ಕೆಲ ವರ್ಷಗಳ ಹಿಂದಿನ ನನ್ನ ಅನುವಾದ:
`ಈ ಶ್ರದ್ಧಾಪೂರ್ವಕವಾದ ಪ್ರಯೋಗವು ನಮ್ಮಿಂದಲೇ, ನಮ್ಮಲ್ಲಿನ ಪ್ರತಿಯೊಬ್ಬರಿಂದಲೂ ಪ್ರಾರಂಭವಾಗಬೇಕು; ಗಾಢ, ಆಂತರಿಕ ಬದಲಾವಣೆಯಿಲ್ಲದೆ ಕೇವಲ ಬಾಹ್ಯ ಸ್ಥಿತಿಗಳನ್ನು ಬದಲಾಯಿಸಿಕೊಳ್ಳುವುದು ಕೇವಲ ನಿಷ್ಪಲ ಪ್ರಯತ್ನವಾಗುತ್ತದೆ. ವ್ಯಕ್ತಿ ಏನಾಗಿದ್ದಾನೆ, ಸಮಾಜ ಏನಾಗಿದೆ; ಹಾಗೂ ಅವುಗಳ ಪರಸ್ಪರ ಸಂಬಂಧಗಳೇನು ಎನ್ನುವುದೇ ಸಮಾಜದ ಸಾಮಾಜಿಕ ರಚನೆಯನ್ನು ನಿರ್ಧರಿಸುತ್ತದೆ. ವ್ಯಕ್ತಿಯೊಬ್ಬ ಅಸಹನೆಯುಳ್ಳವನಾದಲ್ಲಿ, ಕ್ರೂರಿ ಹಾಗೂ ಸ್ಪರ್ಧಾತ್ಮಕ ಮನೋಭಾವವುಳ್ಳವನಾದಲ್ಲಿ ನಾವು ಒಂದು ಶಾಂತಿಯುತ, ಬುದ್ಧಿವಂತ ಸಮಾಜವನ್ನು ರಚಿಸುವುದು ಸಾಧ್ಯವಾಗುವುದಿಲ್ಲ. ವ್ಯಕ್ತಿಯೊಬ್ಬ ಇತರರೊಂದಿಗಿನ ಸಂಬಂಧದಲ್ಲಿ ಕರುಣೆ, ಪ್ರೀತಿ, ವಾತ್ಸಲ್ಯ ಮತ್ತು ವಿವೇಚನೆ ಹೊಂದಿರದಿದ್ದಲ್ಲಿ, ಆತ ವಿರಸ, ವೈಷಮ್ಯ ಹಾಗೂ ಗೊಂದಲಕ್ಕೆ ಅನಿವಾರ್ಯವಾಗಿ ಕಾರಣನಾಗುತ್ತಾನೆ. ವ್ಯಕ್ತಿಯ ವಿಸ್ತರಣೆಯೇ ಸಮಾಜ; ನಮ್ಮಿಂದ ರೂಪುಗೊಳ್ಳುವುದೇ ಸಮಾಜ. ಇದನ್ನು ನಾವು ಸಂಪೂರ್ಣವಾಗಿ ಮನದಟ್ಟುಮಾಡಿಕೊಳ್ಳುವವರೆಗೆ ಹಾಗೂ ನಮ್ಮನ್ನು ನಾವು ಅಮೂಲಾಗ್ರವಾಗಿ ಬದಲಿಸಿಕೊಳ್ಳುವವರೆಗೆ, ಕೇವಲ ಬಾಹ್ಯದಲ್ಲಿನ ಬದಲಾವಣೆಗಳು ಜಗತ್ತಿನಲ್ಲಿ ಶಾಂತಿಯನ್ನು ಅಥವಾ ಸುಖ ಸಂತೋಷಕರ ಸಾಮಾಜಿಕ ಸಂಬಂಧಗಳಿಗೆ ಅತ್ಯವಶ್ಯಕವಿರುವ ಪ್ರಶಾಂತತೆಯನ್ನು ತರುವುದಿಲ್ಲ.
ಹಾಗಾಗಿ ನಾವು ಪರಿಸರವನ್ನು ಬದಲಿಸುವುದರ ಬಗ್ಗೆ ಆಲೋಚಿಸುವುದು ಬೇಡ; ವ್ಯಕ್ತಿಯೊಬ್ಬನ, ನಮ್ಮಲ್ಲಿನ ಹಾಗೂ ಮತ್ತೊಬ್ಬರೊಂದಿಗಿನ ನಮ್ಮ ಸಂಬಂಧಗಳನ್ನು ರೂಪಾಂತರಗೊಳಿಸುವತ್ತ ನಮ್ಮೆಲ್ಲ ಗಮನವನ್ನು ಹರಿಸುವುದರಿಂದ ಇದು ಕೈಗೂಡಬೇಕು...'
ಓಜಾಯ್, ಕ್ಯಾಲಿಫೋರ್ನಿಯಾ, 1940
`ಮೊದಲಿಗೆ, ನಾವು ಸಂಬಂಧಗಳೆಂದರೇನು, ಮಾನವ ಸಂಬಂಧಗಳಲ್ಲಿ ಅಂತಹ ಸಂಘರ್ಷಗಳು, ನೋವು, ಗಾಢ ಏಕಾಂತ ಏಕಿವೆ ಎಂಬುದರ ಬಗ್ಗೆ ವಿಚಾರ ಮಾಡಬೇಕು. ನಾವೆಲ್ಲ ಅದರ ಬಗ್ಗೆ ಒಟ್ಟಿಗೇ ವಿಚಾರಮಾಡೋಣ. ವಿಚಾರ ಮಾಡುವುದು ಎಂದರೆ ಪರಿಶೋಧಿಸುವುದು, ಪ್ರಶ್ನಿಸುವುದು, ಸಂಶಯಪಡುವುದು- ನಮ್ಮ ಸಂಬಂಧಗಳ ಬಗೆಗೆ, ಗಂಡು ಮತ್ತು ಹೆಣ್ಣಿನ ನಡುವಿನ ಸಂಬಂಧಗಳ ಬಗೆಗೆ, ನಿಮ್ಮ ಹತ್ತಿರದ ನೆರೆಹೊರೆಯವರ ಹಾಗೂ ದೂರದ ನೆರೆಹೊರೆಯವರ ಸಂಬಂಧಗಳ ಬಗೆಗೆ. ಏಕೆ ಅಂತಹ ಸಂಘರ್ಷಗಳಿವೆ? ಚರಿತ್ರೆಯುದ್ದಕ್ಕೂ, ಮಾನವ ಇತರರೊಂದಿಗೆ ಪರಸ್ಪರ ಸಂಘರ್ಷದಲ್ಲಿಯೇ ತೊಡಗಿ ಬಂದಿದ್ದಾನೆ. ಆದರೆ ಅಸ್ತಿತ್ವವೇ ಸಂಬಂಧವಲ್ಲವೆ. ಸಂಬಂಧಗಳಿಲ್ಲದೆ ನೀವು ಬದುಕಲು ಸಾಧ್ಯವಿಲ್ಲ. ಆ ಅಸ್ತಿತ್ವದಲ್ಲಿಯೇ ಸಂಘರ್ಷವಿದೆ. ಆದರೆ ಸಂಬಂಧಗಳು ತೀರಾ ಅತ್ಯವಶ್ಯಕವಾಗಿದೆ. ಬದುಕೇ ಸಂಬಂಧ, ಕಾರ್ಯವೇ ಸಂಬಂಧ; ನೀವು ಏನು ಆಲೋಚಿಸುತ್ತೀರಿ ಎನ್ನುವುದು ಸಂಬಂಧಗಳನ್ನು ರಚಿಸುತ್ತದೆ ಅಥವಾ ಸಂಬಂಧಗಳನ್ನು ಹಾಳುಮಾಡುತ್ತದೆ. ವಿರಕ್ತ ಅಥವಾ ಸಂನ್ಯಾಸಿ ತಾನು ಎಲ್ಲದರಿಂದ ದೂರವಿರುವುದಾಗಿ ಭಾವಿಸಬಹುದು, ಆದರೆ ಆತ ಎಲ್ಲದರೊಂದಿಗೆ ಸಂಬಂಧ ಹೊಂದಿದ್ದಾನೆ- ತನ್ನ ಗತದೊಂದಿಗೆ, ಪರಿಸರದೊಂದಿಗೆ ಹಾಗೂ ತನಗೆ ಕಾಳು, ಆಹಾರ, ಬಟ್ಟೆ ತಂದುಕೊಡುವ ವ್ಯಕ್ತಿಯೊಂದಿಗೆ. ಹಾಗಾಗಿ ಬದುಕೆಲ್ಲಾ ಸಂಬಂಧಗಳೇ. ಸಂಬಂಧಗಳಲ್ಲಿ ಆ ಅಂತರಕ್ರಿಯೆ ಇಲ್ಲದಿದ್ದಲ್ಲಿ ಅಸ್ತಿತ್ವವೇ ಇಲ್ಲ.
ಮಾನವರು ಪರಸ್ಪರ ಸಂಘರ್ಷದೊಂದಿಗೆ ಏಕೆ ಬದುಕುತ್ತಿದ್ದಾರೆಂಬುದನ್ನು ನಾವೀಗ ಪರಿಶೋಧಿಸೋಣ. ನೀವು ಮತ್ತು ನಿಮ್ಮ ಗಂಡನ ನಡುವೆ, ಪತ್ನಿ ಮತ್ತು ಪುರುಷನ ನಡುವೆ ಸಂಘರ್ಷಗಳೇಕೆ ಇವೆ? ಏಕೆ? ದಯವಿಟ್ಟು ಈ ಪ್ರಶ್ನೆಯನ್ನು ನೀವೇ ಕೇಳಿಕೊಳ್ಳಿ. ಭಾಷಣಕಾರ ಪ್ರಶ್ನೆ ಕೇಳಬಹುದು, ವಾಸ್ತವವಾಗಿ ನೀವೇ ಪ್ರಶ್ನೆ ಕೇಳಿಕೊಳ್ಳುತ್ತಿದ್ದೀರಿ. ಉತ್ತರ ಕಂಡುಕೊಳ್ಳಿ. ಏಕೆಂದರೆ, ಯಾವ ಸಂಬಂಧದಲ್ಲಿ ಸಂಘರ್ಷವಿದೆಯೋ ಅಲ್ಲಿ ಪ್ರೇಮವಿರುವುದಿಲ್ಲ, ಅನುಕಂಪವಿರುವುದಿಲ್ಲ ಹಾಗೂ ಬುದ್ಧಿವಂತಿಕೆ ಇರುವುದಿಲ್ಲ. ಈ `ಬುದ್ಧಿವಂತಿಕೆ’, `ಅನುಕಂಪ’ ಮತ್ತು `ಪ್ರೇಮ’ ಎಂಬ ಪದಗಳ ಬಗ್ಗೆ ನಂತರ ನೋಡೋಣ. ಬೇರೆ ದೇಶಗಳಲ್ಲಿರುವಂತೆ ಈ ದೇಶದಲ್ಲಿಯೂ ಪ್ರೀತಿ, ಪ್ರೇಮವಿದೆಯೇ ಎಂಬುದರ ಬಗೆಗೆ ಸಂಶಯವಿರಲಾರದೇ ಇರದು.
ನೀವು ವಾಸ್ತವವಾಗಿ ಸಂಬಂಧ ಹೊಂದಿರುವವರೆ? ನಿಸ್ಸಂಶಯವಾಗಿ, ರಕ್ತಸಂಬಂಧ ಇನ್ನೂ ಮುಂತಾಗಿ. ನೀವು ಒಬ್ಬ ಗಂಡಿನೊಂದಿಗೆ, ಒಬ್ಬ ಹೆಣ್ಣಿನೊಂದಿಗೆ ಲೈಂಗಿಕವಾಗಿ ಸಂಬಂಧಹೊಂದಿರಬಹುದು, ಆದರೆ ಅದನ್ನು ಹೊರತುಪಡಿಸಿ ಬೇರೆ ಯಾರೊಂದಿಗಾದರೂ ಸಂಬಂಧಹೊಂದಿರುವಿರಾ? ಸಂಬಂಧ ಎಂದರೆ ಪ್ರತ್ಯೇಕವಾಗಿಲ್ಲದಿರುವುದು. ಅಂದರೆ, ವ್ಯಕ್ತಿಯೊಬ್ಬ ತನ್ನ ಬದುಕಿನ ಪ್ರತಿದಿನವೂ ಮನೆಯನ್ನು 9 ಗಂಟೆಗೋ ಅಥವಾ 6 ಗಂಟೆಗೋ ಬಿಟ್ಟು ಫ್ಯಾಕ್ಟರಿ ಅಥವಾ ಯಾವುದಾದರೂ ಉದ್ಯೋಗಕ್ಕೆ ಹೊರಡುತ್ತಾನೆ, ಇಡೀ ದಿನವನ್ನು ಕೆಲಸದಲ್ಲಿ ಕಳೆಯುತ್ತಾನೆ. ಕೆಲಸ... ಕೆಲಸ... ಐವತ್ತು, ಅರವತ್ತು ವರ್ಷ ದುಡಿಯುತ್ತಾನೆ ಹಾಗೂ ನಂತರ ಸತ್ತುಹೋಗುತ್ತಾನೆ. ಆತ ಮಹತ್ವಾಕಾಂಕ್ಷೆಯುಳ್ಳವನಾಗಿ, ದುರಾಸೆಯುಳ್ಳವನಾಗಿ, ಅಸೂಯೆಯುಳ್ಳವನಾಗಿ, ಹೋರಾಡುತ್ತಾ, ಸ್ಪರ್ಧಿಸುತ್ತಾ ಬದುಕಿರುತ್ತಾನೆ. ಆತನ ಪತ್ನಿಯೂ ಸ್ಪರ್ಧಿಸುತ್ತಾ, ಅಸೂಯೆಯುಳ್ಳವಳಾಗಿ, ಆತಂಕಹೊಂದಿ, ಮಹತ್ವಾಕಾಂಕ್ಷೆಯುಳ್ಳವಳಾಗಿ ತನ್ನದೇ ಹಾದಿಯಲ್ಲಿ ಹೋಗುತ್ತಿರುತ್ತಾಳೆ. ಅವರು ಲೈಂಗಿಕವಾಗಿ ಕೂಡಬಹುದು, ಪರಸ್ಪರ ಮಾತನಾಡಬಹುದು, ಸ್ವಲ್ಪ ಪರಸ್ಪರ ಆರೈಕೆ ತೋರಿಕೊಳ್ಳಬಹುದು, ಮಕ್ಕಳಿಗೆ ಜನ್ಮನೀಡಬಹುದು, ಆದರೆ ಅವರು ಎಂದೂ ಒಂದುಗೂಡದ ಎರಡು ರೈಲ್ವೇ ಹಳಿಗಳ ಹಾಗಿರುತ್ತಾರೆ. ಇದನ್ನು ನಾವು ಸಂಬಂಧವೆನ್ನುತ್ತೇವೆ. ಇದು ವಾಸ್ತವವಾಗಿರುವಂಥದು. ಇದು ಈ ಭಾಷಣಕಾರನ ಸೃಷ್ಟಿಯಲ್ಲ; ಇದು ಆತನ ಅನಿಸಿಕೆ ಅಥವಾ ತೀರ್ಮಾನವಲ್ಲ. ಇದು ಪ್ರತಿಯೊಬ್ಬರ ಬದುಕಿನ ವಾಸ್ತವತೆ- ಎರಡು ವ್ಯಕ್ತಿಗಳ ನಡುವಿನ ನಿರಂತರ ಭಿನ್ನಾಭಿಪ್ರಾಯ, ಪ್ರತಿಯೊಬ್ಬರೂ ತಮ್ಮದೇ ಅನಿಸಿಕೆಗಳಿಗೆ, ತಮ್ಮದೇ ನಿರ್ಣಯಗಳಿಗೆ ಆತುಕೊಂಡಿರುವುದು.
`ನಿರ್ಣಯ’ ಎನ್ನುವ ಪದದ ಅರ್ಥ ವಾದವಿವಾದಕ್ಕೆ ತೆರೆ ಎಳೆದಂತೆ. ನಾನು ದೇವರಿದ್ದಾರೆಂದು ನಿರ್ಣಯಿಸುತ್ತೇನೆ; ಹಾಗಾಗಿ ನಾನು ವಾದವನ್ನು ಅಂತ್ಯಗೊಳಿಸಿದ್ದೇನೆ, ನಾನು ನಿರ್ಣಯಿಸಿದ್ದೇನೆ. ಆದ್ದರಿಂದ ದಯವಿಟ್ಟು ನಿರ್ಣಯಿಸಬೇಡಿ, ವಾದವೊಂದನ್ನು ಅಂತ್ಯಗೊಳಿಸಬೇಡಿ. ನಾವು ಏನನ್ನೂ ನಿರ್ಣಯಿಸುತ್ತಿಲ್ಲ; ನಾವು ವಾಸ್ತವತೆಯನ್ನು ಗಮನಿಸುತ್ತಿದ್ದೇವೆ. ವಾಸ್ತವತೆಯೆಂದರೆ, ಸಂಬಂಧವೊಂದು ಎಷ್ಟೇ ಅನ್ಯೋನ್ಯವಾಗಿದ್ದರೂ ಅದರಲ್ಲಿ ಸಂಘರ್ಷವಿದ್ದೇ ಇರುತ್ತದೆ- ಒಂದು ಮತ್ತೊಂದರ ಮೇಲೆ ಮೇಲುಗೈ ಸಾಧಿಸುವ, ಒಂದು ಮತ್ತೊಂದನ್ನು ತನ್ನದಾಗಿಸಿಕೊಳ್ಳುವ, ಒಂದು ಮತ್ತೊಂದನ್ನು ಅಸೂಯೆಪಡುವ ಸಂಘರ್ಷ. ನಾವು ಇದನ್ನೇ ಸಂಬಂಧಗಳೆನ್ನುತ್ತೇವೆ. ಈಗ, ನಾವು ತಿಳಿದಿರುವಂತಹ ಅಂತಹ ಸಂಬಂಧವನ್ನು ಬದಲಿಸಬಹುದೆ? ಈ ಪ್ರಶ್ನೆ ನಿಮ್ಮನ್ನೇ ಕೇಳಿಕೊಳ್ಳಿ.
ಇಬ್ಬರು ವ್ಯಕ್ತಿಗಳು ಅವರು ವಿದ್ಯಾವಂತರಾಗಿರಬಹುದು ಅಥವಾ ಅವಿದ್ಯಾವಂತರಾಗಿರಬಹುದು, ಆದರೂ ಅವರ ನಡುವೆ ಸಂಘರ್ಷವಿರುತ್ತದೆ. ಹೀಗೇಕೆ? ಅವರು ಮಹಾನ್ ವಿಜ್ಞಾನಿಗಳಾಗಿರಬಹುದು, ಆದರೂ ಅವರು ನಿಮ್ಮ ಹಾಗೂ ಇತರರ ಹಾಗೆ ಸಾಮಾನ್ಯ ಮನುಷ್ಯರು, ಕಿತ್ತಾಡುತ್ತ, ಹೊಡೆದಾಡುತ್ತ, ಮಹತ್ವಾಕಾಂಕ್ಷಿಗಳಾಗಿರುವವರು. ಈ ಪರಿಸ್ಥಿತಿ ಏಕಿದೆ? ಇದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಗ್ಗೆಯೇ ಚಿಂತಿಸುವುದರಿಂದಲ್ಲವೇ? ಪ್ರತಿಯೊಬ್ಬರೂ ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳುತ್ತಿದ್ದಾರೆ. ಆ ಪ್ರತ್ಯೇಕತೆಯಲ್ಲಿ ನೀವು ಒಂದು ಆರೋಗ್ಯಕರ ಸಂಬಂಧವನ್ನು ಹೊಂದಿರಲು ಸಾಧ್ಯವಿಲ್ಲ. ಇದು ಸ್ಫುಟವಾಗಿ ಕಾಣುತ್ತದೆ. ನೀವಿದರ ಬಗ್ಗೆ ಕೇಳುತ್ತೀರಿ, ಆದರೆ ಅದರ ಬಗ್ಗೆ ನೀವು ಏನೂ ಮಾಡುವುದಿಲ್ಲ ಏಕೆಂದರೆ ನೀವು ಒಂದು ರೀತಿಯ ಚಟಕ್ಕೆ ಬೀಳುತ್ತೀರಿ, ಹಳೆಯ ಸವಕಲು ಜಾಡೇ ಹಿಡಿಯುತ್ತೀರಿ, ಕಿರಿದಾದ ಸಂಕುಚಿತ ಬದುಕಿನೊಳಕ್ಕೆ ಹಾಗೂ ಅದೆಷ್ಟೇ ಯಾತನಾಮಯವಾಗಿದ್ದರೂ, ಅತೃಪ್ತಿಯಿಂದ ಕೂಡಿದ್ದರೂ, ಜಗಳಗಂಟಿಯದಾಗಿದ್ದರೂ, ಕುರೂಪವಾಗಿದ್ದರೂ ಅದಕ್ಕೇ ಹೊಂದಿಕೊಂಡು ಹೋಗುತ್ತೀರಿ.
ಹಾಗಾಗಿ, ಮತ್ತೊಬ್ಬರೊಂದಿಗೆ ಸಹಬಾಳ್ವೆಯಿಂದ, ಭಿನ್ನಾಭಿಪ್ರಾಯವಿಲ್ಲದೆ, ಯಾವುದೇ ವಿಭಜನೆಯಿಲ್ಲದೆ ಬದುಕಲು ಸಾಧ್ಯವೇ ಎಂಬುದರ ಬಗ್ಗೆ ದಯವಿಟ್ಟು ಆಲೋಚಿಸಿ. ನೀವಿದರ ಬಗ್ಗೆ ಪ್ರಾಮಾಣಿಕವಾಗಿ, ಗಾಢವಾಗಿ ವಿಚಾರಮಾಡಿದರೆ ನೀವು ನಿಮ್ಮ ಪತ್ನಿಯ ಆಕೃತಿಯೊಂದನ್ನು ಹಾಗೂ ಆಕೆ ನಿಮ್ಮ ಆಕೃತಿಯೊಂದನ್ನು ರಚಿಸಿಕೊಂಡಿರುವುದನ್ನು ನೀವು ಕಾಣುತ್ತೀರಿ. ನಿಮ್ಮ ಇಪ್ಪತ್ತು ವರ್ಷಗಳು ಜೊತೆಯಾಗಿ ಬದುಕಿರುವುದರ ಚಿತ್ರ ಈ ಆಕೃತಿ- ಪೀಡನೆ, ಕಟುವಾದ ಮಾತುಗಳು, ತಾತ್ಸಾರ, ಪರಿಗಣನೆಗೆ ತೆಗೆದುಕೊಳ್ಳದಿರುವುದು ಇತ್ಯಾದಿ. ನಿಮ್ಮಲ್ಲಿ ಪ್ರತಿಯೊಬ್ಬರೂ ಮತ್ತೊಬ್ಬರ ಬಗೆಗೆ ಒಂದು ಆಕೃತಿಯನ್ನು, ಚಿತ್ರವನ್ನು ರಚಿಸಿಕೊಂಡಿದ್ದೀರಿ. ಈ ಎರಡೂ ಚಿತ್ರಗಳು, ಆಕೃತಿಗಳು, ಪದಗಳು ಪರಸ್ಪರ ಸಂಬಂಧವನ್ನು ಹೊಂದಿವೆ. ಈ ಭಾಷಣಕಾರನ ಬಗೆಗೆ ನೀವೆಲ್ಲ ಒಂದು ಚಿತ್ರಣವನ್ನು ರಚಿಸಿಕೊಂಡಿರುತ್ತೀರಲ್ಲವೆ. ಏಕೆ ಹೇಳಿ? ಈ ಭಾಷಣಕಾರ ನಿಮಗೆ ಪರಿಚಯವಿಲ್ಲ. ನೀವು ಹೇಗೆ ನಿಮ್ಮ ಗಂಡನನ್ನು ಅಥವಾ ಹೆಂಡತಿಯನ್ನು ಅರಿತಿಲ್ಲವೋ ಹಾಗೆಯೇ ಈ ಭಾಷಣಕಾರನನ್ನು ನೀವು ಅರಿಯುವುದು ಸಾಧ್ಯವಿಲ್ಲ, ಆದರೂ ಆತನ ಆಕೃತಿಯೊಂದನ್ನು ರೂಪಿಸಿಕೊಂಡಿದ್ದೀರಿ- ಆತ ಧಾರ್ಮಿಕ ವ್ಯಕ್ತಿಯೆಂದೋ, ಅಧಾರ್ಮಿಕ ವ್ಯಕ್ತಿಯೆಂದೋ, ಆತ ಮುಟ್ಟಾಳನೆಂದೋ, ಆತ ಮಹಾ ಚತುರನೆಂದೋ, ಆತ ಸುಂದರನೆಂದೋ, ಆತ ಇದೆಂದೋ, ಆತ ಅದೆಂದೋ, ಹೀಗೇ ಮುಂತಾಗಿ. ಆ ಆಕೃತಿಯ ಮೂಲಕ ನೀವು ಆ ವ್ಯಕ್ತಿಯನ್ನು ನೋಡುತ್ತೀರಿ. ಆ ಆಕೃತಿ ಆ ವ್ಯಕ್ತಿಯಲ್ಲ; ಆಕೃತಿ ಒಂದು ಖ್ಯಾತಿ ಹಾಗೂ ಆ ಖ್ಯಾತಿಯನ್ನು ಸುಲಭವಾಗಿ ರಚಿಸಬಹುದು, ಖ್ಯಾತಿ ಒಳ್ಳೆಯದ್ದಾಗಿರಬಹುದು ಅಥವಾ ಕೆಟ್ಟದ್ದಾಗಿರಬಹುದು. ಮನುಷ್ಯನ ಮಿದುಳು, ಆಲೋಚನೆಗಳು ಆಕೃತಿಯನ್ನು ರಚಿಸುತ್ತವೆ. ಆ ಆಕೃತಿಯೇ ನಿರ್ಣಾಯಕವಾದದ್ದು ಹಾಗೂ ನಾವು ಆ ಆಕೃತಿಗಳಿಂದಲೇ ಬದುಕುತ್ತೇವೆ. ಆಕೃತಿ, ಹಾಗೂ ಚಿತ್ರಣಗಳ ರಚನೆಯಲ್ಲಿ ಪ್ರೀತಿ ಪ್ರೇಮಕ್ಕೆ ಸ್ಥಾನವಿಲ್ಲ. ನಾವು ಪರಸ್ಪರ ಪ್ರೀತಿಸುವುದಿಲ್ಲ. ನಾವು ಕೈ ಕೈ ಹಿಡಿದುಕೊಳ್ಳಬಹುದು, ಜೊತೆಯಲ್ಲಿ ಮಲಗಬಹುದು, ಹತ್ತು ಹಲವಾರು ಕೆಲಸಗಳನ್ನು ಜೊತೆಯಲ್ಲೇ ಮಾಡಬಹುದು, ಆದರೆ ನಮ್ಮಲ್ಲೇ ಪರಸ್ಪರ ಪ್ರೀತಿಯಿಲ್ಲ. ನಿಮ್ಮಲ್ಲಿ ಆ ಗುಣವಿದ್ದರೆ, ಪ್ರೀತಿ ಪ್ರೇಮದ ಪರಿಮಳವಿದ್ದರೆ ಯುದ್ಧಗಳೇ ಇರುವುದಿಲ್ಲ. ಹಿಂದು ಮತ್ತು ಮುಸಲ್ಮಾನ, ಯೆಹೂದಿ ಮತ್ತು ಅರಬ್ಬರೂ ಇರುವುದಿಲ್ಲ. ನೀವಿದನ್ನು ಕೇಳುತ್ತೀರಿ, ಹಾಗೂ ನೀವು ನಿಮ್ಮ ಆಕೃತಿಗಳೊಂದಿಗೇ ಇರುತ್ತೀರಿ. ನೀವು ಇನ್ನೂ ಪರಸ್ಪರ ಹೊಡೆದಾಡುತ್ತೀರಿ, ಜಗಳವಾಡುತ್ತೀರಿ. ನಿಮ್ಮ ಬದುಕು ಅತ್ಯದ್ಭುತವಾಗಿ ಅರ್ಥಹೀನವಾಗಿದೆ. ಇದನ್ನು ನಿಮ್ಮಲ್ಲೆಷ್ಟು ಜನ ಅರ್ಥಮಾಡಿಕೊಳ್ಳಬಲ್ಲಿರಿ!
ನಮ್ಮ ಆಲೋಚನೆಗಳಿಂದಲೇ ನಾವು ಒಟ್ಟಿಗಿದ್ದೇವೆ. ನಿಮ್ಮ ದೇವರುಗಳು ಒಟ್ಟಿಗಿರುವುದೂ ದೇವರುಗಳಿಂದಲೇ. ಎಲ್ಲ ಆಚರಣೆಗಳು, ಎಲ್ಲ ಸಿದ್ಧಾಂತಗಳು, ತತ್ವಜ್ಞಾನಗಳು ಎಲ್ಲವೂ ಆಲೋಚನೆಗಳಿಂದಲೇ ಒಟ್ಟುಗೂಡಿವೆ ಹಾಗೂ ಆಲೋಚನೆಯು ಪವಿತ್ರವಾದದ್ದಲ್ಲ. ಆಲೋಚನೆ ಯಾವಾಗಲೂ ಸೀಮಿತವಾದದ್ದು. ನಿಮ್ಮನ್ನು ಹೆಂಡತಿಯ ಅಥವಾ ಗಂಡನ ಆಕೃತಿಯ ಹಾಗೆ, ಭಾರತೀಯನ ಅಥವಾ ಅಮೆರಿಕನ್ನನ ಆಕೃತಿಯ ಹಾಗೆ ಆಲೋಚನೆಯು ರೂಪಿಸುತ್ತದೆ. ವಾಸ್ತವವಲ್ಲದ ಈ ಆಕೃತಿಗಳು ಮನುಕುಲವನ್ನು ಪ್ರತ್ಯೇಕಿಸುತ್ತದೆ. ನಾವು ಮಾನವರಾಗಿರುವುದರಿಂದ, ನೀವು ನಿಮ್ಮನ್ನು ಎಂದಿಗೂ ಭಾರತೀಯನೆಂದು ಹಾಗೂ ನಾನು ನನ್ನನ್ನು ರಷಿಯನ್ ಅಥವಾ ಅಮೆರಿಕನ್ ಎಂದು ಕರೆದುಕೊಳ್ಳದಿದ್ದಲ್ಲಿ ನಮ್ಮಲ್ಲಿ ಯುದ್ಧಗಳೇ ಇರುವುದಿಲ್ಲ. ನಮಗೆ ಒಂದು ಜಾಗತಿಕ ಸರ್ಕಾರವಿರುತ್ತದೆ ಹಾಗೂ ನಮ್ಮಲ್ಲಿ ಜಾಗತಿಕ ಸಂಬಂಧಗಳಿರುತ್ತವೆ. ಆದರೆ ನಿಮಗೆ ಅದರಲ್ಲಿ ಆಸಕ್ತಿಯಿಲ್ಲ. ನೀವು ಮಧ್ಯಮ ಯೋಗ್ಯತೆಯುಳ್ಳವರಾಗಿಯೇ ಉಳಿದುಬಿಡುತ್ತೀರಿ- ಆ ಪದ ಬಳಸಿದ್ದಕ್ಕೆ ನನ್ನನ್ನು ಕ್ಷಮಿಸಿ. ‘ಮಧ್ಯಮ ಯೋಗ್ಯತೆ’ಯುಳ್ಳವರೆಂದರೆ, ಅರ್ಧಕ್ಕೆ ಮಾತ್ರ ಏರಿದವರು, ಎಂದೂ ಮೇಲ್ಮಟ್ಟಕ್ಕೆ ಏರದಿರುವವರು ಎಂದರ್ಥ- ವ್ಯಾಪಾರ ಜಗತ್ತಿನಲ್ಲಿ ಅಥವಾ ತಾಂತ್ರಿಕ ಜಗತ್ತಿನಲ್ಲಿ ಅಲ್ಲ, ಬದಲಿಗೆ ಮಾನಸಿಕವಾಗಿ.
ನೀವು ಇದನ್ನೆಲ್ಲಾ ಕೇಳುತ್ತೀರಿ, ಆದರೆ ನೀವು ನಿಮ್ಮಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಿಕೊಳ್ಳದಿದ್ದಲ್ಲಿ, ಮುಂದಿನ ತಲೆಮಾರುಗಳನ್ನು ದುರಂತಕ್ಕೆ ತಳ್ಳುತ್ತೀರಿ. ಆದ್ದರಿಂದ, ದಯವಿಟ್ಟು ಆಲಿಸಿ, ಆಲೋಚಿಸಿ, ನಿಮ್ಮ ಹೊರಜಗತ್ತಿನಲ್ಲಿ ನಡೆಯುತ್ತಿರುವುದರ ಬಗೆಗೆ ಹಾಗೂ ಅತ್ಯಂತ ಮುಖ್ಯವಾಗಿ ನಿಮ್ಮ ಆಂತರ್ಯದಲ್ಲಿ ನಡೆಯುತ್ತಿರುವುದ ಬಗೆಗೆ ಗಮನ ಹರಿಸಿ. ಏಕೆಂದರೆ, ರಷ್ಯಾದಲ್ಲಾದ ಹಾಗೆ ಆಂತರ್ಯದ ಮನಸ್ಸು ಹೊರ ಜಗತ್ತನ್ನು ಗೆಲ್ಲುತ್ತದೆ. ನಾವು ಬಾಹ್ಯಕ್ಕೇ ಹೆಚ್ಚು ಮಹತ್ವ ಕೊಡುತ್ತೇವೆ. ನಮಗೆ ಸರಿಯಾದ ಸಮಾಜವಿರಬೇಕು, ನ್ಯಾಯಯುತ ಕಾನೂನುಗಳಿರಬೇಕು, ಬಡವರಿಗೆ ಆಹಾರ ಒದಗಿಸಬೇಕು, ಬಡವರ ಬಗ್ಗೆ ಕಾಳಜಿ ತೋರಬೇಕು; ಇವುಗಳನ್ನೆಲ್ಲ ಮಾಡಬಾರದೆಂದು ನಾನು ಹೇಳುತ್ತಿಲ್ಲ. ಆದರೆ ಆಂತರಿಕ ಆಲೋಚನೆ, ಆಂತರ್ಯದ ಅನಿಸಿಕೆಗಳು, ಆಂತರಿಕ ಪ್ರತ್ಯೇಕತೆ ಮನುಷ್ಯನನ್ನು ಮನುಷ್ಯನಿಂದ ಪ್ರತ್ಯೇಕಿಸುತ್ತಿವೆ. ಇದಕ್ಕೆಲ್ಲ ನೀವು ಕಾರಣರು; ನಿಮ್ಮಲ್ಲಿನ ಪ್ರತಿಯೊಬ್ಬರೂ ಇದಕ್ಕೆ ಕಾರಣರಾಗಿದ್ದೀರಿ. ನೀವು ಮೂಲಭೂತವಾಗಿ, ಆಂತರಿಕವಾಗಿ ಬದಲಾಗದಿದ್ದಲ್ಲಿ ಭವಿಷ್ಯ ಅಪಾಯಕಾರಿಯಾಗಲಿದೆ. ಅವರು ಅಣುಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ, ಅಂದರೆ ನ್ಯೂಯಾರ್ಕ್ ಮೇಲೆ ನ್ಯೂಟ್ರಾನ್ ಬಾಂಬ್ ಬಿದ್ದಲ್ಲಿ ಹತ್ತು ಮಿಲಿಯನ್ ಜನರು ಅರೆ ಕ್ಷಣದಲ್ಲಿ ಆವಿಯಾಗಿಬಿಡುತ್ತಾರೆ. ಅವರು ಭೂಮಿಯ ಮೇಲಿನಿಂದಲೇ ಸಂಪೂರ್ಣವಾಗಿ ಕಣ್ಮರೆಯಾಗಿಬಿಡುತ್ತಾರೆ. ಬದುಕುಳಿಯುವವರು ಗಾಯಾಳುಗಳಾಗಿರುತ್ತಾರೆ, ಅವರ ಕಣ್ಣುಗಳು ಕರಗಿಹೋಗಿರುತ್ತವೆ, ಹಾಗೂ ಹತ್ತು ಸಾವಿರ ಮನುಷ್ಯರಿಗೆ ಕೇವಲ ಒಬ್ಬರು ವೈದ್ಯರಿರುತ್ತಾರೆ. ಅವರೆಲ್ಲ ಇದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ-ಈ ದೇಶದವರೂ ಸಹ. ಇದಕ್ಕೆಲ್ಲ ನೀವೂ ಕಾರಣರು. ನಿಮ್ಮ ದಿನನಿತ್ಯದ ಬದುಕಿನಲ್ಲಿ ನೀವು ಮೂಲಭೂತ ಬದಲಾವಣೆಯನ್ನು ತಂದುಕೊಳ್ಳದಿದ್ದಲ್ಲಿ, ಪರಸ್ಪರ ಉತ್ತಮ ಸಂಬಂಧಗಳನ್ನು ಇರಿಸಿಕೊಂಡು, ಪ್ರಾಮಾಣಿಕವಾಗಿ ಬದುಕಿದಲ್ಲಿ ಹಾಗೂ ಮಹತ್ವಾಕಾಂಕ್ಷೆಗಳನ್ನು ಹೊಂದಿರದಿದ್ದಲ್ಲಿ ಮಾತ್ರ ಮನುಷ್ಯ-ಮನುಷ್ಯರ ನಡುವೆ ಸಂಘರ್ಷವನ್ನು ಕೊನೆಗಾಣಿಸುವ ಸಾಧ್ಯತೆಯಿದೆ.’
‘ಮೈಂಡ್ ವಿಥೌಟ್ ಮೆಶರ್’ನಿಂದ, ಕೊಲ್ಕತ್ತಾ, 20ನೇ ನವೆಂಬರ್ 1982
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ