ಬುಧವಾರ, ಡಿಸೆಂಬರ್ 27, 2006

Kannada Poetry- ಪ್ರೀತಿ ಪದ್ಯಗಳು

ಈ ಪದ್ಯಗಳನ್ನು ಬರೆದು ಬಹಳ ವರ್ಷಗಳೇ ಆದುವು. ಎಲ್ಲೋ ಮೂಲೆಯಲ್ಲಿ, ಮನದಾಳದಲ್ಲಿ, ಕಾಗದಗಳ ರಾಶಿಯಲ್ಲಿ ಬಿದ್ದಿದ್ದ ಇವುಗಳನ್ನು ಹೆಕ್ಕಿ ಇಲ್ಲಿಗೆ ತಂದಿದ್ದೇನೆ.


***

ಈ ಬರದ ಬೇಗೆಯಲ್ಲೂ
ಬೋಳು ಮರದ ಮೇಲೆ
ಕೂತು ಹಾಡುತ್ತ ಮೈ
ಮರೆಯುವ ಕೋಗಿಲೆ
ಎಂಥ ಸುಳ್ಳುಗಾರ, ಅಲ್ಲವೆ?

***
ಎದುರು ಮನೆಯ ಹುಡುಗ
ಆಕೆಯನ್ನು ಕಡೆಗಣ್ಣಿನಿಂದಲೂ
ನೋಡದೆ ಹೂ ಗಿಡಗಳಿಗೆ
ನೀರೆರೆಯುವುದ ಕಂಡಾಗಲೆಲ್ಲಾ
ಆಕೆಗೆ
ಆ ಗಿಡಗಳಲ್ಲಿ
ಹೂವಾದರೂ ಆಗಿರಬೇಕಿತ್ತು
ಎನಿಸುತ್ತಿತ್ತು.


***
ಪ್ರೀತಿಯ ಸಂಕೇತವಾಗಿ
ಹೂ ಕೊಟ್ಟವನನ್ನು
ಗುಮಾನಿಯಿಂದ ನೋಡು
ಏಕೆಂದರೆ, ಇಂದಲ್ಲ ನಾಳೆ
ಖಂಡಿತ ಈ ಹೂವು ಬಾಡುತ್ತದೆ.


***
ಗೆಳತಿ,
ಹೂಗಳು ಮತ್ತು ಮೋಡಗಳು
ನಿನ್ನ ಸವತಿಯರಾಗಬೇಕಾದರೆ
ಕವಿಯೊಬ್ಬನನ್ನು ಮದುವೆಯಾಗು.


***
ಅಂಗೈ ನೋಡಿ
ಭವಿಷ್ಯ ಹೇಳುತ್ತೇನೆಂದು
ಹುಡುಗಿಯಕೈ ಹಿಡಿದ ಹುಡುಗನಿಗೆ
ಕಾಲವೇ ಭ್ರಮೆ ಎನ್ನಿಸಿ
ಸಮಯ ಹಾಗೇ ನಿಂತುಬಿಡಲಿ
ಎಂದುಕೊಂಡನಂತೆ.


***
ಹೂವಲ್ಲಿ ದುಂಬಿ
ಮಧು ಹೀರುವುದನ್ನು
ಪ್ರೇಮಕ್ಕೂ ಮತ್ತೊಂದಕ್ಕೂ
ಕವಿಯೊಬ್ಬಹೋಲಿಸುತ್ತಿರುವಾಗ
ಇದಾವುದರ ಪರಿವೆಯಿಲ್ಲದೆ
ಆ ದುಂಭಿ ತನ್ನ ಹೊಟ್ಟೆ
ತುಂಬಿಸಿಕೊಳ್ಳುವ ಕಾಯಕ
ಮುಂದುವರೆಸಿತ್ತು.

***
ಪ್ರೇಮದ ಮುಸುಕಿನಲ್ಲಿ
ಕಾಮ ಬೆಚ್ಚಗೆಅಡಗಿ
ಕೂತಿರುತ್ತದೆ ಎನ್ನುವ
ಫ್ರಾಯ್ಡ್ ಹೇಳಿದ ಸತ್ಯ
ತಿಳಿದ ನಂತರ
ನನ್ನ ಗೆಳೆತಿಯೊಂದಿಗೆ
ಪ್ರೀತಿಯ ಮಾತಾಡಲು
ಹೋದರೂ ಮೈಯೇಕೋ
ಬೆವರುತ್ತದೆ.

***
ಆ ಹುಡುಗ
ಸ್ತ್ರೀ ಸ್ವಾತಂತ್ರ್ಯವನ್ನು ಬೆಂಬಲಿಸಿ
ಅವಳೆದುರು ಭಾಷಣ ಹೊಡೆಯುವಾಗ
ಆಕೆಗೆ ಅವಳ ಅಭಿಪ್ರಾಯ ವ್ಯಕ್ತಪಡಿಸಲು
ಎಲ್ಲರಂತೆ ಅವಕಾಶವೇ ಕೊಡಲಿಲ್ಲ.

***

ನಲ್ಲೆಯ ರಮಿಸಲು
ಗಿಡದಲ್ಲಿ ನಗುವ ಗುಲಾಬಿ
ಮುರಿದು ಮುಡಿಯಲ್ಲಿ
ಮುಡಿಸುವ ಬದಲು
ಅವಳನ್ನೇ ಗುಲಾಬಿ ತೋಟಕ್ಕೆ
ಕರೆದೊಯ್ಯುವವ
ನಿಜವಾದ ಪ್ರೇಮಿ.

***

ಗೆಳೆತನದಲ್ಲಿ ಸುಖವಾಗಿದ್ದ
ಹುಡುಗ ಹುಡುಗಿ
ಅವರಿಗರಿವಿಲ್ಲದೆ ಪ್ರೇಮಿಸತೊಡಗಿ
ಅನಿವಾರ್ಯವೆಂಬಂತೆ ಮುದುವೆಯಾಗಿ
ಎಲ್ಲರಂತೆ ಗಂಡಹೆಂಡಿರಾದದ್ದು
ಅವರ ಬದುಕಿನ ದುರಂತ.

***

ಕಾಮೆಂಟ್‌ಗಳಿಲ್ಲ: