`ಸುಧಾ' (27/6/2013) ವಾರಪತ್ರಿಕೆಯಲ್ಲಿ ಪ್ರಕಟವಾಗಿರುವ ನನ್ನ ಲೇಖನ: `ನೆಸ್ಸೀ ಎಂಬ ಜಲರಕ್ಕಸನ ಜಾಡು ಅರಸಿ'
ಒಮ್ಮೆ ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯರು ಊರಿನ ಜನಗಳಿಗೆ ಒಂದು ಸುಳ್ಳು ಹೇಳಿ ತಮಾಷೆ ಮಾಡೋಣವೆಂದು ನಿರ್ಧರಿಸಿದರು. ನಸ್ರುದ್ದೀನ್ ಊರಿನ ಜನರನ್ನೆಲ್ಲಾ ಸೇರಿಸಿ ಊರಿನ ಪಕ್ಕದಲ್ಲಿರುವ ಬೆಟ್ಟದ ಒಂದು ನಿರ್ದಿಷ್ಟ ಸ್ಥಳದಲ್ಲಿ ನಿಧಿಯಿದೆ ಎಂದು ಹೇಳಿ ಆ ನಿಧಿಯನ್ನು ಮತ್ತು ಅದು ಇರುವ ಸ್ಥಳವನ್ನು ತಾನೇ ಸ್ವತಃ ಕಂಡವನಂತೆ ವರ್ಣರಂಜಿತವಾಗಿ ವಿವರಿಸಿದ. ಆತನ ಮಾತನ್ನು ನಂಬಿದ ಜನರೆಲ್ಲಾ ಆ ನಿಧಿಯನ್ನು ಪಡೆಯಲು ಬೆಟ್ಟದೆಡೆಗೆ ಓಡತೊಡಗಿದರು. ನಸ್ರುದ್ದೀನ್ ಸಹ ಅವರ ಜೊತೆ ಓಡತೊಡಗಿದ. ಅದನ್ನು ನೋಡಿದ ಆತನ ಗೆಳೆಯ ‘ನೀನ್ಯಾಕೆ ಅವರ ಜೊತೆ ಓಡುತ್ತಿದ್ದೀಯೆ? ನಿಧಿ ಇದೆಯೆಂಬ ಸುಳ್ಳು ಕತೆ ಕಟ್ಟಿದವರು ನಾವೇ ಅಲ್ಲವೆ?’ ಎಂದು ಕೇಳಿದ್ದಕ್ಕೆ, ‘ಅಷ್ಟೊಂದು ಜನ ನನ್ನ ಮಾತನ್ನು ನಂಬಿದರಲ್ಲಾ! ಅಲ್ಲಿ ನಿಧಿ ಇರುವುದು ನಿಜವೇ ಇದ್ದರೂ ಇರಬಹುದೇನೋ!’ ಎಂದು ಹೇಳಿ ಜನರ ಜೊತೆ ಬೆಟ್ಟದೆಡೆಗೆ ಓಡುವುದನ್ನು ಮುಂದುವರಿಸಿದ.
ಲಂಡನ್‍ನಿಂದ ಸ್ಕಾಟ್‍ಲೆಂಡಿನ ಗ್ಲಾಸ್ಗೋಗೆ ವರ್ಜಿನ್ ಟ್ರೈನ್ ನಲ್ಲಿ ನಡೆಸಿದ್ದ ನಮ್ಮ ಪಯಣ ಮುಲ್ಲಾ ನಸ್ರುದ್ದೀನನ ಓಟದಂತೆಯೇ ಇದ್ದಿರಬಹುದೆನ್ನಿಸುತ್ತದೆ. ದಂತಕತೆಯಾಗಿರುವ ನೆಸ್ಸೀ ಎಂಬ ದೈತ್ಯ ಪ್ರಾಣಿ ಇಲ್ಲವೆನ್ನುವುದು ವೈಜ್ಞಾನಿಕವಾಗಿ ಬಹುಪಾಲು ಖಚಿತವಾಗಿದ್ದರೂ ಆ ದಂತಕತೆಗೆ ಕಾರಣವಾಗಿರುವ ಸುಂದರ `ಸರೋವರ’ವನ್ನು ನೋಡುವುದೂ ನಮ್ಮ ಉದ್ದೇಶಗಳಲ್ಲೊಂದಾಗಿತ್ತು. ಅಷ್ಟಲ್ಲದೆ ಈ ನೆಸ್ಸೀ ಎಂಬ ದೈತ್ಯ ರಕ್ಕಸ ಜಲಜೀವಿಯ ಕಲ್ಪನೆ ಹಲವಾರು ದೇಶಗಳ ವಿಜ್ಞಾನಿಗಳಲ್ಲಿ ಸಾಕಷ್ಟು ಸಂಚಲನ ಉಂಟುಮಾಡಿದೆ ಹಾಗೂ ಅವರು ಅದರ ಅಸ್ತಿತ್ವದ ಬಗೆಗೆ ಗಂಭೀರ ಸಂಶೋಧನೆಗಳನ್ನು ಸಹ ಕೈಗೊಳ್ಳುವಂತೆ ಮಾಡಿದೆ. ನೆಸ್ಸಿಯ ಅಸ್ತಿತ್ವದಲ್ಲಿ ನಂಬಿಕೆ ಇರಿಸಿಕೊಂಡಿರುವ ಹಲವಾರು ಜನ ಅದರ ಹೆಸರಲ್ಲಿ ವಿವಿಧ ಸಂಘಸಂಸ್ಥೆಗಳನ್ನು ಸ್ಥಾಪಿಸಿಕೊಂಡಿವೆ. ಸ್ಕಾಟ್‍ಲೆಂಡಿನ ಪ್ರವಾಸೋದ್ಯಮ ಸಂಘಟನೆಯಾದ ಸ್ಕಾಟಿಶ್ ಟ್ರಾವೆಲರ್ಸ್ ಅಸೋಸಿಯೇಶನ್ `ವದಂತಿಗಳಿರುವಂತೆ ನಾವು ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ನೆಸ್ಸಿಯನ್ನು ಖಂಡಿತಾ ಹುಟ್ಟುಹಾಕಿಲ್ಲ’ ಎನ್ನುವ ಹೇಳಿಕೆಯನ್ನು ಸಹ ಕೊಟ್ಟಿದ್ದಾರೆ. ಇಷ್ಟೆಲ್ಲಾ ಸುದ್ದಿ ಮಾಡಿರುವ ಲಾಖ್ ನೆಸ್ ನೋಡಲೇಬೇಕು ಎಂದು ತೀರ್ಮಾನ ಮಾಡಿದ್ದೆವು. ಇದರ ಜೊತೆಗೆ ಸ್ಕಾಟ್‍ಲೆಂಡ್ ಅದ್ಭುತ ನಿಸರ್ಗ ಸಿರಿಯ ಪ್ರದೇಶವೆನ್ನುವುದರಲ್ಲಿ ಎರಡು ಮಾತಿಲ್ಲ.
ಬೆಂಗಳೂರಿನಿಂದಲೇ ಗ್ಲಾಸ್ಗೋದಲ್ಲಿನ ಹೋಟೆಲ್ ಬುಕ್ ಮಾಡಿದ್ದೆ ಹಾಗೂ ಪ್ರಯಾಣಕ್ಕೆಂದು ಬ್ರಿಟ್‍ರೇಲ್ ಪಾಸ್ ಸಹ ಕೊಂಡಿದ್ದೆ. ಅಷ್ಟಲ್ಲದೆ ಲಾಖ್ ನೆಸ್ ಪ್ರಯಾಣಕ್ಕೆ ಗ್ಲಾಸ್ಗೋನಿಂದ ಟೂರ್ ಸಹ ಬುಕ್ ಮಾಡಿದ್ದೆ. ಅದರ ಪ್ರಕಾರ ನಾವು ಮರುದಿನ ಬೆಳಿಗ್ಗೆ ಎಂಟು ಗಂಟೆಗೆ ಗ್ಲಾಸ್ಗೋದ ಜಾರ್ಜ್ ಸ್ಕ್ವೇರ್‍ನಲ್ಲಿ ಸೇರಬೇಕಿತ್ತು. ಗ್ಲಾಸ್ಗೊ ತಲುಪಿದ ದಿನ ಸಂಜೆಯೇ ಸಮಯವಿದ್ದುದರಿಂದ ಹಾಗೂ ಅದು ನಾವಿದ್ದ ಹೋಟೆಲಿನಿಂದ ಕಾಲುನಡಿಗೆಯ ದೂರದಲ್ಲೇ ಇದ್ದುದರಿಂದ ರೂಮಿನಲ್ಲಿ ಲಗೇಜು ಇರಿಸಿ ಜಾರ್ಜ್‍ಸ್ಕ್ವೇರ್ ಕಡೆಗೆ ಹೊರಟೆವು. ಗೋಥಿಕ್ ಶೈಲಿಯ ಕಟ್ಟಡಗಳ ನಡುವೆ ನಡೆದಾಡುವುದು ಸ್ಕಾಟ್‍ಲೆಂಡಿನ ಮಧ್ಯಕಾಲೀನ ಯುಗದಲ್ಲಿ ನಡೆದಾಡುವಂತಿತ್ತು.
ಗ್ಲಾಸ್ಗೋದ ಜಾರ್ಜ್ ಸ್ವೇರ್
ಮರುದಿನ ಬೆಳಿಗ್ಗೆ ಸೂಚಿಸಿದ ಸ್ಥಳದಲ್ಲಿ ನಿಂತಿದ್ದ ನಮ್ಮನ್ನು ಕರೆದೊಯ್ಯಲು ರಬ್ಬೈ ಟೂರ್ಸ್‍ನ ಚಾಲಕ ತನ್ನ ಹದಿನಾಲ್ಕು ಸೀಟರ್‍ನ ಮಿನಿ ಬಸ್ಸಿನಲ್ಲಿ ಬಂದು ಪರಿಚಯ ಮಾಡಿಕೊಂಡ. ಆ ಟೂರಿಗೆ ಬುಕ್ ಮಾಡಿದ್ದವರಲ್ಲಿ ನಾವು ಅಲ್ಲಿ ಐದು ಜನ ಮಾತ್ರ ಇದ್ದೆವು- ನಾವಿಬ್ಬರು, ಇಸ್ರೇಲಿನ ಇಬ್ಬರು ಮಹಿಳೆಯರು ಮತ್ತು ಪೋರ್ಚುಗಲ್‍ನ ಒಬ್ಬ ಮಹಿಳೆ. ಸ್ಕಾಟ್‍ಲೆಂಡಿನ ಸಾಂಪ್ರದಾಯಕ ಧಿರಿಸಾದ ಕೆಂಪು ಚೌಕಳಿಯ ಸ್ಕರ್ಟ್ ಧರಿಸಿದ್ದ ಆತ ತನ್ನನ್ನು ಜಾನ್ ಎಂದು ಪರಿಚಯಿಸಿಕೊಂಡ ಆತ ನಾವು ಐದೇ ಜನ ಇದ್ದದ್ದು ಕಂಡು ತನ್ನ ಟ್ರಾವೆಲ್ ಕಂಪೆನಿಯನ್ನು ಹೊಗಳತೊಡಗಿದ. `ನಿಮ್ಮಲ್ಲಿ ಒಬ್ಬರು ಬಂದಿದ್ದರೂ ನಾನು ಕರೆದೊಯ್ತಿದ್ದೆ. ಜನ ಕಡಿಮೆಯೆಂದು ಎಂದಿಗೂ ನಾವು ಇತರ ಟ್ರಾವೆಲ್ಸ್‍ಗಳಂತೆ ಕ್ಯಾನ್ಸಲ್ ಮಾಡುವುದಿಲ್ಲ’ ಎಂದ ತನ್ನ ಸ್ಕಾಟ್ ಇಂಗ್ಲಿಷಿನಲ್ಲಿ. ಆ ದಿನದ ನಮ್ಮ ಗೈಡ್ ಸಹ ಆತನೇ. ಬಸ್ಸು ಹೊರಟಂತೆ ಸ್ಕಾಟ್‍ಲೆಂಡಿನ ಸಾಂಪ್ರದಾಯಕ ಬ್ಯಾಗ್‍ಪೈಪ್ ಸಂಗೀತ ಚಾಲೂ ಮಾಡಿ ವಿವರಣೆ ನೀಡತೊಡಗಿದ. ಲಾಖ್ ನೆಸ್‍ನಲ್ಲಿ ನೆಸ್ಸೀ ಇದೆಯೇ ಎಂದು ಕೇಳಿದ್ದಕ್ಕೆ `ಇಲ್ಲವೇ ಇಲ್ಲ’ವೆನ್ನುವಂತೆ ಕೈ ಸನ್ನೆ ಮಾಡಿದ.
ಸುಂದರ ಸ್ಕಾಟ್‍ಲೆಂಡ್
ಸ್ಕಾಟ್‍ಲೆಂಡ್ ಅದೆಷ್ಟು ಸುಂದರವೋ ಅಷ್ಟೇ ನಿಗೂಢವೂ ಹೌದು. ಹಲವಾರು ನಿಗೂಢಗಳಲ್ಲಿ ಅತ್ಯಂತ ರೋಚಕವಾಗಿರುವುದು ಲಾಖ್ ನೆಸ್ ರಕ್ಕಸ. ಲಾಖ್ ನೆಸ್ ಸರೋವರದಲ್ಲಿ ರಕ್ಕಸ ಪ್ರಾಣಿಯೊಂದಿದೆ ಎಂಬ ನಂಬಿಕೆ ಇತ್ತೀಚಿನದೇನಲ್ಲ. ಶತಶತಮಾನಗಳಿಂದ ಜನ ಅದರ ಬಗ್ಗೆ ಮಾತನಾಡಿಕೊಳ್ಳುತ್ತಾ ಬಂದಿದ್ದಾರೆ. ಸ್ಕಾಟಿಶ್ ಭಾಷೆಯಲ್ಲಿ ಲಾಖ್ ಎಂದರೆ ಕೆರೆ ಅಥವಾ ಸರೋವರ. ಸ್ಕಾಟ್‍ಲೆಂಡಿನ ಜನಪದ ಕತೆಗಳಲ್ಲಿ ಅದರ ಸರೋವರ ಮತ್ತು ನದಿಗಳಲ್ಲಿನ ರಕ್ಕಸಗಳ ಬಗೆಗೆ ಹಲವಾರು ಕತೆಗಳಿವೆ. ಅವಕಾಶ ಸಿಕ್ಕಾಗಲೆಲ್ಲಾ ಅವು ಮನುಷ್ಯರನ್ನು ಕೊಲ್ಲುತ್ತಿದ್ದುದರ ವಿವರಣೆಗಳು ಹಲವಾರು ಭಯಾನಕ ಕತೆಗಳಲ್ಲಿವೆ. ಆ ರಕ್ಕಸ ಪ್ರಾಣಿಗಳಲ್ಲಿ ಜನಪ್ರಿಯವಾಗಿರುವುದು ಕೆಲ್ಪೀ ಎಂಬ ರಕ್ಕಸ. ಅದಕ್ಕೆ ತನಗೆ ಬೇಕಾದ ರೂಪ ಪಡೆಯುವ ಶಕ್ತಿಯಿದ್ದು ಅದು ಸಾಮಾನ್ಯವಾಗಿ ಕುದುರೆಯ ರೂಪ ತಳೆದು ನದಿಯ ಬಳಿ ಬಳಲಿಕೆಯಿಂದ ನಡೆದು ಹೋಗುವ ಪ್ರಯಾಣಿಕರ ಗೆಳೆತನ ಸಾಧಿಸಿ ಅವರು ಕುದುರೆ ದೊರೆಯಿತೆಂದು ಸವಾರಿ ಮಾಡಲು ಹೊರಟಾಗ ಅವರನ್ನು ನೀರಿಗೆ ಕೆಡವಿ ಕೊಂದುಹಾಕುತ್ತಿತ್ತಂತೆ. ಅದು ಕುದುರೆಯ ರೂಪ ತಳೆಯುತ್ತಿದ್ದುದರಿಂದ ಅದನ್ನು ನೀರು ಕುದುರೆ (ವಾಟರ್ ಹಾರ್ಸ್) ಎಂದು ಕರೆಯುತ್ತಿದ್ದರು. ನೆಸ್ಸಿಯನ್ನು ಆಧರಿಸಿಯೇ `ವಾಟರ್ ಹಾರ್ಸ್’ ಎಂಬ ಇಂಗ್ಲಿಶ್ ಚಲನಚಿತ್ರವನ್ನು 2007ರಲ್ಲಿ ತಯಾರಿಸಲಾಗಿದೆ.
ನೆಸ್ಸಿಯನ್ನು ಆಧರಿಸಿದ `ವಾಟರ್ ಹಾರ್ಸ್’ ಎಂಬ ಇಂಗ್ಲಿಶ್ ಚಲನಚಿತ್ರ
ಒಂದು ದಂತಕತೆಯ ಪ್ರಕಾರ 13ನೇ ಶತಮಾನದಲ್ಲಿ ಸಂತ ಕೊಲಂಬ ಎಂಬ ಐರಿಶ್ ಕ್ರೈಸ್ತ ಧರ್ಮ ಪ್ರಚಾರಕ ಒಮ್ಮೆ ತನ್ನ ಸಹಚರರೊಡನೆ ನೆಸ್ ನದಿಯ ದಡದಲ್ಲಿ ಪ್ರಯಾಣಿಸುತ್ತಿದ್ದಾಗ ಆ ನದಿಯಲ್ಲಿದ್ದ ಜಲರಕ್ಕಸ ಅವರ ಮೇಲೆ ದಾಳಿ ಮಾಡಿ ಒಬ್ಬನನ್ನು ಕೊಂದು ಮತ್ತೊಬ್ಬನನ್ನು ಕೊಲ್ಲಲು ದಾಳಿ ಮಾಡಿದಾಗ ಸಂತ ಕೊಲಂಬ ತನ್ನ ಗಡಸು ಹಾಗೂ ಏರು ದನಿಯಲ್ಲಿ ಅದನ್ನು ಗದರಿ ನದಿಗೆ ಹಿಂದಿರುಗುವಂತೆ ಆದೇಶಿಸಿದ. ಆತನ ದನಿಗೆ ಹೆದರಿಯೋ ಏನೊ ಜಲರಕ್ಕಸ ನದಿಗೆ ಹಿಂದಿರುಗಿತಂತೆ.
ಲಾಖ್ ನೆಸ್ ಸರೋವರದಲ್ಲಿ ಇದೆಯೆನ್ನಲಾಗುವ ಹಾಗೂ ಅಲ್ಲಿನ ಜನರು ಪ್ರೀತಿಯಿಂದ `ನೆಸ್ಸೀ’ ಎಂದು ಕರೆಯಲ್ಪಡುವ ಈ ಜಲರಕ್ಕಸ ಬಹುಶಃ ಒಂದು ಸಾಧು ಪ್ರಾಣಿಯಿರಬಹುದು- ಹಲವಾರು ಜನರನ್ನು `ಹೆದರಿಸಿರಬಹುದು’, ಅದರೆ ಇದುವರೆಗೆ ಅದು ಯಾರನ್ನೂ ತಿಂದಿರುವ, ತೊಂದರೆ ನೀಡಿರುವ ಕತೆಗಳ ಉದಾಹರಣೆಗಳಿಲ್ಲ.
ಲಾಖ್ ನೆಸ್ ಸರೋವರ ಸುಮಾರು 38 ಕಿ.ಮೀ.ಗಳಷ್ಟು ಉದ್ದವಿದೆ ಹಾಗೂ ಅದು ಅತಿ ಹೆಚ್ಚು ಅಗಲವಿರುವ ಕಡೆ ಸುಮಾರು 1.6 ಕಿ.ಮೀ.ಗಳಷ್ಟು ಅಗಲವಿದೆ- ಈ ದಡದಲ್ಲಿ ನಿಂತರೆ ಆ ದಡ ಕಾಣುತ್ತದೆ. ಅದರ ಆಳ 800 ಅಡಿಗಳವರೆಗೂ ಇದೆ. ಅದರ ವಿಸ್ತೀರ್ಣ 61 ಚದರ ಕಿ.ಮೀ.ಗಳು. ಗ್ರೇಟ್ ಬ್ರಿಟನ್ನಿನಲ್ಲಿ ಇದೇ ಅತಿ ದೊಡ್ಡ ಸರೋವರ. ಲಾಖ್ ನೆಸ್ ಸರೋವರದ ನಿಗೂಢತೆಗೆ ಮತ್ತೊಂದು ಕಾರಣವಿದೆ. ಸುತ್ತಮುತ್ತಲ ನದಿಗಳಿಂದ ಲಾಖ್ ನೆಸ್‍ಗೆ ಹರಿದುಬರುವ ನೀರು ಪೀಟ್ ಅಥವಾ ಸಸ್ಯಾಂಗಾರದ ಕಣಗಳನ್ನು ಹೊತ್ತು ತಂದಿರುವುದರಿಂದ ನೀರು ಒಂದು ರೀತಿಯ ಕಡು ಕಂದು ಬಣ್ಣವಿದ್ದು 13 ಅಡಿಗಳಿಗಿಂತ ಕೆಳಕ್ಕೆ ಸೂರ್ಯನ ಬೆಳಕೇ ಪ್ರವೇಶಿಸುವುದಿಲ್ಲ. ಲಾಖ್ ನೆಸ್‍ನ ತಳವೊಂದು ಕತ್ತಲ ಸಾಮ್ರಾಜ್ಯ. ಅಲ್ಲದೆ ಆ ಸರೋವರ ರೂಪುಗೊಂಡಿರುವುದು ಒಂದು ಬೃಹತ್ ಕಣಿವೆಯಲ್ಲಿ. ಹಾಗಿರುವಾಗ ಅದು ರಕ್ಕಸ ಪ್ರಾಣಿಯೊಂದು ಅವಿತಿರಲು ಪ್ರಶಸ್ತ ಸ್ಥಳವಲ್ಲವೆ?
ಲಾಖ್ ನೆಸ್ ಸರೋವರ
ನೆಸ್ಸೀ ಹೆಚ್ಚು ಸುದ್ದಿಯಾದದ್ದು 1933ರಲ್ಲಿ. ಸ್ಕಾಟ್‍ಲೆಂಡಿನ ವೃತ್ತ ಪತ್ರಿಕೆಗಳಲ್ಲಿ ಆಗಾಗ ನೆಸ್ಸಿಯನ್ನು ಕಂಡಿದ್ದಾರೆನ್ನುವ ಸಣ್ಣ ಸಣ್ಣ ಸುದ್ದಿಗಳು ಆಗಾಗ ಪ್ರಕಟವಾಗುತ್ತಿತ್ತು. ಆದರೆ 1933ರ ಮೇ 2ರ `ದ ಇನ್‍ವರ್ನೆಸ್ ಕೊರಿಯರ್’ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ ಜಾನ್ ಮ್ಯಾಕ್‍ಕೆ ಮತ್ತು ಆತನ ಪತ್ನಿ ತಮ್ಮ ಕಾರಿನಲ್ಲಿ ಲಾಖ್‍ನ ಉತ್ತರದ ತೀರದಲ್ಲಿ ಹೊರಟಿದ್ದಾಗ ನೀರಿನಲ್ಲಿ (ಸುಮಾರು 1.2 ಕಿ.ಮೀ ದೂರದಲ್ಲಿ) ಒಂದು ಅದ್ಭುತ ಪ್ರಾಣಿಯೊಂದು ಈಜುತ್ತಿದ್ದುದು ಕಾಣಿಸಿತು. “ಆ ಪ್ರಾಣಿ ಸುಮಾರು ಒಂದು ನಿಮಿಷ ನೀರಿನಲ್ಲಿ ಹೊರಳಾಡುತ್ತಿತ್ತು, ಅದರ ದೇಹ ತಿಮಿಂಗಲದಂತಿತ್ತು ಹಾಗೂ ಅದರ ಸುತ್ತಲಿದ್ದ ನೀರು ಹಂಡೆಯಲ್ಲಿದ್ದ ನೀರಿನಂತೆ ಕುದಿಯುತ್ತಿತ್ತು. ಕೆಲ ಸಮಯದ ನಂತರ ಅದು ಕುದಿಯುವ ನೀರಿನ ನೊರೆಯಂತಿದ್ದ ನೀರಿನಲ್ಲಿ ಕಣ್ಮರೆಯಾಯಿತು’ ಎಂದಿದ್ದರು ಅದನ್ನು ಕಣ್ಣಾರೆ ಕಂಡಿದ್ದ ಜಾನ್. ಆ ಲೇಖನ ಪ್ರಕಟವಾದ ಕೆಲತಿಂಗಳುಗಳ ನಂತರ ಕೆಲವೊಂದ ವಿಷಯಗಳು ಹೊರಬಿದ್ದವು. ಜಾನ್ ಮ್ಯಾಕ್‍ಕೆ ಆ ದಿನ ವಾಹನ ನಡೆಸುತ್ತಿದ್ದರು ಹಾಗೂ ಅವರು ಏನೂ ಕಂಡಿರಲಿಲ್ಲ. ಆ `ಪ್ರಾಣಿ’ಯನ್ನು ನೋಡಿದ್ದುದು ಆತನ ಪತ್ನಿ. ಆದರೆ ಆಕೆ ಕಂಡಿದ್ದುದು ಸುಮಾರು ನೂರುಗಜಗಳ ದೂರದ ನೀರಿನಲ್ಲಿ ಕಿತ್ತಾಡುತ್ತಿದ್ದ ಎರಡು ಬಾತುಕೋಳಿಗಳನ್ನು! ಆದರೆ ಆ ಲೇಖನ ಬರೆದಿದ್ದ ಅಲೆಕ್ಸ್ ಕ್ಯಾಂಪ್‍ಬೆಲ್ ಎಂಬಾತನಿಗೆ ಲಾಖ್ ನೆಸ್‍ನಲ್ಲಿ ರಕ್ಕಸ ಪ್ರಾಣಿ ಇರುವುದು ನಿಜವೆಂಬುದನ್ನು ಹೇಗಾದರೂ ಸಾಬೀತುಗೊಳಿಸಬೇಕಾಗಿತ್ತು!
ಲಾಖ್ ನೆಸ್ ಸರೋವರ
ಆದರೂ ಆ ಲೇಖನ ಪ್ರಕಟವಾದ ನಂತರ ಜನ ಚುರುಕಾದರು. ನೀರಿನಲ್ಲಿ ಏನೇ ಅಸ್ಪಷ್ಟ ಚಟುವಟಿಕೆ ಕಂಡರೂ ಅದನ್ನು `ನೆಸ್ಸಿ’ ಎನ್ನತೊಡಗಿದರು. ಅದೇ ವರ್ಷದ ಜುಲೈ ತಿಂಗಳಿನಲ್ಲಿ ಸ್ಥಳೀಯರಾದ ಜಾರ್ಜ್ ಸ್ಪೈಸರ್ ಮತ್ತು ಆತನ ಪತ್ನಿ ದಕ್ಷಿಣದ ತೀರದಲ್ಲಿ ತಮ್ಮ ಕಾರಿನಲ್ಲಿ ಹೋಗುತ್ತಿದ್ದಾಗ ಒಂದು `ಕುರೂಪ’ ಪ್ರಾಣಿಯೊಂದು ಬಾಯಲ್ಲಿ ಕುರಿಮರಿಯನ್ನು ಕಚ್ಚಿಕೊಂಡು ನೀರಿಗೆ ತೆವಳುತ್ತಾ ಹೋಯಿತೆಂದು ವರದಿ ಮಾಡಿದರು. ಮೊದಲಿಗೆ ಆ ಪ್ರಾಣಿಯ ಉದ್ದ 2 ಮೀಟರ್ ಇತ್ತೆಂದರು. ಅದು ಬಾಯಿಂದ ಬಾಯಿಗೆ ತಲುಪಿ ಕೊನೆಗೆ 9 ಮೀಟರ್ ಉದ್ದದ ಪ್ರಾಣಿಯೆಂಬ ಸುದ್ದಿಯಾಯಿತು. ಅದನ್ನು ನಂಬದಿರುವವರು ಆ ರೀತಿ ತೆವಳುತ್ತಾ ಹೋಗುವ ಪ್ರಾಣಿ ನೀರುನಾಯಿಯೇ ಇರಬಹುದೆಂದರು. ಏಕೆಂದರೆ ಆ ಪ್ರದೇಶದಲ್ಲಿ ಬೇಕಾದಷ್ಟು ನೀರುನಾಯಿಗಳಿದ್ದವು ಹಾಗೂ ಅವು ಆಗಾಗ ತಮ್ಮದೇ ಮರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಕೊಂಡೊಯ್ಯುತ್ತವೆ, ಕುರಿಮರಿಗಳನ್ನಲ್ಲ. ಆದರೂ ಈ ಸುದ್ದಿಯೂ ಜನರಲ್ಲಿ ಕುತೂಹಲ ಹೆಚ್ಚಿಸಿತು.
ಸ್ಪೈಸರ್‍ರವರ ಈ ಸುದ್ದಿ ಪ್ರಕಟವಾದ ಕೆಲತಿಂಗಳುಗಳ ನಂತರ, ಅಂದರೆ ನವೆಂಬರ್ 1933ರಂದು ನೆಸ್ಸಿಯ ಮೊಟ್ಟಮೊದಲ ಫೋಟೊ ಗ್ಲಾಸ್ಗೋದ `ದ ಡೈಲಿ ರೆಕಾರ್ಡ್’ ವೃತ್ತಪತ್ರಿಕೆಯಲ್ಲಿ ಪ್ರಕಟವಾಯಿತು. ಹ್ಯೂ ಗ್ರೇ ಎಂಬ ಛಾಯಾಚಿತ್ರಕಾರ ತೆಗೆದ ಫೋಟೋ ನಕಲಿಯದು ಎಂಬುದು ರುಜುವಾತಾಗಿದೆ. ಅದೇ ರೀತಿ ಟಿಮ್ ಡಿನ್ಸ್‍ಡೇಲ್ ಎಂಬಾತ ವೀಡಿಯೋ ಚಿತ್ರೀಕರಣ ಮಾಡಿ ಅದು ನೆಸ್ಸಿಯದು ಎಂದೇ ವಾದಿಸಿದ. ವಿಜ್ಞಾನಿಗಳು ಅದನ್ನೂ ನೆಸ್ಸಿಯದಲ್ಲ ಎಂದು ತಿರಸ್ಕರಿಸಿದರು. ಆದರೆ ಹೆಚ್ಚು ಪ್ರಸಿದ್ಧವಾದುದು `ಸರ್ಜನ್ಸ್ ಫೋಟೋಗ್ರಾಫ್’ ಎಂದು ಜನಪ್ರಿಯವಾಗಿರುವ ಡಾ.ರಾಬರ್ಟ್ ಕೆನೆತ್ ವಿಲ್ಸನ್ ತೆಗೆದ ಫೋಟೊ. 1934ರಲ್ಲಿ ಲಂಡನ್‍ನ ವೈದ್ಯ ಡಾ.ವಿಲ್ಸನ್ ಒಂದು ಫೋಟೊ ತೆಗೆದು ಅದು ನಿಜವಾದ ನೆಸ್ಸಿಯದು ಎಂದು ಅದನ್ನು 21ರ ಏಪ್ರಿಲ್ 1934ರ `ಡೈಲಿ ಮೇಲ್’ ಪತ್ರಿಕೆಯಲ್ಲಿ ಪ್ರಕಟಿಸಿದ. ಅದರ ಬಗೆಗೆ 1993ರವರೆಗೂ ವಾದ ವಿವಾದಗಳು ನಡೆಯುತ್ತಿದ್ದು ಕೊನೆಗೆ ಅದು ಕೇವಲ ಗೊಂಬೆಯೊಂದರ ಫೋಟೊ ಎಂಬುದು ರುಜುವಾತಾಗಿದೆ.
`ಸರ್ಜನ್ಸ್ ಫೋಟೋಗ್ರಾಫ್’ ಎಂದು ಜನಪ್ರಿಯವಾಗಿರುವ ನೆಸ್ಸಿಯ ಚಿತ್ರ. ಅದು ಪುಟ್ಟ ಗೊಂಬೆಯೊಂದರ ಚಿತ್ರ ಎಂಬುದು ರುಜುವಾತಾಗಿದೆ.
ಮುವ್ವತ್ತರ ದಶಕದಿಂದ ಇಂದಿಗೂ ನೆಸ್ಸಿಯ ಬಗ್ಗೆ ಸಂಶೋಧನೆಗಳು ನಡೆಯುತ್ತಲೇ ಇವೆ. 1962ರಲ್ಲಿ ಲಾಖ್ ನೆಸ್ ಫೆನಾಮೆನಾ ಇನ್‍ವೆಸ್ಟಿಗೇಶನ್ ಬ್ಯೂರೊ (ಎಲ್.ಎನ್.ಐ.ಬಿ.) ಎಂಬ ಸಂಸ್ಥೆ ಪ್ರಾರಂಭವಾಗಿ ನೆಸ್ಸಿಗಾಗಿ ಒಂದು ದಶಕದ ಕಾಲ ಹುಡುಕಾಡಿದರು. ಅವರು ಮಿನಿ ಸಬ್‍ಮರೀನ್‍ಗಳನ್ನು ಬಳಸಿ ಲಾಖ್ ನೆಸ್ ಸರೋವರದ ತಳವನ್ನೆಲ್ಲಾ ಜಾಲಾಡಿದರು. 1972ರಲ್ಲಿ ಅವರ ಜೊತೆಗೆ ಅಮೆರಿಕದ ವಿಜ್ಞಾನಿ ರಾಬರ್ಟ್ ರೈನ್ ಸಹ ಜೊತೆಗೂಡಿ ಸೋನಾರ್ ಮತ್ತು ಕ್ಯಾಮೆರಾ ಬಳಸಿ ಸರೋವರದ ತಳದಲ್ಲಿ ನೆಸ್ಸಿಯ ಚಿತ್ರಗಳನ್ನು ದಾಖಲಿಸಿದರು ಯತ್ನಿಸಿದರು.
1975ರಲ್ಲಿ ಪುನಃ ರೈನ್‍ರವರು ಮತ್ತೊಮ್ಮೆ ಸೋನಾರ್ ಹಾಗೂ ಕ್ಯಾಮೆರಾ ಬಳಸಿ `ದೈತ್ಯ ತಲೆಯ, ಎರಡು ಕೊಂಬುಗಳಿರುವ ಪ್ರಾಣಿ’ಯಂತಹ ಆಕಾರವನ್ನು ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರು. ತಾವು ಖಂಡಿತಾ ನೆಸ್ಸಿಯನ್ನು ಕಂಡುಹಿಡಿದೆವೆಂಬ ಸಂತೋಷದಿಂದ ಅವರು ಹಾಗೂ ಎಲ್.ಎನ್.ಐ.ಬಿ.ನ ಸಂಸ್ಥೆಯ ನಿರ್ದೇಶಕರಾದ ಸರ್ ಪೀಟರ್ ಸ್ಕಾಟ್‍ರವರು ಒಂದು ಪತ್ರಿಕಾ ಗೋಷ್ಠಿ ನಡೆಸಿ ಆ ಪ್ರಾಣಿ ಹೊಸ ಪ್ರಭೇದವೆಂದು ಅದಕ್ಕೆ ನೆಸ್ಸಿಟೆರಾಸ್ ರಾಂಬೊಟೆರಿಕ್ಸ್ ಎಂಬ ವೈಜ್ಞಾನಿಕ ಹೆಸರನ್ನು ಸಹ ನೀಡಿದರು. ಇತರ ವಿಜ್ಞಾನಿಗಳು ಆ ಚಿತ್ರಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ ನಂತರ ಅದು ನೆಸ್ಸಿಯದಲ್ಲವೆಂಬುದು ತಿಳಿಯಿತು.
ಆದರೆ ನೆಸ್ಸಿಯಿರುವುದು ಖಾತ್ರಿಯೆಂಬಂತೆ ಪಟ್ಟು ಬಿಡದ ಟಿಮ್ ಡಿನ್ಸ್‍ಡೇಲ್ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಸ್ಥಳೀಕಳಾದ ಕಾನ್‍ಸ್ಟೆನ್ಸ್ ವೈಟ್ ಎಂಬಾಕೆ ಬರೆದಿರುವ `ಮೋರ್ ದ್ಯಾನ್ ಎ ಲೆಜೆಂಡ್’ ಎಂಬ ಪುಸ್ತಕದಲ್ಲಿ ನಡೆಸಿರುವ ನೂರಾರು ಜನ `ಪ್ರತ್ಯಕ್ಷದರ್ಶಿ’ಗಳ ಸಂದರ್ಶನಗಳನ್ನು ವಿಶ್ಲೇಷಿಸಿ ಒಂದು ಅದ್ಭುತ ತೀರ್ಮಾನಕ್ಕೆ ಬಂದರು. ಅವರ ಪ್ರಕಾರ ನೆಸ್ಸಿ ಎಂಬ ರಕ್ಕಸ ಪ್ರಾಣಿ 9 ಅಡಿ ಉದ್ದದ ಕುತ್ತಿಗೆಯನ್ನು ಹಾಗೂ 10 ಅಡಿ ಉದ್ದದ ಬಾಲವನ್ನು ಹೊಂದಿರುವ ಸುಮಾರು 40 ಅಡಿಗಳಷ್ಟು ಉದ್ದವಿರುವ ಪ್ರಾಣಿ. ಈಜು ರೆಕ್ಕೆಗಳನ್ನು ಹೊಂದಿರುವ ಅದು ಅವರ ಪ್ರಕಾರ ಅದು ಲಕ್ಷಾಂತರ ವರ್ಷಗಳ ಹಿಂದೆ ನಶಿಸಿ ಹೋಗಿರುವ ಡೈನಾಸಾರ್‍ಗಳಲ್ಲಿನ ಪ್ಲೀಸಿಯೋಸಾರಸ್ ಎಂಬ ಡೈನೋಸಾರ್‍ನ ಮುಂದುವರಿದು ಬಂದ ಜೀವಂತ ಸಂತತಿ. ಡಿನ್ಸ್‍ಡೇಲ್ ಹೇಳುವಂತೆ ನೆಸ್ಸಿಯ ಪೂರ್ವಜರು ಬ್ರಿಟಿಷ್ ದ್ವೀಪಗಳ ಸುತ್ತಮುತ್ತಲ ಧೃವ ಸಾಗರಗಳಲ್ಲಿ ಜೀವಿಸಿದ್ದು ಹಿಮಯುಗದ ಮಂಜುಗಡ್ಡೆಗಳು ಕರಗಿದಂತೆ ಸಾಗರದಿಂದ ಪ್ರತ್ಯೇಕವಾಗಿ ಸುಮಾರು ಹನ್ನೆರಡು ಸಾವಿರ ವರ್ಷಗಳಿಂದ ಲಾಖ್ ನೆಸ್ ಸರೋವರದಲ್ಲಿ ಸುತ್ತಮುತ್ತಲ ಭೂಮಿಯಿಂದ ಬಂಧಿತವಾಗಿ ತಮ್ಮ ಸಂತತಿಯನ್ನು ಮುಂದುವರಿಸಿಕೊಂಡು ಬಂದಿವೆ. ಹದಿನಾಲ್ಕು ಕೋಟಿ ವರ್ಷಗಳ ಹಿಂದೆಯೇ ವಿನಾಶಹೊಂದಿದೆಯೆಂದು ನಂಬಲಾಗಿದ್ದ ಸೀಲಾಕ್ಯಾಂತ್ ಎಂಬ ಮೀನು ಇಂದಿಗೂ `ಜೀವಂತ ಪಳೆಯುಳಿಕೆ’ ಎಂದು ಕರೆಯಲ್ಪಟ್ಟು ಜೀವಂತವಾಗಿಲ್ಲವೆ? ಇದಕ್ಕೆ ಪುಷ್ಟಿ ನೀಡುವಂತೆ ಇಂಗ್ಲೆಡ್‍ನ ನಾಟಿಂಗ್‍ಹ್ಯಾಮ್‍ಶೈರ್ ಮುಂತಾದೆಡೆ ಪ್ಲೀಸಿಯೋಸಾರಸ್‍ನ ಪಳೆಯುಳಿಕೆಗಳು ದೊರೆತಿವೆ.
ನೆಸ್ಸೀ ಪ್ಲೀಸಿಯೋಸಾರಸ್ ಎಂಬುದನ್ನು ಸಹ ವಿಜ್ಞಾನಿಗಳು ಅಲ್ಲಗಳೆಯುತ್ತಾರೆ. ಅಂತಹ ದೈತ್ಯ ಪ್ರಾಣಿ ಲಾಖ್ ನೆಸ್ ಎಂಬ ಸುತ್ತಲೂ ಭೂಮಿಯಿಂದ ಬಂಧಿತವಾಗಿರುವ ಸಣ್ಣ ನದಿ ಅಥವಾ ಸರೋವರದಲ್ಲಿ ಇಷ್ಟೊಂದು ಸಾವಿರಾರು ವರ್ಷ ಬದುಕಿ ತನ್ನ ಸಂತತಿ ಮುಂದುವರೆಸಿಕೊಂಡು ಬಂದಿರಲು ಸಾಧ್ಯವೆ? ಆ ರೀತಿಯೇ ಆದಲ್ಲಿ ಆರೋಗ್ಯಕರ ಸಂತತಿ ಮುಂದುವರಿಯಲು ಇರಬೇಕಾದ ಅಗಾಧ ಸಂಖ್ಯೆಯ ನೆಸ್ಸೀಗಳು ಅಲ್ಲಿ ಇವೆಯೆ? ಕಡಿಮೆ ಸಂಖ್ಯೆಯ ನೆಸ್ಸೀಗಳು ತಮ್ಮ ಆಂತರಿಕ ಸಂತಾನವರ್ಧನೆಯಿಂದ (ಇನ್‍ಬ್ರೀಡಿಂಗ್- ಸೋದರ ಸಂಬಂಧಿಗಳ ನಡುವೆ ಸಂತಾನವರ್ಧನೆ) ದುರ್ಬಲಗೊಂಡು, ರೋಗರುಜಿನಗಳಿಗೆ ತುತ್ತಾಗಿ ನಶಿಸಿಹೋಗುವುದಿಲ್ಲವೆ? ನಲವತ್ತು ಅಡಿ ಉದ್ದವಿರುವ ಅಂತಹ ದೈತ್ಯ ಪ್ರಾಣಿಗಳು ಲಾಖ್‍ನೆಸ್‍ನಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರೆ ಅವುಗಳಿಗೆ ಬೇಕಾಗುವಷ್ಟು ಆಹಾರ ಆ ಸರೋವರದಲ್ಲಿ ದೊರಕುತ್ತಿದೆಯೆ? ಅಂತಹ ದೈತ್ಯ ಪ್ರಾಣಿ ತಮ್ಮ ಸಂತಾನವರ್ಧನೆಗೆ ಅವಶ್ಯಕವಿರುವಷ್ಟು ಸಂಖ್ಯೆಯಲ್ಲಿ ಅಲ್ಲಿ ಜೀವಿಸಿದ್ದಲ್ಲಿ ಅವು ಜನರ ಕಣ್ಣಿಗೆ ಕಾಣದಂತೆ ಇರಲು ಸಾಧ್ಯವೆ? ಇವೇ ಮುಂತಾದ ಪ್ರಶ್ನೆಗಳನ್ನು ವಿಜ್ಞಾನಿಗಳು ಮುಂದಿಟ್ಟರು. ಅದಕ್ಕಿಂತ ಮುಖ್ಯವಾಗಿ ಇದುವರೆಗೆ ಏಕೆ ಆ ಪ್ರಾಣಿಯ ಒಂದು ಶವವೂ ದೊರೆತಿಲ್ಲ? 1972ರಲ್ಲಿ ಟೈಮ್ ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ ನೆಸ್ಸಿ ಸುಸೂತ್ರವಾಗಿ ತನ್ನ ಸಂತತಿ ಮುಂದುವರೆಸಿಕೊಂಡು ಹೋಗಬೇಕಾದಲ್ಲಿ ಕನಿಷ್ಠ ಅವುಗಳ ಸಂಖ್ಯೆ ಇಪ್ಪತ್ತಾದರೂ ಇರಬೇಕು. ಆದರೆ ವಿಜ್ಞಾನಿಗಳ ಪ್ರಕಾರ ಅವುಗಳ ಸಂಖ್ಯೆ ಕನಿಷ್ಠ ಐವತ್ತರಿಂದ ಐನೂರಾದರೂ ಇದ್ದಲ್ಲಿ ಅವುಗಳ ಸಂತತಿ ಮುಂದುವರೆಸಲು ಸಾಧ್ಯ.
ಲಾಖ್ ನೆಸ್ ಪ್ರದೇಶದ ಸಾಕಷ್ಟು ಅಧ್ಯಯನ ನಡೆಸಿರುವ ಇಟಲಿಯ ಭೂವಿಜ್ಞಾನಿ ಲೂಗಿ ಪಿಕಾರ್ಡಿ ಲಾಖ್ ನೆಸ್ ಸರೋವರದಲ್ಲಿ ಯಾವ ರಕ್ಕಸ ಪ್ರಾಣಿಯೂ ಇಲ್ಲ. ಆ ಪ್ರದೇಶದ ನಿಗೂಢತೆಗೆ ಆ ಸರೋವರದ ತಳದಲ್ಲಾಗುವ ಭೂಕಂಪಗಳೇ ಕಾರಣ ಎಂದಿದ್ದಾರೆ. ಗ್ರೇಟ್ ಗ್ಲೆನ್ ಫಾಲ್ಟ್‍ನ ನೇರವಾಗಿ ಮೇಲ್ಭಾಗದಲ್ಲೇ ಲಾಖ್ ನೆಸ್ ಇರುವುದರಿಂದ ಭೂತಳದ ಅಲುಗಾಟಗಳು ನೀರಿನಲ್ಲಿ `ಮಿನಿ ಸುನಾಮಿ’ಗಳನ್ನು ಉಂಟುಮಾಡುತ್ತವೆ ಹಾಗೂ ಅವು ಪ್ರಶಾಂತ ಸರೋವರದಲ್ಲಿ ದೈತ್ಯ ಪ್ರಾಣಿಯೊಂದು ಅಲುಗಾಡುತ್ತಿರುವಂತೆ ಕಾಣುತ್ತದೆ ಹಾಗೂ ಅಲೆಗಳು ದೂರದಿಂದ ಪ್ರಾಣಿಯೊಂದರ ಡುಬ್ಬದ ಹಾಗೆ ಕಾಣಬಹುದು ಎನ್ನುತ್ತಾರೆ ಪಿಕಾರ್ಡಿ. ಇಟಲಿಯ ಫಿರೆಂಜೆಯಲ್ಲಿನ ಭೂವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿರುವ ಪಿಕಾರ್ಡಿ ಪ್ರಾಚೀನ ಚರಿತ್ರೆಯಲ್ಲಿನ ಭೂಕಂಪಗಳ ಬಗೆಗೆ ಅಧ್ಯಯನ ಮಾಡುವಾಗ ಈ ವಿಚಾರ ಅವರಿಗೆ ಹೊಳೆಯಿತು. ಮೆಡಿಟರೇನಿಯನ್, ನಾರ್ವೆ, ಐಸ್‍ಲ್ಯಾಂಡ್, ಉತ್ತರ ಅಮೆರಿಕ ಮತ್ತು ಸ್ಕಾಟ್‍ಲೆಂಡ್‍ನ ಚರಿತ್ರೆ ಮತ್ತು ಪುರಾಣಗಳಲ್ಲಿ ಭೂಕಂಪಗಳಿಗೂ ಮತ್ತು ಜಲರಕ್ಕಸಗಳು ಕಾಣಿಸಿಕೊಳ್ಳುವುದಕ್ಕೂ ಇರುವ ಸಂಬಂಧವನ್ನು ಕಂಡುಕೊಂಡ ಅವರು ತಮ್ಮ ಈ ಸಿದ್ಧಾಂತವನ್ನು ಎಡಿನ್‍ಬರೋದಲ್ಲಿನ ವಿಜ್ಞಾನಿಗಳ ಸಮಾವೇಶದಲ್ಲಿ ಮಂಡಿಸಿದರು. ಅವರು ಹೇಳುವಂತೆ ದಾಖಲಾಗಿರುವ ನೆಸ್ಸಿಯನ್ನು ಕಂಡಿರುವ ಮೂರು ಸಾವಿರ ಉದಾಹರಣೆಗಳಲ್ಲಿ 250 ದಾಖಲೆಗಳನ್ನು ಮರದ ಟೊಂಗೆಗಳು ಅಥವಾ ಕುಡುಕರು ಕಂಡಿರುವ ಉದಾಹರಣೆಗಳು ಎಂದು ಹೇಳಲಾಗುವುದಿಲ್ಲ. ಅಂತಹ ಉದಾಹರಣೆಗಳಲ್ಲಿ ವಿಪರೀತದ ನೀರಿನ ಅಲೆಗಳು ಹಾಗೂ `ಪ್ರಾಣಿ’ಯೊಂದರ ಡುಬ್ಬ ಕಂಡಿದೆ. ಅಲ್ಲದೆ ಕ್ರಿ.ಶ. 7ನೇ ಶತಮಾನದ ದಾಖಲೆಗಳಲ್ಲಿಯೂ ನೀರು ಜೋರಾಗಿ ಅಲುಗಾಡಿ ಅಲೆಗಳನ್ನೆಬ್ಬಿಸಿ ಆ ನಂತರ ರಕ್ಕಸ ಕಂಡಿರುವ ಉದಾಹರಣೆಗಳಿವೆ ಎನ್ನುತ್ತಾರೆ ಪಿಕಾರ್ಡಿ. 1933ರಲ್ಲಿ ನೆಸ್ಸಿ ಕಂಡಿರುವ ಅತಿ ಹೆಚ್ಚು ಉದಾಹರಣೆಗಳಿವೆ. ಅದಾದ ನಂತರ 1934ರ ಆಗಸ್ಟ್‍ನಲ್ಲಿ ಆ ಪ್ರದೇಶದಲ್ಲಿ ಭೂಕಂಪ ಉಂಟಾಯಿತು.
ಈ ರೀತಿಯ ನಿಗೂಢ ಪ್ರಾಣಿಗಳ ಬಗೆಗಿನ ಕತೆಗಳು ಜಗತ್ತಿನಾದ್ಯಂತ ಎಲ್ಲ ಪ್ರದೇಶಗಳಲ್ಲೂ ಇವೆ. ಕೆನಡಾದ ದಕ್ಷಿಣ ಬ್ರಿಟಿಷ್ ಕೊಲಂಬಿಯಾದಲ್ಲಿನ ಓಕನಾಗನ್ ಸರೋವರದಲ್ಲಿ ಓಗೊಪೋಗೊ ಎಂಬ ಜಲರಕ್ಕಸ ಇರುವ ಹಾಗೂ ಅವುಗಳನ್ನು ಕೆಲವರು ಕಂಡಿರುವ ಕತೆಗಳಿವೆ. ಅಮೆರಿಕದ ಮೂಲನಿವಾಸಿಗಳನ್ನು ಮೊದಲು ಅದನ್ನು ನಿ’ಹಾ-ಇ-ಇಟ್ಕ್ ಎಂದು ಕರೆಯುತ್ತಿದ್ದರು. ಅದರ ಉಚ್ಚಾರ ಕಷ್ಟವಾದುದರಿಂದ ಓಗೊಪೋಗೊ ಎಂಬುದು ಇತ್ತೀಚಿನ ಹೆಸರು. ಓಗೊಪೋಗೊ ಸ್ಕಾಟ್‍ಲೆಂಡಿನ ನೆಸ್ಸಿಯ ಹಾಗೆ `ಸಾಧು’ ಪ್ರಾಣಿಯಲ್ಲ. ಅದು ನಿಜವಾದ ಜಲರಕ್ಕಸ. ಅದು ರ್ಯಾಟ್ಲ್ ಸ್ನೇಕ್ ದ್ವೀಪದ ತಳಭಾಗದ ಗುಹೆಯೊಂದರಲ್ಲಿ ವಾಸಿಸುತ್ತದೆ ಹಾಗೂ ಸರೋವರದ ಸುತ್ತಮುತ್ತಲ ಹವಾಮಾನವನ್ನೂ ನಿಯಂತ್ರಿಸಬಲ್ಲದು- ಅದಕ್ಕೆ ಸಿಟ್ಟು ಬಂದಾಗ ಬಿರುಗಾಳಿ, ರಭಸ ಮಳೆ ತರಿಸಬಲ್ಲದು. ಓಕನಾಗ ಬುಡಕಟ್ಟು ಜನ ನೀರಿಗೆ ಮೀನುಹಿಡಿಯಲು, ಪ್ರಯಾಣಕ್ಕೆ ಹೊರಟಾಗ ಓಗೊಪೋಗೊ ರಕ್ಕಸನಿಗೆ ಪ್ರಾಣಿಬಲಿ ನೀಡುತ್ತಾರೆ.
ಉತ್ತರ ಅಮೆರಿಕಾದಲ್ಲಿ ಚಾಂಪ್ ಎಂದು ಕರೆಯಲ್ಪಡುವ ಜಲರಕ್ಕಸ, ಬಿಗ್‍ಫುಟ್ ಎಂದು ಕರೆಯಲ್ಪಡುವ ಎರಡು ಕಾಲಿನಲ್ಲಿ ನಡೆದಾಡುವ ದೈತ್ಯ ವಾನರ-ಮಾನವ, ಹಿಮಾಲಯ ಪರ್ವತಗಳಲ್ಲಿ ಇದೆಯೆಂದು ಹೇಳಲಾಗುವ ಯೇತಿ, ಚೀನಾದಲ್ಲಿನ ಡ್ರ್ಯಾಗನ್‍ಗಳು ಮುಂತಾದವು ಹಿಂದಿನಿಂದಲೂ ಮನುಷ್ಯನ ಕಲ್ಪನೆಯ ಭಾಗಗಳಾಗಿ ಕೆಲವರಲ್ಲಿ ಅವು ಇರುವುದು ನಿಜವೆನ್ನುವಂತೆ ಆಗಿಬಿಟ್ಟಿವೆ. ಜಲರಕ್ಕಸದ ಕಲ್ಪನೆ ಮಾನವನ ಸಾಗರಯಾನದೊಂದಿಗೇ ಪ್ರಾರಂಭವಾಗಿದೆ. ನಾವಿಕರು ತಮ್ಮ ಯಾನದಲ್ಲಿ ಕಂಡ ದೈತ್ಯ ಆಕ್ಟೋಪಸ್, ಹಾವಿನಂತಹ ದೈತ್ಯ ಸರೀಸೃಪ ಹಡಗನ್ನೇ ಛಿದ್ರಗೊಳಿಸಿದ ಕತೆಗಳನ್ನು ಹೇಳುತ್ತಾ ಬಂದಿದ್ದಾರೆ.
ಗಾಸ್ಗೋದಿಂದ ಹೊರಟ ನಾವು ಫೋರ್ಟ್ ಆಗಸ್ಟಸ್‍ನಲ್ಲಿ ಇಳಿದು ಲಾಖ್ ನೆಸ್‍ನ ತಟದಲ್ಲಿ ಅಡ್ಡಾಡಿ ಅಲ್ಲಿಂದ ಇನ್‍ವರ್ನೆಸ್ ತಲುಪಿ ಅಲ್ಲಿ ದೋಣಿಯೊಂದನ್ನು ಹತ್ತಿ ಹತ್ತಿ ಲಾಖ್ ನೆಸ್ ಸರೋವರದ ಮೇಲೆ ಹೊರಟೆವು. ಅಷ್ಟಾದರೂ ಕಡುಗಪ್ಪು ನೀರನ್ನು ಸೀಳಿಕೊಂಡು ದೋಣಿ ಹೋಗುತ್ತಿದ್ದಂತೆ ಎಲ್ಲಾದರೂ ನೆಸ್ಸಿ ಧುತ್ತನೆದ್ದು ಕಾಣಿಸಿಕೊಳ್ಳಬಹುದೇನೋ ಎನ್ನುವ ಆಶಾಭಾವನೆ ಮನದಲ್ಲಿ ಸುಳಿದಾಡುತ್ತಿತ್ತು. ಹೇಗಾದರಾಗಲಿ ಎಂದು ಕ್ಯಾಮೆರಾ ರೆಡಿಯಾಗಿ ಇಟ್ಟುಕೊಂಡಿದ್ದೆ ಮುಲ್ಲಾ ನಸ್ರುದ್ದೀನನ ಮನಸ್ಥಿತಿಯೊಂದಿಗೆ.
ಕಳೆದ ಐವತ್ತು ಅರವತ್ತು ವರ್ಷಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು `ಹೈಲ್ಯಾಂಡರ್ಸ್’ (ಸ್ಕಾಟ್‍ಲೆಂಡಿನ ಬೆಟ್ಟಗುಡ್ಡಗಳನ್ನು ಹೈಲ್ಯಾಂಡ್ಸ್ ಎಂದು ಕರೆಯುತ್ತಾರೆ) ಮತ್ತು ಹೊರಗಿನವರು ನೆಸ್ಸಿಯನ್ನು ಕಂಡಿದ್ದೇವೆನ್ನುತ್ತಾರೆ. ಆದರೆ 1933ರಲ್ಲೇ ಲಂಡನ್ ಮೃಗಾಲಯದ ಅಕ್ವೇರಿಯಂನ ನಿರ್ದೇಶಕರಾಗಿದ್ದ ಇ.ಜಿ.ಬೌಲೆಂಜರ್ ಈ ವರದಿಗಳನ್ನು `ಸಾಮೂಹಿಕ ಭ್ರಮೆಯ ಅತ್ಯುತ್ತಮ ಉದಾಹರಣೆ’ ಎಂದಿದ್ದಾರೆ.
ಪ್ರಕೃತಿಯಲ್ಲಿ ನಾವು ಅರಿಯದ ನಿಗೂಢಗಳು ಇಲ್ಲವೇ ಇಲ್ಲವೆಂದಲ್ಲ. ವಾಸ್ತವಾಂಶವೇನೆಂದರೆ ನಮಗೆ ಪ್ರಕೃತಿಯ ನಿಗೂಢಗಳು ಅರ್ಥವಾಗಿರುವುದು ತೀರಾ ಅಲ್ಪವಷ್ಟೆ. ಆದರೂ ಪ್ರಕೃತಿಯಲ್ಲಿನ ನಿಗೂಢಗಳು ಇಂದಿನ ವಿಜ್ಞಾನದ ವಿಶ್ಲೇಷಣೆಗೆ ನಿಲುಕದೇ ಇದ್ದರೂ ಅದರ ಹಿಂದೆ ಪ್ರಕೃತಿಯನ್ನು (ಲೌಕಿಕ) ಮೀರುವ ಯಾವುದೇ ಅಲೌಕಿಕ ಶಕ್ತಿ ಇಲ್ಲವೆನ್ನುವುದು ನನ್ನ ಭಾವನೆ.
ಲಾಖ್ ನೆಸ್ ಸರೋವರದ ನಮ್ಮ ವಿಹಾರ ಮುಗಿದ ಮೇಲೆ ಹಾಗೂ ನಮಗೆ ನೆಸ್ಸೀ ಎಲ್ಲೂ ಕಾಣದಿದ್ದುದರಿಂದ ನೆನಪಿಗೆ ಇರಲೆಂದು ಅಲ್ಲೇ ಮಾನವನ ಕಲ್ಪನೆಯಾಧರಿಸಿ ನಿರ್ಮಿಸಿದ್ದ ಒಂದು ಸಿಮೆಂಟ್ ನೆಸ್ಸಿಯ ಫೋಟೊ ತೆಗೆದೆವು ಹಾಗೂ ನೆಸ್ಸಿಯ ಕೆಲವು ಸ್ಮರಣಿಕೆಗಳನ್ನು ಅಂಗಡಿಯಲ್ಲಿ ಕೊಂಡು ಸ್ಕಾಟ್‍ಲೆಂಡಿನ ಸುಂದರ ಪ್ರಕೃತಿಯನ್ನು ಸವಿಯುತ್ತ ಗ್ಲಾಸ್ಗೋಗೆ ಹಿಂದಿರುಗಿದೆವು.
j.balakrishna@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ