ಕೃಷಿಋಷಿ
ಫುಕುವೊಕ
ಕನ್ನಡದಲ್ಲಿ ಮಸಾನೊಬು
ಫುಕುವೊಕಾ ಹಾಗೂ ಅವರ
ಸಹಜ ಕೃಷಿಯ ಬಗೆಗೆ ಪ್ರಕಟವಾದ ಮೊಟ್ಟಮೊದಲ ಲೇಖನ ನನ್ನದು. ಈ ಲೇಖನ 4ನೇ
ಸೆಪ್ಟೆಂಬರ್, 1988ರ `ಸುಧಾ' ವಾರಪತ್ರಿಕೆಯಲ್ಲಿ
ಪ್ರಕಟವಾಗಿತ್ತು. ಈಗ ನಾನು ಅದನ್ನು ಪರಿಷ್ಕರಿಸಿ
ಫುಕುವೊಕಾರ ಹಸಿರು ಚಿಂತನೆಯನ್ನು ಈ ಲೇಖನದಲ್ಲಿ ಸೇರಿಸಿ
ಮತ್ತಷ್ಟು ವಿಸ್ತೃತಗೊಳಿಸಿದ್ದೇನೆ.
ಮಸಾನೊಬು ಫುಕುವೊಕ ವಿಜ್ಞಾನವನ್ನೇ
ಗುಮಾನಿಯಿಂದ ನೋಡುವ ಒಬ್ಬ ವಿಜ್ಞಾನಿ.
ಅವರ ಕ್ರಿಯೆ, ಮಾತು ಹಾಗೂ
ಇಡೀ ಬದುಕೇ ಜೆನ್ ಬೌದ್ಧ ಧರ್ಮ
ಹಾಗೂ ತಾವೋ ತತ್ವಗಳಿಂದ ಪ್ರಭಾವಿತವಾಗಿದೆ
ಅವರ ಪ್ರಕಾರ ಸಹಜ ಕೃಷಿಗೆ
ಆಯಾ ವ್ಯಕ್ತಿಯ ಆಧ್ಯಾತ್ಮಿಕ ಆರೋಗ್ಯವೂ ಬಹಳ ಮುಖ್ಯ. ಆತ್ಮದ
ಶುದ್ದೀಕರಣ ಹಾಗೂ ಭೂಮಿಯ ಫಲವತ್ತತೆ
ಹೆಚ್ಚುವುದು ದೃಷ್ಟಿಯಲ್ಲಿ ಒಂದೇ. ಅಲ್ಲದೆ ಕೃಷಿಯ
ಅಂತಿಮ ಗುರಿ ಯಾವುದೇ ಬೆಳೆಗಳನ್ನು
ಬೆಳೆಯುವುದಲ್ಲ, ಮನುಷ್ಯರನ್ನು ಆತ್ಮ ಶುದ್ಧೀಕರಣದತ್ತ ಒಯ್ಯುವುದು
ಹಾಗೂ ಅವರಲ್ಲಿ ಒಳ್ಳೆಯ ನಡತೆಯನ್ನು
ಬೆಳೆಸುವುದು. ಫುಕುವೊಕಾರ ಸಹಜ ಕೃಷಿ, ವಿಜ್ಞಾನ
ಮತ್ತು ತತ್ವಜ್ಞಾನದ ಸಮ್ಮಿಳನ. ಆತ ಸಹಜ ಕೃಷಿಯನ್ನು
`ಗಾಂಧಿ ವಿಧಾನ' ಎಂತಲೂ ಕರೆದಿದ್ದಾರೆ.
ಮಸಾನೊಬು ಫುಕುವೊಕ ಸಹಜ
ಕೃಷಿಯ ಬದುಕು ಆರಂಭಿಸುವ ಮೊದಲು
ಪ್ರಯೋಗಾಲಯದ ವಿಜ್ಞಾನಿಯೇ ಆಗಿದ್ದರು. ಆದರೆ ನಾಲ್ಕು ಗೋಡೆಗಳ
ನಡುವಿನ ಪ್ರಯೋಗಾಲಯದ ಮಿತಿಯನ್ನು ಬಹು ಬೇಗ ಅರಿತರು.
ಅವರ ಬದುಕಿನ ಒಂದು ಕ್ಷಣದ
ಸಣ್ಣ ಅನುಭವ ಅವರ ಆಲೋಚನೆಗಳ
ಹಾಗೂ ಇಡೀ ಬದುಕಿನ ಹಾದಿಯನ್ನೇ
ಬದಲಿಸಿಬಿಟ್ಟಿತು. ಖ್ಯಾತ ಕೃಷಿ ವಿಜ್ಞಾನಿ
ಐಚಿ ಕುರೊಸಾವರ ಶಿಷ್ಯರಾಗಿದ್ದ ಫುಕುವೊಕ ಇಪ್ಪತ್ತೈದರ ಯುವಕನಾಗಿದ್ದಾಗ
ಯೋಕೊಹಾಮ ಕಸ್ಟಮ್ಸ್ ವಿಭಾಗದಲ್ಲಿ ಸಸ್ಯಗಳನ್ನು ಕೀಟ, ರೋಗಗಳಿಗಾಗಿ ಪರೀಕ್ಷಿಸುವ
ವಿಭಾಗದಲ್ಲಿ ಕೆಲಸಕ್ಕಿದ್ದರು. ಬಹಳಷ್ಟು ಯುವಕರಂತೆ ಮೋಜಿನ
ಜೀವನ ನಡೆಸುವ ವ್ಯಕ್ತಿಯಾಗಿದ್ದರು. ಗೊತ್ತು
ಗುರಿಯಿಲ್ಲದ ಬದುಕು ಹಾಗೂ ಕೆಲಸದ
ಬಳಲಿಕೆಯಿಂದ ಒಂದು ದಿನ ತೀವ್ರ
ನ್ಯುಮೋನಿಯಾ ಜ್ವರ ಬಂದು ಚಿಕಿತ್ಸೆಗಾಗಿ
ಆಸ್ಪತ್ರೆ ಸೇರಬೇಕಾಯಿತು. ಅಲ್ಲಿ ಒಂಟಿಯಾಗಿ ಕಳೆದ
ದಿನಗಳಲ್ಲಿ ಕಾಡಿದ ಅನಾಥ ಪ್ರಜ್ಞೆ
ಹಾಗೂ ಸಾವಿನ ಹೆದರಿಕೆಗಳಿಂದ ಆಸ್ಪತ್ರೆಯಿಂದ
ಹೊರಬಂದ ಮೇಲೂ ಬಿಡಿಸಿಕೊಳ್ಳಲಾಗಲಿಲ್ಲ. ಇಷ್ಟೂ ದಿನ
ಸಂತೋಷವಾಗಿ ನಿಶ್ಚಿಂತತೆಯಿಂದ ಹೇಗೆ ಬದುಕುತ್ತಿದ್ದೆನೆಂದು ಅವರಿಗೇ
ಅಚ್ಚರಿಯಾಯಿತು.
ಹುಲ್ಲೆಸಳ
ಕ್ರಾಂತಿ
ಒಂದು ದಿನ ಹೀಗೇ
ಪಕ್ಕದ ಬೆಟ್ಟವೊಂದರ ಮೇಲೆ ನಿಶಾಚರಿಯಾಗಿ ಅಲೆದಾಡುವಾಗ
ಆಯಾಸದಿಂದ ಬಳಲಿ ಕುಸಿದು ಬೆಳಗಿನ
ಜಾವದವರೆಗೂ ನಿದ್ರೆಯೂ ಅಲ್ಲದ ಎಚ್ಚರವೂ ಅಲ್ಲದ
ಸ್ಥಿತಿಯಲ್ಲಿ ಬಿದಿದ್ದರು. ಆ ದಿನ ಮೇ
15 . ಸೂರ್ಯ ಹುಟ್ಟುತ್ತಲಿದ್ದ. ಎಲ್ಲಿಂದಲೋ ಒಂದು ಬೆಳ್ಳಕ್ಕಿ ಕಾಣಿಸಿಕೊಂಡು
ತೀಕ್ಷ್ಣವಾಗಿ ಕಿರುಚಿ ಹಾರಿ ಮರೆಯಾಯ್ತು.
ಹಾರುತ್ತಿದ್ದ ಆ ಪಕ್ಷಿಯ ರೆಕ್ಕೆಗಳ
ಪಟಪಟ ಸದ್ದು ಫುಕುವೊಕ ಎದೆ
ಬಡಿತದೊಂದಿಗೆ ವಿಲೀನವಾಗಿತ್ತು. ಆ ಕ್ಷಣದ ಅನುಭವ
ಫುಕುವೊಕಾರವರೇ ತಮ್ಮ ಪುಸ್ತಕ `ಒನ್
ಸ್ಟ್ರಾ ರೆವುಲ್ಯೂಶನ್'(ಒಂದು ಹುಲ್ಲೆಸಳ ಕ್ರಾಂತಿ)ನಲ್ಲಿ ಹೀಗೆ ಹೇಳಿದ್ದಾರೆ:
"ಅದೇ ಕ್ಷಣ ನನ್ನೆಲ್ಲ ಸಂಶಯಗಳೂ
ಹಾಗೂ ತಪ್ಪು ತಿಳಿವಳಿಕೆಗಳ ಮೇಲಿನ
ಅಜ್ಞಾನದ ಪೊರೆ ಕಣ್ಮರೆಯಾಗತೊಡಗಿತು. ಇಷ್ಟೂ
ದಿನದ ನನ್ನ ಬದುಕಿನ ನಂಬಿಕೆಗಳು,
ವಿಚಾರಗಳೆಲ್ಲಾ ಕೊಚ್ಚಿಹೋಗತೊಡಗಿದವು. ನನ್ನ ಮನದ ಮೂಲೆಯಲ್ಲಿ
ಹೊಸ ಹೊಸ ಅಸ್ಪಷ್ಟ ವಿಚಾರಗಳು
ಮೂಡತೊಡಗಿದವು. ನನಗರಿವಿಲ್ಲದಯೇ ನನ್ನ ಬಾಯಿಂದ `ಈ
ಪ್ರಪಂಚದಲ್ಲಿ ಏನೇನೂ ಇಲ್ಲ......' ಎಂಬ
ಮಾತು ಹೊರಬಂತು. ನನಗನ್ನಿಸಿತು ನನಗೇನೂ ಅರ್ಥವಾಗಿಲ್ಲವೆಂದು (ಈ
ಸನ್ನಿವೇಶದಲ್ಲಿ ನನಗೇನೂ ಅರ್ಥವಾಗಿಲ್ಲ ಎನ್ನುವುದರ
ಅರ್ಥ ಜ್ಞಾನದ ಸೀಮಿತ ಪರಿಮಿತಿಗಳನ್ನು
ಅರಿತುಕೊಂಡಿರುವುದು ಎಂದಾಗುತ್ತದೆ). ಇಷ್ಟೂ ದಿನ ನಾನು
ನಂಬಿಕೊಂಡಿದ್ದ ತತ್ವಗಳು, ವಿಚಾರಗಳು ಬರೇ ಪೊಳ್ಳು ಎನ್ನಿಸತೊಡಗಿತು.
ಈ ಹೊಸ ಅನುಭವದಿಂದಾಗಿ
ಮನಸ್ಸು ಹಗುರವಾದಂತೆನ್ನಿಸಿ ಸಂತೋಷದಿಂದ ಕುಣಿದಾಡಬೇಕೆನ್ನಿಸಿತು. ಇಷ್ಟೂ ದಿನಗಳ ನೋವು,
ದುಃಖ ಒಂದು ಭ್ರಮೆ ಎನ್ನಿಸಿ
ಕೆಟ್ಟ ಕನಸಿನ ಹಾಗೆ ನನ್ನ
ಮನಸ್ಸಿನಿಂದ ದೂರವಾಗತೊಡಗಿತು".
ಮರುದಿನವೇ ಫುಕುವೊಕ ತಮ್ಮ ಕೆಲಸಕ್ಕೆ
ರಾಜೀನಾಮೆ ನೀಡಿದರು. ಹಾಗೇ ಅವರ ಆಲೋಚನೆಗಳಿಗೆ
ಒಂದು ಸ್ಪಷ್ಟ ರೂಪ ಕೊಡಬೇಕೆಂದು
ಹಾಗೂ ಅದನ್ನು ಅನುಷ್ಟಾನಕ್ಕೆ ತರಬೇಕೆಂದು
ಅಲ್ಲದೆ ತಮ್ಮ ಆಲೋಚನೆಗಳು ಎಷ್ಟರ
ಮಟ್ಟಿಗೆ ಸರಿ ಎಂದು ಪರೀಕ್ಷಿಸಲು
ತಮ್ಮ ಹುಟ್ಟೂರಿಗೆ ಮರಳಿ ಬೇಸಾಯದ ಬದುಕು
ಆರಂಭಿಸಿದರು. ಅಂದಿನಿಂದ ಇಂದಿನವರೆಗೂ ಫುಕುವೊಕ ಹಿಂದಿರುಗಿ ನೋಡಿಲ್ಲ.
ಅವರ ಆಲೋಚನೆಗಳಿಗೆ ವಿರುದ್ಧವಾದುದು ಎದುರಾಗಿಲ್ಲ.
ಫುಕುವೊಕಾರ ಆಲೋಚನೆ ಮತ್ತು ಆಚರಣೆಗಳು
ಈಗ ಪ್ರಪಂಚದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.
ನಗರೀಕರಣ, ಆಧುನೀಕರಣದಿಂದ ಪರಿಸರವೇ ದಿವಾಳಿಯಾಗಿ ನಾವು
ಉಸಿರಾಡುವ ಗಾಳಿ, ಕುಡಿಯುವ ನೀರು,
ತಿನ್ನುವ ಆಹಾರ ಎಲ್ಲವೂ ವಿಷಪೂರಿತವಾಗುತ್ತಿರುವಾಗ
ಫುಕುವೊಕಾರವರ ಸಹಜ ಕೃಷಿ ಮತ್ತೊಂದು
ಹೊಸ ಬದುಕು ಕೊಡಬಹುದೆನ್ನುವ ಆಸೆಯಿಂದ
ಪರಿಸರ ಪ್ರೇಮಿಗಳು, ವಿಜ್ಞಾನಿಗಳು, ಸಮಾಜ ಚಿಂತಕರು ಅವರ
ತೋಟಗಳಿಗೆ ಭೇಟಿ ನೀಡಿ ಅವರ
ಪಾಠಗಳನ್ನು ಕಲಿಯಲು ಯತ್ನಿಸುತ್ತಿದ್ದಾರೆ. ಫುಕುವೊಕಾರವರಿಗೆ
1988ರ `ರಾಮೊನ್ ಮ್ಯಾಗ್ಸೆಸೆ' ಪ್ರಶಸ್ತಿ
ನೀಡಿ ಗೌರವಿಸಲಾಗಿದೆ. ಶಾಂತಿನಿಕೇತನ ವಿಶ್ವಭಾರತಿವತಿಯಿಂದ ಇವರಿಗೆ `ದೇಶಿಕೋತ್ತಮ' ಪ್ರಶಸ್ತಿ
ನೀಡಲಾಗಿದೆ.
ಋಷಿ
ಕೃಷಿ
ಬೇಟೆಯ ನಂತರ ಕೃಷಿ
ಮನುಷ್ಯನ ಅತ್ಯಂತ ಪ್ರಾಚೀನ ಕಸುಬು.
ಬಹಳ ಹಿಂದೆ ಮನುಷ್ಯನಿಗೆ ಭೂಮಿಯ
ಅಭಾವವಿರಲಿಲ್ಲ, ಜನಸಂಖ್ಯೆಯ ಒತ್ತಡವಿರಲಿಲ್ಲ. ಅಲ್ಲದೆ ಭೂಮಿ ಸಹ
ಫಲವತ್ತಾಗಿರುತ್ತಿತ್ತು. ಅವನು ಬೆಳೆಯುತ್ತಿದ್ದುದು ಅವನಿಗೆ
ಬೇಕಾದಷ್ಟಾಗುತ್ತಿತ್ತು. ಜನಸಂಖ್ಯೆ ಹೆಚ್ಚಿದಂತೆ ಔದ್ಯೋಗಿಕರಣದಿಂದ, ನಗರೀಕರಣದಿಂದ ಭೂಮಿಯ ಅಭಾವವಾಗತೊಡಗಿತು. ಇರುವ
ಜಾಗದಲ್ಲಿ ಹೆಚ್ಚು ಹೆಚ್ಚು ಬೆಳೆಯಬೇಕಾಯಿತು.
ಭೂಮಿ ತನ್ನ ಸ್ವಾಭಾವಿಕ ಫಲವತ್ತತೆ
ಕಳೆದುಕೊಳ್ಳತೊಡಗಿತು. ಫಲವತ್ತತೆ ಹೆಚ್ಚಿಸಲು ರಾಸಾಯನ ಗೊಬ್ಬರಗಳನ್ನು ಬಳಸಬೇಕಾಯಿತು.
ಹೊಸ ಹೊಸ ಅಧಿಕ ಇಳುವರಿ
ತಳಿಗಳ ಅವಿಷ್ಕಾರ ಮಾಡಬೇಕಾಯಿತು. ಹಾಗೇ ಬೆಳೆಗಳನ್ನು ಕಾಡುವ
ರೋಗಗಳು, ಕೀಟಗಳೂ ಸಹ ಹೆಚ್ಚಾಗತೊಡಗಿದವು.
ಅವುಗಳನ್ನು ನಿಯಂತ್ರಿಸಲು ಕೀಟನಾಶಕ, ರೋಗನಾಶಕಗಳನ್ನು ಕಂಡುಹಿಡಿಯಲಾಯಿತು. ಅವುಗಳನ್ನು ಸತತವಾಗಿ ಉಪಯೋಗಿಸಿದಂತೆ ಅವುಗಳನ್ನೂ
ಸಹಿಸಿಕೊಳ್ಳುವಂತಹ ಹೊಸ ಹೊಸ ಕೀಟಗಳು,
ರೋಗಗಳು ಹುಟ್ಟಿಕೊಳ್ಳತೊಡಗಿದವು. ಹಾಗೇ ಇನ್ನೂ ಹೆಚ್ಚು
ಹೆಚ್ಚು ಶಕ್ತಿಯುತ ರಾಸಾಯನಗಳನ್ನು ಬಳಸಬೇಕಾಗಿ ಬಂತು.
ಇದರಿಂದಾಗಿ
ಪರಿಸರದ ಜೀವರಾಶಿಗಳ ಸಮತೋಲನವೇ ಹಾಳಾಗುತ್ತಿದೆ. ರಾಸಾಯನಗಳನ್ನು ಉಪಯೋಗಿಸಿ ಬೆಳೆಸಿದ ಆಹಾರಗಳು ಮನುಷ್ಯನಲ್ಲಿ
ಹಲವಾರು ರೋಗಗಳನ್ನುಂಟು ಮಾಡುತ್ತವೆ. ಪರಿಸರವೇ ವಿಷಪೂರಿತವಾಗುತ್ತಿದೆ. ಹೊಸ
ತಳಿಗಳನ್ನು ಉಪಯೋಗಿಸಿ ಬೇಸಾಯ ಮಾಡಬೇಕಾದಲ್ಲಿ ರಸಗೊಬ್ಬರ,
ರಾಸಾಯನಗಳನ್ನು ಉಪಯೋಗಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ.
ಮನುಷ್ಯ ಹಠಮಾರಿ. ಪ್ರಕೃತಿಯನ್ನು
ತನ್ನ ಪ್ರಚಂಡ ಬುದ್ದಿಶಕ್ತಿಯಿಂದ ಗೆಲ್ಲಬಹುದು
ಹಾಗೂ ತನಗೆ ಬೇಕಾದ ಹಾಗೆ
ಪ್ರಕೃತಿಯನ್ನೇ ಬದಲಿಸಬಹುದೆಂಬ ಸೊಕ್ಕಿನ ಭ್ರಮೆಯಲ್ಲಿದ್ದಾನೆ. ಅದೇ
ಭ್ರಮೆಯಲ್ಲಿ ಪ್ರಕೃತಿ, ಪರಿಸರವನ್ನು ವಿನಾಶದ ಅಂಚಿಗೆ ದೂಡುತ್ತಿದ್ದಾನೆ.
ಕೃಷಿಯಲ್ಲಿ ಮನುಷ್ಯ ಪ್ರಕೃತಿಯೊಂದಿಗೆ ಸಹಕರಿಸಬೇಕೇ
ಹೊರತು ಅದನ್ನು `ಜಯಿಸಿ' ಇನ್ನೂ
`ಅಭಿವೃದ್ಧಿ'ಪಡಿಸುವುದರ ಮೂಲಕವಲ್ಲ. ಗಿಡಮರ ಬೆಳೆಯುವುದನ್ನು ಯಾರೂ
ಪ್ರಕೃತಿಗೆ ಹೇಳಿಕೊಡುವುದಿ¯್ಲ. ಪ್ರಕೃತಿಯಲ್ಲಿನ ಜೀವರಾಶಿ
ಒಂದಕ್ಕೊಂದು ಸಹಕರಿಸಿಕೊಂಡು ಬದುಕಬಲ್ಲವು. ಪ್ರಕೃತಿಯೇ ಮಾಡುವ ಗಿಡಮರಗಳ ಬಿತ್ತನೆ
ಅಷ್ಟು ಸುಲಭವಾಗಿ ರೋಗರುಜಿನಗಳಿಗೆ ತುತ್ತಾಗುವಷ್ಟು ದುರ್ಬಲವಾಗಿರುವುದಿಲ್ಲ. ಬಹಳಷ್ಟು ಗಿಡಮರಗಳು ರೋಗನಿಯಂತ್ರಣ
ರಾಸಾಯನಗಳನ್ನು ತಾವೇ ಉತ್ಪಾದಿಸುತ್ತವೆ.
ಸಹಜ ಕೃಷಿಯನ್ನು `ಋಷಿ
ಬೇಸಾಯ' ಎಂತಲೂ ಕರೆಯುತ್ತಾರೆ. ಕೆಲವರು
ಅದನ್ನು `ಕೆಲಸವೇ ಇಲ್ಲದ ಕೃಷಿ'
(ಡೂ ನಥಿಂಗ್ ಫಾರ್ಮಿಂಗ್)
ಎನ್ನುತ್ತಾರೆ. ಫುಕುವೊಕ ಅದನ್ನು `ಗಾಂಧಿ
ವಿಧಾನ' ಎಂದೂ ಕರೆದಿದ್ದಾರೆ.
ಎಲ್ಲರೂ ಕೃಷಿಯಲ್ಲಿ ಇದು
ಮಾಡಿದರೆ ಹೇಗೆ? ಅದು ಮಾಡಿದರೆ
ಹೇಗೆ? ಎಂದು ಪ್ರಶ್ನಿಸತೊಡಗಿದ್ದರೆ, ಫುಕುವೊಕ
ಮಾತ್ರ ಇದು ಮಾಡದಿದ್ದರೆ ಹೇಗೆ?
ಅದು ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸತೊಡಗಿದರು.
ಫುಕುವೊಕ ಕೆಲಸದ ವಿರುದ್ಧವಲ್ಲ, ಆದರೆ
ಅನವಶ್ಯಕ ಕೆಲಸದ ವಿರುದ್ಧ. ಏಕೆಂದರೆ
ಆಧುನಿಕ ಕೃಷಿಯಲ್ಲಿ ಬೇಡದ ಕೆಲಸಗಳೇ ಹೆಚ್ಚು.
ಇದರಿಂದಾಗಿ ರೈತನಿಗೆ ಕಾವ್ಯ ರಚಿಸಲಾಗಲಿ,
ಹಾಡು ಹಾಡಲಾಗಲಿ ಬಿಡುವೇ ಸಿಗುವುದಿಲ್ಲ ಎನ್ನುತ್ತಾರೆ
ಅವರು.
ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಪದವಿ ಪಡೆದ ಫುಕುವೊಕಾಗೆ
ಆಧುನಿಕ ವಿಜ್ಞಾನದ ಬಗ್ಗೆ ತೀರಾ ಸಂಶಯ.
`ವಿಜ್ಞಾನ ಅರಿತುಕೊಂಡಿರುವ ಪ್ರಕೃತಿ ಸಂಪೂರ್ಣ ನಾಶವಾಗಿರುವ
ಪ್ರಕೃತಿ. ಅದಕ್ಕೆ ಅದರ ಹಂದರದ
ಅರಿವು ಮಾತ್ರ ಇದೆಯೇ ಹೊರತು
ಅದರ ಆತ್ಮದ ಅರಿವಿಲ್ಲ' ಎನ್ನುತ್ತಾರೆ.
ಈ ಕೃಷಿಋಷಿಗೆ ಸಹಜ
ಕೃಷಿಯ ವಿಷಯ ಹೊಳೆದದ್ದೂ ಆಕಸ್ಮಿಕವಾಗಿ.
ಒಂದು ದಿನ ಬಹಳ ವರ್ಷಗಳಿಂದ
ಪಾಳುಬಿದ್ದಿದ್ದ ಜಮೀನಿನ ಬದಿಯಲ್ಲಿ ಹಾದು
ಹೋಗುತ್ತಿದ್ದಾಗ ಹುಲ್ಲು, ಕಳೆಗಳ ಮಧ್ಯೆ
ಹಚ್ಚಹಸಿರಿನ ಆರೋಗ್ಯಪೂರ್ಣ ಬತ್ತದ ಪೈರು ಬೆಳೆಯುತ್ತಿದ್ದುದು
ಕಾಣಿಸಿತು. ಯಾರೂ ಉಳದೆ, ಕಳೆ
ತೆಗೆಯದೆ ನೀರು ಹನಿಸದೆ ಪ್ರಕೃತಿಯ
ಮಡಿಲಲ್ಲಿ ಬೆಳೆಯುತ್ತಿದ್ದ ಪೈರನ್ನು ನೋಡಿ ತಾವೂ
ಬೆಳೆ ಬೆಳೆಯಲು ಪ್ರಕೃತಿಯನ್ನೇ ಏಕೆ
ಅನುಸರಿಸಬಾರದು ಎಂದು ಸಹಜ ಕೃಷಿ
ಆರಂಭಿಸಿದರು.
ಫುಕುವೊಕ ತಮ್ಮ ಸಹಜ
ಕೃಷಿಯಲ್ಲಿ ನಾಲ್ಕು
ನಿಯಮಗಳನ್ನು ಅನುಸರಿಸುತ್ತಾರೆ. ಮೊದಲನೆಯದು, ಭೂಮಿಯನ್ನು ಉಳುಮೆ ಮಾಡದಿರುವುದು. ಸಾವಿರಾರು
ವರುಷಗಳಿಂದ ಬೆಳೆ ಬೆಳೆಯಲು ಭೂಮಿಯನ್ನು
ನೇಗಿಲಿನಿಂದ ಉಳುವುದು ಅತ್ಯವಶ್ಯಕ ಎಂದು
ಎಲ್ಲರೂ ನಂಬಿದ್ದಾರೆ. ಆದರೆ ಗಿಡಮರಗಳ ಬೇರು
ಇಳಿಯುವುದರ ಮೂಲಕ ಹಾಗೂ ಸೂಕ್ಷ್ಮಾಣು
ಜೀವಿ, ಎರೆಹುಳು, ಸಣ್ಣ ಪ್ರಾಣಿಗಳ ಚಟುವಟಿಕೆಗಳ
ಮೂಲಕ ಭೂಮಿ ತನ್ನನ್ನು ತಾನೇ
ಉಳುಮೆ ಮಾಡಿಕೊಳ್ಳುತ್ತದೆ.
ಎರಡನೆಯದು, ಯಾವುದೇ ರಸಗೊಬ್ಬರ ಅಥವಾ
ತಿಪ್ಪೆಗೊಬ್ಬರ ಉಪಯೋಗಿಸದಿರುವುದು. ಪ್ರಕೃತಿಯ ಸಹಜ ಕ್ರಿಯೆಗಳಲ್ಲಿ ಜನರು
ತಮ್ಮ ತಲೆ ಹಾಕಿ ಅವುಗಳನ್ನು
ಹಾಳುಗೆಡವುತ್ತಾರೆ. ಅವರ ವಿವೇಕವಿಲ್ಲದ `ಆಧುನಿಕ'
ಕೃಷಿ ವಿಧಾನಗಳಿಂದ ಭೂಮಿಯನ್ನು ಬರಡು ಮಾಡುತ್ತಿದ್ದಾರೆ. ಭೂಮಿಯನ್ನು
ಹಾಗೇ ಬಿಟ್ಟಲ್ಲಿ ಪ್ರಕೃತಿಯಲ್ಲಿನ ಜೀವರಾಶಿಗಳು ಭೂಮಿಯ ಫಲವತ್ತತೆಯನ್ನು ಕಾಪಾಡುತ್ತವೆ
ಹಾಗೂ ಇನ್ನೂ ಹೆಚ್ಚಿಸುತ್ತವೆ.
ಮೂರನೆಯದು, ಕಳೆ ತೆಗೆಯಲು ಉಳುಮೆ
ಮಾಡುವುದಾಗಲಿ, ರಾಸಾಯನಗಳನ್ನಾಗಲಿ ಬಳಸದಿರುವುದು. ಹೊಲಗದ್ದೆಗಳಲ್ಲಿ ಕಳೆಯೂ ಸಹ ಭೂಮಿಯ
ಫಲವತ್ತತೆಯನ್ನು ಹೆಚ್ಚಿಸಲು ಸಹಕರಿಸುತ್ತವೆ. ಮೂಲಭೂತವಾಗಿ ಕಳೆಯನ್ನು ನಿಯಂತ್ರಿಸಬೇಕೇ ಹೊರತು ಅವುಗಳನ್ನು ಸಂಪೂರ್ಣ
ನಿರ್ಮೂಲ ಮಾಡಬಾರದು. ಹುಲ್ಲನ್ನು ಹರಡಿ ನೆಲ ಮುಚ್ಚುವುದರ
ಮೂಲಕ, ಮುಖ್ಯ ಬೆಳೆಯ ಜೊತೆಯಲ್ಲೇ
ಮತ್ತೊಂದು ಸಣ್ಣ ಬೆಳೆಯುವುದರ ಮೂಲಕ
ಹಾಗೂ ತಾತ್ಕಾಲಿಕವಾಗಿ ಗದ್ದೆಯಲ್ಲಿ ನೀರು ನಿಲ್ಲಿಸುವುದರ ಮೂಲಕ
ಫುಕುವೊಕ ತಮ್ಮ ಹೊಲಗದ್ದೆಗಳಲ್ಲಿ ಕಳೆಯನ್ನು
ನಿಯಂತ್ರಿಸುತ್ತಿದ್ದಾರೆ.
ನಾಲ್ಕನೆಯ ನಿಯಮ- ಯಾವುದೇ ಕೀಟನಾಶಕ
ಹಾಗೂ ರೋಗನಾಶಕ ರಾಸಾಯನಗಳನ್ನು ಉಪಯೋಗಿಸದಿರುವುದು.
ಅಸ್ವಾಭಾವಿಕ ಕೃಷಿ ವಿಧಾನಗಳಿಂದ ಬೆಳೆಯುವ
ಸಸ್ಯಗಳು ದುರ್ಬಲವಾಗಿರುತ್ತವೆ. ಹಾಗಾಗಿ ಅಂಥ ಬೆಳೆಗಳಿಗೆ
ಸುಲಭವಾಗಿ ಕೀಟಗಳು, ರೋಗಗಳು ಆಕರ್ಷಿತವಾಗುತ್ತವೆ.
ಆದರೆ ಪ್ರಕೃತಿಯಲ್ಲಿ ಎಲ್ಲಾ ಸಮತೋಲನದಲ್ಲಿರುವುದರಿಂದ ರೋಗರುಜಿನಗಳನ್ನು ಬಲಿಷ್ಠ
ಸಸ್ಯಗಳು ಸ್ವಯಂ ಎದುರಿಸಬಲ್ಲವು. ರೋಗ
ಹಾಗೂ ಕೀಟಗಳನ್ನು ನಿಯಂತ್ರಿಸಲು ಉತ್ತಮ ದಾರಿ ಎಂದರೆ-
ಆರೋಗ್ಯಕರ ವಾತಾವರಣದಲ್ಲಿ ಆರೋಗ್ಯಕರ ಬೆಳೆಗಳನ್ನು ಬೆಳೆಯುವುದು. ಅಕ್ಕಪಕ್ಕದವರ ಹೊಲಗದ್ದೆಗಳಲ್ಲಿ ಕೀಟಗಳು, ರೋಗಗಳು ಇದ್ದರೂ
ಸಹ ಅವು ಫುಕುವೊಕಾರ ಬೆಳೆಗಳಿಗೆ
ಹಾನಿ ಮಾಡುವುದಿಲ್ಲ. ಮಾಡಿದರೂ ಸಹ ಅವರ
ಫಸಲು ಅಕ್ಕಪಕ್ಕದವರು ರಾಸಾಯನ, ರಸಗೊಬ್ಬರಗಳನ್ನು ಉಪಯೋಗಿಸಿ
ತೆಗೆಯುವ ಫಸಲಿನಷ್ಟೇ ಅಥವಾ ಅದಕ್ಕಿಂತ ಹೆಚ್ಚಿಗೇ
ಇರುತ್ತದೆ.
ಫುಕುವೊಕ ಕಳೆದ ಐವತ್ತು
ವರುಷಗಳಿಂದ ತಮ್ಮ ಜಮೀನಿನಲ್ಲಿ ಸಹಜ
ಕೃಷಿ ಮಾಡುತ್ತಿದ್ದಾರೆ. ನೇಗಿಲು, ಗುದ್ದಲಿಯ ಬಳಕೆ
ಹಾಗಿರಲಿ, ಅವರು ನೀರು ನಿಲ್ಲಿಸಲೆಂದು
ಗದ್ದೆಗೆ ಕಟ್ಟೆ ಕೂಡಾ ಕಟ್ಟುವುದಿಲ್ಲ.
ಆಧುನಿಕ ಕೃಷಿ ವಿಜ್ಞಾನಿಗಳ
ಬಗೆಗೆ ಫುಕುವೊಕಾರವರಿಗೆ ವಿಶಾದವಿದೆ. ಹಾಗೆಯೇ ಅವರ ಮನದಾಳದಲ್ಲಿ
ಒಂದು ಆಶಾದಾಯಕ ಭರವಸೆಯೂ ಇದೆ:
`ಈ ಸಾಪೇಕ್ಷ ಪ್ರಪಂಚದಲ್ಲಿ ಮಾನವನ
ಮಿಥ್ಯಾ ವಿವೇಕದಿಂದ ಸೃಷ್ಟಿಗೊಂಡ, ಗೊತ್ತುಗುರಿಯಿಲ್ಲದ ಭ್ರಮಾಲೋಕವಿದು. ಮನುಷ್ಯ ಏನನ್ನೂ ಕಲಿತಿಲ್ಲ,
ಏನೂ ಸಾಧಿಸಿಲ್ಲ. ತಾನು ಪ್ರಕೃತಿಯನ್ನು ನಿಯಂತ್ರಿಸಬಲ್ಲೆನೆಂಬ
ಭ್ರಮೆಯಲ್ಲಿ ಅದನ್ನು ಹಾಳುಗೆಡವುತ್ತಿದ್ದಾನೆ. ಇಂತಹ ವಿಜ್ಞಾನಿಗಳು
ರೈತರನ್ನು ತಮ್ಮ ಹಿಂದೆ ಕರೆದೊಯ್ಯುವ
ಕಿಂದರಜೋಗಿಗಳಾಗಿದ್ದಾರೆ. ಈ ರೈತರದು ಎಂತಹ
ದುರಂತ!'
ಫುಕುವೊಕಾರ
ಹಸಿರು ಚಿಂತನೆ
(ಮಸಾನೊಬು
ಫುಕುವೊಕಾರ `The Natural
Way of Farming-The Theory and Practice of Green Philosophy'ಯಿಂದ ಸಂಗ್ರಹಾನುವಾದ)
ಪ್ರಕೃತಿಯನ್ನು
ಮನುಷ್ಯ ಅರಿಯಲಾರ
ಭೂಮಿಯ ಮೇಲಿನ ಜೀವಿಗಳಲ್ಲೆಲ್ಲಾ
ಆಲೋಚಿಸಬಲ್ಲ ಶಕ್ತಿಯಿರುವುದು ತನಗೇ ಎಂಬ ಹಿರಿಮೆ
ಮನುಷ್ಯನಿಗಿದೆ. ಆತ ತನ್ನನ್ನೂ ಅರಿತಿದ್ದೇನೆ
ಹಾಗೂ ಈ ಪ್ರಾಕೃತಿಕ ಜಗತ್ತನ್ನೂ
ಅರಿತಿದ್ದೇನೆಂಬ ಭ್ರಮೆಯಲ್ಲಿದ್ದಾನೆ. ಅಲ್ಲದೆ ಪ್ರಕೃತಿಯನ್ನು ತನಗಿಷ್ಟಬಂದ
ಹಾಗೆ ಬಳಸಿಕೊಳ್ಳಬಹುದೆಂದೂ ನಂಬಿದ್ದಾನೆ. ತನ್ನ ಬುದ್ಧಿವಂತಿಕೆಯೇ ತನ್ನ
ಶಕ್ತಿ ಹಾಗೂ ಅದರಿಂದಾಗಿ ತನಗೆ
ಅಲಭ್ಯವಾದುದು ಯಾವುದೂ ಇಲ್ಲವೆಂಬ ಅಚಲ
ನಂಬಿಕೆ ಆತನದು.
ಮನುಷ್ಯ ವಿಜ್ಞಾನದಲ್ಲಿ ಮುನ್ನಡೆದು
ತನ್ನ ಪ್ರಾಪಂಚಿಕ/ಐಹಿಕ ಭೋಗ ಸಂಸ್ಕೃತಿಯಲ್ಲಿ
ಶರವೇಗದಿಂದ ಮುನ್ನಡೆಯುತ್ತ ಪರಿಸರಕ್ಕೇ ಪರಕೀಯನಾಗಿ ತನ್ನ ನಾಗರೀಕತೆಯನ್ನು ಸ್ಥಾಪಿಸುತ್ತಿದ್ದಾನೆ,
ತಾಯಿಗೇ ಎದುರು ನಿಂತ ತರಲೇ
ಮಗುವಿನ ಹಾಗೆ. ಆದರೆ ಅವನ
ಎಲ್ಲಾ ಬೃಹತ್ ನಗರಗಳೂ ಆತನ
ನಿರಂತರ ಶ್ರಮ, ಚಟುವಟಿಕೆಗಳು ಆತನಿಗೆ
ತಂದುಕೊಟ್ಟಿರುವುದು ಶೂನ್ಯ ಹಾಗೂ ನಿರ್ಜೀವ
ಸುಖಸಂತೋಷಗಳು. ಅಲ್ಲದೆ ಪ್ರಕೃತಿಯನ್ನು ತನಗಾಗಿ,
ತನ್ನ ಸುಖಸಂತೋಷಕಾಗಿ ಹಾಳುಗೆಡವುತ್ತಿರುವುದರಿಂದ ತನ್ನ ಬದುಕಿನ ಪರಿಸರವನ್ನೂ
ಹಾಳು ಮಾಡಿಕೊಳ್ಳುತ್ತಿದ್ದಾನೆ.
ಪರಿಸರ ಸಂಪತ್ತನ್ನು ಲೂಟಿಮಾಡುತ್ತಿರುವುದರಿಂದ
ಹಾಗೂ ಪ್ರಕೃತಿಗೇ ಪರಕೀಯನಾಗಿ ಬದುಕುತ್ತಿರುವುದರಿಂದ ಅದರ ತಿರುಗೇಟು ಬರಿದಾದ
ಪ್ರಕೃತಿಯ ಸಂಪನ್ಮೂಲಗಳ ಹಾಗೂ ಆಹಾರ ಕೊರತೆಯ
ಸಮಸ್ಯೆಯ ರೂಪದಲ್ಲಿ ಕಾಣಿಸಿಕೊಂಡು ಮಾನವನ ಭವಿಷ್ಯದ ಮೇಲೆ
ಕಪ್ಪು ಛಾಯೆ ಆವರಿಸುತ್ತಿದೆ. ಹದಗೆಟ್ಟ
ಪರಿಸ್ಥಿತಿಯಿಂದಾಗಿ ಮನುಷ್ಯ ಈಗ ಎಚ್ಚೆತ್ತುಕೊಳ್ಳುತ್ತಿದ್ದಾನೆ
ಹಾಗೂ ಸಮಸ್ಯೆಗಳ ಪರಿಹಾರದ ಹಾದಿ ಅರಸುತ್ತಿದ್ದಾನೆ.
ಆದರೆ ಆತ ಮೂಲಭೂತವಾಗಿ ತನ್ನ
ಆತ್ಮ ಪರಿಶೋಧನೆ ಮಾಡಿಕೊಳ್ಳದಿದ್ದಲ್ಲಿ ತನ್ನ ಸರ್ವನಾಶದಿಂದ ತಪ್ಪಿಸಿಕೊಳ್ಳಲಾರ.
ಪ್ರಕೃತಿಗೇ ಪರಕೀಯನಾದಲ್ಲಿ ಮಾನವನ ಅಸ್ತಿತ್ವ ಶೂನ್ಯವಾಗುತ್ತದೆ,
ಆತನ ಬದುಕಿನ ಜೀವಸೆಲೆ ಬತ್ತಿಹೋಗುತ್ತದೆ
ಹಾಗೂ ಮನದಾಳದ ಆಧ್ಯಾತ್ಮಿಕ ತಪೆÇೀವನ ಬರಡಾಗುತ್ತದೆ. ಮಾನವ
ತನ್ನ ನಿರ್ಜೀವ ನಾಗರೀಕತೆಯಲ್ಲಿ ರೋಗಗ್ರಸ್ಥನಾಗುತ್ತಾನೆ,
ಅಣುಕ್ಷಣದ ಕಾಲಾಕಾಶದಲ್ಲಿ ನಿರಂತರ ಸೆಣಸತೊಡಗುತ್ತಾನೆ.
ಪ್ರಕೃತಿ
- ಅದರ ಪಾಡಿಗೆ ಅದಿರಲಿ
ಮನುಷ್ಯ ಮೊದಲಿನಿಂದಲೂ ತಾನು
ಪ್ರಕೃತಿಯನ್ನು ಸಂಪೂರ್ಣ ಅರಿತಿದ್ದೇನೆಂದೂ ಹಾಗೂ
ತನ್ನ ಭವ್ಯ ನಾಗರೀಕತೆಗಳ ನಿರ್ಮಾಣಕ್ಕೆ
ಅದನ್ನು ತಾನು ಸ್ವೇಚ್ಛೆಯಿಂದ ಬಳಸಬಹುದೆನ್ನುವ
ಭ್ರಮೆಯಲ್ಲಿದ್ದಾನೆ. ಆದರೆ ಪ್ರಕೃತಿಯನ್ನು ವಿವರಿಸಲಾಗಲಿ,
ವಿಸ್ತೃತಗೊಳಿಸಲಾಗಲಿ ಸಾಧ್ಯವಿಲ್ಲ. ಜೀವಧಾರೆಯ ಸಂಪೂರ್ಣತೆಯಿಂದಾಗಿ ಅದು ಮಾನವನ ವಿಬೇಧಗಳಿಗೆ,
ವಿಶ್ಲೇಷಣೆಗೆ ಸಿಲುಕುವುದಿಲ್ಲ ಅಥವಾ ಆತನ ವಿಚ್ಛಿದ್ರ
ವಿಶ್ಲೇಷಣೆಯನ್ನೂ ಅದು ಸಹಿಸಿಕೊಳ್ಳುವುದಿಲ್ಲ. ಪ್ರಕೃತಿ
ಸುಂದರ ಗಾಜಿನಗೊಂಬೆಯ ಹಾಗೆ, ಒಮ್ಮೆ ಚೂರಾದರೆ
ಮತ್ತೆ ಜೋಡಿಸಲಾಗುವುದಿಲ್ಲ. ನಂತರ ಉಳಿಯುವುದು ಮೂಲ
ಜೀವಸತ್ವ ಕಳೆದುಕೊಂಡ ನಿರ್ಜೀವ ಖಾಲಿ ಹಂದರ.
ಈ ಹಂದರ ಆತನನ್ನು
ಇನ್ನಷ್ಟು ಗೊಂದಲಕ್ಕೀಡು ಮಾಡುತ್ತದೆ ಹಾಗೂ ದಾರಿ ತಪ್ಪುವಂತೆ
ಮಾಡುತ್ತದೆ.
ಪ್ರಕೃತಿಯನ್ನು ಅರಿಯಲು ಹಾಗೂ ಅದರ
ಜೀವ ವೈವಿಧ್ಯ ಸೃಷ್ಟಿ ಕ್ರಿಯೆಗೆ
ಇನ್ನಷ್ಟು ಇಂಬು ಕೊಡಲು ವೈಜ್ಞಾನಿಕ
ವಿವೇಚನೆಯೂ ಸಹಕಾರಿಯಾಗುವುದಿಲ್ಲ. ತನ್ನ ವಿವೇಚನಾಶೂನ್ಯ ಜ್ಞಾನದಿಂದ
ಅರಿತ ಪ್ರಕೃತಿ ಒಂದು ಮಿಥ್ಯಾ
ಕಲ್ಪನೆ ಮಾತ್ರ. ಮನುಷ್ಯ ಎಂದೆಂದಿಗೂ
ಒಂದು ಎಲೆಯ ಅಂತರಾಳವನ್ನಾಗಲಿ, ಹಿಡಿಮಣ್ಣಿನ
ಅಂತಃಸ್ಸತ್ವವನ್ನಾಗಲಿ ಅರಿಯಲಾರ. ಸಸ್ಯ ಜೀವರಾಶಿಯ ಹಾಗೂ
ಮಣ್ಣಿನ ಅಂತರಾಳ ಗ್ರಹಿಸಲಾಗದ ಮನುಷ್ಯ
ಅವುಗಳನ್ನು ತನ್ನ ಬುದ್ಧಿಮತ್ತೆಯ ರಂಗುಗಂಗಿನ
ಕನ್ನಡಕದ ಮೂಲಕ ನೋಡಲು ಪ್ರಯತ್ನಿಸುತ್ತಿದ್ದಾನೆ.
ನಂತರ ಮನುಷ್ಯ ಪ್ರಕೃತಿಯ ಮಡಿಲಿಗೇ
ಹಿಂದಿರುಗಬಹುದು ಅಥವಾ ತನ್ನ ಅನುಕೂಲಕ್ಕೇ
ಅದನ್ನು ಬಳಸಿಕೊಳ್ಳಬಹುದು. ಆದರೆ ಆತ ಪ್ರಕೃತಿಯ
ಚೂರು ಮಾತ್ರ ಸ್ಪರ್ಶಿಸಲು ಸಾಧ್ಯ,
ಅದೂ ಮೂಲ ಪ್ರಕೃತಿಯೊಂದಿಗೆ ಸಂಪರ್ಕ
ಹೊಂದಿರದ ನಿರ್ಜೀವ ಚೂರಿನೊಂದಿಗೆ ಮಾತ್ರ.
ಅಂದರೆ ಆತ ತನ್ನ ಭ್ರಮಾಲೋಕದ
ಕಲ್ಪನೆಗಳೊಂದಿಗೆ ಆಟವಾಡುತ್ತಿರುತ್ತಾನೆ.
ಸಸ್ಯ, ಪ್ರಾಣಿ ಮತ್ತು
ಸೂಕ್ಷ್ಮಜೀವಿ ಸಂಕುಲಗಳ ಪರಸ್ಪರ ಅವಲಂಬಿತ
ಜೈವಿಕ ಸಮುದಾಯ ನಮ್ಮ ಭೂಮಿ.
ಈ ಸಮುದಾಯವನ್ನು ಮನುಷ್ಯನ
ದೃಷ್ಠಿಯಿಂದ ನೋಡಿದಾಗ ಈ ಪರಸ್ಪರ
ಸಂಬಂಧಗಳು ದುರ್ಬಲರನ್ನು ಕಬಳಿಸುವ ಬಲಶಾಲಿಗಳ ಹಾಗೆ
ಅಥವಾ ಪರಸ್ಪರ ಗಳಿಕೆಯ ಸಹಕಾರದ
ಬದುಕಿನ ಹಾಗೆ ಕಾಣಬಹುದು. ಈ
ಸಮುದಾಯದಲ್ಲಿ ಆಹಾರ ಚಕ್ರಗಳಿವೆ ಹಾಗೂ
ವಸ್ತು ರೂಪಾಂತರ ಚಕ್ರಗಳಿವೆ; ಸಾವು
ಬದುಕಿಲ್ಲದ ನಿರಂತರ ರೂಪಾಂತರ ಪ್ರಕ್ರಿಯೆ
ನಡೆಯುತ್ತಿದೆ. ಈ ಜೀವ-ನಿರ್ಜೀವ
ವಿಸ್ಮಯವನ್ನು ನಮ್ಮ ಅಂತರ್ದೃಷ್ಠಿಯಿಂದ
ಗ್ರಹಿಸಬಹುದಾದರೂ ಸಹ ನಾವು ಅದನ್ನು
ಕೆದಕಿ ವಿಶ್ಲೇಷಿಸಲು `ಸರ್ವಶಕ್ತ' ವಿಜ್ಞಾನದ ಮೊರೆ ಹೋಗಿ ಪ್ರಕೃತಿಯನ್ನು
ದುರಂತದ ಮಡಿಲಿಗೆ ತಳ್ಳುತ್ತಿದ್ದೇವೆ.
ಇಲ್ಲೊಂದು ಉದಾಹರಣೆಯೆಂದರೆ, ಸೇಬು ಮತ್ತು ಸ್ಟ್ರಾಬೆರ್ರಿ
ಮರಗಳಿಗೆ ಬಳಸುವ ಕೀಟನಾಶಕಗಳು. ಈ
ಕೀಟನಾಶಕಗಳಿಗೆ ಎಲ್ಲ ಕೀಟಗಳೂ ಶತ್ರುಗಳೇ.
ಹಾನಿಮಾಡದ ಹಾಗೂ ಉಪಯೋಗಕರ ಕೀಟಗಳ
ನಡುವಿನ ಅಂತರವನ್ನು ಅವು ಗ್ರಹಿಸಲಾರವು. ಈ
ಕೀಟನಾಶಕಗಳು ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸುವಂತಹ ಕೀಟಗಳಾದ
ಜೇನುನೊಣ, ಚಿಟ್ಟೆ ಮುಂತಾದುವನ್ನೂ ಸಹ
ಕೊಂದುಬಿಡುತ್ತವೆ. ನಂತರ ಇಳುವರಿಗಾಗಿ ಮನುಷ್ಯ
ಕೃತಕವಾಗಿ ತನ್ನ ಕೈಯಿಂದಲೇ ಪರಾಗಸ್ಪರ್ಶ
ಮಾಡಬೇಕಾಗುತ್ತದೆ. ಪ್ರಕೃತಿಯಲ್ಲಿನ ಸಸ್ಯ, ಪ್ರಾಣಿ ಹಾಗೂ
ಸೂಕ್ಷ್ಮಜೀವಿಗಳ ಲೆಕ್ಕವಿಲ್ಲದಷ್ಟು ಅಂತರ್ಸಂಬಂಧಿತ ಚಟುವಟಿಕೆಗಳಲ್ಲಿ
ಮನುಷ್ಯ ಎಳ್ಳಷ್ಟನ್ನೂ ನಿಭಾಯಿಸಲಾರ. ಆದರೂ ಅವುಗಳ ಸಹಜ
ಚಟುವಟಿಕೆಗಳಿಗೆ ಅಡ್ಡಿ ಮಾಡುತ್ತಾನೆ. ನಂತರ
ಅವುಗಳನ್ನು ಅಭ್ಯಸಿಸಿ, ವಿಶ್ಲೇಷಿಸಿ ತಾನೇ ತಂದುಕೊಂಡ ಸಮಸ್ಯೆಗಳಿಗೆ
ಪರಿಹಾರ ಹುಡುಕಲು ಯತ್ನಿಸುತ್ತಾನೆ. ಸಮಯ,
ಪ್ರಯತ್ನಗಳ ಎಂತಹ ಹಾಸ್ಯಾಸ್ಪದ ವ್ಯರ್ಥ!
ವಿಜ್ಞಾನ
- ವಿನಾಶದ ಮುಂಚೂಣಿಯಲ್ಲಿ
ಇಂದಿನ ಸಮಾಜದ ಮನುಷ್ಯ
ಪ್ರಕೃತಿಯಿಂದ ದೂರವಿದ್ದಾನೆ ಹಾಗೂ ಅವನ ಜ್ಞಾನ
ಅಸ್ಪಷ್ಟವಾಗಿದೆ. ಒಂದು ಉದಾಹರಣೆ ನೋಡಿ:
ಒಬ್ಬ ವಿಜ್ಞಾನಿ ಪ್ರಕೃತಿಯ ಬಗ್ಗೆ ಅರಿಯಲು ಹೊರಡುತ್ತಾನೆ.
ಆತ ಎಲೆಯೊಂದರ ಅಧ್ಯಯನದೊಂದಿಗೆ ಆರಂಭಿಸಬಹುದು. ಆತನ ಅಧ್ಯಯನ ಮುಂದುವರಿದಂತೆ
ಅಣುಗಳ ಹಾಗೂ ಮೂಲಭೂತ ಕಣಗಳ
ಹಂತದವರೆಗೆ ತಲುಪುತ್ತಾನೆ. ಕೊನೆಗೆ ತನ್ನ ಅಧ್ಯಯನದ
ಆರಂಭವಾದ ಎಲೆಯನ್ನೇ ಮರೆಯುತ್ತಾನೆ.
ಅಣು ಸಂಯೋಜನೆ ಮತ್ತು
ವಿಭಜನೆಯ ಬಗೆಗಿನ ಸಂಶೋಧನೆ ಇಂದು
ಅತ್ಯಂತ ಮುಂದುವರಿದ ಹಾಗೂ ಚಲನಶೀಲ ಸಂಶೋಧನಾ
ಕ್ಷೇತ್ರವಾಗಿದೆ. ಅಲ್ಲದೆ ಅನುವಂಶಿಕ ತಂತ್ರಜ್ಞಾನದ
ಅಭಿವೃದ್ಧಿಯಿಂದಾಗಿ ಇಂದು ಮನುಷ್ಯ ಜೀವಜಗತ್ತನ್ನು
ತನಗಿಷ್ಟ ಬಂದ ಹಾಗೆ ಬದಲಿಸುವ
ಸಾಮಥ್ರ್ಯ ಉಳ್ಳವನಾಗಿದ್ದಾನೆ. ತಾನೇ ಬದಲಿ ಸೃಷ್ಟಿಕರ್ತನೆಂದು
ಬೀಗುತ್ತಿರುವ ಮನುಷ್ಯ ಇಂದು ತನ್ನ
ಕೈಲಿ ಮಾಂತ್ರಿಕನ ಮಾಯದಂಡ ಹಿಡಿದಿದ್ದಾನೆ. ಈ
ಮಾಯದಂಡದಿಂದ ಮನುಷ್ಯ ವಿವಿಧ ಜೀವರಾಶಿಗಳ
ವಂಶವಾಹಿಗಳನ್ನು ಸಂಯೋಜಿಸಿ ಹೊಸ ಹೊಸ ಜೀವರಾಶಿಗಳನ್ನು
ಸೃಷ್ಟಿಸಬಹುದು: ದೈತ್ಯಾಕಾರದ ಬತ್ತದ ತಳಿಗಳು, ಮರದ
ಮೇಲೆ ಬಿಡುವ ಟೊಮ್ಯಾಟೊಗಳು ಹಾಗೂ
ಮೃಗಾಲಯಗಳಿಗಾಗಿ ವಿವಿಧ ಸಮ್ಮಿಶ್ರ ಪ್ರಾಣಿಗಳು
ಇತ್ಯಾದಿ. ರಾಣಿ ಇರುವೆ ದುಡಿತಕ್ಕೆ
ಬೇಕಾಗುವ ಕೆಲಸಗಾರರ ಹಿಂಡನ್ನೇ ಸೃಷ್ಟಿಸುವಂತೆ ತನಗಾಗಿ ದುಡಿಯುವ ಕೀಟ,
ಪ್ರಾಣಿಗಳನ್ನು ಮನುಷ್ಯ ಸೃಷ್ಟಿಸಬಹುದು. ಮೇಧಾವಿ
ವಿಜ್ಞಾನಿಗಳ ವಂಶವಾಹಿಗಳಿಂದ ಮೇಧಾವಿ ಜನಾಂಗವನ್ನೇ ಸೃಷ್ಟಿಸುವ
ಕನಸನ್ನು ಮನುಷ್ಯ ಕಾಣುತ್ತಿದ್ದಾನೆ. ಮುಂದೆ
ಪ್ರಸವ ವೇದನೆಯನ್ನು ಅನುಭವಿಸುವುದಾಗಲಿ, ಮಕ್ಕಳನ್ನು ಬೆಳೆಸುವ ಜಂಜಾಟವಿಲ್ಲದೆ ಪ್ರಯೋಗಾಲಯಗಳಲ್ಲಿ
ಮಕ್ಕಳನ್ನು ಸೃಷ್ಟಿಸಿ, ಆಹಾರ ಪೆÇೀಷಕಾಂಶಗಳನ್ನು
ಒದಗಿಸುವ ಕಾಲ ಬರಬಹುದು.
ಈ ಎಲ್ಲಾ ಕನಸುಗಳು
ನನಸಾಗುವ ಕಾಲ ಸನ್ನಿಹಿತವಾಗುತ್ತಿದೆ. ಅದು
ವಾಸ್ತವವಾದಾಗ ಕೃಷಿಯಲ್ಲಿ ರೈತರ ಪಾತ್ರವೇನು? ಮಳೆ
ಬಿಸಿಲಲ್ಲಿ ಹೊಲಗದ್ದೆಗಳಲ್ಲಿ ರೈತರು ದುಡಿಯುವ ಬದಲು
ಅವರು ಕಾರ್ಖಾನೆಗಳಲ್ಲಿ ವಿಜ್ಞಾನಿಗಳಿಗಾಗಿ ದುಡಿಯುತ್ತಿರುತ್ತಾರೆ.
ವಿಜ್ಞಾನಿಗಳ ಈ ಎಲ್ಲ ಕನಸುಗಳೂ
ಮರೀಚಿಕೆಗಳು, ಬುದ್ಧನ ಅಂಗೈಯಲ್ಲಿನ ಕಾಡುಕುಣಿತದ
ಹಾಗೆ. ವಿಜ್ಞಾನಿಗಳು ಜೀವ-ನಿರ್ಜೀವ ವಸ್ತುಗಳನ್ನು
ರೂಪಾಂತರಗೊಳಿಸಿ ಹೊಸ ಹೊಸ ಜೀವ
ಸೃಷ್ಟಿಸುತ್ತಿದ್ದರೂ ಮಾನವ ಜ್ಞಾನದ ಸೃಷ್ಟಿ
ಮತ್ತು ಫಲಗಳು ಮಾನವ ಬುದ್ಧಿಮತ್ತೆಯ
ಮಿತಿಯನ್ನು ಮೀರಲಾರವು. ಪ್ರಕೃತಿಯ ದೃಷ್ಟಿಯಲ್ಲಿ ಮಾನವ ಜ್ಞಾನದ ಫಲದ
ಕ್ರಿಯೆಗಳೆಲ್ಲಾ ನಿಷ್ಪಲ-ವ್ಯರ್ಥ.
ಈ ಸಾಪೇಕ್ಷ ಪ್ರಪಂಚದಲ್ಲಿ
ಮಾನವನ ಮಿಥ್ಯಾ ವಿವೇಕದಿಂದ ಸೃಷ್ಟಿಗೊಂಡ,
ಗೊತ್ತುಗುರಿಯಿಲ್ಲದ ಭ್ರಮಾಲೋಕವಿದು. ಮನುಷ್ಯ ಏನನ್ನೂ ಕಲಿತಿಲ್ಲ,
ಏನೂ ಸಾಧಿಸಿಲ್ಲ. ತಾನು ಪ್ರಕೃತಿಯನ್ನು ನಿಯಂತ್ರಿಸಬಲ್ಲೆನೆಂಬ
ಭ್ರಮೆಯಲ್ಲಿ ಅದನ್ನು ಹಾಳುಗೆಡವುತ್ತಿದ್ದಾನೆ. ಇಂತಹ ವಿಜ್ಞಾನಿಗಳು
ರೈತರನ್ನು ತಮ್ಮ ಹಿಂದೆ ಕರೆದೊಯ್ಯುವ
ಕಿನ್ನರಿ ಜೋಗಿಗಳಾಗಿದ್ದಾರೆ. ಈ ರೈತರದು ಎಂತಹ
ದುರಂತ!
ಪಾಶ್ಚಿಮಾತ್ಯ ದೇಶಗಳ ಪ್ರಕೃತಿ ವಿಜ್ಞಾನದ
ಒಂದು ಅಂಗವಾಗಿ ವೈಜ್ಞಾನಿಕ ಕೃಷಿ
ಟಿಸಿಲೊಡೆಯಿತು. ಈ ಪ್ರಕೃತಿ ವಿಜ್ಞಾನ
ಪ್ರಕೃತಿಯನ್ನು ತಥ್ಯ ಪರಾಮರ್ಶಿಸಿ ಹಾಗೂ
ವಿಶ್ಲೇಷಿಸಿ ನೋಡುವ ಪ್ರಾಪಂಚಿಕ ದೃಷ್ಟಿಕೋನವನ್ನು
ಪಡೆದುಕೊಂಡಿತು. ಏಕೆಂದರೆ ಪಾಶ್ಚಿಮಾತ್ಯರು ಪ್ರಕೃತಿ
ಮತ್ತು ಮನುಷ್ಯನನ್ನು ವಿಭಜಿಸಿ ನೋಡುವ ಮನೋಭಾವದವರಾಗಿದ್ದರು.
ಪ್ರಕೃತಿಯೊಂದಿಗೆ ಮನುಷ್ಯ ಒಂದಾಗಬೇಕೆಂಬ ಪೌರಾತ್ಯರ
ನಂಬಿಕೆಗೆ ವಿರುದ್ಧವಾಗಿ ತನ್ನ ಪಕ್ಷಪಾತ ಜ್ಞಾನದಿಂದಾಗಿ
ಪಾಶ್ಚಿಮಾತ್ಯ ಮನುಷ್ಯ ಪ್ರಕೃತಿ ಮತ್ತು
ಮನುಷ್ಯ ಎದುರುಬದುರಾಗಿ ನಿಲ್ಲಿಸಿದ. ಈ ಸ್ಥಾನದಿಂದ, ಮನುಷ್ಯ
ಪ್ರಕೃತಿಯನ್ನಿ ಅರಿಯಬೇಕಾಗಿದ್ದಲ್ಲಿ ಜ್ಞಾತೃನಿಷ್ಠ ದೃಷ್ಠಿಯಿಂದ ನೋಡದೆ ವಸ್ತುನಿಷ್ಠ ದೃಷ್ಟಿಯಿಂದ
ನೋಡುವುದೇ ಸರಿಯಾದ ವಿಧಾನವೆಂಬುದು ಆತನ
ನಂಬಿಕೆಯಾಗಿತ್ತು.
ಪಾಶ್ಚಿಮಾತ್ಯ ಮನುಷ್ಯ ಪ್ರಕೃತಿಯನ್ನು ಮಾನವ
ಪ್ರಜ್ಞೆಗೆ ನಿಲುಕದ ವಾಸ್ತವವೆಂದೂ ಅದನ್ನು
ಪರಿಶೀಲನೆ, ಶಿಥಿಲ ವಿಶ್ಲೇಷಣೆ ಹಾಗೂ
ಪುನರ್ರಚನೆಯ ಮೂಲಕ ಅರಿಯಬಹುದೆಂದು ಭಾವಿಸಿದ್ದಾನೆ.
ಈ ರೀತಿಯ ವಿನಾಶ
ಮತ್ತು ಪುನರ್ರಚನೆಯ ಕ್ರಿಯೆಗಳಿಂದ ಪ್ರಕೃತಿ ವಿಜ್ಞಾನಗಳು ಹುಟ್ಟಿಕೊಂಡವು.
ಪ್ರಕೃತಿ ವಿಜ್ಞಾನಗಳು ಪ್ರಚಂಡವೇಗದಲ್ಲಿ
ಮುಂದುವರೆದಿವೆ. ಇಂದು ಮನುಷ್ಯ ವಿಶ್ವದಲ್ಲಿನ
ಪ್ರತಿಯೊಂದನ್ನೂ ಅರಿಯಬಲ್ಲೆನೆಂಬ ಭಾವನೆಯಲ್ಲಿದ್ದಾನೆ ಹಾಗೂ ಇನ್ನೂ ಅಜ್ಞಾತವಾದುದೆಲ್ಲವನ್ನೂ
ಇಂದಲ್ಲ ನಾಳೆ ಅರಿತೇ ತೀರುವೆನೆಂಬ
ಆಶಾದಾಯಕ ಮನೋಭಾವ ಹೊಂದಿದ್ದಾನೆ. ಆದರೆ
ಈ `ಅರಿವು' ಎಂದರೇನು? ಕೂಪಮಂಡೂಕದ
ಕತೆ ಕೇಳಿ ಮನುಷ್ಯ ನಗಬಹುದು.
ಆದರೆ ಈ ಅನಂತ ವಿಶ್ವದಲ್ಲಿ
ತಾನೇ ಕೂಪಮಂಡೂಕವೆಂಬುದರ ಅರಿವು ಆತನಿಗಿಲ್ಲ. ಈ
ಅನಂತ ವಿಶ್ವದ, ಗಮನಕ್ಕೆ ಬಾರದ
ಸಣ್ಣ ಚುಕ್ಕೆಯ ಮೇಲೆ ತಾನು
ನಿಂತಿದ್ದರೂ ತನ್ನ ಅಂಗೈಯಲ್ಲೇ ಬ್ರಹ್ಮಾಂಡವಿದೆ
ಎಂಬ ಭಾವನೆಯಲ್ಲಿದ್ದಾನೆ. ಮನುಷ್ಯ ಪ್ರಕೃತಿಯನ್ನು ಎಂದಿಗೂ
ಅರಿಯಲಾರ.
ಆದರೂ ನನ್ನಲ್ಲಿ ಒಂದು
ಆಶಾದಾಯಕ ಭರವಸೆಯಿದೆ - ಪಾಳುಬಿದ್ದ ಹಳ್ಳಿಯ ಮನೆಯ ಒಲೆಯ
ಬೂದಿಯಲ್ಲಿ ಕೆಂಡವೊಂದು ಹುದುಗಿರಬಹುದು. ಆ ಕೆಂಡವೇ ಹೊಸ
ಸಂಸ್ಕೃತಿಗೆ, ಹೊಸ ಬದುಕಿಗೆ ಜೀವ
ಜ್ವಾಲೆ ಒದಗಿಸಬಹುದು. ಮನುಷ್ಯ ಮತ್ತು ಪ್ರಕೃತಿಯನ್ನು
ಒಂದುಗೂಡಿಸುವ ಸಹಜ ಕೃಷಿಗೆ ಮನುಷ್ಯ
ಹಿಂದಿರುಗಬಹುದು.
j.balakrishna@gmail.com
2 ಕಾಮೆಂಟ್‌ಗಳು:
thumba arhagarbithavada lekhana... prathiyobba maanavanu Gandhijiya sathya, ahimse, sarala jeevanada belakalli nadeyabekagiru e anivarya sandarbadalli.. fukoakara naisargika krishiya chinthanegalannu alavadikolladiddare ee boomi namma mundina peeligege illvaguvudu nischitha..
😍
ಕಾಮೆಂಟ್ ಪೋಸ್ಟ್ ಮಾಡಿ