ಬುಧವಾರ, ಸೆಪ್ಟೆಂಬರ್ 24, 2014

ಸಂವಾದ ಪತ್ರಿಕೆಯ ಆಗಸ್ಟ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 31ನೇ ಕಂತು

ಸಂವಾದ ಪತ್ರಿಕೆಯ ಆಗಸ್ಟ್ 2014ರ ಸಂಚಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 31ನೇ ಕಂತು


ದಿವ್ಯೌಷಧ

ಒಬ್ಬ ಫಕೀರ ಒಂದು ದಿವ್ಯೌಷಧ ಕಂಡುಹಿಡಿದಿದ್ದ. ಅದನ್ನು ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ. ಫಕೀರ ಕಣ್ಣುಮುಚ್ಚಿ ಧ್ಯಾನಭಂಗಿಯಲ್ಲಿದ್ದ. ಅವನ ಸಹಾಯಕನಾದ ನಸ್ರುದ್ದೀನ್ ಜೋರಾಗಿ ಕೂಗಿ ಪ್ರಚಾರ ಮಾಡುತ್ತಿದ್ದ.

`ನೋಡಿ, ನಮ್ಮ ಬಾಬಾ ಕಂಡುಹಿಡಿದಿರುವ ದಿವ್ಯೌಷಧ! ಇದನ್ನು ಒಂದು ತಿಂಗಳು ಸೇವಿಸಿದರೆ ನಿಮ್ಮ ಆಯಸ್ಸು ಮುನ್ನೂರು ವರ್ಷ ಹೆಚ್ಚುತ್ತದೆ! ಬೇಕಿದ್ದಲ್ಲಿ ನೋಡಿ, ನಮ್ಮ ಬಾಬಾ ಅದನ್ನು ದಿನಾಲೂ ಸೇವಿಸುತ್ತಾರೆ, ಈಗ ಅವರ ವಯಸ್ಸು ಕೇವಲ ಮುನ್ನೂರೈವತ್ತು ವರ್ಷಗಳಷ್ಟೇ!!’

ನೆರೆದಿದ್ದ ಜನರಲ್ಲಿ ಒಬ್ಬಾತ ಕುತೂಹಲದಿಂದ, `ಹೌದೆ? ಆ ಬಾಬಾನ ವಯಸ್ಸು ನಿಜವಾಗಿಯೂ ಮುನ್ನೂರೈವತ್ತು ವರ್ಷಗಳೇ?’ ಎಂದು ಕೇಳಿದ.

`ಇದ್ದರೂ ಇರಬಹುದು, ನನಗೆ ಸರಿಯಾಗಿ ತಿಳಿದಿಲ್ಲ. ನಾನು ಆತನ ಬಳಿ ಕೇವಲ ನೂರೈವತ್ತು ವರ್ಷಗಳಿಂದ ಕೆಲಸಕ್ಕಿದ್ದೇನೆ ಅಷ್ಟೆ’ ಹೇಳಿದ ನಸ್ರುದ್ದೀನ್.


ಜಗದ ಸತ್ಯ

ಆ ಊರಿಗೆ ಒಬ್ಬ ಹೊಸ ಮೌಲ್ವಿ ಬಂದಿದ್ದ. ಆತ ಮಹಾನ್ ಮಾತುಗಾರ. ನಿರಂತರವಾಗಿ ದಿನಗಟ್ಟಲೆ ಮಾತನಾಡುವಂಥವನು. ಆತನ ಬೋಧನೆ ಕೇಳಿದ ನಸ್ರುದ್ದೀನ್, `ಆತನ ಮಾತುಗಳನ್ನು ಕೇಳುತ್ತಿದ್ದರೆ, ಆತನ ಮಾತಿನಲ್ಲಿ ಸತ್ಯವಿರುವಂತೆಯೇ ಇಲ್ಲ’ ಎಂದ ತನ್ನ ಗೆಳೆಯನ ಬಳಿ.

`ಏಕೆ?’ ಕೇಳಿದ ಆತನ ಗೆಳೆಯ.

`ಏಕೆಂದರೆ ಆತ ದಿನಗಟ್ಟಲೆ ಮಾತನಾಡುತ್ತಾನೆ. ಜಗದಲ್ಲಿ ಅಷ್ಟೊಂದು ಸತ್ಯ ಎಲ್ಲಿ ಉಳಿದಿದೆ?’ ಹೇಳಿದ ನಸ್ರುದ್ದೀನ್.

ಸಮಸ್ಯೆ ವರ್ಗಾವಣೆ

ತನಗೆ ತೀವ್ರ ಆತಂಕ ಕಾಡತೊಡಗಿದ್ದರಿಂದ ಮುಲ್ಲಾ ನಸ್ರುದ್ದೀನ್ ಮನೋವೈದ್ಯರನ್ನು ಭೇಟಿಯಾದ. ಆತನನ್ನು ಪರೀಕ್ಷಿಸಿದ ವೈದ್ಯರು `ನಿನ್ನಲ್ಲಿ ಅಂಥ ದೊಡ್ಡ ಸಮಸ್ಯೆ ಏನಿಲ್ಲ. ನೀನು ಚಿಂತೆ, ಆಲೋಚನೆ ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳಬೇಡ. ಎಲ್ಲವೂ ಸರಿಯಾಗುತ್ತದೆ. ಕೆಲದಿನಗಳ ಹಿಂದೆ ಇದೇ ರೀತಿಯ ಆತಂಕ ಹೊಂದಿದ್ದ ಒಬ್ಬಾತ ಬಂದಿದ್ದ. ಆತ ಯಾರಿಗೋ ಐವತ್ತು ಸಾವಿರ ಸಾಲ ತೀರಿಸಬೇಕಿತ್ತಂತೆ. ತುಂಬಾ ಆತಂಕಕ್ಕೊಳಗಾಗಿದ್ದ. ನಾನು ಆತನಿಗೆ ಅದನ್ನು ಮರೆತು ಆರಾಮವಾಗಿರುವಂತೆ ತಿಳಿಸಿದೆ. ಮುಂದೆ ಎಂದಾದರೂ ಸಮಯಬಂದಾಗ ಸಾಲ ತೀರಿಸಬಹುದು ಎಂದು ಹೇಳಿದೆ’ ಎಂದರು ವೈದ್ಯರು.

`ಅವನ ಆತಂಕದ ಕಾಯಿಲೆ ವಾಸಿಯಾಯಿತೆ?’ ಕೇಳಿದ ನಸ್ರುದ್ದೀನ್.

`ಹೌದು, ಈಗ ಅವನು ಆರೋಗ್ಯವಾಗಿದ್ದಾನೆ’ ಹೇಳಿದರು ವೈದ್ಯರು.

`ಆದರೆ, ಈಗ ಆ ಕಾಯಿಲೆ ನನಗೆ ಬಂದಿದೆ. ಅವನು ಐವತ್ತು ಸಾವಿರ ಸಾಲ ಹಿಂದಿರುಗಿಸಬೇಕಾಗಿದ್ದುದು ನನಗೆ’ ಹೇಳಿದ ನಸ್ರುದ್ದೀನ್ ತನ್ನ ತಲೆಯ ಮೇಲೆ ಕೈ ಹೊತ್ತು.

ಸಾಮ್ಯ

ಒಂದು ದಿನ ಮುಲ್ಲಾ ನಸ್ರುದ್ದೀನ್ ಗಡಂಗಿನಲ್ಲಿ ಕೂತಿದ್ದಾಗ ಬಹಳ ದಿನಗಳ ನಂತರ ಆತನ ಗೆಳೆಯನೊಬ್ಬ ಅಲ್ಲಿಗೆ ಬಂದ. ಆತನನ್ನು ನೋಡಿದ ಮುಲ್ಲಾ, `ನಿನ್ನನ್ನು ನೋಡಿದಾಗಲೆಲ್ಲಾ ನನಗೆ ಅಬ್ದುಲ್ಲಾನ ನೆನಪಾಗುತ್ತದೆ’ ಎಂದ.

`ವಿಚಿತ್ರ! ನನಗೂ ಅವನಿಗೂ ಯಾವ ರೀತಿಯ ಸಾಮ್ಯವೂ ಇಲ್ಲ. ಅದ್ಹೇಗೆ ನನ್ನನ್ನು ಕಂಡರೆ ಅಬ್ದುಲ್ಲಾನ ನೆನಪಾಗುತ್ತದೆ?’ ಕೇಳಿದ ಗೆಳೆಯ.

`ಖಂಡಿತಾ ಸಾಮ್ಯವಿದೆ. ನೀವಿಬ್ಬರೂ ನನಗೆ ನೂರು ನೂರು ರೂಪಾಯಿ ಸಾಲ ಹಿಂದಿರುಗಿಸಬೇಕು’ ಹೇಳಿದ ನಸ್ರುದ್ದೀನ್.

ಹುಡುಗಿಯ ಮುತ್ತು

ಆ ಊರಿಗೆ ಸರ್ಕಸ್ ಬಂದಿತ್ತು. ಸರ್ಕಸ್ಸಿಗೆ ಜನರನ್ನು ಆಕರ್ಷಿಸಲು ಒಂದು ಆಟ ಹೂಡಿದ್ದರು. ಆ ಆಟದಲ್ಲಿ ಗೆದ್ದವರಿಗೆ ಸರ್ಕಸ್ಸಿನ ಒಬ್ಬಳು ಸುಂದರ ಹುಡುಗಿ ಮುತ್ತು ಕೊಡುತ್ತಿದ್ದಳು. ಮುಲ್ಲಾ ಅಲ್ಲಿಗೆ ಬಂದಾಗ ಅವನ ಗೆಳೆಯನೊಬ್ಬ ಅಲ್ಲಿ ತುಂಬಾ ಸಂತೋಷದಿಂದಿದ್ದ.

`ನೋಡು ಮುಲ್ಲಾ, ಆ ಆಟದಲ್ಲಿ ನಾನು ಗೆದ್ದೆ. ಅದಕ್ಕಾಗಿ ಆ ಹುಡುಗಿ ಕೊಟ್ಟ ಮುತ್ತು ನನ್ನ ಹೆಂಡತಿ ಕೊಡುವ ಮುತ್ತಿಗಿಂತ ಅದ್ಭುತವಾಗಿತ್ತು’ ಎಂದ ಆ ಗೆಳೆಯ.

`ಹೌದೆ, ನೋಡೋಣ. ನಾನೂ ಪ್ರಯತ್ನಿಸುತ್ತೇನೆ’ ಎಂದ ಮುಲ್ಲಾ ತಾನೂ ಆ ಆಟವಾಡಿದ ಹಾಗೂ ಅದರಲ್ಲಿ ಗೆದ್ದ. ಆ ಹುಡುಗಿ ಮುಲ್ಲಾನಿಗೂ ಮುತ್ತು ಕೊಟ್ಟಳು.

`ಹೇಗಿತ್ತು?’ ಕೇಳಿದ ಮುಲ್ಲಾನ ಗೆಳೆಯ.

`ಹೇ, ಇಲ್ಲಾ ಬಿಡು. ಇದಕ್ಕಿಂತ ನಿನ್ನ ಹೆಂಡತಿಯ ಮುತ್ತೇ ಚೆನ್ನಾಗಿರುತ್ತದೆ’ ಎಂದ ಮುಲ್ಲಾ.



ದಡ್ಡ

ಮುಲ್ಲಾ ನಸ್ರುದ್ದೀನ್ ಮತ್ತು ಆತನ ಗೆಳೆಯ ಒಂದು ದೊಡ್ಡ ಸರೋವರದಲ್ಲಿ ಮೀನು ಹಿಡಿಯಲು ಹೊರಟಿದ್ದರು. ಬಹಳ ಹೊತ್ತು ಪ್ರಯತ್ನಿಸಿದರೂ ಅವರಿಗೆ ಎಲ್ಲಿಯೂ ಮೀನು ಸಿಗಲಿಲ್ಲ. ಕೊನೆಗೆ ಯಾವುದೋ ಒಂದು ಸ್ಥಳದಲ್ಲಿ ಬಹಳಷ್ಟು ಮೀನು ಸಿಕ್ಕಿತು.

`ಈ ಜಾಗವನ್ನು ಗುರುತು ಮಾಡು ಮುಲ್ಲಾ. ನಾಳೆ ಮೀನು ಹಿಡಿಯಲು ನೇರ ಇಲ್ಲಿಗೇ ಬರೋಣ’ ಎಂದ ಮುಲ್ಲಾ ನಸ್ರುದ್ದೀನನ ಗೆಳೆಯ.

ಮೀನು ಹಿಡಿದು ದೋಣಿಯನ್ನು ನಿಲ್ಲಿಸಿ ಹೊರಡುವಾಗ ಮುಲ್ಲಾನ ಗೆಳೆಯ ಪುನಃ ನೆನಪು ಮಾಡಿಕೊಂಡು, `ಮುಲ್ಲಾ ನಾನು ಹೇಳಿದಂತೆ ಆ ಜಾಗದ ಗುರುತು ಮಾಡಿದೆಯಾ?’ ಎಂದು ಕೇಳಿದ.

`ಹೌದು, ಮಾಡಿದ್ದೇನೆ. ದೋಣಿಯ ಹಿಂಭಾಗದಲ್ಲಿ ಇದ್ದಿಲಿನಲ್ಲಿ ಗುರುತು ಹಾಕಿದ್ದೇನೆ’ ಎಂದ ಮುಲ್ಲಾ.

`ಅಯ್ಯೋ, ಎಂಥ ದಡ್ಡ ನೀನು. ನಾಳೆ ನಮಗೆ ಅದೇ ದೋಣಿ ಸಿಗುತ್ತದೆ ಎನ್ನುವ ಗ್ಯಾರಂಟಿ ಏನು?’ ಕೇಳಿದ ಮುಲ್ಲಾನ ಗೆಳೆಯ.

ಸಮಸ್ಯೆಯಲ್ಲ

ಮುಲ್ಲಾ ತನ್ನ ಕತ್ತೆಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ. ಮೊಣಕೈ ಚರ್ಮ ತರಿದುಹೋಗಿ ರಕ್ತಸಿಕ್ತ ಗಾಯವಾಯಿತು. ಚಿಕಿತ್ಸೆಗೆ ವೈದ್ಯರ ಬಳಿ ಹೋದ. ಗಾಯಕ್ಕೆ ಔಷಧಿ ಹಚ್ಚಿ ಕಟ್ಟು ಕಟ್ಟುವಾಗ ವೈದ್ಯರು, `ಸ್ವಲ್ಪ ತರಚಿದೆ, ಒಂದಷ್ಟು ರಕ್ತ ಹೋಗಿದೆ ಹಾಗೂ ಎಲುಬು ಊದಿಕೊಂಡಿದೆ. ಅದೇನೂ ದೊಡ್ಡ ಸಮಸ್ಯೆಯೆಂದು ನನಗನ್ನಿಸುವುದಿಲ್ಲ’ ಎಂದರು.

`ಹೌದು, ನಿಮಗೂ ಅದೇ ರೀತಿ ನಿಮಗೂ ಸ್ವಲ್ಪ ತರಚಿ, ಒಂದಷ್ಟು ರಕ್ತ ಹೋಗಿ ಎಲುಬು ಊದಿಕೊಂಡಿದ್ದಲ್ಲಿ ನನಗೂ ಅದೇನೂ ದೊಡ್ಡ ಸಮಸ್ಯೆಯೆಂದು ನನಗನ್ನಿಸುತ್ತಿರಲಿಲ್ಲ’ ಎಂದ ಮುಲ್ಲಾ.

ನನಗೇನು ಹುಚ್ಚೇ!

ಮುಲ್ಲಾನನ್ನು ಚಿಕಿತ್ಸೆಗೆಂದು ಹುಚ್ಚಾಸ್ಪತ್ರೆಗೆ ಸೇರಿಸಲಾಗಿತ್ತು. ಕೆಲವಾರಗಳ ನಂತರ ಆತನ ಗೆಳೆಯ ಮುಲ್ಲಾನನ್ನು ಭೇಟಿಮಾಡಲು ಬಂದ.

`ಹೇಗಿದ್ದೀಯಾ ಮುಲ್ಲಾ?’

`ಬಹಳ ಚೆನ್ನಾಗಿದ್ದೇನೆ’ ಹೇಳಿದ ಮುಲ್ಲಾ.

`ಹಾಗಾದರೆ ಇನ್ನು ಕೆಲವು ದಿನಗಳಲ್ಲಿ ನೀನು ಮನೆಗೆ ಹಿಂದಿರುಗಬಹುದು?’ ಕೇಳಿದ ಗೆಳೆಯಾ.

`ಏನು? ಮನೆಗೆ? ಇಲ್ಲಿ ಇಷ್ಟೊಂದು ಪ್ರಶಾಂತ ವಾತಾವರಣವಿರುವ, ಸಮಯಕ್ಕೆ ಸರಿಯಾಗಿ ಗೊಣಗದೆ ಊಟ ಹಾಕುವಾಗ, ಆ ಕೆಲಸ ಮಾಡು, ಈ ಕೆಲಸ ಮಾಡು ಎಂದು ಒತ್ತಾಯ ಮಾಡುವವರು ಇಲ್ಲದಿರುವ ಈ ಸುಂದರ ಸ್ಥಳವನ್ನು ಬಿಟ್ಟು ಆ ಜಗಳಗಂಟಿ ಹೆಂಡತಿಯಿರುವ ಮನೆಗೆ ಹಿಂದಿರುಗಬೇಕೆ? ನನಗೇನು ಹುಚ್ಚು ಹಿಡಿದಿದೆಯೆ ಅಲ್ಲಿಗೆ ಹಿಂದಿರುಗಲು?’ ಕೇಳಿದ ಸಿಡುಕುತ್ತಾ ಮುಲ್ಲಾ.

ನಮ್ಮೊಳಗೊಬ್ಬ

ಮುಲ್ಲಾನನ್ನು ಚಿಕಿತ್ಸೆಗಾಗಿ ಬಹಳ ದಿನಗಳಿಂದ ಹುಚ್ಚಾಸ್ಪತ್ರೆಯಲ್ಲಿದ್ದ. ಹಿಂದಿದ್ದ ವೈದ್ಯರಿಗೆ ವರ್ಗವಾಗಿ ಹೊಸ ವೈದ್ಯರು ಬಂದರು. ಅವರನ್ನು ನೋಡಿ, ಅವರೊಂದಿಗೆ ಮಾತನಾಡಿದ ಮುಲ್ಲಾ,

`ಹಿಂದಿನ ವೈದ್ಯರಿಗಿಂತ ನೀವೇ ನಮಗೆ ಹೆಚ್ಚು ಇಷ್ಟವಾಗಿದ್ದೀರಿ’ ಎಂದ. ವೈದ್ಯರಿಗೆ ಸಂತೋಷವಾಯಿತು.

`ಹೌದೆ? ಅದಕ್ಕೆ ಏನು ಕಾರಣವಿರಬಹುದು?’ ಎಂದು ಕೇಳಿದರು.

`ಏನಿಲ್ಲಾ, ನೀವು ನಮ್ಮೊಳಗೊಬ್ಬರು ಎನ್ನಿಸುತ್ತಿರುವಿರಿ, ಅದಕ್ಕೆ’ ಎಂದ ಮುಲ್ಲಾ.

ಯುದ್ಧದ ಗಾಯ

ನಸ್ರುದ್ದೀನ್ ಕ್ಷೌರಕ್ಕೆಂದು ಕ್ಷೌರದ ಅಂಗಡಿಗೆ ಹೋದ. ಕ್ಷೌರಿಕ ನಸ್ರುದ್ದೀನನ ಮುಖ ನೋಡಿ, `ನಿಮ್ಮನ್ನು ನೋಡಿದಂತಿದೆ. ಈ ಹಿಂದೆ ನಾನು ನಿಮಗೆ ಕ್ಷೌರ ಮಾಡಿರಬಹುದಲ್ಲವೆ?’ ಎಂದು ಕೇಳಿದ.

`ಖಂಡಿತಾ ಇಲ್ಲ. ನನ್ನ ಕೆನ್ನೆಯ ಮೇಲಿನ ಕತ್ತಿಯ ಗಾಯದ ಕಲೆ ನನಗೆ ಯುದ್ಧದಲ್ಲಾದದ್ದು’ ಎಂದ ನಸ್ರುದ್ದೀನ್.

ನಿಲ್ಲಲೇ ಆಗುತ್ತಿಲ್ಲ

ನಸ್ರುದ್ದೀನ್ ಎಂ.ಜಿ.ರಸ್ತೆಯ ಬಾರೊಂದರಿಂದ ಕುಡಿದು ತೂರಾಡುತ್ತಾ ಹೊರಬಂದ. ಅಲ್ಲೇ ನಿಂತಿದ್ದ ತನ್ನ ಕಾರಿನ ಬಳಿ ಹೋಗಿ ಬಾಗಿಲು ತೆರೆಯಬೇಕೆನ್ನುವಷ್ಟರಲ್ಲಿ ಅಲ್ಲಿಗೆ ಪೋಲೀಸಿನವನೊಬ್ಬ ಬಂದ.

`ನೀವು ಸ್ವಲ್ಪ ಹೆಚ್ಚೇ ಕುಡಿದಂತಿದೆ. ನಿಮ್ಮ ಕಾರನ್ನು ನೀವು ಡ್ರೈವ್ ಮಾಡುವುದಿಲ್ಲ ತಾನೆ?’ ಎಂದು ಕೇಳಿದ.

`ಇಲ್ಲ, ನಾನೇ ಡ್ರೈವ್ ಮಾಡಬೇಕು. ನೀವೇ ನೋಡಿ ನನಗೆ ನಿಲ್ಲಲೇ ಆಗುತ್ತಿಲ್ಲ. ಇನ್ನು ಮನೆಗೆ ನಡೆದುಹೋಗುವುದಾದರೂ ಹೇಗೆ?’ ಎಂದು ಕೇಳಿದ.

ಹೆಂಡತಿಯ ಸಮಸ್ಯೆ

ನಸ್ರುದ್ದೀನ್ ಒಂದು ದಿನ ಹೆಂಡದಂಗಡಿಯಲ್ಲಿ ತನ್ನ ಗೆಳೆಯನ ಜೊತೆ ಕುಳಿತಿದ್ದಾಗ, `ನನ್ನ ಹೆಂಡತಿಯದು ಮನೆಯಲ್ಲಿ ದೊಡ್ಡ ಸಮಸ್ಯೆಯಾಗಿದೆ. ನಿನಗೂ ನಿನ್ನ ಹೆಂಡತಿಯದು ಸಮಸ್ಯೆಯೆ?’ ಎಂದು ಕೇಳಿದ.

`ಹೌದೆ? ಏನು ಸಮಸ್ಯೆ?’ ಕೇಳಿದ ಗೆಳೆಯ.

`ದಿನಬೆಳಗಾದರೆ ಹಣ ಕೊಡಿ ಎಂದು ಪೀಡಿಸುತ್ತಾಳೆ. ಯಾವಾಗ ನೋಡಿದರೂ ಹಣ ಹಣ ಎಂದು ತಲೆ ತಿನ್ನುತ್ತಾಳೆ’ ಎಂದ ನಸ್ರುದ್ದೀನ್.

`ಆಕೆಗೆ ಏಕೆ ಅಷ್ಟೊಂದು ಹಣ ಬೇಕು. ನೀನು ಕೊಡುವ ಹಣವನ್ನು ಆಕೆ ಏನು ಮಾಡುತ್ತಾಳೆ?’ ಕೇಳಿದ ಗೆಳೆಯ.

`ನನಗೇನು ಗೊತ್ತು? ಆಕೆಗೆ ನಾನೆಂದಾದರೂ ಹಣ ಕೊಟ್ಟಿದ್ದರಲ್ಲವೆ?’ ಹೇಳಿದ ನಸ್ರುದ್ದೀನ್.

ಹೆಂಡತಿಯ ಮತ್ತೊಂದು ಸಮಸ್ಯೆ
ನಸ್ರುದ್ದೀನ್ ಅದೇ ಹೆಂಡದಂಗಡಿಯಲ್ಲಿ ತನ್ನ ಗೆಳೆಯನಿಗೆ ಮತ್ತೊಂದು ಸಮಸ್ಯೆ ಹೇಳಿಕೊಂಡ.

`ನನ್ನ ಹೆಂಡತಿಗೆ ರಾತ್ರಿಯೆಲ್ಲಾ ಎದ್ದು ಕೂತಿರುವ ಅಭ್ಯಾಸವಿದೆ. ಪ್ರತಿ ರಾತ್ರಿ ಎರಡು ಮೂರು ಗಂಟೆಯವರೆಗೆ ಎದ್ದು ಕೂತಿರುತ್ತಾಳೆ. ಅವಳ ಈ ಕೆಟ್ಟ ಅಭ್ಯಾಸ ಹೇಗೆ ಬಿಡಿಸುವುದೋ ತಿಳಿಯುತ್ತಿಲ್ಲ’ ಎಂದ ನಸ್ರುದ್ದೀನ್.

`ಹೌದೆ? ರಾತ್ರಿ ಅಷ್ಟು ಹೊತ್ತಿನಲ್ಲಿ ಎದ್ದು ಕೂತು ಏನು ಮಾಡುತ್ತಿರುತ್ತಾಳೆ?’ ಕೇಳಿದ ಗೆಳೆಯ.

`ಇನ್ನೇನು ಮಾಡುತ್ತಾಳೆ, ನಾನು ಮನೆಗೆ ಹಿಂದಿರುಗುವುದನ್ನೇ ಎದುರುನೋಡುತ್ತಿರುತ್ತಾಳೆ’ ಹೇಳಿದ ನಸ್ರುದ್ದೀನ್ ಗ್ಲಾಸು ತುಟಿಗೇರಿಸುತ್ತಾ.



ಹಣ ಮತ್ತು ಆರೋಗ್ಯ


`ಮುಲ್ಲಾ ನಿಮ್ಮ ತಂದೆ ಸಾಕಷ್ಟು ಹಣ ಗಳಿಸಿದ್ದರು? ನಿನಗೆ ಬಹಳಷ್ಟು ಉಳಿಸಿ ಹೋಗಿರಬೇಕಲ್ಲವೆ?’ ಎಂದು ಒಂದು ದಿನ ಮುಲ್ಲಾನ ಗೆಳೆಯ ಕೇಳಿದ.

`ಒಂದು ನಯಾ ಪೈಸೆಯೂ ಇಲ್ಲ. ಅವರ ಕತೆ ಹೇಳುತ್ತೇನೆ ಕೇಳು. ಅವರು ಸಾಕಷ್ಟು ಹಣ ಸಂಪಾದಿಸಲು ಹೋಗಿ ತಮ್ಮ ಆರೋಗ್ಯ ಕಳೆದುಕೊಂಡರು. ಕೊನೆಗೆ ಆರೋಗ್ಯ ಪಡೆದುಕೊಳ್ಳಲು ಹೋಗಿ ಎಲ್ಲಾ ಹಣ ಕಳೆದುಕೊಂಡರು’ ಎಂದ ನಸ್ರುದ್ದೀನ್.

j.balakrishna@gmail.com

ಕಾಮೆಂಟ್‌ಗಳಿಲ್ಲ: