ಭಾನುವಾರ, ಡಿಸೆಂಬರ್ 30, 2007

ನನ್ನ ಪುಸ್ತಕಗಳ ಬಿಡುಗಡೆ

16ನೇ ಡಿಸೆಂಬರ್ 2007ರಂದು ನನ್ನ ಮೂರು ಹಾಗೂ ಗೆಳೆಯ ಡಾ.ಕೆ.ಪುಟ್ಟಸ್ವಾಮಿಯವರ ನಾಲ್ಕು ಪುಸ್ತಕಗಳು ನಯನ ರಂಗಮಂದಿರ, ಬೆಂಗಳೂರಿನಲ್ಲಿ ಬಿಡುಗಡೆಯಾದವು. ಡಾ.ಕೆ.ವಿ.ನಾರಾಯಣ, ವಿಶ್ರಾಂತ ಕುಲಪತಿಗಳು, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, ಇವರು ಪುಸ್ತಕಗಳ ಬಿಡುಗಡೆ ಮಾಡಿದರು ಹಾಗೂ ಪ್ರೊ.ಎಸ್.ಜಿ.ಸಿದ್ಧರಾಮಯ್ಯ, ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. (1) ಬೊಕಾಷಿಯೋನ ರಸಿಕತೆಗಳು (2) ಪುಟ್ಟ ರಾಜಕುಮಾರ ಹಾಗೂ (3) ಮಾತಾಹರಿ ಇವು ಬಿಡುಗಡೆಯಾದ ನನ್ನ ಪುಸ್ತಕಗಳು. ಮೊದಲ ಎರಡು ಪುಸ್ತಕಗಳು ಅನುವಾದ ಕೃತಿಗಳು. ನನ್ನ ಪುಸ್ತಕಗಳ ಕುರಿತಂತೆ ಶ್ರೀ ರವಿಕಾಂತೇ ಗೌಡ, ಡಿ.ಸಿ.ಪಿ. ಇವರು ಮಾತನಾಡಿದರು ಹಾಗೂ ಡಾ.ಕೃಷ್ಣಮೂರ್ತಿ ಬೆಳೆಗೆರೆ ಇವರು ಡಾ.ಕೆ.ಪಿ.ಯವರ ಪುಸ್ತಕಗಳ ಕುರಿತಂತೆ ಮಾತನಾಡಿದರು. ಪುಸ್ತಕಗಳ ಪ್ರಕಾಶಕರು ಡಾ.ಎಂ.ಬೈರೇಗೌಡ, ಪ್ರಗತಿ ಗ್ರಾಫಿಕ್ಸ್, ಬೆಂಗಳೂರು.
ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ:


ಇವು ಪ್ರಕಟವಾದ ನನ್ನ ಪುಸ್ತಕಗಳು:

ಶುಕ್ರವಾರ, ನವೆಂಬರ್ 30, 2007

ಕತೆ...'ಬದುಕೆಂದರೆ..'



8ನೇ ನವೆಂಬರ್ 2007ರ 'ಸುಧಾ'ದಲ್ಲಿ ನನ್ನ ಕತೆ `ಬದುಕೆಂದರೆ....' ಪ್ರಕಟವಾಗಿದೆ. ಓದಿ, ತಮ್ಮ ಅನಿಸಿಕೆ ತಿಳಿಸಿ.  

         ಬೆಳಿಗ್ಗೆ ಬೆಳಕು ಮೂಡುವ ಮುನ್ನವೇ ಎಚ್ಚರವಾಗಿತ್ತು. ಎಲ್ಲ ಭಾನುವಾರಗಳೂ ಹೀಗೇ ಆಗುತ್ತವೆ. ಕತ್ತಲಲ್ಲೇ `ಮನೆ'ಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಮಾತನಾಡುತ್ತಿದ್ದರು. ಬೆಳಕು ಮೂಡಲು ಇನ್ನೂ ಎಷ್ಟು ಸಮಯ ಬೇಕಾಗಬಹುದು? ಬೆಳಕು ಮೂಡಿದರೂ ಗಂಟೆ ಹತ್ತಾಗಬೇಕು! ಇನ್ನೂ ನಾಲ್ಕೈದು ಗಂಟೆಗಳ ಕಾಲವಾದರೂ ಕಳೆಯಬೇಕು! ಬಾತ್‌ರೂಮಿಗೆ ಹೋಗಬೇಕೆನಿಸಿದರೂ ಬೆಲ್ ಮಾಡುವುದು ಬೇಡವೆನ್ನಿಸಿತು. ಇನ್ನೂ ಸ್ವಲ್ಪ ಹೊತ್ತು ಹೋಗಲಿ. ಹಾಗೆಯೇ ಮಲಗಿರೋಣವೆನ್ನಿಸಿತು. ಮಲಗುವುದೇನು, ಇಡೀ ಬದುಕೆಲ್ಲ ಹೀಗೇ ಮಲಗಿರುವುದೇ ಅಲ್ಲವೆ! ಈ `ಮನೆ'ಗೆ ಬಂದು ಎಷ್ಟು ದಿನಗಳಾದುವು? ಆರು ತಿಂಗಳಾಗಿರಬೇಕು. ಆರು ತಿಂಗಳು! ಒಂಟಿಯಾಗಿ ಬದುಕುವುದು ಎಷ್ಟು ಕಷ್ಟ! ಒಂಟಿಯೆಂದರೆ......... ಒಂದು ರೀತಿಯಲ್ಲಿ ಒಂಟಿಯೇ. ಈ `ಮನೆ'ಯಲ್ಲಿ ಎಷ್ಟು ಜನರಿರಬಹುದು? ಅಮ್ಮ ಹೇಳುತ್ತಿದ್ದರು ಬಹಳಷ್ಟು ಜನ ನನ್ನಂಥವರು ಇಲ್ಲಿ ಇದ್ದಾರೆಂದು. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಒಂಟಿಪ್ರಾಣಿಗಳೇ! ಇಲ್ಲಿನವರಿಗೆ ಅವರದೇ ಜಗತ್ತು. ಎಲ್ಲರೂ ಕಣ್ಣೆದುರಿಗಿದ್ದರೂ ಯಾರಿಗೆ ಯಾರೂ ಇಲ್ಲ. ಈ `ಮನೆ'ಗೆ ಯಾರ್‍ಯಾರೋ ಬರುತ್ತಿರುತ್ತಾರೆ, ಯಾರ್‍ಯಾರೋ ಹೋಗುತ್ತಿರುತ್ತಾರೆ. ಬಹಳಷ್ಟು ಜನ ಸತ್ತು ಹೆಣವಾಗಿ ಹೋಗುತ್ತಿರುತ್ತಾರೆ. ಯಾರೋ ಕೆಲವರು ಹೋಗುತ್ತೇನೆಂದು ಹೇಳಿ ಹೋಗುತ್ತಾರೆ. ಇನ್ನು ಕೆಲವರಿಗೆ ಅವರು ಹೋಗುವುದೇ ಅವರಿಗೆ ತಿಳಿದಿರುವುದಿಲ್ಲ. 

        ಅಮ್ಮ ಏಕೆ ಬೇಗ ಬರಬಾರದು? ಅದೂ ಬರುವುದು ವಾರಕ್ಕೊಂದು ದಿನ. ಆಕೆಗೆ ಬಿಡುವು ಸಿಗುವುದೂ ಅದೇ ದಿನವಲ್ಲವೇ. ಶೇಖರ್ ಅಂಕಲ್ ಸಹ ಬರಬಹುದೆ? ಶೇಖರ್ ಅಂಕಲ್ ಬಗ್ಗೆ ನನಗೇನೂ ದ್ವೇಷವಿಲ್ಲ. ಮೊದಲು ಒಂದೆರಡು ದಿನ ಸಿಟ್ಟಾಗಿತ್ತು. ನನ್ನ ಅಮ್ಮನನ್ನು ನನ್ನಿಂದ ಕಿತ್ತುಕೊಂಡನಲ್ಲ ಎಂದು. ಆದರೆ ನನ್ನಂತೆ ಒಂಟಿಯಾಗಿದ್ದ ಅಮ್ಮನಿಗೆ ಆಕೆಯ ಬದುಕಿನಲ್ಲಿ ಆತ ಗೆಳೆಯನಾಗಿ ಬಂದನಲ್ಲ. ನನಗೆ ತೊಂದರೆಯಾದರೂ ಆಕೆಯ ಬದುಕಿಗೆ ಒಳ್ಳೆಯದೇ ಆಯಿತು. ಆಕೆ ಬದುಕಲ್ಲಿ ಎಷ್ಟೊಂದು ನೋವು ತಿಂದಿದ್ದಾಳೆ! ಎಲ್ಲ ನನ್ನಿಂದಲೇ ಆದದ್ದು. ನಾನೂ ಅಪ್ಪನಂತೆ ಅದೇ ಅಪಘಾತದಲ್ಲಿ ಸತ್ತುಹೋಗಿದ್ದಿದ್ದರೆ ಅಮ್ಮನಿಗೆ ಈ ಕಷ್ಟಗಳೆಲ್ಲ ಇರುತ್ತಲೇ ಇರಲಿಲ್ಲ. ಇಷ್ಟೊತ್ತಿಗಾಗಲೇ ಆಕೆ ಬೇರೊಂದು ಬದುಕೇ ಬದುಕುತ್ತಿರುತ್ತಿದ್ದಳೇನೋ. ಬದುಕಲ್ಲಿ ಏನೆಲ್ಲಾ ಆಕಸ್ಮಿಕ ಬದಲಾವಣೆಗಳಾಗುತ್ತವೆ! ನನ್ನದು ಇದು ಯಾವ ರೀತಿಯ ಬದುಕು. ಜೀವಮಾನವಿಡೀ ಹಾಸಿಗೆ, ವೀಲ್ ಚೇರ್‌ನಲ್ಲೇ ಕೊಳೆಯಬೇಕು.

      ಸೂರ್ಯ ಮೇಲೆ ಬಂದು ಕೋಣೆಯಲ್ಲೆಲ್ಲಾ ಬೆಳಕು ತುಂಬುತ್ತಿತ್ತು. ಕೈಯನ್ನು ಪ್ರಯಾಸದಿಂದ ಪಕ್ಕಕ್ಕೆ ಸರಿಸಿ ಸ್ವಿಚ್ ಅದುಮಿ ಬೆಲ್‌ಮಾಡಿದೆ. ರಾಮಣ್ಣ ಬಂದು ಸೊಳ್ಳೆಪರದೆಯನ್ನು ಮೇಲಕ್ಕೆತ್ತಿ `ಗುಡ್ ಮಾರ್ನಿಂಗ್' ಎಂದ ಮುಗುಳ್ನಗುತ್ತಾ. ನಾನೂ ಗುಡ್ ಮಾರ್ನಿಂಗ್ ಹೇಳಿದೆ. ಮುಂದಕ್ಕೆ ಬಾಗಿ ನನ್ನನ್ನು ಅನಾಮತ್ತಾಗಿ ಎತ್ತಿ ಬಾತ್‌ರೂಮಿಗೆ ಹೊತ್ತು ನಡೆದ. ನಾನು `ಚೇರ್' ಎಂದರೂ, `ಇರಲಿ ಆಮೇಲೆ ತರುತ್ತೇನೆ' ಎಂದು ಹೇಳಿ ಬಾತ್‌ರೂಮಿನಲ್ಲಿ ನನ್ನೆಲ್ಲ ಬಟ್ಟೆ ಕಳಚಿ ಕಮೋಡ್ ಮೇಲೆ ಕೂಡ್ರಿಸಿದ. ನಾನು ಪಕ್ಕದಲ್ಲಿದ್ದ ಆಸರೆಕಂಬಿಯನ್ನು ಬಿಗಿಯಾಗಿ ಹಿಡಿದುಕೊಂಡು ಅವನೆಡೆಗೆ ನೋಡುತ್ತಾ `ಥ್ಯಾಂಕ್ಸ್' ಎಂದೆ. ಆ ರಾಮಣ್ಣ ಮುಗುಳ್ನಗುತ್ತಾ ಹೊರಹೊರಟ. ನಾಚಿಕೆ, ಅವಮಾನ, ಕಸಿವಿಸಿಗಳನ್ನೆಲ್ಲಾ ನನ್ನಿಂದ ಬಲವಂತವಾಗಿ ಕಿತ್ತುಕೊಳ್ಳಲಾಗಿದೆ. ಬಲವಂತವೆಂದರೆ, ಅದು ನನ್ನ ಅಸಹಾಯಕತೆಯಿಂದಲೇ. ಏಕೆಂದರೆ ನನ್ನಿಂದ ಏನೇನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೈಮೇಲೆ ಕಚ್ಚುತ್ತಿರುವ ಸೊಳ್ಳೆಯನ್ನೂ ಓಡಿಸಲಾಗುವುದಿಲ್ಲ. 

      ಹಿಂದೊಮ್ಮೆ ಹೀಗೆ ಅಮ್ಮ ನನ್ನಿಂದ ದೂರಾಗುತ್ತಾಳೆಂದು ತಿಳಿದಾಗ ಆತ್ಮಹತ್ಯೆಗೂ ನಾನು ಪ್ರಯತ್ನಿಸಿದ್ದೆನಲ್ಲಾ. ನನ್ನ ಸಾವನ್ನು ನಾನು ತಂದುಕೊಳ್ಳಲೂ ಸಾಧ್ಯವಾಗುವುದಿಲ್ಲವೆಂದು ನನಗೆ ಆಗಲೇ ತಿಳಿದಿದ್ದು. ಈ ರೀತಿ ಬೆಲ್ ಮಾಡಿದಾಕ್ಷಣ ರಾಮಣ್ಣ ಬಂದು `ಗುಡ್ ಮಾರ್ನಿಂಗ್' ಹೇಳಿ ಮುಗುಳ್ನಗುತ್ತಾ ಬಾತ್‌ರೂಮಿಗೆ ಹೊತ್ತೊಯ್ಯುವಂತೆ ಬೆಲ್ ಮಾಡಿದಾಕ್ಷಣ ಯಮಧರ್ಮರಾಯನೂ ಮುಗುಳ್ನಗುತ್ತಾ ಬಂದು `ಗುಡ್ ಮಾರ್ನಿಂಗ್' ಹೇಳಿ ಹೊತ್ತೊಯ್ಯುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಬಹಳಷ್ಟು ಸಾರಿ ಅನ್ನಿಸಿದೆ. ಅಮ್ಮ ಹೇಳುತ್ತಿದ್ದ ಮಹಾಭಾರತದ ಕತೆಯಲ್ಲಿನ ಇಚ್ಛಾಮರಣಿ ಭೀಷ್ಮನಂತಿದ್ದರೆ ಚೆನ್ನಾಗಿರುತ್ತಿತ್ತು. ನನ್ನ ಹಾಸಿಗೆಯೂ ಒಂದು ರೀತಿಯ ಶರಶಯ್ಯೆಯೇ! ದಿನವಿಡೀ ಮಲಗಿದ್ದೆಡೆಯೇ ಮಲಗಿದ್ದರೆ ಮತ್ತೇನಾಗುತ್ತದೆ. ಈಗೀಗ ಬೇಸರವಾಗುವುದೂ ನಿಂತುಹೋಗಿದೆ. ನಾನೇಕೆ ಹೀಗಾದೆ? ಎಲ್ಲರಂತೆ ಓಡಾಡಲು, ಮಾತನಾಡಲು, ಎಲ್ಲ ಕೆಲಸ ಮಾಡಲು ಆಗದಂತಹ ಸ್ಥಿತಿ ನನಗೇಕೆ ಬಂದಿದೆ? ಅಮ್ಮ ನನ್ನೊಬ್ಬನನ್ನೇ ಬಿಟ್ಟು ಆಫೀಸಿಗೆ ಹೋದಾಗಲೆಲ್ಲಾ ಅದೆಷ್ಟು ಅತ್ತಿದ್ದೇನೆ, ಅದೆಷ್ಟು ಸಂಕಟ ಪಟ್ಟಿದ್ದೇನೆ! 

       ರಾಮಣ್ಣ ಸ್ನಾನಮಾಡಿಸಿ ಹೊಸಬಟ್ಟೆ ತೊಡಿಸಿದ. ತಲೆಬಾಚುವಾಗ `ಈ ದಿನ ಅಮ್ಮ ಬರುತ್ತಾಳಲ್ಲವೆ?' ಎಂದು ಕೇಳಿದ. ಹೌದೆಂದು ತಲೆಯಾಡಿಸಿದೆ. ನಗುನಗುತ್ತಾ ಅದೂ ಇದೂ ಮಾತನಾಡುತ್ತಲೇ ಇದ್ದ. ರಾಮಣ್ಣ ಎಂಥ ವ್ಯಕ್ತಿ! ಯಾವಾಗಲೂ ನಗುನಗುತ್ತಲೇ ಇರುತ್ತಾನೆ. ಮತ್ತೊಬ್ಬರ ಹೊಲಸು ತೊಳೆಯುವಾಗಲಾಗಲೀ, ಸ್ನಾನ ಮಾಡಿಸುವಾಗಲಾಗಲೀ, ಬಾತ್ ರೂಮ್ ಶುಚಿಗೊಳಿಸುವಾಗಲಾಗಲೀ ಒಂದಿಷ್ಟು ಅಸಹ್ಯ, ಅಸಹನೆ ಆತನಲ್ಲಿ ಕಾಣುವುದೇ ಇಲ್ಲ. ಅದ್ಹೇಗೆ ಸಾಧ್ಯ ಆತನಿಂದ? ಇನ್ನೂ ಚಿಕ್ಕವನಾಗಿದ್ದಾಗ ನಾನು ಎಷ್ಟೋ ಸಾರಿ ನನ್ನ ಬಟ್ಟೆಯಲ್ಲೇ ನಾನು ಹೊಲಸು ಮಾಡಿಕೊಂಡಾಗ ಅಸಹ್ಯದಿಂದ, ಸಿಟ್ಟಿನಿಂದ ಅಮ್ಮನ ಮೇಲೆ ಚೀರಾಡುತ್ತಿದ್ದೆ. ಅಮ್ಮನೂ ಅಷ್ಟೆ ಒಂದು ದಿನವಾದರೂ ನನ್ನ ಮೇಲೆ ಸಿಡುಕಿದವಳಲ್ಲ, ಅಸಹನೆ ತೋರಿದವಳಲ್ಲ. ಈಗ ಅದೆಲ್ಲಾ ನೆನಪಾದರೆ ಮನಸ್ಸಿಗೆ ಪಿಚ್ಚೆನ್ನಿಸುತ್ತದೆ. ನನ್ನನ್ನು ನೋಡಿಕೊಳ್ಳುವುದರಲ್ಲೇ ತನ್ನದೂ ಒಂದು ಬದುಕಿದೆಯೆಂಬುದನ್ನು ಮರೆತಳು. ರಾಮಣ್ಣ ಸ್ಪೂನಿನಿಂದ ತಿಂಡಿ ತಿನ್ನಿಸುತ್ತಿದ್ದಾಗ ಏನೇನೋ ಹೇಳುತ್ತಿದ್ದ, ನನಗದೊಂದೂ ಕೇಳುತ್ತಿರಲಿಲ್ಲ; ಅಮ್ಮನ ಬಗ್ಗೆಯೇ ಆಲೋಚಿಸುತ್ತಿದ್ದೆ. ಆಗಾಗ ಕಣ್ಣು ಓರೆ ಮಾಡಿ ಗೋಡೆಯಲ್ಲಿನ ಗಡಿಯಾರದೆಡೆಗೆ ನೋಡುತ್ತಿದ್ದೆ. ಅಮ್ಮ ಬರಲು ಇನ್ನೂ ಒಂದು ಗಂಟೆಯ ಸಮಯವಿದ್ದರೂ ರಾಮಣ್ಣ ನಾನು ಕೂತಿದ್ದ ವೀಲ್ ಚೇರನ್ನು ವರಾಂಡಾದ ಗೋಡೆಯ ಬಳಿ ನಿಲ್ಲಿಸಿ ಒಳ ಹೊರಟ. ನನ್ನಂಥವರ ಇನ್ನೂ ಎಷ್ಟೋ ಜನರ ಆರೈಕೆಯನ್ನು ರಾಮಣ್ಣ ಮಾಡಬೇಕು. 

     ವರಾಂಡಾದಲ್ಲಿ ನನ್ನಂಥವರು ಹಲವರು ಆಗಲೇ ಬಂದು ಕೂತಿದ್ದರು. ಕೆಲವರು ಪರಸ್ಪರ ಮಾತನಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ನನಗಂತೂ ಒಬ್ಬನೇ ಇರಲು ಇಷ್ಟ. ಅಮ್ಮನ ಬಗ್ಗೆಯೇ ಯೋಚಿಸುತ್ತಿದ್ದೆ. ಒಂದು ಗಂಟೆ ಕಾಯುವುದು ಅತ್ಯಂತ ಯಾತನೆಯ ಕೆಲಸ. ನನ್ನ ಚಡಪಡಿಕೆ ಏನಿದ್ದರೂ ಒಂದು ಮಾನಸಿಕೆ ಕ್ರಿಯೆ ಅಷ್ಟೆ. ಕೆಲವರು ಚಡಪಡಿಸುವಾಗ ಅತ್ತಿತ್ತ ಓಡಾಡುತ್ತಿರುತ್ತಾರೆ, ಸಿಗರೇಟು ಸೇದುತ್ತಿರುತ್ತಾರೆ, ಗೊಣಗುತ್ತಿರುತ್ತಾರೆ. ನನ್ನಿಂದ ಇವೇನನ್ನೂ ಮಾಡಲು ಸಾಧ್ಯವಿಲ್ಲ. ಗೊಣಗಿಕೊಳ್ಳಬಹುದಷ್ಟೆ. ಹಿಂದಕ್ಕೆ ತಲೆ ಆನಿಸಿದ್ದ ನನಗೇ ನಗು ಬಂದಿತು. ಒಂದು ದಿನ ಹೀಗೇ ನಾನು ಹಾಸಿಗೆಯ ಮೇಲೆ ಗೊಣಗಿಕೊಳ್ಳುತ್ತಿದ್ದಾಗ ಪಕ್ಕದಲ್ಲಿದ್ದ ಅಮ್ಮ `ಎಲ್ಲಾ ನೀನು ನಿಮ್ಮಪ್ಪನ ಹಾಗೆ' ಎಂದಿದ್ದರು. `ಅಪ್ಪ ಹೀಗೆಯೇ ಗೊಣಗುತ್ತಿದ್ದರಾ?' ಎಂದೆ. `ಇನ್ನೂ ಹೆಚ್ಚು' ಎಂದ ಅಮ್ಮ ಏನೋ ಆಲೋಚಿಸುತ್ತಿರುವಂತಿತ್ತು. (ನನ್ನ ಮಾತುಗಳನ್ನು ನೀವಿಲ್ಲಿ ಓದಿ ನಾನಿಷ್ಟು ಸರಾಗವಾಗಿ ನಿಮ್ಮಂತೆ ಮಾತನಾಡಬಲ್ಲವನೆಂದು ತಿಳಿಯಬೇಡಿ. ನಾನು ಮಾತನಾಡುವುದು ಸಹ ಅತ್ಯಂತ ಯಾತನೆಯ ಕೆಲಸ. ಗಂಟಲಿನಿಂದ ಶಬ್ದ ಹೊರಡಿಸುವುದು ನನಗೆ ಅಷ್ಟು ಸುಲಭವಲ್ಲ. ಮಾತಾಗುವ ಆ ಶಬ್ದಗಳೂ ಸಹ ಎಲ್ಲರಿಗೂ ಅರ್ಥವಾಗುವುದಿಲ್ಲ, ಅಮ್ಮ, ರಾಮಣ್ಣನಂಥ ಕೆಲವರಿಗೆ ಮಾತ್ರ ಅವು ಸುಲಭವಾಗಿ ಅರ್ಥವಾಗುತ್ತವೆ. ಬಹಳಷ್ಟು ಸಾರಿ ಹೇಳಬೇಕೆಂದಿರುವುದನ್ನು ಹೇಳುವುದೇ ಸಾಧ್ಯವಾಗುವುದಿಲ್ಲ. ಒಂದು ವಾಕ್ಯಕ್ಕೆ ಎರಡು ನಿಮಿಷ ತೆಗೆದುಕೊಂಡರೆ, ಕೇಳುವವರಿಗೆಲ್ಲಿ ತಾಳ್ಮೆ ಇರುತ್ತದೆ? ಆದರೆ ಅಮ್ಮನ ವಿಷಯ ಹಾಗಲ್ಲ. ಅಮ್ಮನಿಗೆ ನಾನು ಹೇಳುವುದೇ ಬೇಡ. ನನ್ನ ಮನಸ್ಸಿನಲ್ಲಿರುವುದನ್ನು ಆಕೆ ನನ್ನ ಕಣ್ಣುಗಳನ್ನು ನೋಡಿಯೇ ತಿಳಿದುಕೊಂಡುಬಿಡುತ್ತಾಳೆ). 

***

     ಅಪ್ಪನನ್ನು ನೋಡಿದ ನೆನಪೇ ನನಗಿಲ್ಲ. ಆ ಅಪಘಾತವಾದಾಗ ನನಗೆ ಐದು ವರ್ಷವಂತೆ. ದೀಪಾವಳಿಗೆ ಪಟಾಕಿ ಬೇಕೆಂದು ನಾನು ಹಠಹಿಡಿದಾಗ ಅದನ್ನು ಕೊಡಿಸಲು ನನ್ನನ್ನು ಸ್ಕೂಟರಿನಲ್ಲಿ ಕರೆದೊಯ್ದಿದ್ದರು. ಪಟಾಕಿ ಕೊಂಡುಬರುವಾಗ ಹಿಂದಿನಿಂದ ಲಾರಿಯೊಂದು ವೇಗವಾಗಿ ಬಂದು ಡಿಕ್ಕಿಹೊಡೆಯಿತಂತೆ. ಯಾರೋ ಆಸ್ಪತ್ರೆಗೆ ಸೇರಿಸಿದರು. ನಾನು ಬದುಕುಳಿದಿದ್ದೆ, ಆದರೆ ಅಪ್ಪ ಉಳಿದಿರಲಿಲ್ಲ. ನಾನು ಬದುಕುಳಿದದ್ದೂ ಹೆಸರಿಗೆ ಮಾತ್ರ. ಅದೆಲ್ಲಿ ಮಿದುಳಿಗೆ ಏಟು ಬಿತ್ತೋ, ಎಲ್ಲಿ ಬೆನ್ನು ಹುರಿಯಲ್ಲಿ ಏಟುಬಿತ್ತೋ ನನಗಂತೂ ಗೊತ್ತಿಲ್ಲ (ಅಮ್ಮ ಈ ವಿಷಯ ಮಾತನಾಡುವಾಗ ಕೇಳಿಸಿಕೊಂಡಿದ್ದೆ), ಇಡೀ ನನ್ನ ದೇಹ ಜಡವಾಗಿತ್ತು- ನಿಲ್ಲಲಾಗುತ್ತಿರಲಿಲ್ಲ, ಕೂಡ್ರಲಾಗುತ್ತಿರಲಿಲ್ಲ, ಕೈಕಾಲು ಆಡಿಸಲಾಗುತ್ತಿರಲಿಲ್ಲ, ಮಾತನಾಡಲೂ ಆಗುತ್ತಿರಲಿಲ್ಲ. ಅಮ್ಮ ಅದೆಷ್ಟು ಕಣ್ಣೀರು ಹಾಕಿದ್ದಳೋ ನನಗೆ ನೆನಪಿಲ್ಲ, ಆದರೆ ನನಗೆ ನೆನಪಿರುವಾಗಿನಿಂದ ಅಮ್ಮ ಕಣ್ಣಿರು ಹಾಕಿಲ್ಲ, ಅಸಹಾಯಕತೆ ತೋರಿಸಿಕೊಂಡಿಲ್ಲ, ನನ್ನ ಮುಂದೆ ಯಾವೊಂದು ಕಷ್ಟವನ್ನೂ ತೋರಿಸಿಕೊಂಡಿಲ್ಲ. ಅಷ್ಟೇ ಅಲ್ಲ, ನನ್ನ ಮೇಲೆ ಸಿಡುಕಿಲ್ಲ, ಅಸಹನೆ ತೋರಿಸಿಕೊಂಡಿಲ್ಲ. ಒಂದು ರೀತಿಯಲ್ಲಿ ಅಮ್ಮ ನನ್ನ ದೇಹದ ಒಂದು ಭಾಗವೇ ಆಗಿಹೋಗಿದ್ದಳು, ಅಥವಾ ನಾನೇ ಆಕೆಯ ದೇಹದ ಒಂದು ಭಾಗವೆನ್ನುವುದು ಸರಿಯಾಗುತ್ತದೆ. ಹೆಣದಂತೆ ಜಡವಾಗಿದ್ದ ನನ್ನನ್ನು ಹೊತ್ತು ಅದೆಷ್ಟು ವೈದ್ಯರ ಬಳಿ ಹೋಗಿದ್ದಳು! ಅಮ್ಮ ಮಹಾಭಾರತದ ಕತೆ ಹೇಳುವಾಗಲೆಲ್ಲಾ ಈಕೆಯೇ ಕುಂತಿಯೇನೋ ಎನ್ನಿಸುತ್ತಿತ್ತು. ಅರ್ಜುನನ ಪ್ರಾಣ ಭಿಕ್ಷೆಗಾಗಿ ಕರ್ಣನ ಬಳಿ ಹೋದಂತೆ ಅನ್ನಿಸುತ್ತಿತ್ತು. ಯಾವ ವೈದ್ಯ ಹಾಗೂ ಔಷಧ ಕೆಲಸ ಮಾಡದಾದಾಗ ಆಕೆಯೇ ವೈದ್ಯಳಾದಳು, ಔಷಧವಾದಳು. ನಾನೊಮ್ಮೆ ಅಮ್ಮನನ್ನು ಕೇಳಿದ್ದೆ, `ನಾನು ಪಟಾಕಿಗಾಗಿ ಹಠಮಾಡದೇ ಇದ್ದಿದ್ದಲ್ಲಿ ಅಪ್ಪ ಸಾಯುತ್ತಿರಲಿಲ್ಲ, ನನಗೂ ಈ ಪರಿಸ್ಥಿತಿ ಬರುತ್ತಿರಲಿಲ್ಲ ಅಲ್ಲವೆ?' ಕೊಂಚ ಯೋಚಿಸಿದ ಅಮ್ಮ, `ನೀನು ಪಟಾಕಿಗಾಗಿ ಹಠ ಮಾಡದೇ ಇದ್ದಿದ್ದರೂ ಈ ರೀತಿ ಆಗುತ್ತಿರಲಿಲ್ಲ, ಅಪ್ಪ ಸ್ಕೂಟರ್ ಬದಲು ಆಟೋದಲ್ಲಿ ಹೋಗಿದ್ದರೂ, ಆ ರಸ್ತೆಯಲ್ಲಿ ಬರದೆ ಬೇರೊಂದು ರಸ್ತೆಯಲ್ಲಿ ಬಂದಿದ್ದರೂ ಅಥವಾ ಹೊರಡುವಾಗ ಐದ್ಹತ್ತು ನಿಮಿಷ ತಡವಾಗಿ ಹೊರಟಿದ್ದರೂ ಅಥವಾ ಲಾರಿಯವನು ಕೊಂಚ ತಡವಾಗಿ ಅಥವಾ ಬೇಗ ಬಂದಿದ್ದರೂ ಈ ರೀತಿ ಆಗುತ್ತಿರಲಿಲ್ಲ. ಈ ರೀತಿ ಕಾರಣಗಳನ್ನು ಹುಡುಕುತ್ತಾ ಹೊರಟು ಕೊರಗುತ್ತಾ ಇರಬಹುದು. ನಡೆದುಹೋದ ಘಟನೆಗಳ ಆರೋಪವನ್ನು ನಿನ್ನ ಮೇಲೆ ಆರೋಪಿಸಿಕೊಳ್ಳಬೇಡ. ಅದಕ್ಕೆ ನೀನಾಗಲೀ, ಅಪ್ಪನಾಗಲೀ ಯಾರೂ ಕಾರಣರಲ್ಲ' ಎಂದಿದ್ದಳು. ಈಗ ಕಳೆದ ವರ್ಷ ನನಗೆ ಕೊಂಚ ಬುದ್ಧಿ ಬಂದಮೇಲೆ ಅಮ್ಮನನ್ನು ಇದೇ ಪ್ರಶ್ನೆಯನ್ನು ಯಾವುದೋ ಒಂದು ಸನ್ನಿವೇಶದಲ್ಲಿ ಬೇರೊಂದು ರೀತಿ ಕೇಳಿದ್ದೆ, `ಈ ನಿನ್ನ ಬದುಕಿನ ಸ್ಥಿತಿಗೆ ನಾನೇ ಕಾರಣನಲ್ಲವೆ?'. ಅರೆಕ್ಷಣ ವಿಚಲಿತಳಾದ ಅಮ್ಮ ಕೇಳಿದ್ದಳು, `ಏಕೆ? ಏನಾಗಿದೆ ನನ್ನ ಬದುಕಿಗೆ? ನನ್ನ ಬದುಕಲ್ಲಿ ನೀನಿದ್ದೀಯಾ. ನನಗೆ ಮತ್ತೇನು ಬೇಕು?' `ಹೌದು, ನಿನ್ನ ಬದುಕಲ್ಲಿ ನಾನಿದ್ದೀನಿ. ಅದೇ ಆಗಿರುವುದು ತೊಂದರೆ. ನಾನು ಈ ಸ್ಥಿತಿಯಲ್ಲಿಲ್ಲದಿದ್ದಲ್ಲಿ ಅಥವಾ ಆ ಅಪಘಾತದಲ್ಲಿ ನಾನು ಸತ್ತೇ ಹೋಗಿದ್ದಿದ್ದಲ್ಲಿ, ನೀನು ಇಷ್ಟೊತ್ತಿಗೆ ಮತ್ತೊಂದು ಮದುವೆ ಆಗಬಹುದಿತ್ತು, ಎಲ್ಲರಂತೆ ನೀನು ಬದುಕು ನಡೆಸಬಹುದಿತ್ತು.......' ಸಿಟ್ಟಿನಿಂದ ಅಮ್ಮ ಎದ್ದುಬಂದು ಎದುರು ನಿಂತಳು. ಆಕೆಯ ಮುಖದಲ್ಲಿ ಎಷ್ಟು ಕೋಪವಿತ್ತೆಂದರೆ, ಇನ್ನೇನು ನನ್ನನ್ನು ಹೊಡೆದೇಬಿಡುತ್ತಾಳೆ ಎಂದುಕೊಂಡೆ. ಆಕೆ ಹೊಡೆಯಲು ಮುಂದಾದರೆ, ಅದನ್ನು ತಡೆಯಲು ಕೈ ಎತ್ತಲೂ ಆಗದಷ್ಟು ನಾನು ಅಸಹಾಯಕ. ಆದರೆ ಅಮ್ಮ ಹೊಡೆಯಲಿಲ್ಲ, ತಕ್ಷಣ ಹೊರಹೊರಟಳು. ನನಗೆ ಗೊತ್ತಿತ್ತು, ಆಕೆ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಅಳುತ್ತಿರುತ್ತಾಳೆ ಎಂದು. ನಾನು ಎದ್ದು ಬರಲು ಸಾಧ್ಯವಿಲ್ಲವೆಂದು ತಿಳಿದಿದ್ದರೂ ಸಹ ಆಕೆ ಬಾಗಿಲು ಹಾಕಿಕೊಂಡಿರುತ್ತಾಳೆ, ಏಕೆಂದರೆ ಆಕೆ ಅಳುವುದನ್ನು ನಾನು ನೋಡಬಾರದು, ಕೇಳಬಾರದು, ಆಕೆ ದುರ್ಬಲಳೆಂದು ನನಗೆ ತಿಳಿಯಬಾರದು. ಆಕೆ ನನ್ನೆದುರು ಎಂದಿಗೂ ಒಮ್ಮೆಯೂ ಅತ್ತಿಲ್ಲ. 

*** 

      ಅದೊಂದು ದಿನ ನನಗೆ ಸ್ನಾನ ಮಾಡಿಸಿ ಅಮ್ಮ ಬಟ್ಟೆತೊಡಿಸುವಾಗ `ನೀನೀಗ ಸಣ್ಣಮಗುವಲ್ಲ, ಗಂಡಸಾಗುತ್ತಿದ್ದೀಯ. ಇನ್ನು ನಿನಗೆ ಶೇವ್ ಮಾಡುವುದನ್ನೂ ನಾನು ಕಲಿಯಬೇಕು' ಎಂದು ಮುಸಿನಗುತ್ತಾ ಹೇಳಿದಳು. ನಾನದಕ್ಕೆ ಮುಗುಳ್ನಕ್ಕಿದ್ದೆ. ಹೌದು ಅದು ನನಗೂ ಅರಿವಿಗೆ ಬರುತ್ತಿತ್ತು. ಇಷ್ಟೂ ದಿನ ನೋಡುವಂತೆ ಟಿ.ವಿ.ಯನ್ನು ನಾನು ನಿರ್ಲಿಪ್ತನಾಗಿ ನೋಡಲೇ ಸಾಧ್ಯವಾಗುತ್ತಿಲ್ಲ. ಸುಂದರ ಹುಡುಗಿಯರು ಹಾಡಿಕುಣಿಯುವುದನ್ನು ಕಂಡಾಗ ನನ್ನಲ್ಲಿ ಅವರ್ಣನೀಯ ಭಾವನೆಗಳುಂಟಾಗುತ್ತಿದ್ದವು. ಬಹುಶಃ ಅದನ್ನು ಅಮ್ಮನೂ ಗಮನಿಸಿದ್ದಳೆನ್ನಿಸುತ್ತದೆ. ನನ್ನಂತೆ ಇಡೀ ಬದುಕೆಲ್ಲಾ ವೀಲ್‌ಚೇರ್ ಮೇಲೇ ಕಳೆಯುತ್ತಿರುವ ವಿಜ್ಞಾನಿ ಸ್ವೀಫನ್ ಹಾಕಿಂಗ್ ಕತೆ ಅಮ್ಮ ಹೇಳಿದ್ದರು. ಆತನೂ ಸಹ ಮದುವೆಯಾಗಿದ್ದ, ಆತನಿಗೂ ಮಕ್ಕಳಿದ್ದವು. ನನಗೂ ಎಂದಾದರೊಂದು ದಿನ ಮದುವೆಯಾಗುತ್ತದೆಯೆ? ನನ್ನನ್ನೂ ಯಾರಾದರೂ ಹುಡುಗಿ ಮದುವೆಯಾಗಲು ಒಪ್ಪುತ್ತಾಳೆಯೆ? ನನ್ನ ಆಲೋಚನೆಗೆ ನನಗೇ ನಗುಬಂದು ಆ ಆಲೋಚನೆಯನ್ನು ಮನಸ್ಸಿನಿಂದ ಕಿತ್ತೊಗೆಯಲು ಪ್ರಯತ್ನಿಸಿದ್ದೆ, ಈಗಲೂ ಪ್ರಯತ್ನಿಸುತ್ತಿದ್ದೇನೆ. 

    ಇಂತಹ ಸಮಯದಲ್ಲಿಯೇ ನನಗೆ ಅಮ್ಮನ ಒಂಟಿತನದ ಬಗ್ಗೆಯೂ ಆಲೋಚಿಸುವಂತಾಗಿದ್ದು. ಅದುವರೆಗೆ ನನಗೆ ಆ ಆಲೋಚನೆಯೇ ಬಂದಿರಲಿಲ್ಲ. ಅಮ್ಮ ಇರುವುದು ನನ್ನನ್ನು ನೋಡಿಕೊಳ್ಳಲು ಮಾತ್ರ, ಆಕೆ ಬದುಕಿರುವ ಉದ್ದೇಶವೇ ನನ್ನ ಚಾಕರಿ ಮಾಡಲು ಎನ್ನುವ ಭಾವನೆ ನನ್ನಲ್ಲಿ ಬಂದುಬಿಟ್ಟಿತ್ತು. ಎಂದಾದರೂ ನಾನು ಕರೆದಾಗ ತಕ್ಷಣ ಬರದಿದ್ದಲ್ಲಿ ಸಿಟ್ಟಾಗುತ್ತಿದ್ದೆ, ಸಿಡುಕುತ್ತಿದ್ದೆ. ಆಫೀಸಿನಿಂದ ತಡವಾಗಿ ಬಂದಾಗ ಮುನಿಸಿಕೊಂಡು ಮಾತು ನಿಲ್ಲಿಸುತ್ತಿದ್ದೆ. ನನಗೆ ಈಗನ್ನಿಸುತ್ತದೆ, ನಾನೆಂಥ ಸ್ವಾರ್ಥಿಯಾಗಿದ್ದೆ ಎಂದು. ಒಮ್ಮೆ ಆಕೆ ಪಕ್ಕದ ಕೋಣೆಯಲ್ಲಿ ತನ್ನ ಗೆಳತಿಯೊಂದಿಗೆ ಮಾತನಾಡುತ್ತಿದ್ದುದು ನನಗೆ ಕೇಳಿಸಿತ್ತು. ಆಕೆ ಹೇಳುತ್ತಿದ್ದಳು, `ಕೆಲವೊಮ್ಮೆ ನನಗೆ ವಿಪರೀತ ಭಯವಾಗುತ್ತದೆ. ನನಗೇನಾದರೂ ಆಗಿಹೋದರೆ ಏನು ಗತಿ. ಇವನನ್ನು ಯಾರು ನೋಡಿಕೊಳ್ಳುತ್ತಾರೆ? ಇವನಿಗೋಸ್ಕರವಾದರೂ ನಾನು ಎಷ್ಟು ವರ್ಷಸಾಧ್ಯವೋ ಅಷ್ಟು ವರ್ಷ ಬದುಕಬೇಕು. ಬದುಕುವುದಷ್ಟೇ ಅಲ್ಲ ಇವನನ್ನು ನೋಡಿಕೊಳ್ಳಲು ನಾನು ಆರೋಗ್ಯವಂಥಳಾಗಿರಬೇಕು. ಸಾವು ಬರುವುದಾದರೆ ಇಬ್ಬರಿಗೂ ಒಮ್ಮೆಲೇ ಬರಬೇಕು'. ಆ ದಿನ ಅದ್ಯಾಕೋ ಬದುಕು ತೀರಾ ಬೇಸರವೆನ್ನಿಸಿತ್ತು, ನನಗರಿವಾಗದೆ ತೀವ್ರ ಪಾಪಪ್ರಜ್ಞೆ ಕಾಡತೊಡಗಿತ್ತು. ನನಗೆ ಬೇಗ ಸಾವು ಬರಲಿ ಎಂದು ಕೋರಿದ್ದೆ. ಮತ್ತೊಂದು ದಿನ ಇದೇ ರೀತಿ ಆಕೆ ತನ್ನ ಗೆಳತಿಯ ಜೊತೆ ಮಾತನಾಡುವಾಗ ಆಕೆಯ ಗೆಳತಿ `ಶೇಖರ್ ಏನು ಹೇಳುತ್ತಾನೆ?' ಎಂದು ಕೇಳಿದ್ದಳು. ಅಮ್ಮ ಏನೂ ಹೇಳಲಿಲ್ಲ. ಆಕೆಯ ಗೆಳತಿಯೇ ಮತ್ತೊಮ್ಮೆ ಒತ್ತಾಯ ಮಾಡಿದಾಗ `ಏನು ಹೇಳುತ್ತಾನೆ, ನಾನೇ ಆಗೋದಿಲ್ಲವೆಂದೆ. ಕಿರಣನನ್ನು ಬಿಟ್ಟುಬರಲು ಸಾಧ್ಯವೇ ಎಂದು ಕೇಳಿದ! ನನ್ನ ಮಗನೇ ನನ್ನ ಬದುಕಾಗಿರುವಾಗ ನಾನವನನ್ನು ಯಾವುದೋ ಆಶ್ರಮದಲ್ಲೋ, ಸ್ಪೆಶಲ್ ಹೋಂನಲ್ಲೋ ಸೇರಿಸಿ ಬದುಕುವುದಾದರೂ ಹೇಗೆ? ಇಡೀ ಬದುಕೆಲ್ಲಾ ನಾನು ಒಂಟಿಯಾಗಿದ್ದರೂ ಸರಿ, ನನಗೆ ನನ್ನ ಮಗನನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ'. ಆ ಮಾತು ಕೇಳಿ ನನಗೆ ಅತ್ಯಂತ ಹೆದರಿಕೆಯಾಗಿತ್ತು, ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳತೊಡಗಿತ್ತು. ನನ್ನ ಅಮ್ಮ ನನ್ನನ್ನು ಎಲ್ಲಾದರೂ ಬೇರೆಡೆಗೆ ಸೇರಿಸುತ್ತಾರೆಯೆ? ಕೆಲದಿನಗಳ ಹಿಂದೆ ಅಮ್ಮ ನನ್ನನ್ನು ಅದ್ಯಾವುದೋ `ಮನೆ'ಗೆ ಕರೆದೊಯ್ದದ್ದು ಅದಕ್ಕೇ ಇರಬೇಕು. ಅಲ್ಲಿಗೆ ಹೋಗುವ ಮುನ್ನ ಅಮ್ಮ ನನಗೆ ಏನೂ ಹೇಳಿರಲಿಲ್ಲ. ಅವರು ಎಷ್ಟೋ ಸಾರಿ ನನಗೆ ಹೇಳುತ್ತಿದ್ದರು, `ಪ್ರಪಂಚದಲ್ಲಿ ನಿನ್ನಂಥವರು ಬಹಳಷ್ಟು ಜನ ಇದ್ದಾರೆ. ಬದುಕಲ್ಲಿ ಎಲ್ಲರಿಗೂ ಒಂದಲ್ಲ ಒಂದು ತೊಂದರೆ ಇದ್ದೇ ಇರುತ್ತದೆ. ತೊಂದರೆ ಇಲ್ಲದಿರುವಂತಹ ಜನರಿಲ್ಲವೇ ಇಲ್ಲ. ನಿನಗೊಂದು ರೀತಿಯ ತೊಂದರೆಯಿದ್ದರೆ, ಮತ್ತೊಬ್ಬರಿಗೆ ಮತ್ತೊಂದು ರೀತಿಯ ತೊಂದರೆ ಇರುತ್ತದೆ. ಆದರೆ ಅತ್ಯಂತ ಮುದ್ದು ಹಾಗೂ ಒಳ್ಳೆಯ ಮಗನಿರುವುದು ನನಗೆ ಮಾತ್ರ' ಎಂದಿದ್ದಳು ನನ್ನನ್ನು ಅಪ್ಪಿಕೊಳ್ಳುತ್ತ. ಅಮ್ಮ ನನ್ನನ್ನು ಪ್ರತಿ ದಿನ ಸಂಜೆ ವೀಲ್‌ಚೇರ್‌ನಲ್ಲಿ ಹೊರಗೆ ಕರೆದೊಯ್ಯುತ್ತಿರುತ್ತಾಳೆ. ಆ ದಿನ ನಿನಗೆ ಹೊಸ ಗೆಳೆಯರನ್ನು ಪರಿಚಯಿಸುತ್ತೇನೆ ಎಂದು ನನ್ನನ್ನು ಆ `ಮನೆ'ಗೆ ಕರೆದೊಯ್ದಿದ್ದಳು. ದೊಡ್ಡ ಕಾಂಪೌಂಡ್, ಅಲ್ಲಿ ಎಷ್ಟೊಂದು ಜನರಿದ್ದರು! ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನನ್ನಂಥ ಅಂಗವಿಕಲರೇ! ನಾನು ರಾಮಣ್ಣನನ್ನು ಮೊದಲು ಕಂಡಿದ್ದು ಅಲ್ಲಿಯೇ. ನನ್ನನ್ನು ಕಂಡ ರಾಮಣ್ಣ, `ಇಲ್ಲೇ ಇರ್‍ತೀಯಾ? ನೋಡು ನಾವೆಲ್ಲಾ ಇರ್‍ತೀವಿ, ನಿನಗೆ ಆಟ ಆಡಿಸ್ತೀವಿ, ಎಂಥಾ ಮಜಾ ಇರುತ್ತೆ ಗೊತ್ತಾ?' ನನ್ನನ್ನು ಅಲ್ಲೇ ಬಿಟ್ಟುಹೋಗಲು ಅಮ್ಮ ಬಂದಿರುವುದು ಎಂದು ಊಹಿಸಿ ನಾನು ಜೋರಾಗಿ ಅಳಲು ಶುರುಮಾಡಿದೆ, ಕೂಡಲೇ ಅಲ್ಲಿಂದ ಕರೆದೊಯ್ಯುವಂತೆ ಚೀರಾಡಿ ಹಠಮಾಡಿದೆ. ನನ್ನ ಚೀರಾಟ ಅಲ್ಲಿನವರೆಲ್ಲಾ ನನ್ನನ್ನು ನೋಡುವಂತೆ ಮಾಡಿತ್ತು. `ಇಲ್ಲ, ನಿನ್ನನ್ನು ಇಲ್ಲಿ ಬಿಡುವುದಕ್ಕೆ ಕರೆದುಕೊಂಡುಬಂದಿಲ್ಲ. ಸುಮ್ಮನೆ ತೋರಿಸಲಿಕ್ಕೆ' ಎಂದು ಹೇಳಿದರೂ ನಾನು ಹಠ ನಿಲ್ಲಿಸಲಿಲ್ಲ. ಎಲ್ಲಿ ನನ್ನನ್ನು ಅಮ್ಮನಿಂದ ದೂರಮಾಡಿಬಿಡುತ್ತಾರೋ ಎಂದು ಹೆದರಿ ಆಕೆಗೆ ಆತುಬಿದ್ದವನು ಮನೆ ತಲುಪಿದನಂತರವೂ ಆಕೆಯನ್ನು ದೂರಬಿಡಲಿಲ್ಲ. ಅಮ್ಮ ತಬ್ಬಿ ಸಂತೈಸಿದಳು, ನನ್ನನ್ನೆಂದೂ ದೂರ ಕಳಿಸುವುದಿಲ್ಲವೆಂದು ಪ್ರಮಾಣ ಮಾಡಿದಳು. 

*** 

      ಅಮ್ಮ ನನಗೆ ಪ್ರತಿಯೊಂದನ್ನೂ ಓದಿ ಹೇಳದಿದ್ದಲ್ಲಿ, ನನಗೆ ಓದುವುದನ್ನು ಕಲಿಸದಿದ್ದಲ್ಲಿ ನನಗೆ ಪ್ರಪಂಚ ಜ್ಞಾನವೇ ಇರುತ್ತಿರಲಿಲ್ಲ. ನನಗಾಗಿ ಎಷ್ಟೊಂದು ಸಮಯ ವ್ಯಯಮಾಡುತ್ತಿದ್ದಳು! ಆಕೆಯಲ್ಲಿ ಎಷ್ಟೊಂದು ತಾಳ್ಮೆಯಿತ್ತು! ಆಕೆಗೆ ನನ್ನ ಮೇಲಿದ್ದುದು ಪ್ರೀತಿಯೇ? ನಾನು ಅಶಕ್ತನಾದುದರಿಂದ ನನ್ನ ಮೇಲಿದ್ದುದು ಕರುಣೆಯೆ? ಅಥವಾ ನಾನು ಆಕೆಯ ಮಗನಾದುದರಿಂದ ಆಕೆ ಮಾಡುತ್ತಿದ್ದುದು ಆಕೆಯ ಕರ್ತವ್ಯವೆ? ಅದೊಂದು ದಿನ ಹೀಗೇ ಯೋಚಿಸುತ್ತಾ ಬಿದ್ದುಕೊಂಡಿದ್ದ ನಾನು ಕೇಳಿದ್ದೆ, `ನಮ್ಮಿಬ್ಬರ ಬದುಕು ಹೇಗೆ ಕೊನೆಯಾಗಬಹುದು?' ಏನೋ ಓದುತ್ತಿದ್ದ ಅಮ್ಮ ನನ್ನೆಡೆಗೆ ತಿರುಗಿ ನೋಡಿದಳು, ಏನೂ ಹೇಳಲಿಲ್ಲ. ನನಗೆ ಗೊತ್ತಿತ್ತು, ಆಕೆಗೂ ಉತ್ತರ ತಿಳಿದಿಲ್ಲವೆಂದು. `ಕೊನೆಯಾಗುವುದು ಸಾವಿನಲ್ಲೆಂದು ನನಗೂ ಗೊತ್ತು. ಆದರೆ ಇಲ್ಲಿ ಮುಖ್ಯವಾಗುವುದು ಯಾರು ಮೊದಲು ಸಾಯುತ್ತಾರೆನ್ನುವುದು. ಅಲ್ಲವೆ...?' ಮತ್ತೆ ನಾನೇ ಕೇಳಿದೆ. `ಈಗ ಸಾವಿನ ವಿಷಯ ಏಕೆ ಬೇಕು? ಈಗ ನಿನಗೆ ಅದರ ಯೋಚನೆ ಏಕೆ? ಈ ಕ್ಷಣ ಬದುಕಿದ್ದೀವೆ, ಅದೇ ಮುಖ್ಯ' ಅಮ್ಮ ಹೇಳಿದಳು. `ಈಗ ನಾವು ಆ ವಿಷಯ ಮಾತಾಡದೇ ಮರೆಸಿದರೂ ಆ ವಿಷಯ ಮುಖ್ಯವೆಂದು ನಿನಗೂ ಗೊತ್ತು. ಅದು ಸುಳ್ಳಲ್ಲ. ನಮ್ಮಿಬ್ಬರ ನಡುವೆ ಸಾವು ತೀರಾ ಹತ್ತಿರದಿಂದ ಪಿಸುಗುಟ್ಟುತ್ತಿದೆ. ನನಗನ್ನಿಸುತ್ತದೆ, ನನಗೆ ಮೊದಲು ಸಾವು ಬಂದರೆ ಸಮಸ್ಯೆ ಸುಲಭವಾಗಿ ಪರಿಹಾರವಾಗುತ್ತದೆ. ನೀನು ಇಲ್ಲವೆಂದರೂ, ಒಪ್ಪಿಕೊಳ್ಳದಿದ್ದರೂ ಇದು ನಿಜ. ನೀನಿದನ್ನು ಒಪ್ಪಲೇಬೇಕು' ಎಂದು ಹೇಳಿ ಅಮ್ಮನೆಡೆಗೆ ನೋಡುತ್ತಲೇ ಇದ್ದೆ. ಅಮ್ಮ ಒಪ್ಪಿಕೊಳ್ಳಲಿಲ್ಲ, ಇಲ್ಲವೆನ್ನಲೂ ಇಲ್ಲ. ಓದುತ್ತಿದ್ದ ಪುಸ್ತಕ ಮಡಿಸಿಟ್ಟು ನನ್ನನ್ನು ತಬ್ಬಿ ಮಲಗಿದಳು. 

     ಇಂಥದೇ ದಿನಗಳಲ್ಲಿಯೇ ನನಗೆ ಸಾಯಬೇಕೆಂಬ ಆಲೋಚನೆ ಬಂದಿದ್ದು. ಅಮ್ಮ ತನ್ನ ಗೆಳತಿಯ ಜೊತೆ ಆಗಾಗ ಶೇಖರ್ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಳು. ಒಂದು ದಿನ ಅಮ್ಮ ಕೇಳಿದಳು, `ನನಗೆ ಶೇಖರ್ ಎಂಬ ಕೊಲೀಗ್ ಇದ್ದಾರೆ. ತುಂಬಾ ಒಳ್ಳೆಯವರು. ನಿನಗೊಮ್ಮೆ ಪರಿಚಯ ಮಾಡಿಸುತ್ತೇನೆ' ಎಂದು. ವಿಚಿತ್ರವೆಂದರೆ ಈ ಮಾತುಗಳನ್ನು ಆಡುವಾಗ ಅಮ್ಮ ನನ್ನೆಡೆಗೆ ನೋಡುತ್ತಲೇ ಇರಲಿಲ್ಲ. ಆಕೆಯಲ್ಲಿ ಎಂಥದೋ ಅಳುಕು, ಅಂಜಿಕೆ. ನನಗರಿವಿಲ್ಲದೆ `ಬೇಡ' ಎಂಬ ಮಾತು ಹೊರಬಂತು. ಆ ಮಾತು ತುಂಬಾ ಒರಟಾಗಿತ್ತೆಂದು ಅನಂತರ ನನಗನ್ನಿಸಿತು. ಆಗ ನನ್ನೆಡೆಗೆ ನೋಡಿದ ಅಮ್ಮ, `ಬೇಡವೆಂದರೆ ಬೇಡ ಬಿಡು' ಎಂದು ಹೇಳಿ ಹೊರಹೊರಟರು. ಅದ್ಯಾಕೋ, ನನಗೆ ಸಾವು ಬರಬಾರದೆ ಅನ್ನಿಸಿತು. ನನ್ನಂಥ ಆಶಕ್ತ ಸಾಯುವುದು ಹೇಗೆ? ನನ್ನ ಅಪ್ಪನಲ್ಲದ ವ್ಯಕ್ತಿಯ ಜೊತೆ ಬದುಕುವುದಾದರೂ ಹೇಗೆ? ಆತ ನನಗೆ ಸ್ನಾನ ಮಾಡಿಸುತ್ತಾನೆಯೆ? ನನಗೆ ಬಟ್ಟೆ ತೊಡಿಸುತ್ತಾನೆಯೆ? ಆತನಿಗೆ ನನ್ನ ಬೆತ್ತಲೆ ಮೈಯನ್ನು ಹೇಗೆ ತೋರಿಸಲಿ? ಆತನಿಗೆ ನನ್ನನ್ನು ಕಂಡರೆ ಅಸಹ್ಯವಾಗಬಹುದು. ಅಮ್ಮನಿಗೇಕೆ ಈ ಹುಚ್ಚು ಬಂತು? ಅಮ್ಮನಿಗೆ ನನ್ನ ಮೇಲೆ ಪ್ರೀತಿ ಕಡಿಮೆಯಾಯಿತೆ? ಮುಂದೊಂದು ದಿನ ಅಮ್ಮ ನನ್ನನ್ನು ಹೀಗೇ ಎಲ್ಲಾದರೂ ಬಿಟ್ಟು ದೂರಹೋಗಿಬಿಡಬಹುದೆ? ಅಥವಾ ಆ ವ್ಯಕ್ತಿ ನಾನೊಂದು ಹೊರೆಯೆಂದು ಭಾವಿಸಿ ನನ್ನನ್ನು ಕೊಂದುಬಿಡಬಹುದೆ? ಇಂಥವೇ ಹತ್ತು ಹಲವಾರು ಯೋಚನೆಗಳು ನನ್ನ ತಲೆಯನ್ನು ಹುಳು ತಿಂದಹಾಗೆ ತಿನ್ನತೊಡಗಿದವು. ಇದಕ್ಕೆಲ್ಲ ಪರಿಹಾರ ಸಾವು ಎನ್ನಿಸಿತು. ಸತ್ತುಹೋಗಬೇಕು, ಇವರ್‍ಯಾರಿಗೂ ತೊಂದರೆ ಕೊಡಬಾರದು. ನನ್ನಂಥ ನತದೃಷ್ಟನಿಗೆ ಸಾವು ಅಷ್ಟು ಸುಲಭವಾಗಿ ಎಲ್ಲಿ ಬರುತ್ತದೆ! ಟಿ.ವಿ.ಯ ಸಿನೆಮಾಗಳಲ್ಲಿ ನೋಡಿದ್ದಂತೆ ಕುತ್ತಿಗೆಗೆ ನೇಣು ಹಾಕಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ, ಟ್ರೈನು, ಬಸ್ಸಿನಡಿಗೆ ಬೀಳುವುದೂ ಸಾಧ್ಯವಿಲ್ಲ. ಆದರೆ ನಾನು ಸಾಯಲೇಬೇಕು. ಅಮ್ಮನಿಗೆ ನಾನು ಬೇಡವಾಗಿದ್ದೇನೆ. ಕೂತಿದ್ದ ವೀಲ್‌ಚೇರಿನಿಂದ ಮುಗ್ಗುರಿಸಿ ನೆಲಕ್ಕೆ ತಲೆಯನ್ನು ಬಲವಾಗಿ ಅಪ್ಪಳಿಸಿದರೆ ಸತ್ತುಹೋಗಬಹುದೆಂದು ನಾನು ಭಾವಿಸಿದ್ದೆ. ಎಚ್ಚರವಾದಾಗ ಅಮ್ಮ ಪಕ್ಕದಲ್ಲೇ ಕೂತಿದ್ದರು. ತಲೆ ಧಿಮ್ಮೆಂದು ನೋಯುತ್ತಿತ್ತು. ನಾನು ಸತ್ತಿರಲಿಲ್ಲ. ಅದು ಆತ್ಮಹತ್ಯೆಯ ಪ್ರಯತ್ನವೆಂದು ಅಮ್ಮನಿಗೆ ತಿಳಿಯಲೇ ಇಲ್ಲ. 

*** 

     ಗೇಟಿನ ಬಳಿ ಅಮ್ಮನನ್ನು ಕಂಡ ತಕ್ಷಣ ಕೂತಿದ್ದೆಡೆಯಲ್ಲಿಯೇ ಚಡಪಡಿಸತೊಡಗಿದೆ. ವೀಲ್‌ಚೇರ್ ಅಲುಗಾಡತೊಡಗಿತು. ನನ್ನ ಬಾಯಿಂದ `ಅಮ್ಮ, ಅಮ್ಮ' ಎಂಬ ಮಾತು ಹೊರಬಂದಿತು. ಅಮ್ಮ ನೇರ ನನ್ನೆಡೆಗೆ ಬಂದವಳೇ ತಬ್ಬಿ ಮುತ್ತುಕೊಟ್ಟಳು, `ಹೇಗಿದ್ದೀಯ?' ಎಂದಳು. `ಫೈನ್' ಎಂದೆ. ಅಮ್ಮನ ಗರಿಗರಿ ಕಾಟನ್ ಸೀರೆಯಲ್ಲಿ ಮುಖವನ್ನು ಹುದುಗಿಸಬೇಕೆನ್ನಿಸಿತು. `ಹೇಗಿದೆ ಲೈಫ್?' ಎಂದೆ. ಅಮ್ಮ ಉತ್ತರಿಸಲಿಲ್ಲ. ಬದಲಿಗೆ, `ಶೇಖರ್ ಹೇಳುತ್ತಿದ್ದಾರೆ, ನೀನೂ ಮನೆಗೆ ಬಂದುಬಿಡು. ಎಲ್ಲರೂ ಒಟ್ಟಿಗೆ ಇರೋಣ' ಎಂದಳು. ಬರುವುದಿಲ್ಲವೆಂಬಂತೆ ನಾನು ತಲೆಯಾಡಿಸಿದೆ. `ಈ `ಮನೆ'ಯೇ ನನ್ನ ಮನೆ. ನಾನಿಲ್ಲಿ ಆರಾಮಾಗಿದ್ದೀನಿ' ಎಂದೆ. ನಾನು ಈ `ಮನೆ'ಗೆ ಬರುವವರೆಗೂ ನಾನು ಒಂದು ದಿನವೂ ಅಮ್ಮನ ಕಣ್ಣೀರು ಕಂಡವನಲ್ಲ. ಆದರೆ ಈಗ ಇಲ್ಲಿಗೆ ಬಂದಾಗ ಆಗಾಗ ಅವಳ ಕಣ್ಣಂಚಿನಲ್ಲಿ ನೀರು ಕಾಣುತ್ತೇನೆ. ನನಗೆ ಗೊತ್ತು, ಅವಳನ್ನು ಎಂಥದೋ ಪಾಪಪ್ರಜ್ಞೆ ಕಾಡುತ್ತದೆ, ಅಂಗವಿಕಲ ಮಗನನ್ನು ದೂರವಿಟ್ಟಿದ್ದೇನೆ ಎಂದು. ಆದರೆ ಅವರ ಜೊತೆಗೆ ಮನೆಗೆ ಹೋದಲ್ಲಿ ನನ್ನನ್ನು ಪಾಪಪ್ರಜ್ಞೆ ಕಾಡುತ್ತದೆ. ನಾನೀಗ ದೊಡ್ಡವನಾಗಿದ್ದೇನೆ, ಎಲ್ಲವನ್ನೂ ಸಹಿಸಿಕೊಳ್ಳಬಲ್ಲೆ. ಆಕೆ ಈಗಾಗಲೇ ನನಗಾಗಿ ಬಹಳಷ್ಟು ಜೀವನವನ್ನು ಸವೆಸಿದ್ದಾಳೆ. ಅದೊಂದು ದಿನ ಅಮ್ಮ ಈ `ಮನೆ'ಗೆ ಕರೆತಂದಾಗ ನಾನೇ ಹೆದರಿ ಇಲ್ಲಿಂದ ವಾಪಸ್ಸು ಹೋಗಲು ಹಠ ಮಾಡಿ ಚೀರಾಡಿದ್ದೆನಲ್ಲ. ಮತ್ತೆ ಇಲ್ಲಿಗೆ ಬರುವ ನಿರ್ಧಾರ ನಾನೇ ತೆಗೆದುಕೊಂಡದ್ದು. ಅಮ್ಮ ಬೇಡವೆಂದರು, ಕಳುಹಿಸುವುದಿಲ್ಲವೆಂದರು. ಮತ್ತೆ ನಾನು ಈ `ಮನೆ'ಗೆ ತಂದುಬಿಡುವಂತೆ ಹಠ ಮಾಡಬೇಕಾಯಿತು. `ಶೇಖರ್ ಅಂಕಲ್ ಬಂದಿಲ್ಲವೆ?' ಕೇಳಿದೆ. `ಬಂದಿದ್ದಾರೆ. ಅಲ್ಲೇ ಹೊರಗೆ ನಿಂತಿದ್ದಾರೆ. ಹೋದ ಸಾರಿ ನೀನು ಸರಿಯಾಗಿ ಮಾತನಾಡಲಿಲ್ಲವಲ್ಲ. ಅವರು ಬರುವುದು ನಿನಗಿಷ್ಟವಿಲ್ಲವೇನೋ.....' ಎಂದರು ಅಮ್ಮ ತಂದಿದ್ದ ತಿಂಡಿಯನ್ನು ನನಗೆ ತಿನ್ನಿಸುತ್ತ. ಜೋರಾಗಿ ನಕ್ಕೆ ನಾನು. `ಬದುಕಲ್ಲಿ ನಾನು ಕಲಿಯುವುದು ಬಹಳಷ್ಟಿದೆ. ಪ್ರತಿ ದಿನ ಹೊಸಹೊಸ ವಿಷಯ ಕಲಿಯುತ್ತಲೇ ಇದ್ದೇನೆ. ಅಂಕಲ್‌ಗೆ ಇಲ್ಲಿಗೆ ಬರಲು ಹೇಳು' ಎಂದೆ. ಅಮ್ಮ ಮೊಬೈಲಿನಿಂದ ಫೋನ್ ಮಾಡಿದರು. ಬರುಬರುತ್ತಾ ಅಮ್ಮ ಹೆಚ್ಚು ಸುಂದರವಾಗುತ್ತಿದ್ದಾಳೆ ಎನ್ನಿಸಿತು. ಹಾಗೆಯೇ ಲವಲವಿಕೆಯೂ ಹೆಚ್ಚುತ್ತಿದೆ. ಶೇಖರ್ ಬಂದರು. ಅವರನ್ನು ಕಂಡಕೂಡಲೇ `ಹಲೋ' ಹೇಳಿದೆ. `ಹೌ ಆರ್ ಯು?' ಎಂದು ಕೇಳಿದೆ. ಶೇಖರ್ ನನ್ನ ತಲೆಯನ್ನು ನೇವರಿಸಿ ತಮ್ಮ ಹೊಟ್ಟೆಗೆ ಆನಿಸಿಕೊಂಡರು. ಅಮ್ಮ ರಾಮಣ್ಣನೊಂದಿಗೆ ಬಹಳ ಹೊತ್ತು ಮಾತನಾಡಿದರು. `ಮನೆ'ಯ ಕಚೇರಿಗೆ ಹೋಗಿಬಂದರು. ಸಮಯ ಎಷ್ಟು ಬೇಗ ಹೋಗಿಬಿಡುತ್ತದೆ. ಈ ಭಾನುವಾರಗಳೇ ಹೀಗೆ. `ನೀವಿನ್ನು ಹೊರಡಿ. ನಿಮ್ಮ ಇಡೀ ಭಾನುವಾರವನ್ನು ನಾನೇ ಕಿತ್ತುಕೊಳ್ಳಲು ನನಗಿಷ್ಟವಿಲ್ಲ. ನಿಮಗೂ ಅರ್ಧ ಭಾನುವಾರ ಉಳಿಯಲಿ' ಎಂದೆ. `ಇಲ್ಲ, ಸಂಜೆಯವರೆಗೂ ಇರುತ್ತೇವೆ' ಎಂದರು ಅಮ್ಮ ಹಾಗೂ ಶೇಖರ್ ಅಂಕಲ್. `ಇಲ್ಲ, ಹೊರಡಿ. ನನಗೂ ಬೇಕಾದಷ್ಟು ಕೆಲಸವಿದೆ' ಎಂದೆ ಕಣ್ಣು ಮಿಟುಕಿಸುತ್ತ. ಪಕ್ಕದಲ್ಲಿ ನಿಂತಿದ್ದ ರಾಮಣ್ಣ ಮುಗುಳ್ನಗುತ್ತಲೇ ಇದ್ದ. ಇಬ್ಬರನ್ನೂ ಬಲವಂತವಾಗಿ ಹೊರಡಿಸಿದೆ. `ಶೇಖರ್ ಅಂಕಲ್ ಜೊತೆ ಪರ್ಸನಲ್ ಆಗಿ ಮಾತನಾಡಬೇಕು' ಎಂದೆ. ಅಮ್ಮನಿಗೆ ಆಶ್ಚರ್ಯವಾಯಿತು. ನಾನು ಏನಾದರೂ ಹೇಳಿಬಿಡಬಹುದೆಂಬ ಆತಂಕವೂ ಆಯಿತು. ಆದರೂ ದೂರ ಹೋಗಿ ನಿಂತರು. ಹತ್ತಿರ ಬಂದ ಶೇಖರ್‌ಗೆ, `ಮೈ ಮದರ್ ಈಸ್ ಎ ಸ್ಟ್ರಾಂಗ್ ವುಮನ್. ಆದರೆ ಆಕೆ ಬದುಕಲ್ಲಿ ಸಾಕಷ್ಟು ನೋವು ತಿಂದಿದಾಳೆ. ಟೇಕ್ ಕೇರ್ ಆಫ್ ಹರ್' ಎಂದೆ. `ನನಗೆ ಗೊತ್ತಿದೆ. ಐ ನೋ ಹರ್ ವೆರಿ ವೆಲ್. ಡೋಂಟ್ ವರಿ' ಎಂದರು ಶೇಖರ್. `ಆದರೆ ನನಗೆ ನನ್ನ ಅಮ್ಮ ಗೊತ್ತಿರುವಷ್ಟು ನಿಮಗೆ ಗೊತ್ತಿರಲಿಕ್ಕಿಲ್ಲ' ಎಂದೆ ಶೇಖರ್‌ರವರ ಕಣ್ಣುಗಳನ್ನೇ ನೋಡುತ್ತಾ. ಶೇಖರ್ ಏನೂ ಹೇಳಲಿಲ್ಲ. ಮುಗುಳ್ನಕ್ಕರು ಅಷ್ಟೆ. `ಇರಲಿ, ನನ್ನ ಬಗ್ಗೆ ಯೋಚಿಸಬೇಡಿ. ಐ ಕೆನ್ ಟೇಕ್ ಕೇರ್ ಆಫ್ ಮೈ ಸೆಲ್ಫ್' ಎಂದೆ ನಗುತ್ತಾ. `ನಾನು ಹೇಳಿದ್ದು ನನ್ನ ಅಮ್ಮನಿಗೆ ಹೇಳಬೇಡಿ' ಎಂದೆ. ಅಮ್ಮ, ಶೇಖರ್ ಇಬ್ಬರೂ ನನ್ನೆಡೆಗೆ ಕೈ ಬೀಸುತ್ತಾ ಹೊರಹೊರಟರು. ನಾನು ಹಾಗೆಯೇ ಹಿಂದಕ್ಕೆ ತಲೆ ವಾಲಿಸಿ ಕಣ್ಣು ಮುಚ್ಚಿದೆ. ತೋಟದಿಂದ ಬೀಸುತ್ತಿರುವ ಗಾಳಿ ತಂಪಾಗಿದೆ ಎನ್ನಿಸಿತು.

ಮಂಗಳವಾರ, ಜುಲೈ 31, 2007

ಕತೆ- ವಿಚಾರಣೆ

ನನ್ನ ಈ ಕತೆ 'ವಿಚಾರಣೆ' ಜುಲೈ 15ರ 'ಉದಯವಾಣಿ'ಯ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾಗಿದೆ. ಓದಿ ತಮ್ಮ ಅನಿಸಿಕೆ ತಿಳಿಸಿ:

ಮುಖದ ಮೇಲೆ ರಪ್ಪನೆ ತಣ್ಣೀರು ಎರಚಿದ್ದರಿಂದ ಚಂದ್ರು ಬೆಚ್ಚಿ ಕಣ್ತೆರೆದು ಮೇಲೇಳಲು ಹೋದ. ಕೈಗಳನ್ನು ಹಿಂದೆ ಕಟ್ಟಿ ಹಾಕಿದ್ದರಿಂದ ಎಳೆದದ್ದಕ್ಕೆ ಕೈ ಮಣಿಗಳು ಕತ್ತರಿಸಿದಂತೆ ನೋವಾಯಿತು. ಬಿಗಿಯಾಗಿ ಕಟ್ಟಿದ್ದದ್ದರಿಂದಲೋ ಏನೋ ಕೈ ಬೆರಳುಗಳೆಲ್ಲಾ ಜೋಮು ಹಿಡಿಯುತ್ತಿದೆಯೆನ್ನಿಸುತ್ತಿತ್ತು. ತಲೆಯ ಮೇಲಿಂದ ನೀರು ಸುರಿದು ಕೂದಲು ಕಣ್ಣಿಗೆ ಅಡ್ಡ ಬರುತ್ತಿತ್ತು. ನೀರು ತೊಟ್ಟಿಕ್ಕುತ್ತಿದ್ದುದರಿಂದ ಮುಂದೆ ನಿಂತಿದ್ದವರು ಸರಿಯಾಗಿ ಕಾಣುತ್ತಿರಲಿಲ್ಲ. ಹಾಗೇ ಕಣ್ಣು ನಿಟ್ಟಿಸಿ ನೋಡಿದ. ಅದೇ ಪೋಲಿಸಿನವನು ಮುಗುಳ್ನಗುತ್ತಾ ನಿಂತಿದ್ದ. ಎಡಗೈಯಲ್ಲಿ ನೀರಿನ ಬಕೀಟು, ಬಲಗೈಯಲ್ಲಿ ಮಗ್ ಹಿಡಿದಿದ್ದ. ತಲೆ ಭಾರಕ್ಕೆ ಮುಂದೆ ತೂಗಿಬೀಳುತ್ತಿತ್ತು. ನಿದ್ರೆ ಇಲ್ಲದ್ದರಿಂದ ಕಣ್ಣೆವೆಗಳು ಮಣಗಟ್ಟಲೇ ಭಾರವೆನ್ನಿಸಿ ಹಾಗೆಯೇ ಮುಚ್ಚಿಕೊಂಡು ಹೋಗಲು ತವಕಿಸುತ್ತಿದ್ದವು. ಕೋಣೆಯಲ್ಲಿ ಪ್ರಖರ ಬೆಳಕು, ಅವನಿಗೆ ನೆನಪಿರುವಾಗಿನಿಂದ ಅವುಗಳನ್ನು ಆಫ್ ಮಾಡಿಯೇ ಇಲ್ಲ. ಹೊರಗಿನ ಬೆಳಕು ಆ ಕೋಣೆಗೆ ಬರುತ್ತಲೇ ಇರಲಿಲ್ಲ. ಅದು ರಾತ್ರಿಯೋ ಹಗಲೋ ಯಾವುದೂ ಚಂದ್ರುವಿಗೆ ತಿಳಿದಿರಲಿಲ್ಲ. ಕಣ್ಣು ಬಲವಂತವಾಗಿ ತೆರೆದಿರಲೇ ಬೇಕಾಗಿತ್ತು. ಮುಚ್ಚಿದರೆ ಮುಖದ ಮೇಲೆ ರಪ್ಪನೆ ತಣ್ಣೀರು ಸಿಡಿಯುತ್ತದೆ. ಆ ನೀರಿನ ಹೊಡೆತ ಕೆನ್ನೆಯ ಮೇಲೆ ಬಲವಾಗಿ ಭಾರಿಸಿದಂತಿರುತ್ತದೆ. ಚಂದ್ರುವಿನ ಮನಸ್ಸು ಎಲ್ಲೆಲ್ಲೋ ಹರಿದಾಡುತ್ತಿತ್ತು, ಯಾವ ಭೌತಿಕ ನಿಯಮಗಳಿಗೂ ನಿಲುಕದ ಪ್ರೇತಾತ್ಮದಂತೆ.
ಅಡುಗೆ ಮನೆಯಲ್ಲಿ ಪಾತ್ರೆ ಠಳಾರನೆ ಕುಕ್ಕಿದ ಸದ್ದು. ಪುಸ್ತಕದಲ್ಲಿ ಮಗ್ನನಾಗಿದ್ದ ಚಂದ್ರುವಿಗೆ ಓದುತ್ತಿದ್ದ ಸಾಲು ತಪ್ಪಿಹೋಯಿತು. `ಇದೊಂದು ಬದುಕೇ?' ಗೊಣಗಿದಳು ಸರೋಜ. ಪುಸ್ತಕವನ್ನು ಬಲವಂತವಾಗಿ ಓದಲು ಪ್ರಯತ್ನಿಸಿದ ಚಂದ್ರು. `ಈ ಅಡಿಗೇ ಮನೆಯಲ್ಲೇ ಸೊರಗಿ ಸೊರಗಿ ಸಾಯಬೇಕು. ನನಗ್ಯಾವ ಕರ್ಮ!' ಸರೋಜಳ ಗೊಣಗಾಟ ಮುಂದುವರಿದಿತ್ತು, ಅವಳ ಸಿಟ್ಟಿನ ದಾಳಿಗೆ ಪಾತ್ರೆಗಳು ಬಲಿಯಾಗುತ್ತಿದ್ದವು, ತಮ್ಮ ಆಕಾರ ಕಳೆದುಕೊಳ್ಳುತ್ತಿದ್ದವು. `ಇವರೊಬ್ಬರು ಸುತ್ತಾಡಿ ಪ್ರಪಂಚ ನೋಡಿದರೆ ಸಾಕು, ನಾವೇನೂ ನೋಡುವುದು ಬೇಡವೇ? ನಾವೇನು ಮನುಷ್ಯರಲ್ಲವೆ?' `ಇವಳ್ಯಾಕೆ ಹೀಗೆ ಆಡುತ್ತಾಳೆ? ಇವಳಿಗೆಷ್ಟು ಬುದ್ಧಿ ಹೇಳುವುದು? ಎರಡು ದಿನ ರಜೆ ಸಿಕ್ಕಿದರೆ ಸಾಕು, ಎಲ್ಲಿಗಾದರೂ ಹೋಗೋಣವೆನ್ನುತ್ತಾಳೆ. ಎಲ್ಲಿಗೆ ಹೋಗುವುದು? ಎಲ್ಲಿ ಹೋದರೂ ಟೂರಿಸ್ಟುಗಳ ಸಂತೆ, ಗಜಿಬಿಜಿ. ಇವಳಿಗೇಕೆ ಅರ್ಥವಾಗುವುದಿಲ್ಲ?' ಇನ್ನು ಪುಸ್ತಕ ಓದುವುದು ಸಾಧ್ಯವಿಲ್ಲವೆನ್ನಿಸಿ ಒಂದರೆಕ್ಷಣ ಕಣ್ಣುಮುಚ್ಚ ಬೇಕೆನಿಸಿತು. ನಿದ್ರೆ ಎಳೆದುಕೊಂಡು ಬರುತ್ತಿತ್ತು. ಹಾಗೆಯೇ ತಲೆ ಹಿಂದಕ್ಕೆ ಮಾಡಿ ಕಣ್ಣುಮುಚ್ಚಿದ. ರಪ್ಪನೆ ತಣ್ಣೀರು ಮುಖಕ್ಕೆ ಹೊಡೆಯಿತು.
ಚಂದ್ರು ಬೆಚ್ಚಿ ಕಣ್ಣು ತೆರೆದ. ಎದುರಿನ ಪೋಲೀಸಪ್ಪನ ಮುಖದಲ್ಲಿ ಅದೇ ಮುಗುಳ್ನಗು, ಅವನ ಕೈಯಲ್ಲಿ ಅದೇ ಬಕೀಟು, ಅದೇ ಮಗ್ಗು. ತಲೆ ವಿಪರೀತ ಸಿಡಿಯುತ್ತಿತ್ತು. ಆ ಪೋಲೀಸಿನ ಪಕ್ಕ ಮತ್ತೊಬ್ಬಾತ ನಿಂತಿದ್ದ. ಪೋಲೀಸ್ ಯೂನಿಫಾರ್ಮ್, ಕೈಯಲ್ಲೊಂದು ನವಿರಾಗಿ ಪಾಲೀಶು ಮಾಡಿದ ಕೋಲು. ಅದರ ತುದಿಗಳಲ್ಲಿನ ಹಿತ್ತಾಳೆ ಕೋಣೆಯ ಪ್ರಖರ ಬೆಳಕಿನಲ್ಲಿ ಫಳಫಳ ಹೊಳೆಯುತ್ತಿತ್ತು. ಬಕೀಟು ಹಿಡಿದಿದ್ದ ಪೋಲೀಸು ಹಿಂದೆ ಸರಿದುನಿಂತ. ಕೋಲು ಹಿಡಿದಿದ್ದ ಪೋಲೀಸು ಮುಂದೆಬಂದ. ಮುಂದಕ್ಕೆ ತೂಗಿ ಬೀಳುತ್ತಿದ್ದ ಚಂದ್ರುವಿನ ತಲೆಯನ್ನು ಆ ಕೋಲಿನಿಂದ ಗಲ್ಲಕ್ಕೆ ಆನಿಸಿ ಹಿಡಿದು ಮೇಲಕ್ಕೆ ಎತ್ತಿದ. ಎಡಗೈಯಲ್ಲಿ ಚಂದ್ರುವಿನ ಕಣ್ಣಿನ ಮೇಲೆ ಬೀಳುತ್ತಿದ್ದ ಕೂದಲನ್ನು ಪಕ್ಕಕ್ಕೆ ಸರಿಸಿದ. ಚಂದ್ರುವಿನ ಎದೆ ಢವಢವಗುಟ್ಟತೊಡಗಿತು. ಆ ಪೋಲಿಸಿನವನ ಮುಖವನ್ನು ನೋಡಲೂ ಹೆದರಿಕೆಯಾಯಿತು. ಗಲ್ಲಕ್ಕೆ ಆನಿಸಿದ್ದ ಕೋಲು ತೆಗೆದಾಕ್ಷಣ ತಲೆ ಮುಂದಕ್ಕೆ ಬಾಗಿತು.
`ನಿಮ್ಮ ಹೆಸರು ಬಿ.ಎಂ. ಚಂದ್ರಶೇಖರ್ ಅಲ್ಲವೆ?' ಅ ಪೋಲಿಸಿನವ ಕೇಳಿದ.
`ಹೌದು' ತಲೆಯಾಡಿಸಿದ ಚಂದ್ರು.
`ಸರೋಜ ನಿಮಗೇನಾಗಬೇಕು?' ಪೋಲೀಸಿನವನ ಪ್ರಶ್ನೆ.
`ಹೆಂಡತಿ' ಹೇಳಿದ ಚಂದ್ರು.
`ಆಕೆಯನ್ನು ಏಕೆ ಕೊಂದಿರಿ?'
ಆವಾಕ್ಕನೆ ಬೆಚ್ಚಿದ ಚಂದ್ರು. ತಾನು ಕೊಲೆಗಾರನೇ? ಸಾಧ್ಯವೇ ಇಲ್ಲ. ತಾನೇಕೆ ಆಕೆಯನ್ನು ಕೊಲೆಮಾಡಬೇಕು? ತಾನಂಥ ವ್ಯಕ್ತಿಯೇ ಅಲ್ಲ. ತಾನೆಂದೂ ಒಂದು ಇರುವೆಯನ್ನೂ ಹೊಸಕಿಹಾಕಿದವನಲ್ಲ. ಅವನನ್ನು ಏಕೆ ಹಿಡಿದು ಕಟ್ಟಿಹಾಕಿರುವರೆಂದು ಅವನಿಗೆ ಈಗರ್ಥವಾಗತೊಡಗಿತು. ಮೈ ಬೆವರತೊಡಗಿತು. ಗಳಗಳನೆ ಅಳತೊಡಗಿದ.
`ನೀವು ನಿಮ್ಮ ಹೆಂಡತಿಯನ್ನು ಕೊಂದಿದ್ದೇಕೆಂದು ಹೇಳುತ್ತೀರಾ?' ಪೋಲೀಸನ ಧ್ವನಿ ಬಹಳ ಮೃದುವಾಗಿತ್ತು, `ನನಗೊಂದು ಚಾಕಲೇಟು ಕೊಡುವಿರೇನು?' ಎನ್ನುವಂತಿತ್ತು.
`ಇಲ್ಲ, ನಾನು ಕೊಲೆಮಾಡಿಲ್ಲ. ನಾನು ಅಂಥವನಲ್ಲ' ಚಂದ್ರುವಿನ ಧ್ವನಿ ಗದ್ಗಿತವಾಗಿತ್ತು.
`ನೀವು ನಿಮ್ಮ ಹೆಂಡತಿಯನ್ನು ದ್ವೇಷಿಸು-ತ್ತಿದ್ದಿರೇನು?'
`ಇಲ್ಲ'
ಚಂದ್ರುವಿನ ತಲೆ ಗಿರಗಿರನೆ ತಿರಗತೊಡಗಿತು. `ನಿನಗೆ ನನ್ನನ್ನು ಕಂಡರೆ ಅಷ್ಟಕ್ಕಷ್ಟೇ ಅಲ್ಲವೆ?' ಒಂದು ದಿನ ಸರೋಜ ಕೇಳಿದ್ದಳು.
`ನೀನು ನನ್ನನ್ನು ಪೀಡಿಸದೇ ಇದ್ದರೆ, ನೀನು ನಿಜವಾಗಿಯೂ ನನ್ನ ಪ್ರೀತಿಯ ಹುಡುಗಿ', ಹೇಳಿದ್ದ ಚಂದ್ರು.
`ನೀನು ನಿನ್ನ ಪುಸ್ತಕ, ಬರವಣಿಗೆ, ಕಂಪ್ಯೂಟರ್, ಇಂಟರ್‌ನೆಟ್ ಜಗತ್ತಿನಿಂದ ಹೊರಗೆ ಬಂದು ನನಗೂ, ಮಕ್ಕಳಿಗೂ ಸ್ವಲ್ಪ ಸಮಯ ಕೊಡು. ನಿನಗೆ ನಿನ್ನದೇ ಜಗತ್ತು. ನಿನ್ನಂಥವರು ಮದುವೆಯಾಗಲೇಬಾರದು. ನಿನ್ನಂಥವರಿಗೆ ಹೆಂಡತಿ, ಮಕ್ಕಳು ಏಕೆ ಬೇಕೆ ಹೇಳು?' ಸರೋಜಳ ಧ್ವನಿ ಕಟುವಾಗತೊಡಗಿತ್ತು.
ಇನ್ನು ಹೆಚ್ಚು ಮಾತಾಡಿದರೆ ಮಾತಿಗೆ ಮಾತು ಬೆಳೆಯುತ್ತದೆಂದು ಚಂದ್ರು, ನೋಡುತ್ತಿದ್ದ ಟಿ.ವಿ. ಆಫ್ ಮಾಡಿದ. ಪಕ್ಕದಲ್ಲಿ ಕೂತಿದ್ದ ಸರೋಜಳನ್ನು ತನ್ನೆಡೆಗೆ ಎಳೆದುಕೊಂಡು ಅವಳ ತಲೆಯ ಮೇಲೆ ತಲೆ ವಾಲಿಸಿ ಕಣ್ಣುಮುಚ್ಚಿದ.
ಕಪಾಳಕ್ಕೆ ಬಲವಾಗಿ ಬಾರಿಸಿದಂತೆ ತಣ್ಣೀರು ಮುಖಕ್ಕೆ ಹೊಡೆಯಿತು. ಬೆಚ್ಚಿ ಎದ್ದ ಚಂದ್ರು. ಬಾಯಿ ಒಣಗುತ್ತಿತ್ತು. ಪ್ರಶ್ನೆ ಕೇಳುತ್ತಿದ್ದ ಪೋಲೀಸ್ ಇರಲಿಲ್ಲ. ಬಕೀಟು ಹಿಡಿದಿದ್ದ ಪೋಲೀಸ್ ಮುಗುಳ್ನಗುತ್ತಿದ್ದ. ಕೈ ಕಟ್ಟಿರುವುದನ್ನು ಮರೆತು ಮೇಲೇಳಲು ಹೊರಟ. ಕಟ್ಟಿದ್ದ ಕೈ ಹಿಂದಿನಿಂದ ಬಲವಾಗಿ ಜಗ್ಗಿದಂತಾಗಿ ಕೈ ಕತ್ತರಿಸಿದಷ್ಟು ನೋವಾಯಿತು.
`ನೀರು' ಎಂದ ಚಂದ್ರು.
ನಿಂತಿದ್ದ ಪೋಲೀಸ್ ರಪ್ಪನೆ ಇನ್ನೊಂದಷ್ಟು ತಣ್ಣೀರು ಮುಖಕ್ಕೆ ರಾಚಿದ. ಮುಗುಳ್ನಕ್ಕ.
`ಕುಡಿಯಲು ನೀರು' ಎಂದ ಚಂದ್ರು ಆರ್ತನಾಗಿ.
ಪೋಲೀಸ್ ಮತ್ತೊಮ್ಮೆ ನೀರು ಮುಖಕ್ಕೆ ಬಲವಾಗಿ ರಾಚಿದ. ಮುಗುಳ್ನಕ್ಕ.
ಚಂದ್ರುವಿನ ಮುಖವೆಲ್ಲ ಮುಳ್ಳಿನ ಪೊರಕೆಯಿಂದ ಹೊಡೆದಂತೆ ಉರಿಯುತ್ತಿತ್ತು. ಒಂದರೆಕ್ಷಣ ಕಣ್ಣು ಮುಚ್ಚಲು ಬಿಟ್ಟರೆ ಸಾಕೆನ್ನುಸುತ್ತಿತ್ತು. ಗಟಗಟನೆ ನೀರು ಕುಡಿಯಬೇಕೆಂಬ ಬಾಯಾರಿಕೆಯಾಗುತ್ತಿದ್ದರೂ ನೀರು ಕೇಳಲು ಹೆದರಿಕೆಯಾಯಿತು. ತಲೆಯಿಂದ ಮುಖದ ಮೇಲೆ ತೊಟ್ಟಿಕ್ಕುತ್ತಿದ್ದ ನೀರ ಹನಿಗಳನ್ನು ನಾಲಿಗೆ ಚಾಚಿ ಒಣಗಿದ ತುಟಿ ಸವರಿಕೊಂಡ. ವಿಪರೀತ ತಲೆ ಭಾರ, ನಿದ್ರೆ ಎಳೆದುಕೊಂಡು ಬರುತ್ತಿತ್ತು. ಒಂದರೆಕ್ಷಣ ಕಣ್ಣು ಮುಚ್ಚಿದರೆ ಸಾಕೆನ್ನಿಸುತ್ತಿತ್ತು. ಬೆನ್ನ ಹಿಂದೆ ಕುರ್ಚಿಗೆ ಕಟ್ಟಿದ್ದ ಕೈಗಳು ತನಗೆ ಸೇರಿದುವಲ್ಲ ಅನ್ನಿಸುತ್ತಿತ್ತು. ಕುತ್ತಿಗೆ, ಬೆನ್ನು, ಸೊಂಟ, ಮೊಣಕಾಲು ಎಲ್ಲ ವಿಪರೀತ ನೋಯುತ್ತಿತ್ತು. ಸಂಪೂರ್ಣ ಮೈಕೈ ಚಾಚಿ ಮಲಗಬೇಕೆನ್ನಿಸಿತು.
ಕೋಣೆಯೊಳಕ್ಕೆ ಯಾರೋ ಬಂದಂತಾ-ಯಿತು. ತಲೆ ಎತ್ತಿ ನೋಡಿದ. ಪ್ರಶ್ನೆ ಕೇಳಿದ ಪೋಲೀಸ್. ಆತ ಪಕ್ಕಕ್ಕೆ ಸರಿದುನಿಂತಾಗ ಒಬ್ಬ ಹೆಂಗಸು ಮತ್ತು ಮತ್ತೊಬ್ಬಾತ ಕಾಣಿಸಿದರು. ಕಣ್ಣಿಗೆ ಹೊಡೆಯುತ್ತಿದ್ದ ಪ್ರಖರ ಲೈಟಿನ ಬೆಳಕಿನಲ್ಲಿ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಣ್ಣು ಕಿರಿದುಮಾಡಿ ನೋಡಿದ. ಸರೋಜಳ ತಾಯಿ ಮತ್ತು ಆಕೆಯ ಅಣ್ಣ. ಚಂದ್ರುವನ್ನು ನೋಡಿದಾಕ್ಷಣ ಆಕೆ ಗೊಳೋ ಎಂದು ಅಳತೊಡಗಿದರು. ಸರೋಜಳ ಅಣ್ಣ ರಮೇಶ ಇದ್ದಕ್ಕಿದ್ದಂತೆ ಎದುರು ನುಗ್ಗಿ ಚಂದ್ರುವಿನ ಕುತ್ತಿಗೆ ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದು, `ಕಟುಕ ನನ್ನ ಮಗನೇ' ಎಂದು ಅರಚಿದ. ನಿಂತಿದ್ದ ಪೋಲೀಸ್ ರಮೇಶನನ್ನು ತಕ್ಷಣ ಹಿಡಿದು ಹಿಂದಕ್ಕೆ ಎಳೆದ. ರಮೇಶ ಎರಗಿದ ರಭಸಕ್ಕೆ ಚಂದ್ರುವನ್ನು ಕಟ್ಟಿಹಾಕಿದ್ದ ಕುರ್ಚಿ ಹಿಂದಕ್ಕೆ ಬಿದ್ದು ನೆಲಕ್ಕೆ ಚಂದ್ರುವಿನ ತಲೆ ಅಪ್ಪಳಿಸಿತು. ಮೊದಲೇ ನೋಯುತ್ತಿದ್ದ ತಲೆ ಧಿಮಿಗುಟ್ಟತೊಡಗಿತು. ಬಕೀಟು ಹಿಡಿದಿದ್ದ ಪೋಲೀಸ್ ಬಕೀಟು ಪಕ್ಕಕ್ಕಿರಿಸಿ ಚಂದ್ರುವಿನ ಸಮೇತ ಕುರ್ಚಿಯನ್ನು ಎತ್ತಿರಿಸಿದ.
ಸರೋಜಳ ತಾಯಿ ಮುಂದೆ ಬಂದು, `ನನ್ನ ಮಗಳು ನಿನಗೇನು ಮಾಡಿದ್ದಳಪ್ಪಾ, ಅವಳನ್ನೇಕೆ ಅನ್ಯಾಯವಾಗಿ ಕೊಂದೆ?' ಎಂದರು ಕೈ ಜೋಡಿಸಿ.
ಅತ್ಯಂತ ಹಿಂಸೆ ಅನುಭವಿಸುತ್ತಿದ್ದರೂ ಸಾವರಿಸಿಕೊಂಡ ಚಂದ್ರು, `ಇಲ್ಲ ಅತ್ತೆ. ನಾನು ಕೊಂದಿಲ್ಲ. ಅವಳು ನನ್ನ ಹೆಂಡತಿಯಲ್ಲವೇ, ನನ್ನ ಮಕ್ಕಳ ತಾಯಿಯಲ್ಲವೆ? ನಾನೇಕೆ ಕೊಲ್ಲಲಿ? ಹೆಂಡತಿಯನ್ನು ಕಳೆದುಕೊಂಡ ನನ್ನ ದುಃಖವನ್ನು ಯಾರೂ ಕೇಳುತ್ತಿಲ್ಲವಲ್ಲ. ನನ್ನ ಮೇಲೇಕೆ ಸಂಶಯ ಬರುತ್ತಿದೆ?' ಎಂದ. ತಲೆಯಿಂದ ತೊಟ್ಟಿಕ್ಕುತ್ತಿದ್ದ ನೀರಿನ ಹನಿಗಳಲ್ಲಿ ಆತನ ಕಣ್ಣೀರು ಆಕೆಗೆ ಕಾಣಲಿಲ್ಲ.
`ನಿನಗೇನು ಬೇಕಾದರೂ ಕೊಡುತ್ತಿದ್ದೆವು. ನಿನಗೆ ಅದ್ಹೇಗೆ ಮನಸ್ಸು ಬಂತು? ಇದ್ದ ಒಬ್ಬ ಮಗಳನ್ನೂ ಬಾಯಿಗೆ ಹಾಕಿಕೊಂಡು ಬಿಟ್ಟೆಯೆಲ್ಲಾ!' ಸರೋಜಳ ತಾಯಿ ನೆಲಕ್ಕೆ ಕುಸಿದು ಗೋಳಾಡ-ತೊಡಗಿದರು.
`ನಾನಲ್ಲ, ನಾನೇನು ಮಾಡಿಲ್ಲ' ಎಂದು ಚಂದ್ರು ಹೇಳುತ್ತಿದ್ದುದು ಯಾರಿಗೂ ಕೇಳಿಸುತ್ತಿರ-ಲಿಲ್ಲ.
`ನಿನ್ನದು ಜಾಣ ಕಿವುಡು' ಎಂದಳು ಸರೋಜ, ಪುಸ್ತಕ ಓದುತ್ತಿದ್ದ ಚಂದ್ರುವಿನ ಬಳಿ ಬಂದು ಕಾಫಿ ಲೋಟವನ್ನು ಟೀಪಾಯಿಯ ಮೇಲಿಡುತ್ತ.
`ಏನಂದೆ?' ಎಂದ ಚಂದ್ರು.
`ಏನೂ ಇಲ್ಲ. ನನ್ನ ಮಾತು ನಿನಗೆ ಕೇಳಿಸುವುದೇ ಇಲ್ಲ. ಮುಂದಿನ ವಾರದಿಂದ ಮಕ್ಕಳಿಗೆ ರಜೆ. ಇಡೀ ವರ್ಷವೆಲ್ಲಾ ಮನೆಯಲ್ಲೇ ಕೊಳೆತು ಬಿದ್ದಿದ್ದೇನೆ. ಎಲ್ಲಾದರೂ ಹೋಗೋಣ' ಎಂದಳು ಸರೋಜ ಸೋಫಾದ ಮೇಲೆ ಪಕ್ಕದಲ್ಲಿ ಕೂಡುತ್ತಾ.
`ಈ ಸುಡು ಬಿಸಿಲಿನಲ್ಲಿ ಎಲ್ಲಿಗೆ ಹೋಗುವುದು? ಅದೊಂದು ರೀತಿಯ ಹಿಂಸೆ. ಮನೆಯಲ್ಲೇ ಆರಾಮಾಗಿ ಇರಬಹುದಲ್ಲಾ?'
`ಬೇಸಿಗೆಯಲ್ಲಿ ಊಟಿ, ಕೊಡೈಕೆನಾಲ್, ಮುನ್ನಾರ್ ಎಲ್ಲಿಗಾದರೂ ಹೋಗೋಣ. ಎಲ್ಲಿಗಾದರೂ ಸರಿ, ಈ ಮನೆಯಿಂದ ಹೊರಗೆ ತೊಲಗಿದರೆ ಸಾಕು' ಎಂದಳು.
`ಬೇಸಿಗೆಯಲ್ಲಿ ಅಲ್ಲೆಲ್ಲಾ ಜನ ಜಾತ್ರೆಯಿರುತ್ತದೆ. ಅದೊಂದು ಸಂತೆ. ಅಲ್ಲೆಲ್ಲಾ ಆ ಜನಜಂಗುಳಿಯಲ್ಲಿ ಓಡಾಡುವುದು ಒಂದು ನರಕ ಯಾತನೆ. ಬೇಡ' ಕಾಫಿ ಕಪ್ಪನ್ನು ನೋಡುತ್ತ ಹೇಳಿದ ಚಂದ್ರು. ಯಾವುದಾದರೂ ಎರಡು ಮೂರು ದಿನಗಳ ರಜೆ ಬಂತೆಂದರೆ ಚಂದ್ರುವಿನಲ್ಲಿ ಅವರ್ಣನೀಯ ಹಿಂಸೆ ಪ್ರಾರಂಭವಾಗುತ್ತಿತ್ತು.
ಅವನ ಕಲ್ಪನೆಯ ಪ್ರವಾಸವೇ ಬೇರೆ, ಸರೋಜಳ ಕಲ್ಪನೆಯ ಪ್ರವಾಸವೇ ಬೇರೆ. ಫಾರೆಸ್ಟ್ ಡಿಪಾರ್ಟ್‌ಮೆಂಟಿನಲ್ಲಿ ಅವನಿಗೆ ಹಲವಾರು ಗೆಳೆಯರಿದ್ದರು. `ಯಾವುದಾದರೂ ಕಾಡಿಗೆ ಹೋಗೋಣ, ಚೆನ್ನಾಗಿರುತ್ತದೆ' ಎಂದು ಅವನು ಹೇಳಿದರೆ ಆಕೆ ಸುತರಾಂ ಒಪ್ಪುತ್ತಿರಲಿಲ್ಲ. `ಹೋಗಲಿ ಕುಪ್ಪಳಿಗೆ ಹೋಗೋಣ, ಕುವೆಂಪು ಮನೆ, ಕವಿ ಶೈಲ ನೋಡಿಬರಬಹುದು. ರಾತ್ರಿಗಳಂತೂ ಕವಿ ಶೈಲ ಅದ್ಭುತವಾಗಿರುತ್ತದೆ' ಎಂದರೆ ಚಂದ್ರು, `ನೀನೂ, ನಿನ್ನ ಸಾಹಿತ್ಯ ಹಾಳಾಗಿ ಹೋಗಲಿ. ನಿನಗೆ ಬೇರೆ ಜಗತ್ತೇ ಬೇಡ. ಯಾವಾಗ ನೋಡಿದರೂ ಸೆಮಿನಾರು, ಕವಿಗೋಷ್ಠಿ ಅಂತ ಬ್ಯುಸಿಯಾಗಿರ್‍ತೀಯ. ಓದೋದಿದೆ, ಬರೆಯೋದಿದೆ ಅಂತ ವರ್ಷವೆಲ್ಲಾ ಸಾಯ್ತಾ ಇರ್‍ತೀಯಾ. ರಾಶಿ ರಾಶಿ ಓದಿ, ಮಣಗಟ್ಟಲೇ ಬರೆದು ಏನು ಕಡಿದು ಕಟ್ಟಿಹಾಕಬೇಕು ಅಂತಿದೀಯಾ?' ಸೆಟೆದು ಎದ್ದು ನಿಂತಳು. ಚಂದ್ರು ಓದುತ್ತಿದ್ದ ಪುಸ್ತಕ ಕಿತ್ತು ಎಸೆದಳು.
ಅವಳ ಅನಿರೀಕ್ಷಿತ ದಾಳಿಯಿಂದ ಒಂದರೆಕ್ಷಣ ಬೆಚ್ಚಿದ ಚಂದ್ರುವಿಗೆ ದೂರದಲ್ಲಿ ಬಿದ್ದ ಪುಸ್ತಕ ಕಂಡು ಸರೋಜಳ ಮೇಲೆ ವಿಪರೀತ ಸಿಟ್ಟುಬಂತು. `ಹಾಳಾದವಳ ಕಪಾಳಕ್ಕೆ ಬಾರಿಸಲೇ? ಕುತ್ತಿಗೆ ಹಿಸುಕಿ ಬಾಯಿಗೆ ಬಂದಂತೆ ಬೈಯ್ಯುವ ಅವಳ ಬಾಯನ್ನು ಮುಚ್ಚಿಬಿಡಲೇ?' ಎಂದು-ಕೊಂಡ. ಅಸಹಾಯಕನಾಗಿ ಏನು ಮಾಡಲೂ ತೋಚದೆ, ಕಾಫಿಯನ್ನೂ ಕುಡಿಯದೆ ರೂಮಿಗೆ ಹೋಗಿ ಬಾಗಿಲು ಹಾಕಿ ಹಾಸಿಗೆಯ ಮೇಲೆ ಒರಗಿ ಕಣ್ಣುಮುಚ್ಚಿದ.
ಮುಖಕ್ಕೆ ತಣ್ಣೀರು ರಪ್ಪನೆ ಹೊಡೆಯಿತು. ಬೆಚ್ಚಿ ಕಣ್ತೆರೆದ. ಅದೇ ಮುಗುಳ್ನಗುವ ಪೋಲೀಸ್. ಪಕ್ಕದಲ್ಲಿ ಮತ್ತೊಬ್ಬಾತ ನಿಂತಿದ್ದ. ಆತ ಮುಂದಕ್ಕೆ ಬಂದು,
`ಮಿಸ್ಟರ್ ಚಂದ್ರಶೇಖರ್, ನೀವು ನಿಮ್ಮ ಹೆಂಡತಿಯನ್ನು ಕತ್ತುಹಿಸುಕಿ ಕೊಂದಿದ್ದೀರಲ್ಲವೆ?' ಎಂದು ಕೇಳಿದ. ಬೆಚ್ಚಿಬಿದ್ದ ಚಂದ್ರು. ಮೈ ನಡುಗುತ್ತಿತ್ತು. ಮುಖಕ್ಕೆ ರಾಚುತ್ತಿದ್ದ ತಣ್ಣೀರಿನಿಂದ ಮೈ ಎಲ್ಲಾ ಒದ್ದೆಯಾಗಿತ್ತು. ನೀರು ಕೊರೆಯುತ್ತಿತ್ತು. ನೀರಿಗೆ ಐಸ್ ಹಾಕಿರಬಹುದು ಎಂದುಕೊಂಡ. `ನನ್ನ ಮನಸ್ಸಿನ ಎಲ್ಲ ಆಲೋಚನೆಗಳನ್ನು ಪೋಲಿಸಿನವ ಪರದೆಯ ಮೇಲಿನ ಸಿನೆಮಾದಂತೆ ಕಾಣುತ್ತಿದ್ದಾನೆ' ಎಂದನ್ನಿಸಿತು.
`ಸಿಟ್ಟಿನ ಭರದಲ್ಲಿ ಅವಳನ್ನು ಕೊಲ್ಲುವ ಆಲೋಚನೆ ಬಂದಿತ್ತು. ಆದರೆ ನಾನಂಥವನಲ್ಲ. ನಾನವಳನ್ನು ಕೊಂದು ಏನೂ ಸಾಧಿಸಬೇಕಾಗಿಲ್ಲ' ಎಂದ ಚಂದ್ರು.
`ಆದರೆ ಈ ಎರಡು ಲಕ್ಷ ನಿಮಗೆ ಬೇಕಾಗಿತ್ತಲ್ಲವೆ?' ಯಾವುದೋ ಪತ್ರವನ್ನು ಆ ಸಿವಿಲ್ ಡ್ರೆಸ್‌ನ ಪೋಲೀಸ್ ಮುಂದೆ ಹಿಡಿದ.
ಚಂದ್ರು ಕಣ್ಣು ಕಿರಿದುಮಾಡಿ ಆ ಪತ್ರವನ್ನು ದಿಟ್ಟಿಸಿದ. ಅದು ಅವಳ ಇನ್ಶೂರೆನ್ಸ್ ಪಾಲಿಸಿ. ಆ ನೋವಿನಲ್ಲೂ ಚಂದ್ರು ನಕ್ಕ. ವಿಷಯ ಎಲ್ಲಿಂದೆಲ್ಲಿಗೆ ಹೋಗುತ್ತಿದೆ? ಸರೋಜಳೇ ಕೇಳಿದ್ದಳು, `ನನ್ನ ಹೆಸರಿನಲ್ಲೊಂದು ಇನ್ಶೂರೆನ್ಸ್ ಪಾಲಿಸಿ ಮಾಡಿಸಿ. ಅದರ ಮೆಚ್ಯೂರಿಟಿ ಹಣಬಂದಾಗ, ನಾನು ಯೂರೋಪ್ ಟೂರ್ ಹೋಗುತ್ತೇನೆ. ಅಷ್ಟರಲ್ಲಿ ನನಗೇನಾದರೂ ಆದರೆ, ಮಕ್ಕಳಿಗಾದರೂ ಪ್ರಪಂಚ ತೋರಿಸಿ' ಎಂದು.
`ಈ ಪಾಲಿಸಿ ನಿಮಗೆಲ್ಲಿ ಸಿಕ್ಕಿತು?' ಕೇಳಿದ ಚಂದ್ರು.
`ನಿಮ್ಮ ಹೆಂಡತಿಯ ಅಣ್ಣ ರಮೇಶ್ ಕೊಟ್ಟರು. ಇದಕ್ಕಾಗೇ ನೀವು ನಿಮ್ಮ ಹೆಂಡತಿಯನ್ನು ಕೊಂದಿದ್ದೀರಂತೆ?'
ಚಂದ್ರುವಿನ ಕಣ್ಣು ಮಂಜಾಗುತ್ತಿತ್ತು. ಏನೇನೂ ಸರಿಯಾಗಿ ಕಾಣುತ್ತಿರಲಿಲ್ಲ, ಮಾತು ಎಲ್ಲೋ ದೂರದಿಂದ ಬರುವಂತೆ ಕೇಳುತ್ತಿತ್ತು, ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಕುರ್ಚಿಯ ಮೇಲಿನ ತನ್ನ ದೇಹ ಭಾರಕ್ಕೆ ಕೆಳಕ್ಕೆ ಭೂಮಿಯೊಳಕ್ಕೆ ಕುಸಿಯುತ್ತಿರುವಂತೆ ಭಾಸವಾಗುತ್ತಿತ್ತು.
`ಈ ಇನ್ಶೂರೆನ್ಸ್ ಪಾಲಿಸಿಯ ಎರಡು ಲಕ್ಷಕ್ಕೆ ಯಾಕೆ ಕೊಲ್ಲಬೇಕಿತ್ತು? ಬೇಕಿದ್ದರೆ ಅದರ ಎರಡು ಪಟ್ಟು ಹಣವನ್ನು ನಾನೇ ಕೊಡುತ್ತಿದ್ದೆ ಎಂದರು ನಿಮ್ಮ ಹೆಂಡತಿಯ ಅಣ್ಣ' ಎಂದು ಪೋಲೀಸ್ ಹೇಳಿದಾಗ ಚಂದ್ರು ಗಳಗಳನೆ ಅತ್ತ.
`ನಾನ್ಯಾಕೆ ಕೊಲ್ಲಲಿ? ನನಗೇಕೆ ಹಣ ಬೇಕು? ಈಗಿರುವ ಮನೆ ಎಲ್ಲಾ ಅವಳ ಹೆಸರಿನಲ್ಲೇ ಮಾಡಿದ್ದೇನಲ್ಲ? ದಯವಿಟ್ಟು ನನ್ನನ್ನು ಬಿಟ್ಟುಬಿಡಿ. ನನಗೇನೂ ಗೊತ್ತಿಲ್ಲ. ನನ್ನ ಮಕ್ಕಳೇನು ಮಾಡುತ್ತಿದ್ದಾರೆ?' ಚಂದ್ರು ಗೋಗರೆದ.
`ಮಕ್ಕಳು ರಜೆಯಲ್ಲಿ ಅಜ್ಜಿಯ ಮನೆಗೆ ಹೋಗುತ್ತಾರಂತೆ. ನಾವಿಬ್ಬರೂ ಒಂದೆರಡು ದಿನ ಎಲ್ಲಿಗಾದರೂ ಹೋಗೋಣವೆ?' ಆ ದಿನ ರಾತ್ರಿ ಊಟಮಾಡುವಾಗ ಸರೋಜ ಕೇಳಿದಳು.
`ನೀನೂ ಅವರ ಜೊತೆಯಲ್ಲೇ ಊರಿಗೆ ಹೋಗು. ಬೇರೆಲ್ಲಿಗೆ ಹೋಗಬೇಕು? ನಿಮ್ಮಮ್ಮನನ್ನು ನೋಡಿ ನೀನೂ ಬಹಳ ದಿನಗಳಾದುವಲ್ವೆ?' ಕೇಳಿದ ಚಂದ್ರು.
ಧಡಕ್ಕನೆ ಅನ್ನದ ಪಾತ್ರೆ ಟೇಬಲ್ಲಿನ ಮೇಲೆ ಕುಕ್ಕಿದಳು ಸರೋಜ.
`ನನಗೆ ಗೊತ್ತು. ಏನಾದರೊಂದು ಹೀಗೆ ಹೇಳುತ್ತಲೇ ಇರುತ್ತೀಯಾ. ಮಕ್ಕಳೂ ಅಜ್ಜಿಯ ಮನೆಗೆ ಹೋಗಲು ಸಂಭ್ರಮದಲ್ಲಿದ್ದಾರೆ. ಬೇರೆಡೆಗೆ ಬರಲು ಅವರಿಗೂ ಆಸಕ್ತಿಯಿಲ್ಲ. ನಾವಿಬ್ಬರೇ ಹೋಗೋಣ. ಆ ರೀತಿ ನಾವಿಬ್ಬರೇ ಹೋಗಿ ಎಷ್ಟೋ ಯುಗಗಳಾದಂತಿದೆ' ಚಂದ್ರುವನ್ನು ದಿಟ್ಟಿಸಿ ನೋಡುತ್ತಾ ಸರೋಜ ಹೇಳಿದಳು.
ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದವೊಂದು ಬಾಕಿ ಉಳಿದಿತ್ತು. ರಜೆಯಲ್ಲಿ ಸರೋಜ ಹಾಗೂ ಮಕ್ಕಳನ್ನು ಊರಿಗೆ ಕಳುಹಿಸಿ ಆ ಕೆಲಸ ಮುಗಿಸೋಣವೆಂದುಕೊಂಡಿದ್ದ ಚಂದ್ರು. ಸರೋಜಳ ಹಟಮಾರಿತನದಿಂದ ಚಂದ್ರುವಿನ ಹೊಟ್ಟೆ ತೊಳಸತೊಡಗಿತು, ತಲೆ ಗಿರ್ರನೆ ತಿರಗತೊಡಗಿತು. ತಲೆಯೆತ್ತಿ ಸರೋಜಳ ಕಡೆ ನೋಡಿದ. ಅವಳು ಗಹಗಹಿಸಿ ನಗುವ ಕಾಳಿಯಂತೆ ಕಂಡಳು. ಮಕ್ಕಳೆಡೆಗೆ ನೋಡಿದ ಅವರು ಕಾಣುತ್ತಲೇ ಇಲ್ಲ. ಇಡೀ ಮನೆ ಗಿರಗಿರನೆ ತಿರುಗುತ್ತಿರುವಂತೆ ಭಾಸವಾಯಿತು. ಹೊಟ್ಟೆ ತೊಳಸುವುದು ವಿಪರೀತವಾಗಿ ವಾಂತಿಬರುವಂ-ತಾಯಿತು. ತಕ್ಷಣ ಎದ್ದು ಬಾತ್‌ರೂಮಿಗೆ ಹೋಗಲು ಪ್ರಯತ್ನಿಸಿದ. ಇಡೀ ದೇಹವನ್ನು ಕುರ್ಚಿಗೆ ಕಟ್ಟಿಹಾಕಿದಂತೆ ಭಾಸವಾಯಿತು. ಮೇಲಕ್ಕೆ ಏಳಲೇ ಸಾಧ್ಯವಾಗುತ್ತಿಲ್ಲ. ಇನ್ನೇನು ವಾಂತಿಯಾಗಿ ಬಿಡುತ್ತದೆ ಎಂದಾಗ ಬಲವೆಲ್ಲಾಬಿಟ್ಟು ಮೇಲಕ್ಕೆದ್ದ, ಮುಗ್ಗುರಿಸಿ ಕುರ್ಚಿಸಮೇತ ಕೆಳಕ್ಕೆಬಿದ್ದ. ಹೊಟ್ಟೆಯಲ್ಲಿ ಇದ್ದುಬದ್ದದ್ದನ್ನೆಲ್ಲಾ ಕಕ್ಕಿದ.
ಪೋಲೀಸಿನವ ಬಕೆಟಿನಲ್ಲಿ ಇದ್ದ ನೀರನ್ನೆಲ್ಲಾ ಚಂದ್ರುವಿನ ಮೇಲೆ ಸುರಿದ. ಗಂಟಲಿನಲ್ಲಿ ಏನೋ ಸಿಕ್ಕಿಹಾಕಿಕೊಂಡಂತೆ ಉಸಿರುಕಟ್ಟುವಂತಾಗಿ ಚಂದ್ರು ಏದುಸಿರುಬಿಡುತ್ತಾ ಕೆಮ್ಮಿದ. ಈ ಭಾರಿ ಪೋಲೀಸಿನವ ಚಂದ್ರುವನ್ನು ಕುರ್ಚಿಸಮೇತ ಮೇಲಕ್ಕೆತ್ತಲಿಲ್ಲ. ವಾಂತಿಯ ಮಡುವಲ್ಲಿ ಬಿದ್ದಿದ್ದ ಚಂದ್ರುವಿಗೆ ಅವನದೇ ವಾಂತಿಯ ಹುಳಿವಾಸನೆ ಉಸಿರುಕಟ್ಟುವಂತಾಯಿತು. ಹಾಗೇ ಕಣ್ಣುಮುಚ್ಚುವಂತಾಯಿತು.
ರಪ್ಪನೆ ಮುಖಕ್ಕೆ ತಣ್ಣೀರು ಹೊಡೆಯಿತು. ಕಣ್ಣುಬಿಟ್ಟರೆ ಕಣ್ಣು ಮಬ್ಬುಗಟ್ಟಿಸುವ ಪ್ರಖರ ಬೆಳಕು. ಎಲ್ಲವೂ ಅಸ್ಪಷ್ಟ. ನಿಂತಿದ್ದ ಪೋಲೀಸನ ಕೈಯಲ್ಲಿನ ಲಾಟಿ ಕತ್ತಿಯಂತೆ ಭಾಸವಾಯಿತು. ಇನ್ನೇನು ಕೋಳಿಯಂತೆ ತನ್ನ ಕತ್ತು ಕೊಯ್ದುಬಿಡುತ್ತಾನೆ ಎನ್ನಿಸಿತು ಚಂದ್ರುವಿಗೆ. ಬಕೀಟು ಹಿಡಿದಿದ್ದ ಪೋಲೀಸಿನವ ತನ್ನ ರಕ್ತವನ್ನು ಅದರಲ್ಲಿ ತುಂಬಿಕೊಳ್ಳಲು ಕಾದಿದ್ದಾನೆ ಎನ್ನಿಸಿತು. ಹೊಟ್ಟೆ-ಯಲ್ಲಿ ವಿಪರೀತ ನೋವು, ಎದೆ ಉರಿಯುತ್ತಿತ್ತು. `ನೀರು ಬೇಕು' ಎನ್ನಲೂ ಭಯವಾಯಿತು. ನೀರಿನ ಬದಲು ವಿಷಕೊಟ್ಟುಬಿಟ್ಟರೆ? ಕಣ್ಣುಮುಚ್ಚಲೂ ಭಯವಾಯಿತು. `ಕಣ್ಣುಮುಚ್ಚಿದಾಗ ನನಗೇನೂ ಕಾಣುವುದಿಲ್ಲ. ಎದುರಿಗಿರುವ ಪೋಲೀಸರಿಗೆ ಎಲ್ಲಾ ಕಾಣುತ್ತಿರುತ್ತದೆ! ಅವರು ನನ್ನನ್ನು ಬೂಟುಗಾಲಿ-ನಿಂದ ತುಳಿದು ಹೊಸಕಿಹಾಕಬಹುದು, ನನ್ನ ಕತ್ತು ಹಿಸುಕಿ ಸಾಯಿಸಿಬಿಡಬಹುದು, ಅವರ ಕೈಯಲ್ಲಿರುವ ಮಚ್ಚಿನಿಂದ ನನ್ನ ಒಂದೊಂದೇ ಅಂಗವನ್ನು ಕೊಚ್ಚಿ ಕತ್ತರಿಸಿಬಿಡಬಹುದು.......
`ಸರೋಜ ಏಕೆ ಸತ್ತುಹೋದಳು? ನನಗೇಕೆ ಈ ಹಿಂಸೆ ಕೊಡುತ್ತಿದ್ದಾಳೆ? ಬದುಕಿದ್ದಾಗಲೂ ಹಿಂಸೆ ಕೊಡುತ್ತಿದ್ದಳು, ಈಗ ಸತ್ತನಂತರವೂ ನನಗೆ ಹಿಂಸೆ ಕೊಡುತ್ತಿದ್ದಾಳೆ?' ಚಂದ್ರುವಿನ ಮನಸ್ಸು ಎಲ್ಲೆಲ್ಲೋ ಅಡ್ಡಾಡುತ್ತಿತ್ತು.
`ಅಡ್ಡಾಡಿದ್ದು ಸಾಕು ರೂಮಿಗೆ ಹೋಗೋಣ' ಎಂದ ಚಂದ್ರು.'
`ಇಲ್ಲ ಈ ಬೀಚಿನಲ್ಲಿ ಗಾಳಿ ಎಷ್ಟು ಚೆನ್ನಾಗಿ ಬೀಸುತ್ತಿದೆ ನೋಡು. ಇನ್ನೂ ಸ್ವಲ್ಪಹೊತ್ತು ಇರೋಣ' ಎಂದಳು ಸರೋಜ ಪಕ್ಷಿಯಂತೆ ತನ್ನ ಎರಡೂ ಕೈಗಳನ್ನು ಬೀಸುತ್ತಾ.
ಅಲ್ಲೇ ಕಲ್ಲಿನ ಮೇಲೆ ಕೂತರು. ಸೂರ್ಯ ಮುಳುಗಲು ಇನ್ನೂ ಒಂದು ಗಂಟೆಯಾದರೂ ಬೇಕು. ಚಂದ್ರುವಿನ ಸೊಂಟಕ್ಕೆ ಕೈಹಾಕಿ ಅವನ ಭುಜಕ್ಕೆ ಒರಗಿದಳು ಸರೋಜ. ಅವಳೆಡೆಗೆ ನೋಡಿದ. ಕಣ್ಣುಮುಚ್ಚಿದ್ದಳು. ಬೀಸುತ್ತಿದ್ದ ಗಾಳಿಯ ಅಣು‌ಅಣುವನ್ನೂ ತನ್ನ ಮುಖದಲ್ಲಿ ಆಸ್ವಾದಿಸುತ್ತಿದ್ದಳು.
ತಾನು ಎಂಥ ಸ್ವಾರ್ಥಿಯಲ್ಲವೇ ಅನ್ನಿಸಿತು ಚಂದ್ರುವಿಗೆ. `ಎಂಥದೋ ಒಂದು ಜಾಗ, ಅವಳು ಕೇಳಿದೆಡೆಗೆ ಒಂದೆರಡು ದಿನ ಹೋಗಿಬರಲು ಸಮಯಮಾಡಿಕೊಳ್ಳಬೇಕು' ಎಂದುಕೊಂಡ. `ಅವಳು ಕೇಳುವ ಸಮಯಕ್ಕೆಲ್ಲ ಯಾವುದಾದರೂ ಅಸೈನ್‌ಮೆಂಟ್ ಗುದ್ದಿಕೊಂಡುಬರುತ್ತದೆ, ಕೆಮ್ಮಲೂ ಸಮಯವಿಲ್ಲದ ಹಾಗೆ ಡೆಡ್‌ಲೈನ್ ಕೊಟ್ಟಿರುತ್ತಾರೆ. ಈಗಲೂ ಅಷ್ಟೆ, ಇಲ್ಲಿ ಇವಳ ಜೊತೆಗಿದ್ದರೂ ಮನಸ್ಸೆಲ್ಲಾ ಅಕಾಡೆಮಿಯ ಅನುವಾದ ಮುಗಿಸಬೇಕೆನ್ನುವುದರಲ್ಲೇ ಇದೆ'. ಅನುವಾದವನ್ನು ಮರೆಯಲು ಯತ್ನಿಸಿದ. ಸರೋಜಳಂತೆ ಕಣ್ಣುಮುಚ್ಚಿ ತಂಗಾಳಿಯನ್ನು ತನ್ನ ಮೈಗೆಲ್ಲಾ ಸುತ್ತಿಕೊಳ್ಳಲು ಪ್ರಯತ್ನಿಸಿದ.
ಪೋಲೀಸಿನವ ಚಂದ್ರುವಿನ ಮೈಗೆ ಸುತ್ತಿದ್ದ ಹಗ್ಗವನ್ನು ಬಿಚ್ಚುತ್ತಿದ್ದ. ತಾನು ಯಾವಾಗ ನಿಂತೆ ಎನ್ನುವುದೇ ಅವನಿಗೆ ತಿಳಿದಿರಲಿಲ್ಲ. ಕೈಕಟ್ಟು ಬಿಚ್ಚಿತ್ತು. ಆದರೆ ಆ ಕೈಗಳು ತನ್ನವಲ್ಲವೆಂಬಂತೆ ಪಕ್ಕದಲ್ಲಿ ಜೋತಾಡುತ್ತಿದ್ದವು. ಒಳಚಡ್ಡಿಯೊಂದನ್ನು ಬಿಟ್ಟು ಉಳಿದೆಲ್ಲ ಬಟ್ಟೆಗಳನ್ನು ತೆಗೆದುಹಾಕಲಾಗಿತ್ತು. ವಾಂತಿಯ ಹುಳಿವಾಸನೆ ಇರಲಿಲ್ಲ ಅಥವಾ ಇದ್ದರೂ ತನಗೆ ತಿಳಿಯುತ್ತಿಲ್ಲ ಎಂದುಕೊಂಡ. ಗಾಳಿಯಲ್ಲಿ ತೇಲಾಡುವ ಅನುಭವ, ಹಸಿವು, ದಾಹ ಏನೂ ಆಗುತ್ತಿಲ್ಲ. ನಿದ್ದೆ ಬರುತ್ತಿದೆಯೇ? ಅದೂ ಗೊತ್ತಾಗುತ್ತಿಲ್ಲ. ಎಂಥದೋ ಆಯಾಸ. ಮಲಗಲು ಪೋಲೀಸಿನವರು ಬಿಡುತ್ತಾರೆಯೆ?
`ನಾನು ಮಲಗಲೆ?' ಕೇಳಿದ ಸರೋಜಳನ್ನು.
`ಅದೇನು ಆತುರ. ಕ್ವಾರ್ಟರ್ ಬಾಟಲಿಯಲ್ಲಿ ಇನ್ನೂ ಇಷ್ಟು ಉಳಿದಿದೆ' ಎಂದಳು ಸರೋಜ ಹೋಟೆಲಿನ ಟೀಪಾಯಿಯ ಮೇಲಿನ ಬಾಟಲಿ ಕೈಗೆತ್ತಿಕೊಳ್ಳುತ್ತಾ.
`ಅದೇನೋ ಆಯಾಸವಾಗುತ್ತಿದೆ. ಪ್ರಯಾಣದಿಂದಿರಬಹುದು. ವಿಪರೀತ ನಿದ್ದೆ ಬರುತ್ತಿದೆ. ಅಷ್ಟೂ ಕುಡಿಯಲು ನನಗೆ ಸಾಧ್ಯವಿಲ್ಲವೆನ್ನಿಸುತ್ತೆ. ನನಗೆ ಊಟವೂ ಬೇಡ. ರಿಸೆಪ್ಶನ್‌ಗೆ ಫೋನ್ ಮಾಡಿ ಊಟ ಇಲ್ಲಿಗೇ ತರಿಸಿಕೊಂಡುಬಿಡು' ಎಂದ ಚಂದ್ರು.
`ಅದೇನು. ಎಷ್ಟೋ ವರ್ಷಗಳನಂತರ ಹೀಗೆ ನಾವಿಬ್ಬರೂ ಹೋಟೆಲಿನಲ್ಲಿದ್ದೇವೆ. ಪದೇ ಪದೇ ಬಂದು ಬಾಗಿಲು ಬಡಿಯಲು ಮಕ್ಕಳೂ ಇಲ್ಲ. ನಿಮ್ಮ ಸಾಹಿತ್ಯದ ಚಿಂತೆ ಇಲ್ಲಿಯೂ ನಿಮ್ಮನ್ನು ಬಿಡುತ್ತಿಲ್ಲವೆ?' ಎಂದಳು ಸರೋಜ ಬಂದು ಹಿಂದಿನಿಂದ ಅಪ್ಪಿಕೊಳ್ಳುತ್ತ.
`ಇಲ್ಲ ಅದರದೇನೂ ಚಿಂತೆಯಿಲ್ಲ. ಅದ್ಯಾಕೋ ಗೊತ್ತಿಲ್ಲ. ಕುಡಿದದ್ದು ಸ್ವಲ್ಪವಾದರೂ ವಿಪರೀತ ತಲೆಗೇರಿದಂತಿದೆ. ನಾನು ಮಲಗದೇ ಹೀಗೆ ಕೂತಿದ್ದರೆ, ಇಲ್ಲೇ ಬಿದ್ದುಹೋಗುತ್ತೇನೆ' ಎಂದ ಚಂದ್ರು ಮೇಲೆದ್ದ. ಅಪ್ಪಿಕೊಂಡಿದ್ದ ಸರೋಜ ಅವನನ್ನು ಬಿಡಲಿಲ್ಲ. ಇಬ್ಬರೂ ಹಾಸಿಗೆಯ ಮೇಲೆ ಬಿದ್ದರು.
ತಡವರಿಸಿ ಕೆಳಗೆ ಬಿದ್ದ ಚಂದ್ರುವನ್ನು ಪೋಲೀಸಿನವ ಎತ್ತಿ ಕುರ್ಚಿಯ ಮೇಲೆ ಕೂಡ್ರಿಸಿದ. ಆ ಕುರ್ಚಿಯ ಕಾಲುಗಳು ಸಡಿಲವಾಗಿ ಕಿರಗುಟ್ಟುತ್ತಿದ್ದವು. ಕೊಂಚ ಆ ಕಡೆ ಈ ಕಡೆ ವಾಲಿದರೂ ಬಿದ್ದುಹೋಗುವ ಸ್ಥಿತಿಯಲ್ಲಿತ್ತು ಆ ಕುರ್ಚಿ. ಈ ಸಾರಿ ಕೈಗಳನ್ನು ಕಟ್ಟಿರಲಿಲ್ಲ. ಎದುರಿಗೆ ಪೋಲಿಸಿನವನೊಬ್ಬ ಬಂದು ನಿಂತ. ಅವನು ಹೊಸಬನೇ ಅಥವಾ ಮೊದಲಿದ್ದವನೇ ಏನೊಂದೂ ಚಂದ್ರುವಿಗೆ ತಿಳಿಯುತ್ತಿರಲಿಲ್ಲ.
`ನೀನು ನಿನ್ನ ಹೆಂಡತಿಯನ್ನು ಯಾವ ವಿಧಾನದಿಂದ ಕೊಂದೆ ಎಂಬುದನ್ನು ವಿವರವಾಗಿ ಹೇಳು', ಕೇಳಿದ ಆ ಪೋಲೀಸಿನವನು.
`ಗೊತ್ತಿಲ್ಲ' ಎಂದ ಚಂದ್ರು.
`ಕತ್ತು ಹಿಸುಕಿ ಕೊಂದೆಯಾ ಅಥವಾ ತಲೆದಿಂಬನ್ನು ಮುಖಕ್ಕೆ ಅದುಮಿ ಕೊಂದೆಯಾ?' ಪೋಲಿಸಿನವನ ಮತ್ತೊಂದು ಪ್ರಶ್ನೆ.
`ಪೋಲೀಸಿನವರು ಇಷ್ಟು ಖಡಾ-ಖಂಡಿತವಾಗಿ ಕೇಳುತ್ತಿರುವುದರಿಂದ ಸರೋಜಳನ್ನು ಕೊಂದವನು ನಾನೇ ಇರಬಹುದೆ?' ಎಂಬ ಅನುಮಾನ ಚಂದ್ರುವಿನ ತಲೆಯನ್ನು ಹೊಕ್ಕಿತ್ತು. ಆ ದಿನ ಹೋಟೆಲಿನಲ್ಲಿ ಏನೇನು ನಡೆಯಿತು ಎನ್ನುವುದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿದ. ಎಲ್ಲವೂ ಅಸ್ಪಷ್ಟ. ಯಾವುದು ಭ್ರಮೆ, ಯಾವುದು ವಾಸ್ತವ ಎನ್ನುವುದು ಅವನಿಗೆ ತಿಳಿಯುತ್ತಲೇ ಇರಲಿಲ್ಲ. ಕೆಲಕ್ಷಣಗಳ ಹಿಂದೆ ವಿಪರೀತ ನಿದ್ರೆ ಬರುತ್ತಿತ್ತು. ಈಗ ನಿದ್ರೆಯೇ ಇಲ್ಲ. ಕಣ್ಣುಮುಚ್ಚಿದರೆ ಎಲ್ಲಿ ಮುಖದ ಮೇಲೆ ತಣ್ಣಿರೆರುಚುತ್ತಾರೋ, ಎಲ್ಲಿ ಪೋಲಿಸರು ಕೊಂಡುಬಿಡುತ್ತಾರೋ ಎನ್ನುವ ಭಯ. ಓಲಾಡುವ ಕುರ್ಚಿಯಿಂದ ಬಿದ್ದುಬಿಡಬಹುದೆನ್ನುವ ಭಯ.
ಓಲಾಡುತ್ತಾ ಹಾಸಿಗೆಯ ಮೇಲೆ ಬಿದ್ದಾಗ ಸರೋಜ ಹಾಗೆಯೇ ಅಪ್ಪಿಕೊಂಡಿದ್ದಳು. ಚಂದ್ರುವನ್ನು ಮೇಲಕ್ಕೆಳೆದುಕೊಂಡಳು.
`ನನ್ನನ್ನು ಕಂಡರೆ ನಿಮಗೆ ಸಿಟ್ಟಲ್ಲವೇ?' ಸರೋಜ ಕೇಳಿದಳು. ಚಂದ್ರು ಅವಳ ಕಂಗಳನ್ನೇ ದಿಟ್ಟಿಸಿ ನೋಡಿದ. ಅವಳ ಕಣ್ಣಂಚಿನಲ್ಲಿ ನೀರಿತ್ತು. ಅವಳ ಕಣ್ಣುಗಳನ್ನು ನೋಡಿ ಎಷ್ಟು ವರ್ಷಗಳಾಯಿತು! ಇತ್ತೀಚಿನ ವರ್ಷಗಳಲ್ಲಿ ಅವಳ ಕಣ್ಣುಗಳನ್ನು ನೇರವಾಗಿ ನೋಡುವುದನ್ನೇ ಬಿಟ್ಟಿದ್ದ. ಅದೆಂಥದೋ ಹೆದರಿಕೆ. ಅವಳ ಕಣ್ಣುಗಳಲ್ಲಿ ಯಾವ್ಯಾವ ಬೇಡಿಕೆಗಳಿದೆಯೋ ಎನ್ನುವ ಅಂಜಿಕೆ ಕಾಡುತ್ತಿತ್ತು. ಒಂದು ರೀತಿಯ ವಿಚಿತ್ರ ಅಳುಕಿನ ಬದುಕು.
ಹಾಗೆ ನೋಡುತ್ತಲೇ ಇದ್ದವನ ತಲೆಯನ್ನು ನೇವರಿಸಿದಳು ಸರೋಜ. ಅವನೆಂದೂ ಅತ್ತವನಲ್ಲ. ಆದರೆ ಅದ್ಯಾಕೊ ಗಳಗಳನೆ ಅಳಬೇಕೆನ್ನಿಸಿತು. ಅವಳು ತಲೆ ನೇವರಿಸಿದಾಗ ಅವನಿಗೆ ಅವನ ಅಮ್ಮನ ನೆನಪಾಯಿತು. ಆದರೆ ಅಮ್ಮನ ಸಖ್ಯದ ನೆನಪಿಲ್ಲ. ಅವಳು ಸತ್ತಿದ್ದೂ ನೆನಪಿಲ್ಲ. ಅವಳು ತಲೆ ನೇವರಿಸಿದ್ದರೆ ಹೀಗೆಯೇ ಇದ್ದಿರಬಹುದೆ? ಹಾಗೆಯೇ ಸರೋಜಳನ್ನು ತಬ್ಬಿ ಕಣ್ಣೀರನ್ನು ಸುರಿಸಿದ.
`ನಾಟಕದ ಕಣ್ಣೀರು ಬೇಡ. ಅವಳನ್ನು ಕೊಂದವನ್ನು ನೀನಲ್ಲವೆ?' ಪೋಲೀಸನ ಪ್ರಶ್ನೆ ಗಡುಸಾಗಿತ್ತು.
ಚಂದ್ರು ಏನೂ ಹೇಳಲಿಲ್ಲ. ಏನು ಹೇಳಬೇಕೆಂದು ತೋಚಲಿಲ್ಲ.
`ಅವಳನ್ನು ಕೊಲ್ಲುವ ಪ್ಲ್ಯಾನ್ ಮಾಡಿಯೇ ಕಡಲತಡಿಯ ರೆಸಾರ್ಟ್‌ನಲ್ಲಿ ರೂಮ್ ಮಾಡಿದ್ದೆಯಲ್ಲವೆ?'
ಚಂದ್ರು ಬಾಯಿಬಿಡಲಿಲ್ಲ.
`ನೀವು ಅವಳನ್ನು ಹೇಗೆ ಕೊಂದೆಯೆಂಬ ನಿನ್ನ ದೀರ್ಘ ವಿವರಣೆಯ ತಪ್ಪೊಪ್ಪಿಗೆ ಇಲ್ಲಿದೆ. ಈ ಕಾಗದಕ್ಕೆ ಸಹಿ ಮಾಡು' ಎಂದ ಪೋಲೀಸಿನವ ಫೈಲು ಹಾಗೂ ಪೆನ್ನೊಂದನ್ನು ಮುಂದಕ್ಕೆ ಚಾಚಿ.
ಚಂದ್ರು ಈ ಫೈಲು ಹಾಗೂ ಪೆನ್ನನ್ನು ಪಡೆದು ಒಂದರೆಕ್ಷಣ ಸುತ್ತಲಿದ್ದವರನ್ನು ನೋಡಿದ. ಪೋಲೀಸಿನವ ತೋರಿಸಿದ ಕಡೆ ಸಹಿ ಮಾಡಿದ.
`ಆ ಸಹಿ ನನ್ನದೇ ಇರಬಹುದು. ದಯವಿಟ್ಟು ಪರಿಶೀಲಿಸಿ ನೋಡಿ' ಎಂದ.

- ಜೆ. ಬಾಲಕೃಷ್ಣ
j.balakrishna@gmail.com

ಭಾನುವಾರ, ಫೆಬ್ರವರಿ 18, 2007

ನಿಸರ್ಗ ಪ್ರೇಮಿ, ಕಲಾವಿದ ಡಾ.ಎಸ್.ವಿ.ನರಸಿಂಹನ್

ನನ್ನ ಮೊಟ್ಟಮೊದಲ ಉದ್ಯೋಗ ಪರ್ವ ಪ್ರಾರಂಭವಾಗಿದ್ದು ಕೊಡಗಿನ ವಿರಾಜಪೇಟೆಯಲ್ಲಿ- ಬ್ಯಾಂಕೊಂದರ ಕೃಷಿ ಅಧಿಕಾರಿಯಾಗಿ. ಕಾಲೇಜಿನಿಂದ ನೇರ ಅಲ್ಲಿಗೆ ಹೊರಟಿದ್ದೆ. ಆಗ ನನ್ನ ವಯಸ್ಸು 23 ವರ್ಷ. ವಿರಾಜಪೇಟೆಯ ನೆನಪುಗಳು ಬಹಳಷ್ಟಿವೆ. ವಿರಾಜಪೇಟೆಯಲ್ಲಿ ನಾನು ಗಳಿಸಿಕೊಂಡು ಇದುವರೆಗೂ ಉಳಿಸಿಕೊಂಡು ಬಂದಿರುವುದೆಂದರೆ ಡಾ.ಎಸ್.ವಿ.ನರಸಿಂಹನ್ರವರ ಗೆಳೆತನ. ಫೋಟೋಗ್ರಫಿಯ ತೀವ್ರ ಆಸಕ್ತಿಯಿದ್ದ ನನಗೆ ಅದರ ಬೇಸಿಕ್ಸ್ ಹೇಳಿಕೊಟ್ಟರು, ಅವರ ಬಳಿ ಇದ್ದ ಫೋಟೋಗ್ರಫಿಯ ಪುಸ್ತಕಗಳನ್ನು ಓದಲು ಕೊಟ್ಟರು. ಅವರ ಬಳಿ ಅತ್ಯುತ್ತಮ ಪುಸ್ತಕ ಸಂಗ್ರಹ ಹಾಗೂ ವೀಡಿಯೋ ಕ್ಯಾಸೆಟ್ ಸಂಗ್ರಹವಿತ್ತು. ಆಗಿನ್ನೂಸಿ.ಡಿ., ಡಿ.ವಿ.ಡಿ.ಗಳಿರಲಿಲ್ಲ.

ವೃತ್ತಿಯಲ್ಲಿ ವೈದ್ಯರಾಗಿರುವನರಸಿಂಹನ್ರವರು ಪರಿಸರ ಪ್ರೇಮಿ ಹಾಗೂ ಅತ್ಯುತ್ತಮ ಚಿತ್ರಕಾರರು. ಅವರು ಪ್ರತಿ ವರ್ಷ ವನ್ಯಜೀವಿ ಸಂದೇಶಗಳಿರುವ ಸಾವಿರಾರು ಕಾರ್ಡುಗಳನ್ನು ಗೆಳೆಯರಿಗೆ, ಆಸಕ್ತರಿಗೆ ಅಕ್ಟೋಬರ್ ನಲ್ಲಿ `ವನ್ಯಜೀವಿ ಸಪ್ತಾಹ’ದ ಸಮಯದಲ್ಲಿ ಕಳುಹಿಸುತ್ತಾರೆ. ಆ ಕಾರ್ಡುಗಳಲ್ಲಿ ಪಕ್ಷಿ, ಪ್ರಾಣಿಗಳ ಚಿತ್ರಗಳನ್ನು ಅತ್ಯದ್ಭುತವಾಗಿ ರಚಿಸಿರುತ್ತಾರೆ. ಅವು ಸಂಗ್ರಹಿಸಬಲ್ಲ ಸುಂದರ ಕಾರ್ಡುಗಳು. ಅವರ ನಿಸರ್ಗ ಪ್ರೇಮ ಹಾಗೂ ಅದಕ್ಕಾಗಿ ಅವರು ವಹಿಸುವ ಶ್ರಮದ ಬಗ್ಗೆ ಈ ಅಂಕಿಅಂಶಗಳು ತಿಳಿಸುತ್ತವೆ:

ಕೈಯಲ್ಲೇಚಿತ್ರಿಸಿದ ಒಟ್ಟು ಕಾರ್ಡುಗಳ ಸಂಖ್ಯೆ: ಈ ವರ್ಷ 2150; 22 ವರ್ಷಗಳಲ್ಲಿ 45250.

ಪಡೆದವರು: ಈ ವರ್ಷ 1190, 22 ವರ್ಷಗಳಲ್ಲಿ 6480

ಪ್ರತಿ ವರ್ಷ ಕಾರ್ಡುಗಳ ಜೊತೆಯಲ್ಲಿ ಸಂದೇಶ ಪತ್ರವನ್ನೂ ಕಳುಹಿಸುತ್ತಾರೆ. ಈ ವರ್ಷ, ಅಂದರೆ, 2006ರ ಅಕ್ಟೋಬರ್

ನಲ್ಲಿ ಕಳುಹಿಸಿದ ಸಂದೇಶ ಪತ್ರ ಹೀಗಿದೆ:

ಮಿತ್ರರೆ,

ಪ್ರಪಂಚದ ಎಲ್ಲಾ ಧರ್ಮಗಳಲ್ಲೂ ಸ್ವರ್ಗ-ನರಕದ ಕ್ಲಪನೆಯಿದೆ. ಮನುಷ್ಯ ಸತ್ತ ನಂತರ ಸ್ವರ್ಗಕ್ಕೆ ಹೋಗಲು ಈ ಭೂಮಿಯ ಮೇಲೆ ಯಾವ ಯಾವ ಕಾರ್ಯಗಳನ್ನು ಮಾಡಬೇಕು ಅಥವಾ ಏನೇನು ಮಾಡಬಾರದು ಎಂದು ಈ ಧರ್ಮಗಳು ಸಾರುತ್ತವೆ. ಆದರೆ ನಿಜಕ್ಕೂ ಈ ಸ್ವರ್ಗ-ನರಕಗಳನ್ನು ಕಂಡವರು ಯಾರೂ ಇಲ್ಲ.

ಒಂದು ಕ್ಷಣ ಹೀಗೆ ಆಲೋಚಿಸಿ: ಒಂದು ಮುಂಜಾನೆ ನೀವು ಎದ್ದು ದೂರದ ಬೆಟ್ಟದ ತುದಿಗೆ ತಲುಪಿದ್ದೀರಿ. ಅಲ್ಲಿಯ ಆ ಸುಂದರ ವಾತಾವರಣ, ತಂಪನೆ ಬೀಸುವ ಕುಳಿರ್ಗಾಳಿ, ಮರ-ಗಿಡಗಳ ಕಲರವ, ಹಕ್ಕಿಗಳ ಇಂಚರ, ೆಲ್ಲವೂ ಅನುಭವಕ್ಕೆ ಬಂದಾಗ `ವಾಃ! ಎಂಥ ಸ್ವರ್ಗ!’ ಎಂದುಕೊಳ್ಳುತ್ತೀರಿ. ಅಲ್ಲಿಂದ ಹಿಂದಿರುಗಿ ಊರಿಗೆ ಬಂದಾಗ ನಿಮಗೆ ಕಾಣುವುದು ಅದೇ ಕಾಂಕ್ರೀಟು ಕಾಡು, ಅದೇ ಧೂಳು, ಅದೇ ವಾಹನಗಳ ಆರ್ಭಟ, ಅದೇ ಕೊಳೆತ ವಾಸನೆ… `ಛೀ! ಇದೆಂಥ ನರಕ!’ ಎಂದು ಮೂಗು ಮುರಿಯುವವರೂ ನೀವೇ. ಆದರೆ, ಇಂತಹ ನರಕವನ್ನು ಸೃಷ್ಟಿಸಿದವು ಯಾರು? ನಾವೇ ಅಲ್ಲವೆ?

ಒಂದು ಸಸ್ಯವನ್ನು ನೆಟ್ಟು ಪೋಷಿಸಿದರೆ, ಅದು ಬೆಳೆದು, ಅಸಂಖ್ಯಾತ ಜೀವಿಗಳಿಗೆ ಆಶ್ರಯವನ್ನೂ, ಆಹಾರವನ್ನೂ ನೀಡುತ್ತದೆ. ಇಂತಹ ಮರಗಳ ಗುಂಪನ್ನು ನೀವು ಬೆಳೆಸಿದರೆಸ್ವರ್ಗದ ಒಂದು ತುಣುಕೇ ನಿಮ್ಮ ಕಣ್ಣ ಮುಂದೆ ಬೆಳೆಯುವುದನ್ನು ಕಾಣಬಹುದು! ಮಾನವನ ಯಾವ ಕೈಗಳು ನಾಡನ್ನು ನರಕವನ್ನಾಗಿಸುವವೋ ಅದೇ ಕೈಗಳಿಂದ ಸ್ವರ್ಗಸದೃಶವಾದ ವಾತಾವರಣವನ್ನೂ ನಿರ್ಮಿಸಬಹುದು!

ನಾವೆಲ್ಲ ಕೈಗೂಡಿಸೋಣ. ಜಗತ್ತಿನಲ್ಲಿರುವ ಜೀವದ ಪ್ರತಿ ಅಣುಅಣುವೂ ಸುಖದಿಂದ, ಶಾಂತಿಯಿಂದ, ಸಹಬಾಳ್ವೆ ನಡೆಸುವಂತೆ ಮಾಡೋಣ.

ವಂದನೆಗಳು

ಡಾ.ಎಸ್.ವಿ.ನರಸಿಂಹನ್

ಯಾವುದೇ ಪ್ರಚಾರ ಬಯಸದ, ತಮ್ಮಷ್ಟಕ್ಕೆ ತಾವು ತಮ್ಮ ಕೈಲಾದುದನ್ನು ಮಾಡುವ ಡಾ.ಎಸ್.ವಿ.ನರಸಿಂಹನ್ರವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯವರು ಪ್ರಕಟಿಸಿರುವ `ಕೊಡಗಿನ ಖಗರತ್ನಗಳು’ ಎಂಬುದು ಇಂಗ್ಲಿಶ್ ಮತ್ತು ಕನ್ನಡದಲ್ಲಿ ರಚಿತವಾಗಿರುವ ಕೊಡಗಿನ ಪಕ್ಷಿಗಳ ಬಗೆಗಿನ ದ್ವಿಭಾಷಾ ಪುಸ್ತಕ. ಅದರಲ್ಲಿ ಅವರೇ ಸ್ವತಃ ತಮ್ಮ ಕೈಯಾರೆ ರಚಿಸಿರುವ ಸುಂದರ ಚಿತ್ರಗಳಿವೆ. ಪಕ್ಷಿಗಳ ಮಾಹಿತಿಗಳುಳ್ಳ, ಫೀಲ್ಡ್-ಗೈಡ್ನಂತೆ ಇರುವ ಈ ಪುಸ್ತಕ ಕೊಡಗಿನ ಒಟ್ಟು 305 ಪಕ್ಷಿ ಪ್ರಭೇದಗಳ ಮಾಹಿತಿ ಮತ್ತು ಚಿತ್ರಗಳನ್ನು ಒಳಗೊಂಡಿದೆ. ಇದೊಂದು ಅದ್ಭುತ ಪುಸ್ತಕ. ಅಷ್ಟೇ ಅಲ್ಲ ಅದರಲ್ಲಿ ಪಕ್ಷಿಗಳ ಬಗೆಗೆ, ಪಕ್ಷಿವೀಕ್ಷಣೆಯ ಬಗೆಗೆ, ಪಕ್ಷಿಗಳ ವಲಸೆಯ ಬಗೆಗೂ ಮಾಹಿತಿಯಿದೆ.

ಪಕ್ಷಿಗಳು ಹಾಗೂ ಪಕ್ಷಿವೀಕ್ಷಣೆಯ ಬಗೆಗೆ `ಹಕ್ಕಿಗಳು’ ಎಂಬ ಕಿರುಹೊತ್ತಿಗೆಯನ್ನೂ ಡಾ.ಎಸ್.ವಿ.ಎನ್. ಬರೆದಿದ್ದಾರೆ.


ಶನಿವಾರ, ಫೆಬ್ರವರಿ 10, 2007

ಹಾರುವ ಮನಸ್ಸುಗಳು ಮತ್ತು ಲೋಹದ ಪಕ್ಷಿಗಳು

ಮಕ್ಕಳ ಶಾಲಾ ಪರೀಕ್ಷೆಗಳು ಮುಗಿದರೆ ಮನಸ್ಸಿಗೆ ಎಂಥದೋ ನಿರಾಳ. ನನಗೇ ಪರೀಕ್ಷೆಗಳು ಮುಗಿದಂತೆ ಸಂತೋಷವಾಗುತ್ತದೆ. ನನ್ನ ಬಾಲ್ಯದ ಶಾಲೆಯ ದಿನಗಳು ಇನ್ನೂ ಚೆನ್ನಾಗಿ ನೆನಪಿದೆ. ಪರೀಕ್ಷೆ ಮುಗಿದಾಕ್ಷಣ ಒಂದೆರಡು ತಿಂಗಳು ಓದುವ ಕಾಟ ತಪ್ಪಿತಲ್ಲಾ ಎಂಬ ಸಂತೋಷ ಹಾಗೂ ಮುಂದಿನ ತರಗತಿಗೆ ಹೋಗುವ ಉಲ್ಲಾಸ. ಹೊಸ ಹೊಸ ಪಠ್ಯ ಪುಸ್ತಕ, ನೋಟ್ ಪುಸ್ತಕ, ಪೆನ್ನು ಪೆನ್ಸಿಲ್ , ಅವುಗಳಿಗೆ ಬೈಂಡ್ ಹಾಕುವ ಅಪರಿಮಿತ ಆನಂದ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಬಹುಶಃ ಈಗಿನ ಮಕ್ಕಳು ಇವುಗಳೆಲ್ಲದರಿಂದ ವಂಚಿತರು ಎನ್ನಿಸುತ್ತದೆ. ಅವರು ಶಾಲೆಗೆ ನಡೆದು ಹೋಗುವುದೇ ಅಪರೂಪ. ನಮ್ಮದಾದರೋ, ಮನೆಯಿಂದ ಶಾಲೆಗೆ ಹೋಗುವುದು ಹಾಗೂ ಶಾಲೆಯಿಂದ ಮನೆಗೆ ನಡೆದು ಬರುವುದು ಒಂದು ವಿಶಿಷ್ಟ ಅನುಭವವಾಗಿರುತ್ತಿತ್ತು. ದಿನದಿನವೂ ಹೊಸ ಹೊಸ ಘಟನೆಗಳು ನಡೆಯುತ್ತಿದ್ದವು, ಪ್ರತಿ ನಡಿಗೆಯೂ ಹೊಸತನ್ನು ಕಲಿಸುತ್ತಿತ್ತು- ಕೆಲವೊಮ್ಮೆ ಒಳ್ಳೆಯದನ್ನು, ಕೆಲವೊಮ್ಮೆ ಕೆಟ್ಟದ್ದನ್ನು.

ಇದನ್ನೆಲ್ಲಾ ಏಕೆ ಹೇಳಿದೆನೆಂದರೆ, ಈ ದಿನ ಮಕ್ಕಳಿಬ್ಬರಿಗೂ ಅವರ `ಎಕ್ಸಾಮ್ಸ್’ ಮುಗಿದವು. ಅವರಿಗೆ ಸಂತೋಷದ ದಿನ. ನಡೆಯುತ್ತಿರುವ ಏರೋ ಶೋಗೆ ಹೋಗೋಣವೆಂದರು. ಬಹುಶಃ ಪರೀಕ್ಷೆಗಳನ್ನು ಮುಗಿಸಿದ್ದ ಅವರ ಮನಸ್ಸುಗಳೂ ಸಹ ಲೋಹದ ಪಕ್ಷಿಗಳಂತೆ ಹಾರಲು ಬಯಸುತ್ತಿದ್ದವೇನೋ!

ಮಧ್ಯಾಹ್ನ ಎಲ್ಲರೂ ಹೊರಟೆವು. ಇದು ನಾವು ನೋಡುತ್ತಿರುವ ಮೂರನೆಯ ಏರೋ ಶೋ. ಎಫ್-16, ಸುಖೋಯ್ ಮತ್ತು ಮಿಗ್‌ಗಳ ಅಬ್ಬರಗಳ ನಡುವೆ ಇತರ ವಿಮಾನಗಳೂ ರಾರಾಜಿಸುತ್ತಿದ್ದವು.

ಮಗ ರಸ್ತೆಯಲ್ಲಿ ಹೋಗುವ ಕಾರುಗಳನ್ನು ಗುರುತಿಸುವಂತೆ ಆಗಸದಲ್ಲಿ ಹಾರುತ್ತಿದ್ದ ವಿಮಾನಗಳನ್ನು ಗುರುತಿಸುತ್ತಿದ್ದುದು ನನಗೇ ಅಚ್ಚರಿ ತರುತ್ತಿತ್ತು.

ಆದರೆ ಸರ್ಕಸ್ಸಿನ ಕೊನೆಯಲ್ಲಿ ನಡೆಯುವ ತೂಗುಯ್ಯಾಲೆಯ ಆಟವೇ ಅತ್ಯಂತ ಆಕರ್ಷಣೀಯವಿರುವಂತೆ ಇಲ್ಲಿಯೂ ಸಹ `ಸೂರ್ಯಕಿರಣಗ’ಳ ಅದ್ಭುತ ಹಾರಾಟ ಎದೆಬಡಿತ ತಪ್ಪಿಸುವಂತಿರುತ್ತದೆ.


ತಮ್ಮ ವಿಮಾನಗಳ ಹೊಗೆಯಿಂದಲೇ ನೀಲಾಗಸದಲ್ಲಿ ಹೃದಯ ರಚಿಸಿ ಮರೆಯಾಗುತ್ತವೆ.


ಎರಡು ದಿನಗಳ ಹಿಂದಷ್ಟೇ ಏರೋ ಶೋನ ರಿಹರ್ಸಲ್‌ನ ಹೆಲಿಕಾಪ್ಟರ್ ಅಪಘಾತ ದುರಂತದಲ್ಲಿ ಪೈಲಟ್ ಒಬ್ಬ ಪ್ರಾಣಕಳೆದುಕೊಂಡಿದ್ದರ ನೆನಪು ಜೆಟ್‌ಗಳ ಅಬ್ಬರದ ನಡುವೆಯೂ ಎಂಥದೋ ವಿಷಾದ ಹುಟ್ಟಿಸುತ್ತಿತ್ತು.

ಸೋಮವಾರ, ಫೆಬ್ರವರಿ 05, 2007

ಹಿಂದೂ ದೇವರು, ಮುಸಲ್ಮಾನ ದೇವರು

ಕೆಲದಿನಗಳ ಹಿಂದೆ ಪತ್ರಿಕೆಯಲ್ಲಿ ಸುದ್ದಿಯೊಂದಿತ್ತು. ಉತ್ತರ ಕರ್ನಾಟಕದಲ್ಲಿ ಹಿಂದೂ ದೇವಾಲಯದಲ್ಲಿ ನಮಾಜು ಮಾಡುತ್ತಿದ್ದ ಇಬ್ಬರು ಕಾಶ್ಮೀರದವರನ್ನು ಜನ ಹಿಡಿದು ಪೋಲಿಸರಿಗೆ ಕೊಟ್ಟಿದ್ದರು. ಆ ಇಬ್ಬರು ದೇವಸ್ಥಾನದಲ್ಲಿ ನಮಾಜು ಮಾಡಲು ಕಾರಣಗಳೇನು ಅಥವಾ ಅವರ ಮನಸ್ಸಿನಲ್ಲಿ ಏನಿತ್ತೆಂಬುದು ನನಗೆ ತಿಳಿದಿಲ್ಲ.

ಹೋದ ವರ್ಷ ಇಂಗ್ಲಿಷ್ ವಾರಪತ್ರಿಕೆಯೊಂದರಲ್ಲಿ ಓದಿದ ಸಣ್ಣ ವರದಿಯೊಂದು ನೆನಪಾಯಿತು. ಆ ವರದಿಗಾರ ಕಾಶ್ಮೀರಕ್ಕೆ ಹೋಗಿದ್ದಾಗ ಟ್ಯಾಕ್ಸಿಯೊಂದರಲ್ಲಿ ಸಂಜೆ ಶ್ರೀನಗರಕ್ಕೆ ಹಿಂದಿರುಗುವಾಗ ಟ್ಯಾಕ್ಸಿಯ ಡ್ರೈವರ್ ಹತ್ತಿರದಲ್ಲೇ ಸೂರ್ಯದೇವನ ದೇವಾಲಯವೊಂದಿದೆಯೆಂದೂ , ಅದು ತುಂಬಾ ಸುಂದರವಾಗಿರುವುದರಿಂದ ಅದನ್ನು ನೋಡುವಿರೇನು ಎಂದು ಕೇಳಿದ. ವರದಿಗಾರನಿಗೂ ಸಮಯವಿದ್ದುದರಿಂದ ಆ ದೇವಾಲಯವನ್ನು ನೋಡೋಣವೆಂದು ಒಪ್ಪಿ ಹೊರಟರು. ಆ ಸುಂದರ ದೇವಾಲಯವನ್ನು ನೋಡುತ್ತಾ ಪ್ರಾಂಗಣದಲ್ಲಿ ಓಡಾಡುವಾಗ ಅಲ್ಲಿ ಕೆಲ ಮುಸಲ್ಮಾನರು ನಮಾಜು ಮಾಡುತ್ತಿದ್ದರು. ಈ ವರದಿಗಾರನಿಗೆ ಹಿಂದೂ ದೇವಾಲಯದಲ್ಲಿ ನಮಾಜು ಮಾಡುತ್ತಿದ್ದ ಮುಸಲ್ಮಾನರನ್ನು ಕಂಡು ಅಚ್ಚರಿಯಾಗಿ, ಕುತೂಹಲದಿಂದ ಅವರನ್ನೇ ಕೇಳೋಣವೆಂದು ಅವರ ಬಳಿ ಹೋಗಿ ಅವರಿಗೆ ಹಿಂದೂ ದೇವಾಲಯದಲ್ಲಿ ನಮಾಜು ಮಾಡಲು ಏನೂ ಅನ್ನಿಸುವುದಿಲ್ಲವೇ ಎಂದು ಕೇಳಿದನು. ಅದಕ್ಕವರಲ್ಲಿ ಒಬ್ಬಾತ, `ಧರ್ಮ ಅಥವಾ ದೇವಾಲಯ ಯಾವುದಾದರೇನು, ಎಲ್ಲರಿಗೂ ದೇವರು ಒಬ್ಬನೇ ಅಲ್ಲವೆ?’ ಎಂದು ಪ್ರಶ್ನಿಸಿದನಂತೆ.

ಸೋಮವಾರ, ಜನವರಿ 08, 2007

Kannada Poetry- ಸರ್ಕಸ್ಸಿನ ಹುಡುಗಿ

ಗೆಳೆಯ ಎಲ್ಪಿ ಕೆ.ಜಿ.ಎಫ್.ನಲ್ಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸುವರ್ಣ ಮಹೋತ್ಸವದ ಕವಿಗೋಷ್ಠಿಗೆಂದು ಕರೆದಾಗ ಈ ಪದ್ಯ ಬರೆದದ್ದು. ಈ ಪದ್ಯ ಚೆನ್ನಾಗಿಲ್ಲದಿದ್ದಲ್ಲಿ ನಾನಲ್ಲ ಕಾರಣ. ಎಲ್ಪಿಯೇ ಅದಕ್ಕೆ ಉತ್ತರಿಸಬೇಕು:

ಸರ್ಕಸ್ಸಿನ ಹುಡುಗಿ

ಜೀಕು ಜೋಕಾಲಿಯಲ್ಲಿ
ಅಲ್ಲಿ ಆಗಸದೆತ್ತರದಲ್ಲಿ
ತೊನೆದು ತೊಯ್ದಾಡಿ ಚಿಮ್ಮಿ
ಹಿಡಿಯಲು ಚಾಚಿದ್ದ ಎರಡು ಕೈಗಳೆಡೆಗೆ
ಬದುಕನ್ನೇ ಆತುಕೊಳ್ಳುವಂತೆ ಹಾರಿದಾಗ
ಒಂದರೆಕ್ಷಣ, ಸಾವು ಬದುಕಿನ ನಿರ್ಧಾರದ ಕ್ಷಣ
ಜಗಜಗಿಸುವ ಬೆಳಕಿನಡಿಯಲ್ಲಿ
ಎಲ್ಲವೂ ಕಣ್ಣುಕಪ್ಪಿಡುವ ಕತ್ತಲು.

ಗಾಳಿಯಲ್ಲಿ ಯಾವ ಆಸರೆಯಿಲ್ಲದೆ ಈ ದಿಕ್ಕಿನಿಂದ
ಆ ದಿಕ್ಕಿಗೆ ದಿಕ್ಕುತಪ್ಪಿದ ಬಾವಲಿಯಂತೆ
ಜೋತುಬೀಳಲು ಆಸರೆ ಅರಸುವಾಗ
ನೆನಪಾಗುತ್ತದೆ ಈಗತಾನೇ ಹಾಲೂಡಿಸಿ
ಬಂದ ಕಂದನ ಮುಖ.
ಕೈಜಾರಿದರೆ ಗಕ್ಕನೆ ಸೆಳೆದುಕೊಳ್ಳುವ
ಹೊಂಚುಹಾಕುತ್ತಿರುವ ಸಾವಿನ ಬಲೆಯೂ ನೆನಪಾಗುತ್ತದೆ.

ನೋಡುವವರ ಉಸಿರು ನಿಂತಿದೆ
ಮೈದೋರುವ ಬಿಗಿ ಉಡುಪಿನ
ನಗುಮೊಗದ ಈ ಸರ್ಕಸ್ಸಿನ ಹುಡುಗಿಯ
ಕಸರತ್ತಿನಲ್ಲಿ ತುಂಬಿದ ಗಡಿಗೆಯಿಂದ
ಹೊರಚೆಲ್ಲಬಹುದೆ ಏನಾದರೂ
ಎಂದು ನೋಡಲು ಕಾಯುತ್ತಿರುವ ಜನ.
ಹೊರಚೆಲ್ಲಬಹುದು, ಹೊರಹಾರಬಹುದು
ಅದು ಪ್ರಾಣಪಕ್ಷಿಯೇ ಆಗಿರಬಹುದು.

ಈ ಸರ್ಕಸ್ಸಿನ ಹುಡುಗಿ ಬದುಕಲೇ ಬೇಕು
ಆಸರೆ ಬಿಟ್ಟು ಮತ್ತೊಂದೆಡೆಯ ಆಸರೆಗೆ
ಚಿಮ್ಮಿದ ಹುಡುಗಿಗೆ, ಬದುಕಿರುವುದು ಖಾತ್ರಿಯಾಗುವ ಮುನ್ನ,
ಕೆಳಗುರುಳಿದ ಕಣ್ಣೀರ ಹನಿ ಯಾರಿಗೂ ಕಾಣದೆ
ಮಣ್ಣುಗೂಡುವ ಮುನ್ನ
ಮನಸ್ಸಿನಲ್ಲಿ ಬದುಕಿನ ಎಲ್ಲ ಘಟನೆಗಳು
ಫ್ಲ್ಯಾಶ್‌ಬ್ಯಾಕಿನಂತೆ.
ತಾನು ಹಸುಗೂಸಾಗಿದ್ದಾಗ ತನ್ನಮ್ಮ ಇಲ್ಲೇ
ಅಲ್ಲವೆ ಸಾವು-ಬದುಕಿನಾಟ ನಡೆಸಿದ್ದು,
ಗಾಳಿಯಲ್ಲಿ ಯಾವ ಆಸರೆಯಿಲ್ಲದೆ
ಸಾವು ಬದುಕು ನಿರ್ಧಾರವಾಗುವ ಆ ಅರೆಕ್ಷಣ
ಆಕೆಗೆ ಆಕೆಯ ಕಂದನ ನೆನಪಾಗಿರಬೇಕಲ್ಲವೆ.

ಊರು ಬೇರಾಗಬಹುದು. ನೀರು ಬೇರಾಗಬಹುದು
ಉಸಿರುಗಟ್ಟಿಸುವ ಈ ಗುಡಾರದ ಮಾಸಲು
ಬಣ್ಣ ಬದಲಾಗದು, ಕುತ್ತಿಗೆಯ ಸುತ್ತಿರುವ
ಹುಲಿ ಸಿಂಹಗಳ ಒಡೆಯನ ಚಾವಟಿಯ ಬಿಗಿತ
ಸಡಿಲವಾಗದು.
ಈ ಸರ್ಕಸ್ಸಿನ ಹುಡುಗಿ ಬದುಕಲೇ ಬೇಕು.

-ಜೆ.ಬಾಲಕೃಷ್ಣ