ಭಾನುವಾರ, ಸೆಪ್ಟೆಂಬರ್ 23, 2012

ಮೌನ ವಸಂತ


`ಇಂದು ಪ್ರಕೃತಿಯನ್ನು ಬದಲಿಸುವ ಹಾಗೂ ಅದನ್ನು ನಾಶಮಾಡುವ ಶಕ್ತಿ ನಮಗಿದೆ. ಆದರೆ ಮನುಷ್ಯ ಸಹ ಪ್ರಕೃತಿಯ ಒಂದು ಭಾಗ. ಪ್ರಕೃತಿಯ ವಿರುದ್ಧದ ಅವನ ಯುದ್ಧ ಅಂತಿಮವಾಗಿ ಅವನ ವಿರುದ್ಧದ ಯುದ್ಧವೇ ಆಗಿದೆ` ಎಂದ ರೇಚೆಲ್ ಕಾರ್ಸನ್ ರವರ ಕೃತಿ `ಸೈಲೆಂಟ್ ಸ್ಪ್ರಿಂಗ್` (ಮೌನ ವಸಂತ) ಪ್ರಕಟವಾಗಿ ಸೆಪ್ಟೆಂಬರ್ 27ಕ್ಕೆ 50 ವರ್ಷಗಳಾಗುತ್ತವೆ. ಅದರ ನೆನಪಿಗೆ ನನ್ನ ಲೇಖನ `ಮೌನ ವಸಂತ' ಈ ದಿನದ `ಪ್ರಜಾವಾಣಿ'ಯ `ಸಾಪ್ತಾಹಿಕ ಪುರವಣಿ'ಯಲ್ಲಿ. ಆ ಲೇಖನವನ್ನು ಈ ಲಿಂಕ್ ನಲ್ಲಿಯೂ  ಓದಬಹುದು.

ಮೌನ ವಸಂತ
ಡಾ. ಜೆ. ಬಾಲಕೃಷ್ಣ
September 23, 2012

         ಎಪ್ಪತ್ತರ ದಶಕದ ಕೊನೆಯ ಭಾಗದಲ್ಲಿ ನಾವು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದೆವು. ಬೆಳೆಗಳನ್ನು ಕೀಟ ಪೀಡೆಗಳಿಂದ ರಕ್ಷಿಸಲು ಹಾಗೂ ಅವುಗಳ ನಾಶಕ್ಕೆ ರಾಸಾಯನಿಕ ಕೀಟನಾಶಕಗಳ ಬಳಕೆಯೇ ಅಂತಿಮವೆಂಬ ಮಂತ್ರವನ್ನು ನಮಗೆ ಬೋಧಿಸಲಾಗುತ್ತಿತ್ತು ಹಾಗೂ ನಾವು ಅದನ್ನೇ ಗುನಗುನಿಸುತ್ತಿದ್ದೆವು. ಎಲ್ಲ ಕೀಟ `ಪೀಡೆ`ಗಳಿಗೂ ಸಿದ್ಧ ರಾಸಾಯನಿಕ ಸಂಯೋಜನೆಯಿತ್ತು. ವೈದ್ಯರು ಕಾಯಿಲೆ ಕಸಾಲೆಗೆ ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟಂತೆ ಕೃಷಿ ಅಧಿಕಾರಿಗಳು ರೈತರಿಗೆ ಕೀಟವನ್ನು ನೋಡಿ ತಪಾಸಣೆ ಮಾಡಿ ಸಿದ್ಧವಿರುವ ರಾಸಾಯನಿಕಗಳ ಪ್ರಿಸ್ಕ್ರಿಪ್ಶನ್ ಬರೆದುಕೊಟ್ಟರೆ ಸಾಕು, `ಹಸಿರುಕ್ರಾಂತಿ`ಗೆ ಮತ್ತೊಂದು ಜೈಕಾರ ಹಾಕಿದಂತೆ! ಎಂದು ನಂಬಲಾಗಿತ್ತು. ಅಂತಹುದೇ ದಿನಗಳಲ್ಲಿ ಯಾವುದೋ ವಿದೇಶಿ ವಿಜ್ಞಾನ ಪತ್ರಿಕೆಯೊಂದರಲ್ಲಿ ಪ್ರಕೃತಿ ಹಾಗೂ ಇತರ ಜೀವರಾಶಿಯ ಮೇಲೆ ಉಂಟಾಗುವ ಕೀಟನಾಶಕಗಳ ದುಷ್ಪರಿಣಾಮಗಳನ್ನು ಅಮೆರಿಕದ ರೇಚೆಲ್ ಕಾರ್ಸನ್ ಎಂಬಾಕೆ ತಮ್ಮ `ಸೈಲೆಂಟ್ ಸ್ಪ್ರಿಂಗ್` ಕೃತಿಯಲ್ಲಿ ಮೊಟ್ಟಮೊದಲ ಬಾರಿಗೆ ತೋರಿಸಿಕೊಟ್ಟಿದ್ದಾರೆ ಎಂದು ಓದಿದೆ. ಪುಸ್ತಕ ನಮ್ಮ ಕೃಷಿ ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲೇ ಇತ್ತು. ನಮ್ಮ ಗ್ರಂಥಾಲಯದಲ್ಲೇ ಇದ್ದುದನ್ನು ನಮಗೆ ಬೋಧಿಸಬೇಕೆಂದೇನೂ ಇಲ್ಲವಲ್ಲ!
         `ಕೀಟಗಳನ್ನು, ಶಿಲೀಂಧ್ರಗಳನ್ನು ಮತ್ತು ಕಳೆಗಳನ್ನು ನಿಯಂತ್ರಿಸುವ ನೆಪದಲ್ಲಿ ಜನರಿಗೆ ಇಂದು ಯಾರೂ ಊಹಿಸಲಾಗದಷ್ಟು ಬೃಹತ್ ಪ್ರಮಾಣದಲ್ಲಿ ವಿಷವುಣಿಸಲಾಗುತ್ತಿದೆ. ನಾವು ಸೇವಿಸುವ, ಕುಡಿಯುವ ಪ್ರತಿಯೊಂದರಲ್ಲಿಯೂ ಕ್ಯಾನ್ಸರ್ ಉಂಟುಮಾಡುವ ರಾಸಾಯನಿಕಗಳ ಉಳಿಕೆ ಕಂಡುಬರುತ್ತಿದೆ. ವಿಷಕಾರಕ ರಾಸಾಯನಿಕಗಳ ಬಳಕೆ ಇದೇ ರೀತಿ ಮುಂದುವರಿದಲ್ಲಿ ಭೂಮಿಯ ಮೇಲಿನ ಮನುಷ್ಯನ್ನೊಳಗೊಂಡಂತೆ ಇಡೀ ಜೀವರಾಶಿ ನಿರ್ನಾಮವಾಗುತ್ತದೆ` ಎಂಬ ಎಚ್ಚರಿಕೆಯ ಮಾತು ಕೃತಿಯಲ್ಲಿತ್ತು. ಅದು ನಮಗೆಲ್ಲ ಹೊಸತೊಂದು ಪಾಠ.

ಪರಿಸರ ಆಂದೋಲನಕ್ಕೆ ಮುನ್ನುಡಿ
ಆಧುನಿಕ ಪರಿಸರ ಸಂರಕ್ಷಣಾ ಆಂದೋಲನಕ್ಕೆ ನಾಂದಿ ಹಾಡಿದವರು ರೇಚೆಲ್ ಎಂದೇ ಹೇಳಬಹುದು. `ಸೈಲೆಂಟ್ ಸ್ಪ್ರಿಂಗ್ ಪುಸ್ತಕ ಇಲ್ಲದಿದ್ದಲ್ಲಿ ಪರಿಸರ ಚಳವಳಿಗಳ ಆರಂಭ ತಡವಾಗುತ್ತಿತ್ತು ಅಥವಾ ಬಹುಶಃ ಆರಂಭವಾಗುತ್ತಲೇ ಇರಲಿಲ್ಲವೇನೋ. ಕೃತಿ ಸರ್ಕಾರದ ಪ್ರತಿಯೊಂದು ಹಂತದಲ್ಲೂ ಪರಿಸರ ಕಾನೂನುಗಳ ಸ್ಥಾಪನೆಗೆ ನಾಂದಿ ಹಾಡಿತು` ಎಂದು ಪರಿಸರ ತಿಳಿವಳಿಕೆಯ ಪ್ರಸಾರದಲ್ಲಿ ಮುಂಚೂಣಿಯಲ್ಲಿರುವ ಹಾಗೂ 2007 ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ, ಅಮೆರಿಕದ ಹಿಂದಿನ ಉಪಾಧ್ಯಕ್ಷ ಆಲ್ಬರ್ಟ್ ಗೋರ್ ಅಭಿಪ್ರಾಯ ಪಟ್ಟಿದ್ದಾರೆ (`ಸೈಲೆಂಟ್ ಸ್ಪ್ರಿಂಗ್` 1994 ಆವೃತ್ತಿಯ ಮುನ್ನುಡಿ). 1999 `ಟೈಮ್` ಪತ್ರಿಕೆಯ ಶತಮಾನದ ನೂರು ವ್ಯಕ್ತಿಗಳಲ್ಲಿ ರೇಚೆಲ್ ಸಹ ಒಬ್ಬರು. 1992ರಲ್ಲಿ ಕಳೆದ ಐವತ್ತು ವರ್ಷಗಳಲ್ಲಿನ ಅತ್ಯಂತ ಪ್ರಭಾವಿ ಕೃತಿಯೆಂಬ ಮಾನ್ಯತೆ ಕೃತಿಗೆ ದೊರಕಿತ್ತು. ಅಂದಹಾಗೆ, ಬರುವ ಸೆಪ್ಟೆಂಬರ್ 27ಕ್ಕೆ `ಸೈಲೆಂಟ್ ಸ್ಪ್ರಿಂಗ್` (ಮೌನ ವಸಂತ) ಪ್ರಕಟವಾಗಿ 50 ವರ್ಷಗಳಾಗುತ್ತವೆ.

      
ಕಳೆದ ಐವತ್ತು ವರ್ಷಗಳಲ್ಲಿ ಕೃಷಿ - ರಾಸಾಯನಿಕ ಕೀಟನಾಶಕಗಳ ಜಗತ್ತಿನಲ್ಲಿ ಬಹಳಷ್ಟು ಬದಲಾಗಿದೆ. ನಿಜವಾಗಿಯೂ ಬದಲಾಗಿದೆಯೆ? ಬದಲಾಗಿದ್ದರೆ ಇಂದು ಜಾಗತಿಕ ಕೀಟನಾಶಕ ಉದ್ಯಮದ ವಹಿವಾಟು ವಾರ್ಷಿಕ 45 ಬಿಲಿಯನ್ ಡಾಲರ್ಗಳಷ್ಟು ಇರುತ್ತಿತ್ತೇ? ರೇಚೆಲ್ ಕೃತಿ ಅಮೆರಿಕದ ಜನರಲ್ಲಿ ತಿಳಿವಳಿಕೆ ಮೂಡಿಸಿದ್ದರೂ ಇಂದು ಅದೇ ದೇಶ ಕೀಟನಾಶಕ ಉತ್ಪಾದನೆಯಲ್ಲಿ ಮೊಟ್ಟಮೊದಲ ಸ್ಥಾನದಲ್ಲಿದೆ. ಭಾರತದ ವಾರ್ಷಿಕ ಕೀಟನಾಶಕ ಉದ್ಯಮದ ವಹಿವಾಟು 3.8 ಬಿಲಿಯನ್ ಡಾಲರ್ಗಳಷ್ಟಿದೆ (2011ರಲ್ಲಿ) ಹಾಗೂ ವಾರ್ಷಿಕ ಶೇ 8-9ರಷ್ಟು ವೃದ್ಧಿ ಹೊಂದುತ್ತಿದೆ. ಅಮೆರಿಕ, ಜಪಾನ್ ಮತ್ತು ಚೀನಾದ ನಂತರ ಭಾರತ ಕೀಟನಾಶಕ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಹಾಗೂ ತನ್ನ ಉತ್ಪಾದನೆಯ ಶೇ 50ರಷ್ಟನ್ನು ರಫ್ತು ಮಾಡುತ್ತಿದೆ. ಭಾರತದಲ್ಲಿ ಇಂದಿಗೂ ಎಂಡೋಸಲ್ಫಾನ್ನಂತಹ ಕೀಟನಾಶಕಗಳ ದುಷ್ಪರಿಣಾಮಗಳಿಗೆ ಜನ ಬಲಿಯಾಗಿ ವಿಕಲಾಂಗ ಸಂತತಿಯೇ ರೂಪುಗೊಳ್ಳುತ್ತಿದೆ. ಆದರೂ ವಿಷದ ಉತ್ಪಾದನೆ ಹಾಗೂ ಬಳಕೆ ಮುಂದುವರಿದಿದೆ.
        1962ರಲ್ಲಿ `ಸೈಲೆಂಟ್ ಸ್ಪ್ರಿಂಗ್` ಪ್ರಕಟಗೊಂಡಾಗ ರಾಸಾಯನಿಕ ಉದ್ಯಮಿಗಳು ರೇಚಲ್ ಅವರನ್ನು `ಹುಚ್ಚಿ`ಯೆನ್ನುವಂತೆ ಪ್ರಚಾರ ಹಬ್ಬಿಸಿದವು. ಈಗಲೂ ಉದ್ಯಮಗಳು ಎಂಡೋಸಲ್ಫಾನ್ನಂತಹ ರಾಸಾಯನಿಕವನ್ನು ನಿರುಪದ್ರವಿ ಎನ್ನುವಂತೆ ಪ್ರಚಾರ ಮಾಡುತ್ತಿವೆ. ವಿಪರ್ಯಾಸವೆಂದರೆ, ಜಗತ್ತಿನ ಹತ್ತು ಅತಿ ದೊಡ್ಡ ಕೀಟನಾಶಕ ಉತ್ಪಾದಕ ಕಂಪನಿಗಳಲ್ಲಿ ಏಳು ಬಿತ್ತನೆ ಬೀಜ ಉದ್ಯಮಗಳೂ ಇವೆ! ಅವು ಜಗತ್ತಿನ ಶೇ 75ರಷ್ಟು ಕೀಟನಾಶಕ ಉದ್ಯಮವನ್ನು ನಿಯಂತ್ರಿಸುತ್ತಿವೆ.

ವಸಂತದ ದಾರಿಯಲ್ಲಿ..
ಪುಸ್ತಕವಾಗಿ ಪ್ರಕಟವಾಗುವ ಮೊದಲು `ಸೈಲೆಂಟ್ ಸ್ಪ್ರಿಂಗ್` ಜೂನ್ 1962ರಲ್ಲಿ ಅಮೆರಿಕದ `ನ್ಯೂ ಯಾರ್ಕರ್` ಪತ್ರಿಕೆಯಲ್ಲಿ ಲೇಖನಗಳ ರೂಪದಲ್ಲಿ ಪ್ರಕಟವಾಗಲು ಪ್ರಾರಂಭಿಸಿತು. ಅದಕ್ಕೆ ಮೊದಲು ಲೇಖನಗಳನ್ನು ಪ್ರಕಟಿಸಲು ಪ್ರಖ್ಯಾತ ಪತ್ರಿಕೆಗಳು ನಿರಾಕರಿಸಿದ್ದವು. ಆಗ ರೇಚೆಲ್ ಅಮೆರಿಕದ ಮೀನು ಮತ್ತು ವನ್ಯಮೃಗ ಸೇವೆಯಲ್ಲಿ ಸಂಸ್ಥೆಯ ಪ್ರಕಟಣೆಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 1950ರಲ್ಲೇ ಪ್ರಕಟವಾಗಿದ್ದ ಆಕೆಯ ` ಸೀ ಅರೌಂಡ್ ಅಸ್` ಮತ್ತು ` ಎಡ್ಜ್ ಆಫ್ ಸೀ` ಕೃತಿಗಳು ಜನಪ್ರಿಯವಾಗಿ ಆಕೆಗೆ ಆರ್ಥಿಕ ಸ್ವಾತಂತ್ರ್ಯ ತಂದುಕೊಟ್ಟಿದ್ದವು.
ರೇಚೆಲ್ ಕವಿಯಿತ್ರಿಯೂ ಆಗಿದ್ದುದು `ಸೈಲೆಂಟ್ ಸ್ಪ್ರಿಂಗ್` ಅಷ್ಟು ಹೃದಯಸ್ಪರ್ಶಿ ಮತ್ತು ಪರಿಣಾಮಕಾರಿಯಾಗಿಲು ಕಾರಣವಾಗಿರಲೂಬಹುದು. ಪ್ರಮುಖವಾಗಿ ಆಕೆಯ ಕಾಳಜಿ ಹೆಚ್ಚು ಡಿ.ಡಿ.ಟಿ. ಕೀಟನಾಶಕದ ಪರಿಣಾಮಗಳ ಬಗೆಗೆ. 1950 ದಶಕದಲ್ಲಿ ಹಲವಾರು ರಾಸಾಯನಿಕಗಳು ಕೀಟ ಮತ್ತು ಕಳೆಗಳ ನಾಶಕ್ಕಾಗಿ ಯುದ್ಧೋಪಾದಿಯಲ್ಲಿ ಬಳಕೆಯಾಗುತ್ತಿದ್ದವು. ಕೀಟನಾಶಕಗಳನ್ನು ಆಧುನಿಕ ಪವಾಡಗಳೆಂದೇ ಪರಿಗಣಿಸಲಾಗಿತ್ತು. ಅವುಗಳಲ್ಲಿ ಪ್ರಮುಖವಾದುದು ಡಿ.ಡಿ.ಟಿ. ಅದರ ಕೀಟನಾಶಕ ಗುಣಗಳನ್ನು ಪಾಲ್ ಮುಲ್ಲರ್ ಎಂಬ ವಿಜ್ಞಾನಿ 1930ರಲ್ಲೇ ಕಂಡುಹಿಡಿದಿದ್ದರು ಹಾಗೂ 1942 ವಿಶ್ವಯುದ್ಧದಲ್ಲಿ ಅಮೆರಿಕದ ಮಿಲಿಟರಿಯು ಹೇನು, ಚಿಗಟ ಮುಂತಾದ ಪೀಡೆಗಳಿಗೆ ಬಲಿಯಾಗಿದ್ದ ತನ್ನ ಸೈನಿಕರ ಮೇಲೆ ಮತ್ತು ಅವರನ್ನು ಕೀಟಜನ್ಯ ರೋಗಗಳಾದಂತಹ ಟೈಫಸ್, ಮಲೇರಿಯಾ ಮುಂತಾದ ರೋಗಗಳಿಂದ ಕಾಪಾಡಲು ಯಶಸ್ವಿಯಾಗಿ ಬಳಸಿತು. ಯುದ್ಧದ ನಂತರ ಡಿ.ಡಿ.ಟಿ. ತಯಾರಿಸುವ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಲಿಲ್ಲ. ಅದನ್ನು ಜನಸಾಮಾನ್ಯರು ಮತ್ತು ರೈತರು ಧಾರಾಳವಾಗಿ ಬಳಸತೊಡಗಿದರು (ಎಪ್ಪತ್ತರ ದಶಕದಲ್ಲಿ ಕೋಲಾರದ ಕೆಲವು ಹಳ್ಳಿಗಳಲ್ಲಿ ಹೆಂಗಸರು ಹೇನುಗಳನ್ನು ನಿವಾರಿಸಲು ತಲೆಗೆ ಡಿ.ಡಿ.ಟಿ. ಹಚ್ಚಿ ಸ್ವಲ್ಪ ಸಮಯ ಬಿಟ್ಟು ಸ್ನಾನ ಮಾಡುತ್ತಿದ್ದುದನ್ನು ನಾನು ಕೇಳಿದ್ದೇನೆ). ಅಮೆರಿಕದ ಸಾರ್ವಜನಿಕ ಆರೋಗ್ಯ ಸೇವೆ ಮತ್ತು ಆಹಾರ ಹಾಗೂ ಔಷಧ ಆಡಳಿತ ವಿಭಾಗದವರು ಡಿ.ಡಿ.ಟಿ. ಮಾನವರ ಮೇಲೆ ಯಾವುದೇ ವಿಷಕಾರಿ ಪರಿಣಾಮ ಬೀರುವುದಿಲ್ಲ ಎಂಬ ಪ್ರಮಾಣಪತ್ರ ಸಹ ಕೊಟ್ಟರು.
             ಡಿ.ಡಿ.ಟಿ. ಕಂಡು ಹಿಡಿದ ಮುಲ್ಲರ್ರಿಗೆ 1948ರಲ್ಲಿ ನೋಬೆಲ್ ಪ್ರಶಸ್ತಿ ನೀಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ಡಿ.ಡಿ.ಟಿ.ಯು 50ರಿಂದ 100 ದಶಲಕ್ಷ ಜನರ ಜೀವವನ್ನು ಮಲೇರಿಯಾದಿಂದ ಉಳಿಸಿದೆಯೆಂದು ಹೇಳಿತು. ಭಾರತದಲ್ಲಿ 1935ರಲ್ಲಿ ಹತ್ತು ದಶಲಕ್ಷ ಇದ್ದ ಮಲೇರಿಯಾ ರೋಗಿಗಳ ಸಂಖ್ಯೆ 1969ರಲ್ಲಿ 2.86 ಲಕ್ಷಕ್ಕೆ ಇಳಿಯಿತು. ಕೃಷಿಯಲ್ಲಿಯೂ ಕೀಟನಾಶಕಗಳ ಬಳಕೆ ಅನಿರ್ಬಂಧಿತವಾಗಿ ಕೃಷಿ ಉತ್ಪಾದನೆ ಹೆಚ್ಚಾಯಿತು. ಆದರೆ ಡಿ.ಡಿ.ಟಿ. ಮತ್ತು ಇತರ ಕೀಟನಾಶಕಗಳಿಗೆ ವಿನಾಶಕಾರಿ ಮಗ್ಗುಲೂ ಇತ್ತು. ಅವುಗಳಿಗೆ ಎಲ್ಲ ಕೀಟಗಳೂ ಪೀಡೆಗಳೆ! ಪೀಡೆಗಳ ಜೊತೆಗೆ ಲಾಭಕಾರಿ ಜೀವಗಳ ನಿರ್ನಾಮ ಸಹ ಮಾಡಿದವು.
ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ಅಪಾರ ಒಲವು ಹೊಂದಿದ್ದ ಕಾರ್ಸನ್ ವಿನಾಶವನ್ನು, ಪ್ರಕೃತಿಯಲ್ಲಿ ಕೀಟನಾಶಕಗಳಿಂದ ಉಂಟಾಗುತ್ತಿರುವ ಅಸಮತೋಲನವನ್ನು ತಮ್ಮ ಕೃತಿಯಲ್ಲಿ ಹೇಳಲು ಯತ್ನಿಸಿದ್ದಾರೆ. ಕೀಟನಾಶಕಗಳ ವಿಷ ಪರಮಾಣು ಬಾಂಬ್ನಿಂದ ಉಂಟಾಗುವ ವಿಕಿರಣಗಳಷ್ಟೇ ಹಾನಿಕಾರಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕೀಟನಾಶಕಗಳಿಗೆ ಬಲಿಯಾದ ಕೀಟಗಳನ್ನು ಆಹಾರವಾಗಿ ಸೇವಿಸಿದ ಪಕ್ಷಿಗಳು ನಿರ್ನಾಮವಾಗಿ ವಸಂತ ಋತುವಿನಲ್ಲಿ ಪಕ್ಷಿಗಳು ತಮ್ಮ ಚಿಲಿಪಿಲಿಯಿಂದ ಹಾಡಲು ಬಾರದಿರುವ ಸಂದರ್ಭವನ್ನೇ `ಮೌನ ವಸಂತ` (ಸೈಲೆಂಟ್ ಸ್ಪ್ರಿಂಗ್) ಎಂದು ಅವರು ` ಫೇಬಲ್ ಫಾರ್ ಟುಮಾರೊ` ಅಧ್ಯಾಯದಲ್ಲಿ ಬಣ್ಣಿಸಿದ್ದಾರೆ.
      ಪಕ್ಷಿಗಳ ಶರೀರ ಸೇರಿದ ಡಿ.ಡಿ.ಟಿ. ವಿಷ ಅವುಗಳ ಮೊಟ್ಟೆಗಳ ಕವಚ ತೆಳುವಾಗಿರುವಂತೆ ಮಾಡಿ ಮರಿಗಳನ್ನು ಭ್ರೂಣಾವಸ್ಥೆಯಲ್ಲೇ ಸಾಯಿಸುತ್ತವೆ. ಕೀಟ ಪಕ್ಷಿಗಳ ಮೇಲೆ ಮಾತ್ರವಲ್ಲ, ಡಿ.ಡಿ.ಟಿ. ವಿಷ ನೀರನ್ನು ಸೇರಿ ಮೀನು ಹಾಗೂ ಇತರ ಜಲಚರಗಳ ಮೇಲೆ, ವನ್ಯಜೀವಿಗಳ ಮೇಲೆ ಹಾಗೂ ಮನುಷ್ಯನಿಗೂ ವಿಷಕಾರಿಯಾಗುತ್ತವೆಂಬುದನ್ನು ರೇಚೆಲ್ ತೋರಿಸಿಕೊಟ್ಟರು. ಡಿ.ಡಿ.ಟಿ. ಅಂಶ ತಾಯಿಯ ಮೊಲೆ ಹಾಲಿನಲ್ಲಿ ಇರುವುದೂ ಕಂಡುಬಂದಿದೆ. ಅದರ ವಿಷದಿಂದ ಕ್ಯಾನ್ಸರ್ಗೆ ಬಲಿಯಾದ ವ್ಯಕ್ತಿಗಳ ಹಲವಾರು ಉದಾಹರಣೆಗಳನ್ನು ಕಾರ್ಸನ್ ಕೊಟ್ಟಿದ್ದಾರೆ. `ಬುದ್ಧಿವಂತ ಜೀವಿಗಳಾಗಿರುವ ನಾವು ಇಡೀ ಪರಿಸರವನ್ನು ಕಲುಷಿತಗೊಳಿಸುವ ಮತ್ತು ಮನುಕುಲಕ್ಕೇ ವಿಷವುಣಿಸಿ ಸಾವುಂಟುಮಾಡುವ ವಿಧಾನದ ಮೂಲಕ ನಮಗೆ ಬೇಡವಾದ ಕೆಲವೇ ಜೀವ ಪ್ರಭೇದಗಳನ್ನು ನಿಯಂತ್ರಿಸಲು ಹೊರಟಿರುವುದು ಸರಿಯೇ? ಮಾನವನ ಚರಿತ್ರೆಯಲ್ಲಿಯೇ ಮೊಟ್ಟಮೊದಲ ಬಾರಿಗೆ, ಭೂಮಿಯಲ್ಲಿನ ಪ್ರತಿಯೊಬ್ಬ ಮಾನವನೂ ತಾನು ತಾಯ ಗರ್ಭದಲ್ಲಿ ಅಂಕುರಿಸುವಾಗಿನಿಂದ ಸಾಯುವವರೆಗೂ ಪ್ರತಿ ಕ್ಷಣ ಅಪಾಯಕಾರಿ ರಾಸಾಯನಿಕಗಳೊಂದಿಗೆ ಸಂಪರ್ಕಕ್ಕೆ ಬರುತ್ತಿದ್ದಾನೆ` ಎನ್ನುವುದು ರೇಚೆಲ್ ಆತಂಕ.

ವಿರೋಧದ ಬಿರುಗಾಳಿ
`ಮೌನ ವಸಂತ` ಕೃತಿಯ ವಿಚಾರಧಾರೆಯನ್ನು ರಾಸಾಯನಿಕ ಉದ್ಯಮಿಗಳು ಒಕ್ಕೊರಲಿನಿಂದ ವಿರೋಧಿಸಿದರು. ` ಬೋಧನೆಗಳನ್ನು ಅನುಸರಿಸಿದಲ್ಲಿ ನಾವು ಅಂಧಕಾರದ ಯುಗಕ್ಕೆ ಮರಳಬೇಕಾಗುತ್ತದೆ. ಕೀಟಗಳು, ರೋಗಗಳು ಮತ್ತು ಹುಳುಹುಪ್ಪಟೆಗಳು ಪುನಃ ಭೂಮಿಯ ಯಜಮಾನಿಕೆ ವಹಿಸಿಕೊಳ್ಳುತ್ತವೆ` ಎಂದರು ಅಮೆರಿಕನ್ ಸೈನಾಮಿಡ್ ಕಂಪೆನಿಯ ಅಧಿಕಾರಿಯೊಬ್ಬರು. `ಸೈಲೆಂಟ್ ಸ್ಪ್ರಿಂಗ್` ಕೃತಿಯನ್ನು ಲೇವಡಿ ಮಾಡುವ, ` ಡೆಸೊಲೇಟ್ ಇಯರ್` (ಪಾಳುಬಿದ್ದ ವರ್ಷ) ಎಂಬ ಕೃತಿಯನ್ನು ಮಾನ್ಸಾಂಟೊ ಕಂಪೆನಿ ಅಚ್ಚುಹಾಕಿಸಿ ಎಲ್ಲೆಡೆ ಹಂಚಿತು. ಕೆಲವು ಕಂಪೆನಿಗಳು ರೇಚೆಲ್ ಪ್ರಾಮಾಣಿಕತೆಯನ್ನು ಪ್ರಶ್ನಿಸಿದರೆ, ಇನ್ನು ಕೆಲವು ಆಕೆಯ ಮಾನಸಿಕ ಸ್ಥಿತಿಯ ಬಗ್ಗೆ ಸಂದೇಹ ವ್ಯಕ್ತಪಡಿಸಿದವು. ಕೀಟನಾಶಕಗಳನ್ನು ನಿಷೇಧಿಸಿದಲ್ಲಿ ಆಹಾರೋತ್ಪಾದನೆ ಕುಂಠಿತವಾಗುತ್ತದೆ ಹಾಗೂ ಅದರಿಂದಾಗಿ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಒದಗಿಸಲು ಸಾಧ್ಯವಾಗುವುದಿಲ್ಲವೆನ್ನುವುದು ಸಹ ಒಂದು ವಾದವಾಗಿತ್ತು.
       ರೇಚೆಲ್ ಕಾರ್ಸನ್ರು ತಮ್ಮ ಕೃತಿಯಲ್ಲಿ ಸಮಸ್ಯೆಗಳನ್ನು ಮಾತ್ರ ಚರ್ಚಿಸಿಲ್ಲ. ಈಗ ಕೃಷಿ ವಿಜ್ಞಾನಿಗಳು ಹಾಗೂ ಇತರರು ಬೆಂಬಲಿಸುತ್ತಿರುವ ಜೈವಿಕ ಪೀಡೆ ನಿಯಂತ್ರಣ ಹಾಗೂ ಇತರ ಸುಸ್ಥಿರ ಪೀಡೆ ನಿಯಂತ್ರಣ ವಿಧಾನಗಳ ಬಗ್ಗೆ ಅವರು ಆಗಲೇ ತಿಳಿಸಿದ್ದಾರೆ. ಪ್ರಕೃತಿ ಸಮತೋಲಿತವಾಗಿದ್ದು ಪ್ರತಿಯೊಂದಕ್ಕೂ ಅದರಲ್ಲೇ ಪರಿಹಾರ ಇದೆ ಎಂದಿದ್ದಾರೆ. ಇದನ್ನೇ ನಂತರ ಜಪಾನಿನ ಮಸನೊಬು ಫುಕುವೋಕ ತಮ್ಮ ಸಹಜ ಕೃಷಿಯ ತತ್ವವನ್ನಾಗಿಸಿಕೊಂಡರು.
     ಒಂದೆಡೆ ರಾಸಾಯನಿಕ ಕಂಪೆನಿಗಳು ಆಕೆಯ ವಿಚಾರವನ್ನು ವಿರೋಧಿಸಿದರೆ ಮತ್ತೊಂದೆಡೆ ಆಕೆಯ ಬೆಂಬಲಕ್ಕೆ ಹಲವಾರು ವಿಜ್ಞಾನಿಗಳು ನಿಂತರು. `ಸೈಲೆಂಟ್ ಸ್ಪ್ರಿಂಗ್` ಆಂದೋಲನವನ್ನೇ ಉಂಟುಮಾಡಿತು. ಅಮೆರಿಕದ ಆಗಿನ ಅಧ್ಯಕ್ಷ ಜಾನ್ ಎಫ್. ಕೆನಡಿ ತಮ್ಮ ವೈಜ್ಞಾನಿಕ ಸಲಹಾ ಸಮಿತಿಗೆ ಕಾರ್ಸನ್ ಎತ್ತಿರುವ ವಿಷಯಗಳ ಬಗೆಗೆ ಪರಿಶೀಲಿಸಲು ತಿಳಿಸಿದರು. ಅವರ ವರದಿಯು ಸಹ ಆಕೆಯ ವಿಚಾರವನ್ನೇ ಬೆಂಬಲಿಸುತ್ತಿತ್ತು. ಕೊನೆಗೆ ಅಮೆರಿಕದ ಸರ್ಕಾರ ಎಚ್ಚತ್ತು ಜೂನ್ 1972ರಲ್ಲಿ ಡಿ.ಡಿ.ಟಿ. ಬಳಕೆ ನಿಷೇಧಿಸಿತು. ಪರಿಸರ ರಕ್ಷಣೆಗೆ ಕೆಲವು ಕೈಗಾರಿಕೋದ್ಯಮಗಳನ್ನು ನಿಯಂತ್ರಣದಲ್ಲಿಡಬೇಕೆಂಬ ವಿಚಾರ ಮೊಟ್ಟಮೊದಲ ಬಾರಿಗೆ ಸ್ವೀಕೃತವಾಯಿತು. ಇಂದು ಭಾರತವನ್ನೊಳಗೊಂಡಂತೆ ಹಲವಾರು ದೇಶಗಳು ಡಿ.ಡಿ.ಟಿ.ಯನ್ನು ನಿಷೇಧಿಸಿವೆ. ಆದರೆ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ವಿಷಕಾರಿಯಾದ ಹಲವಾರು ರಾಸಾಯನಿಕಗಳು ಮುಕ್ತವಾಗಿ ಬಳಕೆಯಲ್ಲಿವೆ.
       ತಮ್ಮ ಕೃತಿ ನಂತರದ ವರ್ಷಗಳಲ್ಲಿ ಪ್ರಕೃತಿ ಮತ್ತು ಪರಿಸರದ ಬಗೆಗೆ ಜನರ ಮನೋಭಾವದಲ್ಲಿ ತಂದ ಬದಲಾವಣೆಗಳನ್ನು ನೋಡಲು ಕಾರ್ಸನ್ ಇರಲಿಲ್ಲ. `ಸೈಲೆಂಟ್ ಸ್ಪ್ರಿಂಗ್` ಪ್ರಕಟಗೊಂಡ ಒಂದೂವರೆ ವರ್ಷಗಳಲ್ಲೇ (1964) ಅವರು ಸ್ತನ ಕ್ಯಾನ್ಸರ್ಗೆ ಬಲಿಯಾದರು. ತಮ್ಮ ಸಾವಿಗೆ ಮುನ್ನ ಸಿ.ಬಿ.ಎಸ್. ಸಾಕ್ಷ್ಯಚಿತ್ರವೊಂದರಲ್ಲಿ ಅವರು- `ಇಂದು ಪ್ರಕೃತಿಯನ್ನು ಬದಲಿಸುವ ಹಾಗೂ ಅದನ್ನು ನಾಶಮಾಡುವ ಶಕ್ತಿ ನಮಗಿದೆ. ಆದರೆ ಮನುಷ್ಯ ಸಹ ಪ್ರಕೃತಿಯ ಒಂದು ಭಾಗ. ಪ್ರಕೃತಿಯ ವಿರುದ್ಧದ ಅವನ ಯುದ್ಧ ಅಂತಿಮವಾಗಿ ಅವನ ವಿರುದ್ಧದ ಯುದ್ಧವೇ ಆಗಿದೆ` ಎಂದಿದ್ದರು.

ಪುಸ್ತಕ ಕುರಿತು ಪುಸ್ತಕ
`ಸೈಲೆಂಟ್ ಸ್ಪ್ರಿಂಗ್` ಕೃತಿ ಅಮೆರಿಕದ ಸಮಾಜದಲ್ಲಿ ಉಂಟುಮಾಡಿದ ಚರ್ಚೆ ಮತ್ತು ಪರಿಣಾಮಗಳ ಕುರಿತು ಪ್ರಿಸಿಲ್ಲಾ ಮರ್ಫಿ ಎಂಬುವರು `What a Book Can Do: The Publication and Reception of Silent Spring’  (ಪುಸ್ತಕವೊಂದು ಏನು ಮಾಡಬಲ್ಲದು: ಸೈಲೆಂಟ್ ಸ್ಪ್ರಿಂಗ್ ಪ್ರಕಟಣೆ ಮತ್ತು ಅದರ ಸ್ವೀಕೃತಿ) ಎಂಬ ಪ್ರತ್ಯೇಕ ಪುಸ್ತಕವನ್ನು 2005ರಲ್ಲಿ ಪ್ರಕಟಿಸಿದರು. ಅಮೆರಿಕದ ಆಗಿನ ಉಪಾಧ್ಯಕ್ಷರಾಗಿದ್ದ ಆಲ್ ಗೋರ್ ಅತ್ಯಂತ ಚರ್ಚೆಗೊಳಗಾದ `ಆನ್ ಇನ್ಕನ್ವೀನಿಯೆಂಟ್ ಟ್ರೂಥ್` ಸಾಕ್ಷ್ಯಚಿತ್ರ  `ಸೈಲೆಂಟ್ ಸ್ಪ್ರಿಂಗ್` ಮುಂದುವರಿದ ಭಾಗವೆಂದು ಪರಿಗಣಿಸಬಹುದು. ಇವು ಕೃತಿಯ ಜನಪ್ರಿಯತೆಗೆ ಸಾಕ್ಷಿ. ಮರ್ಫಿಯವರು ತಮ್ಮ ಪುಸ್ತಕದಲ್ಲಿ `ಸೈಲೆಂಟ್ ಸ್ಪ್ರಿಂಗ್` ಅನ್ನು ವಿಶ್ಲೇಷಿಸುವುದಕ್ಕಿಂತ ಹೆಚ್ಚಾಗಿ ಅದು ಲೇಖನ ರೂಪದಲ್ಲಿ ಪ್ರಕಟಗೊಂಡಾಗ ಮಾಧ್ಯಮಗಳು, ಸಾರ್ವಜನಿಕರು, ಉದ್ಯಮಿಗಳು ಪ್ರತಿಕ್ರಿಯಿಸಿದ ರೀತಿಯನ್ನು ಉಲ್ಲೇಖಿಸಿದ್ದಾರೆ. ಜತೆಗೆ ಪುಸ್ತಕ ಅಮೆರಿಕ ರಾಷ್ಟ್ರಾಧ್ಯಕ್ಷರ ಗಮನ ಸೆಳೆದು ಸರ್ಕಾರದ ಅಭಿಪ್ರಾಯ ಬದಲಿಸಿದ್ದನ್ನು ದಾಖಲಿಸಿದ್ದಾರೆ.







ಕಾಮೆಂಟ್‌ಗಳಿಲ್ಲ: