ಸೋಮವಾರ, ಮೇ 03, 2010

`ಕಾಮ'ನಬಿಲ್ಲಿನ ಅನಾವರಣ- ಪ್ರೇಮ, ಕಾಮದ ವಿಜ್ಞಾನ29/4/2010ರ `ಸುಧಾ'ದಲ್ಲಿ ನನ್ನ ಲೇಖನ `ಪ್ರೇಮ, ಕಾಮ ಮತ್ತು ವಿಜ್ಞಾನ' ಪ್ರಕಟವಾಗಿದೆ. ಓದಿ ಅಭಿಪ್ರಾಯ ತಿಳಿಸಿ:

`ಕಾಮ'ನಬಿಲ್ಲಿನ ಅನಾವರಣ
ಪ್ರೀತಿ ಪ್ರೇಮವನ್ನು ಕೈಲಾಶ್ ಖೇರ್ ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್‌ಗೆ ಹೋಲಿಸಿ ಹಾಡಿರಬಹುದು. ಪ್ರೀತಿ ಪ್ರೇಮದಲ್ಲಿರುವವರು ತಲೆ ಕೆಟ್ಟವರು, ಭ್ರಮಾಲೋಕದಲ್ಲಿರುವವರು ಎಂದು ಹೇಳಿರಬಹುದು. ಪ್ರೀತಿ ಪ್ರೇಮದಲ್ಲಿ ಹುಚ್ಚಾಗಿರುವವರು ಎಷ್ಟೋ ಮಂದಿ! ಕವಿಗಳು ಬರೆದದ್ದೆಷ್ಟು! ಕಲಾವಿದರು ಚಿತ್ರಿಸಿದ್ದೆಷ್ಟು! ಮರಗಳ ಸುತ್ತ ಸುತ್ತಿದ್ದೆಷ್ಟು! ಎಲ್ಲ ಭೌತಿಕ ನಿಯಮಗಳನ್ನೂ ಮೀರಿ ಪ್ರೀತಿ ಪ್ರೇಮಗಳೇ ಈ ಭೂಮಿ ಸುತ್ತುತ್ತಿರುವಂತೆ ಮಾಡುತ್ತಿದೆ ಸಹ ಎಂದರು ಕೆಲವರು.
ಮಾಪನಕ್ಕೆ ಸಿಗದ ಈ ಪ್ರೀತಿ ಪ್ರೇಮ ಬರೇ ಸಾಹಿತಿ, ಕಲಾವಿದರ ಹಾಗೂ ಯುವ ಪ್ರೇಮಿಗಳ ಸೊತ್ತೆ? ಪ್ರೀತಿ ಪ್ರೇಮದ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ? ಮನೋವಿಶ್ಲೇಷಣೆಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ಮನುಷ್ಯರ ಬದುಕಿನ ಚಾಲನಶಕ್ತಿ ಹಾಗೂ ಅಂತಿಮ ಗುರಿ ಕಾಮ ಎಂದ. ಆದರೆ ಸಮಾಜದ ಕಟ್ಟಳೆ, ನೀತಿ ನಿಯಮಗಳಿಂದ ಕಾಮವನ್ನು ನೇರವಾಗಿ ಪಡೆಯಲಾಗದೆ ಅದಕ್ಕೊಂದು ಬಳಸುದಾರಿ ಸೃಷ್ಟಿಸಿಕೊಂಡಿದ್ದೇವೆ, ಅದನ್ನೇ ಪ್ರೇಮವೆಂದು ಕರೆಯುತ್ತೇವೆ ಎಂದೂ ಸಹ ಹೇಳಿದ. ಬದುಕಿನ ಚಾಲನಶಕ್ತಿ ಹಾಗೂ ಅಂತಿಮ ಗುರಿ ಕಾಮ ಎನ್ನುವ ಫ್ರಾಯ್ಡನ ಹೇಳಿಕೆ ಡಾರ್ವಿನ್ನನ ವಿಕಾಸವಾದಕ್ಕೂ ಹೊಂದಿಕೆಯಾಗುತ್ತದೆ. ಏಕೆಂದರೆ ವಿಕಾಸವಾದದಲ್ಲಿ ಎಲ್ಲ ಜೀವಿಗಳ ಉದ್ದೇಶವೂ ತಮ್ಮ ಸಂತತಿಯನ್ನು ಮುಂದುವರಿಸುವುದಾಗಿದೆ. ಹಾಗಾದರೆ ಎಲ್ಲ ಜೀವಿಗಳ ಸಂತಾನೋತ್ಪತ್ತಿಗೆ, ಅವುಗಳ ನಿರಂತರತೆಗೆ ಕಾಮವಷ್ಟೇ ಸಾಕಲ್ಲವೆ? ಇದರ ಮಧ್ಯೆ ಪ್ರೇಮವೇಕೆ ಬೇಕು?
ಪ್ರೀತಿ ಪ್ರೇಮಗಳು ಬರೇ ಕವಿ ಸಾಹಿತಿಗಳ, ಉನ್ಮಾದ ಪ್ರೇಮಿಗಳ ಭ್ರಮೆಯಲ್ಲ. ವಿಜ್ಞಾನಿಗಳು ಹೇಳುವಂತೆ ಪ್ರೀತಿ ಪ್ರೇಮಗಳು ಮಾನವನ ಜೀವವಿಕಾಸದ ಹಾದಿಯಲ್ಲೇ ಫ್ರಾಯ್ಡನ ಸಮಾಜದ `ನೀತಿ ನಿಯಮಗಳು' ರಚನೆಯಾಗುವ ಬಹಳ ಮೊದಲೇ ರೂಪುಗೊಂಡಿವೆ. ಅದಕ್ಕೆ ಜೀವಶಾಸ್ತ್ರದ, ರಾಸಾಯನಶಾಸ್ತ್ರದ ತಳಹದಿಯಿದೆ. ಪ್ರೀತಿ ಪ್ರೇಮದ ಉನ್ಮಾದದ ನಡತೆ ಪ್ರಕೃತಿಯ ಒಂದು ಮಹಾನ್ ಯೋಜನೆ. ಆ ಯೋಜನೆಯಿಂದಾಗಿಯೇ ಮನುಕುಲ ಸಾವಿರಾರು ವರ್ಷಗಳಿಂದ ಉಳಿದು, ಮುಂದುವರಿಯುತ್ತಾ ಬಂದಿದೆ. ಮೈಕೆಲ್ ಮಿಲ್ಸ್ ಎನ್ನುವ ಮನಶಾಸ್ತ್ರಜ್ಞ ಹೇಳುವಂತೆ ಪ್ರೀತಿಯೆನ್ನುವುದು ನಮ್ಮ ಅನಾದಿಕಾಲದ ಪೂರ್ವಜರು ನಮ್ಮ ಕಿವಿಯಲ್ಲಿ ಪಿಸುಗುಟ್ಟುವ ಮಾತಾಗಿದೆ.
ಈ ಪಿಸು ಮಾತು ಆರಂಭವಾದದ್ದು ನಾಲ್ಕು ದಶಲಕ್ಷ ವರ್ಷಗಳ ಹಿಂದೆ. ಆಗತಾನೆ ಆಧುನಿಕ ಮಾನವನ ಸಾಂಸ್ಕೃತಿಕ ಹಾಗೂ ಸಾಮಾಜಿಕ ನಡಿಗೆ ಆರಂಭವಾಗಿತ್ತು. ನಾಲ್ಕು ಕಾಲಿನ ನಡೆಯಿಂದ ಎರಡು ಕಾಲಿನ ನಡಿಗೆ ಆರಂಭವಾದಾಗ ಇಡೀ ದೇಹ ಹಾಗೂ ಅಂಗಾಂಗಗಳು ಪರಸ್ಪರರಿಗೆ ಕಾಣತೊಡಗಿತ್ತು ಪ್ರತಿಯೊಬ್ಬ ವ್ಯಕ್ತಿಯೂ ವಿಶಿಷ್ಟ ವ್ಯಕ್ತಿ ಎನ್ನುವುದು ಅವರ ಅರಿವಿಗೆ ಬರತೊಡಗಿತ್ತು. ಆಗಲೇ ಗಂಡು ಹೆಣ್ಣು ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಅವರ ದೇಹದ ನರನಾಡಿಗಳಲ್ಲಿ ನರರಾಸಾಯನಿಕಗಳು ಪ್ರವಹಿಸಿ ಅವರ ಅಂಗೈಗಳು ಬೆವರಲು ಆರಂಭವಾಗಿದ್ದು. ಅದುವರೆವಿಗಿದ್ದ ಸಂತಾನೋತ್ಪತ್ತಿಯ ಯಾಂತ್ರಿಕ ಲೈಂಗಿಕ ಕ್ರಿಯೆ ಅಂದಿನಿಂದ ಒಂದು ಭಾವನಾತ್ಮಕ ಬಂಧನದ, ಸಮ್ಮಿಳನದ ಕ್ರಿಯೆಯಾಗಿ ಪರಿವರ್ತಿತವಾಯಿತು. ಎಲ್ಲ ಪ್ರಾಣಿಗಳಂತೆ ಹಿಂದಿನಿಂದ ಕೂಡುತ್ತಿದ್ದ ಮಾನವ ತನ್ನ ದ್ವಿಪಾದಿ ನಡಿಗೆಯಿಂದಾಗಿ ಅವನು ಹೆಣ್ಣಿನೊಂದಿಗೆ ಮುಖಾಮುಖಿ ಕೂಡಲು ಸಾಧ್ಯವಾಯಿತು. ಇದರಿಂದಾಗಿ ಆ ಉತ್ಕಟ ಕ್ಷಣಗಳಲ್ಲಿ ಪರಸ್ಪರರ ಮುಖ ವೀಕ್ಷಣೆ ಇನ್ನಷ್ಟು ಭಾವುಕ ಬಂಧನಕ್ಕೆ ಕಾರಣವಾಯಿತು.
ಹುಟ್ಟಿದ ಮಗುವಿನ ಸಂರಕ್ಷಣೆಗೆ ಗಂಡು ಹೆಣ್ಣಿನ ದೀರ್ಘಕಾಲದ ಭಾವುಕ ಬಂಧನ ಜೀವವಿಕಾಸದ ಉದ್ದೇಶವನ್ನೂ ಈಡೇರಿಸುತ್ತದೆ. ಒಂಟಿ ಹೆಣ್ಣು ಹಸುಗೂಸನ್ನು ಹೊತ್ತು ಆಹಾರ ಅರಸುತ್ತಾ ಹೊರಡುವುದು ಕಷ್ಟಸಾಧ್ಯದ ಕೆಲಸವಾಗಿತ್ತು. `ಆಗ ಮತ್ತೊಬ್ಬ ವ್ಯಕ್ತಿಯ ಅಥವಾ ಆ ಮಗುವಿನ ತಂದೆಯ ಸಹಾಯ ಆ ಹೆಣ್ಣಿಗೆ ಅವಶ್ಯಕವಿತ್ತು ಹಾಗಾಗಿ ಮಗುವಿನ ಪಾಲನೆಗೆ ಜೊತೆಗಾರನನ್ನು ಹೊಂದಿರುವುದು ಅತ್ಯವಶ್ಯಕವಿತ್ತು' ಎಂದು ಖ್ಯಾತ ಮಾನವಶಾಸ್ತ್ರಜ್ಞೆ ಹೆಲೆನ್ ಫಿಶರ್ ತಮ್ಮ ಕೃತಿ `ಅನಾಟಮಿ ಆಫ್ ಲವ್'ನಲ್ಲಿ ಹೇಳಿದ್ದಾರೆ. ಗಂಡನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಹಾಗೂ ತನ್ನವನಾಗಿಯೇ ಇರುವಂತೆ ಮಾಡಲು ಹೆಣ್ಣು ಗಂಡಿನೊಂದಿಗೆ `ಸೆಕ್ಸ್ ಕಾಂಟ್ರಾಕ್ಟ್' ಮಾಡಿಕೊಂಡಳೆಂದು ಅದೇ ಹೆಲೆನ್ ಫಿಶರ್ ತಮ್ಮ `ಸೆಕ್ಸ್ ಕಾಂಟ್ರಾಕ್ಟ್' ಕೃತಿಯಲ್ಲಿ ಹೇಳಿದ್ದಾರೆ. ಅದೇ ಕಾರಣಕ್ಕಾಗಿಯೇ ಎಲ್ಲ ಪ್ರಾಣಿಗಳು ತಮ್ಮ ದೇಹ ಸಂತಾನೋತ್ಪತ್ತಿಗಾಗಿ ಸಿದ್ಧವಾಗಿರುವಾಗ ಮಾತ್ರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದರೆ ಮಾನವ ಅವೆಲ್ಲವನ್ನೂ ಮೀರಿ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಸಹ ಲೈಂಗಿಕ ಚಟುವಟಿಕೆಯಲ್ಲಿ ತೊಡಗಬಲ್ಲ.
ಬಹುಪಾಲು ಎಲ್ಲ ಸಂಸ್ಕೃತಿಗಳು ಪ್ರೇಮವನ್ನು ಅಮರವೆಂದು ಹೇಳುತ್ತವೆ. ಆದರೆ ಪ್ರಕೃತಿಯಲ್ಲಿ `ಅಮರ ಪ್ರೇಮ' ನಾಲ್ಕು ವರ್ಷಗಳಿಗೊಮ್ಮೆ ತೊಡರುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದಿ ಮಾನವ ಹೆಣ್ಣು-ಗಂಡು ಜೋಡಿಗಳು ತಮ್ಮ ಹಸುಗೂಸು ತುಸು ದೊಡ್ಡದಾಗುವವರೆಗೂ, ಅಂದರೆ ಸುಮಾರು ನಾಲ್ಕು ವರ್ಷಗಳು ಮಾತ್ರ ಒಂದಾಗಿರುತ್ತಿದ್ದವು. ಅದಾದ ನಂತರ ಅವರಿಬ್ಬರೂ ಬೇರೆ ಸಂಗಾತಿಗಳನ್ನು ಅರಸುತ್ತಿದ್ದರು ಹಾಗೂ ಪುನಃ ಆ ಹೊಸ ಸಂಗಾತಿಗಳೊಂದಿಗೆ ತಮ್ಮ ಭಾವುಕ ಬಂಧನ ಆರಂಭವಾಗುತ್ತಿತ್ತು. ಇದರ ಬಗ್ಗೆ ೬೨ ವಿವಿಧ ಸಂಸ್ಕೃತಿಗಳಲ್ಲಿ
ಅಧ್ಯಯನ ನಡೆಸಿರುವ ಹೆಲೆನ್ ಫಿಶರ್ ಬಹುಪಾಲು ವಿವಾಹ ವಿಚ್ಛೇದನಗಳು ಮದುವೆಯಾದ ನಾಲ್ಕುವರ್ಷಗಳ ನಂತರ ನಡೆಯುತ್ತಿದ್ದುದನ್ನು ಗಮನಿಸಿದ್ದಾರೆ. ಅಷ್ಟರಲ್ಲಿ ಆ ದಂಪತಿಗಳಿಗೆ ಮತ್ತೊಂದು ಮಗುವಾದಲ್ಲಿ ಮತ್ತೆ ನಾಲ್ಕು ವರ್ಷ ಅವರು ಜೊತೆಯಾಗಿರುತ್ತಿದ್ದರು.
ಹಾಗೆಂದಾಕ್ಷಣ ಅದೇ ಖಡಾಖಂಡಿತ ನಿಯಮವೆಂದೇನಲ್ಲ. ಶೇ.೫ರಷ್ಟು ಸ್ತನಿ ಜೀವಿಗಳು ತಮ್ಮ ಜೀವನಪರ್ಯಂತ ತಮ್ಮ ಸಂಗಾತಿಗಳಿಗೆ ನಿಷ್ಠರಾಗಿ ಜೀವನ ನಡೆಸುತ್ತವೆ. ತಮ್ಮ ಸಂಗಾತಿಗಳು ಅಕಾಲ ಮರಣಕ್ಕೀಡಾದಲ್ಲಿ ಒಂಟಿಯಾಗಿಯೇ ಜೀವನ ಸಾಗಿಸುತ್ತವೆ. ಮನುಷ್ಯನೂ ಸಹ ಪ್ರಾಚೀನ ಕಾಲದಿಂದಲೂ ಒಬ್ಬರೇ ಸಂಗಾತಿಗಳೊಂದಿಗೆ ಜೀವನ ನಡೆಸುವ ಪ್ರಯತ್ನ ನಡೆಸುತ್ತಿದ್ದಾನೆ. ಈ ಪ್ರಯತ್ನದ ನಡುವೆ ಅವನ ವಿವಾಹೇತರ ಸಂಬಂಧಗಳು ಗೋಪ್ಯವಾಗಿ ನಡೆಯುತ್ತಿರುತ್ತವೆ. ಇದು ಜೀವವಿಕಾಸದ ನಿಯಮಕ್ಕನುಗುಣವಾಗಿ ಲಾಭದಾಯಕವೂ ಹೌದು, ಏಕೆಂದರೆ ಇದರಿಂದ ಮುಂದಿನ ಸಂತತಿಗೆ ಹೊಸ ವಂಶವಾಹಿಗಳ ಸಂಯೋಜನೆಯು ದೊರೆಯುತ್ತದೆ. ಈ ರೀತಿಯ ಜೀವವೈವಿಧ್ಯತೆಯೇ ಜೀವವಿಕಾಸದ ಮೂಲೋದ್ದೇಶವಲ್ಲವೆ? ಈ ರೀತಿಯ ವಂಶವಾಹಿಗಳ ಸಂಯೋಜನೆಗೆ ಗೋಪ್ಯವಾಗಿ ಗಂಡು ಮಾತ್ರ ಹೊರಡುವುದಿಲ್ಲ, ಹೆಣ್ಣು ಸಹ ಪ್ರಾಚೀನ ಕಾಲದಿಂದಲೂ ಭಾಗಿಯಾಗಿದ್ದಾಳೆ. ವಾಸ್ತವವಾಗಿ ಪ್ರಕೃತಿಯಲ್ಲಿ ಗಂಡಿನ ಆಯ್ಕೆ ಮಾಡುವವಳೇ ಹೆಣ್ಣು. ತನ್ನ ಸಂತತಿ ಆರೋಗ್ಯವಾಗಿರಬೇಕು, ಬಲಿಷ್ಠವಾಗಿರಬೇಕು ಎಂದು ಬಯಸುವ ಆಕೆ ಆ ರೀತಿಯ ವಂಶವಾಹಿಗಳನ್ನು ತನ್ನ ಸಂತತಿಗೆ ಒದಗಿಸಬಲ್ಲ ಗಂಡನ್ನೇ ಅರಸುತ್ತಾಳೆ. ಇದು ಬಹುಪಾಲು ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ಕಂಡುಬರುತ್ತದೆ.
ರಾಸಾಯನಿಕಗಳ ಕಲಸುಮೇಲೋಗರ
ಡಿ.ಎನ್.ಎ. ಆವಿಷ್ಕಾರ ಮಾಡಿ ನೋಬೆಲ್ ಪಾರಿತೋಷಕ ಪಡೆದ ಫ್ರಾನ್ಸಿಸ್ ಕ್ರಿಕ್ ಹೇಳುವಂತೆ ನಮ್ಮೆಲ್ಲ ಭಾವನೆಗಳು, ಆಸೆ ಆಕಾಂಕ್ಷೆಗಳು, ಸುಖದುಃಖಗಳು, ಜೀವನ ಪ್ರೀತಿ ಎಲ್ಲವೂ ನಮ್ಮ ದೇಹದಲ್ಲಿನ ನರಕೋಶಗಳ ಹಾಗೂ ಕೆಲ ರಾಸಾಯನಿಕಗಳ ಚಟುವಟಿಕೆಗಳ ಪ್ರತಿಫಲವಷ್ಟೆ. ನಮ್ಮ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳನ್ನು ಹಾಗೂ ಅದರ ಸಮತೋಲನವನ್ನು ನಿಯಂತ್ರಿಸುತ್ತಿರುವುದು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳ ಮಹಾಪೂರ.
ಪ್ರೇಮಿಗಳು ಪ್ರೇಮದ ಅಲೆಗಳ ರಭಸಕ್ಕೆ ಕೊಚ್ಚಿಹೋಗುತ್ತಾರೆ. ಅದರಲ್ಲಿ ಉತ್ಪ್ರೇಕ್ಷೆಯೇನಿಲ್ಲ. ಅವರು ಅವರ ದೇಹದಲ್ಲಿನ ರಾಸಾಯನಿಕಗಳ ಮಹಾಪೂರದಲ್ಲಿ ಕೊಚ್ಚಿಹೋಗಿರುತ್ತಾರೆ. ಕಣ್ಣು ಕಣ್ಣು ಕೂಡಿದಾಗ, ಕೈ ಕೈ ತಗುಲಿದಾಗ ಅಥವಾ ಪ್ರೇಮಿಗಳ ದೇಹದ ವಾಸನೆ ಘ್ರಾಣಿಸಿದಾಗ ಮಿದುಳು ಕಾರ್ಯಪ್ರವೃತ್ತವಾಗಿ ರಾಸಾಯನಿಕಗಳ ಮಹಾಪೂರ ರಕ್ತದ ಮೂಲಕ ದೇಹದ ನರನಾಡಿಗಳಲ್ಲಿ ಪ್ರವಹಿಸುವಂತೆ ಮಾಡುತ್ತದೆ. ಇದರ ಪರಿಣಾಮವಾಗಿ ರಕ್ತ ನುಗ್ಗುವುದರಿಂದ ಕೆನ್ನೆ ಕೆಂಪಾಗುತ್ತದೆ, ಅಂಗೈಗಳು ಬೆವರತೊಡಗುತ್ತವೆ ಮತ್ತು ಉಸಿರಾಟ ಜೋರಾಗುತ್ತದೆ. ಆದರೆ ನೀವು ಆತಂಕಗೊಂಡಾಗ, ಅತೀವ ಮಾನಸಿಕ ಒತ್ತಡಕ್ಕೊಳಗಾದಾಗ ಸಹಾ ಇದೇ ರೀತಿ ಆಗುತ್ತದೆ. ವಾಸ್ತವವೆಂದರೆ ಎರಡೂ ಒಂದೆ ಹಾಗೂ ಎರಡರ ರಾಸಾಯನಿಕ ಪಥಗಳೂ ಒಂದೇ ರೀತಿ ಕಾರ್ಯನಿರ್ವಹಿಸುತ್ತವೆ. ವ್ಯತ್ಯಾಸವೆಂದರೆ, ಪ್ರೇಮದ ಒತ್ತಡ ಒಂದು ರೀತಿಯ ಸುಖಾನುಭವ ಕೊಡುತ್ತದೆ. ಈ ಸುಖಾನುಭವಕ್ಕೆ ಕಾರಣವಾಗುವುದು ಡೋಪಮೈನ್, ನಾರ್‌ಎಪಿನೆಫ್ರಿನ್, ಸೆರೊಟೋನಿನ್ ಮತ್ತು ವಿಶೇಷವಾಗಿ ಫೀನೈಲ್‌ಈಥೈಲ್‌ಅಮೈನ್ ಎಂಬ ಆಂಫೀಟಮಿನ್ಸ್ ಗುಂಪಿಗೆ ಸೇರಿದ ರಾಸಾಯನಿಕಗಳು.
ಈ ಫೀನೈಲ್‌ಈಥೈಲ್‌ಅಮೈನ್ ಒಂದು ವಿಚಿತ್ರ ರಾಸಾಯನಿಕ. ಅದು ಮಾನವನ ದೇಹದಲ್ಲಿ ವಿಚಿತ್ರ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ಅದು ಉತ್ಪತ್ತಿಯಾದ ತಕ್ಷಣ ನಿಮ್ಮ ಮುಖದಲ್ಲಿ ವಿಚಿತ್ರ ದಡ್ಡ ಮುಗುಳ್ನಗು ಮೂಡುತ್ತದೆ. ಯಾರಾದರೂ ಆಕರ್ಷಕವಾಗಿರುವವರು ಕಂಡಾಕ್ಷಣ ದೇಹದಲ್ಲಿನ ಫೀನೈಲ್‌ಈಥೈಲ್‌ಅಮೈನ್ ಕಾರ್ಖಾನೆ ಚುರುಕಾಗುತ್ತದೆ, ಮುಖದಲ್ಲಿ ದಡ್ಡ ಮುಗುಳ್ನಗು ಮೂಡುತ್ತದೆ. ಆದರೆ ದುಃಖದ ಸಂಗತಿಯೆಂದರೆ, ಈ ಫೀನೈಲ್‌ಈಥೈಲ್‌ಅಮೈನ್‌ನಿಂದ ಸಿಗುವ ನಶೆ ಶಾಶ್ವತವಲ್ಲ. ಅಷ್ಟಲ್ಲದೆ ಬರುಬರುತ್ತಾ ದೇಹವೂ ಆ ರಾಸಾಯನಿಕಕ್ಕೆ ಸಹಿಷ್ಣುತೆ ಬೆಳೆಸಿಕೊಳ್ಳುತ್ತದೆ ಹಾಗೂ ದೇಹದ ಫೀನೈಲ್‌ಈಥೈಲ್‌ಅಮೈನ್ ಕಾರ್ಖಾನೆಯೂ ಸೋಮಾರಿಯಾಗುತ್ತಾ ಬರುತ್ತದೆ. ಇದೇ ಕಾರಣಕ್ಕಾಗಿಯೇ ಮದುವೆಯ ಪ್ರಾರಂಭದಲ್ಲಿ ದಂಪತಿಗಳಲ್ಲಿ ಇರುವ ರೋಮಾಂಚನ ಬರುಬರುತ್ತಾ ಕಡಿಮೆಯಾಗುತ್ತದೆ. ಎಷ್ಟೋ ಬಾರಿ ಪ್ರೀತಿ ಪ್ರೇಮದ ಸ್ಥಳವನ್ನು ಅಸಹನೆ ಮತ್ತು ಸಿಡುಕು ಆಕ್ರಮಿಸಿಕೊಳ್ಳುತ್ತದೆ.
ಆದರೂ ಕೆಲವು ಪ್ರೀತಿ ಪ್ರೇಮಗಳು ಈ ಹಂತವನ್ನು ದಾಟಿ ಮುಂದುವರೆದಿರುತ್ತವೆ. ಅದಕ್ಕೂ ಕಾರಣ ರಾಸಾಯನಿಕಗಳೇ ಎನ್ನುತ್ತಾರೆ ವಿಜ್ಞಾನಿಗಳು. ಆದರೆ ಇಲ್ಲಿ ಪಾತ್ರ ವಹಿಸುವ ರಾಸಾಯನಿಕಗಳು ಎಂಡಾರ್ಫಿನ್ಸ್ ಗುಂಪಿಗೆ ಸೇರಿದವು. ಇವು ಸ್ಫೋಟಕ ಆಂಫೀಟಮಿನ್ಸ್‌ಗಳಂತೆ ಅಲ್ಲದೆ ಸಾಂತ್ವನಗೊಳಿಸುವ ರಾಸಾಯನಿಕಗಳು ಹಾಗೂ ಅವು ಸಹಜ ನೋವು ಶಮನಕಾರಕಗಳು. ಇವು ಪ್ರೇಮಿಗಳು ಪರಸ್ಪರ ಹತ್ತಿರವಿದ್ದಾಗ ಉತ್ಪತ್ತಿಯಾಗುವ ಪ್ರಾಕೃತಿಕ `ಮಾದಕ ವಸ್ತುಗಳು'. ಆದ್ದರಿಂದಲೇ ಪ್ರೇಮಿಗಳು ಪರಸ್ಪರ ದೂರವಾದಾಗ ಅಥವಾ ಅಕಾಲ ಮರಣಕ್ಕೀಡಾದಾಗ ಈ `ಮಾದಕ ವಸ್ತು'ಗಳು ದೇಹದಲ್ಲಿ ಉತ್ಪತ್ತಿಯಾಗದೆ ಹತಾಶರಾಗುತ್ತಾರೆ, ಗೋಳಾಡುತ್ತಾರೆ.
ರೋಮಾಂಚನಗೊಳಿಸುವ ಫೀನೈಲ್‌ಈಥೈಲ್‌ಅಮೈನ್ ಹಾಗೂ ಇತರ ಆಂಫೀಟಮಿನ್ಸ್‌ಗಳಿಗೂ ಮತ್ತು ಸಾಂತ್ವನಕಾರಕ ಎಂಡಾರ್ಫಿನ್‌ಗಳಿಗೂ ತದ್ವಿರುದ್ಧ ಗುಣಗಳಿವೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಮನಶಾಸ್ತ್ರಜ್ಞ ಮಾರ್ಕ್ ಗೋಲ್‌ಸ್ಟನ್ ಹೇಳುವಂತೆ ಮೊದಲ ಹದಿಹರೆಯದ ಪ್ರೇಮ ಮತ್ತೊಬ್ಬ ವ್ಯಕ್ತಿಯನ್ನು ಪರಸ್ಪರ ಮೆಚ್ಚಿಸುವಂಥದ್ದಾಗಿರುತ್ತದೆ. ಆನಂತರದ ಪರಿಪಕ್ವ ಪ್ರೇಮ ಆ ವ್ಯಕ್ತಿಯನ್ನು ಇಡಿಯಾಗಿ, ಅಂದರೆ ಆ ವ್ಯಕ್ತಿಯನ್ನು ಸಂಪೂರ್ಣವಾಗಿ ಇದ್ದ ಗುಣಗಳು ಇರುವಂತೆ ಸ್ವೀಕರಿಸಿ ಪ್ರೀತಿಸುವ ಮನೋಭಾವವಾಗಿರುತ್ತದೆ. ಮೊದಲನೆಯ ಪ್ರೇಮಕ್ಕೆ ಫೀನೈಲ್‌ಈಥೈಲ್‌ಅಮೈನ್ ಕಾರಣವಾದರೆ, ಎರಡನೆಯದಕ್ಕೆ ಎಂಡಾರ್ಫಿನ್‌ಗಳು ಕಾರಣವಾಗುತ್ತವೆ. ಮೊದಲನೆಯದು ಭಾವುಕ ಪ್ರೇಮವಾದರೆ, ಎರಡನೆಯದು ಸಹಾನುಭೂತಿಯ ಪ್ರೇಮ. ಮೊದಲನೆಯದು `ಹಳೆ ಪಾತ್ರೆ, ಹಳೆ ಕಬ್ಬಿಣ, ಹಳೆ ಪೇಪರ್...' ಆದರೆ ಎರಡನೆಯದು, `ಒಲವೆ ಜೀವನ ಸಾಕ್ಷಾತ್ಕಾರ, ಒಲವೇ ಮರೆಯದ ಮಮಕಾರ'.
ಪ್ರೀತಿ ಪ್ರೇಮಕ್ಕೆ ಕಾರಣವಾಗುವ ಮತ್ತೊಂದು ರಾಸಾಯನಿಕ ಆಕ್ಸಿಟೋಸಿನ್. ಮಿದುಳಿನಲ್ಲಿ ಉತ್ತತ್ತಿಯಾಗುವ ಈ ರಾಸಾಯನಿಕ ನರಗಳನ್ನು ಸೂಕ್ಷ್ಮಸಂವೇದನೆಗಳಿಗೆ ಸಜ್ಜುಗೊಳಿಸುತ್ತದೆ ಹಾಗೂ ಸ್ನಾಯುಗಳು ಸಂಕೋಚನಗೊಳ್ಳಲು ಪ್ರಚೋದಿಸುತ್ತದೆ. ಸಾಮಾನ್ಯವಾಗಿ ಹೆರಿಗೆಯ ಸಮಯದಲ್ಲಿ ಗರ್ಭಕೋಶ ಸಂಕೋಚನಗೊಳ್ಳಲು, ಎದೆಹಾಲು ಉತ್ಪತ್ತಿಯಾಗಲು ಮತ್ತು ಮಕ್ಕಳಿಗೆ ಹಾಲೂಡಿಸುವಂತೆ ಪ್ರಚೋದಿಸುವಲ್ಲಿ ಈ ರಾಸಾಯನಿಕ ಪಾತ್ರವಹಿಸುಯುತ್ತದೆ. ವಿಜ್ಞಾನಿಗಳ ಪ್ರಕಾರ ವಯಸ್ಕ ಗಂಡು ಮತ್ತು ಹೆಣ್ಣು ಒಬ್ಬರನ್ನೊಬ್ಬರು ಅಪ್ಪಿಕೊಳ್ಳಲು ಮತ್ತು ಒಬ್ಬರಲ್ಲೊಬ್ಬರು `ಬೆರೆತು' ಹೋಗಲು ಈ ರಾಸಾಯನಿಕವೇ ಕಾರಣ. ಅಷ್ಟಲ್ಲದೆ ಲೈಂಗಿಕಕ್ರಿಯೆಯಲ್ಲಿ ಸ್ಖಲನದ ಸುಖವನ್ನು ಸಹ ಈ ರಾಸಾಯನಿಕ ಹೆಚ್ಚಿಸುತ್ತದೆ. ಅಧ್ಯಯನವೊಂದರಲ್ಲಿ ಗಂಡಸರ ದೇಹದಲ್ಲಿನ ಆಕ್ಸಿಟೋಸಿನ್ ಅವರ ಸ್ಖಲನದ ಹಂತದಲ್ಲಿ ಮೂರರಿಂದ ಐದು ಪಟ್ಟು ಹೆಚ್ಚಾಗಿದ್ದುದು ಕಂಡುಬಂದಿತು. ಹೆಂಗಸರಲ್ಲಿ ಇದು ಇನ್ನೂ ಹೆಚ್ಚಾಗಬಹುದೆಂಬುದು ಅವರ ಅಂದಾಜು.
ಆದರೆ ವಿಜ್ಞಾನಿಗಳಿಗೆ ಇನ್ನೂ ನಿಗೂಢವಾಗಿರುವುದು ಸಲಿಂಗಪ್ರೇಮ. ಸಲಿಂಗಪ್ರೇಮಿಗಳಿಗೆ ಸಂತಾನೋತ್ಪತ್ತಿಯಾಗದಿರುವುದರಿಂದ ಜೀವವಿಕಾಸದ ದೃಷ್ಟಿಯಿಂದ ಪ್ರಕೃತಿಯಲ್ಲಿ ಸಲಿಂಗಪ್ರೇಮದಿಂದ ಯಾವುದೇ ಪ್ರಯೋಜನವಿಲ್ಲ. ಹಾಗೆಂದಾಕ್ಷಣ ಸಲಿಂಗಪ್ರೇಮಿಗಳು ಇತರ ಪ್ರೇಮಿಗಳಂತೆ ಭಾವುಕ ಅಥವಾ ಸಹಾನುಭೂತಿಯ ಪ್ರೇಮವನ್ನು ಹೊಂದಿರುವುದಿಲ್ಲವೆಂದು ಅರ್ಥವಲ್ಲ. ಕೆಲವು ಸಂಶೋಧಕರ ಪ್ರಕಾರ ಅಂಥವರು ತಾವು ತಮ್ಮ ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿದ್ದಾಗ ಉಂಟಾದ ಯಾವುದೋ ಜೈವಿಕ-ರಾಸಾಯನಿಕ ತೊಂದರೆಯಿಂದಾಗಿ ಆ ಮನೋಭಾವ ಬೆಳೆಸಿಕೊಂಡಿರುತ್ತಾರೆ. ಅಂಥವರು ಸಲಿಂಗಿಗಳನ್ನು ಪ್ರೇಮಿಸುವುದರಿಂದ ಅವರ ಪ್ರೇಮವನ್ನು ಯಾವರೀತಿಯಿಂದಲೂ ಗೌಣವಾಗಿ ಕಾಣಬಾರದು ಎನ್ನುತ್ತಾರೆ ಅವರು.
ಡೋಪಮೈನ್ ಮತ್ತು ಸಂಬಂಧಿತ ಇತರ ನರವಾಹಕ ರಾಸಾಯನಿಕಗಳು ರೊಮ್ಯಾಂಟಿಕ್ ಪ್ರೇಮದಲ್ಲಿ ಮಹತ್ತರ ಪಾತ್ರ ವಹಿಸುವುದನ್ನು ಹೆಲೆನ್ ಫಿಶರ್ ಅಧ್ಯಯನದ ಮೂಲಕ ಸಾಬೀತು ಪಡಿಸಲು ಯತ್ನಿಸಿದರು. ಅವರ ಜೊತೆಗೆ ಅವರ ಸಹ ವಿಜ್ಞಾನಿಯಾಗಿದ್ದ ಆರ್ಟ್ ಅರೋನ್‌ರವರು ಪ್ರೇಮದ ಬಗ್ಗೆ ಮತ್ತೊಂದು ಅಭಿಪ್ರಾಯವನ್ನು ಹೊಂದಿದ್ದರು. ಅವರ ಪ್ರಕಾರ ರೊಮ್ಯಾಂಟಿಕ್ ಪ್ರೇಮ ಒಂದು ಭಾವುಕತೆಯಲ್ಲ ಬದಲಿಗೆ ಅದು ಆಯ್ಕೆಯ ಸಂಗಾತಿಯೊಂದಿಗೆ ಅತ್ಯಂತ ಗಾಢ ಸಂಬಂಧ ಹೊಂದಿ ಅದನ್ನು ನಿರ್ವಹಿಸಿ ಜೀವಜಗತ್ತಿನಲ್ಲಿ ತಮ್ಮ ಸಂತತಿ ಮುಂದುವರೆಸುವ ಒಂದು ಪ್ರೇರಣೆಯಷ್ಟೆ.
ನ್ಯೂಯಾರ್ಕ್‌ನ ಸ್ಟೇಟ್ ವಿಶ್ವವಿದ್ಯಾನಿಲಯದ ಮನಶಾಸ್ತ್ರ ವಿದ್ಯಾರ್ಥಿಗಳಲ್ಲಿ `ಪ್ರೇಮದಲ್ಲಿ ಹುಚ್ಚರಾಗಿರುವ' ವಿದ್ಯಾರ್ಥಿಗಳನ್ನು ಅವರು ಆಯ್ಕೆಮಾಡಿದರು. ಅವರ ಪ್ರಕಾರ ಪ್ರೇಮದಲ್ಲಿರುವಾಗ ಅತೀವ ಸಂತೋಷದ ಭಾವನೆ, ನಿದ್ರಾಹೀನತೆ ಮತ್ತು ಹಸಿವಾಗದಿರುವಿಕೆ, ಪ್ರೇಮಿಗಳ ಆದಮ್ಯ ಉತ್ಸಾಹ, ಶಕ್ತಿ, ಎಲ್ಲವನ್ನೂ ಎದುರಿಸಬಲ್ಲವೆಂಬ ಭಾವನೆಗಳಿಗೆ ಕಾರಣ ಮಿದುಳಿನಲ್ಲಿ ಹೆಚ್ಚಾಗುವ ಡೋಪಮೈನ್ ಮತ್ತು ನಾರ್‌ಎಪಿನಫ್ರೈನ್‌ನ ಪ್ರಮಾಣ. ಅದೇ ರೀತಿ ಪ್ರಿಯಕರರ ನೆನಪು ಸದಾ ಕಾಡುವಂತೆ `ಕುಂತ್ರೆ ನಿಂತ್ರೆ ಅವನ/ಳ ಧ್ಯಾನ'ಕ್ಕೆ ಕಾರಣ ಮಿದುಳಿನ ಚಟುವಟಿಕೆಯಲ್ಲಿ ಕಡಿಮೆಯಾಗುವ ಸೆರೊಟೋನಿನ್‌ನ ಪ್ರಮಾಣ ಎಂಬುದು ಅವರ ನಂಬಿಕೆಯಾಗಿತ್ತು. ಅಲ್ಲದೆ ಈ ಮೂರು ರಾಸಾಯನಿಕಗಳು ಮಿದುಳಿನ ಕೆಲವು ಭಾಗಗಳಲ್ಲಿ ಮಾತ್ರ ಸಕ್ರಿಯವಾಗಿರುತ್ತಿದ್ದವು. ಭಾವುಕ ಪ್ರೇಮದಲ್ಲಿರುವಾಗ ಮಿದುಳಿನ ಯಾವ ಭಾಗಗಳು ಸಕ್ರಿಯವಾಗುತ್ತವೆ ಹಾಗೂ ಪ್ರಮುಖವಾಗಿ ಯಾವ ರಾಸಾಯನಿಕಗಳು ಆ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಅವರು ಕಂಡುಕೊಳ್ಳಲು ಯತ್ನಿಸಿದರು. ಇದರಿಂದಾಗಿ ಜೀವವಿಕಾಸದ ಹಾದಿಯಲ್ಲಿನ ಭಾವುಕ ಪ್ರೇಮದ ಮೂಲಸೆಲೆಯನ್ನು ಅರಸಲು ಹಾಗೂ ಏಕೆ ಸಾವಿರಾರು ಜನಗಳ ನಡುವೆ ಒಬ್ಬ ವ್ಯಕ್ತಿಯನ್ನು ಆಯ್ದು ಆತ/ಕೆಯನ್ನೇ ಪ್ರೀತಿಸುತ್ತೇವೆ ಅಲ್ಲದೆ, ಈ ಪ್ರೇಮವನ್ನು ಹಲವಾರು ಬಾರಿ ಜೀವನ ಪರ್ಯಂತ ಮುಂದುವರಿಸುತ್ತೇವೆ ಎಂಬುದನ್ನು ಅರಿಯಲು ಈ ಅಧ್ಯಯನವನ್ನು ಕೈಗೊಂಡರು.
ಪ್ರೇಮದಲ್ಲಿ `ಹುಚ್ಚ'ರಾಗಿದ್ದ ಅಧ್ಯಯನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪ್ರೇಮಿಗಳ ಭಾವಚಿತ್ರ ತೋರಿಸಿ ಆ ಕ್ಷಣ ಅವರ ಮನದಲ್ಲಾದ ಭಾವನೆಗಳಿಂದಾಗಿ ಅವರ ಮಿದುಳಿನಲ್ಲಾಗುವ ಚಟುವಟಿಕೆಗಳನ್ನು ಎಫ್.ಎಂ.ಆರ್.ಐ. ಸ್ಕ್ಯಾನಿಂಗ್ ಮೂಲಕ ದಾಖಲಿಸಿಕೊಂಡರು. ಪ್ರೇಮದಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಪ್ರಿಯಕರ/ಪ್ರಿಯತಮೆಯ ಚಿತ್ರ ಕಂಡಾಗ ಅವರ ಮಿದುಳಿನ ಹಲವಾರು ಭಾಗಗಳು ಸಕ್ರಿಯಗೊಂಡರೂ ಹೆಲೆನ್ ಫಿಶರ್‌ರವರಿಗೆ ಬಹಳ ಮುಖ್ಯವಾಗಿ ಕಂಡದ್ದು ಕಾಡೇಟ್ ನ್ಯೂಕ್ಲಿಯಸ್ ಎಂಬ ಭಾಗ. ಅದು ಮಿದುಳಿನ ಮಧ್ಯ ಭಾಗದಲ್ಲಿದೆ ಹಾಗೂ ಅದನ್ನು ವಿಜ್ಞಾನಿಗಳು ಪ್ರಾಚೀನ ಭಾಗವೆಂದು ಭಾವಿಸಿ ಅದನ್ನು ಸರೀಸೃಪ ಮಿದುಳೆಂದೂ ಕರೆಯುತ್ತಾರೆ ಏಕೆಂದರೆ, ಅದು ಸ್ತನಿ ಜೀವಿಗಳು (ಮ್ಯಾಮಲ್ಸ್) ವಿಕಾಸಗೊಳ್ಳುವ ಮೊದಲೇ ಸುಮಾರು ೬೫ ದಶಲಕ್ಷ ವರ್ಷಗಳ ಹಿಂದೆಯೇ ವಿಕಾಸವಾಗಿದ್ದಿತು. ಹೆಲೆನ್‌ರವರಿಗೆ ಆ ಭಾಗ ಸಕ್ರಿಯಗೊಂಡಿದ್ದು ಮುಖ್ಯವಾಗಿದ್ದುದು ಏಕೆಂದರೆ, ವಿಜ್ಞಾನಿಗಳು ಅದುವರೆಗೂ ಆ ಭಾಗವನ್ನು ದೇಹದ ಚಲನೆಯನ್ನು ನಿರ್ದೇಶಿಸುವ ಭಾಗ ಮಾತ್ರವೆಂದು ನಂಬಿದ್ದರು. ಈಗ ಅದು ಮಿದುಳಿನ ಉದ್ರೇಕಗೊಳ್ಳುವ, ಸುಖದ ಅನುಭವ ನೀಡುವ ಹಾಗೂ ಪ್ರತಿಫಲ ನಿರೀಕ್ಷಿಸುವ ಗುರಿಯನ್ನು ಹೊಂದುವ `ಪ್ರತಿಫಲ ನೀಡುವ ವ್ಯವಸ್ಥೆ'ಯ ಭಾಗವೂ ಹೌದೆಂಬುದು ಹೆಲೆನ್‌ರವರಿಗೆ ಅರಿವಾಯಿತು. ಅಲ್ಲದೆ ಅವರ ಪ್ರಯೋಗದಲ್ಲಿ ಪ್ರೇಮದಲ್ಲಿ `ಹುಚ್ಚ'ರಾಗಿದ್ದವರ ಮಿದುಳಿನ ವೆಂಟ್ರಲ್ ಟೆಗ್‌ಮೆಂಟಲ್ ಪ್ರದೇಶದಲ್ಲೂ ಹೆಚ್ಚು ಚಟುವಟಿಕೆ ಕಂಡುಬಂದಿತು. ಆ ಪ್ರದೇಶ ಡೋಪಮೈನ್ ರಾಸಾಯನಿಕ ತಯಾರಿಸುವ ಜೀವಕೋಶಗಳನ್ನು ಹೊಂದಿದ್ದು ಪ್ರೇಮಿಗಳು ತಮ್ಮ ಪ್ರಿಯಕರ/ಪ್ರಿಯತಮೆಯ ಭಾವಚಿತ್ರವನ್ನು ಕಂಡಾಗ ಡೋಪಮೈನ್ ಉತ್ಪಾದಿತವಾಗಿ ಮಿದುಳಿನ ನರಕೋಶಗಳು ಅದನ್ನು ಕಾಡೇಟ್ ನ್ಯೂಕ್ಲಿಯಸ್ ಸೇರಿದಂತೆ ಇತರ ಭಾಗಗಳಿಗೆ ಸಿಂಪಡಿಸುತ್ತಿದ್ದವು. ಅದರಿಂದಾಗಿಯೇ ಪ್ರೇಮಿಗಳಲ್ಲಿ ಆದಮ್ಯ ಶಕ್ತಿ, ಮಾನಸಿಕ ದೃಢತೆ, ಅವರ್ಣನೀಯ ಸುಖದ ಭಾವನೆ, ಕೆಲವೊಮ್ಮೆ ಅತಿರೇಕವೆನ್ನಿಸುವಷ್ಟು ವ್ಯಾಮೋಹ ಉಂಟಾಗುತ್ತಿತ್ತು. ಅದರಿಂದಾಗಿಯೇ ಪ್ರೇಮಿಗಳು ಏನು ವಿಷಯವು ಇಲ್ಲದಿದ್ದರೂ ರಾತ್ರಿಯೆಲ್ಲಾ ಮಾತನಾಡಬಲ್ಲರು, ಅತ್ಯದ್ಭುತ ಕಾವ್ಯ ಬರೆಯಬಲ್ಲರು, ಕೇವಲ ಕೆಲವು ಕ್ಷಣಗಳ ಭೇಟಿಗಾಗಿ ಪ್ರತಿ ವಾರ ನೂರಾರು ಮೈಲಿ ಪ್ರಯಾಣ ಮಾಡಬಲ್ಲರು, ತಮ್ಮ ಉದ್ಯೋಗಗಳನ್ನು ಅಥವಾ ಜೀವನ ಶೈಲಿಯನ್ನೇ ಬದಲಿಸಿಕೊಳ್ಳಬಲ್ಲರು ಹಾಗೂ ಅಪರೂಪದ ಸಂದರ್ಭಗಳಲ್ಲಿ ಪರಸ್ಪರರಿಗಾಗಿ ಪ್ರಾಣ ಸಹ ಬಿಡಬಲ್ಲರು.
ಅದೇ ಮುಖ, ಅದೇ ಚಹರೆ
ಭಾವುಕ ಮತ್ತು ಸಹಾನುಭೂತಿಯ ಪ್ರೇಮದ ಮೂಲವನ್ನು ಜೀವವಿಕಾಸದ ಮತ್ತು ರಾಸಾಯನಿಕಗಳ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬಹುದು. ಆದರೆ ಎಲ್ಲರೂ ಎಲ್ಲರನ್ನೂ ಕಂಡು ಆಕರ್ಷಿತರಾಗುವುದಿಲ್ಲ ಹಾಗೂ ಒಬ್ಬ ವ್ಯಕ್ತಿಯನ್ನೇ ಏಕೆ ಪ್ರೀತಿಸತೊಡಗುತ್ತಾರೆ? ಇಲ್ಲಿಯೂ ಜೀವವಿಕಾಸ ಮತ್ತು ಜೀವಶಾಸ್ತ್ರವೇ ಕಾರ್ಯನಿರ್ವಹಿಸುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. ಜೀವವಿಕಾಸದ ದೃಷ್ಟಿಯಿಂದ ಸಂತಾನೋತ್ಪಾದನೆಗಾಗಿ ಗಂಡು ಅತ್ಯಂತ ಫಲವತ್ತಾದ ಹೆಣ್ಣನ್ನೇ ಅರಸುತ್ತಾನೆ. ಅದರಿಂದಾಗಿಯೇ ೧೭ರಿಂದ ೨೮ ವಯಸ್ಸಿನ ಸ್ತ್ರೀಯರು ಗಂಡಿಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತಾರೆ. ಅಧ್ಯಯನಗಳ ಪ್ರಕಾರ ಬರೇ ನೋಟದಿಂದಲೇ ಆಕರ್ಷಿತನಾಗುವ ಗಂಡು ಬಹು ಬೇಗ ಪ್ರೇಮದಲ್ಲಿ ಬೀಳುತ್ತಾನೆ. ಆದರೆ ಹೆಂಗಸರ ಪ್ರೇಮ ಅತ್ಯಂತ ಸಂಕೀರ್ಣವಾದುದು. ಅವರು ಅಷ್ಟು ಸುಲಭವಾಗಿ ಪ್ರೇಮಪಾಶದಲ್ಲಿ ಸಿಕ್ಕಿ ಬೀಳುವುದಿಲ್ಲ, ಏಕೆಂದರೆ ಅವರ ಅವಶ್ಯಕತೆಗಳು ಇನ್ನೂ ಸಂಕೀರ್ಣವಾದುದು. ಅವರಿಗೆ ಗಂಡನ್ನು ಅಭ್ಯಸಿಸಲು ಹೆಚ್ಚು ಸಮಯ ಬೇಕಾಗುತ್ತದೆ. ಅವರಿಗೆ ವಯಸ್ಸು ಮುಖ್ಯವಾಗುವುದಿಲ್ಲ, ಆದರೆ ಆತ ತನ್ನ ಮಕ್ಕಳಿಗೆ ತಂದೆಯಾಗಬೇಕು, ತನಗೆ ಮತ್ತು ಮಕ್ಕಳಿಗೆ ಸುರಕ್ಷತೆ ಒದಗಿಸಬೇಕು, ತನ್ನ ಸಂಪನ್ಮೂಲಗಳನ್ನು ಹಂಚಿಕೊಳ್ಳಬೇಕು ಹಾಗೂ ಸಮಾಜದಲ್ಲಿ ಆತ ಉತ್ತಮ ಸ್ಥಾನಮಾನ ಹೊಂದಿರಬೇಕು ಎಂಬುದನ್ನು ಗಮನಿಸುತ್ತಾರೆ. ಈ ಮೊದಲೇ ಹೇಳಿರುವಂತೆ ಪ್ರಕೃತಿಯಲ್ಲಿ ಗಂಡಿನ ಆಯ್ಕೆ ಮಾಡುವವಳೇ ಹೆಣ್ಣು. ತನ್ನ ಸಂತತಿ ಆರೋಗ್ಯವಾಗಿರಬೇಕು, ಬಲಿಷ್ಠವಾಗಿರಬೇಕು ಎಂದು ಬಯಸುವ ಆಕೆ ಆ ರೀತಿಯ ವಂಶವಾಹಿಗಳನ್ನು ತನ್ನ ಸಂತತಿಗೆ ಒದಗಿಸಬಲ್ಲ ಗಂಡನ್ನೇ ಅರಸುತ್ತಾಳೆ. ಇದು ಬಹುಪಾಲು ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ಕಂಡುಬರುತ್ತದೆ.
ಅಷ್ಟಾದರೂ ಪ್ರತಿಯೊಬ್ಬ ವ್ಯಕ್ತಿ ಮತ್ತೊಬ್ಬ `ವಿಶೇಷ' ವ್ಯಕ್ತಿಯನ್ನೇ ಅರಸಿ ಪ್ರೀತಿಸತೊಡಗುತ್ತಾನೆ/ಳೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಇಬ್ಬರು ವ್ಯಕ್ತಿಗಳೊಡನೆ ಭಾವುಕ ಪ್ರೇಮ ಹೊಂದಿರಲು ಸಾಧ್ಯವಿಲ್ಲ ಎನ್ನುತ್ತಾರೆ ವಾಲ್ಶ್ ಎಂಬ ವಿಜ್ಞಾನಿ. ಒಬ್ಬ ವ್ಯಕ್ತಿ ಹಲವಾರು ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿರಬಹುದು ಆದರೆ, ಅದು ಭಾವುಕ ಪ್ರೇಮವಾಗುವುದಿಲ್ಲ. ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಸೆಕ್ಸಾಲಜಿಸ್ಟ್ ಜಾನ್ ಮನಿ ಹೇಳುವಂತೆ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮನಸ್ಸಿನಲ್ಲಿ ತನ್ನ ಆದರ್ಶ ಸಂಗಾತಿಯ ಬಗ್ಗೆ ತನ್ನ ಮನಸ್ಸಿನಲ್ಲಿ `ಪ್ರೇಮ ನಕ್ಷೆ' (ಲವ್ ಮ್ಯಾಪ್) ಹೊಂದಿರುತ್ತಾನೆ/ಳೆ. ಆ `ಪ್ರೇಮ ನಕ್ಷೆ' ಒಂದು ಬೃಹತ್ ದಾಖಲೆ. ಬಾಲ್ಯದ ದಿನಗಳಿಂದ ನಾವು ಇಷ್ಟ ಪಟ್ಟ ವಸ್ತುಗಳ, ಇಷ್ಟ ಪಟ್ಟ ವ್ಯಕ್ತಿಗಳ ಅಥವಾ ಆತಂಕ ಉಂಟುಮಾಡಿದ ವಸ್ತುಗಳ ಅಥವಾ ವ್ಯಕ್ತಿಗಳ ದಾಖಲೆಗಳಿರುತ್ತವೆ. ಆ ದಾಖಲೆಗಳಲ್ಲಿ ಕಣ್ಣಿನ ಆಕಾರ, ಮುಖದ ಆಕಾರ, ಕೂದಲ ರಚನೆ, ದೇಹದ ರಚನೆ, ಧರಿಸುವ ವಸ್ತ್ರ ಇತ್ಯಾದಿಗಳಿರಬಹುದು. ಬಾಲ್ಯದ ದಿನಗಳಿಂದ ಶೇಖರಗೊಳ್ಳುವ ಆ ದಾಖಲೆಗಳು ಹದಿಹರೆಯದ ವಯಸ್ಸಿನ ಹೊತ್ತಿಗೆ ತಾವು ಅರಸುವ ಸಂಗಾತಿಯ ಚಿತ್ರಣ ಅವರ ಮನಸ್ಸಿನಲ್ಲಿ ಅವರಿಗರಿವಿಲ್ಲದೆ ಸುಪ್ತವಾಗಿ ಮೂಡಿಸಿರುತ್ತವೆ. ಅವರ ಮನಸ್ಸು ಬಯಸುವ ಯಾವುದಾದರೂ ಲಕ್ಷಣ ಮತ್ತೊಬ್ಬ ವ್ಯಕ್ತಿಯಲ್ಲಿ ಕಂಡಲ್ಲಿ ಅವರಿಗರಿವಿಲ್ಲದೆ ಅವರು ಆಕರ್ಷಿತರಾಗುತ್ತಾರೆ, ಪ್ರೇಮಕ್ಕಾಗಿ ತವಕಿಸುತ್ತಾರೆ.
ವಿಜ್ಞಾನಿಗಳು ಪ್ರೇಮದ ಅನ್ವೇಷಣೆಯನ್ನು ರಾಸಾಯನಿಕಗಳಲ್ಲಿ, ಜೀವಶಾಸ್ತ್ರದಲ್ಲಿ, ಜೀವವಿಕಾಸವಾದದಲ್ಲಿ ಅರಸುತ್ತಾ ಹೊರಟಷ್ಟೂ ಪ್ರೇಮ ಹೆಚ್ಚು ಹೆಚ್ಚು ನಿಗೂಢವಾಗುತ್ತಿದೆ. ಒಟ್ಟಾರೆಯಾಗಿ ಅದು ದೇಹ ಮತ್ತು ಪ್ರಜ್ಞೆ, ವಾಸ್ತವ ಮತ್ತು ಕಲ್ಪನೆ, ಕವಿತೆ ಮತ್ತು ಡೋಪಮೈನ್‌ಗಳ ಸಂಗಮವಾಗಿದೆ ಹಾಗೂ ನಮ್ಮ ಮಿದುಳು ಮತ್ತು ಮನಸ್ಸಿನಾಳದಲ್ಲೆಲ್ಲೋ ಅದು ತನ್ನ ರಹಸ್ಯಗಳನ್ನು ಅಡಗಿಸಿಟ್ಟಿದೆ. ಹೆಲೆನ್ ಫಿಶರ್ ನಂಬಿದ್ದಂತೆ ಆದಮ್ಯ ಪ್ರೇಮದಲ್ಲಿ ಭಾವುಕತೆಯಿದೆ ಹಾಗೂ ಆರ್ಟ್ ಅರೋನ್ ನಂಬಿದ್ದಂತೆ ಜೀವಜಗತ್ತಿನಲ್ಲಿ ತಮ್ಮ ಸಂತತಿ ಮುಂದುವರೆಸುವ ಆದಮ್ಯ ಪ್ರೇರಣೆ ಸಹ ಇದೆ. ಅದೇನೇ ಆದರೂ ಮೇಲ್ನೋಟಕ್ಕೆ ತೀರಾ ಸರಳವೆಂದು ಕಾಣುವ ಪ್ರೀತಿ ಪ್ರೇಮಗಳು ರಾಸಾಯನಿಕಗಳು ನಿಯಂತ್ರಿಸುವ ಪ್ರಕೃತಿಯ ಒಂದು ಸಂಕೀರ್ಣ ಮತ್ತು ಅದ್ಭುತ ವಿನ್ಯಾಸ. ಅದರ ಮೂಲ ಮಿದುಳಿನಲ್ಲಿನ ಕಾಡೇಟ್ ನ್ಯೂಕ್ಲಿಯಸ್ ಎಂಬ ಭಾಗ. ಸಂಗಾತಿಯೊಬ್ಬರನ್ನು ಅರಸಲು, ಆ ಸಂಗಾತಿಯೊಂದಿಗೆ ಭಾವುಕ ಸಂಬಂಧ ಬೆಳೆಸಿ ಜೀವವಿಕಾಸದ ಮೂಲೋದ್ದೇಶವಾದ ಮಾನವ ಸಂತತಿ ಸಂವರ್ಧನೆಗೆ ಸಹಾಯವಾಗುವಂತೆ ಈ ಎಲ್ಲ ಸಂಕೀರ್ಣ ಕಸರತ್ತುಗಳನ್ನು ಪ್ರಕೃತಿ ನಡೆಸುತ್ತದೆ. ಹಾಗಿರುವಾಗ ಈ ಪ್ರೀತಿ ಪ್ರೇಮವೆಂಬುದು ಪ್ರಕೃತಿ ತನ್ನ ಸ್ವಾರ್ಥಕ್ಕಾಗಿ ನಮ್ಮ ಮೇಲೆ ಹರಡಿರುವ ಒಂದು ಅದ್ಭುತ ಭ್ರಮೆಯಲ್ಲದೆ ಮತ್ತೇನು?
ಕೊನೆಯ ಮಾತು
ಕಾಮನಬಿಲ್ಲು ಪ್ರಕೃತಿಯ ಒಂದು ಅದ್ಭುತ ಕಲಾಕೃತಿ. ಕವಿಗಳಿಗೆ, ಕಲಾವಿದರಿಗೆ ಶತಶತಮಾನಗಳಿಂದ ತಮ್ಮ ಕಾವ್ಯ, ಕಲಾಕೃತಿಗಳಲ್ಲಿ ಚಿತ್ರಿಸಬಲ್ಲ ಸುಂದರ ವಸ್ತುವಾಗಿದೆ. ಮಕ್ಕಳ ಕಲ್ಪನೆಗಳ ಗರಿಗೆದರಿಸಬಲ್ಲ ಕಾಮನಬಿಲ್ಲು ಮಳೆಯ ಹನಿಯೊಳಕ್ಕೆ ಹರಿವ ಬೆಳಕಿನ ವಿಭಜನೆಯಿಂದ ಉಂಟಾದದ್ದು, ಅದರಲ್ಲಿ ಅದ್ಭುತವೇನಿಲ್ಲ ಎಂದ ನ್ಯೂಟನ್ ಅದರ ರಹಸ್ಯವನ್ನು ಹೊರಗೆಡವಿದ. ಕಾಮನಬಿಲ್ಲಿನ ಅದ್ಭುತ ಬಣ್ಣಗಳನ್ನು ಕೇವಲ ಪಟ್ಟಕವೊಂದರಿಂದ ಹೊರಬಂದ ಬಣ್ಣಗಳಷ್ಟೆ ಎಂದು ಅದರ ಸೌಂದರ್ಯವನ್ನು ನ್ಯೂಟನ್ ಹಾಳುಮಾಡಿದ ಎಂದು ಕವಿ ಕೀಟ್ಸ್ ಆಪಾದಿಸಿದ. ಈಗ ವಿಜ್ಞಾನಿಗಳು ಪ್ರೀತಿ ಪ್ರೇಮದ ಬಗ್ಗೆ ಅದನ್ನೇ ಮಾಡಲು ಹೊರಟಿದ್ದಾರೆಯೆ? ಪ್ರೇಮವೆಂಬ ಅವರ್ಣನೀಯ ಅದ್ಭುತ ಅನುಭವವನ್ನು ಅದು ಕೇವಲ ರಾಸಾಯನಿಕಗಳ ಪ್ರಕ್ರಿಯೆ, ಪ್ರಕೃತಿ ಮಾನವ ಸಂತಾನೋತ್ಪತ್ತಿಗಾಗಿ ಮನುಷ್ಯರ ಮನಸ್ಸುಗಳಲ್ಲಿ ರಚಿಸುತ್ತಿರುವ ಒಂದು ಭ್ರಮಾಲೋಕ ಮಾತ್ರ ಎಂದು ವಿಜ್ಞಾನಿಗಳು ಹೇಳುತ್ತಿರುವಾಗ ಇದಕ್ಕೂ ನಾವು ಕೀಟ್ಸ್ ಹೊರೆಸಿದ ಆಪಾದನೆಯನ್ನು ಹೊರಿಸಬಹುದೆ? ಕೀಟ್ಸ್‌ನ ಆಪಾದನೆಯನ್ನು ತಿರಸ್ಕರಿಸುವ ಬ್ರಿಟಿಷ್ ವಿಜ್ಞಾನಿ ರಿಚರ್ಡ್ ಡಾಕಿನ್ಸ್ `ಅನ್‌ವೀವಿಂಗ್ ದ ರೇನ್‌ಬೊ' (ಕಾಮನಬಿಲ್ಲಿನ ಅನಾವರಣ) ಎಂಬ ಪುಸ್ತಕದಲ್ಲಿ ವಿಜ್ಞಾನದ ಬಗೆಗೆ ಈ ರೀತಿ ಹೇಳುತ್ತಾರೆ: `ವಿಜ್ಞಾನ ನಮಗೆ ನೀಡಬಲ್ಲ ಅದ್ಭುತ ವಿಸ್ಮಯ ಅನುಭವ ಮಾನವ ಮನಸ್ಸು ಗ್ರಹಿಸಬಲ್ಲ ಅತ್ಯದ್ಭುತ ಅನುಭವವಾಗಿದೆ. ಆ ಅನುಭವ ಸಂಗೀತ ಮತ್ತು ಕಾವ್ಯ ಕೊಡಬಲ್ಲ ಅತಿ ಮಧುರ ಸೌಂದರ್ಯಾನುಭವಕ್ಕೆ ಸಮನಾದುದು. ಆ ಅನುಭವ ನಮ್ಮ ಬದುಕು ಸಾರ್ಥಕವಾಗಿದೆ ಎನ್ನುವಂತೆ ಮಾಡುತ್ತದೆ ಹಾಗೂ ನಮ್ಮ ಬದುಕು ಶಾಶ್ವತವಲ್ಲ ಎಂಬುದನ್ನು ನಮಗೆ ಮನದಟ್ಟು ಮಾಡುತ್ತದೆ.'

ಇ-ಮೇಲ್: j.balakrishna@gmail.com

4 ಕಾಮೆಂಟ್‌ಗಳು:

AntharangadaMaathugalu ಹೇಳಿದರು...

ಅದ್ಭುತವಾದ ಲೇಖನ....... ಧನ್ಯವಾದಗಳು..

ಮಂಸೋರೆ ಹೇಳಿದರು...

ನಮಸ್ತೆ ಸರ್.. ನಿಮ್ಮ ಲೇಖನಗಳಲ್ಲಿ ಒಂದೆರೆಡು ಲೇಖನಗಳನ್ನು ಓದಿದೆ.. ತುಂಬಾ ಅದ್ಬುತವಾಗಿ ಬರೆದಿದ್ದೀರಿ.. ಜೊತೆಗೆ ನೀವು ಕೋಲಾರದವರು ಎಂದು ತಿಳಿದು ಮತ್ತಷ್ಟು ಸಂತೋಷವಾಯಿತು.. ನಾನು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ನಂಗಲಿ ಬಳಿಯಿರುವ ಪುಟ್ಟ ಗ್ರಾಮ ಎನ್.ವೆಂಕಟಾಪುರ ಎಂಬ ಹಳ್ಳಿಯವನು.ನನಗೆ ಕೋಲಾರ ಜಿಲ್ಲೆಯ ಬಗ್ಗೆ ತುಂಬಾ ತಿಳಿದುಕೊಳ್ಳುವ ಹಂಬಲವಿದೆ.ನನ್ನಿಂದ ಸಾದ್ಯವಾದ ಪ್ರಯತ್ನ ಮಾಡುತ್ತಿರುತ್ತೇನೆ. ನಿಮ್ಮ ಲೇಖನಗಳು ಸಂಗ್ರಹಯೋಗ್ಯವಾಗಿದೆ. ನಿಮ್ಮ ಪರಿಚಯ ಆದದ್ದು ತುಂಬಾ ಸಂತೋಷವನ್ನುಂಟು ಮಾಡಿದೆ. ನನ್ನ ಬ್ಲಾಗ್ mansore.blogspot.com ಗೆ ಭೇಟಿ ಮಾಡಿ ನನ್ನ ಲೇಖನಗಳ ಬಗ್ಗೆ ತಮ್ಮ ಅಭಿಪ್ರಾಯ ನೀಡಬೇಕೆಂದು ನನ್ನ ಆಸೆ.

Ravichandra (raviraj Sagar) ಹೇಳಿದರು...

Good ones sir

ನಾಗೇಶ ಬಿಡಗಲು ಹೇಳಿದರು...

ಲೇಖನ ತುಂಬಾ ಚನ್ನಾಗಿದೆ. ಪ್ರೀತಿ ಪ್ರೆಮಗಳ ಹಿಂದೆ ರಸಾಯನಿಕಗಳಿದ್ದರೇನು... ಪ್ರಕೃತಿಯ ಸಂಚಿದ್ದರೇನು ಅದು ಎಂದಿಗೂ ನಿಗೂಢವೇ ಪ್ರಕೃತಿಯಂತೆಯೆ...