ಸೋಮವಾರ, ಅಕ್ಟೋಬರ್ 01, 2012

ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

4/6/2006ರ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಲೇಖನ.


ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ

ಅಭಿವೃದ್ಧಿ ಸಾಧಿಸುವ ಭರದಲ್ಲಿ ಪರಿಸರ ನಾಶವಾಗುತ್ತಲೇ ಇದೆ. ಹೀಗಾಗಿ ಇವತ್ತು ಪರಿಸರ ಸಂರಕ್ಷಣೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಹಾತ್ಮ ಗಾಂಧೀಜಿ ಅವರು ಪರಿಸರ ಸಂರಕ್ಷಣೆಯ ಹಾದಿಯಲ್ಲಿ ಇಂದಿಗೂ ಪ್ರಸ್ತುತವಾದವರು. ಪರಿಸರದ ಬಗೆಗಿನ ಗಾಂಧೀಜಿಯವರ ಕಾಳಜಿ ಅನುಕರಣೀಯ, ಅಷ್ಟೇ ಅಲ್ಲ ಸಮಸ್ಯೆಗೆ ಸುಲಭ ಪರಿಹಾರ.

ಇಂದು ವೈಜ್ಞಾನಿಕ ಸಾಧನೆ ಉತ್ತುಂಗದಲ್ಲಿದೆ. ಐವತ್ತು ವರ್ಷಗಳ ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಗತಿ ವಿಜ್ಞಾನರಂಗದಲ್ಲಾಗಿದೆ. ಪ್ರಗತಿ ಮತ್ತು ಆಧುನಿಕತೆಯನ್ನು ಸಾಧಿಸುವ ಭರದಲ್ಲಿ ಪರಿಸರವನ್ನು ಸಂಪೂರ್ಣ ಕಡೆಗಣಿಸಿದುದರ ಪರಿಣಾಮವಾಗಿ ಇಂದು ಪರಿಸರ ಸಂರಕ್ಷಣೆ ಅತ್ಯಂತ ದೊಡ್ಡ ಸವಾಲು ಹಾಗೂ ಸಮಸ್ಯೆಯಾಗಿದೆ. ಇದುವರೆಗಿನ ಭೂಮಿಯ ಮೇಲಿನ ಎಲ್ಲ ಪ್ರಾಣಿಗಳಿಗಿಂತ ಮಾನವ ಅತ್ಯಂತ ಅಪಾಯಕಾರಿಯಾದ ಪ್ರಾಣಿಯಾಗಿದ್ದಾನೆ. ವಿಜ್ಞಾನಿಗಳು ಹೇಳುವಂತೆ ಭೂಮಿಯ ಚರಿತ್ರೆಯಲ್ಲಿ ಇದುವರೆಗೆ ಆರು ಸಾರಿ ಭೂಮಿಯ ಜೀವಸಂಕುಲಗಳು ನಿರ್ನಾಮವಾದ ಘಟನೆಗಳು ಸಂಭವಿಸಿವೆ. ಆ ಆರೂ ಸಾರಿಯೂ ಜೀವ ಮತ್ತೆ ಪುಟಿದೆದ್ದಿದೆ. ಆದರೆ ಇನ್ನು ಮುಂದೆ ಮಾನವನ ದುರಾಸೆ, ಅಜಾಗರೂಕತೆಯಿಂದ ನಡೆಯಬಹುದಾದ ದುರಂತಗಳಿಂದಾಗುವ ಜೀವಸಂಕುಲ ವಿನಾಶದಿಂದ ಬಹುಶಃ ಜೀವಸಂಕುಲ ಮತ್ತೆ ಚೇತರಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ.

ಪರಿಸರ ಸಂರಕ್ಷಣೆಯ ಹಾದಿಯನ್ನು ಅರಸುತ್ತಾ ಹೊರಟಲ್ಲಿ ನಾವು ನಮಗರಿವಿಲ್ಲದಂತೆ ಮಹಾತ್ಮ ಗಾಂಧಿಯ ಹೆಜ್ಜೆಗಳನ್ನೇ ಅನುಸರಿಸತೊಡಗುತ್ತೇವೆ. ಪರಿಸರ ಕ್ಷೇತ್ರದಲ್ಲಿ ಹಿಂದೆಂದಿಗಿಂತ ಈಗ ಗಾಂಧಿ ಹೆಚ್ಚು ಪ್ರಸ್ತುತರಾಗುತ್ತಿದ್ದಾರೆ. ಗಾಂಧಿ ಇಂದಿನ ನಮ್ಮ ಎಲ್ಲ ಆಧುನಿಕತೆಯ ಸಮಸ್ಯೆಗಳಿಗೂ ಪರಿಹಾರ ದೊರಕಿಸಿಕೊಡಬಲ್ಲವರಾಗಿದ್ದಾರೆ. ಈಗಿನ ಮನುಷ್ಯ ಎದುರಿಸುತ್ತಿರುವ ಪರಿಸರ ಸಮಸ್ಯೆಗಳು ಗಾಂಧಿಯ ಸಮಯದಲ್ಲಿ ಇರಲಿಲ್ಲ ಹಾಗೂ ಈ ಸಮಸ್ಯೆಗಳು ಇಷ್ಟು ಬೃಹದಾಕಾರವಾಗಿ ಬೆಳೆಯುತ್ತವೆಂದು ಯಾರೂ ಊಹಿಸಿರಲಿಲ್ಲ. ಆದರೆ ಆಗಲೇ ಅವನ್ನೆಲ್ಲ ಕಂಡ ಮಹಾನ್ ದಾರ್ಶನಿಕ ಆತ. ಆತನ ಬದುಕು ಮತ್ತು ಆಚರಣೆಗಳೇ ನಮಗಿಂದು ದಾರಿದೀಪಗಳಾಗಿವೆ. ಗಾಂದಿಗೆ ನೈತಿಕ ಬಲದ ಸಾಮರ್ಥ್ಯವಿತ್ತು ಏಕೆಂದರೆ ಅವರು ಬೋಧಿಸು ತ್ತಿದ್ದುದನ್ನು ಅವರೇ ಆಚರಿಸುತ್ತಿದ್ದರು. ಅಹಿಂಸೆ ಮತ್ತು ಅಸಹಕಾರ ಮನೋಭಾವವೆಂಬ ತೀರಾ ವೈಯಕ್ತಿಕ ನೈತಿಕತೆಯನ್ನು ಒಂದು ಬಲಿಷ್ಠ ಸಾಮಾಜಿಕ ಹಾಗೂ ರಾಜಕೀಯ ಶಕ್ತಿಯನ್ನಾಗಿ ರೂಪಿಸಿದರು. ಅವರ ಹೋರಾಟ ಸತ್ಯದ ಆಧಾರವಾಗಿತ್ತು, ಅದಕ್ಕೇ ಅದನ್ನು ಸತ್ಯಾಗ್ರಹವೆಂದು ಕರೆದರು.

ಗಾಂಧಿ ಹೊರದೇಶದಲ್ಲಿ ಉನ್ನತ ಶಿಕ್ಷಣ ಪಡೆದವರಾದ್ದರಿಂದ ಅವರಿಗೆ ಪಾಶ್ಚಿಮಾತ್ಯ ಸಂಸ್ಕೃತಿಯ ಅರಿವಿತ್ತು. ಅದಕ್ಕೆ ಅವರು ೧೯೦೯ರಲ್ಲೇ ತಮ್ಮ `ಹಿಂದ್ ಸ್ವರಾಜ್'ನಲ್ಲಿ ಭಾರತಕ್ಕೆ ಪಾಶ್ಚಿಮಾತ್ಯ ನಾಗರಿಕತೆಯನ್ನು ಬರಮಾಡಿಕೊಳ್ಳುವುದೆಂದರೆ `ಭಸ್ಮಾಸುರ'ನನ್ನು ಆಹ್ವಾನಿಸಿದಂತೆ ಎಂದು ಹೇಳಿದ್ದರು. `ಪಾಶ್ಚಿಮಾತ್ಯ ನಾಗರಿಕತೆ `ಕೊಳ್ಳುಬಾಕ' ಸಂಸ್ಕೃತಿಯದಾಗಿದ್ದು ಅದನ್ನೇ ಅಭಿವೃದ್ಧಿ ಎಂದುಕೊಂಡಿದೆ. ಪದಶಃ ಅರ್ಥದಲ್ಲಿ ಅದು ನಾಗರಿಕತೆಯೇ ಅಲ್ಲ' ಎಂದಿದ್ದರು. ಕೈಗಾರಿಕಾ ಸಮಾಜವೊಂದರ ಮೊಟ್ಟಮೊದಲ ಪರಿಕಲ್ಪನೆಯೆಂದರೆ ಸಂಪನ್ಮೂಲಗಳು ಅಸೀಮಿತವಾಗಿವೆ ಎನ್ನುವುದು. `ಇಂಗ್ಲೆಂಡ್‌ನಂತೆ ನಮ್ಮ ದೇಶವೂ ಅಭಿವೃದ್ಧಿಯಾಗುವುದು ಯಾವಾಗ?' ಎಂದು ಒಬ್ಬರು ಕೇಳಿದ್ದಕ್ಕೆ, `ಇಂಗ್ಲೆಂಡ್‌ನ ಅಭಿವೃದ್ಧಿಗೆ ಭೂಮಿಯ ಅರ್ಧ ಸಂಪನ್ಮೂಲಗಳೇ ಬರಿದಾಗಿವೆ. ಭಾರತ ಆ ರೀತಿ ಆಗಬೇಕಾದಲ್ಲಿ ಭೂಮಿಯಂತಹ ಇನ್ನೆಷ್ಟು ಗ್ರಹಗಳು ಬರಿದಾಗಬೇಕೋ' ಎಂದಿದ್ದರು. ಬ್ರಿಟಿಶ್ ಆಳ್ವಿಕೆಯಲ್ಲಿ ಭಾರತದ ಸಂಪನ್ಮೂಲಗಳನ್ನು ದೋಚಿ ಬ್ರಿಟನ್‌ನ ಮಿಲ್ಲು ಮತ್ತು ಕೈಗಾರಿಕೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು. `ಅಂತಹ ಅಭಿವೃದ್ಧಿ ಬೇಡವೇ ಬೇಡ. ಮನುಷ್ಯನ ಆಸೆಗೆ ಕೊನೆಯೇ ಇಲ್ಲ. ತನ್ನ ದುರಾಸೆಯನ್ನು ತೃಪ್ತಿಪಡಿಸಿಕೊಳ್ಳಲು ಪಶ್ಚಿಮದ ನಾಗರಿಕತೆ ಪ್ರಕೃತಿಯ ಮೇಲೆ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ' ಎಂದಿದ್ದರು ಗಾಂಧಿ. `ಪ್ರತಿಯೊಬ್ಬನ ಅವಶ್ಯಕತೆ ಈಡೇರಿಸುವಷ್ಟು ಭೂಮಿಯಲ್ಲಿದೆ, ಆದರೆ ದುರಾಸೆಯ ಈಡೇರಿಕೆಯಷ್ಟಲ್ಲ' ಎಂಬ ಗಾಂಧಿಯ ಮಾತು ಈಗಷ್ಟೇ ಪ್ರಸ್ತುತವಲ್ಲ ಇನ್ನು ಸಾವಿರ ವರ್ಷ ಕಳೆದರೂ ಅಪ್ರಸ್ತುತವಾಗಲಾರದು. ಗಾಂಧಿ ಮನುಷ್ಯನ ಅವಶ್ಯಕತೆ ಮತ್ತು ಬೇಡಿಕೆಗಳನ್ನು ಪ್ರತ್ಯೇಕವಾಗಿ ನೋಡುತ್ತಿದ್ದರು. ಭೂಮಿಯ ಸಂಪನ್ಮೂಲಗಳು ಈಗಿನವರಿಗೆ ಮಾತ್ರವಲ್ಲ, ಅದರ ಅವಶ್ಯಕತೆಯಿರುವ ಮುಂದಿನ ಪೀಳಿಗೆಯನ್ನೂ ಗಮನದಲ್ಲಿರಿಸಿ ಕೊಳ್ಳಬೇಕೆನ್ನುತ್ತಿದ್ದರು. ಮಾನವರು ದುರಾಸೆಯ ಗುಲಾಮರಾಗಬಾರದೆಂದು ಅವರು ಸದಾ ಹೇಳುತ್ತಿದ್ದರು.


ಗಾಂಧೀಜಿ ಪರಿಸರ ಹಾಳಾಗುತ್ತಿರುವುದರ ಬಗ್ಗೆ ನಿರ್ದಿಷ್ಟವಾಗಿ ಏನನ್ನೂ ಹೇಳಿಲ್ಲ. ಪರಿಸರದ ಬಗೆಗಿನ ಗಾಂಧಿಯ ಮಾತುಗಳಿಗಿಂತ ಅವರ ಆಚರಣೆಯೇ ಮುಖ್ಯವಾದುದು. ಒಮ್ಮೆ ಅವರನ್ನು ಜನರಿಗೆ ನಿಮ್ಮ ಸಂದೇಶ ಏನೆಂದು ಕೇಳಿದಾಗ `ನನ್ನ ಬದುಕೇ ಒಂದು ಸಂದೇಶ' ಎಂದು ಹೇಳಿದ್ದರು. ಆ ಸಂದೇಶದಲ್ಲಿಯೇ ಪ್ರತಿಯೊಬ್ಬ ಮನುಷ್ಯ ಅವನ ಎಂಥಹುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಅವರು ಮನೆ ಮತ್ತು ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೇಳುತ್ತಿದ್ದರು. ಅವರ ಆಶ್ರಮಕ್ಕೆ ಪ್ರವೇಶ ಬಯಸುವವರಿಗೆ ಅವರು ಮೊದಲು ಕೇಳುತ್ತಿದ್ದ ಮೊದಲ ಪ್ರಶ್ನೆ, `ನಿನ್ನ ಪಾಯಖಾನೆಯನ್ನು ನೀನೇ ಸ್ವಚ್ಛಗೊಳಿಸಿಕೊಳ್ಳಬಲ್ಲೆಯಾ?' ಅವರು ಸಬರಮತಿ ಆಶ್ರಮದ ಬಳಿಯ ನದಿಯಲ್ಲಿ ಸ್ನಾನ ಮಾಡುವಾಗ ಅವರು ಎಷ್ಟು ಬೇಕೋ ಅಷ್ಟೇ ನೀರನ್ನೇ ಬಳಸುತ್ತಿದ್ದರು. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದರೂ ಅವರು ಅದನ್ನು ಅನವಶ್ಯಕವಾಗಿ ಬಳಸುತ್ತಿರಲಿಲ್ಲ. `ನದಿಯಲ್ಲಿ ಅಷ್ಟು ನೀರಿದ್ದರೂ ಅದನ್ನು ಬೇಕಾದಷ್ಟು ಬಳಸಲು ಏಕೆ ಹಿಂಜರಿಯುತ್ತಿರುವಿರಿ?' ಎಂದು ಒಮ್ಮೆ ಕೇಳಿದಾಗ, `ನದಿಯಲ್ಲಿ ಹರಿಯುತ್ತಿರುವ ನೀರೆಲ್ಲಾ ನನ್ನದಲ್ಲವಲ್ಲ್ಲಾ' ಎಂದಿದ್ದರು. ಅವರಿದ್ದ ಸಮಯದಲ್ಲಿ ಕಾಗದಕ್ಕಾಗಿ ಕಾಡುಗಳನ್ನು ಕಡಿಯುವುದು ಸಮಸ್ಯೆಯೇ ಆಗಿರಲಿಲ್ಲ. ಆದರೂ ಅವರಿಗೆ ಯಾರಾದರೂ ಪತ್ರ ಬರೆದಲ್ಲಿ ಬೇರೆ ಕಾಗದ ಬಳಸದೇ ಆ ಪತ್ರದ ಹಿಂದೆಯೇ ಬರೆದು ಉತ್ತರಿಸುತ್ತಿದ್ದರು. ಲಕೋಟೆಗಳನ್ನು ಕತ್ತರಿಸಿ ಅದರ ಹಿಂದಿನ ಖಾಲಿ ಸ್ಥಳದಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಹಲವಾರು ಅವರ ಅನುಯಾಯಿಗಳನ್ನು ಅದನ್ನು ಅನುಸರಿಸುವಂತೆ ಮಾಡಿದರು.

ಅವರ ಅಹಿಂಸಾಚರಣೆ ಜೀವಿಗಳಿಗೆ ಮಾತ್ರ ಅನ್ವಯಿಸುವಂಥದಲ್ಲ. ಪ್ರಕೃತಿಯಲ್ಲಿನ ನಿರ್ಜೀವ ವಸ್ತುಗಳ ಮೇಲಿನ ದಬ್ಬಾಳಿಕೆಯೂ ಅವರ ದೃಷ್ಟಿಯಲ್ಲಿ ಹಿಂಸೆಯೇ ಆಗಿತ್ತು. ಪ್ರಕೃತಿಯನ್ನು ಧನ್ಯತಾ ಭಾವದಿಂದ ನೋಡಬೇಕೆನ್ನುವುದೇ ಅವರ ಉದ್ದೇಶವಾಗಿತ್ತು. ಹೇಗೆ ಮನುಷ್ಯನಿಗೆ ಜೀವವನ್ನು ಸೃಷ್ಟಿಸುವ ಶಕ್ತಿಯಿಲ್ಲವೋ, ಅದೇ ರೀತಿ ಅವನಿಗೆ ಜೀವವನ್ನು ನಾಶಮಾಡುವ ಹಕ್ಕೂ ಇಲ್ಲವೆನ್ನುವುದು ಅವರ ಅಭಿಪ್ರಾಯವಾಗಿತ್ತು. ಅವರ ಸೇವಾಗ್ರಾಮ ಆಶ್ರಮದಲ್ಲಿ ದೊಡ್ಡ ಮರದ ಇಕ್ಕಳಗಳಿದ್ದು ಆಶ್ರಮದೊಳಗೆ ಬರುವ ಹಾವುಗಳನ್ನು ಕೊಲ್ಲದೆ ಹಿಡಿದು ದೂರ ಬಿಟ್ಟುಬಿಡಲಾಗುತ್ತಿತ್ತು. ಒಮ್ಮೆ ಬ್ರಿಟಿಷ್ ಲೇಖಕ ಹಾಗೂ ಗೆಳೆಯ ಎಡ್ವರ್ಡ್ ಥಾಂಪ್ಸನ್ ಗಾಂಧಿಯವರ ಜೊತೆ ಮಾತನಾಡುತ್ತ `ಭಾರತದಲ್ಲಿ ಕಾಡುಪ್ರಾಣಿಗಳು ಕಡಿಮೆಯಾಗುತ್ತಿವೆ' ಎಂದು ಆತಂಕ ವ್ಯಕ್ತಪಡಿಸಿದರಂತೆ. ಅದಕ್ಕೆ ಗಾಂಧೀಜಿ ಒಂದರೆಕ್ಷಣ ಯೋಚಿಸಿ, `ಹೌದು ಕಾಡುಗಳಲ್ಲಿ ಕಡಿಮೆಯಾಗುತ್ತಿವೆ, ಆದರೆ ನಗರಗಳಲ್ಲಿ ಹೆಚ್ಚಾಗುತ್ತಿವೆ' ಎಂದರಂತೆ.

ಪರಿಸರಸ್ನೇಹಿ ಸುಸ್ಥಿರ ಅಭಿವೃದ್ಧಿ ಎಂದರೆ ಮುಂದಿನ ಪೀಳಿಗೆಯವರ ಅವಶ್ಯಕತೆಗಳ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಇಂದಿನವರ ಅವಶ್ಯಕತೆಗಳನ್ನು ಪೂರೈಸುವುದು. ಅಭಿವೃದ್ಧಿ ಅಥವಾ ಪರಿಸರದ ಬಗೆಗಿನ ಗಾಂಧಿಯ ಆಲೋಚನೆಗಳನ್ನು ಆಧುನಿಕ ಮಾತುಗಳಲ್ಲಿ ಹೇಳುವುದಾದರೆ, ಅಭಿವೃದ್ಧಿಗಾಗಿ ನವೀಕರಣಗೊಳಿಸಬಹುದಾದ ಸಂಪನ್ಮೂಲಗಳ ಬಳಕೆ ಮತ್ತು ನವೀಕರಣ ಸಾಧ್ಯವಿಲ್ಲದ ಸಂಪನ್ಮೂಲಗಳ ಕನಿಷ್ಠ ಬಳಕೆ. ಗಾಂಧಿಯ ಈ ಆಲೋಚನೆ ಪರಿಸರ ಸಂರಕ್ಷಣೆಯ ಬಗೆಗೆ ಅಲ್ಲದೆ ಪರಿಸರದ ಬಗೆಗಿನ ಧನ್ಯತಾ ಭಾವನೆಯಿಂದಲೇ ಆಗಿದ್ದರೂ ಅದು ಪರಿಸರ ಸಂರಕ್ಷಣೆಯ ಆಲೋಚನೆಯೇ ಆಗಿದೆ. ಗಾಂಧಿ ಪರಿಸರದ ಬಗೆಗೆ ಒಮ್ಮೆ ಹೀಗೆ ಹೇಳಿದ್ದರು, `ನನಗೆ ಪ್ರಕೃತಿಯದಲ್ಲದೆ ಮತ್ತಾವುದರ ಸ್ಫೂರ್ತಿಯೂ ಬೇಡ. ಆಕೆ ನನ್ನನ್ನೆಂದೂ ನಿರಾಶಳನ್ನಾಗಿಸಿಲ್ಲ. ಆಕೆಯಲ್ಲಿ ಎಂಥದೋ ನಿಗೂಢತೆಯಿದೆ, ಅಚ್ಚರಿಯಿದೆ, ಆನಂದ ಪರವಶತೆಗೆ ಕರೆದೊಯ್ಯುವ ಸಾಮರ್ಥ್ಯವಿದೆ. ಅದರ ಮುಂದೆ ಮಾನವ ಎಷ್ಟು ಗೌಣನಲ್ಲವೆ? ಸುಂದರ ತಾರೆಗಳ ಕತ್ತಲ ಆಗಸವನ್ನು ನೋಡುತ್ತಾ ದಣಿಯದೆ ಅದೆಷ್ಟು ಸಾರಿ ಮೈಮರೆತಿಲ್ಲ! ನನ್ನ ದೃಷ್ಟಿಯಲ್ಲಿ ಕಲೆ ಅತ್ಯುತ್ತಮವಾಗಬೇಕಾದರೆ ಅದೂ ಸಹ ಪ್ರಕೃತಿಯ ಸೌಂದರ್ಯದಂತೆ ಸಾರ್ವತ್ರಿಕವಾಗಿರಬೇಕು, ನಿರೂಪಣೆಯಲ್ಲಿ ಸರಳವಾಗಿರಬೇಕು ಹಾಗೂ ಅಭಿವ್ಯಕ್ತಿಯಲ್ಲಿ ನೇರವಾಗಿರಬೇಕು ಪ್ರಕೃತಿಯ ಭಾಷೆಯಂತೆ........ನಾನು ಸೂರ್ಯಾಸ್ತದ ಅದ್ಭುತವನ್ನು ಅಥವಾ ಚಂದಿರನ ಸೌಂದರ್ಯವನ್ನು ಮೆಚ್ಚಿದಲ್ಲಿ, ನನ್ನ ಆತ್ಮ ಸೃಷ್ಟಿಕರ್ತನ ಆರಾಧನೆಯಲ್ಲಿ ಮೈಮರೆಯುತ್ತದೆ'.

ಗಾಂಧಿಯ ಅರ್ಥಶಾಸ್ತ್ರದಲ್ಲಿ ಅನವಶ್ಯಕ ಬೇಡಿಕೆಗಳಿಗೆ ಆಸ್ಪದವಿಲ್ಲ, ಸರಳ ಜೀವನವೇ ಎಲ್ಲ ಆಧುನಿಕತೆಯ ಮೂಲದ ಸಮಸ್ಯೆಗಳಿಗೆ ಪರಿಹಾರ. ಸರಳ ಜೀವನದಿಂದಲೇ ಪ್ರಕೃತಿಯ ಸೀಮಿತ ಸಂಪನ್ಮೂಲಗಳ ಸಂರಕ್ಷಣೆಯೂ ಸಾಧ್ಯ. ನಾವು ಏನನ್ನು ಪ್ರಕೃತಿಯಿಂದ ಪಡೆಯುತ್ತೀವೆಯೋ ಅದನ್ನು ಮರಳಿಸುವಂತಿರಬೇಕು. `ನಾವು ಪ್ರಕೃತಿಯ ವರದಾನವನ್ನು ನಮ್ಮ ಮನಸೋ ಇಚ್ಛೆ ಉಪಯೋಗಿಸಬಹುದು, ಆದರೆ ಆಕೆಯ ಪುಸ್ತಕದಲ್ಲಿ ವ್ಯಯ ಮತ್ತು ಆದಾಯದ ಲೆಕ್ಕಗಳು ಸಮವಾಗಲೇಬೇಕು' ಎನ್ನುತ್ತಿದ್ದರು. ಭಾರತದ ಅಭಿವೃದ್ಧಿಯ ಕನಸನ್ನು ಗಾಂಧಿ ಮತ್ತು ನೆಹರು ಇಬ್ಬರೂ ಹೊಂದಿದ್ದರು. ಆದರೆ ಅದರ ಸಾಕಾರದ ಹಾದಿಯಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ೧೯೪೫ರಲ್ಲಿ ಗಾಂಧಿಯವರು ನೆಹರೂಗೆ ಬರೆದ ಪತ್ರವೊಂದರಲ್ಲಿ, `...... ಭಾರತವು ನಿಜವಾದ ಸ್ವಾತಂತ್ರ್ಯವನ್ನು ಮತ್ತು ಆ ಮೂಲಕ ಇಡೀ ಜಗತ್ತು ಸ್ವಾತಂತ್ರ್ಯವನ್ನು ಗಳಿಸಬೇಕಾದರೆ, ಜನರೆಲ್ಲ ಇಂದಲ್ಲ ನಾಳೆ ಗ್ರಾಮಗಳಲ್ಲಿ ಬದುಕಬೇಕಲ್ಲದೆ ಪಟ್ಟಣಗಳಲ್ಲ; ಗುಡಿಸಲುಗಳಲ್ಲದೆ ಅರಮನೆಗಳಲ್ಲಲ್ಲ ಎಂಬ ಸತ್ಯವನ್ನು ಮನಗಾಣಬೇಕು. ಇದರಲ್ಲಿ ನನಗೆ ಸಂಪೂರ್ಣವಾದ ವಿಶ್ವಾಸವಿದೆ. ಪಟ್ಟಣ ಮತ್ತು ಅರಮನೆಗಳಲ್ಲಿ ಕೋಟ್ಯಂತರ ಜನರು ಸಹಬಾಳ್ವೆ, ನೆಮ್ಮದಿಯಿಂದ ಬದುಕಲಾರರು. ಅಲ್ಲಿ ಹಿಂಸೆ ಮತ್ತು ಅಸತ್ಯದ ಆಚರಣೆ ಬಿಟ್ಟರೆ ಅವರಿಗೆ ಅನ್ಯಮಾರ್ಗವಿಲ್ಲ. ಸತ್ಯ ಮತ್ತು ಅಹಿಂಸೆಗಳಿಲ್ಲದಿದ್ದರೆ ಮನುಕುಲದ ವಿನಾಶ ಖಂಡಿತ. ಗ್ರಾಮೀಣ ಬದುಕಿನ ಸರಳತೆಯಲ್ಲಿ ಸತ್ಯ ಮತ್ತು ಅಹಿಂಸೆಗಳ ಸಾಕ್ಷಾತ್ಕಾರ ಸಾಧ್ಯ. ಅಂಥ ಸರಳತೆಯನ್ನು ಚರಕ ಮತ್ತು ಅದು ಪ್ರತಿನಿಧಿಸುವ ಎಲ್ಲ ಅಂಶಗಳಲ್ಲಿಯೂ ಕಾಣಬಹುದು. ಜಗತ್ತು ಇಂದು ಅಡ್ಡದಾರಿ ಹಿಡಿದಿದ್ದರೆ ನಾವು ಧೃತಿಗೆಡಬಾರದು. ಭಾರತವೂ ಸಹ ಜ್ವಾಲೆಯ ಕುಡಿಗೆ ಆಕರ್ಷಿತವಾಗಿ ಅದನ್ನು ಸುತ್ತುತ್ತಾ ತನ್ನನ್ನೇ ಸುಟ್ಟುಕೊಳ್ಳುವ ಪತಂಗದ ರೀತಿಯಲ್ಲಿ ಅದೇ ದಾರಿಯನ್ನು ಹಿಡಿಯಬಹುದು. ಆದರೆ, ಅಂಥ ದುರಂತದಿಂದ ಭಾರತವನ್ನು ಆ ಮೂಲಕ ಇಡೀ ಜಗತ್ತನ್ನು ರಕ್ಷಿಸಲು ನನ್ನ ಕೊನೆಯುಸಿರಿನವರೆಗೂ ಪ್ರಯತ್ನಿಸುವುದು ನನ್ನ ಕರ್ತವ್ಯ. ನನ್ನ ಮಾತಿನ ಸಾರಾಂಶವಿಷ್ಟೆ. ಮಾನವ ತನ್ನ ನಿಜ ಅಗತ್ಯಗಳಿಗೆ ತೃಪ್ತಿಪಟ್ಟು ಸ್ವಾವಲಂಬಿಯಾಗಬೇಕು. ಅಂಥ ನಿಯಂತ್ರಣವಿಲ್ಲದಿದ್ದರೆ ಆತ ತನ್ನನ್ನು ತಾನು ರಕ್ಷಿಸಿಕೊಳ್ಳಲಾರ......' ಎಂದು ಬರೆದಿದ್ದರು. ಇದನ್ನು ಅಭಿವೃದ್ಧಿಯ ಗಾಂಧಿಯ ಹಾದಿ ಎನ್ನಬಹುದು. ಆ ಪತ್ರಕ್ಕೆ ಉತ್ತರವಾಗಿ ನೆಹರೂರವರು `.....ಇಂಥ ಸಮಾಜದ ಸಾಕ್ಷಾತ್ಕಾರದ ವಿಧಾನ ಮತ್ತು ಅದು ಒಳಗೊಳ್ಳಬೇಕಿರುವ ವಿಷಯಗಳು ಯಾವುವು ಎಂಬುದೇ ನಮ್ಮ ಮುಂದಿರುವ ಪ್ರಶ್ನೆ. ಒಂದು ಗ್ರಾಮವು ಸತ್ಯ ಮತ್ತು ಅಹಿಂಸೆಗಳನ್ನೆ ಒಳಗೊಂಡಿರಬೇಕು ಎಂಬುದು ನನಗೆ ಅರ್ಥವಾಗದು. ಸಾಮಾನ್ಯ ಅಭಿಪ್ರಾಯವೆಂದರೆ, ಒಂದು ಗ್ರಾಮ ಬೌದ್ಧಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿದೆ. ಒಂದು ಹಿಂದುಳಿದ ಪರಿಸರದಿಂದ ಯಾವುದೇ ಪ್ರಗತಿ ಸಾಧನೆ ಅಸಾಧ್ಯ. ಸಂಕುಚಿತ ಮನೋಭಾವನೆಯ ಜನರು ಹೆಚ್ಚು ಸುಳ್ಳರೂ ಹಿಂಸಾವಾದಿಗಳೂ ಆಗಿರುವ ಸಾಧ್ಯತೆಯಿದೆ. ಆಹಾರ, ಉಡುಪು, ವಸತಿ, ಶಿಕ್ಷಣ, ನೈರ್ಮಲ್ಯ ಇತ್ಯಾದಿಗಳನ್ನು ಒದಗಿಸುವ ಗುರಿಗಳನ್ನು ನಾವು ಹಮ್ಮಿಕೊಳ್ಳಬೇಕು. ಈ ಉದ್ದೇಶದಿಂದ ಅವುಗಳನ್ನು ತ್ವರಿತಗತಿಯಲ್ಲಿ ನಿರ್ದಿಷ್ಟವಾಗಿ ಸಾಧಿಸುವ ಹಾದಿಯನ್ನು ಕಂಡುಕೊಳ್ಳಬೇಕು. ಅದಕ್ಕಾಗಿ ಆಧುನಿಕ ಸಾರಿಗೆ ವಿಧಾನಗಳು ಮತ್ತು ಇತರೆ ಆಧುನಿಕ ಅಭಿವೃದ್ಧಿಗಳು ನಿರಂತರವಾಗಿ ಬೆಳೆಯಬೇಕು. ಇವುಗಳನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ. ಇವೆಲ್ಲ ಬಡ ಗ್ರಾಮಗಳ ಚೌಕಟ್ಟಿನಲ್ಲಿ ಹೇಗೆ ಹೊಂದಿಕೊಳ್ಳುತ್ತವೆ? ಬೃಹತ್ ಅಥವಾ ಲಘು ಉದ್ದಿಮೆಗಳನ್ನು ಸಾಧ್ಯವಾದಷ್ಟು ವಿಕೇಂದ್ರಿಕರಿಸಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ವಿದ್ಯುತ್‌ನಿಂದ ಇದು ಸಾಧ್ಯ. ಎರಡು ಬಗೆಯ ಅರ್ಥವ್ಯವಸ್ಥೆಗಳಿದ್ದರೆ, ಒಂದನ್ನೊಂದು ಮೆಟ್ಟಿನಿಲ್ಲಬಹುದು ಅಥವಾ ಎರಡರ ನಡುವೆ ಸಂಘರ್ಷ ಸಾಧ್ಯ .......'. ಇದು ನೆಹರೂರವರು ಕಂಡಿದ್ದ ಹಾದಿ.

ಕೈಗಾರಿಕೀಕರಣದ ಬಗ್ಗೆ ಒಮ್ಮೆ ಹೇಳುತ್ತಾ ಗಾಂಧಿ, `ಕೈಗಾರಿಕೀಕರಣ ಮನುಕುಲಕ್ಕೇ ಶಾಪವಾಗುತ್ತದೆನ್ನುವ ಹೆದರಿಕೆ ನನಗಿದೆ. ಕೈಗಾರಿಕೀಕರಣ ವ್ಯಕ್ತಿಯೊಬ್ಬನ ದೋಚುವ ಸಾಮರ್ಥ್ಯವನ್ನವಲಂಬಿಸಿರುತ್ತದೆ, ವಿದೇಶಿ ಮಾರುಕಟ್ಟೆಯನ್ನು ಮತ್ತು ಸ್ಪರ್ಧಿಗಳಿಲ್ಲದಿರುವುದನ್ನು ಅವಲಂಬಿಸಿರುತ್ತದೆ.... ಕೈಗಾರಿಕೀಕರಣದ ಭವಿಷ್ಯತ್ತು ಅಂಧಕಾರಮಯವಾಗಿದೆ..... ನನ್ನ ಯಂತ್ರಗಳ ಆಕ್ಷೇಪಣೆಗೆ ಕಾರಣವೇನೆಂದರೆ ಈ ರಾಷ್ಟ್ರಗಳು ಇತರರನ್ನು ದೋಚುತ್ತಿರುವುದು ಯಂತ್ರಗಳಿಂದಾಗಿಯೇ..... ಈ ದಿನ, ಬೆರಳೆಣಿಕೆಯಷ್ಟು ಜನ ಲಕ್ಷಾಂತರ ಜನರ ಮೇಲೆ ಸವಾರಿ ಮಾಡಲು ಈ ಯಂತ್ರಗಳು ಸಹಾಯ ಮಾಡುತ್ತಿವೆ. ಇದರ ಹಿಂದೆಯಿರುವುದು ದುರಾಸೆಯೇ ಹೊರತು ಶ್ರಮ ಉಳಿಸುವ ಅಥವಾ ಶ್ರಮ ಕಡಿಮೆ ಮಾಡುವ ಉದಾತ್ತ ಮನೋಭಾವವಲ್ಲ' ಎಂದಿದ್ದರು. ಆದರೆ ಗಾಂಧಿಯವರು ಎಂದಿಗೂ ಯಂತ್ರ ಅಥವಾ ವಿಜ್ಞಾನ ವಿರೋಧಿಯಾಗಿರಲಿಲ್ಲ, ಆದರೆ ಅವು ಜನರ ಶೋಷಣೆಯ ಮಾಧ್ಯಮಗಳಾಗಬಾರದು ಎನ್ನುತ್ತಿದ್ದರು. `.....ವಿದ್ಯುಚ್ಛಕ್ತಿ, ಹಡಗು ನಿರ್ಮಾಣ, ಯಂತ್ರಗಳು ನಮ್ಮ ಗ್ರಾಮೀಣ ಕುಶಲ ಕೈಗಾರಿಕೆಗಳ ಜೊತೆಯಲ್ಲೇ ಸಾಗಬೇಕೇ ಹೊರತು ಅವು ಇತರರನ್ನು ಶೋಷಿಸುವಂತಾಗಬಾರದು. ನನ್ನ ಚರಕವೂ ಯಂತ್ರವೇ, ಆದರೆ ಅದು ಮತ್ತೊಬ್ಬರನ್ನು ಶೋಷಿಸುವುದಿಲ್ಲ, ಬದಲಿಗೆ ಸ್ವಾಭಿಮಾನವನ್ನು ಕೊಡುತ್ತದೆ, ಬದುಕನ್ನು ಕೊಡುತ್ತದೆ' ಎಂದೊಮ್ಮೆ ಹೇಳಿದ್ದರು. ಗಾಂಧಿಯವರ ದೃಷ್ಟಿಯಲ್ಲಿ ತಾಂತ್ರಿಕ ಅಭಿವೃದ್ಧಿಯಲ್ಲಿ ಪ್ರಕೃತಿಯನ್ನು ಗೆಳೆಯನನ್ನಾಗಿ, ನಮ್ಮ ಪೋಷಕನನ್ನಾಗಿ ಪರಿಗಣಿಸಬೇಕು. ಆದರೆ ಈಗಿನ ನಮ್ಮ ವಿಧಾನಗಳೆಲ್ಲಾ ಇದಕ್ಕೆ ತದ್ವಿರುದ್ಧವಾದುವು. ಗಾಂಧಿಯ ಅರ್ಥಶಾಸ್ತ್ರ ಕನಿಷ್ಠ ಬಳಕೆ, ಸಂಸ್ಕರಣೆ, ಮರುಬಳಕೆ ಆಧಾರಿತ ಸುಸ್ಥಿರ ಆರ್ಥಿಕತೆಯ ಬುನಾದಿಯದು.

ಅವರಿಗೆ ಮನುಕುಲದ ಹಾಗೂ ಪ್ರಕೃತಿ ಎರಡರ ಬಗೆಗೂ ಕಾಳಜಿಯಿತ್ತು. ಅವುಗಳ ಉನ್ನತಿಗೆ ಅವರು ಪ್ರೀತಿ ಪ್ರೇಮದ, ಶಾಂತಿಯ ಹಾಗೂ ಸಹಕಾರದ ಹಾದಿ ಅರಸಿದರು, ಏಕೆಂದರೆ ದ್ವೇಷ ಯುದ್ಧಗಳಿಗಿಂತ ಅವೇ ಹೆಚ್ಚು ಸುಸ್ಥಿರವಾದುವು. `ಮನುಕುಲವನ್ನು ಆಳುತ್ತಿರುವುದು ಪ್ರೀತಿಯ ನಿಯಮ. ಅದೇ, ಹಿಂಸೆ ದ್ವೇಷಗಳೇ ರಾರಾಜಿಸಿದ್ದಿದ್ದರೆ ನಾವೆಂದೋ ಸಂಪೂರ್ಣ ನಿರ್ನಾಮವಾಗಿಬಿಡಬೇಕಿತ್ತು. ಆದರೂ ನಾಗರಿಕವೆಂದು ಕರೆಯಲ್ಪಡುವ ಮನುಷ್ಯರು ಹಾಗೂ ದೇಶಗಳು ಸಮಾಜದ ತಳಹದಿಯೇ ಹಿಂಸೆಯೆನ್ನುವಂತೆ ನಡೆದುಕೊಳ್ಳುತ್ತಿರುವುದು ತೀರಾ ದುರಂತ' ಎಂಬ ಆತಂಕ ವ್ಯಕ್ತಪಡಿಸಿದ್ದರು.

ಕಾಮೆಂಟ್‌ಗಳಿಲ್ಲ: