ಬುಧವಾರ, ಜೂನ್ 03, 2015

ಮುಲ್ಲಾ ನಸ್ರುದ್ದೀನ್ ಕತೆಗಳ 39ನೇ ಕಂತು

ಜೂನ್ 2015ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 39ನೇ ಕಂತು

ವೈದ್ಯರ ಸಲಹೆ
ನಸ್ರುದ್ದೀನ್ ಗಡಂಗಿಗೆ ಹೋಗಿ ತಾನೊಬ್ಬನೇ ಇದ್ದರೂ ಮೂರು ಗ್ಲಾಸ್ ತರಿಸಿಕೊಂಡು ಮೂವರು ಕುಡಿದಂತೆ ನಟಿಸುತ್ತಾ ಎಲ್ಲಾ ತಾನೇ ಕುಡಿಯುತ್ತಿದ್ದ. ಒಂದಷ್ಟು ದಿನ ಇದನ್ನು ಗಮನಿಸಿದ ಗಡಂಗಿನವನು ಒಂದು ದಿನ ಅದೇಕೆ ರೀತಿ ಮಾಡುತ್ತಿದ್ದಾನೆಂದು ಕೇಳಿದ. ಅದಕ್ಕೆ,
`ಒಂದು ಗ್ಲಾಸು ನನಗಾದರೆ ಇನ್ನೆರಡು ನನ್ನ ಸಹೋದರರದು. ಅವರಿಬ್ಬರೂ ಬೇರೆ ಬೇರೆ ಊರಿನಲ್ಲಿದ್ದಾರೆ. ನಾವು ಬೇರೆ ಬೇರೆಯಾದಾಗ ಒಂದು ವಾಗ್ದಾನ ಮಾಡಿದ್ದೇವೆ- ಕುಡಿಯುವಾಗಲೆಲ್ಲಾ ಎಲ್ಲರೂ ಒಟ್ಟಿಗೆ ಇದ್ದಂತೆ ಕುಡಿಯಬೇಕೆಂದು. ಹಾಗಾಗಿ ಇಲ್ಲಿ ಅವರ ಪಾಲು ನಾನೇ ಕುಡಿಯುತ್ತಿದ್ದೇನೆಎಂದ.
ಅವರ ಸಹೋದರ ಪ್ರೇಮವನ್ನು ಗಡಂಗಿನವನು ಮೆಚ್ಚಿಕೊಂಡ.
ಆದರೆ ಒಂದು ದಿನ ನಸ್ರುದ್ದೀನ್ ಎರಡೇ ಗ್ಲಾಸು ತರಿಸಿಕೊಂಡು ಕುಡಿಯಲು ಪ್ರಾರಂಭಿಸಿದ. ಅದನ್ನು ಗಮನಿಸಿದ ಗಡಂಗಿನವನು `ಬಹುಶಃ ಒಬ್ಬ ಸಹೋದರ ಸತ್ತುಹೋಗಿರಬೇಕು, ಅದಕ್ಕೇ ಎರಡೇ ಗ್ಲಾಸು ತರಿಸಿಕೊಂಡಿದ್ದಾನೆಎಂದುಕೊಂಡು, `ಕೇಳಿಯೇ ಬಿಡೋಣಎಂದು ನಸ್ರುದ್ದೀನನನ್ನು,
`ಎರಡೇ ಗ್ಲಾಸು ತರಿಸಿಕೊಂಡಿರಲ್ಲ. ಏನಾದರೂ ನಿಮ್ಮ ಒಬ್ಬ ಸಹೋದರ...’ ಎಂದ.
ಅದಕ್ಕೆ ನಸ್ರುದ್ದೀನ್, `ಹೇ, ಅಂಥದ್ದೇನಿಲ್ಲ. ನನ್ನ ಸಹೋದರ ಚೆನ್ನಾಗಿಯೇ ಇದ್ದಾನೆ. ನನಗೆ ವೈದ್ಯರು ಕುಡಿತ ಬಿಡುವಂತೆ ಹೇಳಿದ್ದಾರೆ, ಹಾಗಾಗಿ ನಾನು ನನ್ನ ಪಾಲು ಕುಡಿಯುತ್ತಿಲ್ಲಎಂದ.

ವಯಸ್ಸಿಗೆ ಬಂದವರು
ಮುಲ್ಲಾ ನಸ್ರುದ್ದೀನ್ ತುರ್ತು ಕೆಲಸದ ನಿಮಿತ್ತ ದೂರದ ಊರಿಗೆ ಹೋಗಬೇಕಾಗಿತ್ತು. ಪ್ರಯಾಣದ ಹಾದಿಯಲ್ಲಿ ಕತ್ತಲಾಯಿತು. ರಾತ್ರಿ ಕಳೆಯಲು ಊರಿನಲ್ಲಿ ಛತ್ರಗಳಾವುವೂ ಇರಲಿಲ್ಲ. ಯಾರನ್ನಾದರೂ ಮಲಗಲು ಸ್ಥಳ ಕೊಡುತ್ತಾರೇನೋ ಕೇಳೋಣ ಎಂದು ಒಂದು ಮನೆಯ ಬಾಗಿಲು ತಟ್ಟಿ ತನ್ನ ಪರಿಸ್ಥಿತಿ ಹೇಳಿಕೊಂಡ ಹಾಗೂ ಒಂದು ರಾತ್ರಿ ಮಲಗಲು ಸ್ಥಳಾವಕಾಶ ಕೊಡುತ್ತೀರಾ ಎಂದು ಕೇಳಿದ.
`ನಮ್ಮ ಮನೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆ. ನಿನ್ನಂಥ ಅಪರಿಚಿತ ಗಂಡಸರಿಗೆ ಮಲಗಲು ಸ್ಥಳ ಕೊಡಲಾಗುವುದಿಲ್ಲಎಂದು ಹೇಳಿ ಬಾಗಿಲು ಮುಚ್ಚಿದರು. ನಾಲ್ಕೈದು ಮನೆ ಪ್ರಯತ್ನಿಸಿದ. ಎಲ್ಲ ಮನೆಯಲ್ಲೂ ಅದೇ ಉತ್ತರ ಸಿಕ್ಕಿತು. ಕೊನೆಯ ಪ್ರಯತ್ನ ಮಾಡಿಬಿಡೋಣವೆಂದು ಮತ್ತೊಂದು ಮನೆಯ ಬಾಗಿಲು ತಟ್ಟಿದ. ಬಾಗಿಲು ತೆರೆದ ಮನೆಯಾತನನ್ನು ನಸ್ರುದ್ದೀನ್ ಕೇಳಿದ,
`ನಿಮ್ಮ ಮನೆಯಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿದ್ದಾರೆಯೆ?’
`ಹೌದು. ಏನಾಗಬೇಕು?’ ಆತ ಕೇಳಿದ.
`ಏನಿಲ್ಲಾ, ನಿಮ್ಮ ಮನೆಯಲ್ಲಿ ಒಂದು ರಾತ್ರಿ ಮಲಗಬೇಕಿತ್ತು... ಅದಕ್ಕೆಎಂದ ನಸ್ರುದ್ದೀನ್.

ಲೇಡೀಸ್ ಫಸ್ಟ್
ನಸ್ರುದ್ದೀನ್ ಮತ್ತು ಆತನ ಹೆಂಡತಿ ಫಾತಿಮಾ ಒಂದು ದಿನ ಜೋರಾಗಿ ಜಗಳವಾಡಿದರು. ರೋಸಿ ಹೋದ ನಸ್ರುದ್ದೀನ್ ಎರಡೂ ಕೈ ಮೇಲಕ್ಕೆ ಮಾಡಿ, `ಹೋ ದೇವರೇ, ಹೆಂಡತಿಯ ಕಾಟ ತಾಳಲಾರೆ. ನನ್ನನ್ನು ನಿನ್ನಲ್ಲಿಗೆ ಕರೆದುಕೊಂಡುಬಿಡುಎಂದ.
ಫಾತಿಮಾ ಸಹ ಅದೇ ರೀತಿ ಮಾಡಿ ` ಗಂಡನ ಕಾಟ ತಡೆಯಲಾರೆ, ನನ್ನನ್ನೂ ಕರೆದುಕೊಂಡುಬಿಡುಎಂದಳು.
ತಕ್ಷಣ ನಸ್ರುದ್ದೀನ್, `ಆಯಿತು ದೇವರೇ, ಲೇಡೀಸ್ ಫಸ್ಟ್ಎಂದ.

ಪಾಪ ಮಾಡಬೇಡಿ
ಮುಲ್ಲಾ ನಸ್ರುದ್ದೀನ್ ಅಬ್ದುಲ್ಲಾನಿಗೆ ಹೇಳಿದ,
`ನಿನ್ನೆ ಯಾರೋ ಮಂದಿರದ ಬಳಿ ನನ್ನ ಸೈಕಲ್ ಕದ್ದುಬಿಟ್ಟಿದಾರೆ!’
`ಹೌದೆ? ಒಂದು ಕೆಲಸ ಮಾಡು. ನಾಳೆ ನೀನು ಪ್ರವಚನ ಮಾಡುವಾಗ ಕಳ್ಳತನ ಮಾಡಬೇಡಿ ಎಂದು ಹೇಳುತ್ತೀಯಲ್ಲಾ? ಆಗ ಸಭಿಕರ ಮುಖವನ್ನು ಸೂಕ್ಷ್ಮವಾಗಿ ಗಮನಿಸು. ಯಾವನ ಮುಖದಲ್ಲಿ ಪಾಪಪ್ರಜ್ಞೆ ಕಾಣುತ್ತದೆಯೋ ಅವನೇ ಕಳ್ಳನಾಗಿರುತ್ತಾನೆಎಂದ ಅಬ್ದುಲ್ಲಾ.
ಮರುದಿನ ಮುಲ್ಲಾ ನಸ್ರುದ್ದೀನ್ ಸಿಕ್ಕಾಗ ಅಬ್ದುಲ್ಲಾ, `ಸೈಕಲ್ ಕಳ್ಳ ಸಿಕ್ಕಿಬಿದ್ದನೆ?’ ಎಂದು ಕೇಳಿದ.
`ಕಳ್ಳ ಸಿಕ್ಕಲಿಲ್ಲ, ಆದರೆ ಸೈಕಲ್ ಸಿಕ್ಕಿತುಎಂದ ನಸ್ರುದ್ದೀನ್.
`ಹೇಗೆ?’ ಕೇಳಿದ ಅಬ್ದುಲ್ಲಾ.
`ಪ್ರವಚನ ಮಾಡುವಾಗ ವ್ಯಭಿಚಾರ ಮಾಡಬೇಡಿ ಎಂದು ಬೋಧಿಸಲು ಹೊರಟೆ. ಆಗ ತಕ್ಷಣ ನೆನಪಾಯಿತು ಹಿಂದಿನ ರಾತ್ರಿ ನನ್ನ ಸೈಕಲ್ ಎಲ್ಲಿ ಬಿಟ್ಟಿದ್ದೆನೆಂದುಹೇಳಿದ ನಸ್ರುದ್ದೀನ್.

ಜಾತಿ ಗಣತಿ
ಮುಲ್ಲಾ ನಸ್ರುದ್ದೀನ್ ಜಾತಿ ಗಣತಿಗೆಂದು ಹೋಗಿದ್ದ. ಒಂದು ಮನೆಯ ಬಳಿ ನಿಂತು ಮನೆಯಾಕೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದ. ಆಕೆ ತನಗೆ ಎರಡು ವರ್ಷದ ಹಾಗೂ ನಾಲ್ಕು ವರ್ಷದ ಮಕ್ಕಳಿದ್ದಾರೆಂದು ಹೇಳಿದಳು. ತಲೆ ತುರಿಸಿಕೊಂಡ ನಸ್ರುದ್ದೀನ್,
`ಅಲ್ಲಮ್ಮಾ, ನಿನ್ನ ಗಂಡ ಸತ್ತು ಹತ್ತು ವರ್ಷಗಳಾಗಿದೆ ಎಂದು ಹೇಳಿದೆ. ಈಗ ಎರಡು ವರ್ಷದ ಹಾಗೂ ನಾಲ್ಕು ವರ್ಷದ ಮಕ್ಕಳಿದ್ದಾರೆಂದು ಹೇಳುತ್ತಿದ್ದೀಯಾ?’ ಎಂದು ಕೇಳಿದ.
`ಹೌದು, ನನ್ನ ಗಂಡ ಸತ್ತಿದ್ದಾನೆಂದು ಹೇಳಿದೆ, ನಾನು ಸತ್ತೆ ಎಂದು ಹೇಳಿದೆನೆ?’ ಕೇಳಿದಳು ಆಕೆ.

ಸೂರ್ಯ ಮತ್ತು ಕತ್ತಲು
ಅಬ್ದುಲ್ಲಾ: ನಸ್ರುದ್ದೀನ್ ರಾತ್ರಿಯಾದರೆ ಸೂರ್ಯ ಎಲ್ಲಿ ಹೋಗುತ್ತಾನೆ?
ನಸ್ರುದ್ದೀನ್: ಎಲ್ಲಿಯೂ ಹೋಗುವುದಿಲ್ಲ ಅಲ್ಲೇ ಇರುತ್ತಾನೆ. ಕತ್ತಲಾಗಿರುತ್ತದಲ್ಲ, ಅದಕ್ಕೇ ಕಾಣುವುದಿಲ್ಲ.

ಬರೆದವ ಕತ್ತೆ
ಮುಲ್ಲಾ ನಸ್ರುದ್ದೀನ್ ಒಂದು ದಿನ ರಸ್ತೆಯಲ್ಲಿ ಹೋಗುತ್ತಿದ್ದಾಗ, ಗೋಡೆಯ ಮೇಲೆ ಯಾರೋ,
`ಇದನ್ನು ಓದುವವ ಕತ್ತೆಎಂದು ಬರೆದಿದ್ದರು. ಅದನ್ನು ಓದಿದ ನಸ್ರುದ್ದೀನನಿಗೆ ಸಿಟ್ಟು ಬಂತು. ಕೂಡಲೇ ಅದನ್ನು ಅಳಿಸಿಹಾಕಿ ಅದರ ಕೆಳಗೆ,
`ಇದನ್ನು ಬರೆದವ ಕತ್ತೆಎಂದು ಬರೆದ.

ನನಗೇನು ಗೊತ್ತು?
ಮುಲ್ಲಾ ನಸ್ರುದ್ದೀನ್ ಒಂದು ದಿನ ರಾತ್ರಿ ತಡವಾಗಿ ಮನೆಗೆ ಹಿಂದಿರುಗುತ್ತಿದ್ದಾಗ ಕಳ್ಳನೊಬ್ಬ ಎದುರಾಗಿ ಅವನಲ್ಲಿರುವ ಹಣವೆಲ್ಲಾ ಕೊಡುವಂತೆ ಬೆದರಿಸಿದ. ನಸ್ರುದ್ದೀನ್ ಕೊಡಲಿಲ್ಲ. ಕಳ್ಳ ಅವನ ಮೇಲೆ ಹಾರಿದ. ಇಬ್ಬರೂ ಹೊಡೆದಾಡಿದರು. ಕೊನೆಗೆ ಕಳ್ಳನದೇ ಮೇಲುಗೈಯಾಗಿ ನಸ್ರುದ್ದೀನನ ಕಿಸೆಯಲ್ಲಿದ್ದ ಹಣವೆಲ್ಲಾ ತೆಗೆದುಕೊಂಡ. ಅದರಲ್ಲಿ ಇಪ್ಪತ್ತು ರೂಪಾಯಿ ಮಾತ್ರವಿತ್ತು.
`ಇದಕ್ಕಾಗಿ ಇಷ್ಟೆಲ್ಲಾ ಹೊಡೆದಾಡಿದೆಯಾ?’ ಎಂದು ಕಳ್ಳ ನಸ್ರುದ್ದೀನನನ್ನು ಬೈದ.
`ನನಗೇನು ಗೊತ್ತು? ನೀನೆಲ್ಲೋ ನನ್ನ ಒಳಅಂಗಿಯ ಕಿಸೆಯಲ್ಲಿನ ಹತ್ತು ಸಾವಿರ ರೂಪಾಯಿ ಕಿತ್ತುಕೊಳ್ಳಲು ಬಂದಿದ್ದೀಯಾ ಎಂದುಕೊಂಡೆಎಂದ ನಸ್ರುದ್ದೀನ್.

ಯಾವುದಿದೆಯೋ ಅದು
ಮುಲ್ಲಾ ನಸ್ರುದ್ದೀನನ ಹೆಂಡತಿ ಫಾತಿಮಾ ಮಾರುಕಟ್ಟೆಗೆ ಹೊರಟವಳು ಹಣ ಕೊಡುವಂತೆ ನಸ್ರುದ್ದೀನನನ್ನು ಕೇಳಿದಳು.
`ಹಣ, ಹಣ, ಹಣ! ಪ್ರತಿ ದಿನ ನಿನಗೆ ಹಣ ಬೇಕು. ನಿನಗೆ ಬೇಕಿರುವುದು ಹಣವಲ್ಲ, ಬುದ್ಧಿ!’ ಎಂದು ಸಿಡುಕಿಕೊಂಡು ಹೇಳಿದ.
`ಇರಬಹುದು. ನಿನ್ನ ಬಳಿ ಯಾವುದಿದೆಯೋ ಅದನ್ನು ಮಾತ್ರ ನಾನು ಕೇಳುತ್ತಿದ್ದೇನೆ ಅಷ್ಟೆಎಂದಳು ಫಾತಿಮಾ.

ತಿರುಗಾ ಮುರುಗಾ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಮನೆಯೊಂದರಲ್ಲಿ ಮರಗೆಲಸ ಮಾಡುತ್ತಿದ್ದರು. ಮಧ್ಯಾಹ್ನದ ಸಮಯವೇ ಊಟಕ್ಕೆ ಹೊರಟವರು ದಾರಿಯಲ್ಲಿ ಗಡಂಗು ಸಿಕ್ಕಿ ಕಂಠಪೂರ್ತಿ ಕುಡಿದು ಕೆಲಸಕ್ಕೆ ಬಂದರು. ಅಬ್ದುಲ್ಲಾ ಗೋಡೆಗೆ ಮೊಳೆ ಹೊಡೆಯಲು ಹೊರಟವನು ಮೊಳೆಯ ತಲೆಯನ್ನು ಗೋಡೆಗೆ ಹಿಡಿದು ಚೂಪಾದ ಕಡೆ ಸುತ್ತಿಗೆಯಿಂದ ಬಡಿಯತೊಡಗಿದ. ಸ್ವಲ್ಪ ಹೊತ್ತಿನ ನಂತರ,
`ಹೇ ನಸ್ರುದ್ದೀನ್! ಇಲ್ಲಿ ನೋಡು, ಮೊಳೆ ತಯಾರಿಸಿದವನೊಬ್ಬ ಮುಠ್ಠಾಳ, ಇದನ್ನು ತಲೆಕೆಳಗಾಗಿ ತಯಾರಿಸಿದ್ದಾನೆಎಂದ. ಅದನ್ನು ನೋಡಿದ ಬುದ್ಧಿವಂತ ನಸ್ರುದ್ದೀನ್,
`ಹೇ ಅಬ್ದುಲ್ಲಾ, ನೀನು ಮುಠ್ಠಾಳ. ಮೊಳೆ ತಯಾರಿಸಿರುವುದು ಎದುರುಗಡೆಯ ಗೋಡೆಗೆ, ತಗೋ ಮತ್ತೊಂದು ಮೊಳೆಎಂದ.

ಕೆಲಸ ಮತ್ತು ಮೋಜು
ನಸ್ರುದ್ದೀನ್ ಕಚೇರಿಯೊಂದರಲ್ಲಿ ಜವಾನನಾಗಿ ಕೆಲಸಕ್ಕೆ ಸೇರಿಕೊಂಡ. ಒಂದು ದಿನ ಮಧ್ಯಾಹ್ನ ಅಲ್ಲಿನ ಅಧಿಕಾರಿಗಳು ಹರಟೆ ಹೊಡೆಯುತ್ತಾ ಮಾತನಾಡುತ್ತಿದ್ದಾಗ ವಿಷಯ ಕಾಮದ ಕಡೆ ಹೊರಳಿತು. ಒಬ್ಬ, `ಲೈಂಗಿಕ ಕ್ರಿಯೆ ಎನ್ನುವುದು ಶೇಕಡಾ ಐವತ್ತರಷ್ಟು ಕೆಲಸ ಹಾಗೂ ಶೇಕಡಾ ಐವತ್ತರಷ್ಟು ಮೋಜುಎಂದ. ಮತ್ತೊಬ್ಬ `ಶೇಕಡಾ ಎಪ್ಪತ್ತೈದು ಮೋಜು ಹಾಗೂ ಶೇಕಡಾ ಇಪ್ಪತೈದು ಕೆಲಸಎಂದ. ಅಷ್ಟರಲ್ಲಿ ನಸ್ರುದ್ದೀನ್ ಅವರಿಗೆ ಕಾಫಿ ನೀಡಲು ಅಲ್ಲಿಗೆ ಬಂದ. ಅಧಿಕಾರಿಗಳಲ್ಲೊಬ್ಬ ನಸ್ರುದ್ದೀನನನ್ನು ಕೇಳೋಣ ಎಂದು ಅವನ ಅಭಿಪ್ರಾಯ ಕೇಳಿದರು. ಅದಕ್ಕೆ ನಸ್ರುದ್ದೀನ್,
`ನನ್ನ ಪ್ರಕಾರ ಲೈಂಗಿಕ ಕ್ರಿಯೆ ಎನ್ನುವುದು ಶೇಕಡಾ ನೂರರಷ್ಟು ಮೋಜು. ಏಕೆಂದರೆ ಅದರಲ್ಲಿ ಏನಾದರೂ ಕೆಲಸದ ಅಂಶವಿದ್ದಿದ್ದರೆ ಕೆಲಸವನ್ನೂ ನೀವು ನನಗೇ ಮಾಡಲು ಹೇಳುತ್ತಿದ್ದಿರಿಎಂದ.

ಆಸ್ತಿ ಹಂಚಿಕೆ
ಮುಲ್ಲಾ ನಸ್ರುದ್ದೀನ್ ನ್ಯಾಯಾಧೀಶರಾಗಿದ್ದಾಗ ಒಂದು ವಿವಾಹ ವಿಚ್ಛೇದನದ ತಕರಾರು ಅವರ ಎದುರಿಗೆ ಬಂದಿತ್ತು. ಬಹಳ ದಿನಗಳ ವಾದವಿವಾದದ ನಂತರ ವಿಚ್ಛೇದನದ ತೀರ್ಪು ನೀಡಿ ನಾಲ್ವರು ಮಕ್ಕಳಲ್ಲಿ ತಲಾ ಇಬ್ಬರನ್ನು ಗಂಡ ಹೆಂಡಿರು ಹಂಚಿಕೊಳ್ಳಬಹುದೆಂದರು. ನಮ್ಮ ಆಸ್ತಿಯನ್ನೂ ಹಂಚಿಕೆ ಮಾಡಿ ಎಂದಳು ಪತ್ನಿ. ಅದಕ್ಕೆ,
`ನಿಮ್ಮ ಆಸ್ತಿಯನ್ನು ನಿಮ್ಮ ನಿಮ್ಮ ವಕೀಲರು ಏನು ಉಳಿಸಿರುತ್ತಾರೆ? ಏನಾದರೂ ಉಳಿದಿದ್ದರೆ ಅವರೇ ಈಗಾಗಲೇ ಹಂಚಿಕೆ ಮಾಡಿಕೊಂಡಿರುತ್ತಾರೆಎಂದರು ನ್ಯಾಯಾಧೀಶ ನಸ್ರುದ್ದೀನ್.

ಕಳ್ಳತನ
ನಸ್ರುದ್ದೀನ್ ದಿನ ಕಚೇರಿಯಿಂದ ಹಿಂದುರಿಗಿದಾಗ ಮನೆಯಲ್ಲಿ ಅವನ ಹೆಂಡತಿ ಮಗನನ್ನು ಬಯ್ಯುತ್ತಿದ್ದಳು.
`ನೋಡಿ, ನಿಮ್ಮ ಘನಂದಾರಿ ಮಗ ಎಂಥ ಕೆಲಸ ಮಾಡಿದ್ದಾನೆ! ಶಾಲೆಯಲ್ಲಿ ತನ್ನ ಸಹಪಾಠಿಗಳ ಪೆನ್ಸಿಲ್ ಕದ್ದು ತಂದಿದ್ದಾನೆ!’ ಎಂದಳು ಫಾತಿಮಾ.
`ಹಾಗೆಲ್ಲಾ ಕಳ್ಳತನ ಮಾಡಬಾರದು ಮಗಾ, ಹೇಳಿದ ನಸ್ರುದ್ದೀನ್, `ನಿನಗೇನಾದರೂ ಪೆನ್ಸಿಲ್ ಬೇಕೆಂದು ಹೇಳಿದ್ದರೆ ನಾನೇ ನನ್ನ ಆಫೀಸಿನಿಂದ ತಂದುಕೊಡುತ್ತಿದ್ದೆನಲ್ಲಾ.’

ಸುಳ್ಳುಗಾರ
ಮುಲ್ಲಾ ನಸ್ರುದ್ದೀನ್ ಒಂದು ದಿನ ಮರದ ಕೆಳಗೆ ಕೂತು ವಿಶ್ರಮಿಸಿಕೊಳ್ಳುತ್ತಿದ್ದಾಗ ಅಲ್ಲಿ ಹಾದು ಹೋಗುತ್ತಿದ್ದ ಒಬ್ಬ ಮಧ್ಯವಯಸ್ಸಿನ ಹೆಣ್ಣೊಬ್ಬಳು ಅವನ ಬಳಿ ಬಂದು,
`ನಿಮ್ಮನ್ನು ಜಗತ್ತಿನ ಅತ್ಯಂತ ಸುಳ್ಳುಗಾರ ಎನ್ನುತ್ತಾರೆ ನಿಜವೇ?’ ಎಂದು ಕೇಳಿದಳು.
`ಅದೇನೋ ನನಗೆ ಗೊತ್ತಿಲ್ಲ. ನೀವ್ಯಾರು? ನಿಮ್ಮಂತಹ ಸುಂದರ ಮಹಿಳೆಯನ್ನು ನಾನು ನನ್ನ ಜೀವನದಲ್ಲಿ ಕಂಡೇ ಇಲ್ಲಎಂದ.
`ಅದು ನಿಜ. ನೋಡಿ ಸತ್ಯವಂತರನ್ನೂ ಜಗತ್ತು ಸುಳ್ಳುಗಾರ ಎನ್ನುತ್ತದೆಎನ್ನುತ್ತಾ ಆಕೆ ಅಲ್ಲಿಂದ ಹೊರಟುಹೋದಳು.

ಶಾಲೆಗೆ ರಜೆ
ಮುಲ್ಲಾ ನಸ್ರುದ್ದೀನನ ಮಗ ಒಂದು ದಿನ ಶಾಲೆಯಿಂದ ಬೇಗನೇ ವಾಪಸ್ಸು ಬಂದು,
` ದಿನ ಯಾರೋ ಪ್ರಖ್ಯಾತ ವ್ಯಕ್ತಿ ಸತ್ತುಹೋದರೆಂದು ಶಾಲೆಗೆ ರಜೆ ನೀಡಿದ್ದಾರೆಎಂದು ಹೇಳಿದವನು, `ಅಪ್ಪಾ, ನೀವೂ ಸಹ ಪ್ರಖ್ಯಾತ ವ್ಯಕ್ತಿಯಲ್ಲವೆ? ನೀವು ಸತ್ತರೂ ಶಾಲೆಗೆ ರಜೆ ಕೊಡುತ್ತಾರಾ?’ ಎಂದು ಕೇಳಿದ.

`ಅದೇನೋ ಗೊತ್ತಿಲ್ಲ ಮಗಾ, ಆದರೆ ನಿನಗಂತೂ ರಜೆ ಕೊಡುತ್ತಾರೆಎಂದ ನಸ್ರುದ್ದೀನ್.
j.balakrishna@gmail.com