, ಅಮ್ಮ, ತಮ್ಮ, ತನ್ನ ಊರು, ಓದಿದ ಶಾಲೆ, ಕಾಲೇಜು, ಗೆಳತಿಯರು, ರಾಜೇಶ, ಅವನ ಬೈಕು, ಅವನನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಸುಖವಾಗಿ ಬದುಕುವ ಕನಸು.... ಎಲ್ಲವೂ ಮರೆತಳು. ಅಮ್ಮ ಅಪ್ಪನಿಂದ ದೂರವಾದ ದುಃಖ ಮರೆತಳು, ಅವರು ಎಷ್ಟು ಕಣ್ಣೀರು ಹಾಕಿರಬಹುದೆಂದು ಕೊರಗುವುದನ್ನು ನಿಲ್ಲಿಸಿದಳು. ಆಂಟಿಯ ಮನೆಯ ತಲೆಹಿಡುಕ ನಾಗರಾಜ ಆಗಾಗ ಗಿರಾಕಿಗಳನ್ನು ಕರೆತಂದು `ಅಕ್ಕಾ' ಎಂದು ಕರೆಯುತ್ತಿದ್ದಾಗ ಸುಶೀಲಳಿಗೆ ಅವಳ ತಮ್ಮನ ನೆನಪಾಗುತ್ತಿತ್ತು. ನೆನಪನ್ನೂ ದೂರ ತಳ್ಳಿದಳು. ಕೊನೆಕೊನೆಗೆ ಊಟ ಮಾಡುವುದನ್ನೂ ಮರೆತಳು. ಆಂಟಿ ಹೇಳಿಕಳುಹಿಸಿದರೆ ಮಾತ್ರ ಊಟ ಮಾಡುತ್ತಿದ್ದಳು. ಒಂದು ದಿನ ನೋಡೋಣವೆಂದು ಆಂಟಿ ತಮಾಷೆ ಮಾಡಲು, ಎರಡು ದಿನ ಊಟಕ್ಕೆ ಹೇಳಿಕಳುಹಿಸದಿದ್ದರೂ ಸುಶೀಲ ಊಟ ಬೇಕು ಎಂದು ಹೋಗಲಿಲ್ಲ. ಗಿರಾಕಿ ಟಿಪ್ಸ್ ದುಡ್ಡು ಕೊಟ್ಟರೆ ಮಾತ್ರ ಬಟ್ಟೆ ಬಿಚ್ಚು ಎಂದು ಆಂಟಿಯ ಮನೆಯಲ್ಲಿದ್ದ ಇತರ ಹೆಂಗಸರು ಮೊದಲಿಗೆ ಬಂದಾಗ ಹೇಳಿಕೊಟ್ಟಿದ್ದರು. ಈಗ ಯಾಂತ್ರಿಕವಾಗಿ ಅದನ್ನು ಹೇಳಿ ಹಣ ಪಡೆದುಕೊಳ್ಳುತ್ತಿದ್ದರೂ ಹಣ ಎಲ್ಲಿದೆ ಎಂಬುದೇ ಅವಳಿಗೆ ತಿಳಿದಿರಲಿಲ್ಲ.
ರಾತ್ರಿ ಕಾಗದದ ಚೂರು ಅವಳ ನಿದ್ರೆ ಕೆಡಿಸಿತ್ತು. ಅವಳ ಸ್ಮೃತಿಯ ಕತ್ತಲ ಕೋಣೆಗೆ ಬೆಳಕು ಚೆಲ್ಲಿ ಎಲ್ಲ ಕದಡಿತ್ತು. ಕತ್ತಲ ಗುಹೆಯಲ್ಲಿನ ದೀರ್ಘ ನಿದ್ರೆಯಲ್ಲಿನ ಬಾವಲಿಗಳು ಬೆದರಿ ದಿಕ್ಕಾಪಾಲಾಗಿ ಅರಚಿ ಹಾರಾಡುತ್ತಿರುವಂತಾಗಿತ್ತು. ಹಾಗೆಯೇ ಕಣ್ಣು ಎಳೆದುಕೊಂಡು ಹೋದರೂ ಭಯಂಕರ ಕನಸುಗಳು ಬೀಳತೊಡಗಿದವು. ಇಷ್ಟು ದಿನ ತನಗೆ ಕನಸುಗಳೇ ಬೀಳುತ್ತಿರಲಿಲ್ಲವೆಂಬುದು ನೆನಪಾಗಿ ಅವಳಿಗೆ ಅಚ್ಚರಿಯಾಯಿತು. ನಿದ್ರೆಯ ಕನಸುಗಳೆಲ್ಲಾ ಇಷ್ಟು ದಿನ ಎಲ್ಲಿ ಹೋಗಿದ್ದವು ಎಂದು ತನ್ನನ್ನೇ ತಾನು ಕೇಳಿಕೊಂಡಳು. ಕನಸಿನಲ್ಲಿ ಸುಶೀಲಾ ತನ್ನ ಊರಿಗೆ ಹೋದಳು. ಬೆಳಗಿನ ಜಾವವಿರಬಹುದು. ಎಲ್ಲೆಲ್ಲೂ ಮಂಜು ಮುಸುಕಿತ್ತು. ನಿಶ್ಶಬ್ದವಾಗಿತ್ತು, ಏನೊಂದೂ ಶಬ್ದವಿರಲಿಲ್ಲ. ದೂರದಲ್ಲೆಲ್ಲೋ ಮೋಟಾರ್ಬೈಕ್ ಬರುತ್ತಿರುವ ಸದ್ದು ಕೇಳಿಸಿತು. ಸುಶೀಲಾಳಿಗೆ ಹೆದರಿಕೆಯಾಗತೊಡಗಿತು. ರಾಜೇಶ ಬೈಕ್ನಲ್ಲಿ ಬರುತ್ತಿದ್ದಾನೆನ್ನಿಸಿತು. ಮನೆಯೆಡೆಗೆ ಓಡತೊಡಗಿದಳು. `ಅಮ್ಮಾ, ಅಮ್ಮಾ' ಎಂದು ತನ್ನ ತಾಯಿಯನ್ನು ಕರೆದಳು. ಬಾಯಿಯಿಂದ ಶಬ್ದವೇ ಬರಲಿಲ್ಲ. ಕುತ್ತಿಗೆಯನ್ನು ಒತ್ತಿಹಿಡಿದಂತಿತ್ತು. ಓಡಲೂ ಸಾಧ್ಯವಾಗುತ್ತಿಲ್ಲ. ಕಾಲು ಎತ್ತಿಡಲೇ ಆಗುತ್ತಿಲ್ಲ. ಬೈಕ್ ಸದ್ದು ಇನ್ನೂ ಹತ್ತಿರವಾಯಿತು; ಅದರ ಫುಟ್ ಫುಟ್ ಸದ್ದು ಕಿವಿಯ ತಮಟೆ ಒಡೆಯುವಷ್ಟು ಜೋರಾಗತೊಡಗಿತು. ಮನೆ ಇನ್ನೂ ದೂರದಲ್ಲೇ ಇದೆ. ಹೆಜ್ಜೆಗಳು ಮುಂದಕ್ಕೆ ಹೋಗುತ್ತಲೇ ಇಲ್ಲ. ಯಾರೋ ಹಿಂದಿನಿಂದ ಕುತ್ತಿಗೆಯನ್ನು ಬಿಗಿಹಿಡಿದಂತಾಯಿತು. ಎಡವಿ ಮುಂದಕ್ಕೆ ಬಿದ್ದಂತಾಯಿತು. ಸುಶೀಲಾಳಿಗೆ ಗಕ್ಕನೆ ಎಚ್ಚರವಾಯಿತು. ಮೈಯೆಲ್ಲಾ ಬೆವರಿನಿಂದ ತೊಯ್ದಿತ್ತು. ಎದೆ ಇನ್ನೂ ತಮಟೆಯ ಹಾಗೆ ಹೊಡೆದುಕೊಳ್ಳುತ್ತಿತ್ತು. ಕಿಟಕಿಯ ಹೊರಗಿನಿಂದ ಧೋ ಎಂದು ಸುರಿಯುವ ಮಳೆಯ ಸದ್ದು ಕೇಳುತ್ತಿತ್ತು. ಕಾಲಬಳಿ ಹೋಗಿದ್ದ ಬೆಡ್ಶೀಟ್ ಹೊದ್ದು ಮುದುರಿಕೊಂಡಳು. ಕನಸಿನ ಬಗ್ಗೆ ಯೋಚಿಸಿದಳು. ಅವಳಿಗರಿವಿಲ್ಲದೆ ಮೈ ನಡುಗುತ್ತಿತ್ತು. ಹಾಗೇ ಕಣ್ಣು ಮುಚ್ಚಿಕೊಂಡಿತು. ದೂರದಲ್ಲೆಲ್ಲೋ ಅವಳ ಅಮ್ಮ ಕರೆದಂತಾಯಿತು. ನಿದ್ರೆಯಲ್ಲಿದ್ದೇನೆಯೋ ಅಥವಾ ಕನಸೋ ಅವಳಿಗೊಂದೂ ತಿಳಿಯಲಿಲ್ಲ. ದೂರದಲ್ಲಿ ಮನೆ ಕಾಣುತ್ತಿತ್ತು. ಎಲ್ಲೋ ತನ್ನ ಅಮ್ಮ ಅಳುತ್ತಾ ತನ್ನನ್ನು ಕರೆಯುತ್ತಿರುವಂತೆ ಭಾಸವಾಯಿತು. ಮುಸುಕಿದ್ದ ಮಂಜು ಇನ್ನೂ ಗಾಢವಾಗತೊಡಗಿತು. ಮನೆಯೆಡೆಗೆ ಹೆಜ್ಜೆ ಹಾಕಿದಳು. ಮನೆಯೊಳಗೆ ಹೋಗಲು ಹೆದರಿಕೆಯಾಯಿತು. ತನ್ನ ಅಪ್ಪ ಬಯ್ಯಬಹುದೆ? ತಮ್ಮ ಕಿಶೋರನನ್ನು ಕರೆಯಬೇಕೆನಿಸಿತು. ಮತ್ತೆ ಬೈಕ್ ಸದ್ದು ಕೇಳಿತು. ಬೆದರಿದಳು. ಬೈಕ್ ಸದ್ದು ಹತ್ತಿರಹತ್ತಿರವಾಯಿತು. ಗಕ್ಕನೆ ಸುಶೀಲಾಳಿಗೆ ಎಚ್ಚರವಾಯಿತು. ನೆನಪುಗಳ ಯಾತನೆ ಸಹಿಸಲಾರದಾಯಿತು. ಎದ್ದು ಕಿಟಕಿಯ ಬಳಿ ನಿಂತು ಸುರಿಯುವ ಮಳೆಯ ಸದ್ದು ಕೇಳಿಸಕೊಳ್ಳತೊಡಗಿದಳು. ಚೀಟಿ ಕೊಟ್ಟ ಗಿರಾಕಿ ಎಂಥವನು, ಅವನು ಮುಖ ಹೇಗಿದೆ, ಅವನ ಮಾತು ಹೇಗಿತ್ತು ಎಂಬುದನ್ನು ನೆನಪು ಮಾಡಿಕೊಳ್ಳಲು ಯತ್ನಿಸಿದಳು. ಏನೊಂದೂ ನೆನಪಾಗಲಿಲ್ಲ.
***
ರಾತ್ರಿ ಸರಿಯಾಗಿ ನಿದ್ರೆಯಿಲ್ಲದಿದ್ದರೂ ದಿನ ಬೆಳಿಗ್ಗೆ ಉತ್ಸುಕಳಾಗಿದ್ದಳು. ತಾನೇ ಹೋಗಿ ತಿಂಡಿ ತಿಂದು ಬಂದು ಕೋಣೆಯಲ್ಲಿ ಸಿದ್ದಳಾಗಿ ಕೂತಳು. ತಾನೇ ಹಾಳಾದ ಗಂಡಸರಿಗೆ ಕಾಯುತ್ತಾ ಕೂರುವುದು ಸುಶೀಲಾಳಿಗೆ ವಿಚಿತ್ರವೆನ್ನಿಸಿತು. ದಿನ ಹಲವಾರು ಜನ ಬಂದುಹೋದರು. ಅವರಲ್ಲಿ ವಯಸ್ಸಿನಲ್ಲಿದ್ದವರೊಂದಿಗೆ ಆಕೆ ಅತ್ಯಂತ ಸಡಗರದಿಂದ ಸಹಕರಿಸಿದಳು. ಅವರ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿದಳು. ಅವರು ಕೊಟ್ಟ ಭಕ್ಷೀಸು ಹಣದ ನೋಟುಗಳ ನಡುವೆ ಏನಾದರೂ ಬರೆದಿರುವ ಕಾಗದದ ಚೂರುಗಳು ಇವೆಯೇನೋ ಎಂದು ಆತುರಾತುರವಾಗಿ ನೋಡಿದಳು. ಅವರ್ಯಾರೂ ಅವಳಲ್ಲಿ ಪತ್ರದ ಬಗ್ಗೆಯೂ ಮಾತನಾಡಲಿಲ್ಲ. ರಾತ್ರಿಯ ಹೊತ್ತಿಗೆ ಅವಳ ಉತ್ಸಾಹವೆಲ್ಲ ಕುಂದಿತು. ಮರುದಿನವೂ ಹಾಗೆಯೇ ಆಯಿತು. ಒಂದು ವಾರವೇ ಕಳೆದುಹೋಯಿತು. ವಾರವೆಲ್ಲಾ ರಾತ್ರಿಯ ಹೊತ್ತು ಚಡಪಡಿಸಿದಳು; ಪತ್ರ ಕೊಟ್ಟ ವ್ಯಕ್ತಿ ಬರಬಾರದೇ ಎಂದು ತಹತಹಿಸಿದಳು; ಹೊರಗಿನ ಮಳೆಯನ್ನು ನಾಚಿಸುವಂತೆ ಕಣ್ಣೀರು ಹಾಕಿದಳು. ಒಂದು ರೀತಿಯ ಖಿನ್ನತೆ ಸುಶೀಲಾಳನ್ನು ಆವರಿಸಿಕೊಂಡಿತು. ಮೊದಲಿನ ಹಾಗೆ ಎಲ್ಲವನ್ನೂ ಮರೆತು, ಕನಸುಗಳ ಉಗ್ರಾಣಕ್ಕೆ ಬೀಗ ಜಡಿದು ಇದ್ದೂ ಇಲ್ಲದ ಸ್ಥಿತಿಗೆ ತಲುಪಬೇಕೆಂದು ನಿರ್ಧರಿಸಿ ಒಂದೆರಡು ದಿನವಾಗಿತ್ತಷ್ಟೆ. ದಿನ ಮಧ್ಯಾಹ್ನ ಒಬ್ಬ ನಡುವಯಸ್ಸಿನ, ಒಬ್ಬ ಗಿರಾಕಿ ಬಂದ. ಆಕೆಗೆ ಇತರರ ಹಾಗೂ ಆತನ ನಡುವೆ ಏನೂ ವ್ಯತ್ಯಾಸ ಕಾಣಲಿಲ್ಲ. ತನ್ನ ಕೆಲಸ ಮುಗಿಸಿದ ನಂತರ ತಕ್ಷಣ ಎದ್ದುಹೋಗಲಿಲ್ಲ. ಅಲ್ಲೇ ಮಂಚದ ಮೇಲೆ ಕೂತು ಆಕೆಯ ಎಡಗೈ ಹಸ್ತವನ್ನು ಹಿಡಿದುಕೊಂಡು ಅವಳೆಡೆಗೆ ನೋಡಿ ಮುಗುಳ್ನಕ್ಕ. ಸರಕ್ಕನೆ ಹಿಂದಕ್ಕೆಳೆದುಕೊಳ್ಳಲು ಹೋದವಳಿಗೆ ತಕ್ಷಣ ಪತ್ರದ ಕೊಟ್ಟ ವ್ಯಕ್ತಿ ಈತನೇ ಇರಬಹುದೇ ಎಂದುಕೊಂಡು ಸುಮ್ಮನಾದಳು. ಆಕೆಯ ಹಸ್ತವನ್ನು ಎರಡೂ ಕೈಗಳಿಂದ ಅದುಮಿ ಹಿಡಿದ. ಬೆಚ್ಚಗಿನ ಅನುಭವ ಅವಳಿಗೆ ಹಿತವೆನಿಸಿತು. ಬಹಳ ಹೊತ್ತು ಹಾಗೆಯೇ ಹಿಡಿದಿದ್ದ.
`ನನ್ನ ಚೀಟಿ ನೋಡಿದೆಯಾ?' ಆತ ಕೇಳಿದ.
ಒಂದರೆಕ್ಷಣ ರಾಜೇಶನ ಚೀಟಿ ನೆನಪಾಯಿತು, ರಾಜೇಶ ನೆನಪಾದ. ಹಾವನ್ನು ಮುಟ್ಟಿ ಹೆದರಿದಂತೆ ಕೈಯನ್ನು ಸರಕ್ಕನೆ ಹಿಂದಕ್ಕೆಳೆದುಕೊಂಡಳು. ಮೈ ನಡುಗತೊಡಗಿತು, ಹಣೆ ಬೆವರಿಟ್ಟಿತು, ಎದೆ ಢವಢವ ಹೊಡೆದುಕೊಳ್ಳತೊಡಗಿತು. ಅವಳಿಗರಿವಿಲ್ಲದೆ ಸುಶೀಲಾಳ ಕಣ್ಣಿನಿಂದ ನೀರು ಸುರಿಯತೊಡಗಿತು. `ಯಾಕೆ? ಏನಾಯ್ತು?' ಎಂದು ಆತ ಕೇಳುತ್ತಿರುವಂತೆ ಆಕೆ ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಾ ಬಚ್ಚಲುಮನೆಗೆ ಓಡಿದಳು.
ಮುಖ ತೊಳೆದುಕೊಂಡು ಬರುವಷ್ಟರಲ್ಲಿ ಕೋಣೆಯಲ್ಲಿ ಯಾರೂ ಇರಲಿಲ್ಲ. ಹಾಗೆಯೇ ಧುತ್ತನೆ ಹಾಸಿಗೆಯ ಮೇಲೆ ಉರುಳಿದಳು.
***
ಮರುದಿನ ಮಧ್ಯಾಹ್ನ ಆತ ಮತ್ತೆ ಬಂದ. ಆತ ಕೋಣೆಯೊಳಕ್ಕೆ ಬಂದಾಕ್ಷಣ ಮಂಚದ ಮೇಲೆ ಕೂತ್ತಿದ್ದ ಸುಶೀಲಾ ಎದ್ದು ನಿಂತಳು. ಆತ ಕೂತು ನಿಂತೇ ಇದ್ದ ಆಕೆಯ ಕೈ ಹಿಡಿದುಕೊಂಡ. ಸಾರಿ ಕೈ ಹಿಂದಕ್ಕೆ ಎಳೆದುಕೊಳ್ಳಲಿಲ್ಲ. `ನಿನ್ನ ಜೊತೆ ನಾನು ಮಾತನಾಡಬೇಕು' ಎಂದ. ಮತ್ತೆ ಆತ ಬಂದಲ್ಲಿ ತಾನು ಏನು ಮಾತನಾಡಬೇಕೆಂಬುದನ್ನು ಆಕೆ ನಿರ್ಧರಿಸಿಕೊಂಡಿದ್ದಳು. ಸುಶೀಲಾಳನ್ನು ಎಳೆದು ಪಕ್ಕದಲ್ಲಿ ಕೂರಿಸಿಕೊಂಡು ಆಕೆಯ ಹೆಗಲ ಮೇಲೆ ಕೈಹಾಕಿದ. ರೀತಿ ಎಷ್ಟು ಜನ ಗಂಡಸರು ಕೈ ಹಾಕಿಲ್ಲ! ಆದರೆ ಸುಶೀಲಾಳಿಗೆ ಹೊಸತೆನ್ನಿಸುತ್ತಿತ್ತು, ಮೈ ಸಣ್ಣಗೆ ನಡುಗತೊಡಗಿತು. ಆತನಿಗೆ ಸುಶೀಲಾಳ ಅಪ್ಪನ ವಯಸ್ಸಾಗಿದ್ದಿರಬಹುದು. ಹಾಗೆಯೇ ಆತನ ಭುಜಕ್ಕೊರಗಿದಳು, ತುಟಿ ಕಚ್ಚಿ ಕಣ್ಣೀರು ತಡೆದಳು. ಆದರೂ ಆತನ ಕುತ್ತಿಗೆ ತೇವವಾಯಿತು. ಅವಳ ತಲೆ ನೇವರಿಸಿದ. ಅವಳ ಬಿಕ್ಕುವಿಕೆ ಹೆಚ್ಚಾಯಿತು. `ಅಳಬೇಡ' ಎಂದ. ಏನೋ ಹೇಳಲು ಹೊರಟಳು. ಮಾತು ಹೊರಬರಲಿಲ್ಲ, ತಡವರಿಸಿದಳು. `ಹೆದರಿಕೋ ಬೇಡ. ಅದೇನು ಹೇಳಬೇಕೋ ಹೇಳು' ಎಂದ.
`ನನ್ನ ಅಮ್ಮನನ್ನು ನೋಡಬೇಕು' ಎಂದಳು ಬಿಕ್ಕುತ್ತ. ಅವಳ ಅಳು ಹೆಚ್ಚಾಯಿತು. ಆತನ ತೋಳ್ತೆಕ್ಕೆಯಲ್ಲಿ ಸುಶೀಲಾ ಅಳುತ್ತಿರುವ ಪುಟ್ಟ ಮಗುವಿನಂತೆ ಕಂಡಳು.
***
ಸುಶೀಲಾಳ ಊರಿನವರು ಆಕೆಯನ್ನು ಮರೆತಂತಿದ್ದರೂ ಒಳಗೊಳಗೆ ಆಕೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದರು. ಆಕೆ ಬೊಂಬಾಯಿಯಲ್ಲಿ ಸೂಳೆಯಾಗಿದ್ದಾಳೆಂದೂ ಮನೆಗೆ ಬೇಕಾದಷ್ಟು ದುಡ್ಡು ಕಳುಹಿಸಿಕೊಡುತ್ತಿದ್ದಾಳೆಂದೂ ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು. ಆಕೆಯ ಅಪ್ಪ ಅವಳು ಯಾವನೋ ಜೊತೆ ಓಡಿಹೋಗಿದ್ದಾಳೆ. ಹೋದವಳು ಹಾಳಾಗಿ ಹೋಗಲಿ. ಎಲ್ಲಾದರೂ ಚೆನ್ನಾಗಿದ್ದರೆ ಸಾಕು ಎಂದುಕೊಳ್ಳುತ್ತಿದ್ದರು. ಆಕೆಯ ಅಮ್ಮ ಏನೂ ಹೇಳುತ್ತಿರಲಿಲ್ಲ. ಬರೇ ಕಣ್ಣೀರು ಹಾಕುತ್ತಿದ್ದರು. ತಮ್ಮ ಕಿಶೋರನಿಗೆ ಏನೊಂದೂ ಅರ್ಥವಾಗುತ್ತಿರಲಿಲ್ಲ. `ಅಕ್ಕ ಎಲ್ಲಿ ಹೋದಳು?' ಎಂದು ಆಗಾಗ ಕೇಳುತ್ತಿದ್ದ.
ದಿನ ರಾತ್ರಿಯ ಸರಿ ಹೊತ್ತಲ್ಲಿ ಸುಶೀಲಾಳ ಅಪ್ಪನ ಕಾರು ನಿಶ್ಶಬ್ದವಾಗಿ, ಹೆಡ್ಲೈಟುಗಳನ್ನು ಹಾಕದೆ ಮನೆಮುಂದೆ ಬಂದು ನಿಂತಿತು. ಸುಶೀಲಾಳ ಅಮ್ಮ ಆಕೆಯ ಗಂಡ ಹೇಳಿದ್ದಂತೆ ಲೈಟುಗಳನ್ನೆಲ್ಲ ಆರಿಸಿದ್ದರೂ ಮುಂದುಗಡೆಯ ಕಿಟಕಿಯಲ್ಲಿ ಕೂತು ಕಾರಿಗಾಗಿ ಎದುರುನೋಡುತ್ತಿದ್ದಳು. ಕಾರು ನಿಂತಾಕ್ಷಣ ಆತುರಾತುರವಾಗಿ ಬಾಗಿಲು ತೆರೆದಳು. ತನ್ನ ಗಂಡ ಕಾರಿನಿಂದ ಇಳಿದ ನಂತರ ಹೆಣ್ಣಾಕೃತಿಯೊಂದು ಇಳಿದು ಊರು ಹೊಸತೆಂಬಂತೆ ಸುತ್ತಲೂ ನೋಡಿದಳು. ಸುಶೀಲಾ ಸೀರೆ ಉಟ್ಟುಕೊಂಡು ದೊಡ್ಡ ಹೆಂಗಸಂತೆ ಆಕೆಯ ತಾಯಿಗೆ ಕಂಡುಬಂದಳು. ರಾತ್ರಿಯೆಲ್ಲಾ ತಾಯಿ ಮಗಳ ಅಳು ಊರನ್ನೇ ತೋಯಿಸಿತು.
`ಮಗಳು ಮನೆಗೆ ಬಂದಾಯಿತು. ಇವಳನ್ನು ಮುಂದಿಟ್ಟುಕೊಂಡು ಊರಲ್ಲಿ ಜೀವನ ನಡೆಸುವುದು ಸಾಧ್ಯವೇ ಇಲ್ಲ. ಇವಳು ಬಂದಿರುವುದು ಯಾರಿಗೂ ತಿಳಿದಿಲ್ಲ. ಯಾರಿಗೂ ತಿಳಿಯುವ ಮೊದಲೇ ಇವಳನ್ನು ಸಾಯಿಸಿಬಿಡಬೇಕು' ಎಂದು ಸುಶೀಲಾಳ ಅಪ್ಪ ತನ್ನ ಕೋಣೆಯಲ್ಲಿ ಕೂತು ತೀರ್ಮಾನಿಸಿದ.
`ಇವಳನ್ನು ಮತ್ಯಾವನು ಮದುವೆಯಾಗುತ್ತಾನೆ? ಇವಳನ್ನು ಯಾವುದಾದರೂ ದೂರದ ಊರಿಗೆ ಕಳುಹಿಸಿ, ಹಾಸ್ಟೆಲಿಗೆ ಸೇರಿಸಿ ಕಾಲೇಜಿಗೆ ಕಳುಹಿಸಿ ಓದಿಸಬೇಕು. ಇನ್ನು ಅವಳ ಕರ್ಮ. ಅವಳ ಬದುಕು ಆದಂತಾಗಲಿ' ಎಂದು ಮಗಳ ತಲೆ ನೇವರಿಸುತ್ತಾ ತಾಯಿ ಯೋಚಿಸಿದಳು.
ಇದನ್ನೆಲ್ಲಾ ಬಾಗಿಲ ಮರೆಯಿಂದ ನೋಡಿದ್ದ ತಮ್ಮ ಕಿಶೋರನಿಗೆ ಏನೊಂದೂ ಅರ್ಥವಾಗಿರಲಿಲ್ಲ. `ಅಕ್ಕ ವಾಪಸ್ಸು ಬಂದಳಲ್ಲ. ಗಣಿತಕ್ಕೆ ಇನ್ನು ಕಟುಕ ಮಾಸ್ತರನ ಹತ್ತಿರ ಟ್ಯೂಶನ್ನಿಗೆ ಹೋಗುವಷ್ಟಿಲ್ಲ' ಎಂದು ಅವನಿಗೆ ಖುಷಿಯಾಗಿತ್ತು.
ಕಳೆದ ಒಂದು ವಾರದ ಹಿಂದೆಯೇ ಸುಶೀಲಾ ಒಂದು ತೀರ್ಮಾನಕ್ಕೆ ಬಂದಿದ್ದಳು. ತನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದಿದ್ದ ವ್ಯಕ್ತಿಯ ಕಾಲಿಗೆ ಬಿದ್ದು ಬೇಡಿಕೊಂಡಿದ್ದಳು; ತನ್ನೆಲ್ಲ ಕತೆ ಹೇಳಿಕೊಂಡಿದ್ದಳು. ಹೇಗಾದರೂ ತನ್ನನ್ನು ತನ್ನ ಅಮ್ಮ ಅಪ್ಪನ ಬಳಿ ಕೊಂಡೊಯ್ಯುವಂತೆ ಕೇಳಿಕೊಂಡಿದ್ದಳು. ಆತ ಮದುವೆಯ ಬಗ್ಗೆ ಕೇಳಿದಾಗ ಆಕೆಗೆ ಏನೂ ಹೇಳಲು ಸಾಧ್ಯವಾಗಲಿಲ್ಲ. ಆದರೆ ಮನಸ್ಸಿನಲ್ಲಿ ಮದುವೆಯ ಆಲೋಚನೆ ಬಂದಾಗ ಹೆದರಿಕೆಯಾಗುತ್ತಿದ್ದು ಇನ್ನು ಮದುವೆ ಸಾಧ್ಯವೇ ಇಲ್ಲ ಎಂದುಕೊಂಡಿದ್ದಳು. ಆತನಿಗೆ ತನ್ನ ಮನೆಯ ವಿಳಾಸ ನೀಡಿದ್ದಳು. ಆತ ಕನಿಕರದಿಂದಲೋ, ಹಣದ ಆಸೆಯಿಂದಲೋ ಸುಶೀಲಾಳ ಅಪ್ಪನ ಬಳಿ ಹೋಗಿ ಮಾತನಾಡಿ, `ಆಂಟಿ' ಬಳಿ ಮಾತನಾಡಿ, ಪೋಲೀಸರಿಗೆ ತಿಳಿಸಿ ದೊಡ್ಡ ಸುದ್ದಿ ಮಾಡುವ ಬದಲು ಮಾನಮರ್ಯಾದೆ ಕಾಪಾಡಿಕೊಳ್ಳಲು ಹಣದಿಂದಲೇ ಎಲ್ಲ ಇತ್ಯರ್ಥ ಮಾಡಿಕೊಳ್ಳೋಣವೆಂದು ತಿಳಿಸಿ, ಮಧ್ಯಸ್ಥಿಕೆ ವಹಿಸಿ ಸುಶೀಲಾಳನ್ನು ಬಿಡಿಸಿ ಕರೆತಂದಿದ್ದ. ಅವಳು ಅಪ್ಪನ ಜೊತೆ ಹೋಗುವ ಮೊದಲು ಮತ್ತೊಮ್ಮೆ ಮದುವೆಯನ್ನು ನೆನಪಿಸಿದ್ದ. ಕೆಲದಿನಗಳ ನಂತರ ಮನೆಗೆ ಬರುವುದಾಗಿ ತಿಳಿಸಿದ. ಸುಶೀಲಾ ಏನೂ ಹೇಳಿರಲಿಲ್ಲ. ಆಕೆಗೆ ನರಕದಿಂದ ಹೊರಬಂದರೆ ಸಾಕಾಗಿತ್ತು. ಆಕೆ ಸಾಯಲು ತೀರ್ಮಾನಿಸಿದ್ದಳು. ಆದರೆ ಅಲ್ಲಿ ಆಕೆಗೆ ಸಾಯಲೂ ಆಸ್ಪದವಿರಲಿಲ್ಲ ಹಾಗೂ ಸ್ವಾತಂತ್ರವೂ ಇರಲಿಲ್ಲ.
ಆಕೆ ಬದುಕಿನಲ್ಲಿ ಬಹಳಷ್ಟು ಅನುಭವಿಸಿಬಿಟ್ಟಿದ್ದಳು. ವಿಚಿತ್ರವೆಂದರೆ ಅವಳಿಗೆ ರಾಜೇಶನ ಬಗ್ಗೆ ಸ್ವಲ್ಪವೂ ದ್ವೇಷದ ಭಾವನೆಯೇ ಇರಲಿಲ್ಲ. ಒಮ್ಮೆ ಅಮ್ಮನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿ ಲೋಕದಿಂದ, ಎಲ್ಲರಿಂದ ದೂರವಾಗಬೇಕಾಗಿತ್ತು. ಅಮ್ಮನನ್ನು ತಬ್ಬಿಕೊಂಡು ಅಳುವಾಗ ಅದರ ಬಗ್ಗೆಯೇ ಆಲೋಚಿಸುತ್ತಿದ್ದಳು.

ಇ.ಮೇಲ್: balukolar@yahoo.com


Thursday, June 12, 2008

ಅಂತರ್ಜಾಲದಲ್ಲಿ ನಮ್ಮ ಪುಸ್ತಕಗಳು- ಉಚಿತ ಡೌನ್‌ಲೋಡ್

ನನ್ನ ಎರಡು ಪುಸ್ತಕಗಳು
1. ಕನಸೆಂಬ ಮಾಯಾಲೋಕ ಮತ್ತು
2. ಮಿಥುನ- ಲೈಂಗಿಕ ವಿಜ್ಞಾನದ ಬರಹಗಳು ಹಾಗೂ
ಗೆಳೆಯ ಲಕ್ಷ್ಮೀಪತಿ ಕೋಲಾರ ಅವರ
ನವಿಲು ಕಿನ್ನರಿ ಕವನ ಸಂಕಲನಗಳು ಅಂತರ್ಜಾಲದಲ್ಲಿ
www.archive.org ನಲ್ಲಿ ಪಿ.ಡಿ.ಎಫ್. ರೂಪದಲ್ಲಿ ಲಭ್ಯವಿವೆ.
ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಿ, ಗೆಳೆಯರಿಗೂ ತಿಳಿಸಿ
ಹಾಗೂ ತಮ್ಮ ಅಭಿಪ್ರಾಯ ತಿಳಿಸಿ. ಅವುಗಳ ಲಿಂಕ್‌ಗಳನ್ನು
ಈ ಕೆಳಗೆ ಕೊಡಲಾಗಿದೆ:

http://www.archive.org/details/KannadaEbook-KanasembaMayaloka
http://www.archive.org/details/Mithuna-KannadaBookOnSexualPsychology
http://www.archive.org/details/NaviluKinnari-KannadaPoetry

ವ್ಯಂಗ್ಯಚಿತ್ರಗಳು

ನನ್ನ ಕೆಲವು ವ್ಯಂಗ್ಯಚಿತ್ರಗಳು ಹೀಗೇ ನನ್ನ ಕಂಪ್ಯೂಟರಿನಲ್ಲಿ ಕೊಳೆಯುತ್ತಿದ್ದವು. ಈಗ ಗಾಳಿಗೆ ತೂರಿಬಿಟ್ಟಿದ್ದೇನೆ. ಜೊಳ್ಳು ಬಿಟ್ಟು ಒಳ್ಳೆಯ ಕಾಳಿದ್ದಲ್ಲಿ ನಿಮ್ಮ ಅಭಿಪ್ರಾಯ ತಿಳಿಸಿ.


Saturday, February 23, 2008

ಕತೆ- ಡೆತ್ ಸರ್ಟಿಫಿಕೇಟ್

ಮಾರ್ಚ್ ತಿಂಗಳ 'ಮಯೂರ'ದಲ್ಲಿ ಪ್ರಕಟವಾದ ನನ್ನ ಕತೆ- ಡೆತ್ ಸರ್ಟಿಫಿಕೇಟ್. ಓದಿ ಅಭಿಪ್ರಾಯ ತಿಳಿಸಿ


ನಾಗಪ್ಪ ಮೇಷ್ಟ್ರು ಟ್ರೈನಿನಲ್ಲಿ ಪ್ರಯಾಣ ಮಾಡಿ ವರುಷಗಳೇ ಕಳೆದಿದ್ದುವು. ವೇಗವಾಗಿ ಚಲಿಸುತ್ತಿದ್ದ ಟ್ರೈನಿನ ಕಿಟಕಿಯಲ್ಲಿ ಸರಸರಕ್ಕನೆ ಹಾದುಹೋಗುತ್ತಿದ್ದ ದೃಶ್ಯಗಳು ಯಾವುವೂ ಮನಃಪಟಲದ ಮೇಲೆ ಮೂಡುತ್ತಿರಲಿಲ್ಲ; ಅವುಗಳನ್ನು ಮೂಡಿಸಿಕೊಳ್ಳುವ ಮನಃಸ್ಥಿತಿಯಲ್ಲಿಯೂ ಅವರಿರಲಿಲ್ಲ. ಟ್ರೈನಿನ ಪ್ರಯಾಣ ಅವರಿಗಿಷ್ಟವೇ ಆದರೂ ಅವರ ಬದುಕಿನಲ್ಲಿ ಹೆಚ್ಚು ಪ್ರಯಾಣ ಮಾಡುವ ಅವಕಾಶವೇ ಸಿಕ್ಕಿರಲಿಲ್ಲ. ಸಾವಿರಾರು ಜನರನ್ನು ಹೊತ್ತ ಕಬ್ಬಿಣದ ದೈತ್ಯ ವಾಹನ ಎರಡೇ ಹಳಿಗಳ ಮೇಲೆ ಅತ್ಯಂತ ವೇಗವಾಗಿ ಚಲಿಸುವುದು ಅವರಿಗೆ ಅದ್ಭುತವೆನ್ನಿಸುತ್ತಿತ್ತು. ರೈಲ್ವೇ ನಿಲ್ದಾಣ ಹಾಗೂ ಟ್ರೈನುಗಳದು ಒಂದು ಪ್ರತ್ಯೇಕ ಜಗತ್ತು. ಯಾವುದಾದರೂ ಒಂದು ಟ್ರೈನು ನಿಲ್ದಾಣಕ್ಕೆ ಬಂದಾಗ ಇಡೀ ನಿಲ್ದಾಣವೇ ಗೂಡಿನಿಂದ ಹೊರಬರುವ ಜೇನುಹುಳುಗಳ ಹಾಗೆ ಗಿಜಿಗಿಜಿಗುಟ್ಟತೊಡಗುತ್ತದೆ.
ಟ್ರೈನಿನಲ್ಲಿ ಒಬ್ಬರೇ ಪ್ರಯಾಣ ಮಾಡುವುದು ಅತ್ಯಂತ ಬೇಸರದ ಸಂಗತಿ. ಒಂದೂವರೆ ದಿನದ ಪ್ರಯಾಣವೆಂದರೆ ಅಕ್ಕಪಕ್ಕದ ಪ್ರಯಾಣಿಕರು ನಿಧನಿಧಾನವಾಗಿ ಪರಿಚಯವಾಗುತ್ತಾರೆ, ತಿಂಡಿತಿನಿಸು ವಿನಿಮಯ ಮಾಡಿಕೊಳ್ಳುತ್ತಾರೆ, ಅದೂ ಇದೂ ಮಾತನಾಡಿಕೊಳ್ಳುತ್ತಾರೆ. ಆದರೆ ನಾಗಪ್ಪನವರಿಗೆ ಯಾವುದರಲ್ಲೂ ಆಸಕ್ತಿಯಿರಲಿಲ್ಲ. ಇವರ ಪಕ್ಕದಲ್ಲಿ ಕೂತು ಪ್ರಯಾಣಿಸುತ್ತಿದ್ದ ಕುಟುಂಬವೊಂದು ಆಗಾಗ ಇವರನ್ನು ಮಾತನಾಡಿಸಲು ಪ್ರಯತ್ನಿಸುತ್ತಿತ್ತು. ಆದರೆ ಇವರ ನಿರಾಸಕ್ತಿ ಕಂಡು ಮುದುಕನಿಗೆ ಮಾತನಾಡಲು ಇಷ್ಟವಿಲ್ಲವೇನೋ ಎಂದು ಸುಮ್ಮನಾಗಿದ್ದರು. ಗಂಡ ಹೆಂಡಿರು ತಮ್ಮ ಸುಮಾರು ಐದು ವರ್ಷದ ಮಗನೊಂದಿಗೆ ಪ್ರಯಾಣಿಸುತ್ತಿದ್ದರು. ಮಗು ಅದೂ ಇದೂ ಮಾತನಾಡುತ್ತಿತ್ತು, ಹತ್ತು ಹಲವಾರು ಪ್ರಶ್ನೆಗಳನ್ನು ಕೇಳುತ್ತಿತ್ತು. ಒಮ್ಮೆ ಮಗು ಜೋರಾಗಿ ಮಾತನಾಡುತ್ತಿದ್ದಾಗ ನಾಗಪ್ಪನವರು ಕುತೂಹಲದಿಂದ ಮಗುವಿನೆಡೆಗೆ ನೋಡಿದಾಗ ಮಗುವಿನ ಮಾತಿನಿಂದ ಅವರಿಗೆಲ್ಲೋ ತೊಂದರೆಯಾಗುತ್ತಿದೆ ಎನ್ನಿಸಿ ಮಗುವನ್ನು ಗದರಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರು. ನಾಗಪ್ಪನವರು ಮುಗುಳ್ನಗುತ್ತಾ `ಇಲ್ಲ, ತೊಂದರೆಯಾಗುತ್ತಿಲ್ಲ, ಮಗು ಬಹಳ ಮುದ್ದಾಗಿ ಮಾತನಾಡುತ್ತಿದೆ' ಎಂದು ಹೇಳಿ ಮಗುವನ್ನು ಹತ್ತಿರ ಕರೆದು ಅದರ ಹೆಸರು ಕೇಳಿದರು. ಮಗು ಮಾತನಾಡಲೇ ಇಲ್ಲ. ಅದರ ತಂದೆಯೇ, ` ಮಗುವಿನ ಹೆಸರು ಸಂತೋಷ್' ಎಂದರು.
ತಾವು ದೆಹಲಿಗೆ ಎಲ್.ಟಿ.ಸಿ. ಹೊರಟಾಗ ತಮ್ಮ ಮಗ ಕಿರಣನಿಗೂ ಸುಮಾರು ಅಷ್ಟೇ ವಯಸ್ಸಾಗಿತ್ತು ಎನ್ನುವುದು ನೆನಪಾಯಿತು. ತಾವು ಕುಟುಂಬವೆಲ್ಲಾ ಟ್ರೈನಿನಲ್ಲಿ ಪ್ರಯಾಣಿಸಿದ್ದು ಅದೇ ಮೊದಲ ಬಾರಿ ಹಾಗೂ ಬಹುಶಃ ಅದೇ ಕೊನೆಯ ಬಾರಿ. ಕಿರಣನ ನೆನಪಾಗಿ ದುಃಖ ಉಮ್ಮಳಿಸಿ ಬಂತು. ಕಣ್ಣು ಹನಿಗೂಡಿದವು. ಇದ್ದವನು ಒಬ್ಬನೇ ಮಗನಲ್ಲವೆ? ಕಣ್ಣು ಹನಿಗೂಡಿದ್ದು ಯಾರಿಗೂ ಕಾಣಬಾರದೆಂದು ಕಿಟಕಿಯೆಡೆಗೆ ಸಂಪೂರ್ಣ ತಿರುಗಿ ಕಣ್ಣುಮುಚ್ಚಿ ಬೀಸುತ್ತಿದ್ದ ರಭಸದ ಗಾಳಿಗೆ ಮುಖವೊಡ್ಡಿ ಕೂತರು. ಕಣ್ಣೀರ ಹನಿಯನ್ನು ಗಾಳಿ ಹಾರಿಸಿಕೊಂಡುಹೋಯಿತು. ಹಾಗೆಯೇ ಕಣ್ಣುಮುಚ್ಚಿದ್ದರೋ ಅಥವಾ ಅವರಿಗರಿವಿಲ್ಲದೆ ನಿದ್ರೆ ಸೆಳೆದು ಬಂದಿತ್ತೋ ಏನೋ, ಟ್ರೈನು ಗಕ್ಕನೆ ಬ್ರೇಕ್ ಹಾಕಿ ಲೋಹದ ಕಿರುಗುಟ್ಟವ ಶಬ್ದ ಕೇಳಿದಾಗ ಅವರಿಗೆ ಎಚ್ಚರವಾಯಿತು. ಯಾವುದೋ ನಿಲ್ದಾಣವಿರಬಹುದು. ಪಕ್ಕದಲ್ಲಿದ್ದ ದಂಪತಿಗಳು ಇಳಿದುಹೋಗಿದ್ದರು. ಸಣ್ಣಮಗುವಿಗೆ `ಟಾಟಾ' ಹೇಳಲಿಲ್ಲವೆಂಬ ಬೇಸರವಾಯಿತು.
ಮತ್ತ್ಯಾರೋ ಪ್ರಯಾಣಿಕರು ಬಂದು ಕೂತರು. ನವದಂಪತಿಗಳು ಇರಬಹುದೆನ್ನಿಸಿತು. ಬದುಕಿನ ಎಲ್ಲ ಜೀವಂತಿಕೆಯೂ ಅವರಲ್ಲೇ ತುಂಬಿಕೊಂಡಂತೆ ಕಾಣುತ್ತಿತ್ತು; ಅತ್ಯಂತ ಲವಲವಿಕೆಯಿಂದಿದ್ದರು. ತಮ್ಮನ್ನು ಬೀಳ್ಕೊಡಲು ಬಂದಿದ್ದ ಹತ್ತಾರು ಜನರಿಗೆ ಕಿಟಕಿಯಿಂದ ಮಾತನಾಡಿಸಿ ವಿದಾಯ ಹೇಳುತ್ತಿದ್ದರು. ಒಬ್ಬ ಹೆಂಗಸು ಟ್ರೈನಿನಲ್ಲಿನ ತರುಣಿಯ ಕೈಯನ್ನು ಹಿಡಿದುಕೊಂಡು ಏನೇನೋ ಹೇಳುತ್ತಿದ್ದಳು, ಆಗಾಗ ಕಣ್ಣೀರು ಒರೆಸಿಕೊಳ್ಳುತ್ತಿದ್ದಳು. ಆಕೆ ಬಹುಶಃ ಹುಡುಗಿಯ ತಾಯಿಯಿರಬಹುದು ಎಂದುಕೊಂಡರು ನಾಗಪ್ಪನವರು.
ಕಿರಣನೂ ತನ್ನ ಹೆಂಡತಿಯನ್ನು ಮುಂಬಯಿಗೆ ಕರೆದುಕೊಂಡು ಹೊರಟಾಗ ಇದೇ ಟ್ರೈನಿನಲ್ಲಿ ಹೊರಟಿರಬಹುದು ಎನ್ನಿಸಿತು ನಾಗಪ್ಪನವರಿಗೆ. ಅವನಿಗೆ ವಿದಾಯ ಹೇಳಲು ಯಾರೂ ಬಂದಿರುವುದಿಲ್ಲ. ಮದುವೆಯಾಗಿ ಸಂಭ್ರಮದಿಂದ ಹೊರಡಬೇಕಾದ ಕಿರಣ ಮತ್ತು ತನ್ನ ಸೊಸೆ ಎಲ್ಲರನ್ನೂ ತೊರೆದು, ಯಾರಿಗೂ ಹೇಳದೆ ಕೇಳದೆ ಅನಾಥರಂತೆ ಹೊರಟಾಗ ಅವರಿಗೆ ಎಷ್ಟು ಹಿಂಸೆಯಾಗಿರಬಹುದು ಎನ್ನಿಸಿತು.
ಕಿರಣ ಹೋಗಿ ಹತ್ತು ವರ್ಷಗಳೇ ಕಳೆದುಹೋಗಿದೆ. ಎಲ್ಲರೂ ಹೇಳುತ್ತಾರೆ ಸಮಯ ಎಷ್ಟು ಬೇಗ ಕಳೆದುಹೋಗುತ್ತದೆ ಎಂದು. ಆದರೆ ಕಿರಣ ಮನೆ ಬಿಟ್ಟು ಹೋದಾಗಿನಿಂದ ಸಮಯ ಹಾಳಾದ್ದು ಹೋಗಲೇ ಇಲ್ಲ. ಕ್ಷಣ ಕ್ಷಣ ಸವೆಸುವುದೂ ಕಷ್ಟವಾಗಿ ಹೋಗಿದೆ. `ಮಗನಾದ ಅವನು ಕಟುಕನೋ ಅಥವಾ ಅಪ್ಪ ಅಮ್ಮಂದಿರಾದ ನಾವು ಕಟುಕರೋ ತಿಳಿಯುವುದಿಲ್ಲ' ಎಂದು ನಿಟ್ಟುಸಿರು ಬಿಟ್ಟರು ನಾಗಪ್ಪ. ಶಾರದಾಳಂತೂ ಈಗೀಗ ಮಗನ ಬಗ್ಗೆ ಮಾತನಾಡುವುದೇ ಇಲ್ಲ. ಅವಳ ಆಸ್ತಮಾದಲ್ಲಿ ಅವಳು ಮೊದಲೇ ಮಾತನಾಡುವುದು ಕಡಿಮೆ. ಮಗ ಹೋದ ಹತ್ತು ವರ್ಷಗಳಿಂದೀಚೆಗೆ ಅವಳ ವಯಸ್ಸು ಐವತ್ತು ವರ್ಷ ಹೆಚ್ಚಾದಂತೆ ತೋರುತ್ತದೆ. ರಾತ್ರಿಯೆಲ್ಲಾ ಅಳುತ್ತಿರುತ್ತಾಳೆ. ಅವಳ ಗೂರಲು ಶಬ್ದವೇ ಅಳುವಿನ ಹಾಗೆ ಕೇಳಿಸುತ್ತದೋ ಅಥವ ಅವಳು ನಿಜವಾಗಿಯೇ ಅಳುತ್ತಿರುತ್ತಾಳೋ ಒಂದೂ ತಿಳಿಯುವುದಿಲ್ಲ. ಅಥವ ಅವಳು ಅಳುತ್ತಿರಲೇಬೇಕೆಂಬ ನಾಗಪ್ಪನವರ ತಾರ್ಕಿಕ ಊಹೆಯ ಪರಿಣಾಮವಾಗಿ ಅವಳ ಅಳುವಿನ ಶಬ್ದ ಅವರಿಗೆ ಕೇಳಿಸುತ್ತದೇನೋ, ಯಾರು ಬಲ್ಲರು?
`ಆದರೆ ಸ್ಥಿತಿಗೆ ಅವಳೇ ಕಾರಣಳಲ್ಲವೆ? ಮಗ ತನಗೆ ಮೆಚ್ಚಿದವಳನ್ನು ಮದುವೆಯಾಗುತ್ತೇನೆಂದಾಗ ಅದೆಷ್ಟು ರಂಪಾಟ ಮಾಡಿದಳು! ಅದೆಷ್ಟು ಪಟ್ಟು ಹಿಡಿದಳು! ನಾನು ಇಬ್ಬರಿಗೂ ಹೇಳಲು ಪ್ರಯತ್ನಿಸಿದೆ. `ಕಿರಣಾ, ಮೊದಲು ನಿನ್ನ ಓದು ಮುಗಿಯಲಿ, ಮದುವೆಯ ಬಗ್ಗೆ ಆಮೇಲೆ ಮಾತನಾಡೋಣ' ಎಂದು.
ಅವನೂ ಹಿಡಿದ ಪಟ್ಟು ಬಿಡಲಿಲ್ಲ. `ಅವಳಿಗೆ ಮದುವೆ ಮಾಡಿಬಿಡುತ್ತಾರೆ, ನಾನೀಗಲೇ ಮದುವೆಯಾಗಬೇಕು' ಎಂದ. ಅಂದಹಾಗೆ, ಅವಳ ಹೆಸರೇನು?....... ಮಾನಸಿ, ಹ್ಹಾಂ ಮಾನಸಿ ಅಲ್ಲವೆ. ಹುಡುಗಿ ಚೆನ್ನಾಗಿದ್ದಳು. ಶಾರದಾಳಿಗೂ ಹೇಳಿದೆ, `ಹೋಗಲಿ ಬಿಡು, ಅವರಿಬ್ಬರೂ ಇಷ್ಟಪಟ್ಟಿದ್ದಾರೆ, ಮದುವೆ ಮಾಡೋಣ' ಎಂದು. ಅವಳದು ಎಂಥ ಹಠಮಾರಿತನ! ಕಿರಣನೇನಾದರೂ ಅವಳನ್ನು ಮನೆಗೆ ಕರೆದುತಂದರೆ ತಾನು ಸತ್ತೇಹೋಗುವುದಾಗಿ ಶಾರದಾ ಹೆದರಿಸಿದ್ದಳಲ್ಲ!
`ಬಹುಶಃ ಅಮ್ಮ ಇಷ್ಟೊಂದು ಹಠಮಾಡುವರೆಂದು ಕಿರಣನೂ ಊಹಿಸಿರಲಿಕ್ಕಿಲ್ಲ. ತಾನು ಬೇರೆ ಜಾತಿಯವಳನ್ನು ಮದುವೆಯಾಗುತ್ತೇನೆ ಎನ್ನುವ ಸುದ್ದಿ ತಿಳಿದು ತನ್ನ ಅಮ್ಮನಿಗೆ ಎಷ್ಟು ಆಘಾತವಾಗಿತ್ತೋ ಅದಕ್ಕಿಂತ ಇನ್ನೂ ಹೆಚ್ಚಿನ ಆಘಾತ ಕಿರಣನಿಗೆ ಆಗಿತ್ತೆನ್ನಿಸುತ್ತದೆ. ಹುಡುಗಿಯ ಮನೆಯವರೂ ಒಪ್ಪಿರಲಿಲ್ಲ. ಅಪ್ಪ ಅಮ್ಮಂದಿರಾದ ನಾವು ಅವನ ಬೆಂಬಲಕ್ಕೆ ನಿಲ್ಲುತ್ತೇವೆಂದೇ ಭಾವಿಸಿದ್ದ. ಶಾರದಾಳ ಮತ್ತು ಕಿರಣನ ಹಠದ ಮುಂದೆ ನಾನೇನೂ ಮಾಡುವಂತಿರಲಿಲ್ಲ. ಶಾರದಾ ನನ್ನನ್ನೆಷ್ಟು ದಬಾಯಿಸಿದಳು. `ಮಗನಿಗೆ ಕಪಾಳಕ್ಕೆ ಬಾರಿಸಿ ಬುದ್ದಿ ಹೇಳಿ' ಎಂದಳು. `ಮನೆಯಲ್ಲಿ ಕೂಡಿಹಾಕಿ ಬೀಗ ಹಾಕಿ' ಎಂದಳು. `ಮಗ ಯಾವಳನ್ನೋ ಮದುವೆಯಾಗುತ್ತೇನೆ ಎಂದರೆ ಸುಮ್ಮನೆ ಬೊಂಬೆಯ ಥರ ನಿಂತಿದ್ದೀರಲ್ಲ, ನೀವೆಂಥ ಅಪ್ಪ ಎಂದು ಮೂದಲಿಸಿದಳು...'

`ಸರ್ ಸ್ವೀಟ್ ಲೀಜಿಯೇ..' ಎಂದು ಎದುರು ಕೂತಿದ್ದ ಹೊಸಮದುವೆ ಗಂಡು ಹೇಳಿದಾಗಲೇ ನಾಗಪ್ಪ ತಮ್ಮ ಆಲೋಚನಾ ಪ್ರಪಂಚದಿಂದ ಹೊರಗೆ ಬಂದಿದ್ದು. ತಕ್ಷಣ ಅವರಿಗೆ ಏನು ಹೇಳಬೇಕೆಂದು ತೋಚಲಿಲ್ಲ. ಅವರು ಆಲೋಚಿಸುವ ಮುನ್ನವೇ ತಮ್ಮ ಕೈ ಯಾಂತ್ರಿಕವಾಗಿ ಒಂದು ಪೇಡಾವನ್ನು ಎತ್ತಿಕೊಂಡಿತ್ತು. ಕಿಟಕಿಯೆಡೆ ನೋಡಿದರು. ಟ್ರೈನು ವೇಗವಾಗಿ ಹೋಗುತ್ತಿತ್ತು. ದೂರದ ದಿಗಂತದಲ್ಲಿ ಸೂರ್ಯ ಮುಳುಗುತ್ತಿದ್ದ. ಮುಸ್ಸಂಜೆಯ ತಂಗಾಳಿ ಜೋರಾಗಿ ಬೀಸುತ್ತಿತ್ತು. `ನಾನು ಡಯಾಬಿಟಿಕ್, ಸ್ವೀಟ್ ತಿನ್ನುವುದಿಲ್ಲ' ಎಂದು ಹೇಳಿ ಸ್ವೀಟ್ ವಾಪಸ್ಸು ಕೊಟ್ಟುಬಿಡಲೇ ಎಂದುಕೊಂಡರು. ಅದು ಸೌಜನ್ಯವಲ್ಲ ಅನ್ನಿಸಿತು. `ಮತ್ತೆ ತಿನ್ನುವುದಾದರೂ ಹೇಗೆ, ದೂರದ ಊರಿಗೆ ಹೋಗುತ್ತಿದ್ದೇನೆ, ಶುಗರ್ ಹೆಚ್ಚಾದರೆ ಏನು ಮಾಡುವುದು?' ಎಂದು ಆಲೋಚಿಸಿ ಸಿಹಿ ಹಂಚಿದವರಿಗೆ ಕಾಣದಂತೆ ಕಾಗದವೊಂದರಲ್ಲಿ ಪೇಡವನ್ನು ಸುತ್ತಿ ತಮ್ಮ ಚೀಲದೊಳಕ್ಕೆ ಹಾಕಿಕೊಂಡರು.
ಕಿರಣನಿಗೂ ಈಗ ಮಕ್ಕಳಾಗಿರಬಹುದು. ಅವನು ಮದುವೆಯಾಗಿ ಮನೆಯಲ್ಲೇ ಇದ್ದಿದ್ದರೆ ಮೊಮ್ಮಕ್ಕಳು ಅಜ್ಜಿ, ತಾತಾ ಎಂದು ದುಂಬಾಲು ಬೀಳುತ್ತಿದ್ದವು. ಇನ್ನು ಅದೃಷ್ಟ ಜನ್ಮದಲ್ಲೇ ಇಲ್ಲ, ನಾಗಪ್ಪನವರು ಮತ್ತೆ ತಮ್ಮ ಆಲೋಚನಾ ಲೋಕಕ್ಕೆ ಹಿಂದಿರುಗಿದರು.
ಅವನೂ ಎಂಥ ಹಠಮಾರಿ. ಮನೆಬಿಟ್ಟು ಹತ್ತು ವರ್ಷಗಳಾದರೂ ಅಪ್ಪ ಅಮ್ಮ ಬದುಕಿದ್ದಾರೆಯೋ ಇಲ್ಲವೋ ಎಂದು ಒಮ್ಮೆಯಾದರೂ ಬಂದು ನೋಡಲಿಲ್ಲ. ಇನ್ನೆಲ್ಲಿ ಬಂದು ನೋಡುತ್ತಾನೆ! ಅವನನ್ನು ಹುಡುಕಲು ಪಟ್ಟ ಪಡಿಪಾಟಲೆಷ್ಟು! ಶಾರದಾಳದಂತೂ ಒಂದೇ ಹಠ, ಅವನನ್ನು ಹುಡುಕಬೇಡಿ ಎಂದು. ಶಾರದಾ ಹೆತ್ತ ಮಗನ ಬಗ್ಗೆ ಏಕೆ ಅಷ್ಟು ಕಠೋರಳಾದಳು? ಇದ್ದ ಒಬ್ಬನೇ ಮಗನ ಬಗೆಗಿನ ಅಟ್ಯಾಚ್ಮೆಂಟ್ ಮತ್ತೊಬ್ಬ ಹೆಣ್ಣಿನೊಂದಿಗೆ ಹಂಚಿಕೊಳ್ಳಲು ಆಕೆ ತಯಾರಿರಲಿಲ್ಲವೋ ಏನೋ. ಅವಳದೂ ಎಂಥ ಹಠಮಾರಿತನ. ಅವನು ಬಿಟ್ಟು ಹೋದಾಗಿನಿಂದ ಅವನ ಬಗ್ಗೆ ಮನೆಯಲ್ಲಿ ಮಾತನಾಡಬಾರದೆಂಬ ಷರತ್ತು! ಮನೆಯಲ್ಲಿ ಯಾವಾಗಲೂ ಸ್ಮಶಾನ ಮೌನ, ಇಲ್ಲವೇ ಅವಳ ಗೂರಲು ಶಬ್ದ. ನಿಶ್ಶಬ್ದದಲ್ಲೇ ಪ್ರಪಂಚದ ಎಲ್ಲ ಶಬ್ದಗಳೂ ಅಡಗಿವೆ. ಎಲ್ಲ ರೂಪ, ಆಕಾರಗಳೂ ಅಡಗಿವೆ. ಎಲ್ಲವೂ ನಿಶ್ಶಬ್ದವಾಗಿರುವಾಗ ಕಿರಣನ ಕೂಗು ಕೇಳಿಸಬಹುದು, ಅವನ ನಗು ಕೇಳಿಸಬಹುದು ಎನ್ನಿಸುತ್ತಿತ್ತು. ರಾತ್ರಿ ನಿದ್ರೆ ಬಾರದೆ ಚಡಪಡಿಸುವಾಗ ಮೆಟ್ಟಲು ಹತ್ತಿದ ಶಬ್ದವಾಗುತ್ತಿತ್ತು. ಎಷ್ಟೋ ಸಾರಿ ರಾತ್ರಿ ಕಿರಣ ಲೇಟಾಗಿ ಬರುವಾಗ ಸದ್ದಾಗದಂತೆ ಮೆಟ್ಟಲು ಹತ್ತಿ ಬರಲು ಪ್ರಯತ್ನಿಸುತ್ತಿದ್ದನಲ್ಲ. ರಾತ್ರಿ ಬಾಗಿಲು ಕಿರಗುಟ್ಟಿದರೆ ಕಳ್ಳನಿರಬಹುದೆಂಬ ಭಯವೇ ಆಗುವುದಿಲ್ಲ, ಅದು ಕಿರಣನಿರಬಹುದೇ ಎನ್ನಿಸುತ್ತದೆ. ಮಗನೇನಾದರೂ ಫೋನು ಮಾಡಿಬಿಟ್ಟಾನೆಂದು ಶಾರದಾ ಅದನ್ನೂ ಕಿತ್ತುಹಾಕಿಸಿದಳು. ಫೋನಾದರೂ ಇದ್ದಿದ್ದರೆ ಅದು ರಿಂಗ್ ಆದಾಗಲೆಲ್ಲಾ ಅದು ಕಿರಣನದು ಇರಬಹುದೇ ಎನ್ನಿಸುತ್ತಿತ್ತು. ಈಗ ನಿರೀಕ್ಷೆಯೂ ಇಲ್ಲ.
ಹೊರಗಡೆ ಸಂಪೂರ್ಣ ಕತ್ತಲಾಗಿತ್ತು. ಬೋಗಿಯೊಳಗಿನ ಮಂದ ಬೆಳಕು ಕಣ್ಣಿಗೆ ತ್ರಾಸ ಮಾಡುತ್ತಿತ್ತು. ಫ್ಯಾನುಗಳ ಏಕತಾನದ ಗಿರಗಿರ ಸದ್ದು ಬದುಕಿನ ಒಂದು ಅವಿಭಾಜ್ಯ ಭಾಗವಾಗಿರುವಂತೆ ತೋರುತ್ತಿತ್ತು. `ನಾನು ಅನುವಾದದ ಕೆಲಸವನ್ನು ಒಪ್ಪಿಕೊಳ್ಳಲೇ ಬಾರದಿತ್ತು. ಎಲ್ಲೋ ಇರುವ ಕಿರಣ ಬದುಕಿದ್ದಾನೆಂದುಕೊಂಡು ನಾವು ಕೊನೆಯುಸಿರು ಎಳೆಯಬಹುದಿತ್ತು. ಎಂಥ ವಿಪರ್ಯಾಸ! ಅವನ ಶವದ ಮಹಜರ್ ರಿಪೋರ್ಟ್ ಹಾಗೂ ಎಫ್..ಆರ್. ಅನುವಾದ ಮಾಡುವ ಕೆಲಸ ನನಗೇ ಬರಬೇಕಿತ್ತೆ! ಯಾವ ತಂದೆಗೂ ಇಂಥ ದುರಂತ ಬರಬಾರದು' ಎಂದು ಮರುಗಿದರು. ಅವರ ದುಃಖ, ದುಮ್ಮಾನ ಟ್ರೈನಿನೊಳಗಿನ ಮಂದಬೆಳಕಿನಲ್ಲಿ ಯಾರಿಗೂ ಕಾಣುತ್ತಿರಲಿಲ್ಲ.
ಮೇಷ್ಟರಾಗಿದ್ದಾಗ ಹೇಗೋ ಕಷ್ಟದಲ್ಲಿ ಕಾಲಕಳೆಯುತ್ತಿದ್ದರು. ರಿಟೈರ್ ಆದ ಮೇಲೆ ಏನು ಮಾಡಬೇಕೆಂದು ಅವರಿಗೇ ತೋಚಲಿಲ್ಲ. ಬೆಳಿಗ್ಗೆ ಶಾರದಾಳಿಗೆ ಅಡುಗೆ ಮನೆಯಲ್ಲಿ ಕೊಂಚ ಸಹಾಯಮಾಡಿ, ಪೇಪರ್ ಓದಿ ಹೊರಗಡೆ ಸುತ್ತಾಡಲು ಹೋಗಿಬಿಡುತ್ತಿದ್ದರು. ಮನೆಯಲ್ಲಿದ್ದರೂ ಶಾರದಾ ಏನೂ ಮಾತನಾಡುವುದಿಲ್ಲ. ಮನೆಯಲ್ಲಿ ಕೂತು ಏನನ್ನೂ ಓದುವಂಥ ಮನಃಸ್ಥಿತಿಯೇ ಇಲ್ಲ. ಕಿರಣ ಹೋದನಂತರ ಯಾವುದಕ್ಕೂ ಮನಸ್ಸಿರುತ್ತಿರಲಿಲ್ಲ. ಓದುವುದು ನಿಲ್ಲಿಸಿ ವರ್ಷಗಳೇ ಆಗಿಹೋಗಿವೆ. ಇಂಥ ದಿನಗಳಲ್ಲೇ ಒಮ್ಮೆ ಕಿರಣನ ಗೆಳೆಯ ಅಶೋಕ ಮನೆಗೆ ಬಂದದ್ದು. ಕಿರಣ ಹೋದಾಗ ಅವನನ್ನು ಹುಡುಕಲು ಅವನೂ ಸಹ ಬಹಳಷ್ಟು ಪ್ರಯತ್ನಿಸಿದ್ದ. ಆಗಾಗ ಮನೆಗೆ ಬಂದು ನಾಗಪ್ಪನವರ ಮತ್ತು ಶಾರದಮ್ಮನವರ ಆರೋಗ್ಯ ವಿಚಾರಿಸುತ್ತಿದ್ದ, ಹಣ್ಣುಹಂಪಲು ತಂದುಕೊಡುತ್ತಿದ್ದ. ಶಾರದಾಳಿಗೆ ಉಬ್ಬಸ ಹೆಚ್ಚಾದಾಗ ಆಸ್ಪತ್ರೆಗೆ ಸೇರಿಸಲು ಸಹಾಯಮಾಡುತ್ತಿದ್ದ. ಈಗ ನಾಗಪ್ಪನವರು ಮುಂಬಯಿಗೆ ಹೊರಟಿರುವ ಸಮಯದಲ್ಲಿ ಶಾರದಾಳ ಜವಾಬ್ದಾರಿಯನ್ನು ಅಶೋಕನಿಗೇ ವಹಿಸಿಬಂದಿದ್ದರು.
ದಿನ ಅಶೋಕ ಮನೆಗೆ ಬಂದಾಗ,
`ಮೇಷ್ಟ್ರೇ ಹೇಗೂ ರಿಟೈರ್ ಆಗಿದ್ದೀರ. ನನ್ನ ಕಮ್ಯುನಿಕೇಶನ್ ಕಂಪೆನಿಯಲ್ಲಿ ಆಗಾಗ ಅನುವಾದದ ಕೆಲಸಗಳು ಇರುತ್ತವೆ. ಅವುಗಳನ್ನು ನೀವು ಸಮಯವಿದ್ದಾಗ ಮಾಡಿಕೊಡಿ. ನಿಮಗೆ ಸಮಯವೂ ಹೋಗುತ್ತದೆ, ಸ್ವಲ್ಪ ಹಣವೂ ಸಿಗುತ್ತದೆ' ಎಂದ.
ಅದಕ್ಕೆ ನಾಗಪ್ಪನವರು ಆಲೋಚಿಸಿ, `ನನಗೇನೂ ಹಣ ಬೇಡ. ಹಣ ತಗೊಂಡು ನಾನೇನು ಮಾಡಲಿ? ಅನುವಾದ ಮಾಡಿಕೊಡುತ್ತೇನೆ. ಆದರೂ ಅದೆಂಥ ಅನುವಾದವೋ ನನಗೆ ತಿಳಿಸಿ ಹೇಳಬೇಕು' ಎಂದರು.
`ಇಲ್ಲಿ ಹಣ ಬೇಡವೆನ್ನುವ ಪ್ರಶ್ನೆ ಅಲ್ಲ. ಅನುವಾದ ಮಾಡಿಸಿಕೊಳ್ಳಲು ನನಗೆ ಕೊಡುವ ಕಂಪೆನಿಯವರು ನನಗೆ ಹಣಕೊಡುತ್ತಾರೆ. ಬೇರೆ ಯಾರೇ ಅನುವಾದ ಮಾಡಿಕೊಟ್ಟರೂ ಅವರಿಗೆ ಪದಗಳ ಲೆಕ್ಕದಲ್ಲಿ ಹಣಕೊಡುತ್ತೇವೆ. ನೀವು ಬೇಡವೆಂದರೂ ನನಗೆ ಬರುವ ಹಣ ಬಂದೇ ಬರುತ್ತದೆ. ನಿಮಗೆ ಹಣಕ್ಕಾಗಿ ಕೆಲಸ ಮಾಡಿ ಎನ್ನುತ್ತಿಲ್ಲ. ಬೇರೆ ಯಾರನ್ನೋ ಕೇಳುವ ಬದಲು ನಿಮ್ಮನ್ನು ಕೇಳುತ್ತಿದ್ದೇನೆ' ಎಂದ ಅಶೋಕ.
ಹೌದು, ಈಗ ನಾಗಪ್ಪನವರಿಗೆ ಹೆಚ್ಚಿನ ಹಣದ ಅವಶ್ಯಕತೆ ಇರಲಿಲ್ಲ. ಬರುವ ಪೆನ್ಶನ್, ರಿಟೈರ್ ಆದಾಗ ಬಂದ ಪ್ರಾವಿಡೆಂಟ್ ಫಂಡ್, ಗ್ರಾಚ್ಯುಯಿಟಿ ಎಲ್ಲಾ ಬ್ಯಾಂಕಿನಲ್ಲಿತ್ತು. ಹಣಕ್ಕೆ ನಾಮಿನಿಗಳು ಶಾರದ ಮತ್ತು ಕಿರಣನೇ ಆಗಿದ್ದರು. ಅವನು ಎಂದಾದರೂ ಬಂದೇ ಬರುವನೆಂಬ ಭರವಸೆ ನಾಗಪ್ಪನವರು ಹೊಂದಿದ್ದರು.
`ಇದು ಒಂದು ಇನ್ಶೂರೆನ್ಸ್ ಕಂಪೆನಿಯ ಅನುವಾದದ ಕೆಲಸ. ಅದರ ಹೆಡ್ ಆಫೀಸ್ ಮುಂಬಯಿನಲ್ಲಿದೆ. ಕರ್ನಾಟಕದಿಂದ ಬರುವ ಡೆತ್ ಕ್ಲೈಮ್ಗಳ ಪತ್ರಗಳೆಲ್ಲ ಕನ್ನಡದಲ್ಲಿರುತ್ತವೆ. ಅವರಿಗೆ ಪತ್ರಗಳನ್ನು ಇಂಗ್ಲಿಷ್ಗೆ ಅನುವಾದಿಸಿ ಕೊಡಬೇಕು. ಆಗಾಗ ಬರುವ ಅಂಥ ಪತ್ರಗಳನ್ನು ನಿಮಗೆ ಕಳುಹಿಸಿಕೊಡುತ್ತೇನೆ. ನೀವು ಮನೆಯಲ್ಲಾದರೂ ಸರಿ ಅಥವಾ ನಮ್ಮ ಕಚೇರಿಗೇ ಬಂದು ಅಲ್ಲೇ ಕೂತು ಅನುವಾದ ಮಾಡಿಕೊಟ್ಟರೂ ಸರಿ. ನಿಮಗೆ ಅನುಕೂಲವಿದ್ದಂತೆ ಮಾಡಿ' ಎಂದು ಹೇಳಿ ಅನುವಾದಕ್ಕೆಂದು ಕೆಲವು ಪತ್ರಗಳನ್ನು ಕೊಟ್ಟುಹೋಗಿದ್ದ.
ಹೊಸ ಥರದ ಕೆಲಸವಾದರೂ ಒಂದಷ್ಟು ಸಮಯಹೋಗುತ್ತದೆ ಎಂದು ಅನುವಾದದ ಕೆಲಸ ಆರಂಭಿಸಿದ್ದರು. ಕೆಲಸ ಕೆಲವೊಮ್ಮೆ ಬೇಸರವೂ ತರುತ್ತಿತ್ತು. ಯಾರದೋ ಡೆತ್ ಕ್ಲೈಮ್ಗಳು, ಎಲ್ಲಿಯೋ ಅಪಘಾತದಲ್ಲಿ ಸತ್ತವರು, ಹಾವು ಕಚ್ಚಿ ಸತ್ತವರು, ಅವರ ಶವದ ಮಹಜರ್ ರಿಪೋರ್ಟ್ಗಳು, ಪೋಲೀಸ್ ಎಫ್..ಆರ್.ಗಳು, ಸಾಕ್ಷಿಗಳ ಹೇಳಿಕೆಗಳು ಇತ್ಯಾದಿ ಇತ್ಯಾದಿಗಳ ಅನುವಾದ ಬಹಳಷ್ಟು ಅವರ ಮನಸ್ಸನ್ನು ದುಗುಡಕ್ಕೀಡುಮಾಡುತ್ತಿತ್ತು. ಆದರೆ ಇಂಥ ಅನುವಾದದ ಸಮಯದಲ್ಲೇ ತಮ್ಮ ಮಗನ ಡೆತ್ ಸರ್ಟಿಫಿಕೇಟ್, ಶವದ ಮಹಜರ್ ರಿಪೋರ್ಟ್ಗಳ ಅನುವಾದ ತನಗೇ ಬರುತ್ತದೆಂದು ಅವರು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ!
ದಿನ ಅಶೋಕ ಅನುವಾದಕ್ಕೆಂದು ಪತ್ರಗಳನ್ನು ಕಳುಹಿಸಿಕೊಟ್ಟಾಗ ಎಂದಿನಂತೆ ರೂಮಿನಲ್ಲಿ ಕೂತು ಅನುವಾದ ಪ್ರಾರಂಭಿಸಿದರು. ಔಷಧ ಕೊಟ್ಟಿದ್ದರೂ ಶಾರದಾಳ ಗೂರಲು ಕಡಿಮೆಯಾಗಿರಲಿಲ್ಲ. ಬೆಕ್ಕುಗಳು ಕಾದಾಡುತ್ತಿರುವಂತಿದ್ದ ಅವಳ ಉಬ್ಬಸದ ಶಬ್ದಕ್ಕೆ ನಾಗಪ್ಪ ಒಗ್ಗಿಕೊಂಡುಬಿಟ್ಟಿದ್ದರು. ಯಾಂತ್ರಿಕವಾಗಿ ಅನುವಾದ ಆರಂಭಿಸಿದರು.
`ಶವದ ಮಹಜರು ವರದಿ
ಬೆಳಗಾವಿ ಸಾದರಗಲ್ಲಿ ಪೋಲೀಸ್ ಠಾಣೆ, ಬೆಳಗಾವಿ ನಗರ, ಯು.ಡಿ.ಆರ್. ಸಂ. ೮೨/೦೬ ಅಂಡರ್ ಸೆಕ್ಷನ್ ೧೭೪ ಸಿ.ಆರ್.ಪಿ.ಸಿ.
ದಿನಾಂಕ ೩೧--೦೬ರಂದು ಬೆಳಗಾವಿ ನಗರದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿರುವ ಮೃತ ಶ್ರೀ ಕಿರಣ್ ಕುಮಾರ್ ಸನ್ ಆಫ್ ಶ್ರೀ ನಾಗಪ್ಪ, ೩೪ ವರ್ಷ, ಉದ್ಯೋಗ: ಲಾರಿ ಚಾಲಕ, ಇವರ ಮೃತದೇಹದ ಮೇಲೆ ಕೆಳಕಂಡ ಪಂಚರ ಸಮಕ್ಷಮದಲ್ಲಿ ೧೭೪ ಸಿ.ಆರ್.ಪಿ.ಸಿ ಪ್ರಕಾರ ಕೈಗೊಂಡ ಶವ ತನಿಖಾ ವರದಿ.'
ಹಲವಾರು ಅನುವಾದಗಳನ್ನು ಮಾಡಿದಂತೆ ಯಾಂತ್ರಿಕವಾಗಿಯೇ ಇದನ್ನೂ ಮಾಡಿದರು. ಅಷ್ಟರಲ್ಲಿ ಶಾರದಾ ಕರೆದಂತಾಗಿ ಎದ್ದು ಅವಳ ಕೋಣೆಗೆ ಹೋದರು. ಆಕೆ ಸ್ವಲ್ಪ ನೀರು ಕೇಳಿದಳು. ಅಡುಗೆ ಮನೆಯಲ್ಲಿ ಚೊಂಬಿಗೆ ನೀರು ತುಂಬಿಸುತ್ತಿದ್ದಾಗ ಥಟ್ಟನೆ ಅನುವಾದ ನೆನಪಾಯಿತು- `ಕಿರಣ್ ಕುಮಾರ್ ಸನ್ ಆಫ್ ನಾಗಪ್ಪ'. ನಾಗಪ್ಪನವರ ಕೈನಿಂದ ಚೊಂಬು ಕೆಳಗೆ ಬಿತ್ತು, ಕೈಕಾಲು ನಡುಗತೊಡಗಿತು, ಮೈ ಬೆವರತೊಡಗಿತು, ತಲೆ ಗಿರಗಿರನೆ ತಿರುಗತೊಡಗಿತು. ಅಲ್ಲೇ ಡೈನಿಂಗ್ ಚೇರಿನ ಮೇಲೆ ಕೂತು ತಲೆಯನ್ನು ಬಿಗಿಯಾಗಿ ಹಿಡಿದು ಕೂತರು. ಚೊಂಬು ಬಿದ್ದ ಶಬ್ದ ಕೇಳಿ ಶಾರದಾ `ಏನಾಯಿತು?' ಎಂದು ಕೂಗಿದಳು. ಸಾವರಿಸಿಕೊಂಡು ಎದ್ದ ನಾಗಪ್ಪ ಶಾರದಾಳಿಗೆ ತಿಳಿಯಬಾರದೆಂದು `ಏನಿಲ್ಲ' ಎನ್ನುತ್ತ ಚೊಂಬಿನಲ್ಲಿ ನೀರು ತುಂಬಿಸಿ ಅವಳಿಗೆ ಕೊಟ್ಟರು. ಅವರ ಮುಖದಲ್ಲಿನ ಗಾಭರಿ ನೋಡಿ ಆಕೆ, ಪುನಃ `ಏಕೆ ಏನಾಯಿತು?' ಎಂದಳು. `ಏನಿಲ್ಲಾ ಶುಗರ್ ಸ್ವಲ್ಪ ಕಡಿಮೆಯಾಗಿರಬೇಕೆನ್ನಿಸುತ್ತದೆ. ಎಲ್ಲಾ ಸರಿಹೋಗುತ್ತದೆ' ಎಂದು ಹೇಳಿ ರೂಮಿಗೆ ಹೋಗಿ ಶಾರದಾ ಎದ್ದು ಬರುವುದಿಲ್ಲವೆಂದು ತಿಳಿದಿದ್ದರೂ ಅಳುಕಿನಿಂದ ಬಾಗಿಲು ಹಾಕಿಕೊಂಡು ಪತ್ರಗಳನ್ನು ಮತ್ತೊಮ್ಮೆ ಓದಿದರು.
ಬೆಂಗಳೂರಿನಿಂದ ಮುಂಬೈಗೆ ಹೋಗುತ್ತಿದ್ದ ಲಾರಿಯೊಂದು ಬೆಳಗಾಂನಲ್ಲಿ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ ಕಿರಣ್ ಕುಮಾರ್ ಎನ್ನುವ ಚಾಲಕ ಮತ್ತು ಅದರ ಕ್ಲೀನರ್ ಹುಡುಗ ಸ್ಥಳದಲ್ಲೇ ಮೃತಪಟ್ಟಿದ್ದರು.
` ಕಿರಣ್ ಕುಮಾರ್ ಬೇರೆ ಇರಬಹುದು. ನನ್ನ ಮಗ ಡಿಗ್ರಿ ಓದುತ್ತಿದ್ದ. ಅವನೇಕೆ ಲಾರಿ ಡ್ರೈವರ್ ಆಗುತ್ತಾನೆ? ಯಾವುದಾದರೂ ಆಫೀಸಿನಲ್ಲಿ ಗುಮಾಸ್ತನೋ ಏನೋ ಆಗಿರುತ್ತಾನೆ. ಕಿರಣ ಹುಟ್ಟಿದ ದಿನಾಂಕ ಬರೆದು ಅವನ ವಯಸ್ಸು ಲೆಕ್ಕ ಹಾಕಿದರು. ಅವನಿಗೂ ಈಗ ಮುವ್ವತ್ತೆರಡು ವರ್ಷ ವಯಸ್ಸು' ಅಂದುಕೊಂಡರು. ಹಾಗೇ ಮುಂದೆ ತನಿಖಾ ವರದಿಯನ್ನು ಓದಿದಂತೆ,
`ಎತ್ತರ ಅಡಿ ೧೦ ಅಂಗುಲ, ಸಾಧಾರಣ ಮೈಕಟ್ಟು, ಮುಖ ನಸುಗೆಂಪು ಬಣ್ಣ, ಹೊಟ್ಟೆಯ ಮೇಲೆ ಹೊಕ್ಕಳಿನ ಬಲಭಾಗದಲ್ಲಿ ಕಾಸಿನಗಲ ಕಪ್ಪನೆ ಹುಟ್ಟುಮಚ್ಚೆ........'
`ಕಿರಣನಿಗೆ ಹುಟ್ಟುಮಚ್ಚೆಯಿತ್ತೆ? ನನಗಂತೂ ಮಚ್ಚೆಯ ಬಗ್ಗೆ ಅಷ್ಟು ನೆನಪಿಲ್ಲ. ಶಾರದಾಳನ್ನು ಹೇಗೆ ಕೇಳುವುದು? ಹೌದು, ಇತ್ತು ಇಂದು ಅವಳೆಂದುಬಿಟ್ಟರೆ?' ನಾಗಪ್ಪನವರಿಗೆ ಅತೀವ ಸಂಕಟವಾಗತೊಡಗಿತು. ಹತ್ತು ನಿಮಿಷ ಸಾವರಿಸಿಕೊಂಡು ಕೂತರು. ಕೊನೆಗೆ ಧೈರ್ಯಮಾಡಿ ಶಾರದಾಳ ರೂಮಿಗೆ ಹೋದರು. ಆಕೆಯ ಉಬ್ಬಸದ ಶಬ್ದ ಹೆಚ್ಚು ಕರ್ಕಶವೆನ್ನಿಸತೊಡಗಿತು. `ಅವಳ ಜೀವನವೆಲ್ಲಾ ಹಿಂಸೆಯೇ ಆಗಿಹೋಗಿದೆ. ಮನುಷ್ಯ ಏನೂ ಕಷ್ಟವಿಲ್ಲದೆ ಸುಲಭವಾಗಿ ಮಾಡಬಹುದಾದಂತಹ ಉಸಿರಾಟವೇ ಅವಳಿಗೆ ಕಷ್ಟದ ಕೆಲಸವಾಗಿಬಿಟ್ಟಿದೆ. ಅವಳನ್ನು ಹೇಗೆ ಕೇಳುವುದು?' ಆಲೋಚಿಸುತ್ತಾ ಅಲ್ಲೇ ನಿಂತರು. ನಾಗಪ್ಪ ಬಂದ ಶಬ್ದಕ್ಕೆ ಕಣ್ತೆರೆದು ನೋಡಿದ ಶಾರದಮ್ಮ, `ಏನು?' ಎಂದರು.
`ಏನಿಲ್ಲಾ, ಮತ್ತೆ ನೀರೇನಾದರೂ ಬೇಕಿತ್ತಾ?' ಕೇಳಿದರು ನಾಗಪ್ಪ, ಅಲ್ಲೇ ಅವಳ ಮಂಚದ ಮೇಲೆ ಅವಳ ಕಾಲ ಬಳಿ ಕೂಡುತ್ತ.
`ಬೇಡ, ಏನೂ ಬೇಡ. ಏಕೆ ಇವತ್ತೆಲ್ಲಿ ಹೊರಗೆ ಹೋಗಲಿಲ್ಲವೆ?'
`ಹಾ, ಹೋಗಬೇಕು. ಅಶೋಕನ ಆಫೀಸಿಗೆ ಹೋಗಬೇಕು. ಅಂದ ಹಾಗೆ ಏನೋ ನೆನಪಾಯ್ತು. ನಮ್ಮ ಕಿರಣನಿಗೆ ಹೊಟ್ಟೆಯ ಮೇಲೆ ಮಚ್ಚೆಯಿತ್ತೆ?' ಟವಲ್ಲಿನಿಂದ ಹಣೆಯೊರೆಸಿಕೊಳ್ಳುತ್ತ ಕೇಳಿದರು.
`ಅವನ್ಯಾವ ನಮ್ಮ ಕಿರಣ? ಯಾರಿಗೆ ಗೊತ್ತು?' ಎಂದು ಮಗ್ಗುಲು ಬದಲಿಸಿದರು. ಅವರ ಉಬ್ಬಸ ಮತ್ತಷ್ಟು ಹೆಚ್ಚಾಯಿತು.
ಮತ್ತೆ ಅವರೆಡೆಗೆ ತಿರುಗಿ, `ಈಗ ಅದ್ಯಾಕೆ?' ಎಂದರು.
`ಇಲ್ಲ, ಸುಮ್ಮನೆ ಕೇಳಿದೆ. ಅವನ ನೆನಪಾಯಿತು ಅದಕ್ಕೆ' ಎಂದರು, ಆಕೆಯನ್ನು ಒತ್ತಾಯಮಾಡುವುದು ಹೇಗೆ ಎಂದು ಆಲೋಚಿಸುತ್ತ.
`ಅವನ ನೆನಪು ಯಾಕಾಗಬೇಕು?' ಆಕೆಯ ಮಾತಿನಲ್ಲಿ ಹತ್ತು ವರ್ಷಗಳಾದರೂ ಸಿಟ್ಟು ಕಡಿಮೆಯಾಗಿರಲಿಲ್ಲ.
`ನೆನಪುಗಳು ನಮ್ಮವಲ್ಲವಲ್ಲ. ಅವು ನಾವು ಹೇಳಿದಂತೆ ಕೇಳುವುದಿಲ್ಲ. ಮನಸ್ಸಿಗೆ ಎಂಥದೇ ಭದ್ರ ಬೀಗ ಹಾಕಿಟ್ಟರೂ ಅವು ತಮಗಿಷ್ಟಬಂದಾಗ ಬರುತ್ತವೆ, ತಮಗಿಷ್ಟಬಂದಾಗ ಹೋಗುತ್ತವೆ. ನಮ್ಮ ಕಿರಣನೂ ಮೊದಲು ಹಾಗೆಯೇ ಇದ್ದನಲ್ಲ- ಹೊತ್ತಲ್ಲದ ಹೊತ್ತಿನಲ್ಲಿ ಬರುತ್ತಿದ್ದ, ಹೊತ್ತಲ್ಲದ ಹೊತ್ತಿನಲ್ಲಿ ಹೋಗುತ್ತಿದ್ದ. ಇನ್ನು ಅವನ ನೆನಪುಗಳೂ ಅಷ್ಟೇ, ಅವನ ಹಾಗೆಯೇ' ಎಂದರು ಅವಳ ಭುಜದ ಮೇಲೆ ಕೈಯಿಡುತ್ತ.
ಉಬ್ಬಸದಲ್ಲಿಯೂ ನಿಟ್ಟುಸಿರುಬಿಟ್ಟರು ಶಾರದಮ್ಮ. ಆಕೆ ಮತ್ತೊಂದೆಡೆಗೆ ತಿರುಗಿದ್ದುದರಿಂದ ಆಕೆಯ ಮುಖ ಕಾಣದಿದ್ದರೂ ಆಕೆಯ ಕಣ್ಣು ಆರ್ದ್ರಗೊಂಡಿದ್ದು ನಾಗಪ್ಪನವರಿಗೆ ತಿಳಿದಿತ್ತು.
ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. ಹಾಗೆಯೇ ಕೂತಿದ್ದರು. ಅವರ ಆಲೋಚನೆಯೆಲ್ಲ ಪತ್ರಗಳಲ್ಲಿಯೇ ಇತ್ತು.
`ಹೌದು, ಅವನ ಹೊಕ್ಕುಳ ಬಲಭಾಗದಲ್ಲಿ ಹುಟ್ಟುಮಚ್ಚೆಯಿತ್ತು' ಎಂದು ಶಾರದಮ್ಮ ಹೇಳಿದ್ದು ಎಲ್ಲೋ ದೂರದಲ್ಲಿ ಕೂಗಿ ಹೇಳಿದಂತಾಯಿತು.
ನಾಗಪ್ಪ ನಿಂತಿದ್ದರೆ ಬಿದ್ದೇಬಿಡುತ್ತಿದ್ದರು. ಮೊಣಕಾಲುಗಳು ತರತರಗುಟ್ಟತೊಡಗಿದವು. ಅವರ ಮೈನಡುಕ ಶಾರದಾಳಿಗೆ ತಿಳಿದುಬಿಡುತ್ತದೆಂದು ಅವಳ ಭುಜದ ಮೇಲಿಂದ ಕೈ ತೆಗೆದರು. ಎಷ್ಟು ಹೊತ್ತು ಕೂತಿದ್ದರೋ ಅವರಿಗೇ ತಿಳಿಯಲಿಲ್ಲ.

ಸತ್ತುಹೋಗಿರುವ ಕಿರಣ ತಮ್ಮ ಮಗನೇ ಎಂಬುದು ಅವರಿಗೆ ಬಹುಪಾಲು ಖಾತ್ರಿಯಾಗಿತ್ತು. ನಿಧಾನವಾಗಿ ಎದ್ದು `ಅಶೋಕನ ಆಫೀಸಿಗೆ ಹೋಗಿಬರುತ್ತೇನೆ' ಎಂದರು. ಶಾರದಮ್ಮ ನಿದ್ರಿಸುತ್ತಿದ್ದರು.
ಸದ್ದು ಮಾಡದೆ ಎದ್ದುಬಂದು, ಪತ್ರಗಳನ್ನು ತೆಗೆದುಕೊಂಡು ಎಂದೂ ನಡೆದೇ ಹೋಗುತ್ತಿದ್ದವರು ದಿನ ಸಿಕ್ಕ ಆಟೋದಲ್ಲಿ ಅಶೋಕನ ಆಫೀಸಿಗೆ ಹೊರಟರು. ಅಶೋಕನ ಕೋಣೆಯಲ್ಲಿ ಆತ ಒಬ್ಬನೇ ಇದ್ದ. ಅವನ ಎದುರಿಗೆ ಪತ್ರಗಳನ್ನು ಇಟ್ಟಾಕ್ಷಣ ಅವರ ಸಂಯಮದ ಕಟ್ಟೆಯೊಡೆದು ಗೊಳೋ ಎಂದು ಅಳತೊಡಗಿದರು. ನಾಗಪ್ಪ ಮೇಷ್ಟ್ರು ಅತ್ತದ್ದನ್ನು ಅಶೋಕ ಎಂದೂ ಕಂಡವನಲ್ಲ. ಅವರ ನಡತೆಯಿಂದ ಅವನಿಗೆ ಗಾಭರಿಯಾಯ್ತು. ಶಾರದಮ್ಮನವರಿಗೆ ಏನಾದರೂ ಆಯಿತೇನೋ ಎಂದುಕೊಂಡು ಅವರನ್ನು ಮಾತನಾಡಿಸಲು ಯತ್ನಿಸಿದ, ಏನಾಯಿತು ಎಂದು ಕೇಳಿದ. ನಾಗಪ್ಪನವರು ಪತ್ರಗಳನ್ನು ತೋರಿಸಿ, `ನಮ್ಮ ಕಿರಣ........' ಎಂದರು. ಅಶೋಕನಿಗೆ ಏನೊಂದೂ ಅರ್ಥವಾಗಲಿಲ್ಲ. ಪತ್ರಗಳನ್ನು ಅವನೇ ಅವರಿಗೆ ಅನುವಾದಕ್ಕೆಂದು ಕಳುಹಿಸಿದ್ದ. ಆದರೆ ಅವುಗಳನ್ನು ಅವನು ಗಮನಿಸಿರಲಿಲ್ಲ. ಅವರು ಹೇಳಿದ ನಂತರ ಅವನು ಅವುಗಳನ್ನು ಎತ್ತಿಕೊಂಡು ಓದಿದ. ಅವನಿಗೆ ಎಲ್ಲಾ ಅರ್ಥವಾಯಿತು. ಆದರೂ,
`ಇಲ್ಲ ಬಿಡಿ ಮೇಷ್ಟ್ರೆ, ಇವನು ಬೇರೆಯಿರಬಹುದು. ಇವನ್ಯಾರೋ ಲಾರಿ ಡ್ರೈವರ್. ಕಿರಣ ಯಾಕೆ ಲಾರಿ ಡ್ರೈವರ್ ಆಗಿರ್ತಾನೆ? ತಂದೆ ಹೆಸರು ಎಲ್ಲಾ ಕೋಇನ್ಸಿಡೆನ್ಸ್ ಇರಬಹುದು' ಎಂದ ಅಶೋಕ ಧೈರ್ಯ ತುಂಬಲೆಂದು.
`ಇಲ್ಲ, ನೋಡು ಅವನ ಹೊಕ್ಕುಳ ಬಲಭಾಗದಲ್ಲೂ ಹುಟ್ಟುಮಚ್ಚೆಯಿದೆ. ಕಿರಣನಿಗೂ ಇತ್ತು' ಎಂದರು.
`ನೀವು ಸುಧಾರಿಸಿಕೊಳ್ಳಿ. ನಾವು ಅದನ್ನು ಕನ್ಫರ್ಮ್ ಮಾಡಿಕೊಳ್ಳೋಣ' ಎಂದು ಹೇಳಿ ಪತ್ರಗಳನ್ನು ಮತ್ತೊಮ್ಮೆ ಅಶೋಕ ಓದಿದ. ಬೆಳಗಾವಿಯ ಪೋಲೀಸ್ ಠಾಣೆಗೆ ಫೋನ್ ಮಾಡಿ, ಕೇಸಿನ ನಂಬರ್ ಹೇಳಿ, ಅಪಘಾತಕ್ಕೊಳಗಾದ ಡ್ರೈವರ್ ಫೋಟೋ ಸಿಗುವುದಾ ಎಂದು ಕೇಳಿದ. `ಫೋಟೋ ಇದೆ, ಬೇಕಾದಲ್ಲಿ ನೀವೇ ಇಲ್ಲಿ ಬಂದು ನೋಡಬಹುದು' ಎಂದರು ಪೋಲೀಸಿನವರು. ಅವರಿಂದ ಫೋಟೋಗಳನ್ನು ತೆಗೆದ ಫೋಟೋಗ್ರಾಫರಿನ ಫೋನ್ ನಂಬರ್ ತೆಗೆದುಕೊಂಡು ಅವನಿಗೆ ಆಕ್ಸಿಡೆಂಟ್ ವಿವರಗಳನ್ನು ತಿಳಿಸಿ ಫೋಟೋಗಳನ್ನು ಹತ್ತಿರದ ಸೈಬರ್ ಸೆಂಟರ್ಗೆ ಹೋಗಿ ಸ್ಕ್ಯಾನ್ ಮಾಡಿಸಿ ತನ್ನ -ಮೇಲ್ಗೆ ಕಳುಹಿಸುವಂತೆ ಕೋರಿದ. ವಿಷಯ ತುಂಬಾ ಅರ್ಜೆಂಟಾಗಿರುವುದರಿಂದ ಹಣ ಎಷ್ಟೇ ಖರ್ಚಾದರೂ ಕೊಡುವುದಾಗಿ ತಿಳಿಸಿದ.
ನಾಗಪ್ಪನವರನ್ನು ಪಕ್ಕದ ಸೋಫಾ ಮೇಲೆ ಕೂಡ್ರಿಸಿ ನೀರು ಕೊಟ್ಟ. ಶುಗರ್ಲೆಸ್ ಕಾಫಿ ತರಿಸಿಕೊಟ್ಟ. `ಏನಾದರೂ ತಿನ್ನಿ' ಎಂದ. ನಾಗಪ್ಪನವರು ಬೇಡವೆಂದರು. ಅವರಿಗೆ ಏಕಾಂತ ಬೇಕಿತ್ತು. ಅವರಿಗೆ ಫೋಟೋದಿಂದ ಖಾತ್ರಿಪಡಿಸಿಕೊಳ್ಳುವುದೇನೂ ಬೇಕಿರಲಿಲ್ಲ. ಸತ್ತು ಹೆಣವಾಗಿರುವ ಮಗನ ಫೋಟೋ ನೋಡುವ ಧೈರ್ಯವೂ ಅವರಿಗಿರಲಿಲ್ಲ. `ಅಪಘಾತದಲ್ಲಿ ಕಿರಣನ ಮುಖ ಅದೆಷ್ಟು ನುಜ್ಜುಗುಜ್ಜಾಗಿದೆಯೋ! ಅಯ್ಯೋ ದೇವರೇ! ವಯಸ್ಸಾದ, ರೋಗಿಷ್ಠ ತಂದೆ ತಾಯಿಗಳಿಗೇಕೆ ಇಂಥ ನರಕ!' ಜೋರಾಗಿ ಅಳಬೇಕಿತ್ತು.
ಹೊರಗಡೆ ಎದ್ದು ಹೋದ ಅಶೋಕ ಫೋಟೋಗ್ರಾಫರಿನವನ ಜೊತೆಯಲ್ಲಿ ಫೋನಿನಲ್ಲಿ ಮಾತನಾಡುತ್ತಲೇ ಇದ್ದ. ಅರ್ಧಗಂಟೆಯ ನಂತರ ಒಳಗಡೆ ಬಂದ ಅಶೋಕ ಕಂಪ್ಯೂಟರಿನಲ್ಲಿ -ಮೇಲ್ ತೆರೆಯಲು ಹೋದ. ನಾಗಪ್ಪ ಮೇಷ್ಟರು, `ದಯವಿಟ್ಟು ನನಗೆ ಫೋಟೋಗಳನ್ನು ತೋರಿಸಬೇಡ. ಅವು ಹೇಗಿವೆಯೆಂದು ನನಗೆ ಹೇಳಲೂ ಬೇಡ. ನನಗೇನೋ ಅವನು ನನ್ನ ಮಗನೇ ಎನ್ನಿಸುತ್ತಿದೆ. ನಿನಗೆ ಬೇಕಾದಲ್ಲಿ ಖಾತ್ರಿ ಪಡಿಸಿಕೋ' ಎಂದರು. ಅಶೋಕ ಕಂಪ್ಯೂಟರಿನ ಕೀಲಿಗಳನ್ನು ಒಂದ್ಹತ್ತು ನಿಮಿಷ ಟಕಟಕ ಎನ್ನಿಸುತ್ತಿದ್ದ. ತಲೆಬಗ್ಗಿಸಿದ್ದ ನಾಗಪ್ಪನವರು ತಲೆ ಎತ್ತಿ ನೋಡಲೇ ಇಲ್ಲ. ಅಶೋಕ ಮಾತನಾಡಲೇ ಇಲ್ಲ. ಅವನಿಗೂ ಖಾತ್ರಿಯಾಗಿತ್ತು, ಅಪಘಾತದಲ್ಲಿ ಸತ್ತುಹೋಗಿರುವ ಕಿರಣ ತನ್ನ ಗೆಳೆಯನೆಂದು. ಪತ್ರಗಳನ್ನು ಮತ್ತೊಮ್ಮೆ ನೋಡಿ ವಿಳಾಸ ಬರೆದುಕೊಂಡ. ಮುಂಬಯಿಯ ಧರಾವಿ ಸ್ಲಂನ ವಿಳಾಸ. ಅಪಘಾತ ನಡೆದು ಎರಡು ತಿಂಗಳೇ ಆಗಿದೆ.
ನಾಗಪ್ಪನವರ ಬಳಿಬಂದು ಪಕ್ಕದಲ್ಲಿ ಕೂತು ಅವರ ಹೆಗಲ ಮೇಲೆ ಕೈಹಾಕಿದ. ಅವನ ಭುಜಕ್ಕೆ ಒರಗಿದ ನಾಗಪ್ಪ ಗೊಳೋ ಎಂದು ಅಳತೊಡಗಿದರು. ಅಶೋಕನಿಗೆ ಏನು ಹೇಳಬೇಕೋ ತೋಚಲಿಲ್ಲ. ಎಷ್ಟು ಬೇಕೋ ಅಷ್ಟೂ ಅತ್ತುಬಿಡಲಿ ಎಂದು ಸುಮ್ಮನಿದ್ದ.
`ಮೇಷ್ಟ್ರೇ, ಕಿರಣನ ವಿಳಾಸ ಇಲ್ಲಿದೆ. ನಾನು ಮುಂಬಯಿಗೆ ಹೋಗಿ ಬರುತ್ತೇನೆ' ಎಂದ ಅಶೋಕ.
`ಬೇಡ ನೀನು ಹೋಗಿ ಏನು ಮಾಡುತ್ತೀಯ? ನಾನೇ ಹೋಗಿ ಬರುತ್ತೇನೆ' ಎಂದರು. `ನಾನೂ ನಿಮ್ಮ ಜೊತೆಗೆ ಬರುತ್ತೇನೆ' ಎಂದ ಅಶೋಕ.
`ನೋಡೋಣ, ನಾನೀಗ ಮನೆಗೆ ಹೋಗುತ್ತೇನೆ. ದಯವಿಟ್ಟು ಶಾರದಾಳಿಗೆ ವಿಷಯ ತಿಳಿಸಬೇಡ' ಎಂದರು ನಾಗಪ್ಪ ಕೈ ಮುಗಿಯುತ್ತ. ಅಶೋಕ ಕೈಗಳನ್ನು ಹಿಡಿದುಕೊಂಡ, ಅವನ ಕಣ್ಣಲ್ಲೂ ನೀರಿತ್ತು. ಅವನಿಗೆ ಸ್ನೇಹಿತನನ್ನು ಕಳೆದುಕೊಂಡ ದುಃಖಕ್ಕಿಂತ ವೃದ್ಧ ದಂಪತಿಗಳ ಸ್ಥಿತಿ ಅವನನ್ನು ಮಮ್ಮಲ ಮರುಗಿಸಿತ್ತು. ಅವರು ಬೇಡವೆಂದರೂ ಅಶೋಕನೇ ಅವರನ್ನು ಕಾರಿನಲ್ಲಿ ಮನೆಯವರೆಗೂ ಬಿಟ್ಟ. ಮನೆಯಮುಂದೆ ಇಳಿದು, `ಬೇಡ, ಈಗ ನೀನು ಒಳಗೆ ಬರಬೇಡ ಹೋಗು' ಎಂದು ಅವನನ್ನು ವಾಪಸ್ಸು ಕಳುಹಿಸಿದರು.
ಶಾರದಾ ಎದ್ದು ಕೂತಿದ್ದಳು. ಅವಳಿಗೆ ಏನೂ ತೋರಗೊಡಬಾರದೆಂಬಂತೆ ಇರಲು ಬಹಳಷ್ಟು ಪ್ರಯತ್ನಿಸಿದರು. ದಿನ ರಾತ್ರಿಯೆಲ್ಲಾ ಚಡಪಡಿಸಿದರು. ಅವರು ಅಳುವುದು ಇನ್ನೂ ಬಾಕಿಯಿತ್ತು. ಕಿರಣ ಕೊಡುವುದಿಲ್ಲವೆಂದರೂ ಪತ್ರಗಳ ಪ್ರತಿಯೊಂದನ್ನು ಪಡೆದು ಬಂದಿದ್ದರು. ರಾತ್ರಿ ಅವುಗಳನ್ನು ಮತ್ತೊಮ್ಮೆ ಓದಿದರು, ಬಹಳ ವರ್ಷಗಳ ನಂತರ ಮಗನು ಬರೆದ ಪತ್ರದಂತೆ.
`ಮೃತನು ವಿವಾಹಿತ, ಒಬ್ಬಳು ಪತ್ನಿ ಹಾಗೂ ಒಬ್ಬಳು ಮಗಳಿದ್ದಾಳೆ'
ಮಹಜರ್ ನಡೆಸಿದ ಸಾಕ್ಷಿಗಳಲ್ಲಿ ರಕ್ತಬಂಧುಗಳು ಎಂಬ ಅಂಕಣದಲ್ಲಿ
`ಶ್ರೀಮತಿ ಮಾನಸಿ ವೈಫ್ ಆಫ್ ಕಿರಣ್ ಕುಮಾರ್, ವಯಸ್ಸು ೨೮, ಮೃತನ ಪತ್ನಿ' ಎಂದಿತ್ತು.
ಮರುದಿನ ಬೆಳಿಗ್ಗೆ ನಾಗಪ್ಪನವರು ಎದ್ದು ವಾಕ್ ಹೊರಟಂತೆ ಹೊರಟು ಅಶೋಕನಿಗೆ ಫೋನ್ ಮಾಡಿ ತನಗೆ ಮುಂಬಯಿಗೆ ಟ್ರೈನ್ಗೆ ಒಂದು ಟಿಕೆಟ್ ಬುಕ್ ಮಾಡಿಕೊಡುವಂತೆ ಕೇಳಿಕೊಂಡರು. ಅಶೋಕ ತಾನೂ ಬರುತ್ತೇನೆಂದು ಎಷ್ಟು ಹೇಳಿದರೂ ನಾಗಪ್ಪನವರು ಖಡಾಖಂಡಿತವಾಗಿ ಬೇಡವೆಂದರು. ತಾನು ಇಲ್ಲದಿರುವಾಗ ಆಗಾಗ ಶಾರದಾಳನ್ನು ನೋಡಿಕೊಳ್ಳಬೇಕಾಗುತ್ತದೆ, ನೀನು ಬರಬೇಡ ಎಂದರು. ಈಗ ಶಾರದಾಳಿಗೆ ಏನೆಂದು ಹೇಳಿ ಹೊರಡುವುದು ಎಂದು ಆಲೋಚಿಸತೊಡಗಿದರು. ಅವಳನ್ನು ಎಂದೂ ಬಿಟ್ಟು ಹೊರಟವರಲ್ಲ. ಈಗ ಕನಿಷ್ಠ ಮೂರ್ನಾಲ್ಕು ದಿನವಾದರೂ ಹೋಗಬೇಕಾಗುತ್ತದೆ.
ಟ್ರೈನಿನಲ್ಲಿ ರಾತ್ರಿಯೆಲ್ಲಾ ನಾಗಪ್ಪನವರಿಗೆ ನಿದ್ರೆಯೇ ಬಂದಿರಲಿಲ್ಲ. ಮುಂಬಯಿ ಹತ್ತಿರ ಹತ್ತಿರ ಬಂದಂತೆ ಅವರ ಆತಂಕ, ಎದೆಬಡಿತ ಹೆಚ್ಚಾಗುತ್ತಿತ್ತು. ಇನ್ನು ಒಂದೆರಡು ಗಂಟೆಗಳಲ್ಲಿ ಮುಂಬಯಿ ಬರುವುದಾಗಿ ಟಿ.ಸಿ. ತಿಳಿಸಿದ್ದ. ಕಿರಣ ಲಾರಿ ಡ್ರೈವರ್ ಕೆಲಸಕ್ಕೆ ಏಕೆ ತೊಡಗಿದನೆಂಬುದು ಅವರಿಗೆ ಅರ್ಥವಾಗಲೇ ಇಲ್ಲ. ಓದು ಬರಹ ಕಲಿತಿದ್ದವನು ಅವನಿಗೆ ಬೇರೇನೂ ಕೆಲಸ ಸಿಗಲಿಲ್ಲವೆ? ಸಾವು ತಂದುಕೊಳ್ಳುವಂತಹ ಕೆಲಸ ಏಕೆ ಬೇಕಿತ್ತು?
ಶಾರದಮ್ಮನವರ ಬಳಿ ಅಶೋಕ ಮಾತನಾಡಿದ್ದ. ತನ್ನ ಕಚೇರಿಯ ಕೆಲಸಕ್ಕೆ ತಾನೇ ನಾಗಪ್ಪನವರನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದೇನೆಂದೂ, ಏನೇ ಸಹಾಯ ಬೇಕಾದರೂ ತನಗೇ ಹೇಳಿ ಎಂದು ತಿಳಿಸಿದ್ದ. ತಮ್ಮ ಕಚೇರಿಯ ಒಬ್ಬ ಕೆಲಸದಾಕೆಯನ್ನು ಶಾರದಮ್ಮನವರ ಸಹಾಯಕ್ಕೆ ಕಳುಹಿಸಿದ್ದ. ಟ್ರೈನು ಹೊರಟ ದಿನ ಅಶೋಕನೇ ಬಂದು ಟ್ರೈನು ಹತ್ತಿಸಿ, ಹಣ ಕೊಡಲೇ ಎಂದು ಕೇಳಿದ್ದ. ನಾಗಪ್ಪನವರು ಬೇಡ ಎಂದಿದ್ದರು. ಅವರೇ ಬೇಕಾಗುತ್ತದೆಂದು ಬ್ಯಾಂಕಿನಿಂದ ಐವತ್ತು ಸಾವಿರ ಡ್ರಾ ಮಾಡಿ ಇಟ್ಟುಕೊಂಡಿದ್ದರು.
ನಾಗಪ್ಪ ಮೊದಲೆಂದೂ ಮುಂಬಯಿಗೆ ಬಂದವರಲ್ಲ. ಬಾಂಬೆ ಸೆಂಟ್ರಲ್ನಲ್ಲಿ ಇಳಿದಾಗ ಬೆಳಿಗ್ಗೆ ಗಂಟೆ. ಧರಾವಿಯಲ್ಲಿನ ಕಿರಣನ ಮನೆಯ ವಿಳಾಸದ ಚೀಟಿ ಹಿಡಿದು ಪ್ರಿಪೇಯ್ಡ್ ಟ್ಯಾಕ್ಸಿಯ ಬಳಿ ಹೋಗಿ ಚೀಟಿ ತೋರಿಸಿ ಹಣ ಪಾವತಿಸಿ ಟಿಕೆಟ್ ಕೊಂಡರು. ಟ್ಯಾಕ್ಸಿಯಲ್ಲಿ ಕೂತು ಡ್ರೈವರ್ಗೆ ವಿಳಾಸದ ಚೀಟಿ ತೋರಿಸಿ ಅದು ತನ್ನ ಮಗನ ಮನೆಯೆಂದೂ, ತಾನು ಮುಂಬಯಿಗೆ ಹೊಸಬನೆಂದೂ, ಮನೆಯ ಬಳಿಯೇ ಕರೆದುಕೊಂಡು ಹೋಗಿ ಬಿಟ್ಟಲ್ಲಿ ಇನ್ನಷ್ಟು ದುಡ್ಡು ಕೊಡುವುದಾಗಿ ಅರೆಬರೆ ಹಿಂದಿಯಲ್ಲಿ ತಿಳಿಸಿದರು.
ಟ್ಯಾಕ್ಸಿ ಡ್ರೈವರ್ ಯಾವುದೋ ಗಲ್ಲಿಯಲ್ಲಿ ನಿಲ್ಲಿಸಿ, ಇಲ್ಲಿಂದ ಒಳಕ್ಕೆ ಟ್ಯಾಕ್ಸಿ ಹೋಗುವುದಿಲ್ಲವೆಂದು ತಿಳಿಸಿದ. ಎದುರು ಗಲ್ಲಿಯೊಳಕ್ಕೆ ಹೋಗಿ ಯಾರನ್ನಾದರೂ ಕೇಳಿ ಮನೆ ತೋರಿಸುತ್ತಾರೆ ಎಂದು ಹೇಳಿ, ಐವತ್ತು ರೂ ಭಕ್ಷೀಸು ಪಡೆದು ಹೊರಟ.
ತನ್ನ ಮಗ ಇಂತಹ ಕೊಳಗೇರಿಯಲ್ಲಿ ಬದುಕುತ್ತಿದ್ದನೆಂದು ತಿಳಿದು ನಾಗಪ್ಪನವರಿಗೆ ಅತೀವ ಹಿಂಸೆಯಾಯಿತು. ರಸ್ತೆಯಲ್ಲೇ ಹರಿಯುತ್ತಿದ್ದ ಕೊಳಚೆ ನೀರು, ಅದರ ಪಕ್ಕದಲ್ಲೇ ಕೊಳಾಯಿಯ ನೀರು, ಅದರ ಬಳಿ ಹೆಂಗಸರ ಕಿತ್ತಾಟ. ನಾಗಪ್ಪನವರಿಗೆ ಹೇಗೆ ಹೆಜ್ಜೆ ಮುಂದೆ ಇಡಬೇಕೆನ್ನುವುದೇ ತಿಳಿಯಲಿಲ್ಲ. ಅಲ್ಲೇ ಕಾಣುತ್ತಿದ್ದ ಅಂಗಡಿಗೆ ಹೋಗಿ ಕಿರಣನ ಮಗಳಿಗೆಂದು ಒಂದಷ್ಟು ಚಾಕಲೇಟ್, ಬಿಸ್ಕಿಟ್ ಕೊಂಡರು. ವಿಳಾಸದ ಚೀಟಿ ಅಂಗಡಿಯವನಿಗೆ ತೋರಿಸಿದರು. ಆತ ಅದರಲ್ಲಿನ ವಿಳಾಸ ನೋಡಿ, ಅಂಗಡಿಯ ಬಳಿ ಇದ್ದ ಕೆಲವರ ಬಳಿ ಮರಾಠಿಯಲ್ಲಿ ಏನೋ ಮಾತನಾಡಿದ. ನಂತರ ಅಲ್ಲೇ ಆಡುತ್ತಿದ್ದ ಹುಡುಗನೊಬ್ಬನನ್ನು ಕರೆದು ಅವನಿಗೆ ಮರಾಠಿಯಲ್ಲಿ ಏನೋ ಹೇಳಿದ. ಮಾತುಗಳ ಮಧ್ಯೆ `ಕಿರಣ್ ಕುಮಾರ್' ಎನ್ನುವುದು ಮಾತ್ರ ಅವರಿಗೆ ಅರ್ಥವಾಯಿತು. ` ಹುಡುಗ ಮನೆ ತೋರಿಸುತ್ತಾನೆ' ಎಂದು ಅಂಗಡಿಯವ ನಾಗಪ್ಪನವರಿಗೆ ತಿಳಿಸಿದ. ನಾಗಪ್ಪ ಹುಡುಗನಿಗೊಂದು ಚಾಕಲೇಟ್ ಕೊಟ್ಟರು. ಅವನ ಹಿಂದೆಯೇ ಹೊರಟರು.
`ಮಾನಸಿ ಏನನ್ನಬಹುದು? ಮೊಮ್ಮಗಳು ನನ್ನನ್ನು ಅಜ್ಜಾ ಎನ್ನುತ್ತಾಳೆಯೆ? ನಾವವರನ್ನು ಮನೆಗೆ ಸೇರಿಸಿಲ್ಲ. ಆಕೆಯೀಗ ನನ್ನನ್ನು ಮನೆಯೊಳಕ್ಕೆ ಸೇರಿಸದಿದ್ದರೆ?' ಎಂಬ ಆಲೋಚನೆಗಳಲ್ಲಿಯೇ ಮನೆಯ ಮುಂದೆ ಬಂದು ನಿಂತಿದ್ದರು. ಹುಡುಗ ಮನೆಯ ಬಾಗಿಲು ತೋರಿಸಿ, ಮರಾಠಿಯಲ್ಲಿ ಏನೋ ಹೇಳಿ ಮೊದಲು ಆಟವಾಡುತ್ತಿದ್ದೆಡೆಗೆ ಓಡಿದ. ನಾಗಪ್ಪನವರು ಅಳುಕಿನಿಂದಲೇ ಬಾಗಿಲು ತಟ್ಟಿದರು. ಬಾಗಿಲು ತೆರೆಯಿತು. ಆರು ವರ್ಷದ ಪುಟ್ಟ ಹುಡುಗಿಯೊಬ್ಬಳು ಬಾಗಿಲು ಅರ್ಧ ತೆರೆದು ಇಣುಕಿ ನೋಡಿದಳು. `ಯಾರು' ಎಂಬರ್ಥ ಬರುವ ಧ್ವನಿಯಲ್ಲಿ ಮರಾಠಿಯಲ್ಲೇನೋ ಕೇಳಿದಳು. ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. `ನಿನ್ನ ಅಜ್ಜ ಎನ್ನಲೇ? ನಿನ್ನ ಅಪ್ಪ ಎನ್ನಲೇ? ನಿನ್ನ ಅಪ್ಪನನ್ನು ಮನೆಗೆ ಸೇರಿಸದ ಕಟುಕ ಎನ್ನಲೇ?' ಎಂದು ಯೋಚಿಸುತ್ತ ಹುಡುಗಿಯ ಮುಖ ನೋಡುತ್ತಿರುವಾಗ ಒಳಗಿನಿಂದ ಹೆಂಗಸೊಬ್ಬಳು ಬಂದು ಮಗು ಕೇಳಿದ ಮರಾಠಿ ಪ್ರಶ್ನೆಯನ್ನೇ ಮತ್ತೆ ಕೇಳಿದಳು. ನಾಗಪ್ಪನವರು ಮಾನಸಿಯನ್ನು ನೋಡಿರಲೇ ಇಲ್ಲ.
ಧೈರ್ಯಮಾಡಿಕೊಂಡು `ನಾನು, ಕಿರಣನ ಅಪ್ಪ' ಎಂದರು ಕನ್ನಡದಲ್ಲಿ. ಆಕೆ ಅರೆ ಕ್ಷಣ ಚಕಿತಳಾಗಿ ಏನೂ ಮಾತನಾಡದೇ ಒಳಗೆ ಹೊರಟುಹೋದಳು. ಪುಟ್ಟ ಹುಡುಗಿಗೆ ಏನೊಂದೂ ಅರ್ಥವಾಗದೆ ಅಮ್ಮನ ಹಿಂದೆ ಓಡಿದಳು. ನಾಗಪ್ಪನವರಿಗೆ ಏನು ಮಾಡಬೇಕೆಂದು ತೋಚಲಿಲ್ಲ. ತೆರೆದ ಬಾಗಿಲು ತೆರೆದೇ ಇತ್ತು. ತಾನು ಬಂದಿರುವುದು ವಾಪಸ್ಸು ಹೋಗಲಲ್ಲ ಎಂಬುದನ್ನು ನೆನಪಿಸಿಕೊಂಡರು. ಆಕೆ ಮತ್ತೆ ಬಾಗಿಲ ಬಳಿ ಬಂದು, `ಬನ್ನಿ ಒಳಕ್ಕೆ' ಎಂದಳು.
ನಾಗಪ್ಪನವರು ಬಾಗಿಲ ಹೊರಗೆ ಚಪ್ಪಲಿ ಬಿಟ್ಟು ಒಳಗೆ ಹೋದರು. ಎರಡೇ ಕೋಣೆಗಳ ಸಣ್ಣ ಮನೆ. ಒಂದು ಕೋಣೆ ಅಡುಗೆ ಮನೆಯಾದರೆ, ಮತ್ತೊಂದು ಎಲ್ಲವೂ ಆಗಿತ್ತು. ಅಲ್ಲೇ ಇದ್ದ ಕಬ್ಬಿಣದ ಖುರ್ಚಿಯ ಮೇಲೆ ಕೂತರು. ಬಿಸಿಲಿನಿಂದ ಒಳಗೆ ಬಂದಾಗ ಎಲ್ಲವೂ ಮಬ್ಬುಮಬ್ಬಾಗಿತ್ತು. ದೃಷ್ಟಿ ಸ್ಫುಟವಾದಂತೆ, ಗೋಡೆಯ ಮೇಲೆ ಕಿರಣನ ಫೋಟೋ ಕಂಡಿತು. ಅದಕ್ಕೆ ಹೂವಿನ ಹಾರ ಹಾಕಿತ್ತು. ಹೆಣ್ಣು ಅಡುಗೆ ಮನೆಯ ಬಾಗಿಲನ್ನು ಆಸರೆಯಾಗಿ ಹಿಡಿದು ನೋಡುತ್ತಿತ್ತು. ಪುಟ್ಟ ಮಗು ಆಕೆಯ ಸೀರೆಯನ್ನು ಆಸರೆಯಾಗಿ ಹಿಡಿದಿತ್ತು.
`ನಿನ್ನ ಹೆಸರು ಮಾನಸಿ ಅಲ್ಲವೇನಮ್ಮಾ?' ಎಂದರು.
ಆಕೆ ಮಾತನಾಡಲಿಲ್ಲ.
`ನಿನ್ನ ಹೆಸರೇನು? ನಿನಗೆ ಕನ್ನಡ ಬರುತ್ತಾ?' ಎಂದು ಪುಟ್ಟ ಮಗುವನ್ನು ಕೇಳಿದರು.
ಮಗುವೂ ಮಾತನಾಡಲಿಲ್ಲ.
`ನಮ್ಮಿಂದ ಬಹಳ ತಪ್ಪಾಗಿ ಬಿಡ್ತಮ್ಮ. ದಯವಿಟ್ಟು ಕ್ಷಮಿಸಿ ಬಿಡು' ಎಂದರು ನಾಗಪ್ಪ ಕೈ ಮುಗಿಯುತ್ತ. ಅವರು ಹೇಳಬೇಕೆಂದು ಹೊರಟಿದ್ದ ಮಾತೇ ಬೇರೆ, ಆದರೆ ಅವರಿಗರಿವಿಲ್ಲದಂತೆ ಮಾತು ಹೊರಬಂದಿತ್ತು.
`ಎಲ್ಲಾ ಮುಗಿದ ಮೇಲೆ ಬಂದು ಏನು ಮಾಡ್ತೀರಿ?' ಮಾನಸಿ ಕೇಳಿದಳು.
ನಾಗಪ್ಪನವರು ಏನೂ ಮಾತನಾಡಲಿಲ್ಲ. ಐದು ನಿಮಿಷದ ಮೌನದ ನಂತರ
`ಬನ್ನಿ ಕೈ ಕಾಲು ಮುಖ ತೊಳೆದುಕೊಳ್ಳಿ' ಎಂದು ಅಡುಗೇ ಮನೆಯಲ್ಲೇ ಇದ್ದ ಬಚ್ಚಲಿನ ಕಡೆ ಕೈ ತೋರಿದಳು.
ನಾಗಪ್ಪ ಕೈ ಕಾಲು ಮುಖ ತೊಳೆದು ಬಂದು ಅದೇ ಕುರ್ಚಿಯ ಮೇಲೆ ಕೂತರು. ಮಾನಸಿ ಪ್ಲೇಟಿನಲ್ಲಿ ಉಪ್ಪಿಟ್ಟು ತಂದು ಕೊಟ್ಟಳು. ಪುಟ್ಟ ಮಗು ತಾಯಿಯ ಸೆರಗು ಬಿಡುತ್ತಲೇ ಇರಲಿಲ್ಲ. ತಮ್ಮ ಚೀಲದಿಂದ ಚಾಕಲೇಟ್, ಬಿಸ್ಕತ್ ತೆಗೆದು ಕೊಟ್ಟರು. ಆಗ ಮಗು ಹತ್ತಿರ ಬಂತು. ನಿನಗೆ ಕನ್ನಡ ಬರುತ್ತಾ ಎಂದದ್ದಕ್ಕೆ `ಹ್ಹೂಂ' ಎಂದು ತಲೆಯಾಡಿಸಿತು. ನಿನ್ನ ಹೆಸರೇನು ಎಂದದ್ದಕ್ಕೆ `ಶಾರದಾ' ಎಂದಿತು. ನಾಗಪ್ಪನವರಿಗೆ ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಂತಾಗಿ ಉಪ್ಪಿಟ್ಟು ತಿನ್ನಲಾಗಲಿಲ್ಲ.
ನಾಗಪ್ಪನವರೂ ಮಾತನಾಡಲಿಲ್ಲ, ಮಾನಸಿಯೂ ಮಾತನಾಡಲಿಲ್ಲ. ಮಗುವಿಗೆ `ನಾನು ನಿಮ್ಮ ಅಜ್ಜ ಎಂದು ಹೇಳಿಕೊಳ್ಳಲೂ ನಾಚಿಕೆಯಾಗುತ್ತದೆ' ಎಂದರು. ಮಗುವಿಗೆ ಏನೂ ಅರ್ಥವಾಗಲಿಲ್ಲ.
ಕೊನೆಗೆ ನಾಗಪ್ಪನವರೇ ಮಾತು ಪ್ರಾರಂಭಿಸಿ, `ನಡೆಯಿರಿ ಊರಿಗೆ ಹೋಗೋಣ' ಎಂದರು.
`ನಮ್ಮದು ಇದೇ ಊರು' ಥಟ್ಟನೆ ಮಾನಸಿ ಹೇಳಿದಳು, `ನಮಗ್ಯಾರೂ ಇಲ್ಲ' ಎಂದೂ ಸೇರಿಸಿದಳು.
`ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಮ್ಮ' ಎಂದರು.
`ಯಾರನ್ನು ಯಾರು ಕ್ಷಮಿಸಬೇಕೋ ಗೊತ್ತಿಲ್ಲ' ಎಂದಳಾಕೆ.
`ನಮಗೂ ಯಾರೂ ಇಲ್ಲ......'
`ಅಂದರೆ, ನಿಮಗೆ ಇಳಿ ವಯಸ್ಸಿನಲ್ಲಿ ನೋಡಿಕೊಳ್ಳಲು ಯಾರಾದರೂ ಬೇಕೇನೋ?' ಎಂದಳಾಕೆ ಒರಟಾಗಿ.
ನಾಗಪ್ಪನವರಿಗೆ ಏನು ಹೇಳಲೂ ತೋಚಲಿಲ್ಲ. ಸ್ವಲ್ಪ ಸಮಯ ಕಳೆದು ಮತ್ತೆ ಹೇಳಿದರು,
`ಮಗುವಿನ ಬಗ್ಗೆ ಯೋಚಿಸಮ್ಮ. ಆಕೆಯ ದೃಷ್ಟಿಯಿಂದಲಾದರೂ ನಮ್ಮೊಡನೆ ಬಾ. ಈಗ ನಮಗೆ ಉಳಿದಿರುವುದು ನೀವಿಬ್ಬರೇ. ನಿಮಗಾಗಿ ನಾನು ಎಷ್ಟು ಹುಡುಕಾಟ ನಡೆಸಿದ್ದೇನೆ. ನಿಮ್ಮಿಂದ ಸುದ್ದಿಯೇ ಇಲ್ಲ. ನಾವು ಎಲ್ಲೆಂದು ಹುಡುಕುವುದು?' ಎಂದರು ನಾಗಪ್ಪ.
`ಎಲ್ಲವೂ ಸುಳ್ಳು' ಎಂದಳಾಕೆ.
ಮತ್ತೆ ಇಬ್ಬರ ನಡುವೆ ಮೌನ. ಮಗು ಇಬ್ಬರನ್ನೂ ನೋಡುತ್ತ ಚಾಕಲೇಟ್ ತಿನ್ನುತ್ತಿತ್ತು.
`ಕಿರಣ ಬೇರೆ ಯಾವ ಕೆಲಸಕ್ಕೂ ಸೇರಿರಲಿಲ್ಲವೆ?' ತಮ್ಮ ಸಂಶಯದ ನಿವಾರಣೆಗೆ ನಾಗಪ್ಪ ಕೇಳಿದರು.
`ಸಿಗಬೇಕಲ್ಲಾ?' ಅಷ್ಟೇ ಮೊಟಕಾಗಿ ಮಾನಸಿ ಉತ್ತರಿಸಿದಳು.
ತಾನು ಬಂದಿರುವುದು ಆಕೆಗೆ ಎಲ್ಲೋ ಆಳದೊಳಗೆ ಸಂತೋಷವಾಗಿರಬಹುದು, ಒಂದು ರೀತಿಯ ಸುರಕ್ಷಿತ ಭಾವನೆ ಬಂದಿರಬಹುದು, ತನ್ನೊಟ್ಟಿಗೆ ಆಕೆ ವಾಪಸ್ಸು ಬರಬಹುದು ಎಂದು ನಾಗಪ್ಪನವರು ಆಲೋಚಿಸುತ್ತಿದ್ದರು.
`ನಿಮ್ಮ ಮನೆಯವರಿಗೆ ಹೇಳಲಿಲ್ಲವೇನಮ್ಮಾ?' ಎಂದು ಕೇಳಿದರು.
ಇಲ್ಲವೆಂದು ತಲೆಯಾಡಿಸಿ, ಅಲ್ಲೇ ಕುಸಿದು ಅಳಲು ಶುರುಮಾಡಿದಳು. ಮಗುವು ಅದನ್ನು ನೋಡಿ, ತಾನೂ ಅಳುತ್ತ ಅಮ್ಮನ ಬಳಿ ಹೋಗಿ ನಿಂತಳು. ಏನು ಮಾಡಬೇಕೆಂದು ನಾಗಪ್ಪನವರಿಗೆ ತೋಚಲಿಲ್ಲ. ಅವಳನ್ನು ತಬ್ಬಿ ಸಂತೈಸಬೇಕೆನ್ನಿಸಿತು. ಅವರ ಕಣ್ಣಲ್ಲೂ ನೀರು ಸುರಿಯುತ್ತಿತ್ತು. ಕರವಸ್ತ್ರವನ್ನು ಕಣ್ಣಿಗೆ ಒತ್ತಿಹಿಡಿದರು.
`ಹೆದರಿಕೋ ಬೇಡಮ್ಮಾ. ನಾನಿದ್ದೇನೆ. ದಯವಿಟ್ಟು ಇಲ್ಲವೆನ್ನಬೇಡ. ನೀನೇ ನನ್ನ ಮಗಳು, ನೀನೇ ನನ್ನ ಮಗ. ನಡಿ ನಮ್ಮೂರಿಗೆ ಹೋಗೋಣ. ನಾವು, ನೀವು ಎಲ್ಲಾ ಬದುಕಲ್ಲಿ ಬಹಳಷ್ಟು ನೋವು ತಿಂದಿದ್ದೇವೆ. ನಡೆದದ್ದೆಲ್ಲಾ ನಡೆದುಹೋಯಿತು. ಇನ್ನೂ ಮಗುವಿನ ಭವಿಷ್ಯದ ಬಗ್ಗೆ ಆಲೋಚಿಸೋಣ.' ಎಂದರು ನಾಗಪ್ಪ.
`ಯೋಚಿಸುತ್ತೇನೆ' ಎಂದಳು ಮಾನಸಿ, ಕಣ್ಣೊರೆಸಿಕೊಳ್ಳುತ್ತ.
`ಯೋಚಿಸು. ನಮ್ಮೆಲ್ಲರ ಒಳಿತಿಗೇ ನಾನು ಹೇಳುತ್ತಿರುವುದು. ನೀನು ಎಂದು ಬರಲು ಸಿದ್ಧವಿರುತ್ತೀಯೋ ತಿಳಿಸು. ನಾನು ಬಂದು ಕರೆದುಕೊಂಡುಹೋಗುತ್ತೇನೆ. ನಂಬರಿಗೆ ಫೋನ್ ಮಾಡು, ಇದು ಕಿರಣನ ಗೆಳೆಯ ಅಶೋಕನದು. ಬೇಡವೆನ್ನಬೇಡ ಹಣ ತೆಗೆದುಕೋ' ಎಂದು ಹೇಳಿ ತಾವು ತಂದಿದ್ದ ಐವತ್ತು ಸಾವಿರ ಆಕೆಯ ಬಳಿ ಇಟ್ಟರು.
ಆಕೆ ಬೇಡವೆಂದು ಅದನ್ನು ದೂರ ತಳ್ಳಿದರೂ ಅವರು, `ಇಲ್ಲ, ಬೇಕಾಗುತ್ತೆ. ಇಲ್ಲಿ ಏನಾದರೂ ಜವಾಬ್ದಾರಿಗಳಿದ್ದರೆ ಅವುಗಳನ್ನು ಪೂರೈಸಿಕೊ. ಇನ್ನೂ ಹಣ ಬೇಕಾದರೆ ಹೇಳು ಕಳುಹಿಸಿಕೊಡುತ್ತೇನೆ' ಎಂದು ಹೇಳಿ ಹಣವನ್ನು ಆಕೆಯ ಕೈಗಿಟ್ಟು ಮೇಲೆದ್ದು ಕಿರಣನ ಫೋಟೋದ ಬಳಿ ಹೋಗಿ ನಿಂತರು. ಕರವಸ್ತ್ರದಿಂದ ಮತ್ತೆ ಕಣ್ಣು ಒರೆಸಿಕೊಂಡರು.
* * * *

ಟ್ರೈನಿನ ವಾಪಸ್ ಪ್ರಯಾಣ ನಾಗಪ್ಪನವರಿಗೆ ಅಷ್ಟೊಂದು ಹಿಂಸೆಯಾಗಲಿಲ್ಲ. `ಶಾರದಾಳಿಗೆ ಹೇಗಾದರೂ ಹೇಳಿ ಒಪ್ಪಿಸುತ್ತೇನೆ. ಅವಳು ಒಪ್ಪಲೇಬೇಕು' ಎಂದು ಮನಸ್ಸಿನಲ್ಲೇ ಅಂದುಕೊಂಡರು. ಆಕೆಗೆ ಮಗನ ಸಾವಿನ ವಿಷಯ ತಿಳಿಸುವುದೇ ಕಷ್ಟದ ಕೆಲಸ ಅಂದುಕೊಂಡರು. `ಕಿರಣ ಬದುಕಿದ್ದಾಗಲೂ ಅವಳದು ದಿನನಿತ್ಯದ ರೋಧನ. ಈಗ ಅವನು ಸತ್ತುಹೋಗಿರುವ ವಿಷಯ ಅವಳಿಗೇನಾದರೂ ತಿಳಿದರೆ ಅವಳು ಎದೆಯೊಡೆದು ಸತ್ತುಹೋಗಬಹುದು ಅಥವಾ ಅವನು ನನ್ನ ಪಾಲಿಗೆ ಎಂದೋ ಸತ್ತುಹೋಗಿದ್ದ ಎನ್ನಲೂಬಹುದು. ಅವನ ಈಗಿನ ಸಾವಿಗೆ ಅವಳು ಅವನ ಸಾವಿನ ಮುನ್ನವೇ ತನ್ನ ಎಲ್ಲಾ ದುಃಖದ ಕೋಟಾವನ್ನು ಮುಗಿಸಿಬಿಟ್ಟಿದ್ದಾಳೆ. ಕಿರಣನ ಈಗಿನ ಸಾವು ಅವಳಿಗೆ ಏನೇನೂ ಅನ್ನಿಸದಿರಬಹುದು' ನಾಗಪ್ಪನವರು ಶಾರದಮ್ಮನ ಬಗ್ಗೆ ಆಲೋಚಿಸುತ್ತಿದ್ದರು. ಬರುವಾಗ ಮಾನಸಿ ಕೊಟ್ಟಿದ್ದ ಕಿರಣನ ಅಸ್ಥಿಯಿದ್ದ ತಾಮ್ರದ ಕರಡಿಗೆಯನ್ನು ಚೀಲದ ಸಮೇತ ಕೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದರು. ಕಿಟಕಿಯಿಂದ ಬೀಸುತ್ತಿದ್ದ ಬಿರುಸಾದ ಗಾಳಿಗೆ ಮುಖವೊಡ್ಡಿದ್ದ ನಾಗಪ್ಪನವರಿಗೆ ಅದ್ಯಾಕೊ ವಾಪಸ್ ಪ್ರಯಾಣ ಅತ್ಯಂತ ದೀರ್ಘವಾಗುತ್ತಿದೆ ಎನ್ನಿಸುತ್ತಿತ್ತು.

ಡಾ|| ಜೆ.ಬಾಲಕೃಷ್ಣ
balukolar@gmail.com