ನಸ್ರುದ್ದೀನನಿಗೆ ಬಹಳ ದಿನಗಳಿಂದ ಜ್ವರವಿತ್ತು. ಏನು ಚಿಕಿತ್ಸೆ ಕೊಟ್ಟರೂ ವಾಸಿಯಾಗಲಿಲ್ಲ. ಹಲವಾರು ಪರೀಕ್ಷೆಗಳನ್ನು ಮಾಡಿದ ವೈದ್ಯರು,
`ಮುಲ್ಲಾ, ನನಗೆ ಹೇಳಲು ಬೇಸರವಾಗುತ್ತಿದೆ. ನಿನ್ನ ಕೊನೆಯ ದಿನಗಳು ಹತ್ತಿರವಾಗುತ್ತಿವೆ. ನಿನಗೆ ಎಬೋಲಾ ವೈರಸ್ ಜ್ವರವಿದೆ. ತುಂಬಾ ಸೋಂಕು ರೋಗವದು’ ಎಂದರು.
ಮುಲ್ಲಾ ಪಕ್ಕದಲ್ಲೇ ಇದ್ದ ತನ್ನ ಪತ್ನಿ ಫಾತೀಮಾಳ ಕಡೆಗೆ ನೋಡಿ,
`ನಾನು ಆಸ್ಪತ್ರೆಗೆ ಸೇರಿದಾಗಲಿಂದ ನನಗೆ ಸಾಲ ನೀಡಿದವರೆಲ್ಲಾ ವಸೂಲಿಗೆ ಬರುತ್ತಿದ್ದಾರೆ ಎಂದಿದ್ದೆಯೆಲ್ಲಾ. ಅವರಿಗೆಲ್ಲಾ ಏನಾದರೂ ಕೊಡಬೇಕೆನ್ನಿಸುತ್ತಿದೆ. ಅವರನ್ನೆಲ್ಲಾ ಇಲ್ಲಿಗೆ ಬರಲು ಹೇಳು, ಅವರನ್ನೊಮ್ಮೆ ತಬ್ಬಿಕೊಳ್ಳಬೇಕೆಂದು ಮನಸ್ಸಾಗುತ್ತಿದೆ’ ಎಂದ ನಸ್ರುದ್ದೀನ್.
ನಿಧಾನವಾಗಿ ಚಲಿಸಿ
ನಸ್ರುದ್ದೀನ್ ಬಾಲಕನಾಗಿದ್ದಾಗ ದಿನಾಗಲೂ ಶಾಲೆಗೆ ತಡವಾಗಿ ಬರುತ್ತಿದ್ದ. ಮಾಸ್ತರು ಅವನ ತಂದೆ ತಾಯಿಗಳಿಗೆ ವಿಷಯ ತಿಳಿಸಿದರು. `ಅವನು ದಿನಾಗಲೂ ಸರಿಯಾದ ಸಮಯಕ್ಕೇ ಮನೆ ಬಿಡುತ್ತಾನೆ’ ಎಂದರು ಅವರು. ಆ ದಿನ ತಡವಾಗಿ ಶಾಲೆಗೆ ಬಂದಾಗ ಮಾಸ್ತರು ಶಾಲೆಗೆ ತಡವಾಗಿ ಬರುವುದು ಏಕೆಂದು ಕೇಳಿದರು.
`ನಾನು ಶಾಲೆಯ ಹತ್ತಿರಕ್ಕೆ ಬೇಗನೆ ಬರುತ್ತೇನೆ ಸಾರ್, ಆದರೆ ಶಾಲೆಗೆ ಸ್ವಲ್ಪ ದೂರದಲ್ಲಿ ರಸ್ತೆ ಬದಿ ಬೋರ್ಡ್ ಹಾಕಿದ್ದಾರಲ್ಲ, `ಮುಂದೆ ಶಾಲೆಯಿದೆ ನಿಧಾನವಾಗಿ ಚಲಿಸಿ’ ಎಂದು.... ಅಲ್ಲಿಂದ ಬರುವುದು ತಡವಾಗುತ್ತಿದೆ...’ ಎಂದ ಬಾಲ ನಸ್ರುದ್ದೀನ್.
ಅಪ್ಪನ ಕೆಲಸ
ನಸ್ರುದ್ದೀನ್ ಚಿಕ್ಕ ಬಾಲಕನಾಗಿದ್ದಾಗ ಒಂದು ದಿನ ಅವನ ತಂದೆಯ ಜೊತೆ ಮಾರುಕಟ್ಟೆಗೆ ಹೋಗಿದ್ದಾಗ ಕಳೆದುಹೋಗಿದ್ದ. ಒಬ್ಬಂಟಿಯಾಗಿ ಅಳುತ್ತಾ ಓಡಾಡುತ್ತಿದ್ದ ಅವನನ್ನು ಪೊಲೀಸರು ಕಂಡು ವಿಚಾರಿಸಿದರು.
`ಅಳಬೇಡ ಮರಿ, ನಿನ್ನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇವೆ. ನಿನ್ನ ಅಪ್ಪನ ಹೆಸರೇನು?’ ಎಂದು ಪೊಲೀಸರು ಕೇಳಿದರು. ನಸ್ರುದ್ದೀನ್ ಅವನ ತಂದೆಯ ಹೆಸರು ಹೇಳಿದ.
`ಅವರೇನು ಕೆಲಸ ಮಾಡುತ್ತಾರೆ?’ ವಿಚಾರಿಸಿದರು ಪೊಲೀಸರು.
`ಅವರು ನಮ್ಮಮ್ಮ ಹೇಳೋ ಎಲ್ಲಾ ಕೆಲ್ಸ ಮಾಡ್ತಾರೆ’ ಹೇಳಿದ ನಸ್ರುದ್ದೀನ್ ಕಣ್ಣೊರೆಸಿಕೊಳ್ಳುತ್ತಾ.
ಕತ್ತಲಲ್ಲಿ ಸೂರ್ಯ
ಶಾಲೆಯಲ್ಲಿ ನಸ್ರುದ್ದೀನ್ ಪಾಠ ಕೇಳಿಸಿಕೊಳ್ಳದೆ ಏನೋ ಚಿಂತಿಸುತ್ತಿದ್ದ. ಭೌತಶಾಸ್ತ್ರದ ಮಾಸ್ತರು ಸಿಟ್ಟಿನಿಂದ ಅವನನ್ನು ಎಬ್ಬಿಸಿ,
`ಸೂರ್ಯ ರಾತ್ರಿ ಹೊತ್ತು ಏಕೆ ಕಾಣುವುದಿಲ್ಲ ಹೇಳು?’ ಎಂದು ಗದರಿಸಿದರು.
`ರಾತ್ರಿ ಕತ್ತಲಾಗಿರುತ್ತದಲ್ಲ ಸಾರ್, ಅದಕ್ಕೇ ಸೂರ್ಯ ಕಾಣುವುದಿಲ್ಲ’ ಹೇಳಿದ ಬಾಲಕ ನಸ್ರುದ್ದೀನ್.
ಅದ್ಭುತ ಆಹಾರ
ನಸ್ರುದ್ದೀನ್ ಮತ್ತು ಆತನ ಗೆಳೆಯ ಇಬ್ಬರೂ ತಮ್ಮ ತಮ್ಮ ಹೆಂಡತಿಯರ ಅಡುಗೆಯ ಬಗ್ಗೆ ಮಾತನಾಡುತ್ತಿದ್ದರು. ಗೆಳೆಯ ಹೇಳಿದ, `ನಿನ್ನ ಹೆಂಡತಿಯ ಅಡುಗೆ ಹೇಗೇ ಇರಲಿ, ನೀನದನ್ನು ಆಗಾಗ ಹೊಗಳುತ್ತಿರು, ಆಕೆಗೆ ಖಂಡಿತಾ ಸಂತೋಷವಾಗುತ್ತದೆ’. ನಸ್ರುದ್ದೀನನಿಗೂ ಅದು ಸರಿಯೆನ್ನಿಸಿತು, ಒಂದು ದಿನವೂ ತನ್ನ ಹೆಂಡತಿಯ ಅಡುಗೆಯನ್ನ ಹೊಗಳಿಲ್ಲವೆನ್ನಿಸಿ ಈ ದಿನ ಮನೆಗೆ ಹೋದಾಗ ಅದನ್ನೇ ಮಾಡಬೇಕೆಂದು ನಿರ್ಧರಿಸಿದ.
ಮನೆಯಲ್ಲಿ ಊಟಕ್ಕೆ ಕೂತಾಗ ಮುಲ್ಲಾನ ಹೆಂಡತಿ ಫಾತಿಮಾ ಬಿರಿಯಾನಿ ಬಡಿಸಿದಳು. ಒಂದು ತುತ್ತು ಬಾಯಿಗಿರಿಸಿದ ಮುಲ್ಲಾ ಅದರ ರುಚಿಯನ್ನು, ಸುವಾಸನೆಯನ್ನು ಬಾಯಿ ತುಂಬ ಹೊಗಳತೊಡಗಿದ. ಅದನ್ನು ಕೇಳಿಸಿಕೊಂಡ ಮುಲ್ಲಾನ ಹೆಂಡತಿ ಜೋರಾಗಿ ಅಳತೊಡಗಿದಳು. ಮುಲ್ಲಾನಿಗೆ ಗಾಭರಿಯಾಯಿತು. ಹೆಂಡತಿಯ ಅಡುಗೆ ಹೊಗಳಿದರೆ ಅವಳು ಸಂತೋಷಪಡುವುದು ಬಿಟ್ಟು ಅಳುತ್ತಿರುವುದೇಕೆಂದು ಕೇಳಿದ.
`ಇಷ್ಟು ವರ್ಷಗಳಿಂದ ರುಚಿರುಚಿಯಾದ ಅಡುಗೆ ಮಾಡುತ್ತಿದ್ದೇನೆ, ಒಂದು ದಿನವೂ ಹೊಗಳಿಲ್ಲ. ಈ ದಿನ ಪಕ್ಕದ ಮನೆಯ ನರ್ಗೀಸ್ ಬಿರಿಯಾನಿ ಕಳುಹಿಸಿದ್ದಳು. ಅದನ್ನು ತಿಂದ ತಕ್ಷಣ ನಿಮ್ಮ ಮುಖ ಹೇಗೆ ಅರಳಿಬಿಟ್ಟಿತು...’ ಫಾತಿಮಾ ತನ್ನ ಅಳುವನ್ನು ಮುಂದುವರಿಸಿದಳು.
ರೊಟ್ಟಿ ಗಟ್ಟಿಯಾಗಿದೆ
ನಸ್ರುದ್ದೀನ್ ದಂತ ವೈದ್ಯರ ಬಳಿ ಹೋದ. `ಡಾಕ್ಟರೇ, ನನ್ನ ಹಲ್ಲು ಮುರಿದಿದೆ, ದವಡೆ ನೋಯುತ್ತಿದೆ’ ಎಂದ.
`ಹೌದೆ, ಹಲ್ಲು ಹೇಗೆ ಮುರಿಯಿತು?’ ವೈದ್ಯರು ಕೇಳಿದರು.
`ನನ್ನ ಪತ್ನಿ ಮಾಡಿದ್ದ ರೊಟ್ಟಿ ತುಂಬಾ ಗಟ್ಟಿಯಾಗಿತ್ತು...’ ಕೇಳಿದ ಮುಲ್ಲಾ.
`ಹಾಗಿದ್ದಾಗ, ನೀನು ರೊಟ್ಟಿ ತಿನ್ನಲು ನಿರಾಕರಿಸಬೇಕಾಗಿತ್ತು’ ಎಂದರು ವೈದ್ಯರು.
`ಅಯ್ಯೋ, ರೊಟ್ಟಿ ತಿಂದದ್ದಕ್ಕೆ ಹಲ್ಲು ಮುರಿದದ್ದಲ್ಲ ಡಾಕ್ಟರೆ, ರೊಟ್ಟಿ ತಿನ್ನಲು ನಿರಾಕರಿಸಿದ್ದಕ್ಕೇ.....ಮುರಿದದ್ದು’ ಎಂದ ನಸ್ರುದ್ದೀನ್ ತನ್ನ ಉಬ್ಬಿದ ದವಡೆ ನೀವಿಕೊಳ್ಳುತ್ತಾ.
ಉಡುಗೊರೆ
ನಸ್ರುದ್ದೀನನ ಪತ್ನಿ ಫಾತಿಮಾಳ ಹುಟ್ಟಿದ ಹಬ್ಬ ಹತ್ತಿರಕ್ಕೆ ಬರುತ್ತಿತ್ತು. ನಸ್ರುದ್ದೀನ್ ತನ್ನ ಪತ್ನಿಯನ್ನು ತಬ್ಬಿಕೊಂಡು ಅವಳ ಹುಟ್ಟಿದ ಹಬ್ಬಕ್ಕೆ ಅವಳಿಗೇನು ಉಡುಗೊರೆ ಬೇಕೆಂದು ಕೇಳಿದ.
`ನನಗ್ಯಾವ ಉಡುಗೊರೆಯೂ ಬೇಡ. ನೀನು ಇದೇ ರೀತಿ ನನ್ನನ್ನು ಪ್ರೀತಿಸುತ್ತಿರು, ನನ್ನನ್ನು ಗೌರವಿಸು ಹಾಗೂ ಸದಾ ನನ್ನ ಮಾತನ್ನು ಕೇಳುತ್ತಿರು, ಅಷ್ಟೇ ಸಾಕು, ಇನ್ಯಾವ ಉಡುಗೊರೆಯೂ ಬೇಡ’ ಎಂದಳು ಫಾತಿಮಾ ಗಂಡನನ್ನು ತಾನೂ ತಬ್ಬಿಕೊಳ್ಳುತ್ತಾ.
`ಹೇ, ಬೇಡ, ಉಡುಗೊರೆಯೇ ಕೊಡುತ್ತೇನೆ, ಏನು ಬೇಕೋ ಹೇಳು’ ಎಂದ ನಸ್ರುದ್ದೀನ್ ತನ್ನ ಪತ್ನಿಯ ಅಪ್ಪುಗೆ ಬಿಡಿಸಿಕೊಳ್ಳುತ್ತಾ.
ತಮಾಷೆಯ ಹಕ್ಕಿಲ್ಲವೆ?
ನಸ್ರುದ್ದೀನ್ ತೀರ ಬಡವನಾಗಿದ್ದ. ಅವನಿಗೆ ಹಣದ ವಿಪರೀತ ಕೊರತೆಯಿತ್ತು. ಒಂದು ದಿನ ಬೇಸತ್ತ ಅವನು, `ಅಯ್ಯೋ ದೇವರೇ ನನಗೇಕೆ ಈ ಕಷ್ಟ! ಈ ಯಾತನೆ! ನನಗೆ ಸಾವಾದರೂ ಬರಬಾರದೆ?’ ಎಂದ.
ತಕ್ಷಣವೇ ಅಲ್ಲಿಗೆ ಸಾವಿನ ದೂತ ಬಂದು, `ಏನು ನನ್ನನ್ನು ಕರೆದೆಯಾ?’ ಎಂದು ಕೇಳಿದ.
`ಅಯ್ಯೋ ದೇವರೇ! ಈ ಬಡವನಿಗೆ ತಮಾಷೆ ಮಾಡುವ ಹಕ್ಕೂ ಇಲ್ಲವೆ?’ ಹೇಳಿದ ಆಕಾಶದೆಡೆಗೆ ನೋಡುತ್ತಾ ನಸ್ರುದ್ದೀನ್.
ಅರ್ಧ ಚಾರ್ಜ್
ಆ ದಿನ ಮುಲ್ಲಾ ನಸ್ರುದ್ದೀನ್ ತನ್ನ ಹಳ್ಳಿಯಿಂದ ನಗರಕ್ಕೆ ಕೆಲಸದ ಮೇಲೆ ಬಂದಿದ್ದ. ಮೆಜೆಸ್ಟಿಕ್‍ನಿಂದ ವಿಧಾನಸೌಧಕ್ಕೆ ಆಟೋದಲ್ಲಿ ಬಂದಿಳಿದ. `ನೂರು ರೂಪಾಯಿ ಕೊಡಿ’ ಎಂದ ಆಟೋ ಚಾಲಕ.
ಮುಲ್ಲಾ ಐವತ್ತು ರೂಪಾಯಿ ಕೊಟ್ಟ.
`ಉಳಿದ ಐವತ್ತು ಕೊಡಿ’ ಎಂದ ಆಟೋ ಚಾಲಕ.
`ಎಲ್ಲಾ ನಾನೇಕೆ ಕೊಡಬೇಕು. ನೀನು ಸಹ ಆಟೋದಲ್ಲಿ ನನ್ನ ಜೊತೆಯಲ್ಲೇ ಬಂದಿದ್ದೀಯಲ್ಲಾ, ಉಳಿದರ್ಧ ನಿನ್ನ ಪಾಲು’ ಎಂದ ನಸ್ರುದ್ದೀನ್ ಆಟೋ ಚಾಲಕನಿಗೆ.
ಸಾಲ
ನಸ್ರುದ್ದೀನನ ಗೆಳೆಯನೊಬ್ಬ ಒಂದು ದಿನ ಎದುರಾಗಿ,
`ಮುಲ್ಲಾ ನನಗೆ ತುರ್ತಾಗಿ ಹಣ ಬೇಕಿತ್ತು. ನೂರು ರೂ ಸಾಲ ಕೊಡು’ ಎಂದ.
`ಕ್ಷಮಿಸು, ನಾನು ನಿನಗೆ ಐವತ್ತು ರೂಪಾಯಿ ಮಾತ್ರ ಕೊಡುತ್ತೇನೆ’ ಎಂದ ಮುಲ್ಲಾ.
`ಅದೇಕೆ ಕೇವಲ ಐವತ್ತು? ಪೂರ್ತಿ ನೂರು ಏಕೆ ಕೊಡುವುದಿಲ್ಲ?’ ಕೇಳಿದ ಆ ಗೆಳೆಯ.
`ಏಕೆಂದರೆ, ನಾನು ಐವತ್ತು ಕಳೆದುಕೊಳ್ಳುತ್ತಿದ್ದೇನೆ, ನೀನೂ ಐವತ್ತು ಕಳೆದುಕೊ’ ಹೇಳಿದ ನಸ್ರುದ್ದೀನ್.
ಸಾಲ ತೀರುವಳಿ
ನಸ್ರುದ್ದೀನ್ ಮತ್ತು ಆತನ ಗೆಳೆಯ ಅಬ್ದುಲ್ಲಾ ಇಬ್ಬರೂ ಒಂದು ದಿನ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಬಾರ್ ಒಂದರಲ್ಲಿ ಕೂತು ತಮ್ಮ ಊರಿಗೆ ಹೊರಡುವುದು ತಡವಾಯಿತು. ಎದ್ದು ನಿಧಾನವಾಗಿ ತಡವರಿಸುತ್ತಾ ಕತ್ತಲ ಓಣಿಗಳಲ್ಲಿ ಮೆಜೆಸ್ಟಿಕ್ ಕಡೆಗೆ ನಡೆಯುತ್ತಿದ್ದರು. ಇದ್ದಕ್ಕಿದ್ದಂತೆ ಕತ್ತಲ ಮರೆಯಿಂದ ಕಳ್ಳನೊಬ್ಬ ಎದುರು ಬಂದು ಚೂಪಾದ ಚಾಕು ಎದೆಗೆ ಹಿಡಿದು,
`ಕಿಸೆಯಲ್ಲಿರುವ ಹಣವೆಲ್ಲಾ ಕೊಡಿ, ಇಲ್ಲದಿದ್ದಲ್ಲಿ ನಿಮ್ಮ ಪ್ರಾಣ ತೆಗೆಯುತ್ತೇನೆ’ ಎಂದು ಘರ್ಜಿಸಿದ.
ನಸ್ರುದ್ದೀನನ ಕಿಸೆಯಲ್ಲಿ ಸಾವಿರ ರೂಪಾಯಿ ಇತ್ತು. ತಕ್ಷಣ ಅವನಿಗೆ ತಾನು ಅಬ್ದುಲ್ಲಾನಿಂದ ಬಹಳ ದಿನಗಳ ಹಿಂದೆ ತೆಗೆದುಕೊಂಡಿದ್ದ ಸಾವಿರ ರೂಪಾಯಿ ಸಾಲದ ನೆನಪಾಯಿತು. ಕೂಡಲೇ ತನ್ನ ಕಿಸೆಯಿಂದ ಸಾವಿರ ರೂಪಾಯಿ ತೆಗೆದು ಅಬ್ದುಲ್ಲಾನ ಕಿಸೆಗೆ ತುರುಕಿ,
`ತಗೊಳಪ್ಪ ನಿನ್ನ ಸಾಲ ಹಿಂದಿರುಗಿಸಿದ್ದೇನೆ. ಪದೇ ಪದೇ ಸಾಲ ಹಿಂದಿರುಗಿಸು ಎಂದು ಪೀಡಿಸಬೇಡ’ ಎಂದ.
ಕುದುರೆಯ ಬಾಲದ ಹಿಂದೆ
ನಸ್ರುದ್ದೀನನ ಪತ್ನಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ನ್ಯಾಯಾಲಯದಲ್ಲಿ ನ್ಯಾಯಾಧೀಶರು ಕೇಳಿದರು,
`ಏನಮ್ಮಾ, ನಿನಗೇಕೆ ವಿಚ್ಛೇದನ ಬೇಕು. ನಿನ್ನ ಗಂಡ ನಿನಗೆ ಹಿಂಸೆ ಕೊಡುತ್ತಿದ್ದಾನೆಯೆ?’
`ನನ್ನ ಗಂಡನೊಂದಿಗೆ ಬದುಕುವುದು ಸಾಧ್ಯವಿಲ್ಲ ಸ್ವಾಮಿ. ಅವನಿಗೆ ಕುದುರೆ ಜೂಜಿನ ಹುಚ್ಚು. ಹಗಲು ರಾತ್ರಿ ಅವನಿಗೆ ಅದೇ ಚಿಂತೆ. ಅವನಿಗೆ ಎಲ್ಲಾ ಕುದುರೆಗಳ ಹೆಸರು ಗೊತ್ತು ಆದರೆ, ಅವನಿಗೆ ನಮ್ಮ ಮದುವೆಯಾದ ದಿನವಾಗಲಿ ನಮ್ಮ ಮಕ್ಕಳು ಹುಟ್ಟಿದ ದಿನವಾಗಲಿ ಒಂದೂ ತಿಳಿದಿಲ್ಲ... ಅಂಥವನೊಂದಿಗೆ ಬದುಕುವುದಾದರೂ ಹೇಗೆ?’ ಎಂದಳು ಫಾತಿಮಾ.
`ಆಕೆ ಹೇಳುವುದು ಸುಳ್ಳು, `ನನಗೆಲ್ಲಾ ನೆನಪಿದೆ. ನಮ್ಮ ಮದುವೆಯಾದದ್ದು ಮೈಸೂರು ಡರ್ಬಿ ರೇಸಿನ ದಿನ. ನನ್ನ ಮಗ ಹುಟ್ಟಿದ್ದು ಪ್ರಿನ್ಸ್ ಕುದುರೆ ಗೆದ್ದ ದಿನ...’ ಎಂದ ನಸ್ರುದ್ದೀನ್.
ಸಾಕ್ಷಿ
ಬಂದೂಕದಲ್ಲಿ ಯಾರೋ ಗುಂಡು ಹಾರಿಸಿರುವುದರ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಸಾಕ್ಷಿಯಾಗಿ ನಸ್ರುದ್ದೀನನನ್ನು ಕರೆಸಿದ್ದರು.
`ನಸ್ರುದ್ದೀನ್, ಆ ವ್ಯಕ್ತಿ ನೀನು ಗುಂಡು ಹಾರಿಸಿದ್ದನ್ನು ನೋಡಿದೆಯಾ?’ ನ್ಯಾಯಾಧೀಶರು ಕೇಳಿದರು.
`ಇಲ್ಲ ಸ್ವಾಮಿ, ನಾನು ಗುಂಡು ಹಾರಿಸಿದ ಶಬ್ದ ಕೇಳಿಸಿಕೊಂಡೆ’ ಎಂದ ನಸ್ರುದ್ದೀನ್.
`ನೀನು ಕಣ್ಣಾರೆ ನೋಡಿಲ್ಲ, ಬರೇ ಕೇಳಿಸಿಕೊಂಡಿದ್ದೀಯ. ನಿನ್ನ ಸಾಕ್ಷ್ಯಕ್ಕೆ ಯಾವುದೇ ಬೆಲೆ ಇಲ್ಲ ಹೋಗು’ ಎಂದರು ನ್ಯಾಯಾಧೀಶರು.
ನಸ್ರುದ್ದೀನ್ ಹಿಂದಕ್ಕೆ ತಿರುಗಿ ಕಟಕಟೆಯಿಂದ ಇಳಿದುಹೋಗುವಾಗ ಜೋರಾಗಿ ಗಹಗಹಿಸಿ ನಕ್ಕ. ಅದನ್ನು ಕೇಳಿಸಿಕೊಂಡ ನ್ಯಾಯಾಧೀಶರಿಗೆ ಅವನು ತನ್ನನ್ನೇ ಅವಮಾನಿಸುತ್ತಿರುವಂತೆ ಭಾವಿಸಿ ಅವನನ್ನು ಪುನಃ ಕಟಕಟೆಗೆ ಕರೆಸಿ,
`ನೀನು ಜೋರಾಗಿ ನಕ್ಕಿದ್ದು ಏಕೆ?’ ಎಂದು ಗದರಿಸಿ ಕೇಳಿದರು.
`ನಾನು ನಗಲಿಲ್ಲವಲ್ಲಾ? ನಾನು ನಕ್ಕಿದ್ದನ್ನು ನೀವು ನೋಡಿದಿರಾ?’ ಕೇಳಿದ ನಸ್ರುದ್ದೀನ್.
`ಇಲ್ಲಾ ನಾನು ಕೇಳಿಸಿಕೊಂಡೆ’, ಹೇಳಿದರು ನ್ಯಾಯಾಧೀಶರು.
`ಹಾಗಾದರೆ ನಿಮ್ಮ ಮಾತಿಗೆ ಬೆಲೆ ಇಲ್ಲ ಬಿಡಿ’ ಕಟಕಟೆಯಿಂದ ವಾಪಸ್ಸು ಹೋಗುತ್ತಾ ಹೇಳಿದ ನಸ್ರುದ್ದೀನ್.
ಫಿಫ್ಟಿ - ಫಿಫ್ಟಿ
`ನಾನು ಮತ್ತು ಅಬ್ದುಲ್ಲಾ ಜೊತೆಯಾಗಿ ಬಿಸಿನೆಸ್ ಶುರುಮಾಡಿದ್ದೇವೆ’ ಎಂದು ನಸ್ರುದ್ದೀನ್ ತನ್ನ ಮತ್ತೊಬ್ಬ ಗೆಳೆಯನ ಬಳಿ ಹೇಳಿದ.
`ಹೌದೆ? ಬಂಡವಾಳ ಎಷ್ಟು ಹಾಕಿದ್ದೀಯ?’ ಕೇಳಿದ ಗೆಳೆಯ.
`ನನ್ನದೇನಿಲ್ಲ, ಬಂಡವಾಳವೆಲ್ಲಾ ಅಬ್ದುಲ್ಲಾನದು. ನನ್ನದು ಅನುಭವ ಮಾತ್ರ’ ಎಂದ ನಸ್ರುದ್ದೀನ್.
`ಹಾಗಾದರೆ ಫಿಫ್ಟಿ- ಫಿಫ್ಟಿ ಲೆಕ್ಕಾಚಾರವೆನ್ನು’ ಹೇಳಿದ ಗೆಳೆಯ.
`ಒಂದು ರೀತಿ ಅದೇ ಲೆಕ್ಕಾಚಾರದಲ್ಲೇ ಬಿಸಿನೆಸ್ ಪ್ರಾರಂಭಿಸುತ್ತಿದ್ದೇವೆ. ಕೆಲವರ್ಷಗಳ ನಂತರ ಬಂಡವಾಳ ನನ್ನದಾಗಿರುತ್ತದೆ, ಅನುಭವ ಅಬ್ದುಲ್ಲಾನದಾಗಿರುತ್ತದೆ’ ಹೇಳಿದ ನಸ್ರುದ್ದೀನ್.
ಐವತ್ತರಲ್ಲಿ ಐದು
`ಏನು ಮುಲ್ಲಾ, ಹೊಸ ಬಟ್ಟೆ ಧರಿಸಿದ್ದೀಯ? ಯಾವುದಾದರೂ ಪಾರ್ಟಿಗೆ ಹೋಗುತ್ತಿದ್ದೀಯ?’ ಕೇಳಿದ ಗೆಳೆಯ.
`ಹೌದು, ನನ್ನ ಮದುವೆಯ ಐದು ವರ್ಷಗಳ ಸಂತೋಷದ ಆಚರಣೆಗೆ ನನ್ನ ಹೆಂಡತಿಯೊಂದಿಗೆ ಹೋಟೆಲಿಗೆ ಭೋಜನಕ್ಕೆ ಹೋಗುತ್ತಿದ್ದೇನೆ’ ಹೇಳಿದ ನಸ್ರುದ್ದೀನ್.
`ಆದರೆ ನಿನ್ನ ಮದುವೆಯಾಗಿ ಐವತ್ತು ವರ್ಷಗಳಾಯಿತಲ್ಲವೆ?’
`ಹೌದು, ನಾನು ಹೇಳುತ್ತಿರುವುದು ಸಂತೋಷದ ವರ್ಷಗಳ ಲೆಕ್ಕ ಮಾತ್ರ’ ಹೇಳಿದ ನಸ್ರುದ್ದೀನ್.
j.balakrishna@gmail.com
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ