ರಷಿಯನ್ ಕವಿ ಲಿಯೊನಿಡ್ ಮಾರ್ಟಿನೋನ ಈ ಪದ್ಯಗಳು ನನಗಿಷ್ಟವಾಗಿದ್ದವು. ನಾನು ಇವುಗಳನ್ನು ಅನುವಾದ ಮಾಡಿ ಇಪ್ಪತ್ತೈದು ವರ್ಷಗಳೇ ಆಗಿವೆ. ನಿಮಗೂ ಇಷ್ಟವಾದರೆ ತಿಳಿಸಿ.
ನಾ ಹಕ್ಕಿಯಾಗಲಾರೆ
ನಾ ಹಕ್ಕಿಯಾಗಲಾರೆ
ಕೋಗಿಲೆಯೂ ಸಹ, ಗೆಳೆಯ
ನಿಮ್ಮ ಮನೆಯ ಕಿಟಕಿಯಲ್ಲಿ
ಊಹಿಸಿಕೋನನ್ನ,
ಖುಷಿಯಿಂದ ನನ್ನನ್ನು ಕಂಡ ತಕ್ಷಣ
ನೀನು ಹೇಳುತ್ತೀಯೆ
`ಅಯ್ಯೋ ಮುದ್ದಿನ ಮರಿ!
ಕಿಟಕಿಯನ್ನು ಬಡಿಯುತ್ತಿದೆಯಲ್ಲ!'
ಕಿಟಕಿಯ ಗಾಜನ್ನು ಬಡಿದೂ ಬಡಿದೂ
ನನ್ನ ರೆಕ್ಕೆಯೆಲ್ಲ ನೋವಾಗಿ
ನೀನು ಮೆಲ್ಲನೆ
ಒಂಚೂರು ಕಿಟಕಿ ತೆರೆದಾಗ
ಸುಸ್ತಾದ ನಾನು ನಿನ್ನ
ಅಂಗೈಯಲ್ಲಿ ಬೀಳುತ್ತೇನೆ.
`ಹೋ ಎಷ್ಟು ಚಂದ!'
ಎಂದು ಹೇಳುತ್ತ, ಬೆಕ್ಕನ್ನು ಓಡಿಸಿ
ಒಣಗಿದ ರೊಟ್ಟಿಯ ಚೂರನ್ನು
ಗಂಟಲಿಗೆ ತುರುಕುತ್ತೀಯೆ
ನಾನು ತಿನ್ನಲಾಗದಿದ್ದರೂ.
`ಎಷ್ಟು ಚಂದ!' ಮತ್ತೊಮ್ಮೆ
ಹೇಳುತ್ತ ನನ್ನ ಕೊಕ್ಕು, ಮೈಮೇಲೆಲ್ಲಾ
ಮುದ್ದಿನ ಮಳೆಗರೆಯುತ್ತೀಯೆ.
ನಾವು ಗುಲಾಮರಾಗಿಬಿಡುತ್ತೇವೆ……
……. ಎಷ್ಟೊಂದು ಮೂರ್ಖತನ!
ಇಲ್ಲ, ಎಂದಿಗೂ
ನಾ ಹಕ್ಕಿಯಾಗಲಾರೆ.
****
ಚಿತ್ರಗಾರ
ಒಬ್ಬ ಚಿತ್ರಗಾರ
ತನ್ನ ಮಗಳ ಚಿತ್ರ ಬಿಡಿಸಿದ.
ಅವಳು
ಮಧ್ಯರಾತ್ರಿಯ ಚಂದ್ರನಂತೆ
ತೇಲಿಹೋದಳು.
ತನ್ನ ಮಗನ
ಚಿತ್ರ ಬಿಡಿಸಿದ
ಅವನು
ದ್ರಾಕ್ಷಾತೋಟದಲ್ಲಿನ
ಕೋಗಿಲೆಯಂತೆ ಹಾರಿಹೋದ
`ಎಂಥ ಅದ್ಭುತ ಕಲೆ!'
ಮೆಚ್ಚಿಕೊಂಡರು ಚಿತ್ರಗಾರನ ಸ್ನೇಹಿತರು.
ಚಿತ್ರಗಾರ
ತನ್ನ ಸ್ವಂತ ಚಿತ್ರ ಬಿಡಿಸಿ
ಜನರಿಗೆಲ್ಲ ತೋರಿಸಿದ
ಜನ ಒಕ್ಕೊರಲಿನಿಂದ ಕೂಗಿದರು
`ಅದು ನನ್ನದೇ ಚಿತ್ರ!'
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ