ಮಂಗಳವಾರ, ಮೇ 10, 2016

ಮುಲ್ಲಾ ನಸ್ರುದ್ದೀನ್ ಕತೆಗಳ 47ನೇ ಕಂತು

`ಸಂವಾದ' ಪತ್ರಿಕೆಯ ಮೇ 2016ರ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 47ನೇ ಕಂತು.
ಧ್ಯಾನೋದ್ಯೋಗ
ಒಂದು ದಿನ ಸಂಜೆ ನಸ್ರುದ್ದೀನ್ ವಾಯುವಿಹಾರ ಮಾಡುತ್ತಿದ್ದಾಗ ಅಬ್ದುಲ್ಲಾ ಎದುರಾದ. ಇಬ್ಬರೂ ಉಭಯ ಕುಶಲೋಪರಿ ವಿಚಾರಿಸಿಕೊಂಡರು.
`ನಸ್ರುದ್ದೀನ್, ನಿನ್ನ ಮಗ ಹೇಗಿದ್ದಾನೆ? ಅವನಿಗೆ ಏನಾದರೂ ಉದ್ಯೋಗ ಸಿಕ್ಕಿತೇ ಅಥವಾ ಇನ್ನೂ ನಿರುದ್ಯೋಗಿಯಾಗಿಯೇ ಇದ್ದಾನೆಯೆ?’ ಕೇಳಿದ ಅಬ್ದುಲ್ಲಾ.
`ಹೇ ಇಲ್ಲಾ, ಈಗ ಕೂತು ಧ್ಯಾನ ಮಾಡುತ್ತಿದ್ದಾನೆ’, ಹೇಳಿದ ನಸ್ರುದ್ದೀನ್.
`ಧ್ಯಾನ? ಏನು ಹಾಗಂದರೆ?’ ಕೇಳಿದ ಅಬ್ದುಲ್ಲಾ.
`ಉಂಡಾಡಿ ಗುಂಡನಂತೆ ಸುಮ್ಮನೇ ಕೂತು ಏನೂ ಮಾಡದಿರುವುದಕ್ಕಿಂತ ಅದು ವಾಸಿಹೇಳಿದ ನಸ್ರುದ್ದೀನ್.
ಸಾಧನೆ ಮತ್ತು ವಿವೇಕ
ನಸ್ರುದ್ದೀನ್ ಮತ್ತು ಅವನ ಇಬ್ಬರು ಗೆಳೆಯರು ಸಂನ್ಯಾಸಿಗಳಾಗೋಣವೆಂದು ತೀರ್ಮಾನಿಸಿ ಸಾಧನೆಗೆಂದು ಪರ್ವತ ಗುಹೆಗಳನ್ನರಸಿ ಹೊರಟರು. ಹೊರಡುವ ಮೊದಲು ಐದು ವರ್ಷಗಳ ತಮ್ಮ ಸಾಧನೆಯ ನಂತರ ಪುನಃ ಅದೇ ಸ್ಥಳದಲ್ಲಿ ಭೇಟಿಯಾಗಲು ನಿರ್ಧರಿಸಿ ಹೊರಟರು.
ಐದು ವರ್ಷಗಳ ನಂತರ ಆ ಮೂರು ಜನ ಮೊದಲೇ ನಿರ್ಧರಿಸಿದ ಸಮಯ ಮತ್ತು ಸ್ಥಳದಲ್ಲಿ ಭೇಟಿಯಾದರು ಮತ್ತು ತಮ್ಮ ತಮ್ಮ ಸಾಧನೆಗಳ ಬಗೆಗೆ ಹೇಳಿಕೊಳ್ಳತೊಡಗಿದರು.
ಒಬ್ಬ ಹೇಳಿದ: `ನಾನು ಮಹತ್ಸಾಧನೆ ಮಾಡಿದ್ದೇನೆ. ನನ್ನ ಸಾಧನೆಯಿಂದ ನಾನು ಆಹಾರ ಸೇವಿಸದೆ ಎಷ್ಟು ದಿನ ಬೇಕಾದರೂ ಇರಬಲ್ಲೆ’.
ಮತ್ತೊಬ್ಬಾತ ಹೇಳಿದ: `ನನ್ನ ಸಾಧನೆಯೇನೂ ಕಡಿಮೆಯಿಲ್ಲ! ನಾನು ನನ್ನ ಸಾಧನೆಯಿಂದ ನಿದ್ರೆ ಮಾಡದೆ ಎಷ್ಟು ದಿನ ಬೇಕಾದರೂ ಇರಬಲ್ಲೆ’.
ಅವರಿಬ್ಬರೂ ನಸ್ರುದ್ದೀನನ ಸಾಧನೆಯೇನೆಂದು ಕೇಳಿದರು.
`ನನ್ನ ಸಾಧನೆಯಿಂದ ನಾನು ವಿವೇಕವನ್ನು ಗಳಿಸಿದ್ದೇನೆ. ಅದರಿಂದಾಗಿ ನನಗೆ ಹಸಿವಾದಾಗ ಊಟ ಮಾಡುತ್ತೇನೆ, ಬಳಲಿಕೆಯಾದಾಗ ನಿದ್ರೆ ಮಾಡುತ್ತೇನೆಎಂದ ನಸ್ರುದ್ದೀನ್.

ಮರೆವು
ನಸ್ರುದ್ದೀನ್ ಮತ್ತು ಅವನ ಪತ್ನಿ ಫಾತಿಮಾ ಇಬ್ಬರೂ ಮುದುಕರಾಗಿದ್ದರು. ಅವರಿಗೆ ವಯಸ್ಸಾದಂತೆ ಮರೆವು ಹೆಚ್ಚಾಗಿತ್ತು. ಇಬ್ಬರೂ ವೈದ್ಯರ ಬಳಿ ಹೋದರು. ಅವರಿಬ್ಬರನ್ನೂ ಪರೀಕ್ಷಿಸಿದ ವೈದ್ಯರು, `ನಿಮ್ಮ ದೈಹಿಕ ಆರೋಗ್ಯ ಚೆನ್ನಾಗಿದೆ. ವಯಸ್ಸಿನ ಕಾರಣದಿಂದಾಗಿ ನಿಮಗೆ ಮರೆವು ಹೆಚ್ಚಾಗಿದೆ. ಅದಕ್ಕೆ ಯಾವ ಔಷಧವೂ ಕೆಲಸ ಮಾಡುವುದಿಲ್ಲ. ನೀವು ಯಾವುದನ್ನು ಮರೆಯಬಾರದೆಂದುಕೊಂಡಿರುತ್ತೀರೋ ಅದನ್ನು ಒಂದು ಚೀಟಿಯಲ್ಲಿ ಬರೆದಿಟ್ಟುಕೊಳ್ಳಿ, ಅದನ್ನು ನೋಡಿದಾಗ ನಿಮಗೆ ನೆನಪಾಗುತ್ತಿರುತ್ತದೆಎಂದು ಸಲಹೆ ನೀಡಿದರು.
ಆ ದಿನ ರಾತ್ರಿ ಗಂಡ ಹೆಂಡತಿ ಇಬ್ಬರೂ ಕುಳಿತಿದ್ದಾಗ ನಸ್ರುದ್ದೀನ್ ಎದ್ದು ಹೊರಟ.
`ಎಲ್ಲಿಗೆ?’ ಕೇಳಿದಳು ಫಾತಿಮಾ.
`ಅಡುಗೆ ಮನೆಗೆ’, ಹೇಳಿದ ನಸ್ರುದ್ದೀನ್.
`ಹಾಗಾದರೆ ಬರುವಾಗ ಒಲೆಯ ಮೇಲೆ ಹಾಲಿಟ್ಟಿದ್ದೇನೆ. ಒಂದು ಲೋಟಾಕ್ಕೆ ಹಾಕಿಕೊಂಡು ತೆಗೆದುಕೊಂಡು ಬಾ’, ಹೇಳಿದಳು ಫಾತಿಮಾ.
`ಆಯಿತುಎಂದ ನಸ್ರುದ್ದೀನ್.
`ಅದಕ್ಕೆ ಸಕ್ಕರೆ ಹಾಕಿಕೊಂಡು ಬಾ. ಮರೆಯ ಬೇಡ. ಬೇಕಾದರೆ ಒಂದು ಚೀಟಿಯಲ್ಲಿ ಅದನ್ನು ಬರೆದುಕೊಂಡು ಹೋಗು ಎಂದಳುಎಂದಳು ಫಾತಿಮಾ.
`ಬೇಡ ನನಗೆ ನೆನಪಿರುತ್ತದೆಎಂದ ನಸ್ರುದ್ದೀನ್.
ಅಡುಗೆ ಮನೆಯಿಂದ ಬಂದ ನಸ್ರುದ್ದೀನ್, `ತಗೋ ನಿನಗೆ ಕುಡಿಯಲು ನೀರು ಬೇಕೆಂದು ಕೇಳಿದ್ದೆಯಲ್ಲಾ, ಇಲ್ಲಿದೆಎಂದು ನೀರಿನ ಲೋಟ ನೀಡಿದ.
`ಇದೇನು ನೀರು ತಂದಿದ್ದೀಯಾ? ಅದಕ್ಕೇ ನಿನಗೆ ಚೀಟಿಯಲ್ಲಿ ಬರೆದುಕೊಂಡು ಹೋಗು ಎಂದು ಹೇಳಿದ್ದು. ನಾನು ಬಾಟಲಿಯಲ್ಲಿರುವ ಶರಬತ್ ಕುಡಿಯಲು ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದಲ್ಲವೆ?’ ಕೇಳಿದಳು ಫಾತಿಮಾ.

ಭಯಂಕರ ಕಾಯಿಲೆ
ನಸ್ರುದ್ದೀನನಿಗೆ ವಯಸ್ಸಾಗಿತ್ತು. ವೈದ್ಯರ ಬಳಿ ಪರೀಕ್ಷೆಗೆಂದು ಹೋದ. ಅವನನ್ನು ಚೆನ್ನಾಗಿ ಪರೀಕ್ಷಿಸಿದ ವೈದ್ಯರು ನಸ್ರುದ್ದೀನನನ್ನು ಎದುರಿಗೆ ಕೂಡ್ರಿಸಿಕೊಂಡು,
`ನಾನು ವಿಷಾದದಿಂದ ನಿಮಗೆ ಎರಡು ಕೆಟ್ಟ ಸುದ್ದಿ ಹೇಳಬೇಕಾಗಿದೆಎಂದರು.
ಚಿಂತಿತನಾದ ನಸ್ರುದ್ದೀನ್, `ಆಯಿತು, ಮೊದಲಿಗೆ ಅವುಗಳಲ್ಲಿ ಅತ್ಯಂತ ಕೆಟ್ಟ ಸುದ್ದಿಯನ್ನೇ ಹೇಳಿಎಂದ.
`ನಿಮಗೆ ಏಡ್ಸ್ ಕಾಯಿಲೆ ಇದೆ. ಇನ್ನು ಬೆರಳಣಿಕೆಯಷ್ಟೇ ನಿಮ್ಮ ದಿನಗಳುಎಂದರು ವೈದ್ಯರು.
`ಅದಕ್ಕಿಂತ ಕೆಟ್ಟ ಸುದ್ದಿ ಮತ್ತಾವುದಿರಲು ಸಾಧ್ಯ. ಮತ್ತೊಂದು ಕೆಟ್ಟ ಸುದ್ದಿಯನ್ನೂ ಹೇಳಿಬಿಡಿಎಂದ ನಸ್ರುದ್ದೀನ್.
`ನಿಮಗೆ ಮರೆವಿನ ಕಾಯಿಲೆ ಇದೆಹೇಳಿದರು ವೈದ್ಯರು.
`ಹೌದೆ! ಇರಲಿಬಿಡಿ, ಸಧ್ಯ ನನಗೆ ಏಡ್ಸ್‍ನಂಥ ಭಯಂಕರ ಕಾಯಿಲೆ ಇಲ್ಲವಲ್ಲ!ಸಂತೋಷದಿಂದ ಹೇಳಿದ ನಸ್ರುದ್ದೀನ್.
ಕೀಲು ನೋವು
ನಸ್ರುದ್ದೀನ್ ಕಂಠಪೂರ್ತಿ ಕುಡಿತು ತೂರಾಡುವಂತಿದ್ದ. ಅವನ ಬಟ್ಟೆ ಎಲ್ಲಾ ಗಲೀಜಾಗಿತ್ತು, ತಲೆಗೂದಲು ಕೆದರಿತ್ತು. ಮೈಯಿಂದ ವಿಚಿತ್ರ ವಾಸನೆ ಬರುತ್ತಿತ್ತು. ಗಡಂಗಿನಿಂದ ಹೊರಬಂದು ಮನೆಗೆ ಹೋಗಲು ನಿಂತಿದ್ದ. ಅಲ್ಲೇ ಕಲ್ಲುಬೆಂಚಿನ ಮೇಲೆ ಒಬ್ಬರು ಹಕೀಮರು ಕೂತಿದ್ದರು ಹಾಗೂ ಅವರು ವೃತ್ತಪತ್ರಿಕೆ ಓದುತ್ತಿದ್ದರು. ಅವರು ಎಲ್ಲ ಕಾಯಿಲೆಗಳಿಗೆ ಔಷಧಿ ಕೊಡುವಂಥವರು. ನಸ್ರುದ್ದೀನನಿಗೆ ಅವರನ್ನು ಮಾತನಾಡೋಣವೆನ್ನಿಸಿತು. ಅವರ ಬಳಿ ಹೋಗಿ,
`ಸ್ವಾಮಿ ಕೀಲು ನೋವು ಏಕೆ ಬರುತ್ತದೆ?’ ಎಂದು ಕೇಳಿದ.
ಆ ಹಕೀಮ ನಸ್ರುದ್ದೀನನನ್ನು ತಲೆಯಿಂದ ಕಾಲಿನವರೆಗೆ ನೋಡಿದ. ಅವನು ಚೆನ್ನಾಗಿ ಕುಡಿದಿರುವುದು ತಿಳಿಯಿತು.
`ನೋಡಿ, ಕೀಲುನೋವು ಬರುವುದು ಸಿಕ್ಕಾಪಟ್ಟೆ ಕುಡಿಯುವುದರಿಂದ, ವೇಶ್ಯೆಯರ ಸಹವಾಸ ಮಾಡುವುದರಿಂದ, ಸ್ನಾನಮಾಡದೆ ಮೈ ವಾಸನೆ ಹಿಡಿಸಿಕೊಂಡು ಗಲೀಜಾಗಿರುವುದರಿಂದಎಂದು ನಸ್ರುದ್ದೀನನನ್ನು ನೋಡುತ್ತಾ ಬೇಕೆಂದೇ ಹೇಳುತ್ತಾ, `ನಿಮಗೆ ಎಷ್ಟು ದಿನಗಳಿಂದ ಕೀಲು ನೋವಿದೆ?’ ಎಂದು ಕೇಳಿದ.
`ಇಲ್ಲ, ನನಗೆ ಕೀಲು ನೋವಿಲ್ಲ. ನಮ್ಮ ರಾಜ್ಯದ ಮಂತ್ರಿಗಳಿಗೆ ಕೀಲುನೋವಿದೆ ಎಂದು ನೀವು ಓದುತ್ತಿರುವ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದಕ್ಕೇ ಕೇಳಿದೆ ಅಷ್ಟೆಎಂದು ಹೇಳಿದ ನಸ್ರುದ್ದೀನ್.

ದೇವರು ಎಲ್ಲಿದ್ದಾನೆ?
ನಸ್ರುದ್ದೀನ್ ಸಣ್ಣವನಿದ್ದಾಗ ಒಂದು ದಿನ ಅವನ ಶಾಲೆಯಲ್ಲಿ ಅಧ್ಯಾಪಕರು ಮಕ್ಕಳನ್ನು, `ಮಕ್ಕಳೇ ದೇವರು ಎಲ್ಲಿದ್ದಾನೆ ಹೇಳಿಎಂದು ಕೇಳಿದರು.
ಒಬ್ಬ ವಿದ್ಯಾರ್ಥಿ ಹೇಳಿದ, `ದೇವರು ಸ್ವರ್ಗದಲ್ಲಿದ್ದಾನೆ’.
ಮತ್ತೊಬ್ಬ ವಿದ್ಯಾರ್ಥಿ ಹೇಳಿದ, `ದೇವರು ನನ್ನ ಹೃದಯದಲ್ಲಿದ್ದಾನೆ’. ಅಧ್ಯಾಪಕರಿಗೆ ಸಂತೋಷವಾಯಿತು.
ನಸ್ರುದ್ದೀನ್ ತನ್ನ ಕೈ ಮೇಲೆತ್ತಿದ. `ನಸ್ರುದ್ದೀನ್ ನೀನು ಹೇಳು, ದೇವರು ಎಲ್ಲಿದ್ದಾನೆ?’ ಕೇಳಿದರು ಅಧ್ಯಾಪಕರು.
`ದೇವರು ನಮ್ಮ ಮನೆಯ ಬಾತ್‍ರೂಮಿನಲ್ಲಿದ್ದಾನೆ’, ಹೇಳಿದ ನಸ್ರುದ್ದೀನ್.
ಗಾಭರಿಗೊಂಡ ಅಧ್ಯಾಪಕರು ಕೇಳಿದರು, `ನಿಮ್ಮ ಮನೆಯ ಬಾತ್‍ರೂಮಿನಲ್ಲೇ? ಅದು ಹೇಗೆ ಸಾಧ್ಯ?’
`ಗೊತ್ತಿಲ್ಲ ಸಾರ್. ನಾನು ದಿನಾ ಬೆಳಿಗ್ಗೆ ಸ್ನಾನ ಮಾಡುವಾಗ ನಮ್ಮಪ್ಪ ಬಾಗಿಲು ಬಡಿಯುತ್ತಾ, `ಹೋ ದೇವರೇ! ನೀನಿನ್ನೂ ಒಳಗೇ ಇದ್ದೀಯಾ?’ ಎಂದು ಅರಚುತ್ತಿರುತ್ತಾರೆಹೇಳಿದ ಬಾಲಕ ನಸ್ರುದ್ದೀನ್.

ಪ್ರಾಮಾಣಿಕತೆ
ಆ ಊರಿಗೆ ಧರ್ಮಗುರುಗಳು ಬಂದಿದ್ದರು. ವಿದ್ವಾಂಸ ನಸ್ರುದ್ದೀನನ ಜೊತೆ ಸಂಜೆ ಅದೂ ಇದೂ ಮಾತನಾಡುತ್ತಾ ವಾಯುವಿಹಾರ ಮಾಡುತ್ತಿದ್ದರು. ಎದುರಿಗೆ ಗಡಂಗೊಂದು ಕಂಡುಬಂದಿತು. ಅವರಿಬ್ಬರಿಗೂ ಕುಡಿಯಬೇಕೆನ್ನಿಸಿತು. ಆದರೆ ಇಬ್ಬರ ಬಳಿಯೂ ಹಣವಿರಲಿಲ್ಲ. ಧರ್ಮಗುರುಗಳು ಹೇಳಿದರು, `ನಾನೊಂದು ಪ್ಲಾನ್ ಮಾಡುತ್ತೇನೆ ನೋಡುಎಂದು ಹೇಳಿ ಗಡಂಗಿನ ಒಳಕ್ಕೆ ಹೋದರು. ನಸ್ರುದ್ದೀನ್ ದೂರದಿಂದಲೇ ನೋಡುತ್ತಿದ್ದ.
ಧರ್ಮಗುರುಗಳು ಒಂದೆರಡು ಪೆಗ್ ಆರ್ಡರ್ ಮಾಡಿ ಕುಡಿದು ಹೊರಡಲು ಎದ್ದುನಿಂತರು. ಗಡಂಗಿನವ ಎಷ್ಟು ದುಡ್ಡುಕೊಡಬೇಕೆಂದು ಹೇಳಿದ.
`ನಾನಾಗಲೇ ನಿನಗೆ ಹಣಕೊಟ್ಟೆನಲ್ಲಾ?’ ಹೇಳಿದರು ಧರ್ಮಗುರುಗಳು.
ಧರ್ಮಗುರುಗಳು ಸುಳ್ಳು ಹೇಳುವುದಿಲ್ಲವೆಂದು ನಂಬಿದ ಗಡಂಗಿನವ `ಹೌದು, ನಾನು ಮರೆತೇ ಬಿಟ್ಟೆ. ನನಗೆ ಕೆಲಸ ಕೊಂಚ ಹೆಚ್ಚೇ ಇದೆ. ಕ್ಷಮಿಸಿಎಂದು ಹೇಳಿ ಧರ್ಮಗುರುಗಳನ್ನು ನಮಸ್ಕರಿಸಿ ಬೀಳ್ಕೊಟ್ಟ.
ನಂತರ ವಿದ್ವಾಂಸ ನಸ್ರುದ್ದೀನ್ ಗಡಂಗಿನವನ ಬಳಿ ಹೋಗಿ ತಾನೂ ಎರಡು ಪೆಗ್ ಆರ್ಡರ್ ಮಾಡಿದ. ಕುಡಿದು ಹೊರಡುವ ಸಮಯದಲ್ಲಿ ಗಡಂಗಿನವ ಎಷ್ಟು ದುಡ್ಡುಕೊಡಬೇಕೆಂದು ಹೇಳಿದ.
`ನಾನಾಗಲೇ ಆರ್ಡರ್ ಮಾಡುವಾಗಲೇ ನಿನಗೆ ಹಣಕೊಟ್ಟೆನಲ್ಲಾ?’ ಹೇಳಿದರು ವಿದ್ವಾಂಸ ನಸ್ರುದ್ದೀನ್.
ವಿದ್ವಾಂಸರು ಸುಳ್ಳು ಹೇಳುವುದಿಲ್ಲವೆಂದು ನಂಬಿದ ಗಡಂಗಿನವ `ಹೌದು, ನೀವು ಮೊದಲೇ ಹಣ ಕೊಟ್ಟಿರಿ ನಾನು ಮರೆತೇ ಬಿಟ್ಟೆ. ನನಗೆ ಕೆಲಸ ಕೊಂಚ ಹೆಚ್ಚೇ ಇದೆ. ಕ್ಷಮಿಸಿಎಂದು ಹೇಳಿದ.
`ಸರಿ ನಾನು ಬೇಗ ಹೊರಡಬೇಕು, ನಿನಗೆ ಐನೂರು ರೂಪಾಯಿ ನೋಟು ಕೊಟ್ಟಿದ್ದೆ. ಚಿಲ್ಲರೆ ವಾಪಸ್ಸು ಕೊಟ್ಟರೆ ನಾನು ಹೊರಡುತ್ತೇನೆಹೇಳಿದರು ವಿದ್ವಾಂಸ ನಸ್ರುದ್ದೀನ್ ಸಾಹೇಬರು.

ಎಂಟನೇ ಮೀನು
ಗಡಂಗಿನ ಪಕ್ಕದಲ್ಲಿ ಒಂದು ಸಣ್ಣ ಬತ್ತಿಹೋಗುತ್ತಿರುವ ಕೊಳವಿತ್ತು. ಮುದುಕ ನಸ್ರುದ್ದೀನ್ ಅಲ್ಲಿ ಕೂತು ಮೀನು ಹಿಡಿಯಲು ಗಾಳ ಹಾಕಿ ಕೂತಿದ್ದ. ಗಡಂಗಿಗೆ ಬಂದ ಒಬ್ಬ ಸಭ್ಯ ವ್ಯಕ್ತಿ ನಸ್ರುದ್ದೀನನನ್ನು ನೋಡಿ `ಆ ಮುದುಕನಿಗೆ ಅಲ್ಲಿ ಯಾವ ಮೀನು ಸಿಗಲು ಸಾಧ್ಯಎನ್ನಿಸಿ ಆ ಮುದುಕ ನಸ್ರುದ್ದೀನನನ್ನು ಗಡಂಗಿಗೆ ಕರೆದುಕೊಂಡು ಹೋಗಿ ಅವನಿಗೂ ಕುಡಿಯಲು ಕೊಡಿಸಿದ. ನೋಡೋಣವೆಂದು,
`ಬೆಳಿಗ್ಗೆಯಿಂದ ನಿಮಗೆ ಆ ಕೊಳದಲ್ಲಿ ಎಷ್ಟು ಮೀನು ಸಿಕ್ಕವು?’ ಎಂದು ಆ ಸಭ್ಯ ವ್ಯಕ್ತಿ ಹೇಳಿದ.
`ನಿಜ ಹೇಳಬೇಕೆಂದರೆ ಬೆಳಗಿನಿಂದ ನೀವು ಎಂಟನೆಯವರುಹೇಳಿದ ಮುದುಕ ನಸ್ರುದ್ದೀನ್.

ಪ್ರೀತಿಸುತ್ತೇನೆ
ಒಂದು ದಿನ ಸಂಜೆ ಮನೆಯಲ್ಲಿ ನಸ್ರುದ್ದೀನ್ ಕೂತು ಬಾಟಲಿ ಹಿಡಿದುಕೊಂಡು ಮದ್ಯಪಾನ ಮಾಡತೊಡಗಿದ್ದ. ಫಾತಿಮಾ ಅದೇನೋ ಓದುತ್ತಿದ್ದಳು. ಸ್ವಲ್ಪ ಹೊತ್ತಿನ ಬಳಿಕೆ ನಸ್ರುದ್ದೀನ್ ಹೇಳಿದ,
`ನಾನು ನಿನ್ನನ್ನು ಪ್ರೀತಿಸುತ್ತೇನೆ’.
ಅದನ್ನು ಕೇಳಿಸಿಕೊಂಡ ಫಾತಿಮಾ, `ಆ ಮಾತನ್ನು ಹೇಳುತ್ತಿರುವುದು ನೀನೋ ಅಥವಾ ನಿನ್ನ ಕೈಯಲ್ಲಿರುವ ಬಾಟಲಿಯೋ?’ ಎಂದು ಕೇಳಿದಳು.
`ಆ ಮಾತನ್ನು ಹೇಳಿದ್ದು ನಾನೇ’, ಹೇಳಿದ ನಸ್ರುದ್ದೀನ್, `ನಾನು ಅದನ್ನು ನನ್ನ ಬಾಟಲಿಗೆ ಹೇಳುತ್ತಿದ್ದೇನೆ’.

ವೈದ್ಯಕೀಯ ಪದ
ನಸ್ರುದ್ದೀನನಿಗೆ ಇತ್ತೀಚೆಗೆ ಮನೆಯಲ್ಲಿ ಯಾವ ಕೆಲಸವೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ತನಗೆ ಏನೋ ಆರೋಗ್ಯದ ಸಮಸ್ಯೆಯಿದೆ ಎಂದು ಪರೀಕ್ಷೆಗೆಂದು ವೈದ್ಯರ ಬಳಿ ಹೋದ. ನಸ್ರುದ್ದೀನನನ್ನು ಚೆನ್ನಾಗಿ ಪರೀಕ್ಷಿಸಿದ ವೈದ್ಯರು,
`ನಸ್ರುದ್ದೀನ್, ನಿನಗೆ ಯಾವ ಆರೋಗ್ಯದ ಸಮಸ್ಯೆಯೂ ಇಲ್ಲ. ನಿನಗೆ ಕೆಲಸ ಮಾಡಲು ಸೋಮಾರಿತನವಷ್ಟೇ!ಎಂದು ಹೇಳಿದರು.

`ಅದು ನನಗೂ ಗೊತ್ತು’, ಹೇಳಿದ ನಸ್ರುದ್ದೀನ್, `ಆದರೆ ಅದನ್ನು ನನ್ನ ಪತ್ನಿಗೆ ಹೇಳಲು ಅದಕ್ಕೊಂದು ವೈದ್ಯಕೀಯ ಪದ ಹೇಳಿಎಂದ ನಸ್ರುದ್ದೀನ್.





ಕಾಮೆಂಟ್‌ಗಳಿಲ್ಲ: