ಶನಿವಾರ, ಮಾರ್ಚ್ 24, 2012

ಮುಲ್ಲಾ ನಸ್ರುದ್ದೀನ್ ಕತೆಗಳು- 3

ತಜ್ಞ
ಮುಲ್ಲಾ ನಸ್ರುದ್ದೀನ್ ಒಬ್ಬ ಪ್ರಖ್ಯಾತ ವಿದ್ವಾಂಸನಾಗಿದ್ದ. ಆತ ಆ ಊರಿನ ಸಾರ್ವಜನಿಕರು ಭಾಗವಹಿಸುವ ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಿದ್ದ. ಆ ಊರಿನ ಗಣ್ಯರು ತಮ್ಮ ಪತಿ ಪತ್ನಿಯರೊಂದಿಗೆ ಅದರಲ್ಲಿ ಭಾಗವಹಿಸಿದ್ದರು. ಬಹಳ ಸಮಯವಾದರೂ ಕಾರ್ಯಕ್ರಮ ಪ್ರಾರಂಭವಾಗಲಿಲ್ಲ. ವಿಚಾರಸಂಕಿರಣದ ಆಯೋಜಕರು ನಸ್ರುದ್ದೀನ್ ಬಂದಿದ್ದುದನ್ನು ಕಂಡು ಆತನ ಬಳಿ ಬಂದರು. ಆ ದಿನದ ಪ್ರಮುಖ ಭಾಷಣಕಾರರು ಅನಿವಾರ್ಯ ಕಾರಣಗಳಿಂದಾಗಿ ಬರಲು ಸಾಧ್ಯವಾಗುತ್ತಿಲ್ಲವೆಂದೂ, ಅವರ ಬದಲಿಗೆ ನಸ್ರುದ್ದೀನ್‌ರವರನ್ನೇ ಭಾಷಣ ಮಾಡಬೇಕೆಂದು ಅವರು ಕೇಳಿಕೊಂಡರು. ಕೊಂಚ ಗಲಿಬಿಲಿಗೊಂಡ ನಸ್ರುದ್ದೀನ್, ‘ನಾನು ಭಾಷಣಕ್ಕೆ ಸಿದ್ಧವಾಗಿ ಬಂದಿಲ್ಲ. ಯಾವ ವಿಷಯದ ಬಗ್ಗೆ ಮಾತನಾಡಬೇಕು?’ ಎಂದು ಕೇಳಿದ.
‘ಇಂದಿನ ವಿಷಯ ಕಾಮ. ನೀವೇ ಅದರ ಬಗ್ಗೆ ಮಾತನಾಡಬೇಕು, ಏಕೆಂದರೆ ಇಲ್ಲಿಗೆ ಬಂದಿರುವ ಇತರರೆಲ್ಲರೂ ಗಂಡು ಹೆಂಡಿರು ಜೊತೆಯಲ್ಲಿ ಬಂದಿದ್ದಾರೆ. ಒಂಟಿಯಾಗಿ ಬಂದಿರುವವರು ನೀವೊಬ್ಬರೆ’ ಎಂದರು ಆಯೋಜಕರು. ಅವರು ಆ ರೀತಿ ಹೇಳಿದ್ದಷ್ಟೇ ಅಲ್ಲ ನಸ್ರುದ್ದೀನ್ ಸಮ್ಮತಿ ನೀಡುವ ಮೊದಲೇ ವೇದಿಕೆಯ ಮೇಲೆ ಹೋಗಿ ಬದುಕಿನಲ್ಲಿ ಬಹಳ ಮುಖ್ಯವಾದ ಕಾಮದ ಬಗ್ಗೆ ವಿದ್ವಾಂಸ ನಸ್ರುದ್ದೀನ್ ಮಾತನಾಡುತ್ತಾರೆ ಎಂದು ಘೋಷಿಸಿಯೂಬಿಟ್ಟರು. ಬೇರೆ ದಾರಿಯಿಲ್ಲದೆ ನಸ್ರುದ್ದೀನ್ ವೇದಿಕೆಗೆ ಹೋಗಿ ತಮ್ಮ ಭಾಷಣ ಆರಂಭಿಸಿದರು. ಆತನಿಗೂ ಅದು ಆಸಕ್ತಿಯ ವಿಷಯವಾಗಿದ್ದುದರಿಂದ ಆತ ಬಹಳ ಚೆನ್ನಾಗಿ ಕಾಮದ ಬಗ್ಗೆ ಒಂದು ಗಂಟೆ ಮಾತನಾಡಿದ. ಅಲ್ಲಿ ನೆರೆದಿದ್ದ ಜನರೆಲ್ಲಾ ಮೆಚ್ಚುಗೆಯಿಂದ ಚಪ್ಪಾಳೆ ತಟ್ಟಿದರು.
ಆ ದಿನ ರಾತ್ರಿ ಮನೆಗೆ ಹೋದಾಗ ನಸ್ರುದ್ದೀನ್ ಹೆಂಡತಿ ಕಾರ್ಯಕ್ರಮ ಹೇಗಾಯಿತೆಂದು ಕೇಳಿದಳು. ಅದಕ್ಕೆ ಆತ ಪ್ರಮುಖ ಭಾಷಣಕಾರ ಬಂದಿಲ್ಲದಿದ್ದ ಕಾರಣ ತಾನೇ ಭಾಷಣ ಮಾಡಬೇಕಾಯಿತೆಂದು ತಿಳಿಸಿದ. ಆತನ ಪತ್ನಿಯೂ ಕುತೂಹಲದಿಂದ, ‘ಹೌದೆ? ಯಾವ ವಿಷಯದ ಬಗ್ಗೆ ಮಾತನಾಡಿದಿರಿ?’ ಎಂದು ಕೇಳಿದಳು. ಕಾಮದ ಬಗ್ಗೆ ಎಂದು ಹೇಳಲು ನಸ್ರುದ್ದೀನನಿಗೆ ಸಂಕೋಚವಾಯಿತು. ತಕ್ಷಣ ಯೋಚಿಸಿ ‘ಕುದುರೆ ಸವಾರಿಯ ಬಗ್ಗೆ’ ಎಂದ. ‘ಕುದುರೆ ಸವಾರಿಯ ಬಗ್ಗೆ!’ ಎಂದು ಆಶ್ಚರ್ಯ ವ್ಯಕ್ತಪಡಿಸಿದ ಆಕೆ, ‘ಅದರ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಹಾಗೂ ಅನುಭವವೂ ಇಲ್ಲವಲ್ಲ’ ಎಂದು ಕೇಳಿದಳು. ‘ಆದರೇನು. ನನಗೆ ತಿಳಿದಿಲ್ಲ ಎಂಬುದು ನನಗೂ ನಿನಗೂ ಗೊತ್ತು. ಆದರೆ ಅವರಿಗೆ ತಿಳಿದಿರಲಿಲ್ಲವಲ್ಲಾ’ ಎಂದು ಹೇಳಿ ಮಾತು ಮರೆಸಿದ.
ಮರುದಿನ ನಸ್ರುದ್ದೀನ್‌ನ ಪತ್ನಿ ತರಕಾರಿ ತರಲು ಮಾರುಕಟ್ಟೆಗೆ ಹೋದಾಗ ಅಲ್ಲಿ ಹಿಂದಿನ ದಿನ ನಸ್ರುದ್ದೀನನ ಭಾಷಣ ಕೇಳಿದ್ದ ಹಲವಾರು ಹೆಂಗಸರು ಸಿಕ್ಕಿ, ‘ಹೋ, ನಿನ್ನೆ ನಿನ್ನ ಗಂಡ ನೀಡಿದ ಭಾಷಣ ಅತ್ಯದ್ಭುತವಾಗಿತ್ತು. ಆತ ಆ ವಿಷಯದಲ್ಲಿ ಬಹಳ ನುರಿತವನೂ ಇರಬಹುದಲ್ಲವೆ?’ ಎಂದು ಕೇಳಿ ಆ ಹೆಂಗಸರು ಪರಸ್ಪರ ಮುಸಿಮುಸಿ ನಕ್ಕರು. ಅದಕ್ಕೆ ನಸ್ರುದ್ದೀನನ ಪತ್ನಿ, ‘ಅದರಲ್ಲಿ ಆತ ಅಂಥ ನುರಿತವನೇನಲ್ಲ. ಇದುವರೆಗೆ ಒಂದೆರಡು ಸಾರಿ ಹತ್ತಿರಬಹುದಷ್ಟೆ. ಮೊದಲನೆಯ ಸಲ ಆತನಿಗೆ ಹತ್ತಲಾಗಲೇ ಇಲ್ಲ. ಎರಡನೆಯ ಸಲ ಹತ್ತಿದ್ದವನು ಜಾರಿ ಕೆಳಕ್ಕೆ ಬಿದ್ದುಬಿಟ್ಟಿದ್ದ’ ಎಂದಳು. ಆ ಹೆಂಗಸರು ಮುಸಿನಗು ಮತ್ತಷ್ಟು ಹೆಚ್ಚಿತು.

ಅದೃಷ್ಟವಂತ
ನಸ್ರುದ್ದೀನ್ ಮತ್ತು ಆತನ ಪತ್ನಿ ಮನೆಯಲ್ಲಿ ಕೂತು ಊಟ ಮಾಡುತ್ತಿದ್ದರು. ಹಿತ್ತಲಲ್ಲಿ ಏನೋ ಸರಸರ ಸದ್ದಾಯಿತು. ಯಾರೋ ಕಳ್ಳ ಬಂದಿರಬಹುದೆಂದು ನಸ್ರುದ್ದೀನ್ ತನ್ನ ಬಂದೂಕು ತೆಗೆದುಕೊಂಡು ಕಿಟಕಿಯಿಂದ ನೋಡಿದ. ಹಿತ್ತಲ ತೋಟದಲ್ಲಿ ಬಿಳಿಯದೊಂದು ವಸ್ತು ಚಲಿಸಿದಂತಾಯಿತು. ತಕ್ಷಣ ತನ್ನ ಬಂದೂಕು ಗುರಿಯಿಟ್ಟು ಗುಂಡು ಹಾರಿಸಿದ. ನಂತರ ಅದೇನದು ನೋಡೋಣವೆಂದು ಹತ್ತಿರ ಹೋಗಿ ನೋಡಿದರೆ ಅದು ಆ ದಿನ ಬೆಳಿಗ್ಗೆ ಆತನ ಪತ್ನಿ ಒಗೆದು ಹಾಕಿದ್ದ ಆತನದೇ ಹಾಗೂ ಆತನಿಗೆ ಅತ್ಯಂತು ಪ್ರಿಯವಾಗಿದ್ದ ಬಿಳಿಯ ಅಂಗಿಯಾಗಿತ್ತು. ಅದು ಗಾಳಿಗೆ ಅಲುಗಾಡುತ್ತಿತ್ತು
ಹಾಗೂ ಬಂದೂಕಿನ ಗುಂಡೇಟಿನಿಂದ ಛಿದ್ರವಾಗಿತ್ತು. ಆತನ ಹಿಂದೆಯೇ ಓಡಿಬಂದ ಆತನ ಪತ್ನಿ ಬಂದೂಕಿನ ಗುಂಡೇಟಿನಿಂದ ಆತನ ಅಂಗಿಗಾಗಿದ್ದ ಗತಿ ನೋಡಿ, ‘ಅಯ್ಯೋ ದುರಾದೃಷ್ಟವಂತನೇ! ನಿನ್ನ ಪ್ರಿಯವಾದ ಅಂಗಿಯನ್ನು ನೀನೇ ಹಾಳುಮಾಡಿಕೊಂಡೆಯಾ!’ ಎಂದಳು. ‘ಇಲ್ಲ, ನಾನು ದುರಾದೃಷ್ಟವಂತನಲ್ಲ. ನಾನು ಈ ಭೂಮಿಯ ಮೇಲಿನ ಅತ್ಯಂತ ಅದೃಷ್ಟವಂತನೆಂದೇ ಹೇಳಬೇಕು. ಈ ದಿನ ಬೆಳಿಗ್ಗೆ ನಾನು ಈ ಬಿಳಿಯ ಅಂಗಿಯನ್ನೇ ಹಾಕಿಕೊಳ್ಳೋಣವೆಂದುಕೊಂಡಿದ್ದೆ. ಅದೃಷ್ಟವಶಾತ್ ಹಾಕಿಕೊಳ್ಳಲಿಲ್ಲ. ಹಾಕಿಕೊಂಡಿದ್ದಿದ್ದರೆ ಇಷ್ಟೊತ್ತಿಗೆ ಬಂದೂಕಿನ ಗುಂಡಿಗೆ ಬಲಿಯಾಗಿ ಇಲ್ಲಿ ಸತ್ತುಬಿದ್ದಿರಬೇಕಾಗಿತ್ತು’ ಎಂದ.

ಮಾನವಂತರು
ಮುಲ್ಲಾ ನಸ್ರುದ್ದೀನ್ ತನ್ನ ಗೆಳೆಯರಾದ ಒಬ್ಬ ಧರ್ಮಗುರು ಹಾಗೂ ಒಬ್ಬ ರಾಜಕಾರಣಿಯೊಂದಿಗೆ ಸಂಜೆ ತಮ್ಮೂರ ಕೆರೆಯ ಬಳಿ ವಾಯುವಿಹಾರಕ್ಕೆಂದು ಹೊರಟಿದ್ದರು. ಅವರಿಗೆ ತಮ್ಮ ಬಾಲ್ಯದ ದಿನಗಳ ನೆನಪಾಗಿ ಅವರಿಗೆ ಆ ಕೆರೆಯಲ್ಲಿ ಈಜೋಣವೆಂಬ ಮನಸ್ಸಾಯಿತು. ಮೂವರೂ ತಮ್ಮ ಬಟ್ಟೆಗಳನ್ನು ಕಳಚಿ ಕೆರೆಯ ನೀರಿನಲ್ಲಿ ಈಜತೊಡಗಿದರು. ಈಜಿನಲ್ಲಿ ಅದೆಷ್ಟು ಮೈಮರೆತರೆಂದರೆ ಹೊರಗೆ ಇವರನ್ನು ಗಮನಿಸುತ್ತಿದ್ದ ಕಿಡಿಗೇಡಿ ಹುಡುಗರ ಗುಂಪೊಂದು ಇವರ ಬಟ್ಟೆಗಳನ್ನು ಕದ್ದೊಯ್ದಿದ್ದು ಗಮನಕ್ಕೇ ಬರಲಿಲ್ಲ. ಸಂಜೆ ವಾಯು ವಿಹಾರಕ್ಕೆ ಬಂದಿದ್ದ ಹಲವಾರು ಜನ ಆ ಊರಿನ ಹೆಂಗಸರು, ಗಂಡಸರು ಇವರ ಸ್ನಾನವನ್ನೇ ಗಮನಿಸುತ್ತಿದ್ದರು. ಈಜು ಮುಗಿಸಿ ಮೇಲೆ ಬಂದ ಇವರಿಗೆ ತಮ್ಮ ಬಟ್ಟೆಗಳು ಇಲ್ಲದ್ದು ಗಮನಿಸಿ ತಕ್ಷಣ ಧರ್ಮಗುರು ಮತ್ತು ರಾಜಕಾರಣಿ ತಮ್ಮ ಕೈಗಳಿಂದ ತಮ್ಮ ಜನನಾಂಗಗಳನ್ನು ಮುಚ್ಚಿಕೊಂಡು ಮರೆಗೆ ಓಡಿದರು. ಆದರೆ ನಸ್ರುದ್ದೀನ್ ತನ್ನ ಜನನಾಂಗ ಮುಚ್ಚಿಕೊಳ್ಳುವ ಬದಲು ಕೈಗಳಿಂದ ತನ್ನ ಮುಖ ಮುಚ್ಚಿಕೊಂಡು ಓಡಿದ. ಅದನ್ನು ಗಮನಿಸಿದ ಆ ಊರಿನ ಒಬ್ಬಾತ,
‘ಛೀ! ನಾಚಿಕೆಯಾಗುವುದಿಲ್ಲವೆ. ಮುಖ ಮುಚ್ಚಿಕೊಂಡು ಬೆತ್ತಲೆಯಾಗಿ ಓಡುತ್ತಿರುವೆಯೆಲ್ಲಾ?’ ಎಂದು ಕೇಳಿದ.
ಅದಕ್ಕೆ ನಸ್ರುದ್ದೀನ್, ‘ಹೌದು ಮುಖ ಮುಚ್ಚಿಕೊಂಡು ಓಡುತ್ತಿದ್ದೇನೆ ಏಕೆಂದರೆ ನನ್ನ ಊರಿನ ಜನ ನನ್ನ ಮುಖವನ್ನು ಮಾತ್ರ ನೋಡಿದ್ದಾರೆ, ಹಾಗಾಗಿ ಅವರು ನನ್ನನ್ನು ಗುರುತುಹಿಡಿದುಬಿಡಬಹುದು’ ಎಂದ.

ಜಗತ್ತಿನ ಕೊನೆ
ಒಂದಷ್ಟು ಜನ ತತ್ವಜ್ಞಾನಿಗಳು ಹಾಗೂ ಜ್ಯೋತಿಷಿಗಳು ಜಗತ್ತು ಹೇಗೆ ಮತ್ತು ಎಂದು ಕೊನೆಗೊಳ್ಳುತ್ತದೆ ಎನ್ನುವುದರ ಬಗ್ಗೆ ಬಹಳಷ್ಟು ಚರ್ಚೆ, ವಾದ-ವಿವಾದ ನಡೆಸಿದರೂ ಯಾವುದೊಂದೂ ತೀರ್ಮಾನಕ್ಕೆ ಬರದಾದರು. ಕೊನೆಗೆ ವಿಷಯದ ಇತ್ಯರ್ಥಕ್ಕೆ ವಿದ್ವಾಂಸ ಮುಲ್ಲಾ ನಸ್ರುದ್ದಿನ್ ಬಳಿಗೆ ಹೋಗೋಣವೆಂದು ಅವರಲ್ಲೊಬ್ಬರು ಸೂಚಿಸಿದರು. ಎಲ್ಲರೂ ಸಮ್ಮತಿಸಿ ನಸ್ರುದ್ದಿನ್ ಬಳಿಗೆ ಹೋಗಿ, ‘ಜಗತ್ತು ಯಾವಾಗ ಕೊನೆಗೊಳ್ಳುತ್ತದೆ? ಅದರ ಬಗ್ಗೆ ನಿಮಗೆ ಏನಾದರೂ ತಿಳಿದಿದೆಯೆ?’ ಎಂದು ಕೇಳಿದರು.
‘ಹೋ ಹೌದು. ನನಗೆ ತಿಳಿದಿದೆ’ ಎಂದು ಹೇಳಿ ತನ್ನ ಗಡ್ಡ ನೀವಿಕೊಂಡ. ಎಲ್ಲರೂ ಕುತೂಹಲದಿಂದ ಆತನ ಸುತ್ತ ನಿಂತು, ‘ಹೇಳಿ, ಯಾವಾಗ ಕೊನೆಗೊಳ್ಳುತ್ತದೆ. ಅದನ್ನು ತಿಳಿಯಲು ನಾವೆಲ್ಲಾ, ಕಾತುರದಿಂದ ಕಾಯುತ್ತಿದ್ದೇವೆ’ ಎಂದರು.
ನಸ್ರುದ್ದಿನ್ ಅವರೆಡೆಗೆ ನೋಡುತ್ತಾ, ‘ಜಗತ್ತು ಕೊನೆಗೊಳ್ಳುವುದು ನಾನು ಸತ್ತಾಗ’ ಎಂದ.
‘ನೀವು ಸತ್ತಾಗ? ಅದ್ಹೇಗೆ ಸಾಧ್ಯ? ನಿಮ್ಮ ಸಾವಿಗೂ ಜಗತ್ತು ಕೊನೆಗೊಳ್ಳುವುದಕ್ಕೂ ಏನು ಸಂಬಂಧ?’ ಎಂದು ಕೇಳಿದರು ಆತನ ಮಾತಿನ ಅರ್ಥ ತಿಳಿಯಲಾಗದೆ.
ಅದಕ್ಕೆ ಮುಲ್ಲಾ, ‘ನಾನು ಸತ್ತಾಗ ಜಗತ್ತು ನನ್ನ ಪಾಲಿಗಂತೂ ಕೊನೆಗೊಳ್ಳುತ್ತದೆ. ನಿಮ್ಮ ಬಗೆಗೆ ನನಗೆ ಗೊತ್ತಿಲ್ಲ’ ಎಂದ.

ಪಂದ್ಯ
ಒಂದು ದಿನ ಸಂಜೆ ಕೊರೆಯುವ ಚಳಿಯಲ್ಲಿ ನಸ್ರುದ್ದೀನ್ ಮತ್ತು ಆತನ ಗೆಳೆಯರು ಚಹಾ ಸೇವಿಸುತ್ತಾ ಹರಟೆ ಹೊಡೆಯುತ್ತಿದ್ದರು. ಅವರಲ್ಲಿ ಎಲ್ಲರೂ ಚಳಿಯನ್ನು ತಡೆಯಲಾಗದೆ ನಡುಗುತ್ತಿದ್ದರು. ನಸ್ರುದ್ದೀನ್ ಮಾತ್ರ ತಾನು ಎಂತಹ ಚಳಿಯನ್ನು ಬೇಕಾದರೂ ತಡೆಯಬಲ್ಲೆ ಎನ್ನುತ್ತಿದ್ದ. ಅವರಲ್ಲೊಬ್ಬ, ‘ನಸ್ರುದ್ದೀನ್, ನೀನು ಇಡೀ ರಾತ್ರಿ ಇದೇ ತೊಟ್ಟ ಬಟ್ಟೆಯಲ್ಲಿ ಬೆಂಕಿ ಏನೂ ಕಾಯಿಸಿಕೊಳ್ಳದೆ ಊರ ಚೌಕದಲ್ಲಿ ಬೆಳಗಿನವರೆಗೂ ಇದ್ದರೆ ನಿನಗೆ ನಾಳೆ ಔತಣಕೂಟ ಏರ್ಪಡಿಸುತ್ತೇವೆ. ನೀನು ಸೋತಲ್ಲಿ ನಮಗೆ ಔತಣ ಏರ್ಪಡಿಸಬೇಕು. ಪಂದ್ಯ ಕಟ್ಟುವೆಯಾ?’ ಎಂದ. ನಸ್ರುದ್ದೀನ್ ಒಪ್ಪಿಕೊಂಡ.
ಆ ದಿನ ಇಡೀ ರಾತ್ರಿ ನಸ್ರುದ್ದೀನ್ ಊರ ಮಧ್ಯದ ಚೌಕದಲ್ಲಿ ತಳಿ ಸಹಿಸಿಕೊಂಡು ಬೆಳಗಿನವರೆಗೂ ಇದ್ದ. ಬೆಳಗಾದ ಕೂಡಲೇ ಪಂದ್ಯ ಕಟ್ಟಿದವನ ಮನೆಗೆ ಹೋಗಿ ತಾನು ಪಂದ್ಯದಲ್ಲಿ ಗೆದ್ದಿರುವುದಾಗಿಯೂ, ಆ ದಿನ ತನಗೆ ಔತಣ ಏರ್ಪಡಿಸಲು ಸಿದ್ಧತೆ ಮಾಡಿಕೊಳ್ಳಿ ಎಂದ. ಆದರೆ ಸೋಲನ್ನು ಒಪ್ಪಿಕೊಳ್ಳಲಾಗದ ಆ ಗೆಳೆಯ ಇತರರನ್ನೂ ಸೇರಿಸಿ, ‘ನೀನು ಪಂದ್ಯದಲ್ಲಿ ಗೆದ್ದೇ ಇಲ್ಲ. ನಾನು ಮಧ್ಯರಾತ್ರಿ ಬಂದು ನೋಡಿದೆ. ರಸ್ತೆಯ ಕೊನೆಯಲ್ಲಿನ ಮನೆಯ ಕಿಟಕಿಯಲ್ಲಿ ಒಂದು ಮೋಂಬತ್ತಿ ಉರಿಯುತ್ತಿರುವುದನ್ನು ನೋಡಿದೆ. ಅದರ ಶಾಖ ನಿನ್ನನ್ನು ಬೆಚ್ಚಗಿಟ್ಟಿದೆ. ಹಾಗಾಗಿ ನೀನು ಪಂದ್ಯದಲ್ಲಿ ಸೋತ್ತಿದ್ದೀಯ’ ಎಂದ. ರಸ್ತೆಯ ಕೊನೆಯ ಮನೆಯ ಕಿಟಕಿಯ ಹಿಂದೆ ಇದ್ದ ಮೋಂಬತ್ತಿ ತನ್ನನ್ನು ಬೆಚ್ಚಗಾಗಿಸುವಷ್ಟು ಶಾಖ ಕೊಡಲು ಸಾಧ್ಯವೇ ಇಲ್ಲ ಎಂದು ನಸ್ರುದ್ದೀನ್ ಎಷ್ಟು ವಾದಿಸಿದರೂ ಒಪ್ಪಲಿಲ್ಲ. ಆಯಿತೆಂದು ಸೋಲನ್ನು ಒಪ್ಪಿಕೊಂಡ ಆತ ಪಂದ್ಯದ ನಿಯಮದಂತೆ ಎಲ್ಲರನ್ನೂ ಆ ದಿನ ರಾತ್ರಿ ತನ್ನ ಮನೆಗೆ ಔತಣಕ್ಕೆ ಆಹ್ವಾನಿಸಿದ.
ರಾತ್ರಿ ಎಲ್ಲ ಗೆಳೆಯರೂ ಊಟಕ್ಕೆ ಬಂದರು. ಎಲ್ಲರನ್ನೂ ಆಹ್ವಾನಿಸಿ, ಅಡುಗೆ ಸಿದ್ಧವಾಗುತ್ತಿದೆಯೆಂದು ಹೇಳಿ ಎಲ್ಲರಿಗೂ ಕೂಡ್ರಲು ತಿಳಿಸಿದ. ಗೆಳೆಯರು ಅದೂ ಇದೂ ಮಾತನಾಡುತ್ತಾ ಕೂತರು. ಒಂದು ಗಂಟೆಯಾಯಿತು, ಎರಡು ಗಂಟೆಯಾಯಿತು. ನಸ್ರುದ್ದೀನ್ ಊಟದ ವಿಷಯವನ್ನೇ ಮಾತನಾಡುತ್ತಿರಲಿಲ್ಲ. ಅವರು ಕೇಳಿದರೆ, ‘ಅಡುಗೆ ಬೇಯುತ್ತಿದೆ. ಇನ್ನೇನು ಸಿದ್ಧವಾಗಿಬಿಡುತ್ತದೆ’ ಎನ್ನುತ್ತಿದ್ದ. ಕೊನೆಗೆ ಹಸಿವನ್ನು ತಾಳಲಾಗದೆ ಅವರು ಒತ್ತಾಯಿಸಿದಾಗ, ‘ನೀವೇ ಬೇಕಾದರೆ ಅಡುಗೆ ಮನೆಗೆ ಹೋಗಿ ನೋಡಿ. ಅಡುಗೆ ಬೇಯುತ್ತಿದೆ’ ಎಂದ. ಅವರು ಅಡುಗೆ ಮನೆಗೆ ಹೋಗಿ ನೋಡಿದಾಗ ಪಾತ್ರೆಯನ್ನು ಹಗ್ಗದಿಂದ ಮೇಲೆ ಕಟ್ಟಲಾಗಿತ್ತು ಹಾಗೂ ಅದರ ಕೆಳಗೆ ಆರಡಿ ಅಂತರದಲ್ಲಿ ಒಂದು ಉರಿಗಾಗಿ ಒಂದು ಮೋಂಬತ್ತಿ ಉರಿಸಲಾಗಿತ್ತು. ಆ ಗೆಳೆಯರು ಸಿಟ್ಟಾಗಿ, ಆ ಮೋಂಬತ್ತಿಯ ಉರಿಯಲ್ಲಿ ಅಡುಗೆ ಹೇಗೆ ಬೇಯಲು ಸಾಧ್ಯ?’ ಎಂದು ಕೇಳಿದರು. ಅದಕ್ಕೆ ನಸ್ರುದ್ದೀನ್, ‘ರಸ್ತೆಯ ಕೊನೆಯ ಮನೆಯ ಕಿಟಕಿಯ ಹಿಂದಿನ ಮೋಂಬತ್ತಿ ಊರ ಚೌಕದ ಮಧ್ಯದಲ್ಲಿದ್ದ ನನ್ನನ್ನು ಬೆಚ್ಚಗಿಡಬಹುದಾದಲ್ಲಿ, ಆರಡಿ ಕೆಳಗಿನ ಮೋಂಬತ್ತಿ ಅಡುಗೆಯನ್ನು ಬೇಯಿಸಬಾರದೇಕೆ?’ ಎಂದ. ಭಾರೀ ಔತಣದ ಆಸೆ ಹೊತ್ತು ಬಂದಿದ್ದ ಗೆಳೆಯರ ಬಾಯಿಂದ ಮಾತೇ ಹೊರಡಲಿಲ್ಲ.

2 ಕಾಮೆಂಟ್‌ಗಳು:

ಮಂಜು ಹೇಳಿದರು...

ಕತೆಗಳು ಚೆನ್ನಾಗಿವೆ ಸಾರ್..

Kiran ಹೇಳಿದರು...

ಸರ್ ಕಥೆಗಳು ತುಂಬಾ ಚೆನ್ನಾಗಿವೆ. ಓದಿದ ತಕ್ಷಣ ನಗದೆ ಇರಲಾಗಲಿಲ್ಲ . ಕಥೆಗಳಿಗೆ ಮೂಲ ಯಾವುದು ಸರ್ ?