ಶನಿವಾರ, ಜುಲೈ 16, 2016

ಮುಲ್ಲಾ ನಸ್ರುದ್ದೀನ್ ಕತೆಗಳ 48ನೇ ಕಂತು

ಜೂನ್ 2016ರ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 48ನೇ ಕಂತು

ರಸ್ತೆಗೇ ಉತ್ತಮ!
ವಯೊಲಿನ್ ತಯಾರಿಸುವುದು ನಸ್ರುದ್ದೀನನ ಕುಲ ಕಸುಬಾಗಿತ್ತು. ಹಲವಾರು ತಲಮಾರುಗಳಿಂದ ಅವುಗಳನ್ನು ತಯಾರಿಸಿ ತಮ್ಮ ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದರು. ಅದೇ ರಸ್ತೆಯಲ್ಲಿ ಇನ್ನೂ ಎರಡು ಅಂಗಡಿಗಳಲ್ಲಿಯೂ ವಯೊಲಿನ್ ತಯಾರಿಸಿ ಮಾರಾಟ ಮಾಡುವವರಿದ್ದರು. ಬಹಳ ವರ್ಷಗಳಿಂದ ವ್ಯಾಪಾರ ನಡೆಯುತ್ತಿದ್ದುದರಿಂದ ಅವರು ಯಾವುದೇ ಜಾಹೀರಾತು ಮಾಡುತ್ತಿರಲಿಲ್ಲ ಹಾಗೂ ಅವರ ನಡುವೆ ಸ್ಪರ್ಧೆ ಇರಲಿಲ್ಲ. ಆದರೆ ಒಂದು ದಿನ ಒಂದು ಅಂಗಡಿಯವ `ನಾವು ದೇಶದಲ್ಲಿಯೇ ಅತ್ಯುತ್ತಮ ವಯೊಲಿನ್ ತಯಾರಿಸುವವರು’ ಎನ್ನುವ ಫಲಕ ತನ್ನ ಅಂಗಡಿಯ ಮುಂದೆ ಹಾಕಿದ. ಅದನ್ನು ನೋಡಿದ ಮತ್ತೊಬ್ಬ ಅಂಗಡಿಯವ `ನಾವು ಜಗತ್ತಿನಲ್ಲಿಯೇ ಅತ್ಯುತ್ತಮ ವಯೊಲಿನ್ ತಯಾರಿಸುವವರು’ ಎನ್ನುವ ಫಲಕ ಹಾಕಿದ. ನಸ್ರುದ್ದೀನ್ ಈ ಎರಡೂ ಅಂಗಡಿಗಳ ಫಲಕ ನೋಡಿದ. ತಾನೂ ತನ್ನ ಅಂಗಡಿಯ ಮುಂದೆ ಒಂದು ಫಲಕ ಹಾಕಬೇಕೆಂದು ನಿರ್ಧರಿಸಿ, `ನಾವು ಈ ರಸ್ತೆಯಲ್ಲಿಯೇ ಅತ್ಯುತ್ತಮ ವಯೊಲಿನ್ ತಯಾರಿಸುವವರು’ ಎನ್ನುವ ಫಲಕ ಹಾಕಿದ. 

ಎಲ್ಲಿಗೆ ಹೋಗಿದ್ದೆ?
ನಸ್ರುದ್ದೀನ್ ಮಾಡಿದ್ದ ಯಾವುದೋ ತಪ್ಪಿಗಾಗಿ ಹದಿನಾಲ್ಕು ವರ್ಷಗಳ ಜೈಲು ಶಿಕ್ಷೆಯಾಗಿತ್ತು. ಅವನಿಗೆ ಹನ್ನೆರಡು ವರ್ಷ ಜೈಲಿನಲ್ಲಿ ಕಳೆಯುವಷ್ಟರಲ್ಲಿ ಸಾಕು ಸಾಕಾಯಿತು. ಹೇಗಾದರೂ ಮಾಡಿ ಜೈಲಿನಿಂದ ತಪ್ಪಿಸಿಕೊಳ್ಳಬೇಕೆಂದು ನಿರ್ಧರಿಸಿ ಒಂದು ದಿನ ಕಿಟಕಿಯ ಸರಳು ಕತ್ತರಿಸಿ, ಜೈಲಿನ ಮುಳ್ಳುತಂತಿ ಗೋಡೆ ಹಾರಿ ತಪ್ಪಿಸಿಕೊಂಡು ಓಡಿದ. ಹಾಗೂ ಹೀಗೂ ಮಾಡಿ ಮನೆ ತಲುಪಿದ. ಅವನ ಹೆಂಡತಿ ಅವನಿಗಾಗಿಯೇ ಕಾಯುತ್ತಿದ್ದಳು. ಅವನನ್ನು ನೋಡಿದ ತಕ್ಷಣ ಸಿಟ್ಟಿನಿಂದ, `ನೀನು ಜೈಲಿನಿಂದ ತಪ್ಪಿಸಿಕೊಂಡು ಎಂಟು ಗಂಟೆಗಳಾಗಿದೆಯೆಂದು ಸುದ್ದಿ ಬಿತ್ತರವಾಗುತ್ತಿದೆ. ಅಲೆದಾಡಲು ಇಷ್ಟೊತ್ತು ಎಲ್ಲಿಗೆ ಹೋಗಿದ್ದೆ ಹೇಳು!’ ಎಂದು ಗದರಿಸಿದಳು.

ತಪ್ಪಿಸಿಕೊಳ್ಳಲಾರದವ
ಆ ಊರಿನ ಸಾಹುಕಾರ ಸಿದ್ದಪ್ಪನ ಬಳಿ ಲೆಕ್ಕ ನೋಡಿಕೊಳ್ಳಲು ಇದ್ದ ಗುಮಾಸ್ತ ಒಂದು ದಿನ ಹಣಲಪಟಾಯಿಸಿ ಓಡಿ ಹೋದ. ಸಿದ್ದಪ್ಪ ತನ್ನ ಹಣದ ವ್ಯವಹಾರ ಮತ್ತು ಲೆಕ್ಕಗಳನ್ನು ನೋಡಿಕೊಳ್ಳಲು ಒಬ್ಬ ಒಳ್ಳೆಯ ಗುಮಾಸ್ತ ಬೇಕು, ಯಾರಾದರೂ ಅಂಥವರಿದ್ದರೆ ತಿಳಿಸುವಂತೆ ತನ್ನ ಗೆಳೆಯರಿಗೆಲ್ಲ ತಿಳಿಸಿದ. ಒಬ್ಬ ಗೆಳೆಯ ನಸ್ರುದ್ದೀನನ ಹೆಸರು ಸೂಚಿಸಿದ. `ನಸ್ರುದ್ದೀನ್ ಹಣ ಲಪಟಾಯಿಸಿ ಓಡಿ ಹೋಗುವುದಿಲ್ಲ ತಾನೆ?’ ಕೇಳಿದ ಸಿದ್ದಪ್ಪ. 

`ಅವನು ಎಲ್ಲಿಗೇ ಓಡಿಹೋದರೂ ಸಂಜೆ ಗಡಂಗಿನಲ್ಲಿ ಸಿಕ್ಕಿ ಬೀಳುತ್ತಾನೆ. ಅದಕ್ಕೆ ಅವನನ್ನು ಸೂಚಿಸಿದ್ದು’ ಎಂದ ಸಿದ್ದಪ್ಪನ ಗೆಳೆಯ.

ಸ್ವರ್ಗಕ್ಕೆ ದಾರಿ
ಆ ಊರಿಗೆ ಒಬ್ಬ ಧರ್ಮ ಗುರು ಬಂದಿದ್ದ. ಆ ದಿನ ಆತ ಸ್ವರ್ಗಕ್ಕೆ ಹೋಗುವುದು ಹೇಗೆ ಎನ್ನುವುದರ ಬಗ್ಗೆ ಉಪನ್ಯಾಸ ನೀಡುತ್ತಾನೆ ಎಂದು ಬಹಳ ಪ್ರಚಾರ ನೀಡಲಾಗಿತ್ತು. ನಸ್ರುದ್ದೀನ್ ಕುತೂಹಲದಿಂದ ತಾನೂ ಆ ದಿನ ಸಂಜೆ ಉಪನ್ಯಾಸಕ್ಕೆ ಹಾಜರಾದ. ಸ್ವರ್ಗಕ್ಕೆ ಹೋಗುವುದರ ಕುರಿತು ದೀರ್ಘ ಉಪನ್ಯಾಸ ನೀಡುತ್ತಿದ್ದ ಧರ್ಮಗುರು, `ನಾವು ಮನೆ, ಆಸ್ತಿ ಪಾಸ್ತಿ ಎಲ್ಲಾ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮಸೀದಿಗೆ ಕೊಡುಗೆ ನೀಡಿದರೆ ಸ್ವರ್ಗಕ್ಕೆ ಹೋಗುತ್ತೇವೆಯೇ?’ ಎಂದು ನೆರೆದಿದ್ದ ಜನರನ್ನು ಕೇಳಿದರು.
`ಇಲ್ಲಾ’, ಜನರು ಒಕ್ಕೊರಲಿನಿಂದ ಕೂಗಿದರು.
`ದಿನವೂ ನಾವು ಮಸೀದಿಯನ್ನು ಗುಡಿಸಿ, ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರೆ ಸ್ವರ್ಗಕ್ಕೆ ಹೋಗುತ್ತೇವೆಯೇ?’ ಪುನಃ ಕೇಳಿದರು ಧರ್ಮಗುರುಗಳು.
`ಇಲ್ಲಾ’ ಜನರು ಹೇಳಿದರು.
`ಹಾಗಾದರೆ ನಾವು ಸ್ವರ್ಗಕ್ಕೆ ಹೋಗಬೇಕಾದರೆ ಏನು ಮಾಡಬೇಕು?’ ಇನ್ನೂ ಜೋರಾದ ದನಿಯಲ್ಲಿ ಧರ್ಮಗುರುಗಳು ಜನರನ್ನು ಕೇಳಿದರು.
ಜನರ ಬಳಿ ಉತ್ತರವಿರಲಿಲ್ಲ. ಸಭಾಂಗಣದಲ್ಲಿ ಮೌನವಿತ್ತು. ನಸ್ರುದ್ದೀನ್ ತಾನು ಉತ್ತರ ಹೇಳುತ್ತೇನೆಂದು ಕೈ ಮೇಲಕ್ಕೆತ್ತಿದ.
ನಸ್ರುದ್ದೀನನೆಡೆಗೆ ಅಸಡ್ಡೆಯಿಂದ ನೋಡಿದ ಧರ್ಮಗುರು, `ಹೇಳು, ಸ್ವರ್ಗಕ್ಕೆ ಹೋಗಬೇಕಾದರೆ ಏನು ಮಾಡಬೇಕು?’ ಎಂದರು.
`ಸ್ವರ್ಗಕ್ಕೆ ಹೋಗಬೇಕಾದರೆ ಮೊದಲು ನಾವು ಸಾಯಬೇಕು’ ಹೇಳಿದ ನಸ್ರುದ್ದೀನ್.
ಗುರುತು
ವಿದ್ವಾಂಸ ನಸ್ರುದ್ದೀನ್ ಮತ್ತು ಆ ಊರಿನ ಧರ್ಮಗುರು ಇಬ್ಬರಿಗೂ ಬದುಕು ನೀರಸವೆನ್ನಿಸುತ್ತಿತ್ತು. ಇಬ್ಬರೂ ರಹಸ್ಯವಾಗಿ ಗೋವಾಕ್ಕೆ ಹೋಗಿ ಮೋಜು ಮಸ್ತಿ ಮಾಡೋಣವೆಂದು ತೀರ್ಮಾನಿಸಿದರು. ಗೋವಾಕ್ಕೆ ಹೋದ ಇಬ್ಬರೂ ಯಾರಿಗೂ ಗುರುತು ಸಿಗಬಾರದೆಂದು ಚಡ್ಡಿ, ಅಂಗಿ, ಟೋಪಿ ಧರಿಸಿ ಕೈಯಲ್ಲಿ ಬಿಯರ್ ಹಿಡಿದು ಬೀಚ್‍ನಲ್ಲಿ ಸುತ್ತಾಡಲು ಹೊರಟರು. ಅವರ ಎದುರಿಗೆ ಬಂದ ಒಬ್ಬ ಸುಂದರ ಹಾಗೂ ಬಿಕಿನಿ ಧರಿಸಿದ್ದ ಯುವತಿಯೊಬ್ಬಳು ಇವರನ್ನು ನೋಡಿ, `ನಮಸ್ಕಾರ ಗುರುಗಳೇ! ಹೇಗಿದ್ದೀರಿ?’ ಎಂದು ಕೇಳಿ ಮುಂದಕ್ಕೆ ಹೊರಟಳು.

ಇವರಿಬ್ಬರಿಗೂ ಗಾಭರಿಯಾಯಿತು. ನಾವು ವಿದ್ವಾಂಸರು ಹಾಗೂ ಧರ್ಮಗುರುಗಳೆನ್ನುವುದು ಇವಳಿಗೆ ಹೇಗೆ ತಿಳಿಯಿತು? ಎಂದು ಆಲೋಚಿಸಿದ ಅವರು, ಮರುದಿನ ಇನ್ನೂ ಬಣ್ಣಬಣ್ಣದ ಚಡ್ಡಿ ಧರಿಸಿ, ಕಪ್ಪು ಕನ್ನಡಕ ಧರಿಸಿ, ಎದೆ ಬಿಸಿಲಿಗೆ ಬಿಟ್ಟು, ಬಿಯರ್ ಹಿಡಿದು ಬೀಚ್‍ನಲ್ಲಿ ಸುತ್ತಾಡಿದರು. ಪುನಃ ಎದುರಿಗೆ ಬಂದ ಅದೇ ಸುಂದರ ಯುವತಿ ಪುನಃ, `ನಮಸ್ಕಾರ ಗುರುಗಳೇ! ಗೋವಾ ಹೇಗಿದೆ?’ ಎಂದು ಕೇಳಿ ಮುಂದಕ್ಕೆ ಹೊರಟಳು.

`ಯಾರೀಕೆ? ಇವಳಿಗೆ ನಮ್ಮ ಗುರುತು ಹೇಗೆ ಸಿಗುತ್ತಿದೆ?’ ಎಂದು ಗಲಿಬಿಲಿಗೊಂಡ ಅವರಿಬ್ಬರೂ ಆ ಯುವತಿಯನ್ನು ತಡೆದು ನಿಲ್ಲಿಸಿ,

`ನೀನು ಯಾರಮ್ಮಾ? ನಿನಗೆ ಹೇಗೆ ನಮ್ಮ ಗುರುತು ಸಿಕ್ಕಿತು?’ ಎಂದು ಕೇಳಿದರು.

ಜೋರಾಗಿ ನಕ್ಕ ಆಕೆ, `ಯಾಕೆ ನಿಮಗೆ ನನ್ನ ಗುರುತು ಸಿಗಲಿಲ್ಲವೆ? ನಾನು ನಿಮ್ಮ ಊರಿನ ಆಶ್ರಮದ ಸಂನ್ಯಾಸಿ ಮಾತೆ ಮಾಯಾಂಗನೆ’ ಎಂದಳು.

ಸ್ವಂತ ಇಚ್ಛೆ
ನಸ್ರುದ್ದೀನನಿಗೆ ಮದುವೆ ವಯಸ್ಸಾದಾಗ ಸುಂದರ ಹುಡುಗಿ ಫಾತಿಮಾ ಅವನನ್ನು ನೋಡಿದಳು. ಒಂದಷ್ಟು ದಿನ ಜೊತೆಯಲ್ಲಿ ಸುತ್ತಾಡಿದರು. ಕೊನೆಗೆ ಮದುವೆಯಾಗಲು ನಿರ್ಧರಿಸಿ ಇಬ್ಬರೂ ನೋಂದಣಾಧಿಕಾರಿಗಳ ಕಚೇರಿಗೆ ಗೆಳೆಯರ ಜೊತೆ ಹೋದರು. ನೋಂದಣಾಧಿಕಾರಿಗಳು ಅವರಿಗೆ ಪ್ರಶ್ನಾವಳಿಯೊಂದನ್ನು ನೀಡಿ ಅದನ್ನು ಭರ್ತಿಮಾಡಲು ನಸ್ರುದ್ದೀನನಿಗೆ ನೀಡಿದರು. ಅದರಲ್ಲಿನ ಪ್ರಶ್ನೆಗಳಿಗೆ ಉತ್ತರವನ್ನು ಬರೆಯುತ್ತಿದ್ದ. ಅದರಲ್ಲಿ ಕೊನೆಗೆ, `ನೀವು ನಿಮ್ಮ ಸ್ವಂತ ಇಚ್ಛೆಯಿಂದ ಈ ಮದುವೆಗೆ ಒಪ್ಪಿದ್ದೀರಾ?’ ಎಂಬ ಪ್ರಶ್ನೆಯಿತ್ತು. ಉತ್ತರ ಬರೆಯುವ ಮೊದಲು ನಸ್ರುದ್ದೀನ್ ಫಾತಿಮಾ ಕಡೆಗೆ ನೋಡಿದ. 

`ಹೌದು ಎಂದು ಬರೆಯಿರಿ’, ಆಕೆ ಹೇಳಿದಳು.

ಮೂರನೇ ಮಗು
ನಸ್ರುದ್ದೀನ್ ಮತ್ತು ಫಾತಿಮಾರವರಿಗೆ ಮದುವೆಯಾದ ನಂತರ ಅವರಿಗೆ ಎಷ್ಟು ಮಕ್ಕಳು ಬೇಕು ಎನ್ನುವ ಕುರಿತು ಅವರಿಬ್ಬರ ನಡುವೆ ಚರ್ಚೆ ನಡೆಯಿತು. ನಸ್ರುದ್ದೀನ್ ಹೇಳಿದ, `ನಮಗೆ ಎರಡು ಮಕ್ಕಳು ಸಾಕು’. 

`ಇಲ್ಲ ನನಗೆ ಮೂವರು ಮಕ್ಕಳು ಬೇಕು’ ಹೇಳಿದಳು ಫಾತಿಮಾ.

`ಸಾಧ್ಯವೇ ಇಲ್ಲ. ಈ ಕಾಲದಲ್ಲಿ ಎರಡು ಮಕ್ಕಳನ್ನು ಸಾಕುವುದೇ ಕಷ್ಟ. ಎರಡನೇ ಮಗು ಹುಟ್ಟಿದ ಕೂಡಲೇ ನಾನು ಆಪರೇಶನ್ ಮಾಡಿಸಿಕೊಳ್ಳುತ್ತೇನೆ’ ಹೇಳಿದ ನಸ್ರುದ್ದೀನ್.

`ಆಯಿತು. ಆದರೆ ಮೂರನೇ ಮಗುವನ್ನು ನಿನ್ನ ಮಗುವಿನ ಹಾಗೆಯೇ ಸಾಕುತ್ತೀಯಾ ತಾನೆ?’ ಕೇಳಿದಳು ಫಾತಿಮಾ.

ಮೋಂಬತ್ತಿ
ನಸ್ರುದ್ದೀನ್ ಮತ್ತು ಫಾತಿಮಾರವರಿಗೆ ಮದುವೆಯಾಗಿ ಐದು ವರ್ಷಗಳಾದರೂ ಮಕ್ಕಳಾಗಲಿಲ್ಲ. ಆ ಊರಿನ ಚರ್ಚಿನಲ್ಲಿ ಪ್ರಾರ್ಥಿಸಿದವರಿಗೆ ಮಕ್ಕಳಾಗುತ್ತವೆಂಬ ನಂಬಿಕೆ ಇತ್ತು. ನಸ್ರುದ್ದೀನ್ ಮತ್ತು ಫಾತಿಮಾ ಅಲ್ಲಿಗೆ ಹೋಗಿ ಪ್ರಾರ್ಥಿಸಿದರು ಹಾಗೂ ಅಲ್ಲಿದ್ದ ಪಾದ್ರಿಯವರನ್ನು ಸಹ ತಮಗೆ ಮಕ್ಕಳಾಗುವಂತೆ ಪ್ರಾರ್ಥಿಸಲು ಕೇಳಿದರು.

`ಖಂಡಿತಾ ಪ್ರಾರ್ಥಿಸುತ್ತೇನೆ. ಅಷ್ಟೇ ಅಲ್ಲ, ಮುಂದಿನ ವಾರ ನಾನು ವ್ಯಾಟಿಕನ್‍ಗೆ ಹೋಗುತ್ತಿದ್ದೇನೆ. ಅಲ್ಲಿ ಸಂತ ಪೀಟರನ ಬಳಿ ನಿಮಗೆ ಮಕ್ಕಳಾಗುವಂತೆ ಪ್ರಾರ್ಥಿಸಿ ಅಲ್ಲಿ ಒಂದು ಮೋಂಬತ್ತಿ ಹಚ್ಚಿ ಬರುತ್ತೇನೆ’ ಎಂದರು.

ಮೂರು ವರ್ಷಗಳ ನಂತರ ಪಾದ್ರಿ ಹಿಂದಿರುಗಿದಾಗ ಫಾತಿಮಾ ಎರಡು ಜೊತೆ ಅವಳಿ ಜವಳಿ ಮಕ್ಕಳನ್ನು ಹೆತ್ತಿರುವುದು ತಿಳಿದು ಪಾದ್ರಿಗೆ ಸಂತೋಷವಾಯಿತು. ಆಕೆಯನ್ನು ವಿಚಾರಿಸಿ ಆಕೆಯ ನಾಲ್ಕು ಮಕ್ಕಳನ್ನು ನೋಡಿದ ಪಾದ್ರಿ, ಆಕೆಯ ಗಂಡ ನಸ್ರುದ್ದೀನ್ ಎಲ್ಲಿದ್ದಾರೆ ಎಂದು ಕೇಳಿದರು.

`ನಸ್ರುದ್ದೀನ್ ವ್ಯಾಟಿಕನ್‍ಗೆ ಹೋಗಿದ್ದಾರೆ, ನೀವು ಹಚ್ಚಿರುವ ಮೋಂಬತ್ತಿ ಆರಿಸಿ ಬರುತ್ತೇನೆ’ ಎಂದಿದ್ದಾರೆ ಎಂದಳು ಫಾತಿಮಾ.

ಸುಂದರ ಬದುಕು
ನಸ್ರುದ್ದೀನ್ ಮತ್ತು ಫಾತಿಮಾ ಎಂದಿನಂತೆ ಯಾವುದೋ ಸಣ್ಣ ವಿಷಯಕ್ಕೆ ಜಗಳವಾಡಿದರು. ನಸ್ರುದ್ದೀನನೊಂದಿಗೆ ಮಾತನಾಡುವುದನ್ನು ನಿಲ್ಲಿಸಬೇಕೆಂದು ನಿರ್ಧರಿಸಿದ ಫಾತಿಮಾ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಒಂದು ವಾರ ಕಳೆಯಿತು. ಒಂದು ದಿನ ಬೆಳಿಗ್ಗೆ ನಸ್ರುದ್ದೀನ್, `ಫಾತಿಮಾ ನನ್ನ ಅಂಗಿ ಎಲ್ಲಿ?’ ಎಂದು ಕೇಳಿದ.

`ಹಾ! ಅಂತೂ ನೀನೇ ಮೊದಲು ಮಾತನಾಡಿದೆಯಲ್ಲಾ?’ ಎಂದು ಕೇಳಿದಳು.

`ಏಕೆ? ಏನಾಯಿತು?’ ಕೇಳಿದ ನಸ್ರುದ್ದೀನ್.

`ಹೌದೆ? ತಿಳಿಯಲಿಲ್ಲವೆ? ನಾನು ನಿನ್ನೊಂದಿಗೆ ಮಾತನಾಡುವುದು ಬಿಟ್ಟು ಒಂದು ವಾರವಾಯಿತಲ್ಲಾ?’ ಹೇಳಿದಳು ಫಾತಿಮಾ.

`ಹೌದಲ್ಲಾ... ಅದೇ ನಾನು ಯೋಚಿಸುತ್ತಿದ್ದೆ, ಬದುಕು ಅದು ಹೇಗೆ ಇದ್ದಕ್ಕಿದ್ದಂತೆ ಸುಂದರವಾಯಿತು? ಎಂದು. ಈಗ ತಿಳಿಯಿತುಹೇಳಿದ ನಸ್ರುದ್ದೀನ್.
j.balakrishna@gmail.com

1 ಕಾಮೆಂಟ್‌:

sheshagirijodidar ಹೇಳಿದರು...

Baalu... I did not know that you have a blog of your own...even I have...as Somaari...but..no one to read...I dont that part of reaching the readers...anyway.... your book was read by almost all at home...and every one enjoyed it...you have a wonderful flow of concentrated feelings with a genuine..economy of words...I am really proud of you..keep writing..I will go through in leisure.. I expect something wonderfully interesting from your pen about your tour...take care..