ಮಂಗಳವಾರ, ಜೂನ್ 04, 2013

ಡಾ.ವಿಜಯಾ ದಬ್ಬೆಯವರಿಗೆ 2012ರ ಡಾ.ಎಲ್.ಬಸವರಾಜು ಪ್ರಶಸ್ತಿ



ಡಾ.ಎಲ್.ಬಸವರಾಜು ಪ್ರಶಸ್ತಿ 2012 ಡಾ.ವಿಜಯಾ ದಬ್ಬೆ 





ಕೋಲಾರದ ನಾವು ಕೆಲವು ಗೆಳೆಯರು ಸೇರಿ ರಚಿಸಿಕೊಂಡಿರುವ ಡಾ.ಎಲ್.ಬಸವರಾಜು ಪ್ರತಿಷ್ಠಾನ ಕಳೆದ ಹತ್ತು ವರ್ಷಗಳಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯ ಕೊಡುಗೆ ನೀಡಿದವರನ್ನು ಸ್ಮರಿಸಿ ಡಾ.ಎಲ್.ಬಸವರಾಜು ಪ್ರಶಸ್ತಿ ನಿಡುತ್ತಾ ಬಂದಿದೆ. ಈ ಸಾರಿಯ ಪ್ರಶಸ್ತಿ ಸ್ತ್ರೀವಾದಿ ಲೇಖಕಿ ಡಾ.ವಿಜಯಾ ದಬ್ಬೆಯವರಿಗೆ ನೀಡಿದ್ದು, ಅವರ ಅನಾರೋಗ್ಯದ ಕಾರಣ ಅವರನ್ನು ಆಹ್ವಾನಿಸಿ ಸನ್ಮಾನ ಮಾಡಲಾಗದ ಕಾರಣ ನಾವೇ- ಅಧ್ಚಕ್ಷರಾದ ಪ್ರೊ.ಚಂದ್ರಮೋಹನ್, ಕಾರ್ಯದರ್ಶಿ ಲಕ್ಷ್ಮೀಪತಿ ಕೋಲಾರ, ಸದಸ್ಯರಾದ ನಾನು ಮತ್ತು ರಾಮಲಿಂಗಪ್ಪ ಬೇಗೂರು ಅವರ ಊರಿಗೇ ಹೋಗಿ ಪ್ರಶಸ್ತಿ ಪ್ರದಾನ ಮಾಡಿಬಂದೆವು. ಪ್ರಶಸ್ತಿ ರೂ.10000 ನಗದು, ಬುದ್ಧನ ವಿಗ್ರಹ ಹಾಗೂ ಫಲಕವೊಂದನ್ನು ಒಳಗೊಂಡಿದೆ.



ಡಾ.ಎಲ್.ಬಸವರಾಜು ಪ್ರಶಸ್ತಿ 2012

ಕನ್ನಡದ ಮೊದಮೊದಲ ಸ್ತ್ರೀವಾದಿ ಎಂಬ ಅಗ್ಗಳಿಕೆಯ ಲೇಖಕಿ ಡಾ.ವಿಜಯಾ ದಬ್ಬೆ. ನೇರ ಹಾಗೂ ನಿಷ್ಠುರ ಮಾತು ಮತ್ತು ನಡವಳಿಕೆಯ ಮೂಲಕ ಎಪ್ಪತ್ತು-ಎಂಬತ್ತರ ದಶಕದಲ್ಲಿ ಕನ್ನಡ ಸಾರಸ್ವತ ಲೋಕದ ತೀವ್ರ ಗಮನ ಸೆಳೆದವರು. ಮಾತಿನಲ್ಲಿ ಹರಿತವಿರುವಂತೆ ಬರವಣಿಗೆಯಲ್ಲೂ ಖಚಿತತೆ ಮತ್ತು ಪ್ರಾಮಾಣಿಕತೆಗಲ ಜೀವ ಎರೆವ ಅಪರೂಪದ ಲೇಖಕಿ ವಿಜಯಾ ದಬ್ಬೆ. `ಇರುತ್ತವೆ', `ನೀರು ಲೋಹದ ಚಿಂತೆ', `ತಿರುಗಿ ನಿಂತ ಪ್ರಶ್ನೆ', `ಇತಿಗೀತಿಕೆ' ಎಂಬ ನಾಲ್ಕು ಕವನಸಂಕಲನಗಳು, `ನಯಸೇನ', `ಸಂಪ್ರತಿ', ಮಹಿಳೆ, ಸಾಹಿತ್ಯ, ಸಮಾಜ', `ನಾರಿ ದಾರಿ ದಿಗಂತ', `ಅನುಪಮಾ ನಿರಂಜನ' ಮತ್ತು `ಮಹಿಳೆ ಮತ್ತು ಮಾನವತೆ' ಎಂಬ ಆರು ವಿಮರ್ಶಾ ಸಂಕಲನಗಳು, `ನಾಗಚಂದ್ರ- ಒಂದು ಅಧ್ಯಯನ', `ಹಿತೈಷಿಯ ಹೆಜ್ಜೆಗಳು' ಮತ್ತು `ಸಾರ ಸರಸ್ವತಿ' ಎಂಬ ಮೂರು ಮಹತ್ವದ ಸಂಶೋಧನಾ ಕೃತಿಗಳಷ್ಟೇ ಅಲ್ಲದೆ ಸಂಪಾದನೆ, ವ್ಯಕ್ತಿಚಿತ್ರ, ಪ್ರವಾಸ ಹಾಗೂ ಅನುವಾದಗಳೊಂದಿಗೆ ಕನ್ನಡ ಸಾಹಿತ್ಯಲೋಕವನ್ನು ಶ್ರೀಮಂತಗೊಳಿಸಿದವರು.
ವಿಜಯಾ ದಬ್ಬೆ ಅವರು ಮಾನವೀಯ ಚಿಂತನೆ ಮತ್ತು ಪ್ರಗತಿಪರ ಆಶಯಗಳ ಲೇಖಕಿಯಾಗಿದ್ದು, ತಮ್ಮ ನಂಬಿಕೆ ಮತ್ತು ಚಿಂತನೆಗಳಿಗೆ ತಕ್ಕಂತೆಯೇ ಎಲ್ಲ ಬಗೆಯ ಕಂದಾಚಾರಗಳನ್ನೂ ಬದಿಗೊತ್ತಿ ಬದುಕಿ ತೋರಿದ ಧೀಮಂತೆ. ತಮ್ಮ ದಿಟ್ಟ ಬರವಣಿಗೆಗಳಿಂದ ಈ ನಾಡಿನ ಸಾಕ್ಷಿ ಪ್ರಜ್ಞೆಯನ್ನು ಕಲಕುತ್ತಿದ್ದ ಈ ಲೇಖಕಿ ಈಗ ಮಗುವಿನ ಮುಗ್ಧತೆಯಲ್ಲಿ ಮಾಗಿದಂತೆ ಕಾಣುತ್ತಿದ್ದಾರೆ.

ಡಾ. ವಿಜಯಾ ದಬ್ಬೆಯವರ ತಾಯಿ ಮತ್ತು ತಂದೆ

ಡಾ. ವಿಜಯಾ ದಬ್ಬೆಯವರ ಅನುಮಪವಾದ ಸಾರಸ್ವತ ಸಾಧನೆಗೆ ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, 1979ರ ವರ್ಧಮಾನ ಸಾಹಿತ್ಯ ಪ್ರಶಸ್ತಿ, 2008ರ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗಲು ಸಲ್ಲುವುದರ ಮೂಲಕ ಕನ್ನಡ ಮನಸ್ಸು ಪದೇಪದೇ ವಿಜಯಾ ದಬ್ಬೆಯವರನ್ನು ಪ್ರೀತಿಯಿಂದ ಸ್ಮರಿಸಿಕೊಂಡಿದೆ. ಅಂತಹ ಅವಕಾಶ ಈ ಬಾರಿ ನಮ್ಮದು. ನಮ್ಮ ಪ್ರತಿಷ್ಠಾನವು ಕನ್ನಡದ ಧೀಮಂತ ಲೇಖಕಿಯೊಬ್ಬರಿಗೆ ಮೊದಲ ಬಾರಿಗೆ ಪ್ರಶಸ್ತಿ ನೀಡುತ್ತಿರುವುದು ನಮ್ಮ ಹೆಮ್ಮೆ. ಇದು ಮಹಿಳೆ ಮತ್ತು ಮಾನವತೆಗೆ ನಾವು ಸಲ್ಲಿಸುತ್ತಿರುವ ಪ್ರೀತಿಯ ಗೌರವ. ದಬ್ಬೆಯ ಈ ಸಾರ ಸರಸ್ವತಿಗೆ ನಮಸ್ಕಾರ.

ಅಧ್ಯಕ್ಷರು ಮತ್ತು ಸದಸ್ಯರು
ಡಾ.ಎಲ್.ಬಸವರಾಜು ಪ್ರತಿಷ್ಠಾನ (ರಿ), ಕೋಲಾರ

1 ಕಾಮೆಂಟ್‌:

Prashanth ಹೇಳಿದರು...

ಸರ್, ಡಾ.ಎಲ್.ಬಸವರಾಜು ಪ್ರಶಸ್ತಿ ಬಗ್ಗೆ ತಿಳಿದು ಅತ್ಯಂತ ಸಂತಸವಾಯಿತು. ತಮ್ಮ ತಂಡದ ಉದ್ದೇಶ, ಶ್ರಮ ಮತ್ತು ಬದ್ಧತೆ ಶ್ರೇಷ್ಠವಾದುದು. ವಿಶಿಷ್ಟವಾದ ಈ ಕನ್ನಡ ಸೇವೆಯು ಸದಾಕಾಲ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇನೆ..