ಗುರುವಾರ, ಜುಲೈ 28, 2016

ಮುಲ್ಲಾ ನಸ್ರುದ್ದೀನ್ ಕತೆಗಳ 49ನೇ ಕಂತು

ಜುಲೈ 2016ರ `ಸಂವಾದ'ದಲ್ಲಿ ಪ್ರಕಟವಾದ ನನ್ನ ಮುಲ್ಲಾ ನಸ್ರುದ್ದೀನ್ ಕತೆಗಳ 49ನೇ ಕಂತು

ಗಳಿಕೆ 

ಮೂರು ಜನ ಮಕ್ಕಳು ತಮ್ಮ ಅಪ್ಪಂದಿರ ಬಗ್ಗೆ ಕೊಚ್ಚಿಕೊಳ್ಳುತ್ತಿದ್ದರು. 

ಒಬ್ಬ ಹೇಳಿದ, `ನಮ್ಮಪ್ಪ ಒಂದೆರಡು ಸಾಲು ಗೀಚುತ್ತಾರೆ, ಅದನ್ನು ಪದ್ಯ ಎಂದು ಕರೆಯುತ್ತಾರೆ. ಪತ್ರಿಕೆಯವರು ಅದನ್ನು ಪ್ರಕಟಿಸಿ ಇನ್ನೂರು ರೂಪಾಯಿ ಕೊಡುತ್ತಾರೆ’. 

ಮತ್ತೊಬ್ಬ ಹೇಳಿದ, `ನಮ್ಮಪ್ಪ ಒಂದೆರಡು ಸಾಲು ಗೀಚುತ್ತಾರೆ, ಅದನ್ನು ಹಾಡು ಎಂದು ಕರೆಯುತ್ತಾರೆ. ಸಿನೆಮಾದವರು ಅದಕ್ಕೆ ಒಂದು ಸಾವಿರ ರೂಪಾಯಿ ಕೊಡುತ್ತಾರೆ.’ 

ನಸ್ರುದ್ದೀನನ ಮಗ ಹೇಳಿದ, `ನಮ್ಮಪ್ಪ ಒಂದೆರಡು ಸಾಲು ಗೀಚುತ್ತಾರೆ, ಅದನ್ನು ವಾಸ್ತು ಸಲಹೆ ಎಂದು ಕರೆಯುತ್ತಾರೆ. ಜನ ಮುಗಿಬಿದ್ದು ಸಾವಿರಾರು ರೂಪಾಯಿ ಕೊಡುತ್ತಾರೆ ಹಾಗೂ ತಮ್ಮದೇ ಮನೆ, ಗೋಡೆ ಕೆಡವಿ ಲಕ್ಷಾಂತರ ಕಳೆದುಕೊಳ್ಳುತ್ತಾರೆ.’ 


ನಾಸ್ತಿಕ 

ಆ ಊರಿಗೆ ಹೊಸದಾಗಿ ಧರ್ಮಬೋಧಕ ಬಂದಿದ್ದ. ಊರಿನ ಜನರನ್ನೆಲ್ಲಾ ಸೇರಿಸಿ, `ನಿಮ್ಮಲ್ಲಿ ಎಷ್ಟು ಜನ ದೇವರನ್ನು ನಂಬುತ್ತೀರಿ?’ ಎಂದು ಕೇಳಿದ. ಎಲ್ಲರೂ ಕೈ ಎತ್ತಿದರು. ಆದರೆ ನಸ್ರುದ್ದೀನ್ ಕೈ ಎತ್ತಲಿಲ್ಲ. ಅದನ್ನು ನೋಡಿದ ಧರ್ಮ ಬೋಧಕ, `ನೀನು ನಾಸ್ತಿಕನೇ?’ ಎಂದು ಕೇಳಿದ. 

`ಹೌದು, ನಾನು ನಾಸ್ತಿಕ, ದೇವರನ್ನು ನಂಬುವುದಿಲ್ಲ’, ಹೇಳಿದ ನಸ್ರುದ್ದೀನ್. 

`ನೀನು ಏಕೆ ನಾಸ್ತಿಕನಾದೆ?’ ಕೇಳಿದ ಧರ್ಮಗುರು. 

`ಏಕೆಂದರೆ ನನ್ನ ಅಪ್ಪ-ಅಮ್ಮ ನಾಸ್ತಿಕರಾಗಿದ್ದರು. ನನ್ನ ಅಜ್ಜ-ಅಜ್ಜಿ ನಾಸ್ತಿಕರಾಗಿದ್ದರು, ಅದಕ್ಕೇ ನಾನೂ ನಾಸ್ತಿಕನಾದೆ’ ನಸ್ರುದ್ದೀನ್ ಹೇಳಿದ. 

`ಹಾಗಾದರೆ ನಿನ್ನ ಅಪ್ಪ-ಅಮ್ಮ, ನಿನ್ನ ಅಜ್ಜ-ಅಜ್ಜಿ ದಡ್ಡರೂ, ತಿಳಿಗೇಡಿಗಳೂ ಆಗಿದ್ದರೆ ನೀನು ಏನು ಆಗಿರುತ್ತಿದ್ದೆ?’ ಕೇಳಿದ ಧರ್ಮಗುರು ವ್ಯಂಗ್ಯದಿಂದ. 

ನಸ್ರುದ್ದೀನ್ ಹೇಳಿದ `ಬಹುಶಃ ಆಗ ನಾನು ಆಸ್ತಿಕನಾಗಿರುತ್ತಿದ್ದೆ’. 

ಪುನಃ ನಸ್ರುದ್ದೀನ್!
ಆ ಊರಿಗೆ ಬಂದ ಹೊಸ ವ್ಯಕ್ತಿಯೊಬ್ಬ ಗಡಂಗಿನ ಮುಂದೆ ಕುಳಿತು ಕುಡಿಯುತ್ತಿದ್ದ. ಅಲ್ಲಿಗೆ ಬಂದ ಮುಲ್ಲಾ ನಸ್ರುದ್ದೀನ್,

`ನೋಡಿ ಕುಡಿಯುವುದು ಧರ್ಮಕ್ಕೆ ವಿರುದ್ಧವಾದುದು. ನೀವು ಕೆಟ್ಟ ಕೆಲಸ ಮಾಡುತ್ತಿರುವಿರಿ. ಕುಡಿಯುವುದರಿಂದ ನಿಮ್ಮ ಮನಸ್ಸು, ವ್ಯಕ್ತಿತ್ವ ಹಾಳಾಗುತ್ತದೆ. ದಯವಿಟ್ಟು ಕುಡಿಯುವುದನ್ನು ಬಿಟ್ಟುಬಿಡಿ’ ಎಂದು ಬೋಧನೆ ಮಾಡಿದ.

ಅದನ್ನು ಕೇಳಿದ ಆ ವ್ಯಕ್ತಿ, `ನೋಡಿ ಧರ್ಮಗುರುಗಳೇ, ಕುಡಿಯುವುದು ಕೆಟ್ಟದ್ದಲ್ಲ. ಅದು ನೀಡುವ ಸುಖ ಧರ್ಮ ಕೊಡುವ ಸುಖಕ್ಕಿಂತ ಉತ್ತಮವಾದುದು, ಅದ್ಭುತವಾದುದು. ಅದರ ಅನುಭವ ದಿವ್ಯವಾದುದು. ಬೇಕಾದರೆ ನೀವೇ ಒಮ್ಮೆ ಕುಡಿದು ನೋಡಿ, ನಿಮಗೇ ನಂಬಿಕೆ ಬರುತ್ತದೆ’ ಎಂದ.

`ನಾನು ಧರ್ಮ ಬೋಧಕ, ನಾನು ಹೇಗೆ ಕುಡಿಯಲಿ. ಜನ ನೋಡಿದರೆ ಏನೆಂದುಕೊಳ್ಳುತ್ತಾರೆ?’ ನಸ್ರುದ್ದೀನ್ ಹೇಳಿದ.

`ಪರವಾಗಿಲ್ಲ. ನಾನು ಚಹಾ ಕಪ್ಪಿನಲ್ಲಿ ನಿಮಗೆ ಮದ್ಯ ತಂದು ಕೊಡುತ್ತೇನೆ, ಜನರಿಗೆ ತಿಳಿಯುವುದಿಲ್ಲ’ ಹೇಳಿದ ಆ ವ್ಯಕ್ತಿ. ಆಯಿತೆಂದು ನಸ್ರುದ್ದೀನ್ ಒಪ್ಪಿಕೊಂಡ.

ಆ ವ್ಯಕ್ತಿ ಗಡಂಗಿನೊಳಕ್ಕೆ ಹೋಗಿ ತನಗೆ ಮತ್ತೊಂದು ಪೆಗ್ ಕೊಂಡು ಚಹಾ ಕಪ್ಪಿನಲ್ಲಿ ಎರಡು ಪೆಗ್ ಹಾಕಿಕೊಡುವಂತೆ ಕೇಳಿದ.

ಅದಕ್ಕೆ ಗಡಂಗಿನವ, `ಓಹ್! ಪುನಃ ಮುಲ್ಲಾ ನಸ್ರುದ್ದೀನ್ ಬಂದಿರುವಂತಿದೆ!’ ಎಂದ.

ಹೆಸರು?
ಆ ಊರಿಗೆ ಪ್ರಖ್ಯಾತ ಧರ್ಮ ಗುರುಗಳು ಬಂದಿದ್ದರು. ವಿದ್ವಾಂಸ ನಸ್ರುದ್ದೀನನ ಜೊತೆ ಲೋಕದ ಬಗ್ಗೆ ಚರ್ಚಿಸುತ್ತಿದ್ದರು. ವಿಷಯ ನೈತಿಕತೆಯ ಬಗೆಗೆ ತಿರುಗಿತು. ಧರ್ಮ ಗುರುಗಳು, `ಈಗ ಜಗತ್ತು ಎಷ್ಟು ನೀತಿಗೆಟ್ಟಿದೆ! ನೋಡಿ, ನಾನಂತೂ ನನ್ನ ಪತ್ನಿಯನ್ನು ಮದುವೆಯಾಗುವವೆಗೂ ಆಕೆಯೊಂದಿಗೆ ಮಲಗಲೇ ಇಲ್ಲ. ನೀವು?’ ಎಂದು ಮುಲ್ಲಾ ನಸ್ರುದ್ದೀನನನ್ನು ಕೇಳಿದರು.

`ನನಗೆ ನೆನಪಿಲ್ಲ, ನಿಮ್ಮ ಪತ್ನಿಯ ಹೆಸರು ಏನಂದಿರಿ?’ ಕೇಳಿದ ನಸ್ರುದ್ದೀನ್. 


ಸ್ವರ್ಗ-ನರಕ
ಊರಿನ ಧರ್ಮಬೀರುಗಳಾದ ಗಂಡಸರೆಲ್ಲಾ ಸೇರಿ ಧರ್ಮ-ಕರ್ಮಗಳ ಬಗ್ಗೆ ಚರ್ಚೆ ನಡೆಸುತ್ತಿದ್ದರು.

ಒಬ್ಬ ಧರ್ಮಗುರು, `ಈ ಆಧುನಿಕ ಕಾಲದ ಹೆಂಗಸರು ಎಲ್ಲಾ ಧರ್ಮಾಚರಣೆಗಳನ್ನೂ ಉಲ್ಲಂಘಿಸುತ್ತಿದ್ದಾರೆ, ನೀತಿ-ನಿಯಮಗಳನ್ನೆಲ್ಲಾ ಅನುಸರಿಸುತ್ತಿಲ್ಲಾ. ನನಗೆ ತಿಳಿದಂತೆ ಎಲ್ಲಾ ಹೆಂಗಸರೂ ನರಕಕ್ಕೇ ಹೋಗುತ್ತಾರೆ’ ಎಂದ.

ಉಳಿದವರು, `ಹೌದು ಹೌದು’ ಎಂದು ತಲೆದೂಗಿದರು. ತಾವು ಗಂಡಸರೆಲ್ಲಾ ಸ್ವರ್ಗಕ್ಕೆ ಹೋಗಲು ಹೇಗೆ ತಮ್ಮ ಒಳ್ಳೆಯ ಕೆಲಸಗಳನ್ನು ಮುಂದುವರಿಸಬೇಕೆಂದು ಚರ್ಚೆ ಮುಂದುವರಿಸಿದರು. ಸ್ವರ್ಗಕ್ಕೆ ಹೋಗಲು ತಾವು ಯಾವ್ಯಾವ ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆಂದು ಒಬ್ಬೊಬ್ಬರಾಗಿ ಹೇಳಿದರು.

ನಸ್ರುದ್ದೀನನ ಸರದಿ ಬಂದಿತು. `ನಾನು ಸ್ವರ್ಗಕ್ಕೆ ಹೋಗುವುದಿಲ್ಲ, ನರಕಕ್ಕೇ ಹೋಗುತ್ತೇನೆ’ ನಸ್ರುದ್ದೀನ್ ಹೇಳಿದ.

ಎಲ್ಲರೂ ಅಚ್ಚರಿ ಮತ್ತು ಅಪನಂಬಿಕೆಯಿಂದ ಆತನೆಡೆಗೆ ನೋಡಿದರು.

`ಹೌದು, ಎಲ್ಲ ಹೆಂಗಸರೂ ನರಕಕ್ಕೆ ಹೋದರೆ, ನಾನು ಸ್ವರ್ಗದಲ್ಲಿ ಏನು ಮಾಡಲಿ? ನಾನೂ ನರಕಕ್ಕೇ ಹೋಗುತ್ತೇನೆ’ ಹೇಳಿದ ನಸ್ರುದ್ದೀನ್.

ನೀನಿನ್ನೂ ಸಂನ್ಯಾಸಿಯಾಗಿಲ್ಲ
ಮುಲ್ಲಾ ನಸ್ರುದ್ದೀನ್ ಸಂನ್ಯಾಸಿಯಾಗಿದ್ದ.

ಅಬ್ದುಲ್ಲಾ: ನಸ್ರುದ್ದೀನ್ ನೀನು ಸಂನ್ಯಾಸಿ ಹೇಗಾದೆ?

ನಸ್ರುದ್ದೀನ್: ಅದೊಂದು ದೊಡ್ಡ ಕತೆ. ಹೇಳುತ್ತೇನೆ ಕೇಳು. ಒಂದು ದಿನ ಕಾಡಲ್ಲಿ ಹೋಗುತ್ತಿದ್ದಾಗ ಕತ್ತಲಾಯಿತು. ಅಲ್ಲೇ ಒಂದು ಆಶ್ರಮವಿತ್ತು. ಅಲ್ಲಿ ಸಂನ್ಯಾಸಿಗಳು ನನಗೆ ಆ ದಿನ ರಾತ್ರಿ ಕಳೆಯಲು ಸ್ಥಳ ನೀಡಿದರು, ನೀರು ಆಹಾರ ನೀಡಿದರು. ಆ ದಿನ ರಾತ್ರಿ ಆಶ್ರಮದಲ್ಲಿ ಮಲಗಿದ್ದಾಗ ವಿಚಿತ್ರ ಶಬ್ದ ಕೇಳಿಸಿತು. ಆ ಶಬ್ದ ಕೇಳಲು ಬಹಳ ಅದ್ಭುತವಾಗಿತ್ತು. ಬೆಳಿಗ್ಗೆ ಆ ಶಬ್ದ ಏನೆಂದು ಆಶ್ರಮದ ಸಂನ್ಯಾಸಿಗಳನ್ನು ಕೇಳಿದೆ. ಅವರು `ನೀನಿನ್ನೂ ಸಂನ್ಯಾಸಿಯಾಗಿಲ್ಲ. ಆದುದರಿಂದ ಹೇಳಲು ಸಾಧ್ಯವಿಲ್ಲ’ ಎಂದರು. ನನಗೆ ಆ ಶಬ್ದ ಏನು? ಎಲ್ಲಿಂದ ಬರುತ್ತಿದೆ? ಎನ್ನುವುದನ್ನು ತಿಳಿದುಕೊಳ್ಳಲೇಬೇಕೆನ್ನಿಸಿತು. `ಆ ಶಬ್ದದ ಮೂಲ ನಾನು ತಿಳಿದುಕೊಳ್ಳಲೇಬೇಕು, ನಾನು ಸಂನ್ಯಾಸಿಯಾಗುತ್ತೇನೆ. ನಾನು ಸಂನ್ಯಾಸಿಯಾಗುವುದು ಹೇಗೆ ಹೇಳಿ’ ಎಂದು ನಾನು ದುಂಬಾಲು ಬಿದ್ದೆ.’ ಅವರು ಹೇಳಿದರು, `ನೀನು ಈ ಭೂಮಿಯ ಸುತ್ತ ಒಂದು ಸುತ್ತು ಹೋಗು. ಹೋಗುವಾಗ ಸಿಗುವ ಹುಲ್ಲೆಸಳುಗಳನ್ನು ಎಣಿಸಿಕೊ, ಹಾಗೆಯೇ ಸಿಗುವ ಗೊರಜುಕಲ್ಲುಗಳನ್ನು ಸಹ ಎಣಿಸಿಕೊಂಡು ಬಾ. ನಿನಗೆ ಆ ಲೆಕ್ಕ ಸಿಕ್ಕನಂತರ ನೀನು ಸಂನ್ಯಾಸಿಯಾಗಬಹುದು’ ಎಂದರು. ನಾನು ಆ ಅದ್ಭುತ ಶಬ್ದಕ್ಕೆ ಮಾರುಹೋಗಿದ್ದುದರಿಂದ ಸಂನ್ಯಾಸಿಯಾಗಲೇಬೇಕೆಂದು ನಿರ್ಧರಿಸಿ ಭೂಮಿಯ ಸುತ್ತ ಒಂದು ಸುತ್ತ ಹೊಡೆದು ದಾರಿಯಲ್ಲಿ ಸಿಕ್ಕ ಹುಲ್ಲೆಸಳುಗಳನ್ನು ಹಾಗೂ ಗೊರಜುಕಲ್ಲುಗಳನ್ನು ಎಣಿಸಿ ಸುಮಾರು ಐವತ್ತು ವರ್ಷಗಳ ನಂತರ ಪುನಃ ಆ ಕಾಡಿಗೆ ಹಿಂದಿರುಗಿ ಅವರಿಗೆ ಅವುಗಳ ಲೆಕ್ಕ ತಿಳಿಸಿ ನನ್ನನ್ನು ಸಂನ್ಯಾಸಿಯನ್ನಾಗಿ ಮಾಡಿ ಆ ಶಬ್ದದ ಮೂಲ ತಿಳಿಸುವಂತೆ ಬೇಡಿಕೊಂಡೆ. ನನ್ನ ಲೆಕ್ಕದಿಂದ ಸಂತೃಪ್ತರಾದ ಅವರು ನನ್ನನ್ನು ಸಂನ್ಯಾಸಿಯನ್ನಾಗಿ ಮಾಡಿದರು ಹಾಗೂ ನನಗೊಂದು ಕೀಲಿ ನೀಡಿ ಒಂದು ಬಾಗಿಲಿನ ಬಳಿ ಕರೆದೊಯ್ದರು. ಅದು ಮರದ ಬಾಗಿಲಾಗಿತ್ತು. ಅದನ್ನು ತೆರೆದೆ, ಅದರೊಳಗೆ ಒಂದು ಕಲ್ಲಿನ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದೆ. ಅದರೊಳಗೆ ಕಬ್ಬಿಣದ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದೆ. ಅದರೊಳಗೆ ತಾಮ್ರದ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದರೆ ಅದರೊಳಗೆ ಬೆಳ್ಳಿಯ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದರೊಳಗೆ ಬಂಗಾರದ ಬಾಗಿಲಿತ್ತು. ಅದರ ಕೀಲಿ ನೀಡಿದರು. ಅದನ್ನು ತೆರೆದೆ. ನನಗೆ ನನ್ನನ್ನೇ ನಂಬಲಾಗಲಿಲ್ಲ. ನನ್ನ ಜನ್ಮ ಸಾರ್ಥಕವಾದಂತೆನಿಸಿತು. ನಾನು ಯಾವ ಶಬ್ದವನ್ನು ಅರಸಿ ಹೊರಟಿದ್ದೆನೋ ಅದರ ಮೂಲ ಆ ಕೋಣೆಯಲ್ಲಿತ್ತು.

ಅಬ್ದುಲ್ಲಾನಿಗೆ ಕುತೂಹಲ ತಡೆಯಲಾಗಲಿಲ್ಲ, `ನಸ್ರುದ್ದೀನ್, ಹೇಳು ಏನಿತ್ತು ಆ ಕೋಣೆಯೊಳಗೆ?’ ಎಂದು ಕೇಳಿದ.

ನಸ್ರುದ್ದೀನ್ ಪ್ರಶಾಂತನಾಗಿ ಹೇಳಿದ, `ನೀನಿನ್ನೂ ಸಂನ್ಯಾಸಿಯಾಗಿಲ್ಲ. ಆದುದರಿಂದ ಹೇಳಲು ಸಾಧ್ಯವಿಲ್ಲ’.

ಮಗನೇ ವೈದ್ಯ
ಮುದುಕ ನಸ್ರುದ್ದೀನನಿಗೆ ಕಾಯಿಲೆಯಾಗಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದರು. ನಸ್ರುದ್ದೀನನ ಮಗನೂ ವೈದ್ಯನಾಗಿದ್ದ. ನಸ್ರುದ್ದೀನ್ ತನ್ನ ಮಗನೇ ತನಗೆ ಶಸ್ತ್ರಚಿಕಿತ್ಸೆ ಮಾಡಬೇಕೆಂದು ದುಂಬಾಲು ಬಿದ್ದ. ಕೊನೆಗೂ ಆತನ ಮಗನನ್ನೇ ಶಸ್ತ್ರಚಿಕಿತ್ಸೆ ಮಾಡಲು ಕರೆಸಿದರು. ಮಗ, ಅಪ್ಪ ನಸ್ರುದ್ದೀನನಿಗೆ ಶಸ್ತ್ರಚಿಕಿತ್ಸೆ ಮಾಡಲು ಸಿದ್ಧನಾದ. ತನಗೆ ಅರವಳಿಕೆ ಕೊಡುವ ಮೊದಲು ನಸ್ರುದ್ದೀನ್, `ನೋಡು ಮಗನೆ, ನನಗೆ ಸ್ವಲ್ಪ ಎಚ್ಚರಿಕೆಯಿಂದಲೇ ಶಸ್ತ್ರಚಿಕಿತ್ಸೆ ಮಾಡು. ನನಗೇನಾದರೂ ಆದರೆ ನಿನಗೆ ಗೊತ್ತಲ್ಲ, ನಿನ್ನ ಅಮ್ಮ ನೀನು ಮತ್ತು ನಿನ್ನ ಹೆಂಡತಿಯೊಂದಿಗೆ ವಾಸಿಸಲು ಬರುತ್ತಾಳೆ!’ ಎಂದ.

ಜುಟ್ಟು ಕತ್ತರಿಸು

ನಸ್ರುದ್ದೀನ್ ಸೈನ್ಯದಲ್ಲಿ ಸಿಪಾಯಿಯಾಗಿದ್ದ. ಅವನನ್ನು ಭಾರತ-ಪಾಕಿಸ್ತಾನದ ಗಡಿಯಲ್ಲಿ ಸೇವೆಗೆ ನಿಯೋಜಿಸಲಾಗಿತ್ತು. ಭಾರತ-ಪಾಕಿಸ್ತಾನದ ನಡುವೆ ಗುಂಡಿನ ಚಕಮಕಿ ನಡೆಯುತ್ತಿತ್ತು. ಅವನಿಗೆ ರಜೆ ಹಾಕಿ ಬರುವಂತೆ ಅವನ ಹೆಂಡತಿ ಫಾತಿಮಾ ಮೇಲಿಂದ ಮೇಲೆ ಪತ್ರ ಬರೆಯುತ್ತಿದ್ದಳು. ತನ್ನ ಮೇಲಧಿಕಾರಿಯನ್ನು ಹೋಗಿ ರಜೆ ಕೇಳಿದ. ಅವನನ್ನು ತಲೆಯಿಂದ ಕಾಲಿನವರೆಗೆ ನೋಡಿದ ಮೇಲಧಿಕಾರಿ, `ನೀನು ಹೋಗಿ ಪಾಕಿಸ್ತಾನಿ ಸೈನಿಕನೊಬ್ಬನ ಜುಟ್ಟು ಕತ್ತರಿಸಿ ಗುರುತಿಗೆ ಅವನ ಟೊಪ್ಪಿಗೆಯನ್ನು ತೆಗೆದುಕೊಂಡು ಬಾ. ನಿನಗೆ ರಜೆ ಕೊಡುತ್ತೇನೆ’ ಎಂದ.

ಆಯಿತೆಂದು ಹೋದ ನಸ್ರುದ್ದೀನ್ ಅರ್ಧಗಂಟೆಯಲ್ಲೇ ಹಿಂದಿರುಗಿ ಪಾಕಿಸ್ತಾನಿ ಸೈನಿಕನ ಕತ್ತರಿಸಿದ ಜುಟ್ಟು ಹಾಗೂ ಟೊಪ್ಪಿಗೆಯನ್ನು ತನ್ನ ಮೇಲಧಿಕಾರಿಗೆ ನೀಡಿ ತನಗೆ ರಜೆ ನೀಡುವಂತೆ ಕೇಳಿದ. ಅಚ್ಚರಿಗೊಂಡ ಮೇಲಧಿಕಾರಿ, ಅದು ಹೇಗೆ ಅಷ್ಟು ಬೇಗ ಪಾಕಿಸ್ತಾನಿ ಸೈನಿಕನ ಜುಟ್ಟು ಕತ್ತರಿಸಿದೆ ಎಂದು ಕೇಳಿದ್ದಕ್ಕೆ ನಸ್ರುದ್ದೀನ್,

`ಗಡಿಯಲ್ಲಿನ ಪಾಕಿಸ್ತಾನಿ ಸೈನಿಕನನ್ನು ಹತ್ತಿರಕ್ಕೆ ಕರೆದು ನಿನಗೂ ಸಹ ನಿನ್ನ ಹೆಂಡತಿಯನ್ನು ನೋಡಲು ಹೋಗಲು ರಜೆ ಬೇಕೇ ಎಂದು ಕೇಳಿದೆ. ಅವನು ಹೌದು ಎಂದ. ಅವನಿಗೆ ನನ್ನ ಜುಟ್ಟು ಕತ್ತರಿಸಿ ನನ್ನ ಟೊಪ್ಪಿಗೆ ನೀಡಿದೆ, ಅವನು ಅವನ ಜುಟ್ಟು ಕತ್ತರಿಸಿ ತನ್ನ ಟೊಪ್ಪಿಗೆ ನನಗೆ ನೀಡಿದ’ ಎಂದ.

ಗೂಳಿಯ ಬಲ

ನಸ್ರುದ್ದೀನ್: ಅಬ್ದುಲ್ಲಾ ನಿನಗೆ ಗೂಳಿಯ ಬಲವಿದೆಯಲ್ಲಾ? ಅಷ್ಟೊಂದು ಶಕ್ತಿ ಹೇಗೆ ಬಂತು?

ಅಬ್ದುಲ್ಲಾ: ಏನಿಲ್ಲಾ, ನಾನು ಮೊದಲಿನಿಂದಲೂ ದನದ ಮಾಂಸ ತಿನ್ನುತ್ತೇನಲ್ಲಾ, ಅದಕ್ಕೇ ನನಗೆ ಗೂಳಿಯ ಬಲ ಬಂದಿದೆ.

ನಸ್ರುದ್ದೀನ್: ಹೌದೆ? ನಾನು ಮೊದಲಿನಿಂದಲೂ ಮೀನಿನ ಮಾಂಸ ತಿನ್ನುತ್ತಿದ್ದೇನೆ, ಆದರೆ ನನಗೆ ಇಂದಿಗೂ ಈಜು ಬರುವುದಿಲ್ಲವಲ್ಲಾ?

ತೆವಳುವಂತೆ ಮಾಡಿದ್ದೇನೆ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಇಬ್ಬರೂ ಗಡಂಗಿನಲ್ಲಿ ಕೂತು ತಮ್ಮ ಪತ್ನಿಯರ ಬಗ್ಗೆ ಮಾತನಾಡುತ್ತಿದ್ದರು.

ಅಬ್ದುಲ್ಲಾ: ನನ್ನ ಪತ್ನಿಗೆ ನಾನು ಸರಿಯಾಗಿ ಬುದ್ದಿ ಕಲಿಸಿದ್ದೇನೆ. ಈಗ ಅವಳು ನಾನು ಹೇಳಿದಂತೆ ಕೇಳುತ್ತಾಳೆ.

ನಸ್ರುದ್ದೀನ್: ಅದೇನು ಮಹಾ! ನಾನು ನನ್ನ ಪತ್ನಿಗೆ ನೆಲದ ಮೇಲೆ ತೆವಳುವಂತೆ ಮಾಡಿದ್ದೇನೆ.

ಅಬ್ದುಲ್ಲಾ: ಹೌದೆ? ಅದು ಹೇಗೆ ಸಾಧ್ಯವಾಯಿತು?

ನಸ್ರುದ್ದೀನ್: ನಿನ್ನೆ ರಾತ್ರಿ ಅವಳು ನೆಲದ ಮೇಲೆ ತೆವಳಿ, `ಲೇ ಪುಕ್ಕಲು ಗಂಡನೇ, ತಾಕತ್ತಿದ್ದರೆ ಮಂಚದ ಕೆಳಗಿನಿಂದ ಹೊರಗೆ ಬಂದು ಮಾತನಾಡೋ!’ ಎಂದಳು.
j.balakrishna@gmail.com

ಕಾಮೆಂಟ್‌ಗಳಿಲ್ಲ: