ಡಾ.ಎಲ್.ಬಸವರಾಜು ಪ್ರತಿಷ್ಠಾನ, ಕೋಲಾರ
ಕೋಲಾರದ ಸಮಾನ ಮನಸ್ಕ ಗೆಳೆಯರು ಖ್ಯಾತ ಮಾನವತಾವಾದಿ ಹಾಗೂ ವಿದ್ವಾಂಸ ಡಾ.ಎಲ್.ಬಸವರಾಜುರವರ ಹೆಸರಿನಲ್ಲಿ ಒಂದು ಪ್ರತಿಷ್ಠಾನವನ್ನು ಸ್ಥಾಪಿಸಿಕೊಂಡಿದ್ದು 2000ರಿಂದ ಪ್ರತಿ ವರ್ಷ ಕರ್ನಾಟಕದ ಕಲೆ, ಸಾಹಿತ್ಯ, ಶಿಕ್ಷಣ, ಜಾನಪದ ಹಾಗೂ ಇತರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಹಾಗೂ ಸಾಧನೆ ಮಾಡಿರುವವರಿಗೆ ಹಾಗೂ `ಆಧುನಿಕ' ಸಮಾಜದ ಕಣ್ಣಿಗೆ ಬೀಳದ ಅಂಥವರನ್ನು ಗುರುತಿಸಿ ಡಾ.ಎಲ್.ಬಸವರಾಜು ಪ್ರಶಸ್ತಿ ಹಾಗೂ ರೂ.10000 ಗಳ ನಗದು ಪುರಸ್ಕಾರ ನೀಡಿ ಗೌರವಿಸುತ್ತಾ ಬಂದಿದೆ. ಆ ಪುರಸ್ಕೃತರ ಪಟ್ಟಿಯಲ್ಲಿ ಮುದೇನೂರು ಸಂಗಣ್ಣ, ಕರೀಂಖಾನ್, ಕಿ.ರಂ.ನಾಗರಾಜ, ಡಾ.ಕೆ.ವಿ.ನಾರಾಯಣ, ಶ್ರೀರಾಮ ರೆಡ್ಡಿ, ಕೆ.ರಾಮದಾಸ್, ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹಾಗೂ ಮ.ಸು.ಕೃಷ್ಣಮೂರ್ತಿಯವರಿದ್ದಾರೆ. ನಾವು ಗೌರವಿಸಿದ ಮುದೇನೂರು ಸಂಗಣ್ಣಹಾಗೂ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರು ಆ ನಂತರ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಈ ಸಾರಿ 2009ನೇ ಸಾಲಿನ ಪ್ರಶಸ್ತಿಯನ್ನು ಮುಖವೇಣಿ ಆಂಜನಪ್ಪನವರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ತಮಗೆ ಆದರದ ಸ್ವಾಗತ.
ಪ್ರಶಸ್ತಿ ಪ್ರದಾನ: ಕುಂ.ವೀರಭದ್ರಪ್ಪ
ಅಭಿನಂದನಾ ನುಡಿ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಮುಖ್ಯ ಅತಿಥಿ: ಶ್ರೀಮತಿ ವಿಶಾಲಾಕ್ಷಿ ಬಸವರಾಜು
ಪುಸ್ತಕ ಬಿಡುಗಡೆ: ವೇಣುಗೋಪಾಲ್ ಅವರ 'ಪಳಯನ್ ಮತ್ತು ದ್ರೌಪದಿ'
ಬಿಡುಗಡೆ: ಪ್ರೊ.ಶಿವರಾಮಯ್ಯ
ಕೃತಿ ಕುರಿತು: ಶ್ರೀ ಚಂದ್ರಶೇಖರ ತಾಳ್ಯ
ಅಧ್ಯಕ್ಷತೆ: ಪ್ರೊ.ಎನ್.ಬಿ.ಚಂದ್ರಮೋಹನ್
ಸ್ಥಳ: ಪತ್ರಕರ್ತರ ಭವನ, ಕೋಲಾರ
31, ಜನವರಿ, 2010 ಸಂಜೆ 5:00ಕ್ಕೆ
ಡಾ.ಎಲ್.ಬಸವರಾಜು ಪ್ರತಿಷ್ಠಾನದ
ಪದಾಧಿಕಾರಿಗಳು:
ಅಧ್ಯಕ್ಷರು: ಪ್ರೊ.ಎನ್.ಬಿ.ಚಂದ್ರಮೋಹನ್
ಉಪಾಧ್ಯಕ್ಷರು: ಡಾ. ಚಂದ್ರಶೇಖರ್ ನಂಗಲಿ
ಕಾರ್ಯದರ್ಶಿ: ಲಕ್ಷ್ಮೀಪತಿ ಕೋಲಾರ
ಖಜಾಂಚಿ: ತಮ್ಮಯ್ಯ, ಮಾಲೂರು
ಸದಸ್ಯರು: ಡಾ.ಕೆ.ವೈ.ನಾರಾಯಣಸ್ವಾಮಿ,
ಡಾ.ಜೆ.ಬಾಲಕೃಷ್ಣ
ಡಾ.ಆರ್.ಶಿವಪ್ಪ
ಪುರುಷೋತ್ತಮ ರಾವ್
ಡಾ.ಹರೀಶ್
ಸ.ರಘುನಾಥ್
ಸಿ.ಮುನಿಯಪ್ಪ
ಹೇಮಾರೆಡ್ಡಿ
ಉದಯ್
ಗುಂಗಾಡಿಗ ಮುಖವೇಣಿ ಆಂಜನಪ್ಪ
ಮುಖವೇಣಿ ಆಂಜನಪ್ಪ ಅತ್ಯಂತ ಅಪರೂಪದ ವಾದ್ಯ ಕಲಾವಿದ. ಆಂಜನಪ್ಪನ ಹೆಸರಿನೊಂದಿಗೆ ಮಾತ್ರ ಈ ಮುಖವೇಣಿ ಸೇರಿಕೊಂಡಿಲ್ಲ. ಅದು ಆತನ ಉಸಿರಿನೊಳಗೇ ಬೆರೆತು ಹೋಗಿದೆ. ಆಂಜನಪ್ಪನ ನಾದತಪ್ತ ತುಟಿಗಳು ಮುಖವೇಣಿ ಸ್ವರಸುಂದರಿಗೆ
ಚಿರಪರಿಚಿತವಾಗಿರುವಂತೆಯೇ, ಈ ಮುಖವೇಣಿಯೆಂಬ ವಾದ್ಯದ ನಾದಲೀಲೆಗಳೂ ಆಂಜನಪ್ಪನಿಗೆ ಜೀವಮಿಡಿತಗಳಾಗಿವೆ. ಅವು ಸುಪ್ತ ಹಾಗೂ ಜಾಗೃತ ಮನಸ್ಥಿತಿಗಳೆರಡರ ನಡುವೆ ಅನುಕ್ಷಣ ತೂಗುವ ಗುಂಗಿನ ಉಯ್ಯಾಲೆಯಂತಿದೆ. ಈ ಬರದ ನಾಡಿನ ಕೆಂಧೂಳಲ್ಲಿ ಕೂಡ ಮಣ್ಣಿನ ಜೀವಲಾಲೀತ್ಯದ ಲಯಗಳನ್ನು ತೂರಬಲ್ಲ, ಅವುಗಳ ಲೀಲಾ ವಿಲಾಸಗಳನ್ನು ಹಿಡಿದುಕೊಡಬಲ್ಲ ಆಂಜನಪ್ಪ ಮುಖವೇಣಿ ಎಂಬ ಪುಟ್ಟಸುಂದರಿಯನ್ನು ನುಡಿಸುತ್ತಿದ್ದರೆ ನಾದಮಾಯೆಯ ನೂರು ಝರಿಗಳು ಕೇಳುಗರ ಪಕ್ಕವೇ ಹರಿಯುತ್ತಿರುವಂತೆ ಭಾಸವಾಗುತ್ತದೆ.
ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಚಿಕ್ಕದಾಳವಾಟ ಗ್ರಾಮದವರಾದ ಆಂಜನಪ್ಪನವರು ಈಗ ನೆಲೆಸಿರುವುದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ಗವಿಗುಂಟನ ಹಳ್ಳಿಯಲ್ಲಿ. ತಂದೆ ಜುಮ್ಮಯ್ಯ, ತಾಯಿ ತಿಮ್ಮಕ್ಕ. ಅರವತ್ತೈದು ದಾಟಿರುವ ಆಂಜನಪ್ಪ ಅಕ್ಷರಗಳ ಗೋಜಿಗೇ ಹೋಗದೆ ಮೈಮನಗಳನ್ನು ಜುಮ್ಮೆನಿಸುವ ಸುಶಿರ ವಿದ್ಯೆ ಕಲಿತವ. ನಾದದ ಮಳೆಯಲ್ಲಿ ತೋಯ್ಯುತ್ತಲೇ ಚಿತ್ತ ಚಿಗುರಿಸಿಕೊಂಡವ. ಬಯಲು ಸೀಮೆಯ ಬಯಲಾಟಗಳಲ್ಲಿನ ಹಾಡುಗಳಿಗೆ ಮುಖವೇಣಿ ವಾದ್ಯ ನುಡಿಸುತ್ತಿದ್ದ ತನ್ನ ಅಪ್ಪನಿಗೆ ದುಂಬಾಲು ಬಿದ್ದು ಮುಖವೇಣಿಯನ್ನು ರಮಿಸಿ ಒಲಿಸಿಕೊಂಡ. ಬಯಲಾಟಗಳೇ ಅಪರೂಪವಾದಾಗ ಮುಖವೇಣಿಯೊಳಗೆ ಹುದುಗಿಹೋದ. ತನ್ನದೇ ಲಯದ ದಾರಿಯೊಂದನ್ನು ಕಂಡುಕೊಂಡ. ಸುಂದರಿ ಮುಖವೇಣಿಯ ಅಕ್ಕಪಕ್ಕ ಮುರಳಿ ಹಾಗೂ ಶೃತಿವಾದ್ಯಗಳ ಸಖಿಯರನ್ನು ಜೊತೆಯಾಗಿಸಿ ಮೂರು ವಾದ್ಯಗಳನ್ನು ಒಟ್ಟಿಗೆ ನುಡಿಸುತ್ತ ಯುಕ್ಷಕಿನ್ನರ ಲೋಕವೊಂದನ್ನು ಸೃಷ್ಠಿಸಿಕೊಂಡ. ನಿರಂತರವಾಗಿ ವಾದ್ಯ ನುಡಿಸುವಾಗ ಈ ಆಂಜನಪ್ಪ ಯಾವಾಗ ಉಸಿರಾಡುತ್ತಾನೆ ಎಂಬುದೇ ತಿಳಿಯದೆ ಪ್ರೇಕ್ಷಕರು ಗಲಿಬಿಲಿಗೊಳ್ಳುವಂತಾಗುತ್ತದೆ.
ಮೂಗಿನ ಹೊಳ್ಳೆಗಳ ಮೂಲಕವೂ ವಾದ್ಯಗಳೊಂದಿಗೆ ಸುಲಲಿತವಾಗಿ ಹಾಡುಗಳನ್ನು ಹರಿಯಬಿಡುವ ಆಂಜನಪ್ಪ ಮೂರು ವಾದ್ಯಗಳನ್ನೂ ನುಡಿಸುತ್ತಲೇ ಮೂಗಿನ ಹೊಳ್ಳೆಗಳ ಮೂಲಕ ನೀರನ್ನು ಕೂಡ ಹರಿಯಬಿಡಬಲ್ಲಂತಹ ಅಪಾಯಕಾರಿ ಚಮತ್ಕಾರವನ್ನೂ ಕೂಡ ಪ್ರದರ್ಶಿಸುತ್ತಾನೆ. ಕುರಿಕಾಯುತ್ತ, ಜನತಾ ನಿವೇಶನದಲ್ಲೇ ಪುಟ್ಟ ಗೂಡೊಂದನ್ನು ಕಟ್ಟಿಕೊಂಡಿರುವ ಆಂಜನಪ್ಪನಿಗೆ ನಗರದ ಧಾವಂತಗಳು ಗೊತ್ತೇ ಇಲ್ಲ. ಈ ನಗರಗಳಿಗೂ ಆಂಜನಪ್ಪನ ಮುಖವೇಣಿಯನ್ನು ಆಲಿಸುವ ಪುರುಸೊತ್ತಿಲ್ಲ. ಆದರೆ ಸಾವಿರಾರು ಹಳ್ಳಿಗಳಿಗೆ, ಗ್ರಾಮೀಣ ಶಾಲಾ ಕಾಲೇಜುಗಳಿಗೆ, ಜಾತ್ರೆಗಳಿಗೆ ಆಂಜನಪ್ಪನ ಮುಖವೇಣಿ ಗುಂಗು ಹಿಡಿಸಿದೆ. ದಸರಾ, ಸಾಹಿತ್ಯ ಸಮ್ಮೇಳನ, ಶರಣ ಸಮ್ಮೇಳನಗಳಲ್ಲು ಈ ಮುಖವೇಣಿಯೆಂಬ ಪುಟ್ಟ ಸುಂದರಿ ಬಯಲಲ್ಲಿ ಬಯಲು ಬೆರೆಸಿ ಬೆಡಗು ತೋರಿ ಬಂದಿದ್ದಾಳೆ.
ನಿರಂತರವಾಗಿ ಎರಡು ತಾಸುಗಾಳ ಕಾಲ ಮುಖವೇಣಿಯನ್ನು ನುಡಿಸಬಲ್ಲ ಆಂಜನಪ್ಪ ಹಿಂದಿನ ಕಾಲದ ಬಯಲಾಟದ ರಂಗಗೀತೆಗಳು, ಜನಪದ ಹಾಗೂ ಹಳೆಯ ಚಲನಚಿತ್ರಗಳ ಮಾಧುರ್ಯಭರಿತ ಹಾಡುಗಳನ್ನು ಚಿಟಿಕೆಯಲ್ಲಿ ಹಿಡಿಯಬಲ್ಲ, ಶಾಸ್ತ್ರೀಯ ಸಂಗೀತದ ಜಾಡಿಗೆ ಬಿದ್ದರೆ ಮಾತ್ರ ಅಪರಿಚಿತನಂತಾಗುವ ಆಂಜನಪ್ಪ ಜಾನಪದ ಧಾಟಿಗಳನ್ನು ಆವರಿಸಿಕೊಂಡುಬಿಡಬಲ್ಲ. ಹತ್ತಾರು ಅಭಿನಂದನೆಗಳೊಂದಿಗೆ ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿಯೂ ಲಭಿಸಿದೆ. 'ಸಿರಿಗಂಧ' ದಾರವಾಹಿಯೂ ಈತನ ನಾದ ಪರಿಮಳವನ್ನು ನಾಡಿಗೆ ಪರಿಚಯಿಸಿದೆ. ಈತನೊಂದಿಗೆ ಒಡನಾಡಿದವರು ಈತನ ಸಭ್ಯತೆ, ಸರಳತೆಯ ಸಹಜತೆಗೆ ಮಾರುಹೋಗಿದ್ದಾರೆ. ಇಂತಹ ತೃಪ್ತ ಜೀವಿಗೆ ಹಿರಿಯ ಸಾಧಕರಾದ ಡಾ.ಎಲ್.ಬಸವರಾಜ ಪ್ರಶಸ್ತಿಯನ್ನು ನೀಡುತ್ತಿರುವುದು ನಮ್ಮ ಅನಂದ ಮತ್ತು ಹೆಮ್ಮೆ. ಆಂಜನಪ್ಪನಿಗೂ ಹಾಗೂ ಮುಖವೇಣಿ ಎಂಬ ಪುಟ್ಟ ಸುಂದರಿಗೂ ಅಭಿನಂದನೆಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ