ಶನಿವಾರ, ಜುಲೈ 05, 2014

ಮುಲ್ಲಾ ನಸ್ರುದ್ದೀನ್ ಕತೆಗಳ 29ನೇ ಕಂತು

ಸ್ವರ್ಗ ಮತ್ತು ನರಕ
ಒಂದು ದಿನ ಮುಲ್ಲಾ ನಸ್ರುದ್ದೀನ್ ಮಸೀದಿಯ ಮುಂದೆ ಹೋಗುತ್ತಿದ್ದಾಗ ಅಲ್ಲಿದ್ದ ಮೌಲ್ವಿ,
`ಏನಯ್ಯಾ ನಸ್ರುದ್ದೀನ್! ನಿನಗೆ ಮದುವೆಯಾದ ಮೇಲೆ ಬುದ್ಧಿ ಬಂದಿದೆಯಂತೆ? ನಿನಗೆ ಈಗ ಸ್ವರ್ಗ ಹಾಗೂ ನರಕದಲ್ಲಿ ನಂಬಿಕೆ ಬರುವಂತೆ ನಿನ್ನ ಹೆಂಡತಿ ಮಾಡಿದ್ದಾಳಂತೆ?' ಎಂದು ಕೇಳಿದರು.
`ಹೌದು' ಹೇಳಿದ ನಸ್ರುದ್ದೀನ್, `ಅವಳನ್ನು ಮದುವೆಯಾಗುವವರೆಗೂ ನನಗೆ ನರಕ ಎಂದರೇನೆಂದು ತಿಳಿದಿರಲಿಲ್ಲ.'

ತಾಳ್ಮೆ
ಊರಿನ ಚೌಕದ ಮಧ್ಯದಲ್ಲಿ ಚದುರಂಗದಾಟ ನಡೆಯುತ್ತಿತ್ತು. ಮುಲ್ಲಾ ಆಡುತ್ತಿದ್ದವರ ಆಟವನ್ನು ಬಹಳ ಹೊತ್ತಿನಿಂದ ನೋಡುತ್ತಿದ್ದ. ಒಬ್ಬಾತ,
`ಅಲ್ಲಾ ನಸ್ರುದ್ದೀನ್, ಬೆಳಗಿನಿಂದ ನನ್ನ ಹಿಂದೆಯೇ ನಿಂತು ನನ್ನ ಆಟ ನೋಡುತ್ತಿದೀಯಾ? ನೀನು ಏಕೆ ಚದುರಂಗ ಕಲಿತು ಆಡಬಾರದು?' ಎಂದು ಕೇಳಿದ.
`ಹೇ.. ಇಲ್ಲಾ ಬಿಡು. ನನಗೆ ಅಷ್ಟು ತಾಳ್ಮೆ ಇಲ್ಲ' ಹೇಳಿದ ನಸ್ರುದ್ದೀನ್.

ಸಭ್ಯ ನಾಗರಿಕ
ಮುಲ್ಲಾ ಒಮ್ಮೆ ಮನೋವೈದ್ಯರ ಬಳಿ ಚಿಕಿತ್ಸೆಗೆಂದು ಹೋದ.
`ವೈದ್ಯರೆ ನಾನೊಬ್ಬ ಸಭ್ಯ ನಾಗರಿಕ, ಸದ್ಗುಣ ಗೃಹಸ್ಥ. ನಾನು ಬದುಕಿನಲ್ಲಿ ಒಂದು ಅಪರಾಧವನ್ನೂ ಮಾಡಿಲ್ಲ, ದಿನವೂ ಮಸೀದಿಗೆ ಹೋಗುತ್ತೇನೆ. ಈ ಊರಿನಲ್ಲಿ ನಾನು ಯಾರೊಬ್ಬರೊಂದಿಗೂ ಜಗಳವಾಡಿಲ್ಲ, ನನ್ನ ಬಗ್ಗೆ ಯಾರದೂ ದೂರಿಲ್ಲ. ಆದರೂ, ನನಗೊಂದು ಭ್ರಮೆ ಇದೆ. ನನ್ನಲ್ಲಿ ಅತೀವವಾದ ಹಿಂಸಾ ಮನೋಭಾವವಿದೆ, ಯಾರನ್ನಾದರೂ ಕೊಲೆ ಮಾಡಿಬಿಡುತ್ತೇನೇನೋ ಎನ್ನಿಸುತ್ತಿರುತ್ತದೆ.' ಎಂದು ವೈದ್ಯರಲ್ಲಿ ತನ್ನ ಅಳಲು ತೋಡಿಕೊಂಡ.
`ಚಿಂತಿಸಬೇಡ ನಸ್ರುದ್ದೀನ್, ಆ ಭಾವನೆ ಸಾಮಾನ್ಯವಾದದ್ದು, ಬಹಳಷ್ಟು ಜನರಲ್ಲಿರುತ್ತದೆ. ಅದಕ್ಕೆ ಚಿಕಿತ್ಸೆ ಕೊಡೋಣ, ಅದೇನೂ ದೊಡ್ಡ ಸಮಸ್ಯೆಯಲ್ಲ. ಚಿಕಿತ್ಸೆ ಪ್ರಾರಂಭಿಸುವುದಕ್ಕೆ ಮೊದಲು ನಿನ್ನ ಎಡಗೈಯಲ್ಲಿರುವ ಚಾಕು ಇತ್ತ ಕೊಡು, ಅದನ್ನು ದೂರವಿರಿಸೋಣ' ಎಂದರು ವೈದ್ಯರು.

ಶೋಕ ಸೂಚಕ ಧಿರಿಸು
ಮುಲ್ಲಾ ಒಮ್ಮೆ ಯಾರಾದರೂ ಸತ್ತಾಗ ಧರಿಸುವ ಕಡು ನೀಲಿ ಬಣ್ಣದ ಶೋಕಸೂಚಕ ಧಿರಿಸನ್ನು ಧರಿಸಿ ರಸ್ತೆಯಲ್ಲಿ ಹೋಗುತ್ತಿದ್ದ. ಆತನನ್ನು ನೋಡಿದ ಗೆಳೆಯನೊಬ್ಬ,
`ಏನು ನಸ್ರುದ್ದೀನ್? ಶೋಕ ಸೂಚಕ ವಸ್ತ್ರ ಧರಿಸಿದ್ದೀಯಾ? ಯಾರಾದರು ಸತ್ತು ಹೋಗಿರುವರೇನು?' ಎಂದು ಕೇಳಿದ.
`ಏನೋಪ್ಪ, ಯಾರಿಗೆ ಗೊತ್ತು? ಊರಿನಲ್ಲಿ ಎಷ್ಟೋ ಜನ ಸಾಯುತ್ತಿರುತ್ತಾರೆ. ಆ ಸಾವಿನ ವಿಷಯಗಳೆಲ್ಲಾ ನನಗೆ ತಿಳಿದಿರುವುದಿಲ್ಲವಲ್ಲ. ಯಾವುದಕ್ಕೂ ಇರಲಿ ಎಂದು ಶೋಕ ಸೂಚಕ ವಸ್ತ್ರ ಧರಿಸಿದ್ದೇನೆ' ಎಂದ ನಸ್ರುದ್ದೀನ್.

ಕಳ್ಳ
ರಾತ್ರಿ ಸರಿಹೊತ್ತಿನಲ್ಲಿ ಮುಲ್ಲಾನ ಹೆಂಡತಿ ಫಾತಿಮಾ ಗಂಡನನ್ನು ಎಬ್ಬಿಸಿ,
`ನೋಡಿ, ಏನೋ ಸದ್ದಾಂದಂತಿದೆ. ಮನೆಯೊಳಕ್ಕೆ ಯಾರೋ ಕಳ್ಳರು ಬಂದಿರಬಹುದು!' ಎಂದು ಪಿಸುಗುಟ್ಟಿದಳು.
`ಹೇ, ಯಾರಿಲ್ಲಾ ಸುಮ್ಮನೆ ಮಲಕ್ಕೋ' ಎಂದ ನಿದ್ರೆಯ ಗುಂಗಿನಲ್ಲಿದ್ದ ನಸ್ರುದ್ದೀನ್.
`ನನಗೇನಿಲ್ಲ, ಬೆಳಿಗ್ಗೆ ನಿಮ್ಮ ಅಂಗಿಯ ಕಿಸೆಯಲ್ಲಿ ಹಣವಿಲ್ಲದಿದ್ದರೆ ನನ್ನನ್ನು ದೂರಬಾರದಷ್ಟೇ!' ಹೇಳಿದಳು ಫಾತಿಮಾ.

ಸೋಮಾರಿ
ಆ ದಿನ ಕೆಲಸಕ್ಕೆ ಹೋಗಿದ್ದ ನಸ್ರುದ್ದೀನನ ಹೆಂಡತಿ ಫಾತಿಮಾ ಸಂಜೆ ಮನೆಗೆ ಹಿಂದಿರುಗಿ ಮನೆಯಲ್ಲಿ ಏನೂ ಕೆಲಸ ಮಾಡದೆ ಸೋಮಾರಿಯಾಗಿದ್ದ ಗಂಡನನ್ನು ತರಾಟೆಗೆ ತೆಗೆದುಕೊಂಡಳು.
`ನಿನ್ನಂಥ ಸೋಮಾರಿ, ನಾಲಾಯಕ್, ಉಂಡಾಡಿ ಗುಂಡನಂಥ ಗಂಡನ ಜೊತೆ ಬಾಳುವೆ ಮಾಡುವುದು ಸಾಧ್ಯವೇ ಇಲ್ಲ. ನಿನ್ನ ಬಟ್ಟೆ ಬರೆ ಗಂಟು ಮೂಟೆ ಕಟ್ಟಿ ಹೊರಡು! ಮನೆ ಬಿಟ್ಟು ತೊಲಗು!' ಎಂದು ಸಿಟ್ಟಿನಿಂದ ಬೈದಳು.
`ನೀನೇ ಗಂಟು ಮೂಟೆ ಕಟ್ಟಿಕೊಡು' ಎಂದ ಸೋಮಾರಿ ನಸ್ರುದ್ದೀನ್.

ಅತ್ಯಂತ ಸಂತೋಷದ ದಿನ
ಮುಲ್ಲಾ ನಸ್ರುದ್ದೀನನ ಗೆಳೆಯನ ಮದುವೆ ನಿಶ್ಚಿತವಾಗಿತ್ತು. ಮದುವೆಯ ಹಿಂದಿನ ದಿನ ಅವನು ಮತ್ತು ಅವನ ಗೆಳೆಯ ಇಬ್ಬರೂ ಒಂದು ಬಾಟಲಿ ಮದ್ಯ ತೆಗೆದುಕೊಂಡು ನದಿಯ ದಂಡೆಗೆ ಹೋದರು.
`ನಿನ್ನ ಬದುಕಿನ ಅತ್ಯಂತ ಸಂತೋಷದ ದಿನ ಇಂದು, ಅಭಿನಂದನೆಗಳು ಗೆಳೆಯಾ!' ಹೇಳಿದ ಮುಲ್ಲಾ ಬಾಟಲಿಯಿಂದ ಲೋಟಾಗೆ ಸುರಿಯುತ್ತಾ.
`ಹೇ, ಮುಲ್ಲಾ! ಇನ್ನೂ ಕುಡಿಯಲು ಆರಂಭಿಸಿಯೇ ಇಲ್ಲ, ಆಗಲೇ ನಿನಗೆ ಮತ್ತೇರಿದಂತಿದೆ. ನನ್ನ ಮದುವೆ ನಾಳೆಯಲ್ಲವೆ?' ಹೇಳಿದ ಗೆಳೆಯ.
`ನನಗೆ ಗೊತ್ತಿದೆ', ಹೇಳಿದ ಮುಲ್ಲಾ, `ಅದಕ್ಕೇ ನಾನು ಹೇಳುತ್ತಿರುವುದು ಇಂದು ನಿನ್ನ ಬದುಕಿನ ಅತ್ಯಂತ ಸಂತೋಷದ ದಿನ ಎಂದು.'

ದೇವತೆ
ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯನೊಂದಿಗೆ ತಮ್ಮ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದಾಗ ಆತನ ಗೆಳೆಯಾ,
`ನನ್ನ ಹೆಂಡತಿ ದೇವತೆ ಕಣಯ್ಯಾ!' ಎಂದ.
`ಹೌದೆ? ನನ್ನ ಹೆಂಡತಿ ಇನ್ನೂ ಬದುಕಿದ್ದಾಳೆ' ಹೇಳಿದ ನಸ್ರುದ್ದೀನ್.

ವಾದ ಮತ್ತು ಗೆಲುವು
ಮುಲ್ಲಾ ನಸ್ರುದ್ದೀನನನ್ನು ಯಾವುದೋ ಅಪರಾಧಕ್ಕಾಗಿ ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು. ಅಲ್ಲಿ ನ್ಯಾಯಾಧೀಶರು ಒಬ್ಬ ಮಹಿಳೆಯಾಗಿದ್ದರು, ಎದುರು ಪಕ್ಷದ ವಕೀಲರೂ ಮಹಿಳೆಯಾಗಿದ್ದರು. ಅದನ್ನು ನೋಡಿದ ಮುಲ್ಲಾ,
`ಕಷ್ಟಕ್ಕೆ ಸಿಕ್ಕಿಹಾಕಿಕೊಂಡೆನಲ್ಲಾ! ಮನೆಯಲ್ಲಿ ಒಬ್ಬ ಹೆಣ್ಣಿನ ಎದುರೇ ಯಾವುದಾದರೂ ಸುಳ್ಳು ಹೇಳಿ, ವಾದ ಮಾಡಿ ಗೆಲ್ಲುವುದೇ ಅಸಾಧ್ಯ. ಇನ್ನು ಇಲ್ಲಿ ಇಬ್ಬರು ಹೆಂಗಸರ ಎದುರು ಸುಳ್ಳು ಹೇಳಿ ವಾದ ಮಾಡುವುದು ಗೆಲ್ಲುವುದಾದರೂ ಹೇಗೆ?' ಎಂದು ಆಲೋಚಿಸಿ ಯಾವುದೇ ವಾದಕ್ಕೆ ಇಳಿಯದೆ, `ನಾನು ಒಪ್ಪಿಕೊಳ್ಳುತ್ತೇನೆ, ತಪ್ಪು ಮಾಡಿದ್ದೇನೆ. ದಯವಿಟ್ಟು ನನಗೆ ಶಿಕ್ಷೆ ಕೊಟ್ಟುಬಿಡಿ' ಎಂದು ಕೈಮುಗಿದು ನಿಂತ.

ಎರಡು ಪ್ರಶ್ನೆಗಳು
ದೇಶದಲ್ಲಿ ಜ್ಯೋತಿಷ್ಯ ಅತ್ಯಂತ ಜನಪ್ರಿಯವಾಗುತ್ತಿದ್ದು ಜ್ಯೋತಿಷಿಗಳು ಸಿಕ್ಕಾಪಟ್ಟೆ ಹಣಮಾಡುವುದನ್ನು ಕಂಡಿದ್ದ ಮುಲ್ಲಾ ನಸ್ರುದ್ದೀನ್ ತಾನೂ ಸಹ ಒಂದು ಅಂಗಡಿ ತೆರೆದು ದೊಡ್ಡ ಫಲಕ ಹಾಕಿಸಿದ, `ಎರಡೇ ಪ್ರಶ್ನೆಗಳಲ್ಲಿ ನಿಮ್ಮ ಭವಿಷ್ಯ ತಿಳಿಯಿರಿ. ಒಂದು ಪ್ರಶ್ನೆಗೆ ಒಂದೇ ಸಾವಿರ ರೂಪಾಯಿ'
ಹಾದಿಯಲ್ಲಿ ಹೋಗುತ್ತಿದ್ದ ಒಬ್ಬಾತ, `ಏನು ಮುಲ್ಲಾ ಒಂದು ಪ್ರಶ್ನೆಗೆ ಒಂದು ಸಾವಿರ ರೂಪಾಯಿ ಹೆಚ್ಚಾಯಿತಲ್ಲವೆ?' ಎಂದು ಕೇಳಿದ.
`ಹೌದು', ಎಂದ ನಸ್ರುದ್ದೀನ್, `ನಿಮ್ಮ ಎರಡನೇ ಪ್ರಶ್ನೆ ಏನು?' ಎಂದು ಕೇಳಿದ.

ಉಯಿಲು
`ಏನು ನಸ್ರುದ್ದೀನ್? ನೀನು ಸತ್ತನಂತರ ನಿನ್ನ ಆಸ್ತಿ ಯಾರಿಗೆ ಹೋಗಬೇಕೆಂದು ಉಯಿಲು ಮಾಡಿದ್ದೀಯಾ?' ಎಂದು ಮುಲ್ಲಾನ ಗೆಳೆಯ ಒಮ್ಮೆ ಕೇಳಿದ.
`ಹೌದು ಉಯಿಲು ಮಾಡಿದ್ದೇನೆ. ನನ್ನ ಪ್ರಾಣ ಹೋಗದಂತೆ ನನ್ನನ್ನು ಯಾವ ವೈದ್ಯ ಕಾಪಾಡುತ್ತಾನೋ ಆತನಿಗೇ ನನ್ನ ಎಲ್ಲಾ ಆಸ್ತಿ ಎಂದು ಉಯಿಲು ಬರೆದಿದ್ದೇನೆ' ಎಂದ ನಸ್ರುದ್ದೀನ್.

ಬುದ್ಧಿವಂತ ವ್ಯಕ್ತಿಯೊಂದಿಗೆ ಮಾತುಕತೆ
ನಸ್ರುದ್ದೀನನಿಗೆ ನಿದ್ರೆಯಲ್ಲಿ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುವ ಅಭ್ಯಾಸವಿತ್ತು. ಕೊನೆಗೊಂದು ದಿನ ಅವನ ಹೆಂಡತಿ ಫಾತಿಮಾ ಅವನನ್ನು ವೈದ್ಯರ ಬಳಿ ಕರೆದೊಯ್ದಳು. ಪರೀಕ್ಷಿಸಿದ ವೈದ್ಯರು,
`ಏನು ನಸ್ರುದ್ದೀನ್, ನಿದ್ರೆಯಲ್ಲಿ ಏಕೆ ಮಾತನಾಡುತ್ತೀಯಾ?' ಎಂದು ಕೇಳಿದರು.
`ಅದಕ್ಕೆ ಎರಡು ಕಾರಣಗಳಿವೆ' ಎಂದ ನಸ್ರುದ್ದೀನ್, `ಮೊದಲನೆಯದು, ನನಗೆ ಬುದ್ಧಿವಂತ ವ್ಯಕ್ತಿಗಳೊಂದಿಗೆ ಮಾತನಾಡುವುದು ಇಷ್ಟ. ಎರಡನೆಯದು, ಬುದ್ಧಿವಂತ ವ್ಯಕ್ತಿಗಳ ಮಾತು ಕೇಳುವುದೂ ಇಷ್ಟ.'

ಮುಠ್ಠಾಳ ಸಲಹೆ
ನಸ್ರುದ್ದೀನನನ್ನು ಪರೀಕ್ಷಿಸಿದ ವೈದ್ಯರು, `ಅಲ್ಲಯ್ಯಾ, ನಿನಗೇನು ತಲೆ ಸರಿ ಇದೆಯೆ? ಇಂಥ ಕಾಯಿಲೆ ಇಟ್ಟುಕೊಂಡು ನೀನು ಈ ಮೊದಲೇ ನನ್ನ ಬಳಿ ಏಕೆ ಬರಲಿಲ್ಲಾ? ಹೋಗಲಿ, ಬೇರೆ ಯಾರಾದರೂ ವೈದ್ಯರನ್ನು ಭೇಟಿಯಾಗಿದ್ದೆಯಾ?' ಎಂದು ಸಿಟ್ಟಿನಿಂದ ಕೇಳಿದರು.
`ಇಲ್ಲಾ, ಔಷಧದ ಅಂಗಡಿಯವನನ್ನು ಭೇಟಿಯಾಗಿದ್ದೆ' ಎಂದ ನಸ್ರುದ್ದೀನ್. ವೈದ್ಯರಿಗೆ ಇನ್ನೂ ಸಿಟ್ಟು ಬಂತು.
`ಅಲ್ಲಾ ಅವರಿಗೇನು ತಿಳಿದಿರುತ್ತದೆ. ಜನರು ಎಷ್ಟು ದಡ್ಡರೆನ್ನುವುದು ಇದರಿಂದಲೇ ತಿಳಿಯುತ್ತದೆ. ಹೋಗಲಿ ಆ ಔಷಧ ಅಂಗಡಿಯವನು ನಿನಗೆ ಎಂಥಾ ಮುಠ್ಠಾಳ ಸಲಹೆ ಕೊಟ್ಟಿದ್ದಾನೆ ಹೇಳು ನೋಡೋಣ' ಎಂದರು ವೈದ್ಯರು.
`ಔಷಧ ಅಂಗಡಿಯವನು ನಿಮ್ಮನ್ನು ಭೇಟಿಯಾಗಲು ಸಲಹೆ ಕೊಟ್ಟ' ಹೇಳಿದ ನಸ್ರುದ್ದೀನ್.


ಕಾಮೆಂಟ್‌ಗಳಿಲ್ಲ: