Friday, August 07, 2015

ಕೊನಾರ್ಕ್ ನ ಮಿಥುನ ಶಿಲ್ಪಗಳು

1999ರ ಡಿಸೆಂಬರ್ 2ರ `ಸುಧಾ'ದಲ್ಲಿ ಪ್ರಕಟವಾದ ನನ್ನ ಲೇಖನಸೂರ್ಯದೇಗುಲದಲ್ಲಿ ಯಥೇಚ್ಛವಾಗಿರುವ ಮಿಥುನ ಶಿಲ್ಪಗಳು ಮಡಿವಂತರನ್ನು ಬೆಚ್ಚಿಬೀಳಿಸುತ್ತವೆ. ಪರಸ್ಪರ ಆಲಿಂಗನದಲ್ಲಿರುವ ಹಾಗೂ ಸಂಭೋಗ ಕ್ರಿಯೆಯಲ್ಲಿರುವ ಶಿಲ್ಪಗಳು ಭಾರತದ ಹಲವಾರು ದೇವಾಲಯಗಳಲ್ಲಿದ್ದರೂ ಸಹ ಕೊನಾರ್ಕ್ ಮಿಥುನ ಶಿಲ್ಪಗಳು ಹೆಚ್ಚು ಸ್ಫುಟವಾಗಿವೆ. ಮಿಥುನ ಶಿಲ್ಪಗಳು `ಕಪ್ಪು ಪಗೋಡಕ್ಕೆ `ಕುಪ್ರಸಿದ್ಧಿಯನ್ನು ತಂದಿವೆಯೆಂದು ಏಷಿಯಾ ನಾಗರಿಕತೆಗಳ ವಿದ್ವಾಂಸ .ಎಲ್.ಭಾಷಂ ಹೇಳುತ್ತಾರೆ.
ಪೂಜಾಸ್ಥಾನಗಳಲ್ಲಿನ ಮಿಥುನ ಶಿಲ್ಪಗಳ ಪ್ರಾಮುಖ್ಯ ಅಥವಾ ಅವಶ್ಯಕತೆಯ ಬಗ್ಗೆ ಹಲವಾರು ವಿವರಣೆಗಳಿವೆ. ಕೆಲವರ ಪ್ರಕಾರ ದೇಗುಲಗಳಲ್ಲಿನ ದೇವದಾಸಿಯರ `ರಂಜನೀಯ ಬದುಕನ್ನು ಪ್ರಕಟಿಸುವುದು ಅಂಥ ಶಿಲ್ಪಗಳ ಉದ್ದೇಶವಾಗಿದ್ದರೆ ಇನ್ನು ಕೆಲವರ ಪ್ರಕಾರ ದೇವಾಲಯದ ಒಳಗಿನ ಪಾರಮಾರ್ಥಿಕ ಪ್ರಪಂಚಕ್ಕೆ ತದ್ವಿರುದ್ಧವಾಗಿ ದೈಹಿಕ ಸುಖಭೋಗಗಳ ಬಗ್ಗೆ ತಿಳಿಯಪಡಿಸುವುದಾಗಿತ್ತು. ಇನ್ನೂ ಕೆಲವರ ಪ್ರಕಾರ ಅಂಥ ಶಿಲ್ಪಗಳು ಸ್ವರ್ಗದಲ್ಲಿ ಸಿಗಬಹುದಾದ ಸುಖ ಭೋಗಗಳ ಪರಿಚಯ ಮಾಡಿಸುವುದಾಗಿದ್ದಿರಬಹುದು ಅಥವಾ ಲೈಂಗಿಕ ಶಿಕ್ಷಣ ಕೊಡುವುದು ಅವುಗಳ ಉದ್ದೇಶವಾಗಿದ್ದಿರಬಹುದು. ಕೊನಾರ್ಕ್ ಸೂರ್ಯ ದೇವಾಲಯ ತಂತ್ರ ಹಾಗೂ ಶಕ್ತ್ಯಾರಾಧನೆಯ ಕೇಂದ್ರವಾಗಿದ್ದಿರಬಹುದೆಂದೂ ಅದರಿಂದಾಗಿ ದೇವಾಲಯದಲ್ಲಿ ಯಥೇಚ್ಛವಾಗಿ ಮಿಥುನ ಶಿಲ್ಪಗಳಿವೆಯೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ದೇವಾಲಯದಲ್ಲಿ ತಂತ್ರ ಹಾಗೂ ಶಕ್ತ್ಯಾರಾಧನೆಯಿದ್ದ ಯಾವುದೇ ಕುರುಹುಗಳಿಲ್ಲ. ಕೆಟ್ಟ ಕಣ್ಣಿನ `ದೃಷ್ಟಿ ಆಗದಿರಲೆಂದೂ ಅಥವಾ ದೈವಭಕ್ತರ ಮನೋಬಲವನ್ನು ಪರೀಕ್ಷಿಸಲೋಸುವ ಅಂಥ ಶಿಲ್ಪಗಳಿರುತ್ತಿದ್ದುವೆಂಬ ಕೆಲವರ ವಾದವನ್ನು ಕೊನಾರ್ಕ್ ಸೂರ್ಯದೇವಾಲಯದ ಬಗ್ಗೆ ಅಧ್ಯಯನ ಮಾಡಿರುವ ದೇವಾಲ ಮಿತ್ರ ಒಪ್ಪುವುದಿಲ್ಲ. ಅವರ ಪ್ರಕಾರ ಮಿಥುನ ಶಿಲ್ಪಗಳು ಯಾವುದೇ `ಕಾಮಶಾಸ್ತ್ರ ವಿವರಣೆಯಲ್ಲ ಅಥವಾ ತಂತ್ರಾರಾಧನೆಯ ಸಂಕೇತಗಳಲ್ಲ. ಶಿಲ್ಪಿ ದೇವಲಾಯದಲ್ಲಿನ ಇನ್ನಿತರ ಶಿಲ್ಪಗಳನ್ನು ರಚಿಸಿದ ರೀತಿಯಲ್ಲಿಯೇ ಮಿಥುನ ಶಿಲ್ಪಗಳನ್ನೂ ಸಹ ರಚಿಸಿದ್ದಾನೆ. ಮಿಥುನ ಶಿಲ್ಪಗಳನ್ನೇನು ಆತ ಕೀಳ್ಮಟ್ಟದ ದೃಷ್ಟಿಯಿಂದ ಕಂಡಿರಲಿಕ್ಕಿಲ್ಲ. ಬಹುಶಃ ಅದೇ ಭಾವನೆಯೇ ಆಗಿನ ಸಮಾಜದ್ದೂ ಸಹ ಆಗಿದ್ದಿರಬಹುದು. ಆಧುನಿಕ ನೋಟಕ್ಕೆ ಬೆಚ್ಚಿಬೀಳಿಸುವ ಮಿಥುನ ಶಿಲ್ಪಗಳು ಆಗಿನ ಸಮಾಜಕ್ಕೆ ಪ್ರಾಕೃತಿಕ ಕ್ರಿಯೆಯಾದ ಲೈಂಗಿಕತೆಯ ಸಹಜ ಅಭಿವ್ಯಕ್ತಿಯಾಗಿರಬಹುದು.
ಮಿಥುನ ಶಿಲ್ಪಗಳು ಶಕ್ತಿಯ ಸಂಕೇತ. ಎರಡು ಶಕ್ತಿಗಳು ಒಂದೇ ದೇವರಲ್ಲಿ ಮಿಲನವಾಗಿ ದೇವನ ಏಕತೆಯನ್ನು ಸೂಚಿಸುತ್ತದೆ ಹಾಗೂ ಯೋನಿ-ಲಿಂಗ ಇವು ಪ್ರಪಂಚ ಸೃಷ್ಟಿಗೆ ಸಂಕೇತ; ಅವೆರಡರ ಕೂಡುವಿಕೆಯು ಕರ್ಮವನ್ನು ನಿರೂಪಿಸುತ್ತದೆ ಎಂಬುದು ಪ್ರಾಚೀನ ಆಧ್ಯಾತ್ಮಿಕರ ವಿವರಣೆ.
ಖ್ಯಾತ ಸಮಾಜವಾದಿ, ರಾಜಕಾರಣಿ ಡಾ.ರಾಮ ಮನೋಹರ ಲೋಹಿಯಾ ತಮ್ಮ ಲೇಖನ `ಮೀನಿಂಗ್ ಇನ್ ಸ್ಟೋನ್ನಲ್ಲಿ ಕೊನಾರ್ಕ್ ಮಿಥುನ ಶಿಲ್ಪಗಳ ಬಗ್ಗೆ ರೀತಿ ಹೇಳಿದ್ದಾರೆ: `ದೆಲ್ವಾರ, ಚಿತ್ತೋರ್ ಮತ್ತ ವಾರಂಗಲ್ಗಳು ಕೂಡ ಇಷ್ಟೇ ಸಮೃದ್ಧವಾಗಿವೆಯಾದರೂ ಅವುಗಳಲ್ಲಿ ಖಜುರಾಹೋ, ಕೊನಾರ್ಕ್ಗಳ ಲೈಂಗಿಕ ಸಮೃದ್ಧಿ ಕಾಣಸಿಗುವುದಿಲ್ಲ. ಲೈಂಗಿಕ ಸಮೃದ್ಧಿಗೆ ಧಾರ್ಮಿಕ ವಿವರಣೆಗಳಿರುವುದರ ಜೊತೆಗೆ ಇಂದ್ರಿಯಾಸಕ್ತಿಯ ಮೂಲ ಪ್ರವೃತ್ತಿಯೂ ಇದ್ದಿರಬಹುದು. ಆಲಿಂಗನದ ಚಿತ್ರಣವಂತೂ ಇಂಡಿಯಾದ ಆರಂಭಿಕ ಕಲೆಯ ಮೂಲಕ್ಕೇ ಹೋಗುತ್ತದೆ. ಇಂಡಿಯಾದ ಶಿಲ್ಪಗಳೂ, ಸಂತರೂ ಸೌಂದರ್ಯವೆನ್ನುವುದು ಲೈಂಗಿಕತೆಗೆ ಸಂಬಂಧವುಳ್ಳವೆಂಬುದನ್ನೂ, ಗಂಡಸಿನ ದೃಷ್ಟಿಗಂತೂ ಭೂಮಿಯಲ್ಲಿ ಅತ್ಯಂತ ಸುಂದರವಾಗಿರುವುದೆಂದರೆ ಸ್ತ್ರೀ ದೇಹವೇ ಎಂಬುದನ್ನೂ ಚೆನ್ನಾಗಿ ತಿಳಿದಿದ್ದರು. ಬೇರೆ ಬೇರೆ ಕಡೆಗಳಲ್ಲಿನ ವಿಧ ವಿಧವಾಗ ಆಲಿಂಗನ ಭಂಗಿಗಳಲ್ಲಿ ದೇಹದ ಬಾಗುಬಳುಕುಗಳು ಆಗಲೇ ಚಿತ್ರಿತವಾಗಿದ್ದರೂ, ಖಜುರಾಹೋ ಮತ್ತು ಕೊನಾರ್ಕ್ ರತಿಕ್ರೀಡೆಗಳಲ್ಲಿ ಸ್ತ್ರೀ ದೇಹಕ್ಕೆ ಸಾಧ್ಯವಾಗಬಹುದಾದ ಸಮಸ್ತ ಭಂಗಿಗಳೂ, ಸಮಸ್ತ ಅಂಗೋದ್ರೇಕಗಳೂ ಮೈದಾಳಿಬಿಟ್ಟಿವೆ. ಇದು ಸೌಂದರ್ಯದ ಆತ್ಯಂತಿಕ ಅನ್ವೇಷಣೆಯೇ ಇದ್ದೀತು.’
ಒರಿಸ್ಸಾದ ದೇವಾಲಯಗಳ ಒಳಭಾಗ ಭಣಭಣಗುಟ್ಟುವಂತೆ ಖಾಲಿಯಾಗಿರುತ್ತದೆ. ಇದನ್ನು ಗಮನಿಸಿದ ಖ್ಯಾತ ಕಲೆ-ಸಂಸ್ಕøತಿಯ ವಿದ್ವಾಂಸ ಆನಂದ ಕುಮಾರಸ್ವಾಮಿ `ಬದುಕೆಂಬುದು ಒಂದು ಮಾಯಾಪರದೆ ಇದ್ದಂತೆ. ಅದರ ಹಿಂಭಾಗದಲ್ಲಿ ದೇವರಿದ್ದಾನೆ. ದೇವಾಲಯದ ಹೊರಭಾಗದಲ್ಲಿ ನಮ್ಮ ಬದುಕಿನ, ಸಂಸಾರದ ಚಿತ್ರಣವಿರುತ್ತದೆ. ಅಲ್ಲಿನ ಕೆತ್ತನೆ, ಚಿತ್ರಣಗಳು ಬದುಕೆಂಬ ಮಾಯಾಲೋಕವನ್ನೂ, ಹುಟ್ಟು-ಸಾವುಗಳ ಬದುಕಿನ ಚಕ್ರಕ್ಕೆ ಮನುಷ್ಯನನ್ನು ಬಂಧಿಸಿರುವ ಆತನ ಆಸೆ ಆಕಾಂಕ್ಷೆಗಳನ್ನೂ ನೋವು ನಲಿವುಗಳನ್ನು ಪ್ರತಿಬಿಂಬಿಸುತ್ತವೆ. ಅದೇ ದೇವಾಲಯದ ಒಳಗೆ, ಸಣ್ಣ ದೀಪಗಳ ಮಬ್ಬಿನ ಕೋಣೆಯಲ್ಲಿ ದೇವರ ಪ್ರತಿಮೆ ಒಂಟಿಯಾಗಿ ದೂರದಿಂದ ಖಾಲಿಕೋಣೆಯ ಮೂಲಕ ಹಾದುಬರುವ ವ್ಯಕ್ತಿಗೆ ಕಾಣುತ್ತದೆ. ರೀತಿ ದೇವರನ್ನು ಕಾಣಬೇಕಾದಲ್ಲಿ ಬದುಕೆಂಬ ಮಾಯಾಪರದೆಯ ಮೂಲಕ ಮನುಷ್ಯ ಹಾದುಬರಬೇಕೆನ್ನುವುದನ್ನು ಸಾಂಕೇತಿಕವಾಗಿ ತೋರಿಸಬೇಕೆಂಬುದನ್ನು ಒರಿಸ್ಸಾದ ದೇವಾಲಯದ ವಾಸ್ತುಶಿಲ್ಪಗಳು ಮೊದಲಿನಿಂದಲೂ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ತಿಳಿದಿದ್ದರು ಎಂದಿದ್ದಾರೆ. ದೇವಾಲಯದ ಹೊರ ಮೈ ಆವರಣದಲ್ಲಿ ಮನುಷ್ಯನ ಬದುಕಿನ ನೋವು ನಲಿವುಗಳ, ಆಸೆ ಆಕಾಂಕ್ಷೆಗಳ ಚಿತ್ರಣವಿದೆ ಎಂದಾದಲ್ಲಿ ಸಹಜವಾಗಿ ಅವುಗಳಲ್ಲಿ ಪ್ರೀತಿ ಪ್ರೇಮಗಳ, ಮೈಥುನಗಳ ಚಿತ್ರಣವಿರಲೇಬೇಕು. ಮನೋವಿಜ್ಞಾನಿ ಹಾಗೂ ಮನೋವಿಶ್ಲೇಷಣೆಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ಲೈಂಗಿಕತೆಯೇ ಮನುಷ್ಯನ ಬದುಕಿನ ಮೂಲಭೂತ ಚಾಲನಾ ಶಕ್ತಿ.
ಮನುಷ್ಯ ಪ್ರಾಚೀನ ಕಾಲದಿಂದಲೂ, ಚಿತ್ರ ಹಾಗೂ ಶಿಲ್ಪ ರಚನೆ ಆರಂಭಿಸಿದಾಗಲಿಂದಲೂ ಸಹ ತನ್ನ ಕಲೆಯಲ್ಲಿ ಲೈಂಗಿಕ ವಿಷಯಗಳನ್ನು ಅಭಿವ್ಯಕ್ತಿಪಡಿಸುತ್ತಲೇ ಬಂದಿದ್ದಾನೆ. ಪ್ರಾಚೀನ ಸಾಹಿತ್ಯದಲ್ಲಿಯೂ ಸಹ ಲೈಂಗಿಕತೆಯ ಬಗ್ಗೆ ಮುಚ್ಚುಮರೆ ಇರಲಿಲ್ಲ. 12ನೇ ಶತಮಾನದಲ್ಲಿ ರಚಿತವಾಗಿರುವ ಜಯದೇವನ `ಗೀತಗೋವಿಂದದಲ್ಲಿ ರಾಧಾ-ಮಾಧವರ ಸುರತ ವರ್ಣನೆಯಿದೆ. ಕಲಾವಿದರಿಗೆ ಬೆತ್ತಲೆ ಹಾಗೂ ಮಿಥುನ ಶಿಲ್ಪಗಳು ಬರೇ ವಸ್ತುವಿಷಯಗಳಾಗಿರಲಿಲ್ಲ, ಅವು ಕಲೆಯ ಒಂದು ವಿಧಾನವಾಗಿತ್ತು. ಕಲಾವಿದನಿಗೆ ಅಶ್ಲೀಲತೆ ಎಂಬುದಿಲ್ಲ.
ಬೆತ್ತಲೆ ಕಲೆಗೂ ಮಾನವನ ಕಾಮಾಸಕ್ತಿಗೂ ನಿಕಟವಾದ ಸಂಬಂಧವುಂಟು. `ಬೆತ್ತಲೆ ಚಿತ್ರ-ಶಿಲ್ಪಗಳು ಪ್ರೇಕ್ಷಕನಲ್ಲಿ ವಿಷಯಾಸಕ್ತಿಯನ್ನು ಮೂಡಿಸಿದರೆ ಅದು ಕೆಟ್ಟ ಕಲೆ ಮತ್ತು ಅನೈತಿಕ ಎಂದು ಪ್ರೊ. ಅಲೆಕ್ಸಾಂಡರ್ ಎಂಬ ತತ್ವಜ್ಞಾನಿ ಹೇಳಿದರೆ ಅದನ್ನು ವಿರೋಧಿಸಿದ ಕಲಾ ವಿಮರ್ಶಕ ಕ್ಲರ್ಕ್ ಅವರು, ಯಾವುದೇ ಬೆತ್ತಲೆ ಚಿತ್ರ-ಶಿಲ್ಪ ಅದು ಅಮೂರ್ತವಾಗಿದ್ದರೂ ಸಹ ವೀಕ್ಷಕನಲ್ಲಿ ಕಿಂಚಿತ್ ರಾಗವನ್ನೂ ಉಂಟುಮಾಡದಿದ್ದರೆ ಅದು ಕೆಟ್ಟ ಕಲೆ ಮತ್ತು ಸುಳ್ಳು ನೈತಿಕತೆ ಎಂದಿದ್ದಾನೆ. ಮಾನವನ ಲೈಂಗಿಕತೆಯನ್ನು ಪ್ರಚೋದಿಸದೆ, ಲೈಂಗಿಕ ಆಕಾಂಕ್ಷೆಯನ್ನು ಉನ್ನತಮಟ್ಟಕ್ಕೆ ಒಯ್ಯಬಲ್ಲ ಬೆತ್ತಲೆ ಕಲೆ ತನ್ನದೇ ಆದ ಜೀವನ ಸಿದ್ಧಾಂತವನ್ನು ಒಳಗೊಂಡಿದೆ. ಕೊನಾರ್ಕ್ ಸೂರ್ಯದೇಗುಲದ ಮಿಥುನ ಶಿಲ್ಪಗಳು ಇದಕ್ಕೆ ನಿದರ್ಶನವಾಗಬಲ್ಲವು.
ಚಿತ್ರ - ಲೇಖನ: ಜೆ.ಬಾಲಕೃಷ್ಣ
ಸುಧಾ, 02/12/1999
j.balakrishna@gmail.com

No comments: