2016ರ ಆಗಸ್ಟ್ ಸಂಚಿಕೆಯ `ಸಂವಾದ' ಪತ್ರಿಕೆಯಲ್ಲಿ ಪ್ರಕಟವಾದ ಮುಲ್ಲಾ ನಸ್ರುದ್ದೀನ್ ಕತೆಗಳ 50ನೇ ಕಂತು
ಐವತ್ತನೇ
ಕಂತಿನೊಂದಿಗೆ `ಸಂವಾದ’ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಅನುವಾದದ ಮುಲ್ಲಾ ನಸ್ರುದ್ದೀನನ ಕತೆಗಳು
ಆಗಸ್ಟ್ 2016ರ ಸಂಚಿಕೆಯಿಂದ ಮುಕ್ತಾಯಗೊಂಡವು. ನಾಲ್ಕು ವರ್ಷಗಳ ಹಿಂದೆ ನನ್ನ `ನೀನೆಂಬ ನಾನು’ ಸೂಫಿ
ಕತೆಗಳನ್ನು `ಸಂವಾದ’ದಲ್ಲಿ ಪ್ರಕಟಿಸುವುದಾಗಿ ಗೆಳೆಯ ಇಂದೂಧರ ಹೊನ್ನಾಪುರರವರು ಹೇಳಿದಾಗ, ನಾನು ಹೊಸ
ಸೂಫಿ ಕತೆಗಳನ್ನು ಅನುವಾದ ಮಾಡುವ ಪ್ರಯತ್ನದಲ್ಲಿದ್ದು ಅವುಗಳನ್ನೇ ಬರೆದು ಕೊಡುತ್ತೇನೆ ಎಂದು ಹೇಳಿ,
ಕೊನೆಗೆ ಮುಲ್ಲಾ ನಸ್ರುದ್ದೀನನ ಕತೆಗಳನ್ನು ಅನುವಾದ ಮಾಡಿಕೊಡುವುದಾಗಿ ಹೇಳಿದೆ ಹಾಗೂ ನನ್ನ ಗುರಿ
12 ಸಂಚಿಕೆಗಳಿಗೆ ಬರೆಯುವುದಾಗಿತ್ತು. 12 ಸಂಚಿಕೆಗಳ ನಂತರ ನಿಲ್ಲಿಸುವುದಾಗಿ ಹೇಳಿದಾಗ, `ನಿಲ್ಲಿಸುವುದು
ಬೇಡ, ಓದುಗರು ಇಷ್ಟ ಪಡುತ್ತಿದ್ದಾರೆ ಮುಂದುವರಿಸಿ’ ಎಂದರು. ಲಭ್ಯವಿರುವ ಮುಲ್ಲಾ ನಸ್ರುದ್ದೀನನವೆಂದು
ಹೇಳಲ್ಪಡುವ ಎಲ್ಲ ಕತೆಗಳೂ ಮುಗಿದ ನಂತರ ಮುಲ್ಲಾ ನಸ್ರುದ್ದೀನನ ಪಾತ್ರಕ್ಕೆ, ಲೇವಡಿಗೆ, ಹಾಸ್ಯಪ್ರಜ್ಞೆಗೆ
ಹೊಂದುವ ಕತೆಗಳನ್ನು ಹುಡುಕಬೇಕಾಯಿತು. ವಾಸ್ತವವೆಂದರೆ ಮುಲ್ಲಾ ನಸ್ರುದ್ದೀನನ ಪಾತ್ರವೇ ಕಾಲ್ಪನಿಕವಿರಬಹುದು
ಹಾಗೂ ಅವನ ಹೆಸರಿಗೆ ಕತೆಗಳು ಏಷ್ಯಾ ಮತ್ತು ಯೂರೋಪಿನ ಹಲವಾರು ದೇಶಗಳಲ್ಲಿ ಕಾಲ ಕಾಲಕ್ಕೆ ಸೇರ್ಪಡೆಯಾಗಿವೆ.
ಅದೇ ಪ್ರಯತ್ನವನ್ನು ನಾನೂ ಮುಂದುವರಿಸಿದೆ. ಕೆಲವು ಕತೆಗಳನ್ನು ನಾನೇ ಹೆಣೆದರೆ ಇನ್ನು ಕೆಲವನ್ನು
ಜಗತ್ತಿನ ಇತರ ಸಂಸ್ಕೃತಿಗಳಲ್ಲಿ ಅರಸಬೇಕಾಯಿತು. ಯೆಹೂದಿ, ಯಿದ್ದಿಶ್, ಆಫ್ರಿಕಾ ಇತ್ಯಾದಿ ನಗೆಹನಿಗಳನ್ನು
ತಡಕಾಡಿ, ನಸ್ರುದ್ದೀನನ ವ್ಯಕ್ತಿತ್ವಕ್ಕೆ ಹೊಂದುವಂತಹ ಕತೆಗಳನ್ನು ಅರಸಿ ರೂಪಾಂತರಿಸಿದೆ. ಇಂದು ನಾವು
ಕನ್ನಡದಲ್ಲಿ ಹೇಳುವ ಹಲವಾರು ನಗೆಹನಿಗಳು ಮತ್ತಾವುದೋ ರೂಪದಲ್ಲಿ ಯೆಹೂದಿ, ಯಿದ್ದಿಶ್, ಆಫ್ರಿಕಾ ಮುಂತಾದೆಡೆಯೂ
ಕಂಡುಬರುತ್ತವೆ.
ಮುಲ್ಲಾ
ನಸ್ರುದ್ದೀನನ ಕತೆಗಳ ಅನುವಾದ/ರೂಪಾಂತರ ನನಗೆ ವಿಶೇಷ ಅನುಭವ ನೀಡಿದೆ. ನಾನು ಮಿತ್ರರಾದ ಇಂದೂಧರ ಹೊನ್ನಾಪುರ,
ಗಂಗರಾಜು ಹಾಗೂ ಕತೆಗಳಿಗೆ ಅದ್ಭುತ ಚಿತ್ರಗಳನ್ನು ರಚಿಸಿಕೊಟ್ಟ ಮುರಳೀಧರ ರಾಠೋಡ್ ರವರಿಗೆ ಕೃತಜ್ಞ.
****
ಟ್ಯೂಬ್‍ಲೈಟ್
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಒಂದೇ ಕಡೆ
ಕೆಲಸ ಮಾಡುತ್ತಿದ್ದರು. ಅಬ್ದುಲ್ಲಾನಿಗೆ ತುರ್ತಾಗಿ ರಜೆ ಬೇಕಿತ್ತು. ಅವನ ಕೆಲಸದ ಯಜಮಾನ ತನ್ನ
ಕೆಲಸಗಾರರಿಗೆ ಯಾವುದೇ ತೊಂದರೆ ಇದ್ದರೂ ರಜೆ ನೀಡುತ್ತಿರಲಿಲ್ಲ. ರಜೆ ಪಡೆಯಲು ಏನಾದರೂ ಕಾರಣ
ಹುಡುಕಬೇಕೆಂದು ಬಹಳ ಆಲೋಚಿಸಿದ. ನಸ್ರುದ್ದೀನ್ ಅವನಿಗೊಂದು ಉಪಾಯ ಹೇಳಿಕೊಟ್ಟ. ಹುಚ್ಚನಂತೆ
ವರ್ತಿಸಿದರೆ ರಜೆ ಸಿಗಬಹುದೆಂದು ಹೇಳಿದ. ಅದರಂತೆ ಅಬ್ದುಲ್ಲಾ ಒಂದು ಹಗ್ಗ ತಂದು ಕೈಗೆ ಕಾಲಿಗೆ
ಕಟ್ಟಿಕೊಂಡು ಸೂರಿಗೆ ತೂಗುಬಿದ್ದು ಕಣ್ಣು ಪಿಳಪಿಳ ಮಿಣಕಿಸತೊಡಗಿದ. ಅಲ್ಲಿಗೆ ಬಂದ ಯಜಮಾನ
ಅವನನ್ನು ನೋಡಿ,
`ಅಬ್ದುಲ್ಲಾ! ಏನು ಹುಚ್ಚಾಟ ಇದು? ಏನಾಗಿದೆ ನಿನಗೆ?’ ಎಂದು ಕೂಗಿದ.
`ನಾನೊಂದು ಟ್ಯೂಬ್ಲೈಟು’ ಎಂದು ಹೇಳಿದ ಅಬ್ದುಲ್ಲಾ ಕಣ್ಣು ಕಣ್ಣು ಪಿಳಪಿಳ ಮಿಣಕಿಸಿದ.
`ಹೋ! ನಿನಗೆ ಕೆಲಸದ ಒತ್ತಡ ಹೆಚ್ಚಾಗಿ
ತಲೆಕೆಟ್ಟಿದೆ. ಒಂದು ಕೆಲಸ ಮಾಡು, ನೀನು ಒಂದು ವಾರ ರಜೆ ತೆಗೆದುಕೊಂಡು
ವೈದ್ಯರಿಗೆ ತೋರಿಸಿ ವಿಶ್ರಾಂತಿ ತೆಗೆದುಕೊಂಡು ಬಾ ಹೋಗು’ ಎಂದು ಹೇಳಿದ.
ಅಬ್ದುಲ್ಲಾ ಖುಷಿಯಿಂದ ತನ್ನ ಉಪಾಯ
ಫಲಿಸಿತೆಂದು ಹಗ್ಗ ಬಿಚ್ಚಿ ಹೊರ ನಡೆದ. ನಸ್ರುದ್ದೀನ್ ಸಹ ಅವನ ಹಿಂದೆಯೇ ಹೊರಕ್ಕೆ ಹೊರಟ.
ಅದನ್ನು ನೋಡಿದ ಯಜಮಾನ,
`ನಸ್ರುದ್ದೀನ್, ನೀನೆಲ್ಲಿಗೆ ಹೋಗುತ್ತಿದ್ದೀಯಾ?’ ಎಂದು ಕೇಳಿದ.
`ಹೇ, ಇಲ್ಲಿ ಟ್ಯೂಬ್‍ಲೈಟ್ ಇಲ್ಲದ ಮೇಲೆ ನಾನು ಕತ್ತಲೆಯಲ್ಲಿ ಹೇಗೆ ಕೆಲಸಮಾಡಲಿ.
ಅದಕ್ಕೇ ನಾನೂ ಹೋಗುತ್ತಿದ್ದೇನೆ’ ಎಂದ ನಸ್ರುದ್ದೀನ್.
ರಿಯಾಯಿತಿ ಸರಕು
ನಸ್ರುದ್ದೀನ್ ಊರಿನಲ್ಲೇ ಅತ್ಯುತ್ತಮವಾದ
ಬಟ್ಟೆಯಂಗಡಿ ಇರಿಸಿದ್ದ. ಅವನಿಗೆ ಒಳ್ಳೇ ವ್ಯಾಪಾರವಾಗುತ್ತಿತ್ತು. ವ್ಯಾಪಾರ ಇನ್ನೂ ಚೆನ್ನಾಗಿ
ಆಗಲೆಂದು ವರ್ಷದಲ್ಲಿ ಆಗಾಗ ಶೇ.50ರ ರಿಯಾಯಿತಿ ಮಾರಾಟ ಮಾಡುತ್ತಿದ್ದ. ಆ ವರ್ಷ
ಎಂದಿನಂತೆ ಶೇ.50ರ ರಿಯಾಯಿತಿ ಮಾರಾಟ ಪ್ರಾರಂಭಿಸಿದ. ಅದೇ ದಿನ
ರಾತ್ರಿ ಅವನ ಅಂಗಡಿಯಲ್ಲಿ ಕಳ್ಳತನವಾಯಿತು. ಕಳ್ಳರು ಎಲ್ಲಾ ಸರಕನ್ನು ಕದ್ದೊಯ್ದರು. ಪೋಲೀಸರು
ಬಂದು ಮಹಜರು ನಡೆಸಿ ಅಂದಾಜು ಎಷ್ಟು ಮೌಲ್ಯದ ಸರಕು ಕಳ್ಳತನವಾಯಿತೆಂದು ಕೇಳಿದರು.
`ದೇವರ ದಯೆ, ನಾನು ಶೇ.50ರ ರಿಯಾಯಿತಿ ಮಾರಾಟ ಪ್ರಾರಂಭಿಸಿದ ದಿನ
ಕಳ್ಳತನವಾಗಿದೆ. ಆದುದರಿಂದ ನನ್ನ ನಷ್ಟ ಶೇ.50ರಷ್ಟು
ಕಡಿಮೆಯಾಗಿದೆ’, ಹೇಳಿದ ಮಾಲೀಕ ನಸ್ರುದ್ದೀನ್.
ಮಾತು ಕೇಳುವುದಿಲ್ಲ
`ನಸ್ರುದ್ದೀನ್ ನನಗೆ ನಿನ್ನ ಸಹಾಯ ಬೇಕು’,
ಕೇಳಿದ ಅಬ್ದುಲ್ಲಾ.
`ಏನದು ಅಬ್ದುಲ್ಲಾ? ನಿನಗೇನು ಸಹಾಯ ಬೇಕೋ ಕೇಳು’, ಹೇಳಿದ
ನಸ್ರುದ್ದೀನ್.
`ನಾನು ನನ್ನ ಹೆಂಡತಿಯೊಂದಿಗೆ ಏನೇ
ಮಾತನಾಡಿದರೂ ಅವಳು ಅದನ್ನು ಕೇಳಿಸಿಕೊಳ್ಳಲು ಆಸಕ್ತಿಯನ್ನೇ ತೋರುವುದಿಲ್ಲ.’
`ಖಂಡಿತಾ ಅದಕ್ಕೆ ಪರಿಹಾರ ಇದೆ ಅಬ್ದುಲ್ಲಾ.
ಗಂಡನ ಮಾತುಗಳನ್ನು ಹೆಂಡತಿ ಹೆಚ್ಚು ಆಸಕ್ತಿಯಿಂದ ಕೇಳಿಸಿಕೊಳ್ಳಬೇಕಾದರೆ ನೀನು ನಿದ್ರೆಯಲ್ಲಿ
ಮಾತನಾಡುವುದನ್ನು ಕಲಿತುಕೊ,’ ಪರಿಹಾರ ಸೂಚಿಸಿದ ನಸ್ರುದ್ದೀನ್.
ಶಿಸ್ತು ಮತ್ತು ವಿಧೇಯತೆ
ನಸ್ರುದ್ದೀನ್ ತನ್ನ ಇಬ್ಬರು ಮಕ್ಕಳನ್ನು
ಅಂಗಡಿಯೊಂದಕ್ಕೆ ಕರೆದೊಯ್ದ. ಅಲ್ಲಿ ಮಕ್ಕಳಿಗಾಗಿ ಇದ್ದ ಲಾಟರಿಯೊಂದರಲ್ಲಿ ಗೊಂಬೆಯೊಂದು ಬಹುಮಾನ
ಬಂದಿತು. ಅವನ ಇಬ್ಬರು ಮಕ್ಕಳು ಆ ಗೊಂಬೆ ತನಗೇ ಬೇಕೆಂದು ಹಠ ಹಿಡಿದರು. ನಸ್ರುದ್ದೀನ್
ಅದಕ್ಕೊಂದು ಉಪಾಯ ಕಂಡುಹಿಡಿದ.
`ನಿಮ್ಮಿಬ್ಬರಲ್ಲಿ ಯಾರು ನಿಮ್ಮ ಅಮ್ಮನೊಂದಿಗೆ
ವಾದ ಮಾಡುವುದಿಲ್ಲವೋ, ಎದುರುತ್ತರ ಹೇಳುವುದಿಲ್ಲವೋ ಹಾಗೂ ಅವರ
ಮಾತನ್ನು ಶಿಸ್ತಿನಿಂದ ಕೇಳಿಸಿಕೊಳ್ಳುವವರಿಗೆ ಈ ಗೊಂಬೆ ಕೊಡುತ್ತೇನೆ’ ಎಂದ ನಸ್ರುದ್ದೀನ್.
`ಹಾಗಾದರೆ, ಅಪ್ಪಾ ಆ ಗೊಂಬೆ ನಿನಗೇ ಸಿಗುತ್ತದೆ’ ಎಂದರು ಮಕ್ಕಳು ಒಕ್ಕೊರಲಿನಿಂದ.
ಅಜಾತ ಶತ್ರು
ಧರ್ಮ ಬೋಧಕರು ಬೋಧನೆ ಮಾಡುತ್ತಾ ಎಲ್ಲ
ಮನುಷ್ಯರು ಶತ್ರುಗಳನ್ನು ಕ್ಷಮಿಸಬೇಕೆಂದು ಹೇಳಿದರು. `ನಿಮ್ಮಲ್ಲಿ ಎಷ್ಟು ಜನ ಶತ್ರುಗಳನ್ನು ಕ್ಷಮಿಸಿದ್ದೀರಿ?’ ಆ ಧರ್ಮಬೋಧಕರು ಪ್ರಶ್ನೆ ಕೇಳಿದರು. ನೆರೆದಿದ್ದ ಜನರೆಲ್ಲಾ ತಮ್ಮ ಕೈ ಎತ್ತಿದರು.
ಆದರೆ ಅಜ್ಜ ನಸ್ರುದ್ದೀನ್ ಕೈ ಎತ್ತಲಿಲ್ಲ.
ಧರ್ಮ ಬೋಧಕರು ನಸ್ರುದ್ದೀನನನ್ನು ಉದ್ದೇಶಿಸಿ,
`ನೀವ್ಯಾಕೆ ಶತ್ರುಗಳನ್ನು ಕ್ಷಮಿಸಿಲ್ಲ?’ ಎಂದು ಕೇಳಿದರು.
`ನನಗೆ ಶತ್ರುಗಳೇ ಇಲ್ಲ,’ ಹೇಳಿದ ನಸ್ರುದ್ದೀನ್.
ನೆರೆದಿದ್ದ ಜನರೆಲ್ಲಾ ಚಪ್ಪಾಳೆ ತಟ್ಟಿದರು.
ಧರ್ಮಬೋಧಕರು ಅಜ್ಜ ನಸ್ರುದ್ದೀನನನ್ನು ಆಹ್ವಾನಿಸಿ ನೆರೆದಿದ್ದ ಜನರಿಗೆ ತಮಗೆ ಹೇಗೆ
ಶತ್ರುಗಳಿಲ್ಲವೆಂಬುದನ್ನು ತಿಳಿಸಿ ಹೇಳಬೇಕೆಂದು ಕೇಳಿಕೊಂಡರು. ವೇದಿಕೆಗೆ ಬಂದ ಹಣ್ಣು ಹಣ್ಣು
ಮುದುಕ ನಸ್ರುದ್ದೀನ್ ಹೇಳಿದ,
`ನನ್ನ ವಯಸ್ಸು 98 ವರ್ಷ. ನನಗೇಕೆ ಶತ್ರುಗಳಿಲ್ಲವೆಂದರೆ, ನನ್ನ ಶತ್ರುಗಳ್ಯಾರು ನನ್ನಷ್ಟು ವರ್ಷ ಬದುಕಿಲ್ಲ. ಅವರೆಲ್ಲಾ ಸತ್ತು ಹೋಗಿ
ಎಷ್ಟೋ ವರ್ಷಗಳಾಗಿವೆ...’
ನೀರಿನ ಅದ್ಭುತ ಶಕ್ತಿ
ವೈದ್ಯ ನಸ್ರುದ್ದೀನನ ಬಳಿ ವ್ಯಕ್ತಿಯೊಬ್ಬ
ಬಂದು, `ಸ್ವಾಮಿ ನನಗೊಂದು ಸಮಸ್ಯೆಯಾಗಿದೆ’ ಎಂದ.
`ಏನು ಸಮಸ್ಯೆ?’ ಕೇಳಿದರು ವೈದ್ಯ ನಸ್ರುದ್ದೀನ್.
`ತೊಂದರೆ ನನಗಲ್ಲ, ನನ್ನ ಪತ್ನಿಗೆ. ಆಕೆ ಇತ್ತೀಚೆಗೆ ವಿಪರೀತ ಜಗಳಗಂಟಿಯಾಗಿದ್ದಾಳೆ, ನನ್ನ ಮೇಲೆ ವಿಪರೀತ ಸಿಡುಕುತ್ತಾಳೆ, ವಾದವಿವಾದಕ್ಕಿಳಿಯುತ್ತಾಳೆ. ನನಗೆ ಮನೆಯಲ್ಲಿರುವುದೇ ಕಷ್ಟವಾಗಿದೆ!’, ಹೇಳಿದ ಆ ವ್ಯಕ್ತಿ.
`ಅದೇನೂ ದೊಡ್ಡ ವಿಷಯವಲ್ಲ. ಅದಕ್ಕೆ
ಪರಿಹಾರವಿದೆ,’ ಸಮಾಧಾನದಿಂದ ಹೇಳಿದ ನಸ್ರುದ್ದೀನ್.
`ಅದೇನೋ ಔಷಧ ನನ್ನ ಹೆಂಡತಿಗೆ ಕೊಡಿ.’
`ಅದೇನೂ ಔಷಧವಲ್ಲ. ನಿಮ್ಮ ಹೆಂಡತಿ
ನಿಮ್ಮೊಂದಿಗೆ ಜಗಳಕ್ಕಿಳಿದಾಗ ನೀವು ಮಾಡಬೇಕಾದುದಿಷ್ಟೆ. ಬಾಯೊಳಕ್ಕೆ ಸ್ವಲ್ಪ ನೀರು
ಹಾಕಿಕೊಳ್ಳಿ. ಆದರೆ ಅದನ್ನು ನುಂಗಬೇಡಿ. ನಿಮ್ಮ ಹೆಂಡತಿಯ ಕೋಪ ಶಮನವಾಗುವವರೆಗೆ ಅಥವಾ ಆಕೆ
ಕೋಣೆಯಿಂದ ಹೊರಕ್ಕೆ ಹೋಗುವವರೆಗೆ ನೀವು ನಿಮ್ಮ ಬಾಯನ್ನು ಆ ನೀರಿನಿಂದ ಪುಕ್ಕಳಿಸುತ್ತಿರಿ.
ಎಲ್ಲವೂ ಸರಿಯಾಗುತ್ತದೆ,’ ಸಲಹೆ ನೀಡಿದರು ವೈದ್ಯ ನಸ್ರುದ್ದೀನ್.
ಹತ್ತು ದಿನಗಳ ನಂತರ ಆ ವ್ಯಕ್ತಿ ಪುನಃ
ವೈದ್ಯರಲ್ಲಿಗೆ ಬಂದು,
`ತಮ್ಮ ಸಲಹೆ ನಿಜವಾಗಿಯೂ ಕೆಲಸ ಮಾಡಿದೆ.
ನೀರಿಗೆ ಎಂತಹ ಅದ್ಭುತ ಶಕ್ತಿ ಇದೆ! ನನ್ನ ಹೆಂಡತಿ ನನ್ನೊಂದಿಗೆ ಜಗಳವಾಡುವುದನ್ನು
ನಿಲ್ಲಿಸಿದ್ದಾಳೆ’ ಎಂದು ಸಂತೋಷದಿಂದ ಹೇಳಿದ.
`ನೀರಿಗೇನೂ ಅದ್ಭುತ ಶಕ್ತಿಯಿಲ್ಲ, ನಿನ್ನ ಹೆಂಡತಿ ಜಗಳವಾಡುವಾಗ ನೀನು ಬಾಯಿಮುಚ್ಚಿಕೊಂಡಿದ್ದೆಯಲ್ಲ, ಅದೇ ಕೆಲಸಮಾಡಿರುವುದು,’ ಹೇಳಿದ ನಸ್ರುದ್ದೀನ್.
ದ್ವಿಗುಣ
ನಸ್ರುದ್ದೀನ್ ಮತ್ತು ಅಬ್ದುಲ್ಲಾ ಇಬ್ಬರೂ
ಲೇಖಕರು, ಆದರೆ ಇಬ್ಬರಿಗೂ ಒಬ್ಬರನ್ನು ಕಂಡರೆ
ಮತ್ತೊಬ್ಬರಿಗಾಗುವುದಿಲ್ಲ. ಒಬ್ಬರನ್ನು ಅಣಕಿಸಲು ಮತ್ತೊಬ್ಬರು ಏನಾದರೊಂದು ಹೇಳುತ್ತಿರುತ್ತಾರೆ.
ಒಂದು ದಿನ ಪುಸ್ತಕದ ಅಂಗಡಿಯಲ್ಲಿ ನಸ್ರುದ್ದೀನನಿಗೆ ಅಬ್ದುಲ್ಲಾ ಎದುರಾದ.
`ಹೇಗಿದ್ದೀಯಾ ಅಬ್ದುಲ್ಲಾ? ನೀನು ಬರೆದ ಪುಸ್ತಕದ ಮಾರಾಟ ಹೇಗಿದೆ?’ ಕೇಳಿದ ನಸ್ರುದ್ದೀನ್.
`ಹೋ ಅದ್ಭುತವಾಗಿದೆ ನಸ್ರುದ್ದೀನ್!
ವಾಸ್ತವಾಂಶವೇನೆಂದರೆ ನನ್ನ ಪುಸ್ತಕದ ಓದುಗರ ಸಂಖ್ಯೆ ಕಳೆದ ಸಾರಿಗಿಂತ ದ್ವಿಗುಣವಾಗಿದೆ,’
ಹೇಳಿದ ಅಬ್ದುಲ್ಲಾ.
`ಹೌದೆ? ನಿನಗೆ ಮದುವೆಯಾಗಿರುವ ವಿಷಯ ನನಗೆ ನೀನು ತಿಳಿಸಲೇ ಇಲ್ಲವಲ್ಲಾ?’, ಕೇಳಿದ ನಸ್ರುದ್ದೀನ್.
ಸುಳ್ಳು
ನಸ್ರುದ್ದೀನ್ ಮತ್ತು ಫಾತಿಮಾ ಇಬ್ಬರಿಗೂ
ಸಾಕು ಸಾಕಾಗಿತ್ತು. ಅವರಿಬ್ಬರೂ ದಿನಾಲೂ ಜಗಳವಾಡುವುದು, ಬೈದಾಡುವುದು ಮಿತಿ ಮೀರಿತ್ತು. ಇದರಿಂದ ರೇಗಿದ ಫಾತಿಮಾ ವಿಚ್ಛೇದನಕ್ಕೆ ಅರ್ಜಿ
ಹಾಕಿಕೊಂಡಳು. ವಿಚಾರಣೆಯ ದಿನ ಆಕೆ ನ್ಯಾಯಾಧೀಶರಿಗೆ ಹೇಳಿದಳು,
`ನಸ್ರುದ್ದೀನ್ ನನ್ನೊಂದಿಗೆ ವಿನಾಕಾರಣ
ಜಗಳವಾಡುತ್ತಾನೆ, ಯಾವಾಗಲೂ ಬಯ್ಯುತ್ತಿರುತ್ತಾನೆ, ಅಷ್ಟೇಕೆ ನಿದ್ರೆಯಲ್ಲೂ ನನ್ನನ್ನು ಬಯ್ಯುತ್ತಿರುತ್ತಾನೆ!’
`ಸುಳ್ಳು ಹೇಳುತ್ತಿದ್ದಾಳೆ,’ ಎದ್ದು ನಿಂತು ಹೇಳಿದ ನಸ್ರುದ್ದೀನ್, `ನಾನಾಗ ನಿದ್ರೆ ಮಾಡುತ್ತಿರುವುದಿಲ್ಲ.’
ಸಾವು ಹತ್ತಿರ ಬಂದಿದೆ
ನಸ್ರುದ್ದೀನನಿಗೆ ವಿಪರೀತ ಕಾಯಿಲೆಯಾಗಿತ್ತು.
ಫಾತಿಮಾ ಅವನನ್ನು ವೈದ್ಯರ ಬಳಿ ಕರೆದೊಯ್ದಳು. ವೈದ್ಯರು ನಸ್ರುದ್ದೀನನನ್ನು ಪರೀಕ್ಷಿಸಿದರು,
ಅದೂ ಇದೂ ಪರೀಕ್ಷೆಗಳನ್ನು ಮಾಡಿದರು. ನಂತರ ಫಾತಿಮಾ
ಒಬ್ಬಳನ್ನೇ ಪ್ರತ್ಯೇಕವಾಗಿ ಕರೆದು ಆಕೆಗೆ ಹೇಳಿದರು,
`ನೋಡಮ್ಮಾ ನಿನ್ನ ಗಂಡನಿಗೆ ಗಂಭೀರ ಕಾಯಿಲೆ
ಬಂದಿದೆ ಹಾಗೂ ಅದಕ್ಕೆ ಪ್ರಮುಖ ಕಾರಣ ಅವನಿಗಿರುವ ಮಾನಸಿಕ ಒತ್ತಡ. ಈಗ ನೀನು ನಾನು ಹೇಳಿದ ಹಾಗೆ
ಕೇಳದಿದ್ದರೆ ನಿನ್ನ ಗಂಡ ಕೆಲವೇ ದಿನಗಳಲ್ಲಿ ಸತ್ತುಹೋಗುತ್ತಾನೆ.
`ಪ್ರತಿ
ದಿನ ಬೆಳಿಗ್ಗೆ ಅವನನ್ನು ನಿದ್ರೆಯಿಂದ ನವಿರಾಗಿ ಎಬ್ಬಿಸಿ, ಅಪ್ಪಿಕೊಂಡು ಮುತ್ತು ಕೊಡಬೇಕು. ಅವನ ಸ್ನಾನಕ್ಕೆ ಬಿಸಿನೀರು ಸಜ್ಜುಗೊಳಿಸಿ,
ಆರೋಗ್ಯಕರ ಉಪಾಹಾರ ತಯಾರಿಸಿಕೊಡಬೇಕು. ಅವನನ್ನು
ಯಾವಾಗಲೂ ಪ್ರೀತಿ, ಅಕ್ಕರೆಯಿಂದ ಮಾತನಾಡಿಸಬೇಕು, ಸದಾ ಅವನಿಗೆ ಇಷ್ಟವಾದ ಆಹಾರವನ್ನೇ ಕೊಡಬೇಕು. ಅವನಿಗೆ ಯಾವುದೇ ಕೆಲಸ ಹೇಳಬೇಡ,
ಅದರಿಂದ ಅವನ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ.
ಹೊರಗಿನಿಂದ ಬಂದಾಗ ಅವನಿಗೆ ಚೆನ್ನಾಗಿ ವಿಶ್ರಾಂತಿ ಸಿಗುವಂತೆ ನೋಡಿಕೊಳ್ಳಬೇಕು. ನೀವು ಸುಂದರವಾದ
ಬಟ್ಟೆ ಧರಿಸಿ ಅವನ ಮುಂದೆ ಓಡಾಡಬೇಕು. ನಸ್ರುದ್ದೀನ್ ನಿಮ್ಮನ್ನು ಬೈದರೂ ನೀವು
ಮುಗುಳ್ನಗುತ್ತಿರಬೇಕು, ಎದುರಾಡಬಾರದು. ವಾರಕ್ಕೊಮ್ಮೆ ಅವನ ದೇಹಕ್ಕೆ
ಚೆನ್ನಾಗಿ ಮಾಲೀಸು ಮಾಡಬೇಕು, ಆತನ ಎಲ್ಲ ಇಚ್ಛೆಗಳನ್ನು ಪೂರೈಸಬೇಕು. ಈ
ರೀತಿ ನೀನು ಆರು ತಿಂಗಳು ಮಾಡಿದರೆ ನಿನ್ನ ಗಂಡನ ಕಾಯಿಲೆ ಸಂಪೂರ್ಣ ವಾಸಿಯಾಗುತ್ತದೆ, ಇಲ್ಲದಿದ್ದರೆ ಕೆಲವೇ ದಿನಗಳಲ್ಲಿ ಸತ್ತುಹೋಗುತ್ತಾನೆ’.
ಆಯಿತೆಂದು ಫಾತಿಮಾ ಹೊರಬಂದಳು. ನಸ್ರುದ್ದೀನ್
ಮತ್ತು ಫಾತಿಮಾ ಮನೆಗೆ ಹೋಗುವಾಗ, `ವೈದ್ಯರು ಏನು ಹೇಳಿದರು?’ ಎಂದು ನಸ್ರುದ್ದೀನ್ ಕೇಳಿದ.
`ಇನ್ನು ಕೆಲವೇ ದಿನಗಳಲ್ಲಿ ನೀನು
ಸತ್ತುಹೋಗುತ್ತೀಯಾ ಎಂದರು’, ಹೇಳಿದಳು ಫಾತಿಮಾ.
(ಮುಲ್ಲಾ ನಸ್ರುದ್ದೀನ್ ಕತೆಗಳು ಈ
ಸಂಚಿಕೆಯೊಂದಿಗೆ ಮುಕ್ತಾಯವಾಗುತ್ತದೆ.)
*****
ಮುಲ್ಲಾ ನಸ್ರುದ್ದೀನ್
ನಿನಗೆ ವಿಶೇಷ ಜ್ಞಾನದರಿವು ಬೇಕಾದಲ್ಲಿ
ಯಾರದಾದರೂ ಮುಖ ನೋಡು:
ಆಳವಾಗಿ ನೋಡು,
ಆ ವ್ಯಕ್ತಿಯ ನಗುವಿನೊಳಗೆ,
ಜ್ಞಾನದ ಅಂತಿಮ ಸತ್ಯವಿದೆ...
-ಜಲಾಲುದ್ದೀನ್ ರೂಮಿ
ಮುಲ್ಲಾ ನಸ್ರುದ್ದೀನ್ ಅಥವಾ ನಸ್ರುದ್ದೀನ್ ಖೋಜಾ ಅಥವಾ
ಬರೇ ನಸ್ರುದ್ದೀನ್ ಎನ್ನುವ ಪಾತ್ರ ಜಗತ್ತಿನಾದ್ಯಂತ ಹಲವಾರು ಸಂಸ್ಕೃತಿಗಳಲ್ಲಿ
ವಿಶಿಷ್ಟ ಮನರಂಜನೆಯ ಕತೆಗಳಲ್ಲಿ ರಂಜಿಸಿದ್ದಾನೆ. ಆ ಕತೆಗಳ ಉದ್ದೇಶ ಬರೇ
ಮನರಂಜನೆಯಷ್ಟೇ ಆಗಿಲ್ಲ. ಸೂಫಿ ದಾರ್ಶನಿಕರ ಬೋಧನಾ ಕತೆಗಳಲ್ಲಿಯಂತೆ ಅವುಗಳ ಒಳಾರ್ಥವೇ
ಬೇರೆಯಾಗಿರುತ್ತದೆ. ಸೂಫಿಗಳಿಗೆ ಆ ವ್ಯಕ್ತಿ ಮುಖ್ಯವಲ್ಲ ಆದರೆ ಆತನ ಸಂದೇಶ ಮುಖ್ಯವಾದುದು.
ನಸ್ರುದ್ದೀನ್ ಯಾರು, ಆತ
ಎಲ್ಲಿ ಜೀವಿಸಿದ್ದ
ಅಥವಾ ಯಾವಾಗ ಜೀವಿಸಿದ್ದ ಎನ್ನುವುದು ಯಾರಿಗೂ ಸರಿಯಾಗಿ ತಿಳಿದಿಲ್ಲ ಅಥವಾ ಆತನದು
ಬರೇ ಒಂದು ಕಾಲ್ಪನಿಕ ಪಾತ್ರವೇ ಎಂಬುದೂ ಸಹ ತಿಳಿದಿಲ್ಲ. ಏನೇ ಆದರೂ ಆತನದು ದೇಶ ಕಾಲಗಳನ್ನು
ಮೀರಿದ ವ್ಯಕ್ತಿತ್ವ. ಆದರೂ ಜನ ಆ ವ್ಯಕ್ತಿಗೆ ಚರಿತ್ರೆಯ ಒಂದು ಹಂದರ ಒದಗಿಸಿದ್ದಾರೆ ಹಾಗೂ ಅದೇ ರೀತಿ ಒಂದು ಸಮಾಧಿಯನ್ನೂ
ಸಹ ನೀಡಿದ್ದಾರೆ. ತನ್ನ ಹಲವಾರು ಕತೆಗಳಲ್ಲಿ ನಸ್ರುದ್ದೀನ್ ದಡ್ಡನಂತೆ
ಕಂಡುಬರುತ್ತಾನೆ. ಆದರೆ ನಸ್ರುದ್ದೀನ್ ಒಬ್ಬ ಸೂಫಿ ಅನುಭಾವಿ, ತತ್ವಜ್ಞಾನಿ, ವಿವೇಕಿ ಮತ್ತು ಅತಿಯಾದ ಹಾಸ್ಯಪ್ರಜ್ಞೆಯುಳ್ಳ ವ್ಯಕ್ತಿಯಾಗಿದ್ದ.
ಹಲವಾರು ಸೂಫಿಗಳು ತಮ್ಮ ಅನುಭಾವದ ‘ಹುಚ್ಚುತನ’ವನ್ನು ಮುಠ್ಠಾಳತನದ ಸೋಗಿನಲ್ಲಿ ವ್ಯಕ್ತಪಡಿಸುತ್ತಾರೆ.
ನಸ್ರುದ್ದೀನನೇ ಹೇಳಿಕೊಂಡಿರುವಂತೆ ಆತನೆಂದೂ ಸತ್ಯವನ್ನು ನುಡಿದೇ ಇಲ್ಲ. ಆತನ ಕತೆಗಳು
ಟರ್ಕಿಯ ಗುಡ್ಡಗಾಡು ಜನರಿಂದ ಹಿಡಿದು ಆಗಿನ ಪರ್ಷಿಯಾ, ಅರೇಬಿಯಾ, ಆಫ್ರಿಕಾ, ರಷ್ಯಾ ಹಾಗೂ ‘ಸಿಲ್ಕ್ ರೂಟ್’ನ ಮೂಲಕ ಚೀನಾ ಹಾಗೂ ಭಾರತಕ್ಕೆ ಆನಂತರ ಯೂರೋಪಿಗೂ ಹರಡಿವೆ. ಸುಮಾರು
ಎಂಟು ನೂರು ವರ್ಷಗಳಿಂದ ಚಾಲ್ತಿಯಲ್ಲಿರುವ ಆತನ ಕತೆಗಳು ಎಲ್ಲವೂ ಆತನವೇ ಅಲ್ಲ. ಅಲ್ಬೇನಿಯಾ,
ಅರೇಬಿಕ್, ಅರ್ಮೇನಿಯ, ಬರ್ಬರ್, ಬೋಸ್ನಿಯಾ, ಬಲ್ಗೇರಿಯಾ, ಚೀನಿ, ದಾಗೇಸ್ತಾನಿ, ಗ್ರೀಕ್, ಜುಡಿಯೋ-ಅರೇಬಿಕ್, ಕುರ್ದಿಶ್, ಮಾಲ್ಟೀಸ್, ಮಾಂಡಾಯಿಕ್, ಮ್ಯಾಸಿಡೋನಿಯಾ, ಪರ್ಷಿಯಾ, ಸರ್ಬಿಯಾ, ಸಿಸಿಲಿ, ಸಿರಿಯಾ, ತಾಜಿಕಿಸ್ತಾನ್, ಟರ್ಕಿ, ಐಗುರ್ ಮತ್ತು ಉಜ್ಬೇಕಿಸ್ತಾನ್ ಸಂಸ್ಕೃತಿ
ಮತ್ತು ಜನಪದದಲ್ಲಿ ನಸ್ರುದ್ದೀನ್‌ನ ಕತೆಗಳಿವೆ. ಬಹುಪಾಲು ಕತೆಗಳು ಎಲ್ಲಾ ಇಸ್ಲಾಮಿಕ್
ಮತ್ತು ಏಷಿಯಾದ ಸಂಸ್ಕೃತಿಯ ಸಮಷ್ಟಿ ಹಾಸ್ಯಪ್ರಜ್ಞೆಯ ಉತ್ಪನ್ನವಾಗಿದೆ.
ನಸ್ರುದ್ದೀನ್‌ನನ್ನು
ಜಗತ್ತಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸುತ್ತಾರೆ- ಟರ್ಕಿಯಲ್ಲಿ ನಸ್ರೆದ್ದೀನ್
ಹೋಕಾ, ಕಜಕಿಸ್ತಾನದಲ್ಲಿ ಕೋಜಾ ನಸ್ರೆದ್ದೀನ್,
ಅಜರ್‌ಬೈಜಾನ್, ಅಫ್ಘಾನಿಸ್ತಾನ ಮತ್ತು ಇರಾನ್‌ನಲ್ಲಿ ಮೊಲ್ಲಾ
ಅಥವಾ ಮುಲ್ಲಾ
ನಸ್ರುದ್ದೀನ್, ಗ್ರೀಕ್‌ನಲ್ಲಿ
ಖೋಡ್ಜಾ ನಸ್ರೆದ್ದೀನ್, ಮಧ್ಯ
ಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಅರಬ್ ಜನಪದದಲ್ಲಿ ಆತನನ್ನು ಜುಹಾ ಎಂದು ಕರೆಯುತ್ತಾರೆ.
ಆತನಿಗೆ ಜೋಹಾ,
ಸಿ ಜೇಹಾ, ಗುಯ್‌ಫಾ, ಇಹಾ, ಐಗುಲೆ, ಗಹಾನ್, ನಸ್ತ್ರಾದಿನ್, ನಸ್ತ್ರಾದಿ, ಹೋಜಸ್, ಜಿಹಾ, ಮಾಲಾ, ಅಪೆಂಡಿ, ಅಫಂಡಿ, ಎಫೆಂಡಿ, ಅಫಂತಿ ಎಂಬ ಹೆಸರುಗಳೂ ಇವೆ. ಆತ ಹಲವಾರು
ಸಂಸ್ಕೃತಿಗಳ ಭಾಗವೇ ಆಗಿದ್ದಾನೆ. 1996ನೇ
ವರ್ಷವನ್ನು ಯುನೆಸ್ಕೋ ‘ನಸ್ರುದ್ದೀನ್
ಹೋಕಾ ವರ್ಷ’ ಎಂದು
ಗುರುತಿಸಿತ್ತು.
ನಸ್ರುದ್ದೀನನ ಕತೆಗಳ
ಮೊದಲ ಲಿಖಿತ ದಾಖಲೆ 1480ರ
‘ಎಬು ಅಲ್-ಖಯರ್-ಇ ರೂಮಿ-ಸಾಲ್ತುಕ್-ನಾಮೆ’ಯಲ್ಲಿದೆ. ಆ ಪುಸ್ತಕದಲ್ಲಿನ ಉಲ್ಲೇಖಗಳಂತೆ ನಸ್ರುದ್ದೀನ್
ಈಗಿನ ಟರ್ಕಿಯ
ವಾಯುವ್ಯ ದಿಕ್ಕಿನಲ್ಲಿರುವ ಅಕ್ಸೆಹಿರ್‌ನ ಸೂಫಿ ಸಂತ ಸಯ್ಯದ್ ಮಹಮ್ಮದ್
ಹಯ್ರಾನಿಯವರ
ದರ್ವೇಶಿಯಾಗಿದ್ದ. ಆತನ ಬಗೆಗಿನ ಉಲ್ಲೇಖಗಳು 1531ರ ಟರ್ಕಿ ಭಾಷೆಯ ಲಾಮಿ ಸೆಲೆಬಿಯವರ ಕತೆಗಳ ಪುಸ್ತಕ ‘ಲೆತಾ ಇಫ್’ನಲ್ಲಿವೆ. ಲಾಮಿ ಸೆಲೆಬಿಯವರ ಪ್ರಕಾರ ನಸ್ರುದ್ದೀನ್
14ನೇ ಶತಮಾನದ ಸಯ್ಯದ್
ಹಂಜಾರವರ ಸಮಕಾಲೀನ. 17ನೇ
ಶತಮಾನದಲ್ಲಿ ಅಕ್ಸೆಹಿರ್‌ನಲ್ಲಿದೆ
ಎನ್ನಲಾಗುವ ನಸ್ರುದ್ದೀನ್‌ನ ಸಮಾಧಿಗೆ ಭೇಟಿ ನೀಡಿದ್ದ ಎವಿಲ್ಯಾ ಸೆಲೆಬೆಯವರ ಪ್ರಕಾರ ನಸ್ರುದ್ದೀನ್ ಮೊಂಗೋಲ್‌ನ
ದೊರೆ ತೈಮೂರ್‌ನ ಸಮಕಾಲೀನ (1405). ನಸ್ರುದ್ದೀನ್
ಸಿವ್ರಿಹಿಸರ್ ಪ್ರದೇಶದಲ್ಲಿನ ಹೊರ್ತು ಗ್ರಾಮದಲ್ಲಿ 1208ರಲ್ಲಿ ಜನಿಸಿದ ಹಾಗೂ ತಾನು ಆನಂತರ ನೆಲೆಸಿದ್ದ ಅಕ್ಸೆಹಿರ್‌ನಲ್ಲಿ
1284ರಲ್ಲಿ ಮರಣಿಸಿದ ಎಂದು ಅಕ್ಸೆಹಿರ್‌ನ
ಮಫ್ತಿಯಾಗಿದ್ದ ಹೈಸೆಯಿನ್ ಎಫೆಂದಿ (1880) ತಮ್ಮ ಮೆಕ್‌ಮುವಾ-ಎ-ಮಾರಿಫ್ನಲ್ಲಿ ಹೇಳಿದ್ದಾರೆ.
ಅದರಲ್ಲಿನ ಉಲ್ಲೇಖದಂತೆ ನಸ್ರುದ್ದೀನ್ ಸಿವ್ರಿಹಿಸರ್ ಮತ್ತು ಕೋನ್ಯಾದ ಶಾಲೆಗಳಲ್ಲಿ ‘ನ್ಯಾಯಶಾಸ್ತ್ರ’ದ (ಫಿಖ್) ಶಿಕ್ಷಣ ಪಡೆದ. ಆನಂತರ
ಜಲಾಲುದ್ದೀನ್ ರೂಮಿಯನ್ನು (1207-1273) ಭೇಟಿಯಾಗಿ
ಆತನಿಂದ ಸೂಫಿಸಂನ ‘ದೀಕ್ಷೆ’
ಪಡೆದ. ಸಯ್ಯದ್ ಮಹಮದ್
ಹಯ್‌ರಾನಿಯವರನ್ನು ತನ್ನ ಶೇಖ್ ಆಗಿ ಸ್ವೀಕರಿಸಿ ಅವರ ಅನುಯಾಯಿಯಾದ. ಅಕ್ಸೆಹಿರ್‌ನಲ್ಲಿ ನೆಲೆಸಿ
ಅಲ್ಲಿ ಮದುವೆಯಾಗಿ ತನ್ನ ದಾಂಪತ್ಯ ಜೀವನ ನಡೆಸಿದ. ಅಲ್ಲಿಯೇ ಇಮಾಮ್ ಆಗಿ ನಂತರ
ನ್ಯಾಯಾಧೀಶನಾಗಿ ಕಾರ್ಯನಿರ್ವಹಿಸಿದ. ಅಲ್ಲಿನ ನ್ಯಾಯಾಲಯದಲ್ಲಿನ ಆತನ ನ್ಯಾಯಪಾಲನೆ ಮತ್ತು
ಆತನ ಹಾಸ್ಯಪ್ರಜ್ಞೆಯಿಂದ ಆತ ಅಲ್ಲಿ ಅತ್ಯಂತ ಜನಪ್ರಿಯನಾದ. ಕೊನ್ಯಾದ ಬಳಿ ಇರುವ ಅಕ್ಸೆಹಿರ್
ನಗರದಲ್ಲಿ ಆತನ ಸಮಾಧಿಯಿದೆಯೆಂದು ಗುರುತಿಸಿದ್ದಾರೆ. ಆತನ ಸಮಾಧಿ ಇರುವ
ಸ್ಥಳಕ್ಕೆ ಒಂದು ದೊಡ್ಡ ಕಬ್ಬಿಣದ ಬಾಗಿಲು ಮಾಡಿ ಅದಕ್ಕೊಂದು ಬೀಗ ಹಾಕಿದ್ದಾರೆ- ಯಾರೂ ಸಮಾಧಿಗೆ
ಪ್ರವೇಶಿಸಬಾರದೆಂದು ಆ ಬೀಗವಲ್ಲ, ಏಕೆಂದರೆ
ಆ ಸಮಾಧಿಗೆ ಬೀಗವಿರುವ ಬಾಗಿಲಿದ್ದರೂ ಗೋಡೆಗಳೇ ಇಲ್ಲ! ಆ ರೀತಿಯ ಬಾಗಿಲು ಇರಿಸಿರಲು
ನಸ್ರುದ್ದೀನನ ಒಂದು ಕತೆಯೇ ಕಾರಣ. ನಸ್ರುದ್ದೀನ್ ಎಲ್ಲಿ ಹೋದರೂ ತನ್ನ ಮನೆಯ ಬಾಗಿಲನ್ನು
ಕೊಂಡೊಯ್ಯುತ್ತಿದ್ದನಂತೆ. ಊರವರಿಗೆ ಆತನ ನಡತೆಯಿಂದ ಆಶ್ಚರ್ಯವಾಗಿ ಏಕೆಂದು ಕೇಳಿದ್ದಕ್ಕೆ
ಆತ, ತಾನಿಲ್ಲದಿದ್ದಾಗ
ಯಾರಾದರೂ ಮನೆಗೆ ಕಳ್ಳರು ನುಗ್ಗಬಹುದೆಂದೂ ಹಾಗೂ ಕಳ್ಳರು ಬಾಗಿಲಿನ ಮೂಲಕ ಪ್ರವೇಶಿಸುವುದರಿಂದ
ಮನೆಗೆ ಬಾಗಿಲೇ ಇಲ್ಲದಿದ್ದಲ್ಲಿ ಅವರು ಹೇಗೆ ಮನೆಗೆ ನುಗ್ಗುವರು? ಎಂದು ಕೇಳಿದನಂತೆ. ಹಾಗಾಗಿ ಆತನ ಸಮಾಧಿಗೆ
ದೊಡ್ಡ ಬೀಗವಿರುವ ಕಬ್ಬಿಣದ ಬಾಗಿಲು ಇಟ್ಟಿದ್ದಾರೆಯೇ ಹೊರತು ಅದಕ್ಕೆ ಗೋಡೆಗಳಿಲ್ಲ.
ನಸ್ರುದ್ದೀನನ ಕತೆಗಳು
ಸೂಫಿ ಬೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಅಷ್ಟಲ್ಲದೆ ಆತನ ಕತೆಗಳು ಎಲ್ಲ
ಸಂಸ್ಕೃತಿಗಳಲ್ಲೂ ಹರಡಿಹೋಗಿರುವುದರಿಂದ ಅವು ಜೆನ್ ಕತೆಗಳಲ್ಲಿ, ಕ್ರೈಸ್ತ ಕತೆಗಳಲ್ಲಿ ಮತ್ತು ಇತರ ಹಲವಾರು ಧಾರ್ಮಿಕ
ಬೋಧನೆಗಳಲ್ಲೂ ಕಂಡುಬರುತ್ತವೆ. ನಸ್ರುದ್ದೀನನ ಹೆಸರು ಬಳಸಿಕೊಂಡು ಸೂಫಿ ಗುರುಗಳು ತಮ್ಮ
ಶಿಷ್ಯರಿಗೆ ಬೋಧಿಸಲು ತಾವೇ ಕತೆಗಳನ್ನು ಕಟ್ಟುತ್ತಾರೆ.
ನಸ್ರುದ್ದೀನನ ಕತೆಗಳಲ್ಲಿ
ಸೂಫಿ ತತ್ವದ ಅಂತರಾಳವಿದೆ. ಅವುಗಳಲ್ಲಿ ಜ್ಞಾನದ ಬಾಹ್ಯ ಢಂಬಾಚಾರದ, ಮೌಢ್ಯ ಶ್ರದ್ಧೆಯ ಲೇವಡಿಯಿದೆ. ಒಂದು ಕತೆಯಲ್ಲಿ
ನಸ್ರುದ್ದೀನ್ ವ್ಯಾಕರಣ ಪಂಡಿತನೊಬ್ಬನನ್ನು ತನ್ನ ದೋಣಿಯಲ್ಲಿ ಕರೆದೊಯ್ಯುತ್ತಿರುತ್ತಾನೆ.
ಹಾದಿಯಲ್ಲಿ ಮಾತಿನ ಮಧ್ಯದಲ್ಲಿ ನಸ್ರುದ್ದೀನನ ಯಾವುದೋ ದೋಷಪೂರಿತ ವ್ಯಾಕರಣದ
ಮಾತನ್ನಾಡುತ್ತಾನೆ. ಆಗ ವ್ಯಾಕರಣ ಪಂಡಿತ, ‘ನೀವು ವ್ಯಾಕರಣ ಕಲಿತಿಲ್ಲವೆ?’ ಎಂದು ಕೇಳುತ್ತಾನೆ. ನಸ್ರುದ್ದೀನ್ ಇಲ್ಲವೆನ್ನುತ್ತಾನೆ.
‘ಹಾಗಾದರೆ ನಿನ್ನ ಅರ್ಧ
ಬದುಕು ವ್ಯರ್ಥವಾದಂತೆ’ ಎನ್ನುತ್ತಾನೆ ಪಂಡಿತ.
ಸ್ವಲ್ಪ ಹೊತ್ತಿನ ನಂತರ ಜೋರಾಗಿ ಬಿರುಗಾಳಿ ಬೀಸಿ ದೋಣಿ ಓಲಾಡತೊಡಗುತ್ತದೆ. ಆಗ ನಸ್ರುದ್ದೀನ್
ಆ ವ್ಯಾಕರಣ ಪಂಡಿತನನ್ನು ‘ನಿಮಗೆ
ಈಜು ಕಲಿತಿಲ್ಲವೆ?’ ಎಂದು ಕೇಳುತ್ತಾನೆ.
ಆ ಪಂಡಿತ ‘ಇಲ್ಲ,
ಏಕೆ?’ ಎನ್ನುತ್ತಾನೆ. ಅದಕ್ಕೆ ನಸ್ರುದ್ದೀನ್,
‘ಹಾಗಾದರೆ ನಿಮ್ಮ ಇಡೀ
ಜೀವನ ವ್ಯರ್ಥವಾದಂತೆ, ಏಕೆಂದರೆ
ಇನ್ನೇನು ಈ ದೋಣಿ ಮುಳುಗುತ್ತದೆ’ ಎಂದನಂತೆ.
ಇತರ ಸೂಫಿ
ಕತೆಗಳಂತೆ ಮುಲ್ಲಾ ನಸ್ರುದ್ದೀನನ ಕತೆಗಳು ಓದಿ, ನಕ್ಕು ಮರೆತುಬಿಡುವಂಥವಲ್ಲ. ಓದಿದ ನಂತರವೂ ನಮಗೇ ಅರಿವಾಗದಂತೆ ನಮ್ಮ
ಮನಸ್ಸಿಗೆ ಜೋತುಬೀಳುತ್ತವೆ. ಕೂತು ಆ ಕತೆಗಳನ್ನು ಮೆಲುಕು ಹಾಕುವಾಗ ಅವು ಪ್ರತಿ
ಕ್ಷಣ ನಮ್ಮೆದುರಿಗೆ ತೆರೆದಿಡುವ ಹೊಸ ಹೊಸ ಆಯಾಮಗಳು ನಮಗೇ ದಿಗ್ಭ್ರಮೆ ಹುಟ್ಟಿಸುತ್ತವೆ,
ನಮಗೇ ತಿಳಿದಿರದ ಹೊಚ್ಚ
ಹೊಸ ಲೋಕವೊಂದನ್ನು
ಪರಿಚಯಿಸುತ್ತವೆ.
1 ಕಾಮೆಂಟ್:
nice post thanks
Regard By
Malathi
www.superdealcoupon.com
ಕಾಮೆಂಟ್ ಪೋಸ್ಟ್ ಮಾಡಿ