ಮಂಗಳವಾರ, ಜುಲೈ 22, 2014

ಮುಲ್ಲಾ ನಸ್ರುದ್ದೀನ್ ಕತೆಗಳ 30ನೇ ಕಂತು


ಅಹಂಕಾರ
ಒಮ್ಮೆ ಮನೋವೈದ್ಯರೊಬ್ಬರು ಮುಲ್ಲಾನನ್ನು ಕೇಳಿದರು, `ಮುಲ್ಲಾ, ನೀನೊಬ್ಬ ಮಹಾನ್ ಮೇಧಾವಿ ಹಾಗೂ ಬುದ್ಧಿವಂತನೆಂಬ ಅಹಂಕಾರ ನಿನಗಿದೆಯಲ್ಲವೆ?’
`ಇಲ್ಲಾ, ಅದಕ್ಕೆ ತದ್ವಿರುದ್ಧವಾಗಿ ನಾನು ವಾಸ್ತವವಾಗಿ ಮಹಾನ್ ಮೇಧಾವಿ ಹಾಗೂ ಬುದ್ಧಿವಂತನಾಗಿರುವುದಕ್ಕಿಂತ ಚಿಕ್ಕವನೆಂಬ ಭಾವನೆ ನನಗಿದೆ’ ಎಂದು ಹೇಳಿದ ಮುಲ್ಲಾ, ತನ್ನ ಗಡ್ಡ ನೀವಿಕೊಳ್ಳುತ್ತಾ.



ಸ್ವರ್ಗದ ಬಾಗಿಲು
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ದೇವರ ಪ್ರಾರ್ಥನಾ ಮಂದಿರಕ್ಕೆ ಹೋದರು. ಬಾಗಿಲ ಬಳಿ `ಇದು ದೇವರ ಮನೆ – ಈ ಬಾಗಿಲೇ ಸ್ವರ್ಗದ ಬಾಗಿಲು’ ಎಂದು ಬರೆದಿತ್ತು. ಆದರೆ ಮುಲ್ಲಾ ಬಾಗಿಲ ಬಳಿ ಹೋದಾಗ ಅದಕ್ಕೆ ದೊಡ್ಡ ಬೀಗ ಹಾಕಿತ್ತು. ಮುಲ್ಲಾ ತನ್ನ ಪತ್ನಿಯ ಕಡೆ ತಿರುಗಿ, `ನೋಡು, ಸ್ವರ್ಗದ ಬಾಗಿಲು ಬೀಗ ಹಾಕಿದೆ. ನಾವು ನರಕಕ್ಕೆ ಹೋಗಬೇಕು ಎಂಬುದ ಅದರರ್ಥ’ ಎಂದ.

ಜವಾಬ್ದಾರಿಯ ಮನುಷ್ಯ
ಮುಲ್ಲಾ ನಸ್ರುದ್ದೀನ್ ಉದ್ಯೋಗ ಅರಸಿ ಅಂಗಡಿಯೊಂದಕ್ಕೆ ಹೋಗಿದ್ದ. `ನೋಡಪ್ಪಾ, ನಮ್ಮ ಅಂಗಡಿಯಲ್ಲಿ ಕೆಲಸ ಮಾಡಲು ಜವಾಬ್ದಾರ ವ್ಯಕ್ತಿ ಬೇಕು’ ಎಂದ ಅಂಗಡಿಯ ಮಾಲೀಕ.
`ನಾನು ಜವಾಬ್ದಾರಿಯ ಮನುಷ್ಯ’, ಹೇಳಿದ ಮುಲ್ಲಾ, `ಈ ಹಿಂದೆ ನಾನು ಕೆಲಸ ಮಾಡಿರುವ ಅಂಗಡಿಗಳಲ್ಲೆಲ್ಲಾ ಏನಾದರೂ ದುರಂತ ಉಂಟಾದಾಗಲೆಲ್ಲಾ, ಅದಕ್ಕೆಲ್ಲಾ ನಾನೇ ಜವಾಬ್ದಾರಿ ಎನ್ನುತ್ತಿದ್ದರು ಆ ಅಂಗಡಿಗಳ ಮಾಲೀಕರು.’

ಚಿಂತೆ
ಕ್ಷೌರಿಕನೊಬ್ಬ ಒಮ್ಮೆ ಮುಲ್ಲಾ ನಸ್ರುದ್ದೀನ್‍ನನ್ನು ಕೇಳಿದ, `ಮುಲ್ಲಾ, ಏಕೆ ನಿಮ್ಮ ಕೂದಲು ಉದರುತ್ತಿದೆ, ತಲೆ ಬೋಳಾಗುತ್ತಿದೆ?’
`ನನಗೆ ಚಿಂತೆ ಹೆಚ್ಚಾಗಿದೆ ಮಾರಾಯ. ಕೂದಲು ಉದುರಲು ಅದೇ ಕಾರಣ’ ಹೇಳಿದ ಮುಲ್ಲಾ.
`ಹೌದೆ? ನಿಮಗೆಂಥದು ಚಿಂತೆ?’ ಕೇಳಿದ ಕ್ಷೌರಿಕ.
`ಅದೇ, ನನಗೆ ಕೂದಲು ಉದುರುತ್ತಿದೆಯೆಂಬ ಚಿಂತೆ!’ ಹೇಳಿದ ಮುಲ್ಲಾ.

ಅದೇ ಸಾಲು
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಪತ್ನಿ ಸಿನೆಮಾಗೆ ಹೋದರು. ಇಂಟರ್‍ವಲ್‍ನಲ್ಲಿ ಇಬ್ಬರೂ ಕಾಫಿ ಕುಡಿಯಲು ಹೊರಗೆ ಎದ್ದು ಹೋದರು. ಪುನಃ ಹಿಂದಿರುಗಿದಾಗ, ಸಾಲಿನ ಕೊನೆಯಲ್ಲಿ ಕುಳಿತಿದ್ದ ವ್ಯಕ್ತಿಯನ್ನು ಮುಲ್ಲಾ,
`ನಾನು ಹೊರಗೆ ಹೋಗುವಾಗ ನಿಮ್ಮ ಪಾದವನ್ನು ತುಳಿದೆನಾ?’ ಎಂದು ಕೇಳಿದ.
`ಹೌದು’ ಎಂದು ಆ ವ್ಯಕ್ತಿ ಸಿಟ್ಟು ಅಸಹನೆಯಿಂದ.
ಮುಲ್ಲಾ ತನ್ನ ಪತ್ನಿಯನ್ನು ನೋಡಿ, `ನಾನು ಹೇಳಲಿಲ್ಲವಾ, ಇದೇ ನೋಡು ನಾವು ಕುಳಿತಿದ್ದ ಸಾಲು’ ಎಂದ.

ಹಲ್ಲು ನೋವು
ಒಮ್ಮೆ ಮುಲ್ಲಾ ನಸ್ರುದ್ದೀನ್ ದಂತವೈದ್ಯರ ಬಳಿ ಹೋಗಿದ್ದ.
`ಒಂದು ಹಲ್ಲು ಕೀಳಲು ಮುನ್ನೂರು ರೂಪಾಯಿ. ಹಲ್ಲು ಕೀಳುವಾಗ ನೋವಾಗದಂತೆ ಅರವಳಿಕೆ ಚುಚ್ಚುಮದ್ದು ಕೊಡಬೇಕಾದರೆ ಹೆಚ್ಚಿನ ಇನ್ನೂರು ರೂಪಾಯಿ ಕೊಡಬೇಕು’, ವೈದ್ಯರು ಹೇಳಿದರು. 
`ಅರವಳಿಕೆ ಚುಚ್ಚುಮದ್ದು ಬೇಕಾಗಿಲ್ಲ. ಇನ್ನೂರು ಉಳಿಯುತ್ತದೆ’ ಹೇಳಿದ ಮುಲ್ಲಾ.
`ಆಯಿತು ನಿಮ್ಮಿಷ್ಟ. ಕೂತುಕೊಳ್ಳಿ ಹಲ್ಲು ಕೀಳುತ್ತೇನೆ,’ ವೈದ್ಯರು ಹೇಳಿದರು.
`ಹಲ್ಲು ಕೀಳಬೇಕಾಗಿರುವುದು ನನಗಲ್ಲ, ನನ್ನ ಪತ್ನಿಗೆ’ ಹೇಳಿದ ಮುಲ್ಲಾ ನಸ್ರುದ್ದೀನ್.

ಎಚ್ಚರವಾಗಿಬಿಡಬಹುದು
ಮುಲ್ಲಾ ನಸ್ರುದ್ದೀನ್ ಪೋಲೀಸ್ ಠಾಣೆಗೆ ಓಡೋಡಿ ಬಂದ.
`ಸ್ವಾಮಿ, ನನ್ನನ್ನು ಬಂಧಿಸಿ ಆದಷ್ಟು ಬೇಗ ಲಾಕಪ್‍ನಲ್ಲಿ ಬೀಗಹಾಕಿ ಬಿಡಿ. ನಾನು ನನ್ನ ಹೆಂಡತಿಯ ತಲೆಗೆ ಬಿಯರು ಬಾಟಲಿಯಿಂದ ಹೊಡೆದಿದ್ದೇನೆ’ ಎಂದು ಕೈಜೋಡಿಸಿ ಕೇಳಿದ.
`ಏನು! ಅವಳ ಕೊಲೆ ಮಾಡಿದ್ದೀಯ?’ ಗಾಭರಿಯಿಂದ ಪೋಲೀಸು ಅಧಿಕಾರಿ ಕೇಳಿದ.
`ಇಲ್ಲ. ಇನ್ನೇನು ಅವಳಿಗೆ ಎಚ್ಚರವಾಗಿಬಿಡಬಹುದು. ನೀವು ನನ್ನನ್ನು ಬಂಧಿಸಿ ಕೂಡಿಹಾಕದಿದ್ದರೆ ನನ್ನ ಕೊಲೆ ನಡೆದುಬಿಡುತ್ತದೆ’ ಹೇಳಿದ ನಡುಗುತ್ತಿದ್ದ ನಸ್ರುದ್ದೀನ್.

ಸಮಯಕ್ಕೆ ಹಾಜರ್!
ಮುಲ್ಲಾ ನಸ್ರುದ್ದೀನನಿಗೆ ಬೆಳಿಗ್ಗೆ ತಡವಾಗಿ ಏಳುವ ಅಭ್ಯಾಸವಿತ್ತು. ಪ್ರತಿ ದಿನ ತಾನು ಕೆಲಸ ಮಾಡುವ ಅಂಗಡಿಗೆ ತಡವಾಗಿ ಹೋಗುತ್ತಿದ್ದ. ಇದೇ ರೀತಿ ತಡವಾಗಿ ಬರುತ್ತಿದ್ದರೆ ಅವನನ್ನು ಕೆಲಸದಿಂದ ತೆಗೆಯುವುದಾಗಿ ಮಾಲೀಕ ಎಚ್ಚರಿಕೆ ಕೊಟ್ಟ. ತನ್ನ ಸಮಸ್ಯೆ ಪರಿಹಾರಕ್ಕಾಗಿ ಮುಲ್ಲಾ ವೈದ್ಯರೊಬ್ಬರ ಬಳಿ ಹೋದ. ಅವನ ಸಮಸ್ಯೆ ಆಲಿಸಿದ ವೈದ್ಯರು ಅವನಿಗೆ ಮಾತ್ರೆಯೊಂದನ್ನು ಕೊಟ್ಟು ಮಲಗುವ ಮುನ್ನ ಸೇವಿಸಲು ಹೇಳಿದರು. ಮುಲ್ಲಾ ಅದರಂತೆ ಮಾಡಿದ. ನಿದ್ರೆಯಿಂದ ಎಚ್ಚೆತ್ತಾಗ ಬೆಳಕು ಆಗಷ್ಟೇ ಮೂಡುತ್ತಿತ್ತು. ಮುಲ್ಲಾನಿಗೆ ಅಚ್ಚರಿಯಾಯಿತು. ಅಷ್ಟು ಬೇಗ ಆತ ಎಂದೂ ಎದ್ದಿರಲಿಲ್ಲ. ಅತ್ಯಂತ ಸಂತೋಷದಿಂದ ಎದ್ದು ನಿಧಾನವಾಗಿ ಸ್ನಾನ ಮಾಡಿ, ತನಗೆ ಬೇಕಾದಷ್ಟು ಸಮಯ ತಿಂಡಿ ಸೇವಿಸಿ ತಾನು ಕೆಲಸ ಮಾಡುವ ಅಂಗಡಿಗೆ ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಮುಂಚಿತವಾಗಿ ತಲುಪಿದ. ಅಂಗಡಿ ಯಜಮಾನನ ಬಳಿ ಹೋಗಿ, `ನೋಡಿ, ಕೆಲಸಕ್ಕೆ ಅರ್ಧ ಗಂಟೆ ಮೊದಲೇ ಬಂದಿದ್ದೇನೆ’ ಎಂದ. ಅವನನ್ನು ತಲೆಯಿಂದ ಪಾದದವರೆಗೆ ದಿಟ್ಟಿಸಿದ ಯಜಮಾನ,
`ಅದು ಸರಿ, ನಿನ್ನೆ ಏಕೆ ಕೆಲಸಕ್ಕೆ ಬರಲಿಲ್ಲ?’ ಎಂದು ಕೇಳಿದ.

ಸಾವಿನ ಕಾರಣ
ನಸ್ರುದ್ದೀನ್ ಮಹಾನ್ ಕುಡುಕನಾಗಿದ್ದ. ಅವನ ಪತ್ನಿ ಫಾತಿಮಾ ಕುಡಿತ ಬಿಡುವಂತೆ ಅವನನ್ನು ಯಾವಾಗಲೂ ಒತ್ತಾಯಿಸುತ್ತಿದ್ದಳು. ಒಂದು ದಿನ ವಾರ್ತಾಪತ್ರಿಕೆಯನ್ನು ಅವನ ಮುಂದೆ ಹಿಡಿದು, `ಇಲ್ಲಿ ನೋಡು. ನಿಮ್ಮೂರಿನ ಅಬ್ದುಲ್ಲಾ ಅತಿಯಾಗಿ ಕುಡಿದು ದೋಣಿ ನಡೆಸುವಾಗ ನೀರಿಗೆ ಬಿದ್ದು ಸತ್ತನಂತೆ. ನಿನಗ್ಯಾವಾಗ ಬುದ್ದಿ ಬರುತ್ತದೋ!’ ಎಂದು ಹೇಳಿದಳು.
`ಹೌದೆ? ಕೊಡು ನೋಡೋಣ’ ಎಂದು ನಸ್ರುದ್ದೀನ್ ಪತ್ರಿಕೆ ತೆಗೆದುಕೊಂಡು ಓದಿ, `ಅವನು ನದಿಗೆ ಬಿದ್ದು ಸತ್ತನಲ್ಲವೆ?’ ಎಂದು ಕೇಳಿದ.
`ಹೌದು’ ಎಂದಳು ಫಾತಿಮಾ`
`ಅವನು ನೀರಿಗೆ ಬೀಳುವವರೆಗೂ ಸತ್ತಿರಲಿಲ್ಲ ಅಲ್ಲವೆ?’ 
`ಹೌದು’
`ಹಾಗಾದರೆ, ಅವನನ್ನು ಕೊಂದಿರುವುದು ನೀರೇ ಹೊರತು ಅವನು ಕುಡಿದಿದ್ದ ಮದ್ಯವಲ್ಲ ಬಿಡು’ ಹೇಳಿದ ನಸ್ರುದ್ದೀನ್ ತನ್ನ ಬಾಟಲಿಯನ್ನು ತಡಕಾಡುತ್ತ.

ಬೆದರಿಕೆ ಪತ್ರ
ಮುಲ್ಲಾ ನಸ್ರುದ್ದೀನ್ ಅಂಚೆಕಚೇರಿಗೆ ಧಡಧಡನೆ ನುಗ್ಗಿದ. ಅಂಚೆ ಮಾಸ್ತರರ ಬಳಿ ಹೋಗಿ,
`ನನಗೆ ವಾರಕ್ಕೆರಡು ಬೆದರಿಕೆ ಪತ್ರಗಳು ಬರುತ್ತಿವೆ. ನೀವೇನಾದರೂ ಮಾಡಲೇ ಬೇಕು’ ಎಂದು ಹೇಳಿದ.
`ಹೌದೆ? ಬೆದರಿಕೆ ಪತ್ರ ಬರೆಯುವುದು ಕಾನೂನಿನ್ವಯ ಅಪರಾಧ. ಈ ವಿಷಯವನ್ನು ಪೆÇೀಲೀಸರಿಗೆ ತಿಳಿಸಲೇ ಬೇಕು. ಬೆದರಿಕೆ ಪತ್ರ ಯಾರು ಬರೆಯುತ್ತಿದ್ದಾರೆ ಎಂಬುದು ತಿಳಿದಿದೆಯೆ?’ ಕೇಳಿದರು ಅಂಚೆ ಮಾಸ್ತರು.
`ಕಂದಾಯ ವಸೂಲಿ ಅಧಿಕಾರಿಗಳು’ ಹೇಳಿದ ಮುಲ್ಲಾ.

ಮಾತು
`ನನ್ನ ಹೆಂಡತಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಿರುತ್ತಾಳೆ’ ಹೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ ಒಮ್ಮೆ.
`ನನ್ನ ಹೆಂಡತಿಯೂ ಅಷ್ಟೆ,’ ಹೇಳಿದ ಮುಲ್ಲಾ, `ಆದರೆ ಆಕೆ ನಾನು ಅವುಗಳನ್ನು ಕೇಳಿಸಿಕೊಳ್ಳುತ್ತಿದ್ದೇನೆ ಎಂದು ನಂಬಿಕೊಂಡಿದ್ದಾಳೆ.’  

ಪರಿಣಾಮ
ಒಮ್ಮೆ ಮುಲ್ಲಾ ನಸ್ರುದ್ದೀನ್ ರಸ್ತೆಯ ಬದಿಯಲ್ಲಿ ಬಿದ್ದು ಮೇಲಕ್ಕೇಳಲು ಪ್ರಯತ್ನಿಸುತ್ತಿದ್ದ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಮೌಲ್ವಿ, 
`ಹಾ ನಸ್ರುದ್ದೀನ್! ನನಗೆ ಗೊತ್ತು. ಇದು ಮದ್ಯಪಾನದ ಪರಿಣಾಮವಲ್ಲವೆ?’ ಎಂದು ಕೇಳಿದ.
`ಅಲ್ಲಾ ಮೌಲ್ವಿ. ಇದು ರಸ್ತೆಯ ಮೇಲಿದ್ದ ಬಾಳೆಹಣ್ಣಿನ ಸಿಪ್ಪೆಯ ಪರಿಣಾಮ’ ಹೇಳಿದ ನಸ್ರುದ್ದೀನ್.



ಧರ್ಮೋಪದೇಶ
ನಸ್ರುದ್ದೀನ್ ಮೌಲ್ವಿಯ ಬಳಿ ಬಂದು ತಾನು ತನ್ನನ್ನು ಸಂಪೂರ್ಣವಾಗಿ ಧಾರ್ಮಿಕ ಸೇವೆಗೆ ತೊಡಗಿಸಿಕೊಳ್ಳಲು ಬಯಸಿದ್ದೇನೆಂದು ತಿಳಿಸಿ ತನಗೆ ಧರ್ಮೋಪದೇಶ ಮಾಡುವಂತೆ ಕೇಳಿಕೊಂಡ. ಮುಲ್ಲಾನ ಬಗ್ಗೆ ಚೆನ್ನಾಗಿ ತಿಳಿದಿದ್ದ ಮೌಲ್ವಿ,
`ಒಳ್ಳೆಯ ಆಲೋಚನೆ ಮುಲ್ಲಾ, ಆದರೆ ನೀನು ಇನ್ನು ಮುಂದೆ ಯಾವುದೇ ಪಾಪಗಳನ್ನು ಮಾಡುವುದಿಲ್ಲ ತಾನೆ?’ ಎಂದು ಕೇಳಿದ.
`ಆಯಿತು. ಇನ್ನು ಮೇಲೆ ಯಾವುದೇ ಪಾಪ ಮಾಡುವುದಿಲ್ಲ’ ಹೇಳಿದ ನಸ್ರುದ್ದೀನ್.
`ನೀನು ಮಾಡಿರುವ ಎಲ್ಲ ಸಾಲಗಳನ್ನು ತೀರಿಸಿಬಿಡುವೆಯಾ?’ ಕೇಳಿದ ಮೌಲ್ವಿ.
`ನೋಡಿ. ನಾನು ಧರ್ಮದ ಬಗ್ಗೆ ನಿಮ್ಮನ್ನು ಕೇಳಲು ಬಂದರೆ, ನೀವು ವ್ಯವಹಾರದ ವಿಷಯ ಮಾತನಾಡುತ್ತಿದ್ದೀರ?’ 

ಬಳಲಿಕೆ
ಮುಲ್ಲಾ ನಸ್ರುದ್ದೀನನ ಪತ್ನಿ ಕಳೆದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಳು. ಆ ದಿನ ಚುನಾವಣಾ ಪ್ರಚಾರದ ಕೊನೆಯ ದಿನ. ಪ್ರಚಾರ ಮುಗಿಸಿ ದಂಪತಿಗಳು ಮನೆಗೆ ಹಿಂದಿರುಗಿದರು. 
`ಅಬ್ಬಾ, ನನಗಂತೂ ತುಂಬಾ ಸುಸ್ತಾಗಿದೆ’ ಎಂದ ಮುಲ್ಲಾ.
`ಏನು! ನಿಮಗೆ ಸುಸ್ತಾ? ಇಡೀ ದಿನ ಭಾಷಣಗಳನ್ನು ಮಾಡಿರುವುದು ನಾನು! ಈ ದಿನ ಹದಿನಾಲ್ಕು ಭಾಷಣಗಳನ್ನು ಮಾಡಿದ್ದೇನೆ ಗೊತ್ತಾ?’ ಹೇಳಿದಳು ಮುಲ್ಲಾನ ಪತ್ನಿ.
`ಇರಬಹುದು. ಆ ಎಲ್ಲಾ ಭಾಷಣಗಳನ್ನು ಕೇಳಿಸಿಕೊಂಡವನು ನಾನು. ಇನ್ನು ನನಗೆಷ್ಟು ಸುಸ್ತಾಗಿರಬೇಕು!’ ಹೇಳಿದ ಮುಲ್ಲಾ.

ಪತ್ನಿಯೊಂದಿಗೆ ಜಗಳ
`ಯಾಕೆ ಮುಲ್ಲಾ? ಬೇಸರದಿಂದ್ದೀಯಾ? ಏನು ಸಮಾಚಾರ?’ ಕೇಳಿದ ಮುಲ್ಲಾ ನಸ್ರುದ್ದೀನನ ಗೆಳೆಯ.
`ನಾನೂ ನನ್ನ ಹೆಂಡತಿ ಜಗಳವಾಡಿದೆವು. ಅವಳು ನನ್ನ ಜೊತೆ ಮುವ್ವತ್ತು ದಿನ ಮಾತನಾಡುವುದಿಲ್ಲವೆಂದು ಶಪಥ ಮಾಡಿದಳು,’ ಹೇಳಿದ ಮುಲ್ಲಾ.
`ಹೌದೆ. ಹಾಗಾದರೆ ಸಂತೋಷ ಪಡುವುದು ಬಿಟ್ಟು ಬೇಸರವೇಕೆ?’ ಕೇಳಿದ ಮುಲ್ಲಾನ ಗೆಳೆಯ.
`ಇಂದು ಮುವ್ವತ್ತನೇ ದಿನ, ಅದಕ್ಕೆ’ ಹೇಳಿದ ಮುಲ್ಲಾ ನಸ್ರುದ್ದೀನ್.

ಯಾರಿಗೂ ಹೇಳಬೇಡಿ
ಒಂದು ದಿನ ಮುಲ್ಲಾ ನದಿಯ ದಂಡೆಯಲ್ಲಿ ಓಡಾಡುತ್ತಿದ್ದಾಗ ಯಾರೋ ನೀರಿನಲ್ಲಿ ಮುಳುಗುತ್ತಿದ್ದುದನ್ನು ಕಂಡ. ಕೂಡಲೇ ನೀರಿಗೆ ಹಾರಿ ಆ ವ್ಯಕ್ತಿಯನ್ನು ಕಾಪಾಡಿದ. ಆ ವ್ಯಕ್ತಿ ಆ ಊರಿನ ಅತ್ಯಂತ ಸಿರಿವಂತ ಆದರೆ ಅತ್ಯಂತ ಖಂಜೂಸಿಯೂ ಆಗಿದ್ದ. ಆದರೂ ಆ ವ್ಯಕ್ತಿ ತನ್ನ ಪ್ರಾಣ ಉಳಿಸಿದ ಮುಲ್ಲಾನಿದೆ ಧನ್ಯವಾದಗಳನ್ನು ತಿಳಿಸಿ, `ಮುಲ್ಲಾ ನನ್ನ ಪ್ರಾಣ ಉಳಿಸಿದ್ದೀಯ. ನಿನಗೇನು ಕಾಣಿಕೆ ಕೊಡಲಿ?’ ಎಂದು ಹೇಳಿದ.
`ಸ್ವಾಮಿ ನನಗೆ ನಿಮ್ಮ ಕಾಣಿಕೆ ದಯವಿಟ್ಟು ಬೇಡ. ನೀವು ನನಗೆ ಮಾಡುವ ಉಪಕಾರವೆಂದರೆ, ನಾನು ನಿಮ್ಮ ಪ್ರಾಣ ಉಳಿಸಿದೆ ಎಂದು ಯಾರಲ್ಲೂ ಹೇಳಬೇಡಿ. ಇಲ್ಲದಿದ್ದರೆ ಈ ಊರಿನ ಜನ ನನ್ನ ಪ್ರಾಣ ತೆಗೆದುಬಿಡುತ್ತಾರೆ’ ಕೈ ಮುಗಿಯುತ್ತಾ ಹೇಳಿದ ಮುಲ್ಲಾ.
j.balakrishna@gmail.com





ಶನಿವಾರ, ಜುಲೈ 05, 2014

ಮುಲ್ಲಾ ನಸ್ರುದ್ದೀನ್ ಕತೆಗಳ 29ನೇ ಕಂತು

ಸ್ವರ್ಗ ಮತ್ತು ನರಕ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯ ಮುಂದೆ ಹೋಗುತ್ತಿದ್ದಾಗ ಅಲ್ಲಿದ್ದ ಮೌಲ್ವಿ,
`ಏನಯ್ಯಾ ನಸ್ರುದ್ದೀನ್! ನಿನಗೆ ಮದುವೆಯಾದ ಮೇಲೆ ಬುದ್ಧಿ ಬಂದಿದೆಯಂತೆ? ನಿನಗೆ ಈಗ ಸ್ವರ್ಗ ಹಾಗೂ ನರಕದಲ್ಲಿ ನಂಬಿಕೆ ಬರುವಂತೆ ನಿನ್ನ ಹೆಂಡತಿ ಮಾಡಿದ್ದಾಳಂತೆ?' ಎಂದು ಕೇಳಿದರು.
`ಹೌದು' ಹೇಳಿದ ನಸ್ರುದ್ದೀನ್, `ಅವಳನ್ನು ಮದುವೆಯಾಗುವವರೆಗೂ ನನಗೆ ನರಕ ಎಂದರೇನೆಂದು ತಿಳಿದಿರಲಿಲ್ಲ.'

ತಾಳ್ಮೆ
ಊರಿನ ಚೌಕದ ಮಧ್ಯದಲ್ಲಿ ಚದುರಂಗದಾಟ ನಡೆಯುತ್ತಿತ್ತು. ಮುಲ್ಲಾ ಆಡುತ್ತಿದ್ದವರ ಆಟವನ್ನು ಬಹಳ ಹೊತ್ತಿನಿಂದ ನೋಡುತ್ತಿದ್ದ. ಒಬ್ಬಾತ,
`ಅಲ್ಲಾ ನಸ್ರುದ್ದೀನ್, ಬೆಳಗಿನಿಂದ ನನ್ನ ಹಿಂದೆಯೇ ನಿಂತು ನನ್ನ ಆಟ ನೋಡುತ್ತಿದೀಯಾ? ನೀನು ಏಕೆ ಚದುರಂಗ ಕಲಿತು ಆಡಬಾರದು?' ಎಂದು ಕೇಳಿದ.
`ಹೇ.. ಇಲ್ಲಾ ಬಿಡು. ನನಗೆ ಅಷ್ಟು ತಾಳ್ಮೆ ಇಲ್ಲ' ಹೇಳಿದ ನಸ್ರುದ್ದೀನ್.

ಸಭ್ಯ ನಾಗರಿಕ
ಮುಲ್ಲಾ ಒಮ್ಮೆ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಹೋದ.
`ವೈದ್ಯರೆ ನಾನೊಬ್ಬ ಸಭ್ಯ ನಾಗರಿಕ, ಸದ್ಗುಣ ಗೃಹಸ್ಥ. ನಾನು ಬದುಕಿನಲ್ಲಿ ಒಂದು ಅಪರಾಧವನ್ನೂ ಮಾಡಿಲ್ಲ, ದಿನವೂ ಮಸೀದಿಗೆ ಹೋಗುತ್ತೇನೆ. ಈ ಊರಿನಲ್ಲಿ ನಾನು ಯಾರೊಬ್ಬರೊಂದಿಗೂ ಜಗಳವಾಡಿಲ್ಲ, ನನ್ನ ಬಗ್ಗೆ ಯಾರದೂ ದೂರಿಲ್ಲ. ಆದರೂ, ನನಗೊಂದು ಭ್ರಮೆ ಇದೆ. ನನ್ನಲ್ಲಿ ಅತೀವವಾದ ಹಿಂಸಾ ಮನೋಭಾವವಿದೆ, ಯಾರನ್ನಾದರೂ ಕೊಲೆ ಮಾಡಿಬಿಡುತ್ತೇನೇನೋ ಎನ್ನಿಸುತ್ತಿರುತ್ತದೆ.' ಎಂದು ವೈದ್ಯರಲ್ಲಿ ತನ್ನ ಅಳಲು ತೋಡಿಕೊಂಡ.
`ಚಿಂತಿಸಬೇಡ ನಸ್ರುದ್ದೀನ್, ಆ ಭಾವನೆ ಸಾಮಾನ್ಯವಾದದ್ದು, ಬಹಳಷ್ಟು ಜನರಲ್ಲಿರುತ್ತದೆ. ಅದಕ್ಕೆ ಚಿಕಿತ್ಸೆ ಕೊಡೋಣ, ಅದೇನೂ ದೊಡ್ಡ ಸಮಸ್ಯೆಯಲ್ಲ. ಚಿಕಿತ್ಸೆ ಪ್ರಾರಂಭಿಸುವುದಕ್ಕೆ ಮೊದಲು ನಿನ್ನ ಎಡಗೈಯಲ್ಲಿರುವ ಚಾಕು ಇತ್ತ ಕೊಡು, ಅದನ್ನು ದೂರವಿರಿಸೋಣ' ಎಂದರು ವೈದ್ಯರು.

ಶೋಕ ಸೂಚಕ ಧಿರಿಸು
ಮುಲ್ಲಾ ಒಮ್ಮೆ ಯಾರಾದರೂ ಸತ್ತಾಗ ಧರಿಸುವ ಕಡು ನೀಲಿ ಬಣ್ಣದ ಶೋಕಸೂಚಕ ಧಿರಿಸನ್ನು ಧರಿಸಿ ರಸ್ತೆಯಲ್ಲಿ ಹೋಗುತ್ತಿದ್ದ. ಆತನನ್ನು ನೋಡಿದ ಗೆಳೆಯನೊಬ್ಬ,
`ಏನು ನಸ್ರುದ್ದೀನ್? ಶೋಕ ಸೂಚಕ ವಸ್ತ್ರ ಧರಿಸಿದ್ದೀಯಾ? ಯಾರಾದರು ಸತ್ತು ಹೋಗಿರುವರೇನು?' ಎಂದು ಕೇಳಿದ.
`ಏನೋಪ್ಪ, ಯಾರಿಗೆ ಗೊತ್ತು? ಊರಿನಲ್ಲಿ ಎಷ್ಟೋ ಜನ ಸಾಯುತ್ತಿರುತ್ತಾರೆ. ಆ ಸಾವಿನ ವಿಷಯಗಳೆಲ್ಲಾ ನನಗೆ ತಿಳಿದಿರುವುದಿಲ್ಲವಲ್ಲ. ಯಾವುದಕ್ಕೂ ಇರಲಿ ಎಂದು ಶೋಕ ಸೂಚಕ ವಸ್ತ್ರ ಧರಿಸಿದ್ದೇನೆ' ಎಂದ ನಸ್ರುದ್ದೀನ್.

ಕಳ್ಳ
ರಾತ್ರಿ ಸರಿಹೊತ್ತಿನಲ್ಲಿ ಮುಲ್ಲಾನ ಹೆಂಡತಿ ಫಾತಿಮಾ ಗಂಡನನ್ನು ಎಬ್ಬಿಸಿ,
`ನೋಡಿ, ಏನೋ ಸದ್ದಾಂದಂತಿದೆ. ಮನೆಯೊಳಕ್ಕೆ ಯಾರೋ ಕಳ್ಳರು ಬಂದಿರಬಹುದು!' ಎಂದು ಪಿಸುಗುಟ್ಟಿದಳು.
`ಹೇ, ಯಾರಿಲ್ಲಾ ಸುಮ್ಮನೆ ಮಲಕ್ಕೋ' ಎಂದ ನಿದ್ರೆಯ ಗುಂಗಿನಲ್ಲಿದ್ದ ನಸ್ರುದ್ದೀನ್.
`ನನಗೇನಿಲ್ಲ, ಬೆಳಿಗ್ಗೆ ನಿಮ್ಮ ಅಂಗಿಯ ಕಿಸೆಯಲ್ಲಿ ಹಣವಿಲ್ಲದಿದ್ದರೆ ನನ್ನನ್ನು ದೂರಬಾರದಷ್ಟೇ!' ಹೇಳಿದಳು ಫಾತಿಮಾ.

ಸೋಮಾರಿ
ಆ ದಿನ ಕೆಲಸಕ್ಕೆ ಹೋಗಿದ್ದ ನಸ್ರುದ್ದೀನನ ಹೆಂಡತಿ ಫಾತಿಮಾ ಸಂಜೆ ಮನೆಗೆ ಹಿಂದಿರುಗಿ ಮನೆಯಲ್ಲಿ ಏನೂ ಕೆಲಸ ಮಾಡದೆ ಸೋಮಾರಿಯಾಗಿದ್ದ ಗಂಡನನ್ನು ತರಾಟೆಗೆ ತೆಗೆದುಕೊಂಡಳು.
`ನಿನ್ನಂಥ ಸೋಮಾರಿ, ನಾಲಾಯಕ್, ಉಂಡಾಡಿ ಗುಂಡನಂಥ ಗಂಡನ ಜೊತೆ ಬಾಳುವೆ ಮಾಡುವುದು ಸಾಧ್ಯವೇ ಇಲ್ಲ. ನಿನ್ನ ಬಟ್ಟೆ ಬರೆ ಗಂಟು ಮೂಟೆ ಕಟ್ಟಿ ಹೊರಡು! ಮನೆ ಬಿಟ್ಟು ತೊಲಗು!' ಎಂದು ಸಿಟ್ಟಿನಿಂದ ಬೈದಳು.
`ನೀನೇ ಗಂಟು ಮೂಟೆ ಕಟ್ಟಿಕೊಡು' ಎಂದ ಸೋಮಾರಿ ನಸ್ರುದ್ದೀನ್.

ಅತ್ಯಂತ ಸಂತೋಷದ ದಿನ
ಮುಲ್ಲಾ ನಸ್ರುದ್ದೀನನ ಗೆಳೆಯನ ಮದುವೆ ನಿಶ್ಚಿತವಾಗಿತ್ತು. ಮದುವೆಯ ಹಿಂದಿನ ದಿನ ಅವನು ಮತ್ತು ಅವನ ಗೆಳೆಯ ಇಬ್ಬರೂ ಒಂದು ಬಾಟಲಿ ಮದ್ಯ ತೆಗೆದುಕೊಂಡು ನದಿಯ ದಂಡೆಗೆ ಹೋದರು.
`ನಿನ್ನ ಬದುಕಿನ ಅತ್ಯಂತ ಸಂತೋಷದ ದಿನ ಇಂದು, ಅಭಿನಂದನೆಗಳು ಗೆಳೆಯಾ!' ಹೇಳಿದ ಮುಲ್ಲಾ ಬಾಟಲಿಯಿಂದ ಲೋಟಾಗೆ ಸುರಿಯುತ್ತಾ.
`ಹೇ, ಮುಲ್ಲಾ! ಇನ್ನೂ ಕುಡಿಯಲು ಆರಂಭಿಸಿಯೇ ಇಲ್ಲ, ಆಗಲೇ ನಿನಗೆ ಮತ್ತೇರಿದಂತಿದೆ. ನನ್ನ ಮದುವೆ ನಾಳೆಯಲ್ಲವೆ?' ಹೇಳಿದ ಗೆಳೆಯ.
`ನನಗೆ ಗೊತ್ತಿದೆ', ಹೇಳಿದ ಮುಲ್ಲಾ, `ಅದಕ್ಕೇ ನಾನು ಹೇಳುತ್ತಿರುವುದು ಇಂದು ನಿನ್ನ ಬದುಕಿನ ಅತ್ಯಂತ ಸಂತೋಷದ ದಿನ ಎಂದು.'

ದೇವತೆ
ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯನೊಂದಿಗೆ ತಮ್ಮ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದಾಗ ಆತನ ಗೆಳೆಯಾ,
`ನನ್ನ ಹೆಂಡತಿ ದೇವತೆ ಕಣಯ್ಯಾ!' ಎಂದ.
`ಹೌದೆ? ನನ್ನ ಹೆಂಡತಿ ಇನ್ನೂ ಬದುಕಿದ್ದಾಳೆ' ಹೇಳಿದ ನಸ್ರುದ್ದೀನ್.

ವಾದ ಮತ್ತು ಗೆಲುವು
ಮುಲ್ಲಾ ನಸ್ರುದ್ದೀನನನ್ನು ಯಾವುದೋ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನ್ಯಾಯಾಧೀಶರು ಒಬ್ಬ ಮಹಿಳೆಯಾಗಿದ್ದರು, ಎದುರು ಪಕ್ಷದ ವಕೀಲರೂ ಮಹಿಳೆಯಾಗಿದ್ದರು. ಅದನ್ನು ನೋಡಿದ ಮುಲ್ಲಾ,
`ಕಷ್ಟಕ್ಕೆ ಸಿಕ್ಕಿಹಾಕಿಕೊಂಡೆನಲ್ಲಾ! ಮನೆಯಲ್ಲಿ ಒಬ್ಬ ಹೆಣ್ಣಿನ ಎದುರೇ ಯಾವುದಾದರೂ ಸುಳ್ಳು ಹೇಳಿ, ವಾದ ಮಾಡಿ ಗೆಲ್ಲುವುದೇ ಅಸಾಧ್ಯ. ಇನ್ನು ಇಲ್ಲಿ ಇಬ್ಬರು ಹೆಂಗಸರ ಎದುರು ಸುಳ್ಳು ಹೇಳಿ ವಾದ ಮಾಡುವುದು ಗೆಲ್ಲುವುದಾದರೂ ಹೇಗೆ?' ಎಂದು ಆಲೋಚಿಸಿ ಯಾವುದೇ ವಾದಕ್ಕೆ ಇಳಿಯದೆ, `ನಾನು ಒಪ್ಪಿಕೊಳ್ಳುತ್ತೇನೆ, ತಪ್ಪು ಮಾಡಿದ್ದೇನೆ. ದಯವಿಟ್ಟು ನನಗೆ ಶಿಕ್ಷೆ ಕೊಟ್ಟುಬಿಡಿ' ಎಂದು ಕೈಮುಗಿದು ನಿಂತ.

ಎರಡು ಪ್ರಶ್ನೆಗಳು
ದೇಶದಲ್ಲಿ ಜ್ಯೋತಿಷ್ಯ ಅತ್ಯಂತ ಜನಪ್ರಿಯವಾಗುತ್ತಿದ್ದು ಜ್ಯೋತಿಷಿಗಳು ಸಿಕ್ಕಾಪಟ್ಟೆ ಹಣಮಾಡುವುದನ್ನು ಕಂಡಿದ್ದ ಮುಲ್ಲಾ ನಸ್ರುದ್ದೀನ್ ತಾನೂ ಸಹ ಒಂದು ಅಂಗಡಿ ತೆರೆದು ದೊಡ್ಡ ಫಲಕ ಹಾಕಿಸಿದ, `ಎರಡೇ ಪ್ರಶ್ನೆಗಳಲ್ಲಿ ನಿಮ್ಮ ಭವಿಷ್ಯ ತಿಳಿಯಿರಿ. ಒಂದು ಪ್ರಶ್ನೆಗೆ ಒಂದೇ ಸಾವಿರ ರೂಪಾಯಿ'
ಹಾದಿಯಲ್ಲಿ ಹೋಗುತ್ತಿದ್ದ ಒಬ್ಬಾತ, `ಏನು ಮುಲ್ಲಾ ಒಂದು ಪ್ರಶ್ನೆಗೆ ಒಂದು ಸಾವಿರ ರೂಪಾಯಿ ಹೆಚ್ಚಾಯಿತಲ್ಲವೆ?' ಎಂದು ಕೇಳಿದ.
`ಹೌದು', ಎಂದ ನಸ್ರುದ್ದೀನ್, `ನಿಮ್ಮ ಎರಡನೇ ಪ್ರಶ್ನೆ ಏನು?' ಎಂದು ಕೇಳಿದ.

ಉಯಿಲು
`ಏನು ನಸ್ರುದ್ದೀನ್? ನೀನು ಸತ್ತನಂತರ ನಿನ್ನ ಆಸ್ತಿ ಯಾರಿಗೆ ಹೋಗಬೇಕೆಂದು ಉಯಿಲು ಮಾಡಿದ್ದೀಯಾ?' ಎಂದು ಮುಲ್ಲಾನ ಗೆಳೆಯ ಒಮ್ಮೆ ಕೇಳಿದ.
`ಹೌದು ಉಯಿಲು ಮಾಡಿದ್ದೇನೆ. ನನ್ನ ಪ್ರಾಣ ಹೋಗದಂತೆ ನನ್ನನ್ನು ಯಾವ ವೈದ್ಯ ಕಾಪಾಡುತ್ತಾನೋ ಆತನಿಗೇ ನನ್ನ ಎಲ್ಲಾ ಆಸ್ತಿ ಎಂದು ಉಯಿಲು ಬರೆದಿದ್ದೇನೆ' ಎಂದ ನಸ್ರುದ್ದೀನ್.

ಬುದ್ಧಿವಂತ ವ್ಯಕ್ತಿಯೊಂದಿಗೆ ಮಾತುಕತೆ
ನಸ್ರುದ್ದೀನನಿಗೆ ನಿದ್ರೆಯಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವ ಅಭ್ಯಾಸವಿತ್ತು. ಕೊನೆಗೊಂದು ದಿನ ಅವನ ಹೆಂಡತಿ ಫಾತಿಮಾ ಅವನನ್ನು ವೈದ್ಯರ ಬಳಿ ಕರೆದೊಯ್ದಳು. ಪರೀಕ್ಷಿಸಿದ ವೈದ್ಯರು,
`ಏನು ನಸ್ರುದ್ದೀನ್, ನಿದ್ರೆಯಲ್ಲಿ ಏಕೆ ಮಾತನಾಡುತ್ತೀಯಾ?' ಎಂದು ಕೇಳಿದರು.
`ಅದಕ್ಕೆ ಎರಡು ಕಾರಣಗಳಿವೆ' ಎಂದ ನಸ್ರುದ್ದೀನ್, `ಮೊದಲನೆಯದು, ನನಗೆ ಬುದ್ಧಿವಂತ ವ್ಯಕ್ತಿಗಳೊಂದಿಗೆ ಮಾತನಾಡುವುದು ಇಷ್ಟ. ಎರಡನೆಯದು, ಬುದ್ಧಿವಂತ ವ್ಯಕ್ತಿಗಳ ಮಾತು ಕೇಳುವುದೂ ಇಷ್ಟ.'

ಮುಠ್ಠಾಳ ಸಲಹೆ
ನಸ್ರುದ್ದೀನನನ್ನು ಪರೀಕ್ಷಿಸಿದ ವೈದ್ಯರು, `ಅಲ್ಲಯ್ಯಾ, ನಿನಗೇನು ತಲೆ ಸರಿ ಇದೆಯೆ? ಇಂಥ ಕಾಯಿಲೆ ಇಟ್ಟುಕೊಂಡು ನೀನು ಈ ಮೊದಲೇ ನನ್ನ ಬಳಿ ಏಕೆ ಬರಲಿಲ್ಲಾ? ಹೋಗಲಿ, ಬೇರೆ ಯಾರಾದರೂ ವೈದ್ಯರನ್ನು ಭೇಟಿಯಾಗಿದ್ದೆಯಾ?' ಎಂದು ಸಿಟ್ಟಿನಿಂದ ಕೇಳಿದರು.
`ಇಲ್ಲಾ, ಔಷಧದ ಅಂಗಡಿಯವನನ್ನು ಭೇಟಿಯಾಗಿದ್ದೆ' ಎಂದ ನಸ್ರುದ್ದೀನ್. ವೈದ್ಯರಿಗೆ ಇನ್ನೂ ಸಿಟ್ಟು ಬಂತು.
`ಅಲ್ಲಾ ಅವರಿಗೇನು ತಿಳಿದಿರುತ್ತದೆ. ಜನರು ಎಷ್ಟು ದಡ್ಡರೆನ್ನುವುದು ಇದರಿಂದಲೇ ತಿಳಿಯುತ್ತದೆ. ಹೋಗಲಿ ಆ ಔಷಧ ಅಂಗಡಿಯವನು ನಿನಗೆ ಎಂಥಾ ಮುಠ್ಠಾಳ ಸಲಹೆ ಕೊಟ್ಟಿದ್ದಾನೆ ಹೇಳು ನೋಡೋಣ' ಎಂದರು ವೈದ್ಯರು.
`ಔಷಧ ಅಂಗಡಿಯವನು ನಿಮ್ಮನ್ನು ಭೇಟಿಯಾಗಲು ಸಲಹೆ ಕೊಟ್ಟ' ಹೇಳಿದ ನಸ್ರುದ್ದೀನ್.


ಮುಲ್ಲಾ ನಸ್ರುದ್ದೀನ್ ಕತೆಗಳು- 28ನೇ ಕಂತು


ಮೇ 2014ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 28ನೇ ಕಂತು


 
ಅಭಿಪ್ರಾಯ
ಧರ್ಮ ಗುರು ಊರಿನವರನ್ನೆಲ್ಲಾ ಕರೆಸಿ ತನ್ನ ಬೋಧನೆ ಆರಂಭಿಸಿದ. ಮುಲ್ಲಾ ನಸ್ರುದ್ದೀನ್ ಆ ಊರಿನ ವಿದ್ವಾಂಸನಾಗಿದ್ದುದರಿಂದ ಆತನನ್ನೂ ಸಹ ಕರೆಸಿ ವೇದಿಕೆಯ ಮೇಲೆ ಕೂಡ್ರಿಸಿದ್ದರು. ಧರ್ಮ ಗುರು ತನ್ನ ಭಾಷಣ ಆರಂಭಿಸಿದವರು ನಿಲ್ಲಿಸಲೇ ಇಲ್ಲ. ಮುಲ್ಲಾನಿಗೆ ಆ ಮಾತುಗಳೆಲ್ಲಾ ಬೊಗಳೆ ಎನ್ನಿಸಿ ಬೇಸರವಾಗತೊಡಗಿತು. ವೇದಿಕೆಯ ಮೇಲೆ ಕೂತಿದ್ದುದರಿಂದ ಎದ್ದು ಹೋಗುವಂತೆಯೂ ಇಲ್ಲ. ಬೇಸರದಿಂದಾಗಿ ಜೋರಾಗಿ ಬಾಯಿ ತೆರೆದು ಪದೇ ಪದೇ ಆಕಳಿಸತೊಡಗಿದ. ಕೊನೆಗೆ ಧರ್ಮ ಗುರು ತನ್ನ ಭಾಷಣ ಮುಗಿಸಿದ. ತನ್ನ ಭಾಷಣದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಜನರನ್ನು ಕೇಳಿದ. ಯಾರೂ ಏನೂ ಹೇಳಲಿಲ್ಲ. ಕೊನೆಗೆ ಮುಲ್ಲಾನ ಕಡೆಗೆ ತಿರುಗಿ, `ನೀವು ವಿದ್ವಾಂಸರು, ಎಲ್ಲಾ ತಿಳಿದವರು. ನೀವೂ ಸಹ ನನ್ನ ಭಾಷಣ ಕೇಳಿ ಒಮ್ಮೆಯಾದರೂ ಬಾಯಿ ಬಿಡಲಿಲ್ಲವಲ್ಲಾ?' ಎಂದು ಕೇಳಿದ.
`ಹೇ, ತಮಾಷೆ ಮಾಡಬೇಡಿ. ಬೇಕಾದಷ್ಟು ಸಾರಿ ಬಾಯಿ ಬಿಟ್ಟಿದ್ದೇನೆ. ಬೇಕಾದರೆ ಜನರನ್ನೇ ಕೇಳಿ' ಎಂದ ನಸ್ರುದ್ದೀನ್.

ಗಂಡಸು ಮತ್ತು ಇಲಿ
ಆ ದಿನ ಮುಲ್ಲಾ ನಸ್ರುದ್ದೀನ್ ಗೆಳೆಯರ ಜೊತೆಯಲ್ಲಿ ಹೆಂಡದಂಗಡಿಯಲ್ಲಿ ಕೂತು ಹರಟೆ ಹೊಡೆಯುತ್ತಾ ಮದ್ಯಪಾನ ಮಾಡುತ್ತಿದ್ದ. ಮನೆಗೆ ಹೊರಡಲು ತಡವಾಯಿತೆಂದು ಎದ್ದು ನಿಂತ.
`ಇದೇನು ಮುಲ್ಲಾ? ಹೆಂಡತಿಗೆ ಇಷ್ಟೊಂದು ಹೆದರುತ್ತೀಯ? ನೀನೇನು ಗಂಡಸೋ ಅಥವಾ ಇಲಿಯೋ?' ಎಂದು ಗೆಳೆಯನೊಬ್ಬ ಲೇವಡಿ ಮಾಡಿದ.
`ನಾನು ಗಂಡಸೇ ಕಣೋ. ಆದರೆ ಇಲಿಯಾಗಿದ್ದರೆ ಚೆನ್ನಾಗಿರುತ್ತಿತ್ತು' ಎಂದ ಮುಲ್ಲಾ.
`ಅದೇಕೆ?' ಕೇಳಿದ ಗೆಳೆಯ.
`ಏಕೆಂದರೆ, ನನ್ನ ಹೆಂಡತಿಗೆ ನನ್ನನ್ನು ಕಂಡರೆ ಹೆದರಿಕೆಯಿಲ್ಲ, ಆದರೆ ಇಲಿಗಳನ್ನು ಕಂಡರೆ ಹೆದರಿಕೆ' ಎಂದ ನಸ್ರುದ್ದೀನ್.

ನಿದ್ದೆಗೇಡು
ನಸ್ರುದ್ದೀನ್ ಮಸೀದಿಯ ಮುಂದೆ ಭಿಕ್ಷೆ ಬೇಡುತ್ತಿದ್ದ. `ಸ್ವಾಮಿ, ಐದು ರೂಪಾಯಿ ದಾನ ಮಾಡಿ. ಒಂದು ಲೋಟ ಕಾಫಿ ಕುಡಿಯುತ್ತೇನೆ' ಎಂದು ಮಸೀದಿಯಿಂದ ಹೊರಹೋಗುವವರನ್ನು ಕೇಳುತ್ತಿದ್ದ.
ಆ ದಿನ ಯಾವನೋ ಸಾಹುಕಾರನೊಬ್ಬ ಹೊರಬಂದ, ಜೊತೆಗೆ ಆತ ಸಂತೋಷವಾಗಿಯೂ ಇದ್ದ. `ಸ್ವಾಮಿ, ಐದು ರೂಪಾಯಿ ದಾನ ಮಾಡಿ. ಒಂದು ಲೋಟ ಕಾಫಿ ಕುಡಿಯುತ್ತೇನೆ' ಎಂದು ನಸ್ರುದ್ದೀನ್ ಆತನನ್ನೂ ಕೇಳಿದ.
`ತಗೋ. ಐದು ರೂಪಾಯಿಯೇನು ಐವತ್ತು ರೂಪಾಯಿ ಕೊಡುತ್ತೇನೆ. ಒಂದು ಲೋಟ ಕಾಫಿಯಲ್ಲ ಹತ್ತು ಲೋಟ ಕಾಫಿ ಕುಡಿ' ಎಂದು ಹೇಳಿದ ಆತ ಐವತ್ತು ರೂಪಾಯಿ ದಾನ ಮಾಡಿ ಹೋದ.
ಮರು ದಿನ ಆತ ಮಸೀದಿಯಿಂದ ಹೊರ ಬಂದಾಗ ಹೊರಗೆ ಕಾಯುತ್ತಾ ನಿಂತಿದ್ದ ನಸ್ರುದ್ದೀನ್ ಆತನನ್ನು ನೋಡಿ, `ನಿನ್ನಿಂದ ನನ್ನ ರಾತ್ರಿಯೆಲ್ಲಾ ಹಾಳಾಯಿತು' ಎಂದು ಬಯ್ಯ ತೊಡಗಿದ.
`ಅಲ್ಲಯ್ಯಾ, ನಿನಗೆ ನಿನ್ನೆ ಐವತ್ತು ರೂಪಾಯಿ ದಾನ ಮಾಡಿದ್ದೇನೆ. ನನ್ನನ್ನೇ ಬಯ್ಯುತ್ತಿದ್ದೀಯಲ್ಲಾ? ನಿನಗೇನು ತಲೆ ಕೆಟ್ಟಿದೆಯೆ?' ಎಂದು ಆ ಸಾಹುಕಾರ ಕೇಳಿದ.
`ತಲೆ ಕೆಟ್ಟಿರುವುದು ನನಗಲ್ಲ, ನಿನಗೆ. ನಿನ್ನೆ ನಿನ್ನ ಮಾತು ಕೇಳಿ ಹತ್ತು ಕಾಫಿ ಕುಡಿದೆ. ನನಗೆ ರಾತ್ರಿಯೆಲ್ಲಾ ನಿದ್ರೆಯೇ ಬರಲಿಲ್ಲ...' ಬಯ್ಯುವುದನ್ನು ಮುಂದುವರಿಸಿದ ನಸ್ರುದ್ದೀನ್.

ಸ್ವರ್ಗ ಮತ್ತು ನರಕ
ಮುಲ್ಲಾ ನಸ್ರುದ್ದೀನ್ ಒಂದು ದಿನ ಸತ್ತು ಹೋದ. ಅವನು ಮಾಡಿದ ಪಾಪ ಕಾರ್ಯಗಳಿಂದಾಗಿ ಅವನನ್ನು ನರಕಕ್ಕೆ ಹಾಕಲಾಯಿತು. ಆದರೆ ಅವನಿಗೆ ಅದು ನರಕವೆಂದು ತಿಳಿದಿರಲಿಲ್ಲ. ಅಲ್ಲಿಗೆ ಹೋದಾಗ ಅವನನ್ನು ಸ್ವೀಕರಿಸಲು ಸೈತಾನ ಕಾಯುತ್ತಿದ್ದ.
`ಹಾ! ಅದ್ಭುತವಾಗಿದೆ ಸ್ವರ್ಗ! ನನ್ನ ಬದುಕಿನಲ್ಲಿ ಇಂತಹ ಸುಖ ಎಂದೂ ಕಂಡಿರಲಿಲ್ಲ!' ಎಂದ ಮುಲ್ಲಾ.
`ಲೇ ನಸ್ರುದ್ದೀನ್! ಇದು ಸ್ವರ್ಗವಲ್ಲ, ಇದು ನರಕ!' ಎಂದಿತು ಸೈತಾನ.
`ಇದು ನಿನಗೆ ನರಕವಿರಬಹುದು. ನನಗಿದು ಸ್ವರ್ಗವೇ ಸರಿ. ಏಕೆಂದರೆ ನಾನು ಬಂದಿರುವುದು ಭಾರತದಿಂದ' ಎಂದ ನಸ್ರುದ್ದೀನ್.

ಗಡಿಯಾರ ಮತ್ತು ನಂಬಿಕೆ
ಆ ದಿನ ರಾತ್ರಿ ಮುಲ್ಲಾ ನಸ್ರುದ್ದೀನ್ ಹೆಂಡದಂಗಡಿಯಲ್ಲಿ ಗೆಳೆಯರು ಜೊತೆ ಬಹಳ ಹೊತ್ತು ಕಳೆದು ಮನೆಗೆ ಹಿಂದಿರುಗಿದಾಗ ತಡವಾಗಿತ್ತು. ಹೆಂಡತಿ ಬಾಗಿಲು ತೆರೆಯಲಿಲ್ಲ. `ಈಗ ಸಮಯ ಎಷ್ಟು?' ಒಳಗಿನಿಂದಲೇ ಕೇಳಿದಳು.
`ಹನ್ನೊಂದು ಗಂಟೆ. ನಾನು ಆದಷ್ಟು ಬೇಗ ಮನೆಗೆ ಬಂದಿದ್ದೇನೆ. ಬಾಗಿಲು ತೆಗಿ' ಎಂದ ನಸ್ರುದ್ದೀನ್.
`ಸುಳ್ಳು ಹೇಳಬೇಡ. ಈಗಷ್ಟೇ ಗಡಿಯಾರ ನೋಡಿದೆ, ಈಗ ಹನ್ನೊಂದು ಗಂಟೆಯಲ್ಲಾ, ಬೆಳಗಿನ ಜಾವ ಮೂರೂವರೆ' ಎಂದಳು ಪತ್ನಿ ಒಳಗಿನಿಂದಲೇ.
`ಏನು? ನನ್ನ ಮಾತಿನಲ್ಲಿ ನಂಬಿಕೆಯಿಲ್ಲವೆ? ನಿನಗೆ ನಿನ್ನೆ ಮೊನ್ನೆ ಫುಟ್ಪಾತಿನಲ್ಲಿ ತಂದ ಐವತ್ತು ರೂಪಾಯಿ ಚೀನೀ ಗಡಿಯಾರದ ಮೇಲೆ ನಂಬಿಕೆಯಿದೆ, ಇಪ್ಪತ್ತು ವರ್ಷಗಳಿಂದ ನಿನ್ನ ಗಂಡನಾಗಿರುವ ನನ್ನ ಮಾತಿನಲ್ಲಿ ನಂಬಿಕೆ ಇಲ್ಲವೆ? ಎಂಥ ಹೆಂಡತಿ ನೀನು?' ಗೊಣಗಿದ ನಸ್ರುದ್ದೀನ್.

ಕುಡುಕನ ಮುತ್ತು
ಹಾದಿಹೋಕರೊಬ್ಬರಿಗೆ ಹಾಡ ಹಗಲೇ ಮುತ್ತು ಕೊಟ್ಟದ್ದರಿಂದ ಮುಲ್ಲಾ ನಸ್ರುದ್ದೀನನನ್ನು ನ್ಯಾಯಾಲಯಕ್ಕೆ ಎಳೆದು ತರಲಾಯಿತು. ನ್ಯಾಯಾಧೀಶರು ಮುಲ್ಲಾನ ಆ ರೀತಿಯ ಲಜ್ಜೆಗೇಡಿತನದ ವರ್ತನೆಗೆ ಕಾರಣವೇನೆಂದು ಕೇಳಿದರು.
`ಆ ಯುವತಿ ಅತ್ಯಂತ ಸುಂದರವಾಗಿದ್ದಳು. ನೋಡಿದ ಯಾರಿಗೇ ಆದರೂ ಆಕೆಯನ್ನು ಅಪ್ಪಿ ಮುತ್ತುಕೊಡಬೇಕೆನ್ನಿಸುವಂತಿದ್ದಳು. ನನಗೆ ತಡೆಯಲಾಗಲಿಲ್ಲ, ಆಕೆಯನ್ನು ಅಪ್ಪಿ ಮುತ್ತು ಕೊಟ್ಟೆ' ಎಂದ ನಸ್ರುದ್ದೀನ್.
ನ್ಯಾಯಾಧೀಶರು, `ರಸ್ತೆಯಲ್ಲಿ ಆ ವ್ಯಕ್ತಿಯ ಅನುಮತಿಯಿಲ್ಲದೆ ಮುತ್ತು ಕೊಟ್ಟದ್ದಕ್ಕಾಗಿ ನಿನಗೆ ಐನೂರು ರೂಪಾಯಿಗಳ ದಂಡ ಹಾಗೂ ನೀನು ರಸ್ತೆಯಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮತ್ತೊಂದು ಐನೂರು ರೂಪಾಯಿಗಳ ದಂಡ ವಿಧಿಸುತ್ತಿದ್ದೇನೆ' ಎಂದರು.
`ಆದರೆ... ನಾನು ಕುಡಿದದ್ದು ನಿಮಗೆ ಹೇಗೆ ತಿಳಿಯಿತು?' ಕೇಳಿದ ಅಚ್ಚರಿಯಿಂದ ನಸ್ರುದ್ದೀನ್.
`ಹೇಗೆಂದರೆ? ನೀನು ಸುಂದರಿ ಎಂದುಕೊಂಡು ಮುತ್ತು ಕೊಟ್ಟ ವ್ಯಕ್ತಿ ಹೆಂಗಸಲ್ಲ ಗಂಡಸು' ಎಂದರು ನ್ಯಾಯಾಧೀಶರು.

ಹೇಗೆ ಜೀವಂತವಾಗಿದ್ದೆ?
ಮುಲ್ಲಾ ನಸ್ರುದ್ದೀನ್ ಕೊನೆಗೂ ಒಂದು ದಿನ ಸತ್ತ. ಸ್ವರ್ಗ ಅಥವಾ ನರಕ ಪ್ರವೇಶಿಸುವ ಮುನ್ನ ದ್ವಾರಪಾಲಕರು ಅವನನ್ನು ಬಾಗಿಲಲ್ಲೇ ತಡೆದರು.
`ನಿನ್ನ ಹೆಸರೇನು?' ಕೇಳಿದರು ಅವರು.
`ಮುಲ್ಲಾ ನಸ್ರುದ್ದೀನ್' ಹೇಳಿದ ನಸ್ರುದ್ದೀನ್.
`ನೀನು ಭೂಮಿಯ ಮೇಲೆ ಬದುಕಿದ್ದಾಗ ನಿನಗೆ ಕುಡಿತ, ಜೂಜು ಅಥವಾ ತಂಬಾಕಿನ ಅಭ್ಯಾಸಗಳಿತ್ತೆ?'
`ಇಲ್ಲ ಸ್ವಾಮಿ' ನಮ್ರತೆಯಿಂದ ಹೇಳಿದ ನಸ್ರುದ್ದೀನ್.
`ಎಂದಾದರೂ ಕಳ್ಳತನ ಮಾಡಿದ್ದೆಯಾ? ಸುಳ್ಳು ಹೇಳಿದ್ದೆಯಾ ಅಥವಾ ಯಾರನ್ನಾದರೂ ಕೆಟ್ಟ ಮಾತುಗಳಿಂದ ಬಯ್ದಿದ್ದೆಯಾ?'
`ಎಂದೆಂದಿಗೂ ಇಲ್ಲ ಸ್ವಾಮಿ'.
`ವ್ಯಭಿಚಾರ ಮಾಡಿದ್ದೆಯಾ?'
`ಅಂಥಾ ಆಲೋಚನೆಯೇ ನನಗೆ ಬಂದಿರಲಿಲ್ಲ ಸ್ವಾಮಿ'.
`ಹಾಗಾದರೆ, ಸತ್ತು ಇಲ್ಲಿಗೆ ಬೇಗ ಬರದೆ ಇಷ್ಟು ವರ್ಷ ಅಲ್ಲಿ ಭೂಮಿಯ ಮೇಲೇನು ಮಾಡುತ್ತಿದ್ದೆ?' ಕೇಳಿದರು ದ್ವಾರಪಾಲಕರು.

ವಿವೇಕ
`ಅಪ್ಪಾ, ನನಗೊಂದು ಹೆಣ್ಣು ನೋಡು, ನಾನು ಮದುವೆಯಾಗಬೇಕು' ಎಂದು ಒಂದು ದಿನ ಮುಲ್ಲಾ ನಸ್ರುದ್ದೀನನ ಮಗ ಬಂದು ಕೇಳಿದ.
`ಈಗಲೇ ಬೇಡ ಮಗನೆ, ನಿನಗಿನ್ನೂ ವಿವೇಕ ಬಂದಿಲ್ಲ. ವಿವೇಕ ಬಂದ ನಂತರ ಮದುವೆಯಾಗುವೆಯಂತೆ' ಹೇಳಿದ ಅಪ್ಪ ನಸ್ರುದ್ದೀನ್.
`ನನಗೆ ವಿವೇಕ ಬರುವುದು ಯಾವಾಗ?' ಕೇಳಿದ ಮಗ.
`ಮದುವೆಯಾಗಬೇಕೆಂಬ ಆಲೋಚನೆ ನಿನ್ನ ಮನಸ್ಸಿನಿಂದ ದೂರವಾದಾಗ' ಹೇಳಿದ ನಸ್ರುದ್ದೀನ್.

ತೊಂದರೆ ಪ್ರಾರಂಭವಾಗುವುದರೊಳಗೆ
ದಡಬಡನೆ ಹೆಂಡದಂಗಡಿಯೊಳಕ್ಕೆ ನುಗ್ಗಿದ ನಸ್ರುದ್ದೀನ್, `ಬೇಗ, ಒಂದು ಬಾಟಲಿ ಹೆಂಡ ಕೊಡು. ತೊಂದರೆ ಪ್ರಾರಂಭವಾಗುವುದರೊಳಗೆ ಕುಡಿದು ಬಿಡಬೇಕು' ಎಂದು ಅಂಗಡಿಯಾತನಿಗೆ ಹೇಳಿದ. ಏನೋ ಸಮಸ್ಯೆ ಇರಬಹುದು ಎಂದುಕೊಂಡ ಅಂಗಡಿಯಾತ ತಕ್ಷಣವೇ ಬಾಟಲಿಯೊಂದನ್ನು ಕೊಟ್ಟ. ಗಟಗಟನೆ ಅದನ್ನು ಕುಡಿದು ಖಾಲಿ ಮಾಡಿ ನಿಟ್ಟುಸಿರು ಬಿಟ್ಟ ನಸ್ರುದ್ದೀನ್.
`ಅದೇನೋ ತೊಂದರೆ ಪ್ರಾರಂಭವಾಗುವುದರೊಳಗೆ ಎಂದಿರಲ್ಲಾ? ಏನದು ತೊಂದರೆ? ಯಾವಾಗ ಪ್ರಾರಂಭವಾಗುತ್ತದೆ?' ಕೇಳಿದ ಅಂಗಡಿಯಾತ.
`ತೊಂದರೆ ಈಗಲೇ ಪ್ರಾರಂಭವಾಗುತ್ತದೆ', ಹೇಳಿದ ನಸ್ರುದ್ದೀನ್, `ನಿನಗೆ ಕೊಡಲು ನನ್ನ ಬಳಿ ಹಣವಿಲ್ಲ!'

ಪವಾಡ
ಮುಲ್ಲಾ ನಸ್ರುದ್ದೀನ್ ಒಮ್ಮೆ ಗುಜರಾತಿಗೆ ಹೋಗಬೇಕಾಯಿತು. ಅಲ್ಲಿ ಮದ್ಯಪಾನ ನಿಷೇಧವಿರುವುದರಿಂದ ಅವನಿಗೆ ಹೆಂಡವಿಲ್ಲದೆ ಬದುಕುವುದು ಸಾಧ್ಯವಿರಲಿಲ್ಲ. ಹಾಗಾಗಿ ಒಂದು ಜಾಡಿಯ ತುಂಬ ಹೆಂಡ ತುಂಬಿಕೊಂಡು ಕದ್ದು ಮುಚ್ಚಿ ಕೊಂಡೊಯ್ದಿದ್ದ. ಗಡಿಯಲ್ಲಿ ಅಬಕಾರಿ ಇಲಾಖೆಯವರು ತಪಾಸಣೆಗೆಂದು ತಡೆದರು.
`ಆ ಜಾಡಿಯಲ್ಲಿ ಏನಿದೆ?' ಮುಲ್ಲಾ ನಸ್ರುದ್ದೀನ್ ಬಳಿಯಿದ್ದ ಜಾಡಿಯನ್ನು ನೋಡಿ ಕೇಳಿದರು.
`ನಾನು ತೀರ್ಥ ಯಾತ್ರೆಗೆ ಹೋಗಿದ್ದೆ. ಪವಿತ್ರ ಜಲವನ್ನು ನನ್ನ ಕುಟುಂಬದವರಿಗೆ ನೀಡಲು ಕೊಂಡೊಯ್ಯುತ್ತಿದ್ದೇನೆ' ಎಂದ. ಆದರೂ ಅವರಿಗೆ ಸಂಶಯ. ಜಾಡಿ ತೆರೆಯುವಂತೆ ಹೇಳಿದರು, ವಾಸನೆ ನೋಡಿದರು.
`ಪವಿತ್ರ ಜಲವಲ್ಲ. ಅದರಲ್ಲಿ ಹೆಂಡವಿರುವಂತಿದೆ. ನಿಜ ಹೇಳು. ಅದರಲ್ಲಿ ಏನಿದೆ' ಗದರಿಸಿ ಕೇಳಿದರು.
`ನಾನು ಪವಿತ್ರ ಜಲ ತಂದಿದ್ದೆ. ಅದು ಹೆಂಡವಾಗಿದೆ! ಹಾ! ದೇವರ ಪವಾಡ ನೋಡಿ!' ಹೇಳಿದ ನಸ್ರುದ್ದೀನ್.

ಸೂಚನೆ
ಮುಲ್ಲಾ ನಸ್ರುದ್ದೀನನಿಗೆ ವಿಚಿತ್ರ ಮಾನಸಿಕ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆಗೆಂದು ಮನೋವೈದ್ಯರ ಬಳಿ ಹೋದ. ಅವನನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಅವನು ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಪಟ್ಟಿ ಮಾಡಿ, ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿ ಒಂದು ವಾರದ ನಂತರ ಪುನಃ ಅವರನ್ನು ಭೇಟಿಯಾಗುವಂತೆ ಸೂಚಿಸಿದರು.
            ಹದಿನೈದು ದಿನಗಳಾದರೂ ನಸ್ರುದ್ದೀನ್ ವೈದ್ಯರನ್ನು ಭೇಟಿ ಮಾಡಲು ಬರಲೇ ಇಲ್ಲ. ಒಂದು ದಿನ ಮಾರುಕಟ್ಟೆಯಲ್ಲಿ ವೈದ್ಯರನ್ನು ನೋಡಿದ ನಸ್ರುದ್ದೀನ್ ದೂರ ಓಡಲು ಪ್ರಾರಂಭಿಸಿದ. ಆದರೂ ಬಿಡದ ವೈದ್ಯರು ಅವನನ್ನು ಬೆಂಬತ್ತಿ ಹಿಡಿದು, `ಅಲ್ಲಪ್ಪಾ ನಸ್ರುದ್ದೀನ್ ಹೇಗಿದ್ದೀಯ? ನನ್ನ ಸೂಚನೆಗಳನ್ನೆಲ್ಲಾ ಅನುಸರಿಸುತ್ತಿದ್ದೀಯಾ ತಾನೆ? ಒಂದು ವಾರದ ನಂತರ ಆಸ್ಪತ್ರೆಗೆ ಬಾ ಎಂದರೂ ಏಕೆ ಬರಲಿಲ್ಲ?' ಎಂದು ಕೇಳಿದರು.
`ಕಿರಿಕಿರಿ ಉಂಟುಮಾಡುವ ಜನರಿಂದ ದೂರವಿರು ಎನ್ನುವುದೂ ನಿಮ್ಮ ಸೂಚನೆಗಳಲ್ಲಿ ಒಂದಲ್ಲವೆ, ಅದಕ್ಕೇ ನಿಮ್ಮನ್ನು ಭೇಟಿ ಮಾಡಲು ಬರಲಿಲ್ಲ' ಹೇಳಿದ ನಸ್ರುದ್ದೀನ್ ಅವರಿಂದ ದೂರಕ್ಕೆ ಜಾರಿಕೊಳ್ಳುತ್ತಾ.

ಹಳೆಯವು
ಮುಲ್ಲಾ ನಸ್ರುದ್ದೀನ್ ಹೊಸದೊಂದು ರುಮಾಲು ಕೊಂಡಿದ್ದ. ಅದನ್ನು ಧರಿಸಿ ರಸ್ತೆಯಲ್ಲಿ ಜಂಬದಿಂದ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು. ತನ್ನ ಹೊಸ ರುಮಾಲು ನೆನೆಯುವುದೆಂದು ಚಿಂತಿಸಿದ ನಸ್ರುದ್ದೀನ್ ತಕ್ಷಣ ತೊಟ್ಟಿದ್ದ ತನ್ನ ನಿಲುವಂಗಿಯನ್ನು ಹಾಗೆಯೇ ಎತ್ತಿ ತಲೆಯ ಮೇಲೆ ಹೊದ್ದುಕೊಂಡ. ಊರಿನ ಜನಕ್ಕೆಲ್ಲಾ ಅವನ ಅಂಗಾಂಗಗಳ ಪ್ರದರ್ಶನವಾಯಿತು. ಕಿಡಿಗೇಡಿಯೊಬ್ಬ,
`ಏನು ಮುಲ್ಲಾ, ಮಳೆಗೆ ನಿನ್ನ ಅಂಗಾಂಗಗಳೆಲ್ಲಾ ತೊಯ್ಯುತ್ತಿವೆ!' ಎಂದ.
`ತೊಯ್ಯಲಿ ಬಿಡು. ನನ್ನ ರುಮಾಲು ಹೊಸದು, ಅದು ನೆನೆಯಬಾರದು. ನನ್ನ ಅಂಗಾಂಗಗಳು ಹಳೆಯವು, ಅವು ತೊಯ್ದರೆ ಪರವಾಗಿಲ್ಲ' ಹೇಳಿದ ನಸ್ರುದ್ದೀನ್.