ಶನಿವಾರ, ಜುಲೈ 05, 2014

ಮುಲ್ಲಾ ನಸ್ರುದ್ದೀನ್ ಕತೆಗಳು- 28ನೇ ಕಂತು


ಮೇ 2014ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾಗಿರುವ ಮುಲ್ಲಾ ನಸ್ರುದ್ದೀನ್ ಕತೆಗಳ 28ನೇ ಕಂತು


 
ಅಭಿಪ್ರಾಯ
ಧರ್ಮ ಗುರು ಊರಿನವರನ್ನೆಲ್ಲಾ ಕರೆಸಿ ತನ್ನ ಬೋಧನೆ ಆರಂಭಿಸಿದ. ಮುಲ್ಲಾ ನಸ್ರುದ್ದೀನ್ ಆ ಊರಿನ ವಿದ್ವಾಂಸನಾಗಿದ್ದುದರಿಂದ ಆತನನ್ನೂ ಸಹ ಕರೆಸಿ ವೇದಿಕೆಯ ಮೇಲೆ ಕೂಡ್ರಿಸಿದ್ದರು. ಧರ್ಮ ಗುರು ತನ್ನ ಭಾಷಣ ಆರಂಭಿಸಿದವರು ನಿಲ್ಲಿಸಲೇ ಇಲ್ಲ. ಮುಲ್ಲಾನಿಗೆ ಆ ಮಾತುಗಳೆಲ್ಲಾ ಬೊಗಳೆ ಎನ್ನಿಸಿ ಬೇಸರವಾಗತೊಡಗಿತು. ವೇದಿಕೆಯ ಮೇಲೆ ಕೂತಿದ್ದುದರಿಂದ ಎದ್ದು ಹೋಗುವಂತೆಯೂ ಇಲ್ಲ. ಬೇಸರದಿಂದಾಗಿ ಜೋರಾಗಿ ಬಾಯಿ ತೆರೆದು ಪದೇ ಪದೇ ಆಕಳಿಸತೊಡಗಿದ. ಕೊನೆಗೆ ಧರ್ಮ ಗುರು ತನ್ನ ಭಾಷಣ ಮುಗಿಸಿದ. ತನ್ನ ಭಾಷಣದ ಬಗ್ಗೆ ಅಭಿಪ್ರಾಯ ತಿಳಿಸುವಂತೆ ಜನರನ್ನು ಕೇಳಿದ. ಯಾರೂ ಏನೂ ಹೇಳಲಿಲ್ಲ. ಕೊನೆಗೆ ಮುಲ್ಲಾನ ಕಡೆಗೆ ತಿರುಗಿ, `ನೀವು ವಿದ್ವಾಂಸರು, ಎಲ್ಲಾ ತಿಳಿದವರು. ನೀವೂ ಸಹ ನನ್ನ ಭಾಷಣ ಕೇಳಿ ಒಮ್ಮೆಯಾದರೂ ಬಾಯಿ ಬಿಡಲಿಲ್ಲವಲ್ಲಾ?' ಎಂದು ಕೇಳಿದ.
`ಹೇ, ತಮಾಷೆ ಮಾಡಬೇಡಿ. ಬೇಕಾದಷ್ಟು ಸಾರಿ ಬಾಯಿ ಬಿಟ್ಟಿದ್ದೇನೆ. ಬೇಕಾದರೆ ಜನರನ್ನೇ ಕೇಳಿ' ಎಂದ ನಸ್ರುದ್ದೀನ್.

ಗಂಡಸು ಮತ್ತು ಇಲಿ
ಆ ದಿನ ಮುಲ್ಲಾ ನಸ್ರುದ್ದೀನ್ ಗೆಳೆಯರ ಜೊತೆಯಲ್ಲಿ ಹೆಂಡದಂಗಡಿಯಲ್ಲಿ ಕೂತು ಹರಟೆ ಹೊಡೆಯುತ್ತಾ ಮದ್ಯಪಾನ ಮಾಡುತ್ತಿದ್ದ. ಮನೆಗೆ ಹೊರಡಲು ತಡವಾಯಿತೆಂದು ಎದ್ದು ನಿಂತ.
`ಇದೇನು ಮುಲ್ಲಾ? ಹೆಂಡತಿಗೆ ಇಷ್ಟೊಂದು ಹೆದರುತ್ತೀಯ? ನೀನೇನು ಗಂಡಸೋ ಅಥವಾ ಇಲಿಯೋ?' ಎಂದು ಗೆಳೆಯನೊಬ್ಬ ಲೇವಡಿ ಮಾಡಿದ.
`ನಾನು ಗಂಡಸೇ ಕಣೋ. ಆದರೆ ಇಲಿಯಾಗಿದ್ದರೆ ಚೆನ್ನಾಗಿರುತ್ತಿತ್ತು' ಎಂದ ಮುಲ್ಲಾ.
`ಅದೇಕೆ?' ಕೇಳಿದ ಗೆಳೆಯ.
`ಏಕೆಂದರೆ, ನನ್ನ ಹೆಂಡತಿಗೆ ನನ್ನನ್ನು ಕಂಡರೆ ಹೆದರಿಕೆಯಿಲ್ಲ, ಆದರೆ ಇಲಿಗಳನ್ನು ಕಂಡರೆ ಹೆದರಿಕೆ' ಎಂದ ನಸ್ರುದ್ದೀನ್.

ನಿದ್ದೆಗೇಡು
ನಸ್ರುದ್ದೀನ್ ಮಸೀದಿಯ ಮುಂದೆ ಭಿಕ್ಷೆ ಬೇಡುತ್ತಿದ್ದ. `ಸ್ವಾಮಿ, ಐದು ರೂಪಾಯಿ ದಾನ ಮಾಡಿ. ಒಂದು ಲೋಟ ಕಾಫಿ ಕುಡಿಯುತ್ತೇನೆ' ಎಂದು ಮಸೀದಿಯಿಂದ ಹೊರಹೋಗುವವರನ್ನು ಕೇಳುತ್ತಿದ್ದ.
ಆ ದಿನ ಯಾವನೋ ಸಾಹುಕಾರನೊಬ್ಬ ಹೊರಬಂದ, ಜೊತೆಗೆ ಆತ ಸಂತೋಷವಾಗಿಯೂ ಇದ್ದ. `ಸ್ವಾಮಿ, ಐದು ರೂಪಾಯಿ ದಾನ ಮಾಡಿ. ಒಂದು ಲೋಟ ಕಾಫಿ ಕುಡಿಯುತ್ತೇನೆ' ಎಂದು ನಸ್ರುದ್ದೀನ್ ಆತನನ್ನೂ ಕೇಳಿದ.
`ತಗೋ. ಐದು ರೂಪಾಯಿಯೇನು ಐವತ್ತು ರೂಪಾಯಿ ಕೊಡುತ್ತೇನೆ. ಒಂದು ಲೋಟ ಕಾಫಿಯಲ್ಲ ಹತ್ತು ಲೋಟ ಕಾಫಿ ಕುಡಿ' ಎಂದು ಹೇಳಿದ ಆತ ಐವತ್ತು ರೂಪಾಯಿ ದಾನ ಮಾಡಿ ಹೋದ.
ಮರು ದಿನ ಆತ ಮಸೀದಿಯಿಂದ ಹೊರ ಬಂದಾಗ ಹೊರಗೆ ಕಾಯುತ್ತಾ ನಿಂತಿದ್ದ ನಸ್ರುದ್ದೀನ್ ಆತನನ್ನು ನೋಡಿ, `ನಿನ್ನಿಂದ ನನ್ನ ರಾತ್ರಿಯೆಲ್ಲಾ ಹಾಳಾಯಿತು' ಎಂದು ಬಯ್ಯ ತೊಡಗಿದ.
`ಅಲ್ಲಯ್ಯಾ, ನಿನಗೆ ನಿನ್ನೆ ಐವತ್ತು ರೂಪಾಯಿ ದಾನ ಮಾಡಿದ್ದೇನೆ. ನನ್ನನ್ನೇ ಬಯ್ಯುತ್ತಿದ್ದೀಯಲ್ಲಾ? ನಿನಗೇನು ತಲೆ ಕೆಟ್ಟಿದೆಯೆ?' ಎಂದು ಆ ಸಾಹುಕಾರ ಕೇಳಿದ.
`ತಲೆ ಕೆಟ್ಟಿರುವುದು ನನಗಲ್ಲ, ನಿನಗೆ. ನಿನ್ನೆ ನಿನ್ನ ಮಾತು ಕೇಳಿ ಹತ್ತು ಕಾಫಿ ಕುಡಿದೆ. ನನಗೆ ರಾತ್ರಿಯೆಲ್ಲಾ ನಿದ್ರೆಯೇ ಬರಲಿಲ್ಲ...' ಬಯ್ಯುವುದನ್ನು ಮುಂದುವರಿಸಿದ ನಸ್ರುದ್ದೀನ್.

ಸ್ವರ್ಗ ಮತ್ತು ನರಕ
ಮುಲ್ಲಾ ನಸ್ರುದ್ದೀನ್ ಒಂದು ದಿನ ಸತ್ತು ಹೋದ. ಅವನು ಮಾಡಿದ ಪಾಪ ಕಾರ್ಯಗಳಿಂದಾಗಿ ಅವನನ್ನು ನರಕಕ್ಕೆ ಹಾಕಲಾಯಿತು. ಆದರೆ ಅವನಿಗೆ ಅದು ನರಕವೆಂದು ತಿಳಿದಿರಲಿಲ್ಲ. ಅಲ್ಲಿಗೆ ಹೋದಾಗ ಅವನನ್ನು ಸ್ವೀಕರಿಸಲು ಸೈತಾನ ಕಾಯುತ್ತಿದ್ದ.
`ಹಾ! ಅದ್ಭುತವಾಗಿದೆ ಸ್ವರ್ಗ! ನನ್ನ ಬದುಕಿನಲ್ಲಿ ಇಂತಹ ಸುಖ ಎಂದೂ ಕಂಡಿರಲಿಲ್ಲ!' ಎಂದ ಮುಲ್ಲಾ.
`ಲೇ ನಸ್ರುದ್ದೀನ್! ಇದು ಸ್ವರ್ಗವಲ್ಲ, ಇದು ನರಕ!' ಎಂದಿತು ಸೈತಾನ.
`ಇದು ನಿನಗೆ ನರಕವಿರಬಹುದು. ನನಗಿದು ಸ್ವರ್ಗವೇ ಸರಿ. ಏಕೆಂದರೆ ನಾನು ಬಂದಿರುವುದು ಭಾರತದಿಂದ' ಎಂದ ನಸ್ರುದ್ದೀನ್.

ಗಡಿಯಾರ ಮತ್ತು ನಂಬಿಕೆ
ಆ ದಿನ ರಾತ್ರಿ ಮುಲ್ಲಾ ನಸ್ರುದ್ದೀನ್ ಹೆಂಡದಂಗಡಿಯಲ್ಲಿ ಗೆಳೆಯರು ಜೊತೆ ಬಹಳ ಹೊತ್ತು ಕಳೆದು ಮನೆಗೆ ಹಿಂದಿರುಗಿದಾಗ ತಡವಾಗಿತ್ತು. ಹೆಂಡತಿ ಬಾಗಿಲು ತೆರೆಯಲಿಲ್ಲ. `ಈಗ ಸಮಯ ಎಷ್ಟು?' ಒಳಗಿನಿಂದಲೇ ಕೇಳಿದಳು.
`ಹನ್ನೊಂದು ಗಂಟೆ. ನಾನು ಆದಷ್ಟು ಬೇಗ ಮನೆಗೆ ಬಂದಿದ್ದೇನೆ. ಬಾಗಿಲು ತೆಗಿ' ಎಂದ ನಸ್ರುದ್ದೀನ್.
`ಸುಳ್ಳು ಹೇಳಬೇಡ. ಈಗಷ್ಟೇ ಗಡಿಯಾರ ನೋಡಿದೆ, ಈಗ ಹನ್ನೊಂದು ಗಂಟೆಯಲ್ಲಾ, ಬೆಳಗಿನ ಜಾವ ಮೂರೂವರೆ' ಎಂದಳು ಪತ್ನಿ ಒಳಗಿನಿಂದಲೇ.
`ಏನು? ನನ್ನ ಮಾತಿನಲ್ಲಿ ನಂಬಿಕೆಯಿಲ್ಲವೆ? ನಿನಗೆ ನಿನ್ನೆ ಮೊನ್ನೆ ಫುಟ್ಪಾತಿನಲ್ಲಿ ತಂದ ಐವತ್ತು ರೂಪಾಯಿ ಚೀನೀ ಗಡಿಯಾರದ ಮೇಲೆ ನಂಬಿಕೆಯಿದೆ, ಇಪ್ಪತ್ತು ವರ್ಷಗಳಿಂದ ನಿನ್ನ ಗಂಡನಾಗಿರುವ ನನ್ನ ಮಾತಿನಲ್ಲಿ ನಂಬಿಕೆ ಇಲ್ಲವೆ? ಎಂಥ ಹೆಂಡತಿ ನೀನು?' ಗೊಣಗಿದ ನಸ್ರುದ್ದೀನ್.

ಕುಡುಕನ ಮುತ್ತು
ಹಾದಿಹೋಕರೊಬ್ಬರಿಗೆ ಹಾಡ ಹಗಲೇ ಮುತ್ತು ಕೊಟ್ಟದ್ದರಿಂದ ಮುಲ್ಲಾ ನಸ್ರುದ್ದೀನನನ್ನು ನ್ಯಾಯಾಲಯಕ್ಕೆ ಎಳೆದು ತರಲಾಯಿತು. ನ್ಯಾಯಾಧೀಶರು ಮುಲ್ಲಾನ ಆ ರೀತಿಯ ಲಜ್ಜೆಗೇಡಿತನದ ವರ್ತನೆಗೆ ಕಾರಣವೇನೆಂದು ಕೇಳಿದರು.
`ಆ ಯುವತಿ ಅತ್ಯಂತ ಸುಂದರವಾಗಿದ್ದಳು. ನೋಡಿದ ಯಾರಿಗೇ ಆದರೂ ಆಕೆಯನ್ನು ಅಪ್ಪಿ ಮುತ್ತುಕೊಡಬೇಕೆನ್ನಿಸುವಂತಿದ್ದಳು. ನನಗೆ ತಡೆಯಲಾಗಲಿಲ್ಲ, ಆಕೆಯನ್ನು ಅಪ್ಪಿ ಮುತ್ತು ಕೊಟ್ಟೆ' ಎಂದ ನಸ್ರುದ್ದೀನ್.
ನ್ಯಾಯಾಧೀಶರು, `ರಸ್ತೆಯಲ್ಲಿ ಆ ವ್ಯಕ್ತಿಯ ಅನುಮತಿಯಿಲ್ಲದೆ ಮುತ್ತು ಕೊಟ್ಟದ್ದಕ್ಕಾಗಿ ನಿನಗೆ ಐನೂರು ರೂಪಾಯಿಗಳ ದಂಡ ಹಾಗೂ ನೀನು ರಸ್ತೆಯಲ್ಲಿ ಕುಡಿದು ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ಮತ್ತೊಂದು ಐನೂರು ರೂಪಾಯಿಗಳ ದಂಡ ವಿಧಿಸುತ್ತಿದ್ದೇನೆ' ಎಂದರು.
`ಆದರೆ... ನಾನು ಕುಡಿದದ್ದು ನಿಮಗೆ ಹೇಗೆ ತಿಳಿಯಿತು?' ಕೇಳಿದ ಅಚ್ಚರಿಯಿಂದ ನಸ್ರುದ್ದೀನ್.
`ಹೇಗೆಂದರೆ? ನೀನು ಸುಂದರಿ ಎಂದುಕೊಂಡು ಮುತ್ತು ಕೊಟ್ಟ ವ್ಯಕ್ತಿ ಹೆಂಗಸಲ್ಲ ಗಂಡಸು' ಎಂದರು ನ್ಯಾಯಾಧೀಶರು.

ಹೇಗೆ ಜೀವಂತವಾಗಿದ್ದೆ?
ಮುಲ್ಲಾ ನಸ್ರುದ್ದೀನ್ ಕೊನೆಗೂ ಒಂದು ದಿನ ಸತ್ತ. ಸ್ವರ್ಗ ಅಥವಾ ನರಕ ಪ್ರವೇಶಿಸುವ ಮುನ್ನ ದ್ವಾರಪಾಲಕರು ಅವನನ್ನು ಬಾಗಿಲಲ್ಲೇ ತಡೆದರು.
`ನಿನ್ನ ಹೆಸರೇನು?' ಕೇಳಿದರು ಅವರು.
`ಮುಲ್ಲಾ ನಸ್ರುದ್ದೀನ್' ಹೇಳಿದ ನಸ್ರುದ್ದೀನ್.
`ನೀನು ಭೂಮಿಯ ಮೇಲೆ ಬದುಕಿದ್ದಾಗ ನಿನಗೆ ಕುಡಿತ, ಜೂಜು ಅಥವಾ ತಂಬಾಕಿನ ಅಭ್ಯಾಸಗಳಿತ್ತೆ?'
`ಇಲ್ಲ ಸ್ವಾಮಿ' ನಮ್ರತೆಯಿಂದ ಹೇಳಿದ ನಸ್ರುದ್ದೀನ್.
`ಎಂದಾದರೂ ಕಳ್ಳತನ ಮಾಡಿದ್ದೆಯಾ? ಸುಳ್ಳು ಹೇಳಿದ್ದೆಯಾ ಅಥವಾ ಯಾರನ್ನಾದರೂ ಕೆಟ್ಟ ಮಾತುಗಳಿಂದ ಬಯ್ದಿದ್ದೆಯಾ?'
`ಎಂದೆಂದಿಗೂ ಇಲ್ಲ ಸ್ವಾಮಿ'.
`ವ್ಯಭಿಚಾರ ಮಾಡಿದ್ದೆಯಾ?'
`ಅಂಥಾ ಆಲೋಚನೆಯೇ ನನಗೆ ಬಂದಿರಲಿಲ್ಲ ಸ್ವಾಮಿ'.
`ಹಾಗಾದರೆ, ಸತ್ತು ಇಲ್ಲಿಗೆ ಬೇಗ ಬರದೆ ಇಷ್ಟು ವರ್ಷ ಅಲ್ಲಿ ಭೂಮಿಯ ಮೇಲೇನು ಮಾಡುತ್ತಿದ್ದೆ?' ಕೇಳಿದರು ದ್ವಾರಪಾಲಕರು.

ವಿವೇಕ
`ಅಪ್ಪಾ, ನನಗೊಂದು ಹೆಣ್ಣು ನೋಡು, ನಾನು ಮದುವೆಯಾಗಬೇಕು' ಎಂದು ಒಂದು ದಿನ ಮುಲ್ಲಾ ನಸ್ರುದ್ದೀನನ ಮಗ ಬಂದು ಕೇಳಿದ.
`ಈಗಲೇ ಬೇಡ ಮಗನೆ, ನಿನಗಿನ್ನೂ ವಿವೇಕ ಬಂದಿಲ್ಲ. ವಿವೇಕ ಬಂದ ನಂತರ ಮದುವೆಯಾಗುವೆಯಂತೆ' ಹೇಳಿದ ಅಪ್ಪ ನಸ್ರುದ್ದೀನ್.
`ನನಗೆ ವಿವೇಕ ಬರುವುದು ಯಾವಾಗ?' ಕೇಳಿದ ಮಗ.
`ಮದುವೆಯಾಗಬೇಕೆಂಬ ಆಲೋಚನೆ ನಿನ್ನ ಮನಸ್ಸಿನಿಂದ ದೂರವಾದಾಗ' ಹೇಳಿದ ನಸ್ರುದ್ದೀನ್.

ತೊಂದರೆ ಪ್ರಾರಂಭವಾಗುವುದರೊಳಗೆ
ದಡಬಡನೆ ಹೆಂಡದಂಗಡಿಯೊಳಕ್ಕೆ ನುಗ್ಗಿದ ನಸ್ರುದ್ದೀನ್, `ಬೇಗ, ಒಂದು ಬಾಟಲಿ ಹೆಂಡ ಕೊಡು. ತೊಂದರೆ ಪ್ರಾರಂಭವಾಗುವುದರೊಳಗೆ ಕುಡಿದು ಬಿಡಬೇಕು' ಎಂದು ಅಂಗಡಿಯಾತನಿಗೆ ಹೇಳಿದ. ಏನೋ ಸಮಸ್ಯೆ ಇರಬಹುದು ಎಂದುಕೊಂಡ ಅಂಗಡಿಯಾತ ತಕ್ಷಣವೇ ಬಾಟಲಿಯೊಂದನ್ನು ಕೊಟ್ಟ. ಗಟಗಟನೆ ಅದನ್ನು ಕುಡಿದು ಖಾಲಿ ಮಾಡಿ ನಿಟ್ಟುಸಿರು ಬಿಟ್ಟ ನಸ್ರುದ್ದೀನ್.
`ಅದೇನೋ ತೊಂದರೆ ಪ್ರಾರಂಭವಾಗುವುದರೊಳಗೆ ಎಂದಿರಲ್ಲಾ? ಏನದು ತೊಂದರೆ? ಯಾವಾಗ ಪ್ರಾರಂಭವಾಗುತ್ತದೆ?' ಕೇಳಿದ ಅಂಗಡಿಯಾತ.
`ತೊಂದರೆ ಈಗಲೇ ಪ್ರಾರಂಭವಾಗುತ್ತದೆ', ಹೇಳಿದ ನಸ್ರುದ್ದೀನ್, `ನಿನಗೆ ಕೊಡಲು ನನ್ನ ಬಳಿ ಹಣವಿಲ್ಲ!'

ಪವಾಡ
ಮುಲ್ಲಾ ನಸ್ರುದ್ದೀನ್ ಒಮ್ಮೆ ಗುಜರಾತಿಗೆ ಹೋಗಬೇಕಾಯಿತು. ಅಲ್ಲಿ ಮದ್ಯಪಾನ ನಿಷೇಧವಿರುವುದರಿಂದ ಅವನಿಗೆ ಹೆಂಡವಿಲ್ಲದೆ ಬದುಕುವುದು ಸಾಧ್ಯವಿರಲಿಲ್ಲ. ಹಾಗಾಗಿ ಒಂದು ಜಾಡಿಯ ತುಂಬ ಹೆಂಡ ತುಂಬಿಕೊಂಡು ಕದ್ದು ಮುಚ್ಚಿ ಕೊಂಡೊಯ್ದಿದ್ದ. ಗಡಿಯಲ್ಲಿ ಅಬಕಾರಿ ಇಲಾಖೆಯವರು ತಪಾಸಣೆಗೆಂದು ತಡೆದರು.
`ಆ ಜಾಡಿಯಲ್ಲಿ ಏನಿದೆ?' ಮುಲ್ಲಾ ನಸ್ರುದ್ದೀನ್ ಬಳಿಯಿದ್ದ ಜಾಡಿಯನ್ನು ನೋಡಿ ಕೇಳಿದರು.
`ನಾನು ತೀರ್ಥ ಯಾತ್ರೆಗೆ ಹೋಗಿದ್ದೆ. ಪವಿತ್ರ ಜಲವನ್ನು ನನ್ನ ಕುಟುಂಬದವರಿಗೆ ನೀಡಲು ಕೊಂಡೊಯ್ಯುತ್ತಿದ್ದೇನೆ' ಎಂದ. ಆದರೂ ಅವರಿಗೆ ಸಂಶಯ. ಜಾಡಿ ತೆರೆಯುವಂತೆ ಹೇಳಿದರು, ವಾಸನೆ ನೋಡಿದರು.
`ಪವಿತ್ರ ಜಲವಲ್ಲ. ಅದರಲ್ಲಿ ಹೆಂಡವಿರುವಂತಿದೆ. ನಿಜ ಹೇಳು. ಅದರಲ್ಲಿ ಏನಿದೆ' ಗದರಿಸಿ ಕೇಳಿದರು.
`ನಾನು ಪವಿತ್ರ ಜಲ ತಂದಿದ್ದೆ. ಅದು ಹೆಂಡವಾಗಿದೆ! ಹಾ! ದೇವರ ಪವಾಡ ನೋಡಿ!' ಹೇಳಿದ ನಸ್ರುದ್ದೀನ್.

ಸೂಚನೆ
ಮುಲ್ಲಾ ನಸ್ರುದ್ದೀನನಿಗೆ ವಿಚಿತ್ರ ಮಾನಸಿಕ ಸಮಸ್ಯೆ ಉಂಟಾಗಿತ್ತು. ಚಿಕಿತ್ಸೆಗೆಂದು ಮನೋವೈದ್ಯರ ಬಳಿ ಹೋದ. ಅವನನ್ನು ಕೂಲಂಕಷವಾಗಿ ಪರೀಕ್ಷಿಸಿದ ವೈದ್ಯರು ಅವನು ಅನುಸರಿಸಬೇಕಾದ ವಿಧಿ ವಿಧಾನಗಳನ್ನು ಪಟ್ಟಿ ಮಾಡಿ, ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿ ಒಂದು ವಾರದ ನಂತರ ಪುನಃ ಅವರನ್ನು ಭೇಟಿಯಾಗುವಂತೆ ಸೂಚಿಸಿದರು.
            ಹದಿನೈದು ದಿನಗಳಾದರೂ ನಸ್ರುದ್ದೀನ್ ವೈದ್ಯರನ್ನು ಭೇಟಿ ಮಾಡಲು ಬರಲೇ ಇಲ್ಲ. ಒಂದು ದಿನ ಮಾರುಕಟ್ಟೆಯಲ್ಲಿ ವೈದ್ಯರನ್ನು ನೋಡಿದ ನಸ್ರುದ್ದೀನ್ ದೂರ ಓಡಲು ಪ್ರಾರಂಭಿಸಿದ. ಆದರೂ ಬಿಡದ ವೈದ್ಯರು ಅವನನ್ನು ಬೆಂಬತ್ತಿ ಹಿಡಿದು, `ಅಲ್ಲಪ್ಪಾ ನಸ್ರುದ್ದೀನ್ ಹೇಗಿದ್ದೀಯ? ನನ್ನ ಸೂಚನೆಗಳನ್ನೆಲ್ಲಾ ಅನುಸರಿಸುತ್ತಿದ್ದೀಯಾ ತಾನೆ? ಒಂದು ವಾರದ ನಂತರ ಆಸ್ಪತ್ರೆಗೆ ಬಾ ಎಂದರೂ ಏಕೆ ಬರಲಿಲ್ಲ?' ಎಂದು ಕೇಳಿದರು.
`ಕಿರಿಕಿರಿ ಉಂಟುಮಾಡುವ ಜನರಿಂದ ದೂರವಿರು ಎನ್ನುವುದೂ ನಿಮ್ಮ ಸೂಚನೆಗಳಲ್ಲಿ ಒಂದಲ್ಲವೆ, ಅದಕ್ಕೇ ನಿಮ್ಮನ್ನು ಭೇಟಿ ಮಾಡಲು ಬರಲಿಲ್ಲ' ಹೇಳಿದ ನಸ್ರುದ್ದೀನ್ ಅವರಿಂದ ದೂರಕ್ಕೆ ಜಾರಿಕೊಳ್ಳುತ್ತಾ.

ಹಳೆಯವು
ಮುಲ್ಲಾ ನಸ್ರುದ್ದೀನ್ ಹೊಸದೊಂದು ರುಮಾಲು ಕೊಂಡಿದ್ದ. ಅದನ್ನು ಧರಿಸಿ ರಸ್ತೆಯಲ್ಲಿ ಜಂಬದಿಂದ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಮಳೆ ಪ್ರಾರಂಭವಾಯಿತು. ತನ್ನ ಹೊಸ ರುಮಾಲು ನೆನೆಯುವುದೆಂದು ಚಿಂತಿಸಿದ ನಸ್ರುದ್ದೀನ್ ತಕ್ಷಣ ತೊಟ್ಟಿದ್ದ ತನ್ನ ನಿಲುವಂಗಿಯನ್ನು ಹಾಗೆಯೇ ಎತ್ತಿ ತಲೆಯ ಮೇಲೆ ಹೊದ್ದುಕೊಂಡ. ಊರಿನ ಜನಕ್ಕೆಲ್ಲಾ ಅವನ ಅಂಗಾಂಗಗಳ ಪ್ರದರ್ಶನವಾಯಿತು. ಕಿಡಿಗೇಡಿಯೊಬ್ಬ,
`ಏನು ಮುಲ್ಲಾ, ಮಳೆಗೆ ನಿನ್ನ ಅಂಗಾಂಗಗಳೆಲ್ಲಾ ತೊಯ್ಯುತ್ತಿವೆ!' ಎಂದ.
`ತೊಯ್ಯಲಿ ಬಿಡು. ನನ್ನ ರುಮಾಲು ಹೊಸದು, ಅದು ನೆನೆಯಬಾರದು. ನನ್ನ ಅಂಗಾಂಗಗಳು ಹಳೆಯವು, ಅವು ತೊಯ್ದರೆ ಪರವಾಗಿಲ್ಲ' ಹೇಳಿದ ನಸ್ರುದ್ದೀನ್.







ಕಾಮೆಂಟ್‌ಗಳಿಲ್ಲ: